ಸಾಧನೆಯ ಪ್ರರಿಶ್ರಮವಿಲ್ಲ

ಪ್ರತಿಯೊಂದು ಸಾಧನೆಯ ಬಗೆಗೆ ಅವನು ತಾಳಿದ ನಿಲುವು ಒಂದೇ. ತುಕಾರಾಮ ಅನ್ನುತ್ತಾನೆ: ವೈರತ್ವವನ್ನು ತೊರೆಯುವದು ಎಲ್ಲ ಸಾಧನೆಯ ಮೂಲ. ಉಳಿದದ್ದೆಲ್ಲ ವ್ಯರ್ಥ. ಸೋಗು ಸಂಪಾದನೆಯಿಂದ ಉಪಯೋಗವಿಲ್ಲ. ಕೊನೆಗೆ ಶುದ್ಧ ಅಶುದ್ಧ ಒರೆಗಲ್ಲಿಗೆ ಹಚ್ಚಿ ಪರೀಕ್ಷಿಸಲಾಗುತ್ತದೆ. ಭೂತದಯೆ ಎಲ್ಲಕ್ಕಿಂತ ಶ್ರೇಷ್ಠಸಾಧನೆ, ಹೀಗೆ ಮಾಡಿದಾಗಲೇ ನಾರಾಯಣ ಅಂಗೀಕರಿಸುತ್ತಾನೆ. ಅದರ ಹೊರತು ಉಳಿದ ಬಡಬಡಿಸುವಿಕೆ ಎಂದರೆ ಕೇವಲ ದಣಿವು. ಚಿತ್ತ ನಿರ್ಮಲವಾಗಿದ್ದರೆ, ಎಲ್ಲ ಸಾಧನೆ ಮಾಡಿದಂತೆ. ಇಷ್ಟಾಗಿಯೂ ಸಾಧನೆ ಮಾಡಲೇಬೇಕೆಂದಿದ್ದರೆ ಪರದ್ರವ್ಯ, ಪರನಾರಿಯ ಮೈಲಿಗೆಯನ್ನು ಪಾಲಿಸಿರಿ

ಪರಲೋಕ ಎಂಬುದು ಬೇರೆಯಲ್ಲ

ವಿಠ್ಠಲನ ಭಕ್ತರು ಇಹಲೋಕದ ಆಚೆಗಿರುವ ಪರಲೋಕದ ಸ್ವರ್ಗ, ವೈಕುಂಠ ಅಥವಾ ಇನ್ನಾವುದೇ ಅಲೌಕಿಕ ತಾಣವನ್ನು ಬಯಸುವದಿಲ್ಲ. ಭಕ್ತರ ಮನದಲ್ಲಿ ಪರಲೋಕ ಎಂಬುದಿಲ್ಲ. ನನಗೆ ವೈಕುಂಠ ಪಡೆಯಬೇಕೆಂಬ ಇಚ್ಛೆಯಿಲ್ಲ. ಭೂಮಿಯಲ್ಲಿ ಸಿಗುವ ಮೊಸರನ್ನವು ವೈಕುಂಠದಲ್ಲಿ ಸಿಗುವದಿಲ್ಲ. ಬದಲಿಗೆ ಬ್ರಹ್ಮದೇವನಂತವರೂ ಬಯಸುವಂತಹ ಸಂತೋಷ ಭೂಮಿಯಲ್ಲಿ ಸಿಗುತ್ತದೆ. ನಾವು ಸ್ವರ್ಗಸುಖವನ್ನು ಮೆಟ್ಟಿಲನ್ನಾಗಿ ಬಳಸುತ್ತೇವೆ-ಎಂಬ ತುಕಾರಾಮನ ಮಾತಿನಲ್ಲಿ ಸ್ವರ್ಗಸುಖದ ಬಗೆಗೆ ತುಚ್ಛತೆಯು ವ್ಯಕ್ತವಾಗುತ್ತದೆ. ತುಕಾರಾಮನಿಗೆ೩ ಸ್ವರ್ಗದ ಪ್ರಾಪ್ತಿಯ ಕಿಂಚಿತ್ ಆಸೆಯೂ ಇದ್ದಂತಿಲ್ಲ. ಒಂದು ಅಭಂಗದಲ್ಲಿ ತುಕಾರಾಮ ಹೇಳುವದು ಹೀಗೆ: ನಾನು ಯಾರ ಬಳಿ ಏನು ಬೇಡಲಿ? ಯಾರ ಬಳಿಗೆ ಬೇಡಬೇಕೋ ಅವನೇ ನನ್ನ ಹತ್ತಿರವಿದ್ದಾನೆ. ಇಂದ್ರನ ಪದವಿ ಬೇಡಬೇಕೆಂದರೆ ಅದು ಶಾಶ್ವತವಲ್ಲ. ಸ್ವರ್ಗದ ಭೋಗ ಬೇಡ ಬೇಕೆಂದರೆ, ಪುಣ್ಯ ಮುಗಿದ ನಂತರ ಮತ್ತೆ ಅಲ್ಲಿಗೆ ಬರಬೇಕು.

ಧನ್ಯ ಧನ್ಯ ಮರ್ತ್ಯ ಲೋಕ

ತುಕಾರಾಮನು ಒಂದೆಡೆ ಸ್ವರ್ಗದಂತಹ ಪಾರಲೌಕಿಕ ಪರಿಕಲ್ಪನೆಯನ್ನು ಬದಿಗೆ ಸರಿಸಿದರೆ ಮತ್ತೊಂದೆ ಇಹಲೋಕದ ಕುರಿತು ಗೌರವ ವ್ಯಕ್ತಪಡಿಸಿದ್ದಾನೆ. ಗುಣಗಾನ ಮಾಡಿದ್ದಾನೆ. ಬ್ರಹ್ಮದೇವನಂಥವರಿಗೂ ಮರ್ತ್ಯಲೋಕ ಧನ್ಯ ಧನ್ಯವೆನಿಸುವಷ್ಟು ಸುಖವು ಭೂತಲದಲ್ಲಿದೆ-ಎಂದವನು ಹಲವು ಸಲ ಹೇಳಿದ್ದಾನೆ. ಪರಲೋಕದಲ್ಲಿ ಲಭಿಸುವ ಸುಖವು, ವಿಠ್ಠಲನ ಕೃಪೆಯಿಂದ ನಮಗೆ ಇಹಲೋಕದಲ್ಲೇ ದೊರಕಿದೆ ಎಂದು ತುಕಾರಾಮ ಹೇಳಿದ್ದಾನೆ. ಹಗಲು-ರಾತ್ರಿ ಬೆಳಗುವ ಜ್ಯೋತಿಯು ನಮಗೆ ಲಭಿಸಿದ್ದರಿಂದ, ಆನಂದಲಹರಿಯ ಗತಿಯ ಅವರ್ಣನೀಯ ಆನಂದ ಸಿಗುತ್ತಿರುವದರಿಂದ ನಮ್ಮ ದೃಷ್ಟಿಯಲ್ಲಿ ಇಹಲೋಕದಲ್ಲೇ ಪರಲೋಕ ನಿರ್ಮಾಣಗೊಂಡಿದೆ-ಎಂಬ ತಮ್ಮ ಶ್ರೇಷ್ಠ ಅನುಭವವನ್ನು ಅವನು ಮಂಡಿಸಿದ್ದಾನೆ. ನಾವು ವೈಕುಂಠದ ಫಲವನ್ನು ಎಲ್ಲೇ ಭೋಗಿಸುತ್ತೇವೆ ಎಂದು ಹೇಳಿದ್ದಾನೆ. ನಾವು ಮರ್ತ್ಯಲೋಕದಲ್ಲೇ ಸುಖಿಯಾಗಿದ್ದೇವೆ ಎಂಬ ಸಮಾಧಾನ ಮತ್ತು ತೃಪ್ತಿಯ ಭಾವನೆಯನ್ನು ವ್ಯಕ್ತಪಡಿಸಿದ್ದಾನೆ.

