ಪುಟ ಪುಟದಲ್ಲಿ ಮಹಾಯುದ್ಧ ಮಾಯ

ಚರಿತ್ರೆಯ ಪುಟ ಪುಟದಲ್ಲಿ ಈ ದೇಶದ ಮಹಾಯುದ್ಧಗಳನ್ನು ಮಾಯ ಮಾಡಲಾಗಿದೆ. ದೊಡ್ಡ-ದೊಡ್ಡ ಸಂಘರ್ಷಗಳನ್ನು ಮುಚ್ಚಿ ಹಾಕಲಾಗಿದೆ. ಅಥವಾ ಕುಬ್ಜಗೊಳಿಸಲಾಗಿದೆ. ತುಕಾರಾಮನು ನಡೆಸಿದ ಹೋರಾಟಕ್ಕೂ ಇದೇ ಗತಿ ಪ್ರಾಪ್ತವಾಗಿದೆ. ಅವನು ಸಂಘರ್ಷವನ್ನೇ ಮಾಡಲಿಲ್ಲ, ಪರಂಪರೆಯ ಪ್ರವಾಹದಲ್ಲಿ ಮೌನವಾಗಿ ಶಾಮೀಲಾದ, ಬರೇ ತಾಳ ಕುಟ್ಟುವುದರಲ್ಲೇ ಧನ್ಯತೆ ಪಡೆದ – ಎಂದೆಲ್ಲ ಚಿತ್ರಿಸಲಾಗಿದೆ. ಇದೆಲ್ಲ ಶಬ್ದದ ಮಾಯಾಲೋಕ; ಶಬ್ದದ ಕರಾಮತ್ತು, ಶಬ್ದ ಸತ್ತೆಯ ಪ್ರಭಾವ. ಇಂಥ ಸ್ಥಿತಿಯಲ್ಲಿ ನಮಗೆ ತುಕಾರಾಮ ಬೇಕಾಗಿದ್ದರೆ, ಸತ್ಯ ಸ್ವರೂಪದ ತುಕಾರಾಮನನ್ನೇ ಆಯ್ದುಕೊಳ್ಳಬೇಕು. ಅವನ ಪ್ರತಿಮೆಯನ್ನು ಶಬ್ದದ ಕಾರಾಗೃಹದಿಂದ ಮುಕ್ತಗೊಳಿಸಬೇಕು. ಅವನು ಕೈಕೊಂಡ ಸಂಘರ್ಷವನ್ನು ಅಡಗಿಸಿಡುವದೆಂದರೆ, ಅವನು ಆಘಾತ ಮಾಡಿದ ಮೌಲ್ಯವನ್ನೇ ಬೆಂಬಲಿಸಿದಂತೆ, ಸಂವರ್ಧನಗೊಳಿಸಿದಂತಾಗುತ್ತದೆ. ಈ ಕಾರಣದಿಂದ ತುಕಾರಾಮನ ತುಕಾರಾಮತ್ವವೇ ಹೊರಟು ಹೋಗುತ್ತದೆ ಎಂಬುದು ಗಮನಿಸಬೇಕಾದ ಸಂಗತಿ.

ಮಹಾವಿದ್ರೋಹದ ಬೀಜ ಬಿತ್ತಿಗೆ

ಅವನಿಗೆ ಕೇವಲ ತಾಳಕುಟ್ಟಲೇ ಬೇಕೆಂದಿದ್ದರೆ, ವೈದಿಕ ಪಂಡಿತರನ್ನು ತರಾಟೆಗೆ ತೆಗೆದುಕೊಳ್ಳುತ್ತಿರಲಿಲ್ಲ. ವೈದಿಕ ಪಂಡಿತರೂ ಅವನ ಉಸಾಬರಿಗೆ ಹೋಗುತ್ತಿರಲಿಲ್ಲ. ಮುಕ್ತವಾಗಿ ತಾಳ ಕುಟ್ಟಲು ಅವಕಾಶ ಮಾಡಿಕೊಡುತ್ತಿದ್ದರು. ಅವನ ಮತ್ತು ಚತುರ ಪಂಡಿತರ ನಡುವೆ ಹೆಜ್ಜೆ-ಹೆಜ್ಜೆಗೂ ಸಂಘರ್ಷ ಏರ್ಪಡುತ್ತಿರಲಿಲ್ಲ. ಅವನು ಕೇವಲ ತಾಳ ಕುಟ್ಟುವ ಉದ್ದೇಶವನ್ನಷ್ಟೇ ಹೊಂದಿದ್ದರೆ, ಶಬ್ದದ ಶಸ್ತ್ರವನ್ನು ಹರಿತಗೊಳಿಸುವ ಭಾಷೆಯನ್ನು ಏಕೆ ಬಳಸುತ್ತಿದ್ದ, ತೀಕ್ಷ್ಣ ಬಾಣಗಳ ಶಬ್ದಗಳನ್ನು ಹೊತ್ತು ತಿರುಗುತ್ತಿರುವದಾಗಿ ಏಕೆ ಹೇಳುತ್ತಿದ್ದ?

ಶಬ್ದಗಳ ಶಸ್ತ್ರವನ್ನು ಹರಿತಗೊಳಿಸುವವನು, ಶಬ್ದಗಳ ಬಾಣ ಹೊತ್ತು ಅಲೆದಾಡುವವನು ಯೋಧನಲ್ಲವೇ? ಅಂಥವನು ಸಂಘರ್ಷಾತ್ಮಕ, ಸಮರೋನ್ಮುಖ ಮತ್ತು ಯುದ್ಧಾತುರನಲ್ಲವೇ? ತುಕಾರಾಮ ತನ್ನ ಸುತ್ತಲೂ ಗುಂಪು ಗೂಡುವವರಿಗೆ ಕೇವಲ ತಾಳ ಕುಟ್ಟುವದನ್ನಷ್ಟೇ ಕಲಿಸುತ್ತಿರಲಿಲ್ಲ. ಪರಂಪರಾಗತ ಧರ್ಮದ ವಿರೋಧದಲ್ಲಿ ವಿದ್ರೋಹದ ತತ್ವಜ್ಞಾನವನ್ನೂ ಭೋದಿಸುತ್ತಿದ್ದ. ಅವನಂತೂ ಸ್ವತಃ ವಿದ್ರೋಹಿಯಾಗಿದ್ದ. ಜತೆಗೆ ಜನರ ಮನದಲ್ಲಿ ಮಹಾವಿದ್ರೋಹದ ಬೀಜವನ್ನು ಬಿತ್ತುತ್ತಿದ್ದ. ಅವನು ಪಲಾಯನವಾದಿ, ಮರಣವಾದಿ ಅಥವಾ ಪರಾಭವವಾದಿಯಾಗಿರಲಿಲ್ಲ. ಅವನು ಯುಯುತ್ಸು ಅಂದರೆ ಯುದ್ಧ ಮಾಡಲು ಬಯಸುವ, ಜಿಜಿವಿಷು ಅಂದರೆ ಬದುಕಲು ಇಚ್ಛಿಸುವ ಮತ್ತು ವಿಜಿಗಿಷು ಅಂದರೆ ವಿಜಯ ಸಂಪಾದಿಸಲು ಬಯಸುವವನಾಗಿದ್ದ.

