ತುಕಾರಾಮನು ದೇವರ ಉತ್ಕಟ ಭಕ್ತನಾಗಿದ್ದ ಎನ್ನುವದರಲ್ಲಿ ಶಂಕೆಯಿಲ್ಲ. ಹೀಗಿದ್ದೂ ಅವನ ದೇವರ ಬಗೆಗಿನ ಸಂಕಲ್ಪನೆಯು ಪರಂಪರಾಗತ ಸ್ವರೂಪದ್ದಾಗಲೀ, ರೂಢಗ್ರಸ್ತವಾದುದಲ್ಲ – ಎಂಬುದು ಗಮನಿಸಬೇಕಾದ ಸಂಗತಿ. ದೇವರ ಬಗೆಗಿನ ಅವನ ನಿಲುವು ಮನುಷ್ಯನನ್ನು ಅತ್ಯುನ್ನತ ಮಟ್ಟಕ್ಕೆ ಒಯ್ಯುವಂತಹದು-ಹೀಗಾಗಿ ಅವನ ದೃಷ್ಟಿಯಲ್ಲಿ ಜೀವನದ ದುಸ್ತರ ಪ್ರವಾಸ ಕೈಕೊಳ್ಳುವ ಸಾಮಾನ್ಯ ಮನುಷ್ಯನಿಗೆ ಯಾರ, ಯಾವುದರ ಆಧಾರವೂ ಇಲ್ಲದಾಗ, ಮನೋಬಲ ತಂದುಕೊಳ್ಳಲು ದೇವರ ಆಧಾರ ಉಪಯೋಗಕ್ಕೆ ಬರುತ್ತದೆ. ಹೀಗಾಗಿ ಅವನ ಪ್ರಕಾರ ದೇವರು ಗೆಳೆಯ ಅಥವಾ ಸಖನಾಗಿದ್ದಾನೆ. ಹಾಗೆಯೇ ದೇವರು ಕಲ್ಲಿನಲ್ಲಾಗಲಿ, ಧಾತುವಿನಲ್ಲಾಗಲಿ ಇರದೆ, ಮನುಷ್ಯನ ಮನದಲ್ಲಿಯ ಶುದ್ಧಭಾವನೆಯ ಸ್ವರೂಪವಾಗಿರುತ್ತಾನೆ.

ದೇವರ ವರ್ತನೆಗೂ ನೈತಿಕತೆಯ ಒರೆಗಲ್ಲು

ತುಕಾರಾಮನ ಹಿರಿಮೆ ಯಾವುದೆಂದರೆ, ಉತ್ಕಟ ಭಕ್ತಿ ಹೊಂದಿದ ದೇವರ ವರ್ತನೆಯನ್ನು, ಧಾರ್ಮಿಕ ಗ್ರಂಥಗಳು ಬಣ್ಣಿಸಿದ ರೀತಿಯನ್ನು ಅವನು ನೈತಿಕ ಒರೆಗಲ್ಲಿಗೆ ಹಚ್ಚಿ ಪರೀಕ್ಷಿಸಿದ್ದು. ದೇವರ ಯೋಗ್ಯ ವರ್ತನೆಯನ್ನು ಅವನು ಸ್ವೀಕರಿಸಿದ್ದಾನೆ. ಆದರೆ ಅನೈತಿಕ ವರ್ತನೆಯನ್ನು ತರಾಟೆಗೆ ತೆಗೆದುಕೊಂಡಿದ್ದಾನೆ.

ಈ ನಿಟ್ಟಿನಲ್ಲಿ ಮುಂದಿನ ಆಶಯ ಹೊಂದಿದ ಅಭಂಗವು ಗಮನಾರ್ಹವಾದುದು: ಹೇ ಹರಿ, ನೀನು ನಿಷ್ಠುರನಾಗಿದ್ದಿಯೇ, ನಿರ್ಗುಣ (ಗುಣಹೀನ) ನಾಗಿದ್ದಿ, ನಿನ್ನಲ್ಲಿ ಮಾಯೆಯಿಲ್ಲ, ಪ್ರೀತಿಯಿಲ್ಲ, ತೀರಾ ಕಠಿಣನಾಗಿದ್ದಿ, ಯಾರೂ ಮಾಡದ ತಪ್ಪು ವರ್ತನೆಯನ್ನು ನೀನು ಮಾಡಿದ್ದಿಯೆ. ನೀನು ಹರಿಶ್ಚಂದ್ರನ ವೈಭವ, ರಾಜ್ಯ, ಕುದುರೆ ಎಲ್ಲ ಭಾಗ್ಯವನ್ನು ಕಸಿದುಕೊಂಡೆ. ಪತ್ನಿ-ಪುತ್ರರನ್ನೂ ಮಾಡುವಂತೆ ಮಾಡಿದೆ. ನೀನು ನಳ ಮತ್ತು ದಮಯಂತಿಯರು ವಿಯೋಗದಿಂದ ಬಳಲುವಂತೆ ಮಾಡಿದಿ. ದಯಾವಂತನಾದ ಶಿಬಿರಾಜನಿಗೆ ಪ್ರಾಣಿಗಳ ಮೇಲೆ ಕರುಣೆಯಿತ್ತು. ನೀನು ಪ್ರಾಣಿಯ ಮಾಂಸದ ಜತೆಗೆ ಅವನ ಮಾಂಸವನ್ನು ತೂಕ ಮಾಡಿದಿ. ರಣಾಂಗಣದಲ್ಲಿ ಅಸಹಾಯಕನಾದ ಕರ್ಣನನ್ನು ಕೊಲ್ಲಿಸಿದಿ. ಬಲಿ ಚಕ್ರವರ್ತಿಯಂತೂ ದಾನದಲ್ಲಿ ಶ್ರೇಷ್ಠನಾಗಿದ್ದ. ಅಂಥವನನ್ನು ಪಾತಾಳಕ್ಕೆ ತಳ್ಳಿದೆ. ಶಿರಿಯಾಳನ ಮಗನನ್ನು ಅವನ ಕೈಯಿಂದಲೇ ಕೊಲ್ಲಿಸಿದೆ.

ಪ್ರಶ್ನಿಸುವ ಮನಸ್ಸು

ಚಿಕಿತ್ಸೆ ಮಾಡುವದು ತುಕಾರಾಮನ ಸ್ವಭಾವದ ಅವಿಭಾಜ್ಯ ಅಂಗ. ಅವನದು ಪ್ರಶ್ನಿಸುವ ಮನಸ್ಸು. ಹೀಗಾಗಿ ಅವನ ಮನದಲ್ಲಿ ನಾನಾ ಬಗೆಯ ಪ್ರಶ್ನೆ ಏಳುತ್ತದೆ. ಧರ್ಮ, ಸಮಾಜ ಮುಂತಾದವುಗಳ ನಿರೀಕ್ಷಣೆ ಮತ್ತು ಪರೀಕ್ಷಣೆ ಕೈಕೊಂಡಾಗ ಪಂಡಿತರನ್ನಷ್ಟೇ ಅಲ್ಲ, ದೇವರನ್ನೂ ಪ್ರಶ್ನಿಸುತ್ತಾನೆ.

ಪ್ರಶ್ನೆಯ ಮೂಲಕ ದೇವರನ್ನು ಎದುರಿಸುವುದು

ತುಕಾರಾಮನು ದೇವರಿಗೆ ಕೇಳಿದ ಪ್ರಶ್ನೆಯ ಸ್ವರೂಪ ಸ್ಪಷ್ಟಗೊಳ್ಳಲು ಮುಂದಿನ ಅಭಂಗ ಗಮನಿಸಿ. ನೀನು ವೇದ ಪುರುಷನಾಗಿದ್ದರೆ, ವೇದ ನಿನ್ನನ್ನು ನೇತಿ ಎಂದೇಕೆ ಕರೆಯುತ್ತದೆ? ನಿನ್ನನ್ನು ಬಣ್ಣಿಸುವುದೇ ಸಾಧ್ಯವಿಲ್ಲೆಂದೇಕೆ ಹೇಳುತ್ತದೆ? ನಿನ್ನನ್ನು ಬೇರ್ಪಡಿಸಿ ಏಕೆ ತೋರಿಸುತ್ತದೆ? ನೀನು ಯಜ್ಞದ ಭಕ್ಷಕನಾಗಿದ್ದರೆ ಯಜ್ಞ ಸವಾಂಗ ಪರಿಪೂರ್ಣವಾಗಲು ಅವಕಾಶ ಕೊಡುವುದಿಲ್ಲೇಕೆ? ಸ್ವಲ್ಪ ಕೊರತೆ ಬಿದ್ದರೂ ನೀನೇಕೆ ಕ್ಷೋಭೆಗೊಳಗಾಗುತ್ತಿ? ನೀನು ಪ್ರಾಣಿಗಳ ಅಂತರ್ಯಾಮಿಯಾಗಿದ್ದರೆ ಅವರಲ್ಲಿ ಏಕೆ ಭೇದ ನಿರ್ಮಾ ಮಾಡಿದೆ?

ಭೇದವೇಕೆ?

ಈ ಅಭಂಗದಲ್ಲಿ ತುಕಾರಾಮನ ಹಲವು ಪ್ರಶ್ನೆಗಳಲ್ಲಿ ನನಗೆ ಭೇದಭಾವದ ಬಗೆಗಿನದು ಅತ್ಯಂತ ಮಹತ್ವದ ಪ್ರಶ್ನೆಯೆನಿಸುತ್ತದೆ. ಎಲ್ಲ ಜೀವಿಗಳಲ್ಲಿ ದೇವರು ನಿಜವಾಗಿಯೂ ನೆಲೆಸಿದ್ದರೆ ಪ್ರಾಣಿಗಳಲ್ಲಿ, ಮನುಷ್ಯ-ಮನುಷ್ಯರಲ್ಲಿ ಈ ಭೇದವೇಕೆ ಎನ್ನುವದು ಅವನ ಪ್ರಶ್ನೆ. ಈ ಭೇದ-ಭಾವ ಸರಿಯಿಲ್ಲ. ಇಂಥ ಭೇದ-ಭಾವ ಮಾಡುವ ಮೌಲ್ಯ, ಶಾಸ್ತ್ರ, ದರ್ಶಗಳಿದ್ದರೆ ಅದನ್ನು ಹುಸಿ ಎಂದು ಭಾವಿಸಬೇಕು- ಎನ್ನುವುದು ತುಕಾರಾಮನ ಸೂಚನೆ. ಭೇದ-ಭಾವ ಮಾಡುವ ಶಾಸ್ತ್ರಗಳು ಯೋಗ್ಯವೆಂದು ಒಪ್ಪಿಕೊಂಡರೆ, ಎಲ್ಲ ಜೀವಿಗಳಲ್ಲಿ ದೇವರಿದ್ದಾನೆ ಎಂಬ ತತ್ವ ಹುಸಿ ಎಂದು ಭಾವಿಸಬೇಕಾಗುತ್ತದೆ- ಎಂದು ಇದನ್ನು ಅರ್ಥೈಸಬೇಕಾಗುತ್ತದೆ. ಒಟ್ಟಿನಲ್ಲಿ ನೀನು ಮನುಜ- ಮನುಜರಲ್ಲೇಕೆ ಭೇದ ಮಾಡಿದೆ ಎಂಬ ಪ್ರಶ್ನೆಯನ್ನು ತುಕಾರಾಮನು ದೇವರಿಗೆ ಕೇಳುತ್ತಾನೆ.

