ತುಕಾರಾಮನ ಪ್ರತಿಮೆಯು ನಮ್ಮೆದುರಿಗೆ ಸರಿಯಾದ ಸ್ವರೂಪದಲ್ಲಿ ಮೂಡಿ ಬರಲಿಲ್ಲ ಎನ್ನುವುದಕ್ಕೆ ಪುರಾವೆಯಾಗಿ, ಅವನ ಬದುಕಿನ ಘಟನೆಯೊಂದನ್ನು ಚರ್ಚಿಸಲು ಬಯಸುತ್ತೇನೆ. ತುಕಾರಾಮನು ಇಂದ್ರಾಯಣಿ ಹೊಳೆಯಲ್ಲಿ ಸಾಲದ ಕಿರ್ದಿ ಪುಸ್ತಕವನ್ನು ಮುಳುಗಿಸಿದ್ದು ಒಂದು ಕ್ರಾಂತಿಕಾರಕ ಘಟನೆ ಎನ್ನಲಡ್ಡಿಯಿಲ್ಲ.

ತುಕಾರಾಮನ ಚರಿತ್ರೆಯನ್ನು ಬರೆಯುವ ಮಹಿಪತಿಯು ಈ ಸಂದರ್ಭದ ಕುರಿತು ನೀಡಿದ ಮಾಹಿತಿಯು ಹೀಗಿದೆ-ತುಕಾರಾಮನು ದೋಹೊ ಸನಿಹದಲ್ಲಿರುವ ಭಾಂಬನಾಥ ಎಂಬ ಬೆಟ್ಟದಲ್ಲಿ ಏಳುದಿನ ಚಿಂತನೆಯಲ್ಲಿ ಕಳೆದ. ಏಳು ದಿನ ಶೋಧ ನಡೆಸಿದ ಬಳಿಕ ಅವನು ಆ ಬೆಟ್ಟದಲ್ಲಿ ಗೋಚರಿಸಿದನು. ಆನಂತರ ಕಾನ್ಹೋಬಾ ಎಂಬವನು ಅವನನ್ನು ದೋಹೊಗೆ ತಂದನು. ಮರಳುವಾಗ ತುಕಾರಾಮನು ಇಂದ್ರಾಯಣಿಯ ಹೊಳೆಯ ದಡದಲ್ಲಿ ಕೂತನು. ಸೂರ್ಯೋದಯದ ಕಾಲಕ್ಕೆ ಸ್ನಾನ ಮುಗಿಸಿ ಅವರಿಬ್ಬರೂ ಏಳು ದಿನಗಳ ಉಪವಾಸವನ್ನು ತೊರೆದರು. ಅವನ ತಂದೆ ಜನರಿಗೆ ಸಾಲವನ್ನು ನೀಡಿದ್ದ. ತುಕಾರಾಮನು ಕಾನ್ಹೋಬಾನನ್ನು ಮನೆಗೆ ಕಳುಹಿಸಿ ಆ ಕಿರ್ದಿ ಪುಸ್ತಕವನ್ನು ತರಿಸಿದನು. ಆನಂತರ ಆ ಕಾಗದ ಪತ್ರವನ್ನು ಸರಿಯಾಗಿ ಇಬ್ಭಾಗ ಮಾಡಿದನು. ಅದರಲ್ಲಿಯ ಒಂದು ಭಾಗವನ್ನು ಕಾನ್ಹೋಬಾನಿಗೆ ನೀಡಿದನು. ತನ್ನ ಪಾಲಿಗೆ ಬಂದ ಕಾಗದ ಪತ್ರಗಳನ್ನು ಇಂದ್ರಾಯಣಿಯ ಹೊಳೆಯಲ್ಲಿ ಮುಳುಗಿಸಿದನು.

ಈಗ ನಾವು ಈ ಘಟನೆಯ ಹಿನ್ನಲೆ ಮತ್ತು ಸ್ವರೂಪ, ತುಕಾರಾಮನ ಜೀವನದಲ್ಲಿ ಅದಕ್ಕಿರುವ ಸ್ಥಾನ ಮತ್ತು ಮಹತ್ವ, ಅದರ ಸರಿಯಾದ ಅನ್ವಯಾರ್ಥ, ವಿವಿಧ ಲೇಖಕರು ಅದರ ಬಗೆಗೆ ಬರೆದ ಲೇಖನಗಳ ವಿಷಯದ ಕುರಿತು ಒಂದಿಷ್ಟು ವಿವೇಚನೆ ಮಾಡೋಣ.

ಹಲವು ತಲೆಮಾರಿನಿಂದ ತುಕಾರಾಮನ ಮನೆತನದವರು ಬಡ್ಡಿ ವ್ಯವಹಾರ ಮಾಡುತ್ತಿದ್ದರು. ಅವನ ತಂದೆ ನೀಡಿದ ಸಾಲವನ್ನು ಊರಲ್ಲಿಯ ಹಲವು ಜನರಿಂದ ವಸೂಲಿ ಮಾಡಬೇಕಿತ್ತು. ಮಹಾಜನ ಮಾಡುವ ಕಾರ್ಯವೂ ಅವರ ಕುಟುಂಬದವರ ಬಳಿಗಿತ್ತು. ಅಂದರೆ ವ್ಯಾಪಾರಿಗಳ ತೂಕದ ಮೇಲೆ ನಿಯಂತ್ರಣವಿಡುವ ಕಾರ್ಯ ಅವರ ಕಡೆಗಿತ್ತು. ಅವರ ವ್ಯಾಪಾರವೂ ಚೆನ್ನಾಗಿ ನಡೆಯುತ್ತಿತ್ತು. ಅಲ್ಲದೆ ಹೊಲದಿಂದಲೂ ಒಳ್ಳೆಯ ಆದಾಯ ಬರುತ್ತಿತ್ತು. ಅಂದರೆ ಆರ್ಥಿಕವಾಗಿ ತುಕಾರಾಮನು ಅತ್ಯಂತ ಸುರಕ್ಷಿತ ಮತ್ತು ಸುಸ್ಥಿರನಾಗಿದ್ದ ಎಂದರ್ಥ.

ಅವನ ಸಾಲದ ಕಿರ್ದಿ ಪುಸ್ತಕವನ್ನು ಇಂದ್ರಾಯಣಿಯಲ್ಲಿ ಮುಳುಗಿಸಿದಾಗ ತುಕಾರಾಮನ ವಯಸ್ಸು ಕೇವಲ ಇಪ್ಪತ್ತು. ಅವನ ಅಭಂಗ ರಚನೆ ಮತ್ತು ಧಾರ್ಮಿಕ ಸಾಮಾಜಿಕ ಕ್ಷೇತ್ರದ ಕಾರ್ಯಾವೂ ಆರಂಭವಾಗಿದ್ದೂ ಇದೇ ಕಾಲಕ್ಕೆ. ಈ ಕಾರ್ಯವು ಆನಂತರ ಇಪ್ಪತ್ತು ವರುಷಗಳ ಕಾಲ ಮುಂದುವರಿಯಿತು. ಕೇವಲ ೨೦-೨೧ ವರ್ಷ ವಯಸ್ಸಿನ ಸುಸಂಪನ್ನ ಪರಿಸ್ಥಿತಿಯಲ್ಲಿರುವ ಈ ತರುಣ ಒಂದು ದಿನ ಭಾಂಬನಾಥನ ಬೆಟ್ಟಕ್ಕೆ ಹೋದ, ಏಳು ದಿನ ಅಲ್ಲೇ ಉಳಿದ. ಈ ಕಾಲದಲ್ಲಿ ಅವನು ಗಂಭೀರ ಚಿಂತನೆಯನ್ನು ನಡೆಸಿದ. ಅತ್ಮ ನಿರೀಕ್ಷಣೆ, ಸಾಮಾಜಿಕ ಪರಿಸ್ಥಿತಿಯ ವಿಶ್ಲೇಷಣೆ ಕೈಗೊಂಡ. ಸಂಪೂರ್ಣ ಆಯುಷ್ಯವನ್ನೇ ಬದಲಾಯಿಸುವ ಕೆಲವು ನಿರ್ಣಯ ಕೈಗೊಂಡ. ಹೀಗಾಗಿಯೇ ಮನೆಗೆ ಮರಳುವಾಗ, ಇಂದ್ರಾಯಣಿ ಹೊಳೆಯ ಬಳಿ ನಿಂತು ಅವನು ಕಾನ್ಹೋಬಾನಿಂದ ಕಿರ್ದಿ ಪುಸ್ತಕ ತರಿಸಿಕೊಂಡ. ಈ ಕಿರ್ದಿ ಪುಸ್ತಕ ಮುಳುಗಿಸಿ ಅವನೇನೂ ಸನ್ಯಾಸ ಸ್ವೀಕರಿಸಲಿಲ್ಲ. ಆ ಕಿರ್ದಿ ಪುಸ್ತಕ ಮುಳುಗಿಸಿದ ಬಳಿಕ ಅವನು ಮನೆಗೆ ಮರಳಿದ, ಸಂಸಾರಕ್ಕೆ ಮರಳಿದ ಮತ್ತು ಕೊನೆಯವರೆಗೂ ಸಂಸಾರ ನಡೆಸಿದ.ಕುಟುಂಬದ ಸಂಸಾರದ ಜತೆಗೆ ಸಮಾಜದ ವಿಶಿಷ್ಟ ಸಂಸಾರವನ್ನೂ ಕೈಕೊಂಡ.

ಜೀವಿತಕಾರ್ಯದ ಆರಂಭ ಬಿಂದು

ಬಾಹ್ಯನೋಟಕ್ಕೆ ಈ ಸಾಲದ ಕಿರ್ದಿ ಪುಸ್ತಕವನ್ನು ಮುಳುಗಿಸಿದ ಘಟನೆಯೂ ಯಾರಿಗೇ ಆದರೂ ಅಸಾಧಾರಣವೆನ್ನಿಸುತ್ತದೆ. ಸಂಪನ್ನ ಪರಿಸ್ಥಿತಿಯ ಪರಿವಾರದಲ್ಲಿರುವ ವ್ಯಕ್ತಿಯು ಈ ಬಗೆಯ ನಿರ್ಣಯವನ್ನು ಅಪರೂಪಕ್ಕೆ ತೆಗೆದುಕೊಳ್ಳುತ್ತಾನೆ. ಸಂಸಾರಿಕ ಹೊಣೆಯನ್ನು ಹೊತ್ತನಂತರ ತುಕಾರಾಮನು ಕೈಕೊಂಡ ಮಹತ್ವದ ನಿರ್ಣಯವೆಂದು ಈ ಘಟನೆಯನ್ನು ಪರಿಗಣಿಸಬಹುದಾಗಿದೆ. ಒಂದರ್ಥದಲ್ಲಿ ಈ ನಿರ್ಣಯವು ತುಕಾರಾಮನ ಜೀವನದ ಆರಂಭ ಬಿಂದುವೆನ್ನಲಡ್ಡಿಯಿಲ್ಲ. ಅವನು ಮುಂದಿನ ಇಪ್ಪತ್ತು ವರುಷಗಳಲ್ಲಿ ಮಂಡಿಸಿದ ಜೀವನಮೌಲ್ಯದ ಸಂಪೂರ್ಣ ಸಾರವು ಈ ಘಟನೆಯಲ್ಲಿದೆ. ಈ ಕೃತಿಯು ಒಂದು ಶ್ರೇಷ್ಠ ಬೀಜವಾಗಿದ್ದು, ಅದುವೇ ಮುಂದೆ ತುಕಾರಾಮನ ಜೀವನ ಕಾರ್ಯದ ರೂಪದಲ್ಲಿ ಅಂಕುರಿಸಿತು, ಅರಳಿತು, ಹೂವು ಬಿಟ್ಟಿತು, ಪರಿಮಳ ಹರಡಿತು. ನಾವು ಅವನ ಈ ಕಾರ್ಯದಲ್ಲಿ ನಿರ್ಮಲ ಜೀವನದ ಪವಿತ್ರ ಪ್ರತಿಬಿಂಬವನ್ನು ಕಾಣುತ್ತೇವೆ. ಈ ಕಾರ್ಯವು ಅವನ ಜೀವನದ ಕೇಂದ್ರಬಿಂದುವಾಗಿದ್ದು, ಅದು ಸುತ್ತಲಿನ ಪರಿಘದಲ್ಲಿ ವಿಸ್ತರಿಸುವಷ್ಟು ಅಮೂಲ್ಯವಾಗಿತ್ತು.

