ನಮ್ಮ ಧಾರ್ಮಿಕ ಕ್ಷೇತ್ರಗಳಲ್ಲಿ ವಿವಿಧ ಬಗೆಯ ಕರ್ಮಕಾಂಡಗಳು ಅಕ್ಷರಶಃ ಕೋಲಾಹಲ ಹಾಕಿದ್ದು ಕಂಡುಬರುತ್ತದೆ. ವೈದಿಕ ಧರ್ಮಶಾಸ್ತ್ರಗಳು ಸಾವಿರಾರು ವಿಧಿ ನಿಷೇದಗಳ ಕರ್ಮವನ್ನು ವಿವೇಚನೆ ಮಾಡಿವೆ. ಈ ಕರ್ಮಗಳ ಸಮೂಹ, ಅವುಗಳ ನಿಯಮಗಳನ್ನು ವಿವೇಚನೆ ಮಾಡುವ ಧರ್ಮಶಾಸ್ತ್ರಗಳ ವಿಭಾಗಕ್ಕೆ ಕರ್ಮಕಾಂಡ ಎನ್ನಲಾಗುತ್ತದೆ. ಈ ಕರ್ಮವನ್ನು ವಿಶಿಷ್ಟ ವ್ಯಕ್ತಿಯು, ವಿಶಿಷ್ಟ ಅವಸ್ಥೆಯಲ್ಲಿ, ವಿಶಿಷ್ಟ ಸ್ಥಳಕಾಲದಲ್ಲಿ, ವಿಶಿಷ್ಟ ಮಂತ್ರಗಳ ಉಚ್ಛಾರ ಸಹಿತ ಅಥವಾ ಮಂತ್ರ ರಹಿತವಾಗಿ ಕೈಕೊಳ್ಳಬೇಕು. ಈ ಬಗೆಯ ಕ್ಲಿಷ್ಟ ಗೋಜಲು-ಗೋಜಲಾದ ನಿಯಮಗಳನ್ನು ಧರ್ಮಶಾಸ್ತ್ರಗಳು ರೂಪಿಸಿವೆ. ಈ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಿದರೇ, ಅದರ ಫಲ ಸಿಗು‌ತ್ತೆ. ಇಲ್ಲದಿದ್ದರೆ ಫಲ ಬದಿಗೆ ಉಳಿದು, ಏನಾದರೂ ಅಪಾಯವಾಗುವ ಸಾಧ್ಯತೆಯಿದೆ ಎಂದೊಪ್ಪಲಾಗಿದೆ. ಸಾಮಾನ್ಯವಾಗಿ ಈ ಕರ್ಮಗಳು ಸಾಮಾನ್ಯರ ಹಿಡಿತಕ್ಕೆ ಸಿಗುವಂತಹದಲ್ಲ. ಈ ಕರ್ಮದ ಮೂಲಕ ತನ್ನ ಧಾರ್ಮಿಕ ಕಲ್ಯಾಣ ಮಾಡಿಕೊಳ್ಳುವ ಮಾರ್ಗ ಇವರಿಗೆ ಖುಲ್ಲಾ ಇರುವುದಿಲ್ಲ. ಇದರಿಂದಾಗಿ ಈ ಜನರು ಅಪ್ರತಿಷ್ಠಿತರಾಗುತ್ತಾರೆ. ಅವರನ್ನು ಹೀನ-ನೀಚರೆಂದು ಭಾವಿಸಲಾಗುತ್ತದೆ. ಬದಲಿಗೆ ಯಾರಿಗೆ ಈ ಕರ್ಮದ ಅಧಿಕಾರ ಸಿಗುತ್ತದೋ, ಅವರು ಸಾಮಾಜಿಕ ದೃಷ್ಟಿಯಿಂದ ಪ್ರತಿಷ್ಠಿತರಾಗುತ್ತಾರೆ. ಎಲ್ಲ ರೀತಿಯ ಐಹಿಕ ಸುಖೋಪಭೋಗವೂ ಅವರಿಗೆ ಪ್ರಾಪ್ತವಾಗುತ್ತದೆ. ಅಲ್ಲದೆ ಈ ಜನ ಆ ಕರ್ಮದ ಬಾಹ್ಯ, ಔಪಚಾರಿಕ ಸ್ವರೂಪಕ್ಕೇ ಮಹತ್ವ ನೀಡುತ್ತಾರೆ. ಮನಸ್ಸಿನ, ಭಾವನೆಯ ಶುದ್ಧಿಗೆ ಮಹತ್ವ ನೀಡುವುದಿಲ್ಲ. ನಮ್ಮ ಧಾರ್ಮಿಕ ಜೀವನವು ಈ ಬಗೆಯ ಡಾಂಭಿಕತನದಿಂದ ವ್ಯಾಪಿಸಿಕೊಂಡಿದೆ. ಕರ್ಮದ ಬಾಹ್ಯರೂಪದ ಜ್ಞಾನ ಸಿಕ್ಕಿದ್ದರಿಂದ ತಾವು ಶ್ರೇಷ್ಠರಾಗಿದ್ದೇವೆ ಎಂಬ ಭಾವನೆಯಿಂದ ಈ ಜನ ಅಹಂಕಾರಿಗಳಾಗಿದ್ದರು. ಜನ ಸಾಮಾನ್ಯರನ್ನು, ಸದಾ ಭೋಳೆ ಜನರನ್ನು, ಅಮಾಯಕ ನಿರಾಗಸ ಜನರನ್ನು ಅವರು ಕೀಳಾಗಿ ಭಾವಿಸುತ್ತಿದ್ದರು, ಹಂಗಿಸುತ್ತಿದ್ದರು, ಅಪಮಾನ ಮಾಡುತ್ತಿದ್ದರು. ವಿಶೇಷವೆಂದರೆ, ತಮ್ಮ ಈ ಬಗೆಯ ವರ್ತನೆಯೇ ನಿಜವಾದ ಧರ್ಮ ಎಂಬ ಅಹಂಕಾರ ಅವರ ಮನದಲ್ಲಿ ಮನೆಮಾಡಿಕೊಂಡಿತ್ತು. ಬದಲಿಗೆ ಧರ್ಮದ ನಿಜವಾದ ಅಧಿಷ್ಠಾನವು ಅಂತರಂಗ ಶುದ್ಧಿಯಲ್ಲಿದೆ ಎಂಬ ದೃಢನಂಬುಗೆ ತುಕಾರಾಮನದಾಗಿತ್ತು. ಹೀಗಾಗಿ ಕರ್ಮಕಾಂಡದ ಕೃತ್ತಿಮ ಜಂಜಾಟದಲ್ಲಿ ಅವನ ಮನ ಸಿಕ್ಕು ಒದ್ದಾಡುತ್ತಿತ್ತು. ಆದ್ದರಿಂದಲೇ ಧಾರ್ಮಿಕ ಕ್ಷೇತ್ರದ ವಿಧಿ-ನಿಷೇದದ ಬಗೆಗೆ ಅವನಿಗೆಂದೂ ಅತ್ಮೀಯತೆ ಮೂಡಲಿಲ್ಲ.

ಒಂದು ಅಭಂಗದಲ್ಲಿ ಅವನು ದೇವರಿಗೆ ಹೀಗೆ ಹೇಳುತ್ತಾನೆ: ‘ಹೇ ದಾತನೆ, ನಿನ್ನ ನಾಮದ ಎರಡಕ್ಷರ ಬಿಟ್ಟು ಉಳಿದದ್ದು ತೆಗೆದುಕೊಂಡು ಏನು ಮಾಡಲಿ? ವಿಧಿ-ನಿಷೇದದ ಭಾರ ಹೊತ್ತು ಏನು ಮಾಡಲಿ? ಅದರಿಂದ ನೀನಂತೂ ಸಿಗುವುದಿಲ್ಲ. ವಿಧಿ-ನಿಷೇಧವೆಂದರೆ ಮನುಷ್ಯನ ಮನದ ಮೇಲೆ ಹೊರಸಿದ ಒಂದು ಒಜ್ಜೆ, ಇದು ಮನುಷ್ಯನನ್ನು ಹುಸಿ ಭ್ರಾಮಕ ಸಂಗತಿಗಳಲ್ಲಿ ಸಿಕ್ಕಿಸುವ ಪೊಳ್ಳು ವಿಷಯ; ಎಂದು ತುಕಾರಾಮನಿಗೆ ಅನಿಸುತ್ತಿರಬೇಕು.

ಇದೆಂಥ ಮಡಿಮೈಲಿಗೆಯೋ?

