ಹಿಂಸೆಗೆ ಧರ್ಮಶಾಸ್ತ್ರದ ಬೆಂಬಲ

ತುಕಾರಾಮನನ್ನು ಕೋಲಿನಿಂದ ಥಳಿಸುವದಕ್ಕೆಲ್ಲ ನಾವು ಹಿಂಸೆ ಎಂದು ಕರೆದರೂ ಧರ್ಮಶಾಸ್ತ್ರದ ನಿಲುವು ಹಾಗಿರಲಿಲ್ಲ ಎಂಬುದೂ ಗಮನಿಸಬೇಕಾದ ಸಂಗತಿ. ಅವರ ದೃಷ್ಟಿಯಲ್ಲಿ ಈ ಬಗೆಯ ಕಾರ್ಯವೆಂದರೆ, ಧರ್ಮಶಾಸ್ತ್ರದ ನಿಯಮ ಪಾಲಿಸಿದಂತಾಗುತ್ತಿತ್ತು. ಶೂದ್ರರಿಗೆ ಈ ಬಗೆಯ ಶಿಕ್ಷೆ ನೀಡಬೇಕೆಂದು ಧರ್ಮಶಾಸ್ತ್ರದ ಆದೇಶವಾಗಿತ್ತು. ಅದೂ ಅಲ್ಲದೆ, ಕೋಲಿನಿಂದ ಥಳಿಸುವದು, ಕಿವಿಯಲ್ಲಿ ಕಾದ ಎಣ್ಣೆ, ಸೀಸ, ಅರಗನ್ನು ಸುರಿಯುವುದು, ನಾಲಿಗೆಗೆ ಕಾದ ಮೊಳೆ ಚುಚ್ಚುವದು ಈ ಬಗೆಯ ಶಿಕ್ಷೆಯನ್ನು ಜಾರಿಗೊಳಿಸುವಾಗ, ಶಿಕ್ಷೆಗೊಳಗಾದ ವ್ಯಕ್ತಿಯು ಸಹಜವಾಗಿ ಸಾಯುತ್ತಿದ್ದ. ಬಾಹ್ಯನೋಟಕ್ಕೆ ಈ ಶಿಕ್ಷೆಯು ಘೋರ ಎಂದೆನಿಸದಿದ್ದರೂ ಸಾವು ತರುವಂಥದಾಗಿತ್ತು ಎಂದರೂ ಅಚ್ಚರಿಪಡಬೇಕಿಲ್ಲ. ಕೋಲಿನಿಂದ ಥಳಿಸುವದನ್ನು ಸಾಯುವವರೆಗೂ ಹೊಡೆಯಬಹುದಾಗಿತ್ತು. ಇದರ ಅರ್ಥವಿಷ್ಟೇ ತುಕಾರಾಮನು ಧರ್ಮಶಾಸ್ತ್ರದ ವಿರೋಧದಲ್ಲಿ ಮಾಡಿದ ತಪ್ಪಿಗೆ ಧರ್ಮಶಾಸ್ತ್ರದ ನಿಯಮದಂತೆ ಅವನಿಗೆ ಸಾವು ಸಂಭವಿಸುವಂತಹ ಶಿಕ್ಷೆಯನ್ನು ನೀಡುವ ಸಾಧ್ಯತೆಯಿತ್ತು. ಜತೆಗೆ, ಶೂದ್ರನು ಬ್ರಹ್ಮಹತ್ಯೆ ಮಾಡಿದರೆ ಅವನಿಗೆ ಮೃತ್ಯುದಂಡವನ್ನು ನೀಡಬಹುದು ಎಂದು ಶಾಸ್ತ್ರ ಹೇಳುತ್ತದೆ. ವೇದವನ್ನು ನಿಂದಿಸುವದು ಬ್ರಹ್ಮಹತ್ಯೆಗೆ ಸಮಾನವಾದ ಪಾಪವೆಂದು ಭಾವಿಸಲಾಗಿತ್ತು. ತುಕಾರಾಮನ ವೇದದ ಕುರಿತು ಮಾಡಿದ ಟೀಕೆಯೂ ವೇದ ನಿಂದೆಯೆಂದು ನಿರ್ಧರಿಸಬಹುದು. ಹೀಗಾಗಿ ಈ ಕಾರ್ಯವು ಬ್ರಹ್ಮಹತ್ಯೆಗೆ ಸಮಾನವಾದ ಪಾಪವೆಂದು ಪರಿಗಣಿಸಿ ಅವನಿಗೆ ಮೃತ್ಯುದಂಡವನ್ನು ನೀಡುವ ಸಾಧ್ಯತೆಯಿತ್ತು. ಬಹಿರಂಗದಲ್ಲಿ ಅಲ್ಲದಿದ್ದರೂ, ಖಾಸಗಿಯಾಗಿ ಧರ್ಮದ್ರೋಹಿ ಮನುಷ್ಯನಿಗೆ ತಕ್ಕ ಶಾಸ್ತಿ ಮಾಡಿದ ರೀತಿಯಲ್ಲಿ ಪ್ರತಿಕ್ರಿಯೆ ಮೂಡುವಂತೆ ತುಕಾರಾಮ ಹತ್ಯೆಗಯ್ಯುವುದರಿಂದ ಧರ್ಮ ಕೃತ್ಯ ಮಾಡಿದ ಸಮಾಧಾನ ಕೆಲವರಿಗೆ ಸಿಗುವ ಸಾಧ್ಯತೆಯಿತ್ತು. ತಾತ್ಪರ್ಯ ; ತುಕಾರಾಮನ ಹತ್ಯೆಗೆ ಧರ್ಮಶಾಸ್ತ್ರದ ಬೆಂಬಲ ಸಿಗುವ ಸಾಧ್ಯತೆಯಿತ್ತು.

ಈ ವಿಷಯಕ್ಕೆ ಸಂಬಂಧಿಸಿದ ಕೇವಲ ಸಾಮಾನ್ಯ ನಿಯಮವನ್ನು ಗಮನಿಸುವದಕ್ಕಿಂತ ತುಕಾರಾಮನಿಗೆ ಹತ್ಯೆಯ ಶಿಕ್ಷೆ ನೀಡುವ ಆದೇಶದ ಕೆಲವು ಮನುಸ್ಮೃತಿಯ ನಿಯಮದ ಕಡೆಗೆ ನೋಟ ಹರಿಸುವದು ಸೂಕ್ತ: ಬ್ರಾಹ್ಮಣನ ಮೇಲೆ ದೋಷ ಹೊರಿಸಿದರೆ ಶೂದ್ರನ ವಧೆ ಮಾಡಬೇಕು, ಶೂದ್ರನು ದಾರುಣವಾಣಿಯಿಂದ ದ್ವಿಜನ ನಿಂದೆಯನ್ನು ಮಾಡಿದರೆ, ಅವನ ನಾಲಿಗೆ ಕಿತ್ತೆಸಯಬೇಕು, ಏಕೆಂದರೆ, ಅವನು ಹುಟ್ಟಿನಿಂದ ಹೀನನಾಗಿರುತ್ತಾನೆ. ಬ್ರಾಹ್ಮಣನ ಜಾತಿ ನಿಂದನೆ ಮಾಡಿದರೆ ಶೂದ್ರನ ಬಾಯಲ್ಲಿ ಹತ್ತು ಬೆರಳುದ್ದದ ಕಾದ ಮೊಳೆಯನ್ನು ಚುಚ್ಚಬೇಕು. ಶೂದ್ರನು ದರ್ಪದಿಂದ ಬ್ರಾಹ್ಮಣರಿಗೆ ಧರ್ಮೋಪದೇಶ ಮಾಡಿದರೆ ರಾಜನು ಅವನ ಕಿವಿ ಮತ್ತು ಬಾಯಲ್ಲಿ ಕಾದ ಎಣ್ಣೆ ಸುರಿಯಬೇಕು. ಧರ್ಮಕ್ಕೆ ಸಂಕಟ ಬಂದಲ್ಲಿ, ಧರ್ಮಾಚರಣೆ ಅಡ್ಡಿಯುಂಟಾದಲ್ಲಿ ದ್ವಿಜನು ಶಸ್ತ್ರ ಹಿಡಿಯಬೇಕು. ವಿವಿಧ ದಕ್ಷಿಣೆಯ ಸಂಘರ್ಷಕ್ಕಾಗಿ, ಸ್ತ್ರೀಯರ-ಬ್ರಾಹ್ಮಣರ ಸಂರಕ್ಷಣೆಗಾಗಿ ಧರ್ಮದ ಆಧಾರದಿಂದ ಯಾರ ಹತ್ಯೆ ಮಾಡಿದರೂ ಪಾಪ ಅಂಟಿಕೊಳ್ಳುವುದಿಲ್ಲ.

ತುಕಾರಾಮನು ವೇದ, ಯಜ್ಞಾದಿ ಕರ್ಮಕಾಂಡ, ವರ್ಣ ವ್ಯವಸ್ಥೆ ಮುಂತಾದ ಬ್ರಾಹ್ಮಣ ಮೌಲ್ಯದ ಮೇಲೆ ಮಾಡಿದ ಕಠೋರ ಹಲ್ಲೆಯನ್ನು ಗಮನಿಸಿದಾಗ, ಮೇಲಿನ ಎಲ್ಲ ಮನುಸ್ಮೃತಿಯ ನಿಯಮವು ತುಕಾರಾಮನ ಹತ್ಯೆಗೆ ಶಿಫಾರಸ್ಸು ಮಾಡುವಂತಹದಾಗಿದೆ ಎಂಬುದು ಸತ್ಯ. ಅವನು ಬ್ರಾಹ್ಮಣರ ಮೇಲೆ ದೋಷ ಹೊರಿಸಿದ್ದರಿಂದ ವಧೆಗೆ ಪಾತ್ರನಾಗುತ್ತಾನೆ. ಬ್ರಾಹ್ಮಣರ ನಿಂದೆ ಮಾಡಿದ್ದರಿಂದ ಅವನ ನಾಲಿಗೆ ಕಿತ್ತೆಸೆಯಬಹುದಾಗಿದೆ. ಬ್ರಾಹ್ಮಣರನ್ನು ಕುರಿತು ಜಾತಿ ನಿಂದನೆಯನ್ನು ಮಾಡಿದ್ದರಿಂದ ಬಾಯಲ್ಲಿ ಕಾದ ಮೊಳೆ ಚುಚ್ಚಬಹುದು, ಬ್ರಾಹ್ಮಣರಿಗೆ ದರ್ಪದಿಂದ ಧರ್ಮೋಪದೇಶ ಮಾಡಿದ್ದರಿಂದ ಅವನ ಕಿವಿ, ಬಾಯಿಯಲ್ಲಿ ಕಾದ ಎಣ್ಣೆ ಸುರಿಯಬಹುದಾಗಿದೆ. ಬ್ರಾಹ್ಮಣರ ಧರ್ಮಕ್ಕೆ ಅಡ್ಡಿಯುಂಟು ಮಾಡಿದ್ದರಿಂದ ಬ್ರಾಹ್ಮಣರು ಅವರ ವಿರುದ್ಧ ಶಸ್ತ್ರ ಎತ್ತಬಹುದು, ದಕ್ಷಿಣೆಯು ಮುಳುಗಿದ್ದರಿಂದ ತುಕಾರಾಮನ ಹತ್ಯೆಯನ್ನು ಮಾಡಿದರೂ ಪಾಪವಲ್ಲ ಎಂದಾಗುತ್ತದೆ.

