ಈ ಲೇಖನದಲ್ಲಿ ಕ್ಯೂಆರ್ ಕೋಡ್ ಮತ್ತು ಬಾರ‍್ಕೋಡ್‌ಗಳನ್ನು ಓದಲು ಬಳಸುವ ಬಾರ್ಕೋ‍ಡ್ ಸ್ಕ್ಯಾನರ್‌ಗಳನ್ನು ಕುರಿತು ತಿಳಿದುಕೊಳ್ಳೋಣ.

1930ರಲ್ಲಿ ಲೀ ಡೀ ಫಾರೆಸ್ಟ್ ಮೂವಿ ಸೌಂಡ್ ಸಿಸ್ಟಮ್‌ಗಾಗಿ ಒಂದು ವಿಶೇಷ ಸೂಕ್ಷ್ಮಗ್ರಾಹಿ ಟ್ಯೂಬ್ ಅಭಿವೃದ್ಧಿಪಡಿಸಲಾಗಿತ್ತು. ಚಲನಚಿತ್ರ ಪ್ರದರ್ಶನದ ವೇಳೆ ಮೂವಿ ಪ್ರೊಜೆಕ್ಟರ್‌ನ ಬೆಳಕನ್ನು ಗ್ರಹಿಸಿ, ಆ ಚಿತ್ರದ ಆಡಿಯೋವನ್ನು ಕೇಳುವಂತೆ ಮಾಡಲು ಈ ಟ್ಯೂಬ್ ಉಪಕರಣವನ್ನು ಬಳಸಲಾಗುತ್ತಿತ್ತು.

1940ರ ದಶಕದಲ್ಲಿ ನಾರ್ಮನ್ ಜೋಸೆಫ್ ವುಡ್‌ಲ್ಯಾಂಡ್‌ ಎನ್ನುವವರು, ಲೀ ಡೀ ಫಾರೆಸ್ಟ್ ಮೂವಿ ಸೌಂಡ್ ಸಿಸ್ಟಮ್‌ನ್ನ ಈ ವಿಶೇಷ ಸೂಕ್ಷ್ಮಗ್ರಾಹಿ ಟ್ಯೂಬ್ ಉಪಕರಣವನ್ನು ಬಳಸಿ, ಬಾರ್ಕೋಡ್‌ಗಳನ್ನು ಓದಲು   ಬಾರ್ಕೋಡ್‌ ರೀಡರ್ ಉಪಕರಣವನ್ನು ಅಭಿವೃದ್ಧಿಪಡಿಸಿದರು.

1949ರಲ್ಲಿ ತಾವು ಅಭಿವೃದ್ಧಿಪಡಿಸಿದ ಬಾರ್ಕೋಡ್ ರೀಡರ್ ಉಪಕರಣಕ್ಕಾಗಿ ನಾರ್ಮನ್ ಜೋಸೆಫ್ ವುಡ್‌ಲ್ಯಾಂಡ್‌ರವರು ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಿದರು. 1952ರಲ್ಲಿ ಅವರಿಗೆ ಪೇಟೆಂಟ್ ದೊರೆಯಿತು. ಈಗ ವಿಶ್ವದ ಅಗ್ರಮಾನ್ಯ ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದಾಗಿ ಐಬಿಎಮ್ ಸಂಸ್ಥೆಯು ಈ ಬಾರ್ಕೋಡ್‌ ರೀಡರ್ ಪೇಟೆಂಟ್‌ನ್ನು ನಾರ್ಮನ್ ಜೋಸೆಫ್ ವುಡ್‌ಲ್ಯಾಂಡ್‌ರವರಿಂದ ಖರೀದಿಸಲು ಆಸಕ್ತಿ ತೋರಿಸಿತು. ಆದರೆ 1962ರಲ್ಲಿ ಈ ಬಾರ್ ಕೋಡ್ ರೀಡರ್‌ನ ಪೇಟೆಂಟ್‌ನ್ನು ಜೋಸೆಫ್ ವುಡ್‌ಲ್ಯಾಂಡ್‍ರವರಿಂದ ಖರೀದಿಸಿದ ಫಿಲೆಡೆಲ್ಫಿಯಾ ಸ್ಟೋರೇಜ್ ಬ್ಯಾಟರಿ ಕಂಪನಿಯು, ವಾಣಿಜ್ಯ ಬಳಕೆಗೆ ಬಾರ್ಕೋಡ್‌ ರೀಡರ್ ಉಪಕರಣವನ್ನು ತಯಾರಿಸಿದ ವಿಶ್ವದ ಮೊದಲನೆಯ ಸಂಸ್ಥೆಯೆಂದು ಹೆಗ್ಗಳಿಕೆಯನ್ನು ಗಳಿಸಿತು. ಕೆಲವು ವರ್ಷಗಳ ನಂತರ ಫಿಲೆಡೆಲ್ಫಿಯಾ ಸ್ಟೋರೇಜ್ ಬ್ಯಾಟರಿ ಕಂಪನಿಯು, ಈ ಬಾರ್ಕೋಡ್‌ ರೀಡರ್ ಪೇಟೆಂಟ್‌‌ನ್ನು ಆರ್‌ಸಿಎ ಹೆಸರಿನ ಸಂಸ್ಥೆಗೆ ಮಾರಾಟ ಮಾಡಿತು.

