ಮಾನಸಿಕ ಅವಸ್ಥೆಯ ಹುಸಿ ಚಿತ್ರಣ.

ಯಾರ ಮನದಲ್ಲೂ ಕೊಲೆಯಾದ ಶಂಕೆ ಬರಬಾರದೆಂದು, ಹಲವು ಲೇಖಕರು ಒಂದು ಯುಕ್ತಿಯನ್ನು ಕೈಕೊಂಡರು. ತುಕಾರಾಮನ ಮಾನಸಿಕ ಅವಸ್ಥೆಯ ಹುಸಿ ಚಿತ್ರಣವನ್ನು ನೀಡುವದೇ ಈ ಯುಕ್ತಿ.

ಸಾವಿಗಿಂತ ಮೊದಲು ಕೆಲಕಾಲ ತುಕಾರಾಮನ ಮನದಲ್ಲಿ ಯಾವ ವಿಚಾರ ಮಂಥನ ನಡೆದಿತ್ತು. ಅವನು ಪಡೆಯುತ್ತಿರುವ ಅನುಭವ ಯಾವುದು, ಅವನು ತನ್ನ ಬದುಕನ್ನು ಹೇಗೆ ರೂಪಿಸುವ ಪ್ರಯತ್ನದಲ್ಲಿದ್ದ ಎಂಬುದರ ಕುರಿತು ವಿವಿಧ ಲೇಖಕರು ಸ್ಟೈರತನದಿಂದ ಕೆಲವು ಮತವನ್ನು ಮಂಡಿಸಿದ್ದಾರೆ. ಅವರಲ್ಲಿ . ವಿ.ಲ.ಭಾವೆ ಎಂಬವರು ಮಂಡಿಸಿದ ವಿಚಾರವನ್ನು ಸಂಕ್ಷಿಪ್ತವಾಗಿ ಇಲ್ಲಿ ನೀಡುತ್ತಿದ್ದೇವೆ. “ಶಕೆ ೧೫೨೭ರಲ್ಲಿ ತಾನು ಇನ್ನು ಈ ಲೋಕ ತೊರೆದು ಹೋಗಬೇಕೆಂದು ತುಕಾರಾಮನಿಗೆ ಅನಿಸಲಾರಂಭಿಸಿತು. ಒಂದನೆಯ ದಂತೂ, ಈಗಾಗಲೇ ತನಗೆ ದೇವರ ಕೃಪೆಯಾಗಿದೆ ಎಂದೆನಿಸಿದ್ದು, ಈಗ ಇಹಲೋಕದ ಬಗೆಗೆ ಆಸಕ್ತಿ ಉಳಿದಿರಲಿಲ್ಲ. ಸಂಪೂರ್ಣ ಭಕ್ತಿ ಮತ್ತು ದೃಢ ವಿಶ್ವಾಸದಿಂದ ಸಿಗುವ ಮಾನಸಿಕ ನೆಮ್ಮದಿ, ಶಾಂತಿ ಅವನಿಗೆ ಲಭಿಸಿತು. ಸ್ವಂತದ ಬಗೆಗೆ ಯಾವ ಚಡಪಡಿಕೆ -ತಲ್ಲಣವಿರಲಿಲ್ಲ. ಎರಡನೆಯದು, ಅವನು ಯಾರ ಬಗೆಗೆ ಪ್ರೇಮ-ಪೂಜ್ಯಭಾವ ಹೋಂದಿದ್ದನೋ ಆ ಜ್ಞಾನೇಶ್ವರ-ಏಕನಾಥ… ತಾವಾಗಿಯೇ ಈ ಲೋಕ ತೊರೆದು ಹೋದ ಕೀರ್ತಿಯ ಅರಿವು ಅವನಿಗಿತ್ತು. ಹೀಗಾಗಿ ತಾನೂ ಹಾಗೆಯೇ ಮಾಡಬೇಕೆಂಬ ಸಹಜ ಅಭಿಲಾಷೆ ಅವನಿಗಾಯಿತು. ಹಾಸಿಗೆಯಲ್ಲಿ ಕೊಳೆಯುತ್ತ ಬಿದ್ದು ಸಾವಿನ ಹಾದಿ ಕಾಯುವದಕ್ಕಿಂತ, ತಾನಾಗಿಯೇ ಈ ಲೋಕ ತೊರೆಯುವದೆಂದು ನಿಶ್ಚಯಿಸಿದನು. ಈ ಸಂಕಲ್ಪದಂತೆ ಸದಾಕಾಲ ತನ್ನ ಗಮನದ ಕುರಿತೇ ಯೋಚಿಸುತ್ತಿದ್ದ. ಮಾತಾಡುತ್ತಿದ್ದ. ಹೋಗುವ ಸಿದ್ಧತೆಯನ್ನೂ ನಡೆಸಿದ. ಈಗ ಅವನಿಗೆ ಯಾರಾದರೂ ‘ಎಲ್ಲಿಗೆ ಹೋಗುತ್ತೀರಿ?’ ಎಂದರೆ, ಸಹಜವಾಗಿ ‘ವೈಕುಂಠಕ್ಕೆ’ ಎಂದೇ ಹೇಳುತ್ತಿದ್ದ… ತನಗೆ ದೇವರ ಸಂದೇಶ ಬಂದಿದೆ ಎಂದವನಿಗೆ ಅನಿಸತೊಡಗಿತು. ಫಾಲ್ಗುಣ ಶುದ್ಧ ದಶಮಿಯಂದು ದೇವರು ತನ್ನನ್ನು ಕರೆದೊಯ್ಯಲು ಬಂದಿದ್ದಾನೆಂದೇ ಭ್ರಮೆಯಾಯಿತು. ಅವನು ಮೈಮರೆತು ತನ್ಮಯ ನಾದ, ಕೊನೆಗೆ ಅವನು ಎಲ್ಲರಿಗೂ ವಿದಾಯ ಹೇಳಿ ಫಾಲ್ಗುಣ ವದ್ಯ ದ್ವಿತೀಯದಂದು ನಿಜಧಾಮಕ್ಕೆ ತೆರಳಿದ.”