ಘಟನೆಯಲ್ಲಿ ತುಕಾರಾಮನತುಕಾರಾಮತ್ವ

ಈ ಘಟನೆಯು ತುಕಾರಾಮನ ಜೀವನದಲ್ಲಿ ನಡೆಯದೇ ಹೋಗಿದ್ದರೆ, ಇಂದು ನಮ್ಮೆದುರಿಗಿದ್ದ ತುಕಾರಾಮನು ಪ್ರಾಯಶಃ ನಮಗೆ ಸಿಗುತ್ತಲೇ ಇರುತ್ತಿರಲಿಲ್ಲ. ತುಕಾರಾಮನ ‘ತುಕಾರಾಮತ್ವ’ ಈ ಘಟನೆಯಿಂದಾಗಿ ಜನಿಸಿದ್ದರಿಂದ, ಈ ಘಟನೆಯನ್ನು ಕೈಬಿಟ್ಟಿದ್ದರೆ ತುಕಾರಾಮನ ಚರಿತ್ರೆಯು ನಮ್ಮ ಕೈಗೆ ಸಿಗುತ್ತಿರಲಿಲ್ಲ. ಯಾರು ಈ ಘಟನೆಯನ್ನು ಅರಿಯುವದಿಲ್ಲವೋ, ಅಂಥವರಿಗೆ ತುಕಾರಾಮನ ಚರಿತ್ರೆಯಲ್ಲಿ ಪ್ರವೇಶ ಮಾಡುವ ಅಧಿಕಾರವಿರುವುದಿಲ್ಲ. ಈ ಘಟನೆಯು ತುಕಾರಾಮನ ಚರಿತ್ರೆಯಲ್ಲಿಯ ಚಮತ್ಕಾರವಿರದ ಚಮತ್ಕಾರವಾಗಿದೆ. ಸೃಷ್ಟಿಯ ಕಾರಣ ಕಾರ್ಯನಿಯಮವನ್ನು ಮುರಿದ ವರ್ಣನೆಯು ಯಾವುದರಲ್ಲಿ ಬರುವುದೋ, ಅಂಥ ಚಮತ್ಕಾರವು ಹುಸಿಯಾಗಿರುತ್ತದೆ. ಕೃತ್ರಿಮವಾಗಿರುತ್ತದೆ, ವಂಚಿಸುವಂತಹದು ಆಗಿರುತ್ತದೆ, ಅವಾಸ್ತವವಾಗಿರುತ್ತದೆ. ಅದರ ಬದಲು, ಮನುಷ್ಯನ ಅಂತರಂಗದೊಳಗಣ ಮಾನವೀಯತೆಯ ಉದಾತ್ತ ಭಾವನೆಯನ್ನು ಅರಳಿಸಿ, ಅದನ್ನು ಮಾನವ್ಯದ ಉತ್ತುಂಗ ಶಿಖರಕ್ಕೊಯ್ಯುವ ಮತ್ತು ಯುಗ ಯುಗಗಳಲ್ಲಿ ಎಂದೋ ಒಮ್ಮೆ ಜರುಗುವ ಈ ಬಗೆಯ ಚಮತ್ಕಾರ ಮಾತ್ರ ನಮ್ಮ ಆದರವನ್ನು ಗಳಿಸುವ ವಿಷಯವಾಗುತ್ತದೆ. ತುಕಾರಾಮನ ಈ ಕೃತಿಯು ಮಹಾಕಾವ್ಯಕ್ಕೆ ಜನ್ಮ ನೀಡುವಂತಹದು. ಒಂದು ಮಹಾನ್‌ ತತ್ವಜ್ಞಾನವನ್ನು ಪ್ರಸವಿಸುವಂತಹದು. ಒಂದು ಶ್ರೇಷ್ಠ ಜೀವನ ದರ್ಶನವನ್ನು ಬೆಳಗಿಸುವಂತಹದು. ಮಾನವನ ಚರಿತ್ರೆಯಲ್ಲಿ ಈ ಬಗೆಯ ತೇಜಸ್ವಿ ಆಶಯ ಹೊಂದಿರುವ ಘಟನೆಯು ವಿರಳವೆನ್ನಬೇಕು, ತೀರಾ ವಿರಳವೆನ್ನಬೇಕಾಗುತ್ತದೆ. ಆದ್ದರಿಂದಲೇ ತುಕಾರಾಮನು ಸಾಲದ ಕಿರ್ದಿ ಪುಸ್ತಕವನ್ನೂ ಹೊಳೆಯಲ್ಲಿ ಮುಳುಗಿಸಿದ ಘಟನೆಯನ್ನೂ, ಪರ್ಯಾಯವಾಗಿ ತುಕಾರಾಮನ ಜೀವನ ಕಾರ್ಯವನ್ನು ಅರ್ಥ ಮಾಡಿಕೊಳ್ಳಲು ನಮ್ಮ ಸಂಪೂರ್ಣ ಜ್ಞಾನೇಂದ್ರಿಯವನ್ನೇ ಏಕಾಗ್ರತೆಯಿಂದ ಈ ಘಟನೆಯ ಮೇಲೆ ಕೇಂದ್ರಿಕೃತಗೊಳಿಸಬೇಕಾಗುತ್ತದೆ.

ಘಟನೆ ಉಪೇಕ್ಷಿಸಿದ್ದು ಆಘಾತಕಾರಿ

ಇಂದ್ರಾಯಣಿಯಲ್ಲಿ ಸಾಲದ ಕಿರ್ದಿ ಪುಸ್ತಕವನ್ನು ಮುಳುಗಿಸಿದ್ದು ತುಕಾರಾಮನ ಬದುಕಿನಲ್ಲಿಯ ಒಂದು ವಿಲಕ್ಷಣ ಮತ್ತು ಅಸಾಧಾರಣವಾದ ಘಟನೆಯಾಗಿದೆ. ಆದರೆ ಈ ಘಟನೆಯನ್ನು ಮರಾಠಿ ಜಗತ್ತು ಉಪೇಕ್ಷಿಸಿದ್ದು ಸಹ ಅಷ್ಟೇ ವಿಲಕ್ಷಣವಾದುದು, ಅಸಾಧಾರಣ ಮತ್ತು ಆಘಾತಕಾರಿಯಾದುದು. ತುಕಾರಾಮನ ಜೀವನದಲ್ಲಿಯ ಹುಸಿ ದಿಟ್ಟ, ಯಾವುದೇ ಚಮತ್ಕಾರವನ್ನು ಕಂಠಪಾಠ ಮಾಡುವ ಮರಾಠಿ ವಿಶ್ವವು ಈ ಅಸಲೀ ಮತ್ತು ಅಮೂಲ್ಯ ಕೃತಿಯನ್ನು ಅಷ್ಟೊಂದು ಗಮನಿಸದೇ ಇರುವುದು ಕಂಡಾಗ ಮಾತ್ರ, ಮನಸ್ಸು ಅಕ್ಷರಶಃ ಕಸಿವಿಸಿಗೊಳ್ಳುವುದೂ ಅಲ್ಲದೆ ಚಡಪಡಿಸುತ್ತದೆ.

ತುಕಾರಾಮನು ಸಾಲದ ಕಿರ್ದಿ ಪುಸ್ತಕವನ್ನು ಮುಳುಗಿಸಿದ್ದು, ಹಲವರಿಗೂ ಗೊತ್ತಿಲ್ಲ. ಅವನ ಚರಿತ್ರೆಯ ಕಿಂಚಿತ್ ಪರಿಚಯವಿರುವ ಜನರಲ್ಲಿ ಎಷ್ಟು ಜನರಿಗೆ ಈ ಘಟನೆಯ ಪರಿಚಯವಿದೆ ಎಂಬ ಸರ್ವೇಕ್ಷಣೆ ನಡೆಸಿದರೆ, ನಮ್ಮ ಪಾಲಿಗೆ ನಿರಾಶೆ ಬರುವುದಂತೂ ಖಂಡಿತ ಎನ್ನುವುದು ಸ್ವಂತ ಅನುಭವಕ್ಕೆ ಬಂದ ಮಾತು.

ಶಾಲೆಯ ಪಠ್ಯದಲ್ಲಿ ತುಕಾರಾಮನ ಕೆಲವು ಅಭಂಗಗಳನ್ನು ಮತ್ತೆ-ಮತ್ತೆ ಸೇರಿಸಿಕೊಳ್ಳಲಾಗುತ್ತದೆ. ಈ ನಿಮಿತ್ತದಲ್ಲಿ ಅವನ ಚರಿತ್ರೆಯನ್ನು ಹೇಳಲಾಗುತ್ತದೆ. ಆದರೆ ಆ ಕಾಲಕ್ಕೆ ಪ್ರಾಯಶಃ ತುಕಾರಾಮನು ಸಾಲದ ಕಿರ್ದಿ ಪುಸ್ತಕವನ್ನು ಇಂದ್ರಾಯಣಿಯಲ್ಲಿ ಮುಳುಗಿಸಿದ ಕಥೆಯನ್ನು ಹೇಳುವುದಿಲ್ಲ. ಈ ನಿಟ್ಟಿನಲ್ಲಿ ಕಳೆದ ನೂರು ವರುಷಗಳ ಶಾಲಾಪಠ್ಯವನ್ನು ಸಮೀಕ್ಷೆ ಮಾಡಿದರೆ ನಮಗದು ಸಹಜವಾಗಿ ಗೊತ್ತಾಗುತ್ತದೆ. ಯಾವ ಸಮಾಜವು ತಮ್ಮ ಮಕ್ಕಳ ಪಠ್ಯಕ್ರಮದಿಂದ ತುಕಾರಾಮನಂತಹ ಮಹಾಪುರುಷನ ಚರಿತ್ರೆಯಲ್ಲಿಯ ಅತ್ಯಂತ ಕ್ರಾಂತಿಕಾರಕವಾದ ಈ ಬಗೆಯ ಘಟನೆಯನ್ನು ಕೈ ಬಿಡುತ್ತದೋ, ಆ ಸಮಾಜವು ತಮ್ಮ ಭಾವೀ ತಲೆಮಾರಿಗೆ ಯಾವ ಸಂದೇಶವನ್ನು ನೀಡುವುದು ಸಾಧ್ಯ ಹೇಳಿ ? ಆಯುಷ್ಯದುದ್ದಕ್ಕೂ ಯಾವುದೇ ಒಂದು ಘಟನೆಯು ಮನದ ಮೇಲೆ ಖಚಿತವಾಗಿ ಮೂಡುವ ದೃಷ್ಟಿಯಿಂದ, ಆ ಘಟನೆಯ ಬಾಲ್ಯದಲ್ಲೇ ಪಠ್ಯಕ್ರಮದಲ್ಲಿ ಓದಲು ದೊರಕುವುದು, ಒಂದು ಮಹತ್ವದ ಹಾದಿ. ತುಕಾರಾಮನ ಆಯುಷ್ಯದ ಅತ್ಯಂತ ಮಹತ್ವದ ಘಟನೆಯ ಈ ಹಾದಿಯು ಸಂಪೂರ್ಣ ಮುಚ್ಚಿದ್ದರಿಂದಾಗಿ ಈ ಘಟನೆಯು ಹಲವು ಜನ ಸುಶಿಕ್ಷಿತರಿಗೂ ಗೊತ್ತಿಲ್ಲ. ಕೊನೆಪಕ್ಷ ಈಗಲಾದರೂ ಈ ಘಟನೆಯು ಪಠ್ಯಕ್ರಮದಲ್ಲಿ ಬರುವುದು ಒಳಿತು.