ನಾನಿದನ್ನು ಹೇಳುವದು ನನ್ನ ದೃಷ್ಟಿಕೋನದಿಂದಲ್ಲ, ಧರ್ಮಶಾಸ್ತ್ರದ ದೃಷ್ಟಿಕೋನದಿಂದ ಎಂಬುದನ್ನು ಗಮನಿಸಬೇಕು. ಧರ್ಮಶಾಸ್ತ್ರ ಕೈಯಲ್ಲಿದ್ದವರು, ಭಾರತದ ಇತಿಹಾಸದಲ್ಲಿ ಈ ನಿಯಮವನ್ನು ಜಾರಿಗೊಳಿಸಿರುವುದನ್ನು ಹಲವು ಬಾರಿ ಕಾಣಬಹುದು. ತಮ್ಮ ಹಿತಾಸಕ್ತಿಗೆ ಸಂಕಟ ಬಂದೆರಗಿದ್ದೇ ತಡ, ಧರ್ಮದ ಬುರ್ಖಾ ಧರಿಸಿ ವಿರೋಧಕರನ್ನು ಹಿಂಸಿಸುವದು, ಹತ್ಯೆ ಮಾಡುವ ಕಾರ್ಯ ಆಗಾಗ ನಡೆದಿದೆ. ಚಾರ್ವಾಕನನ್ನು ಜೀವಂತ ಸುಟ್ಟರು, ವೇನರಾಜನನ್ನು ಕೊಲ್ಲಲಾಯಿತು. ನಿಮಿರಾಜನ ಹತ್ಯೆ ಮಾಡಲಾಯಿತು. ಈ ಜನ ತಮ್ಮ ಧರ್ಮ ಮುಳುಗಿಸುತ್ತಾರೆಂಬ ಆರೋಪ ಅವರ ಮೇಲಿತ್ತು. ಆನಂತರದ ಕಾಲದಲ್ಲಿ ಜ್ಞಾನೇಶ್ವರನ ತಾಯ್ತಂದೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಿಸಿದರು. ಚಕ್ರಧರನ ರುಂಸ ಚೆಂಡಾಡಿದ ವರ್ಣನೆಯು ಲೀಳಾ ಚರಿತ್ರೆಯಲ್ಲಿ ಮಾಡಲಾಗಿದೆ. ಖಡ್ಗದಿಂದ ಹೊಡೆದಾಗ ಶ್ರೀಕಮಲ ಒಂದೆಡೆ, ಶ್ರೀಮೂರ್ತಿ ಮತ್ತೊಂದೆಡೆಗೆ ಬಿತ್ತು. ಆಧುನಿಕ ಕಾಲದಲ್ಲಂತೂ ಪುಲೆ, ಅಂಬೇಡ್ಕರ್, ಶಾಹೂಮಹಾರಾಜರ ವಿರುದ್ಧ ಕೊಲೆಗಡುಕರನ್ನು ಕಳಿಸಲಾಯಿತು. ಮಹಾತ್ಮಾ ಗಾಂಧಿಯ ಹತ್ಯೆಯನ್ನೇ ಮಾಡಲಾಯಿತು. ಇದೆಲ್ಲವನ್ನು ಧರ್ಮದ ಹೆಸರಿನಲ್ಲೇ ಮಾಡಲಾಯಿತು. ಯಾರು ಧರ್ಮದ ಕ್ಷೇತ್ರದಲ್ಲಿ ಪ್ರವೇಶಿಸಿ ಸ್ವಾರ್ಥ, ಢೋಂಗಿ, ಕಪಟದಂತಹ, ಅನೈತಿಕ ವಿಷಯದ ಮೇಲೆ ಎರಗಿ ಧಾರ್ಮಿಕ ಶುದ್ಧಿಕರಣಕ್ಕೆ ಪ್ರಯತ್ನಿಸಿದರೋ, ಅವರೆಲ್ಲ ಅತೀ ದೊಡ್ಡ ಬಲಿದಾನ ನೀಡಬೇಕಾಯಿತು. ಈ ಹಿನ್ನೆಲೆಯಲ್ಲಿ ತುಕಾರಾಮನ ಜೀವನವನ್ನು ಗಮನಿಸಿದರೆ, ತುಕಾರಾಮನ ಹತ್ಯೆ ಮಾಡಲಾಗಿದೆ ಎಂಬ ನಿರ್ಣಯಕ್ಕೆ ಸಹಜವಾಗಿ ಬರಬೇಕಾಗುತ್ತದೆ.

ಧೂಲಿವಂದನೆಯ ರಾತ್ರಿ ತುಕಾರಾಮನ ಮೇಲೆ ಕೆಸರು ಎರಚಲಾಯಿತು.

ತುಕಾರಾಮನ ಸಾವಿನ ವಿಷಯದಲ್ಲಿ ಕವಡೆಯವರು ಮಾಡಿದ ಹೋಳಿಯ ವರ್ಣನೆಯು ಅತ್ಯಂತ ಮಹತ್ವದ್ದು ಮತ್ತು ಅರ್ಥಪೂರ್ಣವಾಗಿದ್ದು, ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ.

ಫಾಲ್ಗುಣ ವದ್ಯ ದ್ವಿತೀಯೆಯ ದಿನ ಬೆಳಿಗ್ಗೆ ತುಕಾರಾಮನು ‘ಅದೃಶ್ಯ’ ನಾಗಿದ್ದು ಗಮನಕ್ಕೆ ಬಂತು. ಅಂದರೆ ಪ್ರಥಮೆಯ ಸೂರ್ಯಾಸ್ತದಿಂದ ದ್ವಿತೀಯೆಯ ಸೂರ್ಯೋದಯದ ವರೆಗಿನ ಕಾಲದಲ್ಲಿ ಅವನು ‘ಅದೃಶ್ಯ’ ನಾದ. ಈ ಪ್ರಥಮೆಯನ್ನು ನಾವು ‘ಧೂಲಿವಂದನೆ’ ಎಂದು ಆಚರಿಸುತ್ತೇವೆ. ಧೂಳಿವಂದನೆಯ ಮೊದಲ ದಿನ ಅಂದರೆ ಫಾಲ್ಗುಣ ಹುಣ್ಣಿಮೆಯ ದಿನ ಹೋಳಿ ಹುಣ್ಣಿಮೆಯಿರುತ್ತದೆ.

ಹೋಳಿಯ ದಿನ ಜನರ ಮಾತು-ವರ್ತನೆಯ ಮೇಲೆ ನಿಯಂತ್ರಣವಿರುವದಿಲ್ಲ. ಕಟ್ಟಿಗೆಯ ಕಳ್ಳತನ, ಬೊಬ್ಬೆ ಹಾಕುವದು, ಆಶ್ಲೀಲ ಮಾತಾಡುವದಕ್ಕೆ ಧರ್ಮಶಾಸ್ತ್ರವೇ ಅನುಮತಿ ನೀಡಿದಾಗ ಯಾರದೇನು ಹಂಗು? ಎಲ್ಲೆಡೆ ಸ್ವೈರಾಚಾರದ ಆಚರಣೆ. ಹುಣ್ಣಿಮೆಯ ದಿನ ಹೋಳಿಗೆ, ಧೂಲಿವಂದನೆಯ ದಿನ ಮದ್ಯ-ಮಾಂಸಗಳ ಯಥೇಚ್ಛ ಸೇವನೆ, ಹತ್ತಿಕ್ಕಿದ ಆಕ್ರೋಶ, ಸಿಟ್ಟು, ಸೇಡು ತೀರಿಸಿಕೊಳ್ಳಲು ಸೊಗಸಾದ ಅವಕಾಶ. ಧೂಳಿವಂದನೆಯ ದಿನ ಹೋಳಿಯ ಬೂದಿಯನ್ನು ಕೆಸರಿನೊಂದಿಗೆ ಸೇರಿಸಿ ‘ಎರಚಾಟ’ ನಡೆಸುವದು, ನಿಜವಾಗಿ ಹೊರಗೆ ನೋಡಿದರೆ, ವರ್ಷವಿಡೀ ಹತ್ತಿಕ್ಕಿದ ಅಸತ್ಯವನ್ನು ಹೊರಗೆ ಹಾಕಿ ಸ್ವಂತದ ಶುದ್ಧೀಕರಣ ಮಾಡುವದು. ಯುಗಾದಿಯಂದು ಆರಂಭಗೊಳ್ಳುವ ಹೊಸ ವರುಷವನ್ನು ಆರಂಭಿಸುವಾಗ ಶುಚಿರ್ಭೂತ, ಪವಿತ್ರ ಅವಸ್ಥೆ ಪ್ರಾಪ್ತಮಾಡಿಕೊಳ್ಳುವ ಪ್ರಯತ್ನವಿರಬೇಕು. ಅಂದರೆ ಮೂಲ ಉದ್ದೇಶ ಹಾಗೆಯೇ ಉಳಿದು ಸ್ವೈರಾಚಾರ ವರ್ತನೆ ಮಾತ್ರ ಆರಂಭಗೊಂಡಿತ್ತು. ಅಂಥದರಲ್ಲಿ ರೂಢಿಯ ಆಚರಣೆಯ ಮುಸುಕಿನಲ್ಲಿ ವಿಕೃತ ವರ್ತನೆಯ ಚಟ ತೀರಿಸಿಕೊಳ್ಳುವ ಜನರೂ ಇರುತ್ತಾರೆ. ಭೀತಿಯನ್ನು ಹಾಕಿ ತಮ್ಮ ಪರಪೀಡಿನೆಯ ವೃತ್ತಿಯನ್ನು ತೃಪ್ತಿಪಡಿಸುವದು, ಸಾಧ್ಯವಾದೆ ಸೇಡೂ ತೀರಿಸಿಕೊಳ್ಳುವದು. ಅಂಧು ಧರ್ಮದ ಹೆಸರಿನಲ್ಲಿ ಜರುಗುವ ಎಲ್ಲ ಅತಿರೇಕದ ಕೃತಿಗಳಿಗೆ ಮುಕ್ತ ಅವಕಾಶವಿರುತ್ತದೆ.

ಒಂದು ವೇಳೆ ತುಕಾರಾಮನು ಸದೇಹಿಯಾಗಿ ವೈಕುಂಠಕ್ಕೆ ತೆರಳಿದನು ಎಂಬುದನ್ನು ಒಪ್ಪಿಕೊಳ್ಳುವದಾದರೆ, ಅವನು ವೈಷ್ಣವನಿಗೆ ಪ್ರಿಯವಾದ ಏಕಾದಶಿಯನ್ನು ಆಯ್ದುಕೊಳ್ಳದೆ, ಧೂಳಿವಂದನೆಯ ದಿನವನ್ನು ಆಯ್ಕೆ ಮಾಡಿಕೊಂಡಿದ್ದೇಕೆ ಎಂಬ ಪ್ರಶ್ನೆ ಏಳುತ್ತದೆ. ವೈಷ್ಣವನಿಗೆ ಎಲ್ಲ ಕಾಲವು ಶುಭಗಳಿಗೆಯೇ ಎಂಬುದು ಅವನ ಭಾವನೆಯಾಗಿತ್ತು ಎನ್ನುವದಂತೂ ನಿಜ. ಅದರ ಜತೆಗೆ ಪಾರಲೌಕಿಕಕ್ಕೆ ಹೋಗುವ ಇಚ್ಛೆಯನ್ನು ಅವನೆಂದೂ ಹೊಂದಿರಲಿಲ್ಲ ಎನ್ನುವದೂ ಅಷ್ಟೇ ನಿಜ. ಆದರೂ ಏಕಾದಶಿಯಂದು ಏಕೆ ವೈಕುಂಠಕ್ಕೆ ಹೋಗಲಿಲ್ಲ ಎಂಬ ಪ್ರಶ್ನೆಯ ಉತ್ತರ ಮಾತ್ರ ಹಾಗೆ ಉಳಿಯುತ್ತದೆ. ಅಲ್ಲದೆ ಧೂಲಿವಂದನೆಯು ಕೀರ್ತನೆಗೆ ಯೋಗ್ಯ ದಿನವಾಗಿತ್ತು ಎನ್ನುವಂತೆಯೂ ಇಲ್ಲ. ಧೂಲಿವಂದನೆಯ ದಿನ ಮೇಲೆ ವಿವರಿಸಿದ ವರ್ಣನೆಯಿರಬೇಕಾದರೆ ಕೀರ್ತನೆಯ ಕಾರ್ಯಕ್ರಮ ಯಶಸ್ವಿಯಾಗಿ ಹೇಗೆ ಜರುಗುವದು ಸಾಧ್ಯ? ಕೀರ್ತನೆಗಾಗಿ ಜನ ಹೊರಗಾದರೂ ಹೇಗೆ ಬಂದಾರು? ಅಂಥದರಲ್ಲಿ ಊರ ವಸತಿಯಿರುವಲ್ಲಿ ಕೀರ್ತನೆಯ ವ್ಯವಸ್ಥೆ ಮಾಡದೆ, ಊರ ಹೊರಗೆ ಕೀರ್ತನೆಯನ್ನು ಇಟ್ಟಾಗ ಧೂಳಿವಂದನೆಯ ದಿನ ಜನರಾದರೂ ಹೇಗೆ ಬಂದಾರು? ಇದರ ಅರ್ಥವಿಷ್ಟೇ, ಆದಿನ ತುಕಾರಾಮನನ್ನು ವಂಚಿಸಿ, ಬಲವಂತದಿಂದ ಊರ ಹೊರಗೆ ಕರೆದೊಯ್ಯುವ ಮತ್ತು ಏನಾದರೂ ಹತ್ಯೆ ಮಾಡುವ ಉಪದ್ವ್ಯಾಪವನ್ನು ಕೆಲ ಜನರು ಯೋಜಿಸಿರಬೇಕು. ತುಕಾರಾಮನ ಸಾವಿನ ವಿವೇಚನೆಯನ್ನು ಕೈಕೊಳ್ಳುವಾಗ ಈ ಸರ್ವ ಪರಿಸ್ಥಿತಿಯನ್ನು ತೇಲಿಸಿ ನಿರ್ಲಕ್ಷಿಸುವದೆಂದರೆ ಏನಾದರೂ ಮರೆಮಾಚುವ ಉದ್ದೇಶಪೂರ್ವಕ ಪ್ರಯತ್ನ ನಡೆದಿದೆ ಎಂದೇ ಅರ್ಥ್ಯಸಬೇಕಾಗುತ್ತದೆ.

ಸಾವಿನ ನಂತರದ ಘಟನೆಯು ಸೂಚಿಸುವದೇನು ?

ತುಕಾರಾಮನ ಸಾವಿನ ಸಂದರ್ಭದಲ್ಲಿ ಮುಂದಿನ ಸಂಗತಿಯನ್ನು ಗಮನಿಸಬೇಕಾದ ಅಗತ್ಯವಿದೆ. ತುಕಾರಾಮನ ಸಾವಿನ ಬಳಿಕ ಜಿಜಾಯಿ ಮಕ್ಕಳೊಂದಿಗೆ ತವರಿಗೆ ಹೊರಟು ಹೋದಳು. ಅವಳೆಂದೂ ಮರಳಿ ಬರಲಿಲ್ಲ. ಮಕ್ಕಳೂ ಸಹ ಸುಮಾರು ೨೦-೨೫ ವರ್ಷಗಳ ನಂತರ ದೇಹೂಗೆ ಮರಳಿದವರು. ತುಕಾರಾಮನ ಕಿರಿಯ ತಮ್ಮನೂ ದೇಹೂ ತೊರೆದು ತನ್ನ ಮಾವನ ಊರಿಗೆ ಹೋಗಿ ವಾಸಿಸಿದ. ಅವನೂ ಎಂದೂ ಮರಳಿ ಬರಲಿಲ್ಲ.