ತುಕಾರಾಮನ ಮಾನಸಿಕ ಅವಸ್ಥೆಯ ಕುರಿತು ಹೇಳಿದ ಮಾತು ದಿಟವಲ್ಲ. ಏಕೆಂದರೆ, ತುಕಾರಾಮನು ಬದುಕಿಗೆ ವಿದಾಯ ಹೇಳುವ ಸಿದ್ಧತೆ ನಡೆಸಿದ್ದ, ಸಕಲ ಸಿದ್ಧತೆ ಮಾಡಿಕೊಂಡಿದ್ದ, ಪ್ರಾಣ ತ್ಯಾಗ ಮಾಡಲು ಸಿದ್ಧನಾಗಿದ್ದ, ಉತ್ಕರ್ಷಿತನಾಗಿದ್ದ, ಆಚೆಗೆ ಹೋಗಲು ಎಷ್ಟು ಚಡಪಡಿಸುತ್ತಿದ್ದನೆಂದರೆ, ಒಂದು ಬಗೆಯ ಹುಚ್ಚೇ ಹಿಡಿದಂತಾಗಿತ್ತು. ಅವನಿಗೆ ಬೇರೆ ಏನು ಹೊಳೆಯುತ್ತಿರಲಿಲ್ಲ. ಈ ಎಲ್ಲ ಮಾತಿನ ಅರ್ಥವೇನೆಂದರೆ, ಬೇರೆ ಯಾರೂ ಕೊಲ್ಲುವ ಪ್ರಶ್ನೆಯೇ ಇಲ್ಲ, ಸ್ವತಃ ಸಾವಿಗೆ ಶರಣು ಹೋಗಲು ಉತ್ಸುಕನಾಗಿದ್ದ ಎಂದು ಅವರಿಗೆ ಸೂಚಿಸಬೇಕಾಗಿದೆ. ಈ ಲೇಖಕರು ಒಂದು ವಿಶಿಷ್ಟ ಕಾರಣದ ಮೇಲೆ ಹೊದಿಕೆ ಹಾಕುವ ರೀತಿಯಲ್ಲಿ ಬರೆಯುವ ಪ್ರಯತ್ನ ಮಾಡಿದರೂ, ಅದೆಲ್ಲ ಐತಿಹಾಸಿಕ ಸತ್ಯಕ್ಕೆ ಗಾವುದ ದೂರವಾದುದು ಎಂದು ಸಾಬೀತು ಪಡಿಸಲು ಹಲವು ಪುರಾವೆಗಳು ಉಪಲಬ್ದವಿವೆ.

ವಿ.ಲ.ಭಾವೆಯವರು ತುಕಾರಾಮನ ಬಗೆಗೆ ಪೂರ್ವಗ್ರಹ ಹೊಂದಿದ್ದರು ಎಂಬುದಂತೂ ನಿಜ. ಅವರು ತುಕಾರಾಮ ಮತ್ತು ರಾಮದಾಸನನ್ನು ಹೋಲಿಸುವಾಗ ತುಕಾರಾಮನನ್ನು ತುಂಬ ಹಂಗಿಸಿ ಮಾತನಾಡಿದ್ದಾರೆ. ತುಕಾರಾಮನ ಬಗೆಗಿನ ಅವರ ಉಳಿದ ಅಭಿಪ್ರಾಯವೂ ಕುತ್ಸಿತತನದಿಂದ ಕೂಡಿದೆ. ಇದನ್ನು ಗಮನಿಸಿದಾಗ ತುಕಾರಾಮನ ಪ್ರತಿಮೆಯನ್ನು ಭಂಜಿಸುವದೇ ಇವರ ಉದ್ದೇಶವಾಗಿರುವಂತಿದೆ. ಹೀಗಾಗಿ ಅವರು ತುಕಾರಾಮನ ಮೇಲೆ ಹುಚ್ಚಿನ ಆರೋಪ ಹೊರಿಸುವ ಪ್ರಯತ್ನ ಮಾಡಿದಂತಿದೆ. ಖರೆಯೆಂದರೆ, ತುಕಾರಾಮನ ಈ ಪಲಾಯನವಾದಿ, ಜೀವನ ವಿರೋಧ ಪ್ರತಿಮೆಯು ಹುಸಿತನದಿಂದ ಕೂಡಿದೆ. ‘ನನಗೆ ಬದುಕಿನ ಬಗೆಗೆ ಕೋಪವಿಲ್ಲ’ ಎಂದು ತುಕಾರಾಮನೇ ಹೇಳಿದ್ದಾನೆ. ದೇವರ ಹತ್ತಿರ ಮರಣ ಬೇಡುವವನು ಕತ್ತೆಯ ಮಗ ಎಂದು ಪಲಾಯನವಾದಿ ವೃತ್ತಿಯನ್ನು ಧಿಕ್ಕರಿಸಿದ್ದಾನೆ. ರಣರಂಗದಿಂದ ಪಲಾಯನ ಮಾಡಬಾರದೆಂದು ಮತ್ತೆ ಮತ್ತೆ ನುಡಿದಿದ್ದಾನೆ. ಬದುಕಿನಲ್ಲಿ ಸಂಕಟ ಬಂದೆರಗಿದಾಗ ಅಪರೂಪಕ್ಕೆ ಯಾವ ಮನುಷ್ಯನಾದರೂ ಹತಾಶನಾಗುವದು ಸಹಜ. ಆದರೆ ಆ ಹತಾಶೆಯು ತಾತ್ಕಾಲಿಕವಾದದ್ದು, ತುಕಾರಾಮನೋ ಸಂವೇದನಾಶೀಲ ಕವಿ. ಅವನ ಮೇಲೆ ಎರಗಿದ ಸಂಕಟ ಮಾತ್ರ ತೀರ ಘೋರವಾಗಿತ್ತು. ಆ ಕಾಲಕ್ಕೆ ಅವನು ನಿರಾಸೆಯ ಮಾತು ಹೇಳಿದ್ದಾನೆ ಇಲ್ಲವೆಂದಲ್ಲ. ಆದರೆ ಅವನ ಆ ಮಾನಸಿಕ ಸ್ಥಿತಿಯು ತಾತ್ಕಾಲಿಕವಾಗಿತ್ತು. ಅದು ಅವನ ಸ್ಥಾಯಿಭಾವವಾಗಿರಲಿಲ್ಲ. ಎರಡೆಯದು, ನಿರಾಸೆಯ ಮಾತು ಆಡುವಾಗಲೂ ಸಹ ದೇವರ ಆಧಾರ ಸಿಗಬೇಕೆಂಬ ಉತ್ಕಟ ಇಚ್ಛೆಯೂ ಅವನಲ್ಲಿತ್ತು. ದೇವರು ತನ್ನನ್ನು ಬಳಿಗೆ ಕರೆದುಕೊಳ್ಳಲಿ, ಪ್ರೀತಿನೀಡಲಿ ಎಂಬ ಆಕರ್ಷಣೆಯೂ ಇತ್ತು. ಅದಂತೂ ಖಂಡಿತಕ್ಕೂ ಮರಣದ ಆಕರ್ಷಣೆಯಲ್ಲ. ಸತ್ತ ಬಳಿಕವೇ ವಿಠ್ಠಲನ ದರುಶನವಾಗುತ್ತದೆಂದೂ ಒಪ್ಪಿಕೊಂಡವನಲ್ಲ. ಬದಲು, ಅತಿರೇಕತನದಿಂದ ಸಾವು ಸ್ವೀಕರಿಸುವವನ ಅದಃಪತನವಾಗುತ್ತದೆ. ದೇವರು ಅಂಥವರ ಬಗೆಗೆ ಹೇಸಿಗೆ ಪಡುತ್ತಾನೆ ಎಂದೆನಿಸಿದೆ. ಇದರರ್ಥ ಬದುಕಿದ್ದಾಗಲೇ, ಜೀವಂತವಾಗಿದ್ದಾಗಲೇ ವಿಠ್ಠಲನ ದಯೆಯ ಆಸ್ವಾದನೆ ಸಿಗಬೇಕೆಂಬ ನಿಲುವು ಅವನದಾಗಿತ್ತು. ತುಕಾರಾಮನ ಪಲಾಯನವಾದಿ ಎಂಬ ಛಾಪು ಆರಂಭದಿಂದಲೇ ಮುದ್ದಾಂ ಮೂಡಿಸಲಾಗಿದೆ. ಅಸಹಾಯನಾಗಿ ಈಶ್ವರ ಭಕ್ತಿಯ ಕಡೆಗೆ ಹೊರಳಿದನೆಂದು ಹೇಳುವದು, ಮತ್ತೆ ನಿರಾಸೆ ಅಥವಾ ತೃಪ್ತನಾಗಿ ಸಾವಿನ ಕಡೆಗೆ ಹೊರಳಿದನೆಂದು ಹೇಳುವದು ಇದೆಲ್ಲ ಚರಿತ್ರ ಲೇಖಕರು ಮಾಡಿದ ಕೆಲಸ. ಆದರೆ ಇವೆರಡೂ ಸಂಗತಿಗಳು ದಿಟವಲ್ಲ. ಜೀವನದ ರಣರಂಗದಲ್ಲಿ ಷಡ್ಡು ಹೊಡೆದು ನಿಂತ ಮತ್ತು ಎಂತೆಂಥವರಿಗೋ ಆಹ್ವಾನ ನೀಡುವ ಈ ಮನುಷ್ಯನು ಬದುಕಿನ ರಣರಂಗದಿಂದ ಪಲಾಯನ ಮಾಡಿದನೆಂದು ಬಣ್ಣಿಸುವದು ಚರಿತ್ರೆಯ ವಿಕೃತಿಯೆನ್ನದೇ ವಿಧಿಯಿಲ್ಲ. ಇದನ್ನು ವಿಕೃತಗೊಳಿಸುವ ಅಗತ್ಯ ಈ ಲೇಖಕನಿಗಿತ್ತು, ಏಕೆಂದರೆ, ತುಕಾರಾಮನ ಸಾವಿನ ನಿಜವಾದ ಕಾರಣ ಅವನಿಗೆ ಮುಚ್ಚಿಡಬೇಕಿತ್ತು.