ಈ ಘಟನೆಯನ್ನು ಕಥಾ-ಕೀರ್ತನೆಯಲ್ಲೂ ಸಾಮಾನ್ಯವಾಗಿ ಹೇಳುವುದಿಲ್ಲ. ಅವರ ಜೀವನದಲ್ಲಿ ಎಂದಿಗೂ ನಡೆಯದ ಚಮತ್ಕಾರವನ್ನು ಮತ್ತೆ-ಮತ್ತೆ ಸ್ವಾರಸ್ಯಕರವಾಗಿ ಹೇಳಲಾಗುತ್ತದೆ. ಆದರೆ ಈ ವಾಸ್ತವಿಕ ಘಟನೆಯು ಮಾತ್ರ ಉಪೇಕ್ಷಿತಗೊಂಡಿದೆ. ಹಲವು ಕೀರ್ತನಕಾರರಿಗೂ ಈ ಘಟನೆ ಗೊತ್ತಿಲ್ಲ ಎಂದೇ ನನ್ನ ಭಾವನೆ. ತುಕಾರಾಮನ ಕುರಿತು ಲೇಖನ, ಪುಸ್ತಕ ಬರೆಯುವ ಹಲವು ಲೇಖಕರಿಗೂ ಅದು ಗೊತ್ತಿಲ್ಲ. ತುಕಾರಾಮನ ವಿಶೇಷ ಲೇಖಕರಾಗಿ ಆಧ್ಯಯನ ಕೈಕೊಳ್ಳುವ ಹಲವು ವಿದ್ಯಾರ್ಥಿ ಶಿಕ್ಷಕ ಮತ್ತು ಪ್ರಾಧ್ಯಾಪಕರಿಗೂ ಈ ಘಟನೆಯು ಗೊತ್ತಿಲ್ಲ ಎನ್ನುವುದು ನನ್ನ ಅನುಭವ. ಈ ಬಾಬತ್ತಿನಲ್ಲಿ ಇವರೆಲ್ಲ ದೋಷಿಗಳೆಂದು ನನ್ನ ಮಾತಿನ ಅರ್ಥವಲ್ಲ. ಈ ಘಟನೆಯು ಪಠ್ಯಕ್ರಮ, ಚರಿತ್ರೆ, ಇತರ ವಾಙ್ಮಯ-ಮುಂತಾದ ಮಾಧ್ಯಮದಲ್ಲೇ ಸೇರಿಸದೇ ಇದ್ದಾಗ, ಅದು ಪಠ್ಯಕ್ರಮದವರೆಗೂ ಹೋಗಿ ತಲುಪುವುದು ಖಂಡಿತಕ್ಕೂ ಸಾಧ್ಯವಿಲ್ಲ ಎನ್ನುವದು ದಿಟ. ಈ ಘಟನೆಯು ಬಹುಸಂಖ್ಯಾತ ಜನರ ದೃಷ್ಟಿಯಲ್ಲಿ ಅಜ್ಞಾತವಾಗಿರುವುದು ತೀರಾ ಸಹಜವಾದುದು. ತಾತ್ಪರ್ಯ ಈವರೆಗೆ ಈ ಘಟನೆಯು ಯಾವುದೇ ಮಾರ್ಗದಿಂದ ತಲುಪಲೇ ಇಲ್ಲ. ಅವರ ಅಜ್ಞಾನದ ಬಗೆಗೆ ಅವರ ಮೇಲೆ ದೋಷ ಹೊರಿಸುವುದು ಸರಿಯಲ್ಲ.

ಈ ಘಟನೆಯು ಗೊತ್ತಿದ್ದೂ, ವಾಚಕರಿಗೆ ಸಹೃದಯರಿಗೆ ಹೇಳದ ಮತ್ತು ಹೇಳಿದರೂ ತೀರಾ ಕ್ಷುಲ್ಲಕ ಮತ್ತು ಕ್ಷುದ್ರ ಸಂಗತಿಯಾಗಿರುವಂತೆ, ಅದನ್ನು ಎಲ್ಲೋ ಮೂಲೆಯಲ್ಲಿ ಉಲ್ಲೇಖ ಮಾಡುವ ಜನ ಮಾತ್ರ ನಿರ್ದೋಷಿಗಲಾಗುವದು ಸಾಧ್ಯವಿಲ್ಲ ಎಂದೇ ನನ್ನ ಅನಿಸಿಕೆ. ಪು.ಮಂ ಲಾಡರಂತಹ ಕೆಲ ಅಪವಾದವನ್ನು ಹೊರತುಪಡಿಸಿದರೆ ತುಕಾರಾಮನ ಉಳಿದ ಚರಿತ್ರೆಕಾರರು ಈ ಗುಂಪಿನಲ್ಲಿ ಬುರತ್ತಾರೆಂದೇ ನನ್ನ ಅನಿಸಿಕೆ. ಈ ಘಟನೆಯನ್ನು ಉಲ್ಲೇಖ ಮಾಡುವ ಇನ್ನಿತರರು, ಈ ಘಟನೆಯು ಜನರ ಮನದಲ್ಲಿ ಬಿಂಬಿಸುವಂತೆ, ಅಂತಃಕರಣದೊಳಗೆ ಮೂಡುವಂತೆ ಅಥವಾ ವಿಚಾರದ ಆಳಕ್ಕೆ ಇಳಿಯುವಂತೆ ಪರಿಣಾಮಕಾರಿಯಾದ ರೀತಿಯಲ್ಲಿ ನಿವೇದಿಸುವುದಿಲ್ಲ. ಈ ಘಟನೆಯನ್ನು ಸವಿಸ್ತಾರವಾಗಿ ಹೇಳುವುದಂತೂ ಇಲ್ಲವೇ ಇಲ್ಲ. ಅಷ್ಟೇ ಅಲ್ಲ, ಅದರ ಬಗೆಗೆ ಭಾಷ್ಯ ಮಾಡುವ, ಅನ್ವಯಾರ್ಥ ಹೇಳುವ, ತುಕಾರಾಮನ ಬದುಕಿನಲ್ಲಿ ಅದರ ಮಹತ್ವ ಸ್ಪಷ್ಟಪಡಿಸುವ ವಿವೇಚನೆಯನ್ನು ಸಹ ಮಾಡುವುದಿಲ್ಲ. ಕೆಲವರು ಪ್ರಯತ್ನಿಸಿದರೂ, ತುಕಾರಾಮನ ವ್ಯವಹಾರ ಶೂನ್ಯತೆ, ವೈರಾಗ್ಯಶೀಲತೆಯ ಜತೆಗೆ ಸಂಬಂಧ ಜೋಡಿಸಿ, ಅದು ಜನರ ಮನದಲ್ಲಿ ವಿಪರ್ಯಾಸಗೊಳ್ಳುವಂತೆ ನೋಡಿಕೊಳ್ಳುತ್ತಾರೆ. ಈ ವಿಚಾರವನ್ನು ಕೂಲಂಕಶವಾಗಿ ಗಮನಿಸಿದಾಗ ವಿವಧ ಜನರು ಮೂರು ಬಗೆಯ ಮಾರ್ಗವನ್ನು ಅವಲಂಬಿಸಿದ್ದು ಕಂಡು ಬರುತ್ತದೆ. ಈ ಘಟನೆಯನ್ನು ಉಲ್ಲೇಖಿಸದೇ ಇರುವುದು, ಉಲ್ಲೇಖ ಮಾಡಿದರೂ ಸಹ ಪ್ರಭಾವ ಬೀರದಂತಹ ಪದ್ಧತಿಯಿಂದ ಹೇಳುವುದು, ಒಂದು ವೇಳೆ ಭಾಷ್ಯ ಮಾಡಿದರೂ ಸಹ ವಿಪರ್ಯಾಸಗೊಳ್ಳುವಂತಹ ರೀತಿಯಲ್ಲಿ ಸ್ವರೂಪ ನೀಡುವುದು. ಇವೇ ಆ ಮೂರು ಮಾರ್ಗ. ಅದೇನೆ ಇದ್ದರೂ, ತುಕಾರಾಮನು ಇಂದ್ರಾಯಣಿಯಲ್ಲಿ ಸಾಲದ ಕಿರ್ದಿ ಪುಸ್ತಕವನ್ನು ಮುಳುಗಿಸಿದ ಅತ್ಯಂತ ಕ್ರಾಂತಿಕಾರಕ ಘಟನೆಯನ್ನು ಮಹಾರಾಷ್ಟ್ರವು ಯೋಗ್ಯವಾದ ರೀತಿಯಲ್ಲಿ ;ಗಮನಿಸಲಿಲ್ಲ ಎನ್ನುವುದು ಸೂರ್ಯ ಪ್ರಕಾಶದಷ್ಟು ಸ್ಪಷ್ಟ, ತುಕಾರಾಮನ ಪ್ರತಿಮೆಯು ನಮ್ಮವರಿಗೆ ಯಾಥಾರ್ಥ ಸ್ವರೂಪದಲ್ಲಿ ಬಂದು ತಲುಪಲಿಲ್ಲ ಎಂಬ ನನ್ನ ಮಾತು, ಈ ಒಂದು ಉದಾಹರಣೆಯ ಮೂಲಕ ಖಚಿತವಾದ ರೀತಿಯಲ್ಲಿ ಸ್ಪಷ್ಟಗೊಳ್ಳಬಹುದೆಂದು ನನ್ನ ಅನಿಸಿಕೆ.

