ತುಕಾರಾಮನು ಸುಮಾರು ೨೦-೨೨ ವರುಷಗಳ ಕಾಲ ಜನರ ಜೊತೆ ಹೋರಾಡಬೇಕಾಯಿತು. ಅವನ ಮೇಲೆ ಖಟ್ಲೆ ಹೇರುವದಕ್ಕಿಂತ ಮೊದಲಿನಿಂದಲೂ ಈ ಹೋರಾಟ ಆರಂಭಗೊಂಡು, ಆ ಬಳಿಕವೂ ಅದು ಮುಂದುವರಿಯಿತು. ಈ ಹೋರಾಟದ ನಾನಾ ರೂಪಗಳನ್ನು ಅವನು ತನ್ನ ಅಭಂಗಗಳಲ್ಲಿ ಮಂಡಿಸಿದ್ದಾನೆ. ಈ ಅಧ್ಯಾಯದಲ್ಲಿ ಮೊದಲು ಅವನ ಸಂಘರ್ಷದ ಕೆಲವು ರೂಪ ಮತ್ತು ಅವನ ಸಾವಿಗೆ ಸಂಬಂಧಿಸಿದ ಭಿನ್ನಾಭಿಪ್ರಾಯಗಳನ್ನು ಮಂಡಿಸಲಾಗಿದೆ.

ಭಜನೆ ಕೀರ್ತನೆಗೆ ಅಡ್ಡಿ

ತುಕಾರಾಮನು ತನ್ನ ಭಜನೆ ಕೀರ್ತನೆಗೆ ಒಡ್ಡಿದ ಅಡ್ಡಿ ಆತಂಕ ಮತ್ತು ನೀಡಿದ ಕಿರುಕುಳದ ಬಗೆಗೆ ಅಭಂಗಗಳಲ್ಲಿ ಹೇಳಿಕೊಂಡಿದ್ದಾನೆ: ಎಂಥ ಅಮಂಗಲ ಸಮಯ ಬಂತು. ಮನನೊಂದಿತು. ಕಥೆಯ ಕಾಲಕ್ಕೆ ಹೈರಾಣಾಗಬೇಕಾಯಿತು. ಪಾಪಿಗಳು ದರ್ಶನದ ಕಾಲಕ್ಕೆ ನಡೆದ ಘಟನೆಯಿದು. ಆ ಪಾಪಿಗಳ ಬಾಯಲ್ಲಿ ಮಣ್ಣು ಬೀಳಲಿ. ದೇಹದ ಆಸಕ್ತಿಯಿದ್ದ ಅವನಿಗೆ ತನ್ನ ಸ್ವಂತ ಹಿತದ ಅರಿವಿಲ್ಲ, ನಾನವರ ಫಜೀತಿ ಮಾಡುತ್ತೇನೆ. ತಲೆ ಒಡೆಯುತ್ತೇನೆ.

ವಿಠ್ಠಲಾ, ಈ ಪಾಖಂಡಿಗಳು ನನ್ನ ಬೆನ್ನು ಬಿಡುತ್ತಿಲ್ಲ. ಅವರ ಬಗೆಗೆ ನಾನು ಏನು ಹೇಳಲಿ? ನನಗೆ ಗೊತ್ತಿಲ್ಲದಿರುವದನ್ನು ಹಿಂಸೆ ನೀಡಿ ಕೇಳುತ್ತಾರೆ. ನಾನು ಕಾಲು ಬಿದ್ದರೂ ಬಿಡುತ್ತಿಲ್ಲ. ಈ ಜಗಳಗಂಟರ ನಾಲಿಗೆ ಸೇದಿಹೋಗಲಿ, ನಾನು ಅವರ ಜತೆ ಎಷ್ಟೆಂದು ಮಾತಾಡಲಿ? ಹೇ ಪಾಂಡುರಂಗಾ, ತನಗೇಕೋ ಭಯವಾಗುತ್ತಿದೆ. ಆಡಬಾರದ ಮಾತನ್ನೆಲ್ಲ ತನ್ನಂತಹ ಸಂತನ ಬಾಯಿಂದ ಹೊರಡಿಸುತ್ತಾರೆ. ನಾನು ಕೀರ್ತನೆ ಮಾಡುವಾಗ ಧಿಕ್ಕಾರ ಹಾಕುತ್ತಾರೆ. ನಾನಾಗ ಕಂಗಾಲಾಗಿದ್ದನ್ನು ಹೇಗೆ ಬಣ್ಣಿಸಲಿ? ಹೇ ಪಾಂಡುರಂಗ, ನನಗೆ ಉದಾಸವೆನಿಸುತ್ತಿದೆ. ನಾನೀಗ ಏನು ಮಾಡಲಿ? ಈ ಜನ ನಿನ್ನನ್ನು ನಿಷೇದಿಸುತ್ತಾರೆ. ನನಗೆ ಸಹಿಸುವದಾಗುವದಿಲ್ಲ. ನಾನೊಬ್ಬನೇ ಎಷ್ಟೆಲ್ಲ ಜನರೊಂದಿಗೆ ವಾದ ಹಾಕಲಿ? ಒಂದೇ ಬಾಯಿಯಿಂದ ನಿನ್ನ ಗುಣವನ್ನು ಬಣ್ಣಿಸಲೋ ಅಥವಾ ಈ ದುಷ್ಟ ಜನರಿಗೆ ಉತ್ತರಿಸಲೋ?”