ತುಕಾರಾಮನ ಸಾವಿನ ಬಳಿಕ ಅವನ ಮನೆ ಮಾರು ಎಲ್ಲ ಬ್ರಾಹ್ಮಣರ ಕೈಗೆ ಹೋಯಿತು. ತುಕಾರಾಮನ ಹದಿನೈದು ಬಿಘಾ ಹೊಲ ಅರ್ಧಭಾಗ ಮುಂಬಾಜಿ ಬುವಾ ಮತ್ತು ಅರ್ಧಭಾಗ ಪೀಲೂ ಶೇಠ ಎಂಬ ಗೃಹಸ್ಥನ ಕೈಗೆ ಹೋಯಿತು, ಮತ್ತೂ ಒಂದು ತುಂಡು ಹೊಲ ಮುಂಬಾಜಿಗೆ ಸಿಕ್ಕಿತು. ತುಕಾರಾಮ ಸದೇಹಿಯಾಗಿ ಸ್ವರ್ಗಕ್ಕೆ ಹೋಗಿರುವದರಿಂದ ಅವನ ಅಂತ್ಯಸಂಸ್ಕಾರ ಮಡುವಂತಿಲ್ಲವೆಂದು ರಾಮೇಶ್ವರ ಭಟ್ಟನು ಹೇಳಿಯೂ ಸಹ ಬ್ರಾಹ್ಮಣರ ಭೋಜನ ಮಾತ್ರ ನಡೆಯಿತು.

ತುಕಾರಾಮನ ಸಾವಿನ ಕುರಿತು ಯೋಚಿಸುವಾಗ ಈ ಘಟನೆಗಳೆಲ್ಲವನ್ನು ಅತ್ಯಂತ ಗಾಂಭೀರ್ಯದಿಂದ ಪರಿಗಣಿಸಬೇಕಾಗುತ್ತದೆ. ಆದರೆ ಕವಡೆ, ಸಾವರಕರರಂತಹ ಕೆಲವು ಲೇಖಕರನ್ನು ಹೊರತು ಪಡಿಸಿ, ಹಲವು ಲೇಖಕರು ಈ ಘಟನೆಯು ಜರುಗಲೇ ಇಲ್ಲ ಅಥವಾ ಈ ಘಟನೆಗೂ ತುಕಾರಾಮನ ಸಾವಿಗೂ ಯಾವುದೇ ಸಂಬಂಧವಿಲ್ಲವೆಂಬಂತೆ ಉಪೇಕ್ಷಿಸಿದ್ದು ಕಂಡುಬರುತ್ತದೆ. ಬೇಂದ್ರೆ ಈ ಘಟನೆಗಳ ಕುರಿತು ಆಗಾಗ ತಪಶೀಲಾಗಿ ಮಾಹಿತಿ ನೀಡುತ್ತಾರೆ. ಅತ್ಯಂತ ಮಹತ್ವದ ಮಾಹಿತಿಯಾಗಿರುವದರಿಂದ ನಾವು ಬೇಂದ್ರೆಯವರಿಗೆ ಕೃತಜ್ಞರಾಗಿರಬೇಕು. ಆದರೆ ಆ ಮಾಹಿತಿಯ ಅನ್ವಯಾರ್ಥವೇನು? ಒಂದು ಕೋಣೆಯಿಂದ ಮತ್ತೊಂದು ಕೋಣೆಗೆ ಹೋಗುವಷ್ಟು ಸಹಜವಾಗಿ ಬೇಂದ್ರೆಯವರು ಬಣ್ಣಿಸಿದ್ದು ಕಂಡುಬರುತ್ತದೆ. ವಾಸ್ತವವಾಗಿ ತುಕಾರಾಮನ ಸಾವಿನ ರಹಸ್ಯವು ಅನಾವರಣಗೊಳ್ಳುವ ದೃಷ್ಟಿಯಿಂದ ಈ ಘಟನೆಯು ಅತ್ಯಂತ ಸೂಚಕವೂ, ಮಹತ್ವಪೂರ್ಣವೂ ಮತ್ತು ನಿರ್ಣಾಯಕವೂ ಆಗುವ ಸಾಧ್ಯತೆಯಿದೆ ಎಂದು ನನಗನಿಸುತ್ತದೆ.

ಮರುದಿನವೇ ಜಿಜಾಯಿ ಮನೆ ಮಾರು ದಾನ ಮಾಡಿದಳೆ?

ತುಕಾರಾಮನ ಸಾವಿನ ನಂತರ ಅವನ ಮನೆ ಮಾರು ಬ್ರಾಹ್ಮಣರ ಕೈ ಸೇರಿತು. ಅದರ ಬಗೆಗಿನ ಪಾಂಗಕರರ ವಿವರಣೆ ಹೀಗಿದೆ: ಅವಳ ಮೇಲೆ ತುಕಾರಾಮನ ಉಪದೇಶ ಪರಿಣಾಮ ಬೀರಿತು. ಅವಳು ಮರುದಿಣ ತನ್ನ ಮನೆ ಮಾರುಗಳನ್ನೆಲ್ಲ ಬ್ರಾಹ್ಮಣರಿಗೆ ದಾನ ಮಾಡಿ ಪಾಶದಿಂದ ಮುಕ್ತಳಾದಳು.

ಪಾಂಗಕರರ ಈ ಮಾತು ಒಪ್ಪಿಕೊಳ್ಳಲು ಹಲವಾರು ಅಡಚಣೆಗಳಿವೆ. ತುಕಾರಾಮನು ಆಗಾಗ ದಾನವನ್ನು ವಿರೋಧಿಸಿದ್ದು ಕಂಡುಬರುತ್ತದೆ. ದಾನ, ಮಹಾದಾನ, ಭೂದಾನ ಪೃಥ್ವಿಯ ದಾನ ನೀಡಿದರೂ ವಿಠ್ಠಲನ ನಾಮವನ್ನು ಸರಿಗಟ್ಟುವದು ಅಸಾಧ್ಯವೆಂದು ಹೇಳಿದ್ದಾನೆ. ಮಾನವೀಯತೆಯ ದೃಷ್ಟಿಯಿಂದ ದೀನ ದಲಿತರಿಗೆ ಅವನು ಸಹಾಯ ಮಾಡಿರಬಹುದು. ಈ ಬಗೆಯ ಸಹಾಯ ಬೇರೆ, ಬ್ರಾಹ್ಮಣರಿಗೆ ಪುಣ್ಯಕ್ಕಾಗಿ ದಾನ ಮಾಡುವುದು ಬೇರೆ, ಅದರಲ್ಲೂ ಸ್ವಂತ ಕುಟುಂಬ ಪರದೇಶಿಗಳಾಗುವಂತೆ ದಾನ ನೀಡುವದು ಬೇರೆ. ಇಂಥ ದಾನದ ಮೇಲೆ ಅವನಿಗೆ ವಿಶ್ವಾಸವಿದ್ದಿದ್ದೆ ಆಗಿದ್ದರೆ, ಅವನು ಬ್ರಾಹ್ಮಣರಿಗೆ ಮನೆ ಲೂಟಿ ಮಾಡುವಂತೆ ಹೇಳಿದನೆಂದು ಕೆಲವು ಲೇಖಕರು ಬಣ್ಣಿಸಿದ್ದಾರೆ. ಅದೆಲ್ಲ ಸುಳ್ಳು, ಅವನು ಬದುಕಿದ್ದಾಗ, ಅವನ ಮೇಲೆ ಖಟ್ಲೆ ಹಾಕಿ, ಅವನ ಸಂಪತ್ತು ಜಪ್ತಿ ಮಾಡುವಾಗ ಮನೆ ದೋಚಲಾಯಿತು, ಆದರೆ ಅದನ್ನು ತುಕಾರಾಮನೆ ಮಾಡುವಂತೆ ಹೇಳಿದನೆಂದು ಬರೆಯುವದು ಗಾಯಕ್ಕೆ ಉಪ್ಪು ಸವರಿದಂತೆ. ಮನೆ ಮಾರು ಬ್ರಾಹ್ಮಣರಿಗೆ ದಾನ ಮಾಡಿ ಹೆಂಡತಿ ಮಕ್ಕಳನ್ನು ನಿರಾಧಾರಗೊಳಿಸಿ, ಅವರನ್ನು ಉಪವಾಸ ಕೊಲ್ಲುವ ಕೆಟ್ಟಬುದ್ಧಿ ತುಕಾರಾಮನಿಗೆ ಎಂದಿಗೂ ಬಂದಿರಲಿಲ್ಲ. ಹೀಗಾಗಿ ಜಿಜಾಯಿಗೆ ಆ ರೀತಿಯ ಉಪದೇಶ ಮಾಡುವ ಪ್ರಶ್ನೆಯೇ ಏಳುವುದಿಲ್ಲ.

ತುಕಾರಾಮನು ಸಂಸಾರದ ಮೇಲೆ ಗಮನ ಹರಿಸದೆ ನಿರ್ಲಕ್ಷ್ಯ ಮಡಿದ್ದರಿಂದ ಜಿಜಾಯಿ ತೀರ ಅಸಮಾಧಾನಗೊಂಡಿದ್ದಳು ಎಂದು ಬಹುಸಂಖ್ಯಾತ ಲೇಖಕರು ಅಹಮಹಮಿಕೆಯಿಂದ ಹೇಳುತ್ತಿರುತ್ತಾರೆ. ಅದರಲ್ಲಿ ಅತಿಶಯೋಕ್ತಿಯಿದೆ ಎಂಬ ಮಾತು ಬೇರೆ. ತುಕಾರಾಮನು ಬೇರೆ ಯಾರಿಗಾದರೂ ಯಾವುದೇ ವಸ್ತು ನೀಡಿದರೂ ಜಿಜಾಯಿ ತೀರ ಆಕ್ರೋಶ ಮಾಡುತ್ತಿದ್ದಳು ಎಂದೂ ಈ ಲೇಖಕರ ಅಂಬೋಣ. ಅಂದರೆ ತನ್ನ ಮನೆ ಮಾರು ಬ್ರಾಹ್ಮಣರಿಗೆ ದಾನ ಮಾಡುವ ಯೋಚನೆ ಅವಳಲ್ಲಿ ಬರುವದು ಅಸಾಧ್ಯ ಎಂದಂತಾಯಿತು. ತುಕಾರಾಮ ಹಾಗೇನಾದರೂ ಪ್ರಯತ್ನ ಮಾಡಿದರೂ ಜಿಜಾಯಿ ಕೆರಳಬಹುದಾಗಿತ್ತು ಎಂದೂ ಹೇಳಲಾಗುತ್ತದೆ. ಈಗ ತುಕಾರಾಮನ ಸಾವಿನ ನಂತರ ತಕ್ಷಣ ಅವಳು ದಾನ ಮಾಡಲು ಸಿದ್ಧಳಾಗಿದ್ದೇಕೆ ಎಂಬ ಪ್ರಶ್ನೆ ಏಳುತ್ತದೆ. ಅವಳು ತನ್ನ ಸ್ವಭಾವವನ್ನು ಬದಿಗೊತ್ತಿ ತುಕಾರಾಮನ ಉಪದೇಶದಂತೆ ವರ್ತಿಸುವ ನಿರ್ಧಾರ ಮಾಡಿದಳು ಎಂದೆನ್ನಬೇಕೆಂದರೆ, ತುಕಾರಾಮನು ದಾನ ಮಾಡುವ ಉಪದೇಶವನ್ನು ಎಂದೂ ಮಾಡಿರಲಿಲ್ಲ. ಹೀಗಾಗಿ ಜಿಜಾಯಿ ದಾನ ಮಾಡಲು ಮುಂದಾಗಿದ್ದೇಕೆ ಎನ್ನುವದು ಪಾಂಗಾರಕರರ ಹೇಳಿಕೆಯಿಂದ ಸ್ಪಷ್ಟವಾಗುವದಿಲ್ಲ.