1966ರಲ್ಲಿ ನ್ಯಾಷನಲ್ ಅಸೊಷಿಯೇಷನ್ ಆಫ್ ಫುಡ್ ಚೇನ್ಸ್ ಹೆಸರಿನ ಸಂಸ್ಥೆಯು ಬಾರ್ಕೋಡ್‌ ರೀಡರ್‌ನ್ನು ಬಳಸಲಾರಂಭಿಸಿತು. 1967ರಲ್ಲಿ ಅಮೇರಿಕನ್ ರೈಲ್ವೇ ರೋಡ್‌ಗಳ ಅಸೋಷಿಯೇಷನ್ ತನ್ನ ಸದಸ್ಯ ರೈಲು ಸೇವೆ ಸಂಸ್ಥೆಗಳಲ್ಲಿ ಬಾರ್ಕೋಡ್‌ ಸ್ಕ್ಯಾನರ್‌ಗಳನ್ನು ಯಶಸ್ವಿಯಾಗಿ ಬಳಸಲು ಪ್ರಾರಂಭಿಸಿತು. 1969ರಲ್ಲಿ ಕಂಪ್ಯೂಟರ್ ಐಡೆಂಟಿಕ್ಸ ಸಂಸ್ಥೆಯು, ತನ್ನ ಉತ್ಪನ್ನಗಳಿಗೆ ಬಾರ್ಕೋಡ್ ಸ್ಕ್ಯಾನರ್ ಬಳಸಿದ ಮೊದಲ ಉದ್ಯಮವೆಂದು ಹೆಗ್ಗಳಿಕೆ ಗಳಿಸಿತು.

1974ರಲ್ಲಿ ಪ್ರಪ್ರಥಮ ಬಾರಿಗೆ ಮೂರು ಸೂಪರ್ ಮಾರುಕಟ್ಟೆಗಳು ಬಾರ್ಕೋ‍ಡ್ ರೀಡರ್‌ಗಳನ್ನು ಬಳಸಲು ಪ್ರಾರಂಭಿಸಿದವು. ಜೂನ್ 1974ರಲ್ಲಿ ಅಮೇರಿಕಾ ದೇಶದ ಓಹಿಯೋ ರಾಜ್ಯದ ಟ್ರಾಯ್ ನಗರದಲ್ಲಿದ್ದ ಮಾರ್ಷ ಸೂಪರ್ ಮಾರುಕಟ್ಟೆ ಬಾರ್ಕೋಡ್ ರೀಡರ್ ಬಳಸಿದ ಮೊದಲನೆಯ ಸೂಪರ್ ಮಾರುಕಟ್ಟೆಯಂದು ಹೆಗ್ಗಳಿಕೆಯನ್ನು ಗಳಿಸಿತು. ಜುಲೈ 1974ರಲ್ಲಿ ಕೆನೆಡಾ ದೇಶದ ಮಾಂಟ್ರಿಯಲ್‌ನಲ್ಲಿದ್ದ ಸ್ಟೀನ್‌ಬರ್ಗ ಕಿರಾಣಿ ವ್ಯಾಪಾರ ಮಳಿಗೆ ಮತ್ತು ಅಮೇರಿಕಾ ದೇಶದ ನ್ಯೂಜರ್ಸಿ ರಾಜ್ಯದ ಸೌತ್‌ಪ್ಲೇನ್‌ಫೀಲ್ಡ್‌ ನಗರದಲ್ಲಿದ್ದ ಪಾಥ್‌ಮಾರ್ಕ್‌ ಸ್ಟೋ‍ರ‍್ನಲ್ಲಿ ಬಾರ್ಕೋಡ್ ರೀಡರ್‌ಗಳ ಬಳಕೆ ಪ್ರಾರಂಭವಾಯಿತು.