ತುಕಾರಾಮನ ಕೀರ್ತನೆ ಮಾಡುವ ಕಡೆಯಲ್ಲಿ ದುಷ್ಟಜನರು ಬಂದು ಕಿರುಕುಳ ಕೊಡುತ್ತಿದ್ದರು, ಶಾಬ್ಧಿಕವಾದ ಹಾಕುತ್ತಿದ್ದರು, ಕೀರ್ತನೆಯನ್ನು ರಸಭಂಗಗೊಳಿಸುತ್ತಿದ್ದರು. ಕಥೆಯಲ್ಲಿರುವ ದೋಷ ಕೆದಕಿ, ಟೀಕಿಸುತ್ತಿದ್ದರು. ಕೆಲವರು ಜಗಳವನ್ನು ಮಾಡುತ್ತಿದ್ದರು. ಬೆದರಿಕೆ ಒಡ್ಡಿ ಸಲ್ಲದ ಪ್ರಶ್ನೆ ಕೇಳುತ್ತಿದ್ದರು. ನನಗೆ ಗೊತ್ತಿಲ್ಲದ ಪ್ರಶ್ನೆ ಕೇಳುತ್ತಾರೆ ಎಂದೆಲ್ಲ ತುಕಾರಾಮನು ಹೇಳಿಕೊಂಡಿದ್ದಾನೆ. ಅಂದರೆ ಭಕ್ತಿಮಾರ್ಗಕ್ಕೆ ಹೆಸರಿಡುವ ವೈದಿಕ ಪಂಡಿತರು ವೇದ, ಧರ್ಮಶಾಸ್ತ್ರ, ದರ್ಶನ ಮುಂತಾದ ಬಗೆಗಿನ ಪ್ರಶ್ನೆ ಕೇಳುತ್ತಿರಬೇಕು. ಅವನಿಗೆ ಉತ್ತರ ಗೊತ್ತಿಲ್ಲವೆಂದು ಹಂಗಿಸುತ್ತಿರಬೇಕು. ಶ್ರೋತ್‌ಋಗಳ ಮನ ಕೆಡಿಸುವ ಪ್ರಯತ್ನ ಮಾಡುತ್ತಿರಬೇಕು, ಅಂಥ ಪ್ರಶ್ನೆಗಳನ್ನು ಕೇಳುತ್ತಿರಬೇಕು. ಉದಾ: ನಿನಗೆ ವೇದ ಗೊತ್ತಿದ್ದರೆ, ಈ ಮಂತ್ರದ ಅರ್ಥ ಹೇಳು, ಇಂತಿಂಥ ಯಾಗ ಹೇಗೆ ಮಾಡುತ್ತಾರೆ ಎಂದೆಲ್ಲ ಪ್ರಶ್ನಿಸಿ ಹೈರಾಣಗೊಳಿಸುತ್ತಿರಬೇಕು. ನಿನ್ನ ಉಪನಯನವಾಗಿದೆಯೆ, ಸಂಧ್ಯಾವಂದನೆ ಗೊತ್ತಿದೆಯೇ, ಯೋಗಸಾಧನೆ ಮಾಡಿ ತೋರಿಸುತ್ತಿಯಾ, ಬ್ರಹ್ಮವೆಂದರೇನು ಮುಂತಾದ ವೈದಿಕ ತತ್ವಜ್ಞಾನದ, ಕರ್ಮಕಾಂಡದ ಪ್ರಶ್ನೆಯನ್ನು ಕೇಳುತ್ತಿರಬೇಕು. ಉದ್ಧಟರಂತೆ ವರ್ತನೆ ಮಾಡುತ್ತಿರಬೇಕು. ಅವನನ್ನು ಶೂದ್ರನೆಂದೂ, ಪ್ರಾಕೃತನೆಂದೂ ಕರೆಯುತ್ತಿರಬೇಕು.

ಇದರಿಂದ ತುಕಾರಾಮನ ಸಂವೇದನಾಶೀಲ ಮನಸ್ಸು ಹದಗೆಡುತ್ತಿತ್ತು. ಹೀಗಾಗಿ ಕೆಲವೊಮ್ಮೆ ವ್ಯಾಕುಲಗೊಂಡು ವ್ಯಥಿತನಾಗುತ್ತಿರಬೇಕು. ಆದರೂ ತೀರಾ ಕುಸಿದು ಹೋಗುವಷ್ಟು ಅವನ ಮನಸ್ಸು ದುರ್ಬಲಗೊಂಡಿರಲಿಲ್ಲ ಎಂಬುದಂತೂ ನಿಜ. ಒಮ್ಮೊಮ್ಮೆ ಸಾತ್ವಿಕ ಸಿಟ್ಟು ಬರುತ್ತಿರಬೇಕು. ತನ್ನನ್ನು ಫಜೀತಿಗೀಡು ಮಾಡುವವರಿಗೆ ಪಾಠ ಕಲಿಸುತ್ತೇನೆಂದೂ ಅವನು ಬೆದರಿಸಿದ್ದೂ ಇದೆ. ನಿಮ್ಮ ವೇದ, ಯಜ್ಞ, ಪಾಂಡಿತ್ಯ ಇದೆಲ್ಲ ನಿಮ್ಮ ಹತ್ತಿರವೇ ಇರಲಿ, ನಿಮಗೇ ಅವರಿಂದ ಲಾಭವಾಗಲಿ ಎಂಬರ್ಥದ ಭಾವನೆಯು ಹಲವು ಅಭಂಗಗಳಲ್ಲಿ ವ್ಯಕ್ತಗೊಳಿಸಿದ್ದನ್ನು ಕಾಣುತ್ತೇವೆ.

ಮನ ಅರಳಿದಾಗ ಪಂಡಿತರು ಪ್ರಶ್ನೆ ಹಾಕುತ್ತಾರೆ

ವೈದಿಕ ಪಂಡಿತರು ನೀಡುವ ಕಿರುಕುಳ ಮತ್ತೆ ಕೆಲವು ಅಭಂಗಗಳಲ್ಲಿ ಹೀಗೆ ವ್ಯಕ್ತಪಡಿಸಿದ್ದಾನೆ.

‘ಜನರ ಮನಸ್ಸು ನವಿರೇಳಿಸಿ, ಅರಳಿಸುವ ಪ್ರಯತ್ನದಲ್ಲಿದ್ದಾಗ ಪಂಡಿತ್ರು ಅಡ್ಡ ಪ್ರಶ್ನೆ ಹಾಕುತ್ತಾರೆ. ಇದರಿಂದ ಆಘಾತವಾಗುತ್ತದೆ. ಪಂಡಿತರಿಗೆ ಸರಿಯಾಗಿ ವರ್ತಿಸಿಯೇ ಗೊತ್ತಿಲ್ಲ. ಅವರಲ್ಲಿ ಶುದ್ಧಭಾವನೆಯಿಲ್ಲ. ಪ್ರಶ್ನೆ ಕೇಳಿ ಉಳಿದವರನ್ನು ಘಾಸಿಗೊಳಿಸುತ್ತಾರೆ. ಮೃಷ್ಟಾನ್ನದಲ್ಲಿ ನಾಯಿ ಬಾಯಿ ಹಾಕುವಂತೆ ಕಲಿಯುಗದಲ್ಲಿ ಇಂಥವರ ಸಂಖ್ಯೆ ಅಪಾರವಾಗಿದೆ. ಕುಶಲತೆಯಿಂದ ಪ್ರಶ್ನಿಸುತ್ತಾರೆ. ನಾನು ನಿನ್ನನ್ನು ಹೊಗಳುವಾಗ ಅವರು ಕಿರುಕುಳ ಕೊಡುತ್ತಾರೆ.

ಈ ಢೋಂಗಿಗಳು ಸೊಗಸಾಗಿ ಮಾತಾಡುತ್ತಾರೆ, ಹೊಂಚು ಹಾಕುವ ಸನ್ನಾಹದಲ್ಲಿರುತ್ತಾರೆ. ಅವರು ತಿಲಕ ಹಚ್ಚುತ್ತಾರೆ. ವಿಶಿಷ್ಟ ಟೊಪ್ಪಿಗೆ ಧರಿಸುತ್ತಾರೆ. ಕೊರಳಲ್ಲಿ ಮಾಲೆಯೂ ಇರುತ್ತದೆ. ಆದರೆ ಕತ್ತಲೆಯಲ್ಲಿ ವಂಚಿಸಿ, ಕೊರಳು ಹಿಚುಕುವ ಪ್ರಯತ್ನದಲ್ಲಿರುತ್ತಾರೆ.