ವಿರಕ್ತಿಯ ವೃತ್ತಿ ನಿರ್ಮಾಣವಾಗಿದ್ದರಿಂದ ಜಿಜಾಯಿಯು ಮನೆಮಾರು ದಾನ ಮಾಡಿದಳು ಎಂದೆನ್ನಬೇಕೆಂದರೂ ಅದು ಒಪ್ಪಿಗೆಯಾಗುವದಿಲ್ಲ. ಗಂಡಸರು ವಿರಕ್ತರಾದರೆ ಮನೆ ಮಾರು ತೊರೆದು ಹೋಗುವ ಸಾಧ್ಯತೆಯಿದೆ. ಆದರೆ ಮಹಿಳೆಯರ ದೃಷ್ಟಿಯಲ್ಲಿ ಹೀಗಾಗುವದು ಅಸಾಧ್ಯವೇ ಸರಿ. ಗಂಡಸರು ಸಹ ತನ್ನ ಮನೆ ಮಾರು ಬ್ರಾಹ್ಮಣರಿಗೆ ದಾನ ಮಾಡಿ ಹೋಗುವದಿಲ್ಲ. ಆ ಗಂಡಸಿನ ಮನೆಯಲ್ಲಿ ಯಾರೂ ಇಲ್ಲದಿದ್ದರೆ, ಹೀಗೆ ದಾನ ಮಾಡಿ ಸನ್ಯಾಸಿಯಾಗುವ ಸಾಧ್ಯತೆಯಿದೆ. ಆದರೆ ಸನ್ಯಾಸಿಯಾಗಲು ಹೊರಟಾಗ ಮನೆಮಾರು ದಾನ ಮಾಡಿ ಸಮಸ್ತ ಕುಟುಂಬದ ಸದಸ್ಯರನ್ನು ಬೀದಿಗೆಳೆಯುವ ಪುಣ್ಯದ ಮಾರ್ಗ ಯಾರ ತಲೆಯಲ್ಲೂ ಮೂಡಿದ್ದಿಲ್ಲ. ಸ್ವತಃ ಸನ್ಯಾಸಿಯಾಗುವದೆಂದರೆ, ತನ್ನ ಕುಟುಂಬದವರನ್ನು ಭೈರಾಗಿ, ಭಿಕಾರಿ, ನಿರಾಧಾರ, ಅನಾಥ, ಸನ್ಯಾಸಿ, ಜೋಗಿಯನ್ನಾಗಿ ಮಾಡುವದೇ? ಭಾರತೀಯ ಸಂಸ್ಕೃತಿಯ ಚರಿತ್ರೆಯಲ್ಲಿ ಈ ವರೆಗೆ ‘ಮಹಾನ್’ಸನ್ಯಾಸ ಸ್ವೀಕರಿಸಿದ ಉದಾಹರಣೆಯಿದೆಯೆ? ಗಂಡಸರ ಪರಿಸ್ಥಿತಿ ಹೀಗಿದ್ದಾಗ ಮಹಿಳೆಯರ ಗತಿಯೇನು ? ಉಡಿಯಲ್ಲಿ ಇಬ್ಬರು ಮಕ್ಕಳಿದ್ದಾಗ, ಉದರದಲ್ಲಿ ಗರ್ಭವಿದ್ದಾಗ ಯಾವ ಮಹಿಳೆಯು ತನ್ನ ವಾಸದ ಮನೆ, ಮಾರು, ಧನ-ಧಾನ್ಯವನ್ನು ಬೇರೆಯವರಿಗೆ ದಾನ ಮಾಡಿಯಾಳು? ಮಕ್ಕಳ ‘ಪಾಶ’ ದಿಂದಲೂ ಮುಕ್ತಳಾಗುವಷ್ಟು ಅವಳು ತಟಸ್ಥ, ಸ್ಥಿತಪ್ರಜ್ಞ ಮತ್ತು ಮುಮುಕ್ಷು ಆಗಿದ್ದಳೆ? ಅಥವಾ ಆ ಮಕ್ಕಳೂ ಸನ್ಯಾಸ ಸ್ವೀಕರಿಸಬೇಕೆಂಬಷ್ಟು ಉತ್ಕಟವಾದ ಭಾವನೆಯು ಅವಳಲ್ಲಿ ಮೂಡಿತ್ತೇ? ಮರುದಿನವೇ ಮನೆ ಮಾರು ದಾನ ಮಾಡಿ ಅವಳು ಸಕಲ ಪಾಶದಿಂದ ಮುಕ್ತಳಾದಳೆಂದು ಹೇಳುತ್ತಾರಲ್ಲ! ಗಂಡನ ಸಾವಿನ ಬಳಿಕ ತನ್ನ ಚಿಳ್ಳಿ ಪಿಳ್ಳಿಗಳ ರಕ್ಷಣೆಗಾಗಿ ರೆಕ್ಕೆಯನ್ನು ಹರಡುವದು ಬಿಟ್ಟು ಆ ತಾಯಿ ಮಕ್ಕಳನ್ನು ಮನೆಯಿಂದ ಹೊರಗೆ ಹಾಕಿದಳಂತೆ. ಯಾವ ಮಹಾಪುರುಷನು ತನ್ನ ಬದುಕಿನುದ್ದಕ್ಕೂ ಸನ್ಯಾಸ ಮಾರ್ಗವನ್ನು ತಿರಸ್ಕರಿಸಿದನೋ, ಧಿಕ್ಕರಿಸಿದನೋ ಅಂಥವನ ಪತ್ನಿಯನ್ನು ಈ ಲೇಖಕನು ತನ್ನ ಲೆಕ್ಕಣಿಕೆಯ ಒಂದೇ ಬೀಸಿಗೆ ಸನ್ಯಾಸಿನಿಯನ್ನಾಗಿ ಮಾಡಿಬಿಟ್ಟ!

ಉಡಿಯಲ್ಲಿ ಮಕ್ಕಳಿದ್ದ ಒಬ್ಬ ಗರ್ಭವತಿ ವಿಧವೆಗೆ ತಾನು ವಾಸಿಸಿದ ಮನೆ, ಅಲ್ಲಿಯ ಧನ-ಧಾನ್ಯ ಬೇಡವೆಂದೆನಿಸುವ ಪಾಶವಾಗುತ್ತದೆಯೋ ಅಥವಾ ಬೇಕೆನಿಸುವ ಆಧಾರವಾಗುತ್ತದೆ? ಇಲ್ಲಿ ಈ ಪಾಶದ ಸಂದರ್ಭದಲ್ಲಿ ಮತ್ತೂ ಒಂದು ಮಹತ್ವದ ಪ್ರಶ್ನೆ ಏಳುತ್ತದೆ. ಜಿಜಾಯಿ ಮನೆಯನ್ನು ದಾನವನ್ನಾಗಿ ನೀಡುವದು ಸಾಧ್ಯವಿರಲಿಲ್ಲ. ಎನ್ನುವದು ಖಚಿತವಾಗಿದ್ದರೂ, ವಾದಕ್ಕಾಗಿ ದಾನ ನೀಡಿದಳು ಎಂದು ಒಂದು ಕ್ಷಣ ಒಪ್ಪಿಕೊಳ್ಳೋಣ. ಹೀಗಿರುವಾಗ ದಾನ ಸ್ವೀಕರಿಸಿದಾತನ ಕೊರಳಿಗೆ ಈ ದಾನವೇಕೆ ಪಾಶವಾಗಿ ಪರಿಣಮಿಸಲಿಲ್ಲ? ಸಂಪತ್ತಿನ ಪಾಶವು ಜಿಜಾಯಿಯ ಕೊರಳಿಗೆ ಮುಳ್ಳಿನಂತೆ ಚುಚ್ಚುತ್ತಿರುವಾಗ ದಾನ ಸ್ವೀಕರಿಸುವವನ ಕೊರಳಿಗೆ ಮಾತ್ರ ಅದು ಸುಗಂಧದ ಮಾಲೆಯಾಗುವದು ಸಾಧ್ಯವೇ? ಅಥವಾ ಈ ಪಾಶದ ವೇದನೆಯಿಂದ ಬಡಪಾಯಿ ಜಿಜಾಯಿ ಬಳಲಬಾರದೆಂಬ ಮಾನವೀಯತೆಯ ಭಾವನೆಯಿಂದ ಅವನು ಈ ದುಃಖದಾಯಕ ಪಾಶವನ್ನು ತಾನೇ ಧರಿಸುವ ಉತ್ಸಾಹ ತೋರಿಸಿದನೆಂದು ಭಾವಿಸುವದೇ! ಮನೆಯಲ್ಲಿಯ ಧನ ಧಾನ್ಯ, ಹಾಲು ಹೈನು, ತುಪ್ಪ ತಿಂದು ಜಿಜಾಯಿಯ ಮಕ್ಕಳ ಹೊಟ್ಟೆ ಕೆಡಬಾರದೆಂದು, ತನ್ನ ಹೊಟ್ಟೆ ಕೆಟ್ಟರೂ ಸರಿ ತಾನೇ ತುಪ್ಪ ತಿನ್ನೋಣವೆಂಬ ಉದಾರ ಭಾವನೆಯಿಂದ ದಾನ ಸ್ವೀಕರಿಸಿದನೆಂದು ಭಾವಿಸಬೇಕೆ?

ತಾತ್ಪರ್ಯ: ಜಿಜಾಯಿ ಪಾಶಮುಕ್ತಳಾಗಲು ಮನೆ ಮಾರು ದಾನ ಮಾಡಿದಳೆಂಬ ಹೇಳಿಕೆಯು ಸಂಪೂರ್ಣ ಸುಳ್ಳು, ಈಗ ಅವರ ಮನೆಯನ್ನು ದೋಚುವ ಕ್ರಿಯೆಗೆ ದಾನದ ರೂಪ ನೀಡಿರುವ ಸಾಧ್ಯತೆಯಿದೆ. ಗೂಂಡಾಗಳ ಮೂಲಕ ಬೆದರಿಕೆ ಹಾಕಿರಬಹುದು. ತನ್ನ ಮತ್ತು ಮಕ್ಕಳ ಜೀವರಕ್ಷಣೆಗಾಗಿ ‘ನಾನು ಮನೆಯನ್ನು ದಾನ ಮಾಡಿದೆ’ ಎಂದು ಜಿಜಾಯಿ ಹೇಳಿರಬೇಕು. ಗಂಡನಿಗಾದ ಗತಿ ತನ್ನ ಮಕ್ಕಳಿಗೂ ಆಗಬಾರದು ಎಂದವಳಿಗನಿಸಿರಬೇಕು. ಮನೆ ಮಾರಿಗಿಂತಲೂ ಮಕ್ಕಳ ಜೀವ ತುಂಬ ಬೆಲೆಯುಳ್ಳದ್ದು ಎಂದು ಅರಿಯುವಷ್ಟು ಬುದ್ದಿ ಅವಳಲ್ಲಿ ಖಂಡಿತಕ್ಕೂ ಇದ್ದಿರಬೇಕು. ಇದರರ್ಥವಿಷ್ಟೇ, ಜಿಜಾಯಿಯು ತನ್ನ ಮನೆಯನ್ನು ದಾನ ನೀಡಿದ್ದು ಸತ್ಯವಲ್ಲ. ಆಕೆಗೆ ಬೆದರಿಕೆ ಒಡ್ಡಿ ಮನೆ ತೊರೆದು ಹೋಗುವಂತೆ ಮಾಡಿರಬೇಕು ಎಂದೆನಿಸುತ್ತದೆ.

ಶಾಶ್ವತ ತವರಿಗೆ ಹೋಗಿದ್ದೇಕೆ?

ತುಕಾರಾಮನ ಸಾವಿನ ಬಳಿಕ ಜಿಜಾಯಿಯು ತನ್ನ ಇಬ್ಬರ ಮಕ್ಕಳೊಂದಿಗೆ ತವರಿಗೆ ಹೋದಳು. ಅವಳು ಗರ್ಭಿಣಿ ಮತ್ತು ಮಕ್ಕಳೂ ಜತೆಯಲ್ಲಿರುವದರಿಂದ ಆಕೆಯನ್ನು ತವರಿಗೆ ಕರೆದೊಯ್ಯಲಾಯಿತೆಂದು ಬೇಂದ್ರೆ ಹೇಳುತ್ತಾರೆ. ಅಂದರೆ ಮಕ್ಕಳ ಸಂಗೋಪನೆ ಮತ್ತು ಜಿಜಾಯಿಯ ಬಾಣಂತಿತನಕ್ಕಾಗಿ ಆಕೆಯನ್ನು ತವರಿಗೆ ಕರೆದೊಯ್ಯಲಾಯಿತು, ಆನಂತರ ಆಕೆ ಅಲ್ಲೇ ಉಳಿದುಕೊಂಡಳು ಎಂದೂ ಬೇಂದ್ರೆ ಸಹಜವಾಗಿ ದಾಖಲಿಸುತ್ತಾರೆ. ಪ್ರತ್ಯಕ್ಷದಲ್ಲಿ ಇದು ಅಷ್ಟೊಂದು ಸುಲಭದ ಸಂಗತಿಯಲ್ಲ ಎಂಬುದನ್ನು ಗಮನಿಸಬೇಕು

ವಾಸ್ತವವಾಗಿ ಜಿಜಾಯಿಯನ್ನು ಹೆರಿಗೆಗಾಗಿ ತವರಿಗೆ ಕರೆದೊಯ್ದರು ಎನ್ನುವದು ಸತ್ಯವಲ್ಲ. ಹೆಣ್ಣಿನ ಮೊದಲು ಹೆರಿಗೆ ಎಂದರೆ ಸರಿ, ಆದರೆ ಜಿಜಾಯಿಯದು ಇದು ಪ್ರಾಯಶಃ ಆರನೇ ಹೆರಿಗೆ. ಮುಖ್ಯವೆಂದರೆ ಆಕೆಯ ಮೂವರು ಹೆಣ್ಮಕ್ಕಳು ಮದುವೆಯಾಗಿದ್ದರು. ಅವರಲ್ಲಿ ಕೆಲವರಿಗಾದರೂ ಹೆರಿಗೆಗಾಗಿ ತವರಿಗೆ ಕರೆತರುವ ಅಗತ್ಯವಿರಬಹುದು. ಹೀಗಿರುವಾಗ ಯಾವ ಪ್ರೌಢ ಮಹಿಳೆಯು ಕೇವಲ ಹೆರಿಗೆಗಾಗಿ ತವರಿಗೆ ಹೋಗುವ ಸಾಧ್ಯತೆಯಿರುವದಿಲ್ಲ.

