ಸುಮಾರು ಎರಡು ಸಾವಿರದ ಮುನ್ನೂರು ವರ್ಷಗಳ ಹಿಂದಿನ ಸಂಗತಿ.

ಎರಡು ರಾಜ್ಯಗಳ – ಕಳಿಂಗ, ಮಗಧ.

ಎರಡೂ ಪ್ರಬಲ ರಾಜ್ಯಗಳು. ಎರಡಕ್ಕೂ ಸುಮಾರು ನೂರು ವರ್ಷಗಳ ಕಾಲ ಆಗಾಗ ಯುದ್ಧಗಳು ಸಂಭವಿಸುತ್ತಿದ್ದವು. ಮಗಧದವರು ಮಾಡಿದ್ದ ಅಪಮಾನದ ಲೆಖ್ಖ ತೀರಿಸಲು ಕಾಯುತ್ತಿದ್ದರು ಕಳಿಂಗದವರು. ಮತ್ತೆ ಮಗಧ-ಕಳಿಂಗಗಳಿಗೆ ಯುದ್ಧ ಪ್ರಾರಂಭವಾಗಿತ್ತು.

ಭಾರತದಾಚೆಯಿಂದ ಗ್ರೀಕ್‌ಅರಸನೊಬ್ಬ ಮಗಧದ ಮೇಲೆ ದಂಡೆತ್ತಿ ಬರುತ್ತಿದ್ದಾನೆ ಎಂಬ ಸುದ್ದಿ ಕಳಿಂಗದ ರಾಜನಿಗೆ ಬಂದಿತು.

ತನ್ನ ಶತ್ರುವಿಗೊಬ್ಬ ಹೊಸ ಶತ್ರು! ಈ ಹೊಸ ಶತ್ರು ಮಗಧದ ರಾಜನನ್ನು ಸೋಲಿಸಿದರೆ ತನ್ನ ಹಳೆಯ ಸೇಡು ತೀರಿದಂತೆ! ಒಂದು ನೂರು ವರ್ಷಗಳ ಕೆಳಗೆ ಕಳಿಂಗ ರಾಜ್ಯಕ್ಕೆ ಅಪಮಾನ ಮಾಡಿದ್ದರಲ್ಲವೆ ಮಗಧದವರು, ಈಗ ಅನುಭವಿಸಲಿ!

ಕಳಿಂಗದ ರಾಜ ಹೀಗೆ ಯೋಚಿಸಿ ಸುಮ್ಮನಿದ್ದಿದ್ದರೆ ಸಹಜವಾಗಿರುತ್ತಿತ್ತು. ತನ್ನ ಶತ್ರುವಿಗೆ ಅಪಾಯ ಬಂತು ಎಂದು ಸಂತೋಷಪಟ್ಟಿದ್ದರೆ ಸಹಜವಾಗಿರುತ್ತಿತ್ತು.

ಆದರೆ, ಕಳಿಂಗದ ರಾಜ ಹಾಗೆ ಯೋಚಿಸಲಿಲ್ಲ. ಹೊರಗಿನಿಂದ ಬಂದವನು ಮಗಧ ರಾಜ್ಯಕ್ಕೆ ಮಾತ್ರ ಶತ್ರುವಲ್ಲ, ಅವನು ಬರುತ್ತಿರುವುದು ಕೊಳ್ಳೆ ಹೊಡೆಯುವುದಕ್ಕೆ, ಅವನು ತನಗೂ ಶತ್ರುವೇ ಎಂದು ಯೋಚಿಸಿದ.

ನೂರು ವರ್ಷಗಳಿಂದ ಶತ್ರುಗಳಾಗಿದ್ದ ಕಳಿಂಗ ಮತ್ತು ಮಗಧ ರಾಜ್ಯಗಳು ಕೈಸೇರಿದುವು. ಈ ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯಲು ಬಂದವನು ಓಡಿ ಹೋದ.

ಎರಡು ಸಾವಿರದ ಮುನ್ನೂರು ವರ್ಷಗಳ ಹಿಂದೆ ಆ ಕಳಿಂಗರಾಜ ತೋರಿಸಿದ ವಿವೇಕವನ್ನು ಆನಂತರ ಭಾರತದ ರಾಜರು ತೋರಿಸಿದ್ದರೆ, ಹೊರಗಿನಿಂದ ಮುಸ್ಲಿಮರು, ಇಂಗ್ಲಿಷರು ದಾಳಿ ಇಟ್ಟಾಗ ತಮ್ಮ ತಮ್ಮ ಜಗಳಗಳನ್ನು ಮರೆತಿದ್ದರೆ, ತಾವೆಲ್ಲ ಒಂದು ಎಂದು ಭುಜಕ್ಕೆ ಭುಜ ಸೇರಿಸಿ ಹೋರಾಡಿದ್ದರೆ, ಭಾರತ ಗುಲಾಮಗಿರಿಯಲ್ಲಿ ನರಳ ಬೇಕಾಗುತ್ತಿರಲಿಲ್ಲ. ಅಷ್ಟು ಹಿಂದೆಯೇ ಇಂತಹ ವಿವೇಕವನ್ನು ತೋರಿಸಿದ ರಾಜ ಖಾರವೇಲ.

ಏಕೆ ಜಗಳ?

ಆಗ ನಮ್ಮ ಭಾರತದಲ್ಲಿ ಅಂಗ, ಮಗಧ, ಕಳಿಂಗ, ಶಾತವಾಹನ, ಚೋಳ, ಪಾಂಡ್ಯ, ಉತ್ತರಾಪಥ ಮುಂತಾದ ಅನೇಕ ರಾಜ್ಯಗಳಿದ್ದವು. ಒಂದು ರಾಜ್ಯದ ರಾಜನು ಪ್ರಬಲನಾದರೆ ಇತರ ರಾಜ್ಯಗಳ ಮೇಲೆ ದಾಳಿಮಾಡಿ ತನ್ನ ವಶದಲ್ಲಿ ತರುತ್ತಿದ್ದನು. ಇನ್ನೊಂದು ಪ್ರಬಲವಾದರೆ ಅದರ ರಾಜನು ಮೊದಲನೆಯದನ್ನು ಗೆದ್ದುಕೊಳ್ಳುತ್ತಿದ್ದನು. ಯಾವುದಾದರೊಂದು ರಾಜ್ಯವು ದುರ್ಬಲವಾದರೆ ಅದರ ಮೇಲೆ ಬಾರಿಬಾರಿಯೂ ಆಕ್ರಮಣಗಳಾಗುತ್ತಿದ್ದವು.

ಅದು ನಂದವಂಶದ ರಾಜರು ಮಗಧದಲ್ಲಿ ರಾಜ್ಯವಾಳುತ್ತಿದ್ದ ಕಾಲ. ಪ್ರಬಲವಾದ ನಂದರು ಮಗಧದ ದಕ್ಷಿಣಕ್ಕಿದ್ದ ಕಳಿಂಗ ರಾಜ್ಯದ ಮೇಲೆ ದಾಳಿ ಮಾಡಿದರು. ಯುದ್ಧದಲ್ಲಿ ಕಳಿಂಗದ ಅರಸನು ಸೋತ. ಮಗಧರಾಜನಿಗೆ ಕಪ್ಪಕಾಣಿಕೆಗಳನ್ನು ಸಲ್ಲಿಸಿದ.

ಅಷ್ಟರಿಂದ ಮಗಧರಾಜನಿಗೆ ಸಮಾಧಾನವಾಗಲಿಲ್ಲ.

ಕಳಿಂಗದಲ್ಲಿ ಶೀತಲನಾಥ ಜಿನನ ವಿಗ್ರಹ ಒಂದಿತ್ತು. ಕಳಿಂಗದವರಿಗೆ ಈ ವಿಗ್ರಹ ಬಹು ಪೂಜ್ಯವಾಗಿತ್ತು. ಮಗಧದ ರಾಜ ಈ ವಿಗ್ರಹವನ್ನು ತೆಗೆದುಕೊಂಡು ಹೋದ. ಇದರಿಂದ ಇಡೀ ಕಳಿಂಗಕ್ಕೆ ಮಹಾ ಅಪಮಾನವಾಯಿತು. ಆದರೆ ದುರ್ಬಲ ಕಳಿಂಗರು ಈ ಅಪಮಾನವನ್ನು ನುಂಗಿ ತೆಪ್ಪಗಿರಬೇಕಾಯಿತು. ಮತ್ತೇನೂ ತಾನೆ ಮಾಡಬಲ್ಲರು?

ಅಶೋಕ – ಕಳಿಂಗ

ಅನಂತರ ಮಗಧ ರಾಜ್ಯದಲ್ಲಿ ದೊಡ್ಡ ಬದಲಾವಣೆಯಾಯಿತು. ನಂದರ ಆಳ್ವಿಕೆ ಮುಗಿಯಿತು. ಚಂದ್ರಗುಪ್ತ ಮೌರ್ಯ ಎಂಬಾತನ ಆಳ್ವಿಕೆ ಪ್ರಾರಂಭವಾಯಿತು. ಈ ಕಾಲದಲ್ಲಿ ಕಳಿಂಗ ರಾಜ್ಯ ಸ್ವತಂತ್ರವಾಯಿತು. ತನ್ನ ಶಕ್ತಿಯನ್ನು ಮಗಧರಿಗೂ ತೋರಿಸತೊಡಗಿತು. ಚಂದ್ರಗುಪ್ತನ ಅನಂತರ ಅವನ ಮಗ ಬಿಂದುಸಾರನು ಪಟ್ಟಕ್ಕೆ ಬಂದ. ಬಿಂದುಸಾರನ ಮಗನೇ ಇತಿಹಾಸ ಪ್ರಸಿದ್ಧ ಅಶೋಕ ಚಕ್ರವರ್ತಿ.

ಆಗಲೇ ಅಶೋಕನ ರಾಜ್ಯ ವಿಸ್ತಾರವಾಗಿತ್ತು. ಅದರ ದಕ್ಷಿಣದಲ್ಲಿದ್ದ ಕಳಿಂಗ ರಾಜ್ಯ ಸ್ವತಂತ್ರವಾಗಿ ಉಳಿದಿತ್ತು. ಇದು ಅಶೋಕನಿಗೆ ಸಹನೆಯಾಗಲಿಲ್ಲ. ಅವನು ರಾಜನಾದ ಮೇಲೆ ಎಂಟನೆಯ ವರ್ಷದಲ್ಲಿ ಕಳಿಂಗ ರಾಜ್ಯವನ್ನು ಪುನಃ ವಶಪಡಿಸಿಕೊಳ್ಳಲು ನಿಶ್ಚಯಿಸಿದ. ಅಷ್ಟೇ ಅಲ್ಲ, ಮುಂದೆ ಎಂದಿಗೂ ತಲೆ ಎತ್ತಲಾರದಂತಹ ಹೊಡೆತವನ್ನು ಕಳಿಂಗರಿಗೆ ಕೊಡಲು ಅವನು ಬಹು ದೊಡ್ಡ ಸೈನ್ಯವನ್ನು ತೆಗೆದುಕೊಂಡು ಕಳಿಂಗದ ಮೇಲೆ ಏರಿಹೋದ.

ಅಶೋಕನ ಮಗಧ ಚಕ್ರಾಧಿಪತ್ಯದ ಜೊತೆಗೆ ಹೋಲಿಸಿದರೆ ಕಳಿಂಗ ಪುಟ್ಟ ರಾಜ್ಯವೇ. ಆದರೆ ಕಳಿಂಗದವರು ಸ್ವಾಭಿಮಾನಿಗಳು, ಸ್ವಾತಂತ್ರ್ಯಪ್ರಿಯರು. ತಮ್ಮ ಸ್ವಾತಂತ್ರ್ಯಕ್ಕಾಗಿ ಅಶೋಕನ ಮಹಾಸೈನ್ಯದ ವಿರುದ್ಧ ವೀರಾವೇಶದಿಂದ ಹೋರಾಡಿದರು. ಯಶ ಮಾತ್ರ ಸಿಗಲಿಲ್ಲ, ಕಳಿಂಗ ಸೋತಿತು, ಮತ್ತೆ ಮಗಧದ ಸಾಮಂತ ರಾಜ್ಯವಾಯಿತು.

ಈ ಘೋರ ಯುದ್ಧವನ್ನು ಅಶೋಕನ ಒಂದು ಶಿಲಾಶಾಸನ ವರ್ಣಿಸುತ್ತದೆ. (ಅಶೋಕನು ತಾನು ಪ್ರಜೆಗಳಿಗೆ ಹೇಳಬೇಕು ಎಂದಿದ್ದುದನ್ನು ಕಲ್ಲಿನ ಮೇಲೆ ಕೆತ್ತಿಸಿ ನೆಡಿಸಿದ. ಈ ಶಿಲಾಶಾಸನಗಳು ಕಾಶ್ಮೀರ, ನೇಪಾಳ, ಕರ್ನಾಟಕ – ಇಂತಹ ದೂರದೂರದ ಪ್ರದೇಶಗಳಲ್ಲಿ ದೊರೆತಿವೆ.) ಈ ಶಿಲಾಶಾಸನ ಹೇಳುತ್ತದೆ:

“ರಾಜನಾಗಿ ಪಟ್ಟಾಭಿಷೇಕವಾಗಿ ಎಂಟು ವರ್ಷಗಳಾದಾಗ “ದೇವನಾಂಪ್ರಿಯ” (ದೇವತೆಗಳ ಪ್ರೀತಿ ಪಡೆದವನು) ಅಶೋಕನು ಕಳಿಂಗವನ್ನು ಜಯಿಸಿದ. ಒಂದೂವರೆ ಲಕ್ಷ ಜನರನ್ನು ಅಲ್ಲಿಂದ ಸೆರೆಹಿಡಿದು ಕರೆದೊಯ್ದ. ಒಂದು ಲಕ್ಷ ಜನ ಅಲ್ಲಿ ಸತ್ತರು. ಅನಂತರ ಗಾಯಗಳಿಂದ ಸತ್ತವರು ಇನ್ನೆಷ್ಟೋ!”

ಕಳಿಂಗದ ಯುದ್ಧವನ್ನು ಅಶೋಕ ಕಣ್ಣಾರೆ ನೋಡಿದ. ರಕ್ತದ ಹೊಳೆ ಹರಿದದ್ದನ್ನು ಕಂಡ. ಯುದ್ಧಭೂಮಿ ಅಸಂಖ್ಯ ಮನುಷ್ಯರ, ಪಶುಗಳ, ಹೆಣಗಳ ರಾಶಿಯಾದದ್ದನ್ನು ನೋಡಿದ. ಗಾಯಗೊಂಡವರ, ಸಾಯುತ್ತಿರುವವರ ನೋವಿನ ಚೀರಾಟ ಕೇಳಿದ. ಪ್ರಾಣಿಗಳ ಸಂಕಟ, ಸಾವು ಕಂಡ. ಅವನ ಹೃದಯ ಕರಗಿತು. “ಮತ್ತೆ ಯುದ್ಧ ಮಾಡುವುದಿಲ್ಲ” ಎಂದು ತೀರ್ಮಾನ ಮಾಡಿದ. ಅಹಿಂಸೆಯನ್ನು ಬೋಧಿಸುವ ಬೌದ್ಧಮತವನ್ನು ಸೇರಿದ. ಅಂತೂ, ಮತ್ತೆ ಕಳಿಂಗ ಸ್ವಾತಂತ್ರ್ಯ ಕಳೆದುಕೊಂಡಿತು.

ಮತ್ತೆ ಸ್ವತಂತ್ರ

ಸಾಮ್ರಾಟ ಅಶೋಕನ ಮರಣದ ತರುವಾಯ ಮಗಧ ರಾಜ್ಯದಲ್ಲಿ ಅವ್ಯವಸ್ಥೆ ತಲೆದೋರಿತು. ಅಶೋಕನ ಮಕ್ಕಳು-ಮೊಮ್ಮಕ್ಕಳಲ್ಲಿ ಜಗಳವಾಯಿತು.

ಈ ರೀತಿಯ ಪರಸ್ಪರ ಕಲಹದಿಂದ ಮೌರ್ಯರಾಜರ ಪ್ರಭಾವ ಕಡಿಮೆಯಾಯಿತು. ಅದರ ಪರಿಣಾಮ ಏನಾಯಿತೆಂದರೆ, ಅಲ್ಲಲ್ಲಿ ಅಶೋಕನು ಆಡಳಿತಗಾರರೆಂದು ನೇಮಿಸಿದ ಸರದಾರರು ತಾವೂ ರಾಜರೆಂದು ಘೋಷಿಸಿಕೊಂಡು ತಮ್ಮ ತಮ್ಮ ಸ್ವತಂತ್ರ ರಾಜ್ಯವನ್ನು ಸ್ಥಾಪಿಸಿದರು.

ಕಳಿಂಗ ರಾಜ್ಯವನ್ನು ಗೆದ್ದ ಬಳಿಕ ಅಲ್ಲಿ ಅಶೋಕನು ಚೇದಿದೇಶ (ಈಗಿನ ಬುಂದೇಲಖಂಡ)ದ ಸರದಾರನೊಬ್ಬನನ್ನು ಸ್ವಾತಂತ್ರ ರಾಜನಾಗಿ ಕಳಿಂಗದಲ್ಲಿ ಚೇದಿವಂಶದ ಆಳ್ವಿಕೆಯನ್ನು ಪ್ರಾರಂಭಿಸಿದನು. ಈ ಸರದಾರನ ಮಗ ಮಹಾಮೇಘವಾಹನ.

ಮಹಾಮೇಘವಾಹನನ ಕಾಲದಲ್ಲಿ ಕಳಿಂಗದ ಜನರು ಮಹಾಸಂಕಟಕ್ಕೆ ತುತ್ತಾಗಬೇಕಾಯಿತು. ಇದಕ್ಕೆ ಕಾರಣ ರಾಜನಲ್ಲ, ನಿಸರ್ಗ. ಅದು ಆ ರಾಜ್ಯದ ಮೇಲೆ ತನ್ನ ಕೋಪ ತೋರಿಸಿತು. ಜೋರಾಗಿ ಬಿರುಗಾಳಿ ಬೀಸತೊಡಗಿತು. ಜನರ ಮನೆಗಳೆಲ್ಲ ನೆಲಸಮವಾದವು. ರಾಜಧಾನಿ ಕಳಿಂಗಪಟ್ಟದ ಕೋಟೆಯ ಗೋಡೆಗಳೆಲ್ಲ ಬಿದ್ದುಹೋದವು. ಮಹಾದ್ವಾರ ನಾಶವಾಯಿತು. ಕೆರೆ ಸರೋವರಗಳ ಕಟ್ಟೆಗಳು ಒಡೆದವು. ಪಟ್ಟಣಕ್ಕೆ ನೀರು ಪೂರೈಸುವ ಕಾಲುವೆಗೆ ಬಿರುಕು ಬಿದ್ದ ಪ್ರಜೆಗಳಲ್ಲಿ ಹಾಹಾಕಾರವೆದ್ದಿತು.

ಇಂಥ ದುರವಸ್ಥೆಯಿಂದ ಪಾರಾಗುವುದು ಹೇಗೆ ಸಾಧ್ಯವಾದೀತು? ಎಂಬ ಪ್ರಶ್ನೆ ಪ್ರಜೆಗಳನ್ನು ಕಾಡುತ್ತಿತ್ತು. ಗಾಯದ ಮೇಲೆ ಬರೆ ಎಳೆದಂತೆ ದಕ್ಷಿಣದಲ್ಲಿದ್ದ ದ್ರಾವಿಡ?! ರಾಜರು ಒಂದುಗೂಡಿ ಆಗಾಗ ಕಳಿಂಗರಿಗೆ ಕಿರುಕುಳ ಕೊಡುವುದಂತೂ ನಡೆದೇ ಇತ್ತು. ಮಗಧ ರಾಜ್ಯವು ಬಲಶಾಲಿಯಾಗಿದ್ದಾಗ ಕೇವಲ ತಮ್ಮನ್ನು ರಕ್ಷಿಸಿಕೊಳ್ಳಲು ದ್ರಾವಿಡರಾಜರು ಒಕ್ಕೂಟವನ್ನು ಸ್ಥಾಪಿಸಿಕೊಂಡಿದ್ದರು. ಆದರೆ ಕಾಲಕ್ರಮೇಣ ಅವರು ಪರಪೀಡೆಯಲ್ಲಿಯೂ ತೊಡಗಿದರು. ಅವರ ಉತ್ತರಕ್ಕಿದ್ದ ಕಳಿಂಗರಿಗೆ ಅವರು ಯಾವಾಗಲೂ ಉಪಟಳ ಕೊಡುತ್ತಿದ್ದರು. ಹೀಗಾಗಿ ಕಳಿಂಗ ರಾಜ್ಯದ ಪ್ರಜೆಗಳು ಕಂಗಾಲಾಗಿ ಅಸಹಾಯಕತೆಯಿಂದ ದೀನರಾಗಿ ಹೇಗೋ ಜೀವಿಸುತ್ತಿದ್ದರು. ಬದುಕುವುದಕ್ಕಿಂತ ಸಾಯುವುದೇ ಮೇಲೆಂದು ಅವರಿಗೆ ಅನಿಸಿದ್ದರೆ ಆಶ್ಚರ್ಯವಿಲ್ಲ.

ರಾಜಕುಮಾರ-ರಾಜ್ಯದ ಹೊಸ ಭರವಸೆ

ಆಗ ಮಹಾಮೇಘ ವಾಹನನಿಗೆ ಪುತ್ರ ಜನ್ಮವಾದ ಸುದ್ದಿ ರಾಜ್ಯದಲ್ಲಿ ಹಬ್ಬಿತು. ಅದು ಕ್ರಿಸ್ತಪೂರ್ವ 209ನೇ ವರ್ಷ. ಅವನು ಹುಟ್ಟಿದ ಗಳಿಗೆ ಶುಭಗಳಿಗೆಯಾಗಿತ್ತು. ಆ ಶುಭಲಕ್ಷಣದಿಂದ ಪ್ರಜೆಗಳಿಗೆ ಸ್ವಲ್ಪ ಸಮಾಧಾನವಾಯಿತು. ಅರಮನೆಯಲ್ಲಿ ಮಗು ಹುಟ್ಟಿದರೆ, ಭವಿಷ್ಯ ಹೇಳುವವರನ್ನು ಕರೆಸಿ ಅವರ ಅಭಿಪ್ರಾಯವನ್ನು ಕೇಳುವುದು ಆಗಿನ ಪದ್ಧತಿ. ಇವರು ಮಗು ಹುಟ್ಟಿದ ಗಳಿಗೆ, ಅದರ ದೇಹದ ಲಕ್ಷಣಗಳು ಇವೆಲ್ಲವನ್ನು ನೋಡಿ, ಮುಂದೆ ಮಗು ಹೇಗೆ ಬಾಳುತ್ತದೆ ಎಂಬುದನ್ನು ಹೇಳಬಲ್ಲರು ಎಂದು ಜನರ ನಂಬಿಕೆ. ಮಹಾಮೇಘವಾಹನನಿಗೆ ಮಗ ಹುಟ್ಟುತ್ತಲೇ ಈ ವಿದ್ವಾಂಸರಿಗೆ ಕರೆ ಹೋಯಿತು. ಅವರ ಅರಮನೆಗೆ ಬಂದರು; ಶಿಶುವಿನ ಮೈಮೇಲಿನ ಶುಭಚಿಹ್ನೆಗಳನ್ನು ನೋಡಿದರೆ. ಅವರಲ್ಲಿ ಆನಂದದ ಬುಗ್ಗೆ ಪುಟಿಯಿತು. ಕಂದಿಹೋದ ಅವರ ಕಣ್ಣುಗಳನ್ನು ರಾಜಕುಮಾರನ ತೇಜಸ್ಸು ಅರಳಿಸಿತು. ಹೊಳಪನ್ನು ನೀಡಿತು. ಅವರೆಂದರು:

“ನಮ್ಮ ರಾಜಕುಮಾರನು ತಾನು ಹುಟ್ಟಿದ ಚೇದಿವಂಶಕ್ಕೆ ಕೀರ್ತಿ ತರುವನು. ಪುರಾಣಪ್ರಸಿದ್ಧ ರಾಜರ್ಷಿ ವಸುವಿನಂತೆ ಧರ್ಮಿಷ್ಠನಾಗುವನು; ಮಹಾಪರಾಕ್ರಮಿಯಾಗಿ ದಿಗ್ವಿಜಯ ಮಾಡುವನು. ಕಳಿಂಗಕ್ಕೆ ಒಳ್ಳೆಯ ದಿನಗಳು ಬೇಗನೆ ಬರುವವು”

ಈ ಸುದ್ದಿ ಕೇಳಿ ಪ್ರಜೆಗಳು ಆನಂದದಿಂದ ಕುಣಿಯತೊಡಿಗಿದರು. ರಾಜಕುಮಾರನು ದೀರ್ಘಾಯುವಾಗಲೆಂದು ಪ್ರಾರ್ಥಿಸತೊಡಗಿದರು.

ಬಾಲಕ ಖಾರವೇಲ

ರಾಜಕುಮಾರನಿಗೆ “ಖಾರವೇಲ” ಎಂಬ ಹೆಸರಿಡಲಾಯಿತು. ಬಾಲ್ಯದಲ್ಲಿಯೇ ಅವನ ಸಾಮರ್ಥ್ಯ ಪ್ರಕಟವಾಗತೊಡಗಿತು. ಎಲ್ಲ ಆಟಗಳಲ್ಲಿ ಅವನೇ ಮುಂದೆ. ಅವನೇ ಶ್ರೇಷ್ಠ. ಅವನ ಸದ್ಗುಣಗಳ ಕೀರ್ತಿ ನಾಲ್ಕೂ ದಿಕ್ಕಿನಲ್ಲಿ ಪಸರಿಸಿತು. ಅವನದು ಕಂದು ಬಣ್ಣದ ಶರೀರ. ಆರೋಗ್ಯದಿಂದ ತುಂಬಿ ತುಳುಕುವ ಅವನ ಶರೀರ ಆಕರ್ಷಕವಾಗಿತ್ತು.

ರಾಜಪುತ್ರನ ಲೀಲೆಗಳನ್ನು ಕಂಡು ಮಹಾಮೇಘವಾಹನನಿಗೆ ಬಹಳ ಆನಂದವಾಯಿತು. ಅವನ ಕಾಲದಲ್ಲಿ ಕಳಿಂಗ ರಾಜ್ಯವೇನೊ ಸ್ವತಂತ್ರವಾಗಿಯೇ ಇತ್ತು. ಆದರೆ ಪ್ರಜೆಗಳ ಜೀವನವನ್ನು ಸುಖಮಯ ಮಾಡಲು ಅವನಿಗೆ ಸಾಧ್ಯವಾಗಿರಲಿಲ್ಲ. ಬಿರುಗಾಳಿಯಿಂದಾದ ಸರ್ವನಾಶದಿಂದ ಜನರು ನಿರ್ಜೀವರಾಗಿದ್ದರು. ಅಶೋಕನು ನೀಡಿದ ಬಲವಾದ ಹೊಡೆತದ ಪರಿಣಾಮವಾಗಿ ಅವರಲ್ಲಿ ಮೊದಲಿನ ಹೋರಾಡುವ ಕೆಚ್ಚು ಹೋಗಿಬಿಟ್ಟಿತ್ತು. ಹೊರಗಿನ ಶತ್ರುಗಳೊಡನೆ ಹೋರಾಡಬಲ್ಲವೆಂಬ ಆತ್ಮವಿಶ್ವಾಸವೂ ಇರಲಿಲ್ಲ. ಪ್ರಜೆಗಳ ದುಃಸ್ಥಿತಿ ನೋಡುತ್ತಿದ್ದ ಮಹಾಮೇಘವಾಹನನಿಗೆ ಕಡುದುಃಖವಾಗುತ್ತಿತ್ತು. ಆ ಹೀನ ಸ್ಥಿತಿಯಿಂದ ಕಳಿಂಗ ರಾಜ್ಯವನ್ನು ಉದ್ಧರಿಸಲು ಪರಮಾತ್ಮನ ಕೃಪೆಯಿಂದಲೇ ಇಂಥ ತೇಜಸ್ವಿ ರಾಜಕುಮಾರನ ಜನ್ಮವಾಗಿದೆ ಎಂದು ಅವನು ನಂಬಿದನು ಮತ್ತು ರಾಜಕುಮಾರನಿಗೆ ಯೋಗ್ಯ ಶಿಕ್ಷಣ ನೀಡತೊಡಗಿದನು. ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಮುಂತಾದವುಗಳನ್ನು ಕಲಿಸಲು ವಿದ್ವಾಂಸರನ್ನು ನೇಮಿಸಿದನು. ಶಸ್ತ್ರವಿದ್ಯೆಯನ್ನು ಕಲಿಸಲು ನಿಪುಣ ಗುರುಗಳನ್ನು ನೇಮಿಸಿದನು. ದೊಡ್ಡವನಾದಂತೆ ಬೇರೆ ಬೇರೆ ಶಸ್ತ್ರಗಳ ಅಭ್ಯಾಸವೇ ಖಾರವೇಲನ ಆಟವಾಯಿತು. ಪಾಠವಾಯಿತು. ಆರೋಗ್ಯವಂತ, ಪುಷ್ಟ ಶರೀರದವನು, ಲವಲವಿಕೆ ತುಂಬಿದ ಸ್ವಭಾವ, ಶಸ್ತ್ರಾಸ್ತ್ರಗಳ ಅಭ್ಯಾಸದಲ್ಲಿ ಮಹಾಉತ್ಸಾಹ. ಕೆಲವೇ ವರ್ಷಗಳಲ್ಲಿ ಖಾರವೇಲ ವೀರಯೋಧ ಎನಿಸಿಕೊಂಡ. ಒಳ್ಳೆಯ ಶಿಷ್ಯನು ದೊರಕಿದನೆಂದು ಗುರುಗಳೂ ಸಂತೋಷಪಟ್ಟರು.

ಖಾರವೇಲನು ಪೌರುಷಸಂಪನ್ನನಾಗಿ ಬೆಳೆಯ ತೊಡಗಿದಂತೆ ಪ್ರಜೆಗಳ ಮೋರೆಗಳು ಅರಳತೊಡಗಿದವು. ರಾಜಕುಮಾರನ ನೇತೃತ್ವದಲ್ಲಿ ತಮ್ಮ ರಾಜ್ಯದ ಉನ್ನತಿ ಸಾಧಿಸಲು ಅವರು ಸಂಕಲ್ಪ ಮಾಡಿದರು. ಒಂದು ಒಳ್ಳೆಯ ಮುಹೂರ್ತವನ್ನು ನೋಡಿ ಮಹಾಮೇಘವಾಹನನು ಖಾರವೇಲನನ್ನು ಯುವರಾಜನನ್ನಾಗಿ ಮಾಡಿದನು. ರಾಜ್ಯದ ಆಡಳಿತದಲ್ಲಿ ಖಾರವೇಲನೂ ಪಾಲುಗಾರನಾದನು. ಆಗ ಅವನ ವಯಸ್ಸು ಹದಿನೈದು ಮುಗಿದು ಹದಿನಾರು. ಒಂಬತ್ತು ವರುಷಗಳವರೆಗೆ ಖಾರವೇಲನು ಯುವರಾಜನಾಗಿದ್ದನು. ಮಹಾಮೇಘ ವಾಹನನ ಮರಣದನಂತರ ಪಟ್ಟವೇರಿದನು.

ಮಹಾರಾಜ ಖಾರವೇಲ

ಪಟ್ಟವೇರಿದ ಖಾರವೇಲನು ಅನೇಕ ಕಾರ್ಯಗಳನ್ನು ಮಾಡಬೇಕಾಗಿತ್ತು. ಬಿರುಗಾಳಿಯಿಂದ ನೆಲಸಮವಾದ ಕೋಟೆಯನ್ನು ಸರಿಪಡಿಸಬೇಕಾಗಿತ್ತು. ಪ್ರಜೆಗಳನ್ನು ಹುರಿದುಂಬಿಸಿ ಸೈನ್ಯ ಕಟ್ಟಿ ತನ್ನ ಪರಾಕ್ರಮವನ್ನು ನಾಲ್ಕು ದಿಕ್ಕುಗಳಲ್ಲಿ ತೋರಿಸಬೇಕಾಗಿತ್ತು. ಕಳಿಂಗದವರಿಗೆ ಬಹು ಪವಿತ್ರವಾಗಿದ್ದ ಶೀತಲನಾಥಮೂರ್ತಿಯ ವಿಗ್ರಹ, ಅವರ ಭಕ್ತಿಯ ಕೇಂದ್ರವಾಗಿದ್ದ ಶೀತಲನಾಥಮೂರ್ತಿಯ ವಿಗ್ರಹ ಇನ್ನೂ ಮುಗಧದಲ್ಲಿಯೇ ಇತ್ತು. ಅದು ಹಿಂದಕ್ಕೆ ಕಳಿಂಗಕ್ಕೆ ಬಂದಿಲ್ಲ. ತಮ್ಮ ಆತ್ಮಗೌರವವೇ ಹಿಂದಕ್ಕೆ ಬಂದಿಲ್ಲ ಎನ್ನಿಸುತ್ತಿತ್ತು ಕಳಿಂಗದವರಿಗೆ. ಆದುದರಿಂದ ಮುಗಧದಿಂದ ಶೀತಲನಾಥಮೂರ್ತಿಯ ವಿಗ್ರಹವನ್ನು ಹಿಂದಕ್ಕೆ ಪಡೆಯಬೇಕಾಗಿತ್ತು. ಖಾರವೇಲನೂ ಕಳಿಂಗದ ಅನೇಕ ಮಂದಿ ಪ್ರಜೆಗಳೂ ಜೈನರು. ಆದರೆ ಜೈನಮತ ಆಗ ಕಷ್ಟದ ಸ್ಥಿತಿಯಲ್ಲಿತ್ತು. ಆ ಮತಕ್ಕೆ ಮತ್ತೆ ಶಕ್ತಿಯನ್ನು ತಂದುಕೊಡಬೇಕಾಗಿತ್ತು.

ಹೊಸ ಯುಗದತ್ತ

ತನ್ನ ಆಡಳಿತದ ಮೊದಲನೆಯ ವರ್ಷದಲ್ಲಿಯೇ ಖಾರವೇಲನು ಕೋಟೆಯ ಗೋಡೆಗಳನ್ನು ಸರಿಪಡಿಸುವ ಕೆಲಸವನ್ನು ಕೈಗೊಂಡನು. ಪಟ್ಟಣ ಭದ್ರವಾಗಿರಬೇಕು, ಸಮೃದ್ಧವಾಗಿರಬೇಕು, ಸುಂದರವಾಗಿರಬೇಕು – ಇದು ಹೊಸ ರಾಜನ ದೃಢನಿಶ್ಚಯ. ಕೆಲವೇ ತಿಂಗಳುಗಳಲ್ಲಿ ಭದ್ರವಾದ ಕೋಟೆಯು ಕಳಿಂಗಪಟ್ಟವನ್ನು ಕಾಯತೊಡಗಿತು. ಮನೆ, ಮಂದಿರಗಳು ಬಿದ್ದುಹೋಗಿದ್ದವು. ಅವುಗಳೆಲ್ಲ ಮೇಲೇಳಬೇಕು. ಕೆರೆ-ಸರೋವರಗಳನ್ನು ಪುನಃ ಕಟ್ಟಬೇಕು. ಹಾಳು ಬಿದ್ದ ಉದ್ಯಾನಗಳಲ್ಲಿ ಹಸಿರು ತುಂಬಬೇಕು.

ಇಷ್ಟೆಲ್ಲ ಕೆಲಸ ನಡೆಯುವುದೆಂದರೆ ಸುಲಭವಲ್ಲ. ಹಣ ಬೇಕು. ಅದೂ ಹಲವಾರು ವರ್ಷಗಳಿಂದ ಕಷ್ಟದ ಸ್ಥಿತಿಯಲ್ಲಿದ್ದ ರಾಜ್ಯದಲ್ಲಿ ಆಗಬೇಕಾಗಿದ್ದ ಕೆಲಸಗಳು ಒಂದೇ, ಎರಡೆ? ಶತ್ರುಗಳೂ, ಬಿರುಗಾಳಿಯೂ ವರ್ಷ ಗಟ್ಟಲೆ ಮಾಡಿದ್ದ ಹಾವಳಿಯಿಂದ ರಾಜ್ಯ ಚೇತರಿಕೊಳ್ಳಬೇಕಲ್ಲ!

ಬೇಕಾದಷ್ಟು ಹಣ ಖರ್ಚಾಯಿತು. ಕೋಟೆ ಭದ್ರವಾಯಿತು. ಕರೆ-ಸರೋವರಗಳು ನೀರಿನಿಂದ ತುಂಬಿದವು. ಉದ್ಯಾನವನಗಳು ಮತ್ತೆ ಹಸಿರು ಹುಲ್ಲಿನಿಂದ, ಬಗೆ ಬಗೆಯ ಗಿಡಮರಗಳಿಂದ, ಬಣ್ಣ ಬಣ್ಣದ ಹೂವುಗಳಿಂದ, ವಿಧವಿಧ ಹಣ್ಣು ಕಾಯಿಗಳಿಂದ ಬೆಳಗಿದವು.

ಆದರೆ ಖಾರವೇಲ ಪ್ರಜೆಗಳಿಂದ ಒಂದು ಕಾಸು ಹಣವನ್ನೂ ಇದಕ್ಕಾಗಿ ವಸೂಲು ಮಾಡಲಿಲ್ಲ. ರಾಜ್ಯವನ್ನು ಮತ್ತೆ ಕಟ್ಟಲು ಹಣ ಬೇಕೆಂದು ಅವನು ತೆರಿಗೆ ವಿಧಿಸಿದ್ದರೆ ತಪ್ಪಾಗುತ್ತಿರಲಿಲ್ಲ. ಜನರೂ ಗೊಣಗುತ್ತಿರಲಿಲ್ಲ. ಆದರೂ ಅವನು ಹೊಸ ತೆರಿಗೆಗಳನ್ನು ಹಾಕಲಿಲ್ಲ. ತನ್ನ ಬೊಕ್ಕಸದಿಂದಲೇ ಹಣ ಕೊಟ್ಟ.

ಪ್ರಜೆಗಳಿಗೆ ಆಶ್ಚರ್ಯವೋ ಆಶ್ಚರ್ಯ, ಸಂತೋಷವೋ ಸಂತೋಷ! ಈ ಕೆಲಸದಿಂದ ಖಾರವೇಲ ಸಿಂಹಾಸನವನ್ನು ಏರಿದ ಒಂದು ವರ್ಷದಲ್ಲಿ ಪ್ರಜೆಗಳ ಹೃದಯ ಸಿಂಹಾಸನಗಳನ್ನೂ ಗೆದ್ದುಕೊಂಡ.

ಎರಡನೆಯ ವರ್ಷ ಅವನು ತನ್ನ ಪರಾಕ್ರಮದ ಕಿಡಿಯನ್ನು ಹಾರಿಸಲು ನಿಶ್ಚಯಿಸಿದ. ಪಶ್ಚಿಮದಲ್ಲಿ ಶಾತಕರ್ಣಿ ಎಂಬ ರಾಜನಿದ್ದನು. ಶೂರನೆಂದು ಅವನ ಕೀರ್ತಿ ಹಬ್ಬಿತ್ತು. ಆಗಲೇ ಮಗಧ ರಾಜ್ಯ ಕಳಿಂಗದ ಪಶ್ಚಿಮ ಮೇರೆಯವರೆಗೆ ಬಂದಿತ್ತು. ಮಗಧ ರಾಜ್ಯ ಪ್ರಬಲವಾಗಿ ಕಳಿಂಗಕ್ಕೆ ಎಷ್ಟು ಕಷ್ಟವಾಯಿತು! ಅದೆಲ್ಲ ಖಾರವೇಲನಿಗೆ ನೆನಪಿಸಿತ್ತು. ಈಗ ಕಳಿಂಗದ ಶಕ್ತಿಯನ್ನು ಸ್ಪಷ್ಟವಾಗಿ ತೋರಿಸಬೇಕು ಎಂದು ತೀರ್ಮಾನಿಸಿದ. ಶಾತಕರ್ಣಿಯ ರಾಜ್ಯವನ್ನು ತನ್ನ ಸೈನ್ಯವನ್ನು ತೆಗೆದುಕೊಂಡು ಹೋಗಿ ಕೃಷ್ಣಾ ಮತ್ತು ಮೂಸಿ ನದಿಗಳ ಸಂಗಮದ ಮೇಲಿದ್ದ ಋಷಿಕ ನಗರಕ್ಕೆ ಮುತ್ತಿಗೆ ಹಾಕಿ ಗೆದ್ದುಕೊಂಡ. ಈ ಮುತ್ತಿಗೆಯಲ್ಲಿ ಖಾರವೇಲನಿಗೆ ವಿಜಯದ ಜೊತೆಗೆ ಸಾಕಷ್ಟು ಸಂಪತ್ತೂ ದೊರೆಯಿತು.

ತನ್ನ ರಾಜ್ಯಕ್ಕೆ ಮರಳಿದ ಖಾರವೇಲ ವಿಜಯೋತ್ಸವವನ್ನು ಆಚರಿಸಿದ. ರಾಜನ ವಿಜಯದಿಂದ ಕಳಿಂಗವಾಸಿಗಳು ಆನಂದದಿಂದ ಉಬ್ಬಿಹೋದರು; ಬಹು ದೊಡ್ಡ ಪ್ರಮಾಣದಲ್ಲಿ ವಿಜಯೋತ್ಸವದಲ್ಲಿ ಭಾಗವಹಿಸಿ ನಲಿದಾಡಿದರು. ಮಲ್ಲಯುದ್ಧ, ನೃತ್ಯ, ಗಾಯನ, ಸಂಗೀತ, ನಾಟಕ ಮುಂತಾದವು ರಾಜ್ಯದ ತುಂಬ ನಡೆಯಿತು. ಇಷ್ಟು ದಿವಸ ಅವರಿಗೆ ಕೆಟ್ಟ ಅನುಭವವಾಗಿತ್ತು. ಯಾರೊಡನೆ ಯುದ್ಧ ಮಾಡಿದರೂ ತಾವು ಸೋಲುವವರು ಎಂಬ ಅಪಮಾನದ ವಿಚಾರದಿಂದ ಅವರು ನಿರ್ಜೀವರಾಗಿದ್ದರು; ಉತ್ಸಾಹಹೀನರಾಗಿ ತಲೆತಗ್ಗಿಸಿ ಓಡಾಡುತ್ತಿದ್ದರು. ಆದರೆ ಈಗ ಅವರಿಗೆ ಧೈರ್ಯ ಬಂದಿತು. “ನಾವೇನು ಕಡಿಮೆಯಲ್ಲ; ವೀರನೆಂದು ಪ್ರಖ್ಯಾತನಾದ ಶಾತಕರ್ಣಿಯನ್ನು ಸೋಲಿಸಿದವರು” ಎಂದು ಹೆಮ್ಮೆಪಟ್ಟರು. ಅವರು ಹಾಗೆ ಹೆಮ್ಮೆಪಡುವುದು ಸಹಜವಾಗಿತ್ತು. ಏಕೆಂದರೆ ಶಾತಕರ್ಣಿ ಸಾಮಾನ್ಯ ರಾಜನಾಗಿರಲಿಲ್ಲ. ಅವನು ಮಹಾಪರಾಕ್ರಮಿಯೆಂದು ಹೆಸರು ಗಳಿಸಿದ್ದ. ರಾಜಸೂಯ-ಅಶ್ವಮೇಧ ಮೊದಲಾದ ಮೊದಲಾದ ಯಜ್ಞಗಳನ್ನು ಆಚರಿಸಿ ತನ್ನ ಕೀರ್ತಿಯನ್ನು ಹತ್ತೂ ದಿಕ್ಕುಗಳಿಗೆ ಹಬ್ಬಿಸಿದ್ದ. ಇಂತಹವನಿಗೆ ತಮ್ಮ ಸಾಮರ್ಥ್ಯ ತೋರಿಸಿ ಕಳಿಂಗವಾಸಿಗಳು ಆತ್ಮಗೌರವದಿಂದ ತಲೆ ಎತ್ತಿ ಜೀವಿಸತೊಡಗಿದರು. ಅನೇಕರು ಸೈನ್ಯದಲ್ಲಿ ಸೇಲು ಮುಂದಾದರು. ಖಾರವೇಲನಂತಹ ರಾಜನ ಸೈನಿಕರಾಗಿ ಹೋರಾಡುವುದು ತಮ್ಮಸೌಭಾಗ್ಯವೆಂದು ತಿಳಿದುಕೊಂಡರು.

ಅಷ್ಟರಲ್ಲಿ ಒಂದು ಸವಾಲು

ವಿಜಯೋತ್ಸವದಲ್ಲಿ ತಲ್ಲೀನವಾದ ಕಳಿಂಗ ರಾಜಧಾನಿಗೆ ಒಂದು ಮಹತ್ವದ ಸುದ್ದಿ ಬಂದು ತಲುಪಿತು.

ಕಳಿಂಗ ರಾಜ್ಯದಲ್ಲಿ ವಿದ್ಯಾಧರಾಧಿವಾಸ ಎಂಬುದೊಂದು ಪವಿತ್ರ ಸ್ಥಳ. ಅದು ರಾಜ್ಯದ ಪಶ್ಚಿಮ ಭಾಗದಲ್ಲಿತ್ತು. ಹಿಂದಿನ ರಾಜರು ಕಟ್ಟಿದ ಪವಿತ್ರ ಸ್ಥಳ ಅದು. ರಥಿಕ ಮತ್ತು ಭೋಜಕರೆಂಬ ಸಣ್ಣ ಸರದಾರರು ಕಳಿಂಗ ರಾಜ್ಯದ ಹೊರಗೆ ಪಶ್ಚಿಮಕ್ಕೆ ಪುಟ್ಟ ಸಂಸ್ಥಾನಗಳನ್ನು ಆಳುತ್ತಿದ್ದರು. ಅವರು ವಿದ್ಯಾಧರಾಧಿವಾಸವನ್ನು ಕೆಡಿಸುವ ಸಾಹಸ ಮಾಡಿದರು. ಈ ಸುದ್ದಿ ರಾಜಧಾನಿಯನ್ನು ತಲುಪಿತು.

ಅದನ್ನು ಕೇಳಿ ಖಾರವೇಲ ಸಿಟ್ಟಿನಿಂದ ಬೆಂಕಿಯಾದ. ಆ ಪುಟ್ಟ ಪಾಳೆಗಾರರೂ ಕಳಿಂಗರಾಜ್ಯದ ಅಪಮಾನ ಮಾಡುವುದೇ? ಅವರ ಸೊಕ್ಕನ್ನು ಮುರಿಯಲು ಖಾರವೇಲ ನಿಶ್ಚಯಿಸಿದ, ಅವರ ಮೇಲೆ ದಂಡೆತ್ತಿ ಹೋದ. ಕಳಿಂಗದ ಸೈನಿಕರೆಂದರೆ ಮೊದಲಿನ ಸೋಲುವ ಸೈನಿಕರೆಂದು ಅವರು ಭಾವಿಸಿದ್ದಿರಬೇಕು. ಆದರೆ ಪಾಪ, ಖಾರವೇಲನ ಬಿಸಿ ಅವರಿಗೆ ತಟ್ಟಿರಲಿಲ್ಲ. ಈಗ ತಟ್ಟಿ ಬೇಯಿಸಿಬಿಟ್ಟಿತು. ಅವನ ಸೈನ್ಯದ ಹೊಡೆತಕ್ಕೆ ಅವರ ಸೈನಿಕರು ಸರ್ವನಾಶವಾದರು. “ತಪ್ಪಾಯಿತು” ಎನ್ನುತ್ತ ಅವರ ಖಾರವೇಲನ ಕಾಲಿಗೆ ಬಿದ್ದು ಕ್ಷಮೆ ಬೇಡಿದರು. ತಮ್ಮ ಕಿರೀಟ, ಛತ್ರ, ಚಾಮರಗಳನ್ನೂ ಅಮೂಲ್ಯ ಮುತ್ತು – ರತ್ನಗಳನ್ನೂ ಖಾರವೇಲನ ಪಾದಕ್ಕೆ ಅರ್ಪಿಸಿದರು. ಪರಾಕ್ರಮದೊಡನೆ, ಶರಣು ಬಂದವರನ್ನು ಕ್ಷಮಿಸಿ ಗೌರವಿಸುವ ಉದಾರ ಮನಸ್ಸು ಖಾರವೇಲನದಾಗಿತ್ತು. ಹೀಗಾಗಿ ಅವನು ಅವರನ್ನು ಕ್ಷಮಿಸಿ ಕಳಿಸಿದ. ಆ ಬಳಿಕ ಅವರು ಕಳಿಂಗ ರಾಜ್ಯದ ಕಡೆ ಕಣ್ಣೆತ್ತಿ ನೋಡುವ ಸಾಹಸ ಮಾಡಲಿಲ್ಲ.

ಯುದ್ಧ ಮಾಡುವುದೇ ಖಾರವೇಲನ ಆಸೆಯಲ್ಲವಾದರೂ ಅನಿವಾರ್ಯವಾದಾಗ ಯುದ್ಧರಂಗದಲ್ಲಿ ಶತ್ರುಗಳಿಗೆ ಭಯಂಕರನಾಗಿದ್ದ.

ಪ್ರಜಾವತ್ಸಲ

ರಥಿಕ-ಭೋಜಕರಿಗೆ ಸರಿಯಾದ ಪಾಠ ಕಲಿಸಿ ಖಾರವೇಲ ರಾಜಧಾನಿಗೆ ಮರಳಿದ. ಪುನಃ ಪ್ರಜೆಗಳ ಸುಖಸೌಕರ್ಯದ ಕಡೆ ಗಮನ ನೀಡಿದ. ಕಳಿಂಗಪಟ್ಟಣವು ಸಮುದ್ರದ ಸಮೀಪವಿದ್ದರೂ ಅಲ್ಲಿ ಆಗಾಗ ಕುಡಿಯುವ ನೀರಿನ ಅಭಾವ ತಲೆದೊರುತ್ತಿತ್ತು. ಹಿಂದೆ ಕಳಿಂಗದ ಮೇಲೆ ನಂದರ ಆಳ್ವಿಕೆ ನಡೆದಾಗ ಕಳಿಂಗಪಟ್ಟಣಕ್ಕೆ ನೀರು ಪೂರೈಸಲು ಅವರು ಒಂದು ಕಾಲುವೆ ಮಾಡಿದ್ದರು. ಅದರ ಹೆಸರು “ತನಸುಲಿಯವಾಟಾ”. ಈ ಕಾಲುವೆ ಮಾಡಿಸಿ ಆಗಲೆ ಸುಮಾರು ಇನ್ನೂರೈವತ್ತು ವರ್ಷಗಳಾಗಿದ್ದವು. ಕಾಲಮಹಿಮೆಯಿಂದ ಅದು ಜೀರ್ಣವಾಗಿತ್ತು. ಮತ್ತು ಮಹಾಮೇಘವಾಹನನ ಕಾಲದಲ್ಲಿ ಬೀಸಿದ ಭಯಂಕರ ಬಿರುಗಾಳಿ ಪರಿಣಾಮವಾಗಿ ಅನೇಕ ಕಡೆ ಹೋಗಿತ್ತು. ಅದನ್ನು ಸರಿಪಡಿಸದೆ ಹೋದರೆ ಜನರಿಗೆ ನೀರಿನ ಅನುಕೂಲತೆಯಾಗುತ್ತಿರಲಿಲ್ಲ. ಆದ್ದರಿಂದ ಖಾರವೇಲ ಅದನ್ನು ಸರಿಪಡಿಸಿ ನೀರಿನ ಕೊರತೆಯನ್ನು ನೀಗಿಸಿದ. ಇದಕ್ಕಾಗಿಯೂ ಪ್ರಜೆಗಳಿಂದ ಹಣ ಸಂಗ್ರಹಿಸಲಿಲ್ಲ. ಇಷ್ಟೇ ಅಲ್ಲ, ಪ್ರಜೆಗಳ ಬಡತನ ಪರಿಹರಿಸಲು ಅವನು ಎಲ್ಲ ತೆರಿಗೆಗಳನ್ನು ರದ್ದುಗೊಳಿಸಿದ. ರಥಿಕ-ಬೋಜಕರು ಅರ್ಪಿಸಿದ ಮುತ್ತು-ರತ್ನಗಳಿಂದ ರಾಜ ಬೊಕ್ಕಸ ತುಂಬಿತ್ತು. ಹೀಗಾಗಿ ಜನರಿಗೆ ತೆರಿಗೆಗಳನ್ನು ಹೊರಿಸಬೇಕಾಗಿಯೇ ಇರಲಿಲ್ಲ. ಪ್ರಜೆಗಳ ಆನಂದ ಹೆಚ್ಚಿತು.

“ರಾಜನಿದ್ದರೆ ಖಾರವೇಲನಂಥವನು ಇರಬೇಕು; ನಾವು ಸುದೈವಿಗಳು” ಎಂದು ಆನಂದದಿಂದ ಜನರು ಮೆಚ್ಚಿದರು. ಈ ಮಾತು ಕಳಿಂಗ ರಾಜ್ಯದ ತುಂಬ ಪ್ರತಿಧ್ವನಿಸತೊಡಗಿತು ಮತ್ತು ಅಕ್ಕಪಕ್ಕದ ರಾಜ್ಯಗಳಲ್ಲಿಯೂ ಹಬ್ಬಿತು.

ಸರದಾರರು ಕಿರೀಟ ಮೊದಲಾದವುಗಳನ್ನು ಒಪ್ಪಿಸಿ ಶರಣಾಗತರಾದರು.

ಹೊರಗಿನಿಂದ ಬಂದ ಸುಲಿಗೆಗಾರ

ಇಷ್ಟೆಲ್ಲ ಆಗುವ ಹೊತ್ತಿಗೆ ಅವನು ಪಟ್ಟಣಕ್ಕೆ ಬಂದು ಏಳು ವರುಷಗಳು ಕಳೆದಿದ್ದವು. ಅವನು ಸಾಧಿಸಿದ್ದು ಸ್ವಲ್ಪವೇನಲ್ಲ. ರಾಜ್ಯಕ್ಕೆ ಶಕ್ತಿ, ಸಮೃದ್ಧಿಗಳನ್ನು ತಂದುಕೊಟ್ಟಿದ್ದ. ಪ್ರಜೆಗಳಿಗೆ ಆತ್ಮಗೌರವ, ಸಂತೋಷಗಳನ್ನು ತಂದುಕೊಟ್ಟಿದ್ದ. ಕಳಿಂಗ ಎಂದರೆ ಇತರ ರಾಜ್ಯಗಳು ಗೌರವದಿಂದ ಕಾಣುವಂತೆ ತನ್ನ ರಾಜ್ಯಕ್ಕೆ ಸ್ಥಾನ ಸಂಪಾದಿಸಿದ್ದ. ಆದರೂ ಅವನಿಗೆ ತೃಪ್ತಿ ಇಲ್ಲ. ಅದೇ ವರ್ಷ ಅವನ ರಾಣಿಯರಲ್ಲಿ ಒಬ್ಬಳಾದ ವಜಿರಘರವತಿ ಎಂಬವಳು ಪುತ್ರರತ್ನ ಹೆತ್ತಳು. ವಂಶೋದ್ಧಾರಕನಾದ ಮಗನು ಹುಟ್ಟಿದ್ದರೂ ಖಾರವೇಲನಿಗೆ ಆಗಬೇಕಾದಷ್ಟು ಸಂತೋಷವಾಗಲಿಲ್ಲ. “ಮಗನಿಂದ ವಂಶದ ಉದ್ಧಾರವೇನೋ ಆಗುತ್ತದೆ; ಆದರೆ ಇಡಿಯ ಕಳಿಂಗ ರಾಜ್ಯಕ್ಕೆ ಮಗಧ ರಾಜರಿಂದ ಆದ ಅಪಮಾನವನ್ನು ತೊಡೆದು ಹಾಕಬೇಡವೆ? ಆ ಅಪಮಾನವಾದರೂ ಎಂತಹದು! ನಮಗೆಲ್ಲ ಪರಮಪೂಜ್ಯವಾದ ಶೀತಲನಾಥ ಜಿನಮೂರ್ತಿಯನ್ನು ಅವರು ಒಯ್ದು ಇಟ್ಟುಕೊಂಡಿರುವರು. ಅದನ್ನು ತಿರುಗಿ ತಂದು ಪ್ರತಿಷ್ಠಾಪಿಸಿದ ಹೊರತು ನನ್ನ ಆತ್ಮಕ್ಕೆ ಶಾಂತಿ ಸಾಧ್ಯವೆ?” ಎಂಬ ಕೊರಗು ಅವನನ್ನು ಒಳಗೊಳಗೇ ಕೊರೆಯುತ್ತಿತ್ತು. ಆ ರೀತಿಯಾಗಿ ಮಗಧರಾಜನಿಂದ ಶೀತಲನಾಥ ಜಿನಮೂರ್ತಿಯನ್ನು ತರುವ ಕೆಲಸ ಅತಿ ಮಹತ್ವದ್ದಾಗಿತ್ತು. ಅದಕ್ಕಾಗಿ ಖಾರವೇಲನು ಬಹುದೊಡ್ಡ ಸೈನ್ಯದೊಡನೆ ಮಗಧದ ಮೇಲೆ ಏರಿಹೋದನು. ಮಗಧ ರಾಜ್ಯದ ಮೇಲೆ ದಂಡೆತ್ತಿ ಹೋಗುವುದೆಂದರೆ ಸಾಮಾನ್ಯವಾಗಿರಲಿಲ್ಲ. ಆ ರಾಜ್ಯದ ರಾಜಧಾನಿ ರಾಜಗೃಹದ ಮೇಲೆ ಕಳಿಂಗರು ಒಮ್ಮಲೇ ದಾಳಿ ಮಾಡಲು ಅಸಾಧ್ಯವಾಗುವಂತೆ ಆ ರಾಜರು ಅದರ ದಕ್ಷಿಣಕ್ಕೆ ಗೋರಥಿಗಿರಿ ಎಂಬ ಕಾವಲು ಕೋಟೆಯನ್ನು ನಿರ್ಮಿಸಿದ್ದರು. ಇದು ನಿಸರ್ಗದತ್ತ ಬೆಟ್ಟದ ಕೋಟೆಯಾಗಿತ್ತು. (ಈ ಬೆಟ್ಟ ಈಗಿನ ಬಿಹಾರ ರಾಜ್ಯದ ಗಯಾ ಜಿಲ್ಲೆಯಲ್ಲಿದೆ.) ಅದನ್ನು ಗೆದ್ದು ರಾಜಗೃಹವನ್ನು ತಲುಪುವುದೆಂದರೆ ಮಹಾಸಾಹಸದ ಕೆಲಸ. ಆದರೆ ಖಾರವೇಲನೂ ಮಹಾಪರಾಕ್ರಮಿಯಾಗಿದ್ದ; ಅವನ ಸೈನಿಕರೂ ಜೀವದ ಹಂಗು ತೊರೆದು ಹೋರಾಡಲು ಸಿದ್ಧರಾಗಿದ್ದರು. ಏಕೆಂದರೆ ಮಗಧರಾಜನನ್ನು ಸೋಲಿಸಿ ಶೀತಲನಾಥ ಜಿನಮೂರ್ತಿಯನ್ನು ತರುವುದು ಅವರೆಲ್ಲರ ಪರಮ ಕರ್ತವ್ಯವಾಗಿತ್ತು; ಜೀವನಧ್ಯೇಯವಾಗಿತ್ತು. ಹೀಗಾಗಿ ಅವರು ಗೋರಥಗಿರಿಯನ್ನು ಗೆದ್ದುಕೊಂಡು ರಾಜಗೃಹದ ಸಮೀಪ ತಲುಪಿ ಅದಕ್ಕೆ ಮುತ್ತಿಗೆ ಹಾಕಿದರು.

ಈ ಮುತ್ತಿಗೆಯಲ್ಲಿ ತೊಡಗಿದಾಗ ಖಾರವೇಲನ ಬಳಿ ಗುಪ್ತಚಾರರು ಬಂದು ಬಿನ್ನಹ ಮಾಡಿದರು:

“ಮಹಾಪ್ರಭೂ, ಡಿಮಿಟ್ರಿಯಸ್‌ನೆಂಬ ಗ್ರೀಸ್‌ದೇಶದ ರಾಜನೂ ಸಹ ಮಗಧದ ಮೇಲೆ ದಂಡೆತ್ತಿ ಬರುತ್ತಿರುವನು.” ಇದು ಬಹು ಮಹತ್ವದ ಸುದ್ದಿ. ಮಗಧರಾಜರಿಂದ ಶೀತಲನಾಥ ಜಿನಮೂರ್ತಿಯನ್ನು ಹಿಂದಕ್ಕೆ ಪಡೆಯಬೇಕಾದರೆ ಅವರನ್ನು ಪೂರ್ತಿ ಸೋಲಿಸುವುದು ಅಗತ್ಯವಾಗಿತ್ತು. ಇಲ್ಲವಾದರೆ ಅವರು ಮೂರ್ತಿಯನ್ನು ಹಿಂದಕ್ಕೆ ಕೊಡಲು ಒಪ್ಪುವರೆ? ಕಳಿಂಗವು ಮಗಧ ರಾಜ್ಯಕ್ಕಿಂತ ಶಕ್ತವಾಗಿತ್ತು, ನಿಜ. ಆದರೂ ಮಗಧ ರಾಜ್ಯವನ್ನು ಸಂಪೂರ್ಣವಾಗಿ ಸೋಲಿಸುವುದೆಂದರೆ ಸೈನ್ಯಕ್ಕೆ ಕಷ್ಟ, ನಷ್ಟ.

ಖಾರವೇಲ ಯೋಚನೆ ಮಾಡಿದೆ:

“ಈಗೇನು ಮಾಡುವುದು? ನಾನೊಬ್ಬನೇ ಈ ಮಗಧರಾಜನನ್ನು ಸೋಲಿಸಬಲ್ಲೆ. ಡಿಮಿಟ್ರಿಯಸನೂ ನನ್ನನ್ನು ಕೂಡಿಕೊಂಡರೆ ಕೆಲಸವು ಸುಲಭವಾಗುವುದರಲ್ಲಿ ಸಂಶಯವಿಲ್ಲ. ಆದರೆ ಯಾರಿವ ಡಿಮಿಟ್ರಿಯಸ್‌? ನಮ್ಮವನೆ? ಎಂದಿಗೂ ಅಲ್ಲ. ನಮ್ಮ ಈ ದೇಶವನ್ನು ಲೂಟಿಮಾಡಲು ಬಂದ ದರೋಡೆಕೋರ. ಅವನ ಸಂಗಡ ನಾನು ಸೇರಿಕೊಳ್ಳುವುದೆ? ಎಷ್ಟಾದರೂ ಮಗಧರಾಜ ನಮ್ಮವ. ಈಗ ಪರಕೀಯನಾದ ಡಿಮಿಟ್ರಿಯಸ್‌ನನ್ನು ಹೊಡೆದೋಡಿಸುವುದು ನನ್ನ ಕರ್ತವ್ಯ, ಮಗಧ ರಾಜನನ್ನು ಆನಂತರ ನೋಡಿಕೊಂಡರಾಯಿತು.” ಹೀಗೆ ನಿರ್ಣಯಿಸಿ ಖಾರವೇಲ ರಾಜಗೃಹಕ್ಕೆ ಮುತ್ತಿಗೆ ಹಾಕಿದ ಸೈನ್ಯವನ್ನು ಹಿಂದಕ್ಕೆ ಕರೆಯಿಸಿ ಡಿಮಿಟ್ರಿಯಸ್‌ನನ್ನು ತಡೆಯಲು ಪಶ್ಚಿಮಕ್ಕೆ ಹೊರಳಿದ.

ಖಾರವೇಲನ ಸೈನ್ಯ ತನ್ನ ಕಡೆಗೆ ಭರದಿಂದ ಸಾಗಿಬರುತ್ತಿದೆಯೆಂದು ಸುದ್ದಿ ಬಂದದ್ದೇ ತಡ, ಡಿಮಿಟ್ರಿಯಸನು ತನ್ನ ಸೈನಿಕರಿಗೆ ಹಿಂದಕ್ಕೆ ಮರಳಲು ಅಪ್ಪಣೆ ಮಾಡಿದ. ಖಾರವೇಲನ ಶೌರ್ಯ-ಪರಾಕ್ರಮಗಳ ವಿಷಯ ಅವನಿಗೆ ತಿಳಿದಿತ್ತು. ಅವನು ಎಣಿಸಿದ್ದೇ ಬೇರೆ, ಆದದ್ದೇ ಬೇರೆ. ಖಾರವೇಲನು ಮಗಧದ ಮೇಲೆ ಏರಿಹೋದ ಸುದ್ದಿ ತಿಳಿದಾಗ ಡಿಮಿಟ್ರಿಯಸ್‌ಹಾಕಿದ ಲೆಕ್ಕ ಬೇರೆ. “ದಕ್ಷಿಣದಿಂದ ಖಾರವೇಲ ಮತ್ತು ಪಶ್ಚಿಮದಿಂದ ನಾನು ಮಗಧದ ಮೇಲೆ ಏರಿಹೋದರೆ ಮಗಧರಾಜನನ್ನು ಸುಲಭವಾಗಿ ಸೋಲಿಸಬಹುದು. ಅಲ್ಲಿಯ ಅಪಾರ ಸಂಪತ್ತಿನಲ್ಲಿ ಪಾಲು ಪಡೆಯಬಹುದು.” ಹಿಗೆ ಡಿಮಿಟ್ರಿಯಸನು ಎಣಿಸಿದ್ದು. ಆದರೆ ಖಾರವೇಲ ಪರಾಕ್ರಮಿಯಾಗಿದ್ದಂತೆಯೇ, ಅವನಿಗೆ ತನ್ನವರು ಯಾರು ಪರಕೀಯರು ಯಾರು ಎಂಬ ತಿಳಿವಳಿಕೆಯೂ ಇತ್ತು. ಆದರೆ ಈ ಸಂಗತಿ ಡಿಮಿಟ್ರಿಯಸನಿಗೆ ಗೊತ್ತಿರಲಿಲ್ಲ. ಹೀಗಾಗಿ ಖಾರವೇಲನ ಸೈನ್ಯ ತನ್ನ ಕಡೆ ಬರುತ್ತಿದೆ ಎಂದು ತಿಳಿದ ಕೂಡಲೇ ಅವನು ಕಾಲಿಗೆ ಬುದ್ಧಿ ಹೇಳಿದ. ಆ ಬಳಿಕ ಗ್ರೀಸ್‌ದೇಶದ ಯಾವ ರಾಜನೂ ಈ ಕಡೆ ