ವರ್ಣ-ಜಾತಿ ಆಧಾರದಿಂದ ಮನುಷ್ಯರಲ್ಲಿ ಭೇದ-ಭಾವವನ್ನು ಮಾಡುವದು ಭಾರತೀಯ ಪರಂಪರೆಯ ಒಂದು ವಿಲಕ್ಷಣವಾದ ವೈಶಿಷ್ಟ್ಯವಾಗಿದೆ, ತುಕಾರಾಮನು ತನ್ನ ಅಭಂಗಗಳಲ್ಲಿ ಭೇದ-ಭಾವ ಮಾಡುವವರ ಮೇಲೆ ಹಲ್ಲೆ ಮಾಡಿದ್ದು ಅವನ ಪ್ರತ್ಯೇಕತೆ ಎನ್ನಬಹುದು. ಇದಕ್ಕೆ ಸಂಬಂಧಿಸಿದ ಕೆಲವು ವಿಚಾರಗಳು ಹೀಗಿವೆ:

ಮನುಷ್ಯರೆಲ್ಲರೂ ದೇವರ ಮಕ್ಕಳಾಗಿದ್ದರೆ ಅವರಲ್ಲಿ ಭೇದ-ಭಾವವನ್ನು ಯಾವ ಆಧಾರದಿಂದ ಮಾಡುತ್ತೀರಿ? ಜಗತ್ತೆಲ್ಲ ವಿಷ್ಣುಮಯವಾಗಿದ್ದು, ಅಲ್ಲಿ ಭೇದ-ಭಾವ ಮಾಡುವದು ಅಮಂಗಲ ಭ್ರಮೆಯಾಗಿದೆ- ಎಂದು ಭಾವಿಸುವದೇ ವೈಷ್ಣವರ ಧರ್ಮ. ಯಾವ ಜೀವದ ಬಗೆಗೂ ದ್ವೇಷ ಮಾಡದೇ ಇರುವದೇ ದೇವರ ಪೂಜೆಯ ರಹಸ್ಯವಾಗಿದೆ. ಹೇ ದೇವರೆ, ನೀನೀ ಸರ್ವಾಂತರ್ಯಾಮಿಯಾಗಿದ್ದರೆ, ಈ ಭೇದವೇಕೆ ಮಾಡಿದೆ ? ಭೇದ ಬುದ್ದಿಯು ಪಾಪ. ನೋಡಿದಲ್ಲೆಲ್ಲ ಒಂದೇ ಕಾಣುತ್ತಿದೆ. ಈತ ನಮ್ಮಾತ, ಆತ ಪರಕೀಯ ಎಂಬ ಭಾವನೆಯು ನಷ್ಟವಾಗ ಬೇಕು. ವಿಠ್ಠಲನ ಸಾನಿಧ್ಯದಲ್ಲಿ ಈ ಅಭಿಮಾನ ನಾಶವಾಗುತ್ತದೆ. ಅಭೇದದ ಈ ಬಗೆಯ ಮಿಶ್ರಣ ಮತ್ತೆ ಬೇರೆ ಕಡೆ ಕಾಣಸಿಗಬಹುದೇ? ಈ ಬೆರೆಕೆಯಲ್ಲಿ ಭೇದ ಮಾಡುವವರನ್ನು, ವಿಶಿಷ್ಟ ಜನರನ್ನು ಪ್ರತ್ಯೇಕಗೊಳಿಸಿದವರನ್ನು, ಅವರು ವೇದ ವಿದ್ಯಾಪಾರಂಗತರಾದರೂ ಅಂಥವರನ್ನು ಅಂತ್ಯಜರೆಂದು ಪರಿಗಣಿಸಬೇಕು. ದೇವರ ಮನೆಯಲ್ಲಿ ರಾಜ ಮತ್ತು ಭಿಕ್ಷುಕ ಸಮಾನರಾಗಿರುತ್ತಾರೆ, ಅಲ್ಲಿ ಭೇದ-ಭಾವವಿರುವುದಿಲ್ಲ. ಪ್ರಪಂಚವೇ ದೇವರೆಂದು ಯಾರು ಭಾವಿಸುತ್ತಾರೋ, ಅವರ ಬಳಿ ದೇವರು ಇರುತ್ತಾನೆ. ಅವನ ಕಾಮ-ಕ್ರೋಧ ನಾಶವಾಗಿರುತ್ತದೆ. ಎಲ್ಲ ಜೀವಿಗಳ ಬಗೆಗೆ ಅವನಲ್ಲಿ ಸಮಾನತೆಯಿರುತ್ತದೆ. ಅವನಲ್ಲಿರುವ ಭೇದ-ಭಾವ ಮತ್ತು ವಾದ ನಷ್ಟಗೊಂಡಿರುತ್ತದೆ, ನಾನು ಭೇದ-ಭಾವವನ್ನೆಲ್ಲ ತೊರೆದಿದ್ದೇನೆ, ವಾದವನ್ನು ಬದಿಗೆ ಸರಿಸಿದ್ದೇನೆ.

ದೇಹದ ತೊಗಲು, ಮಾಂಸ, ಮುಂತಾದ ಬಗೆಗೆ ಮನುಷ್ಯ, ಮನುಷ್ಯರಲ್ಲಿ ವ್ಯತ್ಯಾಸವಿಲ್ಲ, ಹೀಗಿದ್ದಾಗ ಒಬ್ಬ ಮನುಷ್ಯನನ್ನು ಶುದ್ಧ, ಮತ್ತೊಬ್ಬನನ್ನು ಅಶುದ್ಧವೆಂದು ಭಾವಿಸುವದು ಏಕೇ? ಒಬ್ಬಾತ ಶ್ರೇಷ್ಠ, ಮತ್ತೊಬ್ಬ ಕನಿಷ್ಠವೆನ್ನಲು ದೇವರ ಹತ್ತಿರ ಯಾರ ಕಾರಣವೂ ಇಲ್ಲ, ಹೊಳೆ, ಹಳ್ಳ, ಬಾವಿಯಲ್ಲಿರುವ ನೀರು ಬೇರೆ-ಬೇರೆಯೇ? ಸೂರ್ಯಕಿರಣ ಎಲ್ಲ ಪದಾರ್ಥದ ರಸ ಹೀರುತ್ತದೆ.. ಅದು ಗ್ರಾಹ್ಯ-ಅಗ್ರಾಹ್ಯವೆಂದು ಆಯ್ಕೆ ಮಾಡುತ್ತದೆಯೇ? ಆಕಳು ಕಪ್ಪಾದರೂ ಹಾಲು ಕಪ್ಪೇ? ಮಡಕೆಯ ಆಕಾರ ಭಿನ್ನ ಭಿನ್ನವಾಗಿದ್ದರೂ ಮಣ್ಣು ಒಂದೇ. ಎಲ್ಲೆಡೆ ಅಗ್ನಿಯ ರೂಪ ಒಂದೇ. ಅದು ಶುದ್ಧ-ಅಶುದ್ಧವನ್ನು ಒಪ್ಪುವುದಿಲ್ಲ. ಪಾತ್ರೆಗೆ ಮಹತ್ವವೇ, ಅಥವಾ ಪಾತ್ರೆಯಲ್ಲಿರುವ ವಿಷ, ಅಮೃತಕ್ಕೆ ಮಹತ್ವವೇ? ಯಾರು ವಿಠ್ಠಲನನ್ನು ಭಜಿಸುತ್ತಾನೋ, ಎಲ್ಲೆಡೆ ಸಮಬ್ರಹ್ಮನನ್ನು ಕಾಣುತ್ತಾನೋ ಎಲ್ಲ ಜೀವಿಗಳಲ್ಲಿ ವಿಠ್ಠಲನನ್ನು ಕಾಣುತ್ತಾನೋ ಅವನೇ ನಿಜವಾದ ಪಂಡಿತ. ವಿಶ್ವವೇ ಸಮಬ್ರಹ್ಮವಾಗಿದೆ, ಇದೇ ಸರ್ವ ವರ್ಣದ ಧರ್ಮ. ಇರುವೆ ಮತ್ತು ರಾಜ ನನ್ನ ದೃಷ್ಟಿಯಲ್ಲಿ ಎರಡೂ ಒಂದೇ. ಗಂಗೆಯು ಯಾರನ್ನೂ ಮೈಲಿಗೆಯೆಂದು ಭಾವಿಸುವದಿಲ್ಲ. ಸಕಲ ವರ್ಣದ ಜನರು ಭೂಮಿಯನ್ನು ಮೆಟ್ಟಲೆಂದು ಭಾವಿಸುತ್ತಾರೆ. ಹೀಗೆಂದು ಅದು ಕುಸಿದು ಹೋಗುವುದಿಲ್ಲ. ನನ್ನಲ್ಲಿ ಸ್ವಕೀಯ ಪರಕೀಯ ಎಂಬ ಭೇದವಿಲ್ಲ, ವಿಠ್ಠಲನ ನಾಮದಲ್ಲಿ ಎಲ್ಲವೂ ಐಕ್ಯಗೊಂಡಿದೆ-ಈಗ ತುಕಾರಾಮನ ವಿಚಾರಗಳನ್ನು ವಿಶ್ಲೇಷಣೆ ಮಾಡೋಣ.

ಅವನು ಶ್ರೇಷ್ಠ ಇವನು ಕನಿಷ್ಠ ; ಅವನಿಗೆ ವೇದಾಧಿಕಾರವಿದೆ ಇವನಿಗಿಲ್ಲ ; ಅವನು ಸ್ಪೃಶ್ಯ, ಇವನು ಅಸ್ಪೃಶ್ಯ-ಮುಂತಾದ ಪ್ರಕಾರದ ವರ್ಣ ಜಾತಿಯಿಂದ ಮಾಡುವ ಭೇದಭಾವವು ನಮ್ಮ ಪರಂಪರೆಯು ಸಂಸ್ಕೃತಿಯ ಅವಿಭಾಜ್ಯ ಘಟಕವಾಗಿತ್ತು. ತುಕಾರಾಮನು ಈ ಭೇದಭಾವವನ್ನು ಬಣ್ಣಿಸುವಾಗ ‘ಭ್ರಮೆ’ ಮತ್ತು ‘ಅಮಂಗಲ’ ಎಂಬ ಶಬ್ಧ ಬಳಿಸಿದ್ದಾನೆ. ಈ ಶಬ್ಧವು ತುಂಬಾ ಆಶಯ ಘನದಿಂದ ಕೂಡಿದ್ದು. ಭೇದ-ಭಾವವು ಭ್ರಮೆಯಾಗಿದೆ ಎಂದರೆ ವರ್ಣ-ಜಾತಿಯ ಆಧಾರದಿಂದ ಭೇದ-ಭಾವ ಮಾಡುವ ಜನರಿಗೆ ಸತ್ಯದ ಜ್ಞಾನವಿಲ್ಲವೆಂದೇ ಅರ್ಥ. ಸತ್ಯದ ವಿಷಯದಲ್ಲಿ ಅವರ ನಿಲುವು ಭ್ರಾಂತಿಯಿಂದ ಕೂಡಿದೆ. ಅಮಂಗಲ ಶಬ್ದವು ಸೂಚಿಸುವುದೇನೆಂದರೆ, ಈ ಜನರ ಆಚರಣೆಯ ಖರೆ ಅರ್ಥದಲ್ಲಿ ಶುದ್ಧವಾಗಿಲ್ಲ, ಪವಿತ್ರವಾಗಿಲ್ಲ. ಭೇದ-ಭಾವ ಒಪ್ಪುವ ನಮ್ಮ ಪರಂಪರೆಯೇ ಭ್ರಮೆಯುಕ್ತ ಮತ್ತು ಅಪವಿತ್ರವಾಗಿದೆ ಎಂಬ ಭಾವನೆಯು ತುಕಾರಾಮನ ವಿಧಾನದಿಂದ ವ್ಯಕ್ತವಾಗುತ್ತದೆ.

ಸರ್ವೋಚ್ಚನಾಗಿಯೂ ಭೇದ ಮಾಡಿದರೆ ಎಲ್ಲರಿಗಿಂತ ಹೀನ

ಶ್ರೋತ್ರಿಯನ್ನು ಅಂದರೆ ವೇದ ವಿದ್ಯಾ ಪಾರಂಗತನಾದ ಬ್ರಾಹ್ಮಣನನ್ನು ನಮ್ಮ ವರ್ಣ ವ್ಯವಸ್ಥೆಯಲ್ಲಿ ಅತ್ಯುಚ್ಚ, ಅಷ್ಟೇಅಲ್ಲ ಸರ್ವೋಚ್ಚನೆಂದು ಒಪ್ಪಿಕೊಳ್ಳಲಾಗಿದೆ. ಅಂತ್ಯಜನು ಈ ವ್ಯವಸ್ಥೆಯ ತೀರಾ ಕೆಳಸ್ಥಾನದಲ್ಲಿದ್ದವನು. ಜಾತಿಯ ಆಧಾರದಿಂದ ಮಾಡಲಾದ ಈ ಭೇದ-ಭಾವವನ್ನು ವ್ಯವಸ್ಥೆಯಲ್ಲಿ ತುಕಾರಾಮನು ಸಂಪೂರ್ಣ ಧಿಕ್ಕರಿಸಿದನು. ಉಚ್ಚಸ್ಥಾನದಲ್ಲಿರುವ ಶ್ರೋತ್ರಿಯು ಭೇದ-ಭಾವ ಮಾಡುತ್ತಿದ್ದರೆ ಅವನನ್ನು ಅಂತ್ಯಜನೆಂದು ಭಾವಿಸಬೇಕು. ಯಾರು ಸಮತೆಯನ್ನು ಒಪ್ಪುತ್ತಾರೋ ಅವನನ್ನು ನಿಜವಾದ ಪಂಡಿತನೆಂದು ಒಪ್ಪಬೇಕು-ಎಂದು ಬೇರೊಂದು ಬಗೆಯ ನಿಕಷವನ್ನು ಅವನು ಹೇಳಿದ್ದಾನೆ. ಇರುವೆ ಮತ್ತು ರಾಜ ಇಬ್ಬರು ಸಮಾನರೆಂದು ಅವನ ಹೇಳಿಕೆ. ಈ ಇರುವೆಯು ಸಾಮಾನ್ಯ ದುರ್ಬಲ, ಅಪ್ರತಿಷ್ಠಿತ ವ್ಯಕ್ತಿಯ ಪ್ರತೀಕವಾಗಿದ್ದು, ಅಂಥ ವ್ಯಕ್ತಿಯನ್ನೂ ತಾನು ಅತ್ಯಂತ ಬಲಿಷ್ಠ ಮತ್ತು ಪ್ರತಿಷ್ಠಿತ ವ್ಯಕ್ತಿಗೆ ಸಮಾನವಾಗಿ ಪರಿಗಣಿಸುತ್ತೇನೆ ಎಂದವನಿಗೆ ಸೂಚಿಸಬೇಕಾಗಿದೆ.

ಯಾರನ್ನೂ ದ್ವೇಷಿಸಬಾರದು, ಎಲ್ಲರನ್ನೂ ಸಮಾನರಾಗಿ ಕಾಣುವದೇ ನಿಜವಾದ ಧರ್ಮ ಎಂದವನ ಭಾವನೆಯಾಗಿತ್ತು. ನನಗೆ ಎಲ್ಲರೂ ಸಮಾನರು ಎಂದು ಹೇಳುವಷ್ಟು ಸಮವೃತ್ತಿ ಅವನಿಗೆ ಪ್ರಾಪ್ತವಾಗಿತ್ತು. ಅಸಮಾನತೆಯಿಂದ ಅತ್ಯಂತ ಕಲುಷಿತಗೊಂಡ ನಮ್ಮ ಸಮಾಜು ದೃಷ್ಟಿಯಲ್ಲಿ ತುಕಾರಾಮನ ಸಮತೆಯ ವಿಚಾರವು ಒಂದು ನಿರ್ಮಲವಾದ ಝರಿಯ ಉಗಮ ಎನ್ನಲಡ್ಡಿಯಿಲ್ಲ.

ಜಾತಿಯ ಅಗತ್ಯವಿಲ್ಲ ದೇವರೆ

ಮನುಷ್ಯನ ಶ್ರೇಷ್ಟತನ ಮತ್ತು ಕನಿಷ್ಠತನವನ್ನು ಜಾತಿಯನ್ನು ಆಧರಿಸಿ ನಿರ್ಧರಿಸುವದು ನಮ್ಮ ಸಮಾಜದ ಒಂದು ವೈಶಿಷ್ಠ್ಯವೇ ಆಗಿದೆ. ಯಾವ ಜಾತಿಯು ಶ್ರೇಷ್ಠವೋ ಅವನೇ ಶ್ರೇಷ್ಟ, ನೀಚ ಜಾತಿಯವನು ಅತ್ಯಂತ ನೀಚ ಎಂದು ನಮ್ಮ ಸಮಾಜ ಒಪ್ಪಿಕೊಂಡು ಬಿಟ್ಟಿದೆ. ಗುಣ-ಆಚಾರವನ್ನು ಆಧರಿಸುವದರ ಬದಲು, ಜಾತಿಯನ್ನು ಆಧರಿಸುವುದು ತುಕಾರಾಮನಿಗೆ ಒಪ್ಪಿಗೆಯಿರಲಿಲ್ಲ. ಮನುಷ್ಯನು ಎಷ್ಟೇ ಉಚ್ಚಜಾತಿಯವನಿರಲಿ, ಅವನ ಆಚರಣೆ ಅಧಮವಾಗಿದ್ದರೆ ಅವನನ್ನು ಆಧಮನೆಂದೇ ಭಾವಿಸಬೇಕು. ಉತ್ತಮಕುಲದಲ್ಲಿ ಹುಟ್ಟಿದವನ ಆಚಾರ ಸರಿಯಿಲ್ಲದಿದ್ದರೆ, ಅವನ ಉತ್ತಮ ಕುಲಕ್ಕೆ ಬೆಂಕಿ ಹಚ್ಚಿ ಎಂದು ತುಕಾರಾಮ ಹೇಳುತ್ತಾನೆ. ಜುಟ್ಟು ಬೆಳೆಸಿ ಜನಿವಾರ ಧರಿಸಿ, ಈ ಬಗೆಯ ಸೋಗಿನಿಂದ ತಮ್ಮ ಜಾತಿಯ ಉಚ್ಚಕುಲವನ್ನು ಅದೆಷ್ಟೇ ಮೆರೆದರೂ ಅದು ನಿಷ್ಪ್ರಯೋಜಕ, ಏಕೆಂದರೆ ಈ ಬಗೆಯ ಸೋಗುಹಾಕಿ ಪ್ರತ್ಯಕ್ಷದಲ್ಲಿ ದುರಾಚಾರವನ್ನು ರೂಢಿಸಿಕೊಂಡಿದ್ದರೆ, ಅಂಥವನಿಗೆ ದಂಡಿಸುವುದೇ ಯೋಗ್ಯ ಎಂದವನು ಹೇಳುತ್ತಾನೆ. ಅದರ ಬದಲು ಆಚರಣೆ ನಡತೆ ಚೆನ್ನಾಗಿದ್ದವನ ಜಾತಿಯೂ ಅದೆಷ್ಟೇ ಕೀಳಾಗಿದ್ದರೂ, ಅವನನ್ನು ಶ್ರೇಷ್ಠನೆಂದು ಭಾವಿಸಬೇಕು ಎಂದು ನಮೂದಿಸುತ್ತಾನೆ. ವರ್ಣದ ಅಭಿಮಾನದಿಂದ ಯಾರು ಪಾವನರಾಗಿದ್ದಾರೆ ಹೇಳಿ-ಎಂದು ತುಕಾರಾಮನು ಪ್ರಶ್ನಿಸುತ್ತಾನೆ.

ಪಾದಕ್ಕೆರಗುವದೇ ನಿಜವಾದ ಅಭಿಮಾನ

ವರ್ಣದ ಅಭಿಮಾನವನ್ನು ವಿಸರ್ಜಿಸುವದರಿಂದ ಎಂಥ ಅಪರಿಮಿತ ಸಂತೋಷ ಸಿಗುತ್ತದೆ ಎಂಬುದನ್ನು ತುಕಾರಾಮನು ತನ್ನದೊಂದು ಅಭಂಗದಲ್ಲಿ ಹೃದಯಂಗಮವಾಗಿ ಚಿತ್ತಿಸಿದ್ದಾನೆ. ಪಂಢರಿಯ ಮರಳಿನಲ್ಲಿ ಭಕ್ತಿಯಾಟ ಶುರುವಾಗಿದೆ. ಈ ಆಟದಲ್ಲಿ ಸಹಭಾಗಿಯಾದ ವೈಷ್ಣವರು ಅಭಿಮಾನವನ್ನು ಕಾಲಿನಿಂದ ಹತ್ತಿಕ್ಕಿ, ಪರಸ್ಪರ ಪಾದಕ್ಕೆರಗುತ್ತಿದ್ದಾರೆ. ಈ ವೈಷ್ಣವರಲ್ಲಿ ಮೂಢರೂ, ನರ ನಾರಿಯರೂ, ಜನಸಾಮಾನ್ಯರೂ, ಪಂಡಿತರು, ಜ್ಞಾನಿಗಳು, ಯೋಗಿಗಳು, ಮಹಾನುಭಾವರೂ, ಸಿದ್ಧರೂ, ಸಾಧಕರೂ ಇದ್ದಾರೆ. ಅವರೆಲ್ಲ ವರ್ಣದ ಅಭಿಮಾನವನ್ನು ತೊರೆದಿದ್ದಾರೆ. ಪರಸ್ಪರರಿಗೆ ಉದ್ದಂಡ ನಮಸ್ಕಾರ ಹಾಕುತ್ತಿದ್ದಾರೆ. ಈ ವೈಷ್ಣವರ ನಿರ್ಮಲ ಮನವು ಬೆಣ್ಣೆಯಂತದ್ದು, ಅವರ ಮನದ ಉತ್ಕಟ ಅವಸ್ಥೆಯನ್ನು ಕಂಡು ಕಲ್ಲೂ ಕರಗುತ್ತದೆ. ವರ್ಣ ಮತ್ತು ಜಾತಿಯ ಅಭಿಮಾನದಿಂದ ಮುಕ್ತರಾಗುವ ಜನ ಮಾನವೀಯತೆಯ ಅತ್ಯುನ್ನತ ಶಿಖರವೇರಿ ಅಲೌಕಿಕ ಆನಂದದ ಅನುಭವವನ್ನು ಹೇಗೆ ಪಡೆಯುತ್ತಾರೆ ಎಂಬ ಪ್ರಸನ್ನಕಾರಿಯಾದ ಚಿತ್ರಣವನ್ನು ತುಕಾರಾಮನು ಈ ಅಭಂಗದಲ್ಲಿ ನೀಡಿದ್ದಾನೆ. ನಾವು ನಮ್ಮ ಜಾತಿಯನ್ನು ಮರೆತಿದ್ದೇವೆ. ನಾಲ್ಕೂ ವರ್ಣದವರೆಲ್ಲ ಒಂದಾಗಿದ್ದೇವೆ ಎಂದು ಹೇಳುತ್ತಾನೆ. ಪಂಢರಿಗೆ ಬಂದು ವರ್ಣದ ಅಭಿಮಾನವನ್ನು ಮರೆತವರಲ್ಲ ಜೀವನ್ಮುಕರಾಗುತ್ತಾರೆ ಎಂದೂ ಬೇರೊಂದು ಅಭಂಗದಲ್ಲಿ ಹೇಳಿದ್ದಾನೆ. ಉಚ್ಚ ಜಾತಿಯವರೆಲ್ಲ ಗರ್ವ ಪಡಬೇಡಿ ಎಂದೂ ಎಚ್ಚರಿಕೆಯನ್ನು ನೀಡಿದ್ದಾನೆ.

ವರ್ಣಾಶ್ರಮದಿಂದ ಶ್ರೇಷ್ಠ ಕಲ್ಯಾಣವಾಗುವದಿಲ್ಲ

ವರ್ಣಾಶ್ರದ ಸಂದರ್ಭದಲ್ಲಿ ಅವನು ಹೀಗೆ ಹೇಳುತ್ತಾನೆ. ವರ್ಣಾಶ್ರಮದ ಕರ್ತವ್ಯದ ಪಾಲನೆ ಮಾಡುವುದೆಂದರೆ ವ್ಯರ್ಥಶ್ರಮ ಮಾಡಿದಂತೆ. ಈ ಬಗೆಯ ಬಾಹ್ಯಸೋಗು ಹಾಕುವುದಕ್ಕಿಂತ ಲೋಭದ ತ್ಯಾಗ ಮಾಡುವದೇ ಹಿತಕಾರಕವಾದುದು. ಈ ವರ್ಣಾಶ್ರಮವನ್ನು ಪಾಲಿಸುವುದಾದರೆ, ಶಾಸ್ತ್ರದ ನಿಯಮದಂತೆ ನಿನಗೆ ಉತ್ತಮ ಲೋಕ ಸಿಗುತ್ತದೆ. ಆದರೆ ಇದೇನು ಸರ್ವಶ್ರೇಷ್ಠ ಕಲ್ಯಾಣವಲ್ಲ. ಏಕೆಂದರೆ ತನ್ನ ದೇಹವನ್ನು ಬ್ರಹ್ಮನನ್ನಾಗಿ ಮಾಡುವದು ಗೊತ್ತಿರುವುದಿಲ್ಲ. ಇದರ ಬದಲು ಸಂತರು ದೇಹಿಗಳಾಗಿದ್ದೂ ವಿದೇಹಿಗಳಾಗುತ್ತಾರೆ.

ನಾಲ್ಕು ವರ್ಣ ಮತ್ತು ನಾಲ್ಕು ಆಶ್ರಮಗಳ ನಿಯಮವನ್ನು ಪರಿಪಾಲಿಸುವುದೇ ವೈದಿಕ ಧರ್ಮದ ವೈಶಿಷ್ಟ್ಯ. ಅಷ್ಟೇ ಅಲ್ಲ, ಹಲವು ಸಲ ವೈದಿಕ ಧರ್ಮಕ್ಕೇ ವರ್ಣಾಶ್ರಮ ಧರ್ಮವೆನ್ನಲಾಗುತ್ತದೆ. ಹೀಗಿರುವಾಗ ತುಕಾರಾಮನು ವರ್ಣಾಶ್ರಮದ ಕರ್ಮಕಾಂಡದ ಕುರಿತು ಹೇಳಿದ ವಿಚಾರವು ಒಂದರ್ಥದಲ್ಲಿ ವೈದಿಕ ಧರ್ಮದ ಮೇಲೆ ನಡೆಸಿದ ಹಲ್ಲೆ ಎನ್ನಲಡ್ಡಿಯಿಲ್ಲ.

ರೈತನನ್ನಾಗಿ ಮಾಡಿದ್ದಕ್ಕೆ ಧನ್ಯವಾದ

ತುಕಾರಾಮನು ತಾನು ರೈತ (ಕುಣಬಿ) ನಾಗಿರುವುದನ್ನು ಆಗಾಗ ಉಲ್ಲೇಖಮಾಡಿದ್ದಾನೆ. ಅಂಥ ಒಂದು ಅಭಂಗದ ಆಶಯ ಹೀಗಿದೆ. ಹೇ, ದೇವರೇ, ನಮ್ಮನ್ನು ರೈತನನ್ನಾಗಿ ಮಾಡಿದ್ದು ಒಳ್ಳೆದಾಯ್ತು. ಇಲ್ಲದಿದ್ದರೆ ನಾನು ಡಾಂಭಿಕತನದಿಂದಲೇ ಸಾಯುತ್ತಿದ್ದೆ. ದೇವರೆ, ಒಳಿತನ್ನು ಮಾಡಿದೆ ಎಂದು ತುಕಾರಾಮನು ಕುಣಿಯುತ್ತಾನೆ. ದೇವರ ಪಾದಕ್ಕೆ ಎರಗುತ್ತಿದ್ದಾನೆ. ನನಗೆ ವಿದ್ಯೆ ಗೊತ್ತಿದ್ದರೆ ನಾನು ಅಪಾಯದಲ್ಲಿ ಸಿಲುಕುತ್ತಿದ್ದೆ, ಸಂತರ ಸೇವೆಯಿಂದ ವಂಚಿತನಾಗುತ್ತಿದ್ದೆ. ನಾನು ದುರ್ದೆಶೆಗೊಳಗಾಗುತ್ತಿದ್ದೆ. ನನಗೆ ಅಹಂಕಾರ ಬರುತ್ತಿತ್ತು. ಸೊಕ್ಕಿಗೊಳಗಾಗುತ್ತಿದ್ದೆ. ನಾನು ಯಮನ ಹಾದಿ ಹಿಡಿಯುತ್ತಿದ್ದೆ. ಏಕೆಂದರೆ ದೊಡ್ಡಸ್ತಿಕೆಯ ಅಭಿಮಾನದಿಂದಾಗಿ ನರಕದ ಪ್ರಾಪ್ತಿಯಾಗುತ್ತಿತ್ತು.

ಧರ್ಮಶಾಸ್ತ್ರದಿಂದಾಗಿ ಆತ್ಮ ತುಚ್ಛತೆಯ ಭಾವನೆ

ತುಕಾರಾಮನ ಈ ಅಭಂಗವು ಸಾಮಾಜಿಕ ಆಶಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದು. ಕರ್ಮಸಿದ್ಧಾಂತದ ಪ್ರಕಾರ, ಪೂರ್ವ ಜನ್ಮದ ಕರ್ಮದಿಂದಾಗಿ ಮನುಷ್ಯನು ವಿಶಿಷ್ಟ ವರ್ಣದಲ್ಲಿ ಜನಿಸುತ್ತಾನೆ. ಅಂದರೆ ಹೆಚ್ಚೆಚ್ಚು ಪುಣ್ಯಕರ್ಮ ಮಾಡಿದರೆ, ಅತ್ಯಂತ ಶ್ರೇಷ್ಟ ವರ್ಣದಲ್ಲಿ ಜನಿಸುತ್ತಾನೆ ಎಂದು ಭಾವಿಸಲಾಗಿದೆ. ಆದರೆ ಈ ಪುಣ್ಯಕರ್ಮವು ನೈತಿಕ ಧರ್ಮಾಚರಣೆಯಾಗಿರದೆ, ಧರ್ಮಶಾಸ್ತ್ರ ಹೇಳಿದ ವಿಶಿಷ್ಟ ಕರ್ಮವಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ಎಂಭತ್ನಾಲ್ಕು ಲಕ್ಷ ಜೀವಯೋನಿಯಲ್ಲಿ ನರಜನ್ಮ ಶ್ರೇಷ್ಠವಾದುದು, ಅದರಲ್ಲೂ ಬ್ರಾಹ್ಮಣ ಪುರುಷ ಜನ್ಮ ಮತ್ತೂ ಶ್ರೇಷ್ಠ – ಎಂಬ ಭಾವನೆಯನ್ನು ಧರ್ಮಶಾಸ್ತ್ರವು ಚೆನ್ನಾಗಿ ಜನರಲ್ಲಿ ಬಿಂಬಿಸಿದೆ. ಹೀಗಾಗಿ ತಾನು ಹೆಚ್ಚೆಚ್ಚು ‘ಉತ್ತಮ’ ಕರ್ಮ ಮಾಡುತ್ತಿರಬೇಕು. ಅಂದರೆ ತನಗೆ ಕೊನೆಗೆ ಬ್ರಾಹ್ಮಣ ಜನ್ಮವಾದರೂ ಸಿಗಬಹುದು, ಆಗ ತನ್ನ ಮೋಕ್ಷದ ಹಾದಿಯಾದರೂ ಸುಗಮವಾಗುತ್ತದೆ ಎಂಬ ಭಾವನೆಯು ಜನರಲ್ಲಿ ಮೂಡುವುದು ಸ್ವಾಭಾವಿಕವಾಗಿತ್ತು. ಹೀನ ಜಾತಿಯಲ್ಲಿ ಜನಿಸಿದ ಜನರಲ್ಲಿ ಮಾತ್ರ ನ್ಯೂನಗಂಡದ, ಆತ್ಮ ತಿರಸ್ಕಾರದ ಅಥವಾ ಆತ್ಮತುಚ್ಛತೆಯ ಭಾವನೆಯು ನಿರ್ಮಾಣಗೊಳ್ಳುವಂತೆ ಮಾಡುವಲ್ಲಿ ಧರ್ಮಶಾಸ್ತ್ರವು ಯಶಸ್ವಿಯಾಯಿತು.

ಬ್ರಾಹ್ಮಣ್ಯವು ನಿರಾಸಕ್ತಿಯ ಅವಸ್ಥೆ

ಈ ವಿಷಯದಲ್ಲಿ ಮಾತ್ರ ತುಕಾರಾಮನು ತೀರಾ ಭಿನ್ನವಾದ ನಿಲುವನ್ನು ತಾಳಿದ್ದನು. ಏಕೆಂದರೆ, ರೈತನಾಗಿ ಜನಿಸಿದ್ದು ಹೀನತನದ ವಿಷಯವಾಗಿರಲಿಲ್ಲ. ಬದಲಿಗೆ ಅದು ಸಮಾಧಾನದ ಸಂಗತಿಯೆಂದು ಖಚಿತವಾಗಿ ಹೇಳಿದ್ದಾನೆ. ವ್ಯವಹಾರದಲ್ಲಿ ಕುಣಬಿ ರೈತರಿಗಿಂತ ಬ್ರಾಹ್ಮಣರನ್ನು ಶ್ರೇಷ್ಠರೆಂದು ಭಾವಿಸಲಾಗುತ್ತದೆ. ಇದರಿಂದ ರೈತನಾಗಿ ಜನಿಸಿದ್ದರಿಂದ ತಾನು ಸರ್ವೋಚ್ಛ ಹಂತ ಏರುವದಾಗಲಿಲ್ಲವೆಂಬ ಖೇದವು ವರ್ಣಾವ್ಯವಸ್ಥೆಯನ್ನು ಒಪ್ಪುವ ಮನುಷ್ಯನಿಗೆ ಅನಿಸುತ್ತಿರುತ್ತದೆ. ತಾನು ರೈತನಾಗುವ ಬದಲು ಬ್ರಾಹ್ಮಣನಾಗಿ ಜನಿಸಿದ್ದರೆ ಒಳ್ಳೆಯದಾಗುತ್ತಿತ್ತೆಂಬ ಖೇದವು ಅವನ ಮನಸ್ಸನ್ನು ಕಾಡುತ್ತಿರುತ್ತದೆ. ತುಕಾರಾಮನು ಮತ್ರ, ಈ ವಿಷಯದ ಕಡೆಗೆ ತೀರಾ ಭಿನ್ನವಾಗಿ ನೋಡುತ್ತಾನೆ. ಬ್ರಾಹ್ಮಣ್ಯವು ಮಾನವೀಯತೆಯ ಸರ್ವೋಚ್ಛ ಸ್ಥಾನವಂತೂ ಅಲ್ಲವೇ ಅಲ್ಲ. ಅದರ ಪ್ರಾಪ್ತಿಗಾಗಿ ಮನುಷ್ಯನು ಅಭಿಲಾಷೆಯನ್ನು ಹೊಂದಿರಬಾರದಂತಹ ಅವಸ್ಥೆಯದು. ಅದು ಸಿಗದಿದ್ದರೂ ಸಮಾಧಾನಿಯಾಗಿರಬೇಕು, ಸಂತೋಷ ತಾಳಬೇಕು. ಹೀಗಾಗಿ ತಾನು ಬ್ರಾಹ್ಮಣನಾಗಿ ಜನಿಸದೆ, ರೈತನಾಗಿ ಜನಿಸಿದ್ದರಿಂದ ನಿರಾಸಕ್ತಿಯ ಅವಸ್ಥೆಯಿಂದ ಹಾದು ಹೋಗುವದರಿಂದ ಪಾರಾದೆ ಎಂದವನು ಸೂಚಿಸಿದ್ದಾನೆ. ಬ್ರಾಹ್ಮಣ ಎಂಥ ಅವಸ್ಥೆ ಎಂಬ ಕಾರಣವನ್ನೂ ನೀಡಿದ್ದಾನೆ. ಬ್ರಾಹ್ಮಣನಾಗುವದೆಂದರೆ ಢಂಬದಿಂದ ಸಾಯುವದು ಅಥವಾ ಆತ್ಯಂತಿಕ ಡಾಂಭಿಕನಾಗುವದು. ಬ್ರಾಹ್ಮಣನಾಗಿ ಜನಿಸಿದ್ದರಿಂದ ಒಂದಿಷ್ಟು ಪುಸ್ತಕ ಜ್ಞಾನ ಸಿಗುತ್ತದೆ. ಆದರೆ ಆ ವಿದ್ಯೆಯಿಂದ ಮನುಷ್ಯ ಆಪಾಯದಲ್ಲಿ ಸಿಲುಕುತ್ತಾನೆ. ಏಕೆಂದರೆ ತಾನೊಬ್ಬ ಶ್ರೇಷ್ಠ ವ್ಯಕ್ತಿ ಎಂಬ ಭಾವನೆಯು ಬ್ರಾಹ್ಮಣನ ಮನದಲ್ಲಿ ತಲೆದೋರಿ ಗರ್ವ, ಅಹಂಭಾವ ಬೆಳೆಯುತ್ತದೆ. ಅವನಲ್ಲಿ ತನ್ನ ಶ್ರೇಷ್ಠತೆಯ ಬಗೆಗೆ ಅಭಿಮಾನವಿರುತ್ತದೆ. ಈ ಗರ್ವ ಅಹಂಕಾರದಿಂದಾಗಿ ಅವನು ಸಂತರ ಸೇವೆಯಿಂದ ವಂಚಿತನಗುತ್ತಾನೆ. ಅಂದರೆ ಸದ್ಗುಣರ ಸೇವೆಯಿಂದ ವಂಚಿತನಾಗುತ್ತಾನೆ. ಹೀಗಾಗಿ ಅವನಿಗೆ ನಿಜವಾದ ಮಾನವೀಯತೆ ಸಿಗುವುದಿಲ್ಲ. ಇದು ಮನುಷ್ಯನಿಗಾಗುವ ವಿನಾಕಾರಣ ಅಪಮಾನವೆಂದು ತುಕಾರಾಮನ ಅನಿಸಿಕೆ. ಮನುಷ್ಯನನ್ನು ‘ಬತ್ತಲೆ’ ಗೊಳಿಸಲಾಗುತ್ತದೆ ಎಂಬ ಮಾರ್ಮಿಕ ಶಬ್ಧವನ್ನೂ ಬಳಸಿದ್ದಾನೆ. ಮನುಷ್ಯನನ್ನು ಉತ್ತರದ ಶಿಖರಕ್ಕೊಯ್ಯುವ ಸದ್ಗುಣವು ಇದು ಮನುಷ್ಯನ ಬಟ್ಟೆಯಂತಿರುತ್ತದೆ. ಬ್ರಾಹ್ಮಣನ ಅಹಂಕಾರ ವಿದ್ಯೆಯ ಗರ್ವವು ಈ ಬಟ್ಟೆಯನ್ನೇ ಕಸಿದುಕೊಳ್ಳುತ್ತದೆ. ಹೀಗೆ ಮನುಷ್ಯನನ್ನು ನಗ್ನಗೊಳಿಸುವ ಬ್ರಾಹ್ಮಣ್ಯ ತನಗೆ ಬೇಕಿಲ್ಲ, ದೇವರು ನನ್ನನ್ನು ಬ್ರಾಹ್ಮಣನಾಗಿಸುವ ಬದಲು ರೈತನಾಗಿಸಿದ್ದು, ತುಂಬಾ ಉಪಯುಕ್ತವಾಯಿತು-ಎಂಬ ವಿಚಾರದಿಂದ ಕುಣಿಯಲಾರಂಭಿಸುತ್ತಾನೆ. ಕೃತಜ್ಞತೆಯಿಂದ ದೇವೆ ಪಾದಕ್ಕೆರಗುತ್ತಾನೆ. ಇದು ತುಕಾರಾಮನ ಮನಸ್ಸಿನ ಸಮಾಧಾನದ ಭಾವನೆಯನ್ನು ವ್ಯಕ್ತಪಡಿಸುತ್ತದೆ. ಈ ಎಲ್ಲ ಚರ್ಚೆಯಲ್ಲಿ ಪ್ರತ್ಯಕ್ಷವಾಗಿ ಅವನು ಬ್ರಾಹ್ಮಣನೆಂಬ ಶಬ್ದವನ್ನು ಬಳಸದೆ ಅದರ ಅರ್ಥವನ್ನು ಸೂಚಿಸಿದ್ದಾನೆ.

ತಳವರ್ಗದ ಜನರಲ್ಲಿ ಸ್ವತ್ವದ ಅಸ್ಮಿತೆಯ ಅರಿವು ಮಾಡಿಕೊಡುವ ದೃಷ್ಟಿಯಿಂದ ತುಕಾರಾಮನ ಈ ಅಭಂಗವು ಅತ್ಯಂತ ಮಹತ್ವದ್ದು. ತಾನು ಯಾವುದೇ ಜಾತಿ, ಕುಲ, ಕುಟುಂಬದಲ್ಲಿ ಜನಿಸಿರಲಿ ; ಜನ ಅದನ್ನು ಕೀಳು ಜಾತಿ ಎಂದೆನ್ನಲಿ, ಕ್ಷುದ್ರ, ದರಿದ್ರ, ಅಪ್ರತಿಷ್ಠಿತ ಎಂದೆನ್ನಲಿ, ಆದರೆ ನಾವು ಮತ್ರ ಸ್ವಂತಕ್ಕೆ ಕೀಳು ಎಂದು ಭಾವಿಸಬಾರದು, ಮನದಲ್ಲಿ ನ್ಯೂನತೆಯ ಭಾವನೆಯನ್ನು ಹೊಂದಿರಬಾರದು. ವಂಚನೆಗೊಳಿಸುವ, ತಥಾಕಥಿತವಾದ ಉಚ್ಚಜಾತಿಯಲ್ಲಿ ಜನಿಸದೆ ಇದ್ದುದರಿಂದ ನಿರಾಗಸ, ನಿರಾಮಯ, ನಿರ್ಮಲ ಮನುಷ್ಯನೆಂದು ಬದುಕುವ ಅವಕಾಶ ಸಿಕ್ಕಿದ್ದು ಸಮಾಧಾನದ, ಆನಂದದ ಸಂಗತಿ ಎಂಬ ಭಾವನೆಯಿಂದ ಈ ಘಟನೆಯತ್ತ ನೋಡಬೇಕು ಎಂಬ ಸಂದೇಶವನ್ನು ತುಕಾರಾಮನು ಈ ಅಭಂಗದ ಮೂಲಕ ನೀಡಿದ್ದಾನೆ. ನಮ್ಮ ನ್ಯಾಯ ಅನ್ಯಾಯದ ಧರ್ಮ ನೀತಿಯ ಭಾವನೆಯು ಉಚ್ಚಜಾತಿಯಲ್ಲಿ ಜನಿಸಲಿಲ್ಲ ಎಂಬ ವೈಫಲ್ಯದಿಮದ ಮೂಡಿದಂತಾಗಿರಬಾರದು. ಅದು ನಕಾರಾತ್ಮಕ ಅಥವಾ ಪ್ರತಿಕ್ರಿಯೆಯ ಸ್ವರೂಪದ್ದಾಗಿರಬಾರದು ಎಂದು ತುಕಾರಾಮನು ಸೂಚಿಸುತ್ತಾನೆ.

ಕತ್ತೆಭಾರದ ಗ್ರಂಥಗಳ ಪುಟ ತಿರುವುತ್ತಿದ್ದಿ !

ಬ್ರಾಹ್ಮಣ ಪಂಡಿತ ಮತ್ತು ರೈತ ಕುಣಬಿ ತುಕಾರಾಮನೆಂಬ ಹೋಲಿಕೆಯ ಮತ್ತೂ ಒಂದು ಮಹತ್ವದ ಅಭಂಗವಿದೆ. ಅದರ ಅರ್ಥ ಹೀಗಿದೆ: ‘ನೀನು ಪಂಡಿತನಾಗಿದ್ದಿ, ಪುರಾಣ ಓದಿ ಹೇಳುತ್ತಿ. ಆದರೆ ನಾನಾರು ?’ ಎನ್ನುವುದು ಮಾತ್ರ ನಿನಗೆ ಗೊತ್ತಾಗಲಿಲ್ಲ. ಕತ್ತೆಭಾರದ ಗ್ರಂಥಗಳನ್ನು ತಂದು ನೀನು ಪುಟ ತಿರುವುತ್ತಿದ್ದಿ. ಆದರೆ ಗುರುವಿನ ಸಹಾಯದಿಂದ ತಿಳಿಯುವ ಸೆನ್ನೆ, ಕುರುಹು ಮಾತ್ರ ನಿನಗರ್ಥವಾಗುವುದಿಲ್ಲ. ಕುಣಬಿ ತುಕಾನಿಗೆ ಶಾಸ್ತ್ರ ಗೊತ್ತಿಲ್ಲ. ಅವನು ಪಂಢರಿನಾಥನ ಮೇಲೆ ಭಾರ ಹಾಕಿದ್ದಾನೆ. ಗ್ರಂಥಜ್ಞಾನದಿಂದ ಆತ್ಮಜ್ಞಾನದ ಖರೆ ಪರಿಚಯವಾಗುವುದಿಲ್ಲ. ಪುರಾಣದ ಗಿಳಿಪಾಠ ಒಪ್ಪಿಸುವದರಿಂದಲೂ ಆತ್ಮಜ್ಞಾನ ಲಭಿಸುವುದಿಲ್ಲ. ಬಾಹ್ಯ ಪಾಂಡಿತ್ಯಕ್ಕಿಂತಲೂ ಅಂತರಂಗದ ಆಶಯ ಮಹತ್ವದ್ದು ಎಂಬುದೇ ತುಕಾರಾಮನ ನಿಲುವು.