ಮನೆಗೇ ತಂದ ವೈಕುಂಠ

ಇಹಲೋಕದಲ್ಲೇ ಪರಲೋಕವನ್ನು ಅನುಭವಿಸುವದು ಹೇಗೆ ಎಂಬುದಕ್ಕೆ ಒಂದು ಮಹತ್ವದ ಉದಾಹರಣೆ ನೀಡಿದ್ದಾನೆ. ಸಂತರ ಸಂಗವೇ ಸ್ವರ್ಗ, ಅವರ ಸಹವಾಸದ ಬಗೆಗೆ ಉದಾಸೀನ ಹೊಂದುವದೇ ನರಕ ಎಂದೆನ್ನುತ್ತಾನೆ. ಸಂತನೆಂದರೆ ಸನ್ಯಾಸಿಯ ಸೋಗು ಹಾಕುವವನಾಗಿರದೆ, ದೀನ ದಲಿತರ ಬಗೆಗೆ ಅನುಕಂಪೆಯುಳ್ಳ ಮನುಷ್ಯನಾಗಿದ್ದಾನೆ. ಈ ಸಂತತನದ ಬಗೆಗಿನ ಅವನ ನಿಲುವನ್ನು ಒಪ್ಪಿಕೊಂಡೇ ಅವನ ಮಾತನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ. ಪಂಢರಪುರ ಅಥವಾ ಭೀಮಾನದಿ ತೀರವೇ ಭೂತಲದ ವೈಕುಂಠವಾಗಿದೆ- ಎಂದು ಆಗಾಗ ಹೇಳುತ್ತಾನೆ ಪಂಢರಪುರದಲ್ಲಿ ಮೋಕ್ಷಸಿದ್ಧಿಯು ದೀನ ದಾಸಗೊಂಡು ಮನೆ-ಮನೆ ಅಲೆದಾಡುತ್ತದೆ. ಬ್ರಹ್ಮ ಪಂಢರಿಯಲ್ಲೇ ನೆಲೆಸಿದ್ದಾನೆ. ಯಾರು ಪಂಢರಪುರವನ್ನು ಈ ಬಗೆಯಿಂದ ಗಮನಿಸುವದಿಲ್ಲವೋ ಅಂಥವನು ಪರಲೋಕದ ವೈಕುಂಠವನ್ನು ಬಣ್ಣಿಸುತ್ತಾನೆ. ಪಂಢರಪುರವು ಭೂತಲದ ವೈಕುಂಠ-ಎಂದು ಒತ್ತಿ ಹೇಳುತ್ತಿದ್ದರೂ ಆ ವೈಕುಂಠ ಪ್ರಾಪ್ತಿಗಾಗಿ ಪಂಢರಪುರಕ್ಕೆ ಹೋಗಲೇಬೇಕೆಂಬ ಹಠ ಅವನ ಮನದಲ್ಲಿ ಖಂಡಿತವಿಲ್ಲ. ಏಕೆಂದರೆ, ವೈಕುಂಠವೇ ನನ್ನ ಮನೆಯಲ್ಲಿ ತಂದು ವೈಷ್ಣವರ ಪೇಟೆಯನ್ನು ನೆಲೆಸುವಂತೆ ಮಾಡಿರುವದಾಗಿ ಹೇಳಿಕೊಂಡಿದ್ದಾನೆ.

ಮೋಕ್ಷಪದವನು ಒಲ್ಲೆ

ನಮ್ಮಲ್ಲಿಯ ಪುರುಷಾರ್ಥ ಸಂಕಲ್ಪನೆಯಂತೆ ಮೋಕ್ಷವನ್ನು ಪರಮ ಪುರುಷಾರ್ಥವೆಂದು ಪರಿಗಣಿಸಲಾಗಿದೆ. ಭಾರತೀಯ ಮನದ ಮೇಲೆ ಮೋಕ್ಷ ಸಂಕಲ್ಪನೆಯ ಅತಿ ದೊಡ್ಡ ಹೊರೆಯಿದೆ. ಅದರ ಬದಲು ತುಕಾರಾಮನು ಮಾತ್ರ ತಾನು ಮೋಕ್ಷವನ್ನು ಒಲ್ಲೆ-ಎಂದು ಅರಿತುಕೊಳ್ಳಬೇಕಾಗಿದೆ. ತನಗೆ ಗರ್ಭವಾಸದ ಅಂದರೆ ಜನನ-ಮರಣದ ಭೀತಿ ಎಳ್ಳಷ್ಟು ಇಲ್ಲ ಎಂಬ ತುಕಾರಾಮನ ನಿಲುವನ್ನು ನಾವು ಗಮನಿಸಲಿದ್ದೇವೆ. ವಿಠ್ಠಲನ ಭಕ್ತಿ ಮತ್ತು ಅವನ ನಾಮಸ್ಮರಣೆ ಮತ್ತು ಸಂತರ ಸಂಗ ಲಭಿಸದಿದ್ದರೆ ತಾನು ಮತ್ತೆ ಜನಿಸಲು ಇಲ್ಲವೇ ಸಂಸಾರ ನಡೆಸಲು ಸದಾ ಸಿದ್ಧ-ಎಂದು ತುಕಾರಾಮ ಮೇಲಿಂದ ಮೇಲೆ ಹೇಳುತ್ತಾನೆ. ಮಾನವ ಜೀವನದ ವೈದಿಕ ಚಿಂತನೆಯು ಮೋಕ್ಷದ ಸುತ್ತಲೂ ಕುರುಡತನದಿಂದ ಗಿರಕಿ ಹೊಡೆಯುತ್ತಿರುವಾಗ ತುಕಾರಾಮನು ಆ ಮೋಕ್ಷವನ್ನು ಅವಹೇಳನ ಮಾಡಿರುವದೇನು ಸಾಮಾನ್ಯ ಸಂಗತಿಯಲ್ಲ. ಅವನ ಈ ನಿಲುವು ಒಂದೆಡೆ ಮೋಕ್ಷವಾದಿ ಸಂಪ್ರದಾಯವಾದಿಗಳಿಗೆ ಆಹ್ವಾನ ನೀಡುವಂತಹದಾಗಿದ್ದರೆ, ಮತ್ತೊಂದೆಡೆ ಭಾರತೀಯ ಸಂಸ್ಕೃತಿಗೆ ಒಂದು ಜೀವನವಾದಿ ಆಶಯ ನೀಡುವಂತಹದು.