1982ರಲ್ಲಿ ಅಮೇರಿಕಾ ದೇಶದ ಟೆಕ್ಸಾಸ್ ರಾಜ್ಯದ ಡಲ್ಲಾಸ್ ನಗರದಲ್ಲಿದ್ದ ಸ್ಕ್ಯಾನ್‌ಟೆಕ್‌ನಲ್ಲಿ ನಾರ್ಮಂಡ್ ಹೆಸರಿನ ಸಂಸ್ಥೆಯು ಸಿಸಿಡಿ ತಂತ್ರಜ್ಞಾನ ಆಧಾರಿತ ಬಾರ್ಕೋಡ್ ಸ್ಕ್ಯಾನರ್‌ಗಳ ಬಳಕೆಯನ್ನು ಪ್ರಾರಂಭಿಸಿತು. 1988ರಲ್ಲಿ ಇಂಟರ್‌‌ಮೆಕ್ ಹೆಸರಿನ ಸಂಸ್ಥೆಯು 2-ಡಿ ಬಾರ್ಕೋಡ್‌ಗಳನ್ನು ಅಭಿವೃದ್ಧಿಪಡಿಸಿತು. 1994ರಲ್ಲಿ ಜಪಾನಿನ ಡೆನ್ಸೋ ವೇವ್ ಸಂಸ್ಥೆಯು ಕ್ಯೂ.ಆರ್ ಕೋಡ್‌ಗಳನ್ನು ಬಳಕೆಗೆ ತಂದರೆ, ಇದೇ ವರ್ಷ ಮೊದಲ ಬಾರಿಗೆ ಮೊಬೈಲ್ ಆಧಾರಿತ ಕಂಪ್ಯೂಟಿಂಗ್‌ಗೆ ಅಗತ್ಯವಾದ ಬಾರ್ಕೋಡ್ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಯಿತು. 1999ರಲ್ಲಿ ಜಪಾನಿನ ಉದ್ಯಮ ಮಾನದಂಡ ಸಂಸ್ಥೆಯು ಕ್ಯೂ.ಆರ್ ಕೋಡ್‌ಗಳ ನೊಂದಣಿ ಪ್ರಾರಂಭಿಸಿತು. 2005ರಲ್ಲಿ ಹಲವಾರು ಪ್ರಮುಖ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರ ಬೋರ್ಡಿಂಗ್ ಪರವಾನಗಿ ಪಾಸ್‌ಗಳಲ್ಲಿ ಬಾರ್ಕೋಡ್ ಬಳಕೆಯನ್ನು ಪ್ರಾರಂಭಿಸಿದವು.

1974ರಲ್ಲಿ ಬಾರ್ಕೋಡ್ ಸ್ಕ್ಯಾನರ್ ಉಪಕರಣಗಳು ಬಳಕೆಗೆ ಬಂದರೆ, 1994ರ ಹೊತ್ತಿಗೆ ಬಾರ್ಕೋಡ್‌ನಲ್ಲಿ ನೀಡಬಹುದಾದ ಮಾಹಿತಿ ಮತ್ತು ಅದನ್ನು ಗ್ರಹಿಸಲು ಬಾರ್ಕೋಡ್ ಉಪಕರಣಗಳಿಗಿರುವ ಸೀಮಿತ ಅವಕಾಶಗಳ ಕುರಿತು ಚರ್ಚೆ ಪ್ರಾರಂಭವಾಯಿತು, 20 ಆಲ್ಫಾನೂಮರಿಕ್ ಸಂಕೇತಗಳನ್ನು ಹೊಂದುವ ಬಾರ್ಕೋಡ್‌ಗಳಿಗೆ ಪರ್ಯಾಯವಾಗಿ ಕ್ಯೂ.ಆರ್ ಕೋಡ್‌ಗಳನ್ನು ಅಭಿವೃದ್ಧಿ ಪಡಿಸಿದ್ದು ಬಾರ್ಕೋಡ್ ಸ್ಕ್ಯಾನರ್ ಕ್ಷೇತ್ರದಲ್ಲಿ ಹೊಸ ಸಂಚಲನವನ್ನುಂಟು ಮಾಡಿತು. ಈಗ ಜನಪ್ರಿಯವಾಗಿರುವ ಸ್ಮಾರ್ಟ ಫೋನ್ ಬಳಸಿ ಕ್ಯೂ.ಆರ್ ಬಾರ್ಕೋಡ್‌ಗಳನ್ನು ಓದಲು ಸಾಧ್ಯವಾಗುವಷ್ಟು ತಂತ್ರಜ್ಞಾನ ಅಭಿವೃದ್ಧಿಯಾಗಿದೆ ಮತ್ತು ಸ್ಮಾರ್ಟ ಫೋನ್‌ಗಳಲ್ಲಿ ಬಳಸಲು ಹಲವಾರು ಬಾರ್ಕೋಡ್‌ ರೀಡರ್ ತಂತ್ರಾಂಶಗಳು ಲಭ್ಯವಿದೆ.

ಕ್ಯೂ.ಆರ್.ಕೋಡ್ ಸ್ಕ್ಯಾನರ್‌ಗಳು:
ಸ್ಮಾರ್ಟ ಫೋನ್ ಅಲ್ಲದೆ ಹಲವು ರೀತಿಯ ಕ್ಯೂ.ಆರ್ ಕೋಡ್ ಸ್ಕ್ಯಾನರ್‌ಗಳು ಲಭ್ಯವಿದೆ. ಇವುಗಳಲ್ಲಿ ಕೆಲವು ಪ್ರಮುಖ ಸ್ಕ್ಯಾನರ್‌ಗಳು ಹೀಗಿವೆ.