ನನ್ನ ಮನಕ್ಕೆ ಒಪ್ಪಿಗೆಯಾದ ವಚನ ಹೇಳಿದೆ. ದೇವರ ಜತೆ ದಿಟ್ಟತನದಿಂದ ಸಲಿಗೆ ಮಾಡಿದೆ. ಮನದಲ್ಲಿ ಶಂಕೆಯಾಗಲಿ, ನಾಚಿಗೆಯಾಗಲಿ ಪಡಲಿಲ್ಲ. ಚತುರರಿಗೆ ಹೆದರಲಿಲ್ಲ.

ಶಬ್ದ ಬ್ರಹ್ಮರಂತವರು ನನ್ನೆದುರಿಗೆ ಬರದಂತೆ ಮಾಡು, ಶಬ್ದಚ್ಛಲದ ಮೂಲಕ ವಾದ ಹಾಕುವವರು ಮತ್ಸರ ಭಕ್ತರು. ಅವರ ಜ್ಞಾನದಹಂಕಾರಕ್ಕೆ ಬೆಂಕಿ ಹಚ್ಚಲಿ, ಢಂಬ ಹಾಳಾಗಲಿ, ದುರ್ಜನರ ಚೆಹರೆ ಕೆಡಲಿ, ಈ ದುರ್ಜನರು ಕಾಡಲೆಂದೇ ಗುಂಪುಗೂಡಿ ಬರುತ್ತಾರೆ. ನಾನು ಅವರ ತಲೆ ಒಡೆಯಲು ಹಿಂಜರಿಯಲಿಕ್ಕಿಲ್ಲ.’

ತುಕಾರಾಮ ಹೇಳಿದ ಮನ ಅರಳುವ ಹೊತ್ತು ನಿಜಕ್ಕೂ ಹೃದ್ಯವಾದ ಕಲ್ಪನೆ. ಅವನು ರೈತನಾಗಿರುವುದರಿಂದ ಇಂಥ ಕೃಷಿ ಕಲ್ಪನೆಯು ಸಹಜವಾಗಿ ಹೊಳೆಯುತ್ತದೆ. ಪ್ರತಿಭೆ ಅರಳುವ, ಸ್ಫೂರ್ತಿ ಮೆಲ್ಲಗೆ ಸ್ಪರ್ಶಿಸುವ ಹೊತ್ತಿನಲ್ಲಿ ಮನಸ್ಸು ಪ್ರಸನ್ನಗೊಳ್ಳುತ್ತದೆ. ಸಂತೋಷದಿಂದ ಹೊಸ ಹೊಸ ಕಲ್ಪನೆಯನ್ನು ಅಭಂಗಗಳ ರೂಪದಲ್ಲಿ ಸಹೃದಯರಿಗೆ ತಲುಪಿಸುವ ಹೊತ್ತು, ಕಲ್ಪನೆಯ ನವಿಲು ಗರೆಗೆದರುವ ಹೊತ್ತು ಇಂಥ ತುರೀಯಾವಸ್ಥೆಯಲ್ಲಿದ್ದಾಗ ಪಂಡಿತರು ಪ್ರಶ್ನೆ ಕೇಳಿ ಪ್ರಹಾರ ಮಾಡುತ್ತಾರೆ. ಇದೊಂದು ನಮೂನೆಯಾಗಿ ಈ ಅಭಂಗ ನಿಮ್ಮೆದುರು ಚರ್ಚಿಸಿದ್ದೇನೆ.

ವಾದ ಹಾಕುವ ಈ ಚತುರ ಪಂಡಿತರಿಗೆ ನಾನು ಹೆದರುವದಿಲ್ಲ. ‘ಈ ಡಾಂಭಿಕ, ಅಹಂಕಾರಿಗಳ ದರುಶನ ಸಹ ತನಗೆ ಬೇಡ’ ಎಂದು ತುಕಾರಾಮನಿಗೆ ಅನಿಸುತ್ತದೆ. ಆ ಪಂಡಿತರು ತುಕಾರಾಮನನ್ನು ಯಾವ ಬಗೆಯಲ್ಲಿ ಕಾಡಿರಬಹುದು ಎನ್ನುವದು ಈ ಮಾತಿನಲ್ಲಿ ವ್ಯಕ್ತವಾಗುತ್ತದೆ. ಗುಂಪುಮಾಡಿ ಬಂದು ತನ್ನನ್ನು ಕಾಡುವದು, ಪೀಡಿಸುವದೇ ಅವರ ಉದ್ದೇಶ ಎಂದೂ ಹೇಳುತ್ತಾನೆ. ತುಕಾರಾಮನ ಪಾಲಿಗೆ ಬಂದ ವಿವಿಧ ಪ್ರಸಂಗಗಳ ಶಬ್ದಚಿತ್ರ ಈ ದೃಷ್ಟಿಯಿಂದ ಅತ್ಯಂತ ಮಹತ್ವದ್ದು. ಆದರೆ ತುಕಾರಾಮನು ಇಂಥವರಿಗೆ ಕುಗ್ಗದೆ-ಬಗ್ಗದೆ, ವಿಷಬಾಣವನ್ನು ಎದುರಿಸುವ ಸನ್ನಾಹದಲ್ಲಿ ಮುಂದೆ ಸಾಗಿದನು. ಅಷ್ಟೇ ಅಲ್ಲ, ತಲೆಯನ್ನು ಚಚ್ಚುತ್ತೇನೆ ಎಂಬ ಮಾತಿನಲ್ಲಿ ಪ್ರತಿ ಆಹ್ವಾನದ ಸುಳಿವು ಸಿಗುತ್ತದೆ.

ದುರ್ಜನರ ಉಗುರನ್ನು ಕಿತ್ತುಹಾಕಿ

ಸಮಾಜವು ಸುಖದಿಂದ ಬಾಳಬೇಕಾದರೆ ದುರ್ಜನರನ್ನು ಫಜೀತಿ ಮಾಡಬೇಕು, ಅವರಿಗೆ ಯೋಗ್ಯಪಾಠ ಕಲಿಸಬೇಕು, ನಿಷೇದಿಸಬೇಕು, ಅವರ ಉಗುರನ್ನು ಕಿತ್ತು ಎಸೆಯಬೇಕು ಎನ್ನುತ್ತಾನೆ, ಅವರು ಸಜ್ಜನರನ್ನು ಕಾಡಬಾರದು ಎಂಬುದು ತುಕಾರಾಮನ ಅಂಬೋಣ.ದುರ್ಜನರನ್ನು ಯಾವುದೇ ರೀತಿಯಲ್ಲಿ ಹಲ್ಲೆಮಾಡಿ. ತುಕಾರಾಮನು ಮಾಡಿದ ನಂಜಿನಂತಹ ತೀಕ್ಷ್ಣ ಟೀಕೆಯಿಂದ ದುರ್ಜನರು ಸಂಘಟಿತರಾಗಿ ಅವನ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸುವದು ಸ್ವಾಭಾವಿಕ. ತುಕಾರಾಮ ನೀಡಿದ ಆಹ್ವಾನ ಹೀಗಿದೆ. ” ದುರ್ಜನರನ್ನು ಮಾನಗೇಡಿಯನ್ನಾಗಿ ಮಾಡಬೇಕು, ಹಾದಿಯ ಮೇಲಿನ ಕಲ್ಲು ಬದಿಗೆ ಸರಿಸಿ ಹಾದಿ ಸುಗಮಗೊಳಿಸುವಂತೆ, ಅಕ್ಕಿಯಲ್ಲಿದ್ದ ಹರಳು ಆರಿಸಿ ಚೆಲ್ಲುವಂತೆ, ಹೊಲದಲ್ಲಿಯ ಕಳೆಕಿತ್ತು ಒಗೆಯುವಂತೆ ದುರ್ಜನರ ಉಗುರು ಕಿತ್ತೊಗೆಯಬೇಕು ಅಂದಾಗಲೇ ಹಿತವಾಗುತ್ತದೆ.