ಅವಳು ದುಃಖದಲ್ಲಿರುವದರಿಂದ ಹೆರಿಗೆಗಾಗಿ ತವರಿಗೆ ಕರೆದೊಯ್ಯಲಾಯಿತು ಎಂದೆನ್ನಬೇಕೆಂದರೆ, ಆನಂತರ ಅವಳು ಖಾಯಂ ತವರಿನಲ್ಲೇ ಏಕೆ ಉಳಿದುಕೊಂಡಳು ಎಂಬ ಪ್ರಶ್ನೆ ಏಳುತ್ತದೆ. ತನ್ನ ತವರಿನಲ್ಲಿ ವಾಸಿಸಿ, ತನ್ನ ಹೆಣ್ಮಕ್ಕಳ ತವರಿನಾಶ್ರಯ ತಪ್ಪಿಸುವ ಕೆಲಸವನ್ನು ಯಾವ ಮಹಿಳೆ ಮಾಡುವದು ಸಾಧ್ಯ? ಗಂಡನ ಮನೆಯಲ್ಲಿ ಯಾವ ಸ್ಥಾವರ-ಜಂಗಮ ಸಂಪತ್ತೂ ಇಲ್ಲದ ಮಹಿಳೆಯು ಗತ್ಯಂತರವಿಲ್ಲದೆ ತವರಿನಲ್ಲಿ ವಾಸಿಸುವದನ್ನು ಒಪ್ಪಬಹುದೇನೋ. ಆದರೆ ಸ್ವತಃ ಬೇಂದ್ರೆಯವರ ಹೇಳಿಕೆಯಂತೆ ತುಕಾರಾಮನ ಬಳಿಗೆ ಹದಿನೈದು ಬಿಘಾ (೪೦೦ ಚೌ.ಕೋಲು x ೧೫) ಕ್ಕಿಂತ ಹೆಚ್ಚು ಹೊಲವಿತ್ತು. ಎರಡೆರಡು ಮೆನಗಳಿದ್ದವು. ಹೀಗಿರುವಾಗ ತನ್ನ ಮಕ್ಕಳ ಸಂಗೋಪನೆ, ಹೆಣ್ಮಕ್ಕಳ ತವರಿನ ಆರೈಕೆಗಾಗಿ ತಮ್ಮನೆದುರಿಗೆ ಕೈ ಚಾಚಲು ಯಾವ ಹೆಂಗಸು ಸಿದ್ದಳಾಗುತ್ತಾಳೆ? ಸೋದರನ ಸಹಾಯದಿಂದ ವಾಸಿಸುವ ಇಚ್ಛೆಯಿದ್ದಲ್ಲಿ, ಅವನ ಸಹಕಾರದಿಂದ ತನ್ನ ಹೊಲ ಮನೆ ನೋಡಿಕೊಳ್ಳುವದು ಸಾಧ್ಯವಿದ್ದಾಗ, ಅತ್ತಕಡೆ ಇಣುಕಿಯೂ ನೋಡದ ನಿರ್ಣಯವನ್ನು ಅವಳೇಕೆ ತೆಗೆದುಕೊಂಡಳು? ಆಕೆಯ ತವರಿನ ಜನರೂ ಈ ಇಸ್ಟೇಟಿನ ಮೇಲೆ ಎಳ್ಳು,ನೀರು ಬಿಡಲು ಹೇಳಿ, ಶಾಶ್ವತವಾಗಿ ಅಕೆಯನ್ನು ತವರಿನಲ್ಲೇ ಉಳಿಸಿಕೊಂಡಿದ್ದೇಕೆ? ಜಿಜಾಯಿ ಹಾಗೇನು ಬಂಜೆಸ್ತ್ರೀಯಲ್ಲ. ಹೊಲ-ಮನೆಗಳ ವಿಷಯದಲ್ಲಿ ವಿನಾಕಾರಣ ನಿಸ್ಪೃಹ ಬಯಕೆ ರಹಿತಗೊಳ್ಳುವ ಸಾಧ್ಯತೆಯೂ ಇರಲಿಲ್ಲ. ಹೆರಿಗೆಗಾಗಿ ತವರಿಗೆ ಹೋದ ಹೆಂಗಸು, ತನ್ನ ಗಂಡನ ಆಸ್ತಿಯನ್ನು ಒದ್ದು, ತನ್ನ ಮಕ್ಕಳನ್ನು ನಿರಾಧಾರಗೊಳಿಸಿ, ಪರಾವಲಂಬಿಯಾಗಿ ಮಾಡುತ್ತಾಳೆಂದರೆ ನಂಬುವದು ಹೇಗೆ ?

ಕಾನ್ಹೋಬಾ ಶಾಶ್ವತ ಊರು ತೊರೆದದ್ದು ಏಕೆ?

ಕೆಲವು ಸಲ ಗಂಡನ ಮನೆಯವರು ವಿಧೆವೆಯ ಸಂಪತ್ತಿನ ಪಾಲು ನುಂಗಿಹಾಕಲು ಕಿರುಕುಳ ಕೊಡುತ್ತಿರುತ್ತಾರೆ. ಅವಳ ಬದುಕು ದುಸ್ತರಗೊಳಿಸುತ್ತಾರೆ. ಅವಳು ಊರು ತೊರೆದು ಹೋಗುವಂತೆ ಮಾಡುತ್ತಿರುವದು ಸ್ವಾಭಾವಿಕ. ಆದರೆ ಜಿಜಾಯಿಯ ಬಾಬತ್ತಿನಲ್ಲಿ ಹೀಗೆಲ್ಲ ನಡೆಯುವದು ಸಾಧ್ಯವಿರಲಿಲ್ಲ. ಅತ್ತೆ ಮಾವ, ಹಿರಿಯ ಮೈದುನ – ಹೀಗೆ ಯಾರೂ ಆ ಕುಟುಂಬದಲ್ಲಿರಲಿಲ್ಲ. ಕಿರಿಯ ಮೈದುನ ಕಾನ್ಹೋಬಾ ಮತ್ತು ಅವನ ಹೆಂಡತಿಯಿಂದ ಹಾಗೆ ಯಾವ ತೊಂದರೆಯಾಗುವ ಸಾಧ್ಯತೆಯಿರಲಿಲ್ಲ. ಬದಲಿಗೆ ಅವರೇ ತುಕಾರಾಮನ ಸಾವಿನ ನಂತರ ಜಿಜಾಯಿಯಂತೆ ತನ್ನ ಮನೆ ಮಾರು, ಊರೂ ತೊರೆದು ಹೋಗಬೇಕಾಗಿ ಬಂದಿರುವ ಸಂಗತಿಯು ಈ ಸಂದರ್ಭದ ಅತ್ಯಂತ ಗಂಭೀರ ವಿಷಯ. ಕಾನ್ಹೋಬಾ ಶಾಶ್ವತವಾಗಿ ತನ್ನ ಮಾವನ ಊರಿಗೋ ಮತ್ತೆಲ್ಲಿಗೋ ಹೋಗೆ ನೆಲೆಸಿದನೆಂದು ಬೇಂದ್ರೆ ಈ ವಿಷಯವನ್ನು ಸಹಜವಾಗಿ ವಾಹುವಿಹಾರಕ್ಕೆ ಹೋದ ಮಾದರಿಯಲ್ಲಿ ಹೇಳುತ್ತಾರೆ! ಅಥವಾ ಕಾನ್ಹೋಬಾ ತನ್ನ ಹೆಂಡತಿಯ ಹೆರಿಗೆಗಾಗಿ ಆಕೆಯನ್ನು ತವರಿಗೆ ಕರೆದೊಯ್ದನೋ? ಖರೆ ಎಂದರೆ ಕಾನ್ಹೋಬಾ ಖಾಯಂ ದೇಹೂವನ್ನು ತೊರೆದು ಹೋದ. ಜತೆಗೆ ಅವನ ಹೆಂಡತಿ ಮಕ್ಕಳು ಹೋದರು. ಕಾನ್ಹೋಬಾ ಊರು ತೊರೆದು ಹೋಗುವಂತಹದ್ದು ನಡೆದದ್ದಾದರೂ ಏನು? ಅವನೇನು ಸಂಸಾರದಿಂದ ರೋಸಿ ಹೋಗಿರಲಿಲ್ಲ. ತುಕಾರಾಮನು ಇಂದ್ರಾಯಣಿಯಲ್ಲಿ ಸಾಲದ ಹೊತ್ತಿಗೆ ಮುಳುಗಿಸಲು ಹೊರಟಾಗ, ತಾವು ಸಂಸಾರಿಗಳು ಎಂದೆಲ್ಲ ಹೇಳಿ ವಿರೋಧಿಸಿದ್ದ. ಹೀಗಿರುವಾಗ ಈಗ ಆಕಸ್ಮಿಕವಾಗಿ ಮನೆ ಮಾರು, ಹೊಲವೆಲ್ಲ ತೊರೆದು ಶಾಶ್ವತವಾಗಿ ಅನ್ಯರ ಆಶ್ರಯಕ್ಕೆ ಹೋಗುವ ಇಚ್ಛೆ ಅವನ ಮನದಲ್ಲಿ ಮೂಡಲು ಕಾರಣವಾದರೂ ಏನು? ಇದೆಲ್ಲ ಸಹಜವಾಗಿ ಸ್ವ ಇಚ್ಛೆಯಿಂದ ನಡೆಯಿತೆಂದರೆ ಎಂಥ ಸಿಂಬಳ ಸುರುಕ ಹುಡುಗನೂ ನಂಬಲಿಕ್ಕಿಲ್ಲ. ತನ್ನ ಸೋದರನ ಪಾಲಿಗೆ ಬಂದ ಘೋರತನ, ತನಗೂ ಬರಬಾರದೆಂದು, ಅವನ ಇಸ್ಟೇಟಿಗೆ ಎಳ್ಳು ನೀರು ಬಿಟ್ಟು ಹೋದದ್ದೇ ಸತ್ಯವಾಗಿರಬೇಕು.

ಬ್ರಾಹ್ಮಣರು ಹತ್ಯೆಗೈಯದ್ದರೆ ಸೂತಕವಿಲ್ಲ

ತುಕಾರಾಮನು ಸದೇಹಿಯಾಗಿ ಸ್ವರ್ಗಕ್ಕೆ ಹೋಗಿದ್ದರಿಂದ ಸಾವಿನ ಬಳಿಕ ಮಾಡಲಾಗುವ ವಿಧಿಯನ್ನು ಮಾಡುವ ಪ್ರಶ್ನೆಯೇ ಬರುವದಿಲ್ಲ. ಅಶೌಚ ಅಥವಾ ಸೂತಕ ಪಾಲಿಸುವ ಅಗತ್ಯವೂ ಇಲ್ಲ ಎಂದು ರಾಮೇಶ್ವರ ಭಟ್ಟನು ಕಾನ್ಹೋಬಾನಿಗೆ ಹೇಳಿದನೆಂದು ಅನ್ನುತ್ತಾರೆ. ಆದರೆ ರಾಮೇಶ್ವರ ಭಟ್ಟನ ತಲೆಯಲ್ಲಿ ಬೇರೆಯದೇ ಏನೋ ಯೋಚನೆ, ಧರ್ಮಶಾಸ್ತ್ರದ ಬೇರೆ ನಿಯಮ ಮೂಡುವ ಸಾಧ್ಯತೆಯಿದೆ ಎಂದು ನನ್ನ ಅನಿಸಿಕೆ. ಗೌತಮ ಧರ್ಮಸೂತ್ರದಲ್ಲಿ ಹೇಳಿದ ಒಂದು ನಿಯಮ (೨.೫.೮) ‘ ಗೋ ಬ್ರಾಹ್ಮಣ ಹತನಾಮನ್ವಕ್ಷಮ್’ ಎಂದಿದೆ. ಆಕಳು ಮತ್ತು ಬ್ರಾಹ್ಮಣನು ಯಾರನ್ನು ಕೊಲ್ಲುತ್ತಾರೋ, ಅಂಥವರ ಸಂಬಂಧಿಕರ ಸೂತಕವು ಅವನ ಸಾವಿನ ನಂತರ ತಕ್ಷಣ ಮುಗಿಯುತ್ತದೆ ಎಂಬುದು ಈ ಸೂತ್ರದ ಅರ್ಥ.

ಆನಂತರದ ಒಂದು ಸೂತ್ರದ ಕುರಿತು (೨.೫.೧) ಟೀಕೆ ಬರೆಯುವಾಗ ಹರದತ್ತನೆಂಬ ಲೇಖಕನು ಮಿತಾಕ್ಷರವೆಂಬ ವೃತ್ತಿಯಲ್ಲಿ ಬ್ರಹ್ಮಪುರಾಣದಲ್ಲಿಯ ಮುಂದೆ ನೀಡಿದ ಶ್ಲೋಕವನ್ನು ಉದ್ಧರಿಸಿದ್ದಾನೆ: ಯಾರು ಬ್ರಾಹ್ಮಣನ ಕೋಲಿನಿಂದ ಸತ್ತರೋ, ಯಾರು ಬ್ರಾಹ್ಮಣನಿಂದ ಕೊಲ್ಲಲ್ಪಟ್ಟರೋ ಮತ್ತು ಮಹಾಪಾತಕಿಯಾಗಿರುತ್ತಾರೋ, ಅವರನ್ನು ಪತಿತವೆಂದು ಕರೆಯಲಾಗುತ್ತದೆ. ಇಂಥ ಪತಿತ ಜನರನ್ನು ದಹನ ಮಾಡಬಾರದು. ಅವರ ಅಸ್ಥಿಯನ್ನು ಸಂಚಯ ಮಾಡಬಾರದು (ಅಂದರೆ ಮೂರನೇ ದಿನ ಅವರ ಅಸ್ಥಿಯನ್ನು ಸಂಗ್ರಹಿಸಿ ವಿಸರ್ಜನೆ ಮಾಡುವ ವಿಧಿ ಮಾಡಬಾರದು.) ಅವರಿಗಾಗಿ ಕಣ್ಣೀರು ಸುರಿಯಬಾರದು. ಅವರಿಗೆ ಪಿಂಡವನ್ನೂ ಅರ್ಪಿಸಬಾರದು. ಅವರಿಗೆ ಶ್ರಾದ್ಧಕ್ರಿಯೆಯನ್ನು ಮಾಡಬಾರದು.