ತನಗೆ ವಿಠ್ಠಲ ಭಕ್ತಿಯಲ್ಲೇ ಆಂತರಿಕ ಸುಖ ಸಿಗುತ್ತಿರಬೇಕಾದರೆ, ತನ್ನ ಮನದಲ್ಲಿ ಮೋಕ್ಷದ ಕಿಂಚಿತ್ತೂ ಲಾಲಸೆಯಿಲ್ಲ – ಎನ್ನುವುದು ತುಕಾರಾಮನ ಅಂಬೋಣ. ಈ ನಿಲುವನ್ನು ಸ್ಪಷ್ಟಪಡಿಸುವಾಗ ಅವನು ನಾನಾ ಬಗೆಯ ಯುಕ್ತಿವಾದ ಮಾಡಿದ್ದಾನೆ. ನಾನಾ ರೀತಿಯಲ್ಲಿ ಭಾಷೆಯನ್ನು ಅರಳಿಸಿದ್ದಾನೆ.

ಮುಕ್ತಿಯೇ ಶ್ರೇಷ್ಠ ಎನ್ನುವವರು ಅನ್ನಲಿ, ತನಗೆ ಮಾತ್ರ ಭಕ್ತಿಯದೇ ಮೋಹ ಎಂದು ಅನ್ನುತ್ತಾನೆ. ಅಷ್ಟೇ ಅಲ್ಲ, ಭಕ್ತಿಯ ಸುಖ ತೊರೆದು ಮುಕ್ತಿಯ ಬೇಡಿಕೆ ಸಲ್ಲಿಸುವವನು ಕೃಪಣ. ಯಾವ ಅಭಾಗೀಯ ಮೋಕ್ಷವನ್ನು ಅಪೇಕ್ಷಿಸುತ್ತಾನೆ, ಮೋಕ್ಷ ಏಕೆ ಬೇಕು- ಎಂಬ ಪ್ರಶ್ನೆಯನ್ನು ಅವನು ಕೇಳುತ್ತಾನೆ. ತನಗೆ ಮೋಕ್ಷದ ಬಯಕೆಯಿಲ್ಲ. ನನ್ನ ಮನಕ್ಕೆ ಒಪ್ಪುವದೂ ಇಲ್ಲ. ಭಕ್ತಿಯ ಉತ್ಕರ್ಷವನ್ನು ಸಾಧಿಸಿದ್ಧರಿಂದ ತನಗೆ ಮೋಕ್ಷದ ಹುಚ್ಚೂಯಿಲ್ಲ – ಎಂದವನು ಹಲವು ಬಾರಿ ಸೂಚಿಸಿದ್ದಾನೆ. ಅಷ್ಟೇ ಅಲ್ಲ ತನಗೆ ಮೋಕ್ಷದ ಬಗೆಗೆ ಬೇಸರ ಎಂದೂ ಸೇರಿಸಿದ್ದಾನೆ. ಮೋಕ್ಷ ಸುಖವಲ್ಲ ದುಃಖ, ಮೋಕ್ಷ ದುಃಖವಷ್ಟೇ ಅಲ್ಲ ಸಂಕಟವೂ ಹೌದು, ತಾನು ಫಂಡರಿಯ ಹಾದಿ ಹಿಡಿದರೆ ತನಗೆ ಸಂಕಟದ ಭಯವಿಲ್ಲ ಎಂದೂ ಅನ್ನುತ್ತಾನೆ.

ದೇವರು ತನಗೆ ಮೋಕ್ಷ ದಯಪಾಲಿಸಿದರೂ ನನಗೆ ಬೇಡ ಎಂದು ದೃಢ ನಿಶ್ಚಯದಿಂದ ತುಕಾರಾಮ ಹೇಳುತ್ತಾನೆ. ಮುಕ್ತಿಯ ಸಂಪತ್ತು ನಿನ್ನ ಬಳಿಯೇ ಇರಲಿ, ನಾನು ಮುಕ್ತಿ ಬೇಡುತ್ತೇನೆಂಬ ಭಯಬೇಡ- ಎಂದು ದೇವರಿಗೆ ಹೇಳುತ್ತಾನೆ. ಅಷ್ಟೇ ಅಲ್ಲ ನನಗೆ ಮುಕ್ತಿ ಕೊಡಲೂ ಬೇಡಿ, ನಾನು ಮೋಕ್ಷ ಪದವಿಯನ್ನು ತುಚ್ಛವೆಂದು ಪರಿಗಣಿಸಿದ್ದೇನೆ, ನಾನು ಮೋಕ್ಷ ಪದವಿಯನ್ನು ಒದೆಯುತ್ತೇನೆ. ನಾನು ಮೋಕ್ಷದ ತಲೆಯ ಮೇಲೆ ನಿಂತಿದ್ದೇನೆ ಎಂಬ ಭಾವನೆಯನ್ನು ತುಕಾರಾಮ ವ್ಯಕ್ತ ಮಾಡಿದ್ದಾನೆ. ವಿಠ್ಠಲನ ನಾಮಸ್ಮರಣೆ, ಸಂತರ ಸಂಗದಿಂದ ನನಗೆ ಮೋಕ್ಷ ಲಭಿಸುತ್ತದೆ. ನಾಲ್ಕು ರೀತಿಯಲ್ಲಿ ಮುಕ್ತಿ ದೊರೆಯುತ್ತದೆ. ಮುಕ್ತಿಯಂತೂ ನನ್ನ ಗಂಟಿನಲ್ಲೇ ಇದೇ ಎನ್ನುವುದು ತುಕಾರಾಮನ ದೃಢ ನಂಬುಗೆ.

ರಿದ್ಧಿಸಿದ್ಧಿಯ ನಿರಾಕರಣೆ

ತುಕಾರಾಮನು ಮೋಕ್ಷದಂತೆ ರಿದ್ಧಿಸಿದ್ಧಿಯರನ್ನೂ ನಿರಾಕರಿಸಿದ್ದಾನೆ. ರಿದ್ಧಿ-ಸಿದ್ಧಿ ವಿಠ್ಠಲನ ದಾಸಿಯರು. ಅವರಿಗೆ ಏನಿ ಕೊರತೆಯಿದೆ? ರಿದ್ಧಿ-ಸಿದ್ಧಿಯನ್ನು ಆಮಂತ್ರಿಸದಿದ್ದರೂ ಅವರು ಭಕ್ತರನ್ನು ಹುಡುಕುತ್ತ ಬರುತ್ತಾರೆ. ಅವರ ಮನೆಯ ಸೇವೆ ಮಾಡುತ್ತಾರೆ. ಕೈ ಜೋಡಿಸಿ ಬಾಗಿಲಲ್ಲಿ ನಿಲ್ಲುತ್ತಾರೆ. ಅಷ್ಟ ಮಹಾಸಿದ್ಧಿ ಭಕ್ತರ ಬಾಗಿಲಿನಿಂದ ಹೊರದೂಡಿದರೂ ಅವರು ಹೋಗುವುದಿಲ್ಲ. ಪಂಢರಿಯಲ್ಲಿ ರಿದ್ಧಿ ಸಿದ್ಧಿಯರು ಉದ್ದಂಡ ಹಾಕುತ್ತಾರೆ.