ನಾವು ಹರಿದಾಸರು ಮೇಣದಂತೆ ಮಿದು, ವಜ್ರದಂತೆ ಕಠಿಣ, ಸಜ್ಜನರಿಗೆ ಬೇಡಿದ್ದನ್ನು ಕೊಡುತ್ತೇವೆ. ದುರ್ಜನರ ತಲೆ ಒಡೆಯುತ್ತೇವೆ. ತಾಯ್ತಂದೆಗಿಂತಲೂ ಹೆಚ್ಚು ಪ್ರೀತಿಸಬಲ್ಲೆವು. ಶತ್ರುಗಿಂತಲೂ ಹೆಚ್ಚು ನಾಶ ಮಾಡಬಲ್ಲೆವು. ನಮ್ಮ ಮುಂದೆ ಅಮೃತವೂ ಸಿಹಿಯಲ್ಲ, ವಿಷವೂ ನಂಜಲ್ಲ, ಇಡೀ ದೇಹ ಸವಿ. ಜನರ ಬಯಕೆಯನ್ನು ಈಡೇರಿಸಬಲ್ಲೆವು.

ಪತಿವ್ರತೆಯನ್ನು ಹೊಗಳಿದರೆ, ಚರಿತ್ರ ಹೀನ ಹೆಣ್ಣಿನ ಹಣೆಗೆ ಗಂಟು ಬೀಳುತ್ತದೆ. ನಮ್ಮ ಸಹಜ ಮಾತು, ಹೆಚ್ಚು ಯೋಚಿಸಲು ಹಚ್ಚುವುದಿಲ್ಲ, ಕೊರತೆಯಿದ್ದವರ ಮರ್ಮಕ್ಕೆ ಹೊಡೆತ ಬೀಳುತ್ತದೆ. ಹೀಗಾಗಿ ನಂಜು ನುಂಗಿದವರಂತೆ ಕೆರಳಿ ಮಾತಾಡುತ್ತಾರೆ. ನಾವು ಸಹಜ ಚಲನೆ ಮಾಡಿದಾಗ ಗಾಯಕ್ಕೆ ಧಕ್ಕೆ ಹತ್ತಿದರೆ ಏನು ಮಾಡುವದು ಸಾಧ್ಯ?

ಉಡಿಯಲ್ಲಿ ಕೆಂಡ

ದುರ್ಜನರು ಕಾಡಲಿ, ಪೀಡಿಸಲಿ, ತಾನು ಲೆಕ್ಕಿಸುವದಿಲ್ಲ, ಭಯಪಡುವದಿಲ್ಲೆಂದು ಹಲವು ಉದಾಹರಣೆ ಮೂಲಕ ತುಕಾರಾಮ ಸ್ಪಷ್ಟಪಡಿಸಿದ್ದಾನೆ. ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ತದೆಯೇ? ಸೊಕ್ಕಿದ ಟಗರು ಸಿಂಹವನ್ನು ಹೆದರಿಸಬಲ್ಲದೇ? ಹಾಗೆಯೇ ಸಂತರಿಗೆ ದುರ್ಜನರು ಪೀಡಿಸಿದರೆ ಅವರ ಮುಖಕ್ಕೆ ಮಸಿಬಳಿದಂತಾಗುತ್ತದೆ. ದುರ್ಜನರು ದೀಪ ಕೈಯಲ್ಲಿ ಹಿಡಿದುಕೊಂಡು ಕತ್ತಲೆ ಅರಸುತ್ತಾರೆ. ಅದೇ ರೀತಿ ಕಲಿಕಾಲದ ಭೀತಿಯ ಹರಿದಾಸರನ್ನು ಹೆದರಿಸುವದು ಸಾಧ್ಯವಿಲ್ಲ. ಅಥವಾ ಅವರು ಮೃಗಜಲದ ಬೆನ್ನು ಹತ್ತುವದೂ ಸಾಧ್ಯವಿಲ್ಲ. ಸೂರ್ಯಾಸ್ತದ ಹೊತ್ತಿಗೆ ಧೂಳು ಎರಚಿದರೂ ರವಿಕಳೆ ಮಲೀನಗೊಳ್ಳುತ್ತದೆಯೇ? ಈ ಭಾಗ್ಯಹೀನರಿಗೆ ಇದು ಅರ್ಥವಾಗುವದಿಲ್ಲ ಹೇಗೆ? ಹುಲ್ಲಿನಿಂದ ಅಗ್ನಿಯನ್ನು ಮರೆ ಮಾಚಬಹುದೇ? ಇಂಥ ಮಾತು ವ್ಯರ್ಥವೇ ಸರಿ. ಕಲ್ಲಿಗೆ ತಲೆ ಅಪ್ಪಳಿಸಿ ಏನು ಪ್ರಯೋಜನೆ? ಒಬ್ಬಾತ ಆತುರತೆಯಿಂದ ಕೆಂಡವನ್ನು ಉಡಿಯಲ್ಲಿ ತುಂಬಿಕೊಂಡರೆ ಏನು ಲಾಭ? ಅದೇ ರೀತಿ ನಮ್ಮ ಮೇಲೆ ಮುನಿಸುಗೊಂಡವನು ಆಕಾಶದ ಜತೆ ಮಾತುಬಿಟ್ಟ ಎಂದೇ ಭಾವಿಸಬೇಕು.

 ಹಗಲುರಾತ್ರಿ ಯುದ್ಧ

ತುಕಾರಾಮನ ಯುದ್ಧ ಒಂದೆರಡು ದಿನಕ್ಕೆ ಮುಗಿಯುವಂತಹದಲ್ಲ. ಅದು ಬದುಕಿನ ಉದ್ದಕ್ಕೂ ನಡೆಯುವ ಯುದ್ಧ. ಪ್ರತಿ ಹೆಜ್ಜೆಗೂ, ಪ್ರತಿಕ್ಷಣಕ್ಕೂ ನಡೆಯುವ ಯುದ್ಧ. ಅವನು ಅನ್ನುತ್ತಾನೆ, ನಾನು ಹಗಲು ರಾತ್ರಿ ಮನಸ್ಸಿನ ಮತ್ತು ಜಗತ್ತಿನ ಜತೆ ಯುದ್ಧ ಮಾಡಬೇಕಾಗುತ್ತದೆ. ಜೀವದ ಮೇಲೆ ಒಂದೊಂದೇ ಆಘಾತ ಬಂದು ಎರಗುತ್ತವೆ. ಆದರೆ ನಿನ್ನ ನಾಮದ ಬಲದಿಂದ ನಾನು ಅವರೆಲ್ಲರ ಮುಖಕ್ಕೆ ಮಸಿ ಬಳದಿದ್ದೇನೆ.

