ಪ್ರಪಂಚದ ಎಲ್ಲ ಖಗೋಳ ವಿಜ್ಞಾನಿಗಳೂ ಒಗ್ಗೂಡಿ 2009ನೇ ಇಸವಿಯನ್ನು ಖಗೋಳವಿಜ್ಞಾನದ ವರ್ಷ ಎಂದು ಆಚರಿಸುತ್ತಿದ್ದಾರೆ.  ಈಗಾಗಲೇ ಈ ಬಗ್ಗೆ ಹಲವು ಪತ್ರಿಕೆಗಳಲ್ಲಿಯೂ ಸುದ್ದಿ ಬಂದಾಗಿದೆ. ಹಾಗಿದ್ದೂ ಹೇಳುವುದೇನಿದೆ ಎನ್ನುವ ಕುತೂಹಲ ನಿಮಗಿದ್ದರೆ ಅಚ್ಚರಿಯೇನಿಲ್ಲ.

ಕಸೂರ್ಯಂಗೂ, ಚಂದ್ರಂಗೂ ಬಂದಾಗ ಮುನಿಸು ನಗುತಾವ ಭೂತಾಯಿ ಮನಸುಕಿ ಎನ್ನುವ ಹಾಡನ್ನು ನೀವು ಕೇಳಿರಬೇಕು. ಚಂದ್ರ, ಸೂರ್ಯರ ಜೊತೆಗೆ ಭೂಮಿಯ ಸಂಬಂಧವನ್ನು ಕಾವ್ಯಮಯವಾಗಿ ವಿವರಿಸುವ ಇಂತಹ ಹಲವು ಹಾಡುಗಳಿವೆ. ತಾರೆಗಳ ತೋಟದಲ್ಲಿ ಚಂದಿರ ಬಂದ ಅಂತಲೋ, ಚುಕ್ಕಿ ಚಂದ್ರನೇ ನಿನಗೊಂದು ಬೇಡಿಕೆ ಅಂತಲೋ ರಮ್ಯವಾಗಿ ಕವಿಗಳು ಹಾಡಿದ್ದಾರೆ. ಭೂಮಿ ಸೂರ್ಯನ ಸುತ್ತಲೂ ಸುತ್ತುತ್ತಿದೆ ಎಂದು ಶಾಲಾ ಪುಸ್ತಕಗಳಲ್ಲಿಯೇ ಓದಿಕೊಂಡಿದ್ದರೂ ನಮ್ಮ ಕವಿಮನಸ್ಸು ಅದನ್ನು ಒಪ್ಪಿಕೊಳ್ಳಲು ಹಿಂಜರಿಯುತ್ತದೆ. ಹೀಗಾಗಿ ಸೂರ್ಯನನ್ನು ಭೂಮಿ ಸುತ್ತುವ ಬಗ್ಗೆ ಎಲ್ಲಿಯೂ ಉಲ್ಲೇಖ ಅಪರೂಪ. ಇವುಗಳ ಮಧ್ಯೆ, ಕಇರುವ ಒಬ್ಬನೇ ಸೂರ್ಯ. ಅವನನ್ನು ಸುತ್ತುವ ಭೂಮಿ ನಾನುಕಿ ಎಂದು ಹಾಡಿದ ಹಾಡು ಕೇಳಿಸಿದಾಗ ಏನನ್ನಿಸೀತು ಹೇಳಿ! (ಹೀಗೊಂದು ಹಾಡಿದೆ!) ಜನಮನದಲ್ಲಿ ಇಂತಹ ಪರಿವರ್ತನೆ ಉಂಟು ಮಾಡಿದ ಶೋಧಕ್ಕೆ ಇಂದು ನಾಲ್ಕು ನೂರು ವರ್ಷಗಳಾಗಲಿದೆ. ಅದರ ಸಂಭ್ರಮದಲ್ಲಿಯೇ ಈ ವರ್ಷಾಚರಣೆ.

ನಾಲ್ಕು ನೂರು ವರ್ಷಗಳ ಹಿಂದೆ 1609ರ ಡಿಸೆಂಬರ್ನಲ್ಲಿ ಇಟಲಿಯ ಗೆಲಿಲಿಯೋ ಗೆಲಿಲಿ ಎನ್ನುವ ಖಗೋಳಾಸಕ್ತ ಮೊತ್ತ ಮೊದಲ ಬಾರಿಗೆ ಚಂದ್ರನನ್ನು ದೂರದರ್ಶಕದಲ್ಲಿ ಕಂಡ. ಚಂದ್ರನ ಮೇಲೂ ಬೆಟ್ಟ ಗುಡ್ಡಗಳಿವೆ, ಕಣಿವೆಗಳಿವೆ, ಹಳ್ಳಗಳಿವೆ ಎಂದು ತಿಳಿಸಿದ. ಇದು ಅಂದಿಗೆ ಬಹಳ ಕ್ರಾಂತಿಕಾರಕವಾದ ಶೋಧವಾಗಿತ್ತು. ಇಂದಿಗೂ ದೂರದರ್ಶಕವನ್ನು ಮೊತ್ತಮೊದಲಿಗೆ ತಯಾರಿಸಿದವ ಗೆಲಿಲಿಯೋ ಎನ್ನುವ ಕಲ್ಪನೆ ಎಲ್ಲರಲ್ಲಿದೆ. ಇತ್ತೀಚೆಗೆ ನೇಚರ್ನಲ್ಲಿ ಪ್ರಕಟವಾದ ಚಾರಿತ್ರಿಕ ಲೇಖನವೊಂದರ ಪ್ರಕಾರ ಅದು ತಪ್ಪು. 1608ರಲ್ಲಿಯೇ  ನೆದರ್ಲ್ಯಾಂಡ್ನ ಹ್ಯಾನ್ಸ್ ಲಿಪ್ಪರ್ಹೈ ಎನ್ನುವವ ದೂರದರ್ಶಕದಂತಹ ಸಾಧನವೊಂದನ್ನು ನಿರ್ಮಿಸಿದ್ದಕ್ಕಾಗಿ ಪೇಟೆಂಟು ಪಡೆಯಬೇಕೆಂದಿದ್ದ. ಆದರೆ ಅಂತಹ ಸಾಧನ ಅಷ್ಟರಲ್ಲಾಗಲೇ ಕಸ್ಪೈಗ್ಲಾಸ್ಕಿ ಎನ್ನುವ ಆಟಿಕೆಯಾಗಿ ಬಳಕೆಯಲ್ಲಿ ಇದ್ದುದರಿಂದ ಅವನ ಪೇಟೆಂಟು ಅರ್ಜಿಯನ್ನು ತಿರಸ್ಕರಿಸಲಾಯಿತಂತೆ. ದೂರದರ್ಶಕವನ್ನು ಕಂಡು ಹಿಡಿಯದಿದ್ದರೂ ಗೆಲಿಲಿಯೋಗೇಕೆ ಇಷ್ಟೊಂದು ಪ್ರಾಮುಖ್ಯತೆ?  ಜಾತ್ರೆ-ಸಂತೆಗಳಲ್ಲಿ ಮೋಜಿನ ವಸ್ತುವಾಗಿ ಬಳಕೆಯಾಗುತ್ತಿದ್ದ ದೂರದರ್ಶಕವನ್ನು ಇನ್ನಷ್ಟು ಸುಧಾರಿಸಿ ಆಕಾಶ ನೋಡಲು ಬಳಸಿದ್ದೇ ಗೆಲಿಲಿಯೋನ ಹೆಗ್ಗಳಿಕೆ.

ಅಷ್ಟೇ ಆಗಿದ್ದರೆ  ನಾವು ಬಹುಶಃ ಈ ವರ್ಷಾಚರಣೆಯನ್ನು ಕೊಂಡಾಡುತ್ತಿರಲಿಲ್ಲ. ಗೆಲಿಲಿಯೋ ದೂರದರ್ಶಕದ ಮೂಲಕ ಚಂದ್ರನನ್ನು ನೋಡುವ ಸಂದರ್ಭದಲ್ಲಿ ಭೂಮಿಯೇ ಇಡೀ ವಿಶ್ವದ ಕೇಂದ್ರಬಿಂದು ಎಂದು ಪರಿಗಣಿಸಲಾಗಿತ್ತು. ಬರಿಗಣ್ಣಿಗೆ ಆಕಾಶವನ್ನು ನೋಡಿದಾಗ ಹಾಗನ್ನಿಸುವುದು ಸಹಜವೇ. ಇಡೀ ಆಕಾಶವೇ ಒಂದು ಗೋಲವಾಗಿ ಭೂಮಿಯ ಸುತ್ತ ಸುತ್ತುವಂತೆ ತೋರುತ್ತದೆ. ಗೆಲಿಲಿಯೋಗಿಂತಲೂ ಮುನ್ನ 1543ರಲ್ಲಿಯೇ ನಿಕೊಲಾಸ್ ಕೋಪರ್ನಿಕಸ್ ಸೂರ್ಯನ ಸುತ್ತಲೂ ಭೂಮಿ ತಿರುಗುತ್ತಿದೆ ಎಂದು ವಾದಿಸಿದ್ದ. ಆದರೆ ಅದನ್ನು ಎಲ್ಲರೂ ನಂಬಿರಲಿಲ್ಲ. ಅವನ ಲೆಕ್ಕಾಚಾರಗಳನ್ನೆಲ್ಲ ಗ್ರಹಗಳ ಸ್ಥಾನವನ್ನು ಗಣಿಸಲು ಬಳಸುತ್ತಿದ್ದರಷ್ಟೆ. ಗೆಲಿಲಿಯೋನ ಶೋಧ ಈ ಹಿನ್ನೆಲೆಯಲ್ಲಿ ಪ್ರಾಮುಖ್ಯತೆ ಪಡೆಯುತ್ತದೆ. ಗೆಲಿಲಿಯೋ ಚಂದ್ರನನ್ನು ನೋಡಿ ಅದರ ಮೇಲಿನ ಅಂಕು-ಡೊಂಕುಗಳನ್ನು ಎತ್ತಿ ತೋರಿಸುವವರೆಗೂ ಚಂದ್ರನನ್ನು ಅಕಳಂಕ ವಸ್ತುವೆಂದು ಹೇಳುತ್ತಿದ್ದರು.  ಚಂದ್ರ ಪರಿಶುದ್ಧತೆಯ ದ್ಯೋತಕವೆಂದೂ, ಶಾಂತಿಯ ಸ್ವರೂಪವೆಂದೂ ಹೇಳುತ್ತಿದ್ದರು. ಚಂದ್ರ ಪರಿಶುದ್ಧವಾದ ಒಂದು ಸ್ಫಟಿಕ ಎಂದು ಭಾವಿಸಲಾಗಿತ್ತು. ಅದನ್ನು ತಪ್ಪೆಂದು ನಿರೂಪಿಸಿದವ ಗೆಲಿಲಿಯೋ. ಚಂದ್ರನೂ ಭೂಮಿಯಂತೆಯೇ ಒಂದು ಕಾಯ ಎಂದು ಅವನ ದೂರದರ್ಶಕ ಸುಸ್ಪಷ್ಟವಾಗಿ ತೋರಿಸಿತ್ತು.  ಎರಡು ಸಾವಿರ ವರ್ಷಗಳ ಹಿಂದೆ ಗ್ರೀಕ್ ತತ್ವಶಾಸ್ತ್ರಜ್ಞ ಅರಿಸ್ಟಾಟಲ್ ಹೇಳಿದ್ದನ್ನೇ ಪ್ರಪಂಚ ಸತ್ಯವೆಂದು ನಂಬಿತ್ತು. ಬೆಂಕಿ, ನೀರು, ವಾಯು ಮತ್ತು ಆಕಾಶವೆಂಬ ನಾಲ್ಕು ತತ್ವಗಳಿಂದ ಈ ಭೂಮಿಯ ರಚನೆಯಾಗಿದೆಯೆಂದೂ, ಭೂಮಿಯ ಆಚೆಗಿನ ಆಕಾಶದಲ್ಲಿನ ಎಲ್ಲ ವಸ್ತುಗಳೂ ಶಾಶ್ವತ, ಪರಿಶುದ್ಧ ಈಥರ್ನಿಂದಾಗಿದೆಯೆಂದೂ ಅರಿಸ್ಟಾಟಲ್ ಹೇಳಿದ್ದ. ಗೆಲಿಲಿಯೋನ ದೂರದರ್ಶಕದಲ್ಲಿ ಕಂಡ ಚಂದ್ರ ಇಂತಹ ಪರಿಶುದ್ಧ ಕಾಯವಾಗಿರಲಿಲ್ಲ! ಜನಮನದ ನಂಬಿಕೆಗೆ ಬಿದ್ದ ಮೊದಲ ಕೊಡಲಿಯೇಟು ಇದು.

ಆದರೂ ಚಂದ್ರ, ಭೂಮಿಯ ನಡುವಣ ಸಂಬಂಧದ ಬಗ್ಗೆ ಅನುಮಾನಗಳಿದ್ದುವು. ಗೆಲಿಲಿಯೋನ ಆಕಾಶ ವೀಕ್ಷಣೆಯೇ ಇವನ್ನೂ ಬಗೆಹರಿಸಿದುವು. ಗೆಲಿಲಿಯೋ ತನ್ನ ದೂರದರ್ಶಕದಲ್ಲಿ ಗುರುಗ್ರಹವನ್ನು ಗಮನಿಸಿದಾಗ, ಆ ಗ್ರಹದ ಸುತ್ತಲೂ ಇನ್ನೂ ಆರು ಕಾಯಗಳು ಸುತ್ತುತ್ತಿದ್ದುದನ್ನು ಕಂಡ. ಅರ್ಥಾತ್, ಗುರುಗ್ರಹದ ಜೊತೆಗೆ ಅದು ಹೇಗೋ ಈ ಉಪಗ್ರಹಗಳು ತಳುಕಿಕೊಂಡಿದ್ದುವು. ಅವನ್ನು ಹಿಡಿದಿಟ್ಟ ಸೆಳೆತದ ಸ್ವರೂಪವೇನೆಂದು ತಿಳಿಯದಿದ್ದರೂ, ಈ ನೋಟ ಚಂದ್ರನೂ ಭೂಮಿಯೊಟ್ಟಿಗೆ ಇದೇ ಬಗೆಯಲ್ಲಿ ಸುತ್ತುತ್ತಿರಬೇಕೆನ್ನುವುದನ್ನು ನಿಚ್ಚಳಗೊಳಿಸಿತ್ತು.  ಅಂದಿನ ಜನಮನದ ಸ್ವರ್ಗದಲ್ಲಿದ್ದ ಚಂದ್ರ ಧರೆಗಿಳಿಯಬೇಕಾಯ್ತು.

ಇವೆಲ್ಲವೂ 1609-1610ರ ಅವಧಿಯಲ್ಲಿ ಜರುಗಿದ ಸಂಗತಿ. ಇದೇ ಸಮಯದಲ್ಲಿಯೇ ಮತ್ತೊಬ್ಬ ಖ್ಯಾತ ಖಗೋಳಜ್ಞ, ಯೋಹಾನ್ ಕೆಪ್ಲರ್ ಕನವ ಖಗೋಳ ವಿಜ್ಞಾನಕಿ (ಆಸ್ಟ್ರಾನಾಮಿಕಾ ನೋವಾ) ಎನ್ನುವ ಪುಸ್ತಕ ಪ್ರಕಟಿಸಿದ. ಸೂರ್ಯನೇ ವಿಶ್ವದ ಕೇಂದ್ರ ಎಂದು ಆತ ಅದರಲ್ಲಿ ಪ್ರತಿಪಾದಿಸಿದ. ಕೋಪರ್ನಿಕಸ್ನ ವಾದಗಳಲ್ಲಿ ಇದ್ದ ದೋಷಗಳನ್ನು ಇವನ ವಾದ ಮುಚ್ಚಿತು. ಖಗೋಳ ವಿಜ್ಞಾನದಲ್ಲಿ ಹೊಸ ಕ್ರಾಂತಿಯಾಯಿತು. ಇವೆರಡೂ ಸಂಗತಿಗಳೂ ಒಂದು ವರ್ಷದ ಅವಧಿಯೊಳಗೇ ಜರುಗಿದ್ದು ಕಾಕತಾಳೀಯ. ಆದರೆ ಇವೆರಡೂ ಶೋಧಗಳೂ ಮಾನವನ ಚಿಂತನೆಯಲ್ಲಿ ತಂದ ಮಾರ್ಪಾಟುಗಳು ವಿಶ್ವದಷ್ಟೇ ಅಗಾಧ!  ಭೂಮಿಯ ಆಚೆಗೂ ಒಂದು ಜಗತ್ತಿದೆ. ಅದು ಮಾನವನ ಅನುಭವಕ್ಕೂ ನಿಲುಕದಷ್ಟು ವಿಸ್ತಾರವಾದುದು ಎನ್ನುವ ಕಲ್ಪನೆಯನ್ನು ಇವರ ಚಿಂತನೆಗಳು ಮೊತ್ತ ಮೊದಲ ಬಾರಿಗೆ ಉಂಟು ಮಾಡಿದುವು.  ಈ ವಿಶ್ವದ ಪರಿಸರದಲ್ಲಿ ಮಾನವನೆಷ್ಟು ಕ್ಷುದ್ರ ಎನ್ನುವುದನ್ನು ತೋರಿಸಿಕೊಟ್ಟುವು. ಒಂದು ರೀತಿಯಲ್ಲಿ ಅಹಂಕಾರದಿಂದ ಮೆರೆಯುತ್ತಿದ್ದ ಬಲಿಯ ತಲೆಯನ್ನು ತುಳಿದ ತ್ರಿವಿಕ್ರಮ ಶೋಧಗಳು ಇವು ಎನ್ನಬಹುದು.

ಗೆಲಿಲಿಯೋನ ಶೋಧದ ಅನಂತರ ನಾಲ್ಕು ದಶಕಗಳಾಗಿವೆ. ಆದರೆ ಈ ಹಿಂದಿನ ಮೂರು ಶತಮಾನಗಳಲ್ಲಿ ಎಂದೂ ಹೀಗೆ ವರ್ಷಾಚರಣೆ ಇರಲಿಲ್ಲ. ಇಂದೇಕೆ?  ಏಕೆಂದರೆ, ಕಳೆದ ಒಂದು ಶತಮಾನದಲ್ಲಿ ಖಗೋಳವಿಜ್ಞಾನದಲ್ಲಿ ಬೃಹತ್ ಬದಲಾವಣೆಗಳು ಆಗಿವೆ. ತಾನು ಕಂಡ ಲೋಕಕ್ಕೆ ಮಾನವ ಕಾಲಿಡುತ್ತಾನೆಂಬ ಕನಸು ಬಹುಶಃ ಗೆಲಿಲಿಯೋ ಕಂಡಿರಲಿಕ್ಕಿಲ್ಲ. ಇಂದು ಮಾನವ ಚಂದ್ರನ ಮೇಲೆ ಕಾಲೂರಿದ್ದೇ ಅಲ್ಲದೆ ಸೂರ್ಯನ ಜೊತೆಗೆ ಇರುವ ಎಲ್ಲ ಗ್ರಹಗಳನ್ನೂ ಜಾಲಾಡಿ ಬಿಟ್ಟಿದ್ದಾನೆ. ದೂರದ ನಕ್ಷತ್ರಲೋಕದ ಅಗಾಧತೆಯನ್ನೂ ಅರಿತಿದ್ದಾನೆ. ವಿಶ್ವದ ಹುಟ್ಟು, ಸಾವುಗಳ ಬಗ್ಗೆ ತರ್ಕಿಸಿ, ಪ್ರಯೋಗಗಳನ್ನೂ ನಡೆಸುತ್ತಿದ್ದಾನೆ. ನಾಳೆ ಎಂದಾದರೊಮ್ಮೆ ಗೆಲಿಲಿಯೋ ಮೊತ್ತ ಮೊದಲು ಕಂಡು ಬೆರಗಾಗಿದ್ದ ಮಂಗಳನ ಮೇಲೆ ವಸಾಹತು ನಿರ್ಮಿಸಿದರೂ ನಿರ್ಮಿಸಿದನೇ! ಖಗೋಳ ವಿಜ್ಞಾನ ಅಷ್ಟು ಮುನ್ನಡೆದಿದೆ. ಬಹುಶಃ ಗೆಲಿಲಿಯೋನ ದೂರದರ್ಶಕ ಚಂದ್ರನ ವಾಸ್ತವತೆಯನ್ನು ಎತ್ತಿತೋರಿಸದಿದ್ದರೆ ನಾವು ಇನ್ನಷ್ಟು ಶತಕಗಳು ಹಿಂದುಳಿಯುತ್ತಿದ್ದೆವೋ ಏನೋ? ಅದಕ್ಕೇ ಈ ಸಂಭ್ರಮ.

Owen Gingerich; Mankindಕಿs Place in the Universe Nature Vol. 457, No. 1, Pp 28-29, 2009 (1 January 2009)