1. ಹ್ಯಾಂಡಿ ಸ್ಕ್ಯಾನರ್‌ಗಳು :
ಇವುಗಳಿಂದ ದೊರೆಯುವ ಮಾಹಿತಿಯನ್ನು ರೇಡಿಯೋ ತರಂಗಾಂತರ ಅಥವಾ ಕೇಬಲ್ ಮೂಲಕ ಕಂಪ್ಯೂಟರ್ ಅಥವಾ ಪಿ.ಒ.ಎಸ್ ಉಪಕರಣಕ್ಕೆ ಕಳುಹಿಸಿ, ಅಲ್ಲಿರುವ ತಂತ್ರಾಂಶವನ್ನು ಬಳಸಿ ಸಂಸ್ಕರಿಸಲಾಗುತ್ತದೆ. ಲೇಬಲ್ ಅಥವಾ ಕೋಡ್‌ನ್ನು ಎಷ್ಟು ದೂರದಿಂದ ಓದಬೇಕು, ಎಷ್ಟು ವಿವರಗಳನ್ನು ಪಡೆಯಬೇಕು, ಹೀಗೆ ವಿವಿಧ ಅಗತ್ಯಗಳಿಗೆ ತಕ್ಕಂತೆ ವಿನ್ಯಾಸಗೊಂಡಿರುವ ವಿವಿಧ ರೀತಿಯ ಹ್ಯಾಂಡಿ ಸ್ಕ್ಯಾನರ್‌ಗಳು ಲಭ್ಯವಿದೆ.

2. ಹ್ಯಾಂಡಿ ಟರ್ಮಿನಲ್‌ಗಳು:
ಇವುಗಳು ಕೋಡ್‌ನ್ನು ಓದುವುದು ಮಾತ್ರವಲ್ಲ, ಅದರಿಂದ ದೊರೆತ ಮಾಹಿತಿಯನ್ನು ಸಂಗ್ರಹಿಸಿ, ಸಂಸ್ಕರಿಸುವ ಸೌಲಭ್ಯವನ್ನು ಹೊಂದಿರುತ್ತವೆ. ಇಂತಹ ಟರ್ಮಿನಲ್ಗಾಳಿಗಿರುವ ಮಾಹಿತಿ ಸಂಗ್ರಹ ಮತ್ತು ಸಂಸ್ಕರಣೆ ಸಾಮರ್ಥ್ಯ ಹಾಗೂ ಸಂವಹನ ಕ್ಷೇತ್ರ ವ್ಯಾಪ್ತಿಗಳಿಗನುಸಾರವಾಗಿ ವಿವಿಧ ಅಗತ್ಯಗಳಿಗೆ ಸೂಕ್ತವಾದ ಹ್ಯಾಂಡಿ ಟರ್ಮಿನಲ್‌ಗಳು ಲಭ್ಯವಿದೆ.

3. ಫಿಕ್ಸೆಡ್ ಸ್ಕ್ಯಾನರ್‌ಗಳು:
ಇವುಗಳನ್ನು ಒಂದು ಕಡೆ, ಉದಾಹರಣೆಗೆ ಡೆಸ್ಕಟಾಪ್‌ನಲ್ಲಿ ಅಳವಡಿಸಲಾಗುತ್ತದೆ. ಇವುಗಳಿಂದ ದೊರೆಯುವ ಮಾಹಿತಿಯನ್ನು ಕೇಬಲ್ ಮೂಲಕ ಕಂಪ್ಯೂಟರ್‌ಗೆ ರವಾನಿಸಲಾಗುತ್ತದೆ. ಅಲ್ಲಿರುವ ತಂತ್ರಾಂಶವನ್ನು ಬಳಸಿ ಈ ಮಾಹಿತಿಯನ್ನು ಸಂಸ್ಕರಿಸಲಾಗುತ್ತದೆ. ಬಿಲ್ಲಿಂಗ್ ಕೌಂಟರ್‌ಗಳು, ಪ್ರವೇಶ ಅಥವಾ ನಿರ್ಗಮನ ದ್ವಾರಗಳು, ಹೀಗೆ ವಿವಿಧ ಕಡೆ ಇವುಗಳನ್ನು ಬಳಸಲಾಗುತ್ತದೆ.

