ಸಂತತನದ ಸ್ವಂತ ಪರೀಕ್ಷೆ

ನುಡಿದಂತೆ ನಡೆಯುವ, ನುಡಿದಂತೆ ವರ್ತಿಸುವ, ಉಪದೇಶ ಮಾಡಿದಂತೆ ಬದುಕುವದು ತುಕಾರಾಮನ ವ್ಯಕ್ತಿತ್ವದ ಮತ್ತೂ ಒಂದು ವೈಶಿಷ್ಟ್ಯ. ಸಂತತನದ ಸ್ವಂತ ಪರೀಕ್ಷೆಯೆಂದರೆ ನುಡಿದಂತೆ ನಡೆಯುವದು.

ತುಕಾರಾಮನು ಏಳುದಿನಗಳ ಚಿಂತನೆಯಲ್ಲಿ ಸಂತತನದ ಸ್ವಂತ ಪರೀಕ್ಷೆ ಕಠೋರವಾಗಿ ಕೈಕೊಂಡನು. ಮೊದಲಿನಿಂದಲೂ ಅವನು ಈ ಬಗೆಯ ಯೋಚನೆ ಮಾಡುತ್ತಿರಬೇಕೆಂದು ಅನಿಸುತ್ತದೆ. ಈ ಏಳುದಿನಗಳಲ್ಲಿ ಈ ಯೋಚನೆಯ ಪರಮೋತ್ಕರ್ಷ ಬಿಂದುವನ್ನು ತಲುಪಿತು ಎಂದೇ ಅರ್ಥ. ನಿರ್ಮಲ, ನಿಷ್ಕಪಟ ಶುದ್ಧ ಜೀವನದ ಕೆಲವು ನಿಕಷವನ್ನು ನಿಶ್ಚಿತಗೊಳಿಸಿ, ಅದನ್ನು ಕಟ್ಟುನಿಟ್ಟಾಗಿ ತನ್ನ ಸ್ವಂತ ಜೀವನಕ್ಕೆ ಅನ್ವಯಿಸಿಕೊಳ್ಳಲಾರಂಭಿಸಿದನು. ಅಶಿವ, ಅನಿಷ್ಟ, ಅನೈತಿಕ ವಾದುದನ್ನು ಸ್ವಂತ ಜೀವನದಿಂದ ಬೇರ್ಪಡಿಸುವ, ಕಿತ್ತೊಗೆಯುವ ನಿರ್ಧಾರವನ್ನು ಕೈಕೊಂಡನು. ಈ ಪ್ರಕ್ರಿಯೆಯಿಂದ ಹಾದು ಹೋಗುವಾಗ ತನ್ನ ಪಿತ್ರಾರ್ಜಿತ ಸಾಹುಕಾರಿ ನ್ಯಾಯವು ತಾನೇ ಒಡ್ಡುವ ಪರೀಕ್ಷೆಯಲ್ಲಿ ತಾಳುವದಿಲ್ಲ ಎಂಬುದನ್ನು ಅರಿತನು. ಕಡು ಬಡವರ, ದುಃಖ ಸಂಕಟ ಪಡುವವರ, ದೀನ ದಲಿತರ ಕಂಬನಿಯನ್ನು ಒರೆಸುವದು ತನ್ನ ಕರ್ತವ್ಯ, ಅದನ್ನು ಬಿಟ್ಟು ಅವರಿಂದ ಸಾಲವನ್ನು ಬಲವಂತದಿಂದ ವಸೂಲಿ ಮಾಡುವದೆಂದರೆ ಮೊದಲೇ ಮುರಿದು ಬಿದ್ದ ಸಂಸಾರವನ್ನು ಸಂಪೂರ್ಣ ನೆಲಕಚ್ಚುವಂತೆ ಮಾಡಿದಂತಾಗುತ್ತದೆ, ಉಧ್ವಸ್ತಗೊಳಿಸಿದಂತಾಗುತ್ತದೆ. ಈ ರೀತಿ ಮಾಡುವುದು ಮಾನವೀಯತೆಗೆ ಕಳಂಕ ತಂದಂತೆ ಎಂದವನು ಭಾವಿಸಿದ್ದ,. ಅವನೇನು ಹಣದ ವಿರೋಧಿಯಾಗಿರಲಿಲ್ಲ. ಆದರೆ ಧನವನ್ನು ಉತ್ತಮ ಮಾರ್ಗದಿಂದಲೇ ಗಳಿಸಬೇಕೆಂದವನು ನಂಬಿದ್ದ. ತನ್ನ ಅಭಂಗದಲ್ಲಿ ಈ ನಿಲುವನ್ನು ಮತ್ತೆ ಮತ್ತೆ ಮಂಡಿಸಿದ್ದು ಕಂಡುಬರುತ್ತದೆ. ಹಣವನ್ನು ನಿರ್ದೋಷ ಮತ್ತು ನಿಷ್ಕಳಂಕ ಮಾರ್ಗದಿಂದ ಗಳಿಸಬೇಕೆ ವಿನಾಃ ಮೋಸ, ವಂಚನೆ ಅಥವಾ ಶೋಷಣೆಯ ಮೂಲಕ ಗಳಿಸಬಾರದು ಎಂಬ ಭಾವನೆ ಅವನದಾಗಿತ್ತು. ಜನರಿಗೆ ಸಾಲ ನೀಡಿದ ದಾಖಲೆಯು ತುಕಾರಾಮನ ಹತ್ತಿರ ಇರುವುದರಿಂದ ತಾಂತ್ರಿಕ ದೃಷ್ಟಿಯಿಂದ ಸಾಲ ವಸೂಲಿ ಮಾಡುವುದು ಕಾಯ್ದೆ ಬದ್ಧ ರೀತಿಯಾಗುತ್ತಿತ್ತು. ಆದರೆ ತುಕಾರಾಮನು ಈ ಬಗೆಯ ತಾಂತ್ರಿಕ ಬಾಬತ್ತಿಗೆ ತನ್ನ ಒಟ್ಟೂ ಬದುಕಿನಲ್ಲಿ ತಿಲಮಾತ್ರವೂ ಸ್ಥಾನ ನೀಡಲಿಲ್ಲ. ತನ್ನ ಕಾರ್ಯವು ಮಾನವೀಯತೆಯ ನಿಟ್ಟಿನಲ್ಲಿ ಕಾರ್ಯಬದ್ಧ ಮತ್ತು ನೈತಿಕವಾಗಿರಬೇಕೆಂಬ ನಿಲುವು ಅನವದ್ದಾಗಿತ್ತು. ಸ್ವಾಭಾವಿಕವಾಗಿಯೇ, ತನ್ನ ಬಳಿಯಲ್ಲಿರುವ ಸಾಲದ ಕಿರ್ದಿ ಪುಸ್ತಕವು ಕಡು ಬಡವರ ಸಂಸಾರ ಹಾಳು ಮಾಡುತ್ತದೆ ಎಂಬ ಅರಿವು ಅವನ ಮನವನ್ನು ಕೊರೆಯುತಿತ್ತು. ಈ ಸಾಲದ ಪುಸ್ತಕ ಅವನ ಅಂತರಂಗವನ್ನು ಘಾಸಿಗೊಳಿಸಲಾರಂಭಿಸಿತು. ಒಂದು ಅಪವಿತ್ರ ಕಳಂಕದಂತೆ ತನ್ನ ವ್ಯಕ್ತಿತ್ವಕ್ಕೆ ಅಂಟಿಕೊಳ್ಳುವ ಈ ದಾಖಲೆಯು ಅವನ ಹೃದಯವನ್ನು ಇರಿಯುವ ಶಲ್ಯವಾಯಿತು. ಈ ಶಲ್ಯವನ್ನು ತನ್ನ ಹೃದಯದಿಂದ ಕಿತ್ತು ಹೊರಚೆಲ್ಲಬೇಕೆಂದು ಕೈಕೊಂಡ ನಿರ್ಣಯವೇ ಅವನಿಗೆ ಭಾಂಬನಾಥ ಬೆಟ್ಟದಲ್ಲಾದ ಸಾಕ್ಷಾತ್ಕಾರ. ಈ ಸಾಕ್ಷಾತ್ಕಾರದ ಪರಿಣಿತ ಎಂದು ಅವನು ಬೆಟ್ಟವಿಳಿದು ಕೆಳಗೆ ಬಂದ ತಕ್ಷಣ ಉಳಿದ ಏನನ್ನು ಮಾಡುವ ಮೊದಲು ತನ್ನ ಪಾಲಿನ ಸಾಲದ ಪುಸ್ತಕವನ್ನು ಇಂದ್ರಾಯಣಿಯಲ್ಲಿ ಮುಳುಗಿಸಿದ. ಸ್ವಂತ ಶುದ್ಧೀಕರಣ ಮಾಡಿಕೊಂಡಿದ್ದು ಅಲ್ಲದೇ ಸಮಾಜ ವ್ಯವಸ್ಥೆಯ ಶುದ್ಧೀಕರಣ ಕೈಕೊಳ್ಳುವ ನಿಟ್ಟಿನಲ್ಲಿ ಇಟ್ಟ ಮೊದಲ ಹೆಜ್ಜೆ. ಜಗತ್ತಿಗೆ ಉಪದೇಶ ಮಾಡುವ ಮೊದಲೇ ಸ್ವಂತ ಸಂತತನದ ಪರೀಕ್ಷೆಗೆ ಜೀವನವನ್ನೇ ಒಡ್ಡಿಕೊಂಡನು.

ತನ್ನನ್ನು ಈ ಪರೀಕ್ಷೆಗೆ ಒಡ್ಡಿಕೊಳ್ಳುವುದು ತುಂಬ ಮಹತ್ವದ್ದು. ಏಕೆಂದರೆ ಸಮಾಜದ ಹಿತವನ್ನು ಸಾಧಿಸಲು ಬಯಸುವ ಮನುಷ್ಯನ ಮೇಲೆ ಕೆಲ ಜವಾಬ್ದಾರಿ ಇರುತ್ತದೆ. ಯಾವುದೇ ಕ್ಷೇತ್ರದಲ್ಲಿ ಸಮಾಜದ ನಾಯಕತ್ವ ಮಾಡಲು ಬಯಸುವ ವ್ಯಕ್ತಿಗೆ ಕೆಲವು ನೈತಿಕ ಬಂಧನವಿರುತ್ತದೆ. ತನ್ನ ಸ್ವಂತ ಆಚರಣೆಯಿಂದ ಜನರಿಗೆ ಪಾಠ ಹಾಕಿಕೊಡುವದು, ಹಾದಿ ತೋರಿಸುವದು ಅವನ ಕರ್ತವ್ಯವಾಗುತ್ತದೆ. ಇದನ್ನು ತಿಳಿಸಲೆಂದೇ ತುಕಾರಾಮನು ನೀಡಿದ ಸಂತನ ಉದಾಹರಣೆಯು ಮಾರ್ಮಿಕವಾಗಿದೆ. ಒಬ್ಬ ಬ್ರಾಹ್ಮಣನಿಗೆ ಬರೆಯಲು ಬರುತ್ತದೆ. ಅಕ್ಷರ ಬರೆಯುವದನ್ನು ಕಲಿಯಲು ಈಗವನು ಪಾಟಿ-ಪೆನ್ಸಿಲ್ ಹಿಡಿಯುವ ಅಗತ್ಯವಿಲ್ಲ. ಆದರೆ ತನ್ನ ವಿದ್ಯಾರ್ಥಿಗಳಿಗೆ ಕಲಿಸಲು ಅವನು ಸ್ವತಃ ಪಾಟಿಯನ್ನು ಕೈಗೆತ್ತಿಕೊಳ್ಳುತ್ತಾನೆ. ಮಕ್ಕಳೆದುರು ಸ್ವತಃ ಪಾಟಿ (ಸ್ಲೇಟು) ಯ ಮೇಲೆ ಬರೆಯುತ್ತಾನೆ. ಈ ಬರವಣಿಗೆ ತನಗಾಗಲ್ಲ ಆ ಮಕ್ಕಳಿಗಾಗಿ, ಅವರು ಕಲಿಯಲಿಲ್ಲ ಎಂಬ ಕಾರಣಕ್ಕಾಗಿ. ಜಗತ್ತಿನಲ್ಲಿ ಸಂತರು ಕೈಕೊಂಡ ಕಾಯಕವೂ ಹೀಗೆಯೇ ಇರುತ್ತದೆ. ಎಂದು ತುಕಾರಾಮನು ಹೇಳುತ್ತಾನೆ. ಬ್ರಾಹ್ಮಣ ಗುರು ಸ್ವತಃ ಅಕ್ಷರ ಬರೆದು ವಿದ್ಯಾರ್ಥಿಗಳಿಗೆ ಪಾಠ ಕಲಿಸುತ್ತಾನೋ, ಹಾಗೆಯೇ ಗುರು ಸ್ವತಃ ಕಾರ್ಯ ಮಾಡಿ ಜನರಿಗೆ ಕಾಯಕದ ಪಾಠ ಕಲಿಸುತ್ತಾನೆ. ಅದೇ ರೀತಿ ಅವನು ಹೇಳಿದ ತಾಯಿಯ ಉದಾಹರಣೆಯೂ ಸಹ ಅತ್ಯಂತ ಪ್ರಭಾವಿಯಾಗಿದೆ. ತಾಯಿಗೆ ನಡೆದಾಡಲು ಬರುತ್ತಿದ್ದರೂ ಬೇಕೆಂದೆ ಅವಳು ಮಗುವಿನ ಜತೆ ಪುಟ್ಟ ಪುಟ್ಟ ಹೆಜ್ಜೆ ಇರಿಸುತ್ತಾಳೆ. ನೀನೆ ನಡೆಯಲು ಕಲಿ ಎಂದು ಮಗುವಿಗೆ ತಿಳಿಸಿದರೆ ಅವನು ನಡೆದಾಡಲು ಕಲಿಯುವುದಿಲ್ಲ. ನೀನೆ ಬರೆಯಲು ಕಲಿಯೆಂದರೆ ಅವನು ಬರೆಯಲಾರ. ಆದ್ದರಿಂದಲೇ ಇದನ್ನೆಲ್ಲಾ ಮಾಡಬೇಕಾಗುತ್ತದೆ. ಸಮಾಜದಲ್ಲಿಯೇ ಮುಗ್ಧ-ಅಮಾಯಕ ಜನರು ಸಹ ಮಕ್ಕಳಂತೆ ಇರುತ್ತಾರೆ. ಹೀಗಾಗಿ ಅವರು ಹೀಗೆ ವರ್ತಿಸಬೇಕೆನ್ನುವ ಇಚ್ಛೆಯು ಸಂತರಿಗಿರುತ್ತದೆ. ಹಾಗವರು ಸ್ವತಃ ನಡೆದುಕೊಂಡು ಜನರೆದುರು ಆದರ್ಶವನ್ನಿರಿಸುತ್ತಾರೆ. ಸಂತನಾಗಲು ಇಚ್ಛಿಸುವ ವ್ಯಕ್ತಿಯು ಈ ರೀತಿಯ ಆಚರಣೆಯಿಂದ ಜನರೆದುರು ಆದರ್ಶವನ್ನಿರಿಸಬೇಕು ಎಂದು ತುಕಾರಾಮನು ತನ್ನ ಅಭಂಗದಲ್ಲಿ ಸೂಚಿಸಿದ್ದಾನೆ. ಅವನು ಸಾಲದ ಕಿರ್ದಿ ಪುಸ್ತಕ ಮುಳುಗಿಸಿ, ಜನರೆದುರಿಗೆ ನೈತಿಕತೆಯ ಆದರ್ಶವನ್ನಿಟ್ಟನು ಎಂದೇ ಇದರ ಅರ್ಥ.

ಮಾರ್ಕ್ಸ್‌‌ನಿಗಿಂತ ಇನ್ನೂರು ವರ್ಷ ಮೊದಲೇಡಿ ಕ್ಲಾಸ್ನಾದನು

ಸಾಲದ ಹೊತ್ತಿಗೆಯನ್ನು ಮುಳುಗಿಸುವ ಕೃತಿಯು ಮಾನವನ ಚರಿತ್ರೆಯಲ್ಲಿ ಅತ್ಯಂತ ವಿರಳವಾದ ಪ್ರಸಂಗ. ತಾನೇ ಸ್ವತಃ ತನ್ನ ಸಂಪತ್ತನ್ನು, ಸತ್ತೆ ಅಥವಾ ಅಧಿಕಾರವನ್ನು ವಿಸರ್ಜನೆ ಮಾಡುವುದು ಸಾಮಾನ್ಯ ಸಂಗತಿಯಲ್ಲ. ಯಾರ ನೈತಿಕ ಪ್ರಜ್ಞೆಯು ತೀರಾ ವಿಕಸಿತಗೊಂಡಿರುತ್ತದೋ, ವಿವೇಕ ಸ್ಥಿರವಾಗಿರುತ್ತದೋ, ಮಾನವೀಯ ಸಂಬಂಧಗಳ ಪರಿಕಲ್ಪನೆಯು ಉಚ್ಚಕೋಟಿಯದ್ದಾಗಿರುತ್ತದೋ ಅಂಥ ಕೆಲವು ಜನ ಈ ಬಗೆಯ ನಿರ್ಣಯವನ್ನು ತೆಗೆದುಕೊಳ್ಳುತ್ತಾರೆ. ತುಕಾರಾಮ ಅಂಥ ವಿರಳರಲ್ಲಿ ವಿರಳ ಜನರಲ್ಲೊಬ್ಬ. ಅಸಾಧಾರಣವೆನ್ನಬಹುದಾದ ಆಚಾರ ವಿಚಾರದ ಪರಿಕಲ್ಪನೆಯನ್ನು ತುಕಾರಾಮನು ಇಪ್ಪತ್ತರ ವಯಸ್ಸಿನಲ್ಲಿ ತೋರಿಸಿದನು. ಇದರಿಂದ ಅವನ ಮಾನವೀಯತೆಯ ಎತ್ತರ ತಿಳಿದು ಬರುತ್ತದೆ. ಮಾರ್ಕ್ಸನು ಸಾಮ್ಯವಾದ ಮತ್ತು ಸಮಾಜವಾದ ಹೇಳುವ ಸುಮಾರು ಇನ್ನೂರು ವರ್ಷ ಮೊದಲೆ ತುಕಾರಾಮನು ತನ್ನ ವರ್ಗೀಯ ಹಿತಸಂಬಂಧವನ್ನು ವಿಸರ್ಜಿಸಿ ಮುಕ್ತನಾಗಿದ್ದನು, ವರ್ಗಹೀನನಾಗಿದ್ದನು, ಡಿಕ್ಲಾಸ್ (Declass) ನಾಗಿದ್ದನು. ಯಾವ ದಯೆಯನ್ನು ಪುತ್ರರಿಗೆ ತೋರಿಸುತ್ತಿರೋ, ಅದೇ ದಯೆಯನ್ನು ದಾಸ ದಾಸಿಯರಿಗೆ ತೋರಿಸಬೇಕೆಂಬ ಸಮತೆಯ ಸಿದ್ಧಾಂತವು ಮುಂದಿನ ಕಾಲದಲ್ಲಿ ಬಾಯಲ್ಲಿ ಶೋಭಿಸುವಂತಾಯಿತು. ಏಕೆಂದರೆ, ಆ ಸಿದ್ಧಾಂತಕ್ಕೆ ಆಚರಣೆಯ ಅಧಿಷ್ಟಾನವಿತ್ತು. ಪರದ್ರವ್ಯವನ್ನು ಮೈಲಿಗೆ ಎಂದು ಭಾವಿಸಬೇಕು ಎಂದವನು ಮಡಿಮೈಲಿಗೆ ಬಗೆಗೆ ಮಾಡಿಲ ವ್ಯಾಖ್ಯಾನವೂ ಅವನ ವ್ಯಕ್ತಿತ್ವಕ್ಕೆ ಶೋಭಿಸುವಂತಾಯಿತು. ಏಕೆಂದರೆ, ಸಾಲದ ಹೊತ್ತಿಗೆಯನ್ನು ಮುಳುಗಿಸುವ ರೂಪದಲ್ಲಿ ತನಗೆ ಸ್ವತಃ ಅಂಟಿಕೊಳ್ಳುವ ಪರದ್ರವ್ಯದ ಮೈಲಿಗೆಯನ್ನು ರೂಪಿಸಿಕೊಂಡು ಈ ಬಾಬತ್ತಿನಲ್ಲಿ ಸಂಪೂರ್ಣ ಮಡಿವಂತಿಕೆಯನ್ನು ಪ್ರಾಪ್ತಮಾಡಿಕೊಂಡಿದ್ದ.

ಸಾಲದ ಹೊತ್ತಿಗೆಯನ್ನು ಮುಳುಗಿಸುವ ಕಾರ್ಯವನ್ನು ಅವನು ಅಸಹಾಯಕತೆಯಿಂದಾಗಲಿ ದುರ್ಬಲತೆಯಿಂದಾಗಲಿ ಕೈಕೊಂಡಿದ್ದಲ್ಲ ಅಥವಾ ತಾತ್ಕಾಲಿಕ ಘಟನೆಯ ಪ್ರಭಾವಕ್ಕೊಳಗಾಗಿಯೂ ಮಾಡಿದ್ದಲ್ಲ. ಹಾಗೆಯೇ ಯಾವ ಒತ್ತಡಕ್ಕೆ ಮಣಿದೂ ಮಾಡಿರಲಿಲ್ಲ. ಅಥವಾ ಯಾವ ಲಾಭಕ್ಕೊಳಗಾಗಿಯೂ ಮಾಡಿರಲಿಲ್ಲ. ಯಾವ ಭಯ ಅಥವಾ ಅಭಿಲಾಷೆಗೆ ಬಲಿಬಿದ್ದೂ ಮಾಡಿರಲಿಲ್ಲ. ಅದೇ ರೀತಿ ಲಹರಿ ಸ್ವಭಾವದಿಂದ ಮಾಡಿದೆನೆನ್ನುವಂತಿಲ್ಲ, ಅಥವಾ ಯಾವುದೇ ನಾಟ್ಯಮಯ ಪ್ರಸಂಗ ನಿರ್ಮಾಣ ಮಾಡಿ ಜನರ ಲಕ್ಷ್ಯ ಸೆಳೆಯುವ ಕಾರಣಕ್ಕಾಗಿಯೂ ಮಾಡಿದ ಎನ್ನುವಂತಿಲ್ಲ.

ಕೃತಿಯ ಹಿಂದಿರುವ ವಿಶೇಷ ತತ್ವಜ್ಞಾನ

ಎಲ್ಲಕ್ಕಿಂತ ಮಹತ್ವದ ಸಂಗತಿಯೆಂದರೆ, ಈ ಕೃತಿಯು ಹಿಂದೆ ಮಾನವೀಯ ಜೀವನಕ್ಕೆ ಮತ್ತು ಸಾಮಾಜಿಕ ವ್ಯವಸ್ಥೆಗೆ ಸಂಬಂಧಿಸಿದ ಸ್ವಂತದ್ದೇ ಆದ ಎಂದು ವಿಶೇಷ ತತ್ವಜ್ಞಾನವಿತ್ತು. ಅವನಿಗೆ ಅಂಥದೊಂದು ತತ್ವಜ್ಞಾನವಿತ್ತೆನ್ನಲು ಒಂದು ನಿಸ್ಸಂದೇಹವಾದ ಪುರಾವೆಯು ನಮ್ಮ ಬಳಿಯಲ್ಲಿದೆ. ಅವನು ತನ್ನ ಮುಂದಿನ ಇಪ್ಪತ್ತು ವರುಷಗಳಲ್ಲಿ ಅಭಂಗಗಳ ಮೂಲಕ ಮಂಡಿಸಿದ ವಿಚಾರಗಳು ಈ ಕೃತಿಗೆ ಸಂಪೂರ್ಣ ಸುಸಂಗತವಾಗಿದ್ದು, ಅದು ಈ ಕೃತಿಯಲ್ಲಿಯೇ ಅಂಕುರಿಸಿದಂತಹ ಪುರಾವೆಯದು. ಮುಂದಿನ ಕಾಲದಲ್ಲೆಂದೂ ಅವನು ಈ ಕೃತಿಯ ಬಗೆಗೆ ಪಶ್ಚಾತ್ತಾಪ ಪಟ್ಟಿದ್ದಿಲ್ಲ. ಅಷ್ಟೇ ಅಲ್ಲ, ಈ ಘಟನೆಯತ್ತ ಮತ್ತೊಮ್ಮೆ ಹೊರಳಿಯೂ ನೋಡಲಿಲ್ಲ. ಅದರ ನೆನಪು ಹೋಗಲಿ, ಉಲ್ಲೇಖವನ್ನೂ ಮಾಡಲಿಲ್ಲ. ಆತ್ಮ ಚರಿತ್ರಾತ್ಮಕ ಆಭಂಗಗಳನ್ನು ಬರೆಯುವಾಗಲೂ ಸಹ ಅದನ್ನು ನಿರ್ದೇಶನ ಮಾಡಲಿಲ್ಲ. ಇದರ ಕಾರಣ ಸ್ಪಷ್ಟವಾಗಿದೆ. ಈ ಕೃತಿಯ ಮೂಲಕ ತಾನೊಂದು ಅಲೌಕಿಕ ಅಸಾಧಾರಣ ಕಾರ್ಯ ಮಾಡುತ್ತಿದ್ದೇನೆಂಬ ಭಾವನೆಯು ಅವನಲ್ಲಿರಲಿಲ್ಲ. ಈ ಕೃತಿಯ ಮೂಲಕ ತಾನು ಯಾರ ಮೇಲಾದರೂ ಉಪಕಾರ ಮಾಡುತ್ತಿರುವ ಡೌಲನ್ನೂ ಮೆರೆಯಲ್ಲಿಲ್ಲ. ಈ ಕೃತಿಯು ತನ್ನ ಜೀವನದ ಕುರಿತಾದ ದೃಷ್ಟಿಕೋನವನ್ನು ಜಾರಿಗೊಳಿಸುವ ಬಗೆಯಾಗಿತ್ತು. ಸ್ವಂತ ಜೀವನ ನಿಷ್ಠೆಯನ್ನು ಆಚರಣೆಯಲ್ಲಿ ತರುವಂತಹ ಪ್ರಯತ್ನವಾಗಿತ್ತು ಎನ್ನುವುದೇ ಅವನ ನಿಲುವು ಆಗಿತ್ತು. ಯಾವ ಕಾರ್ಯವನ್ನು ಸ್ವಂತ ಸಂತೋಷಕ್ಕಾಗಿ ಮಾಡಲಾಗಿದೆಯೋ, ತನ್ನ ಆನಂದದಾಯಕ ಕರ್ತವ್ಯವೆಂದು ಮಾಡಲಾಗಿದೆಯೋ ಅದರ ಬಗೆಗೆ ತನ್ನ ಬೆನ್ನು ತಾನೇ ತಟ್ಟಿಕೊಳ್ಳುವುದು ಅವನಿಗೆ ಅಷ್ಟೊಂದು ಸರಿಕಾಣಲಿಲ್ಲ. ಆ ಕೃತಿಯನ್ನು ಮಾಡುವಾಗ ಅವನು ಒತ್ತಡದಲ್ಲಿರಲಿಲ್ಲ. ಯಾವ ಕ್ಲೇಶವು ಇರಲಿಲ್ಲ. ಸಹಜವಾಗಿ ಉಸಿರಾಡುವಂತೆ ಅವನು ಸಾಲದ ಹೊತ್ತಿಗೆಯನ್ನು ಮುಳುಗಿಸಿದ. ಅರಿವಿಲ್ಲದೆ ನಡೆಯುವ ಉಸಿರಾಟದ ಕುರಿತು ನಾವೆಂದೂ ಮತ್ತೆ-ಮತ್ತೆ ಉಲ್ಲೇಖಿಸುವುದಿಲ್ಲ. ಅದೇ ರೀತಿಯಲ್ಲಿ ತುಕಾರಾಮನು ಈ ಘಟನೆಯ ಬಗೆಗೆ ಮತ್ತೆ ಹೇಳಲಿಲ್ಲ. ಅವನು ಈ ಕಾರ್ಯವನ್ನು ಸಹಜವಾಗಿ ಮಾಡಿದ ಎಂದಾಕ್ಷಣ ಅದು ಸಾಮಾನ್ಯ ಅಥವಾ ಕಡಿಮೆ ದರ್ಜೆಯದು ಎಂದೇನೂ ಭಾವಿಸಬೇಕಿಲ್ಲ. ಆ ಕಾರ್ಯವನ್ನು ಅವನು ಯೋಚಿಸಿ ವಿವೇಕ ದೃಷ್ಟಿಯಿಂದ ತಾನಾಗಿಯೇ ಸ್ವತಃ ಮಾಡಿದ್ದು. ಆದ್ದರಿಂದಲೇಕ ಆ ಕಾರ್ಯವು ಅತ್ಯಂತ ಸ್ವಾಭಾವಿಕ ಮತ್ತು ಸಹಜವಾಗಿ ನಡೆಯಿತು ಎಂದೇ ಅರ್ಥ.

ಮತ್ತೂ ಒಂದು ದೃಷ್ಟಿಯಿಂದ ಅವನ ಈ ಕೃತಿಯ ಹಿಂದಿನ ತಾರತಮ್ಯವು ಲಕ್ಷಣೀಯ ಎಂದೇ ನನಗನಿಸುತ್ತದೆ. ಅವನು ಮಾಡಿದ ಈ ಕೆಲಸವು ಸನ್ಯಾಸ ಅಥವಾ ವೈರಾಗ್ಯದ ಇಚ್ಚೆಯಿಂದ ಜರುಗಿದ್ದಲ್ಲ. ಈ ಕಾರ್ಯದ ಬಳಿಕ ಅವನು ಸಂಸಾರವನ್ನು ತೊರೆಯಲಿಲ್ಲ. ಇಲ್ಲಿಯೇ ಅವನ ಪೂರ್ವೋಕ್ತ ತಾರತಮ್ಯವು ಸ್ಪಷ್ಟವಾಗುತ್ತದೆ ಎಂದೆನಿಸುತ್ತದೆ. ಅವನಿಗೆ ಒಂದು ವೇಳೆ ಸಂಸಾರವನ್ನು ತೊರೆಯಬಾರದೆಂದಿದ್ದರೆ ಸಂಸಾರಕ್ಕೆ ಸಾಕಷ್ಟು ಧನ ತಂದುಕೊಡುವ ಸಾಹುಕಾರಿಕೆಯ ಮಾರ್ಗವನ್ನು ಏಕೆ ಮುಚ್ಚಿದ, ಸಾಲದ ಪುಸ್ತಕವನ್ನು ಏಕೆ ಮುಳುಗಿಸಿದ ಎಂಬ ಪ್ರಶ್ನೆಯು ಉದ್ಭವಗೊಳ್ಳುವ ಸಾಧ್ಯತೆಯಿದೆ. ಅದರ ಬದಲು, ಸಾಲದ ಪುಸ್ತಕ ಮುಳುಗಿಸುವದೇ ಆಗಿದ್ದರೆ, ಅದರ ಸ್ವಾಭಾವಿಕ ಪರಿಣಾಮವೆಂದು ಸಂಸಾರವನ್ನು ಏಕೆ ತ್ಯಾಗ ಮಾಡಲಿಲ್ಲ ಎಂಬ ಪ್ರಶ್ನೆಯೂ ಏಳುತ್ತದೆ. ಈ ಎರಡು ಪ್ರಶ್ನೆಗಳ ಉತ್ತರ ಒಂದೇ ಆಗಿದ್ದು, ಆ ಉತ್ತರದಲ್ಲಿ ತುಕಾರಾಮನ ಜೀವನದ ಬಗೆಗಿನ ಪರಿಪಕ್ವ ನಿಲುವು ವ್ಯಕ್ತವಾಗುತ್ತದೆ.

ಸನ್ಯಾಸಿಗಲ್ಲ, ಗೃಹಸ್ಥನಿಗೊಪ್ಪುವ ಕಾರ್ಯ

ಸಂಸಾರದ ಬಗೆಗೆ ಯಾವುದೇ ಕಿರಿಕಿರಿಯಿಲ್ಲದ್ದರಿಂದ ಅವನು ಸಂಸಾರ ತೊರೆಯುವ ಪ್ರಶ್ನೆಯೇ ಉದ್ಭವಗೊಳ್ಳುವುದಿಲ್ಲ. ಆದರೆ ಆ ಸಂಸಾರವು ಸನ್ಮಾರ್ಗದಿಂದ ಗಳಿಸಿದ ಸಂಪತ್ತಿನಲ್ಲಿ ನಡೆಯಬೇಕೆನ್ನುವದು ಅವನ ಪ್ರಬಲ ಇಚ್ಛೆಯಾಗಿತ್ತು. ಅನ್ಯಾಯ ಮತ್ತು ಅನೀತಿಯಿಂದ ಅಥವಾ ಬಡವರ ಸಂಸಾರವನ್ನು ಹಾಳುಮಾಡಿ ಗಳಿಸಿದ ಹಣದಿಂದ ತನ್ನ ಸ್ವಂತ ಸಂಸಾರ ನಡೆಸುವಾಗ ಅದೇನೆ ನಿರ್ದೋಷವಿದ್ದರೂ ಅದನ್ನು ಮುರಿಯುವ ಯಾವ ಅಗತ್ಯವೂ ಇರಲಿಲ್ಲ. ಬದಲಿಗೆ ತನ್ನ ಸಂಸಾರಕ್ಕೆ ಅಂಟಿಕೊಳ್ಳುವ ಗೈರಾದ, ಅನೈತಿಕವಾದ, ಆಕ್ಷೇಪಾರ್ಹವಾದ ಸಂಗತಿಗಳನ್ನು ಮಾತ್ರ ಕಠೋರವಾಗಿ ಮುರಿದೊಗೆಯಬೇಕು ಎಂಬ ನಿರ್ಣಯವನ್ನು ಅವನು ತೆಗೆದು ಕೊಂಡಿದ್ದ. ಸಾಲದ ಪುಸ್ತಕವು ಅಂಥದೊಂದು ಗೈರು ಪ್ರಕಾರವಾಗಿದ್ದರಿಂದ ಅದನ್ನವನು ಇಂದ್ರಾಯಣಿಯಲ್ಲಿ ಮುಳುಗಿಸಿದ. ಆದರೆ ಸಂಸಾರವನ್ನು ಮುಳುಗಿಸಲಿಲ್ಲ. ಅವನು ಸಂಸಾರವನ್ನು ಮುಂದುವರಿಸಿದ. ತುಕಾರಾಮನ ಈ ಕಾರ್ಯವು ಗೃಹಸ್ಥನು ಹೇಗೆ ನಡೆದುಕೊಳ್ಳಬೇಕು ಎಂಬ ಆದರ್ಶವನ್ನು ಅವನು ತನ್ನ ನಡುವಳಿಕೆಯಿಂದ ತೋರಿಸಿಕೊಟ್ಟ. ಅನೀತಿಯಿಂದ ನಡೆದುಕೊಳ್ಳುವಂತಿಲ್ಲ, ಹಾಗೆಯೇ ಸಂಸಾರದಿಂದ ಪಲಾಯನವನ್ನೂ ಮಾಡುವಂತಿಲ್ಲ ಎಂಬ ಸಮತೂಕದ ಮಹತ್ವವನ್ನು ತನ್ನ ಕೃತಿಯ ಮೂಲಕ ತೋರಿಸಿಕೊಟ್ಟ.

ಸಾಲದ ಪುಸ್ತಕವನ್ನು ಮುಳುಗಿಸುವ ತುಕಾರಾಮನ ಕೃತಿಯ ಹಿಂದಿನ ಈ ವಿವೇಕ, ಈ ಸಮತೂಕವನ್ನು ಸರಿಮಾಡಿ ಅರ್ಥ ಮಾಡಿಕೊಳ್ಳುವುದು ಹಲವರಿಗೆ ಸಾಧ್ಯವಾಗಲಿಲ್ಲ. ಅವನು ಸಾಲದ ಹೊತ್ತಿಗೆ ಮುಳುಗಿಸಿದ ಎಂದಾಕ್ಷಣ ಅವನ ಸಂಸಾರದ ಮೇಲಿನ ಮೋಹ ಅಳಿಯಿತು ಎಂದೇ ಕೆಲವರು ಭಾವಿಸಿದರು. ಅವನು ವ್ಯವಹಾರ ಶೂನ್ಯನಾಗಿದ್ದರಿಂದ ಸಂಸಾರ ಸಾಗಿಸುವ ತಾಕತ್ತು ಅವನಲ್ಲಿರಲಿಲ್ಲ ಎಂದು ಮತ್ತೆ ಕೆಲವರು ಭಾವಿಸಿದ್ದರು. ಒಟ್ಟಿನಲ್ಲಿ ಏನೆಂದರೆ, ಅವನ ಈ ಕಾರ್ಯವು ಗೃಹಸ್ಥನಾದ ಮನುಷ್ಯನಿಗೆ ಶೋಭಿಸುವಂತಹದಲ್ಲ ಎಂದೇ ಹಲವು ಜನರು ನಂಬಿದರು. ಸಾಹುಕಾರನ ಮಗನು ಬಲವಂತದಿಂದ, ಬಯ್ದು ಸಾಲ ವಸೂಲಿ ಮಾಡಬೇಕು ದರ್ಪವನ್ನು ಮೆರೆಯಬೇಕು ಎಂದೇ ಬಹಳ ಜನರು ಬಯಸುತ್ತಾರೆ. ಸಾಲದ ಹೊತ್ತಿಗೆಯನ್ನು ಮುಳುಗಿಸುವ ಧನಿಕನ ಮಗ ಅವರ ದೃಷ್ಟಿಯಲ್ಲಿ ಭೋಳೆ, ಪುಕ್ಕ, ದರಿದ್ರ ಎಂದೇ ಅನಿಸಿತು. ಅವನು ಈ ಕಾರ್ಯವನ್ನು ದೌರ್ಬಲ್ಯದಿಂದ ಮಾಡಿದ್ದಲ್ಲ. ಕೆಲ ಮೌಲ್ಯಗಳನ್ನು ಪ್ರತಿಷ್ಠಾಪಿಸಲು ಮಾಡಿದ್ದು, ಅದರ ಸಂವರ್ಧನೆಗಾಗಿ ಮಾಡಿದ್ದು, ಎಂಬ ಸೂಕ್ಷ್ಮವನ್ನು ಅವರಿಗೆ ಅರಿಯುವದಾಗಲಿಲ್ಲ. ಇದರ ಪರಿಣಾಮವೋ ಎಂಬಂತೆ ಮುಂದೆ ಅವನ ವ್ಯವಹಾರ ಶೂನ್ಯತೆಯನ್ನು ತೋರಿಸುವ ಅಸಂಖ್ಯ ದಂತಕಥೆಯು ರಚನೆಗೊಂಡಿತು ಮತ್ತು ಅವನ ಖರೇ ಖರೆ ಪ್ರತಿಮೆಯು ವಿಧ್ವಸ್ತಗೊಂಡಿತು.

ಅವರ ಪ್ರಿಯಸಂತನೇ ಹೀಗೆ ಮಾಡಿದ್ದರೆ ?

ಈ ಕಾರ್ಯದ ಮಹತ್ವ ಯಾರಿಗೆ ಅರಿಯುವುದು ಸಾಧ್ಯವಿರುವದಿಲ್ಲವೋ ಅಂಥವರ ಮೇಲೆ ದೋಷ ಹೊರಿಸುವದು ಸರಿಯಲ್ಲ. ಆದರೆ ಯಾರು ಈ ಕಾರ್ಯದ ಮಹತ್ವವನ್ನು ಚೆನ್ನಾಗಿ ಅರಿತಿದ್ದರೋ ಅವರೂ ಸಹ ಜನರೆದುರು ಅದನ್ನು ಸರಿಯಾಗಿ ಮಂಡಿಸಲಿಲ್ಲ. ಅಂಥವರ ವರ್ತನೆ ಮಾತ್ರ ತೀರಾ ನಿಂದನೀಯವಾದುದು. ಈ ಘಟನೆಯನ್ನು ಜನರಿಗೆ ಹೇಳುವಂತಿಲ್ಲ, ಹೇಳಿದರೂ ತೇಲಿಸಿ ಹೇಳುವುದು. ಅದರ ಕುರಿತು ಯಾವ ಭಾಷ್ಯವನ್ನೂ ಮಾಡದೇ ಇರುವದು, ಭಾಷ್ಯ ಮಾಡಿದರೂ ಈ ಘಟನೆಯನ್ನು ಯೋಗ್ಯ ಸ್ವರೂಪದಲ್ಲಿ ಜನರಿಗೆ ತಲುಪದಂತೆ ನೋಡಿಕೊಳ್ಳುವುದು, ಹೀಗೆ ಅನೇಕ ಬಗೆಯಲ್ಲಿ ಮಾಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಹೀಗೆಲ್ಲ ಮಾಡುವದರ ಹಿಂದೆ ಒಂದು ಮಹತ್ವದ ಕಾರಣವಿದೆ. ಉಚ್ಚವರ್ಣದ ಜನರಿಗೆ ಶೂದ್ರನಾದ ವ್ಯಕ್ತಿಯ ಪ್ರತಿಮೆಯನ್ನು, ಉಚ್ಚವರ್ಣದ ಸಂತನನ್ನು ಮಸಕುಗೊಳಿಸುವಷ್ಟು ಬೆಳಗಿಸುವದು ಸಹಿಸುವದಾಗುವದಿಲ್ಲವೆನ್ನುವುದೇ ಮುಖ್ಯ ಕಾರಣ. ಸಾಲದ ಪುಸ್ತಕವನ್ನು ಮುಳುಗಿಸುವ ಕಾರ್ಯವನ್ನು ಅವರ ಪ್ರಿಯ ಸಂತನೇ ಮಾಡಿದ್ದರೆ ಅವರನ್ನು ಉಪೇಕ್ಷಿಸಿ, ನಿರ್ಲಕ್ಷಿಸುತ್ತಿದ್ದರೇ ಅಥವಾ ವಿಪರ್ಯಾಸಗೊಳಿಸುತ್ತಿದ್ದರೇ ಎಂಬುದನ್ನು ನಾವು ಯೋಚಿಸಿ ನೋಡಬೇಕಾದ ಸಂಗತಿ. ಪು. ಮ. ಲಾಡ್ ಎಂಬುವರು ಮಾತ್ರ ಇದಕ್ಕೆ ಅಪವಾದ ಎನ್ನಲಡ್ಡಿಯಿಲ್ಲ. ಅವರು ತುಕಾರಾಮನ ಈ ಕಾರ್ಯದ ಮರ್ಮವನ್ನು ಸರಿಯಾಗಿ ಗುರುತಿಸಿದ್ದೂ ಅಲ್ಲದೇ ಸಂಕ್ಷಿಪ್ತವಾಗಿಯಾದರೂ ಸ್ಪಷ್ಟವಾಗಿ ಅದರ ಮಹತ್ವವನ್ನು ಜನರೆದುರಿಗೆ ಮಂಡಿಸಿದರು.

ಲಾಡ ಅವರನ್ನು ಹೊರೆತುಪಡಿಸಿ ಉಳಿದ ಲೇಖಕರು ಚಿತ್ರಿಸಿದ ತುಕಾರಾಮನ ಪ್ರತಿಮೆಯು ಸಂಪೂರ್ಣ ಹುಸಿಯಾದುದು. ತುಕಾರಾಮನ ಉಜ್ವಲ ಧ್ಯೇಯವಾದದ ಮೇಲೆ ಈ ಲೇಖಕರು ಪುಕ್ಕುಲತನದ ಮಸಿ ಬಳಿದರು. ತುಕಾರಾಮನು ಹೆದರಿದವನಂತೆ, ರೋಸಿ ಹೋದನಂತೆ, ಹೇಸಿಗೆ ಮೂಡಿತಂತೆ, ಹೀಗಾಗಿ ದೇವರ ಭಕ್ತಿಯ ಕಡೆಗೆ ಹೊರಳಿದನಂತೆ. ಹೀಗೆ ಏನೂ ನಡೆಯಲಿಲ್ಲ. ಅಕ್ಷರಶಃ ಏನೂ ನಡೆಯಲಿಲ್ಲ. ಸಂಸಾರದ ಬಗೆಗೆ ಅವನಿಗೆ ಕೊನೆಯವರೆಗೂ ಉತ್ಕಟ ಪ್ರೀತಿಯಿತ್ತು. ಸಂಸಾರ ತೊರೆಯುವ ಅಗತ್ಯವಿಲ್ಲೆಂದು ಅವನು ಮತ್ತೆ-ಮತ್ತೆ ಹೇಳಿದ್ದಾನೆ.

ಅವನು ದೇವರ ಭಕ್ತಿಯ ಕಡೆಗೆ ಹೊರಳಲು ಬರಗಾಲವು ಕಾರಣ ಎಂಬುದೇನೋ ನಿಜ. ಆದರೆ ಬರಗಾಲದಿಂದಾಗಿ ಅವನು ಕುಸಿದು ಹೋದ, ಹೆದರಿದ ಮತ್ತು ಸಂಸಾರಕ್ಕೆ ಬೇಸತ್ತು, ದೇವರ ಕಡೆಗೆ ಹೊರಳಿದ ಎನ್ನುವದರಲ್ಲಿ ಅರ್ಥವಿಲ್ಲ. ಇದು ಸರಿಯಾಗಿ ಅರ್ಥವಾಗಬೇಕಾದರೆ ಬರಗಾಲದಿಂದ ಏನು ಪರಿಣಾಮವಾಯಿತು ಎಂಬುದನ್ನು ಸರಿಯಾಗಿ ಗ್ರಹಿಸುವುದು ಉಚಿತ.

ಬರಗಾಲದಂತಹ ಸಂಕಟವು ಆಕಸ್ಮಿಕವಾಗಿ ಬಂದೆರಗಿದಾಗ ಅದರ ಮೊದಲ ಹೊಡೆತವು ಸಮಾಜದ ಯಾವ ಘಟಕದ ಮೇಲೆ ಬೀಳುತ್ತದೆ? ಯಾವ ಸ್ತರದ ಜನರ ಬದುಕು ಅಸಹನೀಯವಾಗುತದೆ? ಯಾವ ಕುಟುಂಬ ಹಸಿವೆಯಿಂದ ಬಳಲುತ್ತದೆ? ಯಾರ ದನಕರುಗಳು ಸಾಯುತ್ತವೆ? ಇದೆಲ್ಲದರ ಭೀಕರ ಪರಿಣಾಮವನ್ನು ಕಡು ಬಡವರು, ಸಾಮಾಜಿಕವಾಗಿ ತಳವರ್ಗದವರು, ಕೂಲಿಕಾರರು, ಆಯಗಾರರು, ಆರ್ಥಿಕವಾಗಿ ದುರ್ಬಲವಾಗಿದ್ದವರು ರೈತರು ಅನುಭವಿಸಬೇಕಾಗುತ್ತದೆ. ಅವರೇ ಈ ಆಘಾತಕ್ಕೊಳಗಾಗುವುದು ಸತ್ಯ. ಧನಿಕರ ಸ್ಥಿತಿಯು ಇದಕ್ಕೆ ವ್ಯತಿರಿಕ್ತವಾಗಿರುತ್ತದೆ. ಹಿಂದಿನ ಕಾಲಕ ಕುರಿತು ಯೋಚಿಸುವುದಾದರೆ, ಧನಿಕರ ಹತ್ತಿರ ಎರಡು-ಮೂರು ವರುಷಗಳವರೆಗಿನ ಮೇವು, ಹುಲ್ಲುಗಳ ಸಂಗ್ರಹ, ಬಣವೆಗಳಿರುತ್ತಿದ್ದವು. ಮನೆಯಲ್ಲಿ ನಗದು ಹಣ ಚಿನ್ನದ ನಾಣ್ಯವಿರುತ್ತಿತ್ತು. ಬರಗಾಲದಲ್ಲಿ ಅವರು ಒಂದಕ್ಕೆರಡು ಪಟ್ಟು ದರ ಹಚ್ಚಿ ಜನರಿಗೆ ಕಾಳುಕಡ್ಡಿ, ಮೇವನ್ನು ಮಾರುತ್ತಿದ್ದರು. ಸಿಕ್ಕಾಪಟ್ಟೆ ಬಡ್ಡದರದಲ್ಲಿ ಸಾಲ ನೀಡುತ್ತಿದ್ದರು. ಅವರ ಮನೆಯಲ್ಲಿಯ ಪಾತ್ರೆ-ಪರಡಿಯನ್ನಷ್ಟೇ ಅಲ್ಲ, ಹೊಲಗದ್ದೆಗಳನ್ನು ಕಸಿದುಕೊಳ್ಳುತ್ತಿದ್ದರು. ಅಂದರೆ ಧನಕರಿಗೆ ಬರಗಾಲದ ಹೊಡೆತವಂತೂ ಬೀಳುತ್ತಿರಲೇ ಇಲ್ಲ. ಬದಲಿಗೆ ತಮ್ಮ ಸಂಪತ್ತು ಬೆಳೆಸುವ ಸುವರ್ಣ ಅವಕಾಶ ಅನಾಯಾಸವಾಗಿ ಸಿಗುತ್ತಿತ್ತು. ರೋಗ ಉಲ್ಬಣಗೊಂಡರೆ ವೈದ್ಯರಿಗೆ ಹೊಡೆತ ಬೀಳುತ್ತದೋ, ಅಥವಾ ಲಾಭವಾಗುತ್ತದೋ? ಹಾಗೆಯೇ ಇದು, ನಾನು ಬಾಲ್ಯದಲ್ಲಿದ್ದಾಗ ಸುತ್ತ ಮುತ್ತಲಿನ ಸಮಾಜದಲ್ಲಿ ಇಂಥ ಪರಿಸ್ಥಿತಿಯನ್ನು ಕಂಡಿದ್ದೇವೆ.

ಪತ್ನಿಯ ಸಾವು ಅನಾರೋಗ್ಯದಿಂದಲೇ.

ಈಗ ತುಕಾರಾಮನ ಕುಟುಂಬದ ಮೇಲೆ ಬರಗಾಲದ ಪರಿಣಾಮವೇನಾಯಿತು ಎಂಬುದನ್ನು ಅರಿತುಕೊಳ್ಳೋಣ. ಅವನ ಮೊದಲ ಹೆಂಡತಿ ಮತ್ತು ಮಗ ಇಬ್ಬರೂ ಬರಗಾಲದಲ್ಲಿ ಹಸಿವೆಯಿಂದ ಚಡಪಡಿಸಿ ಸತ್ತರೆಂದು ಹಲವು ಲೇಖಕರ ಅಂಬೋಣ. ವಾ. ಸಿ. ಬೇಂದ್ರೆ ಮಾತ್ರ ಇದನ್ನು ನಿರಾಕರಿಸಿದ್ದಾರೆ. ಮತ್ತದು ಯೋಗ್ಯ ಎಂದೆನಿಸುತ್ತದೆ. (ಸಂತ ತುಕಾರಾಮ ಪು ೨೭-೨೮) ತುಕಾರಾಮನ ತಂದೆ ಬೊಲ್ಲಾಬಾ ಬಡ್ಡಿ ವ್ಯವಹಾರ ಮಾಡುವ ಸಾಹುಕಾರನಾಗಿದ್ದ. ಇದು ಹಲವು ತಲೆಮಾರಿನಿಂದ ನಡೆದು ಬಂದ ವೃತ್ತಿ. ಧನಿಕನಾಗಿದ್ದ ಮಹಾಜನನಾಗಿದ್ದ ಬೊಲ್ಲೊಬಾನ ಸೊಸೆ, ಮೊಮ್ಮಗ ಹಸಿವೆಯಿಂದ ಒದ್ದಾಡಿ ಸತ್ತರು ಎಂದು ಭಾವಿಸದೇ? ನಮ್ಮಲ್ಲಿಯ ಗ್ರಾಮೀಣ ಪರಿಸ್ಥಿತಿ ಮತ್ತು ಸಮಾಜ ರಚನೆಯ ಅರಿವಿರುವ ಯಾವ ಮನುಷ್ಯ ಅದರ ಮೇಲೆ ವಿಶ್ವಾಸವಿಡಬಲ್ಲ? ಒಂದು ವೇಳೆ ಧನಿಕನ ಕುಟುಂಬ ಹಸಿವೆಯಿಂದ ತೀರಿಕೊಂಡಿದ್ದೆಯಾಗಿದ್ದರೆ ಆ ಊರಿನ ಅವರಿಗಿಂತಲೂ ಬಡವರಾದವರಂತೂ ಬದುಕುಳಿಯುವುದು ಸಾಧ್ಯವೇ ಇರಲಿಲ್ಲ. ವಾಸ್ತವವೇನೆಂದರೆ ತುಕಾರಾಮನ ಪತ್ನಿ, ಮಗನ ಸಾವು ಅನ್ನದ ಕೊರತೆಯಿಂದ ಆದುದಲ್ಲ, ಅನಾರೋಗ್ಯದಿಂದ ಆದದ್ದು.

ಅನ್ನದ ಕೊರತೆಯಿಂದಲ್ಲ

ತುಕಾರಾಮನು ಸಂವೇದನಾಶೀಲ ವ್ಯಕ್ತಿಯಾಗಿದ್ದ. ಅವನಿಗೆ ಸಾಮಾನ್ಯ ಜನರ ಬಗೆಗೆ ಅಪಾರ ಕರುಣೆಯಿತ್ತು. ನ್ಯಾಯದ ಕುರಿತಾದ ಅವನ ಅರಿವು ಪ್ರಗಲ್ಭವಾಗಿತ್ತು. ಇದೆಲ್ಲವೂ ಒಳಗೊಂಡಿದ್ದರಿಂದ ಬರಗಾಲದಲ್ಲಿ ಅವನು ಬಡವರನ್ನು ಬದುಕಿ ಉಳಿಸಲು ಸಹಾನುಭೂತಿಯ ಹೆಜ್ಜೆ ಎತ್ತಿದನು. ಪಾಯುಶಃ ಅವರಿಗೂ ತನ್ನ ಧಾನ್ಯದ ಭಂಡಾರ, ಕಣಜವನ್ನು ಅವನು ಖಾಲಿ ಮಾಡಿದನು. ಸಾಲದ ಪುಸ್ತಕವನ್ನು ನೀರಿನಲ್ಲಿ ಮುಳುಗಿಸಿ ಜನರನ್ನು ಸಾಲದ ಹೊರೆಯಿಂದ ಒತ್ತಡದಿಂದ ವಿವಂಚನೆಯಿಂದ ಖಾಯಂ ಮುಕ್ತಗೊಳಿಸಿದನು. ವೈದ್ಯನು ರೋಗದಿಂದ ಬಳಲುವ ಕಡುಬಡವರಿಂದ ಔಷಧೋಪಚಾರದ ಹಣ ವಸೂಲಿ ಮಾಡುವುದು ಸಾಧ್ಯವಿಲ್ಲವೆನ್ನುವದು ಗೊತ್ತಿದ್ದೂ ಅವರ ಪ್ರಾಣ ಉಳಿಸಲು ಉಪಚಾರ ಕೈಕೊಳ್ಳುವಂತೆ, ತುಕಾರಾಮನು ಹಾಗೆ ಮಾಡಿದನು. ಇದರ ಪರಿಣಾಮ ಅವನ ಆರ್ಥಿಕ ಪರಿಸ್ಥಿತಿಯ ಮೇಲಾಗುವದು ಸಹಜ. ಧನಿಕನಾಗಿದ್ದರೂ ಅವನು ಎಷ್ಟು ಜನರಿಗೆ ಸಹಾಯ ಮಾಡಬಲ್ಲ ? ಈ ಕಾರಣದಿಂದ ಅವನು ದರಿದ್ರನಾದ ಎಂದಲ್ಲ. ಆದರೆ ಅವನ ಆರ್ಥಿಕ ಸಂಪತ್ತು ಕ್ಷೀಣಗೊಂಡಿತು, ಎನ್ನುವದರಲ್ಲಿ ಸಂಶಯವಿಲ್ಲ. ಎಂದಾಕ್ಷಣ ಪತ್ನಿ ಮಗ ಹಸಿವೆಯಿಂದ ಸತ್ತರು ಎಂದರ್ಥವಲ್ಲ. ‘ನಾನು ನಿನ್ನ ಬಳಿಗೆ ಬಂದಿದ್ದೇನೆ ಎಂದಾಗ, ಅನ್ನದ ಕೊರತೆಯಿಂದ ಬಂದಿದ್ದೇನೆ ಎಂದು ಭಾವಿಸ ಬೇಡವೆಂದು’ ಪ್ರತ್ಯಕ್ಷ ದೇವರಿಗೇ ಒಮ್ಮೆ ಎಚ್ಚರಿಸಿದ್ದಾನೆ ಎಂಬುದನ್ನು ನಾವು ಮರೆಯುವಂತಿಲ್ಲ. ನಾನು ಉಪವಾಸದಿಂದ ಹಸಿವೆಯಿಂದ ಸಾಯುತ್ತಿದ್ದೇನೆ ಎಂಬ ಚಿಂತೆಯಿಲ್ಲ. ನಾವು ಯಾರದ್ದೂ ತಿನ್ನುತ್ತಿರಲಿಲ್ಲ ಅಥವಾ ಉಪವಾಸ ಬೀಳುತ್ತಿರಲಿಲ್ಲ. ಆದರೆ ಲೋಕ ಹಿತದ ದೃಷ್ಟಿಯಿಂದ ನಾನು ಅಲೆದಾಡುತ್ತಿದ್ದೇನೆ -ಎಂದೆಲ್ಲ ಯೋಚಿಸುವ ಮನುಷ್ಯನ ಕುಟುಂಬದ ಜನ ಹಸಿವೆಯಿಂದ ಬಳಲುತ್ತಿದ್ದರು ಎಂದರೆ ಯಾರು ವಿಶ್ವಾಸವಿಡುತ್ತಾರೆ ?

ತುಕಾರಾಮನ ಈ ವರ್ತನೆಯ ಅರ್ಥ ಎಂತೆಂಥ ಬುದ್ದಿವಂತರಿಗೂ ಗೊತ್ತಾಗಲಿಲ್ಲ. ಧನಿಕನ ಮಗನಿಗೆ ನಾಲ್ಕಾರು ತಲೆಮಾರಿಗೆ ಸಾಲುವಷ್ಟು ಸಂಪತ್ತು ಕಬಳಿಸುವ ಅವಕಾಶ ಸಿಕ್ಕಾಗ ಅವನು ತನ್ನ ಸಾಹುಕಾರಿಕೆಯನ್ನೇ ಹರಾಜು ಹಾಕುವದನ್ನು ಕಂಡು ಅವನು ಜನರ ದೃಷ್ಟಿಯಲ್ಲಿ ವ್ಯವಹಾರ ಶೂನ್ಯನೆಂದೆನಿಸಿದ. ಜನರಿಗೆ ವಂಚಿಸಬಾರದೆಂದು ಅವನು ನಿರ್ಧರಿಸಿದಾಗ, ಬೇಕು-ಬೇಕಾದವನು ಬಂದು ಇವನನ್ನು ವಂಚಿಸಬಲ್ಲ ಎಂದು ಜನರಿಗೆ ಅನಿಸಿರಬೇಕು. ಮೋಸ ಹೋಗುವಷ್ಟು ಮುಗ್ಧನಲ್ಲದಿದ್ದರೂ ಹಾಗೆಯೇ ಬೇರೆಯವರನ್ನು ವಂಚಿಸುವ ಕ್ಷಮತೆ ಹೊಂದಿಯೂ ವಿವೇಕ ಜಾಗೃತವಾಗಿದ್ದರಿಂದ ಯಾರಿಗೂ ಮೋಸಪಡಿಸಬಾರದೆಂಬ ನಿರ್ಣಯವನ್ನು ತೆಗೆದುಕೊಳ್ಳುವ ಮನುಷ್ಯನು ಈ ಭೂಮಿಯಲ್ಲಿದ್ದಾನೆಯೇ ಎಂಬ ವಿಷಯ ಹಲವರಿಗೆ ಗೂಢವೆನಿಸಿತ್ತು. ಆರ್ಥಿಕವಾಗಿ ತುಕಾರಾಮನ ಕುಟುಂಬ ಇಳಿಮುಖ ಹೊಂದತೊಡಗಿತು ಎಂದಾಗ ಅವನು ದಿವಾಳಿ ಹೊಂದಿರಲಿಲ್ಲ. ಅವನು ಸ್ವಯಿಚ್ಛೆಯಿಂದ ದಿವಾಳಿಕೋರನಾಗಲು ಬಯಸಿದ. ತನ್ನ ಸಾಹುಕಾರಿಕೆಯ ಸಾಮ್ರಾಜ್ಯವನ್ನು ಅವನೇ ಕೈಯಾರೆ ವಿಸರ್ಜನೆ ಮಾಡಿದ.

ವಿಠ್ಠಲನತ್ತ ಮುಖ ಮಾಡುವ ನಿಜವಾದ ಅರ್ಥ

ಈ ಸಂಕಟಕ್ಕೆ ಕುಗ್ಗಿದ್ದಲ್ಲ, ಬಗ್ಗಿದ್ದಲ್ಲ, ಹೆದರಿದ್ದಲ್ಲ, ಸಂಸಾರದ ಬಗೆಗೆ ಅಸಹ್ಯಗೊಂಡಿದ್ದಲ್ಲ, ಬೇಸತ್ತಿದ್ದಲ್ಲ, ಹಾಗೇ ಇದೊಂದು ಉಚ್ಚಕೋಟಿಯ ಧ್ಯೇಯವಾದವಾಗಿತ್ತು. ಇದೊಂದು ಮಾನವೀಯ ಯಾತ್ರೆಯ ಉತ್ತುಂಗ ನೆಗೆತವಾಗಿತ್ತು. ಖರೆಯೆಂದರೆ ಇದೇ ಕಾರಣಕ್ಕಾಗಿ ಅವನು ವಿಠ್ಠಲನ ಕಡೆಗೆ ಮುಖ ಮಾಡಿದ್ದ, ಇದುವೇ ಅವನ ಈಶ್ವರ ಪೂಜೆಯಾಗಿತ್ತು. ದೀನ-ದಲಿತರನ್ನು ಯಾರು ಅಪ್ಪಿಕೊಳ್ಳುತ್ತಾರೋ ಅವನೇ ನಿಜವಾದ ಸಾಧು-ಸಂತ, ದೇವರು ಇಂಥ ಸಾಧು-ಸಂತರ ಬಳಿಯಲ್ಲೇ ಇರುತ್ತಾನೆ ಎಂದವನು ದೇವರ ಪ್ರಾಪ್ತಿಯ ವ್ಯಾಖ್ಯೆ ನೀಡಿದ್ದಾನೆ. ಆ ಸಾಧುತ್ವ ಆ ದೇವರು ದುಃಖ-ಸಂಕಟ ಗ್ರಸ್ತ ಜನರ ಕಂಗಳಲ್ಲಿ ಕಣ್ಣೀರು ತರುವ ಮಾರ್ಗದಿಂದಲ್ಲ. ಅವರ ಕಂಬನಿಯನ್ನು ಒರೆಸುವ ಮಾರ್ಗದಿಂದ ಪ್ರಾಪ್ತವಾಗುತ್ತಾನೆ ಎಂಬ ಶ್ರದ್ಧೆ ಅವನದಾಗಿತ್ತು. ಅವನು ಸಂಸಾರಕ್ಕೆ ಬೇಸತ್ತು ದೂರದಲ್ಲೆಲ್ಲೋ ಇದ್ದ ದೇವರ ಕಡೆಗೆ ಮುಖ ಮಾಡಿದ್ದಲ್ಲ, ಸಂಸಾರ ಸಾಗಿಸುತ್ತಲೇ ಮಾನವೀಯತೆಯನ್ನು ಜೋಪಾಸನೆ ಮಾಡುವ ಸ್ವರೂಪದಲ್ಲಿರುವ ದೇವರ ಪ್ರಾಪ್ತಿಗಾಗಿ ಅವನು ತನ್ನ ಸರ್ವಸ್ವವನ್ನು ಪಣಕೊಡ್ಡಿದ ಎನ್ನುವದೇ ನಿಜವಾದದ್ದು. ತುಕಾರಾಮನು ಉತ್ಕಟತೆಯಿಂದ ವಿಠ್ಠಲನ ಕಡೆಗೆ ಮುಖಮಾಡಿದ್ದು ಅಲ್ಲದೆ ಅವನನ್ನೇ ದೃಢವಾಗಿ ತಬ್ಬಿಕೊಳ್ಳಲು ಮತ್ತೆ ಒಂದು ಪ್ರಬಲ ಕಾರಣವಿತ್ತು. ಒಂದೆಡೆ ಅವನು ಶೂದ್ರತ್ವವನ್ನು ಉದ್ಧಾರ ಮಾಡಿ ಅವನನ್ನು ಅಪಮಾನಗೊಳಿಸುವ, ತುಚ್ಛವಾಗಿ ಕಾಣುವ ವೈದಿಕ ಪರಂಪರೆಯಿತ್ತು. ಅವನು ಸ್ವೀಕರಿಸಿದ ಜೀವನ ಕ್ರಮಕ್ಕೆ ಅವರ ಬೆಂಬಲ ಸಿಗುವದಾಗಲಿ ಪ್ರೋತ್ಸಾಹ ಸಿಗುವದಾಗಲಿ, ಅಸಾಧ್ಯದ ಮಾತಾಗಿತ್ತು. ಅದು ಕಡುವಾಗಿ ವಿರೋಧಿಸುವ, ತುಚ್ಛತೆ ಮತ್ತು ತಿರಸ್ಕಾರವೇ ಸಿಗುವ ಸಾಧ್ಯತೆಯಿತ್ತು. ಇಂಥ ಸ್ಥಿತಿಯಲ್ಲಿ ಲಾಭವಿಲ್ಲದೆ ಪ್ರೀತಿಸುವ, ತಾಯಿಯಂತೆ ಕರುಣಾಳು ಮತ್ತು ವಾತ್ಸಲ್ಯಮಯಿಯಾದ ವಿಠ್ಠಲನ ಸಹಾಯದಿಂದಲೇ ಅವನು ಹೋರಾಟಕ್ಕೆ ಸನ್ನದ್ಧನಾದ ಎಂಬುದೇ ಮತ್ತೊಂದು ಕಾರಣ.

ದೌರ್ಬಲ್ಯವಲ್ಲ, ಧ್ಯೇಯನಿಷ್ಠೆ

ಈ ವಿಷಯದಲ್ಲಿ ತುಕಾರಾಮನ ಆಧುನಿಕ ಕಾಲದ ಲೇಖಕರಾಗಲಿ ಇತರರಾಗಲಿ ಯಾವ ನಿಲುವನ್ನು ತಾಳಬೇಕು ಎಂಬ ಪ್ರಶ್ನೆಯು ನಮ್ಮೆಲ್ಲರ ಎದುರಿಗೆ ನಿರ್ಮಾಣಗೊಂಡಿದೆ. ಹಲವರು ಎಂಥ ನಿಲುವು ತಾಳಿದರು ಎನ್ನುವದನ್ನು ನಾವು ಕಂಡಿದ್ದೇವೆ. ನಾವೂ ಅದನ್ನೇ ಸತ್ಯವೆಂದು ನಂಬುವದೇ? ದೌರ್ಬಲ್ಯದಿಂದ ಸಂಸಾರ ಮುಳುಗುವದೇ ಬೇರೆ, ಮತ್ತು ಬೇರೊಂದು ಧ್ಯೇಯಕ್ಕಾಗಿ, ಕರ್ತವ್ಯದ ಪರಿಪಾಲನೆಗಾಗಿ ಎತ್ತಿದ ಹೆಜ್ಜೆಯಿಂದಾಗಿ ಸಂಸಾರ ಬಿರುಕು ಬಿಡುವುದೇ ಬೇರೆ. ತುಕಾರಾಮನ ಸಂಸಾರಕ್ಕೆ ಬಿರುಕು ಬಿಟ್ಟಿದ್ದೇನೋ ನಿಜ, ಅದು ಮೂಲೆಗುಂಪಾಗುವ ಸ್ಥಿತಿಯೂ ಬಂತು. ಆದರೆ ಒಂದನೆಯದಾಗಿ ಅವನು ಬದುಕಿದ್ದಾಗ ಸಂಪೂರ್ಣ ಮುರಿದು ಬೀಳಲಿಲ್ಲ. ಎರಡನೆಯದಾಗಿ ಅಲ್ಪಸ್ವಲ್ಪ ಮೂಲೆಗುಂಪಾಗುವ ಸ್ಥಿತಿ ಬಂದರೂ, ಅದು ದೌರ್ಬಲ್ಯದಿಂದಾಗಿಯಲ್ಲ, ಧ್ಯೇಯನಿಷ್ಠೆಯಿಂದಾಗಿ ಸಂಸಾರ ನಡೆಸುವ ತಾಕತ್ತು ಅವನಲ್ಲಿ ಇರಲಿಲ್ಲ ಎಂದೇನೂ ಅಲ್ಲ. ಆದರೆ ಆ ದಿಟ್ಟತನವನ್ನು ವೈಯಕ್ತಿಕ ಸಂಸಾರ ಸಾಗಿಸಲು ಬಳಸುವುದಕ್ಕಿಂತ ಸಮಾಜದ, ರಾಷ್ಟ್ರದ ಒಂದು ವ್ಯಾಪಕವಾದ, ವಿಶಾಲವಾದ ಜನ ಸಮುದಾಯದ ಸಂಸಾರಕ್ಕಾಗೇ ಬಳಸಬೇಕೆಂಬ ವ್ರತವನ್ನು ಅವನು ಸ್ವೀಕರಿಸಿದ. ಹಾಗೆ ಮಾಡುವಾಗ ಅವನಿಗೆ ಇಲ್ಲಿಯ ಪ್ರಸ್ಥಾಪಿತರ ಜತೆಗೆ ಭಯಂಕರ ಸಂಘರ್ಷ ಮಾಡಬೇಕಾಯಿತು. ಇದರಿಂದಾಗಿ ಅವನ ವ್ಯಕ್ತಿಗತ ಸಂಸಾರದ ಮೇಲೆ ಆಘಾತವಾಯಿತು. ವ್ಯಾಚ್ಯಾರ್ಥದಲ್ಲೂ, ವ್ಯಂಗ್ಯಾರ್ಥದಲ್ಲೂ ರಕ್ತಸಿಕ್ತರಾಗಬೇಕಾಯಿತು ಎನ್ನುವುದಂತೂ ಸತ್ಯ. ಆದರೆ ಇದನ್ನೆಲ್ಲ ಅವನು ಸ್ವತಃ ತಾನಾಗಿಯೇ ಸ್ವೀಕರಿಸಿದನು. ಗೊತ್ತಿದ್ದು ಸ್ವೀಕರಿಸಿದನು. ಇದೇ ಮಾನವೀಯತೆಯ ಮಾರ್ಗ. ಇದೇ ನ್ಯಾಯದ ಮಾರ್ಗವೆಂಬ ವಿವೇಕ ಬುದ್ಧಿಯಿಂದ ಸ್ವೀಕರಿಸಿದ್ದನು. ತನ್ನ ಸ್ವಂತ ಸಂಸಾರ ಮುರಿದು ಬೀಳದೆ ಸಮಾಜ ಕಾರ್ಯ ನಡೆಯುವಂತಾಗಿದ್ದರೆ ಅದವನಿಗೆ ಆನಂದ ನಿಡುವಂತಹುದೇ ಆಗಿತ್ತು. ಆದರದು ಅಸಾಧ್ಯವಾಗಿದ್ದರಿಂದ ಸಂಸಾರಕ್ಕೆ ಬಿಸಿ ತಟ್ಟುತ್ತದೆ, ಝಳ ತಟ್ಟುತ್ತದೆ, ಸುಟ್ಟು ಹೋಗುತ್ತದೆ ಎನ್ನುವುದು ಅವನಿಗೆ ಮೊದಲೇ ಗೊತ್ತಿತ್ತು. ಹಾಗಾದರೆ ಇದನ್ನು ಪುಕ್ಕಲತನ ಎನ್ನುವದೇ? ಅಥವಾ ಬೇಸತ್ತ ಎನ್ನಬಹುದೇ ಅಥವಾ ಸಂಸಾರಕ್ಕೆ ರೋಸಿದ ಎನ್ನಬಹುದೇ ? ಈ ಪ್ರಶ್ನೆಗೆ ನಕಾರತ್ಮಕ ಉತ್ತರ ಎನ್ನುವದು ಖಚಿತ. ಆದರೆ ಈ ಕೃತಿಗೆ ಅಂಥ ಅನ್ವಯಾರ್ಥ ನೀಡುವ ಚರಿತ್ರೆಯ ಲೇಖನಕ್ಕೆ ಪೂರ್ವಗ್ರಹ ದೂಷಿತ ಮತ್ತು ಪಕ್ಷಪಾತಿ ಎನ್ನುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ.

ತಿಲಕರ ಸೆರೆವಾಸವೂ ವ್ಯವಹಾರಶೂನ್ಯದ ದ್ಯೋತಕವೇ?

ಈ ಲೇಖಕರು ತಿಲಕರ ಸೆರೆವಾಸವನ್ನು, ಆಗರಕರರು ಸಮಾಜ ಕಾರ್ಯಕ್ಕಾಗಿ ಮಾಡಿದ ಕುಟುಂಬದ ಉಪೇಕ್ಷೆಯನ್ನು ಸಾವರಕರ ಕಡಲಿನಲ್ಲಿ ಧುಮುಕಿದ್ದು, ಇಂಥ ಕಾರ್ಯವನ್ನು ವ್ಯವಹಾರ ಶೂನ್ಯದ, ಸಂಸಾರದಿಂದ ದೂರ ಸರಿದ, ಹೆದರಿದ ಆರೋಪವನ್ನು ಮಾಡುತ್ತಾರೆಯೇ? ಹಾಗೊಂದು ವೇಳೆ ಮಾಡುವವರಾಗಿದ್ದರೆ ಅವರು ತುಕಾರಾಮನನ್ನು ಚಿತ್ರಿಸಿದ ಪ್ರತಿಮೆಯು ಪ್ರಾಮಾಣಿಕತನದಿಂದ ಕೂಡಿದೆ ಎನ್ನಲಡ್ಡಿಯಿಲ್ಲ. ಪ್ರತ್ಯಕ್ಷದಲ್ಲಿ ಅವರು ಇಂಥದ್ದೇನೂ ಎಂದಿಗೂ ಮಾಡಲಾರರು. ಹೀಗಿದ್ದಾಗ ತುಕಾರಾಮನ ಜೀವನ ಕಾರ್ಯವನ್ನು ಅರ್ಥೈಸುವಾಗ ಈ ಜನ ಹೀಗೇಕೆ ಗೊಂದಲಕ್ಕೊಳಗಾಗುತ್ತಾರೆ. ಬ್ರಾಹ್ಮಣರ ಚೌಕಟ್ಟಿನಲ್ಲಿ ಹೊಂದಿಕೊಳ್ಳದವರ ಪ್ರತಿಮೆಯನ್ನು ಬಹಿರಂಗವಾಗಿಯೇ ಇಲ್ಲವೇ ಕದ್ದು ಮುಚ್ಚಿ ಇದೇ ರೀತಿಯಲ್ಲಿ ಛಿನ್ನ ವಿಚ್ಛಿನ್ನಗೊಳಿಸಬೇಕಾಗುತ್ತದೆ. ಅದು ಅವನ ವಾರಸುದಾರಿಕೆ.

ಕೊಳಕು ಲೆಕ್ಕಣಿಕೆ

ಈ ಲೇಖಕರ ನಿಲುವಿನಂತೆ ಜಗತ್ತಿನ ಮಹಾನ್ ಸ್ತ್ರೀ ಪುರುಷರ ಚರಿತ್ರೆಯನ್ನು ಅರ್ಥೈಸಲು ಹೊರಟರೆ, ಈವರೆಗಿನ ಎಲ್ಲ ಸ್ವಾತಂತ್ರ್ಯಯೋಧರು ಈ ಸಂಸಾರಕ್ಕೆ ರೋಸಿಹೋಗಿ ಯುದ್ಧ ಮಾಡುವ ಪಲಾಯನವಾದಿಗಳೆನಿಸುತ್ತಾರೆ. ಭಗತ್‌ಸಿಂಗನಂತಹ ಮಹಾಪುರುಷನು ಕುಟುಂಬದ ಜವಾಬ್ದಾರಿಯನ್ನು ಹೊರಲು ಸಾಧ್ಯವಿಲ್ಲದ್ದರಿಂದ ಕುಟುಂಬದ ಮಟ್ಟಿಗೆ ಕೃತಘ್ನ ಎಂದೆನಿಸಬಹುದು. ಸಮಾಜಕ್ಕಾಗಿ, ರಾಷ್ಟ್ರದ ಹಿತಕ್ಕಾಗಿ, ಸಂರಕ್ಷಣೆಗಾಗಿ ವಿಕಾಸಕ್ಕಾಗಿ ಸ್ವಂತ ಬದುಕನ್ನೇ ನಿವಾಳಿಸಿ ಒಗೆಯುವ ಸ್ತ್ರೀ ಪುರುಷರನ್ನು ಬುದ್ಧಿಗೇಡಿ ಎಂದು ಕರೆಯುವ ಪ್ರಯತ್ನ ನಡೆಯಬಹುದು. ಆದರೆ ಪ್ರತ್ಯಕ್ಷದಲ್ಲಿ ನಾವು ಇಂಥದ್ದೇನೂ ಮಾಡುವುದಿಲ್ಲ. ಶ್ರೇಷ್ಠ ವ್ಯಕ್ತಿಗಳ ಚರಿತ್ರೆಯ ಮೌಲ್ಯಮಾಪನ ಮಾಡುವಾಗ ಸಂಕುಚಿತ ಒರೆಗಲ್ಲು ಹಚ್ಚುವವರ ಲೆಕ್ಕಣಿಕೆಯೆ ಕೊಳಕು ಇಲ್ಲವೇ ಹುಳುಕು ಎಂದೆನ್ನಬೇಕಾಗುತ್ತದೆ.

ಬ್ರಾಹ್ಮಣದ ಚೌಕಟ್ಟು ಕಿತ್ತೊಗೆಯಬೇಕು

ಲೇಖಕನಾದವನು ಒಂದು ವಿಷಯದ ಕುರಿತು ಬರೆಯುವಾಗ, ಅವರು ಆಯಾ ವಿಷಯಕ್ಕನುಸರಿಸಿ ಆ ಚೌಕಟ್ಟು ಸಿದ್ದಪಡಿಸುವುದಿಲ್ಲ. ಅವರ ಬಳಿಯಲ್ಲಿ ಅದು ಮೊದಲೇ ಸಿದ್ಧಗೊಂಡಿರುತ್ತದೆ. ಆ ಚೌಕಟ್ಟಿಗೆ ಬ್ರಾಹ್ಮಣ್ಯದ ಚೌಕಟ್ಟು ಎಂದರೂ ತಪ್ಪಾಗಲಿಕ್ಕಿಲ್ಲ, ಅವಾಸ್ತವ ಅಥವಾ ಅತಿಶಯೋಕ್ತಿಯಾಗಲಿಕ್ಕಿಲ್ಲ. ಅವರು ಬರೆಯಲು ಆರಂಭಿಸಿದಾಗ ವಿಷಯ ಯಾವುದೇ ಇರಲಿ ಅದನ್ನವರು ಆ ಚೌಕಟ್ಟಿನಲ್ಲೇ ಕೂರಿಸುತ್ತಾರೆ. ಅದು ಹೊಂದಿಕೊಳ್ಳದಿದ್ದರೆ ಬಡಿದು ಮುದುಡಿ ಕೂರಿಸುತ್ತಾರೆ. ಅದನ್ನು ಕೆತ್ತಿ ಕೊರೆದು ತೋರಿಸುತ್ತಾರೆ. ಈ ಪ್ರಯತ್ನದಿಂದಾಗಿ ಅವರ ಚೌಕಟ್ಟು ಮಾತ್ರ ಖಾಯಂ ಸುರಕ್ಷಿತವಾಗಿರುತ್ತದೆ. ವಿಷಯ ಮಾತ್ರ ಅನೇಕ ಸಲ ರಕ್ತಸಿಕ್ತವಾಗುತ್ತದೆ. ಅದರ ಅಂಗ ಉಪಾಂಗ ಕತ್ತರಿಸಿ ಹಾಕಲಾಗುತ್ತದೆ. ಚೌಕಟ್ಟು ಪ್ರಭಾವಿಯಾಗಿರುತ್ತದೆ, ವಿಷಯ ಮಾತ್ರ ಹತಬಲಗೊಳ್ಳುತ್ತದೆ. ಉಸಿರುಗಟ್ಟಿ ಬಾಡಿ ಹೋಗುತ್ತದೆ. ವಿಷಯದ ಸ್ವರೂಪ, ಪ್ರಾಪ್ತಿಯನ್ನು ಕಂಡು ಚೌಕಟ್ಟಿಗೆ ಆಕಾರ ನೀಡುವಂತಿಲ್ಲ. ಬದಲಿಗೆ ಚೌಕಟ್ಟಿನ ಬಂದಿಖಾನೆಯಲ್ಲಿ ವಿಷಯವನ್ನೇ ಬಂಧಿಸಲಾಗುತ್ತದೆ. ತುಕಾರಾಮನ ಚರಿತ್ರೆ ಬರೆಯುವಾಗಲೂ ಸಹ ಈ ಲೇಖಕರ ಹತ್ತಿರ ಈ ಚೌಕಟ್ಟು ತಯಾರು ಇರುತ್ತದೆ. ಸ್ವಾಭಾವಿಕವಾಗಿಯೇ, ವೈದಿಕ, ಬ್ರಾಹ್ಮಣ ಹಿತಾಸಕ್ತಿಗೆ ಬಾಧಕ ಅಥವಾ ಮಾರಕವಾಗುವಂಥ ವಾಸ್ತವಕ್ಕೆ ಅಲ್ಲಿ ಅವಕಾಶ ಕೊಡಬಾರದೆಂದು ಈ ಲೇಖಕ ಮೊದಲೇ ನಿರ್ಧರಿಸಿರುತ್ತಾನೆ. ತುಕಾರಾಮನ ಬಗೆಗೆ ಅದೆಷ್ಟೇ ಅದರ ಭಾವ ತೋರಿದರೂ, ಒಪ್ಪಿತ ವಿಚಾರಗಳಿಗೆ ಎಲ್ಲೂ ಬಾಧೆ ಬರದಂತೆ ಎಚ್ಚರ ವಹಿಸುತ್ತಾನೆ. ಹಲವು ಬ್ರಾಹ್ಮಣೇತರ ಲೇಖಕರೂ ಈ ಚೌಕಟ್ಟಿನಲ್ಲಿ ಸಿಕ್ಕಿ ಬೀಳುತ್ತಾರೆ. ತುಕಾರಾಮನ ವಾಸ್ತವ ವ್ಯಕ್ತಿತ್ವವನ್ನು ಅರಿಯಲು ನಾವು ಈ ಲೇಖಕರು ಬಳಸಿದ ಚೌಕಟ್ಟನ್ನು ಕಿತ್ತೊಗೆಯಬೇಕಾಗುತ್ತದೆ.

ಈ ಚೌಕಟ್ಟಿನಲ್ಲಿ ಸಿಲುಕಿದ ತುಕಾರಾಮನ ಪ್ರತಿಮೆಯು ಹೇಗೆ ಕುಬ್ಜಗೊಂಡಿತು, ಕುಂಠಿತಗೊಂಡಿತು ಎನ್ನುವುದನ್ನು ನಾವು ಈಗಾಗಲೇ ಚೆನ್ನಾಗಿ ಅರಿತುಕೊಂಡಂತಾಗಿದೆ. ಅಂದರೆ ಇದು ಕೇವಲ ಸಾಲದ ಕಿರ್ದಿ ಪುಸ್ತಕ ಮುಳುಗಿಸಿದ್ದಕ್ಕೆ, ಬರಗಾಲದಲ್ಲಿ ದೇವರ ಭಕ್ತಿಯ ಕಡೆಗೆ ಮುಖ ಮಾಡಿದ್ದಕ್ಕಷ್ಟೇ ಸೀಮಿತವಾದುದಲ್ಲ. ತುಕಾರಾಮನ ಒಟ್ಟೂ ಚರಿತ್ರೆಯನ್ನೇ ಜನರೆದುರಿಗೆ ಮಂಡಿಸುವಾಗ ಈ ಬಗೆಯ ಕ್ಲೇಶಕಾರಕ ವಿಪರ್ಯಾಸ ಮಾಡಲಾಗಿದೆ. ವೇದಾದಿ ಶಾಸ್ತ್ರ, ವರ್ಣ ವ್ಯವಸ್ಥೆ, ಯಜ್ಞಾದಿ ಕರ್ಮಕಾಂಡ, ಗುರು ಶಿಷ್ಯರ ಸಂಬಂಧ, ದೇವರ ಸ್ವರೂಪ, ಚಮತ್ಕಾರ, ದೈವವಾದ ಮತ್ತು ಪ್ರಯತ್ನವಾದ ಮುಂತಾದ ಬಾಬತ್ತಿನಲ್ಲಿ ಅವನು ತೆಗೆದುಕೊಂಡ ನಿಲುವು ನಮ್ಮವರೆಗೆ ಸರಿಯಾಗಿ ಬಂದು ತಲುಪಲಿಲ್ಲ. ಅವನ ಮೇಲೆ ಹಾಕಿದ ಖಟ್ಲೆ, ಅವನ ಸಂಪತ್ತಿನ ಜಪ್ತಿ, ಅವನ ಮೇಲೆ ಹಾಕಿದ ಬಹಿಷ್ಕಾರ, ಊರಿಂದ ಗಡಿಪಾರು ಮಾಡುವ ಆದೇಶ, ಉಳಿದ ಮಾರ್ಗದ ಮೂಲಕ ಕುಟುಂಬ ದೇಶಾಂತರಗೊಂಡ ಘಟನೆ ಈ ವಿಷಯಗಳೂ ನಮ್ಮೆದುರು ವಾಸ್ತವ ರೂಪದಲ್ಲಿ ಬರಲಿಲ್ಲ ಎಂಬ ಕಾರಣಕ್ಕಾಗಿ ಈ ಒದ್ದಾಟ!

ಹೃದಯವನ್ನು ಅರಿತುಕೊಳ್ಳುವ ಪ್ರಯತ್ನ

ಇನ್ನು ಮುಂದಿನ ಬರವಣಿಗೆಯು ತುಕಾರಾಮನ ಅಸಲೀ ವ್ಯಕ್ತಿತ್ವವನ್ನು ಅರಿಯುವ ಪ್ರಯತ್ನವೂ ಹೌದು. ಇದು ಅವರ ಕನಸನ್ನು ಸ್ವಂತದ ಕಣ್ಣಿಂದ ನೋಡುವ ಪುಟ್ಟ ಪ್ರಯತ್ನವೂ ಆಗಿದೆ. ತುಕಾರಾಮನು ಉತ್ಕಟವಾಗಿ ಬದುಕಿದ್ದರೆ, ಸ್ಫೂರ್ತಿಯಿಂದ ಮಾಡಿದ್ದರ ಅನ್ವಯಾರ್ಥವನ್ನು ಕಂಡು ಹಿಡಿಯುವ ಪ್ರಯತ್ನ. ಇದೇನು ತುಕಾರಾಮನ ಸಮಗ್ರ ಚರಿತ್ರೆಯಲ್ಲ. ಅಥವಾ ಅವನ ಜೀವನ ಕಾರ್ಯದ ಮತ್ತು ತತ್ವಜ್ಞಾನದ ಸಮಗ್ರ ವಿವೇಚನೆಯೂ ಅಲ್ಲ. ಇದು ತುಕಾರಾಮತ್ವವನ್ನು ಅರಿಯುವ ದಿಶೆಯಲ್ಲಿಟ್ಟ ಒಂದು ಹೆಜ್ಜೆ ಮಾತ್ರ.