೧೧. ಹಸೇನ ಹುಸೇನರನ್ನು ದಾನ ಮಾಡಿದ ಮೌಲಾನ ಪದಾ

ದೈವಾ ಸಂತ ಶಾಂತ ಕುಂತ ಕೇಳರಿ ಭಕ್ತಿಗೆ ಅನುಕೂಲ ಶರಣ ಮೌಲಾ
ಹಿಂಡ ವೈರಿ ಗಂಡ ನಾನು ಜಿಗದ್ಯಾಡ ಬ್ಯಾಡ ನೀನು
ನಿನ್ನ ಆಟ ನೋಡೂನು ಚಂದದಿಂದ ಹಾಡೂನು
ಇದರಾಗ ಅಹಾ ಇದರಾಗ | ತಿಳುತೈತಿ ಅಕಲಾ | ಭಕ್ತಿಗೆ ಅನುಕೂಲ ಶರಣ ಮೌಲಾ || ೧ ||

ನಮ್ಮ ಜೋಡಿ ಹೇಡಿ ಹಾಡಿಯೇನು ಖೋಡಿ ಹಾಡಪಾಡ ನೀನು ಆಗಾಕಿಲ್ಲ |
ಶರಣ ಮೌಲಾನ ಮುಂದ ಒಬ್ಬ ಯಹೂದಿ ಬಂದಾ | ನಿಂತಾನ ಕೈಯ ಮುಗದಾ
ದಾನಾ ಕೊಡರಿ ಇಂವಾ | ಅಂತಾನ್ಹಿಂಗ | ಅಂವಾ ಅಂತಾನ್ಹಿಂಗ
ನಮ್ಮ ಕಮಲಾ | ಭಕ್ತಿಗೆ ಅನುಕೂಲ ಶರಣ ಮೌಲಾ || ೨ ||

ಮೌಲಾ ಶರಣ ಕರುಣ ವರನುಳ್ಳ ತಾ ಎದ್ದ ಖುದ್ದ ಕೊಟ್ರೊ ಹಸನೈನ ಬಾಲಾ
ತಗೊಂಡ ನಡದಾನ ದಾನಾ | ಹಸನೈನಗ ಕೇಳ್ಯಾನ ತಾನಾ
ನಿಮ್ಮ ತಮ್ಮ ಹುಸನೈನಾ | ಎಲ್ಲಿರತಾರ ಹೇಳ ಖೂನಾ
ಹೇಳ್ಯಾರ‍್ಹಿಂಗ ಅವರು ಹೇಳ್ಯಾರ‍್ಹಿಂಗ | ಮಾಡಿ ಖುಲ್ಲಾ | ಭಕ್ತಿಗೆ ಅನುಕೂಲಾಶರಣಮೌಲಾ || ೩ ||

ಅಂವಾಕೆಟ್ಟದ್ರುಷ್ಟ ಭೃಷ್ಟ ಯಹೂದಿ ಸ್ಥಾನಾ ಮಾನಾ ಕರುಣಾ ಅಂವಗ ಇದ್ದಿದ್ದಿಲ್ಲಾ ||
ಖಾತೂನನ ಮನಿಮುಂದಾ | ನಿಂತಾನ ಅಂವಾ ಬಂದಾ | ಹೇಳತಾನ ಬಾಯಿಲಿಂದಾ
ದಾನಾ ಕೊಡ್ರಿ ನಿಮ್ಮಕಂದಾ | ಹೇಳ್ಯಾನ್ಹಿಂಗ | ದೈವಾ ಹೇಳ್ಯಾನ್ಹಿಂಗ | ನಿರವಾಯಿಲ್ಲಾ
ಭಕ್ತಿಗೆ ಅನುಕೂಲ ಶರಣ ಮೌಲಾ || ೪ ||

ಆಗವನ ಸೊಲ್ಲ ಗುಲ್ಲ ಎಲ್ಲ ಕೇಳಿ ಅಂದ್ರೊ, ನಿಂದ್ರೊ ಬಂದ್ರೊ ಕೊಡತಾರ ಮೌಲಾ
ಕೊಟ್ಟಾರ ಮೌಲಾ ದಾನಾ | ಹಿರೇಮಗಾ ಹಸನೈನಗ | ಕೊಡ್ರಿ ನಿಮ್ಮ ಹುಸನೈನಾ
ತಗೊಂಡು ಹೋಗುವೆ ನಾನಾ | ಕೊಟ್ಟರಾಗ ಖಾತೂನ | ಕೊಟ್ಟರಾಗ ತನ್ನ ಬಾಲಾ
ಭಕ್ತಿಗೆ ಅನುಕೂಲ ಶರಣ ಮೌಲಾ || ೫ ||

ಅಂವಾ ತಡದ ನಡದ ಹಿಡದ ದಾರಿ | ಹೇಸಿ ಸೋಸಿ ಖುಸಿ ಮನದಾಗ ಆದಾನಲ್ಲಾ
ನಡದಾನ ಅವುಸರಲಿಂದಾ | ಬರಗಾಲ ಎರಡು ಕಂದಾ | ಅಳತಾರ ಸಾಂಬಗ ನೆನದಾ
ಏನಾತ ದೈವಾನಮದಾ | ಮಾಡೂನ್ಹಾಂಗ
ಶಿವನೆ ಮಾಡೂನ್ಹ್ಯಾಂಗ ಯಾರ‍್ಯಾರಿಲ್ಲಾ | ಭಕ್ತಿಗೆ ಅನುಕೂಲ ಶರಣ ಮೌಲಾ || ೬ ||

ಅವರ ದುಃಖದಾ ಶೋಕ ಹೇಳುದಕ ನಂದ ಇಂದ ಒಂದ ಬಾಯಿ ಸಾಲೂದಿಲ್ಲಾ ||
ಭೂಮಿಮ್ಯಾಲ ಅಳತಾರ ಹೊರಳಿ | ಕಾಲಸುಟ್ಟ ಬಂದಾವ ಗುರಳಿ
ಇಷ್ಟ ನಮ್ಮ ಅದೃಷ್ಟದಲ್ಲಿ |
ಬೇಡಿಬಂದೆ ಶಿವನಲ್ಲಿ | ನಾವು ಹೇಳೂನ್ಹ್ಯಾಂಗ | ಕೇಳುವವರಿಲ್ಲಾ
ಭಕ್ತಿಗೆ ಅನುಕೂಲಾ ಶರಣ ಮೌಲಾ || ೭ ||

ಕರುಣ ಆಗ ಶಿವಂಗ ಬಂದು ಕೊಟ್ಟ ದಿಟ್ಟ ಶ್ರೇಷ್ಟ ಹುಕುಮ ತಡಾಯಿಲ್ಲಾ
ಸಾಂಬನ ಹುಕುಮಲಿಂದಾ | ಶಿವದೂತ ಜಿಬರೀಲ ಬಂದಾ
ಜಗ್ಯಾರ ಭೂಮಿಗೆ ಹಿಡಿದಾ
ಆತ ಆನಂದ ಕೇಳವರಿಗೆ | ಆಹಾ ಕೇಳವರಿಗೆ ಮುಟ್ಯಾರಲ್ಲಾ
ಭಕ್ತಿಗೆ ಅನುಕೂಲಾ ಶರಣ ಮೌಲಾ || ೮ ||

ಎರಡು ಕಂದ ಚಂದ ತಂದ ಮೂರ್ಖಾ | ಶರಣ ಕಿರಣ ವರಣ ಕೂಸಿಂದು ಹೇಳಾಂಗಿಲ್ಲಾ
ಜಮಶ್ಯಾದ ಅರಸನ ಶಾರಾ | ಪಟ್ಟ ಪಗಡಿ ಬಾಜಾರಾ | ಕರುಣ ಇಲ್ಲದೆ ಚೂರಾ
ನಿಂದರಶ್ಯಾನ ಪಾಮರಾ | ಎರಡು ಮಕ್ಕಳಿಗೆ ಮಾರುದಕ ಮೊದಲಾ
ಭಕ್ತಿಗೆ ಅನುಕೂಲಾ ಶರಣ ಮೌಲಾ || ೯ ||

ಸುದ್ದಿಕೇಳಿ ವಾಳಿ ಗೂಳಿ ಅರಸಾ | ದಯಾ ಭಯಾ ಮಾಯಾ ಅಂವುಗ ಇದ್ದಿದ್ದಿಲ್ಲಾ
ರೂಪಾಯಿ ಅವರ ತೂಕಿಗೆ ತೂಕಾ | ಕೊಟ್ಟವೋದ ಬೆಳಕಾ | ತಿಳಿಯದೆ ಮೂರ್ಖಾ
ಮಕ್ಕಳಿಗೆ ಹಾಕಿ ಡಾಕಾ | ಕೇಳ್ಯಾನ್ಹಿಂಗ | ಅಂವ ಕೇಳ್ಯಾನ್ಹಿಂಗ ಮಾಡರಿ ಖುಲ್ಲಾ
ಭಕ್ತಿಗೆ ಅನುಕೂಲ ಶರಣ ಮೌಲಾ || ೧೦ ||

ಹೇಳ್ಯಾರ ವಾರ್ತಿ ಕೀರ್ತಿ ಸಾರತೈತಿ ಹೀಂಗ | ಪುಂಡ ಹಿಂಡ ವೈರಿಗೆ ಗಂಡ ತಂದಿ ಮೌಲಾ
ಕೇಳ್ರಿ ನಬಿಸಾಹೇಬ ಶರಣಾ | ಆಗಬೇಕ ಮುತ್ತ್ಯಾ ನಮ್ಮನ್ನಾ
ಜಮಶ್ಯಾದ ಕೇಳಿದ ಜಾಣಾ
ಹೊಡಿಬೇಕ ಅಂತಾನ ಪ್ರಾಣಾ | ವೈರಿ ನನಗ | ಆಹಾ ವೈರಿ ನನಗ ರಸೂಲಿಲ್ಲಾ
ಭಕ್ತಿಗೆ ಅನುಕೂಲ ಶರಣ ಮೌಲಾ || ೧೧ ||

ಅರಸ ಸಿಟ್ಟ ಇಟ್ಟ ಭೃಷ್ಟ ಮಕ್ಕಳಿಗೆ ಜಲ್ದ | ಮ್ಯಾಲ ಬಾಕಲ ತೆರೆದು ನುಗಶ್ಯಾನಲ್ಲಾ |
ಅರಸನ ಮಗಳೀನಾ | ಕೈಯ ಕಾಲ ಇದ್ದಿಲ್ಲಾ ಕಣ್ಣಾ | ದಿನ ಎರಡು ಮನುಷ್ಯರನಾ
ನುಂಗತಿದ್ಲೊ | ಹೊಡದ ಪ್ರಾಣಾ | ಕೇಳರೀಗ | ಆಹಾ ಕೇಳರೀಗ
ಹೀಂಗ ಆಕಿ ಡೌಲಾ ಭಕ್ತಿಗೆ ಅನುಕೂಲ ಶರಣ ಮೌಲಾ || ೧೨ ||

ಮಕ್ಕಳ ನೋಡಿ ಕೂಡಿ ಜೋಡೀಲೆ ಅಂದ್ರು | ಸಾಯಾ ಮಾಯಾ ದಯಾ
ನಮಗ ಮಾಡವರಿಲ್ಲಾ |
ಅಂತಾರ ಹಸನೈನಾ | ಕೇಳೊ ತಮ್ಮಾ ಹುಸನೈನಾ | ಇಕಿ ಕೈಯಾಗ ಏನಾ ಹೋಗುದಿಲ್ಲಾ
ನಮ್ಮ ಪ್ರಾಣಾ | ಹೇಳ್ಯಾರ‍್ಹಿಂಗ | ಆಹಾ ಹೇಳ್ಯಾರ‍್ಹಿಂಗ | ನಾವು ಸಾವೂದಿಲ್ಲಾ
ಭಕ್ತಿಗೆ ಅನುಕೂಲ ಶರಣ ಮೌಲಾ || ೧೩ ||

ಅಕ್ಷಾರ ಜೋಡ ತೋಡ ಮಾಡೊ ಹೀಂಗ | ವಿದ್ಯೆ ಬುದ್ಧಿ ನಿಮಗ ದೊರಿಯುದಿಲ್ಲಾ |
ಆರತಾಸ ರಾತರ‍್ಯಾಗ | ದೆವ್ವ ಬಂತ ಮಕ್ಕಳ ಮ್ಯಾಗ | ನೆನದಾರ ಸಾಂಬಗ
ದಯಾಮಾಡೋ ನೀನು ನಮಗ | ನುಂಗುವಾಗ | ಮಕ್ಕಳ ನುಂಗುವಾಗ
ರೂಪಾತ ಬದಲಾ | ಭಕ್ತಿಗೆ ಅನುಕೂಲ ಶರಣ ಮೌಲಾ || ೧೪ ||

ನಾಜೂಕ ಹೆಣ್ಣ ಸಣ್ಣ ಬಣ್ಣ ಗುಲಾಬಿ ಸಾಗಿ ಹೋಗಿ ಬಾಗಿ ಹಿಡದಾಳ ಅವರ ಕಾಲಾ
ಜಮಕಾದ ಬೆಳಗಾದಿಂದಾ | ನೋಡ್ಯಾನ ಬಾಕಲ ತೆರದಾ | ರೂಪಾಗಿ ಹೆಣ್ಣಿಂದಾ
ಹಿಡದ ನಿಂತಾಳ ಪಾದಾ | ಓದ್ಯಾನಾಗ ಕಲಮಾ | ಓದ್ಯಾನಾಗ ಬಿಟ್ಟ ಜಲ್ಲಾ
ಭಕ್ತಿಗೆ ಅನುಕೂಲ ಶರಣ ಮೌಲಾ || ೧೫ ||

ಸತ್ತೆ ನೋಡಿ ಕೂಡಿ ಮಾಡಿ ಶರಣಾ | ಬಿಟ್ಟ ಸಿಟ್ಟ ಇಟ್ಟ ಮಮತಿ ಅವರ ಮ್ಯಾಲಾ
ಮುಸಲ್ಮಾನ ಆದಾನ | ಮಕ್ಕಳಿಗೆ ಕಳಿಸ್ಯಾನಾ | ನೋಡಿ ಆಗ ಖಾತೂನಾ
ಮಾಡ್ಯಾಕ ಸಾಂಬನ ಧ್ಯಾನಾ | ಇದ್ದರಾಗ | ಕೂಡಿ ಇದ್ದರಾಗ ಖುಷಿಯಾಲಾ
ಭಕ್ತಿಗೆ ಅನುಕೂಲ ಶರಣ ಮೌಲಾ || ೧೬ ||

ನಮಗ ವರಗುರು ಸರುವ ಕೊಟ್ಟಾ | ಸುಳ್ಳ ಮುಳ್ಳ ಕಳ್ಳ ಬಂದು ಹಿಡಿಕಾಲಾ ||
ದೇಶಕ ಜಾಹೀರಾ ಪೀರ ನಮ್ಮ ದಸ್ತಗೀರಾ ಕರುಣುಳ್ಳ ಕೇಶುಪೀರಾ
ನಾಗು ಗೌಸುಗ ಪೂರಾ | ಕೊಟ್ಟರ‍್ಹಿಂಗ | ದೈವಾ ಕೊಟ್ಟಾರ‍್ಹಿಂಗ
ಹಿಂತಾ ಅಕಲಾ | ಭಕ್ತಿಗೆ ಅನುಕೂಲ ಶರಣ ಮೌಲಾ || ೧೭ ||

* * *

೧೨. ಭೂಮಿ ಹಿಂಡಿ ಎಣ್ಣೆ ತೆಗೆದ ಮೌಲಾಲಿ ಪದಾ

ಭಕ್ತಿವಂತರ ಶಕ್ತಿ ಶಿವನು ತಾನೇ ಬಲ್ಲಾ
ವಚನಕ್ಕೆ ತಪ್ಪಲಿಲ್ಲಾ ಹಜರತಲಿ ಮೌಲಾ
ಏರು || ಕೇಳರಿ ಮೌಲಾಲಿ ಇದ್ದಾರೊ ಮಕ್ಕಾದಲ್ಲಿ
ಸದಾಶಿವನ ಧ್ಯಾನ | ಭಾವಕ ಮೆಚ್ಚಿದ ಭಗವಾನಾ
ಅರುಬಿಟ್ಟು ಗರುವಿಲೆ ನಡೆದರೆ ನಡುಗಿತೊ ಭೂಮಂಡಲಾ || ೧ ||

ಒಂದಿನಾ ಮಕ್ಕಾದಲ್ಲಿ ಆದದ್ದು ಮೌಲಾ
ನಮಾಜು ಮಾಡಿ ಮೌಲಾ ಬರುತಿದ್ದರೊ ಖುಷಿಯಾಲಾ
ಏರು || ಅತ್ತೆಮನಿ ಸೊಸಿ ಪತಿವೃತಿ ಒಬ್ಬಾಕಿ | ಕಲ್ಲು ಎಡವಿ ಬಿದ್ದು
ಕೈಯಾನ ಎಣ್ಣಿಮಗಿ ಒಡದು ಅಳತಾಳೋ
ಮಣ್ಣಿನ ಬೋಕಿಗೆ ಎಣ್ಣಿಯ ಪರವಿಲ್ಲಾ || ೨ ||

ಹಾಡಾಡಿ ಅಳತಾಳೋ ಶಿವನೆ ಎನ್ನ ಗತಿಯೇನು ?
ಮನಿಗೆ ಹೋದರೆ ಬಂತೋ ಎನ್ನ ಕೊರಳಿಗೆ ಉರಲಾ
ಏರು || ಅತ್ತಿಮನಿಯಾಗ | ಮೊದಲು ಕಟಿಪಿಟಿ ಎನಗ
ಮತ್ತಷ್ಟು ಅದರಾಗ | ಸಿಟ್ಟು ಇದ್ರೊ ಎನ್ನಮ್ಯಾಲಾ
ಇಂದಿಗೆ ಹರಿದೀತೋ ನಂದು | ಸಂಸಾರದ ಹಂಬಲಾ || ೩ ||

ಬಡವಿ ಆಳಾಪು ನಿಂತು ಕೇಳಿದಾರೋ ಮೌಲಾ
ಕರುಣಿಟ್ಟು ಹೇಳ್ಯಾನ ಧೀರ ಅಂಜಬ್ಯಾಡ ಕಮಲಾ
ಏರು || ಸುಮ್ಮನಿರು ತಾಸೋತ್ತ | ಇಲ್ಲಿ ನೋಡೀಗ ಮಾತ
ಹ್ಯಾಂಗ ಆಗುವದು | ನಿನ್ನ ಎಣ್ಣಿ ಕೊಡತೇನಿ ತೆಗೆದು
ಹೇಳ್ಯಾನೋ ಭೂಮಿಗೆ ಜಬರಿಸಿ | ಶಿವನೆ ಪ್ರಭೂಲಾ || ೪ ||

ಬೈಯಾನ ಕೇಳರಿ ಒಂದ ಮುಂದೆ ಹೇಳುವೆ ಅಸಲಾ
ಹಮ್ಮಿಟ್ಟು ದಮ್ಮ ಹಿಡಿದರ ಮುರಿತೇನಿ ಮೀಸಲಾ
ಏರು || ಹೋಗೋ ಹೋಗೋ ಮುಲ್ಲಾ ಮಾಡಲಿಕ್ಕೆ ಬಂದಿದೇನೋ ಡೌಲಾ
ನಂದಿತ್ತು ನನಗ ಸಿಕ್ಕರ ನಿನ್ಯಾವ ಅಡಗೋಲಾ || ೫ ||

ಇ || ಹಿಡಿದಾರೋ ಭೂಮಿಗೆ ಒತ್ತಿಸುತ್ತಿ ಅಲಕಮೇಲಾ
ತಿರಿವ್ಯಾನೋ ಕಬ್ಬ ತಿರುವಿದಾಂಗ ಒಡಮುರಿದು ಒಗಲಾ
ಏರು || ಕಬ್ಬಿನ ಸಿಪ್ಪಿಗತಿ ತಿರಿವ್ಯಾರೋ ನರಗಳ ಒತ್ತಿ
ತಟಗ ತಟಗ ತೆಗೆದು ಎಣ್ಣಿ ಕೊಟ್ಟಾರೋ ಬಡವಿದಾ
ಹರಕಿ ಕೊಟ್ಟು ಮನಿಗೆ ಹೋದಾಳೋ ಖುಷಿಯಾಲಾ || ೬ ||

ಸಿಟ್ಟೀಲೆ ಹೋದಾರೋ ಮನಿಗೆ ಒಟ್ಟು ಮಂದಿ ಜುಮಲಾ
ಕರೆದಾನೋ ಹಸೇನ ಹುಸೇನಿಯರಿಗೆ ಬರ್ರೋ ಎನ್ನಬಾಲಾ
ಏರು || ನಾನು ಸತ್ತರ ನಿಮಗ ಹೇಳತೇನಿ ಮೊದಲಾಗ
ಹೇರಿ ಒಂಟಿಯ ಮೇಲಾ | ಭೂಮಿಗೆ ವೈರಿ ಎನ್ನಮೇಲಾ
ಅಂತರಲೆ ಇರತೇನಿ ನಾನು ವೈರಿ ಎದಿಯ ಮೇಲಾ || ೭ ||

ಇ || ದೇಶದೊಳು ಬಾಗಲಕೋಟಿ ಪ್ಯಾಟಿ ರಂಗಲಾಲಾ
ಹೂವಿನ ಗಲ್ಲೀಪ ಹಾಕರಿ ಮಡ್ಡಿಪೀರನ ಮ್ಯಾಲಾ
ಏರು || ಮುಗಿತರಿ ಬಯ್ಯಾನಾ ದೂರಲ ವಾಹಿನಾ
ಪೀರ ಮಲ್ಲೇಯಕಲ್ಲಾ ಮತಿ ನಮಗ ಕೊಟ್ರೋ ನಾಲಗಿ ಮೇಲಾ ||
ಸಯ್ಯದ ಮಹ್ಮದ ಅಕ್ಷರ ಹೊಯಿದಾಂಗ ರಂಗೋಲಾ || ೮ ||

* * *

೧೩. ಹಿಂಡ ವೈರಿಗಳ ಗಂಡ ಮೌಲಾಲಿ

ಏನಚಂದ ದೈವಾ ಬಂದ ಕೂಡಿರಿ ಇಂದ ಸಂಪನ್ನಾ | ಇಡರಿ ಧ್ಯಾನಾ
ಸರೂ ದೈವದ ಮುಂದ ಅರಜ ಮಾಡುವೆ ಕಂದ
ಭಕ್ತಿಗೆ ಅನುಕೂಲ ಆಗುವರೊ ಮೌಲಾ ಖಾತೂನ | ಇಡರಿಧ್ಯಾನಾ
ಪುಣ್ಯಕ ಪರ ಉಪಕಾರಾ | ಮೌಲಾವಲಿ ಶರಣರಾ
ಕೊಟ್ಟ ವಚನಕ ತಪ್ಪದಾತನು ಸೃಷ್ಟಿಗೆ ಮೌಲಾವಲಿ
ಶರಣ ಮೌಲಾನ ವರ್ಣನೆಯ ಎಷ್ಟಂತ ಮಾಡಲಿ ಬಾಯಲಿ
ಈ ಭೂಮಿಯಲ್ಲಿ | ಧರಣಿಪಾಲಕ ಕೊಟ್ಟಾ ಮಾಯಾಳು | ಮನಾ ಇಡರಿ ಧ್ಯಾನಾ || ೧ ||

ದೂರಲಿಂದ ಬಾವಾ ಬಂದಾ | ಮೌಲಾನ ಮುಂದ ಬ್ಯಾಗನಾ | ಮಾಡ್ಯಾನು ಶರಣು
ಮದವಿಯ ದಸಿಂದ ಐನೂರು ರೂಪಾಯಿ ಇಂದಾ | ಬಲಿಷ್ಟ ಸ್ವಾಮಿ
ಕೊಟ್ಟ ಮಾಡರಿ ಇಷ್ಟ ಲಗ್ನ | ಇಡರಿ ಧ್ಯಾನಾ
ಮೌಲಾವಲಿ ಶರಣರು ಬಡವಗ ಹೀಂಗ ಅಂತಾರು
ದಮ್ಮ ಹಿಡಿಯೋ ತಮ್ಮಾ | ಆ ಹರಿ ಬ್ರಹ್ಮನ ಕರುಣ ಆಗಲಿ |
ಶ್ಯಾರ ಭರಭರ ಊರ ಒಳಗ ಅಧಿಕಾರ ಅರಸ ಇರತಾನ ಅಲ್ಲಿ
ಬ್ಯಾಗ ಒಯ್ದು ನನಗ ಮಾರಂತ ಅಂವುಗ ನಾ ಇರತೇನಲ್ಲಿ
ಮದವಿದಸಿಂದ ಒಯ್ಯೋ ಐನೂರು ಹಣಾ | ಇಡರಿ ಧ್ಯಾನಾ || ೨ ||

ಇಬ್ಬರು ಕೂಡಿ ಹೊಂಟಾರ ಜೋಡಿಲಿಂದ ಮಾತಾಡಿ ವಚನಾ
ಕೊಟ್ಟ ಬಡವನ್ನಾ ಬಾಳ ಖುಷಿಯಲಿಂದ ಭರಭರಶಾರಕ ಬಂದ
ದರಬಾರ ನಡೆದಿತ್ತ ಬಾರ | ಪಾರೇದಾರ ಸಂಗೀನಾ ಹತ್ತಿರ ನೀಂತಾರಣ್ಣಾ
ಬಡವ ಮೌಲಾ ಶರಣರಾ | ನಿಂತ ಅರಸನ ಇದರಾ ಸಾರಿ ಮಾಡಿ ಮುಜರಿ
ಆ ಕಚೇರಿ ನಡೆದಿತ್ತ ಗರಿದೀಲಿ | ಒಂದ ಪೈಲವಾನ ಚಂದ ಮಾರುಕ
ಇಂದ ತಂದೀನಿ ನಿಮ್ಮಲಿ | ಎಷ್ಟ ಹತ್ತಿದಷ್ಟ ರೊಕ್ಕಾಕೊಟ್ಟರ ಬಿಡತೀನಿ ಇಲ್ಲಿ
ಹೇಳಿದ ಕೆಲಸಾ ಮಾಡಾಂವಾ ದೈರ್ಯವಾನಾ | ಇಡರಿ ಧ್ಯಾನಾ || ೩ ||

ನನ್ನ ಮೂರು ಸವಾಲಾ | ಯಾರ ಮಾಡ್ಯಾರ ಪಾರ ಬ್ಯಾಗನಾ | ಬಿಡತೇನಿ ಅವನಾ
ಐನೂರು ರೂಪಾಯಿ ತಂದ ಇಟ್ಟ ಬಡವನ ಮುಂದ | ತಗೊಂಡ ಬಡವ ಹೊಂಚಾ
ಮಾಡುಕ ಲಗ್ನಾ | ಇಡರಿ ಧ್ಯಾನಾ | ಫೈಲವಾನ ಅಂತಾನ ಅರಸಗ | ತಿಳಿಸೆ ಸವಾಲಾ ನನಗ
ಊರ ಒಳಗ | ನೀರ ಬಂದು ಮನಿಮಾರು ಬೀಳತಾವ ರಾತ್ರಿಯಲ್ಲಿ
ಬಂದ ಮಾಡೊ ಇಂದ ಸ್ವರೂಪನಿಂದ ತಿಳೂತೈತಿ ನನಗಿಲ್ಲಿ
ಮೊದಲ ಮಾಡೋ ನೀ ಕಬೂಲ | ಹರಕತ ಇಲ್ಲ ಇರ ಹೋಗೋ ಮನೆಯಲ್ಲಿ
ಮೌಲಾವಲಿ ಅಂತ ಗೊತ್ತ ಇದ್ದಿಲ್ಲ ಅರಸನ್ನ | ಇಡರಿ ಧ್ಯಾನಾ || ೪ ||

ಎಚ್ಚರ ಇದ್ದಿಲ್ಲ ಯಾರು ಪಾರೇದಾರ ಸರೂಜನಾ | ಮನೆಯಿಂದ ಶರಣಾ
ಹೊಂಟಾರೊ ಅಲ್ಲಿಂದ ನೋಡಿ ಪರ್ವತ ಒಂದಾ | ಒಡದ್ಹೋಳ ಮಾಡ್ಯಾರ ಕೇಳ
ಅದು ನಿಚ್ಚಳ ಒಂದ ಸವನಾ | ಇಡರಿ ಧ್ಯಾನಾ | ಸಮುದ್ರ ದಂಡಿಮ್ಯಾಗ
ತಂದ ಇಟ್ಟರೊ ಆವಾಗ | ಕೂಗಿ ಕೋಳಿ ಬೆಳಗಾಗಿ | ಅರಸಾಗ ಬಂದ ನಿಂತಾನಲ್ಲಿ
ಬಂದ ಆದಾವ ಇಂದ ನೀರ ಆನಂದ ಆದಾನೊ ಮನದಲ್ಲಿ
ನಗುತ ಆಡುವ ಮಾತ ಮನಸ್ಸಿಗೆ ಬಂತ | ಅಂತಾನ ಹೌದ ಹುಲಿ
ಎರಡನೆ ಸವಾಲಾ ಹೇಳುವೆ ಕೇಳೋ ಪೈಲವಾನಾ | ಇಡರಿ ಧ್ಯಾನಾ || ೫ ||

ಊರ ಹಿಂದ ಸರ್ಪೈತಿ ಒಂದ | ಅದಕ ಕೇಂದ್ರ ಬ್ಯಾಗನ
ಬರಬೇಕೋ ನೀನಾ ಕಂಡರ ಮನುಷ್ಯಾಗ ಸೂರ ಎಳುತೈತಿ ಒಳಗ
ಗಾಳಿಲಿಂದ ಬಾಯಾಗ ಬಂದ ಬೀಳತಾರಂತ ಸರೂಜನಾ | ಇಡರಿ ಧ್ಯಾನಾ
ಪೈಲವಾನ ಅಂತಾನ ಅರಸಗ | ನಿಂತ ತೋರಿಸೊ ನನಗ
ಎಂಥ ಸರ್ಪ ಐತಿ ಅಂತ ಹೊಂಟಾರೊ ಸ್ವಂತ ಆ ಮೌಲಾವಲಿ
ನೋಡಿ ಮೌಲಾಗ ಓಡಿ ಬಂತ ಲಗುಮಾಡಿ | ಸೂರ ಎಳದೀತಲ್ಲ
ಅಗದ ಮಾತೆಂದು ತಗದ ಕಲ್ಹನಾ | ಜಿಗದ ನಿಂತಾರ ತೆಲಿಮ್ಯಾಲ
ಹಿಂಬಡಲೆ ತುಳದು ಹೊಡದಾ ಸರ್ಪಿನ ಪ್ರಾಣಾ | ಇಡರಿ ಧ್ಯಾನಾ || ೬ ||

ಈಗೊಂದ ಸವಾಲನಿಂದ ಉಳದೈತಂದ | ಅರಸನ್ನಾ ಹೇಳಬೇಕ ನನ್ನಾ
ಅರಸ ಅಂತಾನ ಹೀಂಗ | ಏನ ಹೇಳಲಿ ನಿನಗ
ಜೀವಲಿಂದ ಮೌಲಾಗ ತಂದ ಮಾಡೊ ಇಂದ ಸ್ವಾದೀನಾ | ಇಡರಿಧ್ಯಾನಾ
ಅಂದ್ರೊ ಮೌಲಾ ಶರಣರಾ | ತಗಿಯಬ್ಯಾಡ ಅವನ ಹೆಸರಾ
ಹಿಂಡ ವೈರಿಗಳ ಗಂಡ | ಅನಸ್ಯಾನ ಪುಂಡ ಆ ಮೌಲಾವಲಿ
ಹೇಳಿ ಹಿಡಿಸಾವಾ ತಾಳಿ | ನಿನ್ನಂಥ ಕೋಳಿ ಕೂಗದು ಮನೆಯಲ್ಲಿ
ಏಟ ಬಿದ್ದರ ಪೆಟ್ಟ ರಾಜೇವ ಬಿಟ್ಟ ಹೋದಿಯಲ್ಲಿ
ಹಿಡತಂದು ನಿನಗ ಮಾಡಾವಾ ಮುಸಲ್ಮಾನಾ | ಇಡರಿ ಧ್ಯಾನಾ || ೭ ||

ಅಂದ ಷಂಡ ಅರಸ ಭಂಡ ಆ ಖೂಳದಂಡ ಮೌಲಾನ ಬಿಡೂದುಲ್ಲಾ | ನಾನಾ
ಎಷ್ಟ ಹೇಳಲಿ ನಿನಗ | ಸಿಟ್ಟೈತಿ ಮನದಾಗ ಅವನಂಶ ಮಾಡುದು ನಾಶ
ಇರುವದು ಧ್ಯಾನ ನಮ್ಮನ್ನಾ | ಇಡರಿ ಧ್ಯಾನ
ನಾನೆ ಮೌಲಾ ಅಂತಾನೊ | ಏನು ಮಾಡಲಿ ನನ್ನನ್ನು
ಹುಕುಂ ಕೊಟ್ಟಾ ಏಕದಂ ಬಿಡಬ್ಯಾಡರಿ ತಮ್ಮ ಅಂತ ಬಿದ್ದಾರ ಮ್ಯಾಲ
ಜೋಲಿ ಹೊಡದಾನ ತೂರಿ ಕೈಕಾಲ ಮಾರಿ ಒಡದಾಂವ ತೆಲಿ
ನೋಡಿ ಅರಸ ಓಡಿ ಹ್ವಾದಾ ಲಗುಮಾಡಿ ಹಿಡಿದ ತಂದರಲ್ಲಾ
ಕರುವನ್ನು ಮುಗದು ಆದೋನೊ ಮುಸಲ್ಮಾನಾ ಇಡರಿ ಧ್ಯಾನಾ || ೮ ||

ಅವನ ಪಟ್ಟ ಅವನಿಗೆ ಕೊಟ್ಟ | ಅಲ್ಲಿಂದ ಹೊಂಟ್ರೊ ಶರಣಾ | ದರಜಿಲ್ಲಾ ಏನಾ
ದೇಶಕ ಜಾಹಿರಾ | ಬಾಗಲಕೋಟ ಶಾರಾ | ದಸ್ತಗೀರ ಕೇಸುಪೀರ | ಆದ ಸಹಕಾರ
ನಮ್ಮನ್ನಾ ಇಡರಿದ್ಯಾನಾ | ನಾಗೂಗೌಸೂನ ಕವಿತಾ | ಸುರಿಸಿದಂತೆ ಅಮೃತಾ
ಅಡಿಪ್ರಾಸನುಡಿಗಳು ನಡಿಯಬೇಕ ಇದರಾಂಗಿಲ್ಲಾ | ಸೋತಬಳಿಕ | ಆತ ಹ್ವಾದಿಂದ ಮಾತ
ಬರುವೆದೇನಲ್ಲ | ಧ್ಯಾನ ಇಡೊ ಮೋದಿನಪೀರಸಾಬ ಜಾಣಾ ಹೇಳುವರೊ ಸಭೆಯಲ್ಲಿ
ಲಾಲಸಾಬ ಡೊಂಗ್ರಿ ಸಾಂಬನ ಶಾಣೇತನ | ಇಡರಿ ಧ್ಯಾನಾ || ೯ ||

* * *

೧೪. ದಾನ ಕೊಟ್ಟ ರೊಟ್ಟಿಯ ಪದಾ

ಚಿತ್ತಿಟ್ಟ ಕೇಳರಿ ದೈವಾ | ಇದು ಒಂದು ಅನುಭಾವಾ
ತಿಳಿಸುವೆ ಸಣ್ಣಾಂವಾ | ಜನಕೆಲ್ಲಾ | ಕುಂತ ಹಿರಿಯರ ಮುಂದಾ
ಬಯಾನ ಒಂದ ಬಿಚ್ಚಿ | ಹೇಳುವೆ ಶಾಸ್ತ್ರಲಿಂದ | ಮಾಡಿ ಮಿಗಿಲಾ
ಏರು || ಸಹಜ ಒಂದ ದಿನಾ ನಮಾಜ ಮಾಡಿ ನಬಿ ರಸೂಲಿಲ್ಲಾ
ಹರುಪೀಲಿ ಮಸೂತ್ಯಾಗ | ಸರಸಾದ ಮಿತ್ರರು ಕೂಡಿ ಜೋಡಿಗೆಲ್ಲಾ
ಕುಂತಾರ ಎಲ್ಲಾರು ಮಾತಾಡಿಕೊಂತಾ ಮಾಯಾ ಮಮತಾ ಇಟ್ಟನಗನಗತಾ |
ಅಷ್ಟರೊಳಗ ಬಂದಾನ ಬಾವಾ ಹೊಟ್ಟೆ ಹಸ್ತ | ಆಗಿ ಹಸವಾ |
ಮೂರದಿವಸ ಆತರಿ ದೈವಾ | ಉಂಡಿಲ್ಲಾ | ಹೋಗಿ ಪಾದಾ ಹಿಡಿದಾ ಘಟ್ಟ
ಅಬ್ದುಲ್ಲಾನ ಮನಿಯಾನ ರೊಟ್ಟ | ಉಣಸಿದರ ತುಂಬಿತ ಹೊಟ್ಟಿ ರಸೂಲಿಲ್ಲಾ |
ಕೇಳಿ ಈ ಬಾವಾನ ಮಾತಾ | ಎಲ್ಲಾರು ಕುಂತಾರೊ ಬೆವತಾ || ೧ ||

ನಬಿಸಾಬ ಶರಣರಿಗ್ಹೆಂತ ಬಿತ್ತೊ ದಿಗಲಾ | ನಬಿಸಾಹೇಬ ಹೇಳ್ಯಾರೊ ಪುನಃ
ಎಂಥ ಹುಚ್ಚ ಬಾವಾ ನೀನಾ | ಅಬ್ದುಲ್ಲಾಂದು ನಿನಗೇನ ಖೂನಾ ಹೇಳ ಮೊದಲಾ ||
ಏರು || ಅಂತಾನ ಬಾವಾ ಕೇಳರಿ ದೈವಾ ಮಾತೊಂದ ನಂದಿಷ್ಟಾ
ಭಿಕ್ಷಾ ಬೇಡತೇನಿ | ಲಕ್ಷಕ್ಕೆ ತರವಲ್ಲಾ | ಮೂವರು ದಿವಸ ಸುಟ್ಟಾ
ಹೇಳ್ಯಾರ ನೆರೆಮನಿ ಊರಾನ ಜನಾ | ಆತನ ಹೆಸರಾ | ಅಂವಾ ಮಹಾ ಜೀನಾ
ಧನ ದ್ರವ್ಯ ಸಂಪನ್ನಾ ಕೊಟ್ಟ ಮರೆತ ಭಗವಾನಾ
ಕೈ ಎತ್ತಿ ಕವಡಿ ದಾನಾ ಕೊಟ್ಟವನಲ್ಲಾ
ಹಿಂತಾಮಿತ್ರ ನೀತಿಯ ಕೆಟ್ಟಾ | ನಿಮ್ಮ ಮಂಡಳ್ಯಾಗ ಮುರಿಲಿವುದು ಜಿಬಟಾ
ಶರಣರು ನಿಮ್ಮ ಸಂಗಾಟಾ | ಥರವಲ್ಲಾ || ೨ ||

ಅಬ್ದುಲ್ಲಾ ಮಹಾ ಜೀನಂತಾ ಬಾವಾನು ಹೇಳಿದಂತಾ
ಶರಣರಿಗೆ ಇತ್ತರಿ ಗೊತ್ತಾ | ಅವನ ಕುಶಲಾ | ಅಂದ್ರೊ ಶರಣರು ಎಲ್ಲಾರ ಮುಂದಾ
ಅಬ್ದುಲನ ಮನಿಯಿಂದ ಬಾವಾಗ ಎರಡು ರೊಟ್ಟಿಯ ತಂದು ಕೊಡುವರಿಲ್ಲಾ
ಇಷ್ಟ ಮಾತಾ ಕೇಳಿ ಚಟ್ಟನೆ ಎದ್ದ ಅಬೂಬಕರ ಸಿದ್ದೀಕ
ನಾ ತರತೇನಂತ ಎದ್ದ ಹೋಗ್ಯಾರ ಅಬ್ದುಲ್ಲಾ ಮನಿತನಕ
ಅಬ್ದುಲ್ಲಾಗ ಕೇಳ್ಯಾರ ಹೋಗಿ | ರೊಟ್ಟಿ ಎರಡು ತಂದು ಕೊಡು ಲಗುಬಗಿ
ಹೇಳಿ ಕಳಿಸ್ಯಾರ ರಸೂಲಿಲ್ಲಾ | ಕುಂತಾನ ಒಬ್ಬ ಕಂಗಾಲಾ
ಕೊಡೊ ಶಿವನ ಹೆಸರಿನಮ್ಯಾಲಾ | ನಿರವಾ ಇಲ್ಲಾ
ಅಬೂಬಕರ ಸಿದ್ದೀಕ್ನಮುಂದ | ಹೇಳ್ಯಾನ ಅಬ್ದುಲ್ಲಾ ಬಂದ
ನಮ್ಮ ಮನ್ಯಾಗ ಅಡಗಿ ಇಂದ ಮಾಡೇಯಿಲ್ಲಾ || ೩ ||

ನಾನಾ ಪರಿ ಹೇಳಿದರೆಷ್ಟ | ರೊಟ್ಟಿ ಎರಡು ಕೊಡಲಿಲ್ಲ ದ್ರುಷ್ಟ
ಅಬೂಬಕರ ಸಿದ್ದೀಕ ಹೊಂಟ ಹೋಗ್ಯಾರಲ್ಲಾ | ಅಬೂಬಕರ ಬಂದಾಗ ತಿರುಗಿ
ಉದಾಸಾಗಿ ಮನದಾಗ ಮರಗಿ | ನಬಿಸಾಬಗ ಹೇಳ್ಯಾರ ಹೋಗಿ | ಮಜಾ ತೋರಲ್ಲಾ
ಉಮರ ನಿಂತಾನ ಜರಬೀಲೆ ಅಂತಾನ | ನಾ ಹೋಗಿ ಬರತೇನಿ
ನಾ ಹೋಗಿ ಬೇಶಕ್ಕಾ ಅಬ್ದುಲ್ಲಾನ ಹಂತೇಕ | ರೊಟ್ಟಿ ತರತೇನಿ
ಬಂದಾರ ಅಬ್ದುಲ್ಲಾನ ಮನಿತನಕ | ಬಾವಾನ ದಸಿಂದ ರೊಟ್ಟಿ ಬೇಡುದಕ
ಅಬ್ದುಲ್ಲಾ ತಿಳಿದು ನೋಡೊ ಧರ್ಮಾ | ಜರಾ ದಾನಾ ಮಾಡೋ
ಬಾವಾಗ ಎರಡು ರೊಟ್ಟಿ ಕೊಡೊ | ತತ್ಕಾಲಾ
ನಬಿಸಾಹೇಬ ಕಳಿಸ್ಯಾರ ಹೇಳಿ | ನಿನ್ನ ಮನಿಗೆ ಬಂದೇನಿ ಮರಳಿ
ಸುಮ್ಮನ ಕುಂತಾ ಮಾತಕೇಳಿ ಅಬ್ದುಲ್ಲಾ || ೪ ||

ಉಮರ ಎಷ್ಟು ಮಾಡಿ ಅರಜಾ | ನಾನಾ ಪರಿ ಹೇಳ್ಯಾರ ಸಮಜಾ
ಅಬ್ದುಲ್ಲಾ ಮಾತಿನ ದರ್ಜಾ | ಇಡಲಿಲ್ಲ | ಅಬ್ದುಲ್ಲಾ ಹೇಳಿದ ಚಂದಾ
ತಿರುಗಿ ಉಮರ ಮಸೂತಿಗೆ ಬಂದಾ | ಹೇಳತಾರ ಶರಣರ ಮುಂದಾ | ಮಾಡಿಖುಲ್ಲಾ ||
ಏರು || ಶರಣರು ಕುಂತಾರ | ಉಸ್ಮಾನ ಅಂತಾರ | ಅಪ್ಪಣಿ ಕೊಡರಿ ನನಗ
ನಾ ಹೋಗಿ ಘಟ್ಟಿ | ತರತೇನಿ ರೊಟ್ಟಿ | ಕೊಡುದಿಲ್ಲಾ ಅಂವಾ ಹ್ಯಾಂಗ |
ಇಬ್ಬರ ಕೈಲೆ ತರೂದಾಗಲಿಲ್ಲಾ | ನಾಹ್ವಾದ ಬಳಿಕ ಅಂವಗ ಬಿಡೂದಿಲ್ಲಾ
ಎದ್ದ ಹ್ವಾದ್ರೊ ಉಸ್ಮಾನಾ | ಅಬ್ದುಲ್ಲಾನ ಮನಿತನಾ
ಹೋಗೂತನಕ ತಿನ್ನುತ ಅನ್ನಾ | ಕುಂತಾನಲ್ಲಾ |
ಉಸ್ಮಾನ ಹೊರಗ ನಿಂತಾ | ರೊಟ್ಟಿ ಎರಡು ಬೇಡ್ಯಾರ ತುರತಾ
ಹೇಳತಾನ ಒಳಗ ಕುಂತಾ | ಅಬ್ದುಲ್ಲಾ || ೫ ||

ಊರಾಗ ಮನಿಯೋನ ಹಾಳ ಆಗಿಲ್ಲಾ | ತಿರುತಿರುಗಿ ಬರತೀರಿ ಇಲ್ಲೆ
ಬೇಡೂದು ಬಿಟ್ಟು ಮಂದಿಯಲ್ಲೆ | ರೊಟ್ಟಿ ಇಲ್ಲ ನನ್ನ ಹಂತೇಲಿ | ಕೊಡೂದಿಲ್ಲಾ ||
ದೊಡ್ಡಿಸ್ತನಾ ಮಾಡಿ ಉಸ್ಮಾನ ಕೇಳಿದರ ಹೋಗಿ | ಕೊಡಲಿಲ್ಲಂತ
ಬಲು ಬೇಸತ್ತು ಬಂದ್ರೊ ಉದಾಸಾಗಿ |
ಕೇಳರಿ ಶರಣರು ಹಿಂತವನನ್ನು ದೇಶದ ಮ್ಯಾಲೆ ಕಂಡಿಲ್ಲ ನಾನು
ಕುಂತ್ರೊ ಶರಣರು ಗಪ್‌ಚುಪ್ಪಾ | ಇಂಥಾ ಶಬ್ದಾ ಕೇಳಿ ಸ್ವಲ್ಪಾ
ಅಂತಾರ ಏರಿ ತೋಪಾ | ಅಲಿ ಮೌಲಾ | ಕಳಸರಿ ಶರಣರು ನನ್ನಾ
ರೊಟ್ಟಿ ಎರಡು ತರುವೆನಾ | ಮಾರಿ ತೋರ‍್ಯಾರಲ್ಲರಿ ಪುನಃ | ಇನ್ನ ಮ್ಯಾಲಾ || ೬ ||

ಇಷ್ಟ ಕೇಳಿ ನಿಷ್ಠರ ಮಾತಾ | ಮೌಲಾ ಅಲಿ ಮಾಡಿ ಶರ್ತಾ
ರೊಟ್ಟಿ ಎರಡು ತರತೇನಂತಾ | ಹೊಂಟಾರಲ್ಲಾ | ಹಾತೊರೆದು ಜರಬಿಲಿಂದಾ
ಅಬ್ದುಲ್ಲಾನ ಮನಿಗೆ ಬಂದು ನಿಂತಾರೊ ಬಾಕಲಮುಂದಾ | ಅಲಿ ಮೌಲಾ ||
ಏರು || ಅಬ್ದುಲ್ಲಾಗ ಹೇಳ್ಯಾರೊ ಬ್ಯಾಗ | ಕೇಳೋ ನನ್ನ ಮಾತಾ
ರೊಟ್ಟಿ ಎರಡು ತಾ ಇಟ್ಟ ಅದರ ಮ್ಯಾಲ ಪದಾರ್ಥ ಸಹಿತಾ
ನಿನ್ನ ಮನಿಗೆ ನಬಿರಸೂಲಿಲ್ಲ ಕಳಸ್ಯಾರ | ನಾ ಬಂದೇನಿ ಅಲಿ ಮೌಲಾ
ಅಬ್ದುಲ್ಲಾ ಅಂದಾ ಬಾಯಿಲಿ | ನನ್ನ ಕೂಡ ಹಚ್ಚಿರಿ ನಕಲಿ
ಎದ್ದಹೋಗಿರಿ ಮೌಲಾ ಅಲಿ | ಕೊಡುದುಲ್ಲಾ
ಮೌಲಾಹೇಳ್ಯಾರ ಬೇಶಕ್ಕ | ತಂದ ರೊಟ್ಟಿ ಕೊಡುತನಕ
ಹೋಗುದಿಲ್ಲ ಹಿಂದಕ್ಕೆ | ನಾ ಬಿಡೂದಿಲ್ಲಾ || ೭ ||

ಉಪವಾಸ ಕುಂತಾನ ಶರಣಾ | ನೋಡೂತ ಆತನ ಧರಣಾ
ಅಬ್ದುಲ್ಲಾಗ ಸ್ವಲ್ಪ ಕರುಣಾ | ಬರಲಿಲ್ಲಾ | ಮುಚ್ಚಿಕೊಂಡ ಬಾಗಿಲಾ
ಒಳಗ ಕುಂತು ಉಂಡಾನಲ್ಲಾ | ಮೌಲಾ ಅಲಿಗೆ ಕರಿಯಲಿಲ್ಲಾ | ಹಂತಾಕುಲ್ಲಾ ||
ಏರು || ಮೀರಿತ ಹೊತ್ತಾ | ರಾತ್ರಿ ಅವತ್ತಾ | ಆಗತಾನ ಅಮಲಾ
ಖುದ್ದ ಮೌಲಾಅಲಿ ಎದ್ದ ಹೋಗಿ ತಂದಾರೊ ದೊಡ್ಡಕಲ್ಲಾ
ತಂದ ಅಬ್ದುಲ್ಲಾನ ಬಾಕಲಕ್ಹಚ್ಚೆ | ಅಳತಿ ಬರೋಬರಿ ಬಿಟ್ಟಾರೊ ಮುಚ್ಚಿ
ಅಬ್ದುಲ್ಲಾ ಮಲಗಿದ್ದ ಒಳಗ ಅಷ್ಟರೊಳಗ ಆತರಿ ಬೆಳಗ
ಎದ್ದ ಬಂದಾನ ನೋಡ್ಯಾನ ಹೊರಗ | ಬಾಗಿಲಾ
ಒತ್ತರತಿ ಹೊರಕಡಗಿ ಉಚ್ಚಿ ಬಂದೀತ ಹಿಡಕೊಂಡಾ ಅಂವಚಿ
ಹ್ವಾದೇನಂದ್ರ ಬಾಗಿಲ ಬಿಚ್ಚಿ | ಹಾದಿ ಇಲ್ಲಾ || ೮ ||

ಅಬ್ದುಲ್ಲಾಗ ಒತ್ತರಿ ಅಗಾದಾ | ಮನಸಿನೊಳಗ ತಿಳಕೊಂಡಾ ಬೇಗ
ಮೌಲಾವಲಿ ಮಾಡಿ ಜಿದ್ದಾ ಕುಂತಾರಲ್ಲಾ | ಒದರಿ ಹೇಳ್ಯಾನ ಅಬ್ದುಲ್ಲಾ
ರೊಟ್ಟಿ ಎರಡು ಕೊಡುತೀನಿ ಮೌಲಾ | ತಗೀರಿ ಮನಿಗೆ ಹಚ್ಚಿದ ಕಲ್ಲಾ ಬೀಳುವೆಕಾಲಾ |
ಏರು || ನಿಂತಾರ ಹೊರಗ ಅಂತಾರ ಮೌಲಾನಿಂದ ಭರೋಸಿಲ್ಲಾ
ಖೊಟ್ಟಿ ಮನುಷಾ ನೀ ಇಟ್ಟಿಸಿ ಮನದಾಗ ರೊಟ್ಟಿ ತಾರೊ ಮೊದಲಾ
ಗದಗದ ನಡುಗುತ ಹೋಗಿ ಅಬ್ದುಲ್ಲಾ |
ರೊಟ್ಟಿ ಎರಡು ತಂದ ಆಗಿ ಖಜೀಲಾ ||
ಯಾರಿಗ್ಹಾರೆ ಹದಿನಾರ ಗಂಟ ತಂದಾ | ಅಲಿಗೆ ರೊಟ್ಟಿಯ ಕೊಟ್ಟಾ
ಮೌಲಾ ತಗೊಂಡ ಹೋಗ್ಯಾರ ಹೊಂಟ | ತಗದ ಕಲ್ಲಾ
ಖುಷಿಲಿಂದ ರೊಟ್ಟಿಯ ತಂದಾ ಇಟ್ಟಾರೊ ಶರಣರ ಮುಂದಾ | ಅಲಿಮೌಲಾ || ೯ ||

ಮೌಲಾವಲಿ ಹೇಳ್ಯಾರೊ ಹಿಗ್ಗಿ | ಮೂರು ಮಂದಿ ಬಂದಾರೊ ತಿರುಗಿ
ತಂದೇನಿ ನಾನು ಹೋಗಿ | ಬಿಡಲಿಲ್ಲಾ | ಈಗ ನಿಮ್ಮ ಕಡಿಗೆ ಐತಿ |
ಬಿಡಿಸಿದವಗ ಕೆಟ್ಟ ನೀತಿ | ಕೊಡುವಂತೆ ಮಾಡಿರಿ ಭಕ್ತಿ | ರಸೂಲಿಲ್ಲಾ
ಏರು | ನಬಿ ರಸೂಲಿಲ್ಲಾ ಆಗಿ ಖುಷಿಯಾಲಾ | ತಂದಿದಂತಾ ಬುತ್ತಿ
ಕರದ ಬಾವಾಗ ಕೊಟ್ಟಾರೊ ಆಗ | ತಮ್ಮ ಕೈಲೆ ಎತ್ತಿ
ನಬಿಸಾಬರು ತಿಳಿದಾರೊ ಆಗ | ಸುದ್ಧಿ ಮಾಡ್ಯಾರೊ ಊರಾನ ಜನಕ
ಹಳೇದೊಂದ ಗೋರಿ ತಗಸಿ | ಹವಳ ಮುತ್ತು ಮಾಣಿಕ ತರಿಸಿ
ಗೋರಿ ತುಂಬ ಬಿಟ್ಟಾರೊ ಹಾಸಿ ರಸೂಲಿಲ್ಲಾ |
ಇದರಾಗ್ಯಾಂವಾ ಮನಗೀದಂವಂಗ ಕೊಡತೇವಿ ತಗದ ಅವಗ
ಸುದ್ದಿಕೇಳಿ ಬಂದಾನ ಬ್ಯಾಗ ಅಬ್ದುಲ್ಲಾ || ೧೦ ||

ಅಬ್ದುಲ್ಲಾ ಹೇಳ್ಯಾನೊ ಹೀಂಗ | ಮಲಗೂವೆ ನಾ ಗೋರ‍್ಯಾಗ
ಹವಳ ಮುತ್ತು ಕೊಡಬೇಕ ನನಗ ತುಂಬಿದೆಲ್ಲಾ
ಶರಣರು ಆಗ್ಯಾರೊ ಕಬೂಲಾ | ಆಸೇಕ ಬಿದ್ದ ಅಬ್ದುಲ್ಲಾ
ಗೋರ‍್ಯಾಗ ಹೋಗಿ ಮಲಗಿದ ಮ್ಯಾಲಾ | ಹೋತೋ ಉಸಲಾ ||
ಏರು || ತಾಸಿನ ಮ್ಯಾಲ ನಬಿ ರಸೂಲಿಲ್ಲಾ | ಗೋರಿಹಂತೇಲಿ ಹೋಗಿ
ಗೋರಿಯ ಒಳಗಿಂದ ತಗದಾರೊ ಆಗ | ಸತ್ತ ಹೆಣಕ ಬಗ್ಗಿ
ಮಂತರ ಓದಿ ಜೀವಾ ತುಂಬಿಸಿ | ಕೇಳ್ಯಾರ ಅಬ್ದುಲ್ಲಾಗ ರಂಬಿಸಿ
ಮಲಗಿದಲ್ಲೆ ಗೋರ‍್ಯಾಗ ಏನ ಕಾಣ ಬಂತೊ ನಿನಗ
ಅದು ಎಲ್ಲಾ ಹೇಳೊ ನಮಗ ಬಿಚ್ಚಿಖುಲ್ಲಾ ||
ಏನು ಹೇಳಲಿ ಗೋರ‍್ಯಾನ ಗೋಳಾ | ಬರುವಾಗ ಬೆಂಕಿ ಝಳಾ
ಹಂಚ ಎರಡು ಬರತಿದ್ವು ನಿವ್ವಳಾ | ಎಡಾ ಬಲಾ || ೧೧ ||

ಅಂದ್ರೊ ನಬಿ ರಸೂಲಿಲ್ಲಾ | ಹಂಚಿಲ್ಲೊ ಕೇಳೋ ಅಬ್ದುಲ್ಲಾ
ಅದು ಒಂದು ಪುಣ್ಯದ ಫಲಾ | ಆಗಿ ಶಾಮೀಲಾ ಬರತಿದ್ವು ಎರಡು ರೊಟ್ಟಿ
ಬಾವಾಗ ದಾನಾ ಕೊಟ್ಟಿ | ಕೈಯೆತ್ತಿ ಮನಾ ಮುಟ್ಟಿ ತಂದ್ರೊ ಮೌಲಾ
ಏರು || ಹೇಳಿ ಅಬ್ದುಲ್ಲಾ ಆಗಿ ಖುಶಾಲಾ | ತನ್ನ ಮನಿಗೆ ಹೋದಾ
ಬಿಟ್ಟಾನ ಕರ್ಮಾ ಮಾಡ್ಯಾನ ಧರ್ಮಾ | ಸರೂ ಎಲ್ಲಾ ಜಿಂದಗಿ
ಬಿಟ್ಟ ಪರಪಂಚ ಎಲ್ಲಾ ಶರಣರ‍್ಹಂತೇಲಿ | ನಮಾಜ ಮಾಡುವಾ ರಾತ್ರಿಹಗಲಿ |
ಎತ್ತಿ ಬಾಗಿಲ್ಹಚ್ಚಿದ ಮೌಲಾ | ಹಮ್ಮ ಚೌಕ ಇತ್ತರಿ ಕಲ್ಲಾ
ಉದ್ದೆಷ್ಟು ಅಡ್ಡ ಅಗಲಾ ಇತ್ತೋ ತೋಲಾ | ಹೇಳೋ ಹೆಸರ ಕಲ್ಲಿನ ಒಡದಾ
ಮಡ್ಡಿ ಪೀರಾನ ಪಾದಾ ಹಿಡದಾ | ಹುಸೇನ ಮಿಯಾ ಬಿಟ್ಟಾರ ಜಡದ ಸವಾಲಾ || ೧೨ ||

* * *

೧೫ ಮೌಲಾಲಿಯ ಗರ್ವಭಂಗ

ಕೂಡಿ ಕುಂತಿರಿ ಪಂಡಿತರೆಲ್ಲಾ ಸಾರಿ ಹೇಳುವೆನಲ್ಲಾ
ಏನಚಂದ ಆನಂದದಿಂದ ಬಂದ ಕೂಡಿರಿ ದೈವೆಲ್ಲಾ ||
ಏರು || ಶೂರ ಮೌಲಾ ಅನಸ್ಯಾರಲ್ಲಾ ಕಸುವಿನೊಳಗ ಮೇಲಾ
ನನ್ನ ಸರಿ ಕಸುವಿನೊಳಗ ಯಾರು ಇಲ್ಲೊ ಜಗದೊಳಗ
ಭೂಮಿಗೆ ಸುತ್ತಿ ಸುರಳಿಮಾಡಿ ಅರವಿ ಒಗಿಬೇಕಂತಾನ್ರಿ ಮೌಲಾ
ನಿಂದ್ರಾಕ ಆಧಾರ ನನಗ ಇಲ್ಲ ಅಂತಾರ್ರಿ ಮೌಲಾ || ೧ ||

ಇ || ಗರುವ ಮೌಲಾಗ ಬಂದೀತಲ್ಲಾ ನಾನೇ ಜಗಕ ಮಿಗಿಲಾ
ಅವನ ಗರುವ ಮುರಿಯುದಕ ಶಿವಾ ಒಂದ ತಗದಾನೊ ಅಕಲಾ ||
ಏರು || ಜಿಬ್ರಾಯಿಲ ಕರದಾನೊ ಅಲ್ಲಾ ಲಗುಹೋಗು ನೀ ಮೊದಲಾ |
ಭೂಮಿ ಆಕಾಶ ತೂಕಾ ಹಣ್ಣು ಮಾಡೊ ಹದಿನಾಲ್ಕಾ
ಬುಟ್ಟಿಗೆ ಹಾಕಿ ಬೇಗ ಒಯ್ಯೊ ಮರ್ತ್ಯೇಕ ಈಗ
ನಾನೇ ಮೇಲ ಅಂತಾನೊ ಮೌಲಾ | ಈಗ ಲಗು ಹೋಗೊ ಮೊದಲಾ || ೨ ||

ಇ || ಜಿಬ್ರಾಯಿಲ ಹೊಂಟಾನಲ್ಲಾ | ಬುಟ್ಟಿತಲಿಯ ಮೇಲಾ
ಮುದಕಿ ರೂಪಾ ಆಗಿ ಜಿಬ್ರಾಯಿಲ ಇಳದಾನಿ ಅಸಲಾ |
ಏರು || ಅಲಿಮೌಲಾ ಹೊಂಟಾನಲ್ಲಾ ಯಾರ‍್ಯಾರ ಕಬರಿಲ್ಲಾ
ಬುಟ್ಟಿ ಇಟಗೊಂಡ ಜಿಬ್ರಾಯಿಲ ನಿಂತಾನ್ರಿ ದಾರಿಯ ಮೇಲಾ |
ಬುಟ್ಟಿ ಹೊರಸ ಬಾರೊ ಮೌಲಾ ನನಗ ಹೊರಸವರ‍್ಯಾರಿಲ್ಲಾ ||
ಮೌಲಾ ನೋಡಿ ಹೋದಾನ ಓಡಿ ಆಗ ಕೇಳರಿ ದೈವೆಲ್ಲಾ || ೩ ||

ಇ || ಎಡಗೈಲಿ ಎತಿವ್ಯಾನೊ ಬುಟ್ಟಿ ಅಗಳಾಡಲಿಲ್ಲಾ ||
ಗಾಬಾಗಿ ಹೌಹಾರಿ ಮೌಲಾ ನಿಂತಾನ್ರಿ ಅಸಲಾ ||
ಏರು || ಎರಡು ಕೈಲೆ ಬುಟ್ಟಿ ಮೌಲಾ | ಹಿಡಿದು ಎತಿವ್ಯಾನಲ್ಲಾ
ಒಳೆಕಸುವಿಲೆ ನೆಗವ್ಯಾನಲ್ಲಾ | ಮೊಣಕಾಲ ಮೇಲೆ ಬಂತಲ್ಲಾ
ಮೂರ್ಚಿ ಬಂದು ಬಿದ್ದಾನೊ ಮೌಲಾ | ಬಿದ್ದಿತೊ ಮೌಲಾಗ ದಿಗಿಲಾ
ಲಗುಮಾಡಿ ಕೈಊರಿ ಒದ್ದಾಡಿ ಎದ್ದಾನೊ ಮೌಲಾ || ೪ ||

ಇ || ನಗತಾಳೊ ಮುದುಕಿ ಮೌಲಾನ ನೋಡಿ | ಕಸುವ ತಿಳಿದಿತೊ ಮೌಲಾ
ನಾನೇ ಮೇಲಾ ಅಂತಿದ್ದಿ ಮೌಲಾ ನೀನ ಜಗದೊಳಗ ಮೇಲಾ ||
ಏರು || ಎಡಗೈಲೆ ಎತಗೊಂಡ ಮುದುಕಿ | ಬಡಗಿ ಊರೂತ ಹೊಂಟಾಳಲ್ಲಾ
ಹೌಹಾರಿ ಮೌಲಾ ನಿಂತಾನಲ್ಲಾ | ಮುದುಕಿ ನೋಡೂತ ಅಸಲಾ
ಮನಸಿಗೆ ಕೆಟ್ಟ ಆಗಿ ಹೊಂಟಾ | ನಾನು ಜಲ್ಮಾ ಇಡೂದಿಲ್ಲಾ ||
ತಲಿಕಟ್ಟಿ ಮಲಗ್ಯಾನೊ ಮೌಲಾ ಕೇಳರಿ ದೈವೆಲ್ಲಾ || ೫ ||

ಬೀಬಿ ಖಾತೂನ ನೋಡಿ ಗಂಡನ್ನ ಊಟಕ್ಕ ಏಳ್ರಿ ನೀವಿನ್ನಾ |
ಅಂದೊ ಮೌಲಾ ಊಟಾ ಮಾಡುದುಲ್ಲಾ ಅಂತಾನ್ರಿ ಖುಲ್ಲಾ |
ಏರು || ಫಾತಿಮಾಗ ಬಿದ್ದಿತೊ ದಿಗಿಲಾ ಗಾಬಾಗಿ ನಿಂತಾಳಲ್ಲಾ ||
ಹಸೇನ ಹುಸೇನರ ಕರದಾಳಲ್ಲಾ ಬರ್ರಿ ನನ್ನ ಕಮಲಾ ||
ನಿಮ ತಂದಿ ಉಣವಲ್ಲಾ ಅಜ್ಜನ ಕರೀರೊ ನೀವು ಮೊದಲಾ
ಎರಡು ಬಾಲಾ ಹೊಂಟಾರಲ್ಲಾ | ಶರಣರಿಗೆ ಕರಿಯುದಕ ಅಸಲಾ || ೬ ||

ಇ || ನಬಿರಸೂಲಿಲ್ಲಾ ಕುಂತಾರಲ್ಲಾ ಜಪಾ ಮಾಡೂತ ಅಸಲಾ
ಬಾರೋ ನಾನಾ ಅಂತಾರೊ ಹಸೇನ ಹುಸೇನ ಅಪ್ಪ ಉಣವಲ್ಲಾ
ಏರು || ನಬಿರಸೂಲಿಲ್ಲಾ ಹೊಂಟಾರಲ್ಲಾ ಮೊಮ್ಮಕ್ಕಳ ಹಿಂಬಾಲಾ
ಬೀಬಿ ಫಾತಿಮಾ ನಿಂತಾಳಲ್ಲಾ ದಾರಿ ಕಾಯುತ ಅಸಲಾ
ಬಾರೋ ನನ್ನ ಪ್ರೇಮದ ಬಾಲಾ | ನಿನ್ನ ಅಳಿಯ ಉಣವಲ್ಲಾ
ರಸೂಲಿಲ್ಲಾ ಕೇಳ್ಯಾರಲ್ಲಾ ಯಾಕ ಮಲಗಿಯೊ ಮೌಲಾ || ೭ ||

ಇ || ಅಂತಾರೊ ಮೌಲಾ ಭೂಮಿಯ ಮೇಲಾ ಜಲ್ಮಾ ನಾನು ಇಡೂದಿಲ್ಲಾ
ಈಗ ಶೂರ ಮೌಲಾ ಅನಿಸಿದ್ದನಲ್ಲಾ | ನಾನು ಜಗದೊಳಗ ಮೌಲಾ
ಏರು || ಬುಟ್ಟಿ ಇಟಗೊಂಡ ದಾರಿಯ ಮೇಲಾ | ಮುದುಕಿ ಕುಂತಿದ್ಲು ಅಸಲಾ
ಬಾರ ಮೌಲಾ ನನ ಬುಟ್ಟಿ ಹೊರಸವರ‍್ಯಾರಿಲ್ಲಾ |
ಮುದುಕಿ ನೋಡಿ ನಾನು ಓಡಿ ಹೋಗಿ ನೋಡದರೊಳಗ
ಹದಿನಾಲ್ಕು ಹಣ್ಣು ಇದ್ದವು ಬುಟ್ಟಿಯೊಳಗ ಅಸಲಾ || ೮ ||

ಇ || ಎರಡು ಕೈಲೆ ನೆಗವಿದನಲ್ಲಾ | ಮೊಣಕಾಲ ಮೇಲೆ ಬಂತಲ್ಲಾ
ಮೋರ್ಚ ಬಂದು ಬಿದ್ದೆಲ್ಲಾ | ನನ್ನ ಕಸುವು ನಡಿಯಲಿಲ್ಲಾ
ಕೂಡಿದಜನಾ ನಕ್ಕರಲ್ಲಾ | ಕಸುವು ಮೌಲಾಂದು ತಿಳಿದೀತಲ್ಲಾ ||
ನಬಿರಸೂಲಿಲ್ಲಾ ಅಂತಾರಲ್ಲಾ | ಜಗಕ್ಕೆ ನೀನೆ ಮೀಗಿಲಾ |
ಬುಟ್ಟಿಯೊಳಗಿನ ಹದಿನಾಲ್ಕು | ಹಣ್ಣಾ | ಭೂಮಿ ಆಕಾಶದ ವಜನಾ |
ಕಸುವು ನಿಂದು ನೋಡುವುದಕ್ಕೆ ಜಿಬ್ರಾಯಿಲಗ ಕಳಿಸಿದ್ನೊ ಅಲ್ಲಾ || ೯ ||

ಇ || ಭೂಮಿ ಆಕಾಶ ತೂಕಾ | ತೂಕ ಮೊಣಕಾಲ ಮೇಲೆಬಂದ ಬಳಿಕ
ನೀನೆ ಮೇಲಾ ಅನಿಸಿದಿ ಮೌಲಾ | ಏಳೊ ಊಟಕ್ಕ ಮೊದಲಾ ||
ಏರು || ರಸೂಲಿಲ್ಲಾಂದು ಕೇಳಿ ಮೌಲಾ | ಮೌಲಾನ ಮನ ಶಾಂತಾ
ಎಲ್ಲರೂ ಕೂಡಿ ದುಆ ಬೇಡಿ ಊಟ ಮಾಡ್ಯಾರಲ್ಲಾ
ಸ್ವಲ್ಪ ಸಂದ ಮುಗಿಸಿನಿ ಚಂದ ಕವಿ ಮಾಡಿ ಕಟಿ ಬಂದ
ತಪ್ಪ ತಡಿ ಆದರ ನುಡಿ ನೀವು ಕ್ಷಮಿಸಿ ದೈವೆಲ್ಲಾ || ೧೦ ||

ಇ || ಬಟಕುರ್ಕಿ ಐತಿ ವಾಹಿನಿ ಇರುವದು ಗುರುವಿನ ಸ್ಥಾನ
ದಾವಲಪೀರಾನ ನೆನೆದಾರಲ್ಲಾ ಬಂದ ಬಹುಚಂದ ಅಸಲಾ ||
ಏರು || ಜರದ ಸೇಲಾ ಹೂವಿನ ಮಾಲಾ | ಸದರಿಗೆ ಹಾಕುವೆನಲ್ಲಾ
ಬೇಡಿದ ವರವ ಕೊಡುವನಲ್ಲಾ ಭಕ್ತ ಜನರಿಗೆಲ್ಲಾ
ಬಂದಗಿಸಾಹೇಬ ಪೀರಾ ಕವಿ ಅನಿಸ್ಯಾರ ದೇಶದ ಮ್ಯಾಲಾ
ಜಾಹೀರ ಅವರ ಇರುವತನಕ ನಮಗ ಏನು ಭಯವಿಲ್ಲಾ || ೧೧ ||

* * *