ಶಬ್ದಗಳಿಂದ ವೈಚಾರಿಕ ಹತ್ಯೆಯನ್ನು ನಿಲ್ಲಿಸಬಹುದು

ಇದರರ್ಥ ಹೀಗಿದೆ. ಶಬ್ದಗಳ ಬಲದಿಂದ ಮಹಾಯೋಧನ ಪ್ರತಿಮೆಯನ್ನು ಚೂರು ಚೂರು ಮಾಡಲಾಗಿದೆ. ಶಬ್ದದ ಬಲವಾದ ಅವನ ವಿಚಾರಧನದ ಫಲವತ್ತಾದ ಕಣವನ್ನು ದೋಚಲಾಗಿದೆ. ಶಬ್ದದ ಬಲವಾದ ಅವನ ವಿಚಾರಧನದ ಫಲವತ್ತಾದ ಕಣವನ್ನು ದೋಚಲಾಗಿದೆ. ಇದೆಲ್ಲ ಅವನ ಭಕ್ತರ, ಆಸಕ್ತರ ಕಣ್ಣೆದುರಿಗೆ ಘಟಿಸಿದ. ಶಬ್ದದ ಮಹತ್ವವನ್ನು ಸರಿಯಾಗಿ ಗ್ರಹಿಸುವ ಮಹಾ ಮಾನವನ ಶಸ್ತ್ರದ ಪ್ರಭಾವಿ ಶಸ್ತ್ದಿಮದಲೇ ನಾಶಗೊಳಿಸಲಾಗಿದೆ. ಅವನ ಭಕ್ತರು ಶಬ್ದದ ಸಾಮರ್ಥ್ಯವನ್ನು ಗುರುತಿಸದೇ ಇರುವದರಿಂದ, ಬಳಸದೇ ಇರುವದರಿಂದ ಇದು ಜರುಗಿತು. ಹೀಗಾಗಿ ಈಗಾದರೂ ಈ ಸಾಮರ್ಥ್ಯ ಗುರುತಿಸಬೇಕು. ಶಬ್ದಗಳ ಮೂಲಕ ತುಕಾರಾಮನ ಮೂಲ ಸ್ವರೂಪವನ್ನು ಜನರಿಗೆ ತಲುಪಿಸಬೇಕು. ಇದು ನಮ್ಮ ಕರ್ತವ್ಯ. ಶಬ್ದದಿಂದ ವೈಚಾರಿಕ ಹತ್ಯೆ ಮಾಡಲು ಬರುವುದನ್ನು ನಾವು ಈಗಾಗಲೇ ಕಂಡಿದ್ದೇವೆ. ಈಗ ಶಬ್ದಗಳ ಮೂಲಕ ವೈಚಾರಿಕ ಹತ್ಯೆಯನ್ನು ತಡೆಗಟ್ಟಲು ಬರುತ್ತದೆ ಎಂಬುದನ್ನು ಜಗತ್ತಿಗೆ ಮನವರಿಕೆ ಮಾಡಿಕೊಡಬೇಕು. ಸ್ವತಃ ನಾವೂ ಅನುಭವಿಸಬೇಕು.

ಸತ್ಯ ಅಸತ್ಯದೊಂದಿಗೆ ಕೈಗೂಡಿಸಿತು

ತುಕಾರಾಮನು ಶಬ್ದಗಳ ಶಸ್ತ್ರ ಹಿಡಿದು ಏಕಾಂಗಿಯಾಗಿಯೇ ಹೋರಾಡಿದ್ದು ಕಂಡು ಬರುತ್ತದೆ. ಕೆಲವು ಪ್ರಸಂಗಗಳಲ್ಲಿ ಕೆಲವರು ಅವನಿಗೆ ಸಹಕರಿಸಿದ್ದೂ ಇದೆ. ಆದರೂ ಒಂಟಿಯಾಗಿಯೇ ಹೋರಾಡಬೇಕಾಗಿ ಬಂದಿದ್ದು ನಿಜ. ಅವನು ಬದುಕಿನಲ್ಲಿ ಆಯ್ಕೆ ಮಾಡಿದ್ದು ಮುಳ್ಳಿನ ಹಾದಿ. ಸಾಮಾನ್ಯ ಜನರು ರೂಢಿ ಸಂಪ್ರದಾಯದ ಹಾದಿಯನ್ನೇ ತುಳಿಯುತ್ತಾರೆ. ಉಳಿದವರಿಗೂ ಆ ಹಾದಿ ಹಿಡಿಯಲು ಉಪದೇಶ ಮಾಡುತ್ತಾರೆ. ಜನರಲ್ಲಿ ನಾನಾ ಬಗೆಗಳಿವೆ. ನಾನಾ ಸ್ವಭಾವಗಳಿವೆ. ಪ್ರತಿಯೊಬ್ಬನು ವಿವಿಧ ಬಗೆಯಿಂದ ಮಾತಾಡುತ್ತಾನೆ. ಸಲಹೆ ನೀಡುತ್ತಾನೆ. ಯಾರ ಮಾತಿಗೂ ಬೆಲೆ ನೀಡಬೇಕೆಂಬ ಗಲಿಬಿಲಿ ನಿರ್ಮಾಣಗೊಳ್ಳುತ್ತದೆ. ನಿರ್ಣಯ ಕೈಕೊಳ್ಳುವುದು ದುಸ್ತರವಾಗುತ್ತದೆ.ನೀವು ಹೇಗೆ ವರ್ತಿಸಿದರೂ ನಿಂದೆ ತಪ್ಪಿದ್ದಲ್ಲ. ವ್ಯಂಗ್ಯ ಮಾತೂ ನಿಲ್ಲುವುದಿಲ್ಲ. ತುಕಾರಾಮನು ಈ ವೃತ್ತಿಯನ್ನು ತನ್ನ ಅಭಂಗದಲ್ಲಿ ತುಂಬ ಸೊಗಸಾಗಿ ಬಣ್ಣಿಸಿದ್ದಾನೆ. ಹಲವು ವ್ಯವಹಾರಿಕ ಉದಾಹರಣೆಗಳಿಂದ ಸಮಾಜದ ಒಂದು ಶಬ್ದಚಿತ್ರ ಚಿತ್ರಿಸಿದ್ದಾನೆ. ಸಂಸಾರ ಮಾಡಿದರೂ ಟೀಕೆ, ಮಾಡದಿದ್ದರೂ ಟೀಕೆ, ಧನಿಕನದೂ ಟೀಕೆ, ನಿರ್ಧನಿಕನಿಗೂ ಟೀಕೆ. ಮಾತು ಹೆಚ್ಚಾದರೆ ವಾಚಾಳಿ, ಕಡಿಮೆಯಾದರೆ ಗರ್ವಿಷ್ಟ. ಭೇಟಿಯಾಗದಿದ್ದರೆ ನಿಷ್ಠುರಿ, ಭೇಟಿಯಾಗಲು ಹೋದರೆ ಮನೆ ತೊಲೆದ ಎಂಬ ಮಾತು. ಒಟ್ಟಿನಲ್ಲಿ ಜನರ ಮಾತಿಗೆ ತಾಳ ತಂತಿಯಿಲ್ಲ ಎಂಬ ಕಹಿ ಮಾತಿನಲ್ಲಿ ಜನರ ವರ್ತನೆಯನ್ನು ಟೀಕಿಸಿದ್ದಾನೆ. ಹೀಗಿದ್ದರೂ ಅವನು ಜನರನ್ನು ದ್ವೇಷಿಸುವದಿಲ್ಲ. ಬದಲು, ಲೋಕ ಕಲ್ಯಾಣದ ಕುರಿತು ಕಳಕಳಿಯಿದೆ. ಜನರೊಳಗಿದ್ದು ಜನರನ್ನು ಗುರುತಿಸಬೇಕು. ಯೋಗ್ಯ ಪರಿವರ್ತನೆಯನ್ನು ಕೈಕೊಳ್ಳಬೇಕು ಎನ್ನುವದೇ ಅವನ ಪ್ರಯತ್ನವಾಗಿತ್ತು.

