ತುಕಾರಾಮನ ಸಾವು

ಒಬ್ಬ ಮನುಷ್ಯನು ವ್ಯಕ್ತಿತ್ವದ ಮೌಲ್ಯಮಾಪನ ಮಾಡುವಾಗ ಅವನು ಬದುಕಿದ ರೀತಿಯಂತೆ, ಸಾವು ಎದುರಿಸಿದ ಬಗೆಯೂ ಸಹ ಅಷ್ಟೇ ಮಹತ್ವದ್ದು. ಸಾಕ್ರೆಟಿಸ್, ಕ್ರೈಸ್ತ, ಲಿಂಕನ್, ಭಗತ್‌ಸಿಂಗ್ ಮುಂತಾದವರು ಯಾವ ಮೌಲ್ಯ, ಧ್ಯೇಯಕ್ಕಾಗಿ ಸಾವು ಎದುರಿಸಿದರೋ, ಅದು ಅವರನ್ನು ಅತ್ಯುನ್ನತ ಮಟ್ಟಕ್ಕೊಯ್ದು ನಿಲ್ಲಿಸುತ್ತದೆ. ಉಚ್ಚ ಮತ್ತು ಉದಾತ್ತ ಪಾತಳಿಗೊಯ್ಯುತ್ತದೆ. ಅವರು ಸಾವು ಸ್ವಾಗತಿಸಿದ ಬಗೆ, ಧೈರ್ಯವು ಆ ಮಹಾತ್ಮರ ತೇಜೋವಲಯವನ್ನು ಅಧಿಕಗೊಳಿಸುತ್ತದೆ. ತುಕಾರಾಮನ ಚರಿತ್ರೆಯನ್ನು ಒರೆಗಲ್ಲಿಗೆ ಹಚ್ಚುವುದಾದರೆ, ಅವನ ಸಾವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಆಕಸ್ಮಿಕವಾಗಿ ಅದೃಶ್ಯನಾದನು

ತುಕಾರಾಮನು ಆಕಸ್ಮಿಕವಾಗಿ ಅದೃಶ್ಯನಾದನು, ಮಾಯವಾದನು ಎನ್ನುವದು ಅವನ ಸಾವಿನ ಬಗೆಗೆ ಸರ್ವ ಸಾಮಾನ್ಯ ತಿಳುವಳಿಕೆ. ಉದಾ, ಅಜಗಾವಕರ ಹೇಳುವದು ಹೀಗೆ: “ಅಂದಿನ ಇಂದ್ರಾಯಣಿ ತೀರದಲ್ಲಿ ಕೀರ್ತನೆ ಮಾಡುತ್ತಿರುವಾಗ ತುಕಾರಾಮ ಆಕಸ್ಮಿಕವಾಗಿ ಅದೃಶ್ಯರಾದರು ಎಂದರೆ ಅವರು ಏನಾದರೂ ಎನ್ನುವದು ಯಾರಿಗೂ ಗೊತ್ತಾಗಲಿಲ್ಲ. ತುಕಾರಾಮನ ಈ ಸಾವು ಒಂದು ಚಾರಿತ್ರಿಕ ನಿಗೂಢವಾಗಿದೆ (Mystery). ಅದಕ್ಕೆ ಸಮಾಧಾನಕರ ಉತ್ತರ ನೀಡುವದು ತುಂಬಾ ಕಠಿಣ.” ತುಕಾರಾಮ ದೇಹ ಸಹಿತ ಗುಪ್ತವಾದ ಎಂದು ತಿಳಿಸುವ ಅಭಂಗವೂ ಉಪಲಬ್ದವಿದೆ. ಅದು ತುಕಾರಾಮನ ಹೆಸರಿನಲ್ಲೇ ಇದೆ. ಹರಿಕಥೆ ನಡೆದಾಗ ತುಕಾರಾಮನು ತಟ್ಟನೆ ಮಾಯವಾದನು. ಕ್ಷಣಕಾಲ ಜನ ಗಲಿಬಿಲಿಗೊಂಡರು, ಏನಾಯಿತು ಎಂಬುದೂ ಹೊಳೆಯಲಿಲ್ಲ ಎಂದು ಹೇಳುವ ಅವನದ್ದೇ ಒಂದು ಅಭಂಗವಿದೆ. ಕೀರ್ತನೆ ಮಾಡುತ್ತಿರುವಾಗ ತುಕಾರಾಮ ಅದೃಶ್ಯನಾದನೆಂದು ಹೇಳುತ್ತಾರೆ. ಅವರ ಮಗ ನಾರಾಯಣ ಬುವಾ. ವೈಷ್ಣವ ಭಕ್ತನು ಗುಪ್ತನಾದ ಎಂದು ಮಹೀಪತಿಯ ಅಂಬೋಣ.

ತುಕಾರಾಮನ ಸಾವಿನ ಅತ್ಯಂತ ಮಹತ್ವದ ಸಂದರ್ಭವೆಂದರೆ, ಅವನ ಪಾರ್ಥಿವ ದೇಹವೇನಾಯಿತು? ಎನ್ನುವದು, ಅದರ ಬಗೆಗೆ ಯಾವ ಮಾಹಿತಿಯೂ ಉಪಲಬ್ದವಿಲ್ಲ. ಹೀಗಾಗಿ ಜನರು ಸಾವಿನ ಕುರಿತು ಹಲವು ಬಗೆಯ ತರ್ಕವನ್ನು ಮಾಡುತ್ತಿದ್ದಾರೆ. ತುಕಾರಾಮನು ಇಂದ್ರಾಯಣಿ ತೀರದಲ್ಲಿ ಸಮಾಧಿ ತೆಗೆದುಕೊಂಡ, ತೀರ್ಥಯಾತ್ರೆಗೆ ತೆರಳಿದ, ಜಲಸಮಾಧಿ ತೆಗೆದುಕೊಂಡ, ಮೊಸಳೆ ಎಳೆದುಕೊಂಡು ಹೋಯಿತು, ಕಣಿವೆಯಲ್ಲಿ ಏಕಾಂತ ವಾಸಿಸಿ ಪ್ರಾಣ ತ್ಯಾಗ ಮಾಡಿದ, ಇಂದ್ರಾಯಣಿಯಲ್ಲಿ ಜಾರಿ ಬಿದ್ದು ಮುಳುಗಿದ, ಕಾಡಿನಲ್ಲಿ ಅಲೆದಾಡುವಾಗ ಪ್ರಾಣಿ ತಿಂದಿತು; ಯೋಗದಿಂದ ದೇಹತ್ಯಾಗ ಮಾಡಿದ, ಅವನ ಮೃತದೇಹವನ್ನೂ ಕಟ್ಟಿಗೆ ವಿಮಾನದಲ್ಲಿ ಹೇರಿ ಸ್ಮಶಾನಕ್ಕೆ ಒಯ್ಯಲಾಯಿತು – ವಗೈರೆ ತರ್ಕ ಮಾಡಲಾಗಿದೆ. ಈ ತರ್ಕವನ್ನು ಹಲವು ಕಾರಣದಿಂದ ತಳ್ಳಿಹಾಕಬೇಕಾಗುತ್ತದೆ. ಅದನ್ನೆಲ್ಲ ವಿವರವಾಗಿ ಚರ್ಚಿಸುವದು ಇಲ್ಲಿ ಅಸಾಧ್ಯ. ಉದಾಹರಣೆಗಾಗಿ ಯೋಗದಿಂದ ದೇಹತ್ಯಾಗ ಮಾಡಿದ್ದನ್ನು ಗಮನಿಸೋಣ. ಯೋಗ ನಮ್ಮಪ್ಪನಿಗಾದರೂ ಗೊತ್ತಿತ್ತೆ? ಎಂದು ಪ್ರಶ್ನಿಸುವ ತುಕಾರಾಮನು ಯೋಗದಿಂದ ದೇಹತ್ಯಾಗ ಮಾಡಿದ್ದನ್ನು ಹೇಗೆ ಒಪ್ಪುವದು

ಸದೇಹಿಯಾಗಿ ವೈಕುಂಠಕ್ಕೆ ಹೋದನೆ?