ದೇವರು ನೀಡಿದರೂ ನನಗೆ ರಿದ್ಧಿ-ಸಿದ್ಧಿಯರು ಬೇಕಾಗಿಲ್ಲ. ನಾನು ಸಿದ್ಧಿಯ ದಾಸನಲ್ಲ. ಹೇ ದೇವರೆ, ನೀನು ಕೆಲವರಿಗೆ ರಿದ್ಧಿ ಸಿದ್ಧಿಯರನ್ನು ನೀಡಿ ಅವರನ್ನು ಮುಖ್ಯಧ್ಯೇಯದಿಂದ ದೂರ ಸರಿಸುತ್ತಿದ್ದಿ. ಆದರೆ ನಾನು ಮತ್ರ ಅಂಥ ಭಿಕ್ಷುಕನಲ್ಲ. ಕಲ್ಪತರು ಬಯಸಿದ ಫಲ ನೀಡುತ್ತದೆ. ಆದರೆ ಈ ಬಗೆಯ ಸಿದ್ಧಿಯನ್ನು ಅಭಾಗಿಗಳು, ದುರ್ಬಲರು ಮಾತ್ರ ಬಯಸುತ್ತಾರೆ.

ಪವಾಡ ಗೊತ್ತಿಲ್ಲ

ಸನ್ಯಾಸಿಗಳೆಂದು ಕರೆದು ಕೊಳ್ಳುವ ಹಲವು ಜನರು ಮರುಳುಗೊಳಿಸಲು ತಮ್ಮಲ್ಲಿ ಆಂಥ ಸಿದ್ಧಿಯಿದ್ದು, ಅದರ ಬಲದಿಂದ ತಾವು ಪವಾಡ ಮಾಡಬಲ್ಲೆವು ಎಂದು ನರನ್ನು ವಂಚಿಸುತ್ತಾರೆ. ಇದು ಬಹಿರಂಗ ವಂಚನೆ. ತುಕಾರಾಮನು ಈ ಮಾರ್ಗವನ್ನು ಎಂದೂ ಅವಲಂಬಿಸಲಿಲ್ಲ. ತನ್ನ ನಿಲುವನ್ನು ತುಕಾರಾಮನು ಒಂದು ಅಭಂಗದಲ್ಲಿ ಈ ರೀತಿ ಮಂಡಿಸಿದ್ದಾನೆ: ಜನರನ್ನು ಮರಳುಗೊಳಿಸುವ ಯಾವ ಕಪಟತನವೂ ನನಗೆ ಗೊತ್ತಿಲ್ಲ. ನನಗೆ ವನಸ್ಪತಿ ಬೇರೂ ಗೊತ್ತಿಲ್ಲ, ಕಣ್ಕಟ್ಟುವ ಚಮತ್ಕಾರವೂ ಗೊತ್ತಿಲ್ಲ, ಗೂಢ ರಹಸ್ಯವನ್ನು ಹೇಳಲು ಯಾವ ಬೇತಾಳವೂ ಪ್ರಸನ್‌ಗೊಂಡಿಲ್ಲ. ನಾನು ಉಧೋ, ಉಧೋ ಎಂದು ಕರ್ಪೂರ ಧೂಪ ಸುಡುವದಿಲ್ಲ, ಅಥವಾ ಅಜ್ಙಾನಿಗಳ ಗುಂಪು ಕಟ್ಟಿ ಮೆರೆಯುವದಿಲ್ಲ. ನಾನು ಆಗಮದಲ್ಲಿಯ ರಹಸ್ಯ ಬಲವನಲ್ಲ ಅಥವಾ ಅಥರ್ವ ವೇದದ ಸ್ತಂಭನ, ಮೋಹನ ಉಚ್ಚಾಟನೆಯ ಕ್ರಿಯೆಯೂ ಅರಿತಿಲ್ಲ.

ತಾನು ಯಾವ ಬಗೆಯ ಚಮತ್ಕಾರ-ಪವಾಡವನ್ನು ಮಾಡುವದಿಲ್ಲೆಂದು, ತುಕಾರಾಮನು ಹೇಳಿಕೊಂಡಿದ್ದರೂ ಸ್ವತಃ ಅಥವಾ ವಿಠ್ಠಲನು ಅವನಿಗಾಗಿ ಹಲವು ಚಮತ್ಕಾರ ಮಾಡಿದ. ದಂತಕಥೆಗಳು ಹುಟ್ಟಿಕೊಂಡಿವೆ ಎಂಬುದೇ ಒಂದು ದುರಂತ. ಈ ಚಮತ್ಕಾರ ಚಾರಿತ್ರಿಕವಾದುದಲ್ಲ-ಎಂಬುದರಲ್ಲಿ ಎರಡು ಮಾತಿಲ್ಲ. ಕೆಲವು ಚಮತ್ಕಾರಗಳ ಮೂಲದಲ್ಲಿ ವಾಸ್ತವ ಘಟನೆಯಿರುವ ಸಾಧ್ಯತೆಯಿದ್ದು ಕಾಲೌಘದಲ್ಲಿ ಈ ಘಟನೆಯ ಮೇಲೆ ಚಮತ್ಕಾರದ ಲೇಪ ಆವರಿಸಿಕೊಂಡಿರಬೇಕು. ಅದೇನೆ ಇದ್ದರೂ, ಈಗಿರುವ ಸ್ವರೂಪದ ಚಮತ್ಕಾರವನ್ನು ತುಕಾರಾಮ ಮಾಡಲಿಲ್ಲ ಎನ್ನುವದು ಸ್ಪಷ್ಟ. ಅವನು ರಿದ್ದಿ-ಸಿದ್ಧಿಯನ್ನು ನಿರಾಕರಿಸಿದ, ತಾನು ಚಮತ್ಕಾರ ಮಾಡುವದಿಲ್ಲೆಂದು ಉದಾಹರಣೆ ಸಹಿತ ಸ್ಪಷ್ಟಪಡಿಸಿದ. ಅಷ್ಟೇ ಅಲ್ಲ ಜನರನ್ನು ಮರಳು ಮಾಡುವದೆಂದರೆ ಒಂದು ಬಗೆಯ ಕಪಟತನ ಎಂದೂ ತಿಳಿಯಪಡಿಸಿದ. ಈಗ ತಾನು ಮಂಡಿಸಿದ ಸಿದ್ಧಾಂತವನ್ನು ಅಳಿಸಿ ಹಾಕಿ, ಚಮತ್ಕಾರ ಮಾಡಿದ ಎನ್ನುವದು ಒಪ್ಪಲು ಸಾಧ್ಯವಿಲ್ಲ, ನುಡಿದಂತೆ ನಡೆಯುವ ವ್ರತವನ್ನು ಅವನು ಜೀವನದಲ್ಲಿ ಅಳವಡಿಸಿಕೊಂಡಿದ್ದ.