ಜನರನ್ನು ದ್ವೇಷಿಸುವ ಪರಂಪರೆಯ ದೇವರ ನಿರಾಕರಣೆ

ಧರ್ಮಮಾರ್ತಾಂಡರ ದೇವರು ಮಡಿ-ಮೈಲಿಗೆಯಲ್ಲಿ ಸಿಲುಕಿದ; ಯಜ್ಞ-ಯಾಗಾದಿ ಕ್ಲಿಷ್ಟ ಸಾಧನೆಗಳಿಂದ ಪ್ರಾಪ್ತವಾಗುವ ಮತ್ತು ಪರ್ಯಾಯವಾಗಿ ಸಾಮಾನ್ಯ ಭಕ್ತರ ಶಕ್ತಿಯ ಹೊರಗಿನವನಾಗಿದ್ದ ; ವೇದ ಅಹಂಕಾರಿಯಾಗಿ ಜನ ಸಾಮಾನ್ಯರ ಅಧಿಕಾರವನ್ನು ನಿರಾಕರಿಸುತ್ತದೆ. ಎಂಬ ಕಾರಣಕ್ಕಾಗಿ ತುಕಾರಾಮನು ವೇದವನ್ನು ಬದಿಗೆ ಸರಿಸಿದ. ಯಜ್ಞಾದಿ ಸಾಧನೆಯನ್ನೂ ಬದಿಗೆ ಸರಿಸಿದ. ಸಹಜವಾಗಿಯೇ ಭಕ್ತರಿಗೆ ವಿರಳವಾಗಿರುವ ದೇವರನ್ನೂ ನಿರಾಕರಿಸಿದ. ಒಂದರ್ಥದಲ್ಲಿ ದೇವರನ್ನು ನಿರಾಕರಿಸುವದೆಂದರೆ, ದೇವರ ಹಿಂದಿದ್ದ ಜನರನ್ನು ದ್ವೇಷಿಸುವ ಪರಂಪರೆಯನ್ನೇ ನಿರಾಕರಿಸಿದಂತೆ ಎನ್ನುವುದು ಗಮನಿಸಬೇಕಾದ ಸಂಗತಿ.

ತುಕಾರಾಮನು ಕೆಲವು ಬಾರಿ ‘ಹುಸಿದೇವರು’ ಎಂದು ಏಕೆ ಕರೆದ ಎನ್ನುವದು ಇದರಿಂದ ಸಿದ್ಧವಾಗುತ್ತದೆ. ಒಂದು ಅಭಂಗದಲ್ಲಿ ಹೀಗೆ ಅನ್ನುತ್ತಾನೆ: “ದೇವರನ್ನು ಹುಸಿ ಎಂದು ಕರೆಯಬೇಕೆಂದೆನಿಸುತ್ತದೆ. ಅವನ ಅಸ್ತಿತ್ವದ ಬಗೆಗೆ ಸಂದೇಹ ಬರುತ್ತದೆ. ಅವನ ಸ್ತುತಿಗೀತೆಗಳ ರಾಶಿಯೇ ಇದ್ದರೂ, ಸ್ವರೂಪದಲ್ಲಿ ತಾಳ-ಮೇಳವಿಲ್ಲ” ತುಕಾರಾಮನ ಈ ಟೀಕೆಯು ಎಲ್ಲ ದೇವರಿಗೂ ಅನ್ವಯಿಸುವುದಿಲ್ಲ. ಈ ಅಸಮಾಧಾನ ಹೃದಯದೊಳಗಣ ದೇವರ ಕುರಿತಾದದ್ದು ಅಲ್ಲ. ಡಾಂಭಿಕರ ಕೈಯಲ್ಲಿ ಸಿಲುಕಿದ ಭಕ್ತರಿಂದ ದೂರಸರಿದ ದೇವರನ್ನು ನಿರಾಕರಿಸಲೆಂದೇ ಈ ಟೀಕೆಯು ಹುಟ್ಟಿಕೊಂಡಿತು.

ನಾಸ್ತಿಕತೆಯ ಉಚ್ಛ್ರಾಯ ಸ್ಥಿತಿ

ತುಕಾರಾಮನು ತನ್ನದೊಂದು ವಚನದಲ್ಲಿ ನಾಸ್ತಿಕತೆಯ ಶಿಖರ ಸ್ಥಿತಿ ತಲುಪಿದ್ದು ಕಂಡುಬರುತ್ತದೆ. ದೇವರ ಬಗೆಗಿನ ಅವನ ಚಿಂತನೆಯು ಅದೆಷ್ಟು ಆಳ ಮತ್ತು ವಿಧಾಯಕವಾಗಿತ್ತೆಂಬ ನಿರ್ಣಾಯಕ ಪುರಾವೆಯಾಗಿ ಈ ವಚನವನ್ನು ಪರಿಶೀಲಿಸಬಹುದು. ದೇವರಿದ್ದಾನೆಂದು ಬಾಯಿ ನುಡಿದರೂ, ಮನದೊಳಗೆ ಮಾತ್ರ ದೇವರಿಲ್ಲದ ಅನುಭವ ಲಭಿಸುವ-ಈ ವಚನದ ಅರ್ಥ ಮಾತ್ರ ಖ್ಯಾತ ಭಾಷ್ಯಕಾರರಿಗೂ ಆಹ್ವಾನ ನೀಡುವಂತಹದ್ದೂ, ಬೆಚ್ಚಿಬೀಳಿಸುವಂತಹದೂ ಆಗಿದೆ. ತುಕಾರಾಮನು ಚಾರ್ವಾಕನಷ್ಟೇ ನಿರೀಶ್ವರವಾದಿಯಾಗಿದ್ದ ಎಂದೇನೂ ಈ ವಚನದ ಮೂಲಕ ನಾನು ಹೇಳುತ್ತಿಲ್ಲ. ಆದಾಗ್ಯೂ ಅವನ ದೇವರ ಬಗೆಗಿನ ಚಿಂತನೆಯು ಪರಂಪರಾಗತ ವಿಚಾರಕ್ಕಿಂತ ತೀರಾ ಭಿನ್ನವಾದುದು ಎಂದು ಖಂಡಿತವಾಗಿ ಹೇಳಬಹುದು.

ಸಾಮಾನ್ಯರ ದೃಷ್ಟಿಯಲ್ಲಿ ಇಂಥ ದೇವರ ಅಸ್ತಿತ್ವದ ಅಗತ್ಯವಿದ್ದರೂ, ಯಾರು ತನ್ನ ಸಶಕ್ತ ವಿವೇಕದಿಂದ ಸೆಣಸಾಡುತ್ತಾನೋ, ಅಂಥವನಿಗೆ ಅವನ ವಿವೇಕ ಬಿಟ್ಟು ಬೇರೆ ದೇವರಿಲ್ಲ. ಹಿತ್ತಾಳೆಯ ಅಥವಾ ಕಲ್ಲಿನ ಮೂರ್ತಿಯಲ್ಲಿ ದೇವರಿಲ್ಲ ಎಂಬ ಮಾತು ಅವನು ದೇವರನ್ನು ಭಿನ್ನವಾದ ಸ್ವರೂಪದಲ್ಲಿ ಕಾಣುತ್ತಾನೆ ಎಂಬುದೇ ಸತ್ಯ. ಮನಸ್ಸು ದೇವರಿಲ್ಲ ಎಂಬುದನ್ನು ಒಪ್ಪಿಕೊಂಡು ಬಿಡಬೇಕು- ಎಂಬ ತುಕಾರಾಮನ ಮಾತು ಸತ್ಯದ ಬಗೆಗಿನ ಚಿಂತನೆಯನ್ನು ಎತ್ತರದ ಸ್ತರಕ್ಕೆ ಅಂದರೆ ಉಚ್ಛ್ರಾಯ ಸ್ಥಿತಿಗೆ ಒಯ್ಯುವಂತಹದೂ ಅಲ್ಲದೆ, ಈ ಸತ್ಯವನ್ನು ದಿಟ್ಟತನದಿಂದ ಮಂಡಿಸಿದ್ದನ್ನೂ ಗಮನಿಸಬೇಕು.

