ನೆತ್ತಿಗೇರಿದ ಪಿತ್ತ

ತುಕಾರಾಮನು ವೈದಿಕ ಪಂಡಿತ್ರ ವರ್ಚಸ್ಸಿರುವ ಜೀವನ ಪದ್ಧತಿ ಮತ್ತು ಧಾರ್ಮಿಕ ವ್ಯವಸ್ಥೆಗೆ ಆಘಾತ ನೀಡುವಂತಹ ಆಚಾರ-ವಿಚಾರಗಳನ್ನು ಬೆಂಬಲಿಸುತ್ತಿದ್ದ. ಅವನು ನೀಡಿದ ಉಪದೇಶವು ಜನರ ಮನದ ಮೇಲೆ ಆಳವಾದ ಪ್ರಭಾವ ಬೀರುತ್ತಿರುವುದನ್ನು ಈಗಾಗಲೇ ಕೈಕೊಂಡ ವಿವೇಚನೆಯಿಂದ ಸ್ಪಷ್ಟವಾಗುತ್ತದೆ. ತುಕಾರಾಮನ ಈ ರೀತಿಯ ಆಕ್ರಮಣದಿಂದ ಪಂಡಿತರ ಸಾಮಾಜಿಕ ಪ್ರತಿಷ್ಠೆ, ಸಮಾಜದ ಮೇಲಿನ ನಿಯಂತ್ರಣ, ಆರ್ಥಿಕ ಆದಾಯ ಮತ್ತು ಅವರ ಒಟ್ಟೂ ಹಿತಾಸಕ್ತಿಗೆ ಬಿರುಕು ಬಿಡುವಂತಾಯಿತು. ಇದರಿಂದ ಅವರ ಪಿತ್ತ ನೆತ್ತಿಗೇರುವಂತಾಗಿದ್ದು ಸುಳ್ಳಲ್ಲ. ತಲೆ-ತಲೆಮಾರಿನಿಂದ ಬೆಳೆಯುತ್ತ ಬಂದ ಅವರ ಅಹಂಕಾರ ಘಾಸಿಗೊಂಡಿತು. ತಮ್ಮ ಹಿತಾಸಕ್ತಿ ಉಳಿಯಬೇಕು ಎಂದಾದಲ್ಲಿ ತುಕಾರಾಮನ ಬಾಯಿಗೆ ಬೀಗ ಹಾಕುವ ಅಗತ್ಯವಿದೆಯೆಂದೆನಿಸತೊಡಗಿತು. ಈಗಿರುವ ಏಕೈಕ ಮಹತ್ವದ ಮಾರ್ಗವೆಂದರೆ ಅವನನ್ನು ನ್ಯಾಯಾಲಯಕ್ಕೆ ಎಳೆಯುವದು. ಈ ಪ್ರಕರಣದಲ್ಲಿ ಅವನ ಮೇಲೆ ಹಾಕಿದ ಖಟ್ಲೆಯ ಕುರಿತು ಚರ್ಚಿಸೋಣ.

ತುಕಾರಾಮನು ಸಾಲದ ಹೊತ್ತಿಗೆಯನ್ನು ಮುಳುಗಿಸಿದ್ದು ಮಹಾರಾಷ್ಟ್ರದಲ್ಲಿ ಹೇಗೆ ಅಪರಿಚಿತವಾಗುಳಿಯಿತೋ, ಹಾಗೆಯೇ ಅವನ ಮೇಲೆ ಹಾಕಿದ ಖಟ್ಲೆಯೂ ಸಹ ಜನರ ಮನದ ಮೇಲೆ ಗಂಭೀರವಾದ ಪರಿಣಾಮ ಬೀರುವ ರೀತಿಯಲ್ಲಿ ಮಂಡಿಸಲಾಗಿಲ್ಲ. ಅವನ ಗಾಥೆ ಮುಳುಗಿಸಲಾಯಿತು. ಅವನಿಗೆ ಚಿತ್ರಹಿಂಸೆ ನೀಡಲಾಯಿತು ಎಂಬ ಸಂಗತಿಗಳು ಜನರಿಗೆ ಖಚಿತವಾಗಿ ಗೊತ್ತಿರುತ್ತದೆ. ಆದರೆ ಖಟ್ಲೆಯ ಕುರಿತು ಮಾತ್ರ ಗಂಭೀರವಾದ ಚರ್ಚೆ ನಡೆಯುವುದಿಲ್ಲ. ಆದರೆ ಪ್ರತ್ಯಕ್ಷವಾಗಿ ಅವನ ಮೇಲೆ ಖಟ್ಲೆ ಹೇರಿದ್ದು ಮಾತ್ರ ಚಾರಿತ್ರಿಕ ಸತ್ಯ. ಅನಂತರ ಆ ಖಟ್ಲೆಯು ಸರಿಯಾಗಿ ಜರುಗಿತೋ ಇಲ್ಲವೋ ಎಂಬ ಮಾತು ಬೇರೆ.

ಬೇಂದ್ರೆರಾನಡೆಯವರ ಅಭಿಪ್ರಾಯ

ತುಕಾರಾಮನು ಬದುಕಿನ ಉದ್ದಕ್ಕೂ ನಡೆಸಿದ ಸಂಘರ್ಷದ ಕಥೆಯು ಸರಿಯಾಗಿ ಅರ್ಥವಾಗಬೇಕಾದರೆ, ಅವನ ಮೇಲೆ ಹಾಕಲಾಧ ಖಟ್ಲೆಯ ವಿವರವನ್ನು ತಿಳಿದುಕೊಳ್ಳುವುದು ತೀರಾ ಅಗತ್ಯವಾದುದು- ಎಂದು ನನ್ನ ಅಭಿಪ್ರಾಯ. ಈ ಖಟ್ಲೆಯ ಹೆಚ್ಚಿನ ಚರ್ಚೆ ಕೈಕೊಳ್ಳುವ ಮುನ್ನ ವಾ.ಸೀ.ಬೇಂದ್ರೆಯವರು ಹೇಳಿದ ಕೆಲವು ಮಾತುಗಳನ್ನು ಗಮನಿಸುವುದು ಯೋಗ್ಯ. .ಅವರು ಅನ್ನುತ್ತಾರೆ: “ತುಕಾರಾಮನು ವರ್ಣಾಶ್ರಮ ಧರ್ಮವನ್ನು ಬಿಟ್ಟು ವರ್ತಿಸಿದನು-ಎಂದು ಆರೋಪ ಮಾಡಲಾಗುತ್ತದೆ. ಧರ್ಮಾಚಾರದ ಬಗೆಗೆ ಆಧಿಕಾರವಿಲ್ಲದೆ ಬರೆದದ್ದಕ್ಕಾಗಿ ದಿವಾಣ ನ್ಯಾಯಾಲಯದಲ್ಲಿ ನಾಲ್ಕಾರು ಜನರು ವಾದ-ವಿವಾದ ಮಾಡಿ ಅವನನ್ನು ಗುನ್ಹೆಗಾರನೆಂದು ನಿರ್ಣಯಸಿಲಾಯಿತು. ಈ ಕಾರ್ಯ ಶ್ರೇಷ್ಠ ವರ್ಣದವರ ವ್ಯಕ್ತಿಗತ ದರ್ಪ ದಬ್ಬಾಳಿಕೆಯಿಂದ ಜರುಗಿದ್ದಲ್ಲ” ತುಕಾರಾಮನ ವಿರುದ್ಧ ಬ್ರಾಹ್ಮಣರು ದಿವಾಣ ನ್ಯಾಯಾಲಯದಲ್ಲಿ ತಕರಾರು ಸಲ್ಲಿಸಿದರು ಎಂದು ಹೇಳುವಾಗ ಬೇಂದ್ರೆ ಬರೆಯುತ್ತಾರೆ. “ಶಾಸ್ತ್ರಾಧಿಕಾರದ ವಿರುದ್ಧ ಅವರು ಸಲ್ಲಿಸಿದ ತಕರಾರು ಒಪ್ಪುವಂತಹದು ಆಗಿತ್ತು. ಹೀಗಾಗಿ ಅವರು ದಿವಾಣ ನ್ಯಾಯಾಲಯದಲ್ಲಿ ಹಾಜರಾದರು. ಆ ಕಾಲದ ಪದ್ಧತಿಯಂತೆ ರಾಜಸಭೆಯನ್ನು ಕರೆದು ನ್ಯಾಯ ನೀಡಲಾಯಿತು.” (ಇಲ್ಲಿ ‘ಅವರ’ ಎಂದರೆ ಬ್ರಾಹ್ಮಣರ ಎಂದರ್ಥ). “ನನ್ನನ್ನು ಕೋರ್ಟಿಗೆ ಎಳೆದರು” ಎಂಬ ಅರ್ಥದ ನಿವೇದನೆಯನ್ನು ತುಕಾರಾಮನು ಮಾಡಿದನೆಂದು ರಾ.ದ. ರಾನಡೆಯವರೂ ಹೇಳಿದ್ದಾರೆ. ಬೇಂದ್ರೆಯವರು ಹೇಳಿದ ಆಶಯವು ಸ್ಥೂಲವಾಗಿ ಮುಂದಿನಂತಿದೆ. ಉಚ್ಚವರ್ಣದ ಜನರು ಅಂದರೆ ಬ್ರಾಹ್ಮಣರು ತುಕಾರಾಮನ ವಿರುದ್ಧ ದರ್ಪ ದಬ್ಬಾಳಿಕೆಯನ್ನು ಮಾಡಿದರು ಎಂದಲ್ಲ, ಆದರೆ ತುಕಾರಾಮನು ತಮ್ಮ ಧಾರ್ಮಿಕ ಅಧಿಕಾರವನ್ನು ಉಲ್ಲಂಘಿಸಿದ್ದರಿಂದ ಉಚ್ಚವರ್ಣದವರು ಅವನನ್ನು ನ್ಯಾಯಾಲಯಕ್ಕೆ ಎಳೆದರು. ಅಲ್ಲಿ ತುಕಾರಾಮನು ಧರ್ಮ ವಿರೋಧಿ ಆಚರಣೆಯನ್ನು ಕೈಕೊಂಡ ಆರೋಪವು ಸಿದ್ಧವಾಗಿ ಅವನು ಗುನ್ಹೆಗಾರ ಎಂದು ನಿರ್ಧರಿಸಲಾಯಿತು. ತಾತ್ಪರ್ಯ: ಅವನ ವಿರುದ್ಧದ ಖಟ್ಲೆಯ ಬಾಬತ್ತಿನಲ್ಲಿ ನೀಡಿದ ನಿರ್ಣಯವು ಕಾನೂನುಬದ್ಧವಾಗಿತ್ತು.

ಧರ್ಮಶಾಸ್ತ್ರವೇ ಕಾನೂನು ಗ್ರಂಥ

ಈಗ, ತುಕಾರಾಮನು ಯಾವ ಅಧಿಕಾರವನ್ನು ಉಲ್ಲಂಘಿಸಿದ, ಅವನ ಮೇಲೆ ಹೊರಿಸಲಾದ ಆರೋಪ ಯಾವುದು, ಧರ್ಮಶಾಸ್ತ್ರದ ದೀರ್ಘಕಾಲದ ಪರಂಪರೆಯು ಯಾವುದು ಮತ್ತು ತುಕಾರಾಮನಿಗೆ ನೀಡಿದ ಶಿಕ್ಷೆ ಯಾವುದು-ಈ ಎಲ್ಲ ಸಂಗತಿಗಳ ವಿವೇಚನೆಯನ್ನು ಕೈಕೊಳ್ಳುವ ಅಗತ್ಯವಿದೆ. ಇದಕ್ಕೆ ಸಂಬಂಧಿಸಿದ ಎರಡು ಸಂಗತಿಗಳನ್ನು ಗಮನಿಸಬೇಕಾದ ಅಗತ್ಯವಿದೆ. ಒಂದನೆಯದು, ತುಕಾರಾಮನ ಕಾಲದಲ್ಲಿ ವಿಜಾಪುರದ ಆಡಳಿತವಿತ್ತು. ಆದರೂ ಹಿಂದೂ ನ್ಯಾಯ ನಿರ್ಣಯವು ಹಿಂದೂ ಧರ್ಮಶಾಸ್ತ್ರದ ಪದ್ಧತಿಯಂತೆ ಕೈಕೊಳ್ಳಲಾಗುತ್ತಿತ್ತು. ಮನುಸ್ಮೃತಿ, ಯಜ್ಞವಲ್ಕ ಸ್ಮೃತಿ, ಮಿತಾಕ್ಷರ ಮುಂತಾದವು ಕೇವಲ ಹಿಂದೂಗಳದ್ದೇ ಧಾರ್ಮಿಕ ಗ್ರಂಥವಾಗಿರಲಿಲ್ಲ. ಅದು ಅವರ ಕಾನೂನು ಗ್ರಂಥ ಆಗಿತ್ತು. ಹೀಗಾಗಿ ಸಹಜವಾಗಿಯೇ, ಇಂಥ ಗ್ರಂಥದಲ್ಲಿಯ ನಿಯಮವನ್ನು ಭಂಗ ಮಾಡುವದೆಂದರೆ ಕಾನೂನು ಭಂಗ ಮಾಡಿದ ಗುನ್ಹೆಯಾಗುತ್ತಿತ್ತು. ಇಂಥ ಗುನ್ಹೆಯನ್ನು ಮಾಡುವ ವ್ಯಕ್ತಿಯನ್ನು ನ್ಯಾಯಾಲಯಕ್ಕೆ ಎಳೆಯಬಹುದಾಗಿತ್ತು. ಇದು ಆ ಕಾಲದ ಕಾನೂನು ಪದ್ಧತಿಯಾಗಿತ್ತು. ಇದು ಬೇಂದ್ರೆಯವರ ವಿವೇಚನೆಯಿಂದಲೂ ಸ್ಪಷ್ಟವಾಗುತ್ತದೆ. ಆ ಧರ್ಮಶಾಸ್ತ್ರವು ನ್ಯಾಯವನ್ನು ಆಧರಿಸಿದ್ದೇ ಅಲ್ಲವೇ-ಎಂಬುದು ಬೇರೆ ವಿಷಯ. ಆ ನಿಯಮವು ಕಾನೂನು ಎಂದೇ ಪ್ರಚಲಿತವಾಗಿತ್ತು – ಎಂಬುದು ಗಮನಿಸಬೇಕಾದ ಸಂಗತಿ.

ಧರ್ಮಶಾಸ್ತ್ರದ ಪ್ರಕಾರ ತುಕಾರಾಮನು ಶೂದ್ರ

ಈ ಸಂದರ್ಭದಲ್ಲಿಯ ಮತ್ತೊಂದು ಪ್ರಾಥಮಿಕ ಸಂಗತಿಯೆಂದರ ತುಕಾರಾಮನ ಶೂದ್ರತ್ವ, ವರ್ಣ ವ್ಯವಸ್ಥೆಯ ನಿಯಮದಂತೆ ತುಕಾರಾಮನ ಕಾಲದಲ್ಲಿ ಬ್ರಾಹ್ಮಣ ಮತ್ತು ಶೂದ್ರ ಎಂಬೆರಡೇ ವರ್ಣಗಳಿದ್ದವು. ತುಕಾರಾಮನು ಬ್ರಾಹ್ಮಣೇತರನಾಗಿದ್ದರಿಂದ ಶೂದ್ರನಾಗಿದ್ದ. ಈ ಹಿಂದೆ ಸಮಾಜದಲ್ಲಿ ನಾಲ್ಕು ವರ್ಣವಿತ್ತು. ಉಪನಯನದ ಅಧಿಕಾರವಿದ್ದವರು ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯರು-ದ್ವಿಜರೆಂದು ಭಾವಿಸಲಾಗುತ್ತಿತ್ತು. ಉಪನಯನ ಅವರ ಎರಡನೇ ಜನ್ಮವೆಂದು ಭಾವಿಸಲಾಗುತ್ತಿತ್ತು. ಶೂದ್ರರಿಗೆ ಉಪನಯನದ ಅಧಿಕಾರವಿಲ್ಲದ್ದರಿಂದ ಅವರನ್ನು ‘ಏಕಜನ್ಮ’ ವೆಂದೆನ್ನುತ್ತಿದ್ದರು. ದ್ವಿಜ ತಾಯಿ-ತಂದೆಯರ ಉದರದಲ್ಲಿ ಜನಿಸಿಯೂ ಉಪನಯನದ ಸಂಸ್ಕಾರವಾಗದಿದ್ದರೆ, ಅವರನ್ನು ಶೂದ್ರರೆಂದು ಪರಿಗಣಿಸುತ್ತಿದ್ದರು. ಕಾಲಾಂತರದಲ್ಲಿ ಕ್ಷತ್ರಿಯ ಮತ್ತು ವೈಶ್ಯರ ಉಪನಯನ ಸಂಸ್ಕಾರವು ನಾಶಗೊಂಡು ಅವರು ಶೂದ್ರರಾದರು. ಅಂದರ ಸಕಲ ಬ್ರಾಹ್ಮಣೇತರ ವರ್ಗದವರೆಲ್ಲ ಶೂದ್ರರೆಂದು ಅರ್ಥ. ಸಹಜವಾಗಿಯೇ ತುಕಾರಾಮನೂ ಶೂದ್ರನಾಗುತ್ತಾನೆ-ಎಂಬ ನಿಲುವು ಧರ್ಮಶಾಸ್ತ್ರ ಮತ್ತು ಅದನ್ನು ಅನುಸರಿಸುವ ಬ್ರಾಹ್ಮಣರದ್ದು.

ಖಚಿತ ಮೂರು ಆರೋಪಗಳು

ತುಕಾರಾಮನು ಧರ್ಮಶಾಸ್ತ್ರದ ಈ ನಿಯಮ ಮತ್ತು ವೈದಿಕ ಪಂಡಿತರ ಮೇಲೆ ಮಾಡಿದ ಆಕ್ರಮಣಗಳನ್ನು ಗಮನಿಸಿದಾಗ, ತುಕಾರಾಮನು ಧರ್ಮಶಾಸ್ತ್ರದ ಹಲವು ನಿಯಮಗಳನ್ನು ಮುರಿದಕ ಹಲು ಕಲಮುಗಳನ್ನು ಅವನ ಮೇಲೆ ಹೊರಿಸಬಹುದಾಗಿದ್ದು ಮಾತ್ರ ಸತ್ಯ. ಆದಾಗ್ಯೂ ತುಕಾರಾಮನ ಮೇಲೆ ಖಟ್ಲೆ ಹಾಕುವಾಗ ಪಂಡಿತರು ಪ್ರಮುಖವಾಗಿ ಮೂರು ಆರೋಪ ಹೇರಿದ್ದು ಕಂಡುಬರುತ್ತದೆ. ಈ ಮೂರೂ ಆರೋಪವು ವರ್ಣ ವ್ಯವಸ್ಥೆಗೆ ಸಂಬಂಧಿಸಿದ್ದು. ತುಕಾರಾಮನು ಉಲ್ಲಂಘನೆ ಮಾಡಿದ ಅಧಿಕಾರಿಗಳು ಆ ಆರೋಪದಿಂದ ಸ್ಪಷ್ಟವಾಗುತ್ತದೆ. ಆ ಮೂರು ಆರೋಪ ಹೀಗಿದೆ. ೧. ತುಕಾರಾಮನು ಸ್ವತಃ ಶೂದ್ರನಾಗಿದ್ದ. ಅವನಿಗೆ ವೇದದ ಅಧಿಕಾರವಿರಲಿಲ್ಲ. ಹೀಗಿರುವಾಗ ವೇದದ ಆಶಯ ವ್ಯಕ್ತವಾಗುವ ರೀತಿಯಲ್ಲಿ ಲೇಖನ ಬರೆದನು. ೨. ತುಕಾರಾಮ ಶೂದ್ರನಾಗಿದ್ದ, ಬ್ರಾಹ್ಮಣರನ್ನು ಶಿಷ್ಯರನ್ನಾಗಿ ಮಾಡಿಕೊಳ್ಳುವ ಅಧಿಕಾರ ಅವನಿಗಿರಲಿಲ್ಲ. ಆದರೂ ಬ್ರಾಹ್ಮಣರನ್ನು ಶಿಷ್ಯರನ್ನಾಗಿ ಮಾಡಿಕೊಂಡನು. ೩. ತುಕಾರಾಮನು ಶೂದ್ರನಾಗಿದ್ದ, ಬ್ರಾಹ್ಮಣರಿಂದ ನಮಿಸಿಕೊಳ್ಳುವ ಅಧಿಕಾರವಿರಲಿಲ್ಲ. ಆದರೂ ಕೆಲ ಬ್ರಾಹ್ಮಣರು ಅವನ ಪಾದಕ್ಕೆರಗುತ್ತಿದ್ದರು. ಅಂದರೆ ತುಕಾರಾಮ ಅವರಿಂದ ನಮಸ್ಕಾರ ಮಾಡಿಸಿಕೊಳ್ಳುತ್ತಿದ್ದ. ಈಗ ಈ ಮೂರು ಆರೋಪದ ಕುರಿತು ವಿವೇಚನೆ ಮಾಡೋಣ.

ವೇದ ವಿದ್ಯೆಯ ಅಧಿಕಾರವಿರಲಿಲ್ಲ

ದ್ವಿಜ ಮತ್ತು ಶೂದ್ರ ಈ ವಿಭಜನಯ ವೇದವು ಅತ್ಯಂತ ಮಹತ್ವದ ಒರೆಗಲ್ಲಾಗಿತ್ತು. ಹೀಗಾಗಿ, ವೈದಿಕ ಪರಂಪರೆಯಲ್ಲಿ ಶೂದ್ರರಿಗೆ ವೇದದ ಅಧಿಕಾರ ಪ್ರಾಪ್ತವಾಗುವ ಸಾಧ್ಯತೆಯಿರಲಿಲ್ಲ. ಶಂಕರಾಚಾರ್ಯರ ಕಾಲದಲ್ಲಿಯೂ ಅತ್ಯಂತ ಕಠೋರವಾಗಿ ಈ ನಿಯಮವನ್ನು ಪಾಲಿಸಲಾಗುತ್ತಿತ್ತು. ತುಕಾರಾಮ ಮತ್ತು ಶಿವಾಜಿ ಮಹಾರಾಜರ ವಿಷಯದಲ್ಲಿ ತೆಗೆದುಕೊಂಡು ನಿಲುವನ್ನು ಗಮನಿಸಿದರೆ ಅವರ ಕಾಲದಲ್ಲೂ ಈ ಕಠೋರತನವು ಅತ್ಯಂತ ಉಗ್ರವಾದ ರೀತಿಯಲ್ಲಿ ವ್ಯಕ್ತವಾಗಿದ್ದು ಕಂಡುಬರುತ್ತದೆ.

ತುಕಾರಾಮನ ಮೇಲಿನ ಆರೋಪ ಸಿದ್ದ

ಧರ್ಮಶಾಸ್ತ್ರದ ನಿಯಮದಂತೆ ಹೋದರೆ, ಈ ಸಂದರ್ಭದಲ್ಲಿ ತುಕಾರಾಮನ ಮೇಲೆ ಹೊರಿಸಲಾದ ಆರೋಪವು ನಿರ್ವಿವಾದವಾಗಿ ಸಿದ್ಧವಾಗುತ್ತದೆ. ಒಂದನೆಯದಾಗಿ, ವೇದದ ಅರ್ಥ ನಮಗೂ ಗೊತ್ತಿದೆ, ‘ವೇದಾಂತ ನಮ್ಮ ಮನೆಯ ನೀರು ತುಂಬುತ್ತದೆ’- ಮುಂತಾದ ಉದ್ಗಾರದ ಸ್ವತಃ ಅವನೇ ಈ ಆರೋಪ ಒಪ್ಪಿಕೊಂಡಿದ್ದಾನೆ. ಅವನು ವಿಸ್ತೃತವಾದ ಅಧ್ಯಯನ ಕೈಕೊಂಡಿದ್ದರಿಂದ, ಅವನಿಗೆ ವೇದದ ಹಲವು ವಚನ ಜ್ಞಾತವಾಗಿತ್ತು. ಅವನ ಅಭಂಗಗಳಲ್ಲಿ ಇಂಥ ವಚನ ಅಥವಾ ಅದರ ಅಂಶವು ಪ್ರಕಟವಾಗುತ್ತಿತ್ತು. ಆದರೆ ಎಲ್ಲಕ್ಕಿಂತ ಮಹತ್ವದ ಸಂಗತಿಯೆಂದರೆ, ಅವನ ಹಲವು ವಚನಗಳು ಆಶಯ ಮತ್ತು ಅಭಿವ್ಯಕ್ತಿಯ ದೃಷ್ಟಿಯಿಂದ ಉಪನಿಷತ್ತಿನ ಮಹಾವಾಕ್ಯಗಳೂ ನಾಚುವಷ್ಟು ಪ್ರಭಾವಿಯಾಗಿದ್ದವು. ವೈದಿಕ ಪಂಡಿತರು ಯಾರಿಗೆ ವೇದವನ್ನು ಆಲಿಸುವ ಅಥವಾ ಉಚ್ಚರಿಸುವ ಅಧಿಕಾರ ನೀಡಲು ಸಿದ್ಧರಿರಲಿಲ್ಲವೋ, ಅಂಥ ಮನುಷ್ಯನು ವೇದಕ್ಕೆ ಸರಿದೂಗುವ ಅಷ್ಟೇ ಅಲ್ಲ, ಅದಕ್ಕಿಂತಲೂ ನೂರು ಪಟ್ಟು ಶ್ರೇಷ್ಠವಾಗಿರುವ ವಾಙ್ಮಯವನ್ನೇ ನಿರ್ಮಿಸಲಾರಂಭಿಸಿದ್ದ. ಆಲಿಸುವ ಮತ್ತು ಉಚ್ಚರಿಸುವ ಗುನ್ಹೆಗಾಗಿ ಕಾದ ಸೀಸವನ್ನೇ ಸುರಿದ ಶಿಕ್ಷೆ ನೀಡುತ್ತಿರಬೇಕಾದರೆ, ನಿರ್ಮಾಣ ಮಾಡುವದು ವೈದಿಕ ಪಂಡಿತ್ರ ದೃಷ್ಟಿಯಲ್ಲಿ ಅದೆಷ್ಟು ಆಕ್ಷೇಪಾರ್ಹ ಮತ್ತು ಕಾನೂನುಬಾಹಿರವಾಗಿರಬಹುದು ಎಂಬ ತರ್ಕವನ್ನು ನಾವು ಮಾಡಬಹುದು. ಹೀಗಾಗಿ ವೈದಿಕ ಪಂಡಿತರು ತುಕಾರಾಮನನ್ನು ಈ ಆರೋಪದಡಿಯಲ್ಲಿ ನ್ಯಾಯಾಲಯಕ್ಕೆ ಎಳೆದದ್ದು ಧರ್ಮಶಾಸ್ತ್ರದ ದೃಷ್ಟಿಯಿಂದ ಸುಸಂಗತವಾಗಿತ್ತು. ಆ ಧರ್ಮಶಾಸ್ತ್ರವು ನ್ಯಾಯ ನೀತಿ ಮತ್ತು ಮಾನವೀಯತೆಯ ದೃಷ್ಟಿಯಿಂದ ಸುಸಂಗತವಾಗಿರಲಿಲ್ಲ ಎಂಬ ಮಾತು ಬೇರೆ.

ಎರಡನೆಯ ಆರೋಪ

ತುಕಾರಾಮನು ಶೂದ್ರನಾಗಿದ್ದೂ ಬ್ರಾಹ್ಮಣರನ್ನು ಶಿಷ್ಯರನ್ನಾಗಿ ಸ್ವೀಕರಿಸುತ್ತಾನೆ-ಎಂಬ ಆರೋಪದ ಕುರಿತು ವಿವೇಚನೆ ಮಾಡೋಣ. ಶೂದ್ರರು ಶಿಷ್ಯರಾಗಿ ವಿದ್ಯೆಯನ್ನು ಗಳಿಸುವ ಅಧಿಕಾರವು ಯಾವ ವ್ಯವಸ್ಥೆಯಲ್ಲಿ ಇರಲಿಲ್ಲವೋ, ಅಂಥ ವ್ಯವಸ್ಥೆಯಲ್ಲಿ ಅವನು ಗುರುವಾಗಲಾರಂಭಿಸಿದ್ದು, ಆ ವ್ಯವಸ್ಥೆಯ ಯಜಮಾನಿಕೆಗೆ ಎಂಥ ಸಿಟ್ಟು ಬರುತ್ತಿತ್ತು ಎಂಬುದನ್ನು ನಾವು ಸುಲಭವಾಗಿ ತರ್ಕ ಮಾಡಬಹುದು.