ನಲ್ವತ್ತರಲ್ಲಿ ಹಾಸಿಗೆಯಲ್ಲಿ ಕೊಳೆಯುತ್ತ ಬೀಳುವ ಭೀತಿಯೆ?

ಈ ಲೋಕವನ್ನು ತೊರೆದು ಹೋಗಬೇಕೆಂಬ ಭಾವನೆಯಿಂದ ತುಕಾರಾಮನು ಸಿದ್ಧತೆ ನಡೆಸಿರುವದಾಗಿ ಈ ಲೇಖಕ ಹೇಳುತ್ತಾನೆ. ಹಾಸಿಗೆಯಲ್ಲಿ ಕೊಳೆತು ಸಾಯುವುದಕ್ಕಿಂತ ಸ್ವತಃ ಸಾವನ್ನು ಸ್ವೀಕರಿಸಬೇಕೆಂದು ಬಯಸಿರುವದಾಗಿ ಭಾವೆ ಹೇಳುತ್ತಾರೆ. ಭಾವೆಯವರ ಈ ಹೇಳಿಕೆಗೆ ಯಾವ ಅಭಂಗದ ಆಧಾರವೂ ಇಲ್ಲ.

ತುಕಾರಾಮನ ಸಾವು ಸಂಭವಿಸಿದಾಗ ಅವನ ವಯಸ್ಸು ಕೇವಲ ೪೧-೪೨. ಸಾಯುತ್ತ ಕೊಳೆಯುತ್ತ ಬೀಳಲು ಅವನು ಯಾವುದೇ ಅನಾರೋಗ್ಯದಿಂದ ಬಳಲುತ್ತಿರಲಿಲ್ಲ. ಹೀಗಿದ್ದಾಗ ಸಾವಿನ ಬಯಕೆ ಆಗಿದ್ದು ಹೇಗೆ? ವೈದಿಕ ಪರಂಪರೆಯಲ್ಲಿ ನೂರು ವರುಷದ ಆಯುಷ್ಯವನ್ನು ಪರಿಗಣಿಸಿದ್ದು, ೫೦ ವರುಷದ ವರೆಗೆ ಗೃಹಸ್ಥಾಶ್ರಮವನ್ನು ಸೂಚಿಸಲಾಗಿದೆ. ಹೀಗಿರುವಾಗ ನಲ್ವತ್ತರಲ್ಲೇ ಹಾಸಿಗೆಯಲ್ಲಿ ಬಿದ್ದು ಸಾಯುವವರು ಯಾರಾದರೂ ಭಾವೆಯವರಿಗೆ ಭೇಟಿಯಾಗಿರಬಹುದೆ? ತುಕಾರಾಮನಿಗೆ ಸಾಯುವ ಇಚ್ಛೆಯಾಗಿತ್ತು ಎನ್ನುವದು ದಿಟವಾಗಿರದೆ, ಅವನನ್ನು ಸಾವಿನ ದವಡೆಯಲ್ಲಿ ನೂಕುವ ಪ್ರಯತ್ನವಂತೂ ಖಂಡಿತಕ್ಕೂ ಕೆಲವರು ಮಾಡಿರುವದು ಸತ್ಯ. ತುಕಾರಾಮನು ತೀರಿಕೊಂಡಾಗ, ಅವನ ಪತ್ನಿಯು ಗರ್ಭವತಿಯಾಗಿದ್ದಳು. ಈ ಬಗೆಗೆ ಭಾವೆ ನೀಡಿತ ಕುತ್ಸಿತ ಶರಾವನ್ನು ಸ್ವಲ್ಪ ಬದಿಗಿಟ್ಟರೂ, ಈ ಘಟನೆಯು ತುಕಾರಾಮನ ಮನದಲ್ಲಿರುವ ಬದುಕಿನ ಬಗೆಗಿನ ಆಸಕ್ತಿಯನ್ನು ತೋರಿಸುತ್ತದೋ, ಸಾವನ್ನು? ಈ ವಯಸ್ಸಿನಲ್ಲಿ ಪತ್ನಿಯು ಗರ್ಭವತಿಯಾಗಿದ್ದರಿಂದ ತುಕಾರಾಮನು ಕಾಮಾಸಕ್ತ, ಅಧಾರ್ಮಿಕ, ಅಥವಾ ತಪ್ಪಿತಸ್ತನಾಗುತ್ತಾನೆಂದೇನೂ ಅಲ್ಲ. ತುಕಾರಾಮನು ಸನ್ಯಾಸಿಯಾಗಿರಲಿಲ್ಲ. ಗೃಹಸ್ಥಾಶ್ರಮಿಯಾಗಿದ್ದ. ವೈದಿಕ ಪರಂಪರೆಯಲ್ಲಿ ಹೇಳಿದ ಗೃಹಸ್ಥಾಶ್ರಮದ ಅಂತಿಮ ಮರ್ಯಾದೆಯು ಐವತ್ತು ವರುಷವಿರುವದರಿಂದ ಅವನು ಆಶ್ರಮದ ನಿಯಮವನ್ನು ಭಂಗ ಮಾಡಿದನೆಂದೂ ಭಾವಿಸಬೇಕಿಲ್ಲ. ಆದರೆ ಈ ಸಂಗತಿಯು ಗೌಣವಾದುದು. ತುಕಾರಾಮನು ತನ್ನ ಬದುಕಿಗೆ ವಿದಾಯ ಹೇಳುವ ಇಚ್ಛೆಯು ನಿಜವಾಗಿಯೂ ಸತ್ಯವಾಗಿದ್ದರೆ, ಅವನು ಪತ್ನಿಯ ಸಹವಾಸದಿಂದಲೂ ದೂರ ಸರಿಯುತ್ತಿದ್ದ. ಪ್ರತ್ಯಕ್ಷದಲ್ಲಿ ಹಾಗೇನೂ ಆಗಲಿಲ್ಲ. ಅಂದರೆ ಅವನು ಸಾವಿನ ಸಿದ್ಧತೆ ನಡೆಸಿರಲಿಲ್ಲ ಎನ್ನುವದು ಸತ್ಯ. ಪತ್ನಿ ಗರ್ಭವತಿಯಾಗಿದ್ದಾಳೆ, ಮಕ್ಕಳು ಚಿಕ್ಕವರು, ಹೀಗಿರುವಾಗ ಯಾವ ಮನುಷ್ಯ ಸಾವಿನ ಸಿದ್ಧತೆ ಮಾಡುತ್ತಾನೆ? ತುಕಾರಾಮನು ಸಂಸಾರವನ್ನು ನಿರ್ಲಕ್ಷಿಸಿದ್ದ ಎಂಬ ಹೇಳಿಕೆಯು ಸಂಪೂರ್ಣ ಸುಳ್ಳು, ಕೆಲವು ಮೌಲ್ಯಕ್ಕಾಗಿ ಸಂಘರ್ಷ ಕೈಗೊಂಡಾಗ ಸಂಸಾರದಲ್ಲಿ ಅಡಚಣೆ ಬರುವದು ಬೇರೆ, ಹೊಣೆಗೇಡಿಯಾಗಿ ಸಂಸಾರವನ್ನು ಹಾಳು ಮಾಡುವದು ಬೇರೆ. ತುಕಾರಾಮನು ಮೌಲ್ಯಕ್ಕಾಗಿ ಸಂಘರ್ಷ ಮಾಡುವ ವ್ಯಕ್ತಿಯಾಗಿದ್ದ. ಇಂಥ ವ್ಯಕ್ತಿಗೆ ಹೊಣೆಗೇಡಿಯೆಂದು ಹೆಸರಿಡುವದು, ಸ್ವಾತಂತ್ರ್ಯಯೋಧನನ್ನು ಹೊಣೆಗೇಡಿ ಎಂದಂತಾಗುತ್ತದೆ. ಈ ಸಂಘರ್ಷ ಮಾಡುವಾಗ ಅಪರಿಹಾರ್ಯ ಪರಿಣಾಮದಿಂದಾಗಿ ಸಾವು ಬಂದರೆ ನಿರ್ಭಯತನದಿಂದ ಎದುರಿಸುವ ಸಿದ್ಧತೆ ತುಕಾರಾಮನಲ್ಲಿತ್ತು. ಆದರೆ ತಾನಾಗಿಯೇ ಸಾವು ಸ್ವೀಕರಿಸುವ ಯೋಚನೆಯು ಅವನ ಮನದಲ್ಲಿ ಸುಳಿಯಲೂ ಇಲ್ಲ ಎನ್ನುವದು ಚಾರಿತ್ರಿಕ ಸತ್ಯ.

ಅಪೇಕ್ಷಿತ ಮತ್ತು ಖಚಿತವಾಗಿದ್ದ ಹತ್ಯೆಕಟ್ಟಿಕೊಂಡ ವೈರ.