ಬಲಿ ಬೇಡುವ ದೇವತೆಗಳ ಧಿಕ್ಕಾರ

ಮನಸ್ಸು ದೇವರಿಲ್ಲ ಎಂದು ಒಪ್ಪಿಕೊಳ್ಳಬೇಕೆಂದು- ತುಕಾರಾಮ ದೇವರ ಬಗೆಗೆ ಹೇಳುತ್ತಿದ್ದ. ಇಂಥ ಸ್ಥಿತಿಯಲ್ಲಿ ಭಕ್ತರಿಂದ ಏನಾದರೂ ಲಾಭವಾದಾಗ, ಆ ಭಕ್ತರ ಇಚ್ಛೆಯನ್ನು ಪೂರ್ಣಗೊಳಿಸುವ ದೇವತೆಗಳ ಅಸ್ತಿತ್ವವನ್ನೇ ತುಕಾರಾಮನು ನಿರಾಕರಿಸಿದ್ದರಲ್ಲಿ ಯಾವ ಅಚ್ಚರಿಯೂ ಇಲ್ಲ. ಈ ನಿಟ್ಟಿನಲ್ಲಿ ಅವನ ಎರಡು ಅಭಂಗಗಳು ಅತ್ಯಂತ ಮಹತ್ವದು. ಮೊದಲನೇ ಅಭಂಗದಲ್ಲಿ ಹೇಗೆ ಹೇಳಲಾಗಿದೆ: ” ಸಿಂಧೂರ ಲೇಪಿಸಿದ ದೇವಿ-ದೇವತೆ ಮತ್ತು ಭೂತಗಣವನ್ನು ಯಾರು ಪೂಜಿಸುತ್ತಾರೆ? ಅವು ತಮ್ಮ ಹೊಟ್ಟೆಗಾಗಿ ಅಳುತ್ತಿರುತ್ತವೆ. ಅನ್ನ ಮತ್ತು ಬಲಿಯನ್ನು ಬೇಡುತ್ತವೆ. ಅವರು ತಮ್ಮಿಚ್ಚೆಗಾಗಿ ಅನ್ಯರನ್ನು ಪೀಡಿಸುತ್ತಾರೆ. ಸ್ವತಃ ಆಸೆಬುರುಕರಾದ ಅವರು ಇತರರಿಗೇನು ನೀಡುತ್ತಾರೆ? ಅವುಗಳ ಬುದ್ಧಿ ಅಲ್ಪ ಮತ್ತು ಅಧೀರವಾಗಿರುತ್ತದೆ. ದಾಸಿಯಿಂದ ಆತಿಥ್ಯ ಬಯಸಿದರೆ ಅವಳು ಮಾಲೀಕನ ಕಡೆಯಿಂದ ಏನಾದರೂ ತಂದು, ಆನಂತರ ಆತಿಥ್ಯ ಮಾಡುತ್ತಾಳೆ. ಅವಳು ಹಾಗೇನೂ ಸಮರ್ಥಳಾಗಿರುವುದಿಲ್ಲ. ಅದೇ ರೀತಿ ಈ ದೇವತೆಗಳೂ, ಭೂತ-ಪಿಶಾಚಿಗಳು ಸದಾಕಾಲ ರಿಕ್ತ ಮತ್ತು ಶಕ್ತಿಹೀನವಾಗಿರುತ್ತವೆ. ಹೊಂಡದಲ್ಲಿರುವ ನೀರಿನಿಂದ ತುಟಿಯೂ ಒದ್ದೆಯಾಗುವದಿಲ್ಲಲ. ತೃಪ್ತಿಯೂ ಸಿಗುವುದಿಲ್ಲ. ಆರಂಭದಿಂದ ಕೊನೆಯವರೆಗೆ ಆಯಾಸ ಮಾತ್ರ ಆಗುತ್ತದೆ. ಅದೇ ರೀತಿ ಈ ದೇವತೆಗಳಿಂದ ತೃಪ್ತಿ ಸಿಗದೆ, ದಣಿವು ಮಾತ್ರ ಆಗುತ್ತದೆ. ಈ ದೇವತೆಗಳ ಮುಖ ಸಿಂಧೂರದಿಂದ ಮಸಕುಗೊಂಡಿರುತ್ತದೆ. ಒಮ್ಮೊಮ್ಮೆ ಅವು ಸ್ವಂತಕ್ಕೇ ಶಿಕ್ಷಿಸಿಕೊಳ್ಳುತ್ತವೆ. ಇಂಥ ದೇವತೆಗಳಿಗೆ ದೇವರು ಎಂದು ಭಾವಿಸುವವರನ್ನು ವಿದೂಷಕರೆಂದು ಕರೆಯಬೇಕು. ಇದೇ ಜಗತ್ತು ವ್ಯಾಪಿಸಿಕೊಂಡ ನಾರಾಯಣ, ಜನಾರ್ಧನ ಮಾತ್ರ ಹೀಗಿಲ್ಲ. ಅವನ ಸ್ಮರಣೆ ಮಾಡಿ, ಎಲ್ಲರೂ ಅವನ ಪಾದಕ್ಕೆರಗಲು ಬರುತ್ತಾರೆ.

ಸನ್ಯಾಸಿ ಮತ್ತು ದೇವತ್ವದ ಪರೀಕ್ಷೆ ಒಂದೇ

ಮಾನವೀಯತೆಯ ಉದಾತ್ತ ಅವಸ್ಥೆಯೆಂದರೆ ದೇವರು-ಎಂಬ ವಿಚಾರವನ್ನು ತುಕಾರಾಮನು ಆಗಾಗ ವ್ಯಕ್ತಪಡಿಸಿದ್ದಾನೆ. ಇದರ ಕುರಿತಾದ ಒಂದು ಪ್ರಸಿದ್ಧ ಅಭಂಗದ ಆಶಯ ಹೀಗಿದೆ: “ಯಾರು ದೀನ-ದಲಿತರನ್ನು ತನ್ನವರೆಂದು ಭಾವಿಸುತ್ತಾರೋ ಅವನೇ ನಿಜವಾದ ಸನ್ಯಾಸಿ ಎಂದರಿಯಬೇಕು. ದೇವರು ಅವರೊಳಗೆ ಇರುತ್ತಾನೆ. ಅವರ ಜತೆಯಿರುತ್ತಾನೆ-ಎಂಬುದನ್ನು ಅರಿಯಬೇಕು. ಬೆಣ್ಣೆ ಒಳಗೂ-ಹೊರಗೂ ಮೆತ್ತಗಿರುವಂತೆ ಸಜ್ಜನರ ಮನಸ್ಸು ಅಂತರಂಗ ಬಹಿರಂಗ ಎರಡೂ ಕಡೆ ಮೃದುವಾಗಿರುತ್ತದೆ. ನಾನು ನಿಮಗೆ ಎಷ್ಟೆಂದು ಹೇಳಲಿ? ಯಾರು ಅನಾಥರಾಗಿರುತ್ತಾರೋ, ಅಂಥವರನ್ನು ಅಪ್ಪಿಕೊಳ್ಳುವ, ದಾಸ-ದಾಸಿಯರನ್ನು ಮಕ್ಕಳಂತೆ ತಬ್ಬಿಕೊಳ್ಳುವವನೇ ನಿಜವಾದ ದೇವರು”.

ತುಕಾರಾಮನ ದೇವರ ಬಗೆಗಿನ ಸಂಕಲ್ಪವನ್ನು ಅರಿತುಕೊಳ್ಳಲು ಇದೊಂದೇ ಅಭಂಗ ಸಾಕು. ವಿಶೇಷವೆಂದರೆ ಅವನ ಸನ್ಯಾಸಿ ಮತ್ತು ದೇವತ್ವದ ಪರೀಕ್ಷೆಯು ಒಂದೇ ಆಗಿದ್ದರಿಂದ ಅವನ ದೃಷ್ಟಿಯಲ್ಲಿ ಸನ್ಯಾಸಿ ಮತ್ತು ದೇವತ್ವ ಎರಡೂ ಒಂದೇ. ಒಂದರಲ್ಲೇ ತಾದಾತ್ಮ್ಯ ಹೊಂದಿದೆ. ತುಕಾರಾಮನ ಈ ಮಾನದಂಡವು ಯಾವು ದಾರ್ಮಿಕ ಗ್ರಂಥದಲ್ಲೂ ಹೇಳಿದ್ದಲ್ಲ. ಅಥವಾ ಯಾವ ಧಾರ್ಮಿಕ ವಿಚಾರ ಪ್ರಣಾಲಿಯಲ್ಲಿ ಬಂಧಿಸಿಟ್ಟಿದ್ದಲ್ಲ. ಈ ಪರೀಕ್ಷೆಯು ಇಹಲೋಕದ ಮಾನವೀಯತೆಗೆ ಸಂಬಂಧಿಸಿದ್ದು. ಸಮತೆ ಮತ್ತು ನ್ಯಾಯದ ತತ್ವದ ನೆಲೆಗಟ್ಟನ್ನು ಹೊಂದಿದ್ದು, ದಾಸ-ದಾಸಿಯರನ್ನು ಮಕ್ಕಳಂತೆ ಪ್ರೀತಿಸುವದು ದೇವತ್ವದ ಮಾನದಂಡ- ಎಂಬ ಮಾತು ಸಮತೆಯ ಅತ್ಯುನ್ನತ ನೆಲೆಗಟ್ಟಿನ ಮೇಲೆ ನಿಂತಿರುವ ಸಂಗತಿಯು ಯಾರೂ ಒಪ್ಪುವಂತಹದು. ದಯೆ, ಕ್ಷಮೆ, ಶಾಂತಿಯಿರುವಲ್ಲಿ ದೇವರು ನೆಲೆಸಿರುತ್ತಾನೆ. ಅಂಥ ಮನೆಗೆ ಓಡೋಡಿ ಬರುತ್ತಾನೆ. ಅಲ್ಲೇ ನೆಲೆಯಾಗಿ ವಾಸಿಸುತ್ತಾನೆ ಎಂದು ನುಡಿಯುವ ಅಭಂಗವು ಸದಾಚಾರವೇ ದೇವತ್ವದ ನಿಜವಾದ ಮಾನದಂಡ ಎಂಬುದನ್ನು ಸಾಬೀತು ಪಡಿಸುತ್ತದೆ.

