ಸ್ವಾಮಿ ವಿವೇಕಾನಂದರನ್ನು ‘ಕ್ರಾಂತಿಕಾರೀ ಸಂತ’ ಎಂದು ಕರೆಯುವುದು ಮೇಲುನೋಟಕ್ಕೆ ಒಂದು ವಿರೋಧಾಭಾಸದಂತೆ ತೋರಬಹುದು. ಯಾಕೆಂದರೆ ‘ಕ್ರಾಂತಿ’ ಮತ್ತು ‘ಸಂತ’ ಎಂಬ ಎರಡು ಪದಗಳು ಸೂಚಿಸುವ ಅರ್ಥಗಳು ಮತ್ತು ಆ ಅರ್ಥಗಳು ನಮ್ಮ ಮನಸ್ಸಿನ ಮುಂದೆ ಕಟ್ಟಿ ನಿಲ್ಲಿಸುವ ಚಿತ್ರಗಳು ಖಂಡಿತವಾಗಿಯೂ ಒಂದು ಮತ್ತೊಂದಕ್ಕೆ ವಿರೋಧಿ ಪರಿಕಲ್ಪನೆಗಳೆಂಬಂತೆ ಭಾಸವಾಗಬಹುದು. ‘ಕ್ರಾಂತಿ’ ಅಂದ ಕೂಡಲೆ ಜಗತ್ತಿನ ಇತಿಹಾಸದಲ್ಲಿ ನಡೆದಿರುವ ಅನೇಕ ಕ್ಷಿಪ್ರ ಬದಲಾವಣೆಗಳೂ, ಅವುಗಳ ಹಿಂದಿರುವ ಸರ್ವಾಧಿಕಾರಿಗಳ, ಜನನಾಯಕರ, ಯೋಧರ ಚಿತ್ರಗಳೂ, ಹಿಂಸೆ- ಹೋರಾಟ- ರಕ್ತಪಾತ ಇತ್ಯಾದಿಗಳ ನೆನಪುಗಳೂ ಸಹಜವಾಗಿಯೇ ನಮ್ಮ ಮನಸ್ಸಿನ ಮುಂದೆ ಹಾದು ಹೋಗುತ್ತವೆ. ಫ್ರೆಂಚ್ ಮಹಾಕ್ರಾಂತಿ, ರಷ್ಯಾದ ರಾಜ್ಯ ಕ್ರಾಂತಿ, ಚೀನಾದ ಜನಕ್ರಾಂತಿ ಇತ್ಯಾದಿ ಚಾರಿತ್ರಿಕ ಘಟನೆಗಳೂ ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತವೆ. ಆದರೆ ‘ಸಂತ’ ಎಂದ ಕೂಡಲೇ ಇದಕ್ಕೆ ವಿರುದ್ಧವಾದ ಚಿತ್ರಗಳು ಮೂಡುತ್ತವೆ. ತ್ಯಾಗ, ಶಾಂತಿ, ಧ್ಯಾನ, ತಪಸ್ಸು, ವೈರಾಗ್ಯ, ಕರುಣೆ, ಅನುಕಂಪ ಇತ್ಯಾದಿ ಗುಣಗಳು ಮತ್ತು ಇಂಥ ಗುಣಗಳನ್ನು ಮೈಗೂಡಿಸಿಕೊಂಡ ಹಲವು ವ್ಯಕ್ತಿತ್ವದ ನೆನಪುಗಳು ಮನಸ್ಸಿನ ಮುಂದೆ ಬಂದು ನಿಲ್ಲುತ್ತವೆ.

ವಾಸ್ತವವಾಗಿ ‘ಕ್ರಾಂತಿ’ ಅನ್ನುವ ಪದಕ್ಕೆ ನಾವು ಕೊಟ್ಟುಕೊಳ್ಳುವ ಅರ್ಥ ಕೇವಲ ಸಂಕುಚಿತವೂ, ಏಕಪಕ್ಷೀಯವೂ ಆಗಿದೆ. ಅದನ್ನು ಸರಿಯಾಗಿ ಗ್ರಹಿಸಿ ಅರ್ಥೈಸುವುದಾದರೆ, ‘ಕ್ರಾಂತಿ’ ಎನ್ನುವ ಪದದ ಅರ್ಥ- ‘ಆಮೂಲಾಗ್ರವಾದ ಬದಲಾವಣೆ’ ಎನ್ನುವುದೇ ಸರಿಯಾದದ್ದು. ನಿದರ್ಶನಕ್ಕೆ ಇತ್ತೀಚೆಗೆ ವಿಶೇಷವಾಗಿ ಬಳಕೆಯಾಗುತ್ತಿರುವ ‘ಹಸಿರು ಕ್ರಾಂತಿ’ ಎಂಬ ಪದ ಸೂಚಿಸುವ ಅರ್ಥವನ್ನೆ ಗಮನಿಸಬಹುದು. ಇದೇ ಪಟ್ಟಿಗೆ ಸಾಮಾಜಿಕ ಕ್ರಾಂತಿ, ಧಾರ್ಮಿಕ ಕ್ರಾಂತಿ ಎಂಬಂಥ ಮಾತುಗಳನ್ನೂ ಸೇರಿಸಿಕೊಳ್ಳಬಹುದು. ‘ಕ್ರಾಂತಿ’ ಎಂದರೆ ಮುಖ್ಯವಾಗಿ ಒಂದು ಸಿದ್ಧ ಅಥವಾ ಸ್ಥಗಿತ ವ್ಯವಸ್ಥೆಯಲ್ಲಿ, ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಕಾರಣಗಳಿಂದ ಆಗುವ ಹಠಾತ್ ಪರಿವರ್ತನೆ ಅಥವಾ ಬದಲಾವಣೆ ಎಂದು ಹೇಳಬಹುದು. ಈ ಕ್ಷಿಪ್ರವಾದ ಬದಲಾವಣೆಗಳು ರಾಜಕೀಯವಾಗಿ ಸಂಭವಿಸಿದಾಗ, ಅವುಗಳ ಜತೆಗೆ ಸಂಗಡಿಸಿಕೊಳ್ಳುವ ಕೋಲಾಹಲ- ಸಂಘರ್ಷ ರಕ್ತಪಾತ-ಹಿಂಸೆ-ಇತ್ಯಾದಿಗಳಿಂದ ಅದು ಹೇಗೋ ‘ಕ್ರಾಂತಿ’ ಎನ್ನುವ ಮಾತಿಗೆ ಕೊಂಚ ರಕ್ತದ ಬಣ್ಣ ಅಂಟಿಕೊಂಡು ಬಂದಿದೆ. ಆದರೆ ಬದಲಾವಣೆಗಳು ಹೀಗೆ ರಕ್ತರಂಜಿತವಾಗದೆಯೂ ಸಂಭವಿಸಿವೆ, ಸಂಭವಿಸುತ್ತವೆ ಎಂಬುದನ್ನು ಮರೆಯ ಬಾರದು. ಈಗ ಪ್ರಸ್ತಾಪಿಸಿದ ರಾಜಕೀಯ ಕ್ರಾಂತಿಗಳು ಇರುವ ವ್ಯವಸ್ಥೆಯನ್ನು, ವಾಸ್ತವವನ್ನು ಬದಲಾಯಿಸುತ್ತವೆ ಅಷ್ಟೆ. ಇದು ಮುಖ್ಯವಾದದ್ದೆ. ಆದರೆ ಯಾವ ‘ಕ್ರಾಂತಿ’ ಮನುಷ್ಯಜೀವನದ ಹೊರಗನ್ನು ಮಾತ್ರವಲ್ಲ, ಅವನ ಒಳಗನ್ನೂ ಬದಲಾಯಿಸುವುದರ ಮೂಲಕ ಸಮಗ್ರ ಪರಿವರ್ತನೆಯನ್ನು ತರಬಲ್ಲದೋ ಅದೀಗ ನಿಜವಾದ ಕ್ರಾಂತಿ. ಇಂಥ ನಿಜವಾದ ‘ಕ್ರಾಂತಿ’ ಸಂಭವಿಸಿರುವುದು ಸಂತರಿಂದಲೇ. ಈ ದೃಷ್ಟಿಯಿಂದ ಹೇಳುವುದಾದರೆ, ಈ ದೇಶದ ನಿಜವಾದ ಕ್ರಾಂತಿಕಾರಿಗಳೆಂದರೆ ಸಂತರೇ.