ಮಡಿ ಮೈಲಿಗೆಯ ಪರಿಕಲ್ಪನೆಯು ಒಂದು ಕಾಲಕ್ಕೆ ನಮ್ಮ ಸಾಂಸ್ಕೃತಿಕ ಬದುಕನ್ನು ಆವರಿಸಿಕೊಂಡ ಒಂದು ಮಹತ್ವದ ಘಟಕವಾಗಿತ್ತು, ಭಾರತದಲ್ಲಿಯ ಪುರೋಹಿತರು ವಿಶೇಷವಾಗಿ ಬ್ರಾಹ್ಮಣರು ತಮ್ಮನ್ನು ಪವಿತ್ರವೆಂದು ಭಾವಿಸಿ ಈ ಮಡಿಯ ಕೋಶದಲ್ಲಿ ಸಿಕ್ಕಿಸಿಕೊಂಡರು ಮತ್ತು ಮಡಿ-ಮೈಲಿಗೆಯ ಪರಿಕಲ್ಪನೆಯನ್ನು ಇತರರನ್ನು ತುಚ್ಛವಾಗಿ ಪರಿಗಣಿಸಲು ಬಳಸಿಕೊಂಡರು. ಇದು ಮಡಿ, ಇದು ಮೈಲಿಗೆ ಎಂಬ ವರ್ಗೀಕರಣವು ಸದಾ ಅವರ ತಲೆಯೊಳಗಿರುತ್ತಿತ್ತು. ಇದರಿಂದ ಉಳಿದವರು ತುಂಬ ಚಿತ್ರ ಹಿಂಸೆಗೊಳಗಾಗುತ್ತಿದ್ದರು. ನಿಮ್ಮಿಂದ ಮೈಲಿಗೆಯಾಗುತ್ತದೆ. ನಮ್ಮನ್ನು ಮುಟ್ಟಬೇಡಿ, ನಮ್ಮ ಮೇಲೆ ನಿಮ್ಮ ನೆರಳೂ ಬೀಳಬಾರದು, ನೀವು ಕೂತ ಜಾಗ, ಉಂಡ ಜಾಗವನ್ನು ಗೋಮಯದಿಂದ ಸಾರಿಸಿ ಶುದ್ಧಗೊಳಿಸಿ, ಗೋಮೂತ್ರದಿಂದ ಶುದ್ಧಗೊಳಿಸಿ ಮುಂತಾದ ಮಾತಿನಿಂದ ಅವರು ಇತರರನ್ನು ದೂರ ಸರಿಸುತ್ತಿದ್ದರು. ತಮ್ಮ ಶ್ರೇಷ್ಠತ್ವವನ್ನು ಉಳಿದವರ ಮೇಲೆ ಹೇರುತ್ತಿದ್ದರು. ಲೌಕಿಕ ಅವಸ್ಥೆಯಿಂದ ಮೈಲಿಗೆ ಅವಸ್ಥೆಯ ವರೆಗೆ ಹೋಗಲು, ಅದನ್ನು ಉಳಿಸಿಕೊಳ್ಳಲು ಸ್ನಾನ, ವಿಶಿಷ್ಟ ಮಂತ್ರದ ಉಚ್ಚಾರ, ಮಡಿ ಎಂಬ ಬಟ್ಟೆಯ ಬಳಕೆ, ದೀಕ್ಷಾಗ್ರಹಣ ಮುಂತಾದ ಹಲವು ಸಂಗತಿಗಳನ್ನು ಬಳಸುತ್ತಿದ್ದರು.

ತುಕಾರಾಮನು ಈ ಸಂದರ್ಭದಲ್ಲಿ ಮಂಡಿಸಿದ ವಿಚಾರವು ಅತ್ಯಂತ ಮೂಲಭೂತ ಸ್ವರೂಪದ್ದು, ಅದನ್ನು ಧಾರ್ಮಿಕ ಚಿಂತನೆಯ ಬುನಾದಿಯಾಗೇ ನೋಡಬೇಕು. ಈ ಪರಿಕಲ್ಪನೆಯ ಮೇಲೆ ಅವನು ನಾನಾ ಮಗ್ಗಲಿನಿಂದ ಪ್ರಹಾರ ಮಾಡಿದ್ದಾನೆ. ಸಕಲ ರೀತಿಯ ಮಡಿ ಮೈಲಿಗೆಯಿಂದ ನಾನು ಭಿನ್ನವಾಗಿದ್ದೇನೆ, ದೂರವಾಗಿದ್ದೇನೆ ಎಂಬ ಮಾತಿನಲ್ಲಿ ಅವನು ತನ್ನ ವಿಚಾರವನ್ನು ವ್ಯಕ್ತ ಮಾಡಿದ್ದಾನೆ. ಭಾವನೆ ಮತ್ತು ಆಚರಣೆಯು ಶುದ್ಧವಾಗಿರದಿದ್ದರೆ ಮಡಿಬಟ್ಟೆ, ಸ್ನಾನದಂತಹ ಬಾಹ್ಯ ಉಪಚಾರವು ನಿರುಪಯೋಗಿಯಾದುದು. ಬದಲು, ಭಾವನೆ ಆಚರಣೆಯು ಶುದ್ಧವಾಗಿದ್ದರೆ, ಈ ಉಪಚಾರದ ಅಗತ್ಯವಿಲ್ಲ – ಎಂಬೆರಡು ಬಗೆಯ ಯುಕ್ತಿವಾದವನ್ನು ಮಾಡಿ ಅವನು ಎರಡೂ ಸ್ಥಿತಿಯಲ್ಲಿ ಬಾಹ್ಯ ಉಪಚಾರದ ವ್ಯರ್ಥತೆಯನ್ನು ಸ್ಪಷ್ಟ ಮಾಡಿದ್ದಾನೆ. ಇದೆಂಥ ಮಡಿ-ಮೈಲಿಗೆಯೋ? ಎಲ್ಲಿವರೆಗೆ ಮನಸ್ಸು ನಿರ್ಮಲವಾಗಿರುವದಿಲ್ಲವೋ ಅಲ್ಲಿವರೆಗೆ ಇದೆಲ್ಲವೂ ವ್ಯರ್ಥ ಎಂದವನು ಒಂದು ಅಭಂಗದಲ್ಲಿ ಹೇಳಿದ್ದಾನೆ.

ಪರನಾರಿ ಪರದ್ರವ್ಯವೇ ನಿಜವಾದ ಮೈಲಿಗೆ

ತುಕಾರಾಮನು ಈ ರೀತಿಯಲ್ಲಿ ಮಡಿ-ಮೈಲಿಗೆಯ ಭೇದ-ಭಾವದ ಪರಿಕಲ್ಪನೆಯನ್ನೇ ಧಿಕ್ಕರಿಸಿದನು. ಮಡಿ-ಮೈಲಿಗೆಯನ್ನು ಸ್ವೀಕರಿಸುವದೇ ಆಗಿದ್ದರೆ ಬೇರೊಂದು ರೀತಿಯಲ್ಲಿ ಸ್ವೀಕರಿಸಬಹುದೆಂದು ಸೂಚಿಸಿದ್ದಾನೆ. ಪರದ್ರವ್ಯ ಮತ್ತು ಪರನಾರಿಯನ್ನು ಸಂಪರ್ಕಿಸುವದೇ ನಿಜವಾದ ಮೈಲಿಗೆಯಾಗಿದ್ದು, ಯಾರು ಇದರಿಂದ ದೂರ ಸರಿಯುತ್ತಾನೋ, ಅದೇ ನಿಜವಾದ ಮಡಿ ಎಂದಿದ್ದಾನೆ.

ಇಂಥದೇ ಘನವಾದ ಆಶಯವನ್ನು ಹೊಂದಿದ ಮತ್ತೆರಡು ಅಭಂಗಗಳಲ್ಲಿ ತುಕಾರಾಮನು ಮಡಿ-ಮೈಲಿಗೆಯ ಬಗೆಗೆ ಸ್ಪಷ್ಟವಾದ ನಿಲುವನ್ನು ಮಂಡಿಸಿದ್ದಾನೆ. ಅದರ ತಾತ್ಪರ್ಯ ಹೀಗಿದೆ: ಬಾಹ್ಯ ದೇಹಕ್ಕೇನು ಮಹತ್ವವಿದೆ, ಅಂತರಂಗವೇ ಮಲೀನವಾಗಿರುವಾಗ? ಅದು ಅಸತ್ಯದಿಂದ ವ್ಯಾಪಿಸಿಕೊಂಡಿದೆ. ಮೊದಲು ನೀನು ಡಾಂಭಿಕ ವ್ಯವಹಾರವನ್ನು ತೊರೆ, ನುಡಿ,ಮನಸ್ಸು ಶುದ್ಧವಾಗಿರಲಿ, ಚಿತ್ತದ ಶುದ್ಧಿಯ ಕಡೆಗೆ ಗಮನ ಹರಿಸು, ಪಾಪಪುಣ್ಯದ ಮೈಲಿಗೆಯ ಯೋಚನೆಯಲ್ಲೇ ಸದಾ ನೀನು ಮುಳುಗಿರುತ್ತಿ, ಏನೂ ಯೋಚಿಸುವುದಿಲ್ಲ. ಇಡೀ ಭೂಮಂಡಲಲವೇ ಮಡಿಯಾಗಿದೆ. ಅದರ ಕೆಲಭಾಗ ಶುದ್ಧ, ಕೆಲಭಾಗ ಅಶುದ್ಧ ಎಂದೇಕೆ ಒದ್ದಾಡುತ್ತಿ ! ಕಾಮಕ್ರೋಧದಿಂದ ದೂರ ಸರಿ, ಈ ಅರ್ಥದಲ್ಲಿ ಮಡಿಯನ್ನು ಆಚರಿಸು. ಮಡಿ-ಮೈಲಿಗೆಯ ಬಾಹ್ಯ ಅಲಂಕಾರವನ್ನು ಸುತ್ತಿಡು….. ಯಾರು ಪರದ್ರವ್ಯ ಮತ್ತು ಪರನಾರಿಯ ಅಭಿಲಾಷೆ ಮಾಡುತ್ತಾನೋ, ಮೂಗು ಹಿಡಿದು ಸಾಧನೆ ಮಾಡಿದ ನಾಟಕ ಮಾಡುತ್ತಾನೋ, ಅವನ ಆಚಾರ ಸುಡಲಿ, ಈ ಕತ್ತೆಯು ಬರೇ ಒಜ್ಜೆಯನ್ನು ಹೊರುತ್ತಿದೆ. ಇವನು ‘ಕ್ರೋಧದಿಂದ ಮನಸ್ಸು ಮೈಲಿಗೆ ಮಾಡಿಕೊಂಡಿದ್ದಾನೆ. ಹೊರಗೆ ಮಡಿಯ ಆಡಂಬರ ಮೆರೆಯುತ್ತಾನೆ. ಹೊರಗೆ ಮುಖವಾಡ ಧರಿಸಿ, ಬೂಟಾಟಿಕೆಯನ್ನು ಮೆರೆಯುತ್ತಿದ್ದಾನೆ’.

