ಕ್ಲೌಡ್ ಕಂಪ್ಯೂಟಿಂಗ್ ಎಂಬ ಹೆಸರು ಇತ್ತೀಚೆಗೆ ಗಣಕ ಲೋಕದಲ್ಲೆಲ್ಲ ವ್ಯಾಪಕವಾಗಿ ಕೇಳ ಸಿಗುತ್ತಿದೆ. ಗಣಕ ಲೋಕದ ಭವಿಷ್ಯವೇ ಈ ಕ್ಲೌಡ್ ಕಂಪ್ಯೂಟಿಂಗ್‌ನಲ್ಲಿದೆ ಎನ್ನುವ ಧಾಟಿಯ ಮಾತುಗಳೂ ಬೇಕಾದಷ್ಟು ಕೇಳಿ ಬರುತ್ತಿವೆ.

ಇಲ್ಲಿ ಕ್ಲೌಡ್ ಎಂದರೆ ಮೋಡವಲ್ಲ. ಕ್ಲೌಡ್ ಕಂಪ್ಯೂಟಿಂಗ ಬಳಕೆದಾರರು ಮೋಡದ ಮೇಲೆ ಕುಳಿತಿರಬೇಕಾದ ಅಗತ್ಯವೂ ಇಲ್ಲ.

ಹಾಗಾದರೆ ಈ ಕ್ಲೌಡ್ ಕಂಪ್ಯೂಟಿಂಗ್ ಅಂದರೆ ಏನು?

ತಂತ್ರಾಂಶ,  ಶೇಖರಣಾ ಸಾಮರ್ಥ್ಯ,  ದುಬಾರಿ ಯಂತ್ರಾಂಶ – ಹೀಗೆ ಗಣಕದಲ್ಲಿ ನಿಮಗೆ ಅಗತ್ಯವಾದ ಯಾವುದೇ ಸೇವೆಯನ್ನು ಅಂತರಜಾಲದ ಮೂಲಕ ಒದಗಿಸುವ ಪರಿಕಲ್ಪನೆಯ ಹೆಸರೇ ಕ್ಲೌಡ್ ಕಂಪ್ಯೂಟಿಂಗ್.  ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ತನ್ನ ಅಗತ್ಯಗಳಿಗೆ ಬೇಕಾದ ಗಣಕ ವ್ಯವಸ್ಥೆಯನ್ನು ಸ್ವತಃ ಸ್ಥಾಪಿಸಿಕೊಂಡು ನಿರ್ವಹಿಸುವ ಬದಲು ಅದರ ಜವಾಬ್ದಾರಿಯನ್ನು ಬೇರೊಂದು ಸಂಸ್ಥೆಗೆ ವಹಿಸಿಕೊಟ್ಟು ಬಿಡುವುದು ಕ್ಲೌಡ್ ಕಂಪ್ಯೂಟಿಂಗ್‌ನ ಮೂಲಮಂತ್ರ.

ಇಪ್ಪತ್ತೈದು ಉದ್ಯೋಗಿಗಳಿರುವ ಸಣ್ಣ ಸಂಸ್ಥೆಯೊಂದರ ಉದಾಹರಣೆಯನ್ನೇ ತೆಗೆದುಕೊಳ್ಳಿ.  ಆ ಸಂಸ್ಥೆ ತನ್ನ ಎಲ್ಲ ನೌಕರರಿಗೆ ಇಮೇಲ್‌ ಸೌಲಭ್ಯ ಕೊಡಲು ತನ್ನದೇ ಆದ ಸರ್ವ ಸ್ಥಾಪಿಸಿಕೊಂಡು ಅದರ ನಿರ್ವಹಣೆಗೆ ಹೆಚ್ಚುವರಿ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಹೊರಟರೆ ದೊಡ್ಡ ಪ್ರಮಾಣದ ಖರ್ಚು ಬರುತ್ತದೆ.  ಅದರ ಬದಲು ಆ ಸಂಸ್ಥೆ ಗೂಗಲ್‌ನ ಎಂಟರ್‌ಪ್ರೈಸ್ ಇಮೇಲ್‌ ಸೌಲಭ್ಯವನ್ನು ಕೊಳ್ಳುತ್ತದೆ ಎಂದು ಕೊಳ್ಳೋಣ. ಸರ್ವರ ಬೇಡ,  ತಂತ್ರಾಂಶ ಬೇಡ,  ಹೆಚ್ಚುವರಿ ಸಿಬ್ಬಂದಿಯೂ ಬೇಡ; ಆ ಖರ್ಚಿನ ಸಣ್ಣದೊಂದು ಭಾಗದಲ್ಲಿ ಸಂಸ್ಥೆಯ ಎಲ್ಲ ನೌಕರರಿಗೂ ಇ ಮೇಲ್‌ ಸೌಲಭ್ಯ ದೊರಕಿಬಿಡುತ್ತದೆ.  ಜೊತೆಗೆ ನೌಕರರು ವಿಶ್ವದ ಯಾವುದೇ ಮೂಲೆಯಲ್ಲಿ – ಕಚೇರಿಯಲ್ಲಿ,  ಮನೆಯಲ್ಲಿ, ಪ್ರವಾಸದಲ್ಲಿ ಎಲ್ಲೇ ಇದ್ದರೂ ತಮ್ಮ ಸಹೋದ್ಯೋಗಿಗಳ ಜೊತೆ ಸಂಪರ್ಕದಲ್ಲಿರುವುದು ಸಾಧ್ಯವಾಗುತ್ತದೆ.

ಅದೆಲ್ಲ ಸರಿ, ಕ್ಲೌಡ್ ಕಂಪ್ಯೂಟಿಂಗ್ ಹೆಸರಿನಲ್ಲಿರುವ ಕ್ಲೌಡ್ ಎಲ್ಲಿಂದ ಬಂತು?

ಬಳಕೆದಾರರ ಗಣಕ ಅಥವಾ ಸಂಸ್ಥೆಯ ಹೊರಗೆ,  ಬೇರೊಬ್ಬರ ಸಂಪೂರ್ಣ ಉಸ್ತುವಾರಿಯಲ್ಲಿ ಕ್ಲೌಡ್ ಕಂಪ್ಯೂಟಿಂಗ್‌ ವ್ಯವಸ್ಥೆ ಕೆಲಸ ಮಾಡುತ್ತದೆ.  ಹೀಗಾಗಿ ಗಣಕ ವ್ಯವಸ್ಥೆಗಳನ್ನು ಚಿತ್ರದಲ್ಲಿ ಪ್ರತಿನಿಧಿಸುವಾಗ ಈ ಭಾಗವನ್ನು ಮೋಡದ ಆಕಾರದಲ್ಲಿ ತೋರಿಸುತ್ತಾರೆ; ಅದು ನಮ್ಮ ವ್ಯವಸ್ಥೆಯಿಂದ ಹೊರಗಿದೆ ಎಂದು ತೋರಿಸುವುದು ಅದರ ಉದ್ದೇಶ. ಈ ಮೋಡದ ಆಕಾರವೇ ‘ಕ್ಲೌಡ್’ ಎಂಬ ಹೆಸರಿನ ಮೂಲ.

ಹಾಗೆ ನೋಡಿದರೆ ಈ ಕ್ಲೌಡ್ ಕಂಪ್ಯೂಟಿಂಗ್ ಎನ್ನುವುದು ತೀರಾ ಹೊಸ ಪರಿಕಲ್ಪನೆಯೇನಲ್ಲ.  ನಮ್ಮ ನಿಮ್ಮಂತಹ ಸಾಮಾನ್ಯ ಬಳಕೆದಾರರು ಬ್ಲಾಗರ್,  ಫ್ಲಿಕರ್,  ಪಿಕಾಸಾ,  ಫೇಸ್‌ಬುಕ್ ಮುಂತಾದ ಒಂದಲ್ಲ ಒಂದುರೂಪದಲ್ಲಿ ಈಗಾಗಲೇ ಇದನ್ನು ಬಳಸುತ್ತಿದ್ದೇವೆ. ಗೂಗಲ್‌ನ ಡಾಕ್ ಸೇವೆಯಲ್ಲಿ ಪದಸಂಸ್ಕರಣೆ, ಲೆಕ್ಕಾಚಾರ,  ಪ್ರೆಸೆಂಟೇಷನ್ ತಯಾರಿ ಇತ್ಯಾದಿಗಳಿಗೆ ಬೇಕಾದ ಎಲ್ಲ ತಂತ್ರಾಂಶಗಳೂ ಕ್ಲೌಡ್ ಮೂಲಕ ಉಚಿತವಾಗಿಯೇ ಲಭ್ಯವಿವೆ.

ಇವುಗಳಲ್ಲಿ ನೀವು ಸೇರಿಸುವ ಯಾವ ಮಾಹಿತಿಯೂ ನಿಮ್ಮ ಗಣಕದಲ್ಲಿ ಶೇಖರವಾಗುವುದಿಲ್ಲ.  ಅಂತರ ಜಾಲದ ಯಾವುದೋ ಮೂಲೆಯಲ್ಲಿ ಶೇಖರವಾಗಿರುವ ಈ ಮಾಹಿತಿಯನ್ನು ನೀವು ಅಂತರಜಾಲ ಸಂಪರ್ಕದಲ್ಲಿರುವ ಯಾವ ಗಣಕದಿಂದ ಬೇಕಿದ್ದರೂ ಪಡೆದುಕೊಳ್ಳಬಹುದು.  ಹೀಗಿರುವಾಗ ನಿಮ್ಮ ಗಣಕಕ್ಕೆ ವೈರಸ್ ಬಂದಾಗ,  ಅಥವಾ ಯಾವುದಾದರೂ ಯಂತ್ರಾಂಶ ಕೈಕೊಟ್ಟಾಗ ತಲೆಕೆಡಿಸಿಕೊಳ್ಳುವ ಅಗತ್ಯವೇ ಇಲ್ಲ!

ಸಂಸ್ಥೆಗಳೂ ಅಷ್ಟೆ – ಇಮೇಲ್ ವ್ಯವಸ್ಥೆಯಿಂದ ಪ್ರಾರಂಭಿಸಿ ದತ್ತ ಸಂಚಯಗಳು,  ಇಆರ್‌ಪಿ,  ಗ್ರಾಹಕ ಸೇವೆಗಳ ನಿರ್ವಹಣೆ ಇತ್ಯಾದಿಗಳವರೆಗೆ ಅನೇಕ ಬಗೆಯ ಸೇವೆಗಳು ಕ್ಲೌಡ್ ಕಂಪ್ಯೂಟಿಂಗ್ ಮೂಲಕ ದೊರಕುತ್ತಿವೆ.  ಮೈಕ್ರೋಸಾಫ್ಟ್ ಆಫೀಸ್ ಸಂಗ್ರಹದ ಹೆಸರಾಂತ ತಂತ್ರಾಂಶಗಳೂ ಕ್ಲೌಡ್ ಮೂಲಕ ಲಭ್ಯವಾಗಿವೆ.

ಅವೆಲ್ಲವೂ ಅಂತರಜಾಲದ ಮೂಲಕವೇ ಲಭ್ಯವಾಗುತ್ತಿರುವುದರಿಂದ ಬಳಕೆದಾರರು ಗಣಕೀಕರಣಕ್ಕೆ ಮಾಡಬೇಕಾದ ವೆಚ್ಚದಲ್ಲಿ ಗಮನಾರ್ಹ ಉಳಿತಾಯ ಸಾಧ್ಯವಾಗುತ್ತಿದೆ.  ಬೇಕಾದ ತಂತ್ರಾಂಶದ ಹೊಚ್ಚ ಹೊಸ ಆವೃತ್ತಿಯಾವಾಗಲೂ ಲಭ್ಯವಾಗುವುದರಿಂದ ತಂತ್ರಾಂಶಗಳನ್ನು ಅನುಸ್ಥಾಪಿಸಿಕೊಳ್ಳುವ ಹಾಗೂ ಪದೇಪದೇ ಅಪ್‌ಗ್ರೇಡ್ ಮಾಡಿಕೊಳ್ಳುವ ತಲೆನೋವೂ ಇರುವುದಿಲ್ಲ.

ಸಾಂಸ್ಥಿಕ ಬಳಕೆದಾರರಿಗೆ ಕ್ಲೌಡ್ ಕಂಪ್ಯೂಟಿಂಗ್ ಸೇವೆ ಒದಗಿಸುವ ಸಂಸ್ಥೆಗಳಿಗೆ ಅನೇಕ ಗ್ರಾಹಕರಿರುತ್ತಾರೆ.  ಹೀಗಾಗಿ ಅವರಲ್ಲಿ ಒಂದೆರಡು ಸರ್ವರ್‌ಗಳಲ್ಲ,  ಅನೇಕ ಸರ್ವರ್‌ಗಳ ಭಂಡಾರವೇ (ಸರ್ವರ್ಫಾರ್ಮ್) ಇರುತ್ತದೆ.  ಇದರಿಂದ ಒಬ್ಬೊಬ್ಬರಿಗೂ ಬೇರೆ ಬೇರೆಯಾಗಿ ಯಂತ್ರಾಂಶಗಳನ್ನು ಕೊಳ್ಳುವ,  ಸ್ಥಾಪಿಸುವ ಅಥವಾ ನಿರ್ವಹಿಸುವ ಅಗತ್ಯ ಇರುವುದಿಲ್ಲ; ಇದರ ಪರಿಣಾಮ ಬಳಕೆದಾರರಿಗೆ ಕಡಿಮೆ ವೆಚ್ಚದಲ್ಲಿ ಬೇಕಾದ ಸೇವೆಗಳೆಲ್ಲ ದೊರಕಿ ಬಿಡುತ್ತವೆ.  ಯಂತ್ರಾಂಶ ನಿರ್ವಹಣೆ, ಆಗಿಂದಾಗ್ಗೆ ಅದರಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವುದು,  ಇದಕ್ಕೆಲ್ಲ ಬೇಕಾದ ನೌಕರರ ಸಂಬಳ…  ಈ ರೀತಿಯ ಯಾವ ತಲೆನೋವೂ ಇಲ್ಲ; ಬಿಲ್ ಬಂದಾಗ ದುಡ್ಡು ಕೊಟ್ಟರೆ ಮುಗಿಯಿತು-ನೀರಿನದೋ ಕರೆಂಟಿನದೋ ಕೇಬಲ್‌ದೋ ಬಿಲ್ ಕಟ್ಟಿದಹಾಗೆ! ಹೀಗಾಗಿಯೇ ಕ್ಲೌಡ್ ಕಂಪ್ಯೂಟಿಂಗ್ ಅನ್ನು ಐಟಿ-ಆಸ್-ಎ-ಸರ್ವಿಸ್ ಎಂದೂ ಕರೆಯುತ್ತಾರೆ.

ಈ ವ್ಯವಸ್ಥೆಯಲ್ಲಿ ಬಳಕೆದಾರರ ಮಾಹಿತಿಯೆಲ್ಲ ಬೇರೊಬ್ಬರ ಗಣಕದಲ್ಲಿ ಶೇಖರವಾಗುವುದರಿಂದ ಕ್ಲೌಡ್ ಕಂಪ್ಯೂಟಿಂಗ್ ಸುರಕ್ಷಿತವೇ? ಎಂಬ ಪ್ರಶ್ನೆ ಈಗಾಗಲೇ ಕೇಳಿ ಬಂದಿದೆ.  ಆದರೆ ನಾವು ಅತ್ಯುನ್ನತ ಮಟ್ಟದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತೇವೆ; ಅಷ್ಟೆಲ್ಲ ಹೆಚ್ಚಿನ ಸುರಕ್ಷತೆ ಸಣ್ಣಪುಟ್ಟ ಸಂಸ್ಥೆಗಳ ಗಣಕ ವ್ಯವಸ್ಥೆಯಲ್ಲಿ ಖಂಡಿತಾ ಇರುವುದಿಲ್ಲ ಎಂದು ಕ್ಲೌಡ್ ಕಂಪ್ಯೂಟಿಂಗ್ ಸೇವೆ ಒದಗಿಸುತ್ತಿರುವ ಸಂಸ್ಥೆಗಳು ವಾದಿಸಿವೆ.

ಕ್ಲೌಡ್ ಕಂಪ್ಯೂಟಿಂಗ್‌ನಲ್ಲಿ ವಿವಿಧ ತಂತ್ರಾಂಶಗಳು ಹಾಗೂ ಸಂಬಂಧಿತ ಸೇವೆಗಳು ವಿಶ್ವವ್ಯಾಪಿ ಜಾಲದ ಮೂಲಕವೇ ಲಭ್ಯವಾಗುವುದರಿಂದ ಅವೆಲ್ಲವನ್ನೂ ಬ್ರೌಸರ್ ಮೂಲಕವೇ ಪಡೆದುಕೊಳ್ಳಬೇಕಾಗುತ್ತದೆ.  ನೂರೆಂಟು ಕೆಲಸಕ್ಕೆ ನೂರೆಂಟು ತಂತ್ರಾಂಶ ಅನುಸ್ಥಾಪಿಸಿಕೊಳ್ಳುವ ಕಾಲ ಹೋಗಿ ಸಕಲ ಕೆಲಸಕ್ಕೂ ಬ್ರೌಸರ್ ತಂತ್ರಾಂಶದ ಮೊರೆ ಹೋಗುವ ಕಾಲ ಈಗಾಗಲೇ ಬಂದು ಬಿಟ್ಟಿದೆ.

ಗೂಗಲ್‌ನ ಕ್ರೋಮ್ ಓಎಸ್,  ಮೊತ್ತ ಮೊದಲ ಕ್ಲೌಡ್ ಆಧರಿತ ಕಾರ್ಯಾಚರಣ ವ್ಯವಸ್ಥೆ.   ಈ ಕಾರ್ಯಾಚರಣ ವ್ಯವಸ್ಥೆಯಲ್ಲಿ ನಿಮಗೆ ಕಾಣುವುದು ಬ್ರೌಸರ್ ತಂತ್ರಾಂಶ ಮಾತ್ರ.  ಗಣಕದಲ್ಲಿ ನಾವು ಬಳಸುವ ತಂತ್ರಾಂಶಗಳು ಹಾಗೂ ಅವನ್ನು ಬಳಸಿ ತಯಾರಿಸುವ ಮಾಹಿತಿ ಎರಡನ್ನೂ ವಿಶ್ವವ್ಯಾಪಿ ಜಾಲದ ಮೂಲಕ ದೊರಕಿಸಿ ಜಾಲದಲ್ಲಿಯೇ ಶೇಖರಿಸಿಡುವ ಮಹತ್ವಾಕಾಂಕ್ಷೆ ಈ ಕಾರ್ಯಾಚರಣ ವ್ಯವಸ್ಥೆಯದ್ದು.

ಅರ್ಜಿ ಟೈಪಿಸಬೇಕಾಗಿರಲಿ,  ಲೆಕ್ಕಾಚಾರ ಹಾಕುವ ಅಗತ್ಯವಿರಲಿ – ಯಾವುದೇ ಪ್ರತ್ಯೇಕ ತಂತ್ರಾಂಶವನ್ನು ಅನುಸ್ಥಾಪಿಸಿಕೊಳ್ಳುವ ಅಗತ್ಯವಿಲ್ಲ; ಇಲ್ಲಿ ಎಲ್ಲವೂ ವಿಶ್ವವ್ಯಾಪಿ ಜಾಲದ ಮೂಲಕವೇ ಲಭ್ಯ.  ಈ ಕಾರ್ಯಾಚರಣ ವ್ಯವಸ್ಥೆಯಲ್ಲಿ ಸಕಲ ಕೆಲಸಗಳಿಗೂ ಬ್ರೌಸರ್ ಬೇಕೇಬೇಕು!

ಕ್ರೋಮ್ ಓಎಸ್ ಬಳಸುವ ‘ಕ್ರೋಮ್‌ಬುಕ್’ ಗಣಕಗಳು ೨೦೧೧ರ ಮಧ್ಯ ಭಾಗದಿಂದಲೇ ಮಾರುಕಟ್ಟೆಯಲ್ಲಿ ಲಭ್ಯವಿವೆ.

(ನವೆಂಬರ್೯,  ೨೦೧೦ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನದ ವಿಸ್ತೃತರೂಪ)