ಈ ನಿಯಮ ಅದೆಷ್ಟು ಕ್ರೂರವಾಗಿದೆ ಎಂಬುದರ ಮೇಲೆ ಮತ್ತೆ ಬೇರೆ ಭಾಷ್ಯೆ ಬೇಕಿಲ್ಲ. ಬ್ರಾಹ್ಮಣರ ವೈರಿಯಾದ ವ್ಯಕ್ತಿಯ ನೆಂಟರಿಷ್ಟರು ಯಾರೇ ಆಗಲಿ ಬದುಕಿದ್ದಾಗ, ಸತ್ತ ಬಳಿಕವೂ ಅವನ ಜತೆಗಿನ ತನ್ನ ರಕ್ತದ ಸಂಬಂಧವನ್ನೂ ಸಹ ನಿರಾಕರಿಸಬೇಕು ಎಂದು ಈ ನಿಯಮ ಸೂಚಿಸುತ್ತದೆ. ತುಕಾರಾಮನ ಸಾವಿನ ಬಳಿಕ ಅವನಿಗಾಗಿ ಯಾವುದೇ ವಿಧಿಯನ್ನು ಮಾಡಬಾರದೆಂದು ರಾಮೇಶ್ವರ ಭಟ್ಟನು ಕಾನ್ಹೋಬಾನಿಗೆ ಹೇಳಿದನು. ಹೀಗೆ ಹೇಳುವಾಗ ಭಟ್ಟನ ಮನದಲ್ಲಿ ಮಾತ್ರ ಈ ನಿಯಮವಿರುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ

ಆಸ್ತಿಯನ್ನು ಹಸ್ತಗತ ಮಾಡಿಕೊಂಡಿದ್ದು ಯಾರು?

ತುಕಾರಾಮನ ಸಾವಿನ ನಂತರ ಜಿಜಾಯಿ ಮತ್ತು ಕಾನ್ಹೋಬಾ ಮಕ್ಕಳಸಹಿತ ಪರಾಂಗದರಾದರು. ಅವರ ಮನೆ ಮಾರು, ಹೊಲವೆಲ್ಲ ಬ್ರಾಹ್ಮಣರು ಹಸ್ತಗತ ಮಾಡಿಕೊಂಡಿರುವ ವಿಷಯ ಅಷ್ಟೊಂದು ಸರಳವಾದುದಲ್ಲ ಎನ್ನುವದು ಯಾರದೇ ಗಮನಕ್ಕೆ ಬರುವ ವಿಷಯ. ಧರ್ಮಶಾಸ್ತ್ರ ಮತ್ತು ಶಾಸ್ತ್ರಾಧಾರಿತ ಕಾನೂನಿನ ಸಹಾಯದಿಂದ ತುಕಾರಾಮ ಬದುಕಿದ್ದಾಗ, ಅವನನ್ನು ಎಂಥ ಚಿತ್ರಹಿಂಸೆಗೊಳಪಡಿಸಲಾಯಿತು ಎಂಬುದನ್ನು ನಾವು ಈಗಾಗಲೇ ಗಮನಿಸಿದ್ದೇವೆ. ಈಗ ಅವನ ಸಾವಿನ ಬಳಿಕ ಅದೇ ಶಾಸ್ತ್ರಾಧಾರಿತ ಕಾನೂನಿನ ಸಹಾಯದಿಂದ ಅವರ ಕುಟುಂಬದವರನ್ನು ಹೇಗೆ ಪರದೇಶಿಯನ್ನಾಗಿ ಮಾಡಲಾಯಿತು ಎಂಬುದನ್ನು ಗಮನಿಸೋಣ.

ಆಸ್ತಿ ನುಂಗಲು ಧರ್ಮಶಾಸ್ತ್ರದ ಆಧಾರ.

ಧರ್ಮಶಾಸ್ತ್ರವನ್ನು ಆಧರಿಸಿದ ಕಾಯ್ದೆಯ ಕ್ಷೇತ್ರದಲ್ಲಿ ‘ಪ್ರಣಷ್ಟಸ್ವಾಮಿಕ’ ಧನ ಒಂದು ಮಹತ್ವದ ವಿಷಯ. ಯಾವ ಸಂಪತ್ತಿಗೆ ವಾರಸುದಾರರು ಇರುವದಿಲ್ಲವೋ ಅದು ‘ಪ್ರಣಷ್ಟಸ್ವಾಮಿಕ’ ಧನ, ಈ ಬಗೆಯ ಧನದ ವಿಷಯದಲ್ಲಿ ಧರ್ಮಶಾಸ್ತ್ರ ರೂಪಿಸಿದ ನಿಯಮ ಮತ್ತು ತುಕಾರಾಮನ ಆಸ್ತಿ ಬ್ರಾಹ್ಮಣರ ಬಳಿಗೆ ಹೋಗುವ ಘಟನೆ – ಇದರ ನಡುವೆ ನಿಕಟ ಸಂಬಂಧವಿದೆ. ಇದನ್ನು ಈಗ ತಿಳಿದುಕೊಳ್ಳೋಣ.

ಬಂಗಾಲವನ್ನು ಹೊರತು ಪಡಿಸಿ, ಭಾರತದ ಉಳಿದೆಲ್ಲ ಪ್ರದೇಶದಲ್ಲಿ ಮಿತಾಕ್ಷರ ಎಂಬ ಗ್ರಂಥವು ಕಾನೂನು ಗ್ರಂಥವೆಂಬ ಮಾನ್ಯತೆಯನ್ನು ಪಡೆದಿದೆ. ಮುಸಲ್ಮಾನ ಆಡಳಿತದ ಕಾಲದಲ್ಲೂ, ಹಿಂದೂಗಳ ನ್ಯಾಯ ನಿರ್ಣಯ ಮಾಡುವಾಗ ಇದೇ ಗ್ರಂಥದ ಆಧಾರ ಪಡೆಯಲಾಗುತ್ತಿತ್ತು. ಮಿತಾಕ್ಷರವು ಸ್ವತಂತ್ರ ಗ್ರಂಥವಲ್ಲ. ಇದು ಯಜ್ಞವಲ್ಕಸ್ಮೃತಿಯ ಟೀಕಾ ಗ್ರಂಥ. ಈ ಯಾಜ್ಞವಲ್ಕ ಸ್ಮೃತಿಯಲ್ಲಿ ಬೇವಾರಸ ಸಂಪತ್ತಿನ ಕುರಿತು ಹೀಗೆ ಹೇಳಲಾಗಿದೆ. “ರಾಜನಿಗೆ ನಿಧಿ ಪ್ರಾಪ್ತವಾದರೆ, ಅದರಲ್ಲಿಯ ಅರ್ಧಪಾಲು ಬ್ರಾಹ್ಮಣರಿಗೆ ನೀಡಬೇಕು. ಆದರೆ ವಿದ್ವಾನ್ ಬ್ರಾಹ್ಮಣನಿಗೆ ಇಂಥ ನಿಧಿ ಸಿಕ್ಕರೆ, ಅವನು ಅದನ್ನೆಲ್ಲ ಸ್ವಂತಕ್ಕೆ ಬಳಸಬೇಕು. ಏಕೆಂದರೆ, ಅವನೇ ಈ ಸಂಪತ್ತಿನ ಪ್ರಭುವಾಗಿರುತ್ತಾನೆ.”

ಧರ್ಮಶಾಸ್ತ್ರದ ಈ ನಿಯಮವು ಅನೈತಿಕವಾಗಿದೆ. ಈ ನಿಯಮದಿಂದಾಗಿ ತುಕಾರಾಮನ ಜೀವನವೇ ಮೂರಾಬಟ್ಟೆಯಾಯಿತು. ಕುಟುಂಬ ನಾನಾ ಸಂಕಟಕ್ಕೆ ಗುರಿಯಾಯಿತು. ಈ ಕ್ರೂರ ನಿಯಮವನ್ನು ಕಂಡು ಹೃದಯ ಇರಿದಂತಾಗುತ್ತದೆ. ತುಕಾರಾಮನು ಧಾರ್ಮಿಕ ಕ್ಷೇತ್ರದ ಕುರಿತು ಸ್ವೀಕರಿಸಿದ ನಿಲುವು ಕಂಡು, ಇದು ತಮ್ಮ ಪ್ರತಿಷ್ಠೆಗೆ ಬಾಧಕವಾಗಿದ್ದು, ಇದರಿಂದ ತಮ್ಮ ಅನ್ನಕ್ಕೆ ಸಂಚಕಾರ ಬೀಳುವುದನ್ನು ಕಂಡು ಬ್ರಾಹ್ಮಣರು ತುಕಾರಾಮನನ್ನು ಎಲ್ಲ ಕಡೆಯಿಂದಲೂ ನಿರ್ಬಂಧ ಹೇರುವ ಪ್ರಯತ್ನ ಮಾಡಿದರು. ಆದರೆ ತಮ್ಮ ಈ ಕಾರ್ಯವು ಅನೈತಿಕ ಅಥವಾ ಅಧಾರ್ಮಿಕವೆನಿಸಬಾರದೆಂದು ಅವರು ಧರ್ಮಶಾಸ್ತ್ರದ ನಿಯಮದ ಆಧಾರವನ್ನು ಪಡೆದರು.

ಜಗತ್ತಿನ ಸಕಲ ಸಂಪತ್ತು ಬ್ರಾಹ್ಮಣರದ್ದೇ ಆಗಿರುತ್ತದೆಂಬ ನಿಯಮವನ್ನು ಮನುಸ್ಮೃತಿ ಮಾಡಿದರೂ ಅದನ್ನು ವ್ಯವಹಾರಿಕವಾಗಿ ಜಾರಿಗೆ ತರುವದು ಅಸಾಧ್ಯವೇ ಆಗಿದ್ದರಿಂದ ಆ ನಿಯಮ ಬಹಳಷ್ಟು ಸಲ ಅರ್ಥವನ್ನೇ ಕಳೆದುಕೊಳ್ಳುತ್ತದೆ. ಆದರೆ ಯಾವನಾದರೂ ಶೂದ್ರ ಹದ್ದುಮೀರಿ ವರ್ತಿಸಿದರೆ, ಅವನನ್ನು ಈ ನಿಯಮದ ಆಧಾರದಿಂದ ತಕ್ಕಶಾಸ್ತಿ ಮಾಡುವದು ಸಾಧ್ಯ. ಮನುಸ್ಮೃತಿಯಲ್ಲಿ ಮತ್ತೂ ಒಂದು ನಿಯಮ ಹೀಗಿತ್ತು. ಧನ ಗಳಿಸುವ ಸಾಮರ್ಥ್ಯವಿದ್ದರೂ ಶೂದ್ರನಾದವನು ಧನ ಸಂಚಯ ಮಾಡಬಾರದು. ಏಕೆಂದರೆ, ಶೂದ್ರನು ಧನಗಳಿಸಿದರೆ ಅದು ಬ್ರಾಹ್ಮಣನಿಗೇ ಬಾಧಕವಾಗುತ್ತದೆ. ತುಕಾರಾಮನ ಹತ್ತಿರ ಸಾಕಷ್ಟು ಧನ ಸಂಪತ್ತು ಇತ್ತು. ತುಕಾರಾಮ ಬ್ರಾಹ್ಮಣರಿಗೆ ಬಾಧಕವೂ ಆಗಲಾರಂಭಿಸಿದ್ದ. ತುಕಾರಾಮನನ್ನು ಶೂದ್ರನೆಂದೇ ನಿರ್ಧರಿಸಲಾಗಿತ್ತು. ಶೂದ್ರನ ಸಂಪತ್ತನ್ನು ಬ್ರಾಹ್ಮಣನು ಸಹಜವಾಗಿ ದೋಚಬಹುದಾಗಿತ್ತು. ಅಂಥ ನಿರ್ಲಜ್ಜ ನಿಯಮವನ್ನು ಮನುಸ್ಮೃತಿಯು ಹೇಳಿತ್ತು. ಸಂಪತ್ತಿನ ಬಗೆಗಿನ ಧರ್ಮಶಾಸ್ತ್ರ ಹೇಳಿದ ವಿವಿಧ ನಿಯಮವಂತೂ ದೇಹೂವಿನ ಬ್ರಾಹ್ಮಣರಿಗೆ ಹಸ್ತಗತವಾಗಿತ್ತು. ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಅದನ್ನು ಬಳಸುವ ನಿರ್ಧಾರ ಮಾಡಿದರು.