ಮುಂಡನ, ಜಟಾ, ಜುಟ್ಟ,

ನಮ್ಮ ಧಾರ್ಮಿಕ ಕ್ಷೇತ್ರಗಳಲ್ಲಿ ಕೂದಲಿಗೆ ಸಂಬಂಧಪಟ್ಟಂತೆ ಜನರು ಮುಂಡನ, ಜಟಾ ಮತ್ತು ಜುಟ್ಟಗಳಲ್ಲಿ ಯಾವುದಾದರೂ ಒಂದನ್ನು ಸ್ವೀಕರಿಸುತ್ತಾರೆ. ಇದನ್ನು ಸ್ವೀಕರಿಸುವದು ತನ್ನ ಶುದ್ಧತನದ, ಶ್ರೇಷ್ಠತನಕ, ಧಾರ್ಮಿಕತೆಯ ಚಿಹ್ನೆ ಎಂದು ಜನರ ಮನದೊಳಗೆ ಬಿಂಬಿಸುವ ಪ್ರಯತ್ನ ನಡೆದಿರುತ್ತದೆ. ತುಕಾರಾಮನ ಪ್ರಕಾರ ಇದೊಂದು ಕೇವಲ ಬಾಹ್ನ ಚಿಹ್ನೆಯಾಗಿದ್ದು, ಅಂತರಂಗ ಶುದ್ಧಿಯೇ ಮಹತ್ವದ್ದು.

ಚಿತ್ತ ಮಂಡನ

ಕೂದಲಲ್ಲಿ ಪಾಪ ನೆಲೆಸಿರುತ್ತದೆ ಎಂದು ಭಾವಿಸುವ ಜನರು ಕೂದಲು ಮುಂಡನ ಮಾಡುತ್ತಾರೆ. ಕೇಶವನ್ನು ತೊರೆದು, ಕಿತ್ತೊಗೆದು ಪಾಪದಿಂದ ತಮ್ಮ ಮುಕ್ತಿಯಾಯಿತು ಎಂದು ಭಾವಿಸುತ್ತಾರೆ. ಬದಲಿಗೆ ಪಾಪದ ನಿಜವಾದ ವಾಸ್ತವ್ಯ ಮನದೊಳಗಿನ ವಿಕಾರದಲ್ಲಿರುತ್ತದೆ, ವಾಸನೆಯಲ್ಲಿರುತ್ತದೆ. ಅದನ್ನು ತ್ಯಾಗ ಮಾಡದೆ, ಬರೇ ಮುಂಡನ ಮಾಡಿ ಏನು ಉಪಯೋಗ ಎಂದು ತುಕರಾಮನಿಗೆ ಅನಿಸುತ್ತದೆ.

ಈ ವಿಷಯದ ಬಗೆಗಿನ ಅವನ ಒಂದು ಅಭಂಗ ಅರ್ಥಪೂರ್ಣವಾಗಿದೆ. ಸಿಂಹಸ್ಥ ಕಾಲದಲ್ಲಿ ತೀರ್ಥಕ್ಷೇತ್ರದಲ್ಲಿ ಸೇರಿದ ಅಸಂಖ್ಯ ಜನರು ಮುಂಡನ ಮಾಡಿಕೊಳ್ಳುತ್ತಾರೆ, ಆಗ ಭಿಕ್ಷುಕರಿಗೆ ದಾನ ಮಾಡುತ್ತಾರೆ. ಅವರ ಈ ಕೃತಿಯಿಂದ ನಾಭಿಕ ಮತ್ತು ಭಟ್ಟರಿಗೆ ಲಾಭವಾಗುತ್ತದೆ. ಆದರೆ ಮುಂಡನ ಮಾಡಿಕೊಂಡವನು ಮಾತ್ರ ಪಾಪದಿಂದ ಮುಕ್ತನಾಗುವುದಿಲ್ಲ. ಈ ಜನರು ಅಂತರಂಗದಲ್ಲಿ ಪಾಪ ಹುದುಗಿದ್ದಾಗ ತಲೆಗೂದಲು ಗಡ್ಡ ಬೋಳಿಸುತ್ತಾರೆ. ಈ ಕೃತಿಯಿಂದ ಕೂದಲು ಹೋದರೂ, ಅಂತರಂಗ ಮಾತ್ರ ಶುದ್ಧಗೊಳ್ಳುವುದಿಲ್ಲ ಎಂದವನ ಅಭಿಪ್ರಾಯ.

ಉದ್ದ ಜಟಯನ್ನೇಕೆ ಬೆಳೆಸುತ್ತೀರಿ ?

ಯಾರು ಕ್ರೋಧದಂತಹ ವಿಕಾರವನ್ನು ನಿಯಂತ್ರಣದಲ್ಲಿ ಇಡುವದಿಲ್ಲವೋ, ಅವನು ಉದ್ದ ಜಟೆಯನ್ನು ಬೆಳೆಸಿಯೂ ಪ್ರಯೋಜನವಿಲ್ಲ ಎಂದು ತುಕಾರಾಮ ಹೇಳುತ್ತಾನೆ. ಡಾಂಭಿಕರು ಉದ್ಧವಾದ ಜಟೆ ಬೆಳೆಸುತ್ತಾರೆ, ಆದರವರು ರುಚಿಕರವಾದ ಪದಾರ್ಥ ತಿನ್ನಲು ಬಯಸುತ್ತಾರೆ. ಅವರು ಭಂಗಿ, ಆಫೊ, ತಂಬಾಕುವಿನ ಸೇವನೆ ಮಾಡುತ್ತಾರೆ. ಅಂಥವರು ಸದಾ ಭ್ರಾಂತಿಯಲ್ಲೇ ಇರುತ್ತಾರೆ ಎನ್ನುವದು ತುಕಾರಾಮನ ಅಂಬೋಣ. ಅವನು ಅನ್ನುತ್ತಾನೆ ಜಟೆ ಬೆಳೆಸಿ ದಶದಿಕ್ಕು ಅಲೆದಾಡುವದರಿಂದ ಯಾರೂ ಮುನಿಯಾಗುವುದಿಲ್ಲ. ಇಲ್ಲದಿದ್ದರೆ ನರಿಗೂ ನೈಸರ್ಗಿಕವಾಗಿ ಅಂಥದೇ ವೇಷ ಸಿಕ್ಕಿರುವದರಿಂದ ಅದೂ ಸಾಧೂ ಆಗಬಹುದಿತ್ತು. ತಲೆಯ ಮೇಲೆ ಕೂದಲು ಬೆಳೆಸಿ, ಮೈಯಲ್ಲಿ ಭೂತ ಸಂಚರಿಸುವಂತೆ ಮಾಡುವ ಜನರು ಸಂತರಲ್ಲ. ಏಕೆಂದರೆ, ಅವರ ಬಳಿ ಆತ್ಮದ ಗುರುತು ಇರುವುದಿಲ್ಲ. ಅದರ ಬದಲು ಯಾರು ವಾಸನೆಯನ್ನು ಗೆದ್ದಿರುತ್ತಾನೋ, ಅವನ ಜಟೆ ಬೆಳೆಸಿ ಮಾಡುವದೇನು ಎಂಬ ಪ್ರಶ್ನೆ ಕೇಳುತ್ತಾನೆ.

ಜುಟ್ಟ ಜನಿವಾರ ಕಿತ್ತೊಗೆಯಿರಿ

ಮುಂಡನ, ಜಟೆಯಂತೆ, ಜುಟ್ಟವೂ ಸಹ ಬಾಹ್ಯಾಡಂಬರವೆಂದು ತುಕಾರಾಮ ಹೇಳುತ್ತಾನೆ. ಜುಟ್ಟಕ್ಕೆ ದರ್ಬೆಯನ್ನು ಕಟ್ಟುವ ಡಾಂಭಿಕರೊಳಗೆ ಗೋವಿಂದನಿರುವದಿಲ್ಲ ಎಂದೆನ್ನುತ್ತಾನೆ.