ತುಕಾರಾಮ ಚಮತ್ಕಾರ ಮಾಡಲಿಲ್ಲವೆಂದಾಕ್ಷಣ, ಅವನ ವ್ಯಕ್ತಿತ್ವಕ್ಕೆ ಯಾವ ಕುಂದೂ ಬರುವದಿಲ್ಲ. ಬದಲು ಅವನು ಚಮತ್ಕಾರ ಮಾಡಿದ ಎಂಬುದನ್ನು ನಂಬುವದರಿಂದ ಬರುತ್ತದೆ. ತನಗೆ ಚಮತ್ಕಾರ ಗೊತ್ತಿಲ್ಲವೆಂಬ ಮಾತಿಗೆ ಇದು ವಿಸಂಗತವಾದುದು. ಅವನ ಸಂತತನದ ಕಲ್ಪನೆಗೂ ಇದು ಹೊಂದುವಂತಹದಲ್ಲ. ಸಾಲದ ಹೊತ್ತಿಗೆಯನ್ನು ಮುಳುಗಿಸಿದ್ದು, ಜನರಲ್ಲಿ ಸಾಲದ ಹಿಂಸೆಯಿಂದ ಪಾರು ಮಾಡುವದು, ಅವರನ್ನು ಕರ್ಮಕಾಂಡದ ಹಿಡಿತದಿಂದ ಪಾರು ಮಾಡುವದು, ಧೀನ ದಲಿತರ ದುಃಖವನ್ನು ಹೋಗಲಾಡಿಸುವದು. ಇದು ಅವನ ಸಂತತನದ ಕಲ್ಪನೆಯಾಗಿತ್ತು. ಆದರೆ ಕೆಲವು ಅಲೌಕಿಕ ಪವಾಡ ಚಮತ್ಕಾರವನ್ನು ಮಾಡಿ ಜನರನ್ನು ವಂಚಿಸುವದು ಅವನ ದೃಷ್ಟಿಯಲ್ಲಿ ಕಪಟತನ, ಢೋಂಗಿತನವಾಗಿತ್ತು. ಅವನು ವೈದಿಕ ಪರಂಪರೆಯ ಸಕಲ ಕರ್ಮ ಕಾಂಡವನ್ನು ನಿರಾಕರಿಸಿದ್ದನ್ನು ನಾವು ಈ ಹಿಂದೆಯೇ ಗಮನಿಸಿದ್ದೇವೆ. ತುಕಾರಾಮ ಇದನ್ನೆಲ್ಲ ನಂಬುತ್ತಿರಲಿಲ್ಲ. ಯಾರಿಗೆ ತುಕಾರಾಮನನ್ನು ಅರ್ಥ ಮಾಡಿಕೊಳ್ಳುವ, ಉನ್ನತ ಚರಿತ್ರೆಯನ್ನು ಅರಿಯುವ ಶಕ್ತಿಯಿರಲಿಲ್ಲವೊ, ಅಂಥವರು ಅವನ ಚರಿತ್ರೆಯನ್ನು ಚಮತ್ಕಾರದ ಜಂಜಾಟದಲ್ಲಿ ಸಿಕ್ಕಿಸಿದರು. ಅವನನ್ನು ಕುಬ್ಜಗೊಳಿಸಿದರು. ಈ ಬಗೆಯಲ್ಲಿ ಅವನ ಚರಿತ್ರೆಯ ಅಸಲೀ ಆಶಯವೇ ಕಳೆದು ಹೋಯಿತು.

ಗರ್ಭದಲ್ಲಿ ನೆಲೆಸಲು ಸಿದ್ಧ

ಅಜ್ಞಾನ ಮತ್ತು ಪಾಪದಿಂದಾಗಿ ಜೀವು ಜೀವನ್ಮರಣದ ಚಕ್ರದಲ್ಲಿ ಸಿಲುಕುತ್ತದೆ ಎನ್ನುವದು ನಮ್ಮೆಲ್ಲರ ನಂಬುಗೆ. ಹೀಗೆ ಸುತ್ತುವದೇ ಸಂಸಾರವಾಗಿದ್ದು, ಅದು ದುಃಖದಿಂದ ಕೂಡಿದೆ. ಹೀಗಾಗಿ ನಮ್ಮ ಧಾರ್ಮಿಕ ಸಾಹಿತ್ಯದಲ್ಲಿ ಹುಟ್ಟು, ಸಂಸಾರದ ಬಗೆಗೆ ಹೇಸಿಗೆ ಮೂಡಿಸುವ ವರ್ಣನೆ ಬಂದಿದೆ. ವಿಠ್ಠಲನ ಭಕ್ತಿ, ಸಂತರ ಸಂಗ ದೊರಕುವಂತಿದ್ದರೆ, ಜೀವನವನ್ನು ಅಂತಃಕರಣದಿಂದ ಸ್ವಾಗತಿಸುವ ಸಿದ್ಧತೆ ತೋರಿದ್ದಾನೆ. ತನಗೆ ಗರ್ಭವಾಸದ ಭೀತಿಯಿಲ್ಲ, ಅಲ್ಲಿ ನೆಲೆಸಲು ತಾನು ಸಿದ್ಧ, ನಾನು ಜನ್ಮ-ಪುನರ್ಜನ್ಮ-ಪಡೆಯಲೂ ಸಿದ್ಧ ಎಂದು ಹಲವು ಸಲ ಹೇಳಿದ್ದುಂಟು. ಹುಟ್ಟುಸಾವಿನ ಭೀತಿ, ಚಿಂತೆ, ಹೆದರಿಕೆ ತನಗಿಲ್ಲ ಎಂದೂ ನುಡಿದಿದ್ದಾನೆ. ನನ್ನನ್ನು ಹರಿದಾಸರ ದಾಸನನ್ನಾಗಿ ಮಾಡು, ಬೇಕಾದರೆ ಯುಗ ಯುಗಗಳವರೆಗೂ ತಾನು ಗರ್ಭವಾಸ ಪಡೆಯಲು ಸಿದ್ಧ ಎಂದು ನುಡಿದಿದ್ದಾನೆ. (ತುಕಾಮಣೆ ಗರ್ಭವಾಸೀ ಸುಖೇ ಘಾಲಾವೆ ಅಮ್ಹಾ) ಈ ಅಭಂಗವು ಈ ದೃಷ್ಟಿಯಿಂದ ಅತ್ಯಂತ ಮಾರ್ಮಿಕ ಮತ್‌ಉತ ಆಶಯ ಘನದಿಂದ ಕೂಡಿದೆ.