ಶ್ರದ್ಧಾವಂತರು ತುಕಾರಾಮನು ಸದೇಹಿಯಾಗಿ ವಿಮಾನದಲ್ಲಿ ಕುಳಿತು ಸ್ವರ್ಗಕ್ಕೆ ನಿಜಧಾಮಕ್ಕೆ ಅಥವಾ ವೈಕುಂಠಕ್ಕೆ ಹೋದನೆಂದು ನಂಬುತ್ತಾರೆ.

ಸಂತಾಜಿ ಜಗನಾಡೆಯವರ ಪುತ್ರನಾದ ಬಾಳಾಜಿಯ ವಹಿಯಲ್ಲಿ ತುಕಾರಾಮ ಗೋಸವಿಯು ಸದೇಹಿಯಾಗಿ ವೈಕುಂಠಕ್ಕೆ ಹೋಗಿದ್ದರಿಂದ, ಅವನ ಕ್ರಿಯಾಕರ್ಮ ಮಾಡಬೇಕಾದ ಅಗತ್ಯವಿಲ್ಲ ಎಂಬ ನಿರ್ಣಯವನ್ನು ರಾಮೇಶ್ವರ ಭಟ್ಟನು ಕಾನ್ಹೋಬಾ ಮುಂತಾದವರಿಗೆ ನೀಡಿದನೆಂದು ಹೇಳಲಾಗುತ್ತದೆ. ತುಕಾರಾಮನು ವಿಮಾನದಲ್ಲಿ ಕೂತು ವೈಕುಂಠಕ್ಕೆ ತೆರಳಿರುವದಾಗಿ ಮಹೀಪತಿಯೂ ಹೇಳಿದ್ದಾನೆ.

ಲ.ರಾ.ಪಾಂಗಾರಕರ ನೀಡುವ ವಿವರಣೆ ಹೀಗಿದೆ : “ಪ್ರತ್ಯಕ್ಷ ಪ್ರಮಾಣದ ಕೊರತೆಯಿದ್ದಾಗ ಶಬ್ದ ಪ್ರಮಾಣವನ್ನು ಒಪ್ಪುತ್ತಾರೆ. ಅದು ಸಾಕಾಗುತ್ತದೆ. ಅದನ್ನು ನಾನು ಕೊಡಬಲ್ಲೆ… ಆದಿ ಭೌತಿಕ ಶಾಸ್ತ್ರಗಳ ಹಲವು ಸಂಗತಿಗೆ ಉತ್ತರ ನೀಡಲು ಬರದೇ ಇರುವದನ್ನು ನಾನು ಸಂತರ ಸಹವಾಸದಲ್ಲಿ ಕಂಡಿದ್ದೇನೆ. ಹಲವರೂ ನೋಡಿರಬೇಕು” ಹಲವು ಸಂಗತಿಗಳಿಗೆ ವಿಜ್ಞಾನದಲ್ಲೂ ಉತ್ತರವಿಲ್ಲ ಎಂದವರ ಹೇಳಿಕೆ. ಪಾಶ್ಚಾತ್ಯರು ಆಧ್ಯಾತ್ಮದ ಓನಾಮವನ್ನು ಈಗ ಕಲಿಯುತ್ತಿದ್ದಾರೆ. ಬದಲು ಭಾರತ ಭೂಮಿಯು ಆಧ್ಯಾತ್ಮದ ಗಣಿಯಾಗಿದೆ ಎಂದವರ ಅಂಬೋಣ.

ಸತ್ಯವತಿ, ತ್ರಿಶಂಕು, ಸಪ್ತಮುನಿ, ಲಕ್ಷ್ಮಣ ರಾಮ ಮತ್ತು ಯುಧಿಷ್ಠರನು ಸದೇಹಿಯಾಗಿ ಸ್ವರ್ಗಾರೋಹಣ ಹೋದ ಕಥೆಗಳ ಸಹಾಯದಿಂದ ತುಕಾರಾಮನು ಸದೇಹಿಯಾಗಿ ವೈಕುಂಠಕ್ಕೆ ಹೋಗಿರುವದನ್ನು ಸಿದ್ಧ ಮಾಡುವ ಪ್ರಯತ್ನ ಅವರದ್ದು. ಕೆಲವು ಸಂತರ ಚರಿತ್ರೆಯ ಆಧಾರವನ್ನೂ ಅವರು ನೀಡಿದ್ದಾರೆ. ಮುಕ್ತಾಬಾಯಿ ನೋಡನೋಡುತ್ತ ಲುಪ್ತರಾಗಿರುವದನ್ನು ಅವರು ಹೇಳುತ್ತಾರೆ. ಕಬೀರ, ಗುರು ನಾನಕ, ದ್ರವಿಡ ಸಾಧು ತಿರುಪನ್ನ (ಅಝವರ) ಮತ್ತು ಶೈವ ಸಾಧು ಮಾಣಿಕ್ಯ ವಾಚಕರ ಇವರು ಸದೇಹಿಯಾಗಿ ದೇವರ ರೂಪ ಹೊಂದಿದರೆಂದು ಹೇಳುತ್ತಾರೆ. ‘ಸರ್ವ ಸಾಧೂ ಸಂತರು, ರಾಮಾಯಣ, ಮಹಾಭಾರತದಂತಹ ಗ್ರಂಥಗಳು ಕಾಳಿದಾಸನಂತಹ ಕವೀಶ್ವರ್ (ರಘಸರ್ಗ ೧೫ ನೋಡಿ) ಮತ್ತು ಇನ್ನುಳಿದ ಧಾರ್ಮಿಕ ಗ್ರಂಥಗಳೂ ಒಮ್ಮುಖದಿಂದ ಸದೇಹ ವೈಕುಂಠಕ್ಕೆ ತೆರಳುವ ಮತ್ತು ಕೀರ್ತನೆ ನಡೆವಾಗಲೇ ಅದೃಶ್ಯವಾಗುವದಕ್ಕೆ ಪ್ರಮಾಣ ಪತ್ರ ನೀಡುತ್ತಿರುವಾಗ….’ ಎಂದೂ ಹೇಳುತ್ತಾರೆ.

ಕೆಲವು ಆಕ್ಷೇಪಗಳು

ಬುವಾ ವಿಮಾನದಲ್ಲಿ ಕೂತು ವೈಕುಂಠಕ್ಕೆ ತೆರಳಿದರು ಎಂಬ ಮಾತು ಅತಿಶಯೋಕ್ತಿಯಿಂದ ಕೂಡಿದೆ ಎಂದು ಅಜಗಾಂವಕರ ಹೇಳುತ್ತಾರೆ. ಭಾವೆಯವರಿಗೆ ಈ ಆಖ್ಯಾಯಿಕೆಯ ಸೃಷ್ಟಿಯ ನಿಯಮದ ವಿರುದ್ಧವಾಗಿದೆ ಎಂದೆನಿಸುತ್ತದೆ. ಈ ರೀತಿ ಹೇಳುವ ಲೇಖಕರ ಮಾತಿನಲ್ಲಿ ಪ್ರಮಾಣಿಕತನವಿದ್ದರೂ, ಭೌದ್ಧಿಕ ವಂಚನೆಯಿರದಿದ್ದರೂ, ಇದು ಅಂಧಃಶ್ರದ್ಧೆಯ ಮತ್ತು ಕ್ಷುದ್ರ ಮುಗ್ಧತನದ ಉದಾಹರಣೆ ಎಂದವರ ಹೇಳಿಕೆ. ಈ ಕಲ್ಪನೆಯು ಅಜ್ಞ ಮತ್ತು ಅವಿವೇಚನೆಯಿಂದ ಕೂಡಿದ ಹುಚ್ಚುತನವೆಂದು ರಾಜವಾಡೆ ಅನ್ನುತ್ತಾರೆ.