ನನಗೆ ಈ ಜನರ ಆಘಾತ ತಡೆಯುವದಾಗುವದಿಲ್ಲ. ಅವನು ನನ್ನನ್ನು ಕೊಂದೇಬಿಡುತ್ತಾರೇನೋ ಎಂದೆನಿಸುತ್ತದೆ. ಈ ಜನ ಕೊಳ್ಳಿಯಿಟ್ಟು ಸುಡಲು ಪ್ರಯತ್ನಿಸುತ್ತಿದ್ದಾರೆ. ನಾನು ಹಲವರ ಕಪಿಮುಷ್ಟಿಯಲ್ಲಿ ಸಿಲುಕಿದ್ದೇನೆ. ನನ್ನ ಕೊರತೆಯನ್ನು ಹುಡುಕಿ ತೆಗೆದು ಅದನ್ನೇ ಅನುಮೋದಿಸಿ, ಅದಕ್ಕೆ ಬೆಂಬಲಿಸಬಹುದು.

ತುಕಾರಾಮನ ಜೀವನದಲ್ಲಿ ನಡೆದ ಹಗಲು-ರಾತ್ರಿಯ ಯುದ್ಧವು ವಿಠ್ಠಲನ ಪ್ರಾಪ್ತಿಗಾಗಿ ನಡೆದ ಆಧ್ಯಾತ್ಮಿಕ ಸ್ವರೂಪದ್ದು, ಅದಕ್ಕೂ ವಾಸ್ತವಕ್ಕೂ ಯಾವ ಸಂಬಧವೂ ಇರಲಿಲ್ಲ. ಎಂದು ಹೇಳುವದು ಖಂಡಿತಕ್ಕೂ ಒಪ್ಪುವಂತಹ ಮಾತಲ್ಲ. ಏಕೆಂದರೆ ಈ ಹೋರಾಟವು ಹೊರಜಗತ್ತಿನೊಂದಿಗೂ ನಡೆದಿದೆ ಎಂದವನು ಸ್ಪಷ್ಟವಾಗಿ ಹೇಳಿದ್ದಾನೆ. ಅಂದರೆ ಮನದಲ್ಲಿ ನಡೆದ ಸಂಘರ್ಷದ ಬೇರೂ ಸಹ ಬಾಹ್ಯ ಸಂಘರ್ಷದಲ್ಲಿತ್ತು. ಹಾಗೆಯೇ ಹೊರಜಗತ್ತಿನೊಂದಿಗೆ ಜರುಗಿದ ಸಂಘರ್ಷದ ಬೇರು ಅವನ ಮನದೊಳಗಣ ಜೀವನದ ಬಗೆಗಿನ ಮೌಲ್ಯ ಮತ್ತು ವಿವೇಕದಲ್ಲಿತ್ತು. ಹೊರ ಜಗತ್ತಿನ ಸಂಘರ್ಷಕ್ಕೆ ಅದು ಸಂಬಂಧವಿರದಿದ್ದರೆ, ನಾನು ಎಲ್ಲರ ಮುಖಕ್ಕೆ ಮಸಿ ಬಳಿದೆ ಎಂಬ ಮಾತು ಹೇಳುವ ಅಗತ್ಯವಿರಲಿಲ್ಲ. ದುರ್ಜನರು ಆಗಾಗ ಹಲ್ಲೆ ಮಾಡುತ್ತಿದ್ದರು. ಅವನ ಮನವನ್ನು ಘಾಸಿಗೊಳಿಸುತ್ತಿದ್ದರು, ಪೀಡಿಸುತ್ತಿದ್ದರು. ಈ ಸಂಕಟದಿಂದ ನಾನು ಕಸಿವಿಸಿ ಪಡುತ್ತಿದ್ದೇನೆ, ಬೆಂದ ಹಾಗೆ ಆಗುತ್ತಿದೆ ಎಂದು ಜನರನ್ನು ತೆಗಳುತ್ತಿದ್ದ. ಒಮ್ಮೊಮ್ಮೆ ಈ ದುರ್ಜನರ ಹಿಂಸೆ ಅಸಹನೀಯವೆನಿಸುತ್ತಿತ್ತು. ಅಪಮಾನ ಹಲ್ಲೆ ಮಾಡಿದವರ ಮುಖಕ್ಕೆ ಮಸಿ ಬಳಿಯಲು ಸಿಡಿದೇಳುತ್ತಿದ್ದನು.

ನನ್ನನ್ನು ಕೊಲ್ಲಬಹುದು

ತಾನು ಆರಂಭಿಸಿದ ಹೋರಾಟದ ಕೊನೆ ಹೇಗೆ, ಇದು ಹೇಗೆ ಪರ್ಯಾವಸಾನಗೊಳ್ಳುತ್ತದೆ ಎನ್ನುವದು ತುಕಾರಾಮನಿಗೆ ಗೊತ್ತಿರಲಿಲ್ಲ ಎಂದೇನೂ ಅಲ್ಲ, ಭಾವೀ ಘಟನೆಯ ಸುಳಿವು ಅವನಿಗೆ ಸಿಕ್ಕಿತ್ತು. ಹೀಗಾಗಿಯೇ ಅವನು ಈ ಜನ ನನ್ನನ್ನು ಕೊಲ್ಲಬಹುದು. ಕೊಳ್ಳಿಯಿಟ್ಟು ಸುಡಲೂಬಹುದು ಎಂದವನು ನಿಸ್ಸಂದೇಹವಾಗಿ ಹೇಳಿದ್ದಾನೆ. ಮನದಲ್ಲಿ ನಡೆದ ಆಧ್ಯಾತ್ಮಿಕ ಸಂಘರ್ಷಕ್ಕೂ ಮತ್ತು ಕೊಳ್ಳಿಯಿಟ್ಟು ಸುಡುವದಕ್ಕೂ ಎಲ್ಲಿಗೆಲ್ಲಿಯ ಸಂಬಂಧ? ಕೊಳ್ಳಿಯಿಟ್ಟು ಸುಡುವದು ಶಾರೀರಿಕ ಪಾತಳಿಯಲ್ಲಿ ನಡೆಯುವ ಸಂಘರ್ಷವಾಗಿದೆ.