ದೇಹವೇ ದೇಗುಲ

ಗರ್ಭವಾಸವನ್ನು ಸ್ವಾಗತಿಸುವ ಪರಿಣಾಮವೆಂಬಂತೆ ತುಕಾರಾಮನು ಮಾನವ ದೇಹವನ್ನು ಗೌರವಿಸಿದ್ದಾನೆ. ದೇಹವನ್ನು ಧಿಕ್ಕರಿಸುವ ಅಥವಾ ತಿರಸ್ಕರಿಸುವ ಬದಲಿಗೆ ಅದು ಲಭಿಸಿದ್ದರಿಂದ ಸಮಾಧಾನವನ್ನು ವ್ಯಕ್ತಪಡಿಸಿದ್ದಾನೆ. ಈ ದೇಹ ಪ್ರಪ್ತಿಯಾಗಿದ್ದರಿಂದ ಮನುಷ್ಯನೆಂದು ಇಹಲೋಕಕ್ಕೆ ಬರುವಂತಾಯಿತು. ಮಾನವ ದೇಹವನ್ನು ಪಡೆಯಲು ದೇವರೂ ಬಯಸುತ್ತಾನೆ. ಇದು ಪರಲೋಕದ ದೇವತ್ವಕ್ಕಿಂತ ಇಹಲೋಕದ ಮನುಷ್ಯತ್ವ ಶ್ರೇಷ್ಟವೆಂದು ಸಾಬೀತುಪಡಿಸುವ ಮಾತು, ತಾನು ಜನಿಸಿದ್ದು ದುಃಖದ ಸಂಗತಿಯಾಗಿರದೆ, ಧನ್ಯತೆಯ ಘಟನೆಯಾಗಿದೆ – ಎಂದು ತುಕಾರಾಮನಿಗೆ ಅನಿಸುತ್ತದೆ. ಈ ಮಾನವನ ದೇಹದ ಮೇಲೆಯೇ ಸ್ವರ್ಗದ ನಿಶಾನೆಯನ್ನು ಊರುವ ಮಾತು ಬಳಸಿದ್ದಾನೆ. ಮಾನವನ ದೇಹವೇ ದೇಗುಲ, ಭಂಡಾರವಾಗಿದೆ. ತೀರ್ಥವೃತ್ತದ ತವರಾದ ಈ ದೇಹ ಧನ್ಯವೆಂಬ ಪುನರಾವೃತ್ತಿಯ ಮಾತನ್ನು ತುಕಾರಾಮ ಬಳಸುತ್ತಾನೆ. ಈ ದೇಹದ ಆಧಾರದಿಂದ ಅಮೃತದ ಕಡಲಲ್ಲಿ ಮುಳುಗುತ್ತಿರುವಾಗ, ಈ ದೇಹದ ಬಗೆಗೆ ಏಕೆ ಉದಾಸಗೊಳ್ಳಬೇಕು ಎಂಬ ಪ್ರಶ್ನೆ ಕೇಳುತ್ತಾನೆ. ನಾನು ನನ್ನ ದೇಹವನ್ನು ಸಂರಕ್ಷಿಸಿಯೇ ವಿಠ್ಠಲನಿಗೆ ಉದ್ಧಂಡ ಎರಗುತ್ತೇನೆ ಎಂದೂ ಹೇಳುತ್ತಾನೆ. ವಿಠ್ಠಲನ ಪ್ರಾಪ್ತಿಗಾಗಿ ದೇಹವನ್ನು ಅರ್ಪಿಸುವುದು, ಸಾವನ್ನು ಆಹ್ವಾನಿಸುವದು ಅಥವಾ ಆತ್ಮಹತ್ಯೆ ಮಾಡುವದಾಗಲಿ ತುಕಾರಾಮನಿಗೆ ಒಪ್ಪಿಗೆಯಿಲ್ಲ. ದೇಹದ ಅಸ್ತಿತ್ವವನ್ನು ಶಾಶ್ವತವಾಗಿ ಉಳಿಸಿಯೇ, ಸಂಭಾಳಿಸಿಯೇ, ಸಂರಕ್ಷಿಸಿಯೇ ದೇವರನ್ನು ಪಡೆಯಬೇಕು ಎನ್ನುವದು ಅವನ ನಿಲುವು.

ಒಂದೆಡೆ ದೇಹದ ಸೀಮೆಯನ್ನು ಗುರುತಿಸುವ, ಮತ್ತೊಂದೆಡೆ ಅದನ್ನು ಗೌರವಿಸುವ ತುಕಾರಾಮನ ಒಂದು ಅಭಂಗವು ಗಮನಾರ್ಹವಾದುದು. ದೇಹವು ದುಃಖದ ಕಣಜರೋಗದ ಭಾಂಡಾರ, ಅಪವಿತ್ರ ಎಂದು ಒಂದು ಕಡೆ ಹೇಳಿದರೆ, ಮತ್ತೊಂದೆಡೆ ದೇಹವೇ ಶ್ರೇಷ್ಠ, ಉತ್ತಮವೆಂದೂ ಹೇಳುತ್ತಾನೆ. ದೇಹ ಸುಖದ ಆಗರ ಎಂದು ಮಧುರ ಶಬ್ದಗಳಲ್ಲಿ ಬಣ್ಣಿಸಿದ್ದಾನೆ. ದೇಹದ ಸಹಾಯದಿಂದ ಎಲ್ಲವೂ ಸಾಧ್ಯ. ಪರ ಬ್ರಹ್ಮ ಪ್ರಾಪ್ತಿ ಎಂದೂ ಅಂದಿದ್ದಾನೆ. ದೇಹವೂ ಅತ್ಯಂತ ಪರಿಶುದ್ಧವಾದುದು, ಅದು ನಿಧಿಗಳ ನಿಧಿ ಎಂದಿದ್ದಾನೆ. ದೇಹವನ್ನು ಸುಖೋಪಭೋಗದಲ್ಲೂ ಸಿಲುಕಿಸಬಾರದು. ಅದಕ್ಕೆ ದುಃಖವನ್ನು ನೀಡಬಾರದು, ಅದರ ತ್ಯಾಗವನ್ನು ಮಾಡಬಾರದು, ನಾವದನ್ನು ಬಳಸುವದರ ಮೇಲಿಂದ ಅದರ ಒಳಿತು, ಕೆಡಕು ಅವಲಂಬಿಸಿದೆ ಎಂಬುದ ಅವನ ನಿಲುವು. ಅವನ ಈ ನಿಲುವು ಸಮತೋಲದಿಂದ ಕೂಡಿದ್ದು ಎಂಬುದರಲ್ಲಿ ಎರಡು ಮಾತಿಲ್ಲ. ತುಕಾರಾಮನು ದೇಹವನ್ನು ದ್ವೇಷಿಸುತ್ತಿರಲಿಲ್ಲ. ದೇಹವೆಂಬ ಸಾಧನವನ್ನು ವಿವೇಕಪೂರ್ವಕವಾಗಿ ಬಳಸುವ ಮತದವನಾಗಿದ್ದ ಎಂಬುದು ಸ್ಪಷ್ಟ.

ಸಂಸಾರವೆಂದರೆ ಇಷ್ಟ

ಸಂಸಾರದ ಕುರಿತು ತುಕಾರಾಮ ಮಂಡಿಸಿದ ಕೆಲವು ವಿಚಾರಗಳು ಹೀಗಿವೆ: ಹೇ ದೇವರೆ, ನೀನು ನನಗೆ ಸಂಸಾರ ನೀಡು. ನನ್ನ ಮನದಲ್ಲಿ ನಿನ್ನ ಬಗೆಗೆ ಪ್ರೀತಿಯಿದ್ದರೆ ಸಾಕು. ನನಗೆ ಸಂಸಾರದ ಭೀತಿಯಿಲ್ಲ. ಶುದ್ಧ ಭಾವನೆಯಿಂದ ವಿಠ್ಠಲನ ಹೆಸರು ತೆಗೆದುಕೊಂಡರೆ ಸಾಕು. ಗೃಹಸ್ಥಾಶ್ರಮ ತೊರೆಯಬೇಕಿಲ್ಲ, ಬಿಡಬೇಕಿಲ್ಲ. ಸುಖವಾದ ಸಂಸಾರದಲ್ಲಿದ್ದರೆ ಸಾಕು. ಸಂತೋಷದಿಂದ ವಿಠ್ಠಲನ ಹೆಸರು ಜಪಿಸಿದರೆ ಸಾಕು. ಹರಿಯ ಹತ್ತಿರವಿದ್ದಂತಾಗುತ್ತದೆ. ಸುಖದಿಂದ ಸಂಸಾರ ಸಾಗಿಸಿದರೆ ಸಾಕು. ಆದರೆ ಆಷಾಡ, ಕಾರ್ತಿಕ ಏಕಾದಶಿಯ ವಾರ ಮಾತ್ರ ತಪ್ಪಬಾರದು. ಭಕ್ತನು ಸಂಸಾರದ ಬಗೆಗೆ ಉದ್ವೇಗ ಗೊಳ್ಳಬೇಕಾಗಿಲ್ಲ.