ತುಕಾರಾಮನು ಸದೇಹಿಯಾಗಿ ವೈಕುಂಠಕ್ಕೆ ಹೋಗಿದ್ದಕ್ಕೆ ಪ್ರತ್ಯಕ್ಷ ಪ್ರಮಾಣವಿರದಿದ್ದರೂ ಶಬ್ದ ಪ್ರಮಾಣ ಸಾಕಷ್ಟಿದೆ ಎಂದು ಪಾಂಗಾರಕರ ಹೇಳುತ್ತಾರೆ. ಶಬ್ದ ಪ್ರಮಾಣವು ಪ್ರತ್ಯಕ್ಷ ಮತ್ತು ಅನುಮಾನದಂತೆಯೇ ಜ್ಞಾನದ ಒಂದು ಮಹತ್ವದ ಸಾಧನವಾಗಿದೆ. ವಿಶಿಷ್ಟ ವ್ಯಕ್ತಿ ಮತ್ತು ಗ್ರಂಥಗಳ ವಚನವೆಂದರೆ ಶಬ್ದಪ್ರಮಾಣವೇ ಆಗಿದೆ. ಈ ಶಬ್ದ ಪ್ರಮಾಣವು ವಿಶ್ವಾಸಾರ್ಹವಾಗಬೇಕಿದ್ದರೆ ಎರಡು ಕರಾರು ಪೂರ್ಣಗೊಳ್ಳಬೇಕು. ಯಾರ ವಚನವನ್ನು ಪ್ರಮಾಣವೆಂದು ಸ್ವೀಕರಿಸಬೇಕೋ, ಅವನಿಗೆ ಸ್ವಂತಕ್ಕೆ ಯಥಾರ್ಥ ಜ್ಞಾನ ಲಭಿಸಿರಬೇಕು. ಅವನು ಸತ್ಯ ಮಾತಾಡುತ್ತಿರಬೇಕು ಎನ್ನುವದೇ ಆ ಎರಡು ಕರಾರು. ತುಕಾರಾಮನ ವೈಕುಂಠಾಗಮನದ ವಿಷಯದಲ್ಲಿ ಶಬ್ಧ ಪ್ರಮಾಣವು ಪರೀಕ್ಷೆಗೆ ಒಳಪಡುತ್ತಿದೆಯೇ ಎಂಬುದು ಗಮನಿಸಬೇಕಾದ ಸಂಗತಿ.

ಈ ಸಂದರ್ಭದಲ್ಲಿ ಪಾಂಗರಕರು ನೀಡಿದ ಉದಾಹರಣೆಯು ಎರಡು ರೀತಿಯದು. ತುಕಾರಾಮನು ಸದೇಹಿಯಾಗಿ ವೈಕುಂಠಾಗಮನಕ್ಕೆ ಸಂಬಂಧಿಸಿದ ರಾಮೇಶ್ವರ ಭಟ್ಟ, ಉಳಿದ ಸಂತರು, ಕವಿಗಳು ಹೇಳಿದ ವಚನ ಒಂದು ಬಗೆಯದಾಗಿದ್ದರೆ, ಈ ಬಗೆಯ ಘಟನೆಯು ಜರುಗುವ ಸಾಧ್ಯತೆಯಿದೆ ಎಂದು ಪುಷ್ಠಿ ನೀಡುವ ರಾಮಾಯಣಾದಿ ಗ್ರಂಥಗಳ ವಚನಗಳು ಎರಡನೆಯ ಬಗೆಯದು. ಈಗ ಈ ಎರಡರ ಕುರಿತು ಒಂದಿಷ್ಟು ವಿವೇಚನೆ.

ತುಕಾರಾಮನ ಸದೇಹಿ ವೈಕುಂಠಾಗಮನಕ್ಕೆ ಬೆಂಬಲ ನೀಡುವ ರಾಮೇಶ್ವರ ಭಟ್ಟನ ಹೊರತು ಉಳಿದ ವ್ಯಕ್ತಿಗಳು ತುಕಾರಾಮನ ಸಾವಿನ ನಂತರ ಸ್ವಲ್ಪ ಹೆಚ್ಚು ಕಡಿಮೇ ಅದೇ ಕಾಲದಲ್ಲಿ ಆಗಿ ಹೋಗಿದ್ದಾರೆ. ಅವರೆಲ್ಲ ಶ್ರದ್ಧಾವಂತರಾಗಿದ್ದರು. ಚಿಕಿತ್ಸಕ ವೃತ್ತಿಯವರಾಗಿರಲಿಲ್ಲ. ತುಕಾರಾಮನ ಸಾವಿನ ಬಗೆಗೆ ಅವರ ಕಿವಿಗೂ ತಲುಪಿದ ದಂತಕಥೆ, ಚಮತ್ಕಾರ ಕಥೆಗಳನ್ನು ಸತ್ಯವೆಂದು ಭಾವಿಸಿ ಅವರು ಲೇಖನ ಕೈಕೊಂಡರು. ಹೀಗಾಗಿ ಅವರ ಬರವಣಿಗೆಯನ್ನು ಚಾರಿತ್ರಿಕ ಸತ್ಯವೆಂದು ಸ್ವೀಕರಿಸುವಂತಿಲ್ಲ. ಅದನ್ನು ಒರೆಗಲ್ಲಿಗೆ ಹಚ್ಚಿ ಪರೀಕ್ಷಿಸಬೇಕಾಗುತ್ತದೆ.

