ವರ್ಷದ ಕೊನೆ, ಡಿಸೆಂಬರ್ ತಿಂಗಳ ಛುಮು ಛುಮು ಛಳಿಯ ಜೊತೆಗೆ ಭೂರಮೆಗೆ ರಕ್ಷಣೆ ಕೊಡಲೆಂದೋ ಏನೋ ಪ್ರಕೃತಿ ಬಣ್ಣ ಬಣ್ಣದ ಹೊದಿಕೆ ಸಿದ್ದ ಪಡಿಸಿ ಕೊಳ್ಳುತ್ತದೆ. ಹೂವುಗಳ ರಥೋತ್ಸವವೇ ಹೊರಡುತ್ತದೆಂದು ತೋರುತ್ತದೆ. ಎಲ್ಲಿ ನೋಡಿದರಲ್ಲಿ ಬಣ್ಣಗಳ  ಓಕುಳಿ. ಡಿಸೆಂಬರ್ ಮತ್ತು  ಪ್ರಸಿದ್ಧ ಕ್ರಿಸ್ ಮಸ್ ಹಬ್ಬ,  ಜೊತೆ ಜೊತೆಗೇ ಬರುವಂತಹವು. ಹಾಗೆಯೇ ಈ ಹೂಗಳು, ಕ್ರಿಸ್ ಮಸ್ ಗೆ ಪ್ರಕೃತಿಯ ಕೊಡಿಗೆ ಎಂದರೂ ತಪ್ಪಾಗಲಾರದು.

ಮನೆ ಮುಂದಿನ ಚಪ್ಪರವೇರಿದ ಬಳ್ಳಿ.

ಛಳಿಯನ್ನೇ ಎದುರು ನೋಡುತ್ತಿದ್ದಂತೆ ಸರಸರನೆ ಹಬ್ಬಿ ಪ್ರತಿ ಬಳ್ಳಿಯ ತುದಿಗಳಲ್ಲೂ ಗೊಂಚಲು ಗೊಂಚಲು  ಬಂಗಾರದ ಬಣ್ಣದ ಹೂವು ಬಿಡುವುದೇ ‘ಜಕಾರಾಂಡ’ ಸಸ್ಯ ಕುಟುಂಬಕ್ಕೆ ಸೇರಿದ ‘ಗೋಲ್ಡನ್ ಶವರ್ ಟ್ರಂಪೆಟ್’ ಹೂವಿನ ಗಿಡ. ಫ್ಲೇಮಿಂಗ್ ಟ್ರಂಪೆಟ್, ಆರೆಂಜ್ ಬಿಗೋನಿಯ ಎಂಬೆಲ್ಲ ಹೆಸರಿನ ಈ ಹೂವಿಗೆ ತಮಿಳಿನ ‘ತಂಗ ಪೂ’ ಹೆಸರು ಸಾರ್ಥಕತೆ ತಂದಿದೆ. ಬಂಗಾರದ ಬಣ್ಣ ಹೋಲುವ ಕೆಂಪು-ಕಿತ್ತಲೆ ಬಣ್ಣ ಬೆರೆತ ಹೂ ಗೊಂಚಲು ಗೊಂಚಲಾಗಿ ಜೋತು ಬೀಳುವುದನ್ನು ನೋಡುವುದೇ ಒಂದು ಸುಂದರ ದೃಶ್ಯ.

ಬ್ರೆಜಿಲ್, ಅರ್ಜೆಂಟೀನ, ಪೆರುಗ್ವೆ ಮೊದಲಾದ ದೇಶಗಳೇ ಅಲ್ಲದೆ, ಭಾರತದ ಉದ್ದಗಲದಲ್ಲೂ ಬೆಳೆಯುವ ಬಳ್ಳಿ.

ಬಂಗಾರದ ಬಣ್ಣದ ಹೂಗಳು.

ಸದಾ ಹಸಿರಾಗಿರುವ ಗಿಡ. ಮೂರು ಇಂಚಿನಷ್ಟು ಉದ್ದದ ಕೊಳವೆಯಾಕಾರದ ಹೂವುಗಳು. ಎದುರು ಬದುರಿನ ಎಲೆಗಳು. ಮದ್ಯೆ ಸುತ್ತಿಕೊಳ್ಳುವ ಸ್ಪ್ರಿಂಗ್ ತರಹದ ಸುರುಳಿ. ಆಧಾರ ಗಿಡ ಹಿಡಿದುಕೊಳ್ಳಲು ಇದು ಸಹಾಯಕ. ಹೊಸ ಬಳ್ಳಿಯ ತುದಿಯಲ್ಲಿ ಗೊಂಚಲು ಹೂವುಗಳು. ಪ್ರತಿ ಗೊಂಚಲಿನಲ್ಲಿ ೧೫-೨೦ ಹೂವುಗಳು. ಕೊಳವೆಯಾಕಾರದ ಹೂವುಗಳ ರೇಕುಗಳು ಹಿಂದಕ್ಕೆ ಮಡಿಸಿ ಕೊಂಡಂತೆ ಕಾಣುತ್ತವೆ. ಸ್ಟೈಲ್ ಮತ್ತು ಸ್ಟಿಗ್ಮಾಗಳು (ಪರಾಗ ಸ್ಪರ್ಶಕ್ಕೆ ಬೇಕಾದ ಭಾಗಗಳು)ಹೂವಿನಿಂದ ದೂರಕ್ಕೆ ಚಾಚಿಕೊಂಡಿರುತ್ತದೆ.  ಹೂವುಗಳ ಭಾರಕ್ಕೆ ಇಳಿಬಿದ್ದ ಗೊಂಚಲು.  ದಾರಿ ಹೋಕರನ್ನು ನಿಂತು ನೋಡುವಂತೆ ಮಾಡುವ ಸೆಳೆತ ಈ ಹೂ-ಗೊಂಚಲುಗಳಿಗೆ.

ತಾರಸಿಯಲ್ಲೂ ಬಣ್ಣದ ಓಕುಳಿ.

ಕಾಂಡದ ತುಂಡುಗಳಿಂದ ಹೊಸ ಗಿಡ ಮಾಡಿಕೊಳ್ಳ ಬಹುದು. ಏಯರ್ ಲೇಯರಿಂಗ್ ನಿಂದಲೂ ಆರೋಗ್ಯವಂತ ಗಿಡ ಮಾಢ ಬಹುದು.  ಒಮ್ಮೆ ಚಿಗುರಿ ಗಿಡವಾಯಿತೆಂದರೆ ಆಧಾರ ಸಿಕ್ಕಲ್ಲೆಲ್ಲ ಹಬ್ಬ ತೊಡಗುತ್ತದೆ. ಗಿಡದ ಬೆಳವಣಿಗೆಯನ್ನು ನಿಯಂತ್ರಿಸಲು ಆಗಿಂದ್ದಾಗ್ಯೆ, ಅಂದರೆ ಹೂವು ಮುಗಿದ ತಕ್ಷಣ ಸವರುವುದು (ಪ್ರೂನಿಂಗ್) ಒಳ್ಳೆಯದು. ಹೊಸದಾಗಿ ಬಂದ ಬಳ್ಳಿಗಳಲ್ಲಿ ಸೊಗಸಾಗಿ ಹೂವು ಬಿಡುತ್ತದೆ. ದೂರದಿಂದ ನೋಡಿದರೆ ಕಿತ್ತಳೆ ಬಣ್ಣದ ಕಾರ್ಪೆಟ್ ಹಾಸಿದಂತೆ.

ಯಾವದೇ ತರಹದ ಮಣ್ಣಿನಲ್ಲಿ ಬೆಳೆಯ ಬಹುದು. ಬರ ನಿರೋಧಕ ಶಕ್ತಿ ಹೆಚ್ಚು. ಹೆಚ್ಚಿನ ರೋಗ, ರುಜಿನ ಇಲ್ಲದ ಗಿಡ. ಕೆಲವೊಮ್ಮೆ, ಕಂಬಳಿ ಹುಳು, ಸ್ಕೇಲ್ಸ್, ಮತ್ತು ನುಸಿಯ ಕಾಟವಿರುತ್ತದೆ. ಹಳೆಯ ಕೊಂಬೆಗಳನ್ನು ಕತ್ತರಿಸುತ್ತಿದ್ದರೆ ಇವುಗಳಿಂದ ತಪ್ಪಿಸಿಕೊಳ್ಳ ಬಹುದು. ಚಪ್ಪರದ ಮೇಲೆ ಹಬ್ಬಿಸಿದರೆ ಕೆಳಗೆ ನೆರಳುಮನೆಯಂತಾಗುತ್ತದೆ. ಆದರೆ ಗಿಡ ಚೆನ್ನಾಗಿ ಬೆಳೆಯಲು ಬಿಸಿಲು ಬೇಕು.

ಹೂಗೊಂಚಲು ಕೆಳಗಿಳಿಯದಂತೆ ಸುತ್ತಿಕೊಂಡಿರುವ ಬಳ್ಳಿ.

ಬಂಬಲ್ ಬೀ ಗಳು ಮತ್ತು ಹಮ್ಮಿಂಗ್ ಬರ್ಡ್ಸ್, ಮತ್ತು ಚಿಟ್ಟೆಗಳು ಈ ಹೂವಿಗೆ ಆಕರ್ಶಿತವಾಗುತ್ತವೆ, ಇವುಗಳಿಲ್ಲದಿದ್ದರೆ ಪರಾಗ ಸ್ಪರ್ಶ ಕ್ರಿಯೆ ಸಾಧ್ಯವಿಲ್ಲ. ಇದರಿಂದಾಗಿ ಬೀಜಗಳಾಗುವುದು ಅಪರೂಪ.

ಮನೆಯ ಮುಂದಿನ ಚಪ್ಪರಗಳ ಮೇಲೆ, ಪರ್ ಗೋಲಾಗಳ ಮೇಲೆ, ಬೇಲಿಯ ಮರಗಳ ಮೇಲೆ ಹಬ್ಬಿಸ ಬಹುದು. ಒಮ್ಮೆ ಬೆಳೆಸಿದರೆ ಹತ್ತಾರು ವರ್ಷ ಹೂವು ಬಿಡುತ್ತ ಹಬ್ಬಿಸಿರುವ ಜಾಗದ ಸೌಂದರ್ಯ ಇಮ್ಮಡಿಸುವಂತೆ ಮಾಡುವುದಂತು ನಿಜ.

ಹತ್ತಿರದಿಂದ ಹೂವು.

ಇದೇ ರೀತಿ ಹಬ್ಬುವ ಇನ್ನೊಂದು ಬಳ್ಳಿ ಐಪೋಮಿಯ. ಲೇಡಿ ಡೂರ್ಲಿಸ್ ಮಾರ್ನಿಂಗ್ ಗ್ಲೋರಿ, ಕಾರ್ಡಿನಲ್ ಕ್ರೀಪರ್ ಎಂದೆಲ್ಲ ಕರೆಸಿಕೊಳ್ಳುವ ಈ ಬಳ್ಳಿಯ ಎಲೆಗಳು ೫-೭ ಭಾಗ ಸೀಳಿದಂತೆ, ನುಣುಪಾಗಿ ಹೊಳಪಿನಿಂದ ಕೂಡಿರುತ್ತದೆ. ಹೂವುಗಳು ಮೆಜೆಂಟವನ್ನು ಹೋಲುವ ಕೆಂಪು ಮಿಶ್ರಿತ ಗುಲಾಬಿ ಬಣ್ಣ. ಅರಳುವ ಮೊದಲಿನ ಮೊಗ್ಗುಗಳು ತುಂಬ ಸುಂದರ. ನೋಡಲು ಚಿಕ್ಕ ಕಾಯಿಗಳಂತೆ. ಹೂವೂ ಅಷ್ಟೇ. ನೋಡುಗರನ್ನು ಮೋಡಿ ಮಾಡುವ ಈ ಹೂಗಳು ಕ್ರಿಸ್ಮಸ್ ಹಬ್ಬಕ್ಕೆ, ಅದನ್ನು ಆಚರಿಸುವವರಿಗೆ ಪ್ರಕೃತಿಯ ಕಾಣಿಕೆ. ಹೂ ಗೊಂಚಲುಗಳನ್ನು ನೋಡುತ್ತಿದ್ದರೆ ಸಾಕು, ಗಂಟೆ ಸರಿದದ್ದೇ ತಿಳಿಯಲ್ಲ. ಪ್ರಕೃತಿಯ ಕುರಿತಾದ ಒಂದು ಧನ್ಯತಾ ಭಾವ. ಎಲ್ಲೆಡೆ ಹೂ ಬಿಟ್ಟಿವೆ. ನಡೆಯುವಾಗ ಅಕ್ಕ ಪಕ್ಕ ಗಮನಿಸಿ. ಒಂದು ಸುಂದರ ದೃಷ್ಯ ಕಣ್ಣು ತಪ್ಪೀತು.

ಪರಾಗ ಸ್ಪರ್ಶಕ್ಕಾಗಿ ಸಿದ್ಧವಾದ ಹೂಗಳು.

(ಚಿತ್ರಗಳು: ಎಆರ್ಎಸ್ ಶರ್ಮ)