ಉಳಿದ ದೇವರನ್ನು ನಿರಾಕರಿಸಿ ವಿಠ್ಠಲನ ಭಕ್ತಿಯನ್ನು ಇಷ್ಟಪಡುವ ತುಕಾರಾಮನು, ವಿಠ್ಠಲಭಕ್ತಿ ಹೇಗಿರಬೇಕೆಂಬುದನ್ನು ಹೀಗೆ ಹೇಳುತ್ತಾನೆ: “ವಿಠ್ಠಲನ ಭಕ್ತಿ ಮಾಡುತ್ತಿದ್ದರೂ, ಚಿತ್ತದಲ್ಲಿ ದಯೆ ಧರ್ಮವಿಲ್ಲದಿದ್ದರೆ ಅಂಥವರ ಬಳಿ ನನ್ನ ದೇವರಿಲ್ಲ. ಅವರು ಸುಮ್ಮನೆ ದಣಿದು ಹೈರಾಣಾಗುತ್ತಾರೆ. ಮೈಯಲ್ಲಿ ಕ್ಷಮೆ ದಯೇಯೇ ಇಲ್ಲ. ಆದರೂ ಪಂಢರಿಯ ಯಾತ್ರೆ ಕೈಕೊಳ್ಳುತ್ತಾರೆ. ಇಂಥವರ ಪ್ರದಕ್ಷಿಣೆಯಿಂದ ಏನು ಲಾಭ? ಇಂಥವರಲ್ಲಿ ಭಕ್ತಿಯ ರಸವಿಲ್ಲ. ಇಂಥವರ ಬಳಿ ನನ್ನ ರಾಮನಿಲ್ಲ” ತುಕಾರಾಮನ ದೃಷ್ಟಿಯಲ್ಲಿ ದಯೆ ಕೇವಲ ಪ್ರೀತಿ, ದುರ್ಬಲ ಸಜ್ಜನರ ಅಂತಃಕರಣದಲ್ಲಿರುವ ಸದ್ಭಾವನೆಯಲ್ಲ – ಎಂಬುದು ಗಮನಿಸಬೇಕಾದ ಸಂಗತಿ. ಅವನ ಅರ್ಥದಲ್ಲಿ ಭೂತದಯೆ ಮತ್ತು ದುರ್ಜನರ ಸಂಕಟದ ನಿರ್ಮೂಲನೆ ಮಹತ್ವದ್ದು. ಆದರಿಂದ ಸಂತತನದ ಅವರ ಸಕಲ್ಪನೆಗೆ ಬೇರೆಯದೇ ಪರಿಣಾಮ ಲಭಿಸುತ್ತದೆ. ದುಷ್ಟರ ಹಿಂಸೆಯನ್ನು ತಡೆಗಟ್ಟಲು ಹೊರಾಡುವದು, ದುಷ್ಠರ ಸಂಹಾರವನ್ನು ಕೈಕೊಳ್ಳುವದೆಲ್ಲ ದಯೆಯಲ್ಲಿ ಸೇರಿಕೊಂಡಿದೆ. ಈ ಬಗೆಯ ದಯೆಯಿಲ್ಲದವರ ಬಳಿಯಲ್ಲಿ ನನ್ನ ವಿಠ್ಠಲನಿಲ್ಲ. ರಾಮನಿಲ್ಲ – ಎನ್ನುವುದು ತುಕಾರಾಮನ ಹೇಳಿಕೆ. ಇದು ವಿಠ್ಠಲನ, ರಾಮನ ಬಗೆಗಿನ ವಿಶಿಷ್ಟ ದೃಷ್ಟಿಕೊಣ. ದುರ್ಬಲರ ಬಗ್ಗೆ ದಯೆ, ದುಷ್ಟರ ಬಗ್ಗೆ ಕಠೋರವಾಗಿ ವರ್ತಿಸುವ ದೇವರ ಗುಣವನ್ನು ಮನುಷ್ಯರಲ್ಲೇ ಹುಡುಕುವ ಕಾರ್ಯವನ್ನು ತುಕಾರಾಮ ಮಾಡುತ್ತಿದ್ದ. ಮೆತ್ತಗಿರುವ ನೀರು-ಪಾತಾಳವನ್ನು ಅಗೆಯುವಂತೆ, ಪ್ರಾಣಿಗಳ ಬಗೆಗೆ ವಿನಮ್ರಗೊಳ್ಳುವ ಮನುಷ್ಯ ಅನಂತಕ್ಕೂ ಕಡಿವಾಣ ಹಾಕಬಲ್ಲ. ಈ ವಿನಯಬೇ ಅವನನ್ನು ಶೂರನನ್ನಾಗಿಸುತ್ತದೆ. ಅವನು ಶ್ರೀ ಹರಿಯನ್ನೂ ಸೋಲಿಸಬಲ್ಲ – ಎಂದು ತುಕಾರಾಮ ಹೇಳುತ್ತಾನೆ. ಪ್ರಾಣಿಗಳೊಂದಿಗೆ, ಸಾಮಾನ್ಯ ಜನತೆಯೊಂದಿಗೆ ವಿನಯದಿಂದ ವರ್ತಿಸುವದೆಂದರೆ ದೇವರನ್ನು ತನ್ನ ಹೃದಯದೊಳಗೆ ಬಂಧಿಸಿದಂತೆ ಎನ್ನುವದು ತುಕಾರಾಮನ ಹೇಳಿಕೆ. ಯಾವ ಚಿತ್ತದಲ್ಲಿ ಮಲೀನತೆಯಿಲ್ಲವೋ ಅಲ್ಲಿ ದೇವರೆ ಆಳುತ್ತಿರುತ್ತಾನೆ- ತುಕಾರಾಮನ ಈ ವಚನವೂ ನಿರ್ಮಲ ಮನಸ್ಸು ಮತ್ತು ದೇವರನ್ನು ಸಮೀಕರಿಸುವಂತಹದು. ತುಕಾರಾಮನ ದೇವರು ಧಾತು ಅಥವಾ ಪಾಷಾಣದಲಿಲ್ಲ. ಅವನ ದೇವರು ಜನಸಾಮಾನ್ಯರ ಅಂತರಾಳದಲ್ಲಿ ಮತ್ತು ಸ್ವಂತ ಹೃದಯದ ಶುದ್ಧಿಯಲ್ಲಿ ನೆಲೆಸಿದ್ದಾನೆ.

ಪಟ್ಟಭದ್ರರ ಕಪಿಮುಷ್ಟಿಯಿಂದ ದೇವರಿಗೆ ಮುಕ್ತಿ ನೀಡಿದ

ದೇವರ ಭಕ್ತಿಯ ಬಲದಿಂದ ಮೋಕ್ಷವನ್ನು ತುಚ್ಛವಾಗಿ ಕಾಣುವ, ಅಷ್ಟೇ ಅಲ್ಲ ಅವನ ಮಸ್ತಕದ ಮೇಲೆ ತಾನು ಕಾಲಿರಿಸಿ ನಿಂತಿದ್ದೇನೆ ಎಂಬ ಮನೋಬಲ ತುಕಾರಾಮನಿಗೆ ಪ್ರಾಪ್ತವಾಗಿತ್ತು – ಎಂಬುದನ್ನು ನಾವು ಈ ಮೊದಲೇ ಗಮನಿಸಿದ್ದೇವೆ. ಇಂಥ ಭಕ್ತಿಯನ್ನು ಕೈಕೊಳ್ಳುವ ತುಕಾರಾಮನ ಈ ದೇವರೂ ಸ್ವರ್ಗ-ಮೋಕ್ಷದ ವಾತಾವರಣದವನಲ್ಲ. ಮರದಲ್ಲಿರುವ ಫಲ ಗಿಡ್ಡವ್ಯಕ್ತಿಯ ಕೈಗೆ ಸಿಗದೇ ಇರುವಂತೆ, ದೇವರು ಎತ್ತರದಲ್ಲಿದ್ದರೆ ದೀನ-ದಲಿತರಿಗೆ ಅದರಿಂದ ಯಾವ ಪ್ರಯೋಜನವು ಇಲ್ಲ. ಹೀಗಾಗಿ ತುಕಾರಾಮನ ಪರಿಕಲ್ಪನೆಯಲ್ಲಿರುವ ದೇವರು ಜನಸಾಮಾನ್ಯರಿಗೆ ಸಮಾಧಾನ ನೀಡುವ, ಅಧಿಕಾರ ನೀಡುವ ಮತ್ತು ಮಾನವೀಯತೆಗೆ ಹೊಸ ಆಶಯ ನೀಡುವಂತಹದಾಗಿತ್ತು. ತುಕಾರಾಮನ ದೇವರು ಭಕ್ತರ ದೃಷ್ಟಿಯಲ್ಲಿ ‘ಆಟಗಾರ’ನಾಗಿರುತ್ತಾನೆ. ಈ ಆಟಗಾರ ಕೆಲವರ ಹೃದಯದ ತುಣುಕೇ ಆಗಿರುತ್ತಾನೆ. ಅವರಲ್ಲಿ ಆತ್ಮೀಯತೆ ಬೆಸೆದುಕೊಂಡಿರುತ್ತದೆ. ಸುಖದುಃಖವನ್ನು ಅವನ ಎದುರಿಗೆ ತೋಡಿಕೊಳ್ಳಬಹುದು. ಹೀಗಾಗಿ ಪುನರುಕ್ತಿಯ ಮೂಲಕ ಈ ಭಾವೋತ್ಕಟ ಸಂಬಂಧವನ್ನು ಬಣ್ಣಿಸುತ್ತಾನೆ. ಅತ್ಯಂತ ಸೂಕ್ಷ್ಮ ನಿಯಮದ ಯಜ್ಞದಲ್ಲೂ ದೋಷ ಹುಡುಕುವ ಈ ದೇವರು ಶಬರಿ ನೀಡಿದ ಎಂಜಲು ಬೋರೆಹಣ್ಣನ್ನು ಪ್ರೀತಿಯಿಂದ ಸವಿಯುತ್ತಾನೆ. ಅಲ್ಲಿ ಯಾವ ನಿಯಮವನ್ನು ಲೆಕ್ಕಿಸುವದಿಲ್ಲ. ದೇವರು ಜನಸಾಮಾನ್ಯರನ್ನು ತುಂಬಾ ಪ್ರೀತಿಸುತ್ತಾನೆ. ಗೊಲ್ಲರನ್ನು ಪ್ರೀತಿಸುವ ಕೃಷ್ಣನ ಪ್ರೀತಿಯು ಕ್ಲಿಷ್ಟ ಧರ್ಮಶಾಸ್ತ್ರದ ಪ್ರತಿಷ್ಠಿತ ನಿಯಮದಿಂದ ಕೂಡಿದ್ದಲ್ಲ. ಆವನ ಮುಗ್ಧ ಪ್ರೀತಿಯಿಂದಾಗಿ ಅವನು ಗೊಲ್ಲ ಮಕ್ಕಳ ಪ್ರಿಯ ಗೆಳೆಯನಾದ. ಇಂಥ ಅಮಾಯಕರನ್ನು ಬಳಿಗೆ ಕರೆದುಕೊಳ್ಳುವ ಈ ದೇವರಿಗೆ ಮಡಿ ಮೈಲಿಗೆಯ ಭೇದ ಭಾವವಿರಲಿಲ್ಲ. ಈ ದೇವರು ಭಿನ್ನ, ತೀರಾ ಭಿನ್ನ. ಅವನು ಮೈಲಿಗೆಯಿಂದ ನಿರ್ಲಿಪ್ತನಾಗಿದ್ದಾನೆ ಎನ್ನುವದು ತುಕಾರಾಮನ ಅಭಿಪ್ರಾಯ

ಸಂತರೇ ದೇವರು

ತುಕಾರಾಮನು ಸಾಧೂ ಮತ್ತು ದೇವರಲ್ಲಿಯ ತಾದಾತ್ಮ್ಯದ ಕುರಿತು ಹಲವು ಬಾರಿ ಹೇಳಿದ್ದಾನೆ: “ಭಕ್ತರು ದೇವರಂತೆ ದಯಾವಂತರಾಗಿರುತ್ತಾರೆ. ತನ್ನವರು ಪರಕೀಯರು ಎಂಬ ಭೇದ ಅವರು ಅರಿಯರು. ಇಂಥ ಭಕ್ತರ ಜೀವವೇ ದೇವರು. ಅವರು ನೆಲೆಸಿದ ತಾಣವೇ ವೈಕುಂಠ. ದೇವನೇ ಭಕ್ತ, ಭಕ್ತನೇ ದೇವರು, ಇವರಿಬ್ಬರಲ್ಲಿ ಭಿನ್ನಭಾವವಿಲ್ಲ-” ಎಂದೂ ತುಕಾರಾಮನು ಮತ್ತೂ ಒಂದು ಅಭಂಗದಲ್ಲಿ ಹೇಳಿದ್ದಾನೆ. ದೇವಭಕ್ತರಲ್ಲೂ ಭಿನ್ನತೆಯಿಲ್ಲ ಎಂದೂ ಮತ್ತೊಂದು ಕಡೆ ಉಲ್ಲೇಖಿಸಿದ್ದಾನೆ. ಸಂತರೇ ದೇವರು. ಪ್ರತಿಮೆ ಕೇವಲ ನಿಮಿತ್ತ ಎಂದು ಭಾವಪೂರ್ಣವಾಗಿ ಹೇಳಿದ ಮಾತು ಎಲ್ಲರೂ ಅರಿತಿರಲಿ ಎನ್ನುತ್ತಾನೆ. ನೀವು ದೇವರ ಪೂಜೆ ಮಾಡುವಾಗ ಸಂತರು ಮನೆ ಬಾಗಿಲಿಗೆ ಬಂದರೆ, ಪೂಜೆಯನ್ನು ಬದಿಗೆ ಸರಿಸಿ, ಅವರ ಕೇಳ ಜಾಗಿಯವರಾಗಿದ್ದರೂ ಸಂತರ ಪೂಜೆ ಕೈಕೊಳ್ಳಬೇಕು ಎಂದು ತುಕಾರಾಮ ಹೇಳುತ್ತಾನೆ.