ರಾಮೇಶ್ವರ ಭಟ್ಟನು ಮಾತ್ರ ತುಕಾರಾಮನ ಸಮಕಾಲೀನ ವ್ಯಕ್ತಿ. ಅವನು ಸ್ವತಃ ದೇಹುದಲ್ಲಿದ್ದುಕೊಂಡೇ ತುಕಾರಾಮನು ಸದೇಹಿಯಾಗಿ ವೈಕುಂಠಕ್ಕೆ ಹೋದ ನಿರ್ಣಯವನ್ನು ನೀಡಿದನೆಂದು ಹೇಳಲಾಗುತ್ತದೆ. ಸಮಕಾಲೀನನಾಗಿದ್ದ ಮಾತ್ರಕ್ಕೆ ಅವನ ವಿಶ್ವಾಸಾರ್ಹತೆಯು ಸಿದ್ಧವಾಗುತ್ತದೆ ಮತ್ತು ಹೆಚ್ಚಾಗುತ್ತದೆ ಎಂದು ಮಾತ್ರ ಹೇಳುವಂತಿಲ್ಲ. ಏಕೆಂದರೆ, ಈ ಬಾಬತ್ತಿನಲ್ಲಿ ಕೇವಲ ನಿರ್ಣಯ ನೀಡಲಷ್ಟೇ ಅಲ್ಲ ಸಾಧು ಸಾಕ್ಷಿಯನ್ನು ನೀಡುವ ದೃಷ್ಟಿಯಿಂದಲೂ ರಾಮೇಶ್ವರ ಭಟ್ಟನು ಅಪಾತ್ರನಾಗಿದ್ದ. ಒಂದು ಕಾಲಕ್ಕೆ ಅವನೇ ತುಕಾರಾಮನು ಶೂದ್ರನಾಗಿದ್ದರಿಂದ ವೇದದ ಅಧಿಕಾರವಿಲ್ಲವೆಂದು ಹೇಳಿದವನು. ಅವನ ಕೀರ್ತನೆ ಮತ್ತು ಅಭಂಗಗಳಲ್ಲಿ ವೇದದ ಧ್ವನಿ ಮೊಳಗುತ್ತದೆಂದು ಆಕ್ಷೇಪವೆತ್ತಿದವನು. ಅವನ ಮೇಲೆ ಖಟ್ಲೆ ಹಾಕಿದವನು. ಈ ಖಟ್ಲೆಯಿಂದ ತುಕಾರಾಮನ ಆಸ್ತಿಯೆಲ್ಲ ಮುಟ್ಟುಗೋಲು ಹಾಕಲಾಗಿತ್ತು. ಬಹಿಷ್ಕಾರ ಹಾಕಲಾಗಿತ್ತು. ಗಡಿಪಾರಿನ ಅಜ್ಞೆಯಾಗಿತ್ತು. ಅಲ್ಲದೆ ಅವನ ಅಭಂಗಗಳ ಗಾಥೆಯನ್ನು ಇಂದ್ರಾಯಣಿಯಲ್ಲಿ ಮುಳುಗಿಸಲಾಗಿತ್ತು. ಹೊಸ ಅಭಂಗ ರಚನೆಗೂ ನಿರ್ಬಂಧನೆ ಹಾಕಲಾಗಿತ್ತು. ಈ ಎಲ್ಲ ಹಿಂಸೆಗೆ, ಅನ್ಯಾಯಕ್ಕೆ ಕಾರಣವಾದ ರಾಮೇಶ್ವರ ಭಟ್ಟನೇ ಮುಂದಾಗಿ ಅದೃಶ್ಯನಾದ ತುಕಾರಾಮನು ಸದೇಹಿಯಾಗಿ ವೈಕುಂಠಕ್ಕೆ ಹೋದನೆಂದು ಹೇಳಿದಾಗ ನಂಬುವದು ಹೇಗೆ? ರಾಮೇಶ್ವರ ಭಟ್ಟನು ಆನಂತರ ತುಕಾರಾಮನ ನಿಷ್ಠಾವಂತ ಶಿಷ್ಯನಾದನಂತೆ! ಅವನಿಗೂ ತುಕಾರಾಮನ ಮಹಿಮೆಯು ಅರಿವಾಯಿತಂತೆ! ಹೀಗಿದ್ದರೆ, ಆ ಕಾಲದಲ್ಲೂ ಅವನು ತುಕಾರಾಮನ ಪಂಕ್ತಿಯಲ್ಲಿ ಕೂತು ಊಟ ಮಾಡುತ್ತಿರಲಿಲ್ಲೆಂದು ಅಜಗಾವಂಕರ ಹೇಳುತ್ತಾರೆ (ಸಂತಶ್ರೇಷ್ಠ ತುಕಾರಾಮ, ಪು ೧೫೮) ಏನಿದರ ಅರ್ಥ? ಅರ್ಥವಂತೂ ಸ್ಪಷ್ಟವಾಗಿದೆ. ಅವನು ತುಕಾರಾಮನ ಶಿಷ್ಯನಗುವದಂತೂ ಸಾಧ್ಯವಿಲ್ಲ. ಶಿಷ್ಯನಾದವನು ಗುರುವಿನ ಎಂಜಲನ್ನೂ ತಿನ್ನಬೇಕೆಂಬ ನಿಯಮ ವೈದಿಕರಲ್ಲಿದೆ. ರಾಮೇಶ್ವರ ಭಟ್ಟನಂತೂ ತುಕಾರಾಮನ ಪಂಕ್ತಿಯಲ್ಲೂ ಕೂತುಕೊಳ್ಳಲು ಸಿದ್ಧನಿಲ್ಲದ ವ್ಯಕ್ತಿ. ಅಂದಾಗ ಅವನ ಶಿಷ್ಯನಾಗುವದು ಹೇಗೆ ಸಾಧ್ಯ? ತುಕಾರಾಮನು ಸದೇಹಿಯಾಗಿ ವೈಕುಂಠಕ್ಕೆ ಹೋದನೆಂದು ರಾಮೇಶ್ವರ ಭಟ್ಟನು ಹೇಳಿದರೆ ಅದಕ್ಕೆ ಬೆಲೆ ಬರುತ್ತದೆಂದು ಶಿಷ್ಯರೇ ನಿರ್ಮಾಣ ಮಾಡಿದ ಕಥೆ ಎನ್ನುವದು ಸತ್ಯ. ಅವನು ತುಕಾರಾಮನ ಆರತಿಯನ್ನು ರಚಿಸಿದನೆಂದೂ ಹೇಳಲಾಗುತ್ತಿದೆ. ಪೀಡಿಸುವ-ಹಿಂಸಿಸುವ ಒಬ್ಬ ವ್ಯಕ್ತಿಯ ಮೇಲೆ ಇಂಥ ವಿಶ್ವಾಸವಿಟ್ಟ ಕಥೆ ಮತ್ತೊಂದಿರಲಿಕ್ಕಿಲ್ಲ. ಭಾರತದ ಸಮಾಜಕ್ಕಷ್ಟೇ ಇದು ಕರಗತ!

ಪಾಂಗಾರಕರರು ರಾಮಾಯಾಣಾದಿ ಗ್ರಂಥದಲ್ಲಿ ಹೇಳಿದ ಶಬ್ದ ಪ್ರಮಾಣವನ್ನೂ ಸ್ವೀಕರಿಸುವಂತಿಲ್ಲ. ಈ ಬಗೆಯ ಪುರಾಣಕಥೆಗಳಲ್ಲಿ ಸೂಚಿತವಾಗುವ ಸಾಮಾಜಿಕವು ಇತಿಹಾಸದ ದೃಷ್ಟಿಯಿಂದ ಮಹತ್ವದ್ದು. ಆದರೆ ಭೌತಿಕ ಸ್ವರೂಪದ ಐತಿಹಾಸಿಕ, ವಾಸ್ತವ ಘಟನೆಯಾಗಿ ಮಾತ್ರ ಅವು ಸತ್ಯವಾಗಿರುವದಿಲ್ಲ. ಸದೇಹಿಯಾಗಿ ಸ್ವರ್ಗಕ್ಕೆ ಹೋಗುವ ಐತಿಹಾಸಿಕ ಉದಾಹರಣೆಯಾಗಿ ಅದನ್ನು ಪರಿಗಣಿಸಲು ಬರುವದಿಲ್ಲ. ಹೀಗಾಗಿ ತುಕಾರಾಮನ ಸದೇಹಿ ವೈಕುಂಠಾಗಮನವನ್ನು ಸಮರ್ಥನೆ ಮಾಡುವ ಕಥೆಯೆಂದು ಅದಕ್ಕೆ ಯಾವ ಬೆಲೆಯೂ ಇಲ್ಲ.