ತುಕಾರಾಮನು ನಡೆಸಿದ ಸಂಘರ್ಷವನ್ನು ಅರಿತುಕೊಳ್ಳಲು ಈ ಅಭಂಗ ಹೆಚ್ಚು ಮಹತ್ವದ್ದು. ಅವನ ಸುತ್ತಲಿನ ಜನರು ಅವನಲ್ಲಿದ್ದ ದೋಷವನ್ನು ಹುಡುಕುತ್ತಿದ್ದರಂತೆ, ಪ್ರಚಲಿತ ಸಾಮಾಜಿಕ ವ್ಯವಸ್ಥೆಯಲ್ಲಿಯ ದೋಷವನ್ನು ಟೀಕಿಸಿ, ಅವನು ಮಂಡಿಸಿದ ಮಾನವೀಯ ಮೌಲ್ಯವೇ ಆ ಜನರಿಗೆ ದೋಷವಾಗಿ ಕಂಡಿರಬೇಕು. ಇಂಥ ಜನರ ಗುಂಪು ದೇಹೂನಲ್ಲಿದ್ದಿರಬೇಕು, ಅವರು ತುಕಾರಾಮನನ್ನು ನಿಂದಿಸುತ್ತಿರಬೇಕು, ಬೆದರಿಕೆ ಹಾಕುತ್ತಿರಬೇಕು. ಏರಿ ಹೋಗುತ್ತಿರಬೇಕು. ಹೀಗಾಗಿ ಈ ಜನ ಎಂದಾದರೂ ತನ್ನ ಮನೆಗೆ ಬೆಂಕಿ ಹಚ್ಚಲೂಬಹುದು, ತನ್ನನ್ನು ಸುಟ್ಟು ಕೊಲ್ಲಲೂಬಹುದು ಎಂದೆಲ್ಲ ತುಕಾರಾಮನಿಗೆ ಅರಿವಾಗತೊಡಗಿತ್ತು. ಅಂದರೆ ಕೆಲವರು ತನ್ನನ್ನು ಕೊಲ್ಲಲು ಹೊಂಚುಹಾಕಿ ಕೂತಿರುವದನ್ನು ಅರಿತಿದ್ದ. ಈ ವೈರತ್ವ ಯಾವುದೇ ವೈಯಕ್ತಿಕ ಕಾರಣದಿಂದ ಹುಟ್ಟಿಕೊಂಡಿದ್ದಲ್ಲ, ಧಾರ್ಮಿಕ ಕ್ಷೇತ್ರದಲ್ಲಿ ತುಕಾರಾಮ ತೆಗೆದುಕೊಂಡ ನಿಲುವಿನಿಂದಾಗಿ ಜನ ಅವನನ್ನು ಪೀಡಿಸಲು ಆರಂಭಿಸಿದ್ದು ಸತ್ಯ. ಈ ಹಿಂಸೆ ಯಾವ ಸ್ತರಕ್ಕೆ ಹೋಗಿ ತಲುಪಿತ್ತು, ಜನ ನಿರ್ಮಿಸಿದ ಭೀತಿ ಅದೆಷ್ಟು ಭಯಂಕರವಾಗಿತ್ತು ಎನ್ನುವದು ಈ ಅಭಂಗದಿಂದ ಸ್ಪಷ್ಟವಾಗುತ್ತದೆ.

ತನ್ನನ್ನು ಕೊಲ್ಲಲು ಹೊಂಚು ಹಾಕಲಾಗುತ್ತಿರುವದು ಗೊತ್ತಿದ್ದೂ ತುಕಾರಾಮ ಹೆದರಲಿಲ್ಲ, ಯಾರನ್ನೂ ಲೆಕ್ಕಿಸಲಿಲ್ಲ. ಜೀವ ಹೋದರೂ ಸರಿ, ದುರ್ಜನರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲಾರೆ ಎಂಬ ಆಶಯವನ್ನು ಖಚಿತವಾಗಿ ಅವನು ಹಲವು ಅಭಂಗಗಳಲ್ಲಿ ಈ ಮುಂದಿನಂತೆ ನೀಡಿದ್ದಾನೆ “ಎಲೆ ನಾಲಿಗೆಯೇ, ಯಾರೇ ನನ್ನ ಗೋಣು ಕತ್ತರಿಸಲಿ, ನೀನು ಮಾತ್ರ ಎದುರುತ್ತರ ಕೊಡಬೇಡ, ಪಾಂಡುರಂಗನನ್ನು ಬಿಟ್ಟು ಅಲುಗಾಡಬೇಡ ಎಂದು ನನ್ನ ಇಂದ್ರಿಯಗಳಿಗೆ ಪ್ರಾರ್ಥಿಸಿಕೊಳ್ಳುತ್ತೇನೆ. ನಾನು ವಿಠ್ಠಲನ ಹೊರತು ಬೇರೆ ದೇವರನ್ನು ಸ್ತುತಿ ಮಾಡಿದರೆ ನನ್ನ ನಾಲಿಗೆ ಸಾವಿರ ಹೋಳಾಗಲಿ.

ಹೇ ವಿಠ್ಠಲಾ, ನಿನ್ನ ಪಾದವನ್ನು ನಾನು ಬಿಡಲಾರೆ-ಬಿಡಲಾರೆ-ಬಿಡಲಾರೆ. ಎಂಥ ಸಂಕಟವೇ ಬಂದೆರಗಲಿ, ನನ್ನ ದೇಹವನ್ನು ತುಂಡು ತುಂಡು ಮಾಡಿ ಚೆಲ್ಲಲಿ, ಆದರೂ ನಾನು ಹೆದರಲಾರೆ. ಏಕೆಂದರೆ ನನ್ನ ಬುದ್ಧಿ ದೃಢವಾಗಿದೆ, ಜಾಗರೂಕವಾಗಿದೆ

ಬೇಕಾದರೆ ನನ್ನ ಮನವನ್ನು ಪರೀಕ್ಷಿಸು, ನನ್ನ ಚಿತ್ತ ನಿನ್ನಿಂದ ದೂರ ಸರಿಯಲಾರದು. ನನ್ನ ತಲೆ ನಿನಗೆ ಅರ್ಪಿಸುತ್ತೇನೆ. ಈ ನನ್ನ ನಿರ್ಣಯವು ಪಕ್ವವೋ, ಅಪಕ್ವವೋ, ಖಚಿತವೋ-ದುರ್ಬಲವೋ ಪರೀಕ್ಷಿಸಿ ನೋಡು. ನನ್ನ ತಲೆಯ ಮೇಲೆ ಸುತ್ತಿಗೆಯಿಂದ ಪ್ರಹಾರ ಮಾಡಿದರೂ ನಾನು ನಿನ್ನ ಪಾದ ತೊರೆಯಲಾರೆ. ನಾನು ಸತ್ತರೂ ಪ್ರಾಣ ಕಳಕೊಂಡರು, ಈ ಅನಂತತನ್ನು ಬಿಡಲಾರೆ.”