ಕೋಮಲ ದೇವರು

ತುಕಾರಾಮನು ದೇವರನ್ನು ಆಟಗಾರ, ತಾಯಿ-ತಂದೆಯ ರೂಪದಲ್ಲಿ ಕಂಡಿದ್ದಾನೆ. ಹೀಗಾಗಿ ಅವರ ಸಂಬಂಧ ಆತ್ಮೀಯವಾದದ್ದು. ನನ್ನ ದೇವರು ಮುಗ್ಧ, ಕೋಮಲ ಎಂದು ಹೇಳಿದ ಮಾತು ನವಿರಾಗಿದ್ದು, ಅವರ ನಡುವಣ ಸಂಬಂಧದಲ್ಲಿ ಆತ್ಮೀಯತೆ೩, ಮನೋಜ್ಞತೆಯು ಅತ್ಯಂತ ಪ್ರಭಾವಿಯಾದ ರೀತಿಯಲ್ಲಿ ಸೂಚಿಸಲಾಗಿದ್ದು, ಇದೊಂದು ರೀತಿಯಲ್ಲಿ ತಾಯಿ-ಮಗುವಿನ ಸಂಬಂಧ. ವಿಠ್ಠಲನನ್ನು ತುಕಾರಾಮನು ತಾಯಿಯೆಂದು ಕರೆದಂತೆ, ತಂದೆಯೆಂದೂ ಸಂಬೋದಿಸಿದ ಹಲವು ಅಭಂಗಳನ್ನು ರಚಿಸಿದ್ದಾನೆ. ಅವನು ನನ್ನ ‘ತಂದೆ’ಯಾಗಿದ್ದು ಅವನಿಗೆ ಎಲ್ಲವೂ ಗೊತ್ತಿದೆ. ನನ್ನ ಸುಖ-ದುಃಖವನ್ನು ಅವನೆದುರಿಗೆ ತೋಡಿಕೊಳ್ಳುತ್ತೇನೆ-ಎಂದು ಹೇಳಿದ್ದಾನೆ. ‘ತಂದೆ’ ಎಂಬ ಶಬ್ದದಲ್ಲಿ ವಾತ್ಸಲ್ಯವಿದೆ. ಕೋಮಲ ಭಾವವೂ ಇದೆ. ಅದು ದೇವರ ಜತೆಗಿನ ಆತ್ಮೀಯತೆಯನ್ನೂ ಸೂಚಿಸುತ್ತದೆ.

ದೂರ ತಳ್ಳುವ ವೇದ, ಮಾತೆಗಿಂತಲೂ ವಾತ್ಸಲ್ಯಮಯಿ ವಿಠ್ಠಲ

ವಿಠ್ಠಲನು ಕೋಮಲ, ಕೋಮಲ ಹೃದಯಿ ಮತ್ತು ಆತ್ಮೀಯನಾಗಿರುವ ವರ್ಣನೆಯು ಅತ್ಯಂತ ಮಹತ್ವದ್ದು. ಏಕೆಂದರೆ ಮತ್ತೊಂದೆಡೆಯಲ್ಲಿರುವ ವೇದ, ಯಜ್ಞಯಾಗ, ಜಪತಪವು ಕೋಮಲವಾಗಿರದೆ, ಅತ್ಯಂತ ಕ್ರೂರ, ಕಠೋರ ಮತ್ತು ದೂರ ತಳ್ಳುವಂತಹದಾಗಿದೆ. ಅದು ಮಡಿ ಮೈಲಿಗೆಯಲ್ಲಿ ಸಿಲುಕಿದೆ. ತುಕಾರಾಮನಂತವರನ್ನೂ ಶೂದ್ರನೆಂದು ಹಂಗಿಸುವಂತಹದಾಗಿದೆ. ಅಂದರೆ ಸಕಲ ಅಧಿಕಾರವನ್ನು ನಿರಾಕಿಸುವಂತಹದು. ಜನಸಾಮಾನ್ಯರ ಕುರಿತು ಕಿಂಚಿತ್ತೂ ಪ್ರೀತಿ, ವಾತ್ಸಲ್ಯ, ಆತ್ಮೀಯತೆಯಿರಲಿಲ್ಲ. ಧಾರ್ಮಿಕ ಅಧಿಕಾರವನ್ನು ಉಲ್ಲಂಘನೆ ಮಾಡುವವರನ್ನು ಬಹಿಷ್ಕಾರ ಹಾಕಿ ಕ್ರೂರಶಿಕ್ಷೆ ನೀಡುತ್ತಿತ್ತು. ಅದರ ಸ್ವರೂಪ ನಿರ್ದಯ ಮತ್ತು ಭಾವಶೂನ್ಯವಾಗಿತ್ತು. ಆ ಭೀಷಣ ಮತ್ತು ಉಸಿರುಗಟ್ಟಿಸುವ ಅವಸ್ಥೆಗೆ ಅತ್ಯಂತ ಶ್ರೇಷ್ಠ ಮತ್ತು ನೈತಿಕವಾದ ಪರ್ಯಾಯವನ್ನು ನೀಡುವಾಗ ತುಕಾರಾಮನು ದೇವರ ಈ ಕೋಮಲ ರೂಪವನ್ನು ಮತ್ತೆ-ಮತ್ತೆ ತಬ್ಬಿಕೊಂಡಿದ್ದಾನೆ. ಇಲ್ಲಿ ಯಾವದೇ ಬಗೆಯ ಅಂತರವಿಲ್ಲ. ನಿರ್ಲಿಪ್ತತಯಿಲ್ಲ. ತುಚ್ಛತೆಯಿಲ್ಲ. ಆತ್ಮೀಯತೆಯ ಓತಪ್ರೋತವಾಗಿ ತುಂಬಿಕೊಂಡಿದೆ. ನನ್ನ ಮೇಲಿನ ಪ್ರೇಮದಿಂದಾಗಿ ನಿನ್ನ ಮೊಲೆ ಹಾಲು ಉಕ್ಕಿ ಹಾಲಿನ ಧಾರೆ ಹರಿಯುತ್ತದೆ ಎಂದವನು ದೇವರಿಗೆ ಹೇಳುತ್ತಾನೆ. ಶೂದ್ರರೆಂದು ದೂರ ತಳ್ಳುವ ವೇದ, ಮೊಲೆ ಹಾಲು ಕುಡಿಸುವ ವಿಠಾಯಿ ಇವರ ನಡುವಣ ಸಂಬಂಧ ಅತೀ ದೊಡ್ಡದು.!

ವಿಠ್ಠಲನ ಬಲದಿಂದ ಹೋರಾಟ

ತುಕಾರಾಮನ ದೃಷ್ಟಿಯಲ್ಲಿ ವಿಠ್ಠಲನ ಆಧಾರ ತುಂಬಾ ದೊಡ್ಡದು. ಜನಸಾಮಾನ್ಯರಿಗೆ ಅಧಿಕಾರವನ್ನು ನಿರಾಕರಿಸುವ ವ್ಯವಸ್ಥೆಯ ವಿರುದ್ಧ ಒಂಟಿಯಾಗಿ ಹೋರಾಡಬೇಕಿತ್ತು. ಆ ಕಾರಣಕ್ಕಾಗಿ ಖಚಿತವಾದ ಮಜಭೂತಾದ, ಗಟ್ಟಿಯಾದ ಬಲದ ಅಗತ್ಯವಿತ್ತು. ಅವನಿಗೆ ಧರ್ಮಶಾಸ್ತ್ರದ, ಶಾಸ್ತ್ರಿ-ಪಂಡಿತ್ರ ಆಧಾರವಿರಲಿಲ್ಲ. ಪರಂಪರೆಯ ಆಧಾರವೂ ಇರಲಿಲ್ಲ. ಅಷ್ಟೇಅಲ್ಲ. ಇದೆಲ್ಲದರ ವಿರುದ್ಧ ಅವನು ಹೋರಾಡಬೇಕಿತ್ತು. ಹೀಗಾಗಿ ಅವುಗಳ ಆಧಾರದ ಪ್ರಶ್ನೆಯೇ ಇರಲಿಲ್ಲ. ರಾಜಕೀಯ ಸತ್ತೆಯ ಬೆಂಬಲವೂ ಇರಲಿಲ್ಲ. ಇಸ್ಲಾಂ ರಾಜರಿದ್ದರೂ ಸಹ ಅವರು ವೈದಿಕ ಪಂಡಿತರ ವಿರೋಧದಲ್ಲಿ ತುಕಾರಾಮನಿಗೆ ಸಹಾಯ ಮಾಡುವದು ಸಾಧ್ಯವಿರಲಿಲ್ಲ. ಈ ರಾಜರ ಒಡ್ಡೋಲಗದಲ್ಲೂ ಹಿಂದೂ ಸಮಾಜರಚನೆಯ ಪ್ರಶ್ನೆ ಉದ್ಭವಿಸಿದರೆ, ಹಿಂದೂ ಧರ್ಮಶಾಸ್ತ್ರದ ಆಧಾರದಿಂದಲೇ ನಿರ್ಣಯ ನೀಡಲಾಗುತ್ತಿತ್ತು. ಸ್ವಾಭಾವಿಕವಾಗಿ, ಅಲ್ಲಿಯೂ ಶಾಸ್ತ್ರೀ ಪಂಡಿತರ ಪ್ರಭಾವವಿತ್ತು. ಇಂಥ ಪರಿಸ್ಥಿತಿಯಲ್ಲಿ ತುಕಾರಾಮನು ಸ್ವಂತ ನಿರ್ಣಯ ಸ್ವಂತ ಬಲದಿಂದ ಹೋರಾಡಬೇಕಿತ್ತು. ತುಕಾರಾಮನ ವಿಠ್ಠಲನೆಂದರೆ, ಕಲ್ಲು-ಮಣ್ಣಿನ ಅಥವಾ ಕಂಚು-ಹಿತ್ತಾಳೆಯ ಮೂರ್ತಿಯೊಳಗಿನ ವಿಠ್ಠಲನಾಗಿರಲಿಲ್ಲ. ಸ್ವಂತ ಮೌಲ್ಯದಿಂದಲೇ ರೂಪಗೊಂಡ ವಿಶೇಷ ಪ್ರತೀಕವಾಗಿದ್ದ. ಹೀಗಾಗಿ ಈ ವಿಠ್ಠಲನ ಬಲದಿಂದ ತುಕಾರಾಮನು ದೊಡ್ಡ ಹೋರಾಟ ನಡಸಿದ್ದು ಅವನ ಚರಿತ್ರೆ ಓದಿದಾಗ ಅರಿವಾಗುತ್ತದೆ. ವಿಠ್ಠಲನ ಬಲ ಸಿಕ್ಕಿದ್ದರಿಂದ ತನಗೆ ಈಗ ಯಾರ ಭೀತಿಯೂ ಇಲ್ಲವೆಂದು ಅವನು ಆಗಾಗ ಹೇಳಿದ್ದಾನೆ.

