ಕ್ರಿಸ್ಮಸ್ಸು ಬಂದಿಹುದು ; ಕ್ರಿಸ್ತನೆದೆಯಂದದಲಿ
ಶೋಭಿಸಿದೆ ತಿಳಿನೀಲಿಯಾಕಾಶ ! ಬೆಳ್ಳಕ್ಕಿ
ಮಾಲೆಗಳು ತೇಲುತಿವೆ ದೇವದೂತರ ತೆರದಿ.
ಚರ್ಚಿನ ಗಂಟೆ ಘೋಷಿಸಿದೆ ಗಂಭೀರ ಕಂಠ-
ದಲಿ ಗುರುವಿನಾದೇಶವಂ ; ಹೊನಲಾಗಿ ಹರಿವ
ಪ್ರಾರ್ಥನಾ ಗೀತದಲಿ ಮುಳುಗಿಹುದು ಮಂದಿರವು !
ಅದೊ ಒಳಗೆ, ಮೋಂಬತ್ತಿಗಳ ಮಬ್ಬು ಬೆಳಕಿನಲಿ
ನೋಡು ಕ್ರಿಸ್ತನ ದಿವ್ಯ ಮಂಗಳ ಮೂರ್ತಿ ! ಅಂದು
ಗೋಲ್ಗೊಥದ ಗುಡ್ಡದಲಿ ಶಿಲುಬೆಯಜ್ಞಕೆ ತನ್ನ
ತನುವ ತೆತ್ತಾ ಧೀರ ಸುಂದರ ಪುರುಷ ! ಜಗದ
ಗಂಭೀರತೆಯೆ ಮುಖ ಬಿಂಬವಾದಂತೆ ; ಕಣ್ಣು-
ಗಳೆರಡು ಕರುಣಾರಸದ ಕಡಲೆಂಬಂತೆ ; ಆ
ಮೂರ್ತಿ ‘ದೇವರ ರಾಜ್ಯವಿಹುದು ನಿಮ್ಮೊಳಗೆ’
ಎಂದರೂ ಮಾನವತೆ ತೊಳಲುತಿದೆ ತಮದೊಳಗೆ !