ಗೋಣು ಕೊಯ್ದರೂ ಬೇರೆ ಉಸುರಲಾರೆ

ಕೈಗೆತ್ತಿಕೊಂಡ ಕಾರ್ಯವನ್ನು ಯಾವ ಪರಿಸ್ಥಿತಿಯಲ್ಲೂ ಅರ್ಧಕ್ಕೆ ನಿಲ್ಲಿಸುವದಿಲ್ಲ ಎನ್ನುವದು ಅವನ ಮನೋ ನಿರ್ಧಾರವಾಗಿತ್ತು. ಹೀಗಾಗಿ ಯಾರೇ ಗೋಣು ಕೊಯ್ದರೂ ಬೇರೆ ಏನೂ ಉಸುರ ಬೇಡವೆಂದು, ಅವನು ತನ್ನ ನಾಲಿಗೆಗೆ ಆದೇಶ ನೀಡಿದ್ದ. ತನ್ನ ವಿವೇಕಕ್ಕೆ ಒಪ್ಪಿಗೆಯಾಗಿದ್ದು, ಯೋಗ್ಯವಾಗಿದ್ದೇ ಮಾತಾಡುವ ಅಭಿಮಾನ, ಈ ಕಾರಣಕ್ಕಾಗೇ ಅವನು ಇಲ್ಲಿಯ ಡಾಂಭಿಕ ವ್ಯವಸ್ಥೆಯ ಮೇಲೆ ಬಲವಾದ ಪ್ರಹಾರ ಮಾಡಿದ್ದು. ಅವನು ಈ ಬಗೆಯ ಅಭಂಗ ಬರೆಯಬಾರದು, ಉಸುರಬಾರದು ಎಂದು ಕೆಲವರು ಒತ್ತಾಯಿಸಿದ್ದರು. ಈ ಕಾರಣಕ್ಕಾಗೇ ಅವನ ಅಭಂಗಗಳನ್ನು ಮುಳುಗಿಸಲಾಯಿತು. ಆದರೂ ಯಾವುದೇ ಬೆದರಿಕೆಗೆ ಮಣಿದು ಅಭಂಗ ಲೇಖನವನ್ನು ನಿಲ್ಲಿಸುವಂತಿಲ್ಲ. ಹೊಂದಾಣಿಕೆ ಮಾಡಿಕೊಂಡು ಏನಾದರೂ ಬರೆಯುವದಾಗಲಿ, ಹೇಳುವದಾಗಲಿ ಮಾಡುವಂತಿಲ್ಲ ಎಂಬ ಖಚಿತ ನಿರ್ಧಾರವನ್ನು ಅವನು ತೆಗೆದುಕೊಂಡಿದ್ದ. ನಾರಾಯಣ ತನ್ನ ಆರಾಧ್ಯ ದೈವವಾಗಿದ್ದರಿಂದ, ತಾನು ಯೋಚಿಸಿಯೆ ಆಯ್ಕೆ ಮಾಡಿದ ಮಾರ್ಗದಿಂದ ಮುನ್ನಡೆಯುವಂತೆ ಅವನು ಇಂದ್ರಿಯಗಳಿಗೆ ತಿಳಿಸಿದ್ದ.

ತುಂಡು ಮಾಡಿ ಕೊಚ್ಚಿ ಹಾಕಿದರೂ ಹೆದರಲಾರೆ

ಮುಂಬಾಜಿ ಎಂಬವನು ತುಕಾರಾಮನನ್ನು ಅತ್ಯಂತ ಕ್ರೂರವಾದ ರೀತಿಯಲ್ಲಿ ಹಿಂಸಿಸಿದಾಗ, ತುಕಾರಾಮನು ಅತ್ಯಂತ ತೀವ್ರವಾಗಿ ಪ್ರತಿರೋಧಿಸಿ ಸಿಡಿದೆದ್ದಂತೆ ಕಾಣುತ್ತದೆ. ಕ್ಷಮಾಶೀಲ ಪ್ರವೃತ್ತಿಯವನಾದ ತುಕಾರಾಮನು ದೈಹಿಕವಾಗಿ ಯಾವ ಪ್ರತಿರೋಧವನ್ನು ಮಾಡಲಾರ ಎಂಬುದನ್ನು ಅರಿತೇ ಮುಂಬಾಜಿಯು ಅವನನ್ನು ಮುಳ್ಳಿನ ಕೊರೆಯಿಂದ ಥಳಿಸಿದನು. ಅಶ್ಲೀಲ ಹಾಗೂ ನೀತಿಗೆಟ್ಟ ರೀತಿಯಲ್ಲಿ ಬಯ್ದು, ತೀರಾ-ತೀರಾ ಅವಮಾನವನ್ನು ಮಾಡಿದ ಎಂದೂ ತುಕಾರಾಮನು ಹೇಳಿಕೊಂಡಿದ್ದಾನೆ. ಆದರೆ ಈ ಘಟನೆಯ ಬಗೆಗೆ ಕೆರಳದೆ, ಕ್ರೋಧವನ್ನು ನಿಯಂತ್ರಿಸಿದನು. ಅಲ್ಲದೆ ತನ್ನ ಜೀವನ ಕಾರ್ಯದ ಮೇಲಿನ ತನ್ನ ನಿಷ್ಠೆಯನ್ನು ಖಚಿತವಾದ ರೀತಿಯಲ್ಲಿ ನೋಂದಾಯಿಸಿದ್ದಾನೆ. ಎಂಥ ಸಂಕಟ ಬಂದೆರಗಿದರೂ, ನಾನು ನನ್ನ ಮಾರ್ಗ ಬಿಡಲಾರೆ ಎಂದೂ ಹೇಳಿದ್ದಾನೆ. ಶಸ್ತ್ರದಿಂದ ನನ್ನನ್ನು ತುಂಡುಮಾಡಿ ಕೊಚ್ಚಿ ಹಾಕಿದರೂ ನಾನು ಹೆದರಲಾರೆ ಎಂದಿದ್ದಾನೆ. ಇದೇನು ಕಾಲ್ಪನಿಕ ಪ್ರಸಂಗವಲ್ಲ, ಪೊಳ್ಳುಮಾತಿನ ಆಡಂಬರವೂ ಅಲ್ಲ. ಪ್ರತ್ಯಕ್ಷವಾಗಿ ರಕ್ತಸಿಕ್ತ ಮಾಡುವ, ಪ್ರಾಣಕ್ಕೆರವಾದ ಕಟು ಅನುಭವ ಪಡೆಯುವಾಗಲೇ ಈ ಹೇಳಿಕೆ ನೀಡಿದ್ದು. ಈ ಖಚಿತ ನಿರ್ಧಾರ ಎಲ್ಲಿಂದ ಬಂತು? ಎಂಬುದಕ್ಕೆ ಅವನು ಹೇಳುತ್ತಾನೆ: ಮೊದಲು ಬುದ್ದಿಯನ್ನು ಜಾಗರೂಕವಾಗಿ ದೃಢಗೊಳಿಸಿದ ಎಂದು ತನ್ನ ನಿಲುವಿನ ಮೀಮಾಂಸೆ ಮಾಡಿದ್ದಾನೆ. ಮೊದಲು ಎಚ್ಚರಿಕೆಯಿಂದ ಯೋಚಿಸಿ, ಬಳಿಕ ಖಚಿತ ನಿರ್ಧಾರ ಕೈಕೊಂಡೆ. ಇದು ಅವಸರದ, ಅವಿಚಾರದ ನಿರ್ಣಯವಲ್ಲ. ಮುಂದಾಗುವ ಭೀಷಣ ಪರಿಣಾಮವನ್ನು ಊಹಿಸಿಯೇ ತೆಗೆದುಕೊಂಡ ನಿರ್ಣಯವು ಅದಾಗಿದ್ದರಿಂದ ಹಿಂಜರಿಯುವ ಪ್ರಶ್ನೆಯೇ ಇಲ್ಲ.