ತುಕಾರಾಮನು ಸ್ವರ್ಗ, ಇಂದ್ರಪದ, ಬ್ರಹ್ಮಲೋಕ, ಮೋಕ್ಷ ಯುಕ್ತಿ, ಸಾಯಜ್ಜತೆ ಅಥವಾ ಪಾರಲೌಕಿಕ ವೈಕುಂಠದ ಬಗೆಗೆಂದೂ ಅಪೇಕ್ಷೆಯನ್ನು ವ್ಯಕ್ತಪಡಿಸಲಿಲ್ಲ. ಅಷ್ಟೇ ಅಲ್ಲ, ಅವುಗಳಲ್ಲಿ ಕೆಲವನ್ನು ದೇವರು ಕೊಡಲು ಮುಂದೆ ಬಂದರೂ, ಅವನಿಗದು ಬೇಕಿರಲಿಲ್ಲ. ಇಹಲೋಕದಲ್ಲಿ ವಿಠ್ಠಲನ ಪ್ರಾಪ್ತಿಯೇ ಅವನ ಪರಮೋಚ್ಛ ಧ್ಯೇಯವಾಗಿತ್ತು. ಹೀಗಾಗಿ ತನ್ನ ಮನೆಯೇ ವೈಕುಂಠ ಅಥವಾ ಪಂಢರಪುರವೇ ವೈಕುಂಠ ಎಂಬುದು ಅವನ ಖಚಿತ ನಿಲುವಾಗಿತ್ತು. ಅವನದನ್ನು ಮತ್ತೆ ಮತ್ತೆ ವ್ಯಕ್ತಪಡಿಸಿದ್ದಾನೆ. ಬದುಕಿನ ಉದ್ದಕ್ಕೂ ಇಂಥ ನಿಲುವು ತಾಳಿದ ಅವನು ಬದುಕಿನ ಕೊನೆಗೆ ಪಾರ ಲೌಕಿಕ ವೈಕಂಠಕ್ಕೆ ಹೋಗುವ ನಿರ್ಣಯವನ್ನು ತೆಗೆದುಕೊಳ್ಳುವದು, ಸಂಪೂರ್ಣ ವಿಸಂಗತಿಯಾಗುತದೆ. ತುಕಾರಾಮನ ಮೇಲೆ ಇಂಥ ವಿಸಂಗತಿಯ ಆರೋಪ ಹೊರಿಸಲು ಯಾವ ಆಧಾರವೂ ಇಲ್ಲ.

ತಾತ್ಪರ್ಯ : ತುಕಾರಾಮನು ಸದೇಹಿಯಾಗಿ ವೈಕುಂಠಕ್ಕೆ ಹೋದದ್ದು ಚಾರಿತ್ರಿಕ ಸತ್ಯವಾಗಲಾರದು, ಅಲಂಕಾರಿಕ ಅರ್ಥದಲ್ಲಿ ಹಾಗೆ ಹೇಳಬಹುದಾಗಿದೆ. ಆದರೆ ದೈಹಿಕ ಸಾವಿಗೆ ಈ ಮಾತು ಅನ್ವಯಿಸಲಾರದು ಎಂದು ನಾನೊಂದು ವೇಳೆ ಹೇಳಿದರೆ ತುಕಾರಾಮನನ್ನು ಪ್ರೀತಿಸುವ ಭಕ್ತರಿಗೆ ಅಪಾರ ಸಿಟ್ಟು ಬರಬಹುದು. ಆ ಜನರ ತುಕಾರಾಮನ ಮೇಲಿನ ಭಕ್ತಿಯು ದಿಟವಾದುದು ಎಂದು ನಾನೊಪ್ಪುತ್ತೇನೆ. ಆದರೆ ತುಕಾರಾಮನ ನಿಜವಾದ ಶ್ರೇಷ್ಠತೆಯ ಬಗೆಗಿನ ಅವರ ನಿಲುವು ಮಾತ್ರ ಹುಸಿತನದಿಂದ ಕೂಡಿದ್ದು ಎಂಬುದರಲ್ಲಿ ಎರಡು ಮಾತಿಲ್ಲ. ತುಕಾರಾಮನನ್ನು ಪ್ರೀತಿಸದವರೂ ಮೇಲಿನ ಅಭಿಪ್ರಾಯ ಮಂಡಿಸಿದ್ದಕ್ಕೆ ಬೇರೆ ಕಾರಣಕ್ಕಾಗಿ ಸಿಟ್ಟಿಗೇಳುತ್ತಾರೆ. ಅದು ಇಲ್ಲಿ ಅಪ್ರಸ್ತುತ.

ನಿಜವಾದ ಶ್ರೇಷ್ಠತೆ ಎಲ್ಲಿದೆ?

ವಾಸ್ತವಿಕವಾಗಿ ತುಕಾರಾಮನ ಶ್ರೇಷ್ಠತೆಯು ಅವನು ಸದೇಹಿಯಾಗಿ ವೈಕುಂಠಕ್ಕೆ ಹೋಗುವದರಲಿಲ್ಲ – ಎಂಬುದು ಗಮನಿಸಬೇಕಾದ ಗತಿ. ಅವನ ಶ್ರೇಷ್ಠತೆ ಅವನ ಕಾರ್ಯದಲ್ಲಿ, ಅವನ ವಿಚಾರದಲ್ಲಿ, ಅವನ ಆಚರಣೆಯಲ್ಲಿದೆ. ವಿಶಿಷ್ಠ ಮೌಲ್ಯಕ್ಕಾಗಿ ಅವನು ಹೋರಾಡಿ ಸಂಘರ್ಷದಲ್ಲಿದೆ. ಸಹಿಸಿದ ಸಂಕಟದಲ್ಲಿದೆ. ಅವನ ಈ ಬಗೆಯ ಶ್ರೇಷ್ಠತೆಯನ್ನು ನಿರಾಕರಿಸಿದರೆ ಖಂಡಿತಕ್ಕೂ ಸಿಟ್ಟಿಗೇಳಬಹುದು. ಆದರೆ ಸದೇಹಿಯಾಗಿ ವೈಕುಂಠಾಗಮನವನ್ನು ನಿರಾಕರಿಸಿದ್ದಕ್ಕೆ ಸಿಟ್ಟಿಗೇಳುವದರಲ್ಲಿ ಯಾವ ಅರ್ಥವೂ ಇಲ್ಲ. ಹಾಗೆ ನಿರಾಕರಿಸುವವರಿಂದ ತುಕಾರಾಮನ ಶ್ರೇಷ್ಠತೆ ಕುಂಠಿತಗೊಳ್ಳುವುದಿಲ್ಲ ಅಥವಾ ಕಳಂಕ ಹತ್ತುವದಿಲ್ಲ.