ಜುಟ್ಟವಿಡುವದು, ಜನಿವಾರ ಧರಿಸುವದೂ ಸಹ ಮತ್ತೊಂದು ಬಗೆಯ ಸೋಗುತನ. ಜುಟ್ಟ, ಜನಿವಾರ ಇದ್ದವರು ಏನು ಬೇಕಾದರೂ ಮಾಡಬಹುದೆಂದುಕೊಂಡು ದುರಾಚಾರ ಮಾಡಿದರೆ, ಅವನು ದಂಡನೆಗೆ ಗುರಿಯಾಗುತ್ತಾನೆ. ಏಕೆಂದರೆ ನಾರಾಯಣನಿಗೆ ದುರಭಿಮಾನ, ದರ್ಪ ಇಷ್ಟವಾಗುವುದಿಲ್ಲ. ಜುಟ್ಟ-ಜನಿವಾರಕ್ಕೆ ಸಂಬಂಧಿಸಿದಂತೆ ಮತ್ತೊಂದು ಅಭಂಗ ಮಾರ್ಮಿಕವಾಗಿದೆ. ಎಲ್ಲಿಯವರೆಗೆ ನೀನು ಜುಟ್ಟ-ಜನಿವಾರದಲ್ಲಿ ಸಿಲುಕಿಕೊಂಡಿರುತ್ತೀಯೋ, ಅಲ್ಲಿವರೆಗೆ ನೀನು ಶ್ರುತಿಯ ದಾಸ, ವೇದದ ಗುಲಾಮನಾಗಿರುತ್ತಿ ಎಂದು ಬ್ರಾಹ್ಮಣನನ್ನು ಉದ್ದೇಶಿಸಿ ಹೇಳಿದ್ದಾನೆ. ಅನ್ಯರಿಗೆ ಜಾಮೀನುನಾಗಿದ್ದ ವ್ಯಕ್ತಿಯು ತನ್ನ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವಂತೆ, ನಿನ್ನ ಸ್ಥಿತಿಯಾಗುತ್ತದೆ – ಎನ್ನುವದು ತುಕಾರಾಮನ ಅಭಿಪ್ರಾಯ. ಈ ಗುಲಾಮಗಿರಿಯಿಂದ ಪಾರಾಗುವ ಹಾದಿಯನ್ನು ತುಕಾರಾಮನು ಹೇಳಿದ್ದಾನೆ-ನೀನು ಜುಟ್ಟ-ನಿವಾರದ ಜತೆಗಿನ ಸಂಬಂಧವನ್ನು ಕಡಿದುಕೋ, ಅಂದಾಗ ನೀನು ಎಲ್ಲ ಪೀಡೆಯಿಂದ ಮುಕ್ತನಾಗುತ್ತಿ.

ಬ್ರಾಹ್ಮಣ್ಯ ವಿಸರ್ಜಿಸುವ ಆಹ್ವಾನ

ಬ್ರಾಹ್ಮಣನ ಬಳಿಯಿರುವ ಬ್ರಾಹ್ಮಣ್ಯದ ಅಭಿಮಾನ, ಅದರ ಮೂಲಕ ಬೆಳೆಸಿಕೊಂಡ ಪ್ರತ್ಯೇಕತೆಯ ಬಲಿಷ್ಠ ಸಮಾಜ ರಚನೆಗೆ ಅಡ್ಡಿಯಾಗುತ್ತದೆ ಎಂಬುದನ್ನು ತುಕಾರಾಮನು ಗುರುತಿಸಿದ್ದ. ಈ ಕಾರಣಕ್ಕಾಗೇ ಅವನು ಬ್ರಾಹ್ಮಣರಿಗೆ ತಮ್ಮ ಬ್ರಾಹ್ಮಣ್ಯವನ್ನು ತೊರೆಯುವಂತೆ ಆಹ್ವಾನ ನೀಡಿದ. ಜುಟ್ಟ ಮತ್ತು ಜನಿವಾರದ ಮೂಲಕ ಬ್ರಾಹ್ಮಣ್ಯವನ್ನು ಸ್ಪಷ್ಟವಾಗಿ ಗುರುತಿಸಬಹುದು. ಅವು ಬ್ರಾಹ್ಮಣ್ಯದ ಚಿಹ್ನೆ. ಈ ಕಾರಣಕ್ಕಾಗಿ ಜುಟ್ಟ ಜನಿವಾರದ ಹಂಗು ತೊರೆಯುವಂತೆ ಸೂಚಿಸಿದ್ದಾನೆ. ಈ ಚಿಹ್ನೆ ಬ್ರಾಹ್ಮಣರಿಗೆ ತಮ್ಮ ಶ್ರೇಷ್ಠತೆಯ ಪ್ರತೀಕವೆನ್ನಿಸುತ್ತಿರಬೇಕು. ಪ್ರತ್ಯಕ್ಷದಲ್ಲದೂ ಗುಲಾಮಗಿರಿಯ ಲಕ್ಷಣವಾಗಿದೆ ಎಂದು ತೋರಿಸಿದ್ದಾನೆ. ಅವನ ಈ ಆಭಿಪ್ರಾಯವು ಯೋಗ್ಯವಾದುದು. ಗುಲಾಮನಿಗೆ ಸ್ವಂತ ಅಭಿಪ್ರಾಯವಿರುವದಿಲ್ಲ. ಶಿಖೆ ಸೂತ್ರ ಧರಿಸುವ ಬ್ರಾಹ್ಮಣರು ವೇದದ ಗುಲಾಮರು, ಅವರು ವೇದವನ್ನು ಬದಿಗಿಟ್ಟು ಏನೂ ಮಾಡುವಂತಿಲ್ಲ ಎನ್ನುವದು ಎಲ್ಲರಿಗೂ ಗೊತ್ತಿರುವ ಸಂಗತಿ.

ಸರ್ವಕಾಲ ಮತ್ತು ದಿಕ್ಕು ಶುಭ

ತುಕಾರಾಮನು ಬಹಿರಂಗ ಮಡಿ ಮೈಲಿಗೆ (ಶುದ್ಧಿ)ಗಿಂತ ಅಂತರಂಗ ಶುದ್ಧಿಗೆ ಹೆಚ್ಚು ಮಹತ್ವ ನೀಡಿದ್ದಾನೆ. ಶುಭ ಅಶುಭದ ಬಗೆಗೂ ಅವನು ಅದೇ ಅಭಿಪ್ರಾಯವನ್ನು ತಾಳಿದ್ದನು. ಸ್ತ್ರೀ ಪುರುಷರನ್ನು ಸೇರಿಸಿ, ಅವರಿಗೆ ನಾನಾ ಬಗೆಯ ಶಕುನ ಹೇಳುವಂತೆ ಢಾಂಬಿಕ ಜನರ ಹತ್ತಿರ ಗೋವಿಂದನಿರುವುದಿಲ್ಲ ಎಂದವನು ಹೇಳುತ್ತಾನೆ. ‘ದೇವರ ಭಕ್ತನಿಗೆ ಸಕಲ ಕಾಲ ಶುಭವೇ, ಸಕಲ ದಿಶೆಯೂ ಶುಭ ‘ ಎಂದು ಅಭಂಗದಲ್ಲಿ ಹೇಳಿದ್ದಾನೆ.

ವಿವೇಕದ ದೀವಿಗೆಯಿಂದ ರಾತ್ರಿ ದೂರ ಸರಿಯಿತು.

ತುಕಾರಾಮನ ಮನೋಬಲದ ಉತ್ತುಂಗ ಶಿಖರವನ್ನೇರಿದ್ದು, ಬೇರೊಂದು ವಚನದಲ್ಲಿ ಸ್ಪಷ್ಟವಾಗುತ್ತದೆ. ಮನುಷ್ಯನನ್ನೇ ಉನ್ನತಕ್ಕೊಯ್ಯುವ ವಚನವದು. ಈ ಅಭಂಗದಲ್ಲಿ ತನಗೆ ಸರ್ವಕಾಲ, ದಿಸೆ ಶುಭವಾಗಿದೆ ಎಂದಷ್ಟೇ ಹೇಳಿ ನಿಲ್ಲುವುದಿಲ್ಲ. ಜನಸಾಮಾನ್ಯರು ಯಾವುದಕ್ಕೆ ಅಶುಭ ಎನ್ನುತ್ತಾರೋ ಅದು ತನ್ನ ದೃಷ್ಟಿಯಲ್ಲಿ ಮಂಗಲದಲ್ಲೇ ಮಂಗಲ, ಶುಭದಲ್ಲೇ ಶುಭ ಎಂದು ಹೇಳುತ್ತಾನೆ. ಮನುಷ್ಯನನ್ನು ಸಂಪೂರ್ಣ ಬದಲಾಯಿಸುವ ಶಕ್ತಿಯು ಈ ವಿಚಾರದಲ್ಲಿದೆ. ಅದರಲ್ಲಿ ಆತ್ಮವಿಶ್ವಾಸವು ಓತಪ್ರೋತವಾಗಿ ತುಂಬಿಕೊಂಡಿದೆ. ಕೈ ದೀವಿಗೆ ಹಿಡಿದಿದ್ದರಿಂದ ಕತ್ತಲೆಯು ಎಷ್ಟು ದೂರ ಸರಿದಿದೆ ಎಂದರೆ, ಅದು ಕಾಣುವದೂ ಇಲ್ಲ. ಈ ದೀವಿಗೆ ವಿಚಾರದ್ದು, ವಿವೇಕದ್ದು, ಜ್ಞಾನದ್ದು, ಮಾನಸಿಕ ಸಾಮರ್ಥ್ಯದ್ದು. ಹೀಗಾಗಿ ಅಜ್ಞಾನದ ದುರ್ಬಲ ರಾತ್ರಿಯು ಎಲ್ಲೋ ಓಡಿ ಹೋಗಿದೆ. ಈ ಸ್ಥಿತಿಯಿಂದಾಗಿ ಅಶುಭವು ಶುಭದಲ್ಲಿ ರೂಪಾಂತರಗೊಳ್ಳುತ್ತದೆ. ಅಷ್ಟೇ ಅಲ್ಲ ಆಘಾತ ಸಹ ಹಿತಕಾರಕ ಫಲನೀಡುತ್ತದೆ. ಅಂದರೆ ಸಂಕಟ ಕೇವಲ ದೂರ ಸರಿಯುವದಷ್ಟೇ ಅಲ್ಲ, ಸಂಕಟವೇ ಹಿತಕಾರಕ, ಕಲ್ಯಾಣಕಾರಕವಾಗಿ ರೂಪಾಂತರಗೊಳ್ಳುತ್ತದೆ. ತನ್ನ ಆಂತರಿಕ ಲೋಕ ಬದಲಾಯಿತೆಂದರೆ, ಬಾಹ್ಯಲೋಕವು ಬದಲಾಗುತ್ತದೆ. ಆಗ ಅಶುಭ, ಅಪವಿತ್ರ ಎಂಬ ಭಾವನೆಯೇ ಉಳಿಯುವುದಿಲ್ಲ