ಆಚಾರ್ಯ ಶಂಕರರ ಕಾವ್ಯಮಯವಾದ ಉಕ್ತಿಯೊಂದು ಸುಪ್ರಸಿದ್ಧವಾಗಿದೆ. ‘ಶಾಂತರೂ, ಮಹಾಂತರೂ ಆದ ಸಂತರು, ವಸಂತದ ಹಾಗೆ ಲೋಕಹಿತಕ್ಕಾಗಿ ಸಂಚಾರ ಮಾಡುತ್ತಾರೆ.’

ಯಾವ ಯಾವ ಕಾಲಗಳಲ್ಲಿ ಜನಜೀವನವು ಮಾಘಮಾಸದ ಮರಗಳಂತೆ, ಹಳೆಯ ಎಲೆಗಳನ್ನುದುರಿಸಿಕೊಂಡು ನಗ್ನವೂ, ನೀರವವೂ, ವಿಷಣ್ಣವೂ ಆಗಿ ಹೊಸ ಹುಟ್ಟಿಗೆ ಕಾದು ನಿಲ್ಲುತ್ತದೆಯೋ, ಅಂಥ ಕಾಲಗಳಲ್ಲಿ, ಮರಮರದ ಕೊಂಬೆರೆಂಬೆಗಳಲ್ಲಿ ಹೊಸ ನಂಬಿಕೆಗಳ, ಹೊಸ ಭರವಸೆಗಳ ಚಿಗುರನ್ನು ಚಿಮ್ಮಿಸಿ, ನಿಸರ್ಗವನ್ನು ಪುನರ್‌ನವೀಕರಿಸುವ ಸೃಜನಾತ್ಮಕ ಶಕ್ತಿಯಾದ ವಸಂತದ ಹಾಗೆ ಬರುತ್ತಾರಂತೆ ಸಂತರು. ಹೀಗೆ ಮುಟ್ಟಿದೆಡೆಗಳಲ್ಲೆಲ್ಲ ಹೊಸ ಚಿಗುರನ್ನು ಚಿಮ್ಮಿಸುತ್ತ ಸಂಚಾರ ಮಾಡುವ ಈ ಸಂತರಿಂದ ಲೋಕದ ಹಿತ ಸಾಧಿತವಾಗುತ್ತದೆ.

ಸ್ವಾಮಿ ವಿವೇಕಾನಂದರು ಬರುವ ಹೊತ್ತಿಗೆ ಈ ದೇಶದ ಬದುಕು ತನ್ನೆಲ್ಲ ಹಳೆಯ ನೆನಪುಗಳನ್ನು ಕಳಚಿಕೊಂಡು, ನಿರಾಸೆಯ ಮಬ್ಬಿನಲ್ಲಿ ಹೊಸ ಹುಟ್ಟಿನ ಅನಿಶ್ಚಯತೆಗಳಲ್ಲಿ ಸ್ಥಗಿತಗೊಂಡಿತ್ತು.

ಒಂದೆಡೆ ಪರಕೀಯ ಪ್ರಭುತ್ವದ ಕಾರಣದಿಂದ ತಮ್ಮ ಪೌರುಷವನ್ನೇ ಕಳೆದುಕೊಂಡಿದ್ದ, ತಮ್ಮ ಹಿಂದೆ ಒಂದು ಉಜ್ವಲವಾದ ಆಧ್ಯಾತ್ಮಿಕ ಪರಂಪರೆಯಿದ್ದೂ, ಅದರೊಂದಿಗೆ ನಿಜವಾದ ಸಾವಯವ ಸಂಬಂಧವನ್ನು ಸ್ಥಾಪಿಸಿಕೊಳ್ಳಲಾಗದ ಒಂದು ಬಗೆಯ ಜಡ ವಿಸ್ಮೃತಿಗೆ ಒಳಗಾಗಿದ್ದ, ಪರಾನುಕರಣ ಪ್ರವೃತ್ತಿ ಹಾಗೂ ಅವೈಚಾರಿಕತೆಗಳಿಂದ ಕಟ್ಟುಗೊಂಡ, ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧದ ಬದುಕಿನ ಸಂದರ್ಭದಲ್ಲಿ, ಹೊಸ ಹುಟ್ಟಿನ ಹರಿಕಾರನಾದ ವಸಂತದಂತೆ ಬಂದರು ಸ್ವಾಮಿ ವಿವೇಕಾನಂದರು. ಆದರೆ ‘ವಸಂತದಂತೆ ಬಂದರು’ ಎಂಬ ಈ ವರ್ಣನೆಯೂ ಒಂದರ್ಥದಲ್ಲಿ ಅಸಮರ್ಪಕವೋ ಏನೋ. ಆದಕಾರಣ ಹೀಗೆ ಹೇಳೋಣ: ವಿವೇಕಾನಂದರು ಕೇವಲ ವಸಂತದಂತೆ ಬಂದವರಲ್ಲ; ವಸಂತದ ಜತೆಗೆ ಬರುವ ಗುಡುಗುಸಿಡಿಲು- ಮಿಂಚು-ಬಿರುಗಾಳಿಗಳ ಸಹಿತ ಮುಂಗಾರಿನ ಹಾಗೆ ಬಂದರು. ಮುಂಗಾರಿನ ಈ ಬಿರುಗಾಳಿಗೆ ಹಳೆಯ ನಂಬಿಕೆಗಳ ತರಗೆಲ್ಲಾ ಚೆಲ್ಲಾಪಿಲ್ಲಿಯಾದವು; ಜಡಿಮಳೆಯ ಬಡಿತಕ್ಕೆ ಪಾಚಿಗಟ್ಟಿ ನಾರುತ್ತಿದ್ದ ಆಲೋಚನೆಗಳು, ಚಿಂತನೆಗಳು ಕೊಚ್ಚಿಹೋಗಿ, ಹೊಸನೀರು ನುಗ್ಗಿ, ಶುಷ್ಕವಾದ ನೆಲವೆಲ್ಲ ನೀರುಂಡು ಹೊಸತೊಂದು ಹುಟ್ಟಿಗೆ ಹದವಾಯಿತು. ಇಡೀ ಒಂದು ಕಾಲಮಾನವೇ ಬದಲಾಯಿತು. ಇಂಥ ಒಂದು ಪರಿವರ್ತನೆಯನ್ನು ತಂದವರು ಸ್ವಾಮಿ ವಿವೇಕಾನಂದರು.