ಈಗ ಈ ಸಂದರ್ಭದಲ್ಲಿ ಮತ್ತೂ ಒಂದು ವಿಷಯದ ಬಗೆಗೆ ವಿವೇಚನೆ ಮಾಡುವ ಅಗತ್ಯವಿದೆ. ತುಕಾರಾಮನು ಸಮಾಜದ ಒಂದು ವಿಶಿಷ್ಟ ವರ್ಗದವರ ವೈರತ್ವವನ್ನು ಅದೆಷ್ಟು ತೀವ್ರವಾಗಿ ಕಟ್ಟಿಕೊಂಡಿದ್ದನೆಂದರೆ, ಅವರ ಪರಿಣಾಮವೆಂಬಂತೆ ಅವನ ಹತ್ಯೆಯಾಗುವದು ಅಪೇಕ್ಷಿತವಷ್ಟೇ ಅಲ್ಲ, ಖಚಿತವೂ ಆಗಿತ್ತು. ಅವನ ಹತ್ಯೆಯು ಸಮರ್ಥನೀಯವಾಗಿತ್ತೆಂದೇನೂ ನಾನು ಹೇಳುತ್ತಿಲ್ಲ. ಆದರೆ ಅವನು ಸ್ವೀಕರಿಸಿದ ಜೀವನ ಪದ್ಧತಿಯಿಂದಾಗಿ ಹತ್ಯೆ ನಡೆಯುವದು ಅನಿವಾರ್ಯವಾಗಿತ್ತು ಎಂದಷ್ಟೇ ಹೇಳಬಲ್ಲೆ. ತುಕಾರಾಮನು ಒಬ್ಬ ಸಂತನಾಗಿದ್ದ. ಸಾಧೂವಾಗಿದ್ದ, ಸಜ್ಜನನಾಗಿದ್ದ ಎಂಬುದಂತೂ ಸತ್ಯ. ಅವನ ಸಂತತನ ಒಂದೆಡೆ ಸೌಮ್ಯ ಮತ್ತು ಬೆಳ್ದಿಂಗಳಿನಂತೆ ಶೀತಲವಾಗಿತ್ತು. ಮತ್ತೊಂದೆಡೆ ಅಷ್ಟೇ ಸ್ಫೋಟಕ ಮತ್ತು ಜ್ವಾಲಾಮುಖಿಯಂತೆ ಉಗ್ರವಾಗಿತ್ತು. ಯಾರ ಉಸಾಬರಿಗೂ ಹೋಗದೆ, ತನ್ನ ವ್ಯಕ್ತಿಗತ ಕೋಶದಲ್ಲೇ ಹುದುಗಿದ, ಅನ್ಯಾಯದ ಎದುರಿಗೆ ಮೌನವಾಗಿ ಶರಣಾಗತಿಯನ್ನು ಸ್ವೀಕರಿಸುವ ಒಬ್ಬ ಅಸಹಾಯಕ, ದುರ್ಬಲ ಸಾಧೂ ಅವನಾಗಿರಲಿಲ್ಲ. ದುಷ್ಟ, ಡಾಂಭಿಕ, ಅಹಂಕಾರಿ, ಅನ್ಯಾಯ ಮಾಡುವ ಜನರೊಂದಿಗೂ ಯಾವ ವೈರತ್ವವಿರಲಿಲ್ಲ. ಆದರೆ ಅವರ ಅನೈತಿಕ ವರ್ತನೆಯಿಂದ ಕೆರಳಿ ಸಿಡಿಲಿನಂತೆ ಎರಗುತ್ತಿದ್ದ. ಪಿತ್ತ ನೆತ್ತಿಗೇರಿದಾಗ ಒಮ್ಮೊಮ್ಮೆ’ಅವರನ್ನು ಹಿಡಿದು ಥಳಿಸಿರಿ, ಮುಖಕ್ಕೆ ಮಸಿ ಬಳಿಯಿರಿ’ ಎಂದು ಆವೇಶದ ಮಾತು ವ್ಯಕ್ತಗೊಂಡಿದ್ದಿದೆ. ತುಕಾರಾಮನು ಈ ಜನರ ವರ್ತನೆಯನ್ನು ಚಿಂದಿ ಚಿಂದಿಗೊಳಿಸಿದ್ದನ್ನು ಹಲವು ಸಲ ಕಂಡಿದ್ದೇವೆ.

ತುಕಾರಾಮನು ತೀಕ್ಷ್ಣವಾಣಿಯಿಂದ ಮತ್ತು ಖಾರವಾದ ಮಾತಿನಿಂದ ಹಲ್ಲೆ ಮಾಡಿದವರು ಹಾಗೇನು ಸಾಮಾನ್ಯ ಜನರಾಗಿರಲಿಲ್ಲ. ಪ್ರಬಲ ರಾಜಕೀಯ ಸತ್ತೆ, ಅಪಾರ ಸಂಪತ್ತು ಉಳ್ಳ ಜನರೂ ಅವನ ಪಾದಕ್ಕೆರಗುತ್ತಿದ್ದರು. ಅವರು ಸಮಾಜದ ಪ್ರತಿಷ್ಠಿತ, ಪ್ರಸ್ಥಾಪಿತ ಜನರಾಗಿದ್ದರು. ಸಮಾಜದಲ್ಲಿ ಅವರಿಗೆ ಸ್ಥಾನ-ಮಾನವಿತ್ತು. ಜನರು ಅವರನ್ನು ಪೂಜಿಸುತ್ತಿದ್ದರು. ಆದರೆ ಈ ತಥಾಕಥಿತ ಪೂಜ್ಯ ಜನರ ವರ್ತನೆಯು ಢೋಂಗಿತನ ಮತ್ತು ಭ್ರಷ್ಟತನದಿಂದ ಕೂಡಿದ್ದರಿಂದ ತುಕಾರಾಮನು ಅವರ ವ್ಯಕ್ತಿತ್ವದಲ್ಲಿಯ ಧಾರ್ಮಿಕತೆಯ ಬುರ್ಖಾ ಕಿತ್ತೆಸೆಯುತ್ತಿದ್ದ. ಅರ್ಥ ತಿಳಿಯದೆ ಕೇವಲ ಪಾಠಾಂತರ ಮಾಡುವ ವೈದಿಕ ಪಂಡಿತರು ಒಜ್ಜೆ ಹೊರುವ ಕತ್ತೆ, ಕುದುರೆಗಿಂತಲೂ ಕೀಳು ಎಂದು ಹೇಳುತ್ತಿದ್ದ. ಶ್ರೋತ್ರಿಗಳನ್ನು ಕೂಲಿಗಳೆಂದು ಕರೆಯುತ್ತಿದ್ದ. ಯಾಜ್ಞಿಕರಿಗಿಂತ ಗೌಳಿಗರ ಮಜ್ಜಿಗೆ ಕುಡಿಯುವ ಪೋರರು ಶ್ರೇಷ್ಠರೆನ್ನುತ್ತಿದ್ದ. ಮೂಗು ಮುಚ್ಚಿ ಜಪ-ತಪದ ಸೋಗು ಹಾಕುವವರ ಮೆಲೆ ಚಾಜೂಕು ಝಳಪಿಸುತ್ತಿದ್ದನು – ಜುಟ್ಟ, ಮುಂಡನೆ, ಜಟೆ, ಕಾವಿಬಟ್ಟೆ – ವಗೈರೆ ಉಪಾದಿಗಳಲ್ಲಿ ಸಿಲುಕಿದ ವಾಸನಾಧೀನ ಜನರ ಮೇಲೆ ಶಾಬ್ದಿಕ ಪ್ರಹಾರ ಮಾಡುತ್ತಿದ್ದ. ಜನಿವಾರ ಕಿತ್ತೊಗೆಯಲು ಹೇಳುತ್ತಿದ್ದನು. ಮೂರ್ಖಗುರು, ಡಾಂಭಿಕ ಶಿಷ್ಯನ ಮೇಲೆ ಎರಗುತ್ತಿದ್ದನು. ವರ್ಣದ ಅಭಿಮಾನ ಜರನ ಸಂಕುಚಿತತನವನ್ನು ಬಹಿರಂಗಗೊಳಿಸುತ್ತಿದ್ದನು. ವೇದ, ಯಜ್ಞಯಾಗ, ವರ್ಣ, ತೀರ್ಥ, ಸ್ಥಾನ-ಸಂಧ್ಯಾ-ಇತ್ಯಾದಿಗಳ ಕುರಿತು ಕಠೋರವಾಗಿ ಟೀಕಿಸುತ್ತಿದ್ದನು. ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದ ಗೌರವಾನ್ವಿತ ಸ್ಥಾನದಲ್ಲಿರುವ ಆ ಜನರನ್ನು ಇಷ್ಟೆಲ್ಲ ಬಗೆಯಿಂದ ತುಕಾರಾಮನು ಘಾಸಿಗೊಳಿಸಿದ್ದರಿಂದ, ಅವರೆಲ್ಲರ ಮನದಲ್ಲಿ ತುಕಾರಾಮನ ಬಗೆಗೆ ಅಸಮಾಧಾನವಿತ್ತು. ನಂಜು ತುಂಬಿಕೊಂಡಿತ್ತು. ಸಿಟ್ಟು ಜ್ವಾಲಾಮುಖಿಯಂತೆ ಕುದಿಯಲಾರಂಭಿಸಿತ್ತು. ವಿಶೇಷವಾಗಿ ಯಾರಿಗೆ ಜನರಿಮದ ಸನ್ಮಾನ, ಪೂಜೆ, ನಮಸ್ಕಾರ ಮಾಡಿಸಿಕೊಂಡ ರೂಢಿಯಿತ್ತೋ, ಅವರಿಗೆ ತುಕಾರಾಮನ, ಅದೂ ಒಬ್ಬ ‘ಶೂದ್ರ’ನ ಟೀಕೆಯು ಎಂಥ ರೀತಿಯಲ್ಲಿ ಘಾಸಿಗೊಳಿಸಿರಬಹುದು ಎಂಬುದನ್ನು ಊಹಿಸಬಹುದಾಗಿದೆ.