ಸಾಕ್ಷಾತ್ಕಾರದ ಆಶಯ ಸಾಮಾಜಿಕವಾದದ್ದು

ಭಾಂಬನಾಥನ ಬೆಟ್ಟದಲ್ಲಿ ಏಳು ದಿನಗಳ ಕಾಲ ಚಿಂತನೆಯಲ್ಲಿ ಕಳೆದ ಬಳಿಕ ತುಕಾರಾಮನಿಗೆ ಜೀವನದ ಕುರಿತು ವಿಶೇಷ ಸಾಕ್ಷಾತ್ಕಾರದ ಪ್ರತ್ಯಕ್ಷ ಪರಿಣಾಮವಾಗಿ ಅವನು ಮತ್ತೆ ಮನೆಯಲ್ಲಿ ಕಾಲಿರಿಸಿರುವ ಮೊದಲು ಸಾಲದ ಕಿರ್ದಿ ಪುಸ್ತಕವನ್ನು ಇಂದ್ರಾಯಣಿಯಲ್ಲಿ ಮುಳುಗಿಸಿದನು. ಸಾಕ್ಷಾತ್ಕಾರವಾಯಿತೆಂದು ಅವನು ಕಾವೀ ಬಟ್ಟೆ ಧರಿಸಿ ಸನ್ಯಾಸ ಸ್ವೀಕರಿಸಲಿಲ್ಲ. ಅಥವಾ ಇನ್ನಾವುದೇ ಬಗೆಯ ಧಾರ್ಮಿಕ, ಆಧ್ಯಾತ್ಮಿಕವಾದ ಹೆಜ್ಜೆಯನ್ನು ಎತ್ತಲಿಲ್ಲ. ಆದರೆ ಸಾಕ್ಷಾತ್ಕಾರದ ನಂತರ ಕೈಗೊಂಡ ಮೊದಲ ಕಾರ್ಯವೆಂದರೆ ಈ ಬಗೆಯ ಸಾಮಾಜಿಕ ಆಶಯದ್ದು. ಇದರರ್ಥವಿಷ್ಟೇ, ಅವನಿಗಾದ ಸಾಕ್ಷಾತ್ಕಾರವು ಗೂಢ, ಗಹನವಾದ ಅಧ್ಯಾತ್ಮಿಕ ಸ್ವರೂಪದ್ದಲ್ಲ. ಅದು ಸಮಾಜಸ್ಥಿತಿಯ ಅಮಾಯಕ ಮತ್ತು ಸಹೃದಯ ನಿರೀಕ್ಷಣೆಯಿಂದ ನಿರ್ಮಾಣಗೊಂಡ ಅಸಲೀ ಜೀವನದರ್ಶನದ ಸ್ವರೂಪದ್ದಾಗಿತ್ತು. ಭಾಂಬನಾಥ ಬೆಟ್ಟದಲ್ಲಿ ನಡೆಸಿದ ಚಿಂತನೆಯು ಆಧ್ಯಾತ್ಮ ಸ್ವರೂಪದ್ದಲ್ಲ, ಅದು ಸಮಾಜದಲ್ಲಿಯ ಅನ್ಯಾಯವನ್ನು ಹೋಗಲಾಡಿಸುವ, ಸಮಾಜದಲ್ಲಿ ನಿಜವಾದ ನೀತಿಯನ್ನು ನಿರ್ಮಾಣ ಮಾಡುವಂತಹದಾಗಿತ್ತು. ಈ ಸಾಕ್ಷಾತ್ಕಾರದ ನಂತರ ಅವನು ದೇವರ ಭಕ್ತಿಯ ಕಡೆಗೆ ಹೊರಳಿದನು. ಅಂದರೆ ಅವನು ದೇವರ ಕಡೆಗೆ ಹೊರಟ ಮಾರ್ಗ ಸಹ ಅಧ್ಯಾತ್ಮಿಕ ಸ್ವರೂಪದ್ದಾಗಿರಲಿಲ್ಲ. ಅದು ಸಾಮಾಜಿಕ ಆಶಯದ್ದಾಗಿತ್ತು ಎಂದೇ ಅರ್ಥ. ಅವನ ಸಾಕ್ಷಾತ್ಕಾರದ ಆಶಯವನ್ನು ಅರ್ಥ ಮಾಡಿಕೊಳ್ಳುವ ಶಕ್ತಿಯೂ ಹಲವರಲ್ಲಿರಲಿಲ್ಲ. ಮತ್ತೆ ಕೆಲವರಲ್ಲಿ ಆ ಶಕ್ತಿಯಿದ್ದರೂ ಅದನ್ನು ಜನರವರೆಗೆ ಸರಿಯಾಗಿ ತಲುಪಿಸುವ ಇಚ್ಚೆಯೂ ಅವರಿಗಿರಲಿಲ್ಲ. ಅಷ್ಟೇಅಲ್ಲ, ಅದು ಸರಿಯಾಗಿ ತಲುಪಬಾರದೆನ್ನುವ ಇಚ್ಛೆಯೂ ಅವರದ್ದಾಗಿತ್ತು.

ಮಹೀಪತಿ ಉಪಕಾರ ಮಾಡಿದ್ದಾನೆ, ಆದರೂ

ಆಧ್ಯಾತ್ಮಿಕವೆನ್ನಬಹುದಾದ ಕೃತಿಯನ್ನಷ್ಟೇ ಶ್ರೇಷ್ಟವೆನ್ನುವುದು, ಅದನ್ನೇ ವಂದನೀಯ ಪೂಜನೀಯವೆಂದು ಭಾವಿಸುವುದು ಮತ್ತು ಈ ಬಗೆಯ ಕೃತಿಯನ್ನು ಮಾಡುವವರ ಬಳಿಯಲ್ಲಷ್ಟೇ ಸಂತತ್ವವಿರುವದಾಗಿ ಭಾವಿಸುವದು ಈ ಬಗೆಯಲ್ಲಿ ಉಳಿದ ಅಸಂಖ್ಯ ಜನರಂತೆ ಮಹೀಪತಿಯಲ್ಲಿಯೂ ತಪ್ಪು ಗ್ರಹಿಕೆಯಿರುವುದರಿಂದ ತುಕಾರಾಮನ ಈ ಕಾರ್ಯದ ಅರ್ಥ ಗ್ರಹಿಸುವಾಗ ಅವನು ತುಂಬ ಗೊಂದಲವನ್ನುಂಟು ಮಾಡಿದ್ದಾನೆ. ಆದರೂ ತುಕಾರಾಮನು ಸಾಲದ ಕಿರ್ದಿ ಪುಸ್ತಕವನ್ನು ಇಂದ್ರಾಯಣಿಯಲ್ಲಿ ಮುಳುಗಿಸಿದ ಘಟನೆಯನ್ನು ದಾಖಲಿಸಿ ನಮಗೆ ತುಂಬಾ ಉಪಕಾರ ಮಾಡಿದ್ದಾನೆ. ಆದರೆ ಈ ಘಟನೆಯ ನಿಜವಾದ ಅರ್ಥ ಮಾತ್ರ ಅವನಿಗೆ ತಿಳಿಯಲಿಲ್ಲ. ಸಾಲದ ಕಿರ್ದಿ ಪುಸ್ತಕವನ್ನು ಮುಳುಗಿಸಿದ್ದು ಸನ್ಯಾಸದ್ದೇ ಒಂದು ಪ್ರಕಾರವಾಗಿದೆ ಎಂದವನ ಗ್ರಹಿಕೆಯಾಯಿತು. ಇದು ಸಾಮಾಜಿಕ ನ್ಯಾಯದ, ಉಚ್ಛ ನೈತಿಕತೆಯ ಅರಿವಿನಿಂದ ಇಟ್ಟ ಹೆಜ್ಜೆ ಎಂಬುದು ಅವನಿಗೆ ಗ್ರಹಿಸುವದಾಗಲಿಲ್ಲ. ನನ್ನ ಈ ಹೇಳಿಕೆಗೆ ಒಂದು ಮಹತ್ವದ ಖಚಿತವಾದ ಆಧಾರವಿದೆ, ಅದೆಂದರೆ ಈ ಪ್ರಸಂಗದಲ್ಲಿ ಮಹೀಪತಿಯು ತುಕಾರಾಮನ ಬಾಯಿಂದ ಹೊರಡಿಸಿದ ಉದ್ಗಾರ, ಮಹೀಪತಿಯ ಪ್ರಕಾರ ಸಾಲದ ಪುಸ್ತಕವನ್ನು ನೀರಿನಲ್ಲಿ ಮುಳುಗಿಸಿದಾಗ ತುಕಾರಾಮನು ಕಾನ್ಹೋಬಾಗೆ ಹೇಳಿದನು. “ಇವತ್ತಿನಿಂದ ಚಳಿಯನ್ನು ಹೋಗಲಾಡಿಸಲು ನಾವು ಕಂಥಾ ಎಂದರೆ ಚಿಂದಿಯ ದುಪ್ಪಟಿಯನ್ನು ಬಳಸೋಣ. ಭಿಕ್ಷೆಯಿಂದ ಸಂಗ್ರಹಿಸಿದ ಅನ್ನವನ್ನು ಸೇವಿಸೋಣ. ಈ ರೀತಿಯಲ್ಲಿ ನಮ್ಮ ಜೀವನ ಕ್ರಮವು ನಿರ್ದಿಷ್ಟವಾಗಿ ನಡೆಯುತ್ತದೆ. ನೀವು ವ್ಯಾಪಾರ ಮಾಡಿ, ಸಂಸಾರ ಚಕ್ರವನ್ನು ಮುನ್ನಡೆಸಬೇಕಾಗುತ್ತದೆ. ಭಿಕ್ಷೆ ಮತ್ತು ವ್ಯವಸಾಯವನ್ನು ಜೋಡಿಸಬಾರದು. ಅಂದರೆ ಅವೆರಡೂ ಸ್ವತಂತ್ರವಾಗಿವೆ. ಮಿಶ್ರಣ ಮಾಡಬಾರದು ಎಂದು ಋಷಿ ಮುನಿಗಳೇ ಹೇಳಿದ್ದಾರೆ” ತಾತ್ಪರ್ಯ : ನಾವು ಭಿಕ್ಷೆಯ ಮಾರ್ಗ ಸ್ವೀಕರಿಸುತ್ತೇವೆ. ನೀವು ವ್ಯವಸಾಯದ ಮಾರ್ಗ ಹಿಡಿಯಿರಿ ಎಂದವನು ಕಾನ್ಹೋಬಾಗೆ ಹೇಳಿದನು ಎಂದು ಮಹೀಪತಿಯು ಹೇಳುತ್ತಾನೆ. ತುಕಾರಾಮನು ಸಾಲದ ಪುಸ್ತಕ ಮುಳುಗಿಸಿ, ಭಿಕ್ಷೆಯನ್ನು ಬೇಡಲು ಆರಂಭಿಸಿದನು, ಸಾಕ್ಷಾತ್ಕಾರದ ಬಳಿಕ ಅವನು ತನ್ನ ಜೀವನ ಕ್ರಮವನ್ನು ಭಿಕ್ಷೆಯಿಂದಲೇ ಆರಂಭಿಸಿದನು ಎನ್ನುವದು ಮಹೀಪತಿಯ ಹೇಳಿಕೆಯ ಅರ್ಥವಾಗುತ್ತದೆ.