ಶೂದ್ರನು ಜ್ಞಾನಿಯಾದರೆ, ಅವನು ಬ್ರಾಹ್ಮಣರಿಗೆ ಬಾಧಕನಾಗುತ್ತಾನೆ ಎಂಬುದನ್ನು ತುಕಾರಾಮನ ವಿಷಯದಲ್ಲಿ ಅವರು ಅನುಭವಿಸಿದ್ದರು. ಈ ಕಾರಣಕ್ಕಾಗಿಯೇ ಅವರು ವೇದ, ಧರ್ಮ, ಮುಂತಾದವುಗಳ ಅಧಿಕಾರವನ್ನು ನಿರಾಕರಿಸಿ ಅವನ ಕೊಂಡಿಯನ್ನೇ ಕತ್ತರಿಸುವ ಪ್ರಯತ್ನ ಮಾಡಿದ್ದರು. ಜ್ಞಾನಕ್ಕೆ ಅನ್ವಯಿಸಿದ್ದು ಸಂಪತ್ತಿಗೂ ಅನ್ವಯಿಸುತ್ತದೆ. ಈ ಶೂದ್ರನು ಹಸಿವೆಯಿಂದ ಕಂಗಾಲಾಗಿದ್ದರೆ ಹೀಗೆಲ್ಲ ಅಹಮಿಕೆಯಿಂದ ತಮ್ಮ ಹಾದಿಗೆ ಅಡ್ಡ ಬರುತ್ತಿರಲಿಲ್ಲ ಎಂದು ಬ್ರಾಹ್ಮಣರಿಗೆ ಅನಿಸಿರಬೇಕು. ಹೀಗಾಗಿ ಅವನ ಜ್ಞಾನದ ಅಹಂಕಾರದಂತೆಯೇ ಸಂಪತ್ತಿನ ‘ಸೊಕ್ಕು’ ಇಳಿಸಬೇಕೆಂದು ತಮ್ಮೊಳಗೆ ಚರ್ಚಿಸಿರಬೇಕು. ಇದನ್ನೆಲ್ಲ ಕುಶಲತೆಯಿಂದ ಅಂದರೆ ಧರ್ಮದ ಅವರಣದಡಿಯಲ್ಲೇ ಮಾಡಬೇಕೆಂದು ನಿರ್ಧರಿಸಿದ್ದರು.

ಕೇವಲ ಸಂಪತ್ತಿನ ಕಾರಣಕ್ಕಾಗಿಯಲ್ಲ, ಉಳಿದ ಹಲವು ಕಾರಣಗಳಿಂದಾಗಿಯೂ ದೇಹೂವಿನ ಕೆಲವು ಜನರಿಗೆ ತುಕಾರಾಮ ಬೇಡವಾಗಿದ್ದ. ಹೀಗಾಗಿ ಅವರ ಯೋಜನೆಯಂತೆ ತುಕಾರಾಮ ಇಲ್ಲವಾದ. ಅವನ ಜತಗೇ ಉಳಿದ ಶತ್ರುತ್ವವೂ ಇಲ್ಲವಾಯಿತು. ಆದರೂ ಅವನ ಸಂಪತ್ತಿನ ಮೇಲಿದ್ದ ಕಣ್ಣು ಮಾತ್ರ ಹೋಗಲಿಲ್ಲ. ಅಷ್ಟೇ ಅಲ್ಲ, ತುಕಾರಾಮನ ಅಡಚಣೆ ದೂರವಾಗಿದ್ದರಿಂದ ಅವರ ಲಕ್ಷ್ಯವೆಲ್ಲ ಆ ಸಂಪತ್ತಿನ ಮೇಲೆ ಕೇಂದ್ರಿಕೃತಗೊಂಡಿತು. ತುಕಾರಾಮನ ಸ್ಥಾವರ-ಜಂಗಮ ಆಸ್ತಿಯನ್ನು ನುಂಗುವ ತಂತ್ರವನ್ನು ಹೂಡಿದರು. ಅವರು ಬಲವಂತದಿಂದ ಜಿಜಾಯಿಗೆ ಮನೆ-ಮಾರು ದಾನ ಮಾಡಲು ಹೇಳಿರಲಿ ಅಥವಾ ಬಿಟ್ಟಿರಲಿ, ಭಯವನ್ನು ನಿರ್ಮಾಣ ಮಾಡಿ, ಅವಳನ್ನು ಮತ್ತು ಕಾನ್ಹೋಬಾನನ್ನೂ ದೂರ ಹೊರಟು ಹೋಗುವಂತೆ ಮಾಡಿದ್ದೂ ಮಾತ್ರ ಸತ್ಯ. ತುಕಾರಾಮನ ಸಂಪತ್ತಿಗೆ ಬೇರೆ ಯಾರೂ ವಾರಸುದಾರರಿಲ್ಲ. ಹೀಗಾಗಿ ಅವನ ಬೇವಾರಸ ಆಸ್ತಿಯು’ಪ್ರಣಷ್ಟಸ್ವಾಮಿಕ’ ಧನವಾಯಿತು ಎಂದು ಅವರೇ ಘೋಷಿಸಿದರು. ವಿದ್ವಾನ ಬ್ರಾಹ್ಮಣರಿಗೆ ಈ ಧನದ ಮೇಲೆ ಹಕ್ಕಂತೂ ಇತ್ತು. ತಾನು ವಿದ್ವಾನ್ ಎಂದು ಸಾಬೀತು ಪಡಿಸುವದೇನೂ ಕಠಿಣವಾಗಿರಲಿಲ್ಲ. ಅದನ್ನು ತಾನೇ ಘೋಷಿಸಿದರಾಯಿತು. ಬೇರೆಯವರ ಪ್ರಮಾಣ ಪತ್ರ ಬೇಕಾಗಿರಲಿಲ್ಲ.

ಸ್ವಾಭಾವಿಕವಾಗಿಯೇ, ರಾಜನು ಅರ್ಧ ಸಂಪತ್ತನ್ನು ಬ್ರಾಹ್ಮಣನಿಗೆ ನೀಡಬೇಕು. ಈ ನಿಯಮದಂತೆ ಅರ್ಧ ಹೊಲವನ್ನು ಮುಂಬಾಜಿ ಕಬಳಿಸಿದಂತೆ ಕಾಣುತ್ತದೆ. ವಿದ್ವಾನ್ ಬ್ರಾಹ್ಮಣನು ಸರ್ವಧನವನ್ನು ಸ್ವೀಕರಿಸಬೇಕು ಎಂಬ ನಿಯಮವನ್ನು ಜಾರಿಗೊಳಿಸಿ ಉಳಿದ ಸಂಪತ್ತನ್ನು ಮುಂಬಾಜಿ ಮತ್ತು ಅವನ ಸಂಗಡಿಗರು ಹೊಡೆದುಕೊಂಡಂತೆ ಕಂಡುಬರುತ್ತದೆ. ಖರೆಯೆಂದರೆ ಈ ಸಂಪತ್ತಿನ ವಾರಸುದಾರರು ನೆರೆಯ ಊರಲ್ಲೇ ವಾಸಿಸುತ್ತಿದ್ದರೂ. ಕೂಗಿ ಕರೆದರೂ ಅವರು ಬರುತ್ತಿದ್ದರು. ಆದರೆ ಅವರು ಯಾವ ಪರಿಸ್ಥಿತಿಯಲ್ಲೂ ಮರಳದಂತೆ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಸರಕಾರದ ನೌಕರಶಾಹಿಯ ಬೆಂಬಲ ಪಡೆದು ತುಕಾರಾಮನ ಸಂಪತ್ತನ್ನು ಈ ಜನ ನುಂಗಿದರು. ಪ್ರಾಯಶಃ ಆಸ್ತಿಯ ವಹಿವಾಟು ದೊರಕುವವರೆಗೂ ಅದನ್ನು ತಮಗೆ ದಾನ ನೀಡಿದ್ದಾರೆ ಎಂಬ ಭ್ರಮೆಯನ್ನು ನಿರ್ಮಾಣ ಮಾಡಿರಬೇಕು.ಆನಂತರ ಅದನ್ನು ಬೇವಾರಸವೆಂದು ತೋರಿಸಿ ಸರಕಾರ ದರಬಾರದ ಕಡೆಯಿಂದ ಅದನ್ನು ತಮ್ಮ ಹೆಸರಿಗೆ ನೋಂದಣಿ ಮಾಡಿಕೊಂಡಂತೆ ಕಂಡುಬರುತ್ತದೆ.

ಜಿಜಾಯಿ ಮತ್ತು ಕಾನ್ಹೋಬಾ ಅವರು ಮಕ್ಕಳ ಸಹಿತ ದೇಹೂವನ್ನು ತೊರೆದು ಶಾಶ್ವತವಾಗಿ ಹೊರಟು ಹೋಗಿದ್ದು ಮತ್ತು ತುಕಾರಾಮನ ಆಸ್ತಿಯನ್ನು ಮುಂಬಾಜಿ ಮುಂತಾದವರು ಕಬಳಿಸಿಕೊಂಡ ಘಟನೆಗೂ, ತುಕಾರಾಮನ ಸಾವಿಗೂ ಘನಿಷ್ಟವಾದ ಸಂಬಂಧವಿದ್ದಿರಲೇಬೇಕೆಂದು ಅನಿಸುತ್ತದೆ. ತುಕಾರಾಮನ ಆಸ್ತಿಯನ್ನು ಕಬಳಿಸಿದವರು ತುಕಾರಾಮನ ಸಾವಿನಲ್ಲಿ ಪ್ರತ್ಯಕ್ಷವೋ ಅಪ್ರತ್ಯಕ್ಷವೋ ಶಾಮೀಲಾಗಿರುವುದರಲ್ಲಿ ಯಾವ ಶಂಕೆಯೂ ಇಲ್ಲ. ಹತ್ಯೆಯ ಹೊರತು ಬೇರೆ ಯಾವುದೇ ಮಾರ್ಗದಿಂದ ತುಕಾರಾಮನ ಸಾವು ಸಂಭವಿಸಿದ್ದಲ್ಲಿ, ಮೇಲಿನ ಘಟನೆಯು ಜರುಗುತ್ತಲೇ ಇರಲಿಲ್ಲ. ತುಕಾರಾಮನು ಸದೇಹಿಯಾಗಿ ವೈಕುಂಠಕ್ಕೆ ತೆರಳಿದ್ದರೆ, ತುಕಾರಾಮನ ಕುಟುಂಬವು ಊರಿನ ಜನರ ಆದರಕ್ಕೆ ಅಷ್ಟೇ ಅಲ್ಲ ಪೂಜೆಗೂ ಪಾತ್ರರಾಗುತ್ತಿದ್ದರು. ಅವರ ಆಸ್ತಿಯ ಮೇಲೆ ಯಾರೂ ಕಣ್ಣಿಡುತ್ತಿರಲಿಲ್ಲ. ಆತ್ಮಹತ್ಯೆಯೋ ಅಪಘಾತದಿಂದ ಸಾವು ಸಂಭವಿಸಿದ್ದರೂ, ಅವರ ಕುಟುಂಬದ ಜನರು ಊರು ತೊರೆಯುವ ಪ್ರಸಂಗವೇ ಬರುತ್ತಿರಲಿಲ್ಲ. ತುಕಾರಾಮನ ಹತ್ಯೆಯಾಗಿತ್ತು. ಹತ್ಯೆ ಮಾಡುವವರ ಭೀತಿಯು ಊರ ಜನರ ಮೇಲೂ, ಕುಟುಂಬದವರ ಮೇಲೂ ಇತ್ತು. ಹೀಗಾಗಿ ಮೇಲಿನ ಘಟನೆ ಜರುಗಿತು ಎಂಬುದರಲ್ಲಿ ಎರಡು ಮಾತಿಲ್ಲ.

ಮಕ್ಕಳು ಇಪ್ಪತ್ತೈದು ವರುಷ ಮರಳಲಿಲ್ಲ

ತವರಿಗೆ ಹೋದ ಜಿಜಾಯಿ ಮತ್ತೆ ದೇಹೂಗೆ ಮರಳಲಿಲ್ಲ. ಅವಳ ಮಕ್ಕಳು ೨೦ ರಿಂದ ೨೫ ವರುಷದ ನಂತರವೇ ಮರಳಿದರು. ಬೇಂದ್ರೆ ಇದನ್ನು ಅಜ್ಜನ ಮನೆಗೆ ವಿಹಾರಕ್ಕೆ ಹೋದವರಂತೆ ಸಹಜವಾಗಿ ದಾಖಲಿಸುತ್ತಾರೆ.