ಜನ ಏನೇ ಅನ್ನಲಿ, ನಿರ್ಣಯ ಮಾತ್ರ ತನ್ನದು ಎಂಬ ತತ್ವವನ್ನು ಪಾಲಿಸಿದನು. ಅಂತಿಮವಾಗಿ ತನ್ನ ವಿಚಾರ, ತನ್ನ ವಿವೇಕ ಮಹತ್ವದ್ದು ಎಂಬ ನಿಲುವು ಒಳಿತು. ಕೆಡಕು ಇಷ್ಟ ಅನಿಷ್ಟವನ್ನು ನಾವೇ ನಿರ್ಧರಿಸಬೇಕೆಂದು ತಿಳಿಸುವ ಹಲವು ಅಭಂಗಗಳನ್ನು ರಚಿಸಿದ್ದಾನೆ. ನನ್ನ ಸ್ವಂತ ಮನ ನನಗೆ ಭರವಸೆ ನೀಡುವಾಗ, ನಾನು ಜನರ ಲೌಕಿಕದ ಬಗೆಗೆ, ಅಭಿಪ್ರಾಯದ ಬಗೆಗೆ ಏಕೆ ತಲೆಕೆಡಿಸಿಕೊಳ್ಳಲಿ ಎಂದವನು ತನ್ನದೊಂದು ಅಭಂಗದಲ್ಲಿ ಕೇಳುತ್ತಾನೆ. ನಾನು ಏನೇ ಮಾಡಿದರೂ ಸ್ವತಃ ಆಲೋಚಿಸುತ್ತಾನೆ. ಉಳಿದವರನ್ನು ಲೆಕ್ಕಿಸುವದಿಲ್ಲ. ನಾನು ಸತ್ಯ ಅಸತ್ಯದ ಬಗೆಗೆ ಮನಸ್ಸಿಗೇ ಕೇಳಿದ್ದೇನೆ. ವಿನಾ, ಬಹುಮತಕ್ಕೆ ಬೆಲೆ ಕೊಡಲಿಲ್ಲ ಎಂದು ಆತ್ಮ ಚರಿತ್ರಾತ್ಮಕ ಅಭಂಗದಲ್ಲಿ ನೋಂದಾಯಿಸಿದ್ದಾನೆ. ನನ್ನ ಮನಕ್ಕೆ ತೋಚಿದ ಮಾತು ನಾನು ಹೇಳಿದೆ, ನಾಚಿಕೆಪಟ್ಟುಕೊಳ್ಳಲಿಲ್ಲ. ಆಶಂಕೆ ತಾಳಲಿಲ್ಲ. ಚತುರರಿಗೆ ಹೆದರಲಿಲ್ಲ ಎಂದು ಒಂದು ವಚನದಲ್ಲಿ ಹೇಳಿದರೆ, ಮತ್ತೊಂದು ಅಭಂಗದಲ್ಲಿ ಅಂತರಂಗ ಗೆದ್ದು, ಮನಸಾಕ್ಷಿಯಿಂದ ವ್ಯವಹರಿಸಬೇಕು ಎಂದು ಹೇಳಿದ್ದಾನೆ.

ಮನಕ್ಕೆ, ಅಂತರಂಗಕ್ಕೆ ಒಪ್ಪಿದಂತೆ ಮಾಡಿದೆ, ನುಡಿದಂತೆ ನಡೆದೆ, ಉಳಿದವರ ಮಾತಿಗೆ ಬೆಲೆಕೊಡಲಿಲ್ಲ. ಇದು ತುಕಾರಾಮನ ಆತ್ಮನಿವೇದನೆ, ಸ್ವಂತ ಬುದ್ಧಿಯಿಂದ ಯೋಚಿಸುವ ಜನರೇ ಜಗತ್ತಿಗೆ ಬೆಳಕು ನೀಡಬಲ್ಲರು. ಇದರಿಂದ ಜಗತ್ತಿನ ಹಳೇ ಮರಕ್ಕೆ ಹೊಸ ಚಿಗುರು ಅಂಕುರಿಸುತ್ತದೆ. ಲೋಕ ಕಲ್ಯಾಣಕ್ಕಾಗಿ ಜನರ ವಿರುದ್ಧ ವರ್ತಿಸಬೇಕಾಗುತ್ತದೆ. ಅವರ ವಿರೋಧವಷ್ಟೇ ಅಲ್ಲ. ತಿರಸ್ಕಾರವನ್ನೆ ಅರಗಿಸಿಕೊಳ್ಳಬೇಕಾಗುತ್ತದೆ. ಅವರು ನೀಡಿದ ಹಿಂಸೆ, ಅಪಮಾನವನ್ನ ಸಹಿಸಿ ಕೊಳ್ಳಬೇಕಾಗುತ್ತದೆ. ಹಿತ ಸಂಬಂಧ ಹೊಂದಿದವರ ಜತೆ ದಾವೆ ಹೂಡಬೇಕಾಗುತ್ತದೆ. ಖರೆ ಎಂದರೆ ಅವರೇ ಹೂಡುತ್ತಾರೆ. ಜನರಿಗೆ ಅಂಜದೆ ಅಳುಕದೆ ಎದೆ ಸೆಟೆಸಿ ಬದುಕ ಬೇಕಾಗುತ್ತದೆ. ನಾನು ‘ಚತುರ’ರಿಗೆ ಹೆದರಲಿಲ್ಲ – ಎಂದು ತುಕಾರಾಮ ಹೇಳುತ್ತಾನೆ. ಈ ‘ಚತುರ’ ಜನರು ಯಾರು ಎಂಬುದು ನಮಗೆಲ್ಲ ಗೊತ್ತಿರುವ ಸಂಗತಿ. ಈ ಚತುರ ಜನರು ತುಕಾರಾಮನ ಮೇಲೆ ನಾನಾ ರೀತಿಯ ಒತ್ತಡ ಹೇರಿದರು, ಸಿಲುಕಿಸುವ ಪಯತ್ನ ಮಾಡಿದರು. ಆದರೆ ತುಕಾರಾಮನು ಅವರಿಗೆ ಕುಗ್ಗಲಿಲ್ಲ, ಬಾಗಲಿಲ್ಲ, ಹಿಂಜರಿಯಲಿಲ್ಲ. ಅಂತಃಸಾಕ್ಷಿಯಂತೆ ನುಡಿದನು-ನಡೆದನು. ನಾನೇ ಸ್ವತಃ ನನ್ನ ಉದರದಲ್ಲಿ ಹುಟ್ಟಿದೆ, ಸ್ವತಃ ಹೆತ್ತೆ, ಸ್ವಂತ ಸಂರಕ್ಷಕನಾದೆ ಎಂಬ ಅವನ ವಚನವು ಗಮನಾರ್ಹವಾದುದು.

ನಾವೇ ಕೃಪಣರುಕುಬ್ಜರು

ಇಂದು, ನಾವು ತುಕಾರಾಮನನ್ನು ಅರಿತುಕೊಳ್ಳಲಾದರೂ ಅವನ ವಚನವನ್ನು ಆತ್ಮಗತ ಮಾಡಿಕೊಳ್ಳಬೇಕಾಗಿದೆ. ಕೊನೆಪಕ್ಷ ಅವನನ್ನು ಅರ್ಥಮಾಡಿಕೊಳ್ಳುವಾಗ ಬಹುಮತವನ್ನು ಬದಿಗೊತ್ತಿ ಮನಸಾಕ್ಷಿಗೆ ಬೆಲೆ ಕೊಡಬೇಕು. ವಿವೇಕದ ಮೇಲೆ ಭರವಸೆಯಿಡಬೇಕು. ತುಕಾರಾಮನು ಯಾವ ಮೌಲ್ಯದ ಮೇಲೆ ಹಲ್ಲೆ ಮಾಡಿದನೋ, ಆ ಮೌಲ್ಯವನ್ನೇ ಮುದ್ದಾಡುವವರ ದೃಷ್ಟಿಯಿಂದಲೇ ನಾವು ತುಕಾರಾಮನನ್ನು ನೋಡಲಾರಂಭಿಸಿದರೆ, ನಮ್ಮಂಥ ಕೃಪಣರು ಕುಬ್ಜರು ಮತ್ತೆ ಯಾರಿಲ್ಲ. ಈ ಕುಬ್ಜ ಭಾವನೆಯನ್ನು ತೊರೆದ ದಿನವೇ ನಾವು ಖರೆ ಅರ್ಥದಲ್ಲಿ ಸ್ವತಂತ್ರರಾಗುತ್ತೇವೆ, ಮುಕ್ತರಾಗುತ್ತೇವೆ, ಮನುಷ್ಯರೆಂದುಕೊಳ್ಳಲು ಅರ್ಹರಾಗುತ್ತೇವೆ.