ಭಿಕ್ಷೆಯನ್ನು ಧಿಕ್ಕರಿಸಿದನು

ಮಹೀಪತಿಯ ಹೇಳಿಕೆಗೆ ಕಡ್ಡಿಯಷ್ಟೂ ಆಧಾರವಿಲ್ಲ ಎನ್ನುವುದು ಕೆಲವು ವಿಷಯಗಳನ್ನು ಗಮನಿಸಿದರೂ ಸ್ಪಷ್ಟವಾಗುತ್ತದೆ. ಭಿಕ್ಷೆಯನ್ನು ಅವಲಂಬಿಸಿ ಬದುಕುವ ನಾಚಿಕೆಗೇಡಿನ ಬದುಕು ಸುಡಲಿ, ಎಂದು ನಿಸ್ಸಂದೇಹ ಶಬ್ದಗಳಲ್ಲಿ ಅವನು ಭಿಕ್ಷೆಯನ್ನು ಧಿಕ್ಕರಿಸಿದ್ದಾನೆ. ಮನೆಯಲ್ಲಿ ಹೆಂಡತಿ ಮಕ್ಕಳನ್ನು ಉಪವಾಸವಿರಿಸಿ, ಉಳಿದವರಿಗೆ ಉಪದೇಶ ಮಾಡುವವರ ಮೇಲೂ ನಿಷ್ಠುರವಾಗಿ ಎರಗಿದ್ದಾನೆ. ಸಂಸಾರ ತೊರೆಯಬೇಕಿಲ್ಲ ಎಂದೂ ಸತತ ಹೇಳಿದ್ದಾನೆ.

ಈ ಸಂದರ್ಭದಲ್ಲಿ ಮತ್ತೂ ಒಂದು ವಿಷಯವನ್ನು ಖಂಡಿತ ಗಮನಿಸಬೇಕು. ತುಕಾರಾಮನು ಸಾಲದ ಪುಸ್ತಕ ಮುಳುಗಿಸಿದ, ಆದರೆ ಸನ್ಯಾಸ ಸ್ವೀಕರಿಸಲಿಲ್ಲ. ಕೊನೆಯವರೆಗೂ ಅವನು ಗೃಹಸ್ಥಾಶ್ರಮದಲ್ಲೇ ಇದ್ದನು. ಅವನು ಕೇವಲ ಗೃಹಸ್ಥಾಶ್ರಮವನ್ನಷ್ಟೆ ಸ್ವೀಕರಿಸಲಿಲ್ಲ. ಅವನಿಗೂ, ಜಿಜಾಯಿಗೂ ಹುಟ್ಟಿದ ಆರೂ ಮಕ್ಕಳು ಪ್ರಾಯಶಃ ಸಾಲದ ಕಿರ್ದಿ ಪುಸ್ತಕವನ್ನು ಮುಳುಗಿಸಿದ ಘಟನೆಯ ನಂತರವೇ ಹುಟ್ಟಿರಬೇಕೆಂದೆನ್ನಿಸುತ್ತದೆ. ಈ ಘಟನೆಗಿಂತ ಮೊದಲು ಬಹಳವೆಂದರೆ ಒಂದೆರಡು ಮಕ್ಕಳು ಮಾತ್ರ ಹುಟ್ಟಿರುವ ಸಾಧ್ಯತೆಯಿದೆ. ಅಂದರೆ ಈ ಘಟನೆಯ ನಂತರವು ಸಹ ಅವನು ಗೃಹಸ್ಥಾಶ್ರಮದಲ್ಲಿ ಪೂರ್ಣ ಆಸಕ್ತಿ ತೋರಿಸಿದಂತಿದೆ. ಅವನು ಗೃಹಸ್ಥಾಶ್ರಮದಲ್ಲಿದ್ದು ಮಕ್ಕಳೂ ಹುಟ್ಟಿವೆ ಎಂದರೆ, ಅವನು ಸನ್ಯಾಸಿಯಾಗಿರಲಿಲ್ಲ ಎಂದೇ ಅರ್ಥ. ಇಂಥ ಸ್ಥಿತಿಯಲ್ಲೂ ಅವನು ಭಿಕ್ಷೆ ಬೇಡುತ್ತಿದ್ದ ಎಂದು ಭಾವಿಸುವುದೇ? ಹಾಗೊಂದು ವೇಳೆ ಭಾವಿಸಿದರೆ ತುಕಾರಾಮನು ಭಿಕಾರಿಯಾಗಿ ಭಿಕ್ಷೆ ಬೇಡಿ ಮಕ್ಕಳ ಹೊಟ್ಟೆ ಹೊರೆಯುತ್ತಿದ್ದ ಎಂದೇ ಒಪ್ಪಬೇಕಾಗುತ್ತದೆ. ಆದರೆ ಪ್ರತ್ಯಕ್ಷದಲ್ಲಿ ಹಾಗೆ ಒಪ್ಪಿಕೊಳ್ಳಲು ಯಾವ ಆಧಾರವೂ ಇಲ್ಲ.

ತುಕಾರಾಮನು ಭಿಕ್ಷೆ ಬೇಡುತ್ತಿದ್ದ ಎಂದೊಪ್ಪಿಕೊಳ್ಳಲು ಮತ್ತೂ ಒಂದು ಸಮಸ್ಯೆ ಅಡ್ಡಿ ಬರುತ್ತದೆ. ಅವನು ಸಾಲದ ಪುಸ್ತಕ ಮುಳುಗಿಸಿದ್ದರೂ ವ್ಯಾಪಾರ ನಿಲ್ಲಿಸಿರಲಿಲ್ಲ. ಅವನ ಹೆಸರಿನಲ್ಲಿ ಉಪಲಬ್ದವಿರುವ ವ್ಯಾಪಾರ ವಿಷಯದ ದಂತಕಥೆಯು ಮೂಲಘಟನೆಯಲ್ಲೇ ವಿಕೃತಿಕರಣಗೊಂಡಿದೆ ಎನ್ನುವುದಂತೂ ಖರೆ. ಆದರೂ ತುಕಾರಾಮನು ಆನಂತರದ ಕಾಲದಲ್ಲಿ ಭಿಕ್ಷೆಯನ್ನು ಬೇಡುತ್ತಿರಲಿಲ್ಲ, ವ್ಯಾಪಾರ ಮಾಡುತ್ತಿದ್ದ ಎನ್ನುವುದು ಮಾತ್ರ ಆ ಕಥೆಗಳಲ್ಲಿ ಸರಿಯಾಗಿ ವ್ಯಕ್ತಗೊಂಡಿದೆ. ತುಕಾರಾಮನು ಭಿಕ್ಷೆಯೇ ಬೇಡುವುದಾಗಿದ್ದರೆ ಅವನು ವ್ಯಾಪಾರವನ್ನೇಕೆ ಮುಂದುವರಿಸುತ್ತಿದ್ದ ? ಈಗ, ಅವನು ವ್ಯಾಪಾರ ನಿಲ್ಲಿಸಿದ ಎಂದು ವಾದಕ್ಕಾಗಿ ಒಪ್ಪಿಕೊಂಡರೂ ಅವನ ಬಳಿಯಲ್ಲಿ ಸಾಕಷ್ಟು ಹೊಲಗದ್ದೆಯಿತ್ತೆನ್ನುವದನ್ನು ಮರೆಯುವಂತಿಲ್ಲ. ಅವನು ಸಾಲದ ಹೊತ್ತಿಗೆಯನ್ನು ಉದಕದಲ್ಲಿ ಮುಳುಗಿಸಿದರೂ ತನ್ನ ಹೊಲಗದ್ದೆಗಳಿಗೇನೂ ಎಳ್ಳು-ನೀರು ಬಿಟ್ಟಿರಲಿಲ್ಲ. ಹದಿನೈದು ಬಿಘಾಕಿಂತಲೂ ಹೆಚ್ಚು ಹೊಲ ಕೊನೆಯವರೆಗೂ ಅವನ ಬಳಿಯಲ್ಲಿತ್ತು. ಅವನ ಸಾವಿನ ನಂತರವೇ ಅದು ಮಂಬಾಜಿ ಮುಂತಾದವರ ಕಡೆಗೆ ಹೋಯಿತು ಎಂದು ವಾ.ಸಿ. ಬೇಂದ್ರೆ ಮುಂತಾದವರು ನೋಂದಾಯಿಸಿದ್ದಾರೆ. ಹೀಗಿರುವಾಗ ಹದಿನೈದು ಬಿಘಾಗಿಂತಲೂ (ಒಂದು ಬಿಘಾ = ೪೦೦ ಚೌ ಕೋಲು) ಅಧಿಕ ಹೊಲವಿರುವ ಒಬ್ಬ ಗೃಹಸ್ಥಾಶ್ರಮದ ಮನುಷ್ಯನು, ಭಿಕ್ಷೆ ಬೇಡಿ ಕುಟುಂಬದ ಉದರ ನಿರ್ವಹಣೆ ಮಾಡುತ್ತಿದ್ದನು ಎಂದು ತಿಳಿಯೋಣವೇ? ಅವನು ಭಿಕ್ಷೆ ಬೇಡುವ ನಿರ್ಧಾರವನ್ನೇ ಮಾಡಿದ್ದಾಗಿದ್ದರೆ, ಹೊಲದ ದಾಖಲೆಗಳನ್ನು ನೀರಿನಲ್ಲೋ, ಅಗ್ನಿಯಲ್ಲೋ ಅಥವಾ ಯಾರದ್ದಾದರೂ ಜೋಳಿಗೆಯಲ್ಲೋ ಚೆಲ್ಲಿ ಬಿಡಬಹುದಾಗಿತ್ತು. ಹೊಲದ ಪಾಶದಿಂದ ಬಿಡುಗಡೆ ಹೊಂದಿ ಆರಾಮಾಗಿ ಭಿಕ್ಷೆ ಬೇಡುತ್ತಿರುತ್ತಿದ್ದನು. ಪ್ರತ್ಯಕ್ಷದಲ್ಲಿ ಮಾತ್ರ ಅವನು ಅಂಥದ್ದೇನೂ ಮಾಡಲಿಲ್ಲ.

ತಾತ್ಪರ್ಯ : ತುಕಾರಾಮನು ಸಾಲದ ಕಿರ್ದಿ ಪುಸ್ತಕವನ್ನು ಮುಳುಗಿಸಿದ ಎಂಬ ಮಹೀಪತಿಯ ಮಾತು ಖರೆಯಿದ್ದರೂ, ಆನಂತರ ಅವನು ಭಿಕ್ಷೆ ಬೇಡುವ ನಿರ್ಣಯ ತೆಗೆದುಕೊಂಡ ಎಂಬ ಮಹೀಪತಿಯ ಮಾತಿನಲ್ಲಿ ತಥ್ಯವಿಲ್ಲ.