ಚಿಕಾಗೋದ ಸರ್ವಧರ್ಮ ಸಮ್ಮೇಳನ ಸ್ವಾಮೀಜಿಯವರ ಬದುಕಿನ ಒಂದು ಮಹತ್ವದ ಘಟ್ಟ ಎನ್ನಬಹುದು. ಅದು ಸ್ವಾಮಿ ವಿವೇಕಾನಂದರನ್ನು ಲೋಕವಿಖ್ಯಾತರನ್ನಾಗಿ ಮಾಡಿದ ಸಂದರ್ಭ ಎಂಬುದಷ್ಟೆ ಅದರ ಮಹತ್ವಕ್ಕೆ ಕಾರಣವಲ್ಲ. ನೂರಾರು ವರ್ಷಗಳಿಂದ ಜಗತ್ತಿನ ಅಲಕ್ಷ ಕ್ಕೆ ತುತ್ತಾಗಿದ್ದ ಭಾರತದ ಕಡೆಗೆ ಜಗತ್ತಿನ ಗಮನ ಸೆಳೆಯುವಂತೆ ಮಾಡಿದುದು ಈ ಸಮ್ಮೇಳನ. ಕೆಸ್ತ ಧರ್ಮವೊಂದೇ ಶ್ರೇಷ್ಠ ಎಂಬ ಹುಸಿ ನಂಬಿಕೆಯ ಬೇರುಗಳನ್ನು ಅಲ್ಲಾಡಿಸಿದ್ದು ಈ ಸಮ್ಮೇಳನ; ತಮ್ಮ ತಮ್ಮ ಮತಧರ್ಮಗಳೇ ಮನುಷ್ಯನ ಉದ್ಧಾರಕ್ಕಿರುವ ಏಕೈಕಮಾರ್ಗಗಳೆಂಬ ಕೂಪಮಂಡೂಕ ಪ್ರವೃತ್ತಿಗಳನ್ನು ಧ್ವಂಸ ಮಾಡಿದ್ದು ಈ ಸಮ್ಮೇಳನ; ಹಿಂದೂಧರ್ಮದ ತಿರುಳಾದ ಸರ್ವ ಧರ್ಮ ಸಹಿಷ್ಣುತೆಯನ್ನೂ, ಮತಗಳೆಲ್ಲವೂ ಕೇವಲ ಪಥಗಳು ಎಂಬ ಮಹಾ ತತ್ತ್ವವನ್ನೂ ಮೊಟ್ಟಮೊದಲ ಬಾರಿಗೆ ಘೋಷಿಸಿ, ಭಾರತೀಯ ವೇದಾಂತಕ್ಕೆ ಹಾಗೂ ಅಂದಿನ ಪರಾಕ್ರಾಂತ ಭಾರತಕ್ಕೆ ಅನನ್ಯವಾದ ಗೌರವವನ್ನು ತಂದುಕೊಟ್ಟದ್ದು ಈ ಸಮ್ಮೇಳನ; ಈ ಸಮ್ಮೇಳನದ ಈ ಎಲ್ಲ ಗೆಲುವುಗಳ ಕೇಂದ್ರಬಿಂದು ಸ್ವಾಮಿ ವಿವೇಕಾನಂದರು.

ಈ ಸಮ್ಮೇಳನದ ವೇದಿಕೆಯ ಮೇಲೆ ಇತರ ಧರ್ಮಗಳ ಪ್ರತಿನಿಧಿಗಳ ಪಂಕ್ತಿಯಲ್ಲಿ ಕುಳಿತ ಸ್ವಾಮಿ ವಿವೇಕಾನಂದರನ್ನು ಅದೇ ಸಭೆಯಲ್ಲಿ ಉಪಸ್ಥಿತರಾಗಿದ್ದ ಶ್ರೀಮತಿ ಆನಿಬೆಸೆಂಟ್ ವರ್ಣಿಸಿರುವುದು ಹೀಗೆ:

‘ಗೈರಿಕವಸನ ಭೂಷಿತರಾದ ಸ್ವಾಮಿ ವಿವೇಕಾನಂದರು ಅತ್ಯಾಕರ್ಷಕ ವ್ಯಕ್ತಿಯಾಗಿದ್ದರು. ಚಿಕಾಗೊ ನಗರದ ಧೂಮಾವೃತ ವಾತಾವರಣದಲ್ಲಿ ಭಾರತದ ಸೂರ್ಯನು ಬೆಳಗುವಂತೆ ಅವರು ಕಂಗೊಳಿಸುತ್ತಿದ್ದರು. ಸಿಂಹದಂತೆ ಉನ್ನತ ಶಿರ, ತೀಕ್ಷ ವಾದ ಕಣ್ಣುಗಳು, ಚಂಚಲ ತುಟಿ, ಚುರುಕು ನಡೆ- ಇದು ವಿಶ್ವಧರ್ಮ ಸಮ್ಮೇಳನದಲ್ಲಿ ಮೊಟ್ಟಮೊದಲಿಗೆ ಸ್ವಾಮಿ ವಿವೇಕಾನಂದರು ನನಗೆ ಕಾಣಿಸಿಕೊಂಡ ಬಗೆ. ಸಂನ್ಯಾಸಿ ಎಂದು ಜನ ಅವರನ್ನು ಕರೆಯುತ್ತಿದ್ದರು. ಆದರೆ ಅವರು ಬರಿಯ ಸಂನ್ಯಾಸಿಯಲ್ಲ. ಅವರು ನನಗೆ ಕಂಡದ್ದು ಯೋಧ ಸಂನ್ಯಾಸಿಯಂತೆ. ಏಕೆಂದರೆ ಅವರು ತಮ್ಮ ರಾಷ್ಟ್ರದ ವಿಷಯದ ಅಭಿಮಾನದಿಂದ ತುಂಬಿತುಳುಕುತ್ತಿದ್ದರು.’

ಚಿಕಾಗೋದ ಪತ್ರಿಕೆಗಳು ಅವರನ್ನು ಬಿರುಗಾಳಿಯ ಸಂನ್ಯಾಸಿ ಎಂದು ವರ್ಣಿಸಿದವು.

ಸ್ವಾಮಿ ವಿವೇಕಾನಂದರ ಜೀವನಚರಿತ್ರೆಯನ್ನು ಬರೆದ ರೊಮೆನ್ ರೋಲಾ ಎಂಬ ಸುಪ್ರಸಿದ್ಧ ಲೇಖಕ ‘ಸ್ವಾಮಿ ವಿವೇಕಾನಂದರು ಚೈತನ್ಯದ ಪ್ರತಿರೂಪವೇ ಸರಿ, ಅವರು ಭಾರತದ ‘ಯೋಧ ಪ್ರವಾದಿ’ ಎಂದು ಹೇಳುತ್ತಾರೆ.’

ಶ್ರೀ ಅರವಿಂದರು ‘ಮನುಷ್ಯರ ನಡುವೆ ಈತನೊಬ್ಬ ಪುರುಷ ಸಿಂಹ’ ಎಂದು ಪ್ರಶಂಸಿಸಿದರೆ, ನೇತಾಜಿ ಸುಭಾಷ್‌ಚಂದ್ರ ಬೋಸರು ‘ಸ್ವಾಮಿ ವಿವೇಕಾನಂದರು ಒಬ್ಬ ಹುಟ್ಟು ಹೋರಾಟಗಾರರು’ ಎಂದು ಗುರುತಿಸುತ್ತಾರೆ. ಈ ಎಲ್ಲ ಅನ್ನಿಸಿಕೆಗಳೂ ನಮ್ಮ ಮುಂದೆ ಕೇವಲ ಒಬ್ಬ ಸಂತನ ಅಥವಾ ಸಂನ್ಯಾಸಿಯ ಚಿತ್ರವನ್ನು ಕೊಡುವುದಿಲ್ಲ. ಒಬ್ಬ ಅದ್ಭುತವಾದ ಹಾಗೂ ಧೀರನಾದ ಯೋಧನ, ಹೋರಾಟಗಾರನ ಚಿತ್ರವನ್ನು ಕಟ್ಟಿಕೊಡುತ್ತವೆ. ಹಾಗೂ ವಿವೇಕಾನಂದರು ಒಬ್ಬ ಕ್ರಾಂತಿಕಾರೀ ಸಂತರಾಗಿದ್ದಾರೆ ಎಂಬುದನ್ನು ಸಮರ್ಥಿಸುತ್ತವೆ.

ಒಬ್ಬನು ತನ್ನ ಪರಿಸರದಲ್ಲಿ ಒಂದು ಕ್ರಾಂತಿಯನ್ನು ಅಥವಾ ಆಮೂಲಾಗ್ರವಾದ ಬದಲಾವಣೆಯನ್ನು ತರಬೇಕಾದರೆ ಮೊದಲು ಅವನಿಗೆ ತನ್ನ ವರ್ತಮಾನದ ನಂಬಿಕೆಗಳನ್ನು ಚಿಂತನೆಗಳನ್ನು ಹಾಗೂ ಜೀವನಕ್ರಮವನ್ನು ನಿಯಂತ್ರಿಸುವ ಗತಕಾಲದ ಅಥವಾ ಪರಂಪರೆಯ ಪ್ರಜ್ಞೆ ಬೇಕು. ಸಮಕಾಲೀನ ವಾಸ್ತವಗಳ ಗಾಢವಾದ ಅನುಭವಗಳ ಮೂಲಕ ಹುಟ್ಟಿಕೊಳ್ಳುವ, ಶ್ರೀ ಸಾಮಾನ್ಯರ ಪರವಾದ  ತುಡಿತಗಳಿರಬೇಕು. ಅದಮ್ಯವಾದ ಜೀವನ ಪ್ರೀತಿ ಇರಬೇಕು. ಅಪ್ರತಿಮವಾದ ಧೈರ್ಯ ಇರಬೇಕು. ಭವಿಷ್ಯದ ಬಗ್ಗೆ ಖಚಿತವಾದ ಕಲ್ಪನೆಗಳಿರಬೇಕು. ಎಲ್ಲಕ್ಕಿಂತ ಮಿಗಿಲಾಗಿ ವೈಚಾರಿಕ ಮನೋಧರ್ಮವಿರಬೇಕು. ಸ್ವಾಮಿ ವಿವೇಕಾನಂದರು ಈ ಎಲ್ಲವನ್ನೂ ಉಳ್ಳವರಾಗಿದ್ದರು. ಅಂದರೆ ಭೂತ ವರ್ತಮಾನ ಹಾಗೂ ಭವಿಷ್ಯತ್ ಕಾಲವನ್ನು ಏಕಕಾಲಕ್ಕೆ ಗ್ರಹಿಸಬಲ್ಲವರಾಗಿದ್ದರು.

ಸ್ವಾಮೀಜಿ ಭಾರತದ ಪ್ರಾಚೀನ ಪರಂಪರೆಯನ್ನು ಚೆನ್ನಾಗಿ ಬಲ್ಲವರಾಗಿದ್ದರು. ಒಂದೆಡೆ ತಮ್ಮ ನಿರಂತರವಾದ ಹಾಗೂ ಆಳವಾದ ಅಧ್ಯಯನದ ಮೂಲಕ, ಭಾರತದ ಇತಿಹಾಸ, ಪುರಾಣ, ಶಾಸ್ತ್ರ, ವೇದೋಪನಿಷತ್ತುಗಳು ಇತ್ಯಾದಿಗಳನ್ನು ರಕ್ತಗತ ಮಾಡಿಕೊಂಡಿದ್ದರು. ಹಾಗೆಯೇ ಆಧುನಿಕ ಶಿಕ್ಷಣದ ಮೂಲಕ ಪಾಶ್ಚಾತ್ಯ ತತ್ತ್ವಜ್ಞಾನ, ವಿಜ್ಞಾನ ಹಾಗೂ ಸಾಮಾಜಿಕ ಚಿಂತನೆಗಳನ್ನು ಅರಗಿಸಿಕೊಂಡವರಾಗಿದ್ದರು. ಎಲ್ಲಕ್ಕಿಂತ ಮಿಗಿಲಾಗಿ ಆರು ವರ್ಷಗಳ ಕಾಲ ಶ್ರೀರಾಮಕೃಷ್ಣರ ಸಾಕ್ಷಾತ್ ಶಿಷ್ಯರಾಗಿ, ಜಗತ್ತಿನ ಎಲ್ಲ ಧರ್ಮಗಳನ್ನೂ ಸಾಕ್ಷಾತ್ಕರಿಸಿಕೊಂಡ ಶ್ರೀರಾಮಕೃಷ್ಣ ಪರಮಹಂಸರ ಆಧ್ಯಾತ್ಮಿಕ ಸಂಪತ್ತಿನ ಅಧಿಕಾರಿಯೂ ಆಗಿದ್ದರು. ಹೀಗಾಗಿ ಸ್ವಾಮಿ ವಿವೇಕಾನಂದರು ತಾವು ಎಂತಹ ಉಜ್ವಲವಾದ ಪರಂಪರೆಗೆ ಹಕ್ಕುದಾರರಾಗಿದ್ದೇವೆ ಎಂಬುದನ್ನು ಬಲ್ಲವರಾಗಿದ್ದರು. ಈ ಪರಂಪರೆಗೆ ಸ್ವಾಮೀಜಿ ತೋರಿದ ಪ್ರತಿಕ್ರಿಯೆಗಳೇನು, ಅದನ್ನು ಅವರು ತಮ್ಮ ವರ್ತಮಾನದ ಅಗತ್ಯಗಳಿಗೆ ತಕ್ಕಂತೆ ಹೇಗೆ ವ್ಯಾಖ್ಯಾನಿಸಿದರು ಎನ್ನುವುದು ಬಹುಮುಖ್ಯವಾದ ಸಂಗತಿಯಾಗಿದೆ.

ಹೀಗೆ ಸ್ವಾಮಿ ವಿವೇಕಾನಂದರು ಶ್ರೇಷ್ಠ ಸಂತರಾಗಿದ್ದುದು ಮಾತ್ರವಲ್ಲದೆ, ಕ್ರಾಂತದರ್ಶಿಯೂ ಅಪಾರ ಸಾಮಾಜಿಕ ಕಳಕಳಿಯುಳ್ಳವರೂ ಆಗಿದ್ದು, ತಮ್ಮ ಚಿಂತನೆ ಮತ್ತು ಸಾಧನೆಗಳ ಮೂಲಕ ಮಹಾಕ್ರಾಂತಿಕಾರಿಯಾಗಿಯೂ  ಅಗಿ ಅವರು ನಮಗೆ ಕಾಣಿಸಿಕೊಳ್ಳುತ್ತಾರೆ.

ಯಾವುದೇ ಪರಂಪರೆಯ ಬಗ್ಗೆ ಒಬ್ಬ ನಿಜವಾದ ವಿಚಾರವಂತನು ತೋರುವ ಪ್ರತಿಕ್ರಿಯೆಗಳು ಸ್ಥೂಲವಾಗಿ ಮೂರು ಬಗೆಯವಾಗಿರುತ್ತವೆ ಎಂದು ಹೇಳಬಹುದು: ಒಂದು, ಶುದ್ಧೀಕರಣ ಪ್ರಕ್ರಿಯೆ; ಎರಡು, ನಿರಾಕರಣ ಪ್ರಕ್ರಿಯೆ; ಮೂರು, ಸುಧಾರಣಾ ಪ್ರಕ್ರಿಯೆ. ನಮ್ಮ ಪರಂಪರೆಯೊಳಗಿನ ನಿಜವಾದ ಆಚಾರ- ವಿಚಾರ-ನಂಬಿಕೆಗಳ ಮೇಲೆ ಕ್ರಮಕ್ರಮೇಣ ಅವೈಚಾರಿಕ ಹಾಗೂ ಕುರುಡುನಂಬಿಕೆಗಳ ಹಾವಸೆ ಹಬ್ಬಿ ಮೂಲ ವಿಚಾರಗಳು ಅಪವ್ಯಾಖ್ಯಾನಕ್ಕೆ ಒಳಗಾಗುವ, ಅಥವಾ ಮೂಲವಿಚಾರಗಳೆ ಮರೆಯಾಗುವ ಒಂದು ಸ್ಥಿತಿ ಪ್ರಾಪ್ತವಾದಾಗ, ನಿಜವಾದ ವಿಚಾರವಂತನು ಅವುಗಳಿಗೆ ಮೆತ್ತಿದ ಕೊಳೆಯನ್ನು ತೊಳೆದು, ಮೊದಲ ವಿಚಾರದ ಮೌಲಿಕತೆ ಪುನಃ ಪ್ರಕಾಶನಗೊಳ್ಳುವಂತೆ ಮಾಡುವ ಪ್ರಯತ್ನವನ್ನು ಶುದ್ಧೀಕರಣ ಪ್ರಕ್ರಿಯೆ ಎನ್ನಬಹುದು. ಆದರೆ ಒಂದು ಕಾಲದ ಆಚಾರ ವಿಚಾರಗಳು, ಪಟ್ಟಭದ್ರ ಹಿತಾಸಕ್ತಿಗಳ ಕೈಗೆ ಸಿಕ್ಕು ಜೀವ ವಿರೋಧಿಯೂ, ಸ್ವಾರ್ಥಮೂಲವೂ ಆದ ಶೋಷಕ ಮಾಧ್ಯಮಗಳಾದಾಗ ನಿಜವಾದ ವಿಚಾರವಂತನು ಅವುಗಳನ್ನು ನಿರ್ದಾಕ್ಷಿಣ್ಯವಾಗಿ ನಿರಾಕರಿಸಬೇಕಾಗುತ್ತದೆ. ಇದನ್ನೆ ನಿರಾಕರಣ ಪ್ರಕ್ರಿಯೆ ಎನ್ನಬಹುದು. ಮೂರನೆಯದು ಸುಧಾರಣ ಪ್ರಕ್ರಿಯೆ: ಹಿಂದಿನ ಮೌಲಿಕವಾದ ತಿಳಿವಳಿಕೆಯ ಆಕೃತಿಗಳನ್ನು, ವರ್ತಮಾನದ ಅಗತ್ಯಗಳಿಗೆ ತಕ್ಕಂತೆ ಮಾರ್ಪಡಿಸಿ ಹಾಗೂ ವ್ಯಾಖ್ಯಾನಿಸಿ, ನಮಗೆ ಸಂಗತವಾಗುವಂತೆ ಬಳಸಿಕೊಳ್ಳುವುದು. ಸ್ವಾಮಿ ವಿವೇಕಾನಂದರ ವೈಚಾರಿಕತೆಯಲ್ಲಿ ಈ ಮೂರು ಪ್ರಕಿಯೆಗಳೂ ಕ್ರಿಯಾಶೀಲವಾಗಿರುವುದನ್ನು ನಾವು ಗುರುತಿಸಬಹುದು.

ಸ್ವಾಮೀಜಿ ಚಿಕಾಗೋ ನಗರದ ಸರ್ವಧರ್ಮಸಮ್ಮೇಳನದ ವೇದಿಕೆಯ ಮೇಲೆ ಹಾಗೂ ಅನಂತರದ ಬೇರೆಬೇರೆಯ ಉಪನ್ಯಾಸಗಳಲ್ಲಿ ಹಿಂದೂ ಧರ್ಮದ ಮೌಲಿಕವಾದ ಚಿಂತನೆಗಳನ್ನು ಒಂದು ಬಗೆಯ ಧೀರೋದಾತ್ತತೆಯಿಂದ ವ್ಯಾಖ್ಯಾನಿಸಿದ್ದಾರೆ. ಅವರು ಆ ಸಮ್ಮೇಳನದ ಸಭಾಸದರನ್ನು ಉದ್ದೇಶಿಸಿ ಸಂಬೋಧಿಸಿದ ಕ್ರಮವೇ ನಿಜವಾದ ಧರ್ಮದ ವ್ಯಾಖ್ಯಾನವಾಗಿದೆ. ವಿವೇಕಾನಂದರು ‘ಅಮೆರಿಕಾದ ನನ್ನ ಸಹೋದರ ಸಹೋದರಿಯರೆ’ ಎಂದು ಸಂಬೋಧಿಸಿ, ಆ ಮಹಾಸಭಾಸದರ ಹೃದಯವನ್ನು ಗೆದ್ದುಬಿಟ್ಟರು. ಯಾವ ಧರ್ಮ ಜಗತ್ತಿನ ಜನತೆಯನ್ನು ಕೇವಲ ಸ್ತ್ರೀಪುರುಷರು ಮಾತ್ರವೆಂದು ನೋಡದೆ, ಅವರನ್ನು ತನ್ನ ಸಹೋದರ ಸಹೋದರಿಯರೆಂದು ಕಾಣುವ ಒಂದು ನಿಲುವನ್ನು ಪಡೆದುಕೊಂಡಿದೆಯೋ, ಅದು ನಿಜವಾಗಿಯೂ ಮಹತ್ತಾದ ಧರ್ಮವೇ ಸರಿ ಎಂಬುದು ಅಜ್ಞಾತವಾದ ರೀತಿಯಲ್ಲಿ ಆ ಸಮ್ಮೇಳನದ ಜನಾಂತರಂಗವನ್ನು ಸ್ಪರ್ಶಿಸಿಬಿಟ್ಟಿತು. ತಮ್ಮ ತಮ್ಮ ಧರ್ಮಗಳೇ ಶ್ರೇಷ್ಠವೆಂದು ತಿಳಿದು, ಅದನ್ನು ಪ್ರತಿಪಾದಿಸುವುದೆ ಮುಖ್ಯ ಉದ್ದೇಶವಾಗಿದ್ದ ಪ್ರತಿನಿಧಿಗಳ ನಡುವೆ, ನಿಜವಾದ ಧರ್ಮ ಮನುಷ್ಯರ ನಡುವಣ ಬಾಂಧವ್ಯಗಳನ್ನು ಗುರುತಿಸುವ ಸಾಧನ ಎಂಬುದನ್ನು ಪರೋಕ್ಷವಾಗಿ ಮನವರಿಕೆ ಮಾಡಿಕೊಟ್ಟನಂತರ ಸ್ವಾಮೀಜಿ ಹೇಳಿದ ಮತ್ತೊಂದೆರಡು ಮುಖ್ಯವಾದ ಮಾತುಗಳೆಂದರೆ ‘ನಾವು ಸರ್ವಮತ ಸಹಿಷ್ಣುತೆಯನ್ನು ಒಪ್ಪುತ್ತೇವೆ. ಅಷ್ಟೆ ಅಲ್ಲ, ಸಕಲ ಧರ್ಮಗಳೂ ಸತ್ಯವೆಂದು ನಂಬುತ್ತೇವೆ. ಭಿನ್ನ ಭಿನ್ನ ನೆಲೆಗಳಿಂದ ಹುಟ್ಟಿದ ನದಿಗಳು ಬೇರೆ ಬೇರೆಯ ದಿಕ್ಕುಗಳಿಗೆ ಹರಿದರೂ ಕಡೆಗೆ ಅವೆಲ್ಲ ಕಡಲನ್ನು ಸೇರುವಂತೆ, ಈ ಜಗತ್ತಿನ ಮನುಷ್ಯರು ಅನುಸರಿಸುವ ವಿವಿಧ ಪಥಗಳೆಲ್ಲವೂ ಕಡೆಗೆ ಒಬ್ಬನೇ ಆದ ಪರಮಾತ್ಮನನ್ನು ಸೇರುತ್ತವೆ.’

ಸರ್ವಧರ್ಮಸಮ್ಮೇಳನದ ಸಂದರ್ಭದಲ್ಲಿ ಸ್ವಾಮೀಜಿ ಮಂಡಿಸಿದ ಈ ವೈಚಾರಿಕತೆಯ ನಿಲುವುಗಳು ಶ್ರೀರಾಮಕೃಷ್ಣರು ತಮ್ಮ ಸಾಕ್ಷಾತ್ಕಾರದ ಮೂಲಕ ಕಂಡು ಬೋಧಿಸಿದವುಗಳೇ. ನಿಜವಾದ ಧರ್ಮಕ್ಕೆ ಇರಬೇಕಾದ ಮಾನವಪ್ರೀತಿ, ಎಲ್ಲ ಧರ್ಮಗಳೂ ಸತ್ಯ ಎಂಬ ಗ್ರಹಿಕೆ, ಮತಗಳೆಲ್ಲವೂ ಪಥಗಳು ಎನ್ನುವ ನಿಲುವು, ಈ ಹೊತ್ತಿನ ಜಗತ್ತಿಗೆ ಎಷ್ಟು ಅಗತ್ಯವಾದ ಸತ್ಯಗಳು ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

‘ಮತಗಳೆಲ್ಲವೂ ಪಥಗಳು’ ಎಂಬ ಮಾತು ಮೇಲೆ ನೋಡಲು ತೀರಾ ಸರಳವೆಂಬಂತೆ ತೋರಿದರೂ ಮತ್ತು ಪರಂಪರಾಗತವಾದ ಹಿಂದೂ ಧರ್ಮದ ಒಳಗೆ ಅದು ಅಂತರ್ಗತವಾಗಿದ್ದರೂ, ಅದರ ಮೌಲಿಕತೆಯನ್ನು ಶ್ರೀ ರಾಮಕೃಷ್ಣ ಪರಮಹಂಸರಂತೆ, ಹಿಂದೂ ಧರ್ಮದ ಹಿನ್ನೆಲೆಯಲ್ಲಿ ಮಾತ್ರವಲ್ಲ, ಜಾಗತಿಕವಾದ ವಿವಿಧ ಧರ್ಮಗಳ ಮೂಲಮಾನದಲ್ಲೂ ತಮ್ಮ ಅಧ್ಯಾತ್ಮ ಪ್ರಯೋಗಶಾಲೆಯಲ್ಲಿ ಪರೀಕ್ಷಿಸಿ ಸಾಕ್ಷಾತ್ಕರಿಸಿಕೊಳ್ಳುವ ಪ್ರಯತ್ನವನ್ನು ಯಾರೂ ಮಾಡಿರಲಿಲ್ಲ. ಆದಕಾರಣವೇ ಈ ಸನಾತನ ಸತ್ಯವು ಪರಮಹಂಸರ ಮೂಲಕ ವ್ಯಾಖ್ಯಾನಗೊಂಡು ಒಂದು ‘ಯುಗ ಸಂದೇಶ’ದ ಮಹತ್ವವನ್ನು ಪಡೆದುಕೊಂಡಿತು. ತಮ್ಮ ತಮ್ಮ ಮತಗಳೇ ಶ್ರೇಷ್ಠವೆಂಬ, ಅನ್ಯ ಧರ್ಮಗಳು ಅಷ್ಟೇನೂ ಶ್ರೇಷ್ಠವಲ್ಲವೆಂಬ ತಿಳಿವಳಿಕೆಯ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರು ಪರಮಹಂಸರ ಈ ಮಹಾಸತ್ಯವನ್ನು ಅನನ್ಯವಾದ ರೀತಿಯಲ್ಲಿ ಚಿಕಾಗೋ ಸಮ್ಮೇಳನದಲ್ಲಿ ಪುನರ್ಭವಗೊಳಿಸಿದರು.

ಹಿಂದೂಧರ್ಮದ ಈ ಮಹಾತತ್ವಗಳನ್ನು ಕುರಿತು ಉಜ್ವಲವಾಗಿ ಪಶ್ಚಿಮದ ಜಗತ್ತಿನಲ್ಲಿ ವ್ಯಾಖ್ಯಾನಿಸಿದ ಸ್ವಾಮಿ ವಿವೇಕಾನಂದರು, ಇದೇ ಧರ್ಮ ಹಾಗೂ ಅದರ ಉದಾತ್ತ ವಿಚಾರಗಳು ಭಾರತದ ಪರಿಸರದಲ್ಲಿ ಹೇಗೆ ನಿಷ್ಟ್ರಯೋಜಕವಾಗಿದ್ದವು, ಅಥವಾ ಅಪ ವ್ಯಾಖ್ಯಾನಕ್ಕೆ ಒಳಗಾಗಿದ್ದವು ಎಂಬುದನ್ನು ಬಲ್ಲವರಾಗಿದ್ದರು. ಆದುದರಿಂದಲೆ ‘ಮನುಷ್ಯತ್ವದ ಘನತೆಯನ್ನು ಹಿಂದೂಧರ್ಮದಷ್ಟು ದೊಡ್ಡದಾಗಿ ಮತ್ತಾವ ಧರ್ಮವೂ ಎತ್ತಿ ಹಿಡಿಯುವುದಿಲ್ಲ; ಹಾಗೆಯೆ ದೀನದಲಿತರ ಕೊರಳನ್ನು ಹಿಂದೂಧರ್ಮದ ಹಾಗೆ ಮತ್ತಾವುದೂ ಮೆಟ್ಟುವುದಿಲ್ಲ’ ಎಂಬ ಸತ್ಯವನ್ನು ಈ ದೇಶದ ಜನಕ್ಕೆ ಹೇಳಲು ಮರೆಯಲಿಲ್ಲ. ಅಷ್ಟೆ ಅಲ್ಲ, ಈ ದೇಶದ ವಾಸ್ತವ ಪರಿಸ್ಥಿತಿಯನ್ನು ಅವರು ಪರಿವ್ರಾಜಕರಾಗಿ ಪರ್ಯಟನೆ ಮಾಡಿದ ಸಂದರ್ಭದಲ್ಲಿ ಪ್ರತ್ಯಕ್ಷವಾಗಿ ಕಂಡು ಈ ದೇಶದ ಜನತೆಯ ಮೊದಲು ಅಗತ್ಯ ಯಾವುದು ಎಂಬುದನ್ನು ಅವರಂತೆ ಕಂಡುಕೊಂಡವರು ಯಾರೂ ಇರಲಿಲ್ಲ. ಈ ದೇಶದ ಸಮುದಾಯವು ಒಂದು ಕಡೆ ರಾಜ ಮಹಾರಾಜರುಗಳ ಐಷಾರಾಮ ಪ್ರವೃತ್ತಿಗಳಿಂದ, ಹಳೆಯ ಆಚಾರ-ವಿಚಾರಗಳನ್ನು ಬಂಡವಾಳವನ್ನಾಗಿ ಮಾಡಿಕೊಂಡು ಜನರನ್ನು ಶೋಷಿಸುತ್ತಿದ್ದ ಹಾಗೂ ದಾರಿ ತಪ್ಪಿಸುತ್ತಿದ್ದ ‘ಪುರೋಹಿತ ಶಾಹೀ’ ತಂತ್ರಗಳಿಂದ ನಿರ್ಲಕ್ಷ ಕ್ಕೆ ಒಳಗಾಗಿತ್ತು.

ಒಂದು ರಾಷ್ಟ್ರದ ಹಣೆಯ ಬರಹವು ನಿರ್ಧಾರಿತವಾಗುವುದು ಕೇವಲ ಒಬ್ಬಿಬ್ಬರು ಮಹಾವ್ಯಕ್ತಿಗಳಿಂದ ಅಲ್ಲ; ಅದರ ಜನ ಸಮುದಾಯದಲ್ಲಿ ಸಂಭವಿಸುವ ಎಚ್ಚರದಿಂದ. ಆದರೆ ಈ ಜನಸಮುದಾಯವೇ, ಅನಕ್ಷರತೆ-ಬಡತನ-ಮೂಢ ನಂಬಿಕೆಗಳಿಂದ ತುಂಬಿರುವಾಗ, ಈ ಜನತೆಯಲ್ಲಿ ಎಚ್ಚರವನ್ನು ಹುಟ್ಟಿಸಿ ಅವರನ್ನು ಮೊದಲು ಮನುಷ್ಯರನ್ನಾಗಿ ಮಾಡುವುದು ಹೇಗೆ? ‘ಈ ಜನಸಾಮಾನ್ಯರನ್ನು ಹೀಗೆ ನಿರ್ಲಕ್ಷಿಸಿರುವುದೇ ಒಂದು ರಾಷ್ಟ್ರೀಯ ಮಹಾಪಾಪ’ವಲ್ಲವೆ ಎಂಬ ಚಿಂತನೆಗಳು ಅವರ ಪರ್ಯಟನದ ಸಂದರ್ಭದಲ್ಲಿ ಸ್ವಾಮೀಜಿಯ ಅಂತರಂಗವನ್ನು ಕಲಕಿದ ಸಂಗತಿಗಳಾಗಿದ್ದವು. ಆದ ಕಾರಣವೇ ಕನ್ಯಾಕುಮಾರಿಯ ನಡುಗಡ್ಡೆಯ ವಿವಿಕ್ತವೂ ಪ್ರಶಾಂತವೂ ಆದ ಬಂಡೆಯ ಮೆಲೆ ಕೂತ, ಶ್ರೀರಾಮಕೃಷ್ಣ ಪರಮಹಂಸರ ಕೃಪೆಯಿಂದ ನಿರ್ವಿಕಲ್ಪ ಸಮಾಧಿಯನ್ನು ಪಡೆದ ಈ ಸಂನ್ಯಾಸಿಯ ಧ್ಯಾನದ ವಸ್ತು ‘ದೇವ’ರಾಗದೆ ಮನುಷ್ಯನನ್ನು, ಆತನ ವಾಸ್ತವ ಸ್ಥಿತಿಯನ್ನು ಕುರಿತದ್ದಾಗಿತ್ತು ಎನ್ನುವುದು ಪ್ರತ್ಯೇಕವಾಗಿ ಗುರುತಿಸಿಕೊಳ್ಳಬೇಕಾದ ಅಂಶವಾಗಿದೆ. ‘ನಾವು ಇಷ್ಟೊಂದು ಜನ ಸಂನ್ಯಾಸಿಗಳು ನಾಡಿನ ತುಂಬ ತಿರುಗುತ್ತ, ತತ್ವ ಬೋಧನೆ ಮಾಡುತ್ತ ಏನು ಮಾಡಿದ್ದೇವೆ? ಇದೆಲ್ಲ ಎಂಥ ಹುಚ್ಚುತನ! ಅಜ್ಞಾನ ದಾರಿದ್ರ ಗಳಿಂದ ಕೇವಲ ಪಶುಗಳಂತೆ ಬದುಕುತ್ತಿರುವ ಈ ನಾಡಿನ ಜನರಿಗೆ ನಾವೇನು ಮಾಡಿದ್ದೇವೆ? ನಾವು ಹಳ್ಳಿ ಹಳ್ಳಿಗಳಿಗೂ ಹೋಗಬೇಕು. ಜನಕ್ಕೆ ಶಿಕ್ಷಣ ನೀಡಬೇಕು. ಜನಸಾಮಾನ್ಯರನ್ನು ಮೇಲೆತ್ತಬೇಕು.’ ಈ ಮಾನವಕೇಂದ್ರಿತ ಕಾಳಜಿಗಳು, ವಿವೇಕಾನಂದರು ಪ್ರಸಾರ ಮಾಡಲಪೇಕ್ಷಿಸಿದ ಹೊಸಧರ್ಮದ ಬುನಾದಿಯಾಗಿವೆ. ‘ಒಬ್ಬ ವಿಧವೆಯ ಕಣ್ಣೀರನ್ನು ಒರೆಸಲಾರದ, ಒಂದು ಅನಾಥ ಶಿಶುವಿಗೆ ಒಂದು ತುತ್ತು ಅನ್ನವನ್ನು ಕೊಡಲಾಗದ ದೇವರಲ್ಲೂ ಧರ್ಮದಲ್ಲೂ ನನಗೆ ನಂಬಿಕೆಯಿಲ್ಲ.’ ಎಂದು ಘೋಷಿಸಿದರು. ‘ಸ್ವರ್ಗವಿದೆಯೋ ಇಲ್ಲವೋ, ನರಕವಿದೆಯೋ ಇಲ್ಲವೋ, ಇದೆಲ್ಲ ಯಾರಿಗೆ ಬೇಕು? ನಮ್ಮೆದುರಿಗೆ ದುಃಖಭೂಯಿಷ್ಠವಾದೊಂದು ಪ್ರಪಂಚವಿದೆ, ಆ ದುಃಖವನ್ನು ಕಡಮೆ ಮಾಡಲು ಬುದ್ಧನಂತೆ ಒಂದಿಷ್ಟು ಪ್ರಯತ್ನ ಮಾಡಿರಿ’- ಇದು ಅವರ ನಿಲುವು. ನಿಜವಾದ ಕ್ರಾಂತಿಕಾರಿಯಾದವನು ಈ ಬಗೆಯ ವಾಸ್ತವಪ್ರಜ್ಞೆಯುಳ್ಳ ಮಹಾ- ಮಾನವತಾವಾದಿಯಾಗಿರುತ್ತಾನೆ. ಅಪಾರವಾದ ಅನುಕಂಪದಿಂದ ಜನರ ನೋವಿಗೆ ಸ್ಪಂದಿಸಬಲ್ಲವನಾಗಿರುತ್ತಾನೆ. ವಿವೇಕಾನಂದರು ಅಂಥ ಕ್ರಾಂತಿಕಾರೀ ಸಂತರಾಗಿದ್ದಾರೆ.

ದೇವರಾಗಲೀ ಧರ್ಮವಾಗಲೀ ಇರುವುದು ಮೂಲತಃ ಮನುಷ್ಯರಿಗಾಗಿ ಹಾಗೂ ಮನುಷ್ಯರ ಶ್ರೇಯಸ್ಸಿಗಾಗಿ. ವಿವೇಕಾನಂದರು ಧರ್ಮದ ನಿರ್ವಚನ ಮಾಡುತ್ತ Religion is Man-making ಎಂದು ಹೇಳಿದರು. ನಿಜವಾದ ಮನುಷ್ಯನನ್ನು ನಿರ್ಮಾಣ ಮಾಡುವುದೇ ಧರ್ಮದ ಉದ್ದೇಶ. ತನ್ನ ಸ್ವಂತಿಕೆಯನ್ನು ಕಳೆದುಕೊಂಡ, ಅವೈಚಾರಿಕತೆಯಲ್ಲಿ ಸ್ಥಗಿತಗೊಂಡ ಮನುಷ್ಯನನ್ನು, ವಿವೇಚನೆಯನ್ನುಳ್ಳ ಮನುಷ್ಯನನ್ನಾಗಿ, ಧೈರ್ಯಶಾಲಿಯಾದ ಮನುಷ್ಯನನ್ನಾಗಿ, ಸಹಜೀವಿಗಳಿಗೆ ಸ್ಪಂದಿಸುವ ಮನುಷ್ಯನನ್ನಾಗಿ, ದೈವಶ್ರದ್ಧೆಯುಳ್ಳ ಮನುಷ್ಯನನ್ನಾಗಿ ನಿರ್ಮಾಣ ಮಾಡುವಂಥದ್ದು ಧರ್ಮ. ಅಂದರೆ ಅದು ಮಾನವ ಕೇಂದ್ರಿತ ಕಾಳಜಿಗಳನ್ನುಳ್ಳ ಧರ್ಮದ ಕಲ್ಪನೆ; ಕೇವಲ ದೈವಕೇಂದ್ರಿತ ಕಾಳಜಿಗಳನ್ನ್ನುಳ್ಳ ಧರ್ಮದ ಕಲ್ಪನೆ ಅಲ್ಲ. ಈ ಮಾತನ್ನು ಸ್ವಲ್ಪ ವಿವರಿಸುವುದು ಅಗತ್ಯ ಎಂದು ತೋರುತ್ತದೆ: ಧರ್ಮದ ಕಲ್ಪನೆಗಳನ್ನು ಸ್ಥೂಲವಾಗಿ ಎರಡು ವಿಧ ಅನ್ನಬಹುದು: ಒಂದು ದೈವಕೇಂದ್ರಿತ, ಮತ್ತೊಂದು ಮಾನವ ಕೇಂದ್ರಿತ.

ದೈವಕೇಂದ್ರಿತ ಧಾರ್ಮಿಕ ನಿಲುವಿನ ಪ್ರಕಾರ ಮನುಷ್ಯನ ಮೊದಲ ಗುರಿ ದೈವ ಸಾಕ್ಷಾತ್ಕಾರ. ಆದಕಾರಣ ಈ ಲೋಕದಿಂದ ಪಾರಾಗಿ ಅಥವಾ ದೂರವಾಗಿ, ಏಕಾಂಗಿಯಾಗಿ ತನ್ನ ನಿರಂತರ ಸಾಧನೆಯಿಂದ ಸಾಕ್ಷಾತ್ಕಾರವನ್ನು ಪಡೆದುಕೊಳ್ಳುವುದು. ಈ ದೈವಕೇಂದ್ರಿತ ದೃಷ್ಟಿಗೆ ಸಾಮಾಜಿಕ ದುಃಖ, ಸಂಕಟಗಳಾಗಲಿ, ಬಡತನವಾಗಲಿ, ಶೋಷಣೆಯಾಗಲಿ ಅಷ್ಟು ಮುಖ್ಯವಲ್ಲ. ಸಾಧಕನಾದವನು ಈ ಲೋಕದ ನೋವು-ಸಂಕಟಗಳನ್ನೆಲ್ಲ ಸಹಿಸಿಕೊಂಡು ಭಗವತ್ಪರವಾದ ವ್ಯಾಕುಲವನ್ನು ಬೆಳೆಯಿಸಿಕೊಳ್ಳಬೇಕು. ನೋವು ಬಡತನ ಇತ್ಯಾದಿಗಳೇನಿದ್ದರೂ ವ್ಯಕ್ತಿತ್ವದ ದೃಢತೆಯನ್ನು ಪರೀಕ್ಷಿಸುವ ದೈವದ ನಿಕಷಗಳು.

ಆದರೆ ಮಾನವಕೇಂದ್ರಿತ ಧಾರ್ಮಿಕ ನಿಲುವು ಮುಖ್ಯವಾಗಿ ತನ್ನ ಆತ್ಮಸಾಕ್ಷಾತ್ಕಾರದ ಜತೆಯಲ್ಲಿ, ಅಥವಾ ಆತ್ಮಸಾಕ್ಷಾತ್ಕಾರಕ್ಕಿಂತ, ಸುತ್ತಣ ಜಗತ್ತಿನ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸುತ್ತ,, ಸೇವೆಯ ಮೂಲಕ ತನ್ನ ಮೋಕ್ಷವನ್ನು ಸಾಧಿಸಿಕೊಳ್ಳಬಹುದೆಂಬ ಶ್ರದ್ಧೆಯನ್ನು ಪ್ರತಿಪಾದಿಸುತ್ತದೆ. ಧರ್ಮ ಎಂದರೆ, ಮನುಷ್ಯನ ವಾಸ್ತವ ಬದುಕನ್ನು ಸುಧಾರಿಸುತ್ತ, ಅವನೊಳಗಿನ ಪರಮಾರ್ಥದ ಹಂಬಲವನ್ನು ಜಾಗ್ರತಗೊಳಿಸುತ್ತ, ಮಾನವ ಪ್ರೇಮವನ್ನು ವಿಸ್ತರಿಸುತ್ತ ಅವನನ್ನು ಸಹಜೀವಿಗಳ ಸೇವೆಯಲ್ಲಿ ತೊಡಗಿಸುವುದು ಎನ್ನುವುದು ವಿವೇಕಾನಂದರಿಗೆ ಪ್ರಿಯವಾದ ಕಲ್ಪನೆಯಾಗಿದೆ. ಧ್ಯಾನ-ಪೂಜೆ-ಪ್ರಾರ್ಥನೆ ಮೊದಲಾದವುಗಳ ಮೂಲಕ ಮುಕ್ತಿಲಾಭ ಮಾಡಿಕೊಳ್ಳಬೇಕೆನ್ನುವುದೇ ಬದುಕಿನ ಆದರ್ಶವೆಂದು ತಿಳಿದಿತ್ತು ಸಾಂಪ್ರದಾಯಿಕ ಸಂನ್ಯಾಸೀ ಪರಂಪರೆ; ಆದರೆ ಜೀವರ ಸೇವೆಯ ಮೂಲಕವಾಗಿಯೂ ಸಾಧಕ ತನ್ನ ಮುಕ್ತಿಯನ್ನು ಸಾಧಿಸಬಹುದು ಎಂಬ ಹೊಸ ಎಚ್ಚರಕ್ಕೆ ಅದನ್ನು ಹೊರಳಿಸಿ ಅಭಿನವ ಸಂನ್ಯಾಸೀ ಪರಂಪರೆಯೊಂದರ ನಿರ್ಮಾಣಕ್ಕೆ ಕಾರಣವಾದರು ಸ್ವಾಮಿ ವಿವೇಕಾನಂದರು. ಅವರ ವೈಚಾರಿಕ- ಕ್ರಾಂತಿಯ ಪರಿಣಾಮವೇ ಶ್ರೀರಾಮಕೃಷ್ಣ ಮಹಾ ಸಂಘ ಹಾಗೂ ಅದರ ಪ್ರತಿನಿಧಿಯಂತಿರುವ ಆಶ್ರಮಗಳು ಹಾಗೂ ಮಠಗಳು.

ಧರ್ಮವು ಕೇವಲ ಮುಕ್ತಿಸಾಧನವಾಗಿಯಾಗಲಿ ಕೇವಲ ಗೊಡ್ಡು ಆಚರಣೆಗಳ ಸಂಗ್ರಹವಾಗಿಯಾಗಲಿ ಉಳಿಯದೆ ಅದು ಸಾಮಾಜಿಕ ಸ್ಥಿತಿಗತಿಗಳಿಗೆ ಸ್ಪಂದಿಸುವಂತೆ ಮಾಡಿದ ಕೀರ್ತಿ ಸ್ವಾಮಿ ವಿವೇಕಾನಂದರಿಗೆ ಸಲ್ಲುತ್ತದೆ.

ಯಾವುದೂ ಸಣ್ಣದಲ್ಲ : ೨೦೦೪