ತುಕಾರಾಮನನ್ನು ಅರಿತುಕೊಳ್ಳುವಾಗ ಅಷ್ಟೇ ಅಲ್ಲ, ಅವನ ಮೌಲ್ಯಮಾಪನ ಮಾಡುವಾಗಲೂ ಸಹ ನಾವು ನಮ್ಮ ಅಂತಃಸಾಕ್ಷಿಗೆ ಕೇಳಬೇಕಾಗುತ್ತದೆ ಎಂದು ನನ್ನ ಅನಿಸಿಕೆ. ಹೀಗೆ ಮಾಡುವದರಿಂದ ಅವನ ಮೇಲೆ ಹೊರಿಸಲಾದ ಹಲವು ಆರೋಪಗಳು ಕುಸಿದು ಬೀಳುತ್ತವೆ. ಈ ಪುಸ್ತಕದ ಸ್ವರೂಪ ಖಂಡನೆ-ಮಂಡನೆಯ ಮಾದರಿಯದಲ್ಲ. ಆದರೂ ಇಲ್ಲಿ ಒಂದೆರಡು ವಿಷಯಗಳ ವಿವೇಚನೆ ಕೈಕೊಳ್ಳುವದು ಅಗತ್ಯ ಎಂದೆನಿಸುತ್ತದೆ.

ಅಂತರ್ಗತ ಅನ್ಯಾಯದ ವಿರುದ್ಧ ಹೋರಾಡುವದೂ ಸ್ವಾತಂತ್ರ್ಯಯುದ್ಧವೇ

ಇಲ್ಲಿ ರಾಜಕೀಯ ಸ್ವಾತಂತ್ರ್ಯದ ದೃಷ್ಟಿಯಿಂದ ಎತ್ತಿದ ಆಕ್ಷೇಪದ ಕುರಿತು ಮೊದಲು ವಿವೇಚನೆ ಕೈಕೊಳ್ಳೋಣ. ತುಕಾರಾಮನು ಕ್ರೂರ ಮುಸಲ್ಮಾನ ಆಡಳಿತದ ವಿರುದ್ಧ ಏನೂ ಮಾಡಲಿಲ್ಲ ಎಂದು ಹಲವು ಸಲ ಆರೋಪ ಮಾಡಲಾಗುತ್ತದೆ. ವಾದಕ್ಕಾಗಿ ಒಂದು ಕ್ಷಣ ಒಪ್ಪಿಕೊಂಡರೂ, ಈ ಬಗೆಯ ಆಡಳಿತದ ವಿರುದ್ಧ ಹೋರಾಡುವದಷ್ಟೇ ಸ್ವಾತಂತ್ರ್ಯವೆಂದು ನಿರ್ಧರಿಸಿದ್ದು ಯಾರು? ಇದೇ ರಾಷ್ಟ್ರಭಕ್ತಿಯ, ಸಾಮಾಜಿಕ ಹಿತದ ಮಾನದಂಡವೆಂದು ಹೇಳಿದವರಾರು? ಸಮಾಜದ ಆಂತರಿಕ ಅನ್ಯಾಯದ ವಿರುದ್ಧ ಹೋರಾಡಿ ಶುದ್ಧ ಸಮಾಜ ವ್ಯವಸ್ಥೆಯನ್ನು ನಿರ್ಮಿಸಲು ಸರ್ವಸ್ವವನ್ನೂ ಪಣಕ್ಕೊಡ್ಡಿ ನಡೆಸಿದ ಹೋರಾಟ ಸಹ ಶ್ರೇಷ್ಠದರ್ಜೆಯ ರಾಷ್ಟ್ರ ಭಕ್ತಿ-ಸಾಮಾಜಿಕ ಹಿತವಾಗಿರುತ್ತದೆ. ಒಬ್ಬನೇ ಮನುಷ್ಯ ಎಲ್ಲ ಹೋರಾಟವನ್ನೂ ಮಾಡುವದು ಸಾಧ್ಯವಿಲ್ಲ. ಮಾನವ ಮುಕ್ತಿಗಾಗಿ ಕೇವಲ ಒಬ್ಬನೇ ಸ್ವಾತಂತ್ರ್ಯ ಯೋಧ ಹೋರಾಡಿದ ಉದಾಹರಣೆ ಜಗತ್ತಿನಲ್ಲಿ ಎಲ್ಲಿಯೂ ಇಲ್ಲ ಎಂದೆನ್ನಬಹುದು. ತಾತ್ಪರ್ಯ : ತುಕಾರಾಮನು ನಡೆಸಿದ ಹೋರಾಟವನ್ನು, ಅವನ ಕಾರ್ಯದ ಮಾನದಂಡದಿಂದಲೇ ಅಳೆಯಬೇಕಾಗುತ್ತದೆ. ಹಾಗೇ ಮಾಡಿದಾಗಲೇ ಬಹುಜನ ಸಮಾಜವನ್ನು ತಥಾಕಥಿತ ಸ್ವಕೀಯರನ್ನು ಸಾಮಾಜಿ, ಧಾರ್ಮಿಕ ಮತ್ತು ಸಾಂಸ್ಕೃತಿಕ ಗುಲಾಮಗಿರಿಯಿಂದ ಮುಕ್ತರನ್ನಾಗಿಸಲು ನಡೆಸಿದ ಹೋರಾಟವು ಅಮೂಲ್ಯವಾಗಿತ್ತು ಎಂದೇ ಒಪ್ಪಿಕೊಳ್ಳಬೇಕಾಗುತ್ತದೆ.

ಈ ಆರೋಪಕ್ಕೆ ಸಂಬಂಧ ಪಟ್ಟಂತೆ ಮತ್ತೂ ಒಂದು ಗಂಭೀರ ವಿಷಯವನ್ನು ಗಮನಿಸಬೇಕಾಗಬಹುದು. ತುಕಾರಾಮನ ಮೆಲೆ ಆರೋಪ ಹೊರಿಸುವ ಜನರ ತುಕಾರಾಮನ ಕಾಲದಲ್ಲಿದ್ದ ಪೂರ್ವಜರೇ ಅದೇ ಮುಸಲ್ಮಾನರ ದರಬಾರರಲ್ಲಿ ಅಥವಾ ಸರಕಾರಿ ಆಡಳಿತದಲ್ಲೇ ಸುಖಸಂತೋಷದಿಂದ ನೌಕರಿ ಮಾಡುತ್ತ ಮುಸಲ್ಮಾನರಿಗೆ ಮುಜರೆ ಸಲ್ಲಿಸುತ್ತಿದ್ದರು. ಅಷ್ಟೇ ಅಲ್ಲ, ಅದೇ ಮುಸ್ಲಿಂ ಸರಕಾರದ ಪದಾಧಿಕಾರಿಯಾಗಿ ವೈದಿಕ ಧರ್ಮಶಾಸ್ತ್ರದ ಆಧಾರದಿಂದ ತುಕಾರಾಮನನ್ನು ನ್ಯಾಯಾಲಯಕ್ಕೆ ಎಳೆದು ಅವನಿಗೆ ಶಿಕ್ಷೆಯ ಘೋಷಣೆ ನೀಡುತ್ತಿದ್ದರು. ಹೀಗೆ ಶಿಕ್ಷೆ ನೀಡದಿದ್ದರೆ ಸರಕಾರ ಮುಳುಗುವ ಭೀತಿಯನ್ನು ವ್ಯಕ್ತಮಾಡುತ್ತಿದ್ದರು. ಅಂದರೆ, ತುಕಾರಾಮನಂತಹ ಶೂದ್ರನ ಪ್ರತಿಭೆಯ ಅಂಕುರವನ್ನು ಕಿತ್ತು ಹಾಕಿದರೆ, ಇಂಥ ಶೂದ್ರರನ್ನು ಹೊಸಕಿ ಹಾಕಿದರೆ, ಮುಸಲ್ಮಾನ ಆಡಳಿತವು ಅಚಂದ್ರಾರ್ಕ ತಾಳುವದರಿಂದ ಏನೂ ಹಾನಿಯಾಗುವದಿಲ್ಲ ಎನ್ನುವದೇ ಇದರ ಅರ್ಥ. ತಾತ್ಪರ್ಯ: ತುಕಾರಾಮನು ವಿಶಿಷ್ಟ ರಾಜ್ಯದ ಆಡಳಿತದ ವಿರುದ್ಧ ಏನೂ ಮಾಡಲಿಲ್ಲ ಎಂಬ ನಿಮಿತ್ತ ಮಾಡುವದರಲ್ಲಿ ಯಾವ ಅರ್ಥವೂ ಇಲ್ಲ. ಇಂಥ ಯಾವ ಪ್ರಯತ್ನ ಮಾಡಿದರೂ, ಅದರಿಂದ ತುಕಾರಾಮನ ಸಾಮಾಜಿಕ ಕ್ರಾಂತಿ ಕುಂಠಿತಗೊಳ್ಳುತ್ತದೆ ಎಂದಾಗಲಿ, ಕಡಿಮೆ ಮಹತ್ವದ್ದು ಎಂದಾಗಲಿ ಆಗುವುದಿಲ್ಲ.