4. ಹೈಬ್ರಿಡ್ ಸ್ಕ್ಯಾನರ್‌ಗಳು:
ಇಂತಹ ಸ್ಕ್ಯಾನರ್‌ಗಳಲ್ಲಿ ಕ್ಯೂ.ಆರ್ ಕೋಡ್ ಮತ್ತು ಬಾರ್ಕೋಡ್‌ಗಳೆರಡನ್ನು ಓದುವ ಸೌಲಭ್ಯ ನೀಡಲಾಗುತ್ತದೆ. ಇವುಗಳಿಂದ ದೊರೆಯುವ ಮಾಹಿತಿಯನ್ನು ಕಂಪ್ಯೂಟರ್ ಅಥವಾ ಸ್ಮಾರ್ಟ ಟರ್ಮಿನಲ್‌ಗಳಿಗೆ ರವಾನಿಸಲು ಸೌಲಭ್ಯವಿರುತ್ತದೆ.

5. ವಿಶೇಷ ಉದ್ದೇಶಗಳಿಗಾಗಿ ಬಳಸುವ ಸ್ಕ್ಯಾನರ್‌ಗಳು:
ವೇರ್‌ಹೌಸ್ (ಸರಕು ದಾಸ್ತಾನು ಮಳಿಗೆ), ಲಾಜಿಸ್ಟಿಕ್ಸ್, ಮಾರಾಟ ಮಳಿಗೆ, ಸರಕು ಸಾಗಾಣಿಕೆ, ಆನ್‌ಲೈನ್‌ ಮಾರಾಟ, ಹೀಗೆ ವಿವಿಧ ಉದ್ದೇಶಗಳಿಗೆ ಸೂಕ್ತವಾದ ಸ್ಕ್ಯಾನರ್‌ಗಳು ಮತ್ತು ತಂತ್ರಾಂಶಗಳು ದೊರೆಯುತ್ತವೆ. ಉದಾಹರಣೆಗೆ ಬ್ಯಾಟರಿ ಚಾಲಿತ ಸ್ಕ್ಯಾನರ್‌ಗಳು, ಏಕ ಕಾಲದಲ್ಲಿ ಹಲವು ಸಾಲು ಬಾರ್ಕೋಡ್ಗಗಳನ್ನು ಓದುವ ಸಾಮರ್ಥ್ಯವಿರುವ ಸ್ಕ್ಯಾನರ್‌ಗಳು, ಹೀಗೆ ವಿವಿಧ ರೀತಿಯ ಸ್ಕ್ಯಾನರ್‌ಗಳು ಲಭ್ಯವಿದೆ.

ಬಾರ್ಕೋಡ್‌ ರೀಡರ್ ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿದುಕೊಳ್ಳಲು, ಸರಳ ವಿವರಣೆಯನ್ನು ಇಲ್ಲಿ ನೀಡಲಾಗಿದೆ.
1) ಬಾರ್ಕೋಡ್ ರೀಡರ್ ಮತ್ತು ಸೂಪರ್ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಬಿಲ್ಲಿಂಗ್ ಮಾಡಲು ಬಳಸುವ ಕಂಪ್ಯೂಟರ್ ನಡುವೆ ಸಂಪರ್ಕವನ್ನು ನೀಡಲಾಗಿರುತ್ತದೆ. ಹೀಗಾಗಿ, ಬಾರ್ಕೋಡ್ ಓದುವ ಬಾರ್ಕೋಡಿನ ಮಾಹಿತಿಯನ್ನು ಗ್ರಹಿಸಿ ಬಿಲ್ಲಿಂಗ್ ತಂತ್ರಾಂಶದಲ್ಲಿ ಬಳಸುವುದು ಸುಲಭವಾಗುತ್ತದೆ.
2) ಬಾರ್ಕೋಡ್ ಸ್ಕ್ಯಾನರ್ ಉಪಕರಣವು ತನ್ನಲ್ಲಿ ಇರುವ ಲೇಸರ್ ಅಥವಾ ಎಲ್.ಇ.ಡಿ. ಕಿರಣಗಳನ್ನು ಬಾರ್ಕೋಡ್ ಲೇಬಲ್ ಮೇಲೆ ಬೀಳುವಂತೆ ಮಾಡುತ್ತದೆ.
3) ಈ ಕಿರಣಗಳು ಬರ್ಕೋಡ್‌ ಲೇಬಲ್‌ನಿಂದ ಪ್ರತಿಫಲನಗೊಂಡು, ಬಾರ್ಕೋಡ್ ಸ್ಕ್ಯಾನರ್‌ಗೆ ಹಿಂತಿರುಗುತ್ತವೆ.
4) ಬಾರ್ಕೋಡ್ ಲೇಬಲ್‌ನಲ್ಲಿರುವ ಬಿಳಿಯ ಭಾಗದಿಂದ ಹೆಚ್ಚು ಪ್ರಮಾಣದ ಕಿರಣಗಳು ಪ್ರತಿಫಲನಗೊಳ್ಳುತ್ತದೆ ಮತ್ತು ಕಪ್ಪು ಗೆರೆಗಳಿಂದ ಕಡಿಮೆ ಪ್ರಮಾಣದ ಕಿರಣಗಳು ಪ್ರತಿಫಲನಗೊಳ್ಳುತ್ತವೆ.
5) ಬಾರ್ಕೋಡ್ ರೀಡರ್‌ನಲ್ಲಿರುವ ಫೋಟೋಎಲೆಟ್ರಿಕ್ ಸೆಲ್, ಪ್ರತಿಫಲನವಾದ ಕಿರಣಗಳಿಂದ ಮಾಹಿತಿಯನ್ನು ಗ್ರಹಿಸುವುದರ ಮೂಲಕ, ಬಾರ್ಕೋಡ್ ಲೇಬಲ್‌ನಲ್ಲಿರುವ ಮಾಹಿತಿಯನ್ನು ಬಾರ್ಕೋಡ್ ರೀಡರ್ ಓದಲು ಸಹಾಯ ಮಾಡುತ್ತದೆ.
6) ಬಾರ್ಕೋಡ್ ಲೇಬಲ್‌ನಿಂದ ಹೀಗೆ ಮಾಹಿತಿಯನ್ನು ಪಡೆದು ಬಿಲ್ಲಿಂಗ್ ತಂತ್ರಾಂಶದಲ್ಲಿ ಬಳಸಲಾಗುತ್ತದೆ.