ಸಾವಿಗಿಂತ ಮೊದಲೇ ಹೆಣವಾದೆ

ಎಂಥ ಭಯಂಕರ ಸಂಕಟ ಬಂದೆರಗಿದರೂ, ತಾನು ಕೈಕೊಂಡ ನಿರ್ಣಯದಿಂದ ಹಿಂಜರಿಯುವ ಹಾಗಿಲ್ಲ. ಇಂಥ ಉಜ್ವಲ ನಿಷ್ಠೆ-ಧ್ಯೇಯ ತುಕಾರಾಮನಿಗೆ ಎಲ್ಲಿಂದ ಬಂತು ಎನ್ನುವದು ಅವನ ಒಂದು ಅಭಂಗದಿಂದ ಅನಾವರಣಗೊಳ್ಳುತ್ತದೆ. ತಾನು ಸಂಕಟದಿಂದ ಹೆದರುವ ಜನರಿಗಿಂತ ಭಿನ್ನವಾಗಿದ್ದೇನೆ ಎಂದವನು ತನ್ನ ಅಭಂಗದಲ್ಲಿ ಹೇಳಿಕೊಂಡಿದ್ದಾನೆ. ಈ ಅಭಂಗದ ಮೊದಲೆರಡು ಸಾಲು ಸ್ವಾತಂತ್ರ್ಯದ ಮೌಲ್ಯಕ್ಕಾಗಿ ಹೋರಾಡುವವನು ಏನು ಮಾಡಬೇಕು ಎಂಬ ಆದರ್ಶವನ್ನು ಹೇಳಲಾಗಿದೆ. ಸಾವಿಗಿಂತ ಮೊದಲೇ ಹೆಣವಾಗಿದ್ದೇನೆ. ಹೀಗಾಗಿ ಮನಸ್ಸು ನಿರ್ಧರಿಸಿದಂತೆ ಮಾಡಿದೆ. ಜೀವಂತವಾಗಿದ್ದಾಗಲೇ ಸಾವನ್ನು ಅನುಭವಿಸಿದ್ದೇನೆ ಬಳಿಕ ಮನ ತೋಚಿದಂತೆ ಮಾಡಿದ್ದೇನೆ. ತನ್ನ ದೂರದೃಷ್ಟಿ, ನ್ಯಾಯ ದೃಷ್ಟಿಯಿಂದ ಸಮಾಜಕ್ಕೆ ಹೊಸ ತಿರುವು ನೀಡಲು ಬಯಸುವ ಮನುಷ್ಯನು, ಹಳೆಯ ವ್ಯವಸ್ಥೆಯಲ್ಲಿದ್ದ ದೋಷವನ್ನು ದೂರ ಸರಿಸಿ, ಹೊಸದನ್ನು ನಿರ್ಮಾಣ ಮಾಡಲು ಬಯಸುತ್ತಾನೆ. ಹೊಸದಾಗಿ ಯೋಚಿಸುತ್ತಾನೆ. ಹೊಸ ಕನಸು ಕಾಣುತ್ತಾನೆ. ಆದರೆ ಅವನು ಮನದಲ್ಲಿ ಮೂಡಿದ ಹೊಸದನ್ನು ಪ್ರತ್ಯಕ್ಷವಾಗಿ ಅರಳಿಸುವ ಪ್ರಯತ್ನ ಮಾಡಿದಾಗ, ವ್ಯವಸ್ಥೆಯ ಗುತ್ತಿಗೆದಾರರು ಅವನ ಮೇಲೆ ಹಲ್ಲೆ ಮಾಡುತ್ತಾರೆ. ಇಂಥ ಕಾಲಕ್ಕೆ ಮನುಷ್ಯ ದುರ್ಬಲನಾಗಿದ್ದರೆ, ದುರ್ಬಲ ನಿಷ್ಠೆ ಹೊಂದಿದವನಾಗಿದ್ದರೆ, ವಿಚಾರ ಸ್ವಾತಂತ್ರ್ಯಕ್ಕಿಂತ ತತ್ಕಾಲದ ಸುಖವೇ ಮಹತ್ವದ್ದು ಎಂದು ಭಾವಿಸಿದರೆ ಅವನು ಹಿಂದಕ್ಕೆ ಸರಿಯುತ್ತಾನೆ. ಮನದಲ್ಲಿ ಮೂಡಿದ ವಿಚಾರವನ್ನು ಕೈಬಿಟ್ಟು ಶರಣಾಗತಿ ಸ್ವೀಕರಿಸುತ್ತಾನೆ. ಆದರೆ ಕೆಲವರು ಎಂಥವರಿರುತ್ತಾರೆಂದರೆ, ತಮ್ಮ ವಿಚಾರದ ಎದುರಿಗೆ ಜಗತ್ತಿನ ಉಳಿದ ಸಂಗತಿಗಳೆಲ್ಲ ತುಚ್ಛವೆನಿಸುತ್ತವೆ. ತಾನೆತ್ತಿದ ಹೆಜ್ಜೆ ತನ್ನನ್ನು ಮೃತ್ಯುಕೂಪಕ್ಕೆ ತಳ್ಳುತ್ತದೆ ಎನ್ನುವದು ಗೊತ್ತಿದ್ದು, ಅದು ಬೆಳಕಿನಂತೆ ಸ್ಪಷ್ಟವಾಗಿ ಗೋಚರಿಸುತ್ತಿದ್ದರೂ ಲೆಕ್ಕಿಸುವದಿಲ್ಲ. ಕೊನೆ ನಾಡಿ ಮಿಡಿತ, ಕೊನೆಯ ಉಸಿರನ್ನೂ ಅನುಭವಿಸುತ್ತಾರೆ. ತುಕಾರಾಮನು ಅನುಭವಿಸಿದ್ದೂ ಅದೇ. ತಾನು ಆಯ್ದುಕೊಂಡ ಹಾದಿಯ ಖಚಿತ ದಿಕ್ಕೂ ಗೊತ್ತಿರುತ್ತದೆ. ಅವನು ಎತ್ತಿದ ಹೆಜ್ಜೆ ಅಜಾಗರೂಕತನದ್ದಲ್ಲ, ಸಾವಿಗಿಂತ ಮೊದಲೇ ಸಾವು ಅನುಭವಿಸಿದ ಬಳಿಕ ಮನಕ್ಕೆ ತೋಚಿದಂತೆ ಮಾಡಿದ ತುಕಾರಾಮನ ಮಾತು ಅವನ ಚರಿತ್ರೆಗೆ ಮಹಾಕಾವ್ಯದ ವಿಷಯವನ್ನು ಒದಗಿಸುವಂತಹದು.