ನಮ್ಮ ಚರಿತ್ರೆ ನಿಜವಾಗಿಯೂ ಬಂಜೆತನದ್ದೇ?

ತುಕಾರಾಮನು ಕ್ರೂರ ಆಡಳಿತ ಹೊಡೆದೋಡಿಸಲು ಯಾವ ಪ್ರೇರಣೆಯನ್ನೂ ನೀಡಲಿಲ್ಲ. ಅವನು ನಿಷ್ಕ್ರೀಯತೆಯಿಂದ ತಾಳಕುಟ್ಟುತ್ತಲೇ ಕೂತಿದ್ದ. ದೈವವಾದಿಯಾಗಿದ್ದ, ಗತ್ಯಂತರವಿಲ್ಲದವನಾಗಿದ್ದ, ಅಸಹಾಯಕನಾಗಿದ್ದ ಮುಂತಾದ ವರ್ಣನೆಯನ್ನು ಮಾಡಿ, ಅವನ ಪ್ರತಿಮೆಯನ್ನು ಚಿಂದಿ ಚಿಂದಿ ಮಾಡುವ ಪ್ರಕ್ರಿಯೆಯು ಒಂದೆಡೆ ನಡೆಯುತ್ತಿದ್ದರೆ, ಮತ್ತೊಂದೆಡೆಯಲ್ಲಿ ಅವನ ಜನಪ್ರಿಯತೆಯ ಲಾಭಪಡೆಯಲು, ಅವನು ನಮ್ಮ ಪರಂಪರೆಯ ಅವಿಭಾಜ್ಯ ಅಂಗವಾಗಿದ್ದ, ಅವನಿಗೆ ಪರಂಪರೆಯ ಬಗೆಗೆ ಶ್ರದ್ಧೆಯಿತ್ತು, ಪರಂಪರೆಯ ಕಿಂಕರನಾಗಿದ್ದ ಎಂದೆಲ್ಲ ಆಡಂಬರದಿಂದ ತೋರಿಸಿ, ಅವನನ್ನು ಅರಗಿಸಿಕೊಳ್ಳುವ ಪ್ರಯತ್ನ ನಡೆದಿರುತ್ತದೆ. ಅವನು ನಡೆಸಿದ ಸಂಪೂರ್ಣ ಹೋರಾಟವನ್ನು ಮುಚ್ಚಿ ಹಾಕಲಾಗುತ್ತದೆ. ಸಂಘರ್ಷವನ್ನು ಅಡಗಿಸಿಡುವ ಈ ಪ್ರಕ್ರಿಯೆಯು ನ್ಯಾಯದ ದೃಷ್ಟಿಯಿಂದ ಹೋರಾಡುವ ಚರಿತ್ರೆಯ ಮೇಲೆ ಒಂದು ರೀತಿಯಲ್ಲಿ ಬಂಜೆತನವನ್ನು ಹೊರಿಸಲಾಗುತ್ತದೆ. ಈ ಪ್ರಕ್ರಿಯೆಯಿಂದ ಈ ದೇಶದ ಚರಿತ್ರೆಯಲ್ಲಿ ಆಂತರಿಕ ಅನ್ಯಾಯದ ವಿರುದ್ಧ ಯಾರೂ ಹೋರಾಟವನ್ನು ನಡೆಸಲೇ ಇಲ್ಲ. ನ್ಯಾಯಕ್ಕಾಗಿ ಹೋರಾಡುವ ಮಹಾಮಾನವನು ಜನಿಸುವ ದೃಷ್ಟಿಯಲ್ಲಿ ಇಲ್ಲಿಯ ನೆಲದ ಗರ್ಭ ಬಂಜೆಯಾಗಿದೆ ಎಂಬ ಭ್ರಮೆ ನಿರ್ಮಾಣಗೊಳ್ಳುತ್ತದೆ. ಆದರೆ ವಾಸ್ತವ ಹಾಗಿಲ್ಲ. ಇಲ್ಲಿಯ ನೆಲದ ಗರ್ಭ ಬಂಜೆಯಲ್ಲ, ಅದರ ಚರಿತ್ರೆಯ ಬರವಣಿಗೆ ಮಾತ್ರ ಹುಸಿತನದಿಂದ ಕೂಡಿದ್ದು ದಿಕ್ಕು ತಪ್ಪಿಸುವದಾಗಿದೆ ಎಂಬುದೇ ಸಮಾಧಾನದ ಸಂಗತಿ.

ನಮಗಾಗಿ ಬಲಿದಾನ ಮಾಡುವವನನ್ನು ದೂರ ಸರಿಸುತ್ತೀರಾ?

ಇಂಥ ಸ್ಥಿತಿಯಲ್ಲಿ ನಾವು ಒಂದು ಗಂಭೀರವಾದ, ನಿರ್ಣಾಯಕ ಪ್ರಶ್ನೆಯ ಎದುರು ನಿಂತಿದ್ದೇವೆ ಎಂಬ ಕಲ್ಪನೆ ನನಗಿದೆ. ಇಂದು ನ್ಯಾಯಯುತ ಹೋರಾಟ ನಡೆಸುವವರು ತುಕಾರಾಮನ ಯಾವ ನಿಲುವನ್ನು ಕುತಂತ್ರದ ಭಾಗವೆಂದು ಅವನು ‘ತನ್ನವನು’ ಎಂದು ತೋರಿಸುತ್ತಿದ್ದಾರೆ. ಹೀಗಿರುವಾಗ ನಾವು ಮಾಡಬೇಕಾಗಿರುವದು ಏನು? ಅವನನ್ನು ಶತ್ರುವೆಂದು ಭಾವಿಸಿ ಟೀಕೆಯ ಹಲ್ಲೆ ನಡೆಸುವದೇ, ನಮಗೂ ಅದಕ್ಕೂ ಯಾವ ಸಂಬಂಧವೂ ಇಲ್ಲೆಂದು ಅವನನ್ನು ಉಪೇಕ್ಷಿಸುವದೇ? ಅವನು ‘ನಮ್ಮವನಲ್ಲ’ ಎಂದು ಅವನನ್ನು ದೂರ ಸರಿಸುತ್ತಿರಾ? ಅಥವಾ ಅವನು ನಮಗಾಗಿ ಪ್ರಾಣಾಂತಿಕವಾದ ಹೋರಾಟ ನಡೆಸಿದನು ಎಂದು ಅವನ ಬಗೆಗೆ ಕೃತಜ್ಞತೆಯನ್ನು ತಾಳುತ್ತಿರೋ? ಭವಿಷ್ಯಕಾಲದ ನಮ್ಮ ಹೋರಾಟಕ್ಕೆ ಪ್ರೇರಣೆ ನೀಡುವ ನಮ್ಮ ಪಕ್ಷದ ಮಹಾಯೋಧನೆಂದು ಅವನನ್ನು ಗೌರವಾದರದಿಂದ ಕಾಣುತ್ತೀರಾ? ಅವನು ನಮಗಾಗಿ ಬದುಕಿದ ನಮಗಾಗಿ ಸಾವನ್ನು ಅಪ್ಪಿದ ಎಂಬುದನ್ನು ಗಮನಿಸಿ ಅವನನ್ನು ‘ನಮ್ಮವ’ ನೆಂದು ಕೊಳ್ಳುತ್ತೀರಾ?

