ತೃಪ್ತಿಯ ದಾಟಿ

ಕುಣಬಿಯ ತುಕಾರಾಮ ಮಾತ್ರ ಈ ಬಗೆಯ ಗ್ರಂಥ ಪಠಣ ಮಾಡುವುದಿಲ್ಲ. ಧರ್ಮಶಾಸ್ತ್ರದ ವಿಚಾರವೂ ಅವನಿಗೆ ಗೊತ್ತಿಲ್ಲ. ಅವನು ಪಂಢರಿನಾಥನ ಮೇಲೆ ಭಾರಹಾಕಿದ್ದಾನೆ. ತನಗೆ ಶಾಸ್ತ್ರ ಗೊತ್ತಿಲ್ಲ ಎಂಬ ಭಾವನೆಯು ನ್ಯೂನಗಂಡದಿಂದಾಗಲೀ ಅಜ್ಙಾನದಿಂದಾಗಲಿ ಬಂದದ್ದಲ್ಲ. ಶಾಸ್ತ್ರದ ಮೂಲಕ ಸಿಗದೆ ಇರುವ ಶ್ರೇಷ್ಠಮಟ್ಟದ ಸತ್ಯ ತನಗೆ ದೊರಕಿದೆ ಎಂದು ಹೇಳುವುದೇ ಅವನ ಉದ್ದೇಶ. ಅದೇ ರೀತಿ ಶಾಸ್ತ್ರ ಗ್ರಂಥದಿಂದ ವ್ಯಕ್ತವಾಗುವ ಮತವು ಸತ್ಯದ ಯಥಾರ್ಥ ದರ್ಶನವನ್ನು ಮಾಡಿಸುವುದಿಲ್ಲ ಎಂಬುದನ್ನೂ ಸ್ಪಷ್ಟಪಡಿಸಿದ್ದಾನೆ. ಶಾಸ್ತ್ರಕ್ಕಿಂತಲೂ ಉನ್ನತದರ್ಜೆಯ ಏನೋ ಒಂದನ್ನು ತಾನು ಪ್ರಾಪ್ತ ಮಾಡಿಕೊಂಡಿದ್ದೇನೆಂಬ ಆತ್ಮವಿಶ್ವಾಸ, ತೃಪ್ತಿಯ ದಾಟಿ ಈ ಶಬ್ದಗಳಲ್ಲಿ ವ್ಯಕ್ತವಾಗುತ್ತದೆ. ವಿಠ್ಠಲನ ಭಕ್ತಿಯನ್ನು ಕೈಕೊಳ್ಳಿ ಎಂದು ಈ ತುಕಾರಾಮನು ನಿಮ್ಮನ್ನು ಕೋರುತ್ತಿದ್ದಾನೆ ಎಂದು ಮತ್ತೂ ಒಂದು ಅಭಂಗದಲ್ಲಿ ಹೇಳಿದ್ದಾನೆ.

ಶರಣು ತಾಯಿತಂದೆ ಶರಣು

ತುಕಾರಾಮನು ತನ್ನನ್ನು ಕೇವಲ ರೈತನಷ್ಟೇ ಅಲ್ಲ. ಮಹಾರನೆಂದೂ ಕರೆದುಕೊಂಡಿದ್ದಾನೆ. ಹೀಗೆ ಹೇಳುವಾಗ ಯಾವ ಕೀಳುತನವೂ ಅವನನ್ನು ಕಾಡುವುದಿಲ್ಲ. ಅವನು ‘ಜೋಹಾರ’ಗೆ ಸಂಬಂಧಿಸಿದ ಎರಡು ಅಭಂಗ ರಚಿಸಿದ್ದಾನೆ. ಮಹಾರ ಜಾತಿಯಲ್ಲಿ ಜನಿಸಿದ ಜನರು ಮಾಡುವ ನಮಸ್ಕಾರಕ್ಕೆ ಜೋಹಾರ (ಶರಣು) ಎನ್ನುತ್ತಾರೆ. ತುಕಾರಾಮನು ಈ ಅಭಂಗದಲ್ಲಿ ತನ್ನನ್ನು ‘ವೇಸಕರ’ ಎಂದರೆ ಮಹಾರ ಎಂದು ಒಪ್ಪಿಕೊಂಡಿದ್ದಾನೆ. ನಾನು ವೇಸಕರ ಜೋಹಾರ ಮಾಡುತ್ತಿದ್ದೇನೆ ಎಂದವನು ಅನ್ನುತ್ತಾನೆ. ಅವನು ಪ್ರತೀಕಾತ್ಮಕವಾಗಿಯಾದರೂ ಸ್ವಂತಕ್ಕೆ ಮಹಾರನೆಂದು ಕೊಳ್ಳುವದು, ತನ್ನ ಮಾತಿಗೆ ಜೋಹಾರನೆಂದು ಕೊಳ್ಳುವದು ಸಾಮಾಜಿಕವಾಗಿ ಮಹತ್ವದ ಘಟನೆ. ಪ್ರತೀಕವನ್ನು ಸ್ವೀಕರಿಸುವಾಗಲೂ ಸಹ, ಪ್ರತಿಷ್ಠಿತ ಪ್ರತೀಕದ ಜತೆಗೆ ಸಂಬಂಧ ಜೋಡಿಸಲು ಜನ ಪ್ರಯತ್ನಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದರ ಬದಲು, ತುಕಾರಾಮನು ಅಸ್ಪೃಶ್ಯರಾದ ಜಾತಿಯೊಂದಿಗೆ ತನ್ನನ್ನು ಏಕರೂಪ ಗೊಳಿಸಿದ ಅಭಂಗ ಬರೆಯುವದೆಂದರೆ, ಸ್ವಂತ ಪ್ರತಿಷ್ಠೆಯನ್ನು ವಿಸರ್ಜನೆಗೊಳಿಸಿದಂತೆ. ಜಾತಿ ವ್ಯವಸ್ಥೆಯಲ್ಲಿ ತನಗಿಂತಲೂ ಶ್ರೇಷ್ಠಜಾತಿಯವರ ವಿರುದ್ಧ ಬಂಡೇಳುವ ವ್ಯಕ್ತಿಯು ತನಗಿಂತಲೂ ಕೆಳವರ್ಗದಲ್ಲಿದ್ದ ವ್ಯಕ್ತಿಗಳನ್ನು ಸಮಾನವಾಗಿ ಕಾಣಲು ಸಿದ್ಧನಿರುವುದಿಲ್ಲ. ಅವರನ್ನು ತುಚ್ಛವಾಗಿ ಕಾಣುತ್ತಾರೆ. ಹಂಗಿಸುತ್ತಾರೆ ಎಂಬುದನ್ನು ಹಲವು ಬಾರಿ ಕಂಡಿರುತ್ತೇವೆ. ಪರಂಪರೆಯು ದೃಷ್ಟಿಯಲ್ಲಿ ತುಕಾರಾಮನ ಜಾತಿಯು ಮಹಾರ ಜಾತಿಗಿಂತಲೂ ತೌಲನಿಕವಾಗಿ ಮೇಲುಸ್ಥಾನದಲ್ಲಿತ್ತು. ಈ ಉಚ್ಚ ಸ್ಥಾನದಿಂದ ತನಗೆ ಲಭಿಸಿದ ಪ್ರತಿಷ್ಠೆಯನ್ನು ಈ ಅಭಂಗದ ಮೂಲಕ ಸ್ವ ಇಚ್ಛೆಯಿಂದ ವಿಸರ್ಜಿಸಿದ ಎಂದೆನ್ನಲಡ್ಡಿಯಿಲ್ಲ.

ಅಸ್ಪೃಶ್ಯತೆಯ ಪಾಪ ದೇಹಾಂತ ಪ್ರಾಯಶ್ಚಿತ್ತದಿಂದಲೂ ತೀರುವದಿಲ್ಲ

ತುಕಾರಾಮನು ತನ್ನನ್ನು ಮಹಾರನೆಂದು ಕರೆದುಕೊಳ್ಳಲು ಹಿಂಜರಿಯಲಿಲ್ಲ ಎಂಬುದನ್ನು ನಾವು ಗಮನಿಸಿದೆವು. ಹೀಗಾಗಿ ಮಹಾರ ವ್ಯಕ್ತಿಯನ್ನು ಸ್ಪೃಶ್ಯನೆನ್ನುವುದು ಅವನ ದೃಷ್ಟಿಯಲ್ಲಿ ಧರ್ಮವಲ್ಲ. ಈ ದೃಷ್ಟಿಯಿಂದ ಅವನ ಒಂದು ಅಭಂಗದಲ್ಲಿ ಈ ಆಶಯವಿರುವದನ್ನು ಕಾಣಬಹುದು. ಅವನು ಅನ್ನುತ್ತಾನೆ: ಮಹಾರ ವ್ಯಕ್ತಿಯನ್ನು ಮುಟ್ಟಿದಾಗ ಯಾರು ಸಿಟ್ಟಿಗೇಳುತ್ತಾನೋ ಅವನು ಬ್ರಾಹ್ಮಣನೇ ಅಲ್ಲ. ಅವನ ಈ ಸಿಟ್ಟಿನ ಪಾಪಕ್ಕೆ ದೇಹತ್ಯಾಗ ಮಾಡಿದರೂ ಪ್ರಾಯಶ್ಚಿತವಾಗುವುದಿಲ್ಲ. ಈ ಬ್ರಾಹ್ಮಣನು ಚಂಡಾಲನನ್ನು ಸ್ಪರ್ಶಿಸುವುದಿಲ್ಲ. ಏಕೆಂದರೆ, ಅವನ ಸ್ವಂತ ಅಂತರಗಂಗದಲ್ಲೇ ಮೈಲಿಗೆಯಿರುತ್ತದೆ. ಯಾರ ಮನದಲ್ಲಿ ಮೈಲಿಗೆಯ ಭಾವವಿರುತ್ತದೋ ಅದೇ ಜಾತಿಯು ಅವನಿಗೆ ಪ್ರಾಪ್ತವಾಗುತ್ತದೆ.

ತುಕಾರಾಮನ ಈ ಅಭಂಗವು ಅವನ ಸಾಮಜಿಕ ಚಿಂತನೆ, ಜೀವನದ ಬಗೆಗಿರುವ ತತ್ವಜ್ಞಾನ, ವ್ಯವಹಾರದ ಆಚರಣೆಯ ಕುರಿತಾಗಿರುವ ಮನೋಧಾರಣೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದು. ಮಹಾರನನ್ನು ಸ್ಪರ್ಶಿಸಿದಾಗ ಸಿಟ್ಟಿಗೇಳುವವನು ನಿಜವಾದ ಬ್ರಾಹ್ಮಣನಲ್ಲ ಎಂದವನು ಹೇಳುವಾಗ ಅಷ್ಪೃಶ್ಯತೆಯನ್ನು ಪಾಲಿಸುವುದು ಪಾಪ ಎಂದರ್ಥ. ಇದೇ ಅವನ ನಿಲುವು.

ತನ್ನ ಈ ನಿಲುವನ್ನು ಮಂಡಿಸುವಾಗ ತುಕಾರಾಮನು ಬ್ರಾಹ್ಮಣನ ಒಂದು ನಿಕಷವನ್ನು ಹೇಳಿದ್ದಾನೆ. ಬೇರೆಯವರನ್ನು ಶೂಧ್ರ, ಅಸ್ಪೃಶ್ಯನೆನ್ನಲು ಬ್ರಾಹ್ಮಣ್ಯ ಒಪ್ಪುವುದಿಲ್ಲ ‘ಬ್ರಹ್ಮನನ್ನು ಅರಿತವನೇ ಬ್ರಾಹ್ಮಣ’ ಎಂಬರ್ಥದಲ್ಲಿ ಒಪ್ಪಬೇಕು. ಬ್ರಹ್ಮನ ಸಂಬಂಧ ಸಮತೆಯೊಂದಿಗಿದೆ ಎಂದು ತುಕಾರಾಮನು ಮತ್ತೆ ಮತ್ತೆ ಹೇಳಿದ್ದಾನೆ. ಆದ್ದರಿಂದ ‘ಸಮಬ್ರಹ್ಮ’ನನ್ನು ಅರಿತವನೇ ಬ್ರಾಹ್ಮಣ ಎಂದೆನ್ನಲು ಅಡ್ಡಿಯಿಲ್ಲ. ಹೀಗಾಗಿ ಸಮಬ್ರಹ್ಮನ ಪರಿಕಲ್ಪನೆಯಲ್ಲಿ ಯಾರು ಶೂದ್ರ, ಯಾರು ಅಸ್ಪೃಶ್ಯ ಎಂಬ ಭೇದಕ್ಕೆ ಅಥವಾ ವಿಷಮತೆಗೆ ಅವಕಾಶವೇ ಇರುವುದಿಲ್ಲ. ತಾತ್ಪರ್ಯ : ಯಾರು ಅಸ್ಪೃಶ್ಯತೆಯನ್ನು ಒಪ್ಪುತ್ತಾರೋ, ಅವನಿಗೆ ಸಮಬ್ರಹ್ಮನ ಜ್ಞಾನ ಸಿಕ್ಕಿರುವ ಸಾಧ್ಯತೆಯಿಲ್ಲ. ಹೀಗಾಗಿ ಅವನನ್ನು ಬ್ರಾಹ್ಮಣ ಎನ್ನುವಂತಿಲ್ಲ.

ಬ್ರಾಹ್ಮಣನಾಗಲು ಸ್ವತಃ ಬ್ರಹ್ಮರೂಪ ಧರಿಸಬೇಕು

ಬ್ರಾಹ್ಮಣ್ಯಕ್ಕೆ ಇರಬೇಕಾದ ಅರ್ಹತೆಯೇನು ಎಂಬುದನ್ನು ತುಕಾರಾಮನು ತನ್ನ ಅಭಂಗದಲ್ಲಿ ಅತ್ಯಂತ ಸ್ಪಷ್ಟವಾಗಿ ನಮೂದಿಸಿದ್ದಾನೆ. ಸ್ವತಃ ಬ್ರಹ್ಮರೂಪ ಪಡೆದಾಗಲೇ ಬ್ರಾಹ್ಮಣನಾಗುವುದು ಸಾಧ್ಯ ಎನ್ನುವುದು ಅವನ ಅಂಬೋಣ. ತಾನು ಬ್ರಾಹ್ಮಣ ಜಾತಿಯಲ್ಲಿ ಜನಿಸಿದ್ದರಿಂದ ಶೂದ್ರನನ್ನು ಮುಟ್ಟುವುದಿಲ್ಲ ಎಂದೆನ್ನುವ, ಅವನ ಸ್ಪರ್ಶದಿಂದ ಕೆರಳುವ ಮನುಷ್ಯನು ತುಕಾರಾಮನ ಲಕ್ಷಣದ ಪ್ರಕಾರ ಬ್ರಾಹ್ಮಣನಾಗುವುದಿಲ್ಲ. ತುಕಾರಾಮ ಇಷ್ಟಕ್ಕೆ ನಿಲ್ಲುವುದಿಲ್ಲ. ಮಹಾರನ ಸ್ಪರ್ಶದಿಂದ ಸಿಟ್ಟಿಗೇಳುವುದಕ್ಕೆ ಅವನು ಮಹಾಭಯಂಕರ ಪಾಪವೆನ್ನುತ್ತಾನೆ. ವಿಶಿಷ್ಟ ಮಂತ್ರ ಹೇಳಿದರೆ ಬ್ರಾಹ್ಮಣನ ಎಂಥ ಪಾಪವೂ ಅಳಿಯುತ್ತದೆ ಎಂದು ಹಲವು ಧರ್ಮಶಾಸ್ತ್ರಗಳು ಹೇಳುತ್ತವೆ. ಪಾಪದಿಂದ ಬಿಡುಗಡೆ ಹೊಂದಲು ಅತೀ ದೊಡ್ಡ ಪ್ರಾಯಶ್ಚಿತ್ತವೆಂದರೆ ದೇಹಾಂತ ಹೊಂದುವುದು. ಮಹಾರ ವ್ಯಕ್ತಿಯ ಸ್ಪರ್ಶದಿಂದ ಸಿಟ್ಟಿಗೇಳುವುದು ತುಕಾರಾಮನ ದೃಷ್ಟಿಯಲ್ಲಿ ಎಂಥ ಗಂಭೀರ, ಭಯಂಕರ ಮತ್ತು ತಿರಸ್ಕಾರದ ಪಾಪವೆಂದರೆ ದೇಹಾಂತ ಪ್ರಾಯಶ್ಚಿತ ಮಾಡಿಕೊಂಡರೂ ಅದು ಸಾಲುವುದಿಲ್ಲ. ಈ ಪಾಪದಿಂದ ಬಿಡುಗಡೆ ಹೊಂದುವುದಿಲ್ಲ.

ಸ್ಪರ್ಶದಿಂದಲ್ಲ, ಸಂಕುಚಿತ ಮನೋಭಾವನೆಯಿಂದ ಮೈಲಿಗೆ

ಸ್ವತಃ ಬ್ರಾಹ್ಮಣನಾದವನು ಚಾಂಡಾಲನನ್ನು ಸ್ಪರ್ಶಿಸುವುದಿಲ್ಲ. ಚಾಂಡಾಲನ ಈ ಮೈಲಿಗೆಯನ್ನು ತಪ್ಪಿಸುವುದರಿಂದ ತನ್ನ ಪರಿಶುದ್ಧತೆಯ ಖಾಯಂ ಉಳಿಯುತ್ತದೆ ಎಂದವನ ಭಾವನೆ. ವಾಸ್ತವಿಕ ಸಂಗತಿಯೆಂದರೆ ಅವನ ಅಂತರಂಗದಲ್ಲೇ ಮೈಲಿಗೆಯಿದೆ. ಏಕೆಂದರೆ ಮಹಾರ ಅಥವಾ ಚಾಂಡಾಲನ ಸ್ಪರ್ಶದಿಂದ ಮೈಲಿಗೆಯಾಗದೆ, ಸಂಕುಚಿತ ಮನೋಭಾವನೆಯಿಂದ ಮೈಲಿಗೆಯಾಗುತ್ತದೆ ಎನ್ನುವುದು ತುಕಾರಾಮನ ಅಂಬೋಣ. ಅವರವರ ವಿಚಾರದಿಂದ ಜಾತಿ ನಿರ್ಧಾರವಾಗುತ್ತದೆ ಎಂದು ತುಕಾರಾಮನ ಭಾವನೆ. ಸಮ ಬ್ರಹ್ಮನೆಂದರೆ ಮನುಷ್ಯ-ಮನುಷ್ಯನಲ್ಲಿ ಸಮತೆಯ ಸದಾಚಾರದ ವಿಚಾರ ಮನದೊಳಗೆ ಇದ್ದರೆ, ಅವನ ಜಾತಿಯು ಶ್ರೇಷ್ಟ ಮತ್ತು ಶುದ್ಧವಾಗಿರುತ್ತದೆ. ಅದರ ಬದಲು ಅನ್ಯರನ್ನು ಹಂಗಿಸುವ ವಿಷಮತೆಯ ಯೋಚನೆಯು ಮನದಲ್ಲಿದ್ದರೆ, ಅವನದು ಕೀಳು ಜಾತಿ ಎಂದು ಭಾವಿಸಬೇಕು.

ಅವನ ಜಾತಿಕುಲ ಏಕೆ ಬೇಕು ?

ಸಾಮಾಜಿಕ ವ್ಯವಹಾರದಲ್ಲಿಯ ಜಾತಿ ನಿರಪೇಕ್ಷವನ್ನು ಸ್ಪಷ್ಟಪಡಿಸುವಾಗ ತುಕಾರಾಮನು ಒಂದು ಅಭಂಗದಲ್ಲಿ ಮುಂದಿನ ವಿಚಾರವನ್ನು ಮಂಡಿಸಿದ್ದಾನೆ. ವಣಿಕನ ಅಂಗಡಿಯಲ್ಲಿದ್ದ ಬೆಲ್ಲ ಖರೀದಿಸುವಾಗ, ಅವನ ಜಾತಿ-ಕುಲ ಏಕೆ ಬೇಕು? ತಿಪ್ಪೆಯಲ್ಲಿ ಬೆಳೆದ ತುಳಸಿಯನ್ನು ಅಲ್ಲಿಯ ಹೊಲಸು ಕಂಡು ಚೆಲ್ಲುವದು ಸರಿಯೇ? ಹಲಸಿನ ಕವಚಕ್ಕೂ ನಮಗೂ ಏನು ಸಂಬಂಧ? ಅದರಲ್ಲಿಯ ಕವಚ ಬೀಜ ತೆಗೆದೊಗೆದು ತಿಂದರಾಯಿತು.

ತುಕಾರಾಮನು ಈ ಅಭಂಗದಲ್ಲಿ ಸಾರ್ವಜನಿಕ ವ್ಯವಹಾರ ಮಾಡುವ ಸಂದರ್ಭದಲ್ಲಿ ಒಂದು ಮಹತ್ವದ ಸಿದ್ಧಾಂತವನ್ನು ಮಂಡಿಸಿದ್ದಾನೆ. ಈ ವ್ಯವಹಾರ ಮಾಡುವಾಗ ನಾವು ಕೇವಲ ವ್ಯವಹಾರದ ಮೇಲಷ್ಟೇ ಲಕ್ಷ್ಯ ಕೇಂದ್ರಿಕರಿಸಬೇಕು. ವ್ಯವಹಾರ ಮಾಡುವ ವ್ಯಕ್ತಿಯ ಜಾತಿಯ ಬಗೆಗೆ ತಲೆ ಕೆಡಿಸಿಕೊಳ್ಳಬಾರದು ಎನ್ನುವದೇ ಆ ಸಿದ್ಧಾಂತ. ಈ ಸಿದ್ಧಾಂತದ ಮನವರಿಕೆ ಮಾಡಿಕೊಡಲು ಅವನು ನೀಡಿದ ಉದಾಹರಣೆ ಮಾರ್ಮಿಕವಾಗಿದೆ. ವಣಿಕನ ಅಂಗಡಿಯಲ್ಲಿ ಬೆಲ್ಲ ಖರೀದಿಸಬೇಕೆಂದಿದ್ದರೆ ಹಣ ಕೊಡಿ, ಬೆಲ್ಲ ಖರೀದಿಸಿ. ಆ ವಣಿಕನ ಜಾತಿ ಯಾವುದು ಎಂದೆಲ್ಲ ತಲೆ ಕೆಡಿಸಿಕೊಳ್ಳಬೇಡಿ. ಅವನ ಜಾತಿಯು ಶ್ರೇಷ್ಠವೇ, ಕನಿಷ್ಠವೇ ಎಂದೆಲ್ಲ ಶೋಧಿಸಲು ಹೋಗಬೇಡಿ. ಈ ಬಗೆಯ ಸಾಮಾಜಿಕ ವ್ಯವಹಾರವನ್ನು ಜಾತಿ ನಿರಪೇಕ್ಷ ಪದ್ಧತಿಯಿಂದ ಮಾಡಬೇಕೆನ್ನುವುದು ತುಕಾರಾಮನ ಮಾತಿನ ತಾತ್ಪರ್ಯ

ಅವನು ನೀಡಿದ ತುಳಸಿ ಮತ್ತು ಹಲಸಿನ ಉದಾಹರಣೆಯೂ ಲಕ್ಷಣೀಯವಾದುದು. ತುಳಸಿಯ ತುಳಸಿತನವು ಅದರ ಮಹಾತ್ಮೆ ಮತ್ತು ಗಿಡದಲ್ಲಿರುವ ಗುಣಧರ್ಮವನ್ನು ಅವಲಂಬಿಸಿದೆ. ಅದು ಎಲ್ಲಿ ಬೆಳೆಯಿತು ಎಂಬುದರ ಮೇಲಲ್ಲ. ಅದು ತಿಪ್ಪೆಯಲ್ಲಿ ಹುಟ್ಟಿದರೂ ಸ್ವೀಕಾರಾರ್ಹವಾಗಿರುತ್ತದೆ. ಅದೇ ರೀತಿಯಲ್ಲಿ ಗುಣವಂತನಾದವನು ಕೀಳು ಜಾತಿಯಲ್ಲಿ ಜನಿಸಿದರೂ, ಅವನನ್ನು ದೂರ ಸರಿಸುವಂತಿಲ್ಲ. ಅವನನ್ನು ಬಳಿಗೆ ಕರೆದುಕೊಳ್ಳಬೇಕು. ವರ್ಣ, ಜಾತಿ ಮುಂತಾದ ಸಂಗತಿಗಳು ಹಲಸಿನ ಮೇಲು ಸಿಪ್ಪೆಯಂತಿರುತ್ತದೆ. ಆಚಾರ, ವಿಚಾರಗಳು ಅದರೊಳಗಿನ ಬೀಜದಂತಿರುತ್ತದೆ. ಸಿಪ್ಪೆಯನ್ನು ಕಂಡು ಹಲಸನ್ನು ನಿರಾಕರಿಸುವ ಮನುಷ್ಯ ಮೂರ್ಖನಾಗಿರುತ್ತಾನೆ. ಅವನಿಗೆ ಹಲಸಿನ ತೊಳೆಯಲ್ಲಿರುವ ರಸ ಮತ್ತು ಸವಿಯು ನೆಕ್ಕಲು ಸಿಗುವುದಿಲ್ಲ. ಅದೇ ರೀತಿ ಜಾತಿಯಂತಹ ಬಾಹ್ಯ ವಿಷಯದ ಕಡೆಗೆ ಗಮನ ಹರಿಸುವ ಮನುಷ್ಯನು ಸದ್ಗುಣ ವ್ಯಕ್ತಿಯ ಸಹವಾಸದಿಂದ ವಂಚಿತನಾಗದೇ ಇರಲಾರ. ಅವನೊಂದಿಗೆ ಸಾಗಿಸುವ ವ್ಯವಹಾರಿಕ ಸಂತೋಷವನ್ನು ಕಳೆದುಕೊಳ್ಳದೆ ಇರಲಾರ.

ಜಾತಿಹೀನ ಗೌಡನ ಆಜ್ಞೆ ಪಾಲಿಸಲೇಬೇಕು

ಊರಗೌಡ ಹೀನ ಜಾತಿಯವನಾದರೆ ಅವನ ಆಜ್ಞೆ ಪಾಲಿಸಬಾರದೆಂದಿದೆಯೇ? ಎಂಬ ಪ್ರಶ್ನೆಯನ್ನು ತುಕಾರಾಮನು ಒಂದು ಅಭಂಗದಲ್ಲಿ ಕೇಳುತ್ತಾನೆ. ಅವನು ಕೀಳು ಜಾತಿಯವನಾಗಿದ್ದರೂ ಆಜ್ಞೆ ಪಾಲಿಸಲೇಬೇಕು ಎಂದು ತನ್ನ ವಿಚಾರವನ್ನು ತುಕಾರಾಮನು ನಿಸ್ಸಂದೇಹದಿಂದ ಮಂಡಿಸುತ್ತಾನೆ.

ಈ ಪ್ರಶ್ನೆಗೆ ಎರಡು ಮಗ್ಗಲುಗಳು ಕಾಣಿಸಿಕೊಳ್ಳುತ್ತವೆ. ಹೀನ ಜಾತಿಯವನು ಸಹ ಊರ ಗೌಡನಾಗುತ್ತಾನೆ. ಅವನಿಗೆ ಆ ಹುದ್ದೆಯ ಅಧಿಕಾರವಿದೆ. ಆ ಹುದ್ದೆ ಪಡೆಯಲು ಜಾತಿ ಅಡ್ಡ ಬರುವುದಿಲ್ಲ. ಇದು ಒಂದು ಮಗ್ಗಲಾಯಿತು. ಇಂಥ ಮನುಷ್ಯ ಗೌಡನಾದ ಬಳಿಕ ಉಚ್ಚ ಜಾತಿಯವರೂ ಸಹ ಅವನಾಜ್ಞೆ ಪಾಲಿಸಲೇಬೇಕು. ತಾವು ಉಚ್ಚ ಜಾತಿಯವರಾಗಿದ್ದು, ಹೀನನ ಮಾತು ಕೇಳುವುದು ಹೇಗೆ ಎಂದು ಯೋಚಿಸುವಂತಿಲ್ಲ. ಅವನಿಗೆ ಗೌಡನ ಬೆಲೆ ನೀಡಲೇಬೇಕು. ಇದು ಎರಡನೇ ಮಗ್ಗಲು.

ಶಿವಾಜಿ ಮಹಾರಾಜನ ಪಟ್ಟಾಭಿಷೇಕದ ಕಾಲಕ್ಕೆ ಸಂತ ತುಕಾರಾಮನು ಇದ್ದಿದ್ದರೆ ಪಟ್ಟಾಭಿಷೇಕಕ್ಕೆ ವೈದಿಕರು ವಿರೋಧಿಸುತ್ತಿದ್ದಾಗ, ಅವನ ಈ ನಿಲುವಿನ ನೈತಿಕ ಬೆಂಬಲವು ಶಿವಾಜಿಯ ಬೆನ್ನಿಗೆ ನಿಲ್ಲುತ್ತಿತ್ತೆಂದು ನನಗನಿಸುತ್ತದೆ.

ಸಕಲರಿಗೂ ಅಧಿಕಾರವಿದೆ

ಅಧಿಕಾರದ ವಿಷಯದಲ್ಲಿ ತುಕಾರಾಮನು ಮುಂದಿನ ವಿಚಾರ ಮಂಡಿಸಿದ್ದಾನೆ. : ಸ್ವರ್ಗ ಅಥವಾ ವೈಕುಂಠದಲ್ಲೂ ಸಿಗದ ಸುಖವು ಈ ಇಹಲೋಕದಲ್ಲಿ ಹರಿನಾಮದಿಂದ ಸಿಗುತ್ತದೆ. ಆ ಅಧಿಕಾರ ಸಕಲರಿಗೂ ಇದೆ. ತುಂಬಿಕೊಂಡಿರುವ ದೇವರ ಪ್ರಸಾದದ ಅಧಿಕಾರವು ಎಲ್ಲರಿಗೂ ಇದೆ. ನಾಮಸ್ಮರಣೆಯ ಅಧಿಕಾರವು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ, ಚಂಡಾಲರಿಗೂ, ಸ್ತ್ರೀ-ಪುರಷರಿಗೂ-ಮಕ್ಕಳಿಗೂ ಅಲ್ಲದೆ ವೇಶ್ಯೆಯರಿಗೂ ಇದೆ. ಎಲ್ಲ ವರ್ಣದ ಜನರಿಗೆ ತೃಪ್ತಿ ಸಿಗಬೇಕು. ವೇದದ ಅಧಿಕಾರ ಸಿಗದ ಹಲವರಿಗೆ ನಾರಾಯಣನು ತನ್ನ ಪಾದದ ಬಳಿಯಲ್ಲಿ ಸ್ಥಳ ನೀಡಿದ್ದಾನೆ. ಪಂಢರಿಯ ವಾರಕರಿ ಮೂಢ ಅಥವಾ ಪಾಪಿಯಾಗಿರಬಹುದು. ಆದರೂ ಅವರಿಗೆ ಮೋಕ್ಷದ ಅಧಿಕಾರವಿದೆ. ಪರೀಷವು ಕಬ್ಬಿಣದ ಗುಣದೋಷ ಗಮನಿಸದೆ ಉದ್ದರಿಸುವಂತೆ ದೇವರು ಎಲ್ಲರನ್ನು ಉದ್ಧರಿಸುತ್ತಾನೆ. ಗಣಿಕೆಯರ ಜಾತಿಗೂ ಅಧಿಕಾರವಿರಲಿಲ್ಲ. ಆದರೂ ವಿಠ್ಠಲನೂ ಆಕೆಗೂ ಅಧಿಕಾರ ನೀಡಿದ.

ತುಕಾರಾಮನು ಈ ನಿಲುವು ಸಾಮಾಜಿಕವಾಗಿ ಅತ್ಯಂತ ಮಹತ್ವದ್ದು. ವೈದಿಕ ಪರಂಪರೆಯು ಹಲವು ರೀತಿಯಲ್ಲಿ ಶೂದ್ರರನ್ನು ಹತ್ತಿಕ್ಕಿತ್ತು. ; ನಾನಾ ರೀತಿಯಲ್ಲಿ ಹಂಗಿಸಿತ್ತು. ಪ್ರತಿಷ್ಠೆಯ, ಸುಖೀ ಜೀವನದ ಎಲ್ಲ ಬಾಗಿಲುಗಳನ್ನು ಮುಚ್ಚಿದ್ದರು. ಈ ಹಿನ್ನಲೆಯಲ್ಲಿ ತುಕಾರಾಮನು ಹೇಳಿದ ಭಕ್ತಿಯ ವಿಶ್ವದ ನಿಯಮವು ಎಷ್ಟು ಉಜ್ವಲವಾಗಿತ್ತು ಎನ್ನುವುದು ಗಮನಿಸಬೇಕಾದ ಸಂಗತಿ.

ವೈದಿಕ ಪರಂಪರೆಯು ಅಧಿಕಾರ ನಿರಾಕರಿಸಿದವರಿಗೆಲ್ಲ, ಅಧಿಕಾರವಿರುವದಾಗಿ ತುಕಾರಾಮನು ಖಚಿತವಾಗಿ ಹೇಳಿದ್ದಾನೆ. ಮತ್ತೊಂದೆಡೆ ಬ್ರಾಹ್ಮಣರ ಅಧಿಕಾರವನ್ನು ನಿರಾಕರಿಸಿದ್ದಾನೆ ಎಂದೇನೂ ಅಲ್ಲ. ಅದಾಗ್ಯೂ ಬ್ರಾಹ್ಮಣರಾದಿಯಾಗಿ ಶೂದ್ರರಿಗೂ ಸಹ, ಸಕಲ ವರ್ಣದ ಜನರಿಗೆಲ್ಲ ಅಧಿಕಾರವಿರುವುದಾಗಿ ಹೇಳಿದನು. ಅವರಿಗಿಂತಲೂ ಹೀನರಾದ ಚಾಂಡಾಲರಿಗೂ, ಪುರುಷರ ಜತೆ ಸ್ತ್ರೀಯರಿಗೂ ಅಧಿಕಾರ ನೀಡುವಾಗ ಸ್ತ್ರೀಯರಲ್ಲೂ ಹೀನರಾದ ವೇಶ್ಯೆಯರಿಗೂ ಅಧಿಕಾರವಿರುವುದಾಗಿ ಹೇಳಿದನು.

ಅಧಿಕಾರ ನಿರಾಕರಿಸುವವರ ಎದೆಯ ಮೇಲೆ ಕೂತೇ ಅಧಿಕಾರದ ಘೋಷಣೆ

ಉತ್ಥಾನದ, ಉದ್ಧಾರದ ಹಾದಿಯು ಎಲ್ಲರಿಗೂ ಮುಕ್ತವಾಗಿರಬೇಕು. ಉಚ್ಚ ಅವಸ್ಥೆಯ ಕಡೆಗೆ ಸಾಗುವ ಕನಸು ಎಲ್ಲರೂ ಕಾಣಬಹುದು. ಜಾತಿ, ವರ್ನದ ಕಾರಣಕ್ಕಾಗಿ ಮಾನವೀಯತೆಗೆ ಕಳಂಕ ಹತ್ತಬಾರದು. ಈ ಬಗೆಯ ಮುಕ್ತ, ಸಮತಾಧಿಷ್ಠ ಸಮಾಜದ ಕನಸನ್ನು ತುಕಾರಾಮನು ಕಂಡಿದ್ದನು. ಯಾವು ವೇದದ ಅಧಿಕಾರವಿಲ್ಲೆಂದು ಹಂಗಿಸಿದರೋ ಅವರ ಎದೆಯ ಮೇಲೆ ಕೂತೇ ಆತ್ಮದ ಬೀಜದ ಅಧಿಕಾರವಿದೆ ಎಂದು ಸಾರಿದನು. ನೀವು ವೇದದ ಅಧಿಕಾರವನ್ನು ನಿರಾಕರಿಸಿ, ಆದರೆ ನನಗೆ ವೇದದ ಮೂಲದಲ್ಲಿದ್ದ ಸತ್ಯದ ಅಧಿಕಾರ ಪ್ರಾಪ್ತವಾಗಿದೆ ಎಂಬ ಮಾತನ್ನು ಆತ್ಮವಿಶ್ವಾಸದಿಂದ ಹೇಳಿದ್ದಾನ. ಅಧಿಕಾರ ನಿರಾಕರಿಸುವ ವೈದಿಕ ಪರಂಪರೆಗೆ ತುಕಾರಾಮ ನೀಡಿದ ಅತಿದೊಡ್ಡ ಆಘಾತವಿದು ಎಂದೆನ್ನಲು ಅಡ್ಡಿಯಿಲ್ಲ.

ಜಾತಿಯ ಆಧಾರದ ಭೇದಭಾವವಿಲ್ಲ

ತುಕಾರಾಮನಿಗೆ ಸಕಲ ಜಾತಿ ಧರ್ಮದ ಸಂತರ ಬಗೆಗೆ ಗೌರವವಿತ್ತು, ಆತ್ಮೀಯತೆ ಇತ್ತು. ಈ ಹಿನ್ನೆಲೆಯಲ್ಲಿ ಅವನ ಕೆಲವು ಅಭಂಗ ಗಮನಾರ್ಹವಾದುದು. ಪಂಢರಪುರವು ತನ್ನ ತವರು. ರಾಹಿ ರಖಮಾಯಿ ಮತ್ತು ಸತ್ಯಭಾಮಾ ತನ್ನ ಮಾತೆಯರು, ಪಾಂಡುರಂಗ ತನ್ನ ಪಿತ ಎಂದು-ತುಕಾರಾಮನು ತನ್ನದೊಂದು ಅಭಂಗದಲ್ಲಿ ಹೇಳಿದ್ದಾನೆ. ಆನಂತರ ಹಲವು ಸಂತರ ಬಗೆಗೆ ಆತ್ಮೀಯತೆಯನ್ನು ವ್ಯಕ್ತಪಡಿಸಿದ್ದಾನೆ. ಉದ್ಧವ, ಅಕ್ರೂರ, ವ್ಯಾಸ, ಅಂಬರೀಷ ಮತ್ತು ನಾರದರು ನನ್ನ ಸೋದರರಾಗಿದ್ದು ನಾನವರನ್ನು ಗೌರವಿಸುತ್ತೇನೆ. ಗರುಡ ನ್ನ ಬಂಧು, ಪುಂಡಲಿಕನು ಆತ್ಮೀಯ ವ್ಯಕ್ತಿ. ನನಗೆ ಅವರ ಬಗೆಗೆ ಮೆಚ್ಚುಗೆಯಿದೆ. ನನ್ನ ಬಳಿ ಸಂತ ಮಹಂತರ ಅತೀ ದೊಡ್ಡ ಬಳಗವಿದೆ. ನಾನು ನಿತ್ಯ ಓವ್ಹಿಗಳ ಮೂಲಕ ಅವರನ್ನು ಸ್ಮರಿಸುತ್ತೇನೆ. ನಿವೃತ್ತಿ, ಜ್ಞಾನದೇವ, ಸೋಪಾನ, ಚಾಂಗದೇವ ಮತ್ತು ನಾಮದೇವ ಇವರೆಲ್ಲ ನನ್ನ ಆತ್ಮೀಯರು. ನಾಗೋಜನ ಮಿತ್ರಾ, ನರಹರಿ ಸೋನಾರ, ರೋಹಿದಾಸ ಮತ್ತು ಕಬೀರರು ನನ್ನ ಸಂಬಂಧಿಗಳು. ಪರಸೋ ಭಾಗವತ, ಸೂರದಾಸ, ಸಾವತಾ ಮಾಳಿ ಇವರೆಲ್ಲರಿಗಾಗಿ ನಾನು ಹಾಡುತ್ತೇನೆ. ಚೋಖಾಮೇಳಾನಂತಹ ಸಂತರು ನನ್ನ ಜೀವ ಬಂಧುಗಳಾಗಿದ್ದು, ನಾನು ಒಂದು ಕ್ಷಣವೂ ಮರೆಯಲಾರೆ. ಏಕನಾಥ, ಜನಾರ್ಧನ, ಕಾನ್ಹಾಪಾತ್ರಾ ಮತ್ತು ಮೀರಾಬಾಯಿ ಇವರೆಲ್ಲ ಸಂತರು ನನ್ನ ಜೀವದ ಜೀವನಾದವರು. ಮತ್ತೆ ಕೆಲವು ಸಂತರಿದ್ದಾರೆ, ಮಹಾನುಭಾವ ಮುನಿಗಳಿದ್ದಾರೆ- ಅವರ ಪಾದದಲ್ಲಿ ನನ್ನ ಜೀವವಿದೆ. ನಾನು ಇವರೆಲ್ಲರಿಗಾಗಿ ಸಂತೋಷದಿಂದ ಓವ್ಹಿಯನ್ನು ಹಾಡುತ್ತೇನೆ. ಇವರೆಲ್ಲರ ಸಹವಾಸದಲ್ಲಿ ನನ್ ಬಲವಾನ ತಾಯ್ತಂದೆಗಳು ಸುಖದಿಂದ ಬದುಕಲಿ.

ಇದೇ ಸ್ವರೂಪದ ಮತ್ತೂ ಒಂದು ಅಭಂಗವನ್ನು ನಾವು ಗಮನಿಸಲೇಬೇಕು ಎಂದು ನನಗೆ ಅನ್ನಿಸುತ್ತದೆ. ಅದರ ಆಶಯ ಹೀಗಿದೆ: ಹರಿದಾಸರು ಜನಿಸಿದ ಕುಲವೇ ಶ್ರೇಷ್ಠ, ಹರಿದಾಸರು ಜನಿಸಿದ ದೇಶ ಪಾವನ…. ವರ್ಣದ ಅಭಿಮಾನದಿಂದ ಯಾರು ಪಾವನರಾಗಿದ್ದಾರೆ ಹೇಳಿ? ಹರಿಭಜನೆಯಿಂದ ಅಂತ್ಯಜ ಯೋನಿಯ ಜನರೂ ತೇಲಿ ಪಾರಾಗಿದ್ದು, ಪುರಾಣ ಸಹ ಸ್ತುತಿ ಪಾಠಕವಾಯಿತು. ಅವರಲ್ಲಿ ತುಳಾಧಾರನು, ವೈಶ್ಯ, ಗೋರಾ ಇವನು ಕುಂಬಾರನು, ರೋಹಿದಾಸನು ಸಮಗಾರನು, ಕಬೀರನು ನೇಕಾರ, ಲತೀಫ್ ಮುಸಲ್ಮಾನನು, ವಿಷ್ಣುದಾಸ ಸೇನಾ ನಾಭಿಕನು, ಕಾನ್ಹೋಪಾತ್ರ, ಖೋದು ಇವರು ಹಿಜಡಾ, ದಾದೂ ಪಿಂಜಾರ ಇವರೆಲ್ಲ ಭಜನೆಯಲ್ಲಿ ತಲ್ಲೀನರಾಗಿ ದೇವರಲ್ಲಿ ಏಕರೂಪ ಹೊಂದಿದ್ದಾರೆ. ಚೋಖಾಮೇಳಾ, ಬಂಕಾ ಮಹಾರ ಜಾತಿಯವರಾಗಿದ್ದೂ ದೇವರಲ್ಲಿ ಐಕ್ಯರಾಗಿದ್ದಾರೆ. ಜನಾಬಾಯಿಯು ನಾಮದೇವನ ದಾಸಿಯಾಗಿದ್ದು, ಪಂಢರಿರಾಯ ಅವಳ ಜತೆ ಊಟ ಮಾಡುವುದರಿಂದ ಆಕೆಯ ಗೌರವ ಬೆಳೆಯಿತು. ಮೈರಾಳ ಜನಕನನ ಜಾತಿ ಯಾವುದು ಎನ್ನುವದೂ ಗೊತ್ತಿಲ್ಲ. ಆದರೆ ಅವನ ಮಹಿಮೆಯನ್ನು ಎಷ್ಟೆಂದು ಬಣ್ಣಿಸಲಿ? ತಾತ್ಪರ್ಯ: ವಿಷ್ಣುದಾಸನಿಗೆ ಜಾತಿ ಧರ್ಮ-ಮುಖ್ಯವಲ್ಲ. ಅಂಥ ಭೇದ ಭಾವ ಅವನಿಗಿಲ್ಲ. ಮೊದಲನೇ ಅಭಂಗದಲ್ಲಿ ತುಕಾರಾಮನು ಶ್ರೇಷ್ಠ ಮತ್ತು ಹೀನ ಜಾತಿಯ ಸಂತರ ಪಾದಕ್ಕೆರಗುವ ಸಿದ್ಧತೆಯನ್ನು ತೋರಿಸಿದ್ದಾನೆ. ಈ ಸಂತರು ತನ್ನ ಸೋದರರು, ಗಣ ಗೋತ್ರದವರು. ಆತ್ಮೀಯರೂ ಆಗಿದ್ದು, ಅವರನ್ನು ಗೌರವಿಸುವ, ಹೊಗಳುವ, ಹಾಡುವ ಭಾವನೆಯನ್ನು ವ್ಯಕ್ತ ಮಾಡಿದ್ದಾನೆ. ವರ್ಣದ ಆಭಿಮಾನದಿಂದ ಕುಲ ಮತ್ತು ದೇಶ ಪವಿತ್ರವಾಗುವುದಿಲ್ಲ. ಆದರೆ ಸಂತರು ನೆಲೆಸುವದರಿಂದ ಅದಕ್ಕೆ ಪಾವಿತ್ರ್ಯತೆ ಬರುತ್ತದೆ ಎಂದವನು ಎರಡನೇ ಅಭಂಗವನ್ನು ಆರಂಭಿಸಿದ್ದಾನೆ. ವಿಷ್ಣುದಾಸರಿಗೆ ಹರಿದಾಸರಿಗೆ ಜಾತಿ ಧರ್ಮದ ಭೇದ ಭಾವವಿಲ್ಲ. ಜಾತಿಯ ಭೇದವನ್ನು ಅವರು ನಿರಾಕರಿಸುತ್ತಾರೆ ಎಂದು ಹೇಳಿ ತುಕಾರಾಮನು ಆ ಅಭಂಗವನ್ನು ಮುಗಿಸುತ್ತಾನೆ.

ಭಗವಂತನಿಗೆ ಮೇಲು ಕೀಳೆಂಬ ಭೇದವಿಲ್ಲ

ತುಕಾರಾಮನು ಸ್ವತಃ ಸಂತರ ಜಾತಿ ಕುಲದ ಬಗೆಗೆ ಯೋಚಿಸದೆ, ಅವರ ಬಗೆಗೆ ಆತ್ಮೀಯತೆಯನ್ನು ಬೆಳೆಸಿಕೊಂಡಂತೆ ದೇವರೂ ಭಕ್ತರ ಜಾತಿ ಕುಲಕ ಕುರಿತು ಯೋಚಿಸದೆ ಅವನ್ನು ಉದ್ಧರಿಸುತ್ತಾನೆ ಎಂಬ ಶ್ರದ್ಧೆ ತುಕಾರಾಮನದು. ದೇವರ ಸ್ವರೂಪದಲ್ಲಿ ಕುಲ, ಜಾತಿ, ವರ್ಣಕ್ಕೆ ಅವಕಾಶವಿರುವುದಿಲ್ಲ. ದೇವರು ಜಾತಿಯ ಕ್ರಿಯಾ ಕರ್ಮದಿಂದ ಭ್ರಷ್ಟನಾದ ಎಂಬರ್ಥವನ್ನು ಅವನು ನೀಡಿದ್ದಾನೆ.

ದೇವರು ಜಾತಿಯ ಕುರಿತು ಯೋಚಿಸುವುದಿಲ್ಲ. ಈ ಬಗೆಗೆ ಅವನು ಮಂಡಿಸಿದ ಕೆಲ ವಿಚಾರಗಳು ಹೀಗಿವೆ: ದೇವರಂಥ ಸಮರ್ಥರ ಮನದಲ್ಲಿ ವರ್ಣಾವರ್ಣ ಭೇದ ವಿರುವುದಿಲ್ಲ. ಅವನು ಭಕ್ತರ ಬುತ್ತಿ ಬಯಸುವುದಿಲ್ಲ. ಅವರ ಜಾತಿ ಕುಲವನ್ನು ಕೇಳುವುದಿಲ್ಲ. ಶುದ್ಧ ಕುಲವೇ ಹೀನಕುಲವೇ ಎಂದೂ ನೋಡುವುದಿಲ್ಲ. ನಿರ್ಮಲ ಆಚರಣೆ ಇದ್ದವರ ಬಳಿ ನೆಲೆಸುತ್ತಾನೆ. ಭಕ್ತರನ್ನು ಉದ್ಧರಿಸಲು ಹಾತೊರೆಯುತ್ತಾನೆ. ಅವನು ಎಲ್ಲರ ಉದ್ಧಾರ ಮಾಡಿದ್ದಾನೆ. ಸಂತರ ಜಾತಿ ನೋಡದೆ ಅವನಿಗೆ ಪಾದದ ಬಳಿ ಅಸೆರ ನೀಡಿದ್ದಾನೆ. ಹರಿಯು ಭಕ್ತರ ವರ್ಣ ಧರ್ಮದ ಬಗೆಗೆ ಯೋಚಿಸುವುದಿಲ್ಲ. ಎದುರಿಗೆ ಬಂದವರನ್ನೆಲ್ಲ ಆಲಂಗಿಸಿಕೊಳ್ಳುತ್ತಾನೆ. ತನ್ನವನ್ನಾಗಿ ಮಾಡುತ್ತಾನೆ. ಪಂಢರಪುರದಲ್ಲಿ ನೂರೆಂಟು ಜಾತಿ, ಅವರೆಲ್ಲರೂ ವೈಷ್ಣವರಾಗಿರುತ್ತಾರೆ. ಅಲ್ಲಿ ಭೇದ-ಭಾವವಿಲ್ಲ. ಜಾತಿಕುಲ ನೋಡದೆ, ಕುರುಬರನ್ನು, ಗಣಿಕೆಯರನ್ನೂ, ಭಿಲ್ಲರನ್ನೂ ಉದ್ಧರಿಸಿದ್ದಾನೆ. ಭಕ್ತರ ಜಾತಿ ನೋಡದೆ, ಅವರ ಭಾವನೆ ಕಂಡು ಬಳಿಗೆ ಬರುತ್ತಾನೆ. ದಾಸಿಪುತ್ರ ವಿದೂರನನ್ನು, ಸಜ್ಜನ ಕಟುಕರನ್ನೂ ಉದ್ಧರಿಸಿದ್ದಾನೆ. ಕೃಷ್ಣನು ಶ್ರೇಷ್ಠ – ಕನಿಷ್ಠರನ್ನು ಒಂದುಗೂಡಿಸಿದ. ಅವರಲ್ಲಿ ವಿಶಿಷ್ಟರೆಂದು ಯಾರನ್ನೂ ಆಯ್ಕೆ ಮಾಡಲಿಲ್ಲ. ಎಂಥ ಹೀನ ಜಾತಿಯ ಸ್ತ್ರೀ-ಪುರುಷರೇ ಇರಲಿ, ನಾರಾಯಣ ಅವರ ಭಾವನೆಗೆ ಮಹತ್ವ ನೀಡಿ ಪ್ರೀತಿಸುತ್ತಾನೆ. ವೇದ ಆಲಿಸಬಾರದು ಎಂಬ ಜಾತಿಹೀನರಿಗೂ ಅವನು ವೈಕುಂಠದಲ್ಲಿ ಪದನೀಡಿದ್ದು, ದೇವರ ಸಾನಿಧ್ಯವು ಒಂದು ಮುಕ್ತವಾದ ಸಂತೆಯಾಗಿದ್ದು, ಅಲ್ಲಿ ಎಲ್ಲ ಜಾತಿಯವರಿಗೂ ಅವಕಾಶವಿದೆ. ಅಲ್ಲಿ ಯಾರೂ ಶ್ರೇಷ್ಠರು- ಕನಿಷ್ಠರಿಲ್ಲ. ಯಾವ ಪಂಕ್ತಿ ಭೇದವೂ ಇಲ್ಲ. ಈ ಸಂತೆಗೆ ಬರವಂತೆ ನಾನು ಎಲ್ಲರನ್ನು ಸಮಾನವಾಗಿ ಕೂಗಿ ಕರೆದೆ. ಅಲ್ಲಿ ಅವರವರ ಪ್ರಿಯ ವಸ್ತು ಸಿಗುತ್ತದೆ. ಅಲ್ಲಿ ಪಂಕ್ತಿಭೇದವೂ ಇಲ್ಲ. ಎಲ್ಲವೂ ಅಲ್ಲಿ ತೆರೆದಿಡಲಾಗಿದೆ. ಯಾರಿಗೂ ಕೇಳಬೇಕಾಗಿಲ್ಲ. ಈ ವ್ಯವಹಾರ ಮುಕ್ತವಾಗಿದೆ.

ಅಕ್ಷೇಪದ ವಿವೇಚನೆ

ಇಲ್ಲಿ ತುಕಾರಾಮನ ಮೇಲೆ ಅಷ್ಟೇ ಅಲ್ಲ. ಒಟ್ಟೂ ಸಂತರ ಬಗೆಗೆ ಎತ್ತಿಕ ಆಕ್ಷೇಪದ ವಿವೇಚನೆ ಮಾಡುವದು ಸೂಕ್ತ ಎಂದೆನಿಸುತ್ತದೆ. ತುಕಾರಾಮನ ಕುರಿತಾಗಿರುವ ಆಕ್ಷೇಪವನ್ನು ಖಂಡಿಸುವುದು ಈ ಗ್ರಂಥದ ಉದ್ದೇಶವಲ್ಲ. ಹೀಗಾಗಿ ಈ ವಿವೇಚನೆಯು ಕೇವಲ ಸಂಕ್ಷಿಪ್ತ ಸ್ವರೂಪದ್ದೂ, ಕೈ ಮರದ ಕಾರ್ಯವನ್ನಷ್ಟೇ ಮಾಡುತ್ತದೆ. ಅಲ್ಲದೆ ಈ ವಿವೇಚನೆಯು ಕೇವಲ ತುಕಾರಾಮನಿಗಷ್ಟೇ ಸಂಬಂಧಿಸಿದ್ದು ಉಳಿದ ಸಂತರಿಗಲ್ಲ.

ತುಕಾರಾಮನು ಬಳಕೆಗೆ ತಂದ ಸಮತೆಯು ಕೇವಲ ಆಧ್ಯಾತ್ಮ ಅಥವಾ ಭಕ್ತಿ ಕ್ಷೇತ್ರಕ್ಕೆ ಸಂಬಂಧಿಸಿದ್ದು,ಇದು ಸಾಮಾಜಿಕ ವ್ಯವಹಾರದಲ್ಲಿ ತಂದದ್ದಲ್ಲ. ಹೀಗಾಗಿ ಈ ಸಮತೆಗೆ ಹೆಚ್ಚಿನ ಪ್ರಾಧ್ಯಾನತೆ ನೀಡುವ ಅಗತ್ಯವಿಲ್ಲ ಎನ್ನುವುದು ಸ್ಥೂಲವಾಗಿ ಮಾಡಲಾದ ಆಕ್ಷೇಪ. ಖರೆಯೆಂದರೆ, ಪ್ರಸ್ತುತ ಪ್ರಕರಣದಲ್ಲಿ ಈವರೆಗೆ ಮಂಡಿಸಿದ ತುಕಾರಾಮನ ಈ ವಿಷಯದ ಕುರಿತಾದ ವಿಚಾರವನ್ನು ಕಂಡು ಸಹೃದಯ ವಾಚಕರು ತಮ್ಮ ಅಭಿಪ್ರಾಯವನ್ನು ರೂಪಿಸಿಕೊಳ್ಳಬಹುದು. ಆದರೆ ಕೆಲವು ಪ್ರಮುಖ ಸಂಗತಿಗಳ ಕಡೆಗೆ ಗಮನ ಸೆಳೆಯುವುದು ಯೋಗ್ಯ ಎಂದೆನಿಸುತ್ತದೆ.

ದೈಹಿಕ ಪಾತಳಿಯ ಸಮತೆಯನ್ನು ಒಪ್ಪಿದರು

ತುಕಾರಾಮನು ಕೇವಲ ಆತ್ಮದ ಪಾತಳಿಯ ಸಮತೆಯನ್ನು ಮಾತ್ರ ಒಪ್ಪಿದ್ದನೆಂಬ ಮಾತು ದಿಟವಲ್ಲ. ದೈಹಿಕ ಪಾತಳಿಯನ್ನೂ ಒಪ್ಪಿದ ಎಂಬುದನ್ನು ಅವನ ಹಲವು ಅಭಂಗದಲ್ಲಿ ಕಾಣಬಹುದು. ಮನುಷ್ಯನ ಚರ್ಮ ಮಾಂಸ ಒಂದೇ ಆಗಿರುವಾಗ ಶುದ್ಧ ಅಶುದ್ಧರೆಂದೇಕೆ ಪರಿಗಣಿಸುತ್ತೀರಿ ಎಂಬ ಮಾತು ದೇಹದ ಸಮತೆಗೆ ಸಂಬಂಧಿಸಿದ್ದು, ವಿವಿಧ ಜಾತಿಯ ಸಂತರು ಪರಸ್ಪರರ ಪಾದಕ್ಕೆರಗುತ್ತಾರೆ. ಆಗ ಪರಸ್ಪರರ ಸ್ಪರ್ಶವಾಗುತ್ತದೆ. ತುಕಾರಾಮನು ಈ ಸ್ಪರ್ಶವನ್ನು ಅತ್ಯಂತ ಸಂತೋಷದ, ಅಭಿಮಾನದ ಸಂಗತಿಯಾಗಿ ಸ್ವೀಕರಿಸಿದ. ತನಗಿಂತಲೂ ಕೆಳವರ್ಗದ ಸಂತನ ಪಾದಕ್ಕೆರಗಲೂ ಅವನು ಹಿಂಜರಿಯಲಿಲ್ಲ, ಇದೂ ಸಹ ದೇಹದ ಸಮತೆಗೆ ಸಂಬಂಧಿಸಿದ್ದು, ಕೊನೆಗೆ ಲಕ್ಷಾರ್ಥದಿಂದಲಾದರೂ ತನ್ನನ್ನು ಮಹಾರನೆಂದು ಕರೆದುಕೊಳ್ಳುವದು, ಕೇವಲ ಆಧ್ಯಾತ್ಮಿಕ ಪಾತಳಿಯದ್ದಾಗಿರದೆ, ತೀರಾ ಗಂಭೀರ ಸ್ವರೂಪದ ಸಾಮಾಜಿಕ ಆಶಯದಿಂದ ಕೂಡಿದೆ. ಎಲ್ಲಕ್ಕಿಂತ ಮಹತ್ವದ ಸಂಗತಿಯೆಂದರೆ, ಮಹಾರ ವ್ಯಕ್ತಿಯನ್ನು ಸ್ಪರ್ಶ ಮಾಡಿದಾಗ ಬರುವ ಸಿಟ್ಟಿನ ಪಾಪವು ದೇಹಾಂತ ಪ್ರಾಯಶ್ಚಿತ್ತದಿಂದಲೂ ವಿಮೋಚನೆಯಾಗುವುದಿಲ್ಲ ಎಂಬ ವಿಚಾರವಂತೂ ಸಾಮಾಜಿಕ ಸಮತೆಯ ದಿಸೆಯತ್ತ ಇಟ್ಟ ದಿಟ್ಟ ಹೆಜ್ಜೆಯನ್ನಲಡ್ಡಿಯಲ್ಲ.

ನಮ್ಮ ಹೃದಯ ತುಕಾರಾಮನ ಹೃದಯದೊಂದಿಗೆ ಜೋಡಿಸಲಾಗಿದೆ.

ತುಕಾರಾಮನ ವಿಚಾರ ಪ್ರಣಾಳಿಯು ಸಮತೆಯ ಪರೀಕ್ಷೆಯ ಎದುರಿಗೆ ತಾಳುವುದಿಲ್ಲ, ಅದು ನಮ್ಮ ನಿರೀಕ್ಷೆಯಷ್ಟು ಪುರೋಗಾಮಿಯಲ್ಲ ಎಂದು ವಾದಕ್ಕಾಗಿ ಒಂದು ಕ್ಷಣ ಒಪ್ಪಿಕೊಳ್ಳೋಣ, ಇದನ್ನು ಒಪ್ಪಿಕೊಂಡಾಗ ಮುಂದಿನ ಪ್ರಶ್ನೆಗೆ ಉತ್ತರ ನೀಡುವ ಜವಾಬ್ದಾರಿ ಹೊರಬೇಕಾಗುತ್ತದೆ. ತುಕರಾಮನ ವಿಚಾರ ಪ್ರಣಾಳಿಯು ಸಮತಾವಾದಕ್ಕೆ ಹೊಂದಿಕೊಳ್ಳುತ್ತದೋ? ಅಥವಾ ವಿಷಮತಾವಾದಕ್ಕೋ? ಅವನ ನಿಲುವು ಪುರೋಗಾಮಿ ವ್ಯಕ್ತಿಗೆ ಪೂರಕವಾಗಿರುವಂಥದೋ? ಅಥವಾ ಪ್ರತಿಗಾಮಿಗೆ? ಅವನು ಇದೇ ಹಾದಿ ಹಿಡಿದು ಹೊರಟರೆ ತಲುಪುವುದು ಪುರೋಗಾಮಿ ಪಕ್ಷವೇ? ಅಥವಾ ಪ್ರತಿಗಾಮಿಯ ಗುಂಪೇ? ಅಂದರೆ, ಅವನ ಹೆಜ್ಜೆಯ ದಿಕ್ಕು ನ್ಯಾಯದ ಕಡೆಗೆ ಹೋಗುವಂತಹದೇ ಅಥವಾ ಶೋಷಣೆಯ ಕಡೆಗೆ? ಸಮಾಜವು ನೂರು ಹೆಜ್ಜೆಯಿಟ್ಟ ನಂತರ ನಮಗೆ ಆದರ್ಶವೆನಿಸುವ ಸಮತೆಯು ಪ್ರಸ್ಥಾಪಿತಗೊಳ್ಳುತ್ತದೆ ಎಂದೊಪ್ಪಿಕೊಂಡಾಗ, ಆ ಪ್ರವಾಸವು ನೂರು ಹೆಜ್ಜೆ ಬಳಿಕವೇ ಪೂರ್ಣಗೊಂಡಿತು ಎಂದು ಭಾವಿಸಬೇಕೆ, ಅಥವಾ ಮೊದಲಿನ ಪ್ರತಿ ಹೆಜ್ಜೆಗೂ ನೂರು ಹೆಜ್ಜೆಯ ಧ್ಯೇಯ ಪೊರ್ಣತೆಯ ಶ್ರೇಯಸ್ಸು ನೀಡುವುದೇ? ನುರು ಕೊಡಲಿಯ ಹೊಡೆತಕ್ಕೆ ವಿಷವೃಕ್ಷ ಉರುಳಿಬೀಳುತ್ತಿದ್ದರೂ, ಅದು ನೂರನೇ ಹೊಡೆತಕ್ಕೆ ಉರುಳಿತು ಎನ್ನೋಣವೇ, ಅಥವಾ ಈ ಮೊದಲಿನ ಪ್ರತಿ ಹೊಡೆತಕ್ಕೂ ಆ ಪಾಲು ಸಲ್ಲುತ್ತದೆ ಎಂದು ಎನ್ನೋಣ? ನನ್ನ ಅನಿಸಿಕೆಯಂತೆ, ಈ ಪ್ರತಿ ಪ್ರಶ್ನೆಯ ಉತ್ತರವು ಒಂದು ನಾಜೂಕು ಸೂತ್ರದಂತಿದ್ದು, ಅದು ನಮ್ಮ ಹೃದಯವನ್ನು ತುಕಾರಾಮನ ಜೊತೆಗೆ ಬೆಸೆಯುವ ಕಾರ್ಯ ಮಾಡುತ್ತದೆ. ಈ ಸೂತ್ರವು ನಮ್ಮನ್ನೂ ತುಕಾರಾಮನನ್ನೂ ಬೇರ್ಪಡಿಸುವುದಿಲ್ಲ.

ತುಕಾರಾಮನ ವಿಚಾರ ಕಡಿಮೆ ಅಸಲೀತನದ್ದೇ? ಖಂಡಿತಕ್ಕು ಅಲ್ಲ

ವಾಸ್ತವವಾಗಿ ತುಕಾರಾಮನ ಮತ್ತು ಸಮತೆಯ ವೈರಿ ಒಂದೇ. ವೈದಿಕ ಪರಂಪರೆಯ ಪ್ರಕಾರ ಎಲ್ಲ ಶ್ರೋತ್ರಿಯರು ಈ ಭೇದ ಭಾವ ಒಪ್ಪುತ್ತಿದ್ದರು. ಭೇದ-ಭಾವ ಪಾಲಿಸುವ ಶ್ರೋತ್ರಿಯರನ್ನು ಸಮಾಜದಲ್ಲಿಯ ಅಂತ್ಯಜರೆಂದು ಭಾವಿಸಬೇಕು, ಹೀನರೆಂದು ಭಾವಿಸಬೇಕು ಎಂದು ತುಕಾರಾಮನು ಎಚ್ಚರಿಸಿದಾಗ; ಅವನು ವೈದಿಕ ಪಂಡಿತರ ವಿರೋಧವನ್ನು ಎಂಥ ಕಟುವಾದ ರೀತಿಯಲ್ಲಿ ಎದುರಿಸಿರಬೇಕು ಎಂಬುದನ್ನು ಊಹಿಸಬಹುದು. ಅವನ ಈ ಮತ್ತು ಇದೇ ಬಗೆಯ ಇತರ ವಿದ್ರೋಹಿ (ಬಂಡಾಯದ) ವಿಚಾರಗಳನ್ನು ವೈದಿಕರು ಚಿಂದಿ ಚಿಂದಿ ಮಾಡುವ ಪ್ರಯತ್ನ ಮಾಡಿದರು. ಆದರೂ ಈ ಶೂರ ಮಾನವನು ತನ್ನ ವಿಚಾರಗಳ ಬಾಬತ್ತಿನಲ್ಲಿ ಹೊಂದಾಣಿಕಿ ಮಾಡಿಕೊಳ್ಳಲಿಲ್ಲ. ಇದೇ ವಿಚಾರಕ್ಕಾಗಿ ಮತ್ತಿ ಇದೇ ವಿಚಾರದಿಂದಾಗಿ ಅವನ ಬದುಕಿಗೆ ಕೊಳ್ಳಿ ಇಡಲಾಯಿತು. ಕುಟುಂಬ ಪರದೇಶಿಯಾಯಿತು. ಇದೇ ವಿಚಾರಗಳಿಗಾಗಿ ಅವನು ಪ್ರಾಣವನ್ನು ಕಳದುಕೊಳ್ಳಬೇಕಾಯಿತು. ಈ ಮಹಾಮಾನವನು ಇದನ್ನೆಲ್ಲ ನಿರ್ಭಯತನದಿಂದ ಎದುರಿಸಿದ. ಎಂಥ ದೊಡ್ಡತ್ಯಾಗ ಮಾಡಿದ, ಇದನ್ನೆಲ್ಲ ಕಂಡಾಗ ಅವನ ವಿಚಾರವು ಕಡಿಮೆ ಅಸಲೀತನದಿಂದ ಕೂಡಿತ್ತು ಎನ್ನುವದು ನಮಗೆ ಶೋಭಿಸುವಂತಹದಲ್ಲ. ಹಾಗೆ ಹೇಳಿದ್ದಾದರೆ, ಭಾವಿಸಿದ್ದಾದರೆ, ಅದು ಕೃತಘ್ನತೆಯಾಗುತ್ತದೆ, ಅನ್ಯಾಯ ಮಾಡಿದಂತಾಗುತ್ತದೆ ಎಂದೇ ನನ್ನ ಅನಿಸಿಕೆ.