ಕ್ಷುದ್ರತನದಿಂದ ಬದುಕುವದು ಏಕೆ? ದೈವದಲ್ಲಿ ಸಂಸಾರ ಬರೆದಾಗ, ಅದಕ್ಕೆ ದಿಟ್ಟತನದಿಂದ ಆಶ್ರಯ ನೀಡಿದರೆ ಸಾಕು. ದುರ್ದೆಸೆಯಾಗದಂತೆ ನೋಡಿಕೊಂಡರೆ ಸಾಕು. ಸಂಸಾರವನ್ನು ಭೋಗಿಸುವಾಗ ಭಕ್ತನಿಗೆ ವಿಠ್ಠಲನ ಬಲ ಸಿಗುತ್ತದೆ. ಭಕ್ತ ಮುಕ್ತನಾಗುವದಿಲ್ಲ ಅವನಿಗೆ ಸಂಸಾರವೆಂದರೆ ಇಷ್ಟ. ದೇವರಿಗೆ ಅವತಾರ, ಭಕ್ತನಿಗೆ ಸಂಸಾರ ಎರಡರ ಬಗೆಗೂ ಯೋಚಿಸಬೇಕಾದ ಅಗತ್ಯವಿದೆ. ಭಕ್ತನಿಗೆ ದೇವರ ಹೆಸರಿನ ಹಬ್ಬ ಸಿಗುತ್ತದೆ. ದೇವರು ಭಕ್ತನ ಮೂಲಕ ಸುಖ ಭೋಗಿಸುತ್ತಾನೆ. ದೇವ ಮತ್ತು ಭಕ್ತರಲ್ಲಿ ವಿಭಿನ್ನ ಭಾವ ಅಡಗಿದೆ.

ಭಿಕ್ಷೆ ಬೇಡುವದು ನಾಚಿಕೆಗೇಡಿನ ಸಂಗತಿ. ಇಂಥ ಬದುಕು ಸುಡಲಿ. ನಾರಾಯಣನು ಇಂಥವರನ್ನು ಸದಾ ಉಪೇಕ್ಷಿಸುತ್ತಾನೆ. ದೀನ ದಲಿತರಿಗಾಗಿ ಜಗತ್ತಿನ ಮೊರೆ ಹೋಗುವದೆಂದರೆ ಅಭಾಗ್ಯತನವೇ ಸರಿ.

ಯೋಗ್ಯ ಮಾರ್ಗದಿಂದ ಧನ ಸಂಗ್ರಹಿಸಬೇಕು, ಅಲಿಪ್ತ, ತಟಸ್ಥ ವೃತ್ತಿಯಿಂದ ಖರ್ಚು ಮಾಡಬೇಕು. ಈ ಮಾರ್ಗ ಹಿಡಿದವನಿಗೆ ಉತ್ತಮ ಗತಿ ಪ್ರಾಪ್ತವಾಗುತ್ತದೆ. ಅವನು ಉತ್ತಮ ಜೀವಯೋನಿಯ ಭೋಗವನ್ನು ಪಡೆಯುತ್ತಾನೆ. ಅವನು ಪರರಿಗೆ ಉಪಕಾರ ಮಾಡುತ್ತಾನೆ. ಪರರನ್ನು ನಿಂದಿಸುವದಿಲ್ಲ. ಅವರೆಲ್ಲ ಪರನಾರಿ ಸೋದರರಾಗಿರುತ್ತಾರೆ. ಅವನು ಭೂತದಯೆ ಉಳ್ಳವನಾಗಿರುತ್ತಾನೆ. ಅವನು ಗೋಪಾಲಕನಾಗಿರುತ್ತಾನೆ. ಕಾಡು ಮೇಡಿನಲ್ಲಿ ತೃಷೆಯಿಂದ ಬಳಲುವವರಿಗೆ ನೀರುಣಿಸುತ್ತಾನೆ. ಅವನು ಶಾಂತಿರೂಪಿಯಾಗಿರುತ್ತಾನೆ. ಯಾರಿಗೂ ಕೆಡಕು ಉಂಟು ಮಾಡುವದಿಲ್ಲ. ಹಿರಿಯರಿಗೆ ಬೆಲೆ ನೀಡುತ್ತಾನೆ. ಇದುವೇ ಗೃಹಸ್ಥಾಶ್ರಮದ ಫಲ, ಇದೇ ಅವನ ಪರಮಪದ, ಸರ್ವೋಚ್ಛ ಪುರುಷಾರ್ಥ, ಇದುವೇ ವೈರಾಗ್ಯದ ಬಲ.

ತುಕಾರಾಮನು ಸಾಲದ ಹೊತ್ತಿಗೆಯನ್ನು ವಿಶಿಷ್ಟ ಧ್ಯೇಯನಿಷ್ಠೆಗಾಗಿ ಮುಳುಗಿಸಿದ, ಸಂಸಾರದ ಬಗೆಗಿನ ಉದ್ವೇಗದಿಂದಲ್ಲ ಎಂಬ ಸತ್ಯವನ್ನು ನಾವು ಈಗಾಗಲೇ ಗಮನಿಸಿದ್ದೇವೆ. ಅವನ ಮುಂದಿನ ವಿಚಾರಗಳು ಸಹ ಈ ಸತ್ಯಕ್ಕೆ ಪುಷ್ಟಿನೀಡುವಂಥದ್ದು. ನನಗೆ ಸಂಸಾರದ ಭೀತಿಯಿಲ್ಲ, ನನಗೆ ಸಂತೋಷದಿಂದ ಸಂಸಾರವನ್ನು ನೀಡು ಎಂದವನು ದೇವರಲ್ಲಿ ಮೊರೆಯಿಡುತ್ತಾನೆ. ನನಗೆ ಸಂಸಾರವೆಂದರೆ ಇಷ್ಟ, ಸುಖದಿಂದ ಸಂಸಾರ ಮಾಡಬೇಕು ಎಂಬ ಅರ್ಥವುಳ್ಳ ವಚನಗಳು, ತುಕಾರಾಮನು ಸಂಸಾರದಿಂದ ವಿಮುಖಗೊಂಡಿರಲಿಲ್ಲ ಎಂಬುದನ್ನು ತೋರಿಸುತ್ತವೆ. ಏಕೆ ಕ್ಷುದ್ರತನದಿಂದ ಬದುಕಬೇಕು ಎಂಬ ಪ್ರಶ್ನೆಯು ಬದುಕಿನ ಬಗೆಗಿನ ಉತ್ಕಟ ಪ್ರೇಮವನ್ನು ತೋರಿಸುತ್ತದೆ. ಪ್ರಸನ್ನವಾದ ರೀತಿಯಲ್ಲಿ ಬದುಕಬೇಕು, ಅದರ ಮಾಧುರ್ಯವನ್ನು ಅಸ್ವಾದಿಸಬೇಕು, ತಿರಸ್ಕರಿಸಬಾರದು ಎನ್ನುವದೇ ತುಕಾರಾಮನ ನಿಲುವು. ಕೆಲವೊಮ್ಮೆ ಅವನು ಸಂಸಾರವನ್ನು ದೂಷಿಸುತ್ತಾನೆ. ಸಂಸಾರದಿಂದ ದೂರ ಸರಿಯುವ ಮತೂ ಆಡುತ್ತಾನೆ. ಆಗ ಸಂಸಾರದಲ್ಲಿ ಅತಿಯಾಗಿ ಸಿಕ್ಕಿಕೊಳ್ಳುವದು, ಕೆಡಕು ಕಾರ್ಯ ಮಾಡುವದು, ಅತಿ ಮೋಹ ಬೆಳೆಸಿಕೊಳ್ಳುವದು, ಕೌಟುಂಬಿಕ ಕಾರಣದಿಂದ ತನ್ನ ಇನ್ನಿತರ ಕರ್ತವ್ಯದಿಂದ ವಿಮುಖನಾಗುವದು ಸರಿಯಲ್ಲ ಎಂಬುದೇ ತುಕಾರಾಮನ ಅಂಬೋಣ. ಭಿಕ್ಷೆಯ ಕುರಿತು ಅವನು ಹೇಲಿದ ಮಾತಂತೂ ವಾದಾತೀತವಾದುದು. ಭಿಕ್ಷೆ ಬೇಡುವದು ನಾಚಿಕೆಗೇಡಿತನದ ಸಂಗತಿಯೆಂದು ಹಂಗಿಸುತ್ತಾನೆ. ಉದರ ನಿರ್ವಹಣೆಗಾಗಿ ದುಡಿಯದೆ, ಅನ್ಯರ ಮೇಲೆ ಭಾರ ಹೊರಿಸುವದು. ಈ ಬಗೆಯ ದೀನ ಬದುಕು ಅವನಿಗೆ ಸುತಾರಾಂ ಒಪ್ಪಿಗೆಯಿಲ್ಲ. ಕಷ್ಟಪಟ್ಟು ಶ್ರಮದಿಂದ ದುಡಿದು, ಸ್ವಾಭಿಮಾನದಿಂದ ಉದರ ನಿರ್ವಹಣೆ ಕೈಕೊಳ್ಳಬೇಕು, ತನ್ನ ಸತ್ವ ಉಳಿಸಿಕೊಳ್ಳಬೇಕು ಎನ್ನುವದೇ ಅವನ ಹೇಳಿಕೆಯಾಗಿದೆ.