ಸಾಬೀತಾಗದ ಎರಡನೇ ಆರೋಪ, ಆದರೂ

ವೇದದ ಸಹಾಯದಿಂದ ತುಕಾರಾಮನ ಮೇಲೆ ಹೊರಿಸಿದ ಆರೋಪವನ್ನು ಸ್ವತಃ ಅವನೇ ಒಪ್ಪಿಕೊಂಡಿದ್ದ. ಜತೆಗೆ ಅವನ ಬರವಣಿಗೆಯಿಂದಲೂ ಸಾಬೀತಾಗುತ್ತಿತ್ತು. ಗುರು-ಶಿಷ್ಯರ ಸಂಬಂಧದ ಕುರಿತಾದ ಆರೋಪ ಮಾತ್ರ ಸಾಬೀತಾಗುತ್ತಿರಲಿಲ್ಲ. ಏಕೆಂದರೆ ನನ್ನ ಶಿಷ್ಯಶಾಖೆಯೇ ಇಲ್ಲವೆಂದು ಅವನೇ ಹೇಳಿಕೊಂಡಿದ್ದಾನೆ. ಪರಂಪರಾಗತ ಸ್ವರೂಪದ ಶಿಷ್ಯ ಸಂಬಂಧವನ್ನು ಅವನು ಹಲವು ಬಗೆಯಲ್ಲಿ ಧಿಕ್ಕರಿಸಿದ್ದಾನೆ. ಹೀಗಾಗಿ ಅವನು ಯಾವ ಬ್ರಾಹ್ಮಣನನ್ನೂ ಶಿಷ್ಯನನ್ನಾಗಿ ಸ್ವೀಕರಿಸುವ ಪ್ರಶ್ನೆಯೇ ಏಳುತ್ತಿರಲಿಲ್ಲ.

ಹೀಗಿದ್ದರೂ ಕೆಲ ಬ್ರಾಹ್ಮಣರು ಪರಂಪರಾಗತ ವ್ಯಕ್ತಿಯ ಬಗೆಗೆ ಯಾವ ರೀತಿಯ ಗೌರವ ಇರಿಸಲಾಗುತ್ತಿತ್ತೋ, ಅಂಥ ಗೌರವವನ್ನು ತುಕಾರಾಮನ ಮೇಲಿಟ್ಟಿದ್ದರಿಂದ ಔಪಚಾರಿಕವಾಗಿ ತುಕಾರಾಮನು ಅವರನ್ನು ಶಿಷ್ಯರೆಂದು ಸ್ವೀಕರಿಸದಿದ್ದರೂ ಅವರೇ ಸ್ವತಃ ತಮ್ಮನ್ನು ಅವರ ಶಿಷ್ಯರೆಂದು ಭಾವಿಸುತ್ತಿದ್ದರು. ಇದನ್ನೇ ನಿಮಿತ್ತ ಮಾಡಿಕೊಂಡು ಅವನ ಮೇಲೆ ಅರೋಪ ಹೊರಿಸಲಾಯಿತು. ತುಕಾರಾಮನು ಇದನ್ನು ಒಪ್ಪಿಕೊಳ್ಳದಿದ್ದರೂ, ಆರೋಪ ಹೊರಿಸುವಂತಹ ವಾತಾವರಣ ಮಾತ್ರ ನಿರ್ಮಾಣಗೊಂಡಿತ್ತು. ಹೀಗಾಗಿ ಇದು ಅಪ್ರತ್ಯಕ್ಷವಾದ ರೀತಿಯಲ್ಲಿ ಆರೋಪ ಸಿದ್ಧವಾಗುವಂತಿತ್ತು. ಒಬ್ಬ ಬ್ರಾಹ್ಮಣೇತರನ ಮೇಲೆ ಮತ್ತೊಬ್ಬ ಬ್ರಾಹ್ಮಣನು ಗೌರವ ನೀಡುವಂತಹ ವ್ಯಕ್ತಿತ್ವ ಮತ್ತು ಚರಿತ್ರೆಯನ್ನು ಅವನು ಪಡೆಯುವುದು ಮಂಬಾಜಿಯಂಥವನಿಗೆ ಸಹನೆಯಾಗುವ ಸಂಗತಿಯಾಗಿರಲಿಲ್ಲ.

ಮೂರನೇ ಆರೋಪ

ಧರ್ಮದ ಬಗೆಗಿನ ತುಕಾರಾಮನ ಮಾತು ಕೇಳಿ, ಸಮಾಜದ ಎಲ್ಲ ಸ್ತರದ ಜನರು ಮೋಡಿಗೊಳಗಾಗುತ್ತಿದ್ದರು. ಒಂದು ಹೊಸ ರೀತಿಯ, ನಿರೋಗಿಯಾದ, ಪ್ರಸನ್ನವಾದ ಪ್ರವಾಹದಿಂದ ಕೂಡಿದ ಧಾರ್ಮಿಕ ವಿಚಾರವು ವ್ಯಕ್ತವಾಗುವದರ ಅರಿವು ಅವರಿಗಾಯಿತು. ಇದರ ಪರಿಣಾಮವೆಂಬಂತೆ ಕೆಲ ಬ್ರಾಹ್ಮಣರೂ ಸಹ ತುಕಾರಾಮನ ಭಜನೆ-ಕೀರ್ತನೆಗೆ ಹಾಜರಾಗಲಾರಂಭಿಸಿದರು. ಜತೆಗೆ ಅವರ ಪಾದಕ್ಕೂ ಎರಗಲಾರಂಭಿಸಿದರು. ಆದರೆ ಬ್ರಾಹ್ಮಣರು ಶೂದ್ರನೊಬ್ಬನ ಕಾಲಿಗೆರಗುವುದು ಕೀಳುತನದ, ಧರ್ಮ ಮುಳುಗಿಸುವಂತಹದು ಎಂದು ಕೆಲ ಬ್ರಾಹ್ಮಣರಿಗೆ ಅನ್ನಿ, ಅವರೆಲ್ಲ ಸೇರಿ ತುಕಾರಾಮನನ್ನು ವಿರೋಧಿಸಿ ಸಂಘರ್ಷವಾರಂಭಿಸಿದರು.

ಬ್ರಾಹ್ಮಣರು ತುಕಾರಾಮನ ಪಾದಕ್ಕೆರಗುವ ಸಂದರ್ಭ ಕುರಿತು, ಕನಿಷ್ಠ ಮೂರು ಸಲವಾದರೂ ತಕರಾರು ಸಲ್ಲಿಸಿದ್ದು ಕಂಡುಬರುತ್ತದೆ. ಬ್ರಾಹ್ಮಣರ ದೃಷ್ಟಿಯಲ್ಲಿದು ತೀರಾ ಅಪಮಾನಕಾರಕವಾದುದು ಎಂದು ರಾಮೇಶ್ವರ ಭಟ್ಟನು ಸರಕಾರಕ್ಕೆ ದೂರು ಸಲ್ಲಿಸಿದ್ದಾಗಿ ಮಹಿಪತಿಯು ಮಾಹಿತಿ ನೀಡಿದ್ದಾನೆ. ಆನಂತರದ ಕಾಲದಲ್ಲಿ ಇದೇ ರಾಮೇಶ್ವರ ಭಟ್ಟನು ತುಕಾರಾಮನ ಶಿಷ್ಯನಾಗಿ ಅವನ ಪಾದಕ್ಕೆರಗಿದನೆಂದೂ ಹೇಳಲಾಗುತ್ತದೆ. ರಾಮೇಶ್ವರನು ಯೋಗ್ಯತೆ ಹೊಂದಿದ ಶ್ರೇಷ್ಠ ಗೃಹಸ್ಥನಾಗಿದ್ದೂ, ಅವನು ತುಕಾರಾಮನಿಗೆ ನಮಸ್ಕರಿಸುತ್ತಾನೆ. ಇದರಿಂದ ಸ್ವಧರ್ಮ ಮುಳುಗಿತು. ಈಗ ನೀತಿ ಧರ್ಮವನ್ನು ರಕ್ಷಿಸಬೇಕೆಂದು ಮುಂಬಾಜಿ ಎಂಬವನು ಪುಣೆಯ ಅಪ್ಪಾಜಿ ಗೋಸಾವಿ ಎಂಬ ಪ್ರತಿಷ್ಠಿತ ಗೃಹಸ್ಥನಿಗೆ ವಿನಂತಿಸಿಕೊಂಡಿದ್ದ ಎಂದು ತನ್ನನ್ನು ತುಕಾರಾಮ ಶಿಷ್ಯೆ ಎಂದು ಕರೆದುಕೊಳ್ಳುವ ಬಹಿಣಾಬಾಯಿಯು ದಾಖಲಿಸಿದ್ದಾಳೆ. ರಾಮೇಶ್ವರ ಭಟ್ಟನು ಆನಂತರದ ಕಾಲದಲ್ಲೂ ತುಕಾರಾಮನ ಜತೆ ಸಹಪಂಕ್ತಿ ಭೋಜನ ಮಾಡುತ್ತಿರಲಿಲ್ಲ ಎಂಬುದನ್ನು ಗಮನಿಸಿದಾಗ, ಅವನು ತುಕಾರಾಮನ ಕಾಲೆರಗಿದ ಎಂಬ ಮಾತು ಒಪ್ಪುವಂತಹದಲ್ಲ. ಆದರೂ ಸದ್ಯಕ್ಕೆ ಈ ವಿಷಯ ಒಂದಿಷ್ಟು ಬದಿಗೆ ಇಡೋಣ. ಹೀಗಾಗಿ ತುಕಾರಾಮನಿಗೆ ತಕ್ಷಣ ಶಿಕ್ಷೆ ನೀಡಬೇಕೆಂದು ಇಬ್ಬರು ಬ್ರಾಹ್ಮಣರು ಆಗ ಮೊಕ್ತೆಸರನಾದ ದಾದೂ ಕೊಂಡದೇವನಿಗೆ ಅರ್ಜಿ ಸಲ್ಲಿಸಿರುವುದಾಗಿ ಮಹಿಪತಿ ನುಡಿದಿದ್ದಾನೆ.

ಸಹಜವಾಗಿ ಯೋಚಿಸಿದಾಗ ಪಾದಕ್ಕೆರಗುವುದು, ನಮಸ್ಕರಿಸುವುದು ಸಾಮಾನ್ಯ ಸಂಗತಿಯಾಗಿದೆ ಎಂದು ನಮಗನಿಸುವ ಸಾಧ್ಯತೆಯಿದೆ. ಅದರ ಬಗ್ಗೆ ಹೆಚ್ಚು ಯೋಚಿಸಬೇಕಾದ ಅಗತ್ಯವಿಲ್ಲ ಎಂದೂ ಅನ್ನಬಹುದು. ಆದರೆ ವಸ್ತುಸ್ಥಿತಿ ಮಾತ್ರ ಹಾಗಿಲ್ಲ. ಒಬ್ಬಾತನಿಗೆ ನಮಸ್ಕರಿಸಿದಾಗ ದೂರು ಸಲ್ಲಿಸಲು ಬರುತ್ತದೆ ಎಂಬ ಸಂಗತಿಯನ್ನು ಗಮನಿಸಿದಾಗ, ನಮಸ್ಕಾರವು ಸಾಮಾಜಿಕ ದೃಷ್ಟಿಯಿಂದ ಒಂದು ಸಾಮಾನ್ಯ ಸಂಗತಿಯಲ್ಲ ಎನ್ನುವುದು ಗಮನಿಸಬೇಕಾದ ಸಂಗತಿ. ಇಷ್ಟು ಕ್ಷುಲ್ಲಕ ಕಾರಣಕ್ಕೆ ಸರಕಾರಕ್ಕೆ ದೂರು ಸಲ್ಲಿಸಲು ಹೇಗೆ ಬರುತ್ತದೆ ಎಂಬ ಪ್ರಶ್ನೆಯು ನಮ್ಮ ಮನದಲ್ಲಿ ಮೂಡುತ್ತದೆ. ನಮಸ್ಕರಿಸುವ ಬಾಬತ್ತಿನಲ್ಲಿ ಕಾನೂನು ಇದೆ. ಆ ಕಾನೂನು ಭಂಗಗೊಳಿಸಿದರೆ ಅಪರಾಧಿಗೆ ಶಿಕ್ಷೆ ನೀಡಬಹುದು ಮತ್ತು ಈ ಕಾನೂನು ಧರ್ಮಶಾಸ್ತ್ರವನ್ನು ಆಧರಿಸಿದ್ದು ಎನ್ನುವುದೇ ಈ ಪ್ರಶ್ನೆಗೆ ಉತ್ತರ.

ಕೆಲ ಬ್ರಾಹ್ಮಣರು ಬ್ರಾಹ್ಮಣೇತರರಂತೆ ತುಕಾರಾಮನಿಗೆ ನಮಸ್ಕಾರ ಮಾಡುತ್ತಾರೆ ಎಂಬ ತಕರಾರು ಮಾಡಲಾಗಿತ್ತು. ಆದರೆ ಪ್ರತ್ಯಕ್ಷ ಘಟನೆಯ ಒಂದು ಮಗ್ಗಲಾಯಿತಿದು. ಏಕೆಂದರೆ ಒಬ್ಬ ಮತ್ತೊಬ್ಬರಿಗೆ ಶರಣು ಎನ್ನುವದು ತುಕಾರಾಮನ ನಿಲುವಲ್ಲ. ಹಾಗೇನಾದರೂ ಮಾಡಬೇಕಿದ್ದರೆ ಇಬ್ಬರೂ ಪರಸ್ಪರರ ಪಾದಕ್ಕೆರಗುವುದೇ ಅವರ ವೃತ್ತಿಯಾಗಿತ್ತು. ವೈಷ್ಣವರು ಪಂಢರಪುರದಲ್ಲಿ ಪರಸ್ಪರರಲ್ಲಿ ಭೇದ-ಭಾವ ಪರಿಗಣಿಸದೆ ಒಬ್ಬರು ಮತ್ತೊಬ್ಬರ ಕಾಲಿಗೆರಗುತ್ತಿದ್ದರು. ಈ ವಿಶಿಷ್ಟತೆಯನ್ನು ಅವನು ದಾಖಲಿಸಿದ್ದಾನೆ. ಒಮ್ಮುಖವಾಗಿ ಕಾಲಿಗೆರಗಿದರೂ, ಅಲ್ಲಿ ಜಾತಿಯಂತಹ ಬಾಹ್ಯಸಂಗತಿಗಳ ಬಗೆಗೆ ಯೋಚಿಸದೆ, ಸಂತತನದ ಕುರಿತು ಯೋಚಿಸಬೇಕು. ಅಂದರೆ ಆಚರಣೆಗೆ ಮಹತ್ವ ನೀಡುವುದು ಎನ್ನುವುದು ಅವನ ನಿಲುವಾಗಿತ್ತು. ತುಕಾರಾಮನ ಬಂಧುಗಳ ಒಂದು ಅಭಂಗದಲ್ಲಿ ಇದನ್ನು ಸೊಗಸಾಗಿ ಬಣ್ನಿಸಲಾಗಿದೆ. ಜಾತಿಯನ್ನು ಮರೆತು ಜನರಿಗೆ ನಮಸ್ಕರಿಸುವವನು ಆತ್ಮದ ಸ್ವರೂಪವನ್ನು ಅರಿತವನಾಗಿರುತ್ತಾನೆ. ಬಾಹ್ಯ ಸಂಗತಿಗೆ ಮಹತ್ವ ನೀಡುವವನು ಭಾರ ಹೊರುವ ಕತ್ತೆಯಂತಿರುತ್ತಾನೆ.