ತುಕಾರಾಮನು ಅನಿಷ್ಟ ಪರಂಪರೆಯ ವಿರುದ್ಧ ಹೋರಾಟ ಆರಂಭಿಸಿದ್ದು, ಅತ್ಯಂತ ಗಂಡಾಂತರಕರಿಯಾದ ಕಾರ್ಯವೆನ್ನಬೇಕು. ಅದು ಜೀವಕ್ಕೆ ಅಪಾಯ ತರುವಂತಹದಾಗಿತ್ತು. ಹೋರಾಡುವಾಗ ಸ್ವಂತ ಮನೋಬಲ ಬಿಟ್ಟರೆ ಬೇರೇನೂ ಅವನ ಬಳಿಯಿರಲಿಲ್ಲ. ಹೀಗಿರುವಾಗ ವಿಠ್ಠಲನ ಬಲ ಅವನ ಮನೋಬಲವನ್ನು ಹೆಚ್ಚಿಸಿತು. ವಿಠ್ಠಲನಿಂದಾಗಿ ನಿರ್ಭಯವಾಗಿ ಹೋರಾಡಲು ಒಂದು ಖಚಿತವಾದ ನೆಲೆಗಟ್ಟು ಅವನಿಗೆ ಲಭಿಸಿತು. ಅವನಿಗೆ ಒಪ್ಪಿಗೆಯಾದ ವಿಠ್ಠಲನ ಈ ಆಧಾರಕ್ಕೂ ದೈವವಾದಕ್ಕೂ ಯಾವ ಸಂಬಂಧವೂ ಇಲ್ಲ. ಮೌಲ್ಯದ ಹೋರಾಟ ನಡೆಸುವವನಿಗೆ ಯಾವುದೇ ಬಗೆಯ ಒಂದು ನೈತಿಕ ಬಲ ಬೇಕೆ ಬೇಕು. ಈ ಹಿನ್ನಲೆಯಲ್ಲಿ ತುಕಾರಾಮನು ವಿಠ್ಠಲನ ಬಲವನ್ನು ಸಹಾಯಕ್ಕೆ ಪಡೆದನು. ಆದರೂ ಮನುಷ್ಯ ಪ್ರಯತ್ನವನ್ನು ಗೌಣವಾಗಿ ಕಾಣಲಿಲ್ಲ. ಅದರ ಮಹತ್ವವನ್ನೂ ನಿರಾಕರಿಸಲಿಲ್ಲ. ಅದರ ಬದಲು ಅವನು ಪ್ರಯತ್ನಕ್ಕೆ ಗೌರವ ನೀಡಿದಂತೆ ಕಂಡುಬರುತ್ತದೆ. ಇದಕ್ಕೆ ಅವರ ಚರಿತ್ರೆಯೇ ಸಾಕ್ಷಿ ಎಂದು ನನ್ನ ಅನಿಸಿಕೆ. ದೇವರು ಇಟ್ಟಂತೆ ಇರಬೇಕು-ಎಂಬರ್ಥದ ಅವನ ನಿಲುವನ್ನು ಆಧರಿಸಿ, ಅವನನ್ನು ದೈವವಾದಿ, ಪಲಾಯನವಾದಿ, ಪರಾಭೂತವಾದಿ ಎಂದೆಲ್ಲ ನಿರ್ಣಯಿಸುವುದು ತೀರಾ ಆನ್ಯಾಯದ್ದು. ಅವರ ಈ ಬಗೆಯ ನಿಲುವು ಬೇರೆ ಅರ್ಥವನ್ನು ಹೊಂದಿರುವಂತಹದು. ಪ್ರತಿಕೂಲ ಪರಿಸ್ಥಿತಿಯು ಅನುಭವಿಸುವುದು ಖಚಿತವಾಗಿದ್ದರೆ, ಶಾಂತವಾಗಿ ಅದನ್ನು ಎದುರಿಸಬೇಕು ಎನ್ನುವುದು ಅವನ ಅಭಿಪ್ರಾಯವಾಗಿದೆ. ಪ್ರತಿಕೂಲ ಪರಿಸ್ಥಿತಿಯನ್ನು ಬದಲಾಯಿಸುವ ಯಾವ ಪ್ರಯತ್ನವನ್ನೂ ಮಾಡಬಾರದು. ಎಲ್ಲ ಭಾರವನ್ನು ದೇವರ ಮೇಲೆ ಹಾಕಿ ನಿಷ್ಕ್ರಿಯರಾಗಬೇಕು ಎನ್ನುವುದು ಅವನ ಮಾತಿನ ಅರ್ಥವಲ್ಲ. ಈ ಮುಂದಿನ ವಿವೇಚನೆಯಿಂದ ಅದು ಮತ್ತಷ್ಟು ಸ್ಪಷ್ಟಗೊಳ್ಳಬಹುದು.

ದೈವಾದಿಯಾಗಿದ್ದರೆ ಏಕೆ ಹೋರಾಡುತ್ತಿದ್ದರು

ತುಕಾರಾಮನು ಪ್ರಯತ್ನವಾದಕ್ಕೆ ಬೆಂಬಲ ನೀಡಿದ ಪುರಾವೆಯು ಅವನ ನಡೆನುಡಿಗಳಲ್ಲಿ ಆಚಾರ ವಿಚಾರಗಳಲ್ಲಿ ಗುರುತಿಸಬಹುದು. ಅವನು ದೈವವಾದಿಯಾಗಿದ್ದರೆ ತನ್ನ ಸುತ್ತಲೂ ಗೋಚರಿಸುವ ಧಾರ್ಮಿಕ ವ್ಯವಸ್ಥೆಯನ್ನು ಮೌನವಾಗಿ ಒಪ್ಪಿಕೊಳ್ಳುತ್ತಿದ್ದನು. ಆದರೆ ಅವನು ಅದನ್ನು ಸಂಪೂರ್ಣ ಉಧ್ವಸ್ತಗೊಳಿಸಲು ಇಡೀ ಬದುಕು ಹೋರಾಟ ನಡೆಸಿದನು. ವೈದಿಕ ಪಂಡಿತರ ದ್ವೇಷವನ್ನು ಸಹಿಸಿದನು. ಸ್ವಂತ ವ್ಯಕ್ತಿತ್ವ ಮತ್ತು ಕೌಟುಂಬಿಕ ಜೀವನವನ್ನು ಹಾಳು ಮಾಡಿಕೊಂಡನು. ಅವನು ದೈವವಾದಿಯಾಗಿದ್ದರೆ ಎಲ್ಲಾದರೂ ತಾಳ ಕುಟ್ಟುತ್ತ ಕೂತಿರುತ್ತಿದ್ದ. ಈ ಉಪದ್ವ್ಯಾಪ ಮಾಡುವ ಅಗತ್ಯವಾದರೂ ಏನಿತ್ತು? ಉದ್ಧಟರ ನೆತ್ತಿಯನ್ನು ಕುಕ್ಕುವ ದುಷ್ಟರ ನಿರ್ಮೂಲನೆ ಮಾಡುವ ಢೋಂಗಿಗಳನ್ನು ಕೆನ್ನೆಗೆ ಬಿಗಿಯುವ ಮಾತನ್ನೇ ಬಳಸುತ್ತಿರಲಿಲ್ಲ. ರೂಢಿಯಲ್ಲಿರುವ ಅನ್ಯಾಯದ ವಿರುದ್ಧ ಸಿಡಿಲಿನಂತೆ ಎರಗಿದ. ಇದು ಕ್ರಿಯಾಶೀಲತೆಯ ದ್ಯೋತಕವೋ, ನಿಷ್ಕ್ರಿಯತೆಯದೋ? ಅವನು ಪ್ರಯತ್ನವಾದಿಯೋ ದೈವವಾದಿಯೋ? ಸಮಾಜದ ಶುದ್ಧಿಕರಣಕ್ಕಾಗಿ ೨೦-೨೨ ವರುಷಗಳ ಕಾಲ ಹಗಲು-ರಾತ್ರಿ ದುಡಿದದ್ದು ಪಲಾಯನವಾದಿಯ ಸೂಚಕವೆ? ತುಕಾರಾಮನು ನಡೆಸಿದ ಈ ಹೋರಾಟಕ್ಕೆ ದೈವವಾದದ ಕಳಂಕ ಕಿಂಚಿತ್ತೂ ಸ್ಪರ್ಶಿಸಲಿಲ್ಲ ಎಂದೇ ಹೇಳಬೇಕಾಗುತ್ತದೆ.

ನಾನು ಬ್ರಹ್ಮದೇವನ ಸ್ವಯಂಭು ಅಪ್ಪ

ತುಕಾರಾಮನು ದೈವವಾದವನ್ನು ಎಂದಿಗೂ ಪುರಸ್ಕರಿಸಲಿಲ್ಲ ಎಂಬುದನ್ನು ಮುಂದಿನ ಅಭಂಗದಿಂದ ಸಾಬೀತು ಪಡಿಸಬಹುದು. “ತಾನು ವಿಧಿಯ ಜನ್ಮದಾತನು. ತಾನು ಸ್ವಯಂಭು, ತಾನು ಸಿದ್ಧನಾಗಿದ್ದೇನೆ. ಬೇರೆಯವರಿಂದ ನಿರ್ಮಾಣ ಗೊಂಡವನಲ್ಲ. ವಿಧಿಯೆಂದರೆ ಬ್ರಹ್ಮದೇವ. ಜೀವ ಹುಟ್ಟಿದ ತಕ್ಷಣ ಹಣೆಯ ಮೇಲೆ ಹಣೆಬರಹ ಬರೆಯುವ ಬ್ರಹ್ಮದೇವನ ಸ್ವರೂಪವೆಂದರೆ ವಿಧಿ ಲಿಖಿತ. ಬ್ರಹ್ಮದೇವ ಸೃಷ್ಟಿಕರ್ತನೂ ಹೌದು. ವಿಧಿಯಾಗಿದ್ದರಿಂದ ಎಲ್ಲರ ಹಣೆಬರಹವನ್ನು ನಿಶ್ಚಿಯಗೊಳಿಸುವಂತವನೆಂದೂ ಭಾವಿಸಲಾಗುತ್ತದೆ. ತುಕಾರಾಮ ಮಾತ್ರ ತಾನು ವಿಧಿಯಿಂದ ನಿರ್ಮಾಣಗೊಳ್ಳದೇ ತಾನೇ ಅವನನ್ನು ನಿರ್ಮಾಣ ಮಾಡಿದ್ದೇನೆ- ಎಂದೆನ್ನುತ್ತಾನೆ. ವಿಧಿ ನಮ್ಮ ಹಣೆಬರಹ ಬರೆಯದೆ ತಾನೇ ಅದರ ಹಣೆಬರಹ ಬರೆದಿರುವದಾಗಿಯೂ ಹೇಳುತ್ತಾನೆ. ಬ್ರಹ್ಮದೇವನನ್ನು ಸ್ವಯಂಭು ಎನ್ನಲಾಗುತ್ತದೆ. ಆದರೆ ಅವನು ನಮ್ಮ ಕಲ್ಪನೆಯಿಂದ ಹುಟ್ಟಿದ್ದರಿಂದ ಅವನು ಸ್ವಯಂಭು ಅಲ್ಲ. ತಾನೇ ಸ್ವಯಂಭು, ತಾನು ಸಿದ್ಧ, ಸ್ವಯಂಸಿದ್ಧ. ಬೇರೆಯಾರೂ ತನ್ನನ್ನು ಸಿದ್ದಪಡಿಸಲಿಲ್ಲ. ಹಣೆಬರಹ ಬರೆದಿಲ್ಲ. ನಾನು ಸ್ವಂತ ಜನಿಸಿದ್ದೇನೆ-ಎಂಬ ತುಕಾರಾಮನ ಅಭಂಗ ಪ್ರಸಿದ್ಧವಾದದ್ದು. ತನ್ನ ಬದುಕಿನ ರೂಪ ರೇಷೆಯನ್ನು ತಾನೇ ನಿರ್ಮಿಸುವ ಕ್ರಿಯಾಶೀಲತೆಯ ಬಗೆಗೆ ತುಕಾರಾಮನಿಗೆ ಅಪಾರ ವಿಶ್ವಾಸ. ಹೀಗಾಗಿ ಬ್ರಹ್ಮನೆಂಥ ಹಣೆಬರಹ ಬರೆಯುತ್ತಾನೆ? ನಾನೇ ಅವನ ಸ್ವಯಂಭು ಅಪ್ಪ ಎಂಬ ಮಾತಿನಲ್ಲಿ ಅಪಾರ ಆತ್ಮ ವಿಶ್ವಾಸ ಅಡಗಿದೆ.

ಯಾವುದೂ ಅಸಾಧ್ಯವಲ್ಲ

‘ಭಿಕ್ಷಾಪಾತ್ರೆ ಹಿಡಿಯುವುದು ನಾಚಿಕೆಗೇಡಿನ ಸಂಗತಿ. ಸುಖದಿಂದ ಸಂಸಾರ ಸಾಗಿಸಿ , ಉತ್ತಮ ವ್ಯವಹಾರದಿಂದ ಧನಗಳಿಸಿ’ ಎಂದೆನ್ನುವ ತುಕಾರಾಮನ ಉಪದೇಶವು ಮಾನವನ ಪ್ರಯತ್ನವನ್ನು ಗೌರವಿಸುವಂತಹದು. ಇಂಥ ಆಶಯದ ಹಲವು ಅಭಂಗಗಳಿವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ನೋಡೋಣ. ಒಂದು ಅಭಂಗದಲ್ಲಿ ಹೀಗೆನ್ನುತ್ತಾನೆ: ರೂಢಿಯಾಗಲೆಂದು ಕೆಲವರು ವಿಷವನ್ನೇ ಕಣಕಣ ಸೇವಿಸುತ್ತಾರೆ. ಉಳಿದವರಿಗೆ ಇದನ್ನು ಕಣ್ಣಿಂದ ನೋಡುವದಕ್ಕಾಗುವುದಿಲ್ಲ. ಕೆಲವರು ಹಾವನ್ನು ಹಿಡಿಯುತ್ತಾರೆ. ಉಳಿದವರು ಅದನ್ನು ಕಂಡು ನಡುಗಿ ಕಂಗಾಲಾಗುತಾರೆ. ಹಾಗೆ ಯಾವ ಕಾರ್ಯವೂ ಅಸಾಧ್ಯವಲ್ಲ. ಅಧ್ಯಯನ, ಅಭ್ಯಾಸವೇ ಈ ಯಶಸ್ಸಿನ ಹಿಂದಿನಗುಟ್ಟು. ರೂಢಿಯ ಬಲದಿಂದ ಸಾವನ್ನೂ ಸಹ ಎದುರಿಸಬಹುದೆಂದು ತುಕಾರಾಮನು ಸೋದಾರಣವಾಗಿ ಸ್ಪಷ್ಪಪಡಿಸಿದ್ದಾನೆ. ಇಲ್ಲೂ ಪ್ರಯತ್ನವಾದಕ್ಕೆ ಮಹತ್ವ ನೀಡಿದ್ದಾನೆ. ಪರಿಶ್ರಮ ಪಟ್ಟರೆ ಯಾವುದೇ ಅಸಾಧ್ಯವಲ್ಲ ಎಂದೆನ್ನುತ್ತಾನೆ. ಈ ವಿಶ್ವಾಸದಿಂದಾಗಿಯೇ ಸಮಾಜ ಸುಧಾರಣೆಗಾಗಿ ಹಗಲಿರುಳು ಪರಿಶ್ರಮ ಪಟ್ಟ. ಯಾವುದಾದರೂ ಕಾರ್ಯ ಅಸಾಧ್ಯವೆಂದುಕೊಂಡು ಸುಮ್ಮನಿದ್ದು ಬಿಡುವುದು, ಪಾಲಿಗೆ ಬಂದದ್ದರಲ್ಲೇ ಸಮಾಧಾನ ಹೊಂದುವುದು ತುಕಾರಾಮನ ವೃತ್ತಿಯಲ್ಲ.

ಮತ್ತೊಂದು ವಚನದಲ್ಲಿ ಹೀಗೆ ಹೇಳಲಾಗಿದೆ. ‘ಸಸಿಗೆ ಆಗಾಗ ನೀರು ಎರೆಯುತ್ತಿರಬೇಕು. ಒಣಗಿದಾಗ ಹಾಕಿದರೆ ಅಂಕುರ ಬೆಳೆಯುವುದಿಲ್ಲ. ಯಾವ ಕಲ್ಲು ಉಳಿಯ ಆಘಾತವನ್ನು ಸಹಿಸುತ್ತದೋ ಅದಕ್ಕೆ ದೇವತ್ವ ಸಹ ಪ್ರಾಪ್ತವಾಗುತ್ತದೆ. ಕಲ್ಲು ಒಡೆದರೆ ಮಾತ್ರ ನಿಷ್ಪ್ರಯೋಜಕ’ ತುಕಾರಾಮನು ಪ್ರಯತ್ನವನ್ನು ಪುರಸ್ಕರಿಸಿದವನು. ಕಾರ್ಯಸಿದ್ಧಿಗಾಗಿ ಸತತ ಪ್ರಯತ್ನಶೀಲರಾಗಬೇಕು. ಅದೂ ಸಹ ಸಕಾಲಕ್ಕೆ ಜರುಗಬೇಕು ಎಂಬುದನ್ನು ತಿಳಿಸಲು ಸಸಿಯ ಉದಾಹರಣೆ ನೀಡಿದ್ದಾನೆ. ಮೂರ್ತಿ ನಿರ್ಮಾಣದ ಉದಾಹರಣೆಯ ಮೂಲಕವಂತೂ ಪ್ರಭುತ್ವದ ಶಿಖರ ಸ್ಥಿತಿಯನ್ನು ತಲುಪಿದ್ದಾನೆ. ತನ್ನ ಇಷ್ಟ ಪ್ರಾಪ್ತಿಗಾಗಿ ಮನುಷ್ಯನು ತುಂಬಾ ಶ್ರಮಪಡಬೇಕು. ಆಘಾತ ಸಹಿಸಬೇಕು, ಸಂಕಟ ಎದುರಿಸಬೇಕು. ಯಾರು ಈ ಸಂಕಟದಲ್ಲಿ ಕಾದು ಯಶಸ್ವಿಯಾಗುತ್ತಾನೋ ಅವನು ಗೌರವಕ್ಕೆ ಪ್ರಾಪ್ತನಾಗುತ್ತಾನೆ. ಇಲ್ಲಿ ನೀಡಿದ ಕಲ್ಲಿನ ಉದಾಹರಣೆಯು ಅವನ ಪ್ರತಿಭಾಶಕ್ತಿಯ, ಅಪಾರ ನಿರ್ಮಿತಿ ಶಕ್ತಿಯ ಮತ್ತು ಮಾನವ ಪ್ರಯತ್ನದ ಬಗೆಗೆ ಅವನಿಗಿರುವ ಅಖಂಡ ನಿಷ್ಠೆಯನ್ನು ತೋರಿಸುತ್ತದೆ.

ಬದುಕಿನಲ್ಲಿ ಹೋರಾಡುವಾಗ ಮೊದಲು ತಮ್ಮ ನಿಲುವನ್ನು ಖಚಿತ ಪಡಿಸಿಕೊಳ್ಳಬೇಕು. ಆನಂತರ ಧ್ಯೇಯಪ್ರಾಪ್ತಿಗಾಗಿ ಸಾವನ್ನೂ ಎದುರಿಸುವ ಮಾನಸಿಕ ಸಿದ್ಧತೆ ಬೇಕು ಎಂಬುದನ್ನು ಹೇಳುವಾಗ ತುಕಾರಾಮನು ಒಂದು ಆಭಂಗದಲ್ಲಿ ಹೀಗೆನ್ನುತ್ತಾನೆ. “ಗೂಟವನ್ನು ಅಲುಗಿಸಿ ಗಟ್ಟಿಯಾಗಿ ಹೂಳಬೇಕು. ಆನಂತರ ಮಾಡಬೇಕಾದ ಕಾರ್ಯವನ್ನು ಮುಂದುವರಿಸಬೇಕು. ಈ ಕಾರ್ಯ ಮಾಡುವಾಗ ಸುಖ ದುಃಖವನ್ನು ಸಹಿಸುವವನು ಶ್ರಮ ಮಾಡಲು ಹಿಂಜರಿಯುವುದಿಲ್ಲ. ಮನುಷ್ಯನು ತನ್ನ ಸಾಧ್ಯ ಪ್ರಾಪ್ತಿಗಾಗಿ ಸಾವನ್ನೂ ಎದುರಿಸಲು ಸಿದ್ಧನಾಗಬೇಕಾಗುತ್ತದೆ. ” ಸಾವನ್ನು ಎದುರಿಸುವ ಮಾನಸಿಕ ಸಿದ್ಧತೆಯ ಕುರಿತು ಹೇಳುವ ಈ ವಿಚಾರವು ಪ್ರಯತ್ನವಾದಕ್ಕೆ ಸಂಬಂಧಿಸಿದ್ದು. ಯಶಗಳಿಸಲು ತ್ಯಾಗ ಸಮರ್ಪಣೆಯ ಕಾಲಕ್ಕೆ ಎಲ್ಲವನ್ನೂ ಕಳೆದುಕೊಳ್ಳುವ ಸಿದ್ಧತೆ ಹೊಂದಿರಬೇಕು.- ‘ಒಂದು ಬೀಜವನ್ನು ಉತ್ತಿದರೆ ಅದರಿಂದ ಮತ್ತೆ ಧಾನ್ಯ ಪಡೆಯಬಹುದು. ಪರಿಶ್ರಮ ಪಡೆದ ಹೊರತು ಲಾಭ ಸಿಗಲಾರದು. ಕೃಷಿಗೆ ಸಂಬಂಧಿಸಿದ ಇಂತಹದೇ ಮತ್ತೊಂದು ಅಭಂಗ ಹೀಗಿದೆ. ಹೊಲದಲ್ಲಿ ಒಂದು ಬೀಜ ಬಿತ್ತಿದರೆ ಬುಟ್ಟಿತುಂಬ ಧಾನ್ಯ ಸಿಗುತ್ತದೆ. ಹಲವು ಬೀಜದಿಂದ ಗಾಡಿ ತುಂಬ ಧಾನ್ಯಪ್ರಾಪ್ತಿ. ಬಿತ್ತಿದ ಬೀಜ ಹುಸಿಹೋಗುವುದಿಲ್ಲ. ಆಗವನಿಗೆ ಲಾಭದ ಕಲ್ಪನೆ ಬರುತ್ತದೆ. ಗಿಡಕ್ಕೆ ಸರಿಯಾಗಿ ಮಡಿ ಮಾಡಿದರೆ ಫಲ ದೊರಕುತ್ತದೆ. ಕೃಷಿಯ ಮತ್ತೂ ಉದಾಹರಣೆ ಗಮನಿಸಿ: ರೈತಾಪಿ ಕಾರ್ಯ ಮಾಡುವ ಜನರು ಉತ್ತಿಗೆಯ ಯೋಗ್ಯ ಹೊತ್ತು ಬಂದರೆ, ಹೆಣವನ್ನು ಮುಚ್ಚಿಟ್ಟಾದರೂ ಮೊದಲು ಉತ್ತಿಗೆ ಕಾರ್ಯ ಮಾಡುತ್ತಾರೆ. ಮನುಷ್ಯನಾದವನು ಈ ಪದ್ಧತಿ ಅನುಸರಿಸಿ ತನ್ನ ಹಿತ ಸಾಧಿಸಿಕೊಳ್ಳಬೇಕು. ಉತ್ತುವಾಗ ರೈತನ ಉಡಿಯಲ್ಲಿದ್ದ ಬೀಜಕ್ಕಿಂತ, ಕೈಯಲ್ಲಿದ್ದ ಬೀಜ ಪ್ರಗತಿಯ ಮುಂದಿನ ಹಂತಕ್ಕೆ ಸಂಬಂಧಿಸಿದ್ದು, ಮನುಷ್ಯನೂ ಸ್ವಂತ ವಿಷಯದ ಬಗೆಗೆ ಹೀಗೆಯೇ ಯೋಚಿಸಬೇಕು. ಕಾಲದ ಸತ್ತೆ ನಮ್ಮ ಕೈಯಲ್ಲಿಲ್ಲ. ಈ ಸಿಕ್ಕು ಪ್ರಾಜ್ಞರಿಗೆ ಅರಿವಾಗುತ್ತದೆ. ಬುದ್ದಿವಂತನಾದವನು ಈ ಸೂಚನೆಯಂತೆ ಮರ್ತ್ಯಲೋಕದಲ್ಲಿ ವ್ಯವಹರಿಸುತ್ತಾನೆ.

ಈ ಸಂದರ್ಭಕ್ಕೆ ಅನುಸರಿಸಿ ಮತ್ತೆ ಕೆಲವು ಅಭಂಗಗಳನ್ನು ಗಮನಿಸೋಣ. ಒಂದು ಅಭಂಗ ಹೀಗಿದೆ. “ಮೊಸರಿನಲ್ಲಿ ಬೆಣ್ಣೆಯಿರುವದು ಎಲ್ಲರಿಗೂ ಗೊತ್ತಿರುವ ಸಂಗತಿ. ಯಾರಿಗೆ ಮಂಥನ ಮಾಡುವದು ಗೊತ್ತಿದೆಯೋ ಅವರಿಗೆ ಬೆಣ್ಣೆ ಲಭಿಸುತ್ತದೆ. ಕಟ್ಟಿಗೆಯಲ್ಲೂ ಅಗ್ನಿಯಿರುವುದೂ ಗೊತ್ತಿರುವ ಸಂಗತಿ. ಆದರೆ ಘರ್ಷಣೆ ಮಾಡದ ಹೊರತು ಬೆಂಕಿ ಹೊತ್ತಿಕೊಳ್ಳುವುದಿಲ್ಲ. ಕನ್ನಡಿಯಲ್ಲಿ ಮುಖ ಮಲೀನವಾಗಿ ಗೋಚರಿಸುವದಾದರೂ ಹೇಗೆ? ಮತ್ತೂ ಒಂದು ಅಭಂಗದಲ್ಲಿ ತುಕಾರಾಮ ಅನ್ನುತ್ತಾನೆ- ಹರಳು ಆರಿಸಿ ಚೆಲ್ಲಿದರೆ ಕಾಳಿನಿಂದ ಸ್ವಚ್ಛ ಹಿಟ್ಟು ಸಿಗುತ್ತದೆ. ಆಲಸ್ಯ ಮಾಡಿದರೆ ಎಲ್ಲವೂ ಹದಗೆಡುತ್ತದೆ. ಕಳೆಕಿತ್ತು ಫಸಲು ಸಂರಕ್ಷಿಸಬೇಕಾಗುತ್ತದೆ. ಈ ರೀತಿ ನೀತಿಯಿಂದ ವರ್ತಿಸದಿದ್ದರೆ ಎಂದೂ ಹಿತವಾಗುವುದಿಲ್ಲ. ಮತ್ತೂ ಒಂದು ಅಭಂಗದಲ್ಲಿ ಅವನು ಪ್ರಶ್ನಿಸುತ್ತಾನೆ, ಅಗ್ನಿಯು ಯಾರನ್ನೂ ಕರೆದು ಮೈಕಾಸಿಕೋ ಎಂದೆನ್ನುವುದಿಲ್ಲ. ಚಳಿ ಹತ್ತಿದವನೇ ಮೈ ಕಾಸಿಕೊಳ್ಳಬೇಕು. ನಿರು ಬನ್ನಿ ನನ್ನನ್ನು ಕುಡಿಯಿರಿ ಎಂದೆನ್ನುವುದಿಲ್ಲ. ನೀರಡಿಸಿದವನು ನೀರು ಕುಡಿಯಲು ಧಾವಿಸುತ್ತಾನೆ. ಬಟ್ಟೆ ಎಂದಾದರೂ ನನ್ನನ್ನು ಉಟ್ಟುಕೊಳ್ಳಿ ಎಂದೆನ್ನುತ್ತದೆಯೇ? ಜಗತ್ತು ತನ್ನಿಚ್ಛೆಯಂತೆ ಬಟ್ಟೆಯನ್ನು ಪರಿಧಾನ ಮಾಡಿಕೊಳ್ಳುತ್ತದೆ. ಇದೇ ಬಗೆಯ ಹಲವು ಅಭಂಗಗಳನ್ನು ಅವನು ರಚಿಸಿದ್ದು ಕಂಡು ಬರುತ್ತದೆ. ಮಾದರಿಗಾಗಿ ಇಷ್ಟು ಅಭಂಗಗಳ ಅರ್ಥ ತಿಳಿದುಕೊಂಡಿದ್ದು ಸಾಕು. ಮನುಷ್ಯ ಸ್ವತಃ ಓಡಾಡಬೇಕು. ಪ್ರಯತ್ನಿಸಬೇಕು. ಅನಿಷ್ಟವನ್ನು ಕೂಡ ಸರಿಸಬೇಕು. ಅಲಸ್ಯ ನಿಷ್ಕ್ರಿಯತೆ ಸರ್ವಥಾ ಸಲ್ಲ. ಪ್ರಯತ್ನದ ವಿನಾ ಯಾವ ಫಲವೂ ಸಿಗಲಾರದು. ಮುಂತಾದ ವಿಚಾರಗಳು ಮಾನವ ಪ್ರಯತ್ನವನ್ನು ಗೌರವಿಸುವಂತಹದು. ಆದ್ದರಿಂದಲೇ ತುಕಾರಾಮನನ್ನು ದೈವವಾದಿಯೆಂದು ನಿರ್ಧರಿಸಿ, ಅವನ ಸಾಹಿತ್ಯವನ್ನು ದೂರ ಸರಿಸುವ ಪ್ರಯತ್ನವೂ ತೀರಾ ಅನುಚಿತವೆಂದು ಭಾವಿಸಬೇಕಾಗುತ್ತದೆ.