ಅಂಥವರ ಮೇಲೆ ಸಿಟ್ಟಿಗೇಳಬೇಕು

ತುಕಾರಾಮನು ಇಂದ್ರಾಯಣಿಯಲ್ಲಿ ಸಾಲದ ಹೊತ್ತಿಗೆಯನ್ನು ಮುಳುಗಿಸಿ ಅಪೂರ್ವವಾದ ಸಾಮಾಜಿಕ ಹೆಜ್ಜೆಯನ್ನು ಇರಿಸಿದ. ಖರೆಯೆಂದರೆ ಇಡೀ ಮಹಾರಾಷ್ಟ್ರದಲ್ಲಿ ಈ ವಿಷಯವನ್ನು ಯಾರು ಕದ್ದು-ಮುಚ್ಚಿಡಲು ಪ್ರಯತ್ನಿಸಿದರೋ ಅವರ ಮೇಲೆ ಸಿಟ್ಟಿಗೇಳಬೇಕು. ತುಕಾರಾಮನು ಅಸಹಾಯಕನಾಗಿ, ಗತ್ಯಂತರವಿಲ್ಲದೆ ದೇವರ ಭಕ್ತಿಯ ಕಡೆಗೆ ಹೊರಳಿದನೆಂದು ಯಾರು ಚರಿತ್ರೆ ಬರೆದರೋ ಅಂಥವರ ಮೇಲೆ ಸಿಟ್ಟಿಗೇಳಬೇಕು. ಯಾವ ಧರ್ಮಶಾಸ್ತ್ರವು ತುಕಾರಾಮನಿಗೆ ಅಧಿಕಾರ ನಿರಾಕರಿಸಿತೋ ಅದರ ಬಗೆಗೆ ಸಿಟ್ಟು ಬರಬೇಕು. ತುಕಾರಾಮನನ್ನು ಪೀಡಿಸುವ, ಅಪಮಾನ ಪಡಿಸುವ ಪರಂಪರೆಯನ್ನು ಯಾರು ಗೌರವಿಸುತ್ತಾರೋ, ಅಂಥವರ ಬಗೆಗೆ ಸಿಟ್ಟು ಬರಬೇಕು. ತುಕಾರಾಮನು ರಾಮದಾಸನ ಪಾದಕ್ಕೆರಗಿದ ಹುಸಿ ಸಂಗತಿಯನ್ನು ಅವನನ್ನು ಅಪಮಾನಗೊಳಿಸುವವರ ಬಗೆಗೆ ಸಿಟ್ಟು ಬರಬೇಕು. ತುಕಾರಾಮನು ತನ್ನನ್ನು ಉದ್ದೇಶಿಸಿ ‘ಕಾಲಿನ ಮೆಟ್ಟು ಕಾಲಲ್ಲೇ ಇರಬೇಕು’ ಎಂದು ಹೇಳಿದನೆಂದು ಸುಳ್ಳು ವದಂತಿ ಬರೆದವರ ಬಗೆಗೆ ಸಿಟ್ಟು ಬರಬೇಕು. ತುಕಾರಾಮನ ಅಭಂಗದಲ್ಲಿ ಹಂಗಿಸುವ ವಿಚಾರವನ್ನು ತುರುಕಿ, ತುಕಾರಾಮನನ್ನು ಅವಮಾನಗೊಳಿಸಿದವರ ಬಗೆಗೆ ಸಿಟ್ಟು ಬರಬೇಕು.

ಕೊಲೆ ಮಾಡಲಾಗಿದ್ದು ಹೌದೇ?

ತುಕಾರಾಮನ ಹತ್ಯೆ ಮಾಡಲಾಗಿದೆಯೆಂದು ಕೆಲವರ ಅಂಬೋಣ. ಈ ಮತವನ್ನು ಸಿದ್ಧ ಮಾಡಲು ಅಮರಾವತಿಯ ಸುಧಾಮ ಸಾವರಕರ ಎಂಬವು ಒಂದು ಸ್ವತಂತ್ರ ಗ್ರಂಥವನ್ನೇ ರಚಿಸಿದ್ದಾರೆ. ಇದೊಂದು ಅಕರಗ್ರಂಥವಾಗಿದ್ದು, ಸಾವರಕರರು ಮಹತ್ವದ ಕಾರ್ಯವನ್ನು ಮಾಡಿತೋರಿಸಿದ್ದಾರೆ. ಸಾಂ.ಬಾ. ಕವಡೆಯವರೂ ಇದೇ ಅಭಿಪ್ರಾಯವನ್ನು ನೀಡಿದ್ದಾರೆ.

ಏನೋ ಮುಚ್ಚಿಡುವ ಶತಪ್ರಯತ್ನ

ತುಕಾರಾಮನ ಸಾವಿನ ಬಗೆಗೆ ಅವನ ಸಮಕಾಲೀನರಿಂದ ಹಿಡಿದು ವರ್ತಮಾನ ಕಾಲದ ಲೇಖಕರ ವರೆಗಿನ ಅಸಂಖ್ಯ ಜನರು ತಮ್ಮ ಅಭಿಪ್ರಾಯವನ್ನು ಮಂಡಿಸಿದ್ದಾರೆ. ಅವರಲ್ಲಿ ವಿಶೇಷವಾಗಿ ವೈದಿಕ ಪರಂಪರೆಯಲ್ಲಿಯ ಬಹಳಷ್ಟು ಜನರು ಈ ವಿಷಯವನ್ನು ಮುಕ್ತವಾಗಿ ಚರ್ಚಿಸುವುದಿಲ್ಲ ಎಂಬುದು ಕಂಡುಬರುತ್ತದೆ. ಏನೋ ಮುಚ್ಚಿಡಬೇಕಾಗಿದೆ ಎಂಬ ವಿಚಾರದ ಭಾರಿ ಹೊರೆಯು ಅವರ ಮನಸ್ಸಿನಲ್ಲಿ ಮತ್ತು ಬರವಣಿಗೆಯಲ್ಲಿರುವದನ್ನು ಸಹಜವಾಗಿ ಗುರುತಿಸಬಹುದಾಗಿದೆ. ಈ ನಿಟ್ಟಿನಲ್ಲಿ ಮುಂದಿನ ಕೆಲವು ಸಂಗತಿಗಳನ್ನು ಗಮನಿಸಬೇಕಾಗಿದೆ.

ಪತ್ರಗಳ ಸೋಗು ಏಕೆ?

ತುಕಾರಾಮನು ಅದೃಶ್ಯಗೊಂಡ ಮೂರು, ನಾಲ್ಕು ದಿನಗಳ ಕಾಲ ಪ್ರತಿದಿನ ಅವನದೊಂದು ಪತ್ರ ಬರುತ್ತಿತ್ತು. ಈ ಘಟನೆಯ ಕುರಿತು ಸ್ವಲ್ಪ ಯೋಚಿಸೋಣ. ತುಕಾರಾಮನ ಸಾವು ಯಾವ ಕಾರಣದಿಂದಲೇ ಆಗಿರಲಿ, ಸಾವಿನ ನಂತರ ಯಾವುದೇ ಪರಿಸ್ಥಿತಿಯಲ್ಲಿ ಅವನು ಪತ್ರಕಳಿಸುವುದು ಸಾಧ್ಯವಿಲ್ಲ ಎನ್ನುವದಂತೂ ದಿಟ. ಹೀಗಿರುವಾಗ ಈ ಪತ್ರ ಬಂದದ್ದಾದರೂ ಹೇಗೆ ಎಂಬ ಪ್ರಶ್ನೆ ಏಳುತ್ತದೆ. ದೇಹೂ ಊರಿನ ಕೆಲಜನ ಈ ರೀತಿಯ ಪತ್ರ ಬರೆದು ನಿರ್ದಿಷ್ಟ ಸ್ಥಳದಲ್ಲಿ ಅಂಚೆಗೆ ಹಾಕುತ್ತಿದ್ದರಂತೆ. ಅದನ್ನು ಮುಗ್ಧ, ಅಮಾಯಕ ಜನರಿಗೆ ಹೇಳುತ್ತಿರಬೇಕೆಂದೇ ಅರ್ಥವಾಗುತ್ತದೆ. ಹೀಗೆ ಮಾಡುವ ಜನರಿಗೆ ಓದಲು ಬರೆಯಲು ಬರುತ್ತಿತ್ತು ಎಂಬುದೂ ಸತ್ಯ. ಈಗ ಈ ಜನ ಹೀಗೇಕೆ ಮಾಡುತ್ತಿದ್ದರು ಎಂಬ ಪ್ರಶ್ನೆ ಏಲುತ್ತದೆ. ಈ ಜನರು ತುಕಾರಾಮನ ಸಾವಿನೊಂದಿಗೆ ಪ್ರತ್ಯಕ್ಷವೋ, ಅಪ್ರತ್ಯಕ್ಷವೋ ಆದ ರೀತಿಯಲ್ಲಿ ಸಂಬಂಧ ಹೊಂದಿರಬೇಕೆನ್ನುವದೇ ಅದರ ಅರ್ಥ. ಹತ್ಯೆಯ ಹೊರತು ಬೇರೆ ಯಾವ ಮಾರ್ಗದಿಂದಲಾದರೂ ತುಕಾರಾಮನ ಸಾವು ಸಂಭವಿಸದ್ದಿದ್ದರೆ, ಈ ಜನರಿಗೆ ಈ ಬಗೆಯ ಪತ್ರ ಬರೆಯುವ ಅಗತ್ಯವೇ ಬರುತ್ತಿರಲಿಲ್ಲ. ಒಂದು ವೇಳೆ, ತುಕಾರಾಮನ ಸಾವು ಸಮಾಧಿಯ ಮೂಲಕವೋ, ಆತ್ಯಹತ್ಯೆ ಅಥವಾ ಶ್ವಪದ ಕೊಂದಿರುವದರಿಂದಲೋ ಆಗಿದ್ದಿದ್ದರೆ, ಜನರಿಗೆ ತುಕಾರಾಮನ ಪತ್ರ ಬಂದಿದೆಯೆಂದು ಜಗತ್ತಿಗೆ ಸಾರಿ ಹೇಳುವ ಅಗತ್ಯವೇ ಬೀಳುತ್ತಿರಲಿಲ್ಲ. ಇದರ ಅರ್ಥವಿಷ್ಟೇ, ಅವನ ಸಾವಿನ ಕಾರಣದ ಕುರಿತು ಜನರ ದಿಕ್ಕು ತಪ್ಪಿಸುವ ಕಾರಣಕ್ಕಾಗಿಯೇ ಈ ಪತ್ರವನ್ನು ಸಿದ್ಧಪಡಿಸಲಾಯಿತು.

ತಾಳ, ದುಪ್ಪಟ್ಟಿ ಎಲ್ಲಿಂದ ಬಂತು?

ಪತ್ರದಂತೆಯೇ, ತಾಳ-ದುಪ್ಪಟಿಗೂ ಅದೇ ಸ್ಥಿತಿ ಬಂತು. ಅವನು ಅದೃಶ್ಯವಾದ ಎರಡು-ಮೂರು ದಿನಗಳ ಬಳಿಕ ತಾಳ ಮತ್ತು ದುಪ್ಪಟಿ ದೊರಕಿತು. ಅದನ್ನು ತುಕಾರಾಮನು ಕಳಿಸಿರುವದಾಗಿ ಜನರಿಗೆ ಹೇಳಲಾಯಿತು. ಈ ತಾಳ-ದುಪ್ಪಟಿಯೂ ತುಕಾರಾಮನು ಅದೃಶ್ಯನಾದ ತಕ್ಷಣ ಸಿಕ್ಕಿದ್ದರೆ, ಆ ಮಾತೇ ಬೇರೆ. ಆದರೆ ಆ ಕಾಲಕ್ಕೆ ಅಲ್ಲಿರದಿದ್ದ ತಾಳ-ದುಪ್ಪಟಿಯು ಆನಂತರ ಎಲ್ಲಿಂದ ಬಂತು? ಎಂಬುದು ಪ್ರಶ್ನೆ. ಯಾರೋ ಅದನ್ನು ತಂದಿರಿಸಿದ್ದು ಸ್ಪಷ್ಟ. ಈಗ ಇದನ್ನು ಮಾಡಿದ್ದರ ಉದ್ದೇಶವೂ ಸಹ ಉಪರೋಕ್ತ ಕೃತಕ ಪತ್ರ ಸಿದ್ಧಪಡಿಸಿರುವಂತಹದೇ ಆಗಿದೆ. ಅಷ್ಟೇ ಅಲ್ಲ, ವಂಚನೆಯ ಪತ್ರ ಬರೆಯುವವರು ಮತ್ತು ತಾಳ ದುಪ್ಪಟಿ ತಂದು ಇರಿಸಿದವರು ಒಬ್ಬರೇ ಆಗಿರಬೇಕು. ಇಲ್ಲವೇ ಪರಸ್ಪರ ಸಂಬಂಧ ಹೊಂದಿದವರಾಗಿರಬೇಕು. ತುಕಾರಾಮನ ಸಾವಿನ ಬಗೆಗೆ ಆ ಜನರು ತಟಸ್ಥ ಅಥವಾ ಸಂಬಂಧವಿಲ್ಲದವರಂತೆ ಇರುತ್ತಿದ್ದರೆ, ಅವರಿಗೆ ಈ ಉಪದ್ವ್ಯಪ ಮಾಡುವ ಅಗತ್ಯವೇ ಬೀಳುತ್ತಿರಲಿಲ್ಲ. ಅವರು ದುರಾಸೆಯಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸಿರುವದು, ಅವರು ಜನರ ಗಮನವನ್ನು ತುಕಾರಾಮನ ಹತ್ಯೆಯಿಂದ ಬೇರೆಡೆ ಹೊರಳಿಸುವ ಪ್ರಯತ್ನ ಮಾಡುತ್ತಿದ್ದರೆಂದೇ ಅರ್ಥವಾಗುತ್ತದೆ.

ಸಾವಿನ ಕುರಿತು ಕೃತ್ರಿಮ ಪ್ರಕ್ಷಿಪ್ತ ಅಭಂಗ ರಚಿಸಿದ್ದು ಏಕೆ?

ತುಕಾರಾಮನ ಹೆಸರಿನಲ್ಲಿ ಸ್ವತಃ ತುಕಾರಾಮನೇ ದೇಹ ಸಹಿತ ಅದೃಶ್ಯವಾಗಿದ್ದು, ವಿಮಾನು ಏರಿ ವೈಕುಂಠಕ್ಕೆ ಹೋಗಿದ್ದೂ, ಕಾಶಿಯಿಂದ ಗರುಡ ಏರಿ ವೈಕುಂಠಕ್ಕೆ ಹೋಗಲಿರುವದು, ಇಂದ್ರಾಯಣಿಯಲ್ಲಿ ದೇಹವಸಾನ ಮಾಡಿದ ವರ್ಣನೆಯಿರುವ ಅಭಂಗಗಳು ದೊರಕಿವೆ. ಸ್ವತಃ ತುಕಾರಾಮನು ರಚಿಸಿವುದು ಸಾಧ್ಯವೇ ಇಲ್ಲದ್ದರಿಂದ, ಇವೆಲ್ಲ ಕೃತ್ತಿಮ ಅಭಂಗಗಳೆಂದು ಖಚಿತವಾಗಿ ಹೇಳಬಹುದು. ಈಗ ಈ ಬಗೆಯ ಅಭಂಗಗಳನ್ನು ರಚಿಸಿದವರ ಉದ್ದೇಶ ಏನಿರಬಹುದು ಎಂಬುದನ್ನು ಊಹಿಸಬಹುದಾಗಿದೆ. ತುಕಾರಾಮನು ನಿಜಕ್ಕೂ ಇಲ್ಲಿಯ ಯಾವುದಾದರೂ ಒಂದು ಬಗೆಯಲ್ಲಿ ಸತ್ತಿದ್ದರೆ, ಜನರು ಈ ಬಗೆಯಲ್ಲಿ ಅಭಂಗ ರಚಿಸುವ ಅಗತ್ಯವೇ ಬೀಳುತ್ತಿರಲಿಲ್ಲ. ತುಕಾರಾಮನ ಹತ್ಯೆಯಾಗಿರುವದು ಜನರ ಮನಸ್ಸಿನಲ್ಲಿ ಬರಬಾರದೆಂಬ ಕಾರಣಕ್ಕಾಗಿ, ಅವರನ್ನು ದಿಕ್ಕು ತಪ್ಪಿಸುವ ಉದ್ದೇಶಕ್ಕಾಗಿ, ಅಂದರೆ ನಿಜವಾದ ಕಾರಣವನ್ನು ಮುಚ್ಚಿಡುವ ಉದ್ದೇಶದಿಂದಲೇ ಈ ಅಭಂಗಗಳನ್ನು ರಚಿಸಿದರು ಎನ್ನುವದರಲ್ಲಿ ಎರಡು ಮಾತಿಲ್ಲ.

ಹತ್ಯೆಯ ಸಾಧ್ಯತೆಯನ್ನು ಏಕೆ ತಳ್ಳಿಹಾಕುತ್ತಿದ್ದಾರೆ?

ತುಕಾರಾಮನ ಸಾವಿನ ಕುರಿತು ಲೇಖಕರು ನೀಡಿದ ಹಲವು ಪ್ರತಿಕ್ರಿಯೆಗಳನ್ನು ನಾವು ಈಗಾಗಲೇ ಗಮನಿಸಿದ್ದೇವೆ. ಸಮಾಧಿ, ತೀರ್ಥಯಾತ್ರೆ, ವಿಮಾನು ಏರಿ ವೈಕುಂಠ, ಮಸಣಕ್ಕೆ ಸಾಗಿಸಿದ್ದು, ಯೋಗದಿಂದ ಅನಿಲರೂಪ ಅಥವಾ ಅರಳೆಯಂತೆ ಆಗಿದ್ದು ಹೀಗೆ ವಿವಿಧ ಹೇಳಿಕೆಗಳು ಹೊಸ ಹೊಸ ಯುಕ್ತಿವಾದ ತರ್ಕ, ವಿವಿಧ ಕಲ್ಪನೆ ಮತ್ತು ಕಾರಣ ಮೀಮಾಂಸೆಯ ಮೂಲಕ ತುಕಾರಾಮನ ಸಾವಿನ ಹೊಸ ಹೊಸ ಕಾರಣಗಳನ್ನು ಶೋಧಿಸುವಾಗ ಈ ಲೇಖಕರ ಪ್ರತಿಭೆಯು ಅಕ್ಷರಶಃ ಅರಳಿದ್ದು ಕಂಡು, ಅವರ ಸೃಜನಶೀಲತೆ ಕಂಡು ನಾವು ಬೆರಗಾಗುವದು ಖಂಡಿತ. ಒಂದು ಅಂತಸ್ತಿನಿಂದ ಮತ್ತೊಂದು ಅಂತಸ್ತಿಗೆ ಹೋಗುವಂತೆ, ತುಕಾರಾಮನ ದೇಹವು ಒಂದು ಮಹಾಭೂತದಿಂದ ಮತ್ತೊಂದು ಪಂಚಮಹಾಭೂತದಲ್ಲಿ ವಿಲೀನಗೊಂಡ ವರ್ಣನೆ ಅಥವಾ ತುಕಾರಾಮನು ಆಕಾಶಗಮನ, ಉತ್ಕ್ರಾಂತಿ ವಗೈರೆ ಸಿದ್ಧಿಯ ಮೂಲಕ ದೇಹ ವಿಸರ್ಜನೆ ಕೈಕೊಂಡ ವರ್ಣನೆಯನ್ನು ಓದಿದಾಗ ನಮ್ಮ ದೇಶದ ಪ್ರತಿಭೆಯ ಈ ಹೂವು ನಮ್ಮನ್ನು ಚಕಿತಗೊಳಿಸಿಬಿಡುತ್ತದೆ.

ಖರೆಯೆಂದರೆ ಈ ಕಾರಣಗಳು ಸಂಪೂರ್ಣ ಹುಸಿಯಾದದ್ದು, ಕಪೋಲ ಕಲ್ಪಿತವಾದದ್ದು, ಇದಕ್ಕೆ ಯಾವ ಆಧಾರ ಪುರಾವೆಗಳಿಲ್ಲ. ಅದು ವಿಜ್ಞಾನದ ಒರೆಗಲ್ಲಿಗೂ ತಾಳುವಂತಹದಲ್ಲ. ಐತಿಹಾಸಿಕ ನಿಷ್ಕರ್ಷಕ್ಕೆ ಒಪ್ಪಿಗೆಯಾಗುವಂತಹದಲ್ಲ. ಈ ಬಗೆಯ ಅಸಂಭವನೀಯ ಮತ್ತು ಅಸಾಧ್ಯವಾದ ಕಾರಣಗಳು ಆಕಸ್ಮಿಕ ಸಾವಿನ ಸಂದರ್ಭದಲ್ಲಿ ಈ ಲೇಖಕರಿಗೆ ಹೊಳೆಯುತ್ತಿದ್ದರೂ ಅದರ ಒಪ್ಪಿತ ಕಾರಣ ಮಾತ್ರ ಹೊಳೆಯದೇ ಇರುವದು ಅಚ್ಚರಿಯನ್ನು ಹುಟ್ಟಿಸುತ್ತದೆ. ಮೊಸಳೆ ಮತ್ತು ಕಾಡು ಪ್ರಾಣಿಗಳು ತುಕಾರಾಮನ ದೇಹವನ್ನು ಹೊತ್ತೊಯ್ದು ಕೊಂದವು ಎನ್ನುವವರಿಗೆ ಮಾನವಾಕಾರದ ಮೊಸಳೆ ಅಥವಾ ಪ್ರಾಣಿಗಳೂ ಇದನ್ನು ಮಾಡಬಲ್ಲವು ಎನ್ನುವದು ಮಾತ್ರ ಹೊಳೆಯುವದಿಲ್ಲ. ಉಳಿದ ಕಾರಣಗಳಿದ್ದಾಗ, ಈ ಕಾರಣವೂ ಇದ್ದಿರಬಹುದು. ಅದರ ಬಗೆಗೂ ಯೋಚಿಸಬೇಕು. ಸಾಧಕ ಬಾಧಕವನ್ನು ಚರ್ಚಿಸಬೇಕು ಎನ್ನುವದೂ ಅವರಿಗೆ ಗೊತ್ತಾಗುವದಿಲ್ಲ. ಹತ್ಯೆಯ ಕಾರಣವನ್ನೂ ಸಹ ಉಲ್ಲೇಖಿಸಬಾರದೆನ್ನುವ ಕಾಳಜಿಯನ್ನು ಹಲವು ಲೇಖಕರು ವಹಿಸುತ್ತಾರೆ. ಒಂದು ಅತ್ಯಂತ ಮಹತ್ವದ ಮತ್ತು ಅತಿ ಹೆಚ್ಚು ಸಂಭವನೀಯವಾದ ಇಂಥ ಕಾರಣವನ್ನು ಮುಚ್ಚಿಡುವ ಶತಪ್ರಯತ್ನವನ್ನು ಈ ಜನ ಮಾಡುತ್ತಿರುವದು ದಿಡ. ಆ ಕಾರಣವನ್ನು ಉಲ್ಲೇಖಿಸುವ ಧೈರ್ಯವೂ ಆಗದಷ್ಟು ಆ ಜನ ಭಯಗ್ರಸ್ತರಾಗಿದ್ದಾರೆ. ನಿಜವಾಗಿಯೂ ಆ ಕಾರಣ ಹುಸಿಯಾಗಿದ್ದರೆ, ಅದನ್ನು ಮುಚ್ಚಿಡಲು ಈ ಬಗೆಯ ಒದ್ದಾಟ ಮಾಡಬೇಕಾದ ಅಗತ್ಯವಿರಲಿಲ್ಲ. ಬಹಿರಂಗವಾಗಿ ಅದರ ಬಗೆಗೆ ಚರ್ಚಿಸಲು ಯಾವ ತೊಂದರೆಯೂ ಇರಲಿಲ್ಲ.