ವಿವಿಧ ರೀತಿಯ ಬಾರ್ಕೋಡ್‌ ರೀಡರ್‌ಗಳು ಬಳಕೆಯಲ್ಲಿವೆ. ಇವುಗಳಲ್ಲಿ ಪ್ರಮುಖವಾದ ಕೆಲವು ಬಾರ್ಕೋಡ್‌ ರೀಡರ್‌ಗಳು ಹೀಗಿವೆ.
1) ಪೆನ್ ಮಾದರಿಯ ಬಾರ್ಕೋಡ್‌ ರೀಡರ್: ನೋಡಲು ಪೆನ್‌ನಂತೆ ಕಾಣುವ ಈ ಬಾರ್ಕೋಡ್‌ ರೀಡರ್‌ನ್ನು ಕೈಯಲ್ಲಿ ಹಿಡಿದು ಬಳಸುವುದು ಸುಲಭವಾಗಿದ್ದು, ಕಿರಿಯ ಗಾತ್ರದ ಬಾರ್ಕೋಡ್‌ ಲೇಬಲ್‌ಗಳ ಮಾಹಿತಿಯನ್ನು ಓದಲು ಬಳಸುತ್ತಾರೆ.
2) 2ಡಿ ಕ್ಯಾಮರಾ ಆಧಾರಿತ ಬಾರ್ಕೋಡ್‌ ರೀಡರ್: ಕೆಲವು ಬಾರ್ಕೋಡ್‌ ಲೇಬಲ್‌ಗಳಲ್ಲಿರುವ ಮಾಹಿತಿಯನ್ನು ಸಾಧಾರಣ ಬಾರ್ಕೋಡ್‌ ರೀಡರ್‌ಗಳಿಂದ ಓದಲು ಸಾಧ್ಯವಾಗುವುದಿಲ್ಲ. ಇಂತಹ ಸಂದರ್ಭದಲ್ಲಿ ಆ ಬಾರ್ಕೋಡ್‌ ಲೇಬಲ್‌ನ ಡಿಜಿಟಲ್ ಚಿತ್ರವನ್ನು ಸೆರೆಹಿಡಿದು, ಆ ಡಿಜಿಟಲ್ ಚಿತ್ರವನ್ನು ಸಂಸ್ಕರಿಸಿ ಮಾಹಿತಿ ಪಡೆಯಲು ಈ ರೀತಿಯ ಬಾರ್ಕೋಡ್ ರೀಡರ್‌ಗಳನ್ನು ಬಳಸುತ್ತಾರೆ.
3) ಲೇಸರ್ ಆಧಾರಿತ ಬಾರ್ಕೋಡ್‌ ರೀಡರ್: ಇವು ಅತ್ಯಂತ ನಿಖರವಾಗಿ ಬಾರ್ಕೋಡ್‌ ಲೇಬಲ್ ಓದುವ ಸಾಮಥ್ರ್ಯವನ್ನು ಹೊಂದಿವೆ. ಹೀಗಾಗಿ ಕೈಯಲ್ಲಿ ಹಿಡಿದು ಬಳಸುವ ಬಾರ್ಕೋಡ್‌ ರೀಡರ್ ಆಗಿ ಅಥವಾ ಟೇಬಲ್ ನಲ್ಲಿ ಅಳವಡಿಸಲಾಗಿರುವ ಬಾರ್ಕೋಡ್‌  ರೀಡರ್ ಆಗಿ ಇವುಗಳನ್ನು ಬಳಸಲಾಗುತ್ತಿದೆ.
4) ಸಿ.ಸಿ.ಡಿ ಆಧಾರಿತ ಬಾರ್ಕೋಡ್‌ ರೀಡರ್: ಇದನ್ನು ಎಲ್.ಇ.ಡಿ ರೀಡರ್ ಅಥವಾ ಸಿ.ಸಿ.ಡಿ ಸ್ಕ್ಯಾನರ್ ಎಂದು ಕೂಡಾ ಕರೆಯಲಾಗುತ್ತದೆ. ಬಾರ್ಕೋಡ್‌ ಲೇಬಲ್‌ನಿಂದ ಪ್ರತಿಫಲನವಾಗುವ ಕಿರಣಗಳ ವೋಲ್ಟೇಜ್‍ನ್ನು ಗುರುತಿಸಿ, ಬಾರ್ಕೋಡ್‌ ಲೇಬಲ್‍ನಲ್ಲಿರುವ ಮಾಹಿತಿಯನ್ನು ಓದಲು ಸಾಧ್ಯವಾಗುವಂತ ತಂತ್ರಜ್ಞಾನವನ್ನು ಈ ರೀಡರ್‌ಗಳಲ್ಲಿ ಬಳಸಲಾಗಿದೆ.
5) ರೀಟೇಲ್ ಉದ್ಯಮಕ್ಕೆ ಪೂರಕವಾದ ಬಾರ್ಕೋಡ್‌ ರೀಡರ್‌ಗಳು: ಆಸ್ಪತ್ರೆಗಳಲ್ಲಿ ಬಳಸಲು ಸೂಕ್ತವಾದ ಬಾರ್ ಕೋಡ್ ರೀಡರ್‌ಗಳು, ವಿಮಾನಯಾನದಂತಹ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಬಳಸಲು ಸೂಕ್ತವಾದ ಬಾರ್ಕೋಡ್‌ ರೀಡರ್‌ಗಳು, ಹೀಗೆ ವಿವಿಧ ಉದ್ಯಮ ಮತ್ತು ಸೇವೆಗಳಿಗೆ ಸೂಕ್ತವಾಗುವಂತೆ ವಿನ್ಯಾಸಗೊಳಿಸಲಾಗಿರುವ ಬಾರ್ಕೋ‌ಡ್ ರೀಡರ್‌ಗಳು ಬಳಕೆಯಲ್ಲಿವೆ. ಉದಾಹರಣೆಗೆ ರೀಟೇಲ್ ಉದ್ಯಮದಲ್ಲಿ ದಾಸ್ತಾನು ಮಳಿಗೆಯಲ್ಲಿ ಬಳಕೆಗೆ ಸೂಕ್ತವಾದ ಬಾರ್ಕೋಡ್‌ ರೀಡರ್‌ಗಳು, ದಾಸ್ತಾನು ವಿತರಣೆ ವಾಹನಗಳಲ್ಲಿ ಬಳಸಲು ಸೂಕ್ತವಾದ ಬಾರ್ಕೋಡ್‌ ರೀಡರ್‌ಗಳು, ಮಾರಾಟ ಮಳಿಗೆಯಲ್ಲಿ ಬಳಸಲು ಸೂಕ್ತವಾದ ಬಾರ್ ಕೋಡ್ ರೀಡರ್‌ಗಳು, ಹೀಗೆ ಹಲವಾರು ರೀತಿಯ ಬಾರ್ಕೋಡ್‌ ರೀಡರ್‌ಗಳು ಬಳಕೆಯಲ್ಲಿವೆ.

ಬಾರ್ಕೋಡ್‌ ರೀಡರ್ ಬಳಕೆಯಿಂದ ಆಗುವ ಪ್ರಯೋಜನಗಳಲ್ಲಿ ಕೆಲವನ್ನು ಇಲ್ಲಿ ವಿವರಿಸಲಾಗಿದೆ.
1) ಬಾರ್ಕೋಡ್‌ ಲೇಬಲ್ ಮತ್ತು ರೀಡರ್‌ಗಳ ಬಳಕೆಯಿಂದ ಬಿಲ್ಲಿಂಗ್‍ಗಾಗಿ ಗ್ರಾಹಕರು ಹೆಚ್ಚು ಹೊತ್ತು ಕಾಯುವುದು ತಪ್ಪುತ್ತಿದೆ. ಸಿಬ್ಬಂದಿಯ ಶ್ರಮ ಮತ್ತು ಸಮಯದ ಉಳಿತಾಯವಾಗುತ್ತದೆ.
2) ಬಾರ್‍ಕೋಡ್ ಲೇಬಲ್‍ಗಳ ಬಳಕೆಯಿಂದ ವಸ್ತುಗಳ ಸಂಗ್ರಹ, ವಿತರಣೆ ಮತ್ತು ಮಾರಾಟ ವ್ಯವಸ್ಥೆಯಲ್ಲಿ ಸಮಯದ ಉಳಿತಾಯವಾಗುತ್ತದೆ, ಕಳವು ಕಡಿಮೆಯಾಗುತ್ತಿದೆ ಮತ್ತು ಪಾರದರ್ಶಕತೆ ಹೆಚ್ಚಾಗುತ್ತಿದೆ.
3) ಕ್ಯೂ.ಆರ್ ಕೋಡ್‍ಗಳಲ್ಲಿ ಜಪಾನಿ ಭಾಷೆ ಬಳಸಲು ಸಾಧ್ಯವಾಗಿರುವಂತೆ ಕನ್ನಡ ಭಾಷೆಯನ್ನು ಬಳಸಲು ಸಾಧ್ಯವಿದೆ. ಹೀಗಾದಾಗ, ಕರ್ನಾಟಕದಲ್ಲಿ ಮಾರಾಟವಾಗುವ ಕ್ಯೂ.ಆರ್ ಆಧಾರಿತ ವಸ್ತುಗಳು ಮತ್ತು ಸೇವೆಗಳ ಬಿಲ್‍ಗಳಲ್ಲಿ ಕೂಡಾ ಕನ್ನಡ ಭಾಷೆಯ ಬಳಕೆ ಸಾಧ್ಯವಾಗುತ್ತದೆ.
4) ಬಾರ್‍ಕೋಡ್ ರೀಡರ್ ಉತ್ಪಾದನೆ, ನಿರ್ವಹಣೆ ಮತ್ತು ದುರಸ್ತಿ, ಹೀಗೆ ಹಲವು ರೀತಿಯ ಸೇವೆ ಮತ್ತು ಉದ್ಯಮಗಳ ಸ್ಥಾಪನೆಗೆ ನಮ್ಮ ದೇಶದಲ್ಲಿ ಅವಕಾಶವಿದೆ. ಇದರಿಂದ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಾವಿರಾರು ಜನರಿಗೆ ಹೊಸ ಉದ್ಯೋಗವಕಾಶ ಕಲ್ಪಿಸಲು ಸಾಧ್ಯವಿದೆ.

ಬಾರ್‍ಕೋಡ್ ಮತ್ತು ಬಾರ್‍ಕೋಡ್ ರೀಡರ್‌ಗಳು ಮುಂಬರುವ ದಿನಗಳಲ್ಲಿ ಹೇಗಿರಬಹುದು? ಸ್ವರ್ಶರಹಿತ ತಂತ್ರಜ್ಞಾನ ಬಳಸಿ ಈ ಲೇಬಲ್ ಮತ್ತು ರೀಡರ್‌ಗಳು ಕಾರ್ಯನಿರ್ವಹಿಸುವುದು ಸಾಧ್ಯವಾಗುತ್ತದೆ. ಇದರಿಂದಾಗಿ ಗ್ರಾಹಕರಿಗೆ ಮತ್ತು ಮಾರಾಟಗಾರರಿಗೆ ಇಬ್ಬರಿಗೂ ಸಮಯ ಮತ್ತು ಶ್ರಮದ ಉಳಿತಾಯವಾಗುತ್ತದೆ. ನಕಲಿ ಬಾರ್‍ಕೋಡ್ ಲೇಬ್‌ಗಳನ್ನು ಗುರುತಿಸುವ ಸೌಲಭ್ಯ ಹೊಂದಿರುವ ಬಾರ್‍ಕೋಡ್ ರೀಡರ್‌ಗಳು, ಒಮ್ಮೆ ಬಳಸಿದರೆ ನಕಲು ಮಾಡಲಾಗದಂತಹ ಬಾರ್ಕೋಡ್ ಲೇಬಲ್‌ಗಳು, ದೃಷ್ಟಿ ಸಮಸ್ಯೆ ಇರುವವರಿಗೆ ಮಾಹಿತಿಯನ್ನು ಓದಿ ಹೇಳುವ ಬಾರ್ಕೋಡ್ ಲೇಬಲ್‌ಗಳು, ಉತ್ಪನ್ನದ ಬಳಕೆಯ ಅವಧಿ ಮುಗಿದ ತಕ್ಷಣ ಬಣ್ಣ ಬದಲಾಯಿಸಿ ಗ್ರಾಹಕರಿಗೆ ಎಚ್ಚರಿಕೆ ನೀಡುವ ಬಾರ್ಕೋಡ್ ಲೇಬಲ್‌ಗಳು, ಪರಿಸರ ಸ್ನೇಹಿ ಬಾರ್ಕೋಡ್ ಲೇಬಲ್‌ಗಳು, ಹೀಗೆ ಹಲವಾರು ಹೊಸ ಆವಿಷ್ಕಾರಗಳು ಮುಂಬರುವ ದಿನಗಳಲ್ಲಿ ಲಭ್ಯವಾಗುವ ಸಾಧ್ಯತೆ ಇದೆ.

ಉದಯ ಶಂಕರ ಪುರಾಣಿಕ