ತುಕಾರಮನ ಈ ಟೀಕೆಯ ಪರಿಣಾಮವಾಗಿ ಅವರೆಲ್ಲರ ಮನದೊಳಗೆ ಸೇಡಿನ ಕಾಡಾಗ್ನಿ ಹೊತ್ತಿರುವದನ್ನು ಊಹಿಸಬಹುದು. ಅವರ ಸಾಮಾಜಿಕ ಪ್ರತಿಷ್ಠೆ ಮತ್ತು ಐಹಿಕ ಹಿತಾಸಕ್ತಿಯ ದೃಷ್ಟಿಯಿಂದ ತುಕಾರಾಮನ ಟೀಕೆಯು ಅತ್ಯಂತ ಬಾಧಕ ಮತ್ತು ವಿಘಾತಕವಾಗಿತ್ತು. ಈ ಟೀಕೆಯಿಂದ ಅವರ ಗೌರವ ಸಮಾಜದಲ್ಲಿ ಕ್ಷೀಣಿಸಲಿತ್ತು. ಪ್ರತಿಷ್ಠೆ ನೆಲಸಮಗೊಳ್ಳಲಿತ್ತು. ಅವರೆಲ್ಲ ಢೋಂಗಿಯಾಗಿರುವದು ಬಹಿರಂಗಗೊಳ್ಳಲಿತ್ತು. ಮತ್ತೊಂದು ರೀತಿಯಲ್ಲಿ ಅವರು ಆರ್ಥಿಕ ಹಾನಿಗೂ ಒಳಗಾಗಲಿದ್ದರು. ಒಂದೆಡೆ ತುಕಾರಾಮನದ್ದು ಕೀರ್ತನೆ ಭಜನೆಗಾಗಿ ಏನನ್ನೂ ಸ್ವೀಕರಿಸದ ವೃತ್ತಿ. ಜತೆಗೆ ಡಾಂಭಿಕ ಸಾಧೂಗಳು ದಕ್ಷಿಣೆ ಸ್ವೀಕರಿಸುವವರ ಬಗೆಗೂ ಅವನು ಆಕ್ಷೇಪವೆತ್ತಿದ್ದ. ಜನ ಸಾಮಾನ್ಯರು ತುಕಾರಾಮನ ಬೆನ್ನು ಹತ್ತಿದರೆ ಅವರ ಹೊಟ್ಟೆಗೆ ತಣ್ಣೀರು ಪಟ್ಟಿಯೇ ಗತಿಯಾಗಲಿತ್ತು. ತಮಗೆ ಅನಾಯಾಸವಾಗಿ ಲಭಿಸಲಿದ್ದ ಸುಖೋಪಭೋಗ ಕಳೆದುಕೊಳ್ಳುವ ಸಾಧ್ಯತೆಯಿತ್ತು. ಅಂದರೆ ಅವರ ಸುಖದ ಸಾಧನ ತುಕಾರಾಮನ ಟೀಕೆಯಿಂದ ಉಧ್ವಸ್ತಗೊಳ್ಳಲಿತ್ತು. ಅವರ ಭದ್ರ ಸಿಂಹಾಸನಕ್ಕೆ ಬಿರುಕು ಬಿಡಲಾರಂಭಿಸಿತ್ತು. ಈ ವರೆಗೆ ಸೊಕ್ಕಿನಿಂದ ವರ್ತಿಸುತ್ತಿದ್ದ ಉಳಿದವರನ್ನು ಹಂಗಿಸಿದ, ಕ್ಷುದ್ರವೆಂದು ಭಾವಿಸಿದ ಅಹಂಕಾರಿಗಳ ಎದೆಗೆ ಕಟುವಾಗಿ ಬಾಣ ಚುಚ್ಚಲಾರಂಭಿಸಿತು. ಅವರ ಮೂಲ ಭೇರಿಗೇ ಕೈ ಹಾಕಿದ. ತುಕಾರಾಮನೆಂಬ ಹೆಸರು ಅವರ ಕಣ್ಣು ಇರಿಯಲಾರಂಭಿಸಿತು. ಮನಸ್ಸಿಗೆ ಚುಚ್ಚಲಾರಂಭಿಸಿತು ; ಎದೆಗೆ ಇರಿಯತೊಡಗಿತು. ತಾವು ವಿದ್ವಾಂಸರು, ಭೂಸುರರೇ ಆಗಿದ್ದೇವೆ. ಹೀಗಿರುವಾಗ ಒಬ್ಬ ಸಾಮಾನ್ಯ ಶೂದ್ರನು ತಮಗೆ ಬುದ್ದಿಮಾತು ಹೇಳಲು ಬರುವದು ಒಂದು ಮಹಾಸಾಹಸವೇ ಸರಿ ಎಂದುಕೊಂಡು ಜನ ಉದ್ರೇಕದಿಂದ ಕೆರಳಿದಂತಾಗಿದ್ದರು. ತಾತ್ಪರ್ಯ : ತಮ್ಮ ಹಿತಾಸಕ್ತಿಗೆ ಅಡ್ಡಿ ಮಾಡುವ ತುಕಾರಾಮನಿಗೆ ತಕ್ಕ ಶಾಸ್ತಿ ಮಾಡಬೇಕೆಂದು ಯೋಚಿಸುವದು ಸಹಜವೇ ಆಗಿದೆ. ಆ ವಿಚಾರ ಯೋಗ್ಯವೇ, ಅಯೋಗ್ಯವೇ ಎಂಬ ಮಾತು ಮುಖ್ಯವಲ್ಲ ಎಂಬುದು ಗಮನಿಸಬೇಕು.