ನ್ಯಾಯಕ್ಕಾಗಿ ಬಲಿದಾನ ನೀಡಿದವನು ನಮ್ಮವನೆಂದು ಅನಿಸದಿದ್ದರೆ, ಈ ಬಗೆಯ ಪ್ರೇರಣೆ ನೀಡುವ ಬೇರೊಬ್ಬ ವ್ಯಕ್ತಿಯು ನಮಗೆ ಸಿಗಲಿಕ್ಕಿಲ್ಲ. ಕಾಲದ ಪ್ರವಾಹದಲ್ಲಿ ಅವರು ನಮ್ಮ ಪಕ್ಷದ ಎಲ್ಲ ‘ಯೋಧ’ ರನ್ನು ಓಡಿಸಿಕೊಂಡು ಹೋದದ್ದೇ ಕಾಣುತ್ತೇವೆ. ಭೂತಕಾಲದ ಪ್ರಕ್ರಿಯೆಯೇ ಮುಂದುವರಿದರೆ, ನಾವು ಸನಾತನ ಮೋಹದಿಂದ ಅದನ್ನು ಹಾಗೆಯೇ ಮುಂದುವರಿಸಿಕೊಂಡು ಹೋಗಲು ಅವಕಾಶ ನೀಡಿದರೆ, ಇಂದು ನಮ್ಮ ಪರವಾಗಿರುವ ಪುಲೇ, ಅಂಬೇಡ್ಕರರಂಥವರು, ಅವರೂ ಮತ್ತೆ ಐವತ್ತು ವರುಷಗಳ ಬಳಿಕ ನಿಸ್ಸಂದೇಹವಾಗಿ ಅವರ ಕೈಯ ಶಸ್ತ್ರವಾಗಿ ನಮ್ಮ ಮೇಲೆಯೇ ಎರಗುವದನ್ನು ಕಾಣುತ್ತೇವೆ. ಕಬಳಿಸುವ ಅವರ ಪ್ರಕ್ರಿಯೆ ಎಂದೋ ಆರಂಭವಾಗಿದೆ. ತಾತ್ಪರ್ಯ: ತುಕಾರಾಮನಂಥವರನ್ನು ನಾವು ದೂ ರ ಸರಿಸಿದರೆ, ನಮ್ಮ ಪಕ್ಷವೇ ನಿರ್ಜನ, ಬಟಾಬಯಲು, ಭಣಭಣವಾಗಿ ಕಾಣಬಹುದು. ನಮ್ಮ ಕಷ್ಟದಿಂದ ಎದ್ದು ನಿಂತ, ಸಮೃದ್ಧಗೊಂಡ ಮಹಾ ಮಾನವನ ಕಣವನ್ನು ನಮ್ಮ ಕಣ್ಣೆದುರಿಗೇ ದೋಚಲು ಅವಕಾಶ ನೀಡಿದರೆ, ನಾವು ಸ್ಪೂರ್ತಿ, ಪ್ರೇರಣೆಯ ಆಹಾರವಿಲ್ಲದೆ ಚಡಪಡಿಸಿ ಸಾಯುವದರಲ್ಲಿ ಎರಡು ಮಾತಿಲ್ಲ. ಒಂದೆಡೆ ನಾವು ಉಪವಾಸದಿಂದ ಸತ್ತರೆ, ಮತ್ತೊಂದೆಡೆ, ಆ ಮಹಾಮಾನವನನ್ನು ಪ್ರೀತಿಸುವವರು ‘ಆ ಪಕ್ಷ’ ಸೇರುತ್ತಾರೆ. ಆ ಮಹಾಮಾನವನ ಮೇಲಿನ ಪ್ರೀತಿಯಿಂದಾಗಿ ಅವನ ಶತ್ರುವಿನ ಬಲ ಹಿಗ್ಗುತ್ತದೆ. ಅಷ್ಟೇ ಅಲ್ಲ, ಆ ಶತ್ರುವಿನ ರಕ್ಷಣೆಗಾಗಿ ಜೀವ ತೆಗೆದುಕೊಳ್ಳಲು, ಜೀವ ನೀಡಲು ಸಿದ್ದರಾಗುತ್ತಾರೆ! ಇಂದು ನಮಗಾಗಿ ಪ್ರಾಣ ಕಳಕೊಳ್ಳುವ ಜನರು ‘ಅವರ’ ಕೈಯ ಶಸ್ತ್ರವಾಗಿರುತ್ತಾರೆ. ಕೆಲವೇ ದಿನಗಳಲ್ಲಿ ನಮ್ಮದೇ ಉಪೇಕ್ಷೆಯ, ತಿರಸ್ಕಾರದ ವಿಷಯವಾಗುತ್ತಿದ್ದರೆ, ಇಂಥ ಜನ ನಮಗೆಲ್ಲಿಂದ ಮತ್ತೆ ದೊರಕಿಯಾರು? ನಿರ್ಮಾನುಷರಾಗುವ ದಿಕ್ಕಿನತ್ತ ನಾವು ಹೆಜ್ಜೆ ಹಾಕುತ್ತಿರುತ್ತೇವೆ!

ಅವರು ತುಕಾರಾಮನಿಗೆ ಹಿಂಸೆ ನೀಡಿದ್ದೇಕೆ?

ಈ ಸಂದರ್ಭವನ್ನು ಮತ್ತೊಂದು ರೀತಿಯಲ್ಲಿ ಯೋಚಿಸಬಹುದು. ‘ಅವರು’ ವ್ಯಕ್ತಪಡಿಸುವಂತೆ ತುಕಾರಾಮನು ನಿಜವಾಗಿಯೂ ‘ಅವರವ’ ನಾಗಿದ್ದರೆ, ‘ಅವರೇಕೆ’ ತುಕಾರಾಮನಿಗೆ ಇಷ್ಟೆಲ್ಲ ಹಿಂಸೆ ನೀಡಿದ್ದರು? ಏಕೆ ಪೀಡಿಸಿದ್ದರು? ಅವನ ಒಂದೂ ಶಬ್ದ ಜನರ ಕಿವಿಗೆ ತಲುಪಬಾರದೆಂದು ಪ್ರಯತ್ನಿಸಿದ್ದೇಕೆ? ಹೃದಯಕ್ಕೆ ತಟ್ಟಬಾರದಂತೆ ಮಾಡಿದ್ದೇಕೆ? ಅಭಂಗ ಮುಳುಗಿಸಿದ್ದೇಕೆ? ಬಹಿಷ್ಕಾರ ಹಾಕಿದ್ದೇಕೆ? ಗಡಿಪಾರು ಮಾಡಲು ಪ್ರಯತ್ನಿಸಿದ್ದೇಕೆ? ತುಕಾರಾಮ ‘ಅವರವ’ನಾಗಿದ್ದರೆ ಎಲ್ಲ ಸಹಿಸಿಯೂ ಒಪ್ಪಂದ ಮಾಡಿಕೊಳ್ಳಲು ನಿರಾಕರಿಸಿದ್ದೇಕೆ? ಈ ಎಲ್ಲ ಪ್ರಶ್ನೆಗೆ ಉತ್ತರವನ್ನು ಶಾಂತವಾಗಿ ನಮ್ಮ ಹೃದಯದೊಳಗೇ ಹುಡುಕಬೇಕಾಗುತ್ತದೆ.

ಭೂತಕಾಲದಲ್ಲಿ ಅದದ್ದು ಬಿಟ್ಟು ಬಿಡಿ. ಈಗ ಭಾವೀಕಾಲದ ನಮ್ಮ ಚಳುವಳಿಯು ಹುಸಿಯಾಗಬಾರದು, ವಂಚನೆಗೊಳಗಾಗಬಾರದೆಂದಿದ್ದರೆ, ಹಾಗೆಯೇ ಭೂತಕಾಲದ ನಮ್ಮ ಚಳುವಳಿ ಮೋಸ ಹೋಗಿದ್ದೇಕೆ, ನಮ್ಮ ಚಳವಳಿಯ ಪ್ರೇರಣೆಯ ಸ್ಥಾನವನ್ನು ಹೇಗೆ ಯಶಸ್ವಿಯಾಗಿ ಅಪಹರಣಗೊಳಿಸಲಾಯಿತು ಎಂಬುದು ಸರಿಯಾಗಿ ಅರಿತುಕೊಳ್ಳಬೇಕಾದರೆ ಇದನ್ನೆಲ್ಲ ತಿಳಿದುಕೊಳ್ಳಬೇಕಾಗುತ್ತದೆ. ಸನಾತನಿಗಳು ಕೈಕೊಂಡ ಪ್ರಚಾರವನ್ನು ಭೇದಿಸಿ, ಆರುಪಾರು ನೊಡುವಂತಹ ಪಾರದರ್ಶಕ ದೃಷ್ಟಿಯನ್ನು ಪ್ರಾಪ್ತ ಮಾಡಿಕೊಳ್ಳುವದು, ಚರಿತ್ರೆಯನ್ನು ವಿಕೃತಿಗೊಳಿಸುವವರ ಮೇಲೆ ಜಯ ಸಾಧಿಸುವದು ಮತ್ತು ತುಕಾರಾಮನಂತಹ ಮಹಾಮಾನವನನ್ನು ವಿರೋಧಕರ ಕಪಿಮುಷ್ಟಿಯಿಂದ ಬಿಡಿಸುವದು ಅಗತ್ಯವಾಗಿದೆ.

ಅಕ್ಷರ ಜ್ಞಾನವಿದ್ದೂ ಹೆಬ್ಬಟ್ಟು ಒತ್ತುವದೇ?

ತುಕಾರಾಮನಿಗೆ ವೇದದ ಬಗೆಗೆ, ಧರ್ಮದ ಬಗೆಗೆ ಬರೆಯುವ ಮಾತಾಡುವ ಅಧಿಕಾರವನ್ನು ನಿರಾಕರಿಸಲಾಗಿತ್ತು. ಈ ನಿರ್ಣಯದ ವಿರೋಧದಲ್ಲಿ ಅವನು ಯುದ್ಧ ಸಾರಿದ. ಇದು ಕೇವಲ ‘ತುಕಾರಾಮ’ ಎಂಬ ಒಬ್ಬ ವ್ಯಕ್ತಿಯ ಅಧಿಕಾರ ಪ್ರಾಪ್ತಿಗಾಗಿ ನಡೆಸಿದ ಯುದ್ಧವಲ್ಲ. ಜಾತಿ-ಕುಲ-ವರ್ಣ ಈ ಮರ್ಯಾದೆಯ ಆಚೆಗೆ ಹೋಗಿ ಒಂದು ವಿಶಾಲವಾದ, ವ್ಯಾಪಕವಾದ ಬಹುಜನ ಸಮಾಜದ ಜ್ಞಾನದ ಮೇಲಿನ ಧರ್ಮದ ಮೇಲಿನ ಅಧಿಕಾರ ಪ್ರಾಪ್ತಿಗಾಗಿ ಯುದ್ಧವನ್ನು ಆರಂಭಿಸಿದ್ದ. ಈ ಬಹುಜನ ಸಮಾಜದ ನೂರಾರು ತಲೆಮಾರು ಈ ಅಧಿಕಾರದಿಂದ ವಂಚಿತವಾಗಿತ್ತು. ಇಂಥ ಅಧಿಕಾರವಿರುತ್ತದೆ ಎಂಬ ಅರಿವೂ ಇಲ್ಲದೆ ದುಃಸ್ಥಿತಿ ಅವರದಾಗಿತ್ತು. ಸ್ವಂತದ ಆಧಿಕಾರವನ್ನು ನಿರ್ಮಲ ನೋಡುವ ಒಂದು ದೃಷ್ಟಿಯನ್ನು ತುಕರಾಮನು ಈ ಸಮಾಜಕ್ಕೆ ನೀಡಿದ. ಆನಂತರದ ಕಾಲದಲ್ಲೂ ಹಲವು ವ್ಯಕ್ತಿಗಳು ತ್ರೀವ್ರ ಹೋರಾಟ ನಡೆಸಿದ್ದರಿಂದ ಬಹುಜನ ಸಮಾಜಕ್ಕೆ ಈಗ ಶಿಕ್ಷಣದ, ಜ್ಞಾನದ, ಜತೆಗೆ ಉಳಿದೆಲ್ಲ ಸಂಗತಿಗಳ ಅಧಿಕಾರವು ಪ್ರಾಪ್ತವಾಗಿದೆ.

ಈ ಅಧಿಕಾರವನ್ನು ಈಗ ಸರಿಯಾಗಿ ಬಳಸುವ ಆಹ್ವಾನವು ಬಹುಜನ ಸಮಾಜರ ಎದುರಿಗಿದೆ. ಈ ಅಧಿಕಾರ ಇಲ್ಲದ್ದರಿಂದ ನಮ್ಮ ಬಹುಜನ ಸಮಾಜವು ಏನೇನಲ್ಲ ಕಳೆದುಕೊಳ್ಳಬೇಕಾಯಿತು ಎಂಬುದು ಸರಿಯಾಗಿ ಗುರುತಿಸಲು ಬರುವಂತಿರಬೇಕು. ಟೊಳ್ಳು ಶಿಕ್ಷಣದ ಅಧಿಕಾರಕ್ಕೆ ಏನೂ ಅರ್ಥವಿಲ್ಲ. ಚರಿತ್ರೆಯನ್ನು ಸ್ವತಂತ್ರ ದೃಷ್ಟಿಯಿಂದ ನೋಡುವ, ಸಮಾಜ ಸ್ಥಿತಿಯನ್ನು ಸರಿಯಾಗಿ ಮೌಲ್ಯಮಾಪನ ಮಾಡುವ, ಸ್ವತಂತ್ರವಾಗಿ ಘಟನೆಗಳಿಗೆ ಅನ್ವಯಾರ್ಥ ನೀಡುವ ಶೈಕ್ಷಣಿಕ ಅಧಿಕಾರದ ಅಗತ್ಯವಿದೆ. ಟೊಳ್ಳು ಶಬ್ದಗಳ ಜ್ಞಾನ ಪಡೆಯುವದು, ಆ ಶಬ್ದಗಳ ಮಾಧ್ಯಮದಿಂದ ತಮ್ಮನ್ನು ಗುಲಾಮರನ್ನಾಗಿ ಮಾಡುವವರ ಮೌಲ್ಯವನ್ನೇ ನಿಜವೆಂದು ಒಪ್ಪುವದು ಸ್ವಾತಂತ್ರ್ಯವಲ್ಲ. ಯಾರು ತಮ್ಮ ಸರ್ವ ಅಧಿಕಾರವನ್ನು ಕಸಿದುಕೊಂಡು ಕಂಗಾಲರನ್ನಾಗಿ ಮಾಡಿದರೋ, ಅವರದ್ದೇ ದೃಷ್ಟಿಯಿಂದ ಜೀವನವನ್ನು ನೋಡುವದೇ ಆಗಿದ್ದರೆ, ಅಂಥ ಶಿಕ್ಷಣದ ಅಧಿಕಾರ ಪಡೆದು ಲಾಭವಾದರೂ ಏನು? ಇದಂತೂ ಅಕ್ಷರ ಜ್ಞಾನವಿದ್ದೂ ಹೆಬ್ಬಟ್ಟು ಒತ್ತಿದಂತೆ. ಈ ಬಗೆಯ ಶಿಕ್ಷಣದಿಂದ ಆತ್ಮವಂಚನೆ ಮಾಡುವ ಜನರಿಗಿಂತ, ನಮ್ಮ ನಿರಕ್ಷರಿಗಳಾದ ಹಿಂದಿನ ತಲೆಮಾರಿನ ಬಂಧು ಬಳಗದವರೇ ಶ್ರೇಷ್ಠರು ಎಂದೆನ್ನಬೇಕಾಗುತ್ತದೆ. ಹೀಗಾಗಿ ಇಂದಿನ ತಲೆಮಾರಿನವರು ಹಳೇ ಮೌಲ್ಯಗಳನ್ನು ಚಿಕಿತ್ಸೆಗೊಳಪಡಿಸುವದು, ಅದರಲ್ಲಿ ಘಾತುಕವಾದುದನ್ನು ಕೈಬಿಡುವದು, ಒಂದು ಪರಿಶುದ್ಧವಾದ ಮೌಲ್ಯ ವ್ಯವಸ್ಥೆಯನ್ನು ನಿರ್ಮಾಣ ಮಾಡುವದು ಕಾಲದ ಅಗತ್ಯವಾಗಿದೆ.

ಅಲ್ಲಿಯವರೆಗೆ ಕ್ರಾಂತಿಕಾರಿ ತುಕಾರಾಮನೇ ಬೇಕು!

ತುಕಾರಾಮನು ಹೇಳಿದ ನಿರ್ಮಲ ಮತ್ತು ನಿರಾಗಸವಾದ ಧರ್ಮವು ನಮ್ಮ ನೆಲದಲ್ಲಿ ಅಸ್ತಿತ್ವಕ್ಕೆ ಬರಬೇಕು, ಬೇರೂರಬೇಕು ಎಂಬ ಭಾವನೆಯು ನಿಜವಾಗಿಯೂ ನಮ್ಮಲ್ಲಿದ್ದರೆ, ಆ ತುಕಾರಾಮನ ವಿಚಾರ ಜ್ಯೋತಿಯಿಂದ ಪ್ರಜ್ವಲಿತಗೊಂಡ, ಹೊಸ ಯುಗಕ್ಕೆ ಅನುರೂಪನಾದ ಹೊಸ ತುಕಾರಾಮನ ಅಗತ್ಯವಿದೆ. ಹೊಸಕಾಲದಲ್ಲಿ ಅವನ ಹೆಸರು ಪ್ರಾಯಶಃ ತುಕಾರಾಮನಾಗಿರಲಿಕ್ಕಿಲ್ಲ, ಆದರೆ ಅವನ ಅಂತರಂಗದಲ್ಲಿ ತುಕಾರಾಮನ ಅಂತರಂಗವಿರಬಹುದು. ದೀನ ದಲಿತರನ್ನು ಅಪ್ಪಿ ಮುದ್ದಾಡುವ ತತ್ವಜ್ಞಾನವಿರಬಹುದು. ಬಡವರ ಸಂಸಾರ ಉಧ್ವಸ್ತಗೊಳ್ಳಬಾರದೆಂದು ತನ್ನ ಆರ್ಥಿಕ ಸತ್ತೆಯನ್ನು ವಿಸರ್ಜನೆ ಮಾಡುವಷ್ಟು ಮಾನವೀಯತೆಯಿರಬಹುದು. ನಿರಾಕರಿಸಿದ ಅಧಿಕಾರಕ್ಕಿಂತಲೂ, ಶ್ರೇಷ್ಠವಾದ ಅಧಿಕಾರ ಮಾರ್ಗವನ್ನು ಮುಕ್ತಗೊಳಿಸುವ ಶಕ್ತಿಯಿರಬಹುದು. ಢೋಂಗಿತನದ ಅಭಾವ, ನಡೆ-ನುಡಿಯಲ್ಲಿ ಐಕ್ಯತೆಯಿರಬಹುದು, ಹಾಗೆಯೇ ಅಡ್ಡಿ ಆತಂಕ ಮಾಡುವ ದುಷ್ಟರ ಜತೆಯಲ್ಲಿ ಹೋರಾಡುವ ಸಿದ್ಧತೆಯಿರಬಹುದು. ಎಲ್ಲವನ್ನೂ ತನ್ನ ಪ್ರಿಯ ಜೀವನ ಮೌಲ್ಯಕ್ಕಾಗಿ ನಿವಾಳಿಸಿ ಚೆಲ್ಲುವ ಸಿದ್ಧತೆಯಿರಬಹುದು. ಈ ಸರ್ವ ಪ್ರಕ್ರಿಯೆಯ ಸಾರವೆಂದು, ಇದೇ ಸಮಾಜವನ್ನು ನಿರ್ಮಲ, ಆನಂದಮಯ ಸ್ಥಿತಿಯತ್ತ ಒಯ್ಯುವ ಚಡಪಡಿಕೆಯಿರಬಹುದು. ಆನಂದದ ಸರೋವರದಲ್ಲಿ ಆನಂದದ್ದೇ ತರಂಗ, ಆನಂದದ ಅಂಗವೋ ಆನಂದವೇ- ಎಂದು ಸ್ವತಃ ತುಕಾರಾಮನೇ ಬಣ್ಣಿಸಿದ ಅವಸ್ಥೆಯನ್ನು ನಿರ್ಮಿಸುವ ಪ್ರಯತ್ನವೊ ಇರಬಹುದು. ಅಂತರಂಗದಲ್ಲಿ ಆನಂದಮಯ ಮಾಧುರ್ಯವೇ ಝರಿಯಾಗಿ ಹರಿಯುವ ಅಸಂಖ್ಯಾತ ತುಕಾರಾಮನು ನಮ್ಮ ಭಾರತದ ಒಡಲಲ್ಲಿ ಜನಿಸಿ, ಸಮಾಜವನ್ನೇ ಬೆಳಗ ಬೇಕೆನ್ನುವದು ನಾವು ಕಾಣುವ ಕನಸು. ಈ ಕನಸು ನನಸಾದರೆ, ನಮ್ಮ ಸಮಾಜರಚನೆಯಲ್ಲಿ ಒಂದು ಪರಿಪೂರ್ಣ ಸಮತೋಲನವನ್ನು ಶಾಶ್ವತವಾಗಿ ನಿರ್ಮಿಸುವದು ಸಾಧ್ಯವಾದರೆ, ಬೇರೊಬ್ಬ ತುಕಾರಾಮನಿಗೆ ಮತ್ತೆ ಕ್ರಾಂತಿ ಮಾಡುವ ಅವಶ್ಯಕತೆಯಿರುವದಿಲ್ಲ. ಎಲ್ಲಿಯವರೆಗೆ ಆ ಸಮತೋಲನ ನಿರ್ಮಾಣಗೊಳ್ಳುವದಿಲ್ಲವೋ, ಅಲ್ಲಿಯವರೆಗೆ ಮಾತ್ರ ನಮಗೆ ಕ್ರಾಂತಿಕಾರಿ ತುಕಾರಾಮನೇ ಬೇಕು!