ತಪ್ಪು ಕಾರಣ ಮೀಮಾಂಸ

ತುಕಾರಾಮನು ಭಿಕ್ಷೆ ಬೇಡುವ ನಿರ್ಧಾರ ಮಾಡಿದನೆಂದು ಹೇಗೆ ಮಹೀಪತಿಯು ತಪ್ಪು ಮಾಹಿತಿಯನ್ನು ನೀಡಿದನೋ, ಹಾಗೆಯೇ ಅವನು ಸಾಲದ ಕಿರ್ದಿ ಪುಸ್ತಕವನ್ನು ಮುಳುಗಿಸಿದ ಹಿಂದಿನ ಕಾರಣವನ್ನೂ ತಪ್ಪಾಗಿ ನೀಡಿದ್ದಾನೆ. ಮಹೀಪತಿಯ ಮಾತಿನಂತೆ ತುಕಾರಾಮನು ಕಾನ್ಹೋಬಾನಿಗೆ ಹೇಳಿದ ‘ಅನುಭವವಿಲ್ಲದಿದ್ದರೆ ಪುಸ್ತಕದ ಜ್ಞಾನ ವ್ಯರ್ಥ, ಹಾಗೆಯೇ ಬೇರೆಯವರಿಗೆ ನೀಡಿದ ಸಾಲದ ಹಣವೂ ವ್ಯರ್ಥ. ಇದರಿಂದ ಸಾಲ ನೀಡಿದ ಮನುಷ್ಯ ಸದಾ ಕೆಟ್ಟದ್ದಾಗಿ ಯೋಚಿಸುತ್ತಾನೆ. ಸಾಲ ತೆಗೆದುಕೊಂಡವನು ಮರಳಿಸುತ್ತಾನೋ ಇಲ್ಲವೋ ಎಂಬ ಚಿಂತೆ ಅವನನ್ನು ಕಾಡುತ್ತಿರುತ್ತದೆ. ಆದ್ದರಿಂದ ನಾನು ಸಾಲದ ಪುಸ್ತಕವನ್ನು ಇಂದ್ರಾಯಣಿಯ ಹೊಳೆಯಲ್ಲಿ ಮುಳುಗಿಸುತ್ತೇನೆ’.

ಜನರಿಂದ ಸಾಲ ವಸೂಲಿ ಆಗುತ್ತದೋ ಇಲ್ಲವೋ ಎಂಬ ವಿವಂಚನೆಯಿಂದ ಬಿಡುಗಡೆ ಹೊಂದಲು, ತುಕಾರಾಮನು ಸಾಲದ ಹೊತ್ತಿಗೆಯನ್ನು ಇಂದ್ರಾಯಣಿಯಲ್ಲಿ ಮುಳುಗಿಸಿದನು ಎನ್ನುವುದು ಮಹೀಪತಿಯ ಹೇಳಿಕೆ, ಅಂದರೆ ತುಕಾರಾಮನ ಹತ್ತಿರ ಸಾಲ ವಸೂಲಿ ಮಾಡುವ ದಿಟ್ಟತನವಿರಲಿಲ್ಲ, ಶಕ್ತಿಯು ಇರಲಿಲ್ಲ ಎಂದರ್ಥ. ಅವನು ಅಸಹಾಯಕತೆಯಿಂದ, ದೌರ್ಬಲ್ಯದಿಂದ ಸಾಲದ ಹೊತ್ತಿಗೆ ಮುಳುಗಿಸಿದನು. ಸ್ವಾಭಾವಿಕವಾಗಿಯೇ ಅವನ ಈ ನಿರ್ಣಯವು ಹೇಡಿತನದ್ದಾಗಿತ್ತು. ಅವನ ಪಲಾಯನವಾದಿ ಪ್ರವೃತ್ತಿಯ ದ್ಯೋತಕವಾಗಿತ್ತು, ಅವನ ಈ ಕೃತಿಯೆಂದರೆ, ಹಲವು ತಲೆಮಾರಿನ ಪಿತ್ರಾರ್ಜಿತ ವ್ಯವಸಾಯವು ಮುಂದುವರಿಸಿಕೊಂಡು ಹೋಗುವ ಸಾಮರ್ಥ್ಯವಿಲ್ಲದ ಮೂರ್ಖ ಮನುಷ್ಯ ವ್ಯವಹಾರ ಶೂನ್ಯತೆಯಾಗಿತ್ತು.

ಮಹೀಪತಿಯು ನಿಡಿದ ಈ ಕಾರಣ ಮೀಮಾಂಸೆಯನ್ನು ಒಪ್ಪಲು ಹಲವು ಅಡಚಣೆಗಳಿವೆ. ಬೆಟ್ಟದ ಮೇಲೆ ನಡೆಸಿದ ಏಳು ದಿನಗಳ ಚಿಂತನೆ ಮತ್ತು ಕೊನೆಗಾದ ಸಾಕ್ಷಾತ್ಕಾರದ ಘಟನೆಯ ನಂತರ ತಕ್ಷಣ ತುಕಾರಾಮನು ಸಾಲದ ಹೊತ್ತಿಗೆ ಮುಳುಗಿಸಿದ. ಅಂದರೆ ಏಳು ದಿನಗಳ ಕಾಲ ಸಾಲ ಹೇಗೆ ವಸೂಲಿ ಮಾಡುವುದು ಎಂಬ ಯೋಚನೆಯಲ್ಲೇ ಇದ್ದ, ಇದರಿಂದ ಸಾಲ ವಸೂಲಾಗುವುದು ಅಸಾಧ್ಯವೆಂಬ ಸಾಕ್ಷಾತ್ಕಾರ ಅವನಿಗಾಯಿತು ಎಂದು ಅರ್ಥವಾಗುತ್ತದೆ. ಹೀಗಾಗಿ ಒಂದು ಬಗೆಯ ವಿವಂಚನೆಯಿಂದ, ವೈಫಲ್ಯದಿಮದ ಅವನು ಸಾಲದ ಕಿರ್ದಿ ಪುಸ್ತಕವನ್ನು ಮುಳುಗಿಸಿದ ಎನ್ನುವದು ಮಹೀಪತಿಯ ಕಾರಣ ಮೀಮಾಂಸೆಯ ಅರ್ಥವಾಗುತ್ತದೆ. ಆದರೆ ತುಕಾರಾಮನ ಬದುಕಿನ ನಿಸ್ಪೃಹತೆ ಮತ್ತು ನಿಸ್ವಾರ್ಥ ಗುಣವನ್ನು ಕಂಡಾಗ ಅವನು ಏಳು ದಿನ ನಡೆಸಿದ ಚಿಂತನೆ ಮತ್ತು ಆನಂತರದ ಸಾಕ್ಷಾತ್ಕಾರವು ಸಾಲ ವಸೂಲಿಯ ಸಂದರ್ಭಕ್ಕೆ ಮೀಸಲಾಗಿತ್ತು ಎಂದೊಪ್ಪುವದು ಸಾಧ್ಯವಿಲ್ಲ. ಸಾಲ ವಸೂಲಿ ಮಾಡುವ ಇಚ್ಚೆಯಿದ್ದರೂ, ವಸೂಲಿಯಾಗುತ್ತದೋ ಇಲ್ಲವೋ ಎಂಬ ಯೋಚನೆಯಿತ್ತೆಂದು, ವಾದಕ್ಕಾಗಿ ಒಪ್ಪಿಕೊಂಡರೂ, ಆ ಕಾರಣಕ್ಕಾಗಿ ಸಾಲದ ಕಿರ್ದಿ ಹೊತ್ತಿಗೆಯನ್ನು ಮುಳುಗಿಸುವ ಅಗತ್ಯವಿರಲಿಲ್ಲ. ಏಕೆಂದರೆ ಅವನು ಕಾನ್ಹೋಬಾನಿಗೆ ಅವನಕ ಪಾಲಿನ ಸಾಲದ ಕಿರ್ದಿ ಪುಸ್ತಕವನ್ನು ನೀಡಿದ್ದಾನೆ, ಹಾಗೆಯೇ ತನ್ನ ಪಾಲಿನ ಸಾಲದ ಹೊತ್ತಿಗೆಯನ್ನು ಅವನು ಕೊಡಬಹುದಾಗಿತ್ತು. ಸಾಧ್ಯವಾದಷ್ಟು ವಸೂಲಿ ಮಾಡು ಎಂದು ಹೇಳಬಹುದಾಗಿತ್ತು. ಅದೂ ಅಲ್ಲದೆ, ಸಂಸಾರದ ಜವಾಬ್ದಾರಿಯು ಅವನ ಮೇಲೆ ಬಿದ್ದು ಬಹಳ ದಿನವೂ ಆಗಿರಲಿಲ್ಲ. ಹೀಗಾಗಿ ಮತ್ತೆ ಕೆಲ ದಿನವಾದರೂ ಕಾಯಬಹುದಾಗಿತ್ತು. ತೀರಾ ನಿರಾಶೆ ಅಥವಾ ವೈಫಲ್ಯಗೊಳ್ಳುವಂತಹ ಕಾಲವೇನೂ ಕಳೆದಿರಲಿಲ್ಲ. ಸಾಲ ವಸೂಲಿಯಾಗದ ದೀರ್ಘಕಾಲದ ಅನುಭವ ಅವನಿಗೆ ಬಂದಿದ್ದೇ ಆಗಿದ್ದರೆ, ಆ ಮಾತೇ ಬೇರೆ. ಆದರೆ ಇದೆಲ್ಲ ತೀರಾ ಗೌಣ ಸಂಗತಿಯಾಯಿತು. ಈಗ ನಾವು ಈ ವಿಷಯಕ್ಕೆ ಸಂಬಂಧಿಸಿದ ಎಲ್ಲಕ್ಕಿಂತ ಮಹತ್ವದ ವಿಚಾರದ ಕಡೆಗೆ ಹೊರಳೋಣ.

ಈ ಸಂದರ್ಭದಲ್ಲಿ ತುಕಾರಾಮನ ಹತ್ತಿರ ಸಾಲ ವಸೂಲಿ ಮಾಡುವ ಕ್ಷಮತೆ ಇರಲಿಲ್ಲವೋ ಅಥವಾ ಇಚ್ಚೆಯಿರಲಿಲ್ಲ ಎಂಬುದನ್ನು ನಿರ್ಣಯ ಕೈಕೊಳ್ಳುವದು ಅತ್ಯಂತ ಮಹತ್ವದ್ದು. ಹೀಗಾಗಿ ನಾವು ಮೊದಲಿಗೆ ಅವನಲ್ಲಿ ಕ್ಷಮತೆಯಿತ್ತೋ ಇಲ್ಲವೋ ಎಂಬುದರ ವಿವೇಚನೆ ಕೈಕೊಳ್ಳೋಣ.

ದುರ್ಬಲರಿಗಿಂತಲೂ ದುರ್ಬಲನೇ?