ತುಕಾರಾಮನ ಹತ್ಯೆ ಅಪೇಕ್ಷಿತವಾಗಿತ್ತು.

ಮತ್ತೊಂದು ರೀತಿಯಲ್ಲಿ ಯೋಚಿಸಿದಾಗ ತಾನು ಮಾಡಿದ್ದರ ಪರಿಣಾಮವೇನಾಗಬಹುದೆಂಬ ಸಂಪೂರ್ಣ ಅರಿವು ತುಕಾರಾಮನಿಗೂ ಇತ್ತು. ತನ್ನ ಟೀಕೆಯಿಂದ ಕೆರಳಿದ ಜನ ಯಾವ ಮಟ್ಟಕ್ಕೆ ಹೋಗಬಹುದು ಎಂಬುದೂ ಗೊತ್ತಿತ್ತು. ಅವನು ಪ್ರತಿಯೊಂದು ಶಬ್ದವನ್ನು ತುಂಬ ಎಚ್ಚರಿಕೆಯಿಂದಲೇ ಉಚ್ಚರಿಸಿದ್ದ. ಅವನು ಅರಿವಿಲ್ಲದೆ, ಮೂರ್ಖತನದಿಂದ ಅಜ್ಞಾನದಿಂದ ಮಾಡಿದ ಎನ್ನುವಂತಿಲ್ಲ. ಅವನು ಸಮಾಜದ ಬಗೆಗೆ ಕೆಲವು ನಿಲುವು ತಾಳಿದ್ದ, ಧರ್ಮದ ಪರಿಕಲ್ಪನೆಯನ್ನು ಕಟ್ಟಿಕೊಂಡಿದ್ದ. ಮೌಲ್ಯದ ಬಗೆಗೆ ಕೆಲವು ನಿಷ್ಠೆಯನ್ನು ಹೊಂದಿದ್ದ. ತನ್ನ ತತ್ವಕ್ಕಾಗಿ ಅವನು ಯಾರ ಜತೆಗೂ ವೈರತ್ವ ಕಟ್ಟಿಕೊಳ್ಳಲು ಸಿದ್ಧನಾಗಿದ್ದ. ಎಂಥ ಕೆಟ್ಟ ಪರಿಣಾಮವನ್ನು ಎದುರಿಸಲು ಸಿದ್ಧನಾಗಿದ್ದ, ಸಾವಿಗಿಂತ ಮೊದಲೇ ನಾನು ಹೆಣವಾಗಿದ್ದೆ, ಆನಂತರವೇ ನಾನು ನನ್ನ ಮನದಂತೆ ವರ್ತಿಸಲು ಸಿದ್ಧನಾದೆ ಎಂದು ಹೇಳಿದ್ದಾನೆ. ಈ ಜನ ಕೊಳ್ಳಿಯಿಟ್ಟು ನನ್ನನ್ನು ಕೊಲ್ಲುತ್ತಾರೆ ಎಂಬ ಮಾತಿನ ಅರ್ಥವು ಮುಂದಿನ ಭಾವೀ ಘಟನೆಯ ಸುಳಿವು ನೀಡುತ್ತದೆ. ಶಸ್ತ್ರಧಾರಿಗಳು ನನ್ನನ್ನು ಸಾವಿರ ತುಂಡು ಮಾಡಿದರೂ ನಾನು ಹೆದರಲಾರೆ, ನನ್ನ ಗೋಣು ಕತ್ತರಿಸಿ ಚೆಲ್ಲಿದರೂ ಬೇರೆ ಏನೂ ಮಾಡಲಾರೆ ಎಂಬ ಆಶಯದ ವಿಚಾರವನ್ನು ಮತ್ತೆ ಮತ್ತೆ ವ್ಯಕ್ತಮಾಡಿದ್ದಾನೆ. ಹೀಗಾಗಿ ಅವನು ಕೆಡಕನ್ನು ಎದುರಿಸುವದು ಮೃತ್ಯು ಸ್ವೀಕರಿಸುವದು, ಆದರೆ ಯಾವ ಬಗೆಯ ಹೊಂದಾಣಿಕೆಯನ್ನು ಮಾಡಬಾರದು, ರಣಾಂಗಣದಿಂದ ಪಲಾಯನ ಮಾಡಬಾರದು ಎಂಬ ಮಾತನ್ನು ಅವನು ಅಸಂಖ್ಯ ಸಲ ವ್ಯಕ್ತಪಡಿಸಿದ್ದಾನೆ.

ತುಕಾರಾಮನ ವಿಶಿಷ್ಟ ಅಭಂಗದ ಮೇಲಿನಿಂದ, ತುಕಾರಾಮನು ಸಾವನ್ನು ಅಪ್ಪಿಕೊಳ್ಳಲು ಸಿದ್ಧನಾಗಿದ್ದನೆಂದು ಹೇಳಲು ಅವಸರ ಮಾಡುವ ಲೇಖಕರು ಅವನ ಈ ಅಭಂಗವನ್ನು ನಿರ್ಲಕ್ಷಿಸಿರುವದು ಕಂಡುಬರುತ್ತದೆ. ಏಕೆಂದರೆ, ಅವರಿಗೆ ಈ ಕಾರಣವನ್ನು ಸಂಪೂರ್ಣ ಅಡಗಿಸಿಡಬೇಕಾಗಿತ್ತು. ತುಕಾರಾಮನು ಸಿದ್ಧತೆ ನಡೆಸಿದ್ದ ಎಂಬ ಮಾತು ಖರೆಯಾಗಿದ್ದರೂ, ಅದು ಅವರೆಲ್ಲ ಹೇಳವು ಅರ್ಥದಲ್ಲಲ್ಲ, ಅದಕ್ಕೆ ತೀರಾ ಭಿನ್ನ ಅರ್ಥದಲ್ಲಿ. ತನ್ನ್ನು ಕೊಲ್ಲುವ ಸುಳಿವು ಸಿಕ್ಕಿದ್ದರಿಂದ ಅವನು ಸಿದ್ಧತೆಯನ್ನು ನಡೆಸಿದ್ದ ಎಂಬುದು ಅವನ ಮಾತಿನಿಂದ ಸ್ಪಷ್ಟವಾಗುತ್ತದೆ.