ಭವಿಷ್ಯ ನುಡಿಯುವವರ ದರ್ಶನವೂ ಬೇಡ

ತುಕಾರಾಮನು ಭವಿಷ್ಯ ಕಥನವನ್ನು ಹೀಗೆ ಧಿಕ್ಕರಿಸಿದ್ದಾನೆ: ಭೂತ, ಭವಿಷ್ಯ ಮತ್ತು ವರ್ತಮಾನದ ಕಾಲದಲ್ಲಿಯ ಅಪ್ರತ್ಯಕ್ಷ ಸಂಗತಿಯು ಗೊತ್ತಾಗುವದು ಭಾಗ್ಯಹೀನರ ದೃಷ್ಟಿಯಲ್ಲಿ ಲಾಭಕಾರಕ. ನಾವು ವಿಷ್ಣುದಾಸ (ಹರಿದಾಸರು)ರು ಮನದಲ್ಲೇ ದೇವರ ಧ್ಯಾನ ಮಾಡಬೇಕು. ಭವಿಷ್ಯ ನುಡಿಯುವ ಜನರು ಜಗರೂಢಿಗಾಗಿ ಅಂಗಡಿಯನ್ನು ತೆರೆದಿರುವುದರಿಂದ ನಾರಾಯಣ ದೂರವಾಗುತ್ತಾನೆ. ಮತ್ತೂ ಒಂದು ಅಭಂಗದಲ್ಲಿ ಹೀಗೆ ಹೇಳುತ್ತಾನೆ ‘ಕೆಲವರಿಗೆ ಶಕುನ ಹೇಳುವ ಜ್ಞಾನ ಗೊತ್ತಿರುತ್ತದೆ. ಅವರು ಭೂತ-ಭವಿಷ್ಯ-ವರ್ತಮಾನ ಕಾಲದ ಘಟನೆಯನ್ನು ಹೇಳಬಲ್ಲವರಾಗಿರುತ್ತಾರೆ. ನನಗೆ ಮಾತ್ರ ಅದರ ಬಗೆಗೆ ನಿರಾಸಕ್ತಿ, ಅವರನ್ನು ಪ್ರತ್ಯಕ್ಷ ನೋಡುವ ಇಚ್ಛೆಯೂ ನನಗಿಲ್ಲ’.

ಯಜ್ಞದಿಂದ ವ್ಯರ್ಥ ದಣಿವು

ಯಜ್ಞದ ವಿಷಯದಲ್ಲೂ ತುಕಾರಾಮನು ಕರ್ಮಕಾಂಡಕ್ಕಿಂತಲು ಭಾವನೆಯ ಸಾಚಾತನಕ್ಕೆ ಹೆಚ್ಚು ಮಹತ್ವ ನೀಡುತ್ತಾನೆ. ಕಾಮ ಕ್ರೋಧದಂತಹ ದುಷ್ಟ ವಿಕಾರವು ಇನ್ನೂ ಬಾಕಿಯುಳಿದಿರುವಾಗ, ಅದರ ಆಹುತಿ ನೀಡದೆ, ಎಳ್ಳು ಅಕ್ಕಿಯನ್ನು ಯಜ್ಞಕ್ಕೆ ಆಹುತಿ ನೀಡುವದು ವ್ಯರ್ಥ ದಣಿವು ಎಂದು ತುಕಾರಾಮನ ಅಂಬೋಣ. ಕೆಲವರು ಹೋಮ, ಹವನ, ತಪ, ವ್ರತ ಮುಂತಾದವುಗಳನ್ನು ಮಾಡುತ್ತಾರೆ. ಆದರೆ ಅವರ ಮನದಲ್ಲಿ ವಿಕಲ್ಪವಿರುವುದರಿಂದ ಅವರಿಗೆ ಶುದ್ಧ ಪುಣ್ಯ ಪ್ರಾಪ್ತವಾಗುವುದಿಲ್ಲ ಎಂದವನ ಅನಿಸಿಕೆ. ನಾನು ದೇಹದ ಹೋಮ ಮಾಡಿದೆ ಎಂದರೆ, ನಾನು ದೇಹದ ಆಸಕ್ತಿಯನ್ನು ತೊರೆದೆ ಎಂದರ್ಥ. ನನ್ನ ದೃಷ್ಟಿಯಲ್ಲಿ ಅದೇ ನಿಜವಾದ ಯಜ್ಞದ ಸಿದ್ಧಿ, ನಾನು ಭಜನ ರೂಪಿ ಯಜ್ಞದಲ್ಲಿ ಜೀವದ ಆಹುತಿ ನೀಡಿದೆ ಎಂದೇಕೆ ಅವನು ಹೇಳುತ್ತಾನೆ ಎನ್ನುವದು ಇದರಿಂದ ಸ್ಪಷ್ಟವಾಗುತ್ತದೆ.

ಶ್ರೋತ್ರಿಯ ಕೂಲಿ ಕೆಲಸ

ಶ್ರೋತ್ರಿಗಳ ಕುರಿತು ತುಕಾರಾಮ ಹೇಳುವದು ಹೀಗೆ : ‘ಯಜ್ಞಯಾಗ ಮಾಡುವ ಶ್ರೋತ್ರಿ ಋತ್ವಿಜರು ಪುಣ್ಯದ ವಿಕ್ರಯ ಮಾಡಿ ದಕ್ಷಿಣೆಯನ್ನು ಗಳಿಸುತ್ತಾರೆ. ಆದರೆ ಪ್ರತ್ಯಕ್ಷದಲ್ಲಿದು ತಾಯಗಂಡತನದ ಕೆಲಸ. ಪಾಪ ಕಾರ್ಯ. ಬಡ್ಡಿ ಹಣದಿಂದ ಮೈಲಿಗೆಯಾಗುತ್ತದೆ. ವಿಷಯದ ಲೋಭಿಯಾದ ಈ ಮನುಷ್ಯನು ಆತ್ಮಹತ್ಯೆ ಮಾಡುವವನು ಎನ್ನುವಾಗ ಹೆದರಬೇಕಿಲ್ಲ. ಇಂಥವನು ದಂಡನೆಗೆ ಅರ್ಹ. ಇವನು ಅಲ್ಪಹಣಕ್ಕಾಗಿ ಬತ್ತಲೆಯಾಗುತ್ತಾನೆ. ಅವನು ಗಾಜಿನ ತುಣುಕನ್ನು ತೆಗೆದುಕೊಂಡು ಪರೀಷ ನೀಡಿದನು ಎಂದೆನ್ನಬೇಕಾಗುತ್ತದೆ. ಈ ಶ್ರೋತ್ರಿಗಳು ವ್ಯರ್ಥ ಶ್ರಮ ಪಡುತ್ತಾರೆ, ಕೂಲಿ ಕೆಲಸ ಮಾಡುತ್ತಾರೆ ಎಂದೆನ್ನಬೇಕಾಗುತ್ತದೆ.

ಶ್ರೋತಿ ಎಂದರೆ ವೇದ ವಿದ್ಯಾ ಪಾರಂಗತನಾದ ಬ್ರಾಹ್ಮಣ ಮತ್ತು ಋತ್ವಿಜನೆಂದರೆ ಯಜ್ಞದ ಪೌರೋಹಿತ್ಯ ಮಾಡುವ ಬ್ರಾಹ್ಮಣ. ತುಕರಾಮನು ಶ್ರೋತ್ರಿಗಳ ಬಗೆಗೆ ಮಾಡಿದ ಟೀಕೆಯು ಕೇವಲ ಉಗ್ರವಷ್ಟೇ ಅಲ್ಲ. ಅತಿರೇಕದ್ದು, ಆಕ್ಷೇಪಾರ್ಹವೂ ಆದುದು ಎಂದೆನಿಸಬಹುದು. ಏಕೆಂದರೆ, ಬಹಳಷ್ಟು ಶ್ರೋತ್ರಿಗಳು ಧಾರ್ಮಿಕ ಕಾರ್ಯಕ್ಕಿಂತ ದಕ್ಷಿಣೆಯೇ ಮೇಲೆಯೇ ಹೆಚ್ಚು ಕಣ್ಣಿಟ್ಟಿರುತ್ತಾನೆ. ಇದನ್ನು ತುಕಾರಾಮ ನೋಡಿದ್ದಾನೆ. ಧರ್ಮಶಾಸ್ತ್ರದ ನಿಯಮವು ಪುಷ್ಟಿ ನೀಡುವಂತಹದು. ದಕ್ಷಿಣೆಗಾಗಿ ಯುದ್ಧ ನಡೆದಾಗ ಬೇರೊಬ್ಬನ ಹತ್ಯೆ ಮಾಡಿದರೆ, ಅದು ಪಾಪವಲ್ಲ ಎಂದು ಮನುಸ್ಮೃತಿಯಲ್ಲಿ (೯.೩೪೯) ಹೇಳಲಾಗಿದೆ. ವೇನರಾಜನು ಯಜ್ಞ-ಯಾಗದ ಉಪೇಕ್ಷೆ ಮಾಡಿದ ನಂತರ ದಕ್ಷಿಣೆ ಮುಳುಗುತ್ತದೆಂದು ಅವನ ಹತ್ಯೆ ಮಾಡಲಾಯಿತು. ನಿಮಿರಾಜನು ತನ್ನ ಯಜ್ಞದ ಪುರೋಹಿತನಾಗುವಂತೆ ವಶಿಷ್ಠನಿಗೆ ವಿನಂತಿಸಿಕೊಂಡ. ಆದರೆ ತಾನು ಬೇರೊಂದು ಯಜ್ಞಕಾರ್ಯ ಕೈಕೊಂಡಿದ್ದೇನೆ. ಅದು ಮುಗಿಯುವ ತನಕ ನಿಲ್ಲು ಎಂದು ವಶಿಷ್ಠನು ಅವನಿಗೆ ತಿಳಿಸಿದನು. ಆದರೆ ನಿಮಿಯು ಅವನ ಮಾತು ಲೆಕ್ಕಿಸದೆ, ಗೌತಮನ ಸಹಾಯದಿಂದ ಯಜ್ಞ ಪೂರ್ಣಗೊಳಿಸಿದ. ಇದರಿಂದ ಸಿಟ್ಟಿಗೆದ್ದ ವಶಿಷ್ಠನು ನಿಮಿಯ ಹತ್ಯೆ ಮಾಡಿದನು. ಈ ಹತ್ಯೆಯ ಹಿಂದಿನ ಕಾರಣ ದಕ್ಷಿಣೆಯೇ ಆಗಿತ್ತು. ತುಕಾರಾಮನು ಮಾಡಿದ ಟೀಕೆಯು ಇಂಥವರಿಗೆ ಅನ್ವಯಿಸುತ್ತದೆ.

ಸಾವಿನ ನಂತರ ಪಿಂಡ ನೀಡುವದು ಮೋಸ

ಶ್ರಾದ್ಧದ ಕುರಿತು ತುಕಾರಾಮನು ಮಂಡಿಸಿದ ಕೆಲವು ವಿಚಾರಗಳು ಹೀಗಿವೆ: ‘ಜೀವಂತ ಮನುಷ್ಯ ಹಸಿದಾಗ ಅವನಿಗೆ ಅನ್ನ ನೀಡುವುದಿಲ್ಲ. ಅವನು ಸತ್ತ ಬಳಿಕ ಪಿಂಡದಾನ ಮಾಡುತ್ತಾರೆ. ಇದು ಮೋಸತನದ್ದು, ಸಿದ್ಧ ಪಡಿಸಿದ ಅನ್ನವನ್ನು ಯಾರು ಸ್ವತಃ ತಿನ್ನುತ್ತಾರೋ, ನೈವೇದ್ಯದ ನಿಮಿತ್ತದಿಂದ ತಾನೇ ಕಬಳಿಸುತ್ತಾನೋ, ಇಂಥ ಜಡಮನುಷ್ಯನು ರಕ್ಷಕನಾಗಲಾರ. ತಾಯ್ತಂದೆಗಳು ಬದುಕಿದ್ದಾಗ, ಕೈಯಾರೆ ಅವರ ಸೇವೆಯನ್ನು ಕೈಕೊಳ್ಳದೆ, ಅವರು ಸತ್ತ ನಂತರ ಈ ಡಾಂಭಿಕ ಮನುಷ್ಯನು ಅನ್ನದಾನ ಮಾಡುತ್ತಾನೆ. ಅವನದು ಬಾಹ್ಯ ನಟನೆ. ಇದರಿಂದ ಅವನು ದೇವರಿಂದ ದೂರ ಸರಿಯುತ್ತಾನೆ. ಇದೇ ಮನುಷ್ಯ ಅವರು ಸತ್ತಾಗ ತಿಥಿ ಮಾಡುತ್ತಾನೆ, ಜೀವಂತವಾಗಿದ್ದಾಗ ಅವರನ್ನು ಉಪೇಕ್ಷಿಸುತ್ತಾನೆ. ಲೋಭದಿಂದಾಗಿ ಅವನು ನಿಜವಾದ ಸೇವೆ ಮಾಡುವುದಿಲ್ಲ. ನಾನು ನನ್ನ ಕೈಯಿಂದಲೇ ನನ್ನ ದೇಹರೂಪಿ ಪಿಂಡವನ್ನು ದೇವರ ಪಾದಕ್ಕೆ ಅರ್ಪಸಿದ್ದೇನೆ. ಈ ರೂಪದಲ್ಲಿ ಗಯೆಯಲ್ಲಿ ಮಾಡುವ ಗಯಾವರ್ಜನ ಎಂಬ ಶ್ರಾದ್ಧವು ನನ್ನಿಂದ ನಡೆದಂತಾಗಿ ಪಿತೃ ಋಣ ಸಲ್ಲಿಸಿದಂತಾಯಿತು. ನಾನು ಈ ರೂಪದಿಂದ ಕರ್ಮಾಂತರ ಮಾಡಿ ಹರಿಹರ ಎಂದು ಬೊಬ್ಬೆ ಹೊಡೆದ. ಈ ರೀತಿಯಲ್ಲಿ ನನ್ನ ಭಾರ, ಹೊರೆ ಇಳಿದಂತಾಯಿತು.

ಬದುಕಿದ್ದಾಗ ಬೆಲೆ ಕೊಡಿ

ತುಕಾರಾಮನು ತನ್ನ ಈ ವಿಚಾರದ ಮೂಲಕ ಜನರಿಗೊಂದು ಸಂದೇಶ ನೀಡಿದ್ದಾನೆ. ನಿಮಗೆ ನಿಜವಾಗಿಯೂ ಯಾರ ಮೇಲಾದರೂ ಪ್ರೀತಿಯಿದ್ದರೆ, ಅವನು ಜೀವಂತವಾಗಿದ್ದಾಗಲೇ ಯೋಗ್ಯಕೃತಿಯ ಮೂಲಕ ಅದನ್ನು ವ್ಯಕ್ತ ಮಾಡಿ. ಬದುಕಿದ್ದಾಗ ಅವನಿಗೆ ಬೆಲೆ ಕೊಡಿ, ಅವನ ಸೇವೆ ಮಾಡಿ. ಅವನ ಸಾವಿನ ನಂತರ ಅವನ ಹೆಸರಿನಲ್ಲಿ ನೀವು ಪಕ್ವಾನ್ನ ತಿಂದು ಅಥವಾ ಬೇರೆಯವರಿಗೆ ಊಟ ಹಾಕುವದಕ್ಕಿಂತ, ಅವನು ಜೀವಂತವಾಗಿದ್ದಾಗ, ಅವನ ಹಸಿದ ಹೊಟ್ಟೆಗೆ ನಾಲ್ಕು ತುತ್ತು ಅನ್ನ ಹಾಕುವದು, ಅವನಿಗೆ ನಿಜವಾಗಿಯೂ ಸಮಾಧಾನ ನೀಡುವ ಸಂಗತಿ. ಮಾನವೀಯತೆಯ ನಿಜವಾದ ಮಾರ್ಗವನ್ನು ತುಕಾರಾಮನು ಇಲ್ಲಿ ನಿರ್ದೇಶನ ಮಾಡಿದ್ದಾನೆ.

ದಾನದ ಅಗತ್ಯವಿಲ್ಲ

ದಾನದ ಬಗ್ಗೆ ತುಕಾರಾಮನು ಹೇಳುತ್ತಾನೆ : ‘ದೇವರ ಪ್ರಾಪ್ತಿಗಾಗಿ ತಪ, ತೀರ್ಥ ಮತ್ತು ಮಹಾದಾನ ಮಾಡುವ ಅಗತ್ಯವಿಲ್ಲ. ಮನ ಏಕಾಗ್ರ ಮಾಡಿದರೆ ಅವನು ಪ್ರಾಪ್ತನಾಗುತ್ತಾನೆ. ಇಡೀ ಭೂಮಂಡಲವನ್ನೇ ದಾನ ಮಾಡಿದರೂ, ಅದು ನಾಮಕ್ಕೆ ಸರಿಗಟ್ಟುವುದಿಲ್ಲ.

ಅನ್ಯರನ್ನು ಅಪಮಾನಗೊಳಿಸುವ ದುಷ್ಟ ಬ್ರಾಹ್ಮಣನಿಗೆ ದಾನ ನೀಡಿದರೆ ದಾನ ನೀಡುವವನೂ, ಮತ್ತು ಸ್ವೀಕರಿಸುವವನೂ ಇಬ್ಬರೂ ನರಕಕ್ಕೆ ಹೋಗುತ್ತಾರೆ. ಒಬ್ಬನ ಕಾಡು ಸುಟ್ಟು ಹೋದಾಗ ಕಾಡಿನಲ್ಲಿ ಅವನು ಸುಟ್ಟು ಹೋಗಿರುತ್ತಾನೆ. ಕಲ್ಲಿನ ನಾವೆಯನ್ನು ಸಿದ್ದಪಡಿಸಿದರೆ ಹಣ ಮತ್ತು ಶ್ರಮ ಎರಡೂ ವ್ಯರ್ಥವಾಗುತ್ತದೆ. ಅದರಲ್ಲಿ ಕೂತು ಆಚೆ ದಡ ಸೇರುವದು ಸಾಧ್ಯವಿಲ್ಲ. ನಾವೆ ತಾನೂ ಮುಳುಗಿ ಮನುಷ್ಯನನ್ನೂ ಮುಳುಗಿಸುತ್ತದೆ. ಅದೇ ರೀತಿ ದಾನ ನೀಡುವ, ಸ್ವೀಕರಿಸುವವರ ಸ್ಥಿತಿ ‘

ಧಾರ್ಮಿಕ ವ್ಯವಸ್ಥೆಯ ಶುದ್ಧೀಕರಣದ ದೃಷ್ಟಿಯಿಂದ ತುಕಾರಾಮನ ಈ ವಿಚಾರ ಅತ್ಯಂತ ಮಹತ್ವದ್ದು. ನಮ್ಮ ಸಮಾಜದಲ್ಲಿ ದಾನವು ಪುಣ್ಯಪ್ರಾಪ್ತಿಯ, ಧರ್ಮದ ಒಂದು ಉತ್ತಮ ಸಾಧನವೆಂದು ಸ್ವೀಕರಿಸಲಾಗಿದೆ. ‘ದಾನಧರ್ಮ’ವೆಂಬ ಶಬ್ದವಂತೂ ತುಂಬಾ ಪ್ರಚಲಿತವಾದುದು. ಇದರಿಂದ ಧರ್ಮಕ್ಷೇತ್ರದಲ್ಲಿಯ ದಾನದ ಮಹತ್ವ ಸ್ಪಷ್ಟವಾಗುತ್ತದೆ. ವಿಶೇಷವಾಗಿ ಬ್ರಾಹ್ಮಣನಿಗೆ ದಾನನೀಡುವದಂತೂ ಅತೀ ದೊಡ್ಡ ಪುಣ್ಯವೆಂದು ಭಾವಿಸಲಾಗಿದೆ. ಈ ಧರ್ಮಶಾಸ್ತ್ರದ ಹಿಂದೆ ಒಂದು ಲೋಭ ಅರ್ಥಶಾಸ್ತ್ರವೂ, ಒಂದು ಸ್ವಾರ್ಥಮನವೂ ಅಡಗಿದೆ. ಈ ಬಗೆಯ ಧರ್ಮದಿಂದ ಬಡವರನ್ನು ವಂಚಿಸುವದು ಸಾಧ್ಯ. ಇದನ್ನು ತುಕಾರಾಮನು ಅರಿತಿದ್ದ. ಧರ್ಮದ ಹೆಸರಿನಲ್ಲಿ ತನ್ನ ಸಂಸಾರಕ್ಕಾಗಿ, ಉದರ ನಿರ್ವಹಣೆಗಾಗಿ, ಸುಖೋಪಭೋಗಕ್ಕಾಗಿ ಧನ ಗಳಿಸುವುದನ್ನು ತುಕಾರಾಮನು ವಿರೋಧಿಸುತ್ತಿದ್ದ ಎಂಬುದನ್ನು ನಾವು ಈಗಾಗಲೇ ಗಮನಿಸಿದ್ದೇವೆ. ಬಡವರಿಗೆ ಒಂದು ದುಡ್ಡು ಖರ್ಚು ಮಾಡದೇ ಧರ್ಮದ ಹಾದಿ ಸಿಗುತ್ತಿರಬೇಕು ಎನ್ನುವದು ಅವನ ಪ್ರತಿಪಾದನೆ. ಆದ್ದರಿಂದ ದೇವರನ್ನು ಪಡೆಯಲು ದಾನ ನೀಡಬೇಕಿಲ್ಲ ಎಂದವನು ಹಲವು ಬಾರಿ ಹೇಳಿದ್ದಾನೆ.

ಹರಕೆ ಎಂದರೆ ಪರೀಷದ ಬದಲಿಗೆ ಸಿಗುವ ಕಲ್ಲು

ಹರಕೆಯ ಬಗೆಗೆ ತುಕಾರಾಮನು ಹೀಗೆ ಅನ್ನುತ್ತಾನೆ : ‘ಒಬ್ಬ ಹೆಂಗಸು ತನ್ನ ಗಂಡ ಮರಳಿ ಬರಲೆಂದು ಹರಕೆ ಹೊರುತ್ತಾಳೆ. ಲೋಭಕ್ಕಾಗಿ ಹರಕೆಯ ವ್ರತ ಕೈಕೊಳ್ಳುತ್ತಾಳೆ. ಅವಳಿಗೆ ಪುಣ್ಯ ಹೇಗೆ ಸಿಗುತ್ತದೆ? ಸಂಸಾರ ಬೆಳೆಯಲಿ, ಧನ-ಧಾನ್ಯ ಪ್ರಾಪ್ತಿಯಾಗಲೆಂದು ಹರಕೆ ಬೇಡುವದೆಂದರೆ ಪರೀಷದ ಬದಲಿಗೆ ಕಲ್ಲು ಪಡೆದಂತೆ ಅಥವಾ ಹಣಕೊಟ್ಟು ವಿಷ ಖರೀದಿಸಿದಂತೆ.

ಕೆಲವರು ಜನ ಗೋಣು ಮುರಿಯುತ್ತಾರೆ. ಅವರ ನಿಷ್ಠುರತನಕ್ಕೆ ಸೀಮೆಯಿಲ್ಲ. ಕಲ್ಲಿಗೆ ಸಿಂಧೂರ ಬಳಿದು ಅದನ್ನು ದೇವರೆನ್ನುತ್ತಾರೆ. ಕಲ್ಲು ದೇವರಿಗೆ ಹರಕೆ ಹೊರುತ್ತಾರೆ. ಹರಕೆಯಿಂದ ಮಕ್ಕಳು ಹುಟ್ಟುತ್ತಿದ್ದರೆ, ಗಂಡನಾದರೂ ಏಕೆ ಬೇಕು? ದೇವರೆ, ನನಗೆ ನಿನ್ನ ಬಟ್ಟೆಯೂ ಬೇಡ.’

ಕೊಂಡು-ಕೊಳ್ಳುವ ತತ್ವವನ್ನು ಆಧರಿಸಿದ ಹರಕೆಯನ್ನು ಭಕ್ತಿಯ, ಈಶ್ವರಪ್ರಾಪ್ತಿಯ ಪ್ರಕಾರವಾಗಿ ತುಕಾರಾಮನಿಗೆ ಸ್ವೀಕಾರಾರ್ಹವಿರಲಿಲ್ಲ. ಇದಕ್ಕಿಂತ ತುಕಾರಾಮನು ಎತ್ತಿನ ಮತ್ತೊಂದು ಪ್ರಶ್ನೆಯತ್ತ ಗಮನ ಹರಿಸುವದು ಯೋಗ್ಯ. ಹರಕೆಯಿಂದ ಮಕ್ಕಳಾಗುತ್ತಿದ್ದರೆ, ಮಹಿಳೆಯರು ಲಗ್ನ ಮಾಡಿಕೊಳ್ಳುವ ಅಗತ್ಯವೇನಿದೆ ಎಂದು ಚೇಷ್ಟೆ ಮಾಡಿದ್ದಾನೆ. ಹರಕೆಗೂ ಬಯಕೆಯ ಪ್ರಾಪ್ತಿಗೂ ಯಾವ ಕಾರ್ಯ ಕಾರಣ ಸಂಬಂಧವೂ ಇಲ್ಲ ಎಂಬುದೇ ಅದರ ಅರ್ಥ. ಆಧುನಿಕರು ಕೇಳುವ ವೈಜ್ಞಾನಿಕ ಪ್ರಶ್ನೆಯಂತಿದೆ ಇದು. ಈ ಪ್ರಶ್ನೆಯನ್ನು ವಿಜ್ಞಾನ ಬಳಕೆಗೆ ಬರುವ ಮೊದಲೇ ಕೇಳಿದ್ದು ಮತ್ತೂ ವಿಶೇಷ. ಅಂದರೆ ಅವನಲ್ಲಿರುವ ಪರಿಪಕ್ವ ವಿವೇಕವೇ ಇಂಥ ಪ್ರಶ್ನೆಯನ್ನು ಕೇಳುವದು ಸಾಧ್ಯ.

ಕ್ಷೇತ್ರದಲ್ಲಿರುವದು ಬರೇ ಕಲ್ಲು ನೀರು, ಹಣ ಕೊಟ್ಟರೆ ದೇವರು

ಭೂಮಂಡಲದ ವಿಶಿಷ್ಟ ತಾಣಗಳಲ್ಲಿ ದೇವರ ಸಾನಿಧ್ಯ, ಸಂತರ ವಾಸ್ತವ್ಯ, ಅಲೌಕಿಕ ನದಿಗಳ ಸಂಗಮವಿರುವದರಿಂದ ಅವು ಪವಿತ್ತ ತಾಣಗಳೆನಿಸಿದವು. ಜನ ಅದನ್ನು ತೀರ್ಥಕ್ಷೇತ್ರವೆಂದು ಕರೆದುರ. ಕ್ಷೇತ್ರ ದರುಶನದಿಂದ ಪಾಪಕ್ಷಯ, ಕಲ್ಯಾಣ ಸತ್ಫಲ ಪ್ರಾಪ್ತಿಯಾಗುತ್ತದೆ ಎಂದು ಭಾವನೆಯಿಂದ ಜನರು ತೀರ್ಥಯಾತ್ರೆ ಕೈಕೊಳ್ಳುತ್ತಾರೆ. ಸ್ಥಳ ಕಾಲದ ಹೊಂದಾಣಿಕೆ ಮಾಡಿಕೊಂಡು ತೀರ್ಥಯಾತ್ರೆ ಕೈಕೊಳ್ಳುವ ಒಂದು ಪದ್ಧತಿಯೇ ಈಗ ರೂಢಿಗೊಂಡಿದೆ.

ಔಪಚಾರಿಕತೆ ಪೂರೈಸಲು ಕ್ಷೇತ್ರಯಾತ್ರೆ ಕೈಕೊಳ್ಳುವದರಿಂದ ಯಾವ ಲಾಭವೂ ಇಲ್ಲ. ನಿಜವಾದ ಮಹತ್ವ ಮಾನಸಿಕ ಶುದ್ಧಿಯಲ್ಲಿದೆ ಎಂಬುದು ತುಕಾರಾಮನ ನಿಲುವು. ಮನದಲ್ಲಿ ಆಸೆಯಿಟ್ಟುಕೊಂಡು ತೀರ್ಥಯಾತ್ರೆ ಮಾಡುವದರಿಂದ ಮುಕ್ತಿ ಸಿಗುವುದಿಲ್ಲ ಎಂದವನ ಅಂಬೋಣ. ಅಂತರಂಗವೇ ಶುದ್ಧವಾಗಿರದಿದ್ದರೆ, ಕಾಶಿ ಗಂಗೆಯಿಂದ ಏನು ಲಾಭ? ಎಂದು ಪ್ರಶ್ನಿಸುತ್ತಾನೆ. ತುಕಾರಾಮನು ನೀಡಿದ ಉದಾಹರಣೆ ಮಾರ್ಮಿಕವಾಗಿದೆ : ಕಠಿಣವಾದ ಕಾಳನ್ನು ನೀರಲ್ಲಿ ಹಾಕಿ ಕುದಿಸಿದರೂ ಉಪಯೋಗವಿಲ್ಲ. ಅದು ಕುದಿಯುವದೂ ಇಲ್ಲ, ರುಚಿಕರವೂ ಆಗುವುದಿಲ್ಲ. ಮನಃ ಶುದ್ಧಿಯಿಲ್ಲದ ಮನುಷ್ಯ ತೀರ್ಥಕ್ಷೇತ್ರಕ್ಕೆ ಹೋದರೂ, ಏನೂ ಬದಲಾವಣೆಯಾಗುವದಿಲ್ಲ. ನೀನು ತೀರ್ಥಕ್ಷೇತ್ರಕ್ಕೆ ಹೋಗಿ ಏನು ಮಾಡಿದೆ? ಎಂದು ತುಕಾರಾಮನು ಒಂದು ಅಭಂಗದಲ್ಲಿ ಕೇಳಿದ್ದಾನೆ. ನೀನು ಕೇವಲ ದೇಹದ ತೊಗಲು ತೊಳೆದೆ ಎಂದು ಉತ್ತರವನ್ನು ತಾನೇ ನೀಡಿದ್ದಾನೆ. ವೃಂದಾವನದ ಕಹಿ ಫಲವನ್ನು ಸಕ್ಕರೆಯಲ್ಲಿ ಕರಗಿಸಿದರೂ ಅದರ ಕಹಿತನ ಹೋಗುವದಿಲ್ಲ. ಮನುಷ್ಯನ ಸ್ಥಿತಿಯೂ ಹಾಗೆ. ಎಲ್ಲಿವರೆಗೆ ಮನದಲ್ಲಿ ಶಾಂತಿ, ಕ್ಷಮೆ, ದಯೆ ನೆಲೆಸುವದಿಲ್ಲವೋ, ಅಲ್ಲಿವರೆಗೆ ನಾವು ತೀರ್ಥಯಾತ್ರೆಗೆ ಹೋಗಿ ಬಂದೆವು ಎಂದು ಅಭಿಮಾನದಿಂದ ಬೀಗುವದು ಸರಿಯಲ್ಲ ಎಂಬ ಎಚ್ಚರಿಕೆಯನ್ನು ನೀಡಿದ್ದಾನೆ. ತೀರ್ಥಕ್ಷೇತ್ರಕ್ಕೆ ಹೋಗಿಯೂ ಅಂತಃಕರಣ ಶುದ್ಧವಾಗಿಲ್ಲ. ಆದರೆ ಜನರೆದುರಿಗೆ ಮಾತ್ರ ತೀರ್ಥಯಾತ್ರೆಗೆ ಹೋಗಿ ಬಂದಿರುವದಾಗಿ ಹೇಳುವ ಅವಕಾಶ ಸಿಕ್ಕಿತು-ಎಂದವನು ಹೇಳುತ್ತಾನೆ. ಕೆಲವರಂತೂ ತಾವು ತೀರ್ಥಯಾತ್ರೆ ಮಾಡಿ ಬಂದಿದ್ದೇವೆ ಎಂದು ಅಹಂಕಾರದಿಂದ ಹೂಂಕರಿಸುತ್ತಾರೆ, ಗುರುಗುಡುತ್ತಾರೆ, ಹುಸಿ ಅಭಿಮಾನ ಬೆಳೆಸಿಕೊಳ್ಳುತ್ತರೆ ಎಂದು ಮತ್ತೂ ಒಂದು ಆಭಂಗದಲ್ಲಿ ಹೇಳಿದೆ.

ಗಂಗೆಯಲ್ಲಿ ಮುಳುಗಿ ಸತ್ತರೆ ಅಧೋಗತಿಯೇ ಪ್ರಾಪ್ತಿ

ತುಕಾರಾಮನು ಕಾಶಿ ತೀರ್ಥಕ್ಷೇತ್ರದ ಬಗೆಗೆ ಸಾಕಷ್ಟು ಅನಾಸ್ಥೆಯನ್ನು ತೋರಿಸಿದ್ದಾನೆ. ಅಂಥ ಕೆಲವು ವಿಚಾರ ಹೀಗದೆ – ‘ಭೀಮೆಯ ತೀರದಲ್ಲಿರುವ ವಿಠ್ಠಲನ ಹತ್ತಿರ ಖಂಡಿತಕ್ಕೂ ಕಾಶಿಯಿದೆ. ವಿಷ್ಣುಪಾದ, ಗಯಾ, ರಾಮಧಾಮ, ಕಾಶಿ- ಈ ಎಲ್ಲ ತೀರ್ಥ ಕ್ಷೇತ್ರಗಳು ವಿಠ್ಠಲನ ಪಾದದ ಬಳಿಯಲ್ಲಿವೆ. ಪ್ರಯಾಗ, ಕಾಶಿಯಂತಹ ಯಾವ ತೀರ್ಥ ಕ್ಷೇತ್ರದ ಹೆಸರು ಹೇಳಿದರೂ, ಅವನ ನಾಮಕ್ಕೆ ಸರಿಸಮವಾಗುವದಿಲ್ಲ. ನಾಮದ ಮಹಿಮೆ ಎಂಥದ್ದೆಂದರೆ, ಅದರ ಸ್ಮರಣೆ ಮಾಡಿದವನ ಬಳಿಯಲ್ಲಿ ಕಾಶಿಯಿರುತ್ತದೆ. ಯಾರು ತಾಯ್ತಂದೆಯನ್ನು ಕಾಶಿಯೆಂದು ಭಾವಿಸುತ್ತಾನೋ, ಅವನು ಕಾಶಿಗೆ ಹೋಗುವ ಅಗತ್ಯವಿಲ್ಲ. ಕಾಶಿಗೆ ಐದು ಯಾತ್ರೆಯ ಪಂಢರಿಯ ಒಂದು ಯಾತ್ರೆಗೆ ಸಮ. ಕಾಶಿಯಲ್ಲಿ ದೇಹವನ್ನು ಅವಮಾನಗೊಳಿಸಲಾಗುತ್ತದೆ.

ಯಾರಲ್ಲಿಯ ಅಹಂಕಾರ ಮತ್ತು ಆಸೆಯು ಸಂಪೂರ್ಣ ನಾಶಗೊಂಡಿದೆಯೋ ; ಯಾರಲ್ಲಿ ನಿಂದೆ, ಮತ್ತು ಕಪಟತನ, ದೇಹದ ಆಸಕ್ತಿಯು ಅಳಿದು ಹೋಗಿ ಸ್ಪಟಿಕದಂತೆ ನಿರ್ಮಲಗೊಂಡಿದ್ದಾನೋ, ಅವನು ಮೋಕ್ಷದ ತೀರ್ಥಕ್ಷೇತ್ರವೆಂದುಕೊಂಡ ವಾರಣಾಸಿಗೆ ಹೋಗುವ ಅಗತ್ಯವಿಲ್ಲ. ಎಲ್ಲ ಜನರು ಅವನ ಬಳಿಗೆ ಬರುತ್ತಾರೆ. ಅವನು ತೀರ್ಥಕ್ಷೇತ್ರಗಳಿಗೂ ತೀರ್ಥವೆನಿಸಿಕೊಂಡ ಅವನ ದರುಶನದಿಂದ ಮೋಕ್ಷ ಪ್ರಾಪ್ತವಾಗುತ್ತದೆ. ಒಬ್ಬ ಕೊಲೆಗಡುಕ ಗಂಗೆಯಲ್ಲಿ ಮುಳುಗಿ ಜೀವ ಕಳಕೊಂಡರೆ ಅದು ಪಾಪವೆನಿಸುತ್ತದೆ. ಆ ಕೊಲೆಗಡುಕ ಸಿಟ್ಟಿನ ಭರದಲ್ಲಿ ಗಂಗೆಯಲ್ಲಿ ಜೀವ ನೀಡಿದರೂ ದೇವರಿಗೆ ಅವನ ಬಗೆಗೆ ಕರುಣೆ ಬರುವುದಿಲ್ಲ. ಅವನಿಗೆ ಪರಲೋಕದಲ್ಲಿ ಮುಕ್ತಿ ಸಿಗುವುದಿಲ್ಲ. ಅವನಿಗೆ ಆಧೋಗಿಯು ತಪ್ಪುವುದಿಲ್ಲ.