ಸುಖಿ, ಸಮಾಧಾನಿ, ಸಂತುಷ್ಟ, ತೃಪ್ತ ಈ ಬಗೆಯ ಜೀವನದ ಕುರಿತು ಅವನು ಚಿತ್ರಿಸಿದ ಚಿತ್ರವಂತೂ ಅತ್ಯಂತ ಸ್ಪೃಹನೀಯ ಮತ್ತು ರಮಣೀಯವಾದುದು. ಭೋಗ-ತ್ಯಾಗದ ಜೀವನವು ಅದೆಷ್ಟು ಆಸ್ವಾದಮಯ, ಉಲ್ಲಸಿತವಾಗುತ್ತದೆ ಎಂಬ ಒಂದು ಮಧುರ ಕನಸನ್ನೇ ಜನರೆದುರಿಗೆ ಇರಿಸಿದಾನೆ. ಸಂಸಾರಿಕ ಗೃಹಸ್ಥನ ಒಂದು ಅನುಕರಣೀಯ ಆದರ್ಶವನ್ನೇ ನಮ್ಮೆದುರಿಗಿರಿಸಿದ್ದಾನೆ. ಸಂಪತ್ತಿನ ದ್ವೇಷವು ಬೇಡ, ಹಪಾಪಿಯೂ ಬೇಡ. ಸಂಪತ್ತು ಗಳಿಸಬೇಕು, ಆದರೆ ತಪ್ಪು ಮಾರ್ಗದಿಂದಲ್ಲ. ಗಳಿಸಿದ ಸಂಪತ್ತು ವಿನಿಯೋಗಿಸುವಾಗಲೂ ಸಹ ವಿವೇಕದಿಂದ ವರ್ತಿಸಬೇಕು. ಉಳಿದವರ ಜತೆ ವರ್ತಿಸುವಾಗ ಸಹಕಾರ್ಯ, ಸಹಾಯ, ಸಂಕಟದಿಂದ ಪಾರು ಮಾಡುವ, ಉಪಕಾರ ಮಾಡುವ ಪ್ರವೃತ್ತಿಯನ್ನು ಹೊಂದಿರಬೇಕು. ನಿಂದನೆಯಲ್ಲಿ ತೊಡಗಬಾರದು. ಸ್ತ್ರೀ ಸುಖವನ್ನು ತ್ಯಾಗ ಮಾಡಬಾರದು, ಆದರೆ ಪರನಾರಿಯರನ್ನು ವಾಸನೆಯ ದೃಷ್ಟಿಯಿಂದ ನೋಡಬಾರದು. ಜೀವದಂತೆ ಅವರ ಸುಖ ದುಃಖದಲ್ಲಿ ಸಹಭಾಗ, ಅನ್ನ ನೀರು ನೀಡಿ ಹಸಿದವರನ್ನು ಸಮಾಧಾನಪಡಿಸುವದು, ಕ್ರೋಧದ ಮೇಲೆ ನಿಯಂತ್ರಣ, ಶಾಂತಿಯ ಸ್ವೀಕಾರ, ಈ ರೀತಿಯಲ್ಲಿ ವರ್ತಿಸಿದಾಗ ದೊರಕುವ ಆನಂದವೇ ಗೃಹಸ್ಥಾಶ್ರಮದ ಫಲ, ಅಷ್ಟೇ ಅಲ್ಲ ಇದುವೇ ಸರ್ವೋಚ್ಛ ಪುರುಷಾರ್ಥ, ವೈರಾಗ್ಯದ ಬಲ ಎಂದು ತುಕಾರಾಮನಿಗೆ ಅನಿಸುತ್ತದೆ. ಇದರರ್ಥ ಸಂಸಾರ, ಗೃಹಸ್ಥಾಶ್ರಮದಲ್ಲಿದ್ದೂ ವೈರಾಗ್ಯದ ಫಲ ಪಡೆಯಬಹುದು. ಸಂಸಾರ ತೊರೆದು ಭಿಕ್ಷೆ ಬೇಡುವದು, ಕಾಡಿನಲ್ಲಿ ವಾಸ, ಸನ್ಯಾಸಿಯಾಗುವದು ನಿಜವಾದ ವೈರಾಗ್ಯವಲ್ಲ. ಸಂಯಮ ವೃತ್ತಿಯಿಂದ ಸಂಸಾರ ಸುಖ ಪಡೆಯುವದೇ ನಿಜವಾದ ವೈರಾಗ್ಯ ಎಂದು ತುಕಾರಾಮನ ಅಭಿಪ್ರಾಯ. ಸಂಸಾರ ಸಂಪೂರ್ಣ ಮುಳುಗುವದಾಗಲಿ, ಅಥವಾ ಸಂಪೂರ್ಣ ನಿರಾಕರಿಸುವದಾಗಲಿ, ಈ ಎರಡನ್ನೂ ತಳ್ಳಿಹಾಕಿ, ಕರ್ತವ್ಯದ ಔಚಿತ್ಯಪೂರ್ಣವಾದ ಅರಿವಿನಿಂದ ಸಂಸಾರ ನಿಭಾಯಿಸುವದೇ ಜೀವನದ ಯೋಗ್ಯಮಾರ್ಗ ಎನ್ನುವದೇ ತುಕಾರಾಮನ ನಿಲುವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.