ಕ್ರಿಯಾವಿಶೇಷಣಪ್ರಯೋಗದಲ್ಲಿ ದೋಷ

ಒಂದಂ ಕ್ರಿಯಾ-ವಿಶೇಷಣಮಂ ದೊರೆಕೊಳೆ ಸಯ್ತು ಪೇ[1]ೞದದಱೊಳೆ ಪೆಱತಂ |

ಸಂಧಿಸಿ ಪೇೞ್ದೊಡೆ ಕೃತಿಯೊಳಗೊಂದಿರದೆರಡಕ್ಕೆ ಬಿಟ್ಟ ಕಱುವಂ ಪೋ[2]ಲ್ಗುಂ ||೯||

೭. ‘ನೃಪನನ್ನು ಸ್ವಾಗತಿಸಿ, ಚೆನ್ನಾಗಿ ಉಪಚರಿಸಿ, ಪ್ರಿಯರ ಕುಶಲವಾರ್ತೆಯನ್ನು ವಿಚಾರಿಸಿ. ಸ್ಥಿರನಾಗಿ ಪ್ರಭು ನುಡಿಯಲು, ಅವನು ಹೆಚ್ಚಿನ ಆನಂದವನ್ನು ಪಡೆದನು’ ಎಂಬುದು ಪದ್ಯದ ಸರಲಾನುವಾದ. *ಇಲ್ಲಿ ವಿವಕ್ಷಿತವಾದ ಲಕ್ಷ್ಯದ ದೋಷಸ್ವರೂಪ ಅನುವಾದದಲ್ಲಿ ಕಾಣಿಸದು; ಮೂಲವನ್ನೇ ನೋಡಬೇಕು. ಬರಿಸಿ+ಕ್ಷಿತಿಪತಿಯಂ ಎನ್ನುವಾಗ, ಸಯ್ತಿರಿಸಿ+ ಪ್ರಿಯ, ಎನ್ನುವಾಗ, ಬೆಸಗೊಂಡು+ಸ್ಥಿರಮಿರ್ದು+ಪ್ರಭು, ಎನ್ನುವಾಗ ಮತ್ತು ನುಡಿಯೆ+ಪ್ರರೂಢ ಎನ್ನುವಾಗ- ಹೀಗೆ ಆರು ಸಲ ಈ ದೋಷವನ್ನಿಲ್ಲಿ ಕಾಣುತ್ತೇವೆ. ಎಲ್ಲ ಕಡೆಗೂ ಲಘುವರ್ಣಾಂತ್ಯಪದದ ಮುಂದೆ ಸಂಯುಕ್ತಾಕ್ಷರ ಆದಿಯಲ್ಲಿರುವ ಪದಾಂತರ ಹತ್ತಿಕೊಂಡಂತೆ ಬಂದಿರುವುದೇ ದೋಷ.*

೮. ‘ಆ ಮಿತಭಾಷಿಯು ಜಗನ್ನುತನಾದ ನೃಪನನ್ನು ಸ್ವಾಗತಿಸಿ, ಸಂತೈಸಿ, ಕುಶಲ ವಾರ್ತೆಯನ್ನು ಬೆಸಗೊಂಡು ಆನಂದದಾಯಕನಾದನು’ ಎಂದು ಇಲ್ಲಿಯೂ ಅರ್ಥ ಸಮಾನವೇ. ಆದರೆ ಶಬ್ದಪ್ರಯೋಗದಲ್ಲಿ ಉಕ್ತದೋಷವನ್ನು ಪರಿಹರಿಸಲಾಗಿದೆ. ದೋಷಮುಕ್ತವಾದ ಈ ಪ್ರಯೋಗವನ್ನೇ ‘ಮಾರ್ಗ’ವೆನ್ನಲಾಗಿದೆ.

೯. ಒಂದು ಕ್ರಿಯಾವಿಶೇಷಣವನ್ನು ಸೂಕ್ತವಾಗಿ ಹೇಳುವ ಬದಲು ಅದರಲ್ಲಿಯೇ ಎಂದರೆ ಆ ಕ್ರಿಯಾವಿಶೇಷಣದಲ್ಲಿಯೇ ಇನ್ನೊಂದನ್ನು ಗಂಟುಹಾಕಿ ಹೇಳಿದ್ದಾದರೆ, ಅದು ಕೃತಿಯಲ್ಲಿ ಹೊಂದಿಕೊಳ್ಳದು; (=ಎರಡಕ್ಕೆ ಅನ್ವಯಿಸಬೇಕಾದ ಆ ಒಂದೇ ಕ್ರಿಯೆ) ಎರಡು ಹಸುಗಳ ಕೆಚ್ಚಲಿಗೆ (ಕುಡಿಲಯಲೆಂದು) ಬಿಟ್ಟ ಒಂದೇ ಕರುವಿನಂತೆ ಪರದಾಟಕ್ಕೀಡಾಗುವುದು.

ದೋಷಕ್ಕೆ ಉದಾಹರಣೆ

ಪರಿವಾರ-ವಾರ-ವನಿತಾ-ಪರಿವೃತನರಮನೆಯೊಳರಸನಂಬರ-ತಳದೊಳ್ |

ವರ-ತಾರಾ-ಪರಿಗತ-ಶಶ-ಧರನಂತೊಪ್ಪಿರೆ ವಿನೋದದಿಂದುರುಮುದದಿಂ ||೧೦||

ಅದೋಷದ ರೀತಿ

ಪದನಱ*ದೊಂದಂ ಕ್ರಿಯೆಯೊಳ್ ಪುದಿದುೞದುದನೊಂದಿ ಬರೆ ವಿಶೇಷ್ಯದೊಳೆಂದಂ

ಸದಭಿಮತಮಾಗಿ ನಿಲೆ ಪೇೞ್ವುದು ಮಾರ್ಗಂ ನಿತ್ಯ-ಮಲ್ಲ-ವಲ್ಲಭ-ಮತದಿಂ ||೧೧||

ಅದರ ಉದಾಹರಣೆ

*ಪರಿವಾರ-ವಾರ-ವನಿತಾ-ಪರಿವೃತನರಮನೆಯೊಳರೆಸನಂಬರ-ತಳದೊಳ್ |

ವರ-ತಾರಾ-ಪರಿಗತ-ಶಶ-ಧರನಂತೊಪ್ಪಿರೆ ವಿನೋದದಿಂ ಜನಿತಮುದಂ ||೧೨||

ನಿಪಾತ, ಅವ್ಯಯಗಳ ಅನುಚಿತ ಪ್ರಯೋಗ

ಇಂನಂತೆ ಮತ್ತೆ ಬೞ ಮಿಗೆ ಮುಂ ನಿಲೆ ತಾಂ[3] ಮೇಣ್‌ಪೆ[4]ಱಂ ಗಡಂ ಗಳಮಾದಂ |

ಕೆಂನಂ ನಿಲ್ಲೆಂದಿವನೆಂದುಂ ನಿಱೆಸಲ್ಕ[5]ಲ್ಲದೆಡೆಗಳೊಳ್ ಕ[6]ಲ್ಲದಿರಿಂ ||೧೩||

 

೧೦. *ಇದಕ್ಕೆ ಉದಾಹರಣೆ-* ಅರಮನೆಯಲ್ಲಿ ಪರಿವಾರದ ವಾರಾಂಗನೆಯರಿಂದ ಪರಿವೃತನಾಗಿದ್ದ ರಾಜನು ಅಕಾಶದಲ್ಲಿ ತಾರಾಗಣದಿಂದ ಪರಿವೃತನಾದ ಚಂದ್ರನಂತೆ ವಿನೋದದಿಂದ ಬಹು ಸಂತೋಷದಿಂದ ಒಪ್ಪಿರಲು… *ಇಲ್ಲಿ ದಪ್ಪಕ್ಷರದ ಎರಡೂ ಕ್ರಿಯಾವಿಶೇಷಣಗಳು ಸರಿಯಾಗಿ ಕ್ರಿಯೆಯೊಡನೆ ಅನ್ವಯಿಸುತ್ತಿಲ್ಲ.*

೧೧. ಕ್ರಮವರಿತು ಒಂದು ಕ್ರಿಯಾವಿಶೇಷಣವನ್ನು ಕ್ರಿಯೆಯಲ್ಲಿ ಅನ್ವಯಿಸುವಂತೆ ಮಾಡಿ, ಇನ್ನೊಂದನ್ನು ವಿಶೇಷ್ಯಕ್ಕೆ ಅನ್ವಯಿಸಿ ಅಭಿಮತವಾಗುವಂತೆ ಇರಿಸಿ ಹೇಳುವುದು ನೃಪತುಂಗನ ಮತದಿಂದ ‘ಮಾರ್ಗ’ವೆನಿಸುವುದು.

೧೨. ಅರಮನೆಯಲ್ಲಿ ಪರಿವಾರದ ವಾರಾಂಗನೆಯರಿಂದ ಪರಿವೃತನಾಗಿದ್ದ ರಾಜನು ಆಕಾಶದಲ್ಲಿ ತಾರಾಗಣದಿಂದ ಪರಿವೃತನಾದ ಚಂದ್ರನಂತೆ ವಿನೋದದಿಂದ ((adverb ) ‘ಒಪ್ಪಿರಲು’ ಎಂಬ ಕ್ರಿಯೆಯೊಡನೆಯೂ ‘ಸಂತುಷ್ಟಚಿತ್ತ’ ಎಂಬ ವಿಶೇಷಣವನ್ನು ((adjective) ರಾಜನು ಎಂಬ ವಿಶೇಷ್ಯದೊಡನೆಯೂ ಅನ್ವಯಿಸಿದ್ದರಿಂದ ಉಕ್ತದೋಷ ಪರಿಹೃತವಾಗಿದೆ.*

೧೩.‘ಇನ್’, ‘ಅಂತೆ’, ‘ಮತ್ತೆ’, ‘ ಬೞ, ‘ಮಿಗೆ’, ‘ಮುಂ’, ‘ನಿಲೆ’, ‘ತಾಂ’, ‘ಮೇಣ್’, ಪೆಱಂ’, ‘ಗಡಂ’, ‘ಗಳಂ’ ‘ಆದಂ’, ‘ಕೆನ್ನಂ’, ‘ನಿಲ್’,-ಎಂಬಿವನ್ನು ಅನಪೇಕ್ಷಿತ ಸ್ಥಳಗಳಲ್ಲಿ ಜೋಡಿಸಲು ಕಲಿಯದಿರಿ !

ದೋಷದ ಉದಾಹರಣೆ

ನೃಪ-ಕನ್ಯಕಾ-ಸ್ವಯಂವರ-ವಿಪುಳ-ಮಹೋತ್ಸವ-ವಿವಾಹದೊಳ್ ಬಂ[7]ದಿರ್ ಮು- |

ನ್ನ[8]ಪವಾದವಾದುದೆನಗೇಂ ಚ[9]ಪಲಾಧ್ವಜನೋಕ್ತಿಯಿಂದಮಿಂ ಬಾರದಿರಿಂ ||೧೪||

 

ದ್ವಿತೀಯೆಷಷ್ಠಿಗಳ ವಿಭಕ್ತಿಪ್ರತ್ಯಯಗಳಲ್ಲಿ ಗುರುಲಘು ವಿಕಲ್ಪ

ಘನಮೆರಡನೆಯಂದಱೊಳಮಾಱನೆಯ ವಿಭಕ್ತಿಯೊಳಮೊಳವು ಗುರು-ಲಘು-ಭೇದಂ |

ಅನಿಯತ-ವೃತ್ತಿಯಿನಱೆದಿದನನುಮಾರ್ಗಕ್ರಮದೆ ಸಯ್ತು ಮಾಡುಗೆ ನಿ[10]ಪುಣರ್ ||೧೫||

 

ಆದಿ-ಸ್ವರ-ಪದಮಂತ್ಯದೊಳಾದೆಡೆಯೊಳ್ ದೀರ್ಘಮಕ್ಕುಮೆರಡನೆಯ ವಿಭ* |

ಕ್ತ್ಯಾದಾನ-ಪದಂ ದೀರ್ಘಂ ಪಾ[11]ದಾಂತದೊಳುಳಿದ ತಾಣದೊಳ್ ಸ್ವಚ್ಛಂದಂ ||೧೬||

೧೪. ‘ರಾಜಪುತ್ರಿಯ ಸ್ವಯಂವರ-ಮಹೋತ್ಸವ ಸಮಾರಂಭದಲ್ಲಿ ಮುಂಚೆ ಬಂದಿರಿ; ನನಗೆ ಅಪವಾದವೇನಾಯಿತು? ಹೀಗೆ ಚಪಲಚಿತ್ತರಾದ ದಾರಿಜನರ ಮಾತಿನಿಂದ ಇನ್ನು ಬರಬೇಡಿ !’ *ಇಲ್ಲಿ ‘ಬಂದಿರಿ’ ಎಂಬ ಭೂತಕಾಲವಾಚಕಕ್ರಿಯೆ ಇರುವಾಗ ‘ಮುನ್’ (=ಮುಂಚೆ), ಎಂದೂ, ಹಾಗೆಯೇ ಎಂದೆಂದೂ ಬೀದಿಜನರ ಮಾತನ್ನು ಕೇಳೀಬರುತ್ತಿರಬೇಡಿರೆಂಬಲ್ಲಿಯೇ ಗತಾರ್ಥವಾಗಿರುವುದರಿಂದ ಮತ್ತೆ ವಾಚ್ಯವಾಗಿ ‘ಇನ್’ (=ಇನ್ನು) ಎಂದೂ ಪ್ರಯೋಗಿಸಿರುವುದು ಅನಪೇಕ್ಷಿತ ಪ್ರಯೋಗವೆಂದು ಗ್ರಂಥಕಾರನ ಅಭಿಪ್ರಾಯ. ಇದು ಸಾರ್ಥಕ ಪ್ರಯೋಗವೆಂದು ಇತರರು ಭಾವಿಸಿರುವುದು ಸಾಧುವಲ್ಲವೆನಿಸುತ್ತದೆ.*

೧೫. ದ್ವಿತೀಯಾ, ಷಷ್ಠೀ ವಿಭಕ್ತಿಗಳಲ್ಲಿ ವಿಭಕ್ತಿಪ್ರತ್ಯಯಗಳು ದೀರ್ಘವಾಗಿಯೂ ಇರಬಹುದು, ಹ್ರಸ್ವವಾಗಿಯೂ ಇರಬಹುದು; ಎರಡೂ ಅನಿಯತವಾಗಿರುವುದರಿಂದ (ವೈಕಲ್ಪಿಕವೇ ಎನಿಸಿದರೂ) ಇದನ್ನು ‘ಮಾರ್ಗ” ಕ್ರಮಾನುಗುಣವಾಗಿ ಅರಿತು ಬುದ್ಧಿವಂತರು ಸರಿಯಾಗಿ ಬಳಸಬೇಕು-

೧೬. ದ್ವಿತೀಯಾ ವಿಭಕ್ತಿಪ್ರತ್ಯಯಾಂತ ಪದದ ಮುಂದೆ ಆದಿಸ್ವರವಿರುವ ಪದ ಬಂದಾಗ ಪಾದಾಂತ್ಯದಲ್ಲಿ ಮಾತ್ರ ಅದು ದೀರ್ಘವೇ ಆಗಬೇಕೆಂದು ನಿಯಮ; ಉಳಿದ ಸ್ಥಾನಗಳಲ್ಲಿ ಅನಿಯತವಾಗಿ ದೀರ್ಘ ಇಲ್ಲವೆ ಹ್ರಸ್ವಗಳಲ್ಲಿ ಯಾವುದು ಬೇಕಾದರೂ ಬರಬಹುದು.

ನೃಪನನಭಿಮಾನ-ಧನನನನುಪಮನನತಿಶಯ-ವಿಶಾಲ-ಕೀರ್ತಿ-ಧ್ವಜನಾನ್-

ಉಪಚಿತಗುಣನಾನ್ ಉಚಿತನನಪೇತರದೋಷನನುದಾರ-ಚರಿತೋದಯನಂ ||೧೭||

 

*ನೃಪನಾನಭಿಮತ-ಮನನಾನುಪಮೇತರನಾನಪಾರ-ಕೀರ್ತಿ-ಧ್ವಜನಂ |

ವಿಪುಲ-ಗುಣಜ್ಞನನುಚಿತನನುಚಿತನನಪಗತದೋಷನನುದಾರ ಚರಿತೋದಯನಂ- ||೧೮||

ಎಂದಿಂತು ಪೇೞ  ಮಾೞ್ಕೆಯೊಳೊಂದುವುದುಮನೊಂದಿ ಬಾ[12]ರದುದುಮಂ ಪೀನಂ |

ಸಂ[13]ದೆಯಮಿಲ್ಲದೆ ಸಲೆ ತಱೆಸಂದೋ[14] ಸಱಸುವುದು ಕಾವ್ಯ-ರಚನಾಕ್ರಮದೊಳ್ ||೧೯||

೧೭. ಅಭಿಮಾನಧನನ್ನೂ, ನಿರುಪಮನೂ, ಅತಿಶಯವಾದ ಕೀರ್ತಿಯೇ ಪತಾಕೆಯಂತಿರುವವನೂ, ಮಹಾಗುಣಶಾಲಿಯೂ, ಉಚಿತನೂ, ದೋಷರಹಿತನೂ, ಉದಾರಚರಿತನೂ ಆದ ಅರಸನ್ನು…. *ಇಲ್ಲಿಯ ಮೂಲ ಪದ್ಯದಲ್ಲಿ ನೃಪನು+ಅಭಿಮಾನ, ಧನನಂ+ಅನುಪಮ, ಅನುಪಮನಂ+ಅತಿಶಯ ಎಂಬ ಮೂರೆಡೆಗಳಲ್ಲಿಯೂ ದ್ವಿತೀಯಾವಿಭಕ್ತಿ ಪ್ರತ್ಯಯವಾದ ‘ಅಂ’ ಹ್ರಸ್ವವೇ ಇದೆ, ಸ್ವರಾದಿ ಪದ ಮುಂದೆ ಬಂದಿದ್ದರೂಕೂಡ. ಅದೇ ಪಾದಾಂತ್ಯದಲ್ಲಿ ಮಾತ್ರಹ್ರಸ್ವವಾಗಿ ‘ಧ್ವಜನಂ+ಉಪಚಿತ=‘ಧ್ವಜನನುಪಚಿತ’ ಎಂದು ಸಂಧಿಯಾಗದು. ಅಲ್ಲಿ ‘ಧ್ವಜನಾನ್’ ಎಂಬಂತೆ ಕಡ್ಡಾಯವಾಗಿ ಪ್ರತ್ಯಯವು ‘ಆನ್’ ಎಂದು ದೀರ್ಘವೇ ಆಗಬೇಕು. ಮಿಕ್ಕೆಡೆ ವೈಕಲ್ಪಿಕವೆಂದುದಕ್ಕೆ ಲಕ್ಷ್ಯವಾಗಿ ಎರಡನೆಯ ಪಾದದಲ್ಲಿ ‘ಉಪಚಿಗುಣನಾನ್+ಉಚಿತ’ ಎನ್ನುವಾಗ ದೀರ್ಘಾದೇಶವೂ ‘ಉಚಿತನಂ+ಅಪೇತ’ ಎನ್ನುವಾಗ ಮತ್ತು ‘ದೋಷನಂ+ಉದಾರ’ ಎನ್ನುವಾಗ ಹ್ರಸ್ವಾದೇಶವೂ ನಿರ್ದುಷ್ಟವಾಗಿ ಬಂದಿದೆ.*

೧೮. *ಮೇಲಿನ ಪದ್ಯವನ್ನೇ ವೈಕಲ್ಪಿಕವಾದೆಡೆಗಳಲ್ಲಿ ಬೇಕಾದಂತೆ ಹ್ರಸ್ವದ ಬದಲು ದೀರ್ಘಮಾಡಿದರೂ ಸರಿಹೊಂದುತ್ತದೆ, ಎಂಬುದಕ್ಕಾಗಿ ನೃಪನಾನ್+ಅಭಿನುತ, ಮನನಾನ್+ಉಪಮೇತರನಾನ್+ಅಪಾರ ಎಂದೂ ದೀರ್ಘಾದೇಶ ಬರುವಂತೆ ಪದ್ಯವನ್ನು ಮತ್ತೆ ಬರೆದು ತೋರಿಸಲಾಗಿದೆ.* ಅಭಿಪ್ರಾಯ ಮೇಲಿನ ಪದ್ಯದ್ದೇ ಆಗಿದೆ.

೧೯. ಹೀಗೆ ಮೇಲೆ ಹೇಳಿದ ನಿಯಮದ ಪ್ರಕಾರ ಸರಿಹೊಂದುವವು ಯಾವವು, ಸರಿಹೊಂದದವು ಯಾವವು ಎನ್ನುವುದನ್ನು ವಿಚಾರಮಾಡಿ ನಿಷ್ಕರ್ಷಿಸಿ, (ತ್ಯಾಜ್ಯವಾದ್ದನ್ನು) ಕಾವ್ಯದ ರಚನಾಕಾಲದಲ್ಲಿ ಬಿಡಬೇಕು.


[1] ಪೇೞ್ದುಮದರೊಳೆ ‘ಮ’.

[2] ಪೋಲ್ಕುಂ ‘ಪಾ’.

* ಈ ಪದ್ಯ ‘ಪಾ’ನಲ್ಲಿ ಬಿಟ್ಟುಹೋಗಿದೆ.

[3] ತಾಲ್ ‘ಕ’

[4] ವೆಱಂ ‘ಮ’.

[5] ಲ್ಕಿಲ್ಲ ‘ಮ’.

[6] ಕಲ್ದದಿರಿಂ ‘ಕ’.

[7] ಬಂದಿರೆ ೧ಪಾ’.

[8] ಅಪವಾದವಾದುರೆನ ‘ಅ’.

[9] ಚಪಲ ‘ಮ’; ಚಪಳ ‘ಬ’.

[10] ನಿಪುಣಂ ‘ಪಾ’.

[11] ಪಾದಂತ ‘ಸೀ’.

* ಈ ಪದ್ಯ ‘ಪಾ’ ದಲ್ಲಿಲ್ಲ.

[12] ಬಾರದುದುವಂ ‘ಪಾ’.

[13] ಸಂದಯಮಿಲ್ಲದೆ ‘ಪಾ’

[14] ದೋಸರಿಸುವುದು ಬಿ.ಎಂ. ಶ್ರೀ ಸೂಚಿತಪಾಠ.