ತುಕಾರಾಮನಿಗೆ ನೀಡಿದ ಹಿಂಸೆ ಏನು ಸೂಚಿಸುತ್ತದೆ

ತುಕಾರಾಮನಿಗೆ ನೀಡಿದ ನಾನಾ ಬಗೆಯ ಹಿಂಸೆಯು ಏನು ಸೂಚಿಸುತ್ತದೆ ಎಂಬುದು ಗಮನಿಸಬೇಕಾದ ಅಗತ್ಯವಿದೆ. ಅವನ ಭಜನೆ, ಕೀರ್ತನೆಯ ಕಾಲಕ್ಕೆ ಹಲವು ಅಡಚಣೆಯನ್ನು ತರಲಾಗುತ್ತಿತ್ತೆಂದು ತುಕಾರಾಮನು ಹಲವು ಸಲ ದಾಖಲಿಸಿದ್ದಾನೆ. ಕತ್ತೆಯ ಮೇಲೆ ಅವನ ಮೆರವಣಿಗೆಯನ್ನು ಕೈಕೊಳ್ಳಲಾಯಿತು. ಅವನ ಜೀವನದ ಸಾರಸರ್ವಸ್ವವಾಗಿದ್ದ ಅಭಂಗವನ್ನು ನೀರಿನಲ್ಲಿ ಮುಳುಗಿಸಲಾಯಿತು. ಅದಕ್ಕಾಗಿ ಅವನು ಹದಿಮೂರು ದಿನ ಉಪವಾಸ ಕೈಕೊಂಡ. ಆ ಕಾಲಕ್ಕೆ ಅವನು ಸಹಿಸಿಕೊಂಡ ಮಾನಸಿಕ, ದೈಹಿಕ ಕಿರುಕುಳದ ಬಗೆಗೆ ತರ್ಕ ಕಟ್ಟಬಹುದು. ಅವನ ಮೆಲೆ ಖಟ್ಲೆ ಹಾಕಲಾಯಿತು. ಮನೆಮಾರು ಜಪ್ತಿ ಮಾಡಲಾಯಿತು. ಬಹಿಷ್ಕಾರ ಹಾಕಿ ಗಡಿಪಾರು ಮಾಡುವ ಶಿಕ್ಷೆಯೂ ನೀಡಲಾಯಿತು. ಈ ಎಲ್ಲ ಘಟನೆಯಿಂದ ಅವನಿಗೆಂಥ ಆಘಾತವಾಗಿರಬಹುದು ಎಂಬುದನ್ನು ಊಹಿಸಬಹುದಾಗಿದೆ. ಅವನ ಮೇಲೆ ಕುದಿಯುವ ನೀರು ಎರಚುವದೆಂದರೆ, ಅದೂ ಮತ್ತೊಂದು ಬಗೆಯ ಕೊಲೆಯ ಪ್ರಯತ್ನವೇ ಅಲ್ಲವೇ? ರಕ್ತಸಿಕ್ತನಾಗುವರೆಗೆ ಮುಳ್ಳಿನ ಕೊರೆಯಿಂದ ಥಳಿಸಿದ್ದು ಹತ್ಯೆಯ ಪ್ರಯತ್ನವಲ್ಲವೇ?

ತುಕಾರಾಮನ ಸಾವಿನ ಕುರಿತು ಬರೆಯುವ ದೊಡ್ಡ ವಿದ್ವಾಂಸರೆಲ್ಲ ತಮ್ಮ ಮಿದುಳನ್ನು ನಾನಾ ಬಗೆಯಲ್ಲಿ ಬಳಸಿ ಚಿತ್ರ-ವಿಚಿತ್ರವಾದ ಕಲ್ಪನೆಯನ್ನು ಹುಡುಕುತ್ತಿರುತ್ತಾರೆ. ಆದರೆ ತುಕಾರಾಮನಿಗೆ ನೀಡಿದ ಹಿಂಸೆಯ ಕಡೆಗೆ ಇಣುಕಿಯೂ ನೋಡುವುದಿಲ್ಲವೆಂದರೆ ಏನಿದರ ಅರ್ಥ? ತುಕಾರಾಮನನ್ನು ಹಿಂಸಿಸಿದ, ಪೀಡಿಸಿದ ಜನರು, ಹಿಂಸೆಯ ಶಿಖರ ಸ್ಥಿತಿ ತಲುಪುವ ಸಾಧ್ಯತೆಯ ಕುರಿತು ಈ ಲೇಖಕರು ಚಕಾರ ಎತ್ತುವದಿಲ್ಲವೆಂದರೇ ಏನಿದರ ಅರ್ಥ? ಯಾವುದೇ ಗೂಢ, ಆಕಸ್ಮಿಕವಾಗಿ ಜರುಗಿದ ಹಿಂಸೆಯನ್ನು ಗಮನಿಸುವದಿಲ್ಲವೇ? ಕೊನೆಪಕ್ಷ ಹಿಂಸೆಯ ಕುರಿತು ಚರ್ಚೆಯಾದರೂ ನಡೆಸಲಿಕ್ಕಿಲ್ಲವೇ? ಉಲ್ಲೇಖಿಸಲೂ ಬಾರದಷ್ಟು ಈ ಘಟನೆಗಳು ಕ್ಷುದ್ರವೇ? ಇದರರ್ಥ ಇಷ್ಟೇ, ಹಿಂಸೆಯ ಪ್ರಸ್ತಾಪ ಮಾಡುವಷ್ಟು ಧೈರ್ಯ ಅವರಲಿಲ್ಲ. ಹಾಗೆ ಮಾಡಲು ಅವರು ಹೆದರುತ್ತಾರೆ. ಏಕೆಂದರೆ ಆ ವಿಷಯವನ್ನು ಚರ್ಚೆಗೊಳಪಡಿಸಿದರೆ, ಅದರಿಂದ ಈ ಲೇಖಕರಿಗೆ ಆಗುವ ಹಾನಿಯೇ ಹೆಚ್ಚು.!