ಈ ಮಕ್ಕಳು ದೇಹೂಗೆ ಮರಳಿದಾಗ ಅದು ಶಿವಾಜಿ ಮಹಾರಾಜರ ಪಟ್ಟಾಭಿಷೇಕದ ಕಾಲವಾಗಿರುವದೇನು ಆಕಸ್ಮಿಕವಲ್ಲ. ತುಕಾರಾಮನ ಸಾವು ಸಂಭವಿಸಿದಾಗ ಶಿವಾಜಿ ಮಹಾರಾಜನ ವಯಸ್ಸು ಕೇವಲ ಇಪ್ಪತ್ತು. ತೋರಣ ಕೋಟೆಗೆದ್ದು, ಆಗಷ್ಟೇ ರಾಜ್ಯ ಸ್ಥಾಪನೆಯ ಮೊದಲ ಹೆಜ್ಜೆಯನ್ನು ಇಟ್ಟಿದ್ದ. ವಿಜಾಪುರದ ರಾಜ್ಯವಾಗಿತ್ತು. ತುಕಾರಾಮನನ್ನು ಕಾಡುವ ನೌಕರಶಾಹಿ ಗುಂಪು ಪ್ರಭಾವಿಯಾಗಿತ್ತು. ತುಕಾರಾಮನ ಸಾವಿನ ಬಳಿಕ ತಕ್ಷಣ ಅಂದರೆ ವರ್ಷಾಂತದೊಳಗೆ ತುಕಾರಾಮನ ಹೊಲವನ್ನು ಮುಂಬಾಜಿಯು ಹಸ್ತಗತ ಮಾಡಿದ್ದು ನೋಡಿದರೆ, ಅವನಿಗೆ ಅನುಕೂಲವಾಗಿದ್ದ ಜನರ ಕೈಯಲ್ಲಿ ಸತ್ತೆಯಿತ್ತೆನ್ನುವುದು ಸ್ಪಷ್ಟ. ಸ್ವಾಭಾವಿಕವಾಗಿಯೆ, ಶಿವಾಜಿಯ ರಾಜ್ಯ ಸ್ಥಿರಗೊಳ್ಳುವ ತನಕ ತುಕಾರಾಮನ ಮಕ್ಕಳಿಗೆ ದೇಹೂಗೆ ಮರಳುವ ಧೈರ್ಯವಾಗಿರಲಿಲ್ಲ. ಆ ಬಳಿಕವೇ ಮಕ್ಕಳು ಮರಳಿದರು. ತಮ್ಮ ಹೊಲವನ್ನು ಮರಳಿ ಪಡೆಯಲು ಅವರು ಮುಂಬಾಜಿಯ ಜತೆ ಸಂಘರ್ಷವನ್ನೂ ಮಾಡಿದರು. ಅಂದರೆ ರಾಜಕೀಯ ಪರಿಸ್ಥಿತಿಯು ಅನುಕೂಲವಾಗಿರುವದು ನೋಡಿಯೇ ಮಕ್ಕಳು ದೇಹೂಗೆ ಮರಳಿದರು. ಇದರ ಅರ್ಥವೇನೆಂದರೆ, ತುಕಾರಾಮನ ಕುಟುಂಬಕ್ಕೆ ತಮ್ಮ ಹೊಲ-ಮನೆ ಬೇಕಿತ್ತು. ಅವರದನ್ನು ದಾನ ಮಾಡಿರಲಿಲ್ಲ. ಆಸೆಯನ್ನೂ ತೊರೆದಿರಲಿಲ್ಲ. ಪ್ರಾಣಕ್ಕೆ ಅಪಾಯವಿರುವದನ್ನು ಕಂಡು, ಅವರು ಅತ್ತ ಹಾಯಲಿಲ್ಲ. ಗಂಡಾಂತರ ಕಡಿಮೆಯಾಗಿದೆ ಎಂದೆನಿಸಿದಾಗಲೇ ಮರಳಿದರು. ಶಿವಾಜಿಯ ಪಟ್ಟಾಭಿಷೇಕವೇ ಅಂಥ ಖಾತ್ರಿ ನೀಡುವ ಅನುಕೂಲದ ಕಾಲವಾಗಿತ್ತು.

ಸಂಭಾಜಿ ಮಹಾರಾಜನಂತೂ ಈ ಮಕ್ಕಳಿಗೆ ಸಾಕಷ್ಟು ಆಧಾರ ನೀಡಿದಂತೆ ಕಾಣುತ್ತದೆ. ಹೊಲದ ಬದಲಿಗೆ ಅವನು ಅವರಿಗೆ ಪ್ರತಿವರ್ಷ ಖಂಡಿ ಧಾನ್ಯ ವಗೈರೆ ನೀಡಲು ಆರಂಭಿಸಿದನು. ಆದರ ಸಂಭಾಜಿಯ ಸಾವಿನ ಬಳಿಕ ಮಾತ್ರ ಇದನ್ನು ಸ್ಥಗಿತಗೊಳಿಸಲಾಯಿತು. ಇದು ಗಮನಿಸಬೇಕಾದ ಸಂಗತಿ. ಸಂಭಾಜಿಗೆ ತುಕಾರಾಮನ ಬಗೆಗೆ ಗೌರವಾದರವಿರುವದರಿಂದ ಅವನು ಈ ಮಕ್ಕಳನ್ನು ಆತ್ಮೀಯವಾಗಿ ನೋಡಿಕೊಂಡಂತೆ ಕಾಣಬರುತ್ತದೆ. ತಮ್ಮನ್ನು ಕಾಡುವ ಜನ ತುಕಾರಾಮನನ್ನು ಕಾಡುವ ಜನರದ್ದೇ ವಾರಸಾ ಮುಂದುವರೆಸಿಕೊಂಡು ಹೋಗುವುದನ್ನು ಅವನು ಗುರುತಿಸಿದಂತೆ ಕಂಡುಬರುತ್ತದೆ.

ತುಕಾರಾಮನ ಸಾವಿನ ಕುರಿತು ನಮ್ಮೆದುರಿಗಿರುವ ಸರ್ವ ಮಾಹಿತಿಯನ್ನು ನಿಷ್ಪಕ್ಷಪಾತದಿಂದ ವಿಶ್ಲೇಷಣೆ ಕೈಕೊಂಡರೆ, ಅವನ ಸಾವಿನ ಸ್ವರೂಪವು ನಮ್ಮೆದುರಿಗೆ ಸ್ಪಷ್ಟವಾಗಿ ತೆರೆದುಕೊಳ್ಳಬಹುದು ಎಂದು ನನಗನಿಸುತ್ತದೆ. ಬೇರೆ ಬೇರೆ ಲೇಖಕರು ಅವನ ಸಾವಿನ ಬಗೆಗೆ ನೀಡಿದ ನಾನಾ ಕಾರಣಗಳಲ್ಲಿ ಕೇವಲ ಒಮದೇ ಕಾರಣದ ಸುತ್ತಲೂ ಮನಸ್ಸು ಕೇಂದ್ರಿಕೃತಗೊಳ್ಳುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಅವನ ಸಾವು ನೈಸರ್ಗಿಕವೂ ಅಲ್ಲ, ಅಲೌಕಿಕವೂ ಇಲ್ಲ. ಅದು ಅಪಘಾತವೂ ಅಲ್ಲ ಆತ್ಮಹತ್ಯೆಯೂ ಅಲ್ಲ. ಅದು ಖಚಿತವಾಗಿಯೂ ಹತ್ಯೆಯ ಸ್ವರೂಪದ್ದು. ಈ ಹತ್ಯೆಯನ್ನು ಯಾರು ಮಾಡಿದರು ಎಂಬುದನ್ನು ಖಚಿತವಾಗಿ ಹೇಳುವದು ಕಠಿಣ. ನನ್ನ ದೃಷ್ಟಿಯಲ್ಲಿ ಆ ವ್ಯಕ್ತಿಯ ಹೆಸರು ಹುಡುಕುವುದರಲ್ಲಿ ಯಾವ ಸ್ವಾರಸ್ಯವಿಲ್ಲ. ಕೇವಲ ಕೆಲವೇ ವ್ಯಕ್ತಿಗಳ ಮೇಲೆ ಆರೋಪ ಹೊರಿಸುವುದು ನನಗೇಕೋ ಅಷ್ಟೊಂದು ಸರಿಯೆನಿಸುತ್ತಿಲ್ಲ. ಯಾರೋ ಒಬ್ಬ ತಲೆತಿರುಕ ಈ ಹತ್ಯೆಯನ್ನು ಮಾಡಿರಬೇಕೆಂಬುದೇ ಇದರ ಅರ್ಥ. ತುಕಾರಾಮನು ಯಾವ ವ್ಯವಸ್ಥೆಯನ್ನು ಬದಲಾಯಿಸಲು ಜೀವ ಪಣಕ್ಕಿಟ್ಟು ಹೋರಾಡಿದನೋ, ಆ ವ್ಯವಸ್ಥೆಯಲ್ಲೇ ಸಾವಿನ ಬೀಜವಿತ್ತು. ಧರ್ಮಶಾಸ್ತ್ರದ ದೃಷ್ಟಿಯಿಂದ ತುಕಾರಾಮನನ್ನು ಸಾವಿಗೆ ಗುರಿ ಮಾಡುವುದು ನೈತಿಕ ಮತ್ತು ಕಾನೂನುಬದ್ಧವಾಗಿರುವಾಗ ಏಕೆ ಧರ್ಮಶಾಸ್ತ್ರದ ಸಹಾಯ ಪಡೆಯಬಾರದೆಂದು ಅನಿಸುವುದು ಸ್ವಾಭಾವಿಕವಾಗಿತ್ತು. ಅಂದರೆ ಆ ವ್ಯಕ್ತಿಗಳದ್ದು ಏನೂ ದೋಷವಿಲ್ಲ ಎಂದೇನೂ ಅಲ್ಲ. ಆದರೆ ನಿಜವಾದ ದೋಷವು ಮೂಲಭೂತ ವ್ಯವಸ್ಥೆಯದ್ದು, ಧರ್ಮಶಾಸ್ತ್ರದ್ದು, ರೂಢಿ ಸಂಪ್ರದಾಯದ್ದು, ತತ್ವಜ್ಞಾನದ್ದು, ಸಮಾಜವನ್ನು ಚಾತುರ್ವರ್ಣ ವ್ಯವಸ್ಥೆಯ ಅಡಿಯಲ್ಲಿ ತರುವದು ಶೂದ್ರರ ಸಕಲ ಅಧಿಕಾರವನ್ನು ಕಸಿದುಕೊಂಡು ಗುಲಾಮರನ್ನಾಗಿ ಮಾಡುವದು. ಆ ಆಡಳಿತ ವ್ಯವಸ್ಥೆಯಿದೆಯಲ್ಲ ಅದರದ್ದು. ಈ ವ್ಯವಸ್ಥೆಯನ್ನು ಮುರಿದು ಹಾಕುವ ತುಕಾರಾಮನನ್ನೇ ಮುರಿದು ಹಾಕುವ ಪ್ರಯತ್ನವನ್ನು ವ್ಯವಸ್ಥೆಯ ವಾರಸುದಾರರು ಮಾಡಿರುವದರಲ್ಲಿ ಅಚ್ಚರಿಯಿಲ್ಲ.

ಇಂದಿಗೂ ಅದೇ ಧರ್ಮಶಾಸ್ತ್ರವನ್ನು ನೈತಿಕ ಆಧಾರವೆಂದು ಪರಿಗಣಿಸುವದೇ?

ತುಕಾರಾಮನ ಸಾವಿನ ಕುರಿತು ನಾನು ಇಂದೇಕೆ ವಿಶ್ಲೇಷಣೆ ಮಾಡುತ್ತಿದ್ದೇನೆ ಎಂಬುದರ ಬಗೆಗೆ ಒಂದೆರಡು ಮಾತು ಹೇಳಲೇಬೇಕು. ಈ ವಿಶ್ಲೇಷಣೆಯ ಮೂಲಕ ಯಾವುದೇ ವ್ಯಕ್ತಿ, ಸಮೂಹದ ಬಗೆಗೆ ಸಿಟ್ಟು ನಿರ್ಮಾಣಗೊಳ್ಳುವಂತೆ ಮಾಡುವದು ಅಥವಾ ದ್ವೇಷದ ವಿಷ ಬಿತ್ತುವದು ಖಂಡಿತಕ್ಕೂ ನನ್ನ ಉದ್ದೇಶವಲ್ಲ. ಆದರೆ ಈ ಧರ್ಮಶಾಸ್ತ್ರ ವ್ಯವಸ್ಥೆಯಿಂದಾಗಿ ತುಕಾರಾಮನಂತಹ ಅತ್ಯಂತ ಶ್ರೇಷ್ಟ ಪ್ರತಿಭಾವಂತನು ತನ್ನ ಪ್ರಾಣ ಸಹಿತ ಸರ್ವಸ್ವವನ್ನೂ ಕಳೆದುಕೊಳ್ಳಬೇಕಾಯಿತು. ಕೊನೆಪಕ್ಷ ಇನ್ನಾದರೂ ನಾವು ಆ ವ್ಯವಸ್ಥೆಯ ಶುದ್ಧೀಕರಣವನ್ನು ಕೈಕೊಳ್ಳಬೇಕು ಎಂಬುದು ನನ್ನ ವಿಶ್ಲೇಷಣೆಯ ಉದ್ದೇಶ. ಯಾವ ಧರ್ಮಶಾಸ್ತ್ರದ ನಿಯಮದಿಂದಾಗಿ ತುಕಾರಾಮನು ಚಿತ್ರ ಹಿಂಸೆಗೊಳಪಟ್ಟು ಒದ್ದಾಡಬೇಕಾಯಿತೋ, ಅದೇ ಧರ್ಮಶಾಸ್ತ್ರವನ್ನು ಇವತ್ತಿಗೂ ನಮ್ಮ ಪವಿತ್ರ ಧರ್ಮಶಾಸ್ತ್ರವೆಂದು ಒಪ್ಪಿಕೊಳ್ಳಬೇಕೇ ಎಂಬುದೇ ನನ್ನ ಪ್ರಶ್ನೆ. ಇಂದಿಗೂ ಅದೇ ಧರ್ಮಶಾಸ್ತ್ರವನ್ನು ನಮ್ಮ ನೈತಿಕೆಯ ಆಧಾರವೆಂದು ನಮ್ಮ ಜೀವನ ಪದ್ಧತಿಯ ಅಧಿಷ್ಠಾನವೆಂದು ಸ್ವೀಕರಿಸಬೇಕೆ ಎಂಬ ಪ್ರಶ್ನೆಯನ್ನು ಜನರೆದುರಿಗೆ ಮಂಡಿಸಬೇಕಾಗಿದೆ. ತಾತ್ಪರ್ಯ: ನಾವು ಈ ಧರ್ಮಶಾಸ್ತ್ರವನ್ನು ವಿವೇಕದ ಒರೆಗಲ್ಲಿಗೆ ಒಡ್ಡಿ ಪ್ರಾಮಾಣಿಕವಾಗಿ ಚಿಕಿತ್ಸೆಗೊಳಪಡಿಸಿದರೆ, ತುಕಾರಾಮನ ಬಲಿದಾನ ಸಾರ್ಥಕವಾಗುತ್ತದೆ ಎಂಬ ಭಾವನೆಯಿಂದ ನಾನು ಈ ವಿಶ್ಲೇಷಣೆ ಕೈಕೊಂಡಿದ್ದೇನೆ.