೧೬. ಫಾತಿಮಾ ಕಂಠಿ ಸರ ದಾನ ಮಾಡಿದ ಪದಾ

ಚಿತ್ತಿಟ್ಟ ಕೇಳರಿ ನೀವು ಕುಂತಿರು ದೈವೆಲ್ಲಾ
ಆ ಮೌಲಾನಕ್ಕಿಂತ ಭಕ್ತಿ ಹೆಚ್ಚಿನ ದಿನ್ ಮೌಲಾ
ಏರು || ಬಡವ ಒಬ್ಬ ಕಂಗಾಲಾ | ಭೂದಿ ಹಚ್ಯಾನ ಮೈಯೆಲ್ಲಾ
ಬಾವಾನ ಹಂಗಾ ಜಪಮಣಿ ಹಿಡಿದಾನ ಕೈಯಾಗ
ಶಿವಶಿವ ಅನ್ನುತ ನಡಿದಾನೋ | ಶಿವ ಮಾರ್ಗದ ಮೇಲಾ || ೧ ||

ಮದೀನಾದ ಪ್ಯಾಟಿಯೊಳು ಬಂದು ನಿಂತನಲ್ಲಾ
ಮುಂದಕ್ಕ ಫಾತಿಮಾನ ಮನಿಯು ಕಾಣತಿತ್ರಿ ಖುಲ್ಲಾ ||
ಏರು || ಬಂದು ನಿಂತಾನೊ ಬಾಗಿಲದಾಗ | ಸವ್ವಾಲ ಮಾಡ್ಯಾನೋ ಆಗ
ಖಾತೂನಗ ಕೊಡರೆನ್ನುತ ಭಿಕ್ಷಾ | ಆಸೆಮಾಡಿ ಬಂದೇನಿ ಈಗ
ಹೇಸಿ ಜನ್ಮಕ ಉಣಲಾಕ ಅಸನವೇನಿಲ್ಲಾ || ೨ ||

ಬಾವಾ ಒದರೀದ ಸಲ್ಲಾ | ಕಾತೂನ ಕೇಳ್ಯಾಳಲ್ಲಾ
ಹುಡಿಕ್ಯಾಳೊ ಮನಿಯನೆಲ್ಲಾ | ಏನೇನು ಸಿಗಲೆಲ್ಲಾ
ಚಿಂತಿಯ ಮಾಡುತಲಿ | ನೋಡ್ಯಾಳೋ ಕೊರಳಲ್ಲಿ
ಇತ್ತೊಂದು ಮುತ್ತಿನ ಕಂಠಿಸರಾ ತೆಗೆದುಕೊಟ್ಟಾಳಲ್ಲಾ ||
ಏರು || ಕಂಠಿಯ ಚಲುವಿಕಿ ಮಾಡಿದ್ಹಾಂಗ ಚಂದ್ರನ ಜ್ಯೋತಿ
ಬೆಳಕ ಭೂಮಿಯ ಮ್ಯಾಲಾ | ನೋಡಿ ನಾಚಿತೋ ಮುಗಲೆಲ್ಲಾ ||
ಇಂಥ ರತ್ನದ ಬೆಲೆಯ ಮಾಡುವರ‍್ಯಾರಿಲ್ಲಾ || ೩ ||

ಕಂಠಿಸರ ಬಾವಾ ಕೊರಳಲ್ಲಿ ಹಾಕಿಕೊಂಡನಲ್ಲಾ
ಇಂದಿಗೆ ಬಡತನ ನಂದು ಆದಿತೋ ನಿರ್ಬಯಲಾ
ಏರು || ಬಂದಾನೋ ಓಡಿ ಓಡಿ ಪ್ಯಾಟ್ಯಾಗ ಲಗುಮಾಡಿ
ಕಂಠಿಸರ ಈಗ ಮಾರತೇನಿ | ಇಂದಿಗೆ ಸಾವುಕಾರ ಆಗತೇನಿ
ಮಕ್ಕಳ ಮದುವಿ ಮಾಡಿ ಇರತೇನಿ ರಂಗಲಾಲಾ || ೪ ||

ಬಾವಾನ ಆಕಾರ ಶಿವಗ ತಿಳಿದೀತಲ್ಲಾ
ಸಮುದ್ರಕ ಅಪ್ಪಣೆ ಮಾಡಿ ಅಡ್ಡಗಟ್ಯಾನಲ್ಲಾ
ಏರು || ಬಂದಣ ಆದ ಜಿಬರಾಯಿಲ | ತಿರುವ್ಯಾನೋ ಸಮುದ್ರದ ಕೀಲಾ
ಸಮುದ್ರವು ಆಗ ಹೊರಳುತಲಿ | ಬಾವಾ ಬಂದಾನೋ ದಂಡಿಮ್ಯಾಲಾ
ತಲಿಬಾಗಿಸಿ ಮಾರಿ ತೊಳುವಾಗ ಮಾಲಿ ಬಿದ್ದಿತಲ್ಲಾ || ೫ ||

ಗಾಬರ‍್ಯಾಗಿ ಬಾವಾ ಆಗ ಹುಡುಕಿದ ಲಗುಬ್ಯಾಗ
ಎಷ್ಟು ಹುಡುಕಿದರೂ ಕಂಠಿಸರ ಪತ್ತೆ ಆಗಲಿಲ್ಲಾ
ಏರು || ನೀ ನನ್ನಮಾಲಿ ಮೀನ ಬಂದು ನುಂಗಿತೋ ಹಾಲಿ
ಆದನೊ ಹುಚ್ಚಪ್ಯಾಲಿ ಆಶಾ ನಿರಾಶಾತ್ರಿ ಖಾಲಿ
ಹುಚ್ಚನ ಗತಿ ಬಾವಾ ನೋಡತಾನ್ರಿ ಮುಗಲಾ || ೬ ||

ಬ್ಯಾಟಿಯ ಆಡಾಕ ಒಬ್ಬ ಅಂಬಿಗ ಬಂದಾನಲ್ಲಾ
ಉದ್ದ ನೀರ ನೋಡಿ ಒಗಿದಾನೋ ಅದ ಜಗದ ಮ್ಯಾಲಾ
ಏರು || ನೂಲಿನ ಜಾಲಾ ನೀರಾಗ ಇಳಿದೀತೋ ತೋಲಾ
ಜಾಲದೊಳು ಸೇರಿತೋ ಮೀನಾ | ಬ್ಯಾಟೆಗಾರ ಆದಾನೋ ಖುಷಿಯಾಲಾ
ಮೆಲ್ಲಕ ಎಳತಂದು ಜಾಲಾ | ಒಗದಾನೋ ದಂಡಿಮ್ಯಾಲಾ || ೭ ||

ಮೀನಕ್ಕ ನೋಡಿ ಅಂಬಿಗ | ಆದಾನೋ ಖುಷಿಯಾಲಾ
ಪ್ರೀತೀಲೆ ಬುಟ್ಯಾಗ ತುಂಬಿ | ಅರಬಿ ಮುಟ್ಯಾನ ಮ್ಯಾಲಾ
ಏರು || ಬಂದಾನಲ್ಲಿ ಓಡಿಓಡಿ ಪ್ಯಾಟ್ಯಾಗ ಲಗುಮಾಡಿ
ಮೀನವ ಮಾರುದಕ ಅಲಿಮೌಲಾ ಬಂದಾನೋ ಅದಕ
ಬೆಲಿಮಾಡಿ ಕೊಂಡಾನ ಮೀನಾ | ಮನಿಗೆ ತಂದಾನಲ್ಲಾ || ೮ ||

ಅಂದಾರೋ ಖಾತೂನಗ ಬೇಗನೆ ಅಲಿಮೌಲಾ
ಅಡಗೀಯ ಮಾಡರಿ ನೀವು ತೊಳೆದು ಇದನ್ನು ಅಸಲಾ
ಏರು || ಅಂದಾರೋ ಬಿಸಮಿಲ್ಲಾ ಮೀನಕ್ಕ ತೊಳೆದಾರೊ ಅಸಲಾ
ಕಂಠಿ ಬಂದಿತರಿ ಮ್ಯಾಲಾ ಖಾತೂನ ನೋಡ್ಯಾಳರಿ ಇದನೆಲ್ಲಾ
ಅಂದಾರೋ ನೆನನೆನಸಿ ಶಿವಕೊಟ್ಟ ಮಾಲಿ || ೯ ||

ಬಾಗಲಕೋಟಿ ಪ್ಯಾಟಿ ಇರುವದು ರಂಗಲಾಲಾ
ಹೂವಿನ ಹಚ್ಚಡ ಹೊಚ್ಚಿರಿ ಮಡ್ಡಿಪೀರನ ಮ್ಯಾಲಾ ||
ಭಕ್ತಿಗೆ ಒಲಿದಾರಲ್ಲಾ | ಹುಸೇನಮಿಯಾ ನಮ್ಮ ಮ್ಯಾಲಾ

* * *

೧೭. ಫಾತಿಮಾನ ಬಡತನದ ಲೀಲಾ

ನೀವು ಕೂಡಿರಿ ದೈವವೆಲ್ಲಾ | ಎಷ್ಟು ಆನಂದ ಖುಷಿಯಾಲಾ
ದಯವಿರಲಿ ನಮ್ಮ ಮ್ಯಾಲಾ | ಕೈಯ್ಯ ಮುಗಿದು ಬೇಡುವೆನಲ್ಲಾ ||
ಏರು || ಅಕ್ಕ ತಂಗಿಯರು ಅಣ್ಣ ತಮ್ಮಂದಿರು ಬಂದು ಕೂಡಿರಿ ಪಂಡಿತರು |
ಪ್ರೇಮದಿಂದಾ ಆನಂದದಿಂದಾ | ಕುಂತ ಕೇಳರಿ ಶಾಂತದಿಂದಾ |
ಸಂದ ಒಂದ ಹೇಳುವೆ ಇಂದಾ | ಕವಿ ಮಾಡಿ ಕಟ ಬಂದಾ |
ತಪ್ಪ-ತಡಿ ಆದರ ನೋಡಿ ಮಾಫಿ ಮಾಡಿರಿ ದೈವವೆಲ್ಲಾ || ೧ ||

ಏರು || ಬೀಬಿ ಫಾತಿಮಾ ಕುಂತಾಳಲ್ಲಾ | ಮಕ್ಕಳನು ಹಾಕಿಕೊಂಡು ತೊಡಿಮ್ಯಾಲಾ
ಎರಡು ಬಾಲಾ ಅಳತಾವಲ್ಲಾ | ಮಲಗಿ ತಾಯ ತೊಡಿಮ್ಯಾಲಾ |
ಸಣ್ಣ ಸಣ್ಣ ಕಮಲಾ ಹೊಟ್ಟಿಗೆ ಕೂಳಿಲ್ಲಾ |
ತಾಯಿ ಮುಕಾ ನೋಡಿ ಕಮಲಾ | ಅಳತಾವೊ ಅಳತಿಯಿಲ್ಲಾ || ೨ ||

ಏರು || ಬೀಬಿ ಫಾತಿಮಾ ಅಂತಾಳಲ್ಲಾ | ಅಳಬ್ಯಾಡ್ರೋ ನನ್ನ ಕಮಲಾ
ಮಾಡೂನು ಊಟಾ ಮಾಡಬ್ಯಾಡ್ರಿ ಹಟಾ | ಉಣ್ಣಾಕ ಕೊಡತೇನಿ ಮಾಡಿ ತಾಟಾ
ತಾಯಿ ಮಾತ ಕೇಳಿ ಕಮಲಾ | ಹರುಷಾಗಿ ಮಲಗುವರಲ್ಲಾ
ಮಕ್ಕಳ ನೋಡುತ ನಮಾಜ ಮಾಡುತ ಶಿವಧ್ಯಾನದಲ್ಲಿ ಕುಂಡ್ರುವಳಲ್ಲಾ | ೩ ||

ಏರು || ಎಷ್ಟೋ ಕಷ್ಟಾ ಬಂದರ ಸಹಿತಾ | ನಮಾಜ ಮಾಡುರೊ ಐದು ಹೊತ್ತಾ
ಬೀಸುವ ಕೆಲಸಾ | ಕುಟ್ಟುವ ಕೆಲಸಾ | ದಿನಾ ನಿತ್ಯ ಮಾಡುವ ಕೆಲಸಾ |
ಬೀಸಿ ಬೀಸಿ ಕೈಯಲ್ಲಿ ದಡ್ಡು | ದೊಡ್ಡ ದೊಡ್ಡ ಕೂಲಿಯ ಕೆಲಸಾ |
ಮಾಡುರೊ ದಿವಸಾ | ಕೌದಿ ಹೊಲಿತಿದ್ರೊ ರಾತ್ರಿ ಹಗಲಾ || ೪ ||

ಏರು || ದೀಪಾ ಹಚ್ಚುದಕ ಎಣ್ಣಿ ಮನಿಯಾಗ ಇದ್ದಿದ್ದಿಲ್ಲೊ ಫಾತಿಮಾಗ
ಕತ್ತಲದೊಳಗ ಕುಂಡ್ರುವರೊ ಒಳಗ ಮೂರು ಮೂರು ದಿನಾ |
ಕತ್ತಲಕಾಳಗ | ಅಂಥವರಿಗೆ ಇಂಥಾ ಹೊತ್ತಾ ತಂದಿದ್ನೊ ಭಗವಂತಾ |
ಎಂಥಾ ಹೊತ್ತು ಬಂದರು ಸಹಿತ ಸಾಂಬನ ನೆನಿಸೋರೊ ರಾತ್ರಿ ಹಗಲಾ || ೫ ||

ಏರು || ಉಡತೊಡಲಾಕ ಅರಿಬಿ ಮನಿಯಾಗ ಹೆಚ್ಚಿಗೆ ಏನು ಇರತಿದ್ದಿಲ್ಲಾ |
ತ್ಯಾಪಿಸೀರಿ ಉಡತಿದ್ರೊ ನೋಡ್ರಿ ನಬಿಸಾಹೇಬ್ರ ಪ್ರೇಮದ ಪುತ್ರಿ
ಫಾತಿಮಾಂದು ಕಷ್ಟ ನೋಡಿ ಅಳತಿದ್ರೊ ಶಿವದೂತರು ಕೂಡಿ
ಎಷ್ಟೋ ಕಷ್ಟ ಬಂದರ ಸಹಿತಾ | ದಾನ ಧರ್ಮಾ ಮಾಡುವಳಲ್ಲಾ || ೬ ||

ಏರು || ಊಟ ಮಾಡುದಕ ಪಾತ್ರಿ ಇರ‍್ಲಿಲ್ಲಾ | ಮಣ್ಣಿನ ಪಾತ್ರಿ ಒಳಗ ಉಣ್ಣುವರಲ್ಲಾ |
ಚಾಪಿ ಹುಲ್ಲಿಂದು ಮಾಡದೊಳೊಂದ | ನೋಡಿರಿ ಬಡತನ ಫಾತಿಮಾಂದು
ಬಹಳ ಕಷ್ಟ ಸೋಸ್ಯಾರಲ್ಲಾ | ನಬಿಸಾಹೇಬರ ಪ್ರೇಮದ ಕಮಲಾ |
ಎಷ್ಟು ಬರದರು ತೀರೂದಿಲ್ಲಾ | ಫಾತಿಮಾಂದು ಬಡತನ ಲೀಲಾ || ೭ ||

ಏರು || ಎಷ್ಟು ಕಷ್ಟ ಬಂದರ ಸಹಿತಾ | ಕುಂದರ ಬಾರದೊ ಸಾಂಬನ ಮರತಾ
ನಮಾಜ ರೋಜಾ ಮಾಡೊ ಮನುಜಾ | ಸಿಗತೈತಿ ನಿನಗ ಸ್ವರ್ಗದ ಮಜಾ
ಅಹಂಕಾರ ಚೆಲೊದಲ್ಲಾ ನಾ ಅಂಬುದು ನರಕದ ಫಲಾ |
ಎಷ್ಟೊ ಜನರಾ ಮಾಡಿ ಅಹಂಕಾರಾ | ಹೋಗ್ಯಾರೊ ನರಕದ ಫಲಾ || ೮ ||

ಏರು || ಕವಿ ಕಟಬಂದ ಬರದಾರೋ ಚಂದಾ | ಬಂದಗಿ ಸಾಹೇಬರು ಖುಷಿಲಿಂದಾ
ಅವರ ವರಣಾ ಹೇಳಲಿ ಏನಾ | ತಾಲೂಕದೊಳಗ ಕವಿರತನಾ |
ಹಚ್ಚತಾರೊ ಹೊಸ ಹೊಸ ಚ್ಯಾಲಾ | ಕೇಳಿದವರು ಖುಷಿಯಾಲಾ |
ಅವರಿಗೆ ಶರಣಾ ಮಡುವೆ ನಾನಾ | ಪ್ರೇಮದಿಂದ ಖುಷಿಯಾಲಾ || ೯ ||

* * *

೧೮. ಮಹಮ್ಮದರ ಶಿಷ್ಯರಿಗೆ ಸ್ವರ್ಗ

ಇ || ಪ್ರೇಮದಿಂದ ಬಂದು | ನೀವು ಕೂಡಿರಿ ಏನು ಚಂದಾ ||
ಕೈಮುಗಿದು ಬೇಡುವೆ ಇಂದಾ | ಕಂದಾ |
ಏರು || ಪ್ರೇಮ ಇರಲಿ ನಮ್ಮ ಮೇಲೆ | ಬಂದೇನಿ ನಿಮ್ಮಲಿ
ಹರುಷದಿಂದಲಿ ಹೇಳುವೆ ಇಂದಾ | ಆಖ್ಯಾನ ಒಂದಾ
ಕೇಳರಿ ಕುಂತ ಆನಂದದಿಂದಾ || ೧ ||

ಇ || ಹಸೇನಿ ಹುಸೇನಿ ಸಂದಾ | ಹೇಳುವೆ ನಿಮ್ಮ ಮುಂದಾ
ಮುತ್ತು ರತ್ನಾದಂಥಾ ಕಂದಾ ಚಂದಾ ||
ಏರು || ತೊಟ್ಟಿಲದೊಳಗ ಮಲಗಿದರಲ್ಲಾ | ಮುತ್ತು ರತ್ನಾ ಕೆಚ್ಚಿದಂಥಾ ತೊಟ್ಟಿಲಾ
ಫಾತಿಮಾ ಬಂದು ತೂಗ್ಯಾರೆ ಚಂದಾ | ಜೋಗುಳ ಹಾಡಿ ಆನಂದದಿಂದಾ || ೨ ||

ಇ || ಎಚ್ಚರಾಗಿ ಎದ್ದ ಅಳತಾರೊ ಹಟಾ ತಗದು ರಂಭಸ್ತಾಳ್ರಿ
ಫಾತಿಮಾ ಬಂದಾ ಚಂದಾ ||
ಏರು | ಎಷ್ಟು ತೂಗಿದರು ಕೇಳಲಿಲ್ಲಾ | ಚಿಟ್ಟ ಚಿಟ್ಟ ಚೀರಿ ಅಳತಾನಲ್ಲಾ
ಬಗಲೊಳಗೆ ಎತ್ತಿಕೊಂಡು | ಗಲ್ಲಾ ತುಟಿ ಹಿಡಿದು
ಗಾಬಾಗಿ ಅಳತಾಳ್ರಿ ದುಃಖದಿಂದಾ || ೩ ||

ಇ || ಭೂಮಿ ಆಕಾಶದಿಂದಾ | ಸಪ್ಪಳ ಬಂದಿತೋ ಒಂದಾ
ಹಸೇನ ಹುಸೇನಿ ಅಳತಾರಲ್ಲಾ ಇಂದಾ
ಏರು || ಹಸೇನ ಹುಸೇನಿ ಅಳುವುದು ನೋಡಿ
ಯಮದೂತರೆಲ್ಲರೂ ಅಳತಾರೊ ಕೂಡಿ | ಪರಮಾತ್ಮನ ಹುಕುಮ ಆದೀತೊ ಏಕದಮ್ಮಾ ||
ಯಮದೂರತೆಲ್ಲರೂ ಹೋಗಿರಿ ಇಂದಾ || ೪ ||

ಇ || ಜಿಬ್ರಾಯಿಲ್ ಬಂದಾ ಶಿವಲೋಕದಿಂದಾ |
ಬಂದು ತೊಟ್ಟಿಲು ತೂಗತಾರೊ ಚಂದಾ ಆನಂದಾ ||
ಏರು || ಜಿಬ್ರಾಯಿಲ್ ತೂಗಿದರೂ ಮಲಗಲಿಲ್ಲಾ
ದುಃಖಮಾಡಿ ಅಳತಾವ್ರಿ ಅಳತಿ ಇಲ್ಲಾ
ಜಿಬ್ರಾಯಿಲ ಅಂತಾನ ನಿಮಗ ಬೇಕೇನಾ | ನನ್ನ ಮುಂದ ಹೇಳ್ರಿಕೊಡಿಸುವೆ ಇಂದಾ || ೫ ||

ಇ || ಹಸೇನಿ ಹುಸೇನಿ ಕಂದಾ | ಅಂತಾರೊ ಜಿಬ್ರಾಯಿಲ ಮುಂದಾ
ನಮ್ಮ ಮಾತಾ ಕೇಳು ಇಂದಾ | ಚಂದಾ
ಏರು || ಮಹಮ್ಮದರ ಕಲಮಾ ಓದಿದ ಜನಕ | ಸ್ವರ್ಗದ ಬಾಗಿಲು ಖುಲ್ಲಾ ಕೊಡಬೇಕ
ಅವರದಸಿಂದ ಅಳತೇವು ಇಂದಾ | ವಚನ ಕೊಡಬೇಕು ನಮಗ ಇಂದಾ || ೬ ||

ಇ || ಜಿಬ್ರಾಯಿಲ್ ಅಂದಾ | ಕೇಳುವೆ ಶಿವಗ ಇಂದಾ
ಶಿವಗ ಅರ್ಜಿ ಮಾಡ್ಯಾರೊ ಅಂದಾ ಚಂದಾ |
ಏರು || ಶಿವಲೋಕದಿಂದಾ ಬಂದಿತೊ ಶಬ್ದಾ
ಬೇಡಿದ ವರವ ಕೊಟ್ಟೇನಿ ಇಂದಾ
ಮುಹ್ಮದರ ಶಿಷ್ಯರಿಗೆ ಕೊಡುವೆನು ಸ್ವರ್ಗಾ
ಹಟಾ ಬಿಡರಿ ಇಂದಾ ಪ್ರೇಮದ ಕಂದಾ || ೭ ||

ಇ || ಶಿವಲೋಕದ ಶಬ್ದಾ ಕೇಳಿ ಎರಡು ಕಂದಾ
ಹರುಷಾಗಿ ಮಲಗುವರು ಅಂದಾ | ಆನಂದಾ ||
ಏರು || ಹಸೇನಿ ಹುಸೇನಿ ಮಲಗ್ಯಾರಲ್ಲಾ
ಜಿಬ್ರಾಯಿಲ ಖುಷಿಯಾಗಿ ಹೊರಟಾನಲ್ಲಾ
ಫಾತಿಮಾ ಬಂದು ಹರುಷ ಮನದಿಂದ | ತೊಟ್ಟಿಲ ತೂಗ್ಯಾಳಲ್ರಿ ಆನಂದದಿಂದಾ || ೮ ||

ಇ || ಹಸೇನಿ ಹುಸೇನಿ ಸಂದಾ ಮುಗಿಸಿನಿ ಬಹು ಚಂದಾ
ತಪ್ಪಿದರ ಕ್ಷಮಿಸಿರಿ ನಮಗ ಇಂದಾ
ಏರು || ಬಂದಗಿಸಾಹೇಬ ಕವಿ ಒಳ್ಳೆ ಖುಲ್ಲಾ
ಬಟಕುರ್ಕಿ ಊರಾಗ ಇರತಾರಲ್ಲಾ
ದಾವಲಮಲಿಕನ ನೆನದಾರೊ ಟೀಕ | ದರಗಾಕ ಹೋಗಿ ಬರತೇನಿ ಇಂದಾ ಚಂದಾ || ೯||

* * *

೧೯. ಸಾಂಬನ ಹುಕುಮು

ಚಂದದಿಂದ ಕೂಡಿರಿ ದೈವಾ ಬಂದ ಸಂಪನ್ನಾ
ದ್ಯಾಸ ಇಡರಿ ಇತಿಹಾಸ ಶಾಸ್ತರವನಾ || ಪಲ್ಲ ||

ಇಡಬೇಕ ಖ್ಯಾಲಾ ಮಾಡಬ್ಯಾಡರಿ ಗುಲ್ಲಾ | ತಿಳಿಸುವೆ ಎಲ್ಲಾ
ಮರ್ತ್ಯದೊಳಗ ಬರತಾರ ಹುಸನೈನಾ ||
ಶಾಬಾನಾ ತಿಂಗಳಾ | ಕೇಳಬೇಕೋ ನಿಚ್ಚಳಾ | ಹೇಳತೇನಿ ಝಳಾ ಝಳಾ
ಇಟ್ಟಾಂಗ ಹರಳಾ | ಪೃಥ್ವಿಯಲ್ಲಿ | ನಾಲ್ಕು ತಾರೀಖು ಲೆಕ್ಕ ಬರಿದಾರೋ
ಲೆಕ್ಕ ಶಾಸ್ತರಾ | ದಿವಸಿತ್ತೋ ಐತವಾರಾ |
ಸೃಷ್ಟಿಯೊಳಗ ಹುಟ್ಟಿ ಬಂದಾರೋ | ಘಟ್ಟ ಶರಣರಾ ||
ಹುಸನೈನ ಸಾಹೇಬರಾ | ಬೆಳಕ ಬಿದ್ದೀತ ಎಳತ ಸೂರ‍್ಯನ ಕಿರಣ ||
ಹವಳ ನಿವಳ ಸುರದಾಂಗ ಮುತ್ತುಗಳನಾ || ೧ ||

ಇ || ಸುದ್ದಿಕೇಳಿ ಬುದ್ದಿವಂತ ನಬಿಸಾಹೇಬ ಶರಣಾ | ಬಾಗಿ ತಲೆದೂಗಿ
ನೆನೆದಾರೊ ಸಾಂಬನ್ನ | ಮಿತ್ರರ ಸಂಗ | ಕರಕೊಂಡ ಬ್ಯಾಗ
ನಬಿಸಾಬರು ಆಗ ಸಾಗಿ ಮೌಲಾನ ಮನಿಗೆ ಹೋಗಿ ಕುಂತ್ರಣ್ಣಾ
ಏರು || ಕೂಸಿಗೆ ಎರದಾರೊ | ಎದೆಗ್ಹಚ್ಚಿ ತಂದಾರೊ
ನಬಿಸಾಬ ಶರಣರೊ | ಕಿವಿಯೊಳಗ ಊದ್ಯಾರೊ | ತಗೊಂಡು ಅವರೊ
ತಮ್ಮ ಕೈಯಲ್ಲಿ ಕೇಳ ಮಾತ ಬಂಗ್ವಾತ ಸಲ್ವಾತ ಮಾಡ್ಯಾರೋ ಆಗ ಶರಣರಾ
ನಮ್ಮ ಧರ್ಮ ಹೇಳಿದ ಬ್ರಹ್ಮ ಅದರಂತೆ | ನೇಮ ನಡದಾರೊ |
ನಬಿಸಾಬ ಶರಣರು | ಬ್ಯಾಗ ಗಂಟಲ ಮ್ಯಾಗ |
ಮುದ್ದ ಕೊಟ್ಟರೊ ಶರಣ | ಹುಕುಂ ಆದೀತೊ ಏಕದಮ್ಮ ಜುಬರೀಲನ || ೨ ||

ಇ || ನಡಿಬೇಕ ಇದರ ಸರಿ ಪಡಿಬೇಕ ಜ್ಞಾನ |
ಮರತ ಬಿಟ್ಟಿಂದ ಇದು ವ್ಯರ್ಥ ಜಲ್ಮವನಾ ||
ಕೈಯಾಗ ತಂದ | ಶರಣರ ಮುಂದ | ತಿಳಿಸ್ಯಾರೊ ಬೇಧ
ಘಾಯಾಗುರು | ಮಾಯಾ ಮಾಡಿದಂತ ಜಾಗವನಾ
ಯಜೀದರ ಜನರಾ | ಹಿರದಾರೊ ಹತಿಯಾರಾ
ಕುತ್ತಗಿ ಕರಕರಾ | ಕೊಯ್ದಾರೋ ಒತ್ತರಾ ||
ಹೋಗೂದ ತೆಲಿ ಏನ ಘಾತ ಮಾಡಿದಿ ಮಾತ
ಸಾಂಬ ವ್ಯರ್ಥ ಆದೀತೊ ಕೂಸೇನ ಮಾಡಿತೋ | ಬಾಳ ದುಃಖ ಇಟ್ಟೆಲ್ಲಾ
ಶೋಕ ಸಾವೂತನಕ | ಈ ಮಾತು ಮರೆಲಾರದಾಂಗ ಆತು ||
ಬಂದ ಶರಣರ ಮುಂದ ಮಗಳ ಖಾತೂನ | ಸಣ್ಣ ಆಗೈತಿ ಮಾರಿ ಏನಕಾರಣಾ || ೩ ||

ಮಗಳ ನೀ ಕೇಳ ಬುದ್ಧಿಯುಳ್ಳ ಖಾತೂನಾ | ಏನು ಹೇಳಲಿ ಈಗ ನಾನು ನಿಮ್ಮನ್ನಾ
ಸಾಂಬನ ಹುಕುಮಾ ಆತ ಏಕದಮ್ಮಾ | ಅದೃಷ್ಟ ತಮ್ಮಾ
ಖೊಟ್ಟಿ ಅದರುಷ್ಟ ಆತ ಹುಟ್ಟಿದಾ ಹುಸನೈನಾ |
ಹುಸನೈನ ಮಡದಾನೊ | ಕೈ ಬಿಟ್ಟು ಹೋದಾನೊ | ದೇವಜ್ಞ ಆದಾನೊ |
ಸಾಂಬ್ಹಂಗ ಬರದಾನೊ | ಅದರುಷ್ಟದಲಿ | ಏನ ಘಾತ ಮಾಡಿದಿ ಮಾತ |
ಏ ಭಗವಂತನೆ ಇಂದ | ಕರುಣೆಲ್ಲೆನೊ ನಿಂದ | ಜಗದೀಶ ನನ್ನ
ಕೂಸೇನ ಮಾಡೈತಿ | ನಾಶ ನಿನ್ನದಾ | ಹೇಳಬೇಕ ಯಾರ ಮುಂದಾ
ತಂದೆಯ ಮುಂದ ಹೀಗಂದ ಅಳತಾರೊ ಖಾತೂನಾ
ಧೈರ್ಯ ಹೇಳ್ಯಾರ ನಬಿಸಾಬ ಶರಣಾ || ೪ ||

ಇರಾಕಿಲ್ಲ ನಾವು ನೀವು ಮೌಲಾವಲಿ ಶರಣಾ |
ಮಡದ ಹೋದಿಂದ ಹಿರಿಯಣ್ಣ ಹುಸನೈನಾ
ಇರತಾರೊ ಒಬ್ಬರು ಹುಸನೈನ ಸಾಹೇಬರು ಮಕ್ಕಳು ಹೆಂಗಸರು
ಮೋಸ ಮಾಡ್ಯಾನ ಜಗದೀಶ ಅವರು ಬಿಟ್ಟಾರೊ ವತನಾ | ಹೋದಾರೊ ಹುಸನೈನಾ
ಯಜೀದರ ಜನಾ ಹೊಡದರೊ ಅವರನ್ನ | ಆಗ ರಣದಲ್ಲಿ
ಹಿಂಡವೈರಿಯ ಗಂಡಾ ಬಂದಾನೊ ಮುಹ್ಮದ ಹನೀಫಾ | ನಾ ಹೇಳತೇನಿ ಸಾಪಾ
ಹಿಂಡ ವೈರಿಗೆ ಕಡದ ಆಗ ಯಜೀದರ ದೀಪಾ | ಮಾಡಿ ಬಿಟ್ಟಾರೋ ಲೋಪಾ
ಪಟ್ಟ ಅವರಿಗೆ ಕೊಟ್ಟ | ನಬಿಸಾಬರು ತಿಳಿಸಿ ಹೇಳ್ಯಾರ | ಸರು ಸೋಸಿ ಬಯಾನ || ೫ ||

ಮಾತ ಕೇಳಿ ಆತ ಖುಷಿ ಖಾತೂನನ ಮನಾ | ಹೋಗಿ ಶಿರಬಾಗಿ ನೆನದಾರೊ ಶಿವನ್ನ
ಇದರಂತೆ ಅಕ್ಷರಾ | ತಂದ ಶಾಹೀರಾ | ಆಗೋ ಜಾಹೀರಾ |
ಕೆಟ್ಟ ಗುಣಗಳ ಸರು ಬಿಟ್ಟು ನಡಿರಣ್ಣಾ
ಮನಿಮನಿಗೆ ಒಬ್ಬರಾ | ಆಗ್ಯಾರೊ ಶಾಹೀರಾ
ಜ್ಞಾನವಿಲ್ಲದ ಪಾಮರಾ | ಬೆಳದೀನಿ ಅನ್ನುವರಾ
ತಮ್ಮ ಬಾಯಲಿ ಬೇದ ತಿಳಿಯದೆ | ವಾದ ಹಾಕತಿ ಸ್ವಾದೇನ ಬಲ್ಲಿ | ನೀ ಕಡಿದಾಡಿ ಖಾಲಿ |
ಪ್ಯಾಟಿ ಬಾಗಲಕೋಟಿಯೊಳಗ | ದಸ್ತಗೀರವಲಿ ಅವರ ಪಾದದ ಮ್ಯಾಲಿ
ಕೇಸುದ ರಾಜ ಗೌಸು ನಾಗ್ಯಾಗ | ಹಸ್ತ ತಲಿಯಮ್ಯಾಲೆ | ಇಟ್ಟಾರೋ ಪ್ರೀತೀಲಿ
ಇ || ಬುದ್ದಿ ಕೊಟ್ಟಾನೊ ಸರುವಿದ್ಯೆ ಅವರನಾ | ಮೋಲ ಇಲ್ಲದೆ ಈ ಲಾಲ ಡೋಂಗ್ರಿನಾ || ೬ ||

* * *

೨೦. ಫಾತಿಮಾರ ಮರಣದ ಪದಾ

ಇಂದ್ರ ಸಭಾದಾಗ ಚಂದದಿಂದ ಹೇಳುವೆ ಖುಲ್ಲಾ
ಏರು || ಹಸೇನ ಹುಸೇನ ಇದ್ದಾರೋ ಸಣ್ಣ ಬಾಲಾ
ಶಿವಾ ಮಾಡಿದ ಲೀಲಾ ಕೇಳರಿ ತಪಶೀಲಾ ||
ಇ || ಬೀಬಿ ಫಾತಿಮಾನ ಮರಣಾ ಒದಗಿ ಬಂದಿತಲ್ಲಾ
ಅವರ ಬಾಗಿಲದಾಗ ಬಂದು ಇಳದಾರ ಇಜರಾಯಿಲ್ಲಾ
ಫಾತಿಮಾನ ಕನಸಿನ್ಯಾಗ ಬಂದು ಹೇಳ್ಯಾರಲ್ಲಾ || ೧ ||

ಬರಬೇಕರಿ ಸ್ವರ್ಗಕ ಪ್ರೀತಿಯಿಂದ ಕುಷಿಯಾಲಾ
ಶೇರೆ ಮೌಲಾಗ ಒಪ್ಪಿಸಿ ಎರಡು ಬಾಲಾ
ಏರು || ಆದ್ರೊ ಹುಶಿಯಾರಾ ನೋಡ್ಯಾರ ಯಾರ‍್ಯಾರಿಲ್ಲಾ
ಅದರ ಚಿಂತ್ಯಾಗ ಬೆಳಗ ಆದೀತಲ್ಲಾ
ಇ || ಬೆಳಗಾದ ಮ್ಯಾಲಾ ಹೇಳ್ಯಾರೋ ಅಲಿ ಮೌಲಾನ ಮುಂದಾ
ಸೊಂತ ನಿಮ್ಮ ಕೈಲಿ ಮಣ್ಣ ನಮಗ ಹಾಕಬೇಕಲ್ಲಾ
ವಸ್ತಿ ಮಾಡಬೇಕರಿ ಮೂರು ದಿನಾ ಗೋರಿಯ ಮೇಲಾ || ೨ ||

ಎರಡು ಮಕ್ಕಳ ಕರೆದು ಎರೆದಾರೋ ಪೈಲಾ
ಪೋಷಾಕ ತೊಡಸ್ಯಾರೋ ಹಸೇನ ಹುಸೇನಗ ತಾಸಕಾಲಾ
ಏರು || ಬೆಳಕ ಬಿದ್ದಿತ್ರಿ ಚಂದ್ರನಕ್ಕಿಂತಾ ಮಿಗಿಲಾ
ಅಜ್ಜ ಮುತ್ಯಾನ ಗೋರಿ ಹಂತೇಲಿ ಕಳಿಸ್ಯಾರಿಬ್ಬರಿಗೆ
ಇ || ಗಳ ಗಳ ಅಳವೂತ ಮೌಲಾಗ ಹೇಳ್ಯಾರಲ್ಲಾ
ಎರಡು ಮಕ್ಕಳನ ಸಂಬಾಳಿಸಿ ಇರಬೇಕಲ್ಲಾ || ೩ ||

ಇ || ಇಷ್ಟು ಕೇಳಿ ಮೌಲಾನ ತೊಡಿಮ್ಯಾಲಾ | ಮಗ್ನಳಾಗಿ ಮಲಗ್ಯಾಳಲ್ಲಾ
ಏರು || ಕಲ್ಮಾ ಓದಿ ಜಲ್ಮಾ ಬಿಟ್ಟಾರೋ ಹೋತರಿ ಉಸಲಾ
ತಾಯಿ ಸತ್ತಿದ್ದು ಹಸೇನ ಹುಸೇನಗ ಗೊತ್ತ ಇದ್ದಿಲ್ಲಾ
ಇ || ಆಟದ ಮ್ಯಾಲ ಬಾಳಿತ್ತರಿ ಅವರ ಖ್ಯಾಲಾ
ಅಜ್ಜನ ಗೋರ‍್ಯಾಗಿಂದ ಸಪ್ಪಳ ಬಂತರಿ ಖುಲ್ಲಾ || ೪ ||

ಏರು || ಇಷ್ಟು ಕೇಳಿ ಹಸೇನ್ಹುಸೇನ ಹೊರಳಿ ಧರಣಿಗೆ ಬಿದ್ದರಲ್ಲಾ
ಎದ್ದು ಢಗಾ ಢಗಾ ಹಾದಾರೋ ಗೋರಿಯ ಮೇಲಾ
ಇ || ಓಡಿ ಓಡಿ ಮನಿಗೆ ಬಂದಾರೋ ಜೀವದ ಕಬರಿಲ್ಲಾ
ದುಕ್ಕ ಮಾಡೂತ ಅಳತಾರೋ ಲೆಕ್ಕವಿಲ್ಲಾ || ೫ ||

ಎರಡು ಮಕ್ಕಳನು ಸಂಬಾಳಿಸುವವರು ಯಾರ‍್ಯಾರಿಲ್ಲಾ
ಸ್ವರ್ಗದಿಂದ ಪ್ಯಾಲಾ ತಂದು ಕುಡಿಸ್ಯಾರಿಬ್ಬರಿಗೆ
ಆಗ ಅಳುವುದು ಬಿಟ್ಟು ಸುಮ್ಮನ ಕುಂತಾರಲ್ಲಾ
ಏರು || ಹಸೇನ ಹುಸೇನ ಇವರು ಸಣ್ಣ ಬಾಲಾ
ತಯ್ಯಾರ ಮಾಡ್ಯಾರ ತಾಬೂತ ಹೇರ‍್ಯಾರ ಒಂಟೆಯ ಮೇಲಾ
ಇ || ಕಲ್ಮಾ ಓದೂತ ಕುರಾನ ಓದೂತ ಏನ ಸುದ್ದ ಹೊಂಟಾರಲ್ಲಾ
ಮಣ್ಣ ಆಗೇತ್ರಿ ಆರತಾಸ ರಾತ್ರಿಯ ಮೇಲಾ || ೬ ||

ಇ || ಗೋರಿ ಮ್ಯಾಲೆ ಡೇರೆ ಹೊಡೆದಾರ ಹಜರತ ಅಲಿ ಮೌಲಾ
ಕಲ್ಮಾ ಓದೂತ ಕುರಾನ ಓದೂತ ಮೂರು ದಿನ ಕುಂತಾರಲ್ಲಾ
ಏರು || ಸ್ವರ್ಗದ ದಾರಿ ಫಾತಿಮಾಗ ಸಿಗಲಿಲ್ಲಾ
ಗಂಡನ ಕನಸಿನ್ಯಾಗ ಫಾತಿಮಾ ಬಂದು ಹೇಳ್ಯಾರಲ್ಲಾ
ಇ || ನೆರಮನಿ ಸೂಜಿ ಸಲುವಾಗಿ ಸ್ವರ್ಗ ಸಿಗಲಿಲ್ಲಾ
ಓಡಿ ಓಡಿ ಮನಿಗೆ ಬಂದಾರೋ ಜೀವದ ಕಬರಿಲ್ಲಾ || ೭ ||

ನೆರೆಮನಿ ಸೂಜಿ ತಗದ ಕೊಟ್ಟಾರೋ ತಾಸಕಾಲಾ
ಬೀಬಿ ಫಾತಿಮಾ ಸ್ವರ್ಗಕ್ಕೆ ಹ್ವಾದಾರಲ್ಲಾ
ಏರು || ಧರೆಯೊಳು ಹುಬ್ಬಳ್ಳಿ ಅಸಲಾ | ಹಸೇನಿಹುಸೇನಿ ಪೀರ ಮಿಗಿಲಾ
ಅವರ ದಯಾ ಕರುಣಾ ಇರುವುದು ನಮ್ಮ ಮ್ಯಾಲಾ
ಇ || ಉಸ್ತಾದ ಮೀರಾ ಶಾಹೀರಾ ಹೀಂಗ ಕವಿ ಮಾಡಿ ಹೇಳ್ಯಾರಲ್ಲಾ
ಇಂದ್ರ ಸಭಾದಾಗ ಚಂದದಿಂದ ಹೇಳುವೆ ಖುಲ್ಲಾ
ಹಸೇನ ಹುಸೇನ ಇದ್ದಾರೋ ಸಣ್ಣ ಬಾಲಾ ||

* * *