ದೇಹವೇ ದೇಗುಲ

ತುಕಾರಾಮನ ತೀರ್ಥಕ್ಷೇತ್ರಕ್ಕೆ ಸಂಬಂಧಿಸಿದ ಕೆಲವು ಅಭಂಗಗಳು ಅಸಾಮಾನ್ಯ ಸ್ವರೂಪದ್ದಾಗಿದೆ. ತೀರ್ಥಕ್ಷೇತ್ರಕ್ಕೆ ತೆರಳಿ, ನೀವು ಗಳಿಸುವ ಪುಣ್ಯವನ್ನು, ನೀವಿದ್ದಲೇ ಗಳಿಸಬಹುದು ಎಂದವನು ಕೆಲವು ವಚನಗಳಲ್ಲಿ ಬೋದಿಸಿದ್ದಾನೆ. ತೀರ್ಥಯಾತ್ರೆಯ ಹಾದಿ ಹಿಡಿದವನು ಅಭಾಗ್ಯವಂತನಾಗಿದ್ದು, ಅದರಿಂದ ಅವನು ದೇವರಿಂದ ದೂರ ಸರಿಯುತ್ತಾನೆ ಎಂದು ಮತ್ತೊಂದು ವಚನದಲ್ಲಿ ಸಾರಿದ್ದಾನೆ. ತೀರ್ಥಕ್ಷೇತ್ರಕ್ಕೆ ಹೋಗುವದಕ್ಕಿಂತ, ನಾವು ಮನದ ಮೂಲಕ್ಕೆ ಹೋಗಿ, ತನ್ನ ಸ್ಥಳದ ಎಲ್ಲೇ ನಿಶ್ಚಲವಾಗಿರುವದು ಎಲ್ಲಕ್ಕಿಂತ ಶ್ರೇಷ್ಠವೆಂದು ಅದೇ ವಚನದಲ್ಲಿ ಹೇಳುತ್ತಾನೆ. ದೇವರು ನಮ್ಮ ದೇಹದಲ್ಲೇ ಇದ್ದಾಗ, ಅಂತರಂಗದಲ್ಲಿರುವಾಗ, ಅವನನ್ನು ಶೋಧಿಸಲು, ಸುಮ್ಮನೆ ತೀರ್ಥಕ್ಷೇತ್ರಗಳಲ್ಲಿ ಅಲೆದಾಡುವ ಮನುಷ್ಯನು ದುರ್ಭಾಗ್ಯವಂತನು ಎಂದವನು ಸಾರುತ್ತಾನೆ. ಇದನ್ನು ಸ್ಪಷ್ಟಪಡಿಸಲು ಅವನು ಮೂರು ಉದಾಹರಣೆ ನೀಡಿದ್ದಾನೆ. ಕಸ್ತೂರಿ ಮೃಗದ ನಾಭಿಯಲ್ಲಿ ಕಸ್ತೂರಿಯಿದ್ದರೂ, ಅದು ಹುಡುಕುತ್ತ ಕಾಡಿನಲ್ಲಿ ಅಲೆದಾಡುತ್ತದೆ. ಕಬ್ಬಿನಲ್ಲಿ ಸಕ್ಕರೆ ಅಡಗಿರುವಂತೆ, ದೇಹದೊಳಗೆ ದೇವರಿದ್ದಾನೆ. ಬೆಣ್ಣೆ ಹಾಲಿನಲ್ಲಿರುತ್ತದೆ. ಆದರೆ ಮೂರ್ಖನಿಗೆ ಅದನ್ನು ಮಂಥನ ಮಾಡುವದು ಹೇಗೆ ಎಂಬುವದೇ ಗೊತ್ತಿರುವದಿಲ್ಲ. ಈ ವಿಷಯ ಅರಿಯದವನು ಮೂಢನಾಗಿರುತ್ತಾನೆ ಎಂದು ತುಕಾರಾಮನ ಅಂಬೋಣ. ದೇಹದಲ್ಲಿರುವ ದೇವರನ್ನು ನೀವೇಕೆ ನೋಡುವದಿಲ್ಲ ಎಂದು ಪ್ರಶ್ನಿಸುತ್ತಾನೆ. ದೇವರು ಕೇವಲ ತೀರ್ಥಕ್ಷೇತ್ರದಲ್ಲಿ ಮಾತ್ರವಿದ್ದನೆ, ಉಳಿದ ಕಡೆಗಳಲ್ಲಿ ಎಂದುಕೊಂಡರೆ ಅದು ದೋಷವೆಂದು ಮತ್ತೊಂದು ಅಭಂಗದಲ್ಲಿ ನಮೂದಿಸುತ್ತಾನೆ.

ಏನು ತೊಳೆದಿರಿ ತೊಗಲೇ?

ಸ್ನಾನದ ಕುರಿತು ತುಕಾರಾಮನ ಹೇಳಿಕೆ ಹೀಗಿದೆ: ಹೊರಗಿನ ದೇಹ ತೊಳೆದು ಏನು ಉಪಯೋಗ? ಮನವಂತೂ ಒಳಗೆ ಹೊಸಲಾಗಿಸಿ ಜೀವನದಲ್ಲಿ ನಡೆಸಿ ಅಸತ್ಯ ವ್ಯವಹಾರದಿಂದಾಗಿ ದೋಷಪೂರಿತವಾಗಿದೆ. ಸ್ನಾನದ ಮೂಲಕ ತೊಗಲು ತೊಳೆದು ಏನು ಪ್ರಯೋಜನ ? ಒಳಗೆ ಕರಿಜಟ್ಟಾದ ವಿಷಯದಂತಹ ಕೆಡಕು ವಿಚಾರ ಹುದುಗಿದ. ಮೊಸಳೆ ಮತ್ತು ಕಾಗೆ ನೀರಿನಲ್ಲಿ ಸ್ನಾನ ಮಾಡುವದಿಲ್ಲವೇ? ದುಷ್ಟನಿಗೆ ಉಪದೇಶ ಮಾಡಿ ಏನು ಲಾಭ? ಕಾಗೆಗೆ ಸ್ನಾನ ಮಾಡಿಸಿದರೂ, ಅದು ಗಾಯವನ್ನು ಹುಡುಕುತ್ತ ಹೋಗುತ್ತದೆ. ಅಹಂಕಾರಿಯ ಸಂಪೂರ್ಣ ಜೀವನವೇ ಮೈಲಿಗೆಯಿಂದ ತುಂಬಿಕೊಂಡಿರುತ್ತದೆ. ಅವನು ತೊಗಲನ್ನು ಅಥವಾ ಅವಯವವನ್ನು ಮೈಲಿಗೆಯಿಂದ ಕೂಡಿದೆ ಎಂದು ಭಾವಿಸಿ, ಅದನ್ನು ತೊಳೆದಾಕ್ಷಣ ನಿರ್ಮಲವಾಗುತ್ತದೆ ಎಂದವನ ತಿಳುವಳಿಕೆ, ಜೀವನವು ನಿರ್ಮಲವಾಗಿರದಿದ್ದರೆ ಸಾಬೂನು ಏನು ಮಾಡಬಲ್ಲದು?

ಭೂತಗಳ ಪಾಲನೆಯೆಂದರೆ ದೇವರ ಪೂಜೆ

ಪೂಜೆಗೆ ಸಂಬಂಧಿಸಿದಂತೆ ತುಕಾರಾಮ ಹೇಳುತ್ತಾನೆ: ‘ಹಲವು ದೇವರನ್ನೇಕೆ ಪೂಜಿಸುತ್ತೀರಿ? ಅದರಿಂದ ಹೊಟ್ಟೆಯೇನೋ ತುಂಬುತ್ತದೆ. ಆದರೆ ಖರೆಖರೆ ಲಾಭವಾಗುವುದಿಲ್ಲ. ಲೋಭದಿಂದ ಕಲ್ಲು ದೇವರನ್ನು ಪೂಜಿಸುವ ಈ ಮನುಷ್ಯನು ಸ್ವತಃ ತಾನೂ ಕಲ್ಲಾಗಿರುತ್ತಾನೆ. ಈ ದುಷ್ಟಜನರು ಭಾವನಾ ರಹಿತವಾಗಿ ಕಲ್ಲಿನ ಮತ್ತು ಹಿತ್ತಾಳೆಯಂತಹ ಅಷ್ಟಧಾತುವಿನ ಪೂಜೆಯನ್ನು ಏಕೆ ಕೈಕೊಳ್ಳುತ್ತಾರೋ? ಖರೆ ಎಂದರೆ, ಭಾವನೆಯೇ ಕಾರಣ, ಮೋಕ್ಷದ ಸಾಧನ. ಅಜ್ಞಾನಿ ಜನರು ಏನಾದರೂ ಪಡೆವ ಇಚ್ಚೆಯಿಂದ ಪೂಜೆ ಮಾಡುತ್ತಾರೆ. ಅವರ ಧ್ಯಾನದಿಂದ ದೇವರ ಪ್ರಾಪ್ತಿಯಾಗುವುದು ಹೇಗೆ ಸಾಧ್ಯ? ಶುಷ್ಕಪೂಜೆ ಮಾಡುವ ಮನುಷ್ಯನು ಕಲ್ಲಿನ ರಾಶಿಯನ್ನು ಸಂಗ್ರಹಿಸುತ್ತಾನೆ. ಯಾವುದೇ ದೇವತೆಯನ್ನು ಪೂಜಿಸಬೇಡ, ಪೂಜೆಯನ್ನು ಮಾಡಲೇಬೇಕೆಂದಿದ್ದರೆ ದೇವರ ಬ್ರಹ್ಮಾಂಡ ಸ್ವರೂಪದ ಕಲ್ಪನೆಯನ್ನು ಮಾಡಿ ಅದನ್ನು ಪೂಜಿಸಬೇಕು. ತುಣುಕು ತುಣುಕಿನ ಒಮ್ಮುಖದ ಪೂಜೆ ವ್ಯರ್ಥವೇ ಸರಿ’.

ಪೂಜ್ಯ ವಿಚಾರ

ಕಲ್ಲು ಅಥವಾ ಧಾತು ದೇವರ ಮೂರ್ತಿಪೂಜೆಯನ್ನು ಸಂಪೂರ್ಣ ನಿರಾಕರಿಸಿದ್ದಾನೆ. ಅದನ್ನು ತುಕಾರಾಮನು ಭಾವಶೂನ್ಯವೆನ್ನುತ್ತಾನೆ. ಲೋಭದಿಂದ ಪೂಜಿಸುವ ಭಕ್ತನೂ ಕಲ್ಲಿಗೆ ಸಮಾನ ಎಂದು ಕಠೋರವಾಗಿ ಟೀಕಿಸಿದ್ದಾನೆ. ಅಂಥ ಪೂಜೆ ಮಾಡಬೇಡ ಎಂದು ಉಪದೇಶ ಮಾಡಿದ್ದಾನೆ. ಪೂಜೆಯನ್ನು ಮಾಡಲೇ ಬೇಕಿದ್ದರೆ, ಬ್ರಹ್ಮಾಂಡ ಸ್ವರೂಪಿ, ವಿಶ್ವಸ್ವರೂಪವಾದ ದೇವರನ್ನು ಪೂಜಿಸಿ ಎನ್ನುತ್ತಾನೆ. ಜಗತ್ತಿನ ಎಲ್ಲ ವಸ್ತುಗಳಲ್ಲಿ ದೇವರು ಇರುವದರಿಂದ ಅವನಿಗೆ ಅರ್ಪಿಸಲು ಬೇರೆ ಪೂಜಾ ದ್ರವ್ಯವಿರುವದಿಲ್ಲ, ಆದ್ದರಿಂದ ವಿಧಿಪೂರ್ವಕ ಪೂಜೆ ಮಾಡುವ ಗೋಜಿಗೆ ಹೋಗಬೇಡ. ಅದರ ಬದಲು ಮನಸಿನ ಪೂಜೆ ಮಾಡಬೇಕು, ನಾಮಸ್ಮರಣೆಯ ಪೂಜೆ ಮಾಡಬೇಕು. ಮನಸ್ಸು ಸಮಾಧಾನಿಯಾಗಿರುವ ಸ್ವರೂಪದ ಪೂಜೆ ಮಾಡಬೇಕು ಎಂದು ಭೋಧಿಸಿದ್ದಾನೆ. ಸಕಲ ಪ್ರಾಣಿಗಳನ್ನು ಸಮಾನವಾಗಿ ಕಾಣುವದೇ ನಿಜವಾದ ಪೂಜೆ, ಅದೇ ನಿಜವಾದ ನೀತಿ. ತುಕಾರಾಮನ ಈ ನಿಲುವು ಧಾರ್ಮಿಕ ಕ್ಷೇತ್ರದಲ್ಲಿಯ ಪೂಜ್ಯ ವಿಚಾರ, ಪವಿತ್ರ ವಿಚಾರ ಎನ್ನಲಡ್ಡಿಯಿಲ್ಲ.

ಉಪವಾಸ ಮಾಡಬೇಕಿಲ್ಲ

ತುಕರಾಮನು ಹಲವು ಯುಕ್ತವಾದ ಮಾಡಿ ಉಪವಾಸ ಮಾಡಬೇಕಾದ ಅಗತ್ಯವಿಲ್ಲ ಎಂದು ತೋರಿಸಿಕೊಟ್ಟನು. ಅವನು ಅನ್ನುತ್ತಾನೆ ನೀನು ಅನ್ನವನ್ನು ತೊರೆಯಬೇಕಿಲ್ಲ. ಎಲ್ಲ ಬಗೆಯ ಭೋಗ ಪಡೆಯುತ್ತಲೇ ನಾರಾಯಣನ ಚಿಂತೆಯನ್ನು ಮಾಡು. ಸುಖದ ಅನ್ನ ತಿಂದು, ಅವನ ಚಿಂತನೆ ಮಾಡು. ಅಂದರೆ ಅವನ ಅನ್ನ ಅವನಿಗೇ ನೀಡಿದಂತಾಗುತ್ತದೆ. ಫಲ ನಮಗೆ ಸಿಗಬಹುದು. ಅವನ ಹೆಸರು ವಿಶ್ವಂಬರ. ಅವನೇ ಆಧಾರ. ಅವನಿಲ್ಲದ ತಾಣವಿಲ್ಲ, ಭಾವನೆಯ ಪ್ರಸಾದ ಕೈಕೊಳ್ಳುವದೇ ಮಹತ್ವದ ಕಾರ್ಯ. ಫಂಡರಿಯಲ್ಲಿ ಯಾರಾದರೂ ಉಪವಾಸ ಕೈಗೊಂಡರೆ ದೇವರಿಗೆ ಸಹಿಸುವದಾಗುವುದಿಲ್ಲ. ದೇವರೆ, ನಾನು ನಿನ್ನ ಬಳಿ ಬೇಡಲಿ? ಕೆಲವು ಜನ ಹಠದಿಂದ ಉಪವಾಸ ಮಾಡುತ್ತಾರೆ. ಆ ಹಠ ನನ್ನ ಬಳಿಯಿಲ್ಲ. ಅವರು ಅಪಮಾನ ಮಾಡಿದಂತಾಗುತ್ತದೆ. ನಾರಾಯಣ, ನನಗೆ ಏನು ಕೊರತೆಯಿದೆ? ಉಪವಾಸ ಮಾಡುವ ಬಡಪಾಯಿಗಳು ಮಾಡಲಿ, ನಾನಂತೂ ವಿಠ್ಠಲನ ದಾಸ. ಆಸೆ, ಚಿಂತೆಯನ್ನು ಧಿಕ್ಕರಿಸಿದ್ದೇನೆ. ಹಾವು ಎಲ್ಲಿ ಅನ್ನ ತಿನ್ನುತ್ತದೆ. ಅಂದರೆ ಅದು ಉಪವಾಸ ಮಾಡಿದಂತೆ, ಆದರೆ ಅಂತರಂಗದ ಬುದ್ಧಿಯು ಖೊಟ್ಟಿಯಾಗಿರುತ್ತದೆ. ಅದರ ಹೊಟ್ಟೆಯಲ್ಲಿ ಕೆಡಕು ಯೋಚನೆ ತುಂಬಿರುತ್ತದೆ. ನಾನು ಅನ್ನ ಬಿಡಲಾರೆ, ನಾನು ನಿರಾಹಾರ ವ್ರತ, ಪಾರಾಯಣ ಮುಂತಾದವುಗಳನ್ನು ಮಾಡುವದಿಲ್ಲ, ಕೇವಲ ರಾಮಕೃಷ್ಣ, ನಾರಾಯಣ ಎನ್ನುತ್ತೇನೆ. ನಿರಾಹಾರದ ಅಗತ್ಯವಿಲ್ಲ. ನನಗೆ ಹಸಿವು, ನೀರಡಿಕೆ ಸಹಿಸುವದಾಗುವುದಿಲ್ಲ. ಅಲ್ಪೋಪಹಾರದ ಅಗತ್ಯವೂ ಇಲ್ಲ

ಜಪದ ಸೋಗೂ ಬೇಡ

ತುಕಾರಾಮನು ವಿಠ್ಠಲನ ನಾಮಸ್ಮರಣೆಯನ್ನು ಬೆಂಬಲಿಸುತ್ತಾನೆ ಎಂದ ಬಳಿಕ ಜಪವನ್ನು ಬೆಂಬಲಿಸುತ್ತಿರಬೇಕೆಂದು ಮೊದಲ ನೋಟಕ್ಕೆ ಅನಿಸುತ್ತದೆ. ಆದರೆ ಪ್ರತ್ಯಕ್ಷವಾಗಿ ಅವನು ಜಪವನ್ನು ದೇವರ ಪ್ರಾಪ್ತಿಯ ಸಾಧನವೆಂದು ಒಪ್ಪಲು ನಿರಾಕರಿಸಿದ. ಉತ್ಕಟ ಭಾವನೆಯಿಂದ ವಿಠ್ಠಲನ ಹೆಸರು ಉಚ್ಚರಿಸುವದು ಬೇರೆ, ಮತ್ತು ಭಾವನಾರಹಿತವಾಗಿ ಕೇವಲ ಯಾಂತ್ರಿಕವಾಗಿ, ಅಥವಾ ಡಾಂಭಿಕವಾಗಿ ಜಪ ಮಾಡುವದು ಬೇರೆ ಎನ್ನುವುದು ತುಕಾರಾಮನ ನಿಲುವು. ಮನದಲ್ಲಿ ಪ್ರೇಮ ಭಾವನೆಯಿಲ್ಲದೆ ಕಣ್ಮುಚ್ಚಿ, ಸುಮ್ಮನೆ ಏಕೆ ಜಪ ಮಾಡುತ್ತಿ ಎಂದು ಡಾಂಭಿಕರನ್ನು ಪ್ರಶ್ನಿಸುತ್ತಾನೆ. ಅವನು ಕಣ್ಮುಚ್ಚಿ ಜಪ ಮಾಡುವ ನಾಟಕ ಮಾಡಿದರೂ, ಅವನಿಗೆ ಧರ್ಮ ಗೊತ್ತಿಲ್ಲ ಎಂದವನು ಆಕ್ಷೇಪ ಎತ್ತಿದ್ದಾನೆ. ಕೈಯಿಂದ ಮಣಿಯನ್ನು ಸರಿಸಿ ಜಪ ಮಾಡುವ ಸೋಗು ಹಾಕುತ್ತ, ಬಾಯಿ ವಟಗುಟ್ಟುತ್ತಿದ್ದರೂ, ಅವನ ಮನಸ್ಸು ಯಾರನ್ನೋ ನಿಂದಿಸುತ್ತಿರುತ್ತದೆ ಎಂದು ತುಕಾರಾಮನು ಬೇರೊಂದು ಆಭಂಗದಲ್ಲಿ ಹೇಳಿದ್ದಾನೆ.

ಮಾಂತ್ರಿಕನೆಂದರೆ ಕರಿಮುಸುಡಿಯ ನಾಯಿ

ಮಾಂತ್ರಿಕ, ಮಂತ್ರೋಚ್ಚಾರ ಮುಂತಾದವುಗಳ ಬಗೆಗೆ ಟೀಕಿಸುವಾಗ ತುಕಾರಾಮ ಹೇಳುವದೇನೆಂದರೆ, ಜನರಿಗೆ ಗೊತ್ತಾಗದಂತೆ ಅಮಾನುಷವಾದ ಪ್ರಯೋಗ ಮಾಡುವ ಮಾಂತ್ರಿಕನು ಕರಿಮುಸುಡಿಯ ನಾಯಿಯಿದ್ದಂತೆ. ಅವನ ಸಾಧುತನಕ್ಕೆ ಧಿಕ್ಕಾರವಿರಲಿ. ಅವನ ಮನ ಕೊಳಕಾಗಿರುತ್ತದೆ. ಜನರನ್ನು ಮರಳು ಮಾಡಲು ಮಂತ್ರ ಹೇಳುತ್ತಿರುತ್ತಾನೆ. ಮಂತ್ರ, ತಂತ್ರ, ಗಿಡಮೂಲಿಕೆ ಇಂಥದ್ದೇನೇ ಮಾಡಿದರೂ ಭೂತಸೃಷ್ಟಿಗೆ ಕಾರಣವಾಗುತ್ತದೆ. ದೇವರ ಪ್ರಾಪ್ತಿಗೆ ವಿವಿಧ ರೀತಿಯ ಮಂತ್ರ ವಿಧಾನದ ಅಗತ್ಯವಿಲ್ಲ. ನಿಷ್ಠೆಯಿಂದ-ಕರುಣೆಯಿಂದ ಪ್ರಾರ್ಥಿಸಿದರೆ ಸಾಕು. ದೇವರು ಮಂತ್ರ, ಪೂಜೆಯ ಬಗೆಗೆ ಉದಾಸೀನನಾಗಿರುತ್ತಾನೆ

ಮಾಂತ್ರಿಕನ ಮಂತ್ರೋಚ್ಚಾರದಲ್ಲಿ ಕಿಂಚಿತ್ ತಪ್ಪಾದರೂ ಅವನಿಗೆ ತಕ್ಷಣ ಹಿಡಿಯುತ್ತದೆ. ಆದರೆ ವಿಠ್ಠಲನ ನಾಮವನ್ನು ಅಸಂಬದ್ದವಾಗಿ ಉಚ್ಚರಿಸಿದರೂ ಎನೂ ಕೆಡಕಾಗುವದಿಲ್ಲ. ಅಷ್ಟೇ ಅಲ್ಲ ವಿಠ್ಠಲನ ನಾಮ ಸದಾಕಾಲ ಶುಭದಾಯಕ. ಉಳಿದ ಭಜನೆಯಲ್ಲಿ ಜಾತಿಯ ನಿಷೇದವಿದೆ. ವಿಠ್ಠಲನ ನಾಮ ಮಾತ್ರ ಯಾವ ಭೇದ ಭಾವವಿಲ್ಲದೆ ಎಲ್ಲರ ಬಾಯಲ್ಲಿರುತ್ತದೆ. ಮಂತ್ರ ಸ್ವಲ್ಪ ಗೊತ್ತಿದ್ದರೂ ಮನುಷ್ಯ ಹುಚ್ಚನಾಗುತ್ತಾನೆ. ಮುಗ್ಧ ಭಕ್ತಿ ಮಾತ್ರ ಹಾಗಲ್ಲ. ದೇವರಿಗೆ ಬೇಕಿರುವದು ಭಾವ ಸೇವೆ, ವಿಠ್ಠಲನ ನಾಮದ ಈ ಮಂತ್ರವೂ ಎಂದೂ ಬಾಧಿಸುವದಿಲ್ಲ. ವಾಲ್ಮೀಕಿಯ ವಿರುದ್ಧ ನಾಮವನ್ನು ಉಚ್ಚರಿಸಿದ. ಆದರೂ ನಾರಾಯಣ ಅವನಿಗೆ ಒಲಿದ.

ದೇವರ ಆವಾಹನೆ, ಮತ್ತು ಕೌಲು ಹಚ್ಚುವದೂ ಪಾಪವೇ

ದೇವರೂ ಮೈಮೇಲೆ ಬರುವ, ಆವಾಹನೆ ಮಾಡಿಕೊಳ್ಳುವ ಘಟನೆಯ ಕುರಿತು ತುಕಾರಾಮ ಮಂಡಿಸಿದ ವಿಚಾರ ಹೀಗಿದೆ: ದೇವರನ್ನು ಆವಾಹನೆ ಮಾಡಿಕೊಂಡು ಜನರಿಗೆ ದಯೆ ತೋರಿಸುವದರಿಂದ ಭಕ್ತರಿಗೆ ಯಾವ ಪ್ರಯೋಜನವು ಇಲ್ಲ, ದೇವರ ಕೋಣೆಯಲ್ಲಿ ಕೂತು ಕೌಲು ಹಚ್ಚುವ ಪಾಪಿಗಳು ಮತ್ತಷ್ಟು ಪಾಪ ಮಾಡುತ್ತಾರೆ. ಹಲವು ಸಂಗತಿಗಳನ್ನು ಹೇಳಿದ ಮೇಲೆ ಅದರಲ್ಲಿ ಒಂದೆರಡು ಸಂಗತಿ ನಿಜವಾಗಿರುತ್ತದೆ. ಇಷ್ಟಕ್ಕೆ ಜನರು ಮರಳಾಗುತ್ತಾರೆ. ಅವರ ಸ್ವಾಧೀನದಲ್ಲಿ ದೇವರು ಇದ್ದುದೇ ಆಗಿದ್ದರೆ, ಅವರ ಸ್ವಂತ ಮಕ್ಕಳೇ ಸಾಯುತ್ತಾರಲ್ಲ, ಏಕೆ? ಯಾರು ನೀರು, ಬೂದಿ ನೀಡುತ್ತಾನೋ, ಅವನು ಕಾನ್ಹೋಬಾನ ಭಕ್ತನಲ್ಲ

ಕಾಡಿಗೆ ತೆರಳಬೇಕಿಲ್ಲ

ದೇವರನ್ನು ಹುಡುಕಲು ಸಂಸಾರತ್ಯಾಗ ಮಾಡಿ, ಕಾಡಿಗೆ ತೆರಳುವ ಸಾಧು ಸನ್ಯಾಸಿಗಳು ನಮ್ಮ ಸಮಾಜದಲ್ಲಿ ಸಾಕಷ್ಟು ಕಾಣ ಸಿಗುತ್ತಾರೆ. ತುಕಾರಾಮನಿಗೆ ಇದು ಒಪ್ಪಿಗೆಯಿಲ್ಲ. ಅವನ ಪ್ರಕಾರ ದೇವರು ವಿಶ್ವಂಭರ, ಅವನು ಸಂಪೂರ್ಣ ವಿಶ್ವದ ಪಾಲನೆ-ಪೋಷಣೆ ಮಾಡುತ್ತಾನೆ. ಹೀಗಾಗಿ ವಿಶ್ವದ ಕಣ, ಕಣದಲ್ಲೂ ಅವನಿದ್ದಾನೆ. ಅಷ್ಟೇ ಅಲ್ಲ, ಅವನು ವಿಶ್ವರೂಪಿಯೇ ಆಗಿದ್ದಾನೆ. ಅಂದರೆ ಅವನು ಸಂಸಾರದಲ್ಲಿ, ಮನೆಯಲ್ಲಿ, ಆಚೆ ಈಚೆ ಎಲ್ಲೆಡೆ ಇದ್ದಾನೆ. ಹೀಗಿದ್ದಾಗ ಅವನನ್ನು ಶೋಧಿಸಲು ಕಾಡಿಗೆ ತೆರಳುವ ಅಗತ್ಯವೇನಿದೆ ಎಂದು ತುಕಾರಾಮ ಪ್ರಶ್ನಿಸುತ್ತಾನೆ. ಸಂಸಾರದ ಭೀತಿಯಿಂದ ಎಲ್ಲೂ ಓಡಿ ಹೋಗುವಂತಿಲ್ಲ. ಏಕೆಂದರೆ, ಎಲ್ಲೆಡೆ ದೇವರಿದ್ದಾನೆ. ಭೂಲೋಕದಲ್ಲೂ ಏಕಾಂತಕ್ಕೆ ಅವಕಾಶವಿಲ್ಲ. ಸಕಲ ಭೂ ಮಂಡಲವೇ ಹರಿಹರಾತ್ಮಕವಾಗಿದ್ದಾಗ ಕಾಡಿಗೆ ಹೋಗಬೇಕಿಲ್ಲ ಎನ್ನುವದು ಅವನ ಮತ.

ಮನ ಶುದ್ಧವಿಲ್ಲದೇ ಬರೇ ಕಾಡಿಗೆ ಹೋಗುವದರಿಂದ ಏನೂ ಲಾಭವಿಲ್ಲ ಎನ್ನುವದು ತುಕಾರಾಮನ ಹೇಳಿಕೆ. ಮನ ಸಮಾಧಾನಿಯಾಗಿರದಿದ್ದರೆ ಕಾಡು ಕಣಿವೆ ಏನು ಮಾಡುತ್ತದೆ ಎಂಬ ಪ್ರಶ್ನೆ ಹಾಕುತ್ತಾನೆ. ಕಾಡಿನಲ್ಲಿ ಸಿಗುವದು ಬರೇ ಫಲ. ಮೂಲದಲ್ಲಿ ಕಾಡಿನಲ್ಲಿ ಪ್ರಾಣಿಗಳೂ ಇರುತ್ತವೆ, ಅವುಗಳಿಗೆಲ್ಲಿ ಲಾಭವಾಗಿದೆ ಎಂದೂ ಕೇಳುತ್ತಾನೆ. ಅದರ ಬದಲು ಕಾಮ, ಕ್ರೋಧಗೆದ್ದರೆ, ಅದನ್ನು ತುಳಿದು ಹಾಕಿದರೆ, ಕಾಡು ಸಂಸಾರ ಎರಡೂ ಒಂದೇ ಆಗುತ್ತದೆ ಎಂದು ಸ್ವಾನುಭವದ ಮಾತು ಹೇಳುತ್ತಾನೆ. ಕಾಮನೆಯನ್ನು ತೊರೆದು ಸನ್ಯಾಸ ಸ್ವೀಕರಿಸು. ಆಗ ಎಲ್ಲಿ ನಿಂತರೂ ಒಂದೇ. ಜನರಲ್ಲಿರು, ಕಾಡಿನಲ್ಲಿರು, ಮಂಚದ ಮೇಲಿರು, ಭೂಮಿಯ ಮೇಲಿರು. ಎಲ್ಲಾ ಒಂದೇ ಎನ್ನುವುದು ತುಕಾರಾಮನ ಉವಾಚ.

ಉಳಿದ ಕೆಲವು ಅಭಂಗಗಳಲ್ಲಿರುವ ವಿಚಾರ ಹೀಗಿದೆ : ನಡೆಯಬೇಕಿಲ್ಲ. ಓಡಾಟ ಮಾಡಬೇಕಿಲ್ಲ. ಮನೆಯಲ್ಲಿ ಕೂತಲ್ಲೇ ನಿಮಗೆಲ್ಲ ಲಾಭ ಸಿಗಲಿದೆ. ಕೇವಲ ಒಬ್ಬ ದೇವರ ಮೇಲೆ ಭಾರವಿರಿಸಿ, ಸಾಕು.

ನಾನು ಅಮೃತದಲ್ಲಿ ಮುಳುಗಿರುವಾಗ ನನ್ನ ದೇಹ ಉದಾಸಗೊಳ್ಳಬೇಕೇಕೆ? ಜನರ ನಡುವೆಯೇ ಸಂತೋಷ ಸಿಗುತ್ತಿರುವಾಗ ಏಕಾಂತದಲ್ಲಿ ಅಥವಾ ಕಾಡಿನಲ್ಲೇಕೆ ವಾಸಿಸಬೇಕು? ವಿಠ್ಠಲನ ನಾಮ ಸ್ಮರಣೆಯಿಂದ ನನಗೆ ಜನರಲ್ಲೇ ನಿರ್ಜನದ ಅನುಭವವಾಗುತ್ತಿದೆ. ಕಾಡು, ನಗರ ಒಂದೇ ರೀತಿಯಲ್ಲಿದೆ. ಎಲ್ಲ ತಾಣಗಳು ಒಂದೇ ಬಗೆಯಲ್ಲಿವೆ.

ಜನರ ನಡುವೆ ಇರುವದರಿಂದ ಆನಂದ ಸಿಗುತ್ತದೆ. ಜನರಲ್ಲಿ ನಿರ್ಜನವಿದೆ. ನಾನಿಲ್ಲಿ ಸಂಸಾರದಲ್ಲೇ ಅಮೃತದಲ್ಲಿ ಮುಳುಗಿದ್ದೇನೆ ಎಂದು ಹೇಳುವ ತುಕಾರಾಮನಿಗೆ ಸಿದ್ಧಿ ಪಡೆಯಲು ಕಾಡಿಗೆ ತೆರಳುವ ಅಗತ್ಯ ಕಾಡುವದಿಲ್ಲ. ಆದರೂ ಅವನು ದುಷ್ಟರ ಹಿಂಸೆಗೆ ಬೇಸತ್ತು ಒಂದೆರಡು ಬಾರಿ ಕಾಡಿಗೆ ಹೋಗುವ ಮಾತು ವ್ಯಕ್ತ ಮಾಡಿದ್ದಾನೆ. ಆದರದು ಅವನ ಸ್ಥಾಯಿ ಭಾವವಲ್ಲ. ಜೀವನದಲ್ಲಿ ಸ್ವೀಕರಿಸಿದ ತತ್ವಜ್ಞಾನವೂ ಅಲ್ಲ.

ಗುಹೆಯಲ್ಲಿ ವಾಸಿಸುವ ಅಗತ್ಯವಿಲ್ಲ

ಗುಹೆಗೆ ತೆರಳಿ ತಪವನ್ನು ಆಚರಿಸುವ ನಾಟಕವನ್ನು ಮಾಡುವ ಜನರನ್ನು ತುಕಾರಾಮನು ತರಾಟೆಗೆ ತೆಗೆದುಕೊಂಡಿದ್ದಾನೆ. ಈ ಜನ ನೆಲ ಅಗೆದು ಅಲ್ಲಿ ವಾಸಿಸುತ್ತಾರೆ. ಇಲಿಯು ಅವರಿಗಿಂತ ಕಡಿಯೆಯನ್ನಬಹುದೇ? ನಾವು ಧಾನ್ಯ ತೆಗೆಯಲು ನೆಲಗಣಜದಲ್ಲಿ ಇಳಿದರೆ, ಅದರಿಂದ ಸಿದ್ಧಿ ಲಭಿಸುತ್ತದೆಯೆ? ನಾನು ಗುಹೆಯಲ್ಲಿ ನೆಲೆಸುವದಿಲ್ಲ.

ಏಕೆ ಬೇಕು ತಪದ ಬೆಟ್ಟ

ಹಲವರು ತಪದಿಂದ ದೇವರನ್ನು ಪಡೆಯಲು ಹವಣಿಸುತ್ತಾರೆ. ತಪಕ್ಕೆ ತಪಶ್ಚರ್ಯ ಎಂದು ಕರೆಯುತ್ತಾರೆ. ತಪ ಎಂಬ ಶಬ್ದದ ವಾಚ್ಯಾರ್ಥದ ಮೇಲಿಂದಲೇ ದೇಹಕ್ಕೆ ನೀಡುವ ತಾಪ, ಕ್ಲೇಶ, ಕಷ್ಟ ಎಂಬ ಅರ್ಥ ನೀಡುತ್ತಿರುವದು ಸ್ಪಷ್ಟ. ಸೂರ್ಯ ಅಥವಾ ಅಗ್ನಿಯ ಎದುರಿಗೆ ನಿಲ್ಲುವದು, ಇದೆಲ್ಲ ತಪದ ಬೇರೆ-ಬೇರೆ ಮಾರ್ಗಗಳು.

ತುಕಾರಾಮನಿಗೆ ತಪದ ಮಾರ್ಗವು ಒಪ್ಪಿಗೆಯಾಗಿರಲಿಲ್ಲ. ಯಾರಿಗೆ ತಪದ ಸಾಧನೆ ಮಾಡಬೇಕೆಂದಿದೆಯೋ ಅವರು ಮಾಡಲಿ. ಅಗ್ನಿಯಲ್ಲಿ ಸುಟ್ಟುಕೊಂಡು ತಪ ಮಾಡಬೇಕೆಂದಿದೆಯೋ ಮಾಡಲಿ. ನಾನು ಮಾತ್ರ ಆ ಹಾದಿಯನ್ನು ಹಿಡಿಯಲಾರೆ. ನಾನು ಪಂಢರಿಯಲ್ಲೇ ನರ್ತಿಸುತ್ತ ಇರುತ್ತೇನೆ ಎಂದು ಅವನು ಹೇಳುತ್ತಾನೆ. ಒಂದು ಅಭಂಗದಲ್ಲಿ ತಪದ ಮಾರ್ಗ ನಿರಾಕರಿಸುವ ಎರಡು ಕಾರಣ ನೀಡಿದ್ದಾನೆ. ತಪದಿಂದ ಇಂದ್ರಿಯಗಳಿಗೆ ಆಘಾತವಾಗುತ್ತದೆ. ಎರಡನೆಯದು, ಇಂಥ ಆಘಾತ ದೀರ್ಘಕಾಲದವರೆಗೆ ಸಹಿಸಿ ತಪಶ್ಚರ್ಯ ಕೈಕೊಂಡರೂ, ಒಂದು ಚಿಕ್ಕ ತಪ್ಪಿನಿಂದ ಕೈಕೊಂಡ ತಪವೆಲ್ಲ ಹಾಳಾಗುತ್ತದೆ, ಗಳಿಸಿದ್ದೆಲ್ಲ ವ್ಯರ್ಥವಾಗುತ್ತದೆ. ಹೀಗಾಗಿ ತಪದಂತಹ ಸಾಧನೆಯು ನನಗೆ ಹಿಡಿಸುವದಿಲ್ಲ. ತಪದ ಬೆಟ್ಟವನ್ನೇಕೆ ರಚಿಸುತ್ತೀರಿ? ದುಃಖದ ರಾಶಿಯನ್ನೇ ನೀಡುವ ಉಳಿದ ಕ್ಲೇಶಕಾರಕ ಕರ್ಮವನ್ನಾದರೂ ಏಕೆ ಮಾಡಬೇಕು ಎನ್ನುವದು ಅವನ ಪ್ರಶ್ನೆ.

ನಾನು ಜಪ ಮಾಡಲಿಲ್ಲ, ಜೀವವನ್ನು ಕರಗಿಸಲಿಲ್ಲ, ಮನಸ್ಸಿಗೆ ಬೆದರಿಕೆ ಹಾಕಲಿಲ್ಲ ಎಂದವನ ಅಂಬೋಣ, ದೇವರ ಪ್ರಾಪ್ತಿಗಾಗಿ ದೇಹಕ್ಕೆ ಯಾತನೆ ನೀಡುವ ನಿಗ್ರಹವನ್ನು ನಾನು ಕೈಕೊಳ್ಳಲಿಲ್ಲ. ಏಕೆಂದರೆ, ಈಗ ಪುಂಡಲೀಕನು ಪಂಢರಿಯಲ್ಲೇ ವೈಕುಂಠವನ್ನು ತಂದಿದ್ದಾನೆ. ಸಂತರು ದುರ್ಬಲರ ತಪದ ರಾಶಿ ಮತ್ತು ಜೀವನಾಶದಂಥ ಪರಿಶ್ರಮವನ್ನು ತಪ್ಪಿಸಿದ್ದಾರೆ. ನಾಮ ಸ್ಮರಣೆ ಮಾಡುವವರಿಗೆ ದೇವರ ಪ್ರಾಪ್ತಿಗಾಗಿ ಧೂಮ್ರಪಾನ ಮಾಡುವ ಅಗತ್ಯವಿಲ್ಲ. ತೂಗು ಬಿದ್ದು ಹೊಗೆಯಿಂದ ಕಾಸಿಕೊಳ್ಳಬೇಕಿಲ್ಲ. ಪಂಚಾಗ್ನಿ ಸಾಧನೆಯು ಬೇಕಿಲ್ಲ. ಅಂದರೆ ನಾಲ್ಕು ಕಡೆಯಲ್ಲಿ ಅಗ್ನಿ, ಐದನೆಯದು ಸೂರ್ಯವೆಂಬ ಅಗ್ನಿ ಹೀಗೆ ಪಂಚಾಗ್ನಿ ಸಾಧನೆಯು ಬೇಕಿಲ್ಲ. ಅಂದರೆ ನಾಲ್ಕು ಕಡೆಯಲ್ಲಿ ಅಗ್ನಿ, ಐದನೆಯದು ಸೂರ್ಯವೆಂಬ ಅಗ್ನಿ ಹೀಗೆ ಪಂಚಾಗ್ನಿಯ ತಪ ಕೈಕೊಳ್ಳಬೇಕಿಲ್ಲ. ಕರಗಸದಂತಹ ಶಸ್ತ್ರಗಳಿಂದ ದೇಹ ದಂಡನೆ ಮಾಡಿಕೊಂಡರೂ ಅದು ನಾಮಸ್ಮರಣೆಗೆ ಸರಿಗಟ್ಟುವದಿಲ್ಲ ಎಂದವನು ಒಂದು ಅಭಂಗದಲ್ಲಿ ಹೇಳಿದ್ದಾನೆ.

ಭೋಗವೇ ತ್ಯಾಗ

ಸನ್ಯಾಸಿಯ ಬಾಬತ್ತಿನಲ್ಲಿ ತುಕಾರಾಮನ ಚಿಂತನೆ ಹೀಗಿದೆ. ಸತ್ಯವಾದಿ ಮನುಷ್ಯನು ಸಂಸಾರವನ್ನು ಸರಿಯಾಗಿ ಪರಿಪಾಲಿಸುತ್ತಾನೆ. ನೀರಿನಲ್ಲಿದ್ದೂ ಕಮಲವು ಅಲಿಪ್ತವಾಗಿರುವಂತೆ ಅವನು ಸಂಸಾರದಲ್ಲಿದ್ದೂ ಅಲಿಪ್ತನಾಗಿರುತ್ತಾನೆ. ಈ ರಹಸ್ಯವನ್ನು ಅರಿಯದೆ ತ್ಯಾಗ ಮಾಡುವದು, ಧಾರಣೆ ಮಾಡುವದು ಮುಂತಾದವುಗಳಿಂದ ಧಣಿಯುತ್ತಾನೆ.ದೇವರನ್ನು ಪಡೆಯಲು ಲೌಕಿಕ ವ್ಯವಹಾರ ತ್ಯಾಗ ಮಾಡಬೇಕಿಲ್ಲ, ಕಾಡಿಗೆ ತೆರಳಬೇಕಿಲ್ಲ, ಮೈಗೆ ಭಸ್ಮ ಲೇಪಿಸಿಕೊಳ್ಳಬೇಕಿಲ್ಲ, ಕೈಯಲ್ಲಿ ದಂಡ ಹಿಡಿಯಲುಬೇಕಿಲ್ಲ. ಯೋಗ್ಯ ಮಾರ್ಗದಿಂದ, ಸಂಯಮದಿಂದ ವಿಷಯವನ್ನು ಸೇವನೆ ಮಾಡುವದೆಂದರೆ, ಆ ವಿಷಯವನ್ನು ತ್ಯಾಗ ಮಾಡಿದಂತೆ; ಸನ್ಯಾಸ ಸ್ವೀಕರಿಸಿದಂತೆ. ಭಾವನೆಯು ಶುದ್ಧವಾಗಿರದಿದ್ದರೆ ಭೋಗದ ಮಾಧ್ಯಮದಿಂದ ತ್ಯಾಗ ಪ್ರಾಪ್ತಿಯಾಗುತ್ತದೆ. ಬದಲು ಭಾವನೆಯೇ ಶುದ್ಧವಾಗಿದ್ದರೆ, ಬಾಹ್ಯರೂಪದಲ್ಲಿ ತ್ಯಾಗ ಮಾಡಿದರೂ ಭೋಗ ಮೈಗೆ ಅಂಟಿಕೊಳ್ಳುತ್ತದೆ. ಧರ್ಮದ ರಹಸ್ಯವು ಹೀಗೆ ವಿರುದ್ಧವಾಗಿದೆ.

ಅಸೆಯನ್ನು ಬೇರು ಸಹಿತ ಕಿತ್ತು ಒಗೆದಾಗಲೇ ಮನುಷ್ಯ ಗೋಸಾಮಿಯಾಗುತ್ತಾನೆ. ಇಲ್ಲದಿದ್ದರೆ ಸುಖದಿಂದ ಸಂಸಾರದಲ್ಲಿರಬೇಕು. ಸುಮ್ಮನೆ ಫಜೀತಿಗೊಳಗಾಗಬಾರದು. ಆಸೆಯನ್ನು ನಾಶ ಪಡಿಸಿ ಜಯಶಾಲಿಯಾಗಬೇಕು. ಆ ಬಳಿಕವೇ ಇದೆಲ್ಲದರಿಂದ ಹೊರಬೀಳಬೇಕು. ಯೋಗದ ಅಗತ್ಯವಿದ್ದರೆ ಮೊದಲು ಆಸೆಯನ್ನು ತುಳಿದು ಹಾಕಿ. ವಾಸನೆಯ ವಿಷಯಾಸಕ್ತಿಗೊಳಗಾಗದೆ, ವ್ಯವಹಾರಕ್ಕೆ ಅಗತ್ಯವಿದ್ದಷ್ಟು ವಿಧಿ ಮಾಡುತ್ತ ಇರುವದೇ ನಿಜವಾದ ತ್ಯಾಗ.

ತುಕಾರಾಮನು ಸನ್ಯಾಸ, ಬ್ರಹ್ಮಚರ್ಯೆ, ತ್ಯಾಗ ಮುಂತಾದವುಗಳ ಬಗೆಗೆ ಬೋಧಿಸಿದ ಮಾರ್ಗವು ಅವನ ಜೀವನದ ಸಮಗ್ರ ತತ್ವಜ್ಞಾನದೊಂದಿಗೆ ಸಂಪೂರ್ಣ ಸುಸಂಗತವಾಗಿದೆ. ಸನ್ಯಾಸ ಸ್ವೀಕರಿಸಿದ ನಾಟಕ ಮಾಡುವದರಲ್ಲಿ ಯಾವ ಅರ್ಥವೂ ಇಲ್ಲ. ವಿಕಾರವನ್ನು ಗೆದ್ದರೆ, ಅದೇ ನಿಜವಾದ ಸನ್ಯಾಸ ಎನ್ನುವದು ತುಕಾರಾಮನ ನಿಲುವು. ಅಷ್ಟೇ ಅಲ್ಲ. ವಿಕಾರಗೆದ್ದವನು ಸಂಸಾರದೊಳಗಿದ್ದರೂ, ಭೋಗವನ್ನು ಪಡೆಯುತ್ತಿದ್ದರೂ ಅದು ಸನ್ಯಾಸ ಸ್ವೀಕರಿಸಿದಂತೆ ಎಂದವನು ಬೋಧಿಸುತ್ತಾನೆ.

ಯೋಗ ನಮ್ಮಪ್ಪನಿಗಾದರೂ ಗೊತ್ತಿತ್ತೆ?

ಯೋಗದ ಕುರಿತು ತುಕಾರಾಮನ ನಿಲುವು ಹೀಗಿದೆ: “ಯೋಗಮತ ತಪ ಹೇಗೆ ಮಾಡಬೇಕೆನ್ನುವದು ನಮ್ಮಪ್ಪನಿಗಾದರೂ ಗೊತ್ತಿತ್ತೆ ? ನಾನು ನಮ್ಮ ಸಂತರ ಸಂಗದಲ್ಲಿ ಹಾಡುತ್ತೇವೆ. ಜಾಗರಣೆಯನ್ನು ಮಾಡುತ್ತೇವೆ. ನಾವು ಇಂದ್ರಿಯಗಳನ್ನು ಭಕ್ತಿಯ ರಸದಲ್ಲಿ ಮುಳುಗಿಸುತ್ತೇವೆ. ನನಗೆ ಯೋಗದ ಯುಕ್ತಿ ಗೊತ್ತಿಲ್ಲ.” “ಕೇಶವಾ, ನೀನು ಯೋಗ, ತಪ, ದೈಹಿಕ ದಂಡನೆ ಮತ್ತು ಜ್ಞಾನದ ಬಲದಿಂದ ಲಭಿಸುವದಿಲ್ಲ, ಯಾರು ಯೋಗಿಗಳ ಮನದಲ್ಲಿ, ಚಿಂತನೆಯಲ್ಲಿ ಲಭಿಸುವದಿಲ್ಲವೋ, ಅವನು ವಾನರಗಳ ಕಿವಿಯಲ್ಲಿ ಕಥೆ ಹೇಳುತ್ತಾನೆ. ಗೋಪಾಲರಿಂದ ರೊಟ್ಟಿ ಬೇಡಿ ತಿನ್ನುತ್ತಾನೆ. ದೇವರು ಯೋಗಿಗಳಿಂದ ದೂರ ಸರಿಯುತ್ತಾನೆ. ಹೊಸ-ಹೊಸ ಯೋಗಿಗಳು ಏನೋ ಪಠಣ ಮಾಡಿ, ಅಹಂಕಾರದ ಜತನ ಮಾಡುತ್ತಾರೆ. ಅರೆ ಜ್ಞಾನವಿದ್ದರೂ ಅವರಲ್ಲಿ ಸೊಕ್ಕು ತುಂಬಿರುತ್ತದೆ. ಅಂಥವರ ಮುಖಭಂಗ ಮಾಡಿ. ಯಾರಲ್ಲಿಯ ವಿಕಾರ ಶಮನಗೊಂಡಿದರುವದಿಲ್ಲವೋ, ಅಂಥ ಯೋಗಿಗಳು ಸಿಟ್ಟಿನಿಂದ ಗುರುಗುಡುತ್ತಾರೆ. ಅಂತರಂಗದಲ್ಲಿ ಲವಲೇಶ ಪ್ರೇಮವಿದ್ದರೂ ದೇಹದಲ್ಲಿಯ ಧಾತುವನ್ನು ಪೋಷಿಸಿ ಇತರರಿಗೆ ಉಪದೇಶ ಮಾಡುವ ಜ್ಞಾನಿ, ಪಂಡಿತ, ಯೋಗಿಗಳನ್ನು ನಾನು ಹರಿದಾಸನೆಂದು ಕರೆಯುವದಿಲ್ಲ. ಅವರನ್ನು ಬಾಹ್ಯವಾಗಿ ನಮಿಸಿದರೂ, ನನಗೆ ನಿಜವಾಗಿ ಇಷ್ಟವಾಗುವ ಜನರೆಂದರೆ ಚಿತ್ತಶುದ್ಧಿಯಿದ್ದವರು. ಅವರು ಧ್ಯಾನದಲ್ಲಿ ಕೂತು, ತಾವೇ ದೇವರೆಂದು ಹೇಳುವವರ ಭಾವವೂ ಸತ್ಯವಲ್ಲ ಎಂಬುದನ್ನು ತಿಳಿದುಕೊಳ್ಳಿ”.

ಯೋಗ ಎನ್ನುವದು ನಮ್ಮಪ್ಪನಿಗಾದರೂ ಗೊತ್ತಿತ್ತೆ ಎಂಬ ಖಚಿತ ಪ್ರಶ್ನೆಯಿಂದ ಯೋಗಮಾರ್ಗದ ಕುರಿತು ತುಕಾರಾಮನ ಅನಾಸ್ಥೆಯನ್ನು ಇಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಯೋಗಕ್ಕಿಂತ ವಾನರ ಮತ್ತು ಗೋಪಾಲಕರು ದೇವರಿಗೆ ಪ್ರಿಯವಾಗಿರುತ್ತಾನೆ ಎಂಬ ತುಕಾರಾಮನ ಬೋಧನೆಯಲ್ಲಿ ಕ್ಲಿಷ್ಟವಾದ ಯೋಗಸಾಧನೆಗಿಂತ ನಿಷ್ಕಪಟವಾದ ಭಾವನೆಯೇ ಮಹತ್ವದೆಂಬ ಭಾವ ಅಡಗಿದೆ.

ಸಮಾಧಿ ಸುಖವನ್ನು ನಿವಾಳಿಸಿ ಒಗೆಯಿರಿ

ದೇವರ ಪಾಪ್ತಿಗೆ ಸಮಾದಿಯ ಅಗತ್ಯವಿಲ್ಲ, ಎಂಬುದನ್ನು ಸ್ಪಷ್ಟಪಡಿಸುವಾಗ ತುಕಾರಾಮ ಹೇಳುವದು ಹೀಗೆ: “ಕೀರ್ತನೆ ಎಂದರೆ ಪ್ರತ್ಯಕ್ಷ ಬ್ರಹ್ಮ ರಸ ಅಥವಾ ಬ್ರಹ್ಮಾನಂದವಾಗಿದೆ. ಅದರ ಎದುರಿಗೆ ಸಮಾಧಿ ಸುಖ ನಿವಾಳಿಸಿ ಚೆಲ್ಲಿ, ಸಮಾಧಿ, ಉಳಿದ ಸಾಧನೆ, ಮುದ್ರೆಗೆ ಕೀರ್ತನೆಯಲ್ಲಿ ಸ್ಥಾನ ಸಿಕ್ಕಿರುತ್ತದೆ. ಅಂದರೆ ಕೀರ್ತನೆಯ ಆನಂದ ಪಡೆದಿರಿ ಎಂದರೆ ಸಮಾಧಿ ಪ್ರಾಪ್ತವಾದಂತೆ. ಹರಿಕಥೆಯೇ ನಿಜವಾದ ಸುಖ ಪ್ರಾಪ್ತಿಯ ಸಮಾಧಿಯಾಗಿದೆ. ಹರಿಕಥೆಯು ಸುಖದ ಸಮಾಧಿ, ಮಾವುಲಿ, ವಿಶ್ರಾಂತಿ, ದಣಿದವರ ನೆರಳು”

ಡಾಂಭಿಕ ಕಾವಿಯ ಸ್ವರೂಪ

ಢೋಂಗಿ ಜನ ಕಾವಿ-ಕಫನಿ ಮುಂತಾದ ಬಾಹ್ಯ ಉಪಾಧಿಯನ್ನು ಧರಿಸಿ ತಾನು ಸಾಧು ಎಂಬ ಭ್ರಮೆಯನ್ನು ನಿರ್ಮಾಣ ಮಾಡುತ್ತಾರೆ. ಅಸಂಖ್ಯ ಅಭಂಗಳಲ್ಲಿ ತುಕಾರಾಮನು ಇಂಥವರ ವರ್ಣನೆ ಮಾಡಿದ್ದಾನೆ. ಈ ಬಾಹ್ಯ ಉಪಾಧಿಯಲ್ಲಿ ಹಲವು ಬಗೆಗಳಿದ್ದು, ಬೇರೆ-ಬೇರೆ ಜನರು ವಿವಿಧ ಬಗೆಯ ಮಿಶ್ರಣ ಬಳಸುವದು ಕಂಡುಬರುತ್ತದೆ. ಈ ಕುರಿತು ತುಕಾರಾಮನ ವಿಚಾರವನ್ನು ಸಂಕ್ಷಿಪ್ತವಾಗಿ ನೋಡೋಣ.

“ಈ ಜನ ತಿಲಕ ಹಚ್ಚುತ್ತಾರೆ. ಕೊರಳ ಮಾಲೆ ಧರಿಸುತ್ತಾರೆ.ಮೈ ಮೇಲೆ ಮುದ್ರೆಯ ಧಾರಣ ಮಾಡುತ್ತಾರೆ. ಕೈಯಲ್ಲಿ ಕೋಲು, ಕೊರಳಲ್ಲಿ ಕಂಠಿ, ಕಿವಿಯಲ್ಲಿ ತುಳಸಿ, ಮೈಗೆ ಭಸ್ಮ, ಕೈಯಲ್ಲಿ ಕುಂಬಳವಾದ್ಯ, ತಾಳ, ಮೃದಂಗ ಇತ್ಯಾದಿ ಹಿಡಿದುಕೊಂಡಿರುತ್ತಾರೆ. ಎತ್ತರವಾದ ಟೋಪಿಗೆ ಧರಿಸುತ್ತಾರೆ. ವಿಶಿಷ್ಟ ಬಗೆಯಲ್ಲಿ ಕಚ್ಚೆ ಹಾಕುತ್ತಾರೆ. ಕಾವಿ ಬಟ್ಟೆ ಪರಿಧಾನ ಮಾಡುತ್ತಾರೆ. ಕೀರ್ತನೆಯ ಕಾಲಕ್ಕೆ ತಲ್ಲೀನಗೊಳ್ಳುವಂತೆ ಮಾಡಲು ಆಳುವ ಸೋಗು ಹಾಕುತ್ತಾರೆ, ಬೀಳುತ್ತಾರೆ ಅಥವಾ ಉರುಳಾಡುತ್ತಾರೆ. ಅವರ ಮಾಲೆ, ಮುದ್ರೆಯ ಸೋಗನ್ನು ಒಯ್ದು ಸುಡರಿ.

ಅಂತರಂಗ ಶುದ್ಧಿಯನ್ನು ಕಡೆಗಣಿಸಿ, ಬಾಹ್ಯವೇಷ ಭೂಷಣದ ಮೇಲೆ ಲಕ್ಷ್ಯವಿಡುವ ಈ ಜನ ನಿಜವಾದ ಸನ್ಯಾಸಿಗಳಲ್ಲ. ಅವರು ಢೋಂಗಿ, ಡಾಂಭಿಕರು, ಮಿಥ್ಯವಾದಿಗಳು ಎಂದು ತುಕಾರಾಮನ ಹೇಳಿಕೆ. ಏಕೆಂದರೆ ಅವರು ಇದನ್ನೆಲ್ಲ ಕೇವಲ ಹೊಟ್ಟೆಗಾಗಿ ಮಾಡುತ್ತಾರೆ. ಅವರ ಲಕ್ಷ ಮೃಷ್ಟಾನ್ನ ಮತ್ತು ಪಕ್ವಾನ್ನದ ಮೇಲಿರುತ್ತದೆ. ಅವರ ಮನದಲ್ಲಿರುವ ವಿಷಯ ವಾಸನೆಯು ಮುಗಿದಿರುವುದಿಲ್ಲ. ಜಗತ್ತು ತನಗೆ ಮಾನ ಸನ್ಮಾನ ನೀಡಬೇಕೆಂಬ ಆಸೆಯಿರುತ್ತದೆ. ಈ ಉಪಾಧಿಯ ಸಹಾಯದಿಂದ ಅವರು ಜನರನ್ನು ವಂಚಿಸುತ್ತಾರೆ. ಖರೆಯೆಂದರ ಸನ್ಯಾಸಿಯಾಗಲು ಈ ಉಪಾಧಿಯ ಅಗತ್ಯವಿಲ್ಲ. ಶುದ್ಧ ಭಾವನೆಯ ಅಗತ್ಯವಿದೆ. ಕಾವಿ ಬಟ್ಟೆ ತೊಡುವುದರಿಂದ ಯಾರೂ ಸನ್ಯಾಸಿಗಳಾಗುವುದಿಲ್ಲ. ಹಾಗಿದ್ದರೆ ಕಾವಿಬಣ್ಣದ ನಾಯಿಯೂ ಸನ್ಯಾಸಿಯಾಗುತ್ತಿತ್ತು. ವಿಷಯಾಸಕ್ತಿ ಬಿಡ ಹೊರತು, ಚಿತ್ತದ ಅನುತಾಪ ಕರಗದ ಹೊರತು, ಬರೇ ಕಾವಿ ಉಡುವದೆಂದರೆ ಢೋಂಗಿತನ ಎಂದವನ ಹೇಳಿಕೆ. ಬಡಪಾಯಿ ಬಟ್ಟೆಯಿಂದ ಏನು ಲಾಭ?- ಎಂದವನ ಪ್ರಶ್ನೆ. ತಾನು ಈ ಬಗೆಯ ಬಾಹ್ಯ ಸನ್ಯಾಸಿಯಲ್ಲ-ಎಂದು ಖಚಿತವಾಗಿ ನುಡಿದಿದ್ದಾನೆ. ಅವನ ಅಸಲೀ ಸಾಧುತನದಿಂದಾಗಿ ಢೋಂಗಿ ಸನ್ಯಾಸಿಗಳು ಹೆದರುತ್ತಿದ್ದರು ಎಂಬುದರಲ್ಲಿ ಎರಡು ಮಾತಿಲ್ಲ. ಎಲ್ಲಿವರೆಗೆ ತುಕಾರಾಮನ ದರುಶನವಾಗುವದಿಲ್ಲವೋ ಅಲ್ಲಿವರೆಗೆ ಮಾಲೆ ಮುದ್ರೆಯನ್ನು ಧರಿಸಿ ಢೋಂಗಿ ಜನ ಮೆರೆಯುತ್ತಾರೆ-ಎಂಬ ಅವನ ಆತ್ಮವಿಶ್ವಾಸದ ಮಾತು ಈ ದೃಷ್ಟಿಯಿಂದ ಅರ್ಥಪೂರ್ಣವಾಗಿದೆ. ತುಕಾರಾಮನ ಎದುರಿಗೆ ನಿಲ್ಲುವ ನೈತಿಕ ಧೈರ್ಯವು ಈ ಬಗೆಯ ಜನರಲಿಲ್ಲ ಎಂಬುದು ಸ್ಪಷ್ಟ.

ಈ ಸಂದರ್ಭದ ಕುರಿತಾದ ಮತ್ತೆ ಕೆಲವು ಆಲೋಚನೆಗಳು ಗಮನಾರ್ಹ : ಕುಟಿಲ ಕಾರಸ್ತಾನಿಗಳೆಂದೂ ಕೊರಳಲ್ಲಿ ಮಾಲೆ ಧರಿಸಬಾರದು. ಧರ್ಮ, ದಯೆ, ಕ್ಷಮೆ, ಶಾಂತಿಯಿಲ್ಲದವರು ಮೈಗೆ ವಿಭೂತಿ ಬಳಿದುಕೊಳ್ಳಬಾರದು. ಸ್ವಂತ ಮನದ ಮೇಲೆ ನಿಯಂತ್ರಣವಿಲ್ಲದವರು ಪ್ರಪಂಚ ತೊರೆದು ಸನ್ಯಾಸಿಗಳಾಗಬಾರದು. ಹರಿಭಕ್ತಿಯಿಲ್ಲದವರು ಕಾವಿಬಟ್ಟೆ ತೊಡಬಾರದು. ಅಂತರಂಗವೇ ಶುದ್ಧಿಯಿಲ್ಲದವರಿಗೆ ಭಸ್ಮ ಅಥವಾ ಬೂದಿಯಿಂದೇನು ಪ್ರಯೋಜನ? ಖೊಟ್ಟಿ ಬುದ್ಧಿಯವರು, ಕೆಡಕು ಅಂತರಂಗದವರು ಬೂದಿ ಬಳಿದುಕೊಂಡು ಏನು ಉಪಯೋಗ? ಬೂದಿಗೇ ಮಹತ್ವ ನೀಡುವದಾಗಿದ್ದರೆ, ಕತ್ತೆಯೂ ಬೂದಿಯಲ್ಲಿ ಹೊರಳಾಡುತ್ತದೆ! ಯಾರ ಕೀರ್ತನೆಯಲ್ಲಿ ಪಾಂಡುರಂಗ ಗೋಚರಿಸುವುದಿಲ್ಲವೋ ಅಂಥಲ್ಲಿ ತಾಳ, ಮೃದಂಗದಿಂದೇನು ಲಾಭ?

ಬಕಪಕ್ಷಿಯು ಧ್ಯಾನದ ಸೋಗು ಹಾಕಿ ಮೀನು ಹಿಡಿಯುತ್ತದೆ. ಹಾಗೆಯೇ ಸನ್ಯಾಸಿಯ ಸೋಗು ಹಾಕುವ ಜನರು ಸ್ವಾರ್ಥಿಗಳಾಗಿರುತ್ತಾರೆ. ಜನ ಡಾಂಭಿಕತನ ಮೆರೆಯುತ್ತಾರೆ. ವಾಸನೆಯ ಕರ್ಮ ಮಾಡಿ, ತಮ್ಮನ್ನು ಸನ್ಯಾಸಿ ಎಂದುಕೊಳ್ಳುತ್ತಾರೆ. ದೇಹಕ್ಕೆ ಬೂದಿ ಬಳಿಯುತ್ತಾರೆ. ಕಣ್ಮುಚ್ಚಿ ಧ್ಯಾನ ಮಾಡಿದ ನಟನೆ ಮಾಡುತ್ತಾರೆ. ಪ್ರತ್ಯಕ್ಷದಲ್ಲಿ ಪಾಪ ಮಾಡುತ್ತಾರೆ. ಹೊರಗೆ ವೈರಾಗ್ಯದ ಸೋಗು ಹಾಕುತ್ತಾರೆ. ವಿಷಯಾಸಕ್ತಿಯಲ್ಲಿ ಮುಳುಗುತ್ತಾರೆ. ಇಂಥವರ ಸಹವಾಸಕ್ಕೆ ಬೆಂಕಿ ಬೀಳಲಿ. ಬೆಲ್ಲ ಲೇಪಿಸಿದ ಕಲ್ಲು ಸಿಕ್ಕಿದಾಗ ಸಿಹಿಯೆನಿಸುತ್ತದೆ. ಹಾಗೆಯೇ ಯಾರಿಗೆ ವಿಷಯಾಸ್ಕತಿಯ ಲಾಲಸೆಯಿದೆಯೋ ಅಂಥವರು ಬಾಹ್ಯ ವೇಷ ಧರಿಸಿ ಮರಳು ಮಾಡುತ್ತಾರೆ. ಇಂಥ ಡಾಂಭಿಕರಿಗೆ ಹರಿಸೇವೆಯ ಫಲ ಸಿಗುವುದಿಲ್ಲ. ಏಕೆಂದರೆ, ಅವರಿಗೆ ಸದ್ಭಾವನೆಯ ಅರಿವೇ ಇರುವುದಿಲ್ಲ. ಈ ರೀತಿಯ ವರ್ತನೆಯಿಂದ ಸಂತರಾಗುವುದು ಸಾಧ್ಯವೇ? ಅವನ ಚಿತ್ತ ಕಾಮ-ಕ್ರೋಧದಿಂದ ಮೈಲಿಗೆಯಾಗಿರುತ್ತದೆ. ಜನರನ್ನು ಮರಳುಗೊಳಿಸಲು ಸದಾ ಸಂತನಾಗಿರುವ ನಾಟಕ ಮಾಡಿ ಕುಟುಂಬದವರನ್ನು ದಾಸ್ಯರನ್ನಾಗಿಸುತ್ತಾನೆ. ಗಿಳಿಯಂತೆ ಮಾತಾನಾಡುತ್ತಾನೆ. ಸೂತ್ರದ ಗೊಂಬೆಯಂತೆ ವರ್ತಿಸುತ್ತಾನೆ. ಹಾಗೆಯೇ ಢೋಂಗಿ ಮಹಂತರೂ ಸ್ವಾರ್ಥದ ತಾಳಕ್ಕೆ ಹೆಜ್ಜೆ ಹಾಕುತ್ತಾರೆ. ಇಂಥವರ ಮಹಂತಿ ನಾಶವಾಗಲಿ, ಆ ಕೋಡಗನ ಮನದಲ್ಲಿ ಲಜ್ಜೆಯಿರುವುದಿಲ್ಲ.

ಹೆಸರು ಸತೀಸಾವಿತ್ರಿ, ವ್ಯವಸಾಯ ವೇಶ್ಯೆಯದು!

ಸಾವಿತ್ರಿ ಹೆಸರು ಹೊಂದಿದ ಮಹೆಳೆಯು ವೇಶ್ಯಾ ವ್ಯವಸಾಯ ಮಾಡುತ್ತಿದ್ದರೆ, ಅವಳ ಆ ವರ್ತನೆಯು ಸಾವಿತ್ರಿಗೆ ಅಪಮಾನ ಮಾಡಿದಂತೆ. ಅವಳ ಹೆಸರು ತೆಗೆದುಕೊಂಡು ಏನು ಲಾಭ? ಅವಳ ವರ್ತನೆಯೇ ವ್ಯರ್ಥವಾದುದು, ಕುಬೇರ ಹೆಸರು ಉಳ್ಳವನು ಹಮಾಲಿಯ ಕೆಲಸ ಮಾಡುತ್ತಾನೆ. ಮೂರ್ಖರೆ, ಡಾಂಭಿಕತದಿಂದ ಏಕೆ ಮೆರೆಯುತ್ತಿದ್ದೀರಿ? ಕಾಗೆ ಹಂಸದಂತೆ ನಡೆದರೆ, ಅದು ಹಂಸವಾಗಲಾರದು. ಹಾಗೆಯೇ ಢೋಂಗಿ ಜನರೂ ಬಾಹ್ಯ ವೇಷದಿಂದ ನಿಜವಾದ ಸಂತರಾಗುವುದಿಲ್ಲ. ನೀವು ನಿಮ್ಮ ಮಠವನ್ನು ತೊರೆದು ಹೊರಗೆ ಬನ್ನಿ. ನಿಜವಾಗಿ ಶ್ರೇಷ್ಠನಾದ ದೇವರನ್ನು ಭೇಟಿಯಾಗಿ. ನಿಮ್ಮ ದೃಷ್ಟಿಯಲ್ಲಿ ಸಂತರ ಬಾಹ್ಯ ವೇಷವೆಂದರೆ, ಮೊಂಡು ಮೂಗಿನವಳು ಮೂಗುತಿಯನ್ನು ಧರಿಸಿದಂತೆ. ಇದರಿಂದ ಜನರೆದುರು ಫಜೀತಿಯಾಗುತ್ತದೆ. ನೀವು ಸೊಕ್ಕಿನಿಂದ ಮೆರದಾಡಬೇಡಿ-ಎಂಬ ಆಜ್ಞೆ ನಿಮಗೆ ನೀಡುತ್ತಿದ್ದೇವೆ. ಕಲಿಯುಗದಲ್ಲಿ ಬಾಯಲ್ಲಿ ತಂಬಾಕಿನ ನಳಿಕೆ ಹಿಡಿದವರೂ ಭಂಗಿ ಮತ್ತು ಮದ್ಯಸೇವನೆ ಮಾಡುವವರೂ ಸಂತರಾಗಿದ್ದಾರೆ. ಎಲ್ಲಿ ಬರೇ ಸೋಗು ತುಂಬಿದೆಯೋ, ಅಂಥಲ್ಲಿ ಪಾಂಡುರಂಗ ಗೋಚರಿಸುತ್ತಾನೆ? ಪೆಂಡಿ ತುಂಬಿದ ಹುಲಿಯ ವೇಷದಾರಿ ಹುಲಿಯಂತೆ ಗೋಚರಿಸಿದರೂ, ಹುಲಿಯ ನಿಜವಾದ ರೂಪ ಅವನಲ್ಲಿರುವುದಿಲ್ಲ. ಅದು ಕೆವಲ ಹೊರಗಿನ ಬಣ್ಣ. ಹುಲಿಯ ಸತ್ವ ಪರೀಕ್ಷೆಯಲ್ಲಿ ಗೆಲ್ಲುವುದೇ ನಿಜವಾದ ಹುಲಿಯ ಗುಣ. ಮಂಗಕ್ಕೆ ಕಲಿಸಿದಂತೆ ಕುಣಿಯುತ್ತದೆ. ಅದಕ್ಕಿಂತ ಹೆಚ್ಚಿನ ಯುಕ್ತಿ ಅದಕ್ಕೆ ಹೊಳೆಯುವುದಿಲ್ಲ. ಹಾಗೆಯೇ ಯಾರು ಖೊಟ್ಟಿ ನಟನೆ ಮಾಡುತ್ತಾನೋ, ಅವನ ಖೊಟ್ಟಿತನ ಬೇಗ ಬಹಿರಂಗಗೊಳ್ಳುತ್ತದೆ. ಅಂತರಂಗದಲ್ಲಿ ವಿಲತೆಯಿದ್ದರೆ, ಬಾಹ್ಯ ಸೋಗಿಗೆ ಬೆಂಕಿ ಹಚ್ಚಿ, ಸುಳ್ಳಿಗೆ ಸತ್ಯ ಎಂದು ಕರೆದರೆ ಮುಖ್ಯ ವಿಷಯ ಮರೆಯಾಗುತ್ತದೆ. ಸೋಗು, ನಾಟಕ ಮಾಡುವದರಿಂದ ದೇವರು ಲಭಿಸಲಾರ. ಶುದ್ಧ ಭಾವನೆಯಿಲ್ಲದೆ ಮಾಡುವ ಪ್ರತಿಕಾರ್ಯ ವ್ಯರ್ಥ ದಣಿವು ತರುವಂತಹದು. ಸ್ವಂತದ ಹಿತವಾಗ ಬೇಕೆಂದಿದ್ದರೆ ಡಂಭತನ ದೂರ ಸರಿಸಿ. ಚಿತ್ತಶುದ್ಧಿಯೇ ನಿಜವಾದ ದೇವರ ಸೇವೆ. ಯಾರ ಮನದಲ್ಲಿ ಡಾಂಭಿಕತನವಿದೆಯೋ, ಅವನ ಫಜೀತಿ ಮಾಡುತ್ತೇವೆ.

ಕವಿತೆ ರಚಿಸುವುದರಿಂದ ಯಾರೂ ಸಂತರಾಗುವುದಿಲ್ಲ. ಸಂತರ ಆಪ್ತರೂ ಸಂತರಾಗುವುದಿಲ್ಲ. ವಿಶಿಷ್ಟ ವೇಷ ಅಥವಾ ಅಡ್ಡ ಹೆಸರು ಬಳಸುವದರಿಂದಲೂ ಸಂತರಾಗುವುದಿಲ್ಲ. ಮೈಯಲ್ಲಿ ಅಂಥ ಗುಣವಿದ್ದರೆ ಮಾತ್ರ ಸಂತರಾಗುವುದು ಸಾಧ್ಯ. ಕುಂಬಳಕಾಯಿ ಹಿಡಿಯುವದರಿಂದಲೂ ಸಂತರಾಗುವುದಿಲ್ಲ, ಚಿಂದಿಬಟ್ಟೆ ಧರಿಸಿದರೂ ಸಂತರಾಗುವುದಿಲ್ಲ. ಕೀರ್ತನೆ ಮಾಡುವದರಿಂದ, ಪುರಾಣ ಹೇಳುವುದರಿಂದ, ವೇದದ ಪಠಣ ಮಾಡುವದರಿಂದ, ವಿಶಿಷ್ಟ ಕರ್ಮವನ್ನು ಆಚರಿಸುವದರಿಂದ ಸಂತರಾಗುವುದಿಲ್ಲ. ತಪ, ತೀರ್ಥಯಾತ್ರೆ, ಕಾಡಿನಲ್ಲಿ ವಾಸ ಮಾಡುವದರಿಂದಲೂ ಸಂತರಾಗುವುದಿಲ್ಲ. ಮಾಲೆ, ಮುದ್ರೆ, ಭಸ್ಮ ಬಳಿದುಕೊಂಡರೆ ಸಂತರಾಗುವದಿಲ್ಲ. ದೇಹದ ಆಸಕ್ತಿಯಿರುವವರೆಲ್ಲರೂ ಸಂಸಾರಿಗಳಾಗುತ್ತಾರೆ.

ಹೀಗಾಗಿ ಸನ್ಯಾಸಿಗಳೆಂದು ಅಲೆದಾಡುವ ಬಹಳಷ್ಟು ಜನರು ಡಾಂಭಿಕರಾಗಿರುತ್ತಾರೆಂಬುದು ತುಕಾರಾಮನ ಅನುಭವ. ನಾನಾವೇಷ ಧರಿಸಿ ಹೊಟ್ಟೆಗಾಗಿ ಅಲೆದಾಡುವ ಜನರಲ್ಲಿ ಪರಮಾರ್ಥಕ್ಕಾಗಿ ಸಂಸಾರದ ತ್ಯಾಗ ಮಾಡಿದ ಒಬ್ಬರನ್ನಾದರೂ ತೋರಿಸಿ ಎಂದು ತುಕಾರಾಮನು ಅಹ್ವಾನ ನೀಡುತ್ತಾನೆ. ವೇಷದ ಅಪಮಾನ ಮಾಡಿದವರೆಲ್ಲ ನಾಶ ಮಾಡಿದರು ಎಂಬುದು ಅವರ ಇದರ ಬಗೆಗಿನ ನಿಲುವು ಆಗಿದೆ.