ತುಕಾರಾಮನ ಸಾಲವನ್ನು ಮರಳಿಸಬೇಕಾದ ಜನರು ಸಾಮಾಜಿಕವಾಗಿ, ಆರ್ಥಿಕವಾಗಿ ಸಾಮನ್ಯ ಸ್ತರದ ಜನರಾಗಿರಬೇಕೆನ್ನುವುದಂತೂ ಸತ್ಯ. ಸಾಲದ ಹೊರೆಯ ಅಡಿಯಲ್ಲಿ ಸಿಲುಕಿ ಜನರು ಅದೆಷ್ಟು ಮತ್ತು ಎಂಥ ಅಸಹಾಯಕರಿರುತ್ತಾರೆ ಎಂಬುದನ್ನು ನಾವು ಇಂದಿನ ಸಮಾಜದಲ್ಲೂ ಗುರುತಿಸಬಹುದು. ಸಾಹುಕಾರನು ಬಡ್ಡಿಯನ್ನು ಏರಿಸಿ, ಲೆಕ್ಕಾಚಾರದಲ್ಲಿ ವಂಚಿಸಿ, ಅಪಮಾನ ಮಾಡಿದರೂ, ವಸೂಲಿ ಮಾಡುವಾಗ ಬಲವಂತ ಮಾಡಿ, ಮನೆಯಲ್ಲಿಯ ಪಾತ್ರೆ ಪರಡಿಯನ್ನು ಹೊತ್ತೊಯ್ದು, ಗೂಂಡಾಗಳನ್ನು ಕಳಿಸಿ ಬೆದರಿಕೆ ಒಡ್ಡಿ, ಥಳಿಸಿದರೂ, ಬಡಪಾಯಿಗಳಾದ ಬಡವರು ಪ್ರತಿಕಾರ ಮಾಡುವುದು ಸಾಧ್ಯವಿಲ್ಲ, ಎಲ್ಲವನ್ನು ಮೌನವಾಗಿ ಸಹಿಸುತ್ತಾರೆ. ಈಗ ಈ ಬಗೆಯ ಜನರಿಂದ ಸಾಲ ವಸೂಲಿ ಮಾಡುವ ಆತ್ಮಸ್ಥೈರ್ಯವು ತುಕಾರಾಮನ ಹತ್ತಿರವಿರಲಿಕ್ಕಿಲ್ಲ. ಹೀಗಾಗಿ ಈ ವಿವಂಚನೆಯಿಂದ ಸದಾಕಾಲಕ್ಕೆ ಮುಕ್ತಗೊಳ್ಳಬೇಕೆಂಬ ಕಾರಣದಿಂದ ಸಾಲದ ಕಿರ್ದಿ ಪುಸ್ತಕವನ್ನು ಮುಳುಗಿಸಿದ್ದರೆ ಮಾತ್ರ, ತುಕಾರಾಮನು ದೀನರಿಗಿಂತಲೂ ದುರ್ಬಲನಾಗಿದ್ದ ಎಂದರ್ಥವಾಗುತ್ತದೆ. ಒಟ್ಟಿನಲ್ಲಿ ತುಕರಾಮನ ಬಳಿ ಸಾಲ ವಸೂಲಿಗಾಗಿ ಹೋರಾಡುವ ಯಾವ ಬಗೆಯ ಕ್ಷಮೆತೆಯೂ ಇರಲಿಲ್ಲ ಎಂಬ ನಿರ್ಣಯ ಇದರಿಂದ ಹೊರಬರುತ್ತದೆ.

ಈಗ ಈ ದೀನ ಮತ್ತು ಅಸಹಾಯಕ ಮನುಸ್ಯನು ಮುಂದಿನ ಇಪ್ಪತ್ತು ವರ್ಷಗಳ ಕಾಲ ಏನೇನು ಮಾಡಿದ ಎಂಬುದನ್ನು ನೋಡೋಣ.

ಪಟ್ಟಭದ್ರರ ಗದ್ದುಗೆಯನ್ನು ಅಲುಗಾಡಿಸಿದ

ಈ ಇಪ್ಪತ್ತು ವರುಷಗಳ ಕಾಲಾವಧಿಯಲ್ಲಿ ಹಲವರಿಗೆ ಬುದ್ಧಿ ಕಲಿಸಿ, ಗಂಟಲು ಆರುವಂತೆ ಮಾಡಿದ, ದಿಕ್ಕು ತಪ್ಪುವಂತೆ ಮಾಡಿದ. ವೈದಿಕ ಪಂಡಿತ, ಶ್ರೋತೃಗಳು, ಯಾಜ್ಞಿಕರು, ಯೋಗಿ-ಗುರು ಮುಂತಾದ ವಿವಿಧ ವೇಷಭೂಷಣ ಧರಿಸಿ ಬದುಕುವ, ಪ್ರತ್ಯಕ್ಷದಲ್ಲಿ ಡಾಂಭಿಕರಂತೆ ವರ್ತಿಸುವ ಢೋಂಗಿಗಳ ಬುರ್ಖಾವನ್ನು ಕಿತ್ತೊಗೆಯುವ ಕಾರ್ಯವನ್ನು ಸತತ ಕೈಕೊಂಡನು. ಇಂಥ ಜನರ ಮೇಲೆ ಕಠೋರ ಹಲ್ಲೆ ನಡೆಸಿ ಅವರನ್ನು ಗಾಯಗೊಳಿಸಿದನು. ದೀನರನ್ನು, ಬಡವರನ್ನು ಪೀಡಿಸುವ ಉಂಡಾಡಿಗಳಿಗೆ ಹಿಡಿದು ಒದೆಯುವ ಭಾಷೆ ಬಳಸಿದನು. ದರ್ಪಿಷ್ಟ ಮತ್ತು ಸೊಕ್ಕಿನ ಜನರಿಗೂ ಆಹ್ವಾನ ನೀಡಿದನು. ಆರ್ಥಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಮುಂತಾದ ಕ್ಷೇತ್ರಗಳಲ್ಲಿ ಪ್ರಸ್ತಾಪಿತ ಮತ್ತು ಸಮರ್ಥರಾಗಿದ್ದ ಅನೀತಿಯಿಂದ ವರ್ತಿಸುವ ಮತ್ತು ದೀನರ ಮೇಲೆ ಅನ್ಯಾಯ ಮಾಡುವ ಖಳರ ಗದ್ದುಗೆಯನ್ನು ಹಿಡಿದು ಗದಗದ ಅಲುಗಾಡಿಸಿದನು. ಧರ್ಮದ ಹೆಸರಿನಲ್ಲಿ ಅಧರ್ಮ ನಡೆಸುವ ಜನರ ಮೇಲೆ ಶಬ್ದದ ಚಾಬೂಕಿನ ಪ್ರಹಾರ ಮಾಡಿದನು. ಇದನ್ನು ಮಾಡುವಾಗ ಅನೀತಿ ತೊಲಗಿ ಜನರ ಪದ ಪ್ರತಿಷ್ಠೆ ಮತ್ತು ಸಾಮಾಜಿ ಸ್ಥಾನ ಮಾನವನ್ನು ಲೆಕ್ಕಿಸಲಿಲ್ಲ. ನೊಂದ ಈ ಜನರ ಕ್ರೌರ್ಯ ಮತ್ತು ಘಾತುಕತನವನ್ನು ಪರಿಗಣಿಸಲಿಲ್ಲ. ಅವನು ಕೈಕೊಂಡ ಈ ಹೋರಾಟವು ಕೇವಲ ಒಬ್ಬ ವ್ಯಕ್ತಿಯ ವಿರೋಧವಲ್ಲ. ಸಮಾಜದಲ್ಲಿ ಎಲ್ಲೆಡೆ ಅನ್ಯಾಯ ಮಾಡುವ ಗುತ್ತಿಗೆದಾರರು ಜನರನ್ನು ವಂಚಿಸುತ್ತಿದ್ದರು. ಪೀಡಿಸುತ್ತಿದ್ದರು. ಅವರ ಬಹುಸಂಖ್ಯೆಯನ್ನು ಲೆಕ್ಕಿಸದೇ ತುಕಾರಾಮ ಅವರ ಮೇಲೆ ಎರಗಿದನು. ಹೀಗಾಗಿ ಎಷ್ಟೆಲ್ಲ ಜನರ ವಿರೋಧ ಕಟ್ಟಿಕೊಳ್ಳಬೇಕಾಯಿತು ಎಂಬುದಕ್ಕೆ ಸೀಮೆಯೇ ಇಲ್ಲ. ಸಾವಿರಾರು ವರ್ಷಗಳ ಪರಂಪರೆಯ ಬಲ ಸಿಕ್ಕವರ ಕಠೋರ ವಿರೋಧವನ್ನು ಅವನು ಮುದ್ದಾಂ ಕಟ್ಟಿಕೊಂಡ. ಖರೆಯೆಂದರೆ, ಅವನು ತನ್ನ ಎದೆಯ ಮೇಲೆಯೇ ತಾನೇ ನಿಗಿ ನಿಗಿ ಕೆಂಡವನ್ನು ಇಟ್ಟುಕೊಂಡಿದ್ದ. ತಾನೇ ಸ್ವತಃ ಒಂದು ವಿಧ್ವಂಸಕ ಜ್ವಾಲಾಮುಖಿಯನ್ನು ತನ್ನ ಮೈಮೇಲೆ ಚೆಲ್ಲಿಕೊಂಡ.

ಆತ್ಮ ವಿಸಂಗತ ಮತ್ತು ಹಾಸ್ಯಾಸ್ಪದ

ತುಕಾರಾಮನು ಸಮಾಜದಲ್ಲಿರುವ ಪ್ರಬಲ ಘಟಕದವರ ಜೊತೆ ನಿರ್ಭಯತನದಿಂದ ಹೋರಾಡಿದ. ಆದರೆ ದುರ್ಬಲರ ವಿರುದ್ಧ ಕಿಂಚಿತ್ತೂ ಹೋರಾಟ ಮಾಡಲಿಲ್ಲ ಎಂಬ ವಸ್ತುಸ್ಥಿತಿಯು ಈ ವಿವೇಚನೆಯಿಂದ ಮೂಡಿ ಬಂದಂತಾಯಿತು. ತಾತ್ಪರ್ಯ-ಜ್ಞಾನಾಢ್ಯ, ಮತ್ತು ಧನಾಢ್ಯ ಜನರ ಜತೆ ತೀವ್ರ ಸೆಣಸಾಟ ನಡೆಸುವ ತುಕಾರಾಮನು ಜ್ಞಾನಹೀನ, ಬಲಹೀನ, ಧನಹೀನರಾದ ಜನರ ಜೊತೆಯಲ್ಲಿ ಸೆಣಸಾಡುವ ಇಚ್ಚೆ ಹೊಂದಿರಲಿಲ್ಲ ಎಂದೊಪ್ಪುವದು ಕೇವಲ ಆತ್ಮವಿಸಂಗತಿಯಷ್ಟೇ ಅಲ್ಲ ಹಾಸ್ಯಾಸ್ಪದವೂ ಎನಿಸುತ್ತದೆ.

ತನ್ನ ವಿಶಿಷ್ಟ ಉದ್ದೇಶಕ್ಕಾಗಿ ತೀವ್ರವಾದ ಸೆಣಸಾಟ ನಡೆಸುವ ಕ್ಷಮತೆ ಅಥವಾ ಸಾಮರ್ಥವು ಅವನಲ್ಲಿತ್ತು ಎನ್ನುವುದು ಈಗಾಗಲೇ ಸ್ಪಷ್ಟಗೊಂಡಿದೆ. ಜನಸಾಮಾನ್ಯರಿಗೆ ಹೋಲಿಸಿದರೆ, ತುಕಾರಾಮನಲ್ಲಿ ಈ ಸಾಮರ್ಥ್ಯವು ಹತ್ತಾರು ಪಟ್ಟು ಅಧಿಕವಾಗಿತ್ತು ಎಂಬುದನ್ನು ನಾವು ಮುದ್ದಾಂ ಗಮನಿಸಬೇಕಾಗುತ್ತದೆ. ಸಾಲ ವಸೂಲಿ ಮಾಡುವುದೇ ಅವನ ಜೀವನದ ಉದ್ದೇಶವಾಗಿದ್ದರೆ, ಅವನು ಈ ಸಾಮರ್ಥ್ಯವನ್ನು ತಮ್ಮ ಸಾಲಗಾರರ ವಿರೋಧದಲ್ಲಿ ಬಳಸುತ್ತಿದ್ದನು. ಅವನೇ ಸ್ವತಃ ಪ್ರತ್ಯಕ್ಷವಾಗಿ ಈ ಕಾರ್ಯವನ್ನು ಮಾಡುತ್ತಿದ್ದನು. ಹಾಗೇಯೇ ಸಾಕಿ ಬೆಳೆಸಿದ ಜನರ ಮೂಲಕವೂ ತಮ್ಮ ಉದ್ದೇಶ ಸಾಧಿಸಿಕೊಳ್ಳುತ್ತಿದ್ದನು. ಅಲ್ಲದೇ ಯಾರ ಜತೆಯಲ್ಲಿ ಸೆಣಸಾಡಿದನೋ, ಅವನೊಂದಿಗೇ ಹೊಂದಾಣಿಕೆ ಮಾಡಿಕೊಂಡು ಅವರ ಬೆಂಬಲದಿಂದ ಸಾಲ ವಸೂಲಿ ಮಾಡಿಕೊಳ್ಳುತ್ತಿದ್ದನು.

ಸಾಲದ ವಸೂಲಿಯಲ್ಲ, ಅಧಿಕಾರದ ವಸೂಲಿ

ತುಕಾರಾಮನು ಪ್ರತ್ಯಕ್ಷವಾಗಿ ಇಂಥದ್ದೇನು ಮಾಡಲಿಲ್ಲವೆಂದರೆ ಏನಿದರ ಅರ್ಥ? ಅವನ ಬಳಿ ಹೋರಾಡುವ ಸಾಮರ್ಥ್ಯವಿದ್ದರೂ, ವ್ಯಕ್ತಿಗತ ಸಾಲದ ವಸೂಲಿಗೆ ಅದನ್ನು ಬಳಸುವ ಇಚ್ಚೆ ಅವನಿಗಿರಲಿಲ್ಲ ಎಂದೇ ಇದರ ಅರ್ಥ. ಬಡ-ಬಗ್ಗರಿಗೆ ನೀಡಿದ ಸಾಲದ ವಸೂಲಿ ಮಾಡುವುದು ಅವನ ಜೀವನದ ಉದ್ದೇಶವಾಗಿರಲಿಲ್ಲ. ಬದುಕಿನ ಧ್ಯೇಯವೂ ಆಗಿರಲಿಲ್ಲ. ಬದಲು, ಗೌರವದಿಂದ ಬದುಕುವ ಅಧಿಕಾರವನ್ನು ತಲೆತಲಾಂತರಗಳಿಂದ ನಿರಾಕರಿಸಿದವರ ವಿರುದ್ಧ ಸೆಣಸಾಡಲು ತನ್ನ ಸಾಮರ್ಥ್ಯವನ್ನು ಬಳಸುವ ನಿರ್ಣಯವನ್ನು ಅವನು ತೆಗೆದುಕೊಂಡ! ವ್ಯಕ್ತಿಗತ ಸಾಲದ ವಸೂಲಿಗಿಂತಲೂ ವಿಶಾಲವಾದ ಬಹುಜನ ಸಮಾಜದ ಅಧಿಕಾರದ ವಸೂಲಿ ಮಾಡುವುದೇ ಅವನು ತನ್ನ ಪವಿತ್ತ ಕಾರ್ಯವೆಂದು ಪರಿಗಣಿಸಿದ್ದ.

ಈ ಎಲ್ಲ ವಿವೇಚನೆಗಳ ಕೊನೆಗೆ ನಾವು ಯಾವ ನಿರ್ಣಯಕ್ಕೆ ಬರುತ್ತೇವೆ? ತುಕಾರಾಮನು ಯಾವುದೇ ಬಗೆಯ ಅಸಹಾಯಕತೆಯಿಂದ ಅಥವಾ ಪುಕ್ಕುಲತನದಿಂದ ಸಾಲದ ಕಿರ್ದಿ ಪುಸ್ತಕವನ್ನು ಮುಳುಗಿಸಲಿಲ್ಲ. ಆದರೆ ಸ್ವಂತ ಅಂತರಂಗದಲ್ಲಿ ಸಂರಕ್ಷಿಸಿದ ಉಚ್ಚಕೋಟಿಯ ಮಾನವೀಯ ಮೌಲ್ಯಕ್ಕಾಗಿ ಅವನು ಹೀಗೆ ಮಾಡಿದನೆಂಬ ನಿರ್ಣಯಕ್ಕೆ ಬರಬೇಕಾಗುತ್ತದೆ. ಈ ವಿಷಯದ ಕುರಿತು ಸ್ವಲ್ಪ ಸವಿಸ್ತಾರವಾಗಿ ವಿವೇಚನೆ ಮಾಡೋಣ.

ವಿದ್ರೋಹದ ಭಾವನೆಯು ಧಮ್ಮುಕ್ಕಿ ಬಂತು

ತುಕಾರಾಮನು ಒಬ್ಬ ಸೂಕ್ಷ್ಮ ಮತ್ತು ಸಂವೇದನಾಶೀಲ ವ್ಯಕ್ತಿಯಾಗಿದ್ದ. ಈ ತೀಕ್ಣ ನೋಟವಿರುವುದರಿಂದಲೇ ಸುತ್ತಲಿನ ಸಾಮಾಜಿಕ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ನಿರೀಕ್ಷಿಸುತ್ತಿದ್ದ. ಹೀಗಾಗಿ ತನ್ನ ಸಮಾಜದ ವ್ಯವಸ್ಥೆಯಲ್ಲಿನ ಕೊರತೆ ಮತ್ತು ನ್ಯೂನತೆಯು ಅವನಿಗೆ ಅರಿವಾಗಲಾರಂಭಿಸಿತು. ಧರ್ಮದ ಹೆಸರಿನಲ್ಲಿ ನಡೆಯುವ ಅನ್ಯಾಯ, ಶೋಷಣೆ ಮತ್ತು ನೀತಿಯ ಅಪಮಾನವು ಅವನ ಗಮನಕ್ಕೆ ಬಂದಿತ್ತು. ಬಲಾಢ್ಯರ, ಪ್ರಸ್ಥಾಪಿತರ ಅಹಂಕಾರ ಮತ್ತು ದೀನ ದಲಿತರ ದುರ್ದೆಶೆಯೂ ಅವನ ಲಕ್ಷ್ಯಕ್ಕೆ ಬಂದಿತ್ತು.

ತೀಕ್ಷ್ಣವಾಗಿರುವುದರಿಂದಲೇ ಅವನಿದನ್ನೆಲ್ಲ ಸರಿಯಾಗಿ ಗುರುತಿಸಿದ. ಹಾಗೆಯೇ ಸಂವೇದನಾಶೀಲನಾಗಿದ್ದರಿಂದ ಇದೆಲ್ಲದರ ವಿರುದ್ಧ ಒಂದು ಉತ್ಕಟ ವಿದ್ರೋಹದ ಬಂಡಾಯದ ಭಾವನೆಯು ಅವನ ಮಾತಿನಲ್ಲಿ ಧುಮ್ಮಿಕ್ಕಿ ಬಂತು. ಇದನ್ನೆಲ್ಲ ಬದಲಾವಣೆ ಮಾಡಬೇಕೆಂದು ಅವನಿಗನಿಸಿತು. ತನ್ನ ವ್ಯವಸ್ಥೆಯ ಶುದ್ಧೀಕರಣ ಕೈಕೊಳ್ಳಬೇಕೆಂಬ ಭಾವನೆಯು ಮೌನದೊಳಗೆ ಮೂಡಿತು. ತನ್ನ ಸಮಾಜದೊಳಗೆ ಸೇರಿದ ಅಸಹ್ಯ ಹೇಸಿಗೆಯ ಭಾಗವನ್ನು ಕಿತ್ತೊಗೆಯಬೇಕೆಂದೆನಿಸಿತು. ನಮ್ಮ ಸಾಮಾಜಿಕ ವ್ಯವಸ್ಥೆಯು ಕುಟಿಲಗೊಳ್ಳುತ್ತಿದ್ದು, ಜನಸಾಮಾನ್ಯರು ಅದರಲ್ಲಿ ಸಿಲುಕಿ ಒದ್ದಾಡುತ್ತಿದೆದರೆ, ತುಳಿತಕ್ಕೆ ದಮನಕ್ಕೊಳಗಾಗುತ್ತಿದ್ದಾರೆ ಎಂದವನು ವ್ಯಥೆಗೊಂಡ, ಕಸಿವಿಸಿಗೊಂಡ. ಜನ ಮುಳುಗುತ್ತಿರುವದು ತನ್ನ ಕಣ್ಣಿಂದ ನೋಡಲಾಗುತ್ತಿಲ್ಲ. ಆದ್ದರಿಂದ ನನ್ನ ಮನಸ್ಸು ಚಡಪಡಿಸುತ್ತಿದೆ ಎಂದವನು ಆರ್ತನಾದ ಹೊರಡಿಸಿದಕ್ಕೆ ಇದೇ ಕಾರಣ. ಅವನ ಒಟ್ಟೂ ಚಿಂತನೆಯ ಸಾರವೆಂದರೆ, ಸಮಾಜದಲ್ಲಿರುವ ಪಂಡಿತರಿಗೆ ಬುದ್ಧಿ ಕಲಿಸುವುದು, ದೀನ ದಲಿತರಿಗೆ ಧೈರ್ಯ ನೀಡುವುದು, ಆಧಾರ ನೀಡುವದು, ಕಂಬನಿಯನ್ನು ಒರೆಸುವದು. ಇದೇ ಅವನ ಜೀವನದ ನಿಷ್ಠೆಯಾಯಿತು. ಈ ಜೀವನ ನಿಷ್ಠೆಯೇ ಅವನು ಭಾಂಬುನಾಥ ಬೆಟ್ಟದಲ್ಲಿ ಏಳುದಿನಗಳ ಕಾಲ ನಡೆಸಿದ ಚಿಂತನೆಯ ವಿಷಯವಾಗಿತ್ತು ಎಂಬುದರಲ್ಲಿ ಸಂಶಯವಿರಲಿಲ್ಲ. ಈ ಚಿಂತನೆಯಿಂದಲೇ ಅವನು ತನ್ನ ಮುಂದಿನ ಆಯುಷ್ಯದ ಹಾದಿಯನ್ನು ನಿಶ್ಚಯಗೊಳಿಸಿದನು. ಅಲ್ಲಿಂದ ಮುಂದೆ ಏನು ಮಾತಾಡುವುದು, ಹೇಗೆ ವರ್ತಿಸುವುದು ಎಂಬುದು ಖಚಿತಗೊಂಡಿತು. ಈ ಸಕಲ ಚಿಂತನೆಯ ಸಾರವೇ ಅವನಿಗಾದ ಸಾಕ್ಷಾತ್ಕಾರ ಎನ್ನಬಹುದು. ಈ ಸಾಕ್ಷಾತ್ಕಾರವೇ ಅವನ ಭಾವೀ ಜೀವನದ ಆಚಾರ ವಿಚಾರದಲ್ಲಿ ಪ್ರತಿಬಿಂಬಗೊಂಡಿತು.