ನಿಯಮದ ವಿಷ

ಈಗ ಇದೆಲ್ಲದರ ಕುರಿತು ವಿವೇಚನೆ ಕೈಕೊಳ್ಳೋಣ.

ಅಭಿನಂದನೆಯ ಕುರಿತಾದ ಧರ್ಮಶಾಸ್ತ್ರದ ನಿಯಮವು ತೀರಾ ಸಂಕುಚಿತ ಮತ್ತು ಪಕ್ಷಪಾತಿಯಾಗಿರುವಂಥದ್ದು. ಜತೆಗೆ ಅದು ಅನೈತಿಕವೂ ಆಗಿರುವಂಥದ್ದು. ಅದನ್ನು ಧರ್ಮಶಾಸ್ತ್ರ ಹೇಳಿದರೂ ಸಹ, ಅಧಾರ್ಮಿಕವಾದದ್ದು ಎಂದೇ ಹೇಳಬೇಕಾಗುತ್ತೆ. ಯಾವ ಸಂದರ್ಭದಲ್ಲೂ ಬ್ರಾಹ್ಮಣೇತರನಿಗೆ ಅವನು ಜ್ಞಾನಿಯಾಗಿದ್ದರೂ ನಮಸ್ಕರಿಸಬಾರದೆಂದು ತಿಳಿಸುವದೆಂದರೆ ಗುಣ, ಜ್ಞಾನ, ಸದಾಚಾರಕ್ಕೆ ಕವಡೆಯ ಬೆಲೆಯೂ ಇಲ್ಲವೆಂದೊಪ್ಪಿಕೊಂಡಂತಾಗುತ್ತದೆ. ಈ ರೀತಿಯಲ್ಲಿ ನಮಸ್ಕರಿಸುವದು ಪ್ರಾಯಶ್ಚಿತ್ತಕ್ಕೆ ಪಾತ್ರವಾಗಿದೆ ಎಂದು ಹೇಳುವದೆಂದರೆ ಬ್ರಾಹ್ಮಣರು ಬೇರೆ ವರ್ಣದ ಗುಣಕ್ಕೆ ಬೆಲೆ ಕೊಡಬಾರದು-ಎಂದು ಧರ್ಮಶಾಸ್ತ್ರವೇ ಸಂಕೇತ ಮಾಡಿದಂತಾಗುತ್ತದೆ. ಹಾಗೆಯೇ ಬ್ರಾಹ್ಮಣೇತರರು ತನ್ನ ಸ್ಥಾನ-ಮಾನ ಅರಿತು ವರ್ತಿಸಬೇಕು, ಬ್ರಾಹ್ಮಣರಿಂದ ವಂದನೆಯನ್ನು ಸ್ವೀಕರಿಸಬಾರದು-ಎಂದು ಎಚ್ಚರಿಕೆ ನೀಡಿದಂತೆ.

ಪಾದಕ್ಕೆರಗುವವರ ಬಗೆಗೆ ತುಕಾರಾಮನು ಯಾವುದೇ ನಿಲುವನ್ನು ತಾಳಿದರೂ ಅದಕ್ಕೆ ಎಷ್ಟೋ ನೈತಿಕ ನೆಲೆಗಟ್ಟಿದ್ದರೂ ಕೆಲ ಬ್ರಾಹ್ಮಣರು ತುಕಾರಾಮನ ಕಾಲಿಗೆರಗುವದು ಧರ್ಮಶಾಸ್ತ್ರದ ವಿರುದ್ಧವಾಗಿರುವದರಿಂದ ಅವರಿಂದ ನಮಸ್ಕರಿಸಿಕೊಳ್ಳುವ ಗುನ್ಹೆ ತುಕಾರಾಮನ ಮೇಲೆ ಸಿದ್ಧವಾಗುತ್ತಿತ್ತು ಎಂಬುದು ಮಾತ್ರ ಸತ್ಯ. ಅವನನ್ನು ನ್ಯಾಯಾಲಯಕ್ಕೆ ಎಳೆಯುವವರು ಇದರ ಲಾಭ ಪಡೆದಂತೆ ಕಂಡುಬರುತ್ತದೆ.

ಈ ವಿವೇಚನೆಯೂ ಒಟ್ಟೂ ತಾತ್ಪರ್ಯವೇನೆಂದರೆ, ತುಕಾರಾಮನ ಮೇಲೆ ಹೊರಿಸಲಾದ ಎರಡು ಆರೋಪ ಪ್ರತ್ಯಕ್ಷ ಮತ್ತು ಒಂದು ಅಪ್ರತ್ಯಕ್ಷವಾದ ರೀತಿಯಲ್ಲಿ ಸಿದ್ಧವಾಗುತ್ತಿತ್ತು. ಧರ್ಮಶಾಸ್ತ್ರದ ಪ್ರಕಾರ ತುಕಾರಾಮ ಅಪರಾಧಿಯಾಗಿದ್ದ. ಗುನ್ಹೆಗಾರನಾಗಿದ್ದ. ನ್ಯಾಯಾಲಯದ ನಿರ್ಣಯವು ಈ ಧರ್ಮಶಾಸ್ತ್ರದ ಆಧಾರದಿಂದಲೇ ನಡೆಯಲಿತ್ತು.

ಫಿರ್ಯಾದಿಯೇ ನ್ಯಾಯಾಧೀಶ

ಧರ್ಮಶಾಸ್ತ್ರದ ಆಧಾರದಿಂದ ತುಕಾರಾಮನ ಮೇಲೆ ಹೊರಿಸಲಾದ ಖಟ್ಲೆಯು ನ್ಯಾಯಾಲಯದ ಶಿಸ್ತಿನಂತೆ ಜರುಗಿದೆ ಎಂದು ಹೇಳುವಂತಿಲ್ಲ. ತುಕಾರಾಮನು ತಾಳಿದ ನಿಲುವು ವೈದಿಕರ ಕಣ್ಣು ಚುಚ್ಚುತ್ತಿತ್ತೆನ್ನುವುದು ಎಲ್ಲಕ್ಕಿಂತ ಮಹತ್ವದ ಸಂಗತಿಯಾಗಿತ್ತು. ಹೀಗಾಗಿ ಏನಾದರೂ ಮಾಡಿ ಅವನಿಗೆ ಬುದ್ಧಿ ಕಲಿಸಬೇಕೆಂಬ ಯೋಚನೆ ಆ ಪಂಡಿತರದಾಗಿತ್ತು. ಹೀಗಾಗಿ ನ್ಯಾಯಾಲಯಕ್ಕೆ ಎಳೆಯುವ ಮಾರ್ಗ ಹುಡುಕಿದರು. ಆದರೆ ಆ ಮಾರ್ಗವನ್ನು ಅವಲಂಬಿಸುವಾಗ ನ್ಯಾಯಾಲಯದ ಶಿಸ್ತನ್ನು ಕರಾರುವಕ್ಕಾಗಿ ಪಾಲಿಸುವ ಅಗತ್ಯವಿರಲಿಲ್ಲ. ತುಕಾರಾಮನ ವಿರುದ್ಧ ತಾವು ಎತ್ತಿದ ಹೆಜ್ಜೆಯು ದ್ವೇಷದಿಂದಲ್ಲ, ಧರ್ಮ ಮತ್ತು ನ್ಯಾಯದ ಆಧಾರದಿಂದ ಎಂದು ಜನರಿಗೆ ತೋರಿಸುವಷ್ಟು ನಾಟಕ ಮಾಡಿದರೆ ಸಾಕಾಗಿತ್ತು. ಪ್ರತ್ಯಕ್ಷದಲ್ಲೂ ಅಂಥದ್ದೇ ಏನಾದರೂ ಮಾಡಿರಬೇಕೆಂದೆನಿಸುತ್ತದೆ. ತುಕಾರಾಮನ ವಿರುದ್ಧ ತಕರಾರು ಸಲ್ಲಿಸಿದ್ದು ರಾಮಭಟ್ಟರು. ಮತ್ತು ತುಕಾರಾಮನನ್ನು ಊರಿಂದ ಹೊರದಬ್ಬುವಂತೆ ಗೌಡನಿಗೆ ಆದೇಶ ನೀಡಿದ್ದೂ ಅವನೇ. ಅದೂ ಅಲ್ಲದೆ, ತುಕಾರಾಮನ ಗಾಥೆಯನ್ನು ಮುಳುಗಿಸುವಂತೆ ಆಜ್ಞೆ ಮಾಡಿದ್ದೂ ಅವನೇ. ಇದೆಲ್ಲ ನ್ಯಾಯಾಲಯದ ಪ್ರಕ್ರಿಯೆಯಂತೆ ನಡೆದಿದೆ ಎನ್ನುವಂತಿಲ್ಲ. ಏಕೆಂದರೆ ಇಲ್ಲಿ ಒಬ್ಬನೇ ವ್ಯಕ್ತಿಯು ಫಿರ್ಯಾದಿಯೂ, ನ್ಯಾಯಾಧೀಶನೂ ಆಗಿದ್ದಾನೆ. ಆದರೂ ಈ ಖಟ್ಲೆಯನ್ನು ಧರ್ಮಶಾಸ್ತ್ರದ ಆಧಾರದಿಂದ ನ್ಯಾಯಾಲಯದ ಪ್ರಕ್ರಿಯೆಗೆ ಅನುಸರಿಸಿ ನಡೆಸಿದರೂ, ನಿರ್ಣಯದಲ್ಲಿ ಯಾವ ವ್ಯತ್ಯಾಸವೂ ಆಗುತ್ತಿರಲಿಲ್ಲ. ಏಕೆಂದರೆ ಮೂಲತಃ ಧರ್ಮಶಾಸ್ತ್ರದ ಭೂಮಿಕೆಯೇ ಪಕ್ಷಪಾತದ್ದಾಗಿತ್ತು.

ಮರ್ಯಾದೆಯ ಉಲ್ಲಂಘನೆ

ಅಲ್ಲದೆ ನ್ಯಾಯಾಲಯದಲ್ಲಿ ಜರುಗಿದ ಚರ್ಚೆಯೂ, ಈ ಹಿಂದೆ ಉಲ್ಲೇಖಿಸಿದ ಮೂರು ಆರೋಪಗಳ ಸೀಮಿತ ಚೌಕಟ್ಟಿನಲ್ಲೇ ನಡೆದಿದೆ ಎಂದೆನ್ನುವಂತಿಲ್ಲ. ಆ ಚರ್ಚೆಯು ಒಂದು ವ್ಯಾಪಕವಾದ ಪಾತಳಿಯಲ್ಲಿ ಜರುಗಿರುವದರಲ್ಲಿ ಸಂಶಯವಿಲ್ಲ. ತುಕಾರಾಮನು ಶೂದ್ರನಾಗಿಯೂ ಬ್ರಾಹ್ಮಣರ ಕರ್ಮ ಮಾಡುತ್ತಾನೆ, ಹಾಗೆಯೇ ವೇದ, ಬ್ರಾಹ್ಮಣರ ನಿಂದೆಯನ್ನು ಮಾಡುತ್ತಾನೆ. ಈ ಬಗೆಯಲ್ಲಿ ವರ್ಣ ವ್ಯವಸ್ಥೆಯ ಮೂಲಭೂತ ಸಿದ್ಧಾಂತದ್ದೇ ಉಲ್ಲಂಘನೆ ಮಾಡುತ್ತಿದ್ದಾನೆ ಎಂದು ಅವನು ಗುನ್ಹೆಯ ಸ್ವರೂಪವನ್ನು ಒಪ್ಪಿಕೊಂಡಿರಬೇಕು. ಮರ್ಯಾದೆಯ ಉಲ್ಲಂಘನೆಯ ಆರೋಪದ ಮೇಲೆ ತನ್ನನ್ನು ನ್ಯಾಯಾಲಯಕ್ಕೆ ಎಳೆಯಲಾಯಿತೆಂದು ಸ್ವತಃ ತುಕಾರಾಮನೇ ಹೇಳಿಕೊಂಡಿದ್ದಾನೆ. ವೇದ ಬ್ರಾಹ್ಮಣರ ವಿಷಯದಲ್ಲಿ ಮರ್ಯಾದೆಯನ್ನು ಉಲ್ಲಂಘಿಸಲಾಯಿತು ಎಂದರ್ಥ. ಧರ್ಮದ ಚಿಂತನೆ ಕೈಕೊಳ್ಳುವದು, ತತ್ವಜ್ಞಾನವನ್ನು ಪ್ರತಿಪಾದಿಸುವದು, ವೇದತತ್ವ ಬರವಣಿಗೆ ಮಾಡುವದು, ಉಪದೇಶ ಮಾಡುವದು, ಅಲ್ಲದೆ ಮುಖ್ಯವಾಗಿ ಬ್ರಾಹ್ಮಣರನ್ನು ಉದ್ದೇಶಿಸಿ ಧರ್ಮದ ಬಗೆಗೆ ಹೇಳುವದು ಇದೆಲ್ಲ ವರ್ಣ ವ್ಯವಸ್ಥೆಯ ನಿಯಮವನ್ನು ಬಹಿರಂಗವಾಗಿಯೇ ಉಲ್ಲಂಘಿಸಿದಂತಾಗಿತ್ತು.

ಮುಟ್ಟುಗೋಲು, ಗಡಿಪಾರು ಮತ್ತು ಬಹಿಷ್ಕಾರ

ಹೀಗೆ ಉಲ್ಲಂಘನೆ ಮಾಡಿದವರಿಗೆ ಯಾವ ಶಿಕ್ಷೆ ನೀಡಬೇಕು, ಈ ವಿಷಯದ ಬಗೆಗೆ ಧರ್ಮಶಾಸ್ತ್ರ ಹೇಳಿದ ಕೆಲವು ನಿಯಮವನ್ನು ಗಮನಿಸುವದು ಯೋಗ್ಯ. ಮನುಸ್ಮೃತಿ ಹೇಳುತ್ತದೆ; ‘ಜಾತಿಯಿಂದ ಅಧಮನಾಗಿದ್ದು, ಲೋಭದಿಂದ ಮೇಲ್ಜಾತಿಯ ಕರ್ಮ ಮಾಡಿ ಜೀವನವನ್ನು ಸಾಗಿಸುವ ವ್ಯಕ್ತಿಯ ಸರ್ವಧನವನ್ನು ರಾಜನು ಮುಟ್ಟುಗೋಲು ಹಾಕಬೇಕು (ಅವನನ್ನು ನಿರ್ಧನಗೊಳಿಸಬೇಕು) ಮತ್ತು ಅವನನ್ನು ತನ್ನ ರಾಜ್ಯದಿಂದ ತಕ್ಷಣ ಗಡಿಪಾರು ಮಾಡಬೇಕು’. ಮನುಸ್ಮೃತಿಯಲ್ಲಿಯ ಈ ನಿಯಮದ ಹಿನ್ನಲೆಯಲ್ಲಿ ರಾಮೇಶ್ವರ ಭಟ್ಟನು ತಕರಾರನ್ನು ಮಾಡಿಕೊಳ್ಳಬೇಕು. ಫಿರ್ಯಾದಿ ಬ್ರಾಹ್ಮಣನ ಹೇಳಿಕೆಯಂತೆ ತುಕಾರಾಮನು ಶೂದ್ರನಾಗಿದ್ದು, ಬ್ರಾಹ್ಮಣನ ಕರ್ಮವನ್ನು ಮಾಡುತ್ತಿದ್ದನು, ಹೀಗಾಗಿ ಸಹಜವಾಗೇ ಸರ್ವ ಸಂಪತ್ತಿನ ಮುಟ್ಟುಗೋಲು ಮತ್ತು ಗಡಿಪಾರಿನ ಶಿಕ್ಷೆ ತುಕಾರಾಮನಿಗೆ ಅನ್ವಯಿಸುತ್ತಿತ್ತು, ಬಹಿಷ್ಕಾರದ ಶಿಕ್ಷೆಯ ಬಗೆಗೂ ಮನುಸ್ಮೃತಿಯ (೨.೧೦.೧೧) ನಿಯಮ ಸ್ಪಷ್ಟವಾಗಿದೆ. ವೇದ ನಿಂದಕನಾದ ನಾಸ್ತಿಕ ದ್ವಿಜನು ತರ್ಕ ಶಾಸ್ತ್ರದ ಆಧಾರದಿಂದ ಶ್ರುತಿ ವೇದ ಮತ್ತು ಸ್ಮೃತಿಯನ್ನು ಚಿಕಿತ್ಸೆ ಮಾಡುತ್ತಾನೋ, ಸಜ್ಜನರು ಅವನನ್ನು ಬಹಿಷ್ಕರಿಸಬೇಕು ಎನ್ನುವದು ಈ ನಿಯಮದ ಅರ್ಥ. ದ್ವಿಜನಿಗೆ ಬಹಿಷ್ಕಾರ ಹಾಕಬೇಕೆಂದಾಗ, ಶೂದ್ರನಿಗೂ ಹಾಕಬೇಕೆಂದು ಬೇರೆ ಹೇಳಬೇಕಾಗಿಲ್ಲ. ಈ ನಿಯಮದಂತೆ ತುಕಾರಾಮನ ಮೇಲೆ ಬಹಿಷ್ಕಾರ ಹಾಕುವದು ಸಜಹವಾಗಿತ್ತು. ತುಕಾರಾಮನಿಗೆ ನೀಡಲಾದ ಈ ಮೂರು ಬಗೆಯ ಶಿಕ್ಷೆಯು ಧರ್ಮಶಾಸ್ತ್ರದ ನಿಯಮಕ್ಕೆ ಅನುಸರಿಸಿಯೇ ಇತ್ತು. ತುಕಾರಾಮನ ತಥಾಕಥಿತ ಅಪರಾದಕ್ಕೆ ಇದಕ್ಕಿಂತಲೂ ಗಂಭೀರವಾದ ಶಿಕ್ಷೆಯನ್ನು ನೀಡುವ ನಿಯಮವು ಧರ್ಮಶಾಸ್ತ್ರದಲ್ಲಿತ್ತು. ಸದ್ಯಕ್ಕೆ ಆ ಚರ್ಚೆಯನ್ನು ಬದಿಗೆ ಇಡೋಣ. ಅವನ ಮೇಲೆ ಹೊರಿಸಿದ ಖಟ್ಲೆಯ ಪರಿಣಾಮವಾಗಿ ಅವನಿಗೆ ಒಟ್ಟೂ ನಾಲ್ಕು ಶಿಕ್ಷೆಯನ್ನು ನೀಡಲಾಯಿತು. ಅಭಂಗ ರಚನೆಯಿಂದಾಗಿ ಧರ್ಮ ವಿರೋಧಿ ಗುನ್ಹೆಗಾಗಿ ಅವನ ಅಭಂಗಗಳನ್ನು ನೀರಿನಲ್ಲಿ ಮುಳುಗಿಸುವ ಶಿಕ್ಷೆ ನೀಡಲಾಯಿತು. ಜತೆಗೆ ಸಂಪತ್ತಿನ ಮುಟ್ಟುಗೋಲು ಮತ್ತು ಊರಿಂದ ಗಡಿಪಾರು ಮತ್ತು ಬಹಿಷ್ಕಾರ ಎಂಬ ಮತ್ತೆ ಮೂರು ಶಿಕ್ಷೆಯ ನಿರ್ಣಯ ನಿಡಲಾಯಿತು.

ತನ್ನನ್ನು ನ್ಯಾಯಾಲಯಕ್ಕೆ ಎಳೆಯಲಾಯಿತು, ಎಂದು ತುಕಾರಾಮನು ಕೆಲವು ಅಭಂಗಗಳಲ್ಲಿ ಹೇಳಿಕೊಂಡಿದ್ದಾನೆ. ಅಂಥ ಕೆಲವು ಅಭಂಗಗಳ ಆಶಯ ಈ ಕೆಳಗಿನಂತಿದೆ.

‘ಈಗೇನು ತಿನ್ನಲಿ? ಯಾರ ಬಳಿಗೆ ಹೋಗಲಿ? ಊರಲ್ಲಿ ಯಾರ ಸಹಾಯದಿಂದ ಬದುಕಲಿ? ಗೌಡನಿಗೆ ಸಿಟ್ಟು ಬಂದಿದೆ. ಊರ ಜನರೂ ಸಿಟ್ಟಿಗೆದ್ದಿದ್ದಾರೆ. ಈಗ ನನಗೆ ಭಿಕ್ಷೆಯನ್ನಾದರೂ ನೀಡಬಹುದೇ? ನಾನು ಮರ್ಯಾದೆಯನ್ನು ಮೀರಿದ್ದೇನೆಂದವರು ಅನ್ನುತ್ತಾರೆ. ನ್ಯಾಯಾಲಯದ ನಿರ್ಣಯ ನೀಡುತ್ತಾರೆ. ಹಿರಿಯರು ಈ ಸಂಗತಿ ಹೇಳಿದರು. ನನ್ನಂತಹ ದುರ್ಬಲನಿಗೆ ಮೋಸ ಮಾಡಿದರು. ಈಗವರ ಸಹವಾಸ ಬೇಡ. ವಿಠ್ಠಲನನ್ನು ಹುಡುಕುತ್ತ ಹೋಗೋಣ.

ಕೊಡ-ಕೊಳ್ಳುವ ವ್ಯವಹಾರ ನಿಂತು ಹೋಯಿತು. ಮನೆ ಖಾಲಿಯಾಯಿತು. ಸಹಾಯ ಮಾಡುವವರ ಕೈಯಲ್ಲೂ ಏನೂ ಇಲ್ಲ. ಏನೂ ಉಳಿಯಲಿಲ್ಲ. ಕತ್ತಲೆಯ ರಾತ್ರಿ. ಅದನ್ನು ನುಂಗಿಬಿಟ್ಟಿತು. ಅಲ್ಲಿರುವ ಪರರ ವಸ್ತುವನ್ನು ಒಯ್ದರು. ಏನು ಉಳಿಸಲಿಲ್ಲ. ಸೋಗು ಹಾಕಿ ಮೋಸ ಮಾಡಿದರು. ಹೊರಟೂ ಹೋದರು, ಅದೆಲ್ಲ ತೋರಿಕೆಯ ಪ್ರೀತಿಯಾಗಿತ್ತು. ಕಣ್ನೆತ್ತಿ ಮನೆಯತ್ತ ನೋಡುವ ಮನಸ್ಸೂ ಆಗುವದಿಲ್ಲ. ಅದನ್ನು ನ್ಯಾಯಾಲಯದ ಆಸ್ತಿ ಎಂದು ಉಳಿಸಲಾಗಿದೆ.

ಹೇ ವಿಠ್ಠಲಾ, ನಾನೇನು ನಿನ್ನ ಹತ್ತಿರ ಮಾನ ಬೇಡಿರಲಿಲ್ಲ, ಹೀಗಿದ್ದೂ ಜನರಿಂದ ನನ್ನ ಫಜೀತಿ ಏಕೆ ಮಾಡಿದೆ? ನಾನಂತೂ ಹೊಟ್ಟೆಗಾಗಿ ಈ ಜೂಟಾಟ ಮಾಡಿರಲಿಲ್ಲ. ನಿನ್ನ ಕೈ ಹಿಡಿದು ನ್ಯಾಯಾಲಯಕ್ಕೂ ಕರೆದೊಯ್ದಿರಲಿಲ್ಲ.

ನಾಚಿ, ಸಂಕೋಚದಿಂದ ವರ್ತಿಸಿದ್ದರಿಂದ ನನ್ನ ಹಾನಿಯಾಯಿತು. ಹೀಗಾಗಿ ದುರ್ಜನರ ಮೋಸಕ್ಕೆ ಬಲಿಯಾದೆ. ನಾಲ್ಕು ಜನರೆದುರು ಅಪಮಾನ ಮಾಡಲಾಯಿತು. ಪಂಚಾಯತಿಯ ಎದುರು ನಿಲ್ಲಿಸಲಾಯಿತು. ಸೃಷ್ಟೀಕರಣ ನೀಡಲೂ ಅವಕಾಶ ಕೊಡಲಿಲ್ಲ. ನಿರ್ದೋಷದಿಂದ ಬಿಡುಗಡೆ ಹೊಂದುವ ಆಸೆಯೂ ಉಳಿಯಲಿಲ್ಲ. ಆದರೆ ಈಗ ನಾನು ದೇವರನ್ನೇ ನನ್ನ ಪಕ್ಷಕ್ಕೆ ಸೇರಿಸಿಕೊಂಡಿದ್ದೇನೆ. ಯಾವ ಸಂಕೋಚವು ಇಲ್ಲದೆ ನಾನೀಗ ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತೇನೆ.’

ಬೇಂದ್ರೆಯವರು ಹೇಳಿದ ನಾಲ್ಕಾರು ಮಂದಿ ಎಂಬುದನ್ನು ಸ್ವತಃ ತುಕಾರಾಮನೇ ತನ್ನನ್ನು ಪಂಚಾಯತಿಯ ಎದುರಿಗೆ ನಿಲ್ಲಿಸಿದರು, ನನ್ನ ವಿಚಾರವನ್ನು ಮಂಡಿಸಲು ಅವಕಾಶ ನೀಡಲಿಲ್ಲ ಎಂದೂ ತಕರಾರು ಮಾಡಿದ್ದಾನೆ. ಆಗ ನಾಚಿ ಸಂಕೋಚ ಸ್ವಭಾವದಿಂದಾಗಿ ವಂಚನೆಗೆ ಒಳಗಾದರೂ, ಈಗ ಕೋಲಿನಿಂದ ತರಾಟೆಗೆ ತೆಗೆದುಕೊಳ್ಳುವದಾಗಿಯೂ ಹೇಳಿದ್ದಾನೆ. ಖಟ್ಲೆಯ ವಿಚಾರಣೆಯ ಕಾಲಕ್ಕೆ ತುಕಾರಾಮನನ್ನು ಸಾಕಷ್ಟು ಅವಮಾನ ಪಡಿಸಲಾಯಿತು. ಅವನಿಗೆ ಮಾತಾಡಲೂ ಅವಕಾಶ ನೀಡಲಿಲ್ಲ ಎಂದು ಸೂಚಿಸಿದ್ದಾನೆ. ಇಲ್ಲಿ ಉದ್ಧರಿಸಲಾದ ಒಂದು ಅಭಂಗದಲ್ಲಿ ಅವನು ವಿಠ್ಠಲನಿಗೆ ಪ್ರಶ್ನೆ ಹಾಕಿದ್ದಾನೆ. ಜನರಿಂದ ತನ್ನನ್ನು ಏಕೆ ಫಜೀತಿಗೆ ಒಳಪಡಿಸಿದೆ ಎಂದೂ ಕೇಳಿದ್ದಾನೆ. ನಾನು ನಿನ್ನನ್ನು ನ್ಯಾಯಾಲಯಕ್ಕೆ ಎಳೆಯದೆ ಇರುವಾಗ, ನೀನು ನನ್ನನ್ನೇಕೆ ಎಳೆದೆ ಎಂದೂ ಪ್ರಶ್ನಿಸಿದ್ದಾನೆ. ನ್ಯಾಯಾಲಯಕ್ಕೆ ಎಳೆದದ್ದರಿಂದ ತಾನು ತುಂಬಾ ಫಜೀತಿಗೊಳಗಾದೆ ಎನ್ನುವದು ಅವನ ಅಭಿಪ್ರಾಯ. ತಾನು ಹೊಟ್ಟೆಗಾಗಿ ಬೊಬ್ಬಾಟ ಮಾಡಿರಲಿಲ್ಲ. ಅಂದರೆ ನನ್ನ ಸ್ವಾರ್ಥಕ್ಕಾಗಿ ನಾನು ಈ ಉದ್ಯೋಗ ಆರಂಭಿಸಿರಲಿಲ್ಲ. ತತ್ವಕ್ಕಾಗಿಯೂ ಜಗಳಾಡಿದವನಲ್ಲ ಎನ್ನುವದು ಈ ಮಾತಿನಿಂದ ಸ್ಪಷ್ಟವಾಗುತ್ತದೆ.

ಈಗ ತಿನ್ನುವದೇನು ಎಂಬ ಅಭಂಗವು ಅವನಿಗೆ ನೀಡಲಾದ ಶಿಕ್ಷೆಯು ದೃಷ್ಟಿಯಿಂದ ಮಹತ್ವದ್ದು, ನೀಡಲಾದ ಶಿಕ್ಷೆಯನ್ನು ಜಾರಿಗೊಳಿಸುವ ಹೊಣೆ ‘ಗೌಡ’ನದು. ಅವನು ಸಿಟ್ಟಿಗೆದ್ದಿದ್ದಾನೆ. ಊರವರೂ ಮುನಿದಿದ್ದಾರೆ ಎಂದು ತುಕಾರಾಮ ಹೇಳುತ್ತಾನೆ. ಇಲ್ಲಿ ಊರವರು ಎಂದರೆ ಯಾರಿಗೆ ತುಕಾರಾಮನ ಬಗೆಗೆ ಅಸಮಾಧಾನವಿತ್ತೊ ಅಂಥವರು ಎಂದರ್ಥ. ಈಗೇನು ತಿನ್ನಲಿ ಎನ್ನುವ ಪ್ರಶ್ನೆಯು ದಾರಿದ್ಯ್ರದಿಂದ ತಲೆದೋರಿದ್ದಲ್ಲ ಎಂಬುದು ಗಮನಿಸಬೇಕಾದ ಸಂಗತಿ. ನನಗೆ ಅನ್ನದ ಕೊರತೆಯಿರಲಿಲ್ಲ ಎಂದೂ ಅವನು ಸ್ಪಷ್ಟವಾಗಿ ಹೇಳಿದ್ದಾನೆ. ಅವನ ಸಂಪತ್ತು ಮುಟ್ಟುಗೋಲು ಹಾಕಿದ್ದರಿಂದಾಗಿಯೇ ಹೀಗೆ ಜರುಗಿದೆ. ಖರೆಯೆಂದರೆ, ಮುಟ್ಟುಗೋಲಿನ ನೆಪದಲ್ಲಿ ಅವನ ಧನ-ಧಾನ್ಯ, ವಸ್ತುಗಳನ್ನು ದೋಚಲಾಯಿತು. ತುಕಾರಾಮನನ್ನು ನ್ಯಾಯಾಲಯಕ್ಕೆ ಎಳೆದು, ಇಸ್ಟೇಟ ಜಪ್ತಿ ಮಾಡಲಾಗಿತ್ತು ಎಂದು ರಾ.ದ.ರಾನಡೆಯವರು ಸ್ಪಷ್ಟವಾಗಿ ದಾಖಲಿಸಿದ್ದಾರೆ. ಈಗ ಯಾರ ಬಳಿಗೆ ಹೋಗಬೇಕು, ಯಾರ ಸಹಾಯದಿಂದ ಬದುಕಬೇಕು ಎಂಬ ಪ್ರಶ್ನೆಯು ತುಕಾರಾಮನ ಎದುರಿಗೆ ಉಪಸ್ಥಿತಗೊಂಡಿದೆ. ಅಂದರೆ ಅವನಿಗೆ ಊರು ತೊರೆದು ಹೋಗುವಂತೆ ಹೇಳಿದ್ದು ಸ್ಪಷ್ಟ. ‘ತುಕಾರಾಮನನ್ನು ಊರಿಂದ ಹೊರಗೆ ದಬ್ಬಿ ಕಳಿಸಬೇಕು’ ಎಂದು ಗೌಡನಿಗೆ ಆಜ್ಞೆ ಮಾಡಲಾಗಿತ್ತು ಎಂದು ಅಜಗಾವಕರ ಎಂಬವರು ಹೇಳುತ್ತಾರೆ. ತುಕಾರಾಮನನ್ನು ದೇಹುದಿಂದ ಹೊರದಬ್ಬುವ ಯೋಚನೆ ರಾಮೇಶ್ವರ ಭಟ್ಟನದಾಗಿತ್ತು ಎಂದು ಪಾಂಗಾರಕರ ಹೇಳುತ್ತಾರೆ. ‘ಅವರು ತುಕಾರಾಮನನ್ನು ದೇಹುದಿಂದ ಹೊರಹಾಕುವಂತೆ ಎಚ್ಚರಿಕೆಯನ್ನು ನೀಡಿದ್ದರು’ ಎಂದೂ ಬರೆಯುತ್ತಾರೆ. ಈಗ ನನಗೆ ಅನ್ನ ನೀಡುವವರು ಯಾರು ಎಂಬ ಮಾತನ್ನು ನಾವು ಸರಿಯಾಗಿ ಗಮನಿಸಬೇಕು. ಅವನು ಸಂಸಾರ ತ್ಯಾಗ ಮಾಡಿದ್ದ, ಭಿಕ್ಷೆ ಬೇಡಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದ ಅಥವಾ ದಿವಾಳಿ ಎದ್ದು ದಾರಿದ್ಯ್ರದಿಂದ ಅನ್ನಕ್ಕೂ ತತ್ವಾರಗೊಂಡಿದ್ದ. ಭಿಕ್ಷೆ ಬೇಡಬೇಕಾದ ಪ್ರಸಂಗ ಬಂದಿತ್ತು ಎಂದು ಅರ್ಥೈಸಬೇಕಿಲ್ಲ. ತನ್ನ ಸಂಪತ್ತೆಲ್ಲ ಕಸಿದುಕೊಂಡಿದ್ದಾರೆ, ಭಿಕ್ಷೆ ಬೇಡಿ ಕುಟುಂಬದವರ ಹೊಟ್ಟೆ ಹೊರೆಯಬೇಕೆಂದರೂ ಬಹಿಷ್ಕಾರದ ಶಿಕ್ಷೆ ನೀಡಿ ಮಾನಸಿಕವಾಗಿ ಚಿತ್ರಹಿಂಸೆ ನೀಡುವದು ಈ ಧರ್ಮಮಾರ್ತಾಂಡರ ಯೋಜನೆಯಾಗಿತ್ತು. ತಾನು ಮರ್ಯಾದೆಯ ಉಲ್ಲಂಘನೆ ಮಾಡಿದ್ದರಿಂದ ನನ್ನನ್ನು ನ್ಯಾಯಾಲಯಕ್ಕೆ ಎಳೆದಿದ್ದಾರೆ ಎಂದರೆ ನ್ಯಾಯಾಲಯದ ಮೂಲಕ ತುಕಾರಾಮನಿಗೆ ಮೂರು ಶಿಕ್ಷೆ ನೀಡಿದರು ಎಂದರ್ಥ. ಪ್ರತಿಷ್ಠಿತರಿಂದ ತಕರಾರು ಮಾಡಿಸಿ ತನ್ನಂತಹ ಬಡವನನ್ನು ವಂಚಿಸಿದರು ಎಂದವನು ಅನ್ನುತ್ತಾನೆ. ತುಕಾರಾಮನ ವಿರುದ್ಧ ತಕರಾರು ಸಲ್ಲಿಸಿ, ಶಿಕ್ಷೆ ನೀಡುವ ದರ್ಪದ ಜನರು ಸತ್ತೆ, ಅಧಿಕಾರ, ಸಂಪತ್ತು, ಧರ್ಮಶಾಸ್ತ್ರದ ಬೆಂಬಲ, ನ್ಯಾಯಾಲಯದ ವರ್ಚಸ್ಸು ಹೊಂದಿದವರಾಗಿದ್ದರು. ಪ್ರಬಲರೂ ಆಗಿದ್ದರು. ನೈತಿಕವಾಗಿ ತುಕಾರಾಮನು ಅದೆಷ್ಟೇ ಸಬಲನಾಗಿದ್ದರೂ ಪೂರ್ವೋಕ್ತ ದೃಷ್ಟಿಯಿಂದ ಆ ದರ್ಪದ ಜನರಿಗಿಂತ ದುರ್ಬಲನಾಗಿದ್ದನು. ಈ ಸ್ಥಿತಿಯಲ್ಲಿ ತನಗೆ ವಿಠ್ಠಲನ ಹೊರತು ಬೇರೆ ಯಾವ ಆಧಾರವೂ ಇಲ್ಲ. ಹೀಗೆ ಅವನ ಭಾವನೆಯು ಅಧಿಕ ಉತ್ಕಟ ಹೊಂದಿರುವದು ಸಹಜವೇ ಆಗಿತ್ತು. ರಾತ್ರಿಯ ಕತ್ತಲೆಯಲ್ಲಿ ಅವನ ಮನೆ, ಅಂಗಡಿಯನ್ನು ಹೇಗೆ ದೋಚಲಾಯಿತು ಎಂಬ ವರ್ಣನೆಯು ಹ್ರದಯವಿದ್ರಾವಕವಾಗಿ ಮೂಡಿ ಬಂದಿದೆ. ಅವನ ಅಂಗಡಿಯಲ್ಲಿ ಮಾರಾಟಕ್ಕೆ ಇಟ್ಟ ಅನ್ಯರ ಸಾಮಾನುಗಳನ್ನೂ ದೋಚಿದ್ದರಿಂದ, ಹಾನಿ ತುಂಬಿಕೊಡಲು ಮನೆಯನ್ನೂ ನ್ಯಾಯಾಲಯಕ್ಕೆ ಒತ್ತೆಯಿಡಬೇಕಾಯಿತು. ಸಾಮಾನು ಖರೀದಿಸುವ ಸೋಗಿನಲ್ಲಿ ಎಲ್ಲವನ್ನೂ ಲೂಟಿ ಮಾಡಲಾಯಿತು. ದೋಚಿದ ಬಳಿಕ ನ್ಯಾಯಾಲಯದಲ್ಲಿ ಒತ್ತೆಯಿಟ್ಟ ಮನೆಯತ್ತ ನೋಡಲೂ ಮನಸ್ಸು ಬರುವುದಿಲ್ಲೆಂದು ತುಕಾರಾಮ ಹೇಳುತ್ತಾನೆ. ಈ ಘಟನೆಯು ನ್ಯಾಯಾಲಯದೆ ಆಜ್ಞೆಯಿಂದ ಜರುಗಿತೋ ಅಥವಾ ಗೂಂಡಗಳಿಂದ ದೋಚುವಂತೆ ಮಾಡಲಾಯಿತೋ ಎನ್ನುವದು ಸ್ಪಷ್ಟವಾಗುವದಿಲ್ಲ.

ಬಂಡಾಯದ ನಿಲುವಿನಿಂದಾದ ಪರಿಸ್ಥಿತಿ

ತುಕಾರಾಮನ ಈ ಅಭಂಗದಲ್ಲಿ ಅವನೇ ಮಂಡಿಸಿದ ತನ್ನ ವ್ಯಥೆಯನ್ನು ಕಂಡಾಗ, ಅವನು ಅದೆಂಥ ಚಿತ್ರಹಿಂಸೆಗೆ ಒಳಗಾಗಿರಬೇಕೆನ್ನುವದು ತಿಳಿದು ಬರುತ್ತದೆ. ಇದು ಅವನ ವ್ಯವಹಾರ ಶೂನ್ಯತೆಯಿಂದಾಗಲಿ ಸನ್ಯಸ್ತ ವೃತ್ತಿಯಿಂದಾಗಲಿ ನಡೆದದ್ದಲ್ಲ. ಅವನು ಧಾರ್ಮಿಕ ಕ್ಷೇತ್ರದ ಬಗೆಗೆ ತೆಗೆದುಕೊಂಡ ಬಂಡಾಯದ ನಿಲುವಿನಿಂದಾಗಿ ಇಂಥ ಪರಿಸ್ಥಿತಿ ನಿರ್ಮಾಣವಾಯಿತು ಎಂಬುದರಲ್ಲಿ ತಿಲ ಮಾತ್ರವು ಸಂಶಯವಿಲ್ಲ. ಯಾವುದೇ ಕ್ಷೇತ್ರದಲ್ಲಿಯ ಸ್ವಾತಂತ್ರ್ಯಕ್ಕಾಗಿ ಯುದ್ಧ ಮಾಡಲು ಹೊರಟ ಯೋಧನ ಪಾಲಿಗೆ ಬರುವ ಸಮಸ್ಯೆಯೇ ತುಕಾರಾಮನ ಪಾಲಿಗೂ ಬಂದಿದೆ. ಸ್ವಾತಂತ್ರ್ಯ ಯೋಧರ ಸಂಸಾರ ಉಧ್ವಸ್ತಗೊಳ್ಳುವಂತೆ ತುಕಾರಾಮನ ಸಂಸಾರವೂ ಉಧ್ವಸ್ತಗೊಂಡಿತು. ದೋಚಿದ ಮನೆಯತ್ತ ನೋಡುವ ಇಚ್ಛೆಯೂ ಆಗುವದಿಲ್ಲೆಂದು ತುಕಾರಾಮನು ವಿಷಣ್ಣ ಮನಸ್ಸಿನಿಂದ ಹೇಳುತ್ತಾನೆ. ಆದರೆ ಸ್ವತಃ ತುಕಾರಾಮನೇ ತನ್ನ ಮನೆಯನ್ನು ಬ್ರಾಹ್ಮಣರಿಗೆ ದೋಚುವಂತೆ ಹೇಳಿರುವದಾಗಿ ಕೆಲವು ಚರಿತ್ರೆಕಾರರು ಹೇಳುತ್ತಾರೆ. ಭಾರತದ ಸಂಸ್ಕೃತಿಯ ಚರಿತ್ರೆಯ ಲೇಖನದಲ್ಲಿ ಸತ್ಯವನ್ನು ಹೇಗೆ ವಿಪರ್ಯಾಸಗೊಳಿಸಲಾಗುತ್ತದೆ ಎನ್ನುವುದರ ಒಂದು ಉತ್ತಮ ಉದಾಹರಣೆಯಿದು.

ಅಸ್ತಿತ್ವದ ಮೂಲಕ್ಕೇ ಪ್ರಹಾರ

ಮುಟ್ಟುಗೋಲಿನ ಹೆಸರಿನಲ್ಲಿ ಮನೆಯ ಲೂಟಿ, ಬಹಿಷ್ಕಾರ ಮತ್ತು ಗಡಿಪಾರು ಈ ಮೂರು ಶಿಕ್ಷೆಯು ತುಕಾರಾಮನನ್ನು ಆರ್ಥಿಕವಾಗಿ, ವ್ಯವಹಾರಿಕವಾಗಿ, ಉಧ್ವಸ್ಥಗೊಳಿಸುವಂತಹದಾಗಿತ್ತು. ಆದರೆ ಅಭಂಗ ಮುಳುಗಿಸುವ ಶಿಕ್ಷೆ ಮಾತ್ರ ಅವನ ಅಸ್ತಿತ್ವದ ಮೂಲಕ್ಕೇ ಕೊಡಲಿಯೇಟು ಹಾಕಿದಂತಾಗಿತ್ತು. ಅವನ ಪ್ರತಿಭೆಯ ಮತ್ತು ವಿವೇಕದ ಅತ್ಯಂತ ಮಧುರ ಮತ್ತು ಪರಿಪಕ್ವವಾದ ಫಲವನ್ನೇ ನಾಶಗೊಳಿಸುವಂತಹದು. ಅದೂ ಅಲ್ಲದೆ, ಸಮಾಜಕ್ಕೂ ಅತೀ ದೊಡ್ಡ ಹಾನಿಯನ್ನುಂಟು ಮಾಡುವಂತಹದಾಗಿತ್ತು.

ಉಸಿರುಗಟ್ಟಿಸುವಂಥ ಶಿಕ್ಷೆ

ಗಾಥೆಯನ್ನು ಮುಳುಗಿಸಲಾಯಿತು ಎಂದರೆ ಅವನ ಆಭಂಗದ ವಹಿಯನ್ನೇ ಮುಳುಗಿಸಲಾಯಿತು ಎಂದರ್ಥ. ಇದು ಸತ್ಯವೂ ಹೌದು. ಈ ವಹಿಯನ್ನು ಸ್ವತಃ ರಾಮೇಶ್ವರ ಭಟ್ಟನಾಗಲೀ, ಅಥವಾ ಅವನ ಜನರಾಗಲಿ ಮುಳುಗಿಸಿರಬೇಕು. ಅಥವಾ ಬಲವಂತದಿಂದ ತುಕಾರಾಮನ ಕೈಯಿಂದಲೇ ಮುಳುಗಿರಬೇಕು. ಅದೇನೆ ಇರಲಿ ವಹಿ ಮುಳುಗಿಸುವದೆಂದರೆ ಕೇವಲ ‘ವಹಿ ಮುಳುಗಿಸುವದು’ ಎಂದರ್ಥವಲ್ಲ. ಒಂದನೆಯದಂತೂ ಈ ಶಿಕ್ಷೆಯ ಪರಿಣಾಮವೆಂದು ಅವನ ಮನೆಯಲ್ಲಿದ್ದ ಧನ ಧಾನ್ಯ ಜಪ್ತಿ ಮಾಡುವಾಗಲೇ, ಅವನ ಅಭಂಗದ ವಹಿಯನ್ನು ಜಪ್ತಿ ಮಾಡಿರಬೇಕು. ಆನಂತರ ಆ ವಹಿಗಳನ್ನು ಹೊಳೆಯಲ್ಲಿ ಮುಳುಗಿಸಿರಬೇಕು. ತುಕಾರಾಮನ ಅಭಂಗವು ಧರ್ಮದ್ರೋಹದ್ದು ಎನ್ನುವದೇ ಇದರ ಹಿಂದಿನ ನಿಲುವು. ಈಗ ಈ ಅಭಂಗದಿಂದ ಧರ್ಮದ್ರೋಹವಾಗುತ್ತಿದ್ದರೆ, ಅವನ ಅಭಂಗಗಳ ವಹಿಯನ್ನು ಸ್ವಂತ ಇಟ್ಟುಕೊಳ್ಳುವದಾಗಲಿ, ಆ ಅಭಂಗಗಳನ್ನು ಹೇಳುವದಾಗಲಿ ಗುನ್ಹೆ ಎಂದೇ ನಿರ್ಧರಿಸಿರಬೇಕು. ಅಮದರೆ ಸ್ವತಃ ತುಕಾರಾಮನಾಗಲಿ, ಅಥವಾ ಉಳಿದ ಯಾರೇ ಆಗಲಿ ಈ ಅಭಂಗಗಳನ್ನು ಲಿಖಿತ ಸ್ವರೂಪದಲ್ಲಿ ಉಳಿಸಿಕೊಳ್ಳುವಂತೆಯೂ ಇಲ್ಲ, ಉಚ್ಛರಿಸುವಂತಿಲ್ಲ ಎಂಬ ಆಜ್ಞೆಯನ್ನು ಹೊರಡಿಸಿರಬೇಕು. ಆನಂತರ ಪೇಶ್ವೆಯ ಕಾಲದಲ್ಲೂ ಅವನ ಅಭಂಗಗಳ ಮೆಲೆ ನಿಷೇದ ಹೇರಲಾಗಿತ್ತು. ಬಾಲಕೃಷ್ಣ ಅನಂತ ಭಿಡೆಯ ‘ಸುಬೋಧ ಕೇಕಾವಲಿ’ ಎಂಬ ಪುಸ್ತಕದಲ್ಲಿ (ಢವಳೆ ಪ್ರಕಾಶನ ಮುಂಬೈ, ಮರುಮುದ್ರಣ ೧೯೫೦, ಪು.೩೭) ಹೀಗೆ ಹೇಳಲಾಗಿದೆ. ” ನಾನಾಸಾಹೇಬ ಪೇಶ್ವೆಯ ಕಾಲದಲ್ಲಿ ಪುಣೆಯಲ್ಲಿ ಅಭಿಮಾನಿ ಮಡಿವಂತಿಕೆಗೆ ಸಾಕಷ್ಟು ಅವಕಾಶ ಸಿಕ್ಕಂತೆ ಕಂಡುಬರುತ್ತದೆ. ಪೇಶ್ವೆಯ ವಾಡೆಯಲ್ಲಿ ಪೇಶ್ವೆ ಹಾಜರಿದ್ದಾಗ ಹರಿಕೀರ್ತನೆಯು ನಡೆಯುವ ಕಾಲಕ್ಕೆ ತುಕಾರಾಮನ ಅಭಂಗವನ್ನು ಬಳಸಬಾರದು ಎಂಬ ನಿಯಮವನ್ನು ಹಾಕಲಾಗಿತ್ತು. ಅದಕ್ಕೆ ಕಾರಣವೇನು ಗೊತ್ತೆ? ತುಕಾರಾಮನ ಅಭಂಗವೆಂದರೆ ಶೂದ್ರ ಕವಿತೆ; ಅದರಿಂದ ಮಡಿವಂತಿಕೆಯ ಕೀರ್ತನೆಯು ಮೈಲಿಗೆಯಾಗಬಾರದು!” ಗಾಥೆ ಮುಳುಗಿಸುವ ಕ್ರಿಯೆಯ ವ್ಯಾಪ್ತಿಯು ಭೂತಕಾಲದ ಬರವಣಿಗೆಯಂತೆ ಭವಿಷ್ಯಕಾಲದಲ್ಲಿಯ ಲೇಖನಕ್ಕೂ ಅನ್ವಯಿಸುವದು ಸ್ವಾಭಾವಿಕವಾಗಿತ್ತು. ಅಂದರೆ ತುಕಾರಾಮನು ಈ ಹಿಂದೆಯೆ ಬರೆದ ಅಭಂಗಗಳನ್ನು ಮುಳುಗಿಸುವದಷ್ಟೇ ಅಲ್ಲ, ಇನ್ನು ಮುಂದೆಯೂ ಸಹ ಅಭಂಗ ರಚಿಸುವ ಉಸಾಬರಿಗೆ ಹೋಗಬಾರದಂತಹ ಆಜ್ಞೆಯನ್ನು ಮಾಡಿರಬೇಕು. ಇದೆಲ್ಲದರಿಂದ ತುಕಾರಾಮನ ಉಸಿರೇ ಕಟ್ಟಿದಂತಾಗಿರಬೇಕು.

ಸಿಡಿದೆದ್ದನು

ಗಾಥೆಯನ್ನು ಮುಳುಗಿಸುವ ರಾಮೇಶ್ವರ ಭಟ್ಟನ ಆಜ್ಞೆಯನ್ನು ತುಕಾರಾಮನು ಮೌನವಾಗಿ ಸ್ವೀಕರಿಸಿ, ಗಾಥೆಯನ್ನು ಮುಳುಗಿಸಿದನು ಎಂದು ಕೆಲವು ಚರಿತ್ರೆಕಾರರು ಹೇಳುವ ಮಾತು ಖರೆಯಲ್ಲ. ಧರ್ಮಶಾಸ್ತ್ರ ಮತ್ತು ಸರಕಾರದ ಬೆಂಬಲದಿಂದ ಬಲವಂತ ಮಾಡಿ ಮನೆಯನ್ನು ದೋಚಿ, ಗಾಥೆಯನ್ನು ಮುಳುಗಿಸಿದ್ದರೆ, ಅದನ್ನು ವಿರೋಧಿಸುವ ಯಾವುದೇ ಸಾಮರ್ಥ್ಯವು ತುಕಾರಾಮನ ಬಳಿಯಲ್ಲಿರಲಿಲ್ಲ. ಹೀಗಾಗಿ ಆ ಕೃತಿಯನ್ನು ತಡೆಗಟ್ಟುವದು ಅವನಿಂದ ಸಾಧ್ಯವಾಗಲಿಲ್ಲ ಎನ್ನುವದು ನಿಜ. ಆದರೆ ಅವನು ತಪ್ಪೊಪ್ಪಿಕೊಂಡ, ಗುನ್ಹೆಯನ್ನು ಒಪ್ಪಿಕೊಂಡ. ಮತ್ತೆ ಇಂಥ ಗುನ್ಹೆಯನ್ನು ಮಾಡುವದಿಲ್ಲೆಂದು ನಿಶ್ಚಯಿಸಿದ. ನೀಡಿದ ಶಿಕ್ಷೆಯನ್ನು ಮೌನವಾಗಿ ಸ್ವೀಕರಿಸಿದ ಎಂದೇನು ಭಾವಿಸಬೇಕಿಲ್ಲ. ಅದರ ಬದಲು, ಧಾರ್ಮಿಕ ಕ್ಷೇತ್ರದಲ್ಲಿಯ ಡಾಂಭಿಕತನದ ವಿರೋಧದಲ್ಲಿ ಈ ಹಿಂದೆ ಹೇಗೆ ಸಿಡಿದೆದ್ದಿದ್ದನೊ, ಈಗಲೂ ಈ ಶಿಕ್ಷೆಯ ವಿರೋಧದಲ್ಲೂ ಸಿಡಿದೆದ್ದದ್ದು ಖಚಿತ.

ಜನರ ಸದ್ಭಾವನೆಯಿಂದೆ ಏನೂ ಪ್ರಯೋಜನವಿಲ್ಲ

ಇಂಥ ಸ್ಥಿತಿಯಲ್ಲಿ ವಿಜಯೋತ್ಸಾಹವನ್ನು ಆಚರಿಸುವ ಮನಸ್ಥಿತಿಯಲ್ಲಿದ್ದ, ಆನಂದದಿಂದ ಮೈಮರೆತು ಹೋದ ಪಂಡಿತರ ಮೇಲೆ ಅವರ ಆಟ ಅವರಿಗೇ ತಿರುಗು ಭಾಣವಾಗುವಂತೆ ತುಕಾರಾಮನು ಮಜಭೂತಾದ ಒಂದು ಅಸ್ತ್ರವನ್ನು ಬಳಸಿದನು. ಅದು ಸತ್ಯಾಗ್ರಹದ ಅಸ್ತ್ರವಾಗಿತ್ತು. ಅನ್ನ ತೊರೆದು ಅವನು ಹದಿಮೂರು ದಿನಗಳ ಕಾಲ ಇಂದ್ರಾಯಣಿ ದಡದ ಮೇಲೆ ಕೂತು ಕೊಂಡನು. ಈ ಸತ್ಯಾಗ್ರಹವು ಒಂದೆಡೆ ವೈದಿಕ ಪಂಡಿತರಿಗೆ ಬಲವಾದ ಆಹ್ವಾನ ನೀಡಿದರೆ, ಮತ್ತೊಂದೆಡೆ ಜನಸಾಮಾನ್ಯರಿಗೆ ನ್ಯಾಯದ ಪರವಾಗಿ ನಿಲ್ಲುವ ಉತ್ಕಟ ಆಹ್ವಾನವಾಗಿತ್ತು. ಈ ಶಿಕ್ಷೆಯ ಆರಂಭಕ್ಕೆ ಅವನು ಒಬ್ಬ ವ್ಯಕ್ತಿಯಾಗಿ ದೇಹೂನಲ್ಲಿ ಒಬ್ಬಂಟಿಯಾಗಿ ಉಳಿದದ್ದು ನಿಜ. ಆದರೆ ಅವನ ಆಚರಣೆ ಮತ್ತು ನೈತಿಕತೆಯು ಅತಿದೊಡ್ಡ ಶಕ್ತಿಯಾಗಿತ್ತು. ಸಾಮಾನ್ಯ ಜನತೆಯು ಅವನ ಪರವಾಗಿ ಬೆಂಬಲಿಸುವ ಧ್ಯೆರ್ಯ ತೋರಿಸುವದು ಸಾಧ್ಯವಿಲ್ಲದಿದ್ದರೂ, ಜನರ ಮನದಲ್ಲಿ ಅವನ ಬಗೆಗೆ ಅಪಾರ ಪ್ರೀತಿಯಿತ್ತು. ದೊಡ್ಡ ವಿಶ್ವಾಸವಿತ್ತು. ತುಕಾರಾಮನ ಸತ್ಯಾಗ್ರಹದಿಂದಾಗಿ ಆ ಪ್ರೇಮಕ್ಕೆ ಉಕ್ಕು ಬಂತು, ಭರತಿ ಬಂತು. ಆ ಭರತಿಯ ಉಕ್ಕಿನಲ್ಲಿ ವೈದಿಕ ಪಂಡಿತರು ಅವನಿಗೆ ನೀಡಿದ ಶಿಕ್ಷೆಯು, ಅವರ ಅಹಂಕಾರ ಸಹಿತ ಕೊಚ್ಚಿ ಹೋಯಿತು. ಉಪವಾಸದೆ ಒಂದೊಂದೇ ದಿನ ಸರಿಯುತ್ತಿದ್ದಂತೆ, ಸರ್ವ ಸಾಮಾನ್ಯ ಜನತೆಯ ಧೈರ್ಯ ಬೆಳೆಯುತ್ತ ಸಾಗಿತು, ಭೀತಿಯು ಅಳಿಯುತ್ತ ಹೋಯಿತು; ಮಾನವೀಯತೆಯ ರಕ್ಷಣೆಗಾಗಿ ಮುನ್ನುಗ್ಗುವ ಪ್ರೇರಣೆಯು ಬೆಳೆಯುತ್ತ ಸಾಗಿತು. ಯಾರು ತಮ್ಮ ಸಾಲವನ್ನು ಮರಳಿ ಪಡೆಯಲಿಲ್ಲವೋ, ಯಾರು ತಮ್ಮಿಂದ ಯಾವ ದಕ್ಷಿಣೆಯನ್ನೂ ಪಡೆಯದೆ, ತಮಗೆ ಕಲ್ಯಾಣದ ಉಪದೇಶ ನೀಡಿದನೋ, ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ಪ್ರೀತಿಸಿದನೋ, ಯಾರು ತಮ್ಮ ಸಂಕಟವನ್ನು ತನ್ನ ಮೈ ಮೇಲೆ ಎಳೆದುಕೊಂಡನೋ ಅಂಥವನ ಸರ್ವಸ್ವವನ್ನೂ ದೋಚುತ್ತಿರುವಾಗ ತಾವು ಹೇಡಿಯಂತೆ ಮನೆಯಲ್ಲಿರುವದು, ಮನುಷ್ಯರಾಗಿ ತಮಗೆ ನಾಚಿಕೆಯನ್ನು ತರುವಂತಹ, ನಾಚಿಕೆಗೇಡಿನ ಕೆಲಸವೆಂಬ ಭಾವನೆಯು ಜನರ ಮನದೊಳಗೆ ಬರಲಾರಂಭಿಸಿತು. ಅವರ ದನಿ ಏರತೊಡಗಿತು. ಅವರದ್ದೇ ಒಂದು ಸಮುದಾಯ ನಿರ್ಮಾಣಗೊಂಡಿತು. ಅವರೆಲ್ಲ ತುಕಾರಾಮನ ಸುತ್ತಲೂ ಗುಂಪುಗೂಡಿದರು. ಅವನ ಜೈ ಜೈಕಾರ ಹಾಕಲಾರಂಭಿಸಿದರು. ಅವನ ಸಂರಕ್ಷಣೆಗಾಗಿ ತಥಾಕಥಿತ ಕಾನೂನನ್ನು ಧಿಕ್ಕರಿಸುವ ಉಲ್ಲಂಘಿಸುವ ಸಿದ್ಧತೆಯನ್ನು ತೋರಲಾರಂಭಿಸಿದರು.

ಜನರ ಈ ಸಿದ್ಧತೆಯ ಎದುರಿಗೆ ಪಂಡಿತರು ಹಿಂಜರಿಯಬೇಕಾಯಿತು. ಅವರ ಶಿಕ್ಷೆಯನ್ನು ಜಾರಿಗೊಳಿಸುವ ಹಠವನ್ನು ಕೈ ಬಿಡಬೇಕಾಯಿತು ಎಂಬುದರಲ್ಲಿ ಸಂಶಯವಿಲ್ಲ. ಇಂದ್ರಾಯಣಿ ದಡದಲ್ಲಿ ತುಕಾರಾಮನ ಸುತ್ತಲೂ ಅಷ್ಟೆಲ್ಲ ಜನ ಸಮುದಾಯ ಸೇರಿದರು ಎಂದರೆ, ಅವನಿಗೆ ಹಾಕಿದ ಬಹಿಷ್ಕಾರದ ಆಜ್ಞೆಯನ್ನು ಧಿಕ್ಕರಿಸಿದರು ಎಂದೇ ಅರ್ಥ. ಜನರ ಈ ಉದ್ರೇಕದಿಂದಾಗಿ ತುಕಾರಾಮನನ್ನು ಗಡಿಪಾರು ಮಾಡುವ ಪ್ರಶ್ನೆಯು ಮೂಲೆಗುಂಪಾಯಿತು. ದೋಚಿದ ಅವನ ಸಂಪತ್ತು ಆಂಶಿಕವಾಗಿಯಾದರೂ ಮರಳಿ ನೀಡಿದರೋ ಇಲ್ಲವೋ ಗೊತ್ತಿಲ್ಲ, ಆದರೆ ತುಕಾರಾಮನ ಸಂಸಾರ ಸುರಳೀತ ನಡೆಯಲು ಜನರು ಅಗತ್ಯವಿರುವ ಪಾತ್ರೆ-ಪರಡಿ, ಧಾನ್ಯ ವಗೈರೆ ನೀಡಿರಬೇಕು. ತಾತ್ಪರ್ಯವೆಂದರೆ, ಬಹಿಷ್ಕಾರ, ಗಡಿಪಾರು ಮತ್ತು ಮುಟ್ಟುಗೋಲಿನಂತಹ ಮೂರು ಶಿಕ್ಷೆಯ ಮೂಲಕ ತುಕಾರಾಮನಿಗೆ ಪಾಠ ಕಲಿಸುವ ಪಂಡಿತರ ಪ್ರಯತ್ನ ವಿಫಲವಾಯಿತು. ತುಕಾರಾಮನು ಸತ್ಯಾಗ್ರಹದ ಅಸ್ತ್ರ ಬಳಸಿ ಪಂಡಿತರನ್ನು ಹಿಮ್ಮೆಟ್ಟುವಂತೆ ಮಾಡಿದ.

ಸ್ತಬ್ದಗೊಂಡ ಮಹಾಪ್ರಳಯ

ಈಗುಳಿದಿರುವ ಪ್ರಶ್ನೆಯೆಂದರೆ, ಮುಳುಗಿದ ಗಾಥೆಯದು. ಪ್ರತ್ಯಕ್ಷವಾಗಿ ಮುಳುಗಿದ ವಹಿಯ ಕಥೆ ಏನಾಯಿತು ಎಂಬ ವಿಷಯ ಬೇರೆ. ಆದರೆ ಅವನ ಅಭಂಗಗಳು ಬೇರೊಂದು ರೀತಿಯಲ್ಲಿ ತೇಲಿದವು. ಈ ಸಂಗತಿಯು ನನ್ನ ದೃಷ್ಟಿಯಲ್ಲಿ ಅತ್ಯಂತ ಮಹತ್ವದ್ದು. ಉಪರೋಕ್ತ ಮೂರು ಶಿಕ್ಷೆಯನ್ನು ನೀಡುವ ಕಾರಣವೆಂದರೆ, ತುಕಾರಾಮನ ಅಭಂಗ, ಈ ಕಾರಣಕ್ಕಾಗಿ ಅಭಂಗ ಮುಳುಗಿಸುವದು, ಅಭಂಗದ ವಹಿಯನ್ನು ಇಟ್ಟುಕೊಳ್ಳಲು ಮತ್ತು ಅಭಂಗ ಹೇಳಲು ನಿಷೇದ ಹಾಕಿದ್ದು, ತುಕಾರಾಮ ಹೊಸ ಅಭಂಗ ರಚಿಸಲೂ ನಿಷೇಧ ಹಾಕಿರುವದು. ಇದು ಮೂಲಭೂತ ಸ್ವರೂಪದ ಶಿಕ್ಷೆಯಾಗಿತ್ತು. ಮೇಲೆ ಉಲ್ಲೇಖಿಸಿದ ಜನರ ಉದ್ರೇಕದಿಂದಾಗಿ ಆ ಶಿಕ್ಷೆಯೂ ತರಗಲೆಯಂತೆ ಹಾರಿಹೋಯಿತು. ಮುಳುಗಿಸಿದ ಅಭಂಗಗಳು ಉಳಿದಿತ್ತೊ ಅವರು ಹೆದರದೆ ಅದನ್ನು ತೆರೆದರು. ಯಾರಿಗೆ ಕಂಠಪಾಠವಿತ್ತೋ ಅಂಥವರು ಶಿಕ್ಷೆಯ ನಿಷೇದಾಜ್ಞೆಯನ್ನು ಲೆಕ್ಕಿಸದೆ ಬರೆದಿಡಲಾರಂಭಿಸಿದರು. ಹೊಸ ಅಭಂಗ ಬರೆಯಲೂ ತುಕಾರಾಮನು ಹಿಂಜರಿಯಬಾರದೆಂದು ಒತ್ತಾಯಿಸಿದರು. ಆನಂತರದ ಕಾಲದಲ್ಲಿ ತುಕಾರಾಮನು ಅಭಂಗ ಬರವಣಿಗೆಯನ್ನು ಮುಂದುವರಿಸಿದ್ದು ಇದನ್ನೆಲ್ಲ ಸಿದ್ದ ಮಾಡುವಷ್ಟು ಸಾಕಷ್ಟು ಪುರಾವೆಗಳಿವೆ. ಅಂದರೆ ತುಕಾರಾಮನ ಅಭಂಗ ರಚನೆಯು ಅಖಂಡವಾಗಿ ಮುಂದುವರಿಯಿತು. ಅವನ ಪ್ರತಿಭೆಯ ಚಿಗುರು ಮತ್ತೆ ಅಂಕುರಿಸಿತು, ಆನಂತರದ ಕಾಲದಲ್ಲಿ ಅಧಿಕ ವಿಕಾಸಗೊಂಡಿತು. ಅವನ ಅಂತರಂಗದಲ್ಲಿ ಹುಟ್ಟಿಕೊಂಡ ಝರಿಯು, ತೊರೆಯು ಯಾವ ಅಡಚಣೆಯೂ ಇಲ್ಲದೆ ಜನರ ಹೃದಯದವರೆಗೂ ತಲುಪಲಾರಂಭಿಸಿತು. ಒಂದು ಭಯಂಕರವಾದ ಪ್ರಳಯವು ಉಜ್ವಲ ಪ್ರತಿಭೆಯನ್ನು ನುಂಗಲು ಬಂದದ್ದು, ತಟ್ಟನೆ ಬಾಯಿತೆರೆದು ಸ್ತಬ್ದಗೊಂಡು ನಿಂತೇಬಿಟ್ಟಿತು. ಒಂದು ಅನರ್ಥಕಾರಿ ವಿಧ್ವಂಸಕ ಶಕ್ತಿಯು ಮರಳಿ ಹೋಯಿತು. ಈ ಎಲ್ಲ ಘಟನೆಗಳಿಂದಾಗಿ ಕೆಲವು ಶ್ರೇಷ್ಠ ಅಭಂಗಗಳು ನಾಶಗೊಂಡಿರಬೇಕು ಎಂಬುದರಲ್ಲಿ ಸಂಶಯವಿಲ್ಲ. ಆದರೂ ಸಾಕಷ್ಟು ಉಳಿಯಿತೆನ್ನುವದೇ ಸಮಾಧಾನದ ಸಂಗತಿ.

ಸಂಘರ್ಷ ಬೂದಿ ಮುಚ್ಚಿದ ಕೆಂಡದಂತೆ ಉರಿಯುತ್ತಿತ್ತು

ಪ್ರಳಯ ನಿಂತಿತು ಎಂದರೆ, ಅಲ್ಲೇ ಸ್ತಬ್ಧಗೊಂಡು ನಾಶವಾಯಿತು ಎಂದಲ್ಲ. ಅನರ್ಥ ಮರಳಿ ಹೋಯಿತು ಎಂದರೆ ಶಾಶ್ವತ ವಿರುದ್ಧ ದಿಶೆಗೆ ಹೊರಟು ಹೋಯಿತು ಎಂದೂ ಅಲ್ಲ. ಏಕೆಂದರೆ, ಈ ಘಟನೆಯಲ್ಲಿ ಸಿಲುಕಿದವರು ಘಾಸಿಗೊಂಡರೂ, ತಮ್ಮ ಉದ್ದೇಶ ಈಡೇರಿಸಿಕೊಳ್ಳಲು ಮತ್ತೆ ಟೊಂಕ ಕಟ್ಟಿದರು. ಅವರಂತೂ ತುಂಬ ಪ್ರಭಾವಶಾಲಿ ಜನರಾಗಿದ್ದರು. ಅಧಿಕಾರದ ದೃಷ್ಟಿಯಿಂದ, ಅವರ ದೃಷ್ಟಿಯಲ್ಲಿ ನಗಣ್ಯವಾದ ಒಬ್ಬ ಹರಕು ವ್ಯಕ್ತಿಯಿಂದ ಅಪಮಾನಕ್ಕೊಳಗಾಗುವ ಪ್ರಸಂಗ ಬಂದಿತ್ತು. ಆದರೆ ಇಷ್ಟರಿಂದಲೇ ಕುಸಿದು ಹೋಗುವಷ್ಟು ದುರ್ಬಲರಾಗಿರಲಿಲ್ಲ. ಅವರ ಬಳಿ ಇನ್ನೂ ಸಾಮರ್ಥ್ಯವಿತ್ತು. ಅವರ ಉಗುರು ಈಗಲು ತೀಕ್ಷ್ಣವಾಗಿತ್ತು. ಅವರು ಒಪ್ಪಿಕೊಂಡ ಸೋಲು ತಾತ್ಕಾಲಿಕವಾಗಿತ್ತು, ಪ್ರಾಸಂಗಿಕವಾಗಿತ್ತು, ಕ್ಷಣಭಂಗುರವಾಗಿತ್ತು. ಈ ಯುದ್ಧ ಮತ್ತೆ ದೀರ್ಘಕಾಲ ನಡೆಯುವಂತಿತ್ತು. ಹೀಗಾಗಿ ಘಾಸಿಗೊಂಡ ಜನ ಸ್ವಾಭಾವಿಕವಾಗಿಯೇ ಹೋರಾಟದ ಹಾದಿ ಬಿಟ್ಟು ಶಾಶ್ವತವಾಗಿ ದೂರ ಸರಿದಿರಲಿಲ್ಲ. ಅವರು ಹೊಂಚು ಹಾಕಿ ಸೇಡಿನ ಹಾದಿ ಬಿಟ್ಟು ಶಾಶ್ವತವಾಗಿ ದೂರ ಸರಿದಿರಲಿಲ್ಲ. ಅವರು ಹೊಂಚು ಹಾಕಿ ಸೇಡಿನ ಹಾದಿ ಕಾಯಲಾರಂಭಿಸಿದ್ದರು. ಅವಕಾಶ ಸಿಕ್ಕಾಗ ಎರಗುವದು, ಭಜನೆ ಕೀರ್ತನೆಗೆ ಅಡ್ಡಿ ಮಾಡುವದು, ಬಯ್ಯುವದು, ಹೊಡೆಯುವದು ನಡೆದೇ ಇತ್ತು. ಹೋರಾಟ ಬೂದಿ ಮುಚ್ಚಿದ ಕೆಂಡದಂತೆ ಒಳಗೊಳಗೇ ಉರಿಯುತ್ತಿತ್ತು. ಮತ್ತೊಂದೆಡೆ ತುಕಾರಾಮನು ಸಹ ಹಿಂಜರಿಯದೆ ನಿರ್ಮಲ ಮನದಿಂದ, ಜನರ ಬಗೆಗಿನ ಉತ್ಕಟ ಪ್ರೇಮದಿಂದ ಕಾರ್ಯ ಮುಂದುವರಿಸಿದ. ಶೀತಲಯುದ್ಧ ಮಾತ್ರ ನಡೆದೇ ಇತ್ತು. ಒಂದೆಡೆ ಸ್ವಂತದ ಹಿತಾಸಕ್ತಿಯ ಸಂರಕ್ಷಣೆಯಿದ್ದರೆ, ಮತ್ತೊಂದೆಡೆಗೆ ಸಮಾಜದ ಒಳಿತಿಗಾಗಿ ಜೀವವನ್ನೇ ಪಣಕ್ಕಿಡುವ ಸಿದ್ಧತೆ ನಡೆದಿತ್ತು.