ತುಕಾರಾಮ! ಪ್ರತಿಭಾವಂತ, ಭಕ್ತ ಮತ್ತು ಸಾಮಾಜಿಕ ಅನ್ಯಾಯದ ವಿರುದ್ಧ ಸಡ್ಡು ಹೊಡಯುವ ಯೋಧ-ಈ ಮೂರೂ ಭೂಮಿಕೆಯು ಒಂದೆಡೆ ಸೇರಿದ ಒಬ್ಬ ಮಹಾಪುರುಷ. ಕವಿ ತುಕಾರಾಮ, ಸಂತ ತುಕಾರಾಮ, ಕ್ರಾಂತಿಕಾರಿ ತುಕಾರಾಮ!

ಕಳೆದ ಮೂರು ಶತಮಾನಗಳ ಕಾಲಖಂಡದಲ್ಲಿ ತುಕಾರಾಮನು ಮಹಾರಾಷ್ಟ್ರದ ಜನರ ಭಾವವಿಶ್ವದ ಜತೆ ಅವಿಭಾಜ್ಯ ಅಂಗವಾಗುಳಿದ. ಅವನ ಆಭಂಗವು ಜನರ ಸಂಸ್ಕೃತಿಗೂ ಚಿಗುರೊಡೆದ, ನಳನಳಿಸುವ ಪಲ್ಲವವಾಯಿತು. ಈ ಜನ ತುಕಾರಾಮನನ್ನು ಅದೆಷ್ಟು ಪ್ರೀತಿಸಿದರೆಂದರೆ, ತಮ್ಮ ಮಕ್ಕಳಿಗೆ ತುಕಾರಾಮನೆಂದೇ ಹೆಸರಿಟ್ಟರು.

ಆರಿದ ಇದ್ದಲಿಯಲ್ಲ, ಕಿಡಿಕಾರುವ ಕೆಂಡ

ಜನರು ತುಕಾರಾಮನನ್ನು ಎಷ್ಟು ಪ್ರೀತಿಸಿದರು ಎಂಬುದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ. ಅದನ್ನು ಅರ್ಥ ಮಾಡಿಕೊಳ್ಳುವಾಗ ನಮ್ಮ ಮನದೊಳಗೆ ಬೇರೂರಿದ ಪ್ರತಿಮೆಯನ್ನು ಮೊದಲು ದೂರ ಸರಿಸಬೇಕಾಗುತ್ತದೆ. ಏಕೆಂದರೆ, ಈವರೆಗಿನ ಬಹಳಷ್ಟು ಚರಿತ್ರೆಕಾರರು ನಮ್ಮೆದುರಿಗೆ ಚಿತ್ರಿಸಿದ ತುಕಾರಾಮನ ಪ್ರತಿಮೆಯು, ಅವನ ಮೂಲ ವ್ಯಕ್ತಿತ್ವಕ್ಕೆ ಸುಸಂಗತವಾಗಿಲ್ಲ. ತುಕಾರಾಮನೆಂದರೆ, ದಿವಾಳಿಹೊಂದಿ ಅಸಹಾಯಕನಾಗಿ ದೇವರ ಭಕ್ತಿಯತ್ತ ಹೊರಳಿದ, ಸರಿಯಾಗಿ ಸಂಸಾರ ಸಾಗಿಸಲಾಗದ, ಸದಾ ತಾಳ ಕುಟ್ಟುತ್ತ ಕೂತಿರುವ, ವ್ಯವಹಾರ ಶೂನ್ಯ, ಮುಗ್ಧ ಭೋಳೆ ಸಂತ ಎಂಬ ಮಾದರಿಯ ಚಿತ್ರವನ್ನು ನಮ್ಮೆದುರಿಗೆ ನಿಲ್ಲಿಸಲಾಗಿದೆ. ವಸ್ತುಸ್ಥಿತಿಯೆಂದರೆ ಇಲ್ಲಿಯ ಸಮಾಜ ಮಾನಸದ ಮೇಲೆ ಛಾಪು ಬೀರಿದ ಉದ್ದಾಮ, ಅಹಂಕಾರಿ ಮತ್ತು ಧರ್ಮದ ಹೆಸರಿನಲ್ಲಿ ಅನೀತಿಯ ವ್ಯಾಪಾರ ನಡೆಸುತ್ತಿರುವ ಧಾರ್ಮಿಕ ಸತ್ತೆಗೆ ಪ್ರಬಲ ವಿರೋಧವನ್ನು ಒಡ್ಡುವ ಈ ಸಂತನು ಒಬ್ಬ ಮಹಾನ್ ಯೋಧನಾಗಿದ್ದ. ಅಂತರಂಗಕ್ಕೆ ಕಿರಿಕಿರಿಯುಂಟು ಮಾಡುವ, ಘಾಸಿಗೊಳಿಸುವ, ಆದರೆ ಬಹಿರಂಗದಲ್ಲಿ ಅತ್ಯಂತ ಪ್ರಬಲ ಮತ್ತು ಮಜಬೂತಾಗಿರುವ ವ್ಯವಸ್ಥೆಯ ಮೂಲಕ ಸಿಡಿಮದ್ದು ಇರಿಸುವ ಕಾರ್ಯವನ್ನು ಅವನು ಬದುಕಿನ ಉದ್ದಕ್ಕೂ ಮಾಡುತ್ತಲೇ ಬಮದ. ಇಂಥ ಶೂರ ವ್ಯಕ್ತಿಯನ್ನು ಅಮಾಯಕ ಮತ್ತು ಅಸಹಾಯಕ ವ್ಯಕ್ತಿಯ ರೂಪದಲ್ಲಿ ಚಿತ್ರಿಸುವದೆಂದರೆ, ಸಿಂಹವನ್ನು ಕುರಿಯ ರೂಪದಲ್ಲಿ ಚಿತ್ರಿಸಿದಂತೆ ಅಥವಾ ಧಗಧಗ ಉರಿಯುತ್ತ ಕಿಡಿಕಾರುವ ಕೆಂಡವನ್ನು ಇದ್ದಲಿಯ ರೂಪದಲ್ಲಿ ಬಣ್ಣಿಸಿದಂತೆ. ಒಂದು ಅನೈತಿಕ ವ್ಯವಸ್ಥೆಯ ವಿರುದ್ಧ ಬಂಡೆದ್ದು ಕ್ರಾಂತಿ ಮಾಡಿದ ನಿಜವಾದ ತುಕಾರಾಮನನ್ನು ಅರಿತುಕೊಳ್ಳಬೇಕಾದರೆ, ಸಿಂಹದ ಅಥವಾ ಧಗಧಗಿಸುತ್ತಿರುವ ಕೆಂಡದಂತಹ ತುಕಾರಾಮನನ್ನು ಮೊದಲು ಅರಿತುಕೊಳ್ಳಬೇಕಾಗುತ್ತದೆ. ಈ ಹೊತ್ತಿಗೆಯು ಆ ದಿಸೆಯಲ್ಲಿ ನಡೆಸಿದ ಒಂದು ಚಿಕ್ಕ ಪ್ರಯತ್ನ.