ನಾವೆಲ್ಲ ಕ್ಯಾಲೆಂಡರ್ (ದಿನಸೂಚಿ) ನೋಡಿದ್ದೇವೆ, ಬಳಸಿದ್ದೇವೆ. ಇಂದು ಕ್ಯಾಲೆಂಡರ್ ಇಲ್ಲದ ಮನೆಯೇ ಇಲ್ಲವೆನ್ನಬಹುದು. ಅದರಲ್ಲಿನ ದೇವರ ಚಿತ್ರಕ್ಕಾಗಿಯೋ ನಿಸರ್ಗದ ಪ್ರತಿಕೃತಿಗಾಗಿಯೋ ಅದು ಜನರನ್ನು ಆಕರ್ಷಿಸುತ್ತದೆ. ಆದರೆ ಅದರಲ್ಲಿನ ದಿನಸೂಚಿ ಸಂಖ್ಯೆಗಳನ್ನು ಗಮನಿಸಿದ್ದೀರಾ? ಕೆಲವು ಮೋಜಿನ ಅಂಶಗಳು ಅಲ್ಲಿ ಅಡಗಿವೆ. ನೋಡೋಣ ಬನ್ನಿ

1) ಇಲ್ಲಿ ಒಂದು ತಿಂಗಳಿನ ದಿನಸೂಚಿ ಇದೆ. ಯಾವುದೇ ಕ್ಯಾಲೆಂಡರಿನ, ಯಾವುದೇ ತಿಂಗಳನ್ನು (ಹಳೆಯದಾದರೂ ಪರವಾಗಿಲ್ಲ) ನೀವು ಆಯ್ಕೆ ಮಾಡಬಹುದು.

ಮೇಲಿನ ಚಿತ್ರದಲ್ಲಿ ಹಲವು 7 ಸಂಖ್ಯೆಗಳ ಕಂಭಸಾಲು, 5 ಸಂಖ್ಯೆಗಳ ಅಡ್ಡಸಾಲು ಇವೆ. ಈ ಸಾಲುಗಳ ಸಂಖ್ಯೆಗಳ ಮೊತ್ತವನ್ನು ದಿಢೀರ್ ಹೇಳಬಲ್ಲಿರಾ?

ಉಪಾಯ ಹೀಗಿದೆ. ಸಾಲಿನ ಮಧ್ಯದ ಸಂಖ್ಯೆಯನ್ನು ಆ ಸಾಲಿನಲ್ಲಿ ಎಷ್ಟು ಸಂಖ್ಯೆಗಳಿವೆಯೋ ಅದರಿಂದ ಗುಣಿಸಿ. ಲಬ್ಧವೇ ಮೊತ್ತ.

ಉದಾ: ಮೊದಲ ಅಡ್ಡಸಾಲು 1, 8, 15, 22, 29 ಇವುಗಳ ಮೊತ್ತ 15×5=75

ಎರಡನೇ ಕಂಭಸಾಲು 8, 9, 10, 11, 12, 13, 14; ಇವುಗಳ ಮೊತ್ತ 11×7=77.

ಇಷ್ಟೇ ಅಲ್ಲ. ಇದನ್ನು ಓರೆ ಸಾಲುಗಳಿಗೂ ಇದನ್ನು  ಅನ್ವ ಯಿಸಬಹುದು. ಚಿತ್ರದಲ್ಲಿ ಗುರ್ತಿಸಿರುವ 5, 11, 17, 23, 29 ಇವುಗಳ ಮೊತ್ತ 17×5=85

2) ಅಡ್ಡಸಾಲು, ಕಂಭಸಾಲು, ಓರೆ ಸಾಲುಗಳಲ್ಲಿ ಅನುಕ್ರಮವಾಗಿ ಬರುವ ಯಾವುದೇ 3, 5, 7 ಸಂಖ್ಯೆಗಳನ್ನು ಆಯ್ಕೆ ಮಾಡಿ, ಅವುಗಳ ಮೊತ್ತ ಪಡೆಯಲು ಸಂಖ್ಯೆಗಳ ಮಧ್ಯದ ಸಂಖ್ಯೆಯನ್ನು, ಎಷ್ಟು ಸಂಖ್ಯೆಗಳನ್ನು ಆಯ್ಕೆ ಮಾಡಿಕೊಂಡಿದ್ದೇವೆಯೋ ಅದರಿಂದ ಗುಣಿಸಬೇಕು.

ಈ ಉಪಾಯ ಆಯ್ಕೆ ಮಾಡಿಕೊಂಡ ಸಂಖ್ಯೆಗಳು ಬೆಸಸಂಖ್ಯೆಗಳಷ್ಟಾಗಿದ್ದರೆ ಮಾತ್ರ ಸರಿಹೊಂದುತ್ತದೆ. ಹಾಗಾದರೆ ಆಯ್ಕೆ ಮಾಡಿಕೊಂಡ ಸಂಖ್ಯೆಗಳು ಸಮ ಸಂಖ್ಯೆಯಷ್ಟಾಗಿದ್ದರೆ (2, 4, 6)? ಅದಕ್ಕೂ ಉಪಾಯವಿದೆ.

ಉದಾ: ಮೇಲಿನ ಕ್ಯಾಲೆಂಡರ್ ಚಿತ್ರದಲ್ಲಿ ಗುರ್ತಿಸಿರುವ 4 ಸಂಖ್ಯೆಗಳನ್ನು ನೋಡಿ. 1, 8, 15, 22 ಸಂಖ್ಯೆಗಳು ಇವುಗಳ ಮೊತ್ತ ಪಡೆಯಲು ಮೊದಲ ಮತ್ತು ಕೊನೆಯ ಸಂಖ್ಯೆಗಳನ್ನು ಕೂಡಿಸಿ.  ಮೊತ್ತವನ್ನು 2 ರಿಂದ ಗುಣಿಸಿ. ಬರುವ ಉತ್ತರ 1+22 = 23; 23×2=46. ಹೀಗೆಯೇ 4, 12, 20, 28 ಗಳ ಮೊತ್ತ: 4+28 = 32; 32×2 = 64. ಕೊನೆಯ ಕಂಭಸಾಲಿನಲ್ಲಿ ಗುರ್ತಿಸಿರುವುದು 25, 26, 27, 28, 29, 30. ಇವುಗಳ ಮೊತ್ತ: 25+30=55; 55×3=165. ಮೊದಲ ಮತ್ತು ಕೊನೆಯ ಸಂಖ್ಯೆಗಳ ಮೊತ್ತವನ್ನು ಒಟ್ಟು ಸಂಖ್ಯೆಗಳ ಅರ್ಧದಷ್ಟರಿಂದ ಗುಣಿಸಬೇಕು.

ಪ್ರಾಥಮಿಕ ಶಾಲೆಯ ಮಕ್ಕಳಿಗೆ ಇದನ್ನು ಒಂದು ಆಟವಾಗಿ ಹೇಳಿಕೊಟ್ಟರೆ, ಮಕ್ಕಳ ಗಣಿತ ಸಾಮರ್ಥ್ಯ ಉತ್ತಮವಾಗಬಹುದಲ್ಲವೆ?

ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ, ಈ ಸಾಲುಗಳೆಲ್ಲವೂ ಅಂಕಗಣಿತ ಶ್ರೇಢಿಯಲ್ಲಿರುವುದನ್ನು ತಿಳಿಸಿ, ಸೂತ್ರ ಬಳಸಿ ಮೊತ್ತ ಪಡೆದು, ದಿಢೀರ್ ಉತ್ತರವನ್ನು ಪ್ರಮಾಣಿಸಲು ತಿಳಿಸಿದರೆ ಲಾಭದಾಯಕ.

3) ಯಾವುದೇ ತಿಂಗಳಿನ ದಿನಸೂಚಿ ತೆಗೆದುಕೊಳ್ಳಿ. ಅದರಲ್ಲಿನ 3×3 ಮನೆಗಳಷ್ಟು ಅಗಲದ ಕಿಂಡಿಯನ್ನು ರಟ್ಟಿನಲ್ಲಿ ಕತ್ತರಿಸಿ. ಕಿಂಡಿಯನ್ನು ದಿನಸೂಚಿಯ ಮೇಲೆ 9 ಮನೆಗಳು ಕಾಣುವಂತೆ ಇರಿಸಿ. ಈ ಒಂಭತ್ತು ಸಂಖ್ಯೆಗಳ ಮೊತ್ತ ಎಷ್ಟೆಂದು ದಿಢೀರ್ ಹೇಳಬಲ್ಲಿರಾ? ಚಿತ್ರದಲ್ಲಿ ಇಂತಹ ಚೌಕವನ್ನು, 3×3 ರಿಂದ ಗುರ್ತಿಸಿದೆ. ಉತ್ತರ ಹೀಗಿದೆ. 3×3 ಚೌಕದ ಮಧ್ಯದ ಸಂಖ್ಯೆಯನ್ನು 9 ರಿಂದ ಗುಣಿಸಿ. ಬರುವ ಗುಣಲಬ್ಧವೇ ಉತ್ತರ.

ಇಲ್ಲಿ 16 ಮಧ್ಯದ ಸಂಖ್ಯೆ, 9 ಸಂಖ್ಯೆಗಳ ಮೊತ್ತ; 9×16=144 ಪ್ರಮಾಣಿಸಿ ನೋಡಿ.

ರಟ್ಟಿನ ಕಿಂಡಿಯು ಬೇರೆ ಬೇರೆ 3×3 ಚೌಕಗಳನ್ನು ಆವರಿಸುವಂತೆ ಮಾಡಿ ಉತ್ತರ ಕಂಡುಕೊಳ್ಳಿ.

ಪ್ರೈಮರಿ ಶಾಲೆಯ ವಿದ್ಯಾರ್ಥಿಗಳಿಗೆ ಇದು ಮೋಜಿನ ಆಟವಾಗಬಹುದು.

4) ಮೊದಲಿನ ರೀತಿಯಲ್ಲಿಯೇ ರಟ್ಟಿನಲ್ಲಿ 4×4 ಅಳತೆಯ ಮನೆಗಳು ಹೊಂದುವಂತೆ ಕಿಂಡಿ ಕತ್ತರಿಸಿ. 4×4 ಕಿಂಡಿಯಲ್ಲಿ ಕಾಣಬರುವ 16 ಸಂಖ್ಯೆಗಳ ಮೊತ್ತವೆಷ್ಟು? ತಕ್ಷಣ ಹೇಳುವುದು ಹೇಗೆ?

4×4 ಚೌಕದ ಸಂಖ್ಯೆಗಳಲ್ಲಿ ಎದುರು ಬದುರು ಮೂಲೆಯ ಎರಡು ಸಂಖ್ಯೆಗಳನ್ನು ತೆಗೆದುಕೊಳ್ಳಿ. ಇಲ್ಲಿ 4,28 ಅಥವಾ 7,25; ಅವುಗಳ ಮೊತ್ತ ಬರೆಯಿರಿ. ಇಲ್ಲಿ ಅದು 32. ಇದನ್ನು 8 ರಿಂದ ಗುಣಿಸಿ. ಉತ್ತರವೇ ಆ 4×4 ಹದಿನಾರು ಸಂಖ್ಯೆಗಳ ಒಟ್ಟು ಮೊತ್ತ. 32×8=256.  ಪ್ರಮಾಣಿಸಿ ನೋಡಿ.

ಇದೂ ಸಹ ಪ್ರೈಮರಿ ಶಾಲೆಯ ವಿದ್ಯಾರ್ಥಿಗಳಿಗೆ ಬೋಧಪ್ರದ ಮತ್ತು ರಂಜನೀಯ ಆಗಬಹುದು.