ಸಾಲದ ಕಿರ್ದಿ ಪುಸ್ತಕವನ್ನು ಮುಳುಗಿಸಿದ ಸರಿಸುಮಾರಿಗೇ ತುಕಾರಾಮನ ನೋಟ ಸಮಾಜದ ಆರ್ಥಿಕ ಕ್ಷೇತ್ರದಂತೆಯೇ ಧಾರ್ಮಿಕ ಮತ್ತು ಇತರ ಕ್ಷೇತ್ರಗಳ ಕಡೆಗೂ ಹರಿಯಿತು. ಧರ್ಮದ ಹೆಸರಿನಲ್ಲಿ ನಡೆಯುವ ಅನಾಚಾರ ಅವನನ್ನು ಕಸಿವಿಸಿಗೊಳಿಸಲಾರಂಭಿಸಿತು. ಸಮಾಜ ವ್ಯವಸ್ಥೆಯಲ್ಲಿ ತನಗೆ ತಪ್ಪೆನಿಸಿದ ಎಲ್ಲವನ್ನು ವಿರೋಧಿಸಲು ಯುದ್ಧವನ್ನೇ ಸಾರಿದನು. ಅವನು ಹಗಲು ರಾತ್ರಿ ನಡೆಸಿದ ಯುದ್ಧದ ಇಡೀ ಚರಿತ್ರೆಯೇ ಅವನ ಆಭಂಗಗಳಲ್ಲಿ ವ್ಯಕ್ತಗೊಂಡಿದೆ. ವೇದದ ಹೆಸರಿನಲ್ಲಿ, ವರ್ಣದ ಹೆಸರಿನಲ್ಲಿ, ಯಜ್ಞಯಾಗದ ಹೆಸರಿನಲ್ಲಿ, ದೇವರ ಹೆಸರಿನಲ್ಲಿ ಎಲ್ಲೆಲ್ಲೂ ಅನ್ಯಾಯ ನಡೆಯುತ್ತಿರುವದು ಕಣ್ಣಿಗೆ ಬಿತ್ತು. ಹೀಗಾಗಿ ಅವನು ಈ ಅನ್ಯಾಯದ ಆಭಂಗಗಳ ಹರಿತ ಶಸ್ತ್ರವನ್ನು ಝಳಪಿಸಿದನು.

ನಮ್ಮ ಸಮಾಜದಲ್ಲಿ ವೇದವನ್ನು ಅತ್ಯಂತ ಅಪೌರುಷೇಯ ಎಂಬ ಶ್ರದ್ಧೆಯನ್ನು ನಿರ್ಮಿಸಲಾಗಿದೆ. ಅದನ್ನು ಚಿಕಿತ್ಸೆಗೊಳಪಡಿಸುವಂತಿಲ್ಲ, ಚಿಕಿತ್ಸೆಯ ಪ್ರಯತ್ನ ಮಾಡಿದ್ದೇ ಆದರೆ ಅವನಿಗೆ ಬಹಿಷ್ಕಾರ ಹಾಕಬೇಕು ಎಂಬ ನಿಯಮವಿತ್ತು. ಶೂದ್ರರಿಗೆ ವೇದದ ಅಧಿಕಾರವಿರಲಿಲ್ಲ. ಅವನು ವೇದವನ್ನು ಉಚ್ಚರಿಸುವಂತಿಲ್ಲ ಮತ್ತು ಆಲಿಸುವಂತಿಲ್ಲ. ಈ ನಿಯಮ ಮುರಿದವರ ಬಾಯಿ, ಕಿವಿಯಲ್ಲಿ ಕಾದ ಎಣ್ಣೆ ಸುರಿಯುವ ಕ್ರೂರ ಶಿಕ್ಷೆಯಿತ್ತು. ಧರ್ಮಶಾಸ್ತ್ರದ ನಿಯಮದ ಪ್ರಕಾರ ತುಕಾರಾಮನು ಅಬ್ರಾಹ್ಮಣ ರೈತನಾಗಿದ್ದರಿಂದ ಶೂದ್ರನಾಗಿದ್ದ, ಹೀಗಾಗಿ ಅವನಿಗೆ ವೇದದ ಅಧಿಕಾರವಿಲ್ಲ. ವೇದ ಕೇವಲ ಧಾರ್ಮಿಕ ಗ್ರಂಥವಾಗಿರದೆ, ಬ್ರಾಹ್ಮಣರ ಕೈಯಲ್ಲಿಯ ಶೋಷಣೆಯ ಹತ್ಯಾರವಾಗಿತ್ತು ಎಂದೇ ಅರ್ಥ. ತುಕಾರಾಮ ಶೂದ್ರನಾಗಿರುವದರಿಂದ ತುಕಾರಾಮನಿಗೆ ಧರ್ಮದ ವಿಷಯದಲ್ಲಿ ಏನೂ ಮಾಡುವಂತಿಲ್ಲ, ಬರೆಯುವ ಅಧಿಕಾರವೂ ಇಲ್ಲ- ಎಂಬ ದುರಾಗ್ರಹ ನಿಲುವನ್ನು ಅವರು ತೆಗೆದುಕೊಂಡರು. ಸ್ವತಃ ತುಕಾರಾಮನೇ ಈ ನಿಲುವಿಗೆ ತೀವ್ರವಾದ ಆಹ್ವಾನ ನೀಡಿದನು ಮತ್ತು ವೈದಿಕರ ಫಜೀತಿ ಮಾಡಿದನು.

ವೈದಿಕರ ಮಸೆದ ನಂಜಿನ ಹಲ್ಲು

ವೈದಿಕ ಪಂಡಿತರು ವೇದದ ಅರ್ಥ ತಿಳಿದುಕೊಳ್ಳದೆ ಕೇವಲ ಗಿಳಿಪಾಠ ಮಾಡುತ್ತಾರೆನ್ನುವದು ತುಕಾರಾಮನ ಮಹತ್ವದ ಆಕ್ಷೇಪವಾಗಿತ್ತು. ಅರ್ಥವರಿಯದೇ ಮಾಡಿದ ಪಾಠಾಂತರವು ಎತ್ತು ಅಥವಾ ಕುದುರೆಯ ಒಜ್ಜೆ ಹೊತ್ತಂತೆ, ಹೀಗೆ ಪಾಠಾಂತರ ಮಾಡುವ ಜನ ಒಜ್ಜೆ ಹೊತ್ತು ಮುಳ್ಳು ತಿನ್ನುವ ಒಂಟೆಯಂತಿರುತ್ತಾರೆ. ಬಂಜೆಯಾದ ಹೆಂಗಸು ಹೊಟ್ಟೆಗೆ ಬಟ್ಟೆ ಸುತ್ತಿ ಬಸುರಿಯಾಗಿರುವ, ನಂತರ ಹೆರಿಗೆಯಾದ ನಾಟಕ ಮಾಡಿ ಕೊನೆಗೆ ಫಜೀತಿ ಪಡುವಂತೆ, ಪಾಠಾಂತರ ಮಾಡುವ ಪಂಡಿತ ಪುರೋಹಿತರ ಸ್ಥಿತಿಯಾಗಿದೆ. ಪಾಠಾಂತರದ ಬಲದಿಂದ ಪಾಂಡಿತ್ಯದ ಸೊಕ್ಕು ಮೆರೆಯುವ ವೈದಿಕ ಬ್ರಾಹ್ಮಣನ ಮೇಲೆ ತುಕಾರಾಮನು ಝಳಪಿಸಿದ ಚಾಬೂಕು ಅತ್ಯಂತ ದಾಹಕವಾಗಿತ್ತು ಎಂಬುವುದರಲ್ಲಿ ಸಂಶಯವಿಲ್ಲ. ಸಮಾಜದಲ್ಲಿ ಸನ್ಮಾನದ, ಪ್ರತಿಷ್ಠೆಯ ಸವೋಚ್ಚ ಶಿಖರದ ಮೇಲೆ ವಿರಾಜಮಾನರಾದ ಜನರಿಗೆ ಈ ಟೀಕೆಯನ್ನು ಸಹಿಸುವುದು ಅತ್ಯಂತ ದುಸ್ತರವಾಗಿರಬೇಕು. ಈ ಟೀಕೆಯಿಂದ ದೇಹೂವಿನ ಸಾಮಾಜಿಕ ಭೂಮಿಯ ಭೂಕಂಪಗೊಂಡಂತೆ ನಡುಗಿರಬೇಕು ಎನ್ನುವುದರಲ್ಲಿ ಶಂಕೆಯಿಲ್ಲ ವಿಶೇಷವಾಗಿ, ಯಾರಿಗೆ ವೇದದ ಒಂದಕ್ಷರವೂ ಉಚ್ಚರಿಸುವ ಅಧಿಕಾರವಿಲ್ಲವೋ, ಅಂಥ ಒಬ್ಬ ಶೂದ್ರನು, ತಮ್ಮ ಜ್ಞಾನದ ಬಗೆಗೆ ಶಂಕೆ ವ್ಯಕ್ತಪಡಿಸಿದ್ದು ಕಂಡು ವೈದಿಕರ ಪಿತ್ತ ನೆತ್ತಿಗೇರಿರಬೇಕು. ಅವರು ನಂಜಿನ ಹಲ್ಲು ಮಸೆದಿರಬೇಕು.,

ಯಾರೂ ದಂತಕಥೆ ಹೇಳಬೇಡಿ

ಶಾಬ್ದಿಕ ಜ್ಞಾನಕ್ಕಿಂತ ಅಸಲೀ ಅನುಭವಕ್ಕೆ ನಿಜವಾದ ಮಹತ್ವವಿದೆ ಎನ್ನುವದು ತುಕಾರಾಮನ ಅಂಬೋಣ. ಹೀಗಾಗಿ ಯಾರೂ ದಂತಕಥೆ ಅಥವಾ ಟೊಳ್ಳುಕಥೆಯನ್ನು ಹೇಳಬೇಡಿ ಎಂದವನು ಹೇಳುತ್ತಿದ್ದ. ಖೊಟ್ಟಿ ಮನುಷ್ಯನು ನೀಡಿದ ಊಟದ ಆಮಂತ್ರಣವನ್ನು ಉಂಡ ಬಳಿಕವೇ ಖರೇ ಎಂದು ಭಾವಿಸಬೇಕು ಎಂದವನು ಶಬ್ದ ಬಳಸುವವರಿಗೆ ವ್ಯಂಗ್ಯ ಮಾತು ಹೇಳಿದ್ದ. ಆಗಸದಲ್ಲಿ ಹಗ್ಗದಾಟ ನಡೆಸುವ ಡೊಂಬರು ಅಮರರಾಗುವುದಿಲ್ಲ. ಮೋಡಗಳ ಕುದುರೆ, ಯೋಧರು ನಿಜವಾದ ಯುದ್ಧದಲ್ಲಿ ತಾಳುವುದಿಲ್ಲ, ಶಾಬ್ದಿಕ ಜ್ಙಾನವು ತೌಡು ಕುಟ್ಟಿದಂತೆ, ಅಥವಾ ಚಿಪ್ಪಾಡೆ ಚೀಪಿದಂತೆ ನಿಷ್ಪಲವಾದುದು. ಇಂಥ ಹಲವು ಉದಾಹರಣೆಯನ್ನು ನೀಡಿ ಅವನು ವೈದಿಕ ಪಂಡಿತರನ್ನು ಟೀಕಿಸಿದನು.

ದುರಾಚಾರಿ ಪಂಡಿತರು ಬ್ರಹ್ಮನ ಸಮತ್ವ ಅರಿತಿರುವುದಿಲ್ಲ

ಶಬ್ದದ ಅರ್ಥ ಅರಿಯದಿದ್ದರೆ, ಅದು ಟೊಳ್ಳಾಗುತ್ತದೆ. ಹಾಗೆಯೇ ನುಡಿದಂತೆ ನಡೆಯಿದಿದ್ದರೂ ಅವರಲ್ಲಿ ಪೊಳ್ಳುತನ ಬರುತ್ತದೆ. ವೈದಿಕ ಪಂಡಿತರು ವೇದಕ್ಕೆ ಬಹಳ ಮಹತ್ವ ನೀಡುತ್ತಾರೆ, ವೇದವನ್ನು ಅನುಸರಿಸಬೇಕಾಗುತ್ತದೆ. ಈ ವೇದವು ಬ್ರಹ್ಮನ ಸಮತ್ವವನ್ನು ಹೇಳಿದೆ. ಆದರೆ ಈ ದುರಾಚಾರಿ ಪಂಡಿತರು ವೇದ ಹೇಳಿದ ಸಮತೆಯನ್ನು ಮಾತ್ರ ಆಚರಿಸುವದಿಲ್ಲ. ಈ ಸಮತೆಯನ್ನು ಅರಿಯದೆ ಸ್ವಂತಕ್ಕೆ ಪಂಡಿತನೆಂದು ಕೊಳ್ಳುವ ಮನುಷ್ಯನು ಮೂರ್ಖನಾಗಿದ್ದು ಅವನ ಪಠಣ ವ್ಯರ್ಥವಾಯಿತು, ಎಂದು ತುಕಾರಾಮನು ನುಡಿಯುತ್ತಾನೆ. ತುಕಾರಾಮನು ಇಲ್ಲಿ ಪ್ರಸ್ತಾಪ ಮಾಡಿದ ಸಮತೆಯ ವಿಷಯವು ತುಂಬ ಮಹತ್ವದ್ದು. ಭಾರತದ ಸಾಮಾಜಿಕ ಚರಿತ್ರೆಯ ಸರಿಯಾದ ಅರಿವು ಅವನಿಗಿತ್ತು. ಉಪನಿಷತ್ತು ಅಂದರೆ ವೇದವು ಸಕಲರ ಆತ್ಮವೊಂದೇ, ಆತ್ಮವೆಂದರೇನೆ ಬ್ರಹ್ಮ, ಸಕಲರ ಅಂತರಂಗದಲ್ಲಿ ಬ್ರಹ್ಮನಿದ್ದಾನೆ. ಸಮತೆಯು ಬ್ರಹ್ಮನ ಸ್ವರೂಪವಾಗಿದೆ ಮುಂತಾದ ರೀತಿಯ ಸಮತೆಯ ತತ್ವಜ್ಞಾನವನ್ನು ಮತ್ತೆ ಮತ್ತೆ ಮಂಡಿಸಿದ್ದಾನೆ. ಪ್ರತ್ಯಕ್ಷ ವ್ಯವಹಾರದಲ್ಲಿ ಮಾತ್ರ ವೈದಿಕ ಪರಂಪರೆಯು ಹೆಜ್ಜೆ ಹೆಜ್ಜೆಗೂ ವಿಷಮತೆಯನ್ನು ಬಿತ್ತಿದೆ. ಮನುಷ್ಯರ ನಡುವೆ ಭೇದ ಮಾಡಿದ್ದಾರೆ. ಆಚರಣೆಯಲ್ಲಿ ಸಮತೆಯನ್ನು ಎಂದಿಗೂ ತಂದಿಲ್ಲ, ತುಕಾರಾಮನ ಭೂಮಿಕೆ ಮಾತ್ರ ಇದಕ್ಕೆ ತದ್ವಿರುದ್ಧವಾಗಿದೆ. ವೇದವು ಹೇಳಿದ ಮಿಷಮತೆಯ ತತ್ವವನ್ನು ಒಪ್ಪಬಾರದು. ಆದರೆ ವೇದದಲ್ಲಿಯ ಸಮತೆಯ ತತ್ವ ಮಾತ್ರ ಒಪ್ಪಬೇಕು ಎನ್ನುವುದೇ ಅವನ ನಿಲುವು. ವೇದವನ್ನು ಸೋಸಿ, ಅದರಲ್ಲಿಯ ಭೇದದ ವಿಚಾರವನ್ನು ಕೈ ಬಿಡುವುದು ಮತ್ತು ಉಳಿದ ಭಾಗವನ್ನು ಪ್ರಮಾಣವೆಂದು ಒಪ್ಪಿಕೊಳ್ಳುವುದು ಎಂದವನು ಸ್ಪಷ್ಟವಾಗಿ ಮಂಡಿಸಿದ್ದಾನೆ. ತಾನು ವೇದದ ಅಂಶವನ್ನು ಆಯ್ದುಕೊಳ್ಳುತ್ತೇನೆ ಎಂದು ಅವನು ಹೇಳಿದ್ದಾನೆ. ಮಾಯೆ, ಬ್ರಹ್ಮ ಮುಂತಾದ ವೇದದಲ್ಲಿಯ ಶಬ್ದವನ್ನು ಹೇಳಿ ಜನರನ್ನು ವಂಚಿಸುವುದು ಅವನಿಗೆ ಒಪ್ಪಿಗೆಯಿಲ್ಲ, ಹೀಗೆ ವೇದ ಮಾಡುವ ಧರ್ಮ ಠಕ್ಕರ ಬಂಜೆತನದ ಮಾತಿನ ಮೇಲೆ ವಿಶ್ವಾಸವಿರಿಸಬೇಡಿ ಎಂದೂ ಹೇಳುತ್ತಾನೆ.

ಉದರ ಭರಣಕ್ಕಾಗಿ ವಡಗುಡುವ ಬಾಯಿ

ಬಾಯಿಯಿಂದ ಬ್ರಹ್ಮಜ್ಞಾನದ ಪೊಳ್ಳು ಮಾತಾಡುವ ಜನರ ಬಗೆಗೆ ತುಕಾರಾಮನು ಮತ್ತೂ ಒಂದು ಆಕ್ಷೇಪವೆತ್ತಿದ್ದಾನೆ. ಈ ಜನರು ಹಣಕ್ಕಾಗಿ, ನಿರ್ವಹಣೆಗಾಗಿ ಪ್ರವಚನ, ಧರ್ಮೋಪದೇಶ ಮಾಡುತ್ತಾರೆ- ಇದು ಅವನ ಆಕ್ಷೇಪ. ಅಹಂ ಬ್ರಹ್ಮ – ನಾನೇ ಬ್ರಹ್ಮ ಎಂಬ ಬ್ರಹ್ಮಜ್ಞಾನವನ್ನು ಬೋಧಿಸಿ, ತನ್ಮೂಲಕ ತನ್ನ ಪಿಂಡದ ಪಾಲನ ಮಾಡುತ್ತಾನೋ ಅಂಥವನ ಜತೆ ಮಾತಾಡಬಾರದೆನ್ನುತ್ತಾನೆ. ಸ್ವಂತ ಪಿಂಡವನ್ನು ಸಾಕುವ ಮನುಷ್ಯನು ಜ್ಞಾನದ ಹೆಸರಿನಲ್ಲಿ ಮಾಡಿದ ಹುಸಿ ಸಂಗತಿಗಳೆಲ್ಲ ಸುಟ್ಟು ಬೂದಿಯಾಗಲಿ ಎಂದೆನ್ನುತ್ತಾನೆ. ಸ್ವತಃ ಈಜಲು ಬರದ ಮನುಷ್ಯ ಉಳಿದವರಿಗೆ ಹೇಗೆ ಈಜು ಕಲಿಸುತ್ತಾನೆ? ಎನ್ನುವದು ಅವನ ಪ್ರಶ್ನೆ. ಈ ಬಗೆಯ ಜನರ ದರುಶನ ಸಹ ಬೇಡವೆಂಬ ಭಾವನೆ ಅವನದು. ಯಾರು ಪೂಜೆಯ ಬದಲಿಗೆ ದ್ರವ್ಯ ಬೇಡುತ್ತಾನೋ, ಶಿಷ್ಯರಿಗೆ ಇಲ್ಲದ್ದು ಸಲ್ಲದ್ದು ಹೇಳುತ್ತಾನೋ ಅಂಥವನ ಬಳಿ ಎಲ್ಲಿಯ ಬ್ರಹ್ಮವೆಂದು ಪ್ರಶ್ನಿಸಿ, ಅದಂತೂ ಸಂಪೂರ್ಣ ವಿಷಯದ ಭ್ರಮೆ ಎಂದು ಕಠೋರವಾಗಿ ಟೀಕಿಸುತ್ತಾನೆ. ಸ್ವತಃ ತುಕಾರಾಮನು ಈ ಬಾಬತ್ತಿನಲ್ಲಿ ಅತ್ಯಂತ ನಿಸ್ಪೃಹನಾಗಿದ್ದನು, ಕೀರ್ತನೆ ಮಾಡುವ ಸ್ಥಳದಲ್ಲಿ ಅನ್ನ ಬೇಡಬಾರದು, ಅಲ್ಲಿ ಭಸ್ಮ ಹಣೆಗೆ ಹಚ್ಚಬಾರದು, ಅಲ್ಲಿಯ ಮಾಲೆ ಕೊರಳಲ್ಲಿ ಧರಿಸಬಾರದು ಎಂಬ ನಿಯಮ ಅವನದಾಗಿತ್ತು.

ಅಲ್ಪ ವಿದ್ಯೆ ಗಳಿಸಿಯೂ ಅಹಂಕಾರಿ

ಅಲ್ಪ ಅಕ್ಷರ ಜ್ಞಾನದ ಬಲದಿಂದ ವೈದಿಕ ಪಂಡಿತರು ಅಹಂಕಾರಿಗಳಾಗುತ್ತಾರೆನ್ನುವದು ತುಕಾರಾಮನ ತಕರಾರು. ಜ್ಞಾನಿಗಳಾದವರ ಮನೆಯಲ್ಲಿ ದೇವರನ್ನು ಹುಡುಕಿದರೆ ಅಲ್ಲಿ ದೇವರಂತೂ ಸಿಗುವದೇ ಇಲ್ಲ. ಬದಲಿಗೆ ಅವರ ಅಹಂಕಾರ ನಮ್ಮನ್ನು ಘಾಸಿಗೊಳಿಸುತ್ತದೆ ಎಂದವನು ತನ್ನದೊಂದು ಅಭಂಗದಲ್ಲಿ ಹೇಳುತ್ತಾನೆ. ನೀನು ಕೊಡುವ ಭಿಕ್ಷೆ ಬೇಡ ಮಾರಾಯ, ಮೊದಲು ನಾಯಿಯನ್ನು ಕಟ್ಟಿಹಾಕು ಎನ್ನುವ ಪ್ರಸಂಗ ಬರುತ್ತದೆ. ಜ್ಞಾನದ ಪಿತ್ತ ಮನುಷ್ಯನನ್ನು ಹೇಗೆ ಹಾನಿ ಮಾಡುತ್ತದೆ ಎಂಬುದನ್ನು ತುಕಾರಾಮನು ಹಲವು ಉದಾಹರಣೆ ನೀಡಿ ಸ್ಪಷ್ಟಪಡಿಸಿದ್ದಾನೆ, ನಾವೆಯನ್ನು ನಡೆಸುತ್ತಿರುವಾಗ ಗಾಳಿಯು ಬೀಸಿದರೆ ಅದು ಹೇಗೆ ಮುಳುಗುತ್ತದೋ, ಅದೇ ಬಗೆಯಲ್ಲಿ ಅಹಂದಿಂದಾಗಿ ಮನುಷ್ಯ ಹೇಗೆ ನಾಶ ಹೊಂದುತ್ತಾನೆ, ಎಂಬುದನ್ನು ತನ್ನ ಅಭಂಗದಲ್ಲಿ ಹೇಳಿದ್ದಾನೆ. ಹೊರ ನೋಟಕ್ಕೆ ಸುಂದರವಾಗಿ ಗೋಚರಿಸುವ ಅಹಂಕಾರವು ಹೊನ್ನದ ಶೂಲ (ಚಂದನದ ಶೂಲ) ವಿದ್ದಂತೆ, ಅಥವಾ ಬಂಗಾರದ ಬೇಡಿಯಿದ್ದಂತೆ ಎಂದವನಿಗನಿಸುತ್ತದೆ. ತನ್ನದೇ ಮರಿಗಳನ್ನು ತಿನ್ನುವ ಹಾವು ತಾಯಿಯಾಗಿದ್ದರೆ, ಅದೇ ಬಗೆಯಲ್ಲಿ ವರ್ತಿಸುವ ಗಂಡು ಬೆಕ್ಕು ತಂದೆಯಾಗಿದ್ದರೆ, ಇಂಥ ತಾಯ್ತಂದೆಗಳ ಸಹವಾಸದಲ್ಲಿ ಸುಖ ಲಭಿಸುವದಿಲ್ಲ ಎಂದವನ ಅನಿಸಿಕೆ. ಅಲ್ಪ ವಿದ್ಯೆ ಪಡೆದೂ ಜ್ಞಾನದ ಅಹಂಕಾರವನ್ನು ಬೆಳೆಸುವವನು ‘ಜ್ಞಾನಗಂಡ’ ನಾಗಿರುತ್ತಾನೆ. ಕಿವುಡನಿದ್ದರೂ ಸರಿ, ಆದರೆ ಜ್ಞಾನಗಂಡ ಜನರು ಗೊಡ್ಡು ದನದಂತಿರುತ್ತಾರೆ ಎಂದವನ ಅಂಬೋಣ.

ಅಹಂಕಾರಿ ಜನರ ಮನ ಕೆರಳಿಸುವ ವರ್ತನೆಯು ಅಸಹನೀಯವಾಗಿದ್ದರಿಂದ ಕೆಲವು ಸಲ ತುಕಾರಾಮನು ತೀರಾ ಆಕ್ರಮಣಕಾರಿಯಾದ ರೂಪ ಧರಿಸಿದ್ದು ಕಾಣಬರುತ್ತದೆ. ಅಹಂ ಅನ್ನು ಜತನ ಮಾಡುವವರು ಪಠಣ ಮಾಡಿ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾನೆ. ಅಲ್ಪಮತಿಗಳ ಸೊಕ್ಕು, ಅಭಿಮಾನದಿಂದ ಡಾಂಭಿಕರಂತೆ ವರ್ತಿಸಿದಾಗ ಅವರ ಮೂಗಿಗೆ ಗುದ್ದಿ ಬುದ್ಧಿ ಕಲಿಸಿರಿ ಎಂದು ಕೆರಳಿ ನುಡಿಯುತ್ತಾನೆ. ಜ್ಞಾನದ ಪಿತ್ತ ಕೆರಳಿಸಿದ ಮನುಷ್ಯನನ್ನು ಕತ್ತೆಯೆಂದು ಭಾವಿಸಿ ಸಿಕ್ಕಸಿಕ್ಕಲ್ಲಿ ಥಳಿಸಿ ಎಂದು ಸೂಚಿಸುತ್ತಾನೆ. ಅಹಂಕಾರಿ ಮನುಷ್ಯನ ಜ್ಞಾನ ಬಿಳುಪು ಚರ್ಮ ರೋಗದಂತಿರುತ್ತದೆ. ನೀನು ಉತ್ತಮ ವಾಣಿಯಿಂದ ಮಾತಾಡುವ ಪಂಡಿತನಾದರೇನಾಯಿತು, ಹೆಚ್ಚೆಂದರೆ ನೀನು ಅಕ್ಷರಾಭಿಮಾನಿಯಾಗಬಹುದಷ್ಟೇ ಎಂದು ಗೊಡ್ಡು ಪಂಡಿತನ ವ್ಯರ್ಥಾಲಾಪದ ಬಗೆಗೆ ಹೇಳುತ್ತಾನೆ.

ಅನ್ಯರನ್ನು ಪೀಡಿಸಲು ಜಾಣನಾದಿಯಾ ?

ತಮ್ಮ ಹತ್ತಿರ ಜ್ಞಾನವಿದ್ದವರು ಬೆಳಕನ್ನು ಪಸರಿಸಲಿಲ್ಲ. ಅಂಧಕಾರದ ಸಾಮ್ರಾಜ್ಯವನ್ನು ಬೆಳೆಸಿದರು ಎನ್ನುವದು ನಮ್ಮ ದೇಶದ ಚರಿತ್ರೆಯನ್ನು ಕಂಡಾಗ ಅನಿಸುತ್ತದೆ. ಜ್ಞಾನಿಗಳಾದವರು ಬಹುಜನ ಸಮುದಾಯದವರಿಗೆ ಕಿರುಕುಳ ನೀಡಿದರು, ಹಾದಿ ತಪ್ಪಿಸಿದರು, ಉಸಿರುಗಟ್ಟುವಂತೆ ಮಾಡಿದರು. ಅನ್ಯರನ್ನ ಪೀಡಿಸಲೆಂದೇ ಜಾಣನಾದಿಯೇನಪ್ಪ ಎಂದು ತುಕಾರಾಮನು ಯಥಾರ್ಥ ಪ್ರಶ್ನೆ ಕೇಳುತ್ತಾನೆ.

ಬ್ರಹ್ಮಜ್ಞಾನವನ್ನು ತುಚ್ಛಗೊಳಿಸಿದ

ಬ್ರಹ್ಮಜ್ಞಾನದ ಬಾಬತ್ತಿನಲ್ಲಿ ತುಕಾರಾಮನು ಮಂಡಿಸಿದ ವಿಷಯ ಹೀಗಿದೆ : ಮನೆ-ಮನೆಯಲ್ಲೂ ಬ್ರಹ್ಮಜ್ಞಾನ ಪಸರಿಸಿದಂತೆ ಕಂಡು ಬಂದರೂ, ಅವರಲ್ಲಿ ಸಾಕಷ್ಟು ಕಲಬೆರಕೆಯಿದೆ. ಯಾರ ಬಳಿಯಲ್ಲಾದರೂ ಶುದ್ಧ, ನಿರ್ಮಲವಾದ ಬ್ರಹ್ಮಜ್ಞಾನವೇನಾದರೂ ಇದ್ದರೆ ಅಣುವಿನಷ್ಟಾದರೂ ನಮ್ಮಂತಹ ದುರ್ಬಲನಿಗೆ ನೀಡಿ. ಅವರಲ್ಲಿ ಆಸೆ, ತೃಷೆ, ಮಾಯೆ ಕಲಿಸಲಾಗಿದೆ. ಅದರಲ್ಲಿ ಕಲಿಸಿದ ಡಂಭ ದೂರದಿಂದಲೇ ಗೋಚರಿಸುತ್ತಿದೆ. ಅದರಲ್ಲಿ ಕಾಮ-ಕ್ರೋಧ ಮತ್ತು ಲೋಭ ಅಥವಾ ಉಗ್ರವಿಷ ಬೆರೆಸಿದ್ದರಿಂದ ತುಂಬ ಸಂಕಟವಾಗುತ್ತದೆ. ಈ ಬಗೆಯ ಬ್ರಹ್ಮಜ್ಞಾನದಿಂದ ಏನೂ ಪ್ರಯೋಜನವಿಲ್ಲ. ಅಮೂಲ್ಯ ಆಯುಷ್ಯ ಮಾತ್ರ ಹಾಳಾಗುತ್ತದೆ. ಮನೆ-ಮನೆಯಲ್ಲೂ ಜ್ಞಾನದ ಚರ್ಚೆ ನಡೆದಿದೆ, ಆದರೆ ಯಾರಿಗೂ ಸತ್ಯ ಮಾತ್ರ ಕಾಣಲಿಲ್ಲ. ಪ್ರತಿ ಮನೆಯಲ್ಲೂ ಜ್ಞಾನ ಭೋದಿಸುವ ಜನ ರೋಸಿ ತೌಡನ್ನು ಕುಟ್ಟುತ್ತಿದ್ದಾರೆ. ಅವರು ಕಲಿತ ರೋಚಕ ಶಬ್ದ ಹೇಳುತ್ತಿದ್ದರೂ, ಅದರಲ್ಲಿ ಅರ್ಹತೆಯಿರುವುದಿಲ್ಲ. ಅದು ಶುಷ್ಕವಾಗಿರುತ್ತದೆ.

ಹುಸಿ ಆಚಾರ ವಿಚಾರ ವ್ಯವಹಾರ ಮಾಡುವವನಿಗೆ ಖರೆ ಬ್ರಹ್ಮಜ್ಞಾನವಾಗಿರುವುದಿಲ್ಲ. ಅವನು ದ್ರವ್ಯದ ಇಚ್ಚೆಯಿಂದ ಕಥೆ ಹೇಳುತ್ತಿರುತ್ತಾನೆ. ಧರ್ಮದ ಹೆಸರಿನಲ್ಲಿ ಮೃಷ್ಟಾನ್ನ ಭೂರಿ ಭೋಜನವನ್ನು ಕಬಳಿಸಬಹುದು, ವಿಲಾಸ ಮಾಡುವದೆ ಈ ಅಧಮನ ಜ್ಞಾನ. ಯಾರಲ್ಲಿ ಭೂತದಯೆಯಿರುವುದಿಲ್ಲವೋ ಅವನ ಬ್ರಹ್ಮಜ್ಞಾನ ವ್ಯರ್ಥವೆಂದು ಅರ್ಥ. ಅವನು ಕಲಿತ ಅಂದರೆ ಪ್ರತ್ಯಕ್ಷ ಅನುಭವವಿರದ ಸಂಗತಿಗಳನ್ನು ಹೇಳುತ್ತಾನೆ. ಹೊಟ್ಟೆಗಾಗಿ ಭೇದ ಭಾವ, ಕ್ರೋಧವನ್ನು ವ್ಯಕ್ತ ಮಾಡುತ್ತಿರುತ್ತಾನೆ. ಜ್ಞಾನ ಬೋಧಿಸುವಾಗ ರಸವತ್ತಾಗಿ ಬಣ್ಣಿಸುತ್ತಾನೆ, ಇಂಥವರು ಹಸಿಸುಳ್ಳು ಹೇಳುವ ಠಕ್ಕರಾಗಿರುತ್ತಾರೆ. ಅವರ ಒಳಗೆಲ್ಲ ಪೊಳ್ಳು. ಬಾಯಿಯಿಂದ ಬ್ರಹ್ಮ ಜ್ಞಾನ ಹೇಳಿ, ಜನರ ಗೋಣು ಮುರಿಯುವ, ಸ್ವಂತ ಅನುಭವವಿಲ್ಲದ ಜ್ಞಾನ ಹೇಳುವ, ಮನದೊಳಗೆ ಲೋಭ ತುಂಬಿಕೊಂಡೇ ದೇವರ ಕಥೆ ಹೇಳುವ ಮನುಷ್ಯನನ್ನು ಹುಚ್ಚನೆಂದು ಭಾವಿಸಿ ಅವನ ಕೆನ್ನೆಗೆ ಹೊಡೆಯಬೇಕೆಂದು ಹೇಳುತ್ತಾನೆ. ಇಂದ್ರಿಯದ ಜಯ, ವಾಸನೆಯ ಕ್ಷಯ, ಅಂತರಂಗದೊಳಗೆ ಅಹಂಕಾರ ಪ್ರವೇಶಿಸದಂತೆ ನೋಡಿಕೊಳ್ಳುವದು, ಮನದೊಳಗೆ ಆನಂದ ತುಂಬಿಕೊಂಡಿರುವದೇ ನಿಜವಾದ ಬ್ರಹ್ಮಜ್ಞಾನ ಎಂದು ತುಕಾರಾಮ ಬೋಧಿಸುತ್ತಾನೆ.

ವ್ಯರ್ಥಚರ್ಚೆ ಘಟಪಟ ಚರ್ಚೆ

ಜ್ಞಾನವನ್ನು ಗೊಡ್ಡು ವಾದ ವಿವಾದಕ್ಕಾಗಿ ಬಳಸಿದ್ದರಿಂದ ತುಕಾರಾಮನು ವೈದಿಕ ಪಂಡಿತರ ಮೇಲೇ ದೋಷ ಹೊರಿಸಿದ. ವಾದ ಹಾಕುವುದರಿಂದ ಬ್ರಾಹ್ಮಣರು ಹಾಳಾದರು ಎಂದೆನ್ನುತ್ತಾನೆ. ವಾದ ವಿವಾದ ನಡೆಸುವ ಜನರು ಡಾಂಭಿಕರಾಗಿರುತ್ತಾರೆಂಬ ಅಂಬೋಣ. ಅವನದ್ದು. ತೌಡುಕುಟ್ಟುವದು, ಮಜ್ಜಿಗೆ ಕಡೆಯುವದು, ನಿರರ್ಥಕ ಆಗಿರುವಂತೆ ಕೇವಲ ಶಬ್ದಚ್ಛಲ ಮಾಡಿ, ಗೊಂದಲ ವಾಕ್ಯ ಬಳಸಿ ಮಾಡುವ ಚರ್ಚೆಯಿಂದ ಮನುಷ್ಯನ ಜ್ಞಾನ ಬೆಳೆಯುವದಿಲ್ಲ, ಅದರಿಂದ ಕೇವಲ ಆಯಾಸವಾಗುತ್ತದೆ, ಹೀಗಾಗಿ ಚರ್ಚೆಯ ಗೊಂದಲದಲ್ಲಿ ಬೀಳಬಾರದು ಎಂಬ ನಿಲುವು ಅವನದು.

ಈ ಸಂದರ್ಭದಲ್ಲಿ ಅವನು ಹೇಳಿದ ಘಟಪಟದ ಚರ್ಚೆಯನ್ನು ಅರ್ಥ ಮಾಡಿಕೊಳ್ಳೋಣ. ನ್ಯಾಯದರ್ಶನದಲ್ಲಿ ಘಟ ಕೊಡ, ಪಟ ಬಟ್ಟೆ, ಈ ಎರಡು ವಸ್ತುಗಳನ್ನು ಆಗಾಗ ನಿರ್ದೇಶಿಸಲಾಗುತ್ತದೆ. ಜಗತ್ತಿನ ವಿವಿಧ ಘಟನೆಯನ್ನು ಚರ್ಚಿಸುವಾಗ ಉದಾಹರಣೆಯಾಗಿ ಈ ಎರಡು ಪದಾರ್ಥಗಳನ್ನು ಬಳಸುತ್ತಾರೆ. ನ್ಯಾಯ ಶಾಸ್ತ್ರದ ಬಹಳಷ್ಟು ಚರ್ಚೆಗಳು ಕ್ಲಿಷ್ಟ, ರೂಕ್ಷ, ಸಿಕ್ಕು ಸಿಕ್ಕು, ಗೋಜಲು ಆಗಿರುತ್ತವೆ. ಹೀಗಾಗಿ ರೂಕ್ಷ ಚರ್ಚೆಯ ವರ್ಣನೆಯನ್ನು ಘಟಪಟದ ಚರ್ಚೆ ಎಂದು ಕರೆಯುತ್ತಾರೆ.

ತುಕಾರಾಮನ ಸುತ್ತ ಮುತ್ತವಿರುವ ವಿದ್ವಾಂಸರು ಘಟಪಟದ ಚರ್ಚೆ ಮಾಡುತ್ತಿದ್ದರು. ಮನೆಯಲ್ಲಿ ಕೂತೇ ಘಟಪಟದ ಉದಾಹರಣೆ ನೀಡುವವನಿಗೆ ಕೊಡ ಹೇಗೆ ತಯಾರಾಗುತ್ತದೆ, ಬಟ್ಟೆ ಹೇಗೆ ನೇಯುತ್ತಾರೆ ಎನ್ನುವುದೂ ಗೊತ್ತಿರುವುದಿಲ್ಲ. ಆದರೆ ಈ ಪದಾರ್ಥದ ಉದಾಹರಣೆ ನೀಡಿ, ಸಂಪೂರ್ಣ ವಿಶ್ವದ ರಹಸ್ಯ ಕೇವಲ ತನಗೆ ಮಾತ್ರ ಗೊತ್ತಿದೆ ಎಂಬ ಅಹಂಕಾರ ಅವನಲ್ಲಿರುತ್ತದೆ. ಅವನಲ್ಲಿ ಪ್ರಯೋಗಶೀಲತೆಯಿರುವದಿಲ್ಲ. ಪ್ರತ್ಯಕ್ಷ ಜೀವನದ ಯಾವ ಸ್ಪರ್ಶವೂ ಇಲ್ಲದ ಇವರು ಇಡೀ ಪ್ರಪಂಚದ ಹುಟು ಸಾವಿನ ತತ್ವಜ್ಞಾನವನ್ನು ಮಂಡಿಸುತ್ತಾರೆ. ತುಕಾರಾಮನು ಅಂಥವರನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ನೀವು ಘಟಪಟದ ಆಚೆಗಿರುವ ಮತ್ತು ನಿರ್ಮಲ ಅಂತಃಕರಣದಿಂದ ಅನುಭವಿಸುವ ಪವಿತ್ರ ಸತ್ಯ ಮಾತ್ರ ನಿಮಗಲ್ಲ, ನಮಗೆ ಗೊತ್ತಿದೆ. ಆದ್ದರಿಂದ ನೀವು ನಮ್ಮ ಹಾದಿಗಡ್ಡ ಬರಬೇಡಿ, ನಮ್ಮ ಜತೆಗೆ ನೀವು ಸಂಘರ್ಷ ಮಾಡುವದು ಸಾಧ್ಯವಿಲ್ಲ ಎಂಬ ಎಚ್ಚರಿಕೆಯನ್ನು ನೀಡಿದ್ದಾನೆ.

ಅಕ್ಷರ ಪಾಠ ಮಾಡುವ ಅಧಿಕಾರವಿಲ್ಲ

ಧರ್ಮಶಾಸ್ತ್ರದ ವಿಶಿಷ್ಟ ನಿಯಮದಿಂದಾಗಿ ತುಕಾರಾಮನಿಗೆ ವೇದದ ಅಧಿಕಾರ ಸಿಗಲಿಲ್ಲ. ಅದನ್ನವನು ಹಲವು ಬಾರಿ ವ್ಯಕ್ತ ಮಾಡಿದ್ದಾನೆ. ಹೀಗಿದ್ದು ತುಕಾರಾಮನು ಈ ವ್ಯವಸ್ಥೆಯ ಬಗೆಗೆ ತಕರಾರು ಎತ್ತಲಿಲ್ಲ. ಈ ವ್ಯವಸ್ಥೆಯನ್ನು ಅವನು ಶಾಂತವಾಗಿ ಸ್ವೀಕರಿಸಿದ ಎಂದು ಹಲವು ಲೇಖಕರ ಹೇಳಿಕೆ, ಅವರ ಈ ಹೇಳಿಕೆಯು ಸಂಪೂರ್ಣ ಸುಳ್ಳು. ನಾವು ಅನಾಗರಿಕರು, ನಮಗೆಲ್ಲಿ ವೇದ ಗೊತ್ತಾಗುತ್ತದೆ ಎಂದೆಲ್ಲ ತುಕಾರಾಮನು ಹೇಳುವಾಗ, ಅವನು ವೈದಿಕ ವ್ಯವಸ್ಥೆಯನ್ನು ಮೌನವಾಗಿ ಸ್ವೀಕರಿಸಿದ ಎಂದರ್ಥವಲ್ಲ, ಈ ವ್ಯವಸ್ಥೆಯು ತನಗೇನು ಕೊಟ್ಟಿತು, ಎಂಬುದನ್ನು ಮರೆಯುವಂತಿಲ್ಲ. ಈ ಉಪರೋಧ ಮಂಡಿಸಿದ ಬಳಿಕ ವೇದದ ಅಧಿಕಾರಕ್ಕೆ ಕವಡೆಯ ಕಿಮ್ಮತ್ತೂ ಇಲ್ಲದ ರೀತಿಯಲ್ಲಿ ಅವನು ಹಲವಾರು ವಿಚಾರಗಳನ್ನು ಮಂಡಿಸುತ್ತಾನೆ. ವೇದದ ಅಧಿಕಾರವಿಲ್ಲದವರಿಗೆ ಪಾಂಡುರಂಗನು ವೈಕುಂಠದಲ್ಲಿ ಸ್ಥಾನ ನೀಡಿದನು ಎಂದವನು ಹೇಳುತ್ತಾನೆ, ಹೀಗಾಗಿ ನಿಮ್ಮ ವೇದಕ್ಕೂ ಮತ್ತು ಅದರ ಅಧಿಕಾರಕ್ಕೂ ಕಸದ ಕಿಮ್ಮತ್ತು ಇಲ್ಲ. ವೇದವಿಲ್ಲದಿದ್ದರೆ ನಮಗೆ ಯಾವ ಅಡಚಣೆಯೂ ಇಲ್ಲ ಎಂದು ಖಚಿತವಾಗಿ ಮಂಡಿಸುತ್ತಾನೆ. ಬ್ರಾಹ್ಮಣರ ಸುಂಬಳ ಸುರುಕ ಹುಡುಗನಿಗೂ ವೇದದ ಅಧಿಕಾರ ಸಿಗುತ್ತದೆ, ಆದರೆ ತುಕಾರಾಮನಂತಹ ಪ್ರತಿಬಾವಂತನಿಗೂ ಆ ಆಧಿಕಾರವನ್ನು ನಿರಾಕರಿಸಲಾಗುತ್ತದೆ. ಇದು ಭಾರತದ ಜ್ಞಾನ ಕ್ಷೇತ್ರಕ್ಕೆ ಹತ್ತಿದ ಕಳಂಕ. ಖರೆಯೆಂದರೆ ವೇದದ ಅಧಿಕಾರವೆಂದರೆ ನಾಲ್ಕು ಶಬ್ದದ ಅಧಿಕಾರವಲ್ಲ. ವೇದವು ಸತ್ತೆ, ಸಂಪತ್ತು, ಪ್ರತಿಷ್ಠೆ, ಸುಖೋಪಭೋಗದ ಪ್ರತೀಕವಾಗಿತ್ತು, ವೇದದ ಅಧಿಕಾರವನ್ನು ನಿರಾಕರಿಸುವದೆಂದರೆ, ಜನ ಸಾಮಾನ್ಯರಿಗೆ ಸಕಲ ಅಧಿಕಾರವನ್ನೇ ನಿರಾಕರಿಸಿದಂತೆ ಎಂದವನ ಅರ್ಥವಾಗಿತ್ತು. ತುಕಾರಾಮನು ವಿಠ್ಠಲ ಭಕ್ತಿಯ ಬೇರೊಂದು ಪರ್ಯಾಯ ಪ್ರತೀಕವನ್ನು ನಿರ್ಮಾಣ ಮಾಡಿದ. ಜನರಿಗಾಗಿ ಎಲ್ಲ ವಿಷಯಗಳ ಅಧಿಕಾರವನ್ನು ಮುಕ್ತಗೊಳಿಸಿದನು.

ವೇದದ ಅರ್ಥ ನಮಗೇ ಗೊತ್ತು

ಶೂದ್ರರಿಗೆ ವೇದದ ಅಧಿಕಾರವನ್ನು ನಿರಾಕರಿಸುವ ವ್ಯವಸ್ಥೆಯನ್ನು ತುಕಾರಾಮನು ಮೌನವಾಗಿ ಸ್ವೀಕರಿಸಲಿಲ್ಲ. ಅದರ ವಿರುದ್ಧ ಅವನು ವಿದ್ರೋಹ (ಬಂಡಾಯ) ಮಾಡಿದ್ದ. ಇದರ ಪ್ರಬಲ ಪುರಾವೆಯು ಮುಂದಿನ ವಿವರಗಳಲ್ಲಿ ಸಿಗುತ್ತದೆ. ನಾನು ವಿಠ್ಠಲನ ಕೃಪೆಯಿಂದ ವೇದದ ಬಗೆಗೆ ಮಾತನಾಡುತ್ತೇನೆ. ವೇದದ ಅರ್ಥ ನಮಗೆ ಗೊತ್ತು. ಉಳಿದವರು ಕೇವಲ ಅದರ ಹೊರೆಯನ್ನು ತಲೆಯ ಮೇಲೆ ಹೊರಬೇಕು. ಅನ್ನ ಕೇವಲ ನೋಡುವವರಿಂದಲೇ ರುಚಿ ಗೊತ್ತಾಗುವುದಿಲ್ಲ. ಅದನ್ನು ತಿಂದು ನೋಡಬೇಕಾಗುತ್ತದೆ. ಧನ ಹೊರುವ ಕೂಲಿ ಮಾಡುವ ಮನುಷ್ಯನು ಕೇವಲ ಧನದ ಒಜ್ಜೆಯನ್ನು ಹೊರುತ್ತಾನೆ. ನಮಗೆ ದೇವರ ಸ್ವರೂಪದ ಮೂಲ ದೊರಕ್ಕಿದ್ದರಿಂದ ಫಲವೂ ಸಹಜವಾಗಿ ಲಭಿಸುತ್ತದೆ. ಹರಿಯು ತುಕಾರಾಮನನ್ನು ಎಲ್ಲ ರೀತಿಯಿಂದಲೂ ಸಹಾಯ ಮಾಡುವ ಸಖನಾಗಿದ್ದಾನೆ. ಹೀಗಾಗಿ ಅವನ ಅಂಗಳದಲ್ಲಿಯ ಸಾದಾ ಬಳ್ಳಿಯೂ ಸಹ ಕಲ್ಪಲತೆಯಾಗಿದೆ, ಅವನು ಕಾಲು ಹಾದಿಯಲ್ಲಿ ನಡೆದು ಹೊರಟರೂ ಕಲ್ಲು ಚಿಂತಾಮಣಿಯಾಗುತ್ತದೆ. ತುಕಾರಾಮನು ಸಹಜವಾಣಿಯಲ್ಲಿ ಮಾತನಾಡುತ್ತಾನೆ, ಆದರೆ ವೇದಾಂತವು ಅವನ ಮನೆಯ ನೀರು ಹೊರುತ್ತದೆ.

ವೇದಾಂತವೇ ಉದ್ಧಂಡ ನಮಸ್ಕಾರ ಹಾಕಬೇಕು

ವೈದಿಕ ಪಂಡಿತರು ವೇದಾಂತದ ಅಂದರೆ ಉಪನಿಷತ್ತಿನ ಅಧಿಕಾರವನ್ನು ತುಕಾರಾಮನಿಗೆ ನೀಡಲಿಲ್ಲ, ಇದರ ಕುರಿತಾದ ತುಕಾರಾಮನ ಪ್ರತಿಕ್ರಿಯೆಯನ್ನು ಗಮನಿಸಿದರೆ, ಅವನ ಸತ್ಪ ಹೇಗೆ ಸೂರ್ಯನಂತೆ ಹೊಳೆಯುತ್ತದೆ ಎಂಬುದು ನಮ್ಮ ಗಮನಕ್ಕೆ ಬರುತ್ತದೆ. ನಾನು ಸಹಜವಾಗಿ ಮಾತಾಡಿದ್ದು ಎಷ್ಟು ಉನ್ನತವಾಗಿರುತ್ತದೆಂದರೆ, ನಿಮ್ಮ ವೇದಾಂತವು ಪರಾಭವ ಒಪ್ಪಿಕೊಂಡು, ನನ್ನ ದಾಸ್ಯವನ್ನು ಒಪ್ಪಿಕೊಂಡು, ನನ್ನ ಮನೆಯ ನೀರು ತುಂಬ ಬೇಕಾಗುತ್ತದೆ ಎಂದೆನ್ನುತ್ತಾನೆ. ಇದು ಅಹಂಕಾರದ್ದಾಗಲಿ, ಸೊಕ್ಕಿನ ಮಾತಲ್ಲ. ತುಕಾರಾಮನಿಗೆ ಅಧಿಕಾರವಿಲ್ಲೆಂದು ಹೇಳಿದ್ದರಿಂದ ಚುಚ್ಚಿ ಮಾತಾಡಿದ್ದರಿಂದ, ಅವನು ತನ್ನ ಬಾಯಿಯಿಂದಲೇ ಆತ್ಮವಿಶ್ವಾಸದ ಮಾತು ಆಡಿದ್ದಾನೆ. ಅವನ ಮಹತ್ವ ಮತ್ತು ದೊಡ್ಡಸ್ತಿಕೆಯನ್ನು ಹೇಳುವ ಮತ್ತೊಬ್ಬರು ಇಲ್ಲದ್ದರಿಂದ, ಅವನು ಸ್ವತಃ ಹೇಳಿಕೊಳ್ಳಬೇಕಾಯಿತು. ಅಲ್ಲದೆ, ಅದನ್ನು ತುಕಾರಾಮನು ಕೇವಲ ಒಬ್ಬ ವ್ಯಕ್ತಿಯಾಗಿ ಮಾತಾಡದೆ, ಸಂಪೂರ್ಣ ಬಹುಜನ ಸಮಾಜದ ವತಿಯಿಂದ, ಸಕಲ ಶೂದ್ರರ ಪರವಾಗಿ ಮಾತನಾಡುತ್ತಿದ್ದ ಎಂಬುದು ಗಮನಿಸಬೇಕಾದ ಸಂಗತಿ. ಮುಖ್ಯವೆಂದರೆ, ನೈತಿಕ ವಿಚಾರವನ್ನು ಗಳಿಸಲು ಯಾವ ಕಷ್ಟವೂ ಪಡಬೇಕಾಗಿರಲಿಲ್ಲ. ಆ ವಿಚಾರ ಅವನ ರಕ್ತ-ಮಾಂಸದಲ್ಲಿತ್ತು. ಅವನ ವ್ಯಕ್ತಿತ್ವದ ಅವಿಭಾಜ್ಯ ಅಂಗವಾಗಿತ್ತು. ಅವನ ಸ್ಥಾಯಿ ಭಾವವಾಗಿತ್ತು. ಅದು ಅವನ ಉಸಿರಾಟದಷ್ಟೆ ಸಹಜವಾಗಿತ್ತು. ತುಕಾರಾಮನ ಸಹಜವಾಣಿಯ ಎದುರಿಗೆ ವೇದಾಂತವೇ ಉದ್ಧಂಡ ನಮಸ್ಕಾರ ಹಾಕುವಷ್ಟು ಯೋಗ್ಯತೆಯು ತುಕಾರಾಮನಲ್ಲಿತ್ತು. ಅವನ ಸಾವಿರಾರು ಅಭಂಗಗಳೇ ಇದರ ನಿಸ್ಸಂದೇಹ ಪುರಾವೆಯಾಗಿದೆ.

ವೇದಕ್ಕೆ ಅರ್ಥವಾಗದ ವಿಠ್ಠಲ ನಾವು ಹಾಡುವಾಗ ದೊರಕಿದ

ಯಾವ ವಿಠ್ಠಲನು ವೇದಗಳಿಗೂ ಅರ್ಥವಾಗಲಿಲ್ಲವೋ, ಅವನು ನಾವು ಹಾಡುವಾಗ ದೊರಕಿದನೆಂಬ ತುಕಾರಾಮನ ಹೇಳಿಕೆಯ ಧ್ವನ್ಯಾರ್ಥ ಸ್ಪಷ್ಟವಾಗಿದೆ. ವೈದಿಕಪಂಡಿತರು ವೇದಗಳಿಗೆ ಅದೆಷ್ಟೇ ಮಹತ್ವ ನೀಡಿದರೂ, ವೇದವು ದೇವರ ಪ್ರಾಪ್ತಿಯ ನಿಜವಾದ ಸಾಧನವಲ್ಲ. ಅಂತರಂಗದಲ್ಲಿಯ ನಿರ್ಮಲ ಭಾವನೆಯಿಂದ ದೇವರು ಲಭಿಸುತ್ತಾನೆ ಎಂದು ಸೂಚಿಸಿ, ತುಕಾರಾಮನು ವೇದಗಳ ಸ್ಥಾನ ಮತ್ತು ದರ್ಜೆಯು ಭಕ್ತಿಯ ತುಲನೆಯಲ್ಲಿ ಏನು ಅಲ್ಲ ಎಂದು ತೋರಿಸಿಕೊಟ್ಟಿದ್ದಾನೆ.

ವೇದದ ಅಂಕಿತವಿಲ್ಲ

ವೇದದ ಬಗೆಗಿನ ತುಕಾರಾಮನ ನಿಲುವಿನ ಚರಮ ಸೀಮೆಯನ್ನು ತಿಳಿದುಕೊಳ್ಳಲು ಮುಂದಿನ ವಿಚಾರವು ಲಕ್ಷಣೀಯವಾದುದು-ವೇದಗಳಿಗೆ ಅಹಂಭಾವವಿದೆ. ವೇದ ಓದುವ ಅಗತ್ಯವಿಲ್ಲ, ಶಾಸ್ತ್ರವನ್ನು ತಿಳಿದುಕೊಳ್ಳುವದೂ ಬೇಕಿಲ್ಲ. ನಾಮಸ್ಮರಣೆಯನ್ನು ಮಾಡಿ. ವೇದರೂಪಿ ಕಾಡಿನ ಶೋಧ ಕೈಕೊಳ್ಳಬೇಡಿ, ಅಂಥ ಆಯಾಸ ಮಾಡಿಕೊಳ್ಳಬೇಡಿ. ಅದರ ಬದಲು ಗೋವಳಿಗನ ಮನೆಗೆ ಹೋಗಿ, ಅಲ್ಲಿ ದೇವರನ್ನು ದಾವಣಿಗೆ ಕಟ್ಟಲಾಗಿದೆ. ನಿಮಗೆ ಮಾರ್ಗದ ರಹಸ್ಯ ಗೊತ್ತಿಲ್ಲದಿರುವುದರಿಂದ, ನೀವು ಭ್ರಮೆಯಿಂದ ಪೀಡಿತರಾಗಿದ್ದಿರಿ. ನೀವು ಮಾಯೆ ಅಹಂಕಾರದ ಪೊರೆಯನ್ನು ಚೆಲ್ಲಿಬಿಡಿ. ನಾನು ವೇದಕ್ಕೆ ಅಂಕಿತನಾಗಿಲ್ಲ, ವಿಠ್ಠಲನಿಗೆ ಅಂಕಿತನಾಗಿದ್ದೇನೆ, ವಿಠ್ಠಲನ ನಾಮಸ್ಮರಣೆ ಮಾಡಿದರೆ ಸಾಕು, ಆಗಮ-ನಿಗಮ ಹೇಳಿದ್ದನ್ನು ಗಮನಿಸಬೇಕಿಲ್ಲ. ವಿಠ್ಠಲನ ನಾಮವನ್ನು ಶ್ರದ್ಧೆಯಿಂದ ಉಚ್ಚರಿಸಿ, ಅದರ ಉಚ್ಚಾರ ಅಂಕುಡೊಂಕಾಗಿದೆಯೇ ಎಂಬುದನ್ನು ಗಮನಿಸಬೇಕಾಗಿಲ್ಲ. ಅದನ್ನು ಉಚ್ಚರಿಸುವಾಗ ಸಮಯ-ಕಾಲ ನೋಡಬೇಕಾಗಿಲ್ಲ. ಪಂಡಿತರಿಗೂ ಹೆದರಬೇಕಿಲ್ಲ. ಬೇಕಿದ್ದರೆ ಆ ಪಂಡಿತರು ವೇದೋಕ್ತ ಪಾಠಕರೇ ಆಗಿರಲಿ. ಯಾರು ತಮ್ಮ ದೇಹದೊಳಗಿನ ಧಾತುವನ್ನು ಪೋಷಿಸಿ ಉಳಿದವರಿಗೆ ಉಪದೇಶ ನೀಡುತ್ತಾರೋ, ಯಾರ ಅಂತರಂಗದಲ್ಲಿ ಪ್ರೇಮದ ಲವಲೇಶವೂ ಇಲ್ಲವೋ, ಅಂಥ ಜ್ಞಾನಿಗಳನ್ನು ನಾನು ಒಪ್ಪುವುದಿಲ್ಲ, ಅಂಥ ಪಂಡಿತರಿಗೆ ನಾನು ಬೆಲೆ ಕೊಡುವುದಿಲ್ಲ, ಈ ನಿರುಪಯುಕ್ತ ಗ್ರಂಥಗಳ ಬೆನ್ನೇಕೆ ಹತ್ತುತ್ತೀರಿ ? ಮಿಥ್ಯೆ ಭೇದವಾದವನ್ನು ಏಕೆ ಮಾಡುತ್ತೀರಿ !

ಭೌದ್ಧಿಕ ಮತ್ತು ಮಾನಸಿಕ ಉದ್ಘೋಷ,

ನಾನು ವೇದೋಕ್ತ ಪಂಡಿತರನ್ನು ಒಪ್ಪುವುದಿಲ್ಲ, ಅಥವಾ ಹೆದರುವದಿಲ್ಲ ಮತ್ತು ನಾನು ವೇದದ ಅಡಿಯಾಳಲ್ಲ ಎಂಬ ತುಕಾರಾಮನ ಘೋಷಣೆಯೆಂದರೆ, ಭಾರತದ ಸಾಮಾಜಿಕ ಚರಿತ್ರೆಯಲ್ಲಿಯ ಬೌದ್ಧಿಕ ಮತ್ತು ಮಾನಸಿಕ ಸ್ವಾತಂತ್ರ್ಯದ ಉದ್ಗೋಷವಾಗಿದೆ. ಈ ದೇಶದ ಬೌದ್ಧಿಕ ಅನುಯಾಯಿಗಳು ಇಲ್ಲಿಯ ವಿಶಾಲ ಬಹುಜನ ಸಮುದಾಯವನ್ನು ವೇದದ ಸೆರೆಯಲ್ಲಿ ಬಂಧಿಸಿಟ್ಟಿದ್ದಾರೆ. ಅವರಿಗೆ ಸ್ವತಂತ್ರ್ಯವಾಗಿ ಯೋಚಿಸುವ, ಮಾತಾಡುವ ಹಕ್ಕು ಇರಲಿಲ್ಲ. ಅವರ ರಕ್ತದ ಪ್ರವಾಹದ ಮೇಲೆ ಉಸಿರಾಟದ ಗತಿಯ ಮೇಲೆ ಅಷ್ಟೇ ಅಲ್ಲ ಬದುಕಿನ ಅಸ್ತಿತ್ವದ ಮೇಲೆ ಗುಲಾಮಗಿರಿಯನ್ನು ಹೇರಲಾಗಿತ್ತು. ವೇದ ಹೇಳಿದ್ದೇ ಅವರ ಧರ್ಮ, ಅದೇ ಅವರ ನೀತಿ, ಅದೇ ಅವರ ಕರ್ತವ್ಯವಾಗಿತ್ತು. ಅವರ ವ್ಯವಹಾರದಲ್ಲಿಯ ಅರ್ಥವಂತೂ ಮತ್ತಷ್ಟು ಕ್ರೂರ ಮತ್ತು ಕುಟಿಲವಾಗಿತ್ತು. ವೇದದ ಹೆಸರಿನಲ್ಲಲಿ ವೈದಿಕ ಅನುಯಾಯಿಗಳು ಹೇಳಿದ್ಧೆ ಅವರ ಧರ್ಮ, ಈ ಬಗೆಯಲ್ಲಿ ಆ ಸಮಾಜವನ್ನು ಅಪಮಾನಗೊಳಿಸಲಾಗುತ್ತಿತ್ತು. ಮನುಷ್ಯನಾಗಿ ಅವನ ಯಾವ ಸತ್ವವೂ ಉಳಿದಿರಲಿಲ್ಲ, ಆಸ್ಮಿತೆಯಿರಲಿಲ್ಲ, ಸ್ವಂತ ಧರ್ಮದ ಕುರಿತು ಯೋಚಿಸುವ, ಚಿಂತನೆ ನಡೆಸುವ, ಅಥವಾ ಸಮಾಜ ವ್ಯವಸ್ಥೆಯ ಬಗೆಗೆ ಏನಾದರೂ ನಿಯಮ ಮಾಡುವ ಕಿಂಚಿತ್ತೂ ಅಧಿಕಾರ ಅವನಿಗಿರಲಿಲ್ಲ. ಈ ಬಂದಿಖಾನೆಯಲ್ಲಿ ಅವನ ಮಾನವೀಯತೆಯೇ ಕಳೆದು ಹೋಗಿತ್ತು. ಉಸಿರುಗಟ್ಟಿದಂತಾಗಿತ್ತು. ಸೆರೆಯಲ್ಲಿದ್ದಾಗ ಅವನ ಕಿಂಚಿತ್ ಒದ್ದಾಟ ಅಥವಾ ಚಲನವಲನ ಮಾಡಿದರೂ ಅವನನ್ನು ಚಿತ್ರಹಿಂಸೆಗೆ ಒಳಪಡಿಸಲಾಗುತ್ತಿತ್ತು. ಶಾಶ್ವತ ಪಾಠ ಕಲಿಸಲಾಗುತ್ತಿತ್ತು. ವೇದದ ನಿಯಮ ಮುರಿದವರಿಗೆ ನೀಡುವ ಕ್ರೂರ ಶಿಕ್ಷೆ ಮತ್ತು ಅಮಾನುಷ ವರ್ತನೆಯನ್ನು ಕಂಡಾಗ ಇದೆಲ್ಲ ಸಹಜವಾಗಿ ಗಮನಕ್ಕೆ ಬರುತ್ತದೆ.

ನಿರ್ಭಯವಾಗಿ ಸಡ್ಡು ಹೊಡೆದ

ಪ್ರಾಚೀನ ಕಾಲದಲ್ಲಿ ಚಾರ್ವಾಕನು ಬಂದಿಖಾನೆಯ ಗೋಡೆಗಳು ಕಂಪಿಸುವಂತೆ ಮಾಡಿದ್ದ. ಆದರೆ ವೈದಿಕರು ಅವನನ್ನು ಅಪಮಾನಗೊಳಿಸಿ ಸಮಾಜದಿಂದ ಗಡಿಪಾರು ಮಾಡಿದರು. ಗೌತಮ ಬುದ್ಧನು ವೇದವನ್ನು ನಿರಾಕರಿಸಿದನು, ನಾನಾ ಬಗೆಯ ಯುಕ್ತಿ-ಕುಯುಕ್ತಿ ಮಾಡಿ ವೈದಿಕರು ಅವನ ವಿಚಾರವನ್ನು ಹೊಸಕಿ ಹಾಕಿದರು. ಮುಂದೆಯೂ ಹಲವರು ಬಂಡಾಯ ಮಾಡಿದರು, ಅದನ್ನು ಕೌಶಲ್ಯ ಅಥವಾ ಕ್ರೂರತನದಿಂದ ಮುರಿದು ಹಾಕಿದರು. ಚಕ್ರಧರನ ಶಿರಚ್ಛೇದ ಮಾಡಿದರು. ಜ್ಞಾನೇಶ್ವರ ಏಕನಾಥರನ್ನು ಅಪಮಾನಗೊಳಿಸಲಾಯಿತು. ವೈದಿಕರ ಈ ಬಂದಿಖಾನೆಯಿಂದ ಮುಕ್ತಗೊಳ್ಳಲು ಸಂವೇದನಾಶೀಲ ಮನಸ್ಸಿನ ತುಕಾರಾಮನು ನಿರ್ಭಯತನದಿಂದ ಷಡ್ಡು ಹೊಡೆದನು. ನಾನು ನಿಮ್ಮ ವೇದದ ಅಡಿಯಾಳಲ್ಲ. ವೇದದ ಬಲದಿಂದ ಸೊಕ್ಕಿನಿಂದ ವರ್ತಿಸುವ ಪಂಡಿತರನ್ನು ನಾನು ಪಂಡಿತನೆಂದು ಒಪ್ಪುವುದಿಲ್ಲ ಎಂದು ಬಹಿರಂಗವಾಗಿ ಗರ್ಜಿಸಿದನು.

ವೈದಿಕ ಪಂಡಿತರು ಅರ್ಥ ಅರಿಯದೇ ಮಾಡಿದ ಕಂಠಪಾಠ, ಅನುಭವ ರಹಿತ ಆಡಿದ ಮಾತು, ಅವರ ಆಚಾರಹೀನತೆ, ಅವರ ಸಂಪತ್ತಿನ ಮೋಹ, ಅವರ ಭೋಗ, ಲಂಪಟತನ, ಅವರ ದರ್ಪ, ಅವರು ಹೊಡೆದ ಬ್ರಹ್ಮಜ್ಞಾನದ ಪೊಳ್ಳು ಹರಟೆ, ನಿರರ್ಥಕವಾದ ಹಾಕುವ ಪ್ರವೃತಿ ಜನಸಾಮಾನ್ಯರಿಗೆ ವೇದದ ಅಧಿಕಾರ ನಿರಾಕರಿಸಿದ್ದರಿಂದ ಅವರು ಸಂಕೋಚಗೊಂಡ ಬಗೆ, ಮುಂತಾದ ಸಂಗತಿಗಳ ಮೇಲೆ ಚಾಬೂಕಿನ ಪ್ರಹಾರ ಮಾಡಿದನು. ಅವನ ಈ ಬಗೆಯ ವಿಚಾರಗಳೆಂದರೆ, ವೈದಿಕರ ಹುಳುಕು ವ್ಯವಸ್ಥೆಯ ವಿರುದ್ಧ ಹಲವು ಬಗೆಯಿಂದ ಸಾರಿದ ಯುದ್ಧದ ಪುರಾವೆಯಾಗಿದ್ದು, ವೇದಕ್ಕೆ ಅಂಕಿತವಾಗಿಲ್ಲ ಎಂದೆನ್ನುವದೆಂದರೆ, ಸ್ವಂತದ ಮತ್ತು ಒಟ್ಟೂ ಬಹುಜನ ಸಮಾಜದ ಸ್ವಾತಂತ್ರ್ಯದ ಘೋಷಣೆಯಾಗಿದೆ. ಸಾವಿರಾರು ವರುಷಗಳಿಂದ ವೈದಿಕರ ತಪೋಯುಗದಲ್ಲಿ ಸಿಲುಕಿದ ಈ ದೇಶದ ಬಹುಜನ ಸಮಾಜವನ್ನು ಮತ್ತೆ ಬೆಳಕಿಗೆ ತರುವ ಕಾರ್ಯ ಎನ್ನಲಡ್ಡಿಯಿಲ್ಲ, ನಾನು ವೇದಕ್ಕೆ ಅಧೀನನಲ್ಲ ಎಂದೆನ್ನುವದು ಚಿಕಿತ್ಸೆ ನೀಡುವ, ನವ ನಿರ್ಮಿತ ಮಾಡುವ ಅಧಿಕಾರವನ್ನು ಪ್ರಸ್ತಾಪಿತಗೊಳಿಸಿದಂತೆ. ತುಕಾರಾಮನು ಮಾಡಿದ್ದೂ ಅದೆ? ಧರ್ಮದ ಕುರಿತು, ಸಂಸ್ಕೃತಿ ಕುರಿತು, ಸಮಾಜದ ಕುರಿತು ನನಗೆ ಸಿಕ್ಕ ಹೆಸರನ್ನು ನಾನು ಹೇಳುತ್ತೇನೆ. ಯಾವ ಹಳೆಯದು ಘಾಸಿಗೊಳಿಸುತ್ತದೆಯೋ ಅದನ್ನು ಕೊಚ್ಚಿ ಹಾಕುತ್ತೇನೆ. ಯಾವ ವೈದಿಕ ಪಂಡಿತನಿಗೂ, ಶಾಸ್ತ್ರಗ್ರಂಥಕ್ಕೆ ಹೆದರಿ ನಾನು ನನ್ನ ಬಾಯಿ ಮುಚ್ಚಿಕೊಂಡು ಕೂತುಕೊಳ್ಳಲಾರೆ-ಎಂಬ ನಿರ್ಧಾರವು ಅವನ ನಿರ್ಣಯದಿಂದ ವ್ಯಕ್ತವಾಗುತ್ತದೆ.

ವೈದಿಕರ ಮನದಲ್ಲೆದ್ದ ಕ್ರೋಧದ ಜ್ವಾಲೆ

ತಲೆ ತಗ್ಗಿಸಿ, ಮೌನವಾಗಿ ತಮ್ಮಾಜ್ಞೆಯನ್ನು ಪರಿಪಾಲಿಸಬೇಕಾದ, ಒಬ್ಬ ಶೂದ್ರನು ಮಾಡಿದ ಈ ವಿದ್ರೋಹದಿಂದಾಗಿ, ಟೀಕೆಯ ಹಲ್ಲೆಯಿಂದಾಗಿ ವೈದಿಕ ಪಂಡಿತರ ಸಿಟ್ಟು ನೆತ್ತಿಗೇರಿತು ಎಂದು ಮತ್ತೆ ಹೇಳಬೇಕಿಲ್ಲ, ಎರಡೂವರೆ ಮೂರು ಸಾವಿರ ವರುಷಗಳ ಕಾಲ ಸಂಪೂರ್ಣ ಸತ್ತೆಯನ್ನು ಭೋಗಿಸಿದವರಿಗೆ, ಈ ಮಾತು ಅರಗಿಸಿಕೊಳ್ಳುವುದು ಕಠಿಣವಾಗಿರಬೇಕು. ಅವರ ನೈತಿಕ ಅರಿವು ಸ್ವಂತಕ್ಕೆ ಭೂಸುರರು ಎಂದುಕೊಳ್ಳುವ, ಸ್ವಂತ ಮಾತೇ ಅಂತಿಮ ಸತ್ಯವೆಂದು ಭಾವಿಸುವಷ್ಟು ಹ್ರಾಸ ಕಂಡಿತ್ತು. ಅಂಥವರಿಗೆ ಇದೆಲ್ಲ ಅಸಹನೀಯವಾಗಿರಬೇಕು. ತುಕಾರಾಮನ ಬಗೆಗೆ ಮನದಲ್ಲಿ ದ್ವೇಷ, ತಿರಸ್ಕಾರ, ಕ್ರೋಧದ ಜ್ವಾಲೆ ತುಂಬಿಕೊಂಡಿರಬೇಕು.

ಖರೆಯೆಂದರೆ ತುಕಾರಾಮನ ವರ್ತನೆಯು ಬಹುಜನ ಸಮಾಜವನ್ನು ಜಾಗೃತಗೊಳಿಸುತ್ತದೆ, ಭೋಗಿಸುವಂತೆ ಮಾಡುತ್ತದೆ. ಇದರಿಂದಾಗಿ ತಮ್ಮ ಹಿತಾಸಕ್ತಿ, ಸುಖೋಪಭೋಗ, ಪ್ರತಿಷ್ಠೆಗೆ ಗಂಡಾಂತರ ಬರಬಹುದು ಎಂಬ ಭಾವನೆಯಿಂದ ಅವರ ಕ್ರೋಧದ ಜ್ವಾಲೆ ಕೆರಳಿತು. ಆದರೆ ಅದನ್ನು ಬಹಿರಂಗವಾಗಿ ವ್ಯಕ್ತ ಮಾಡುವದು ವ್ಯವಹಾರಿಕವಾಗಿ ಅನುಕೂಲವಾಗಿರದ್ದರಿಂದ, ಅದಕ್ಕೆ ಧಾರ್ಮಿಕ ಕಾರಣಗಳ ಆವರಣ ಹಾಕಲಾಯಿತು-ತುಕಾರಾಮ ಧರ್ಮವನ್ನು ಮುಳುಗಿಸಿದ, ಧರ್ಮದ್ರೋಹ ಮಾಡುತ್ತಿದ್ದಾನೆ, ಪಾಖಂಡಿತನ ಬೆಳೆಸುತ್ತಿದ್ದಾನೆ, ಎಂದೆಲ್ಲ ಅವನ ವಿರುದ್ಧದಲ್ಲಿ ಕೂಗು ಹಾಕಿದರು. ಧರ್ಮದ ರಕ್ಷಣೆಗಾಗಿ ತುಕಾರಾಮನ ಈ ಪಾಖಂಡಿತನವನ್ನು ಮುರಿದೊಗೆಯಬೇಕು, ಅವನ ಭಜನೆ ಕೀರ್ತನೆಯನ್ನು ನಿಲ್ಲಿಸಬೇಕು. ಅಭಂಗಗಳ ಬರವಣಿಗೆ ಸ್ಥಗಿತಗೊಳಿಸಬೇಕು. ಇದೆಲ್ಲವೂ ವೇದದ ಮತ್ತು ಧರ್ಮದ ರಕ್ಷಣೆಗಾಗಿ, ವೈದಿಕ ಮಾರ್ಗದ ರಕ್ಷಣೆಗಾಗಿ ಮಾಡಬೇಕು ಎಂಬ ನಿರ್ಣಯವನ್ನು ವೈದಿಕ ಪಂಡಿತರು ತೆಗೆದುಕೊಂಡರು. ಈ ನಿರ್ಣಯದ ಬಳಿಕ ತುಕಾರಾಮನ ಬಾಯಿ ಮುಚ್ಚಲು ಹಲವು ಪ್ರಯತ್ನ ಮಾಡಿದರು. ಅಂಥ ಪ್ರಯತ್ನದಲ್ಲಿ ಅತ್ಯಂತ ಮಹತ್ವದ ಸಂಗತಿಯೆಂದರೆ, ತುಕಾರಾಮನ ಮೇಲೆ ಹಾಕಿದ ಖಟ್ಲೆ. ಆ ವಿಷಯದ ಬಗೆಗೆ, ಮತ್ತು ಖಟ್ಲೆಯ ಅಧಿಕ ವಿವೇಚನೆಯನ್ನು ಮುಂದೆ ಕೈಕೊಳ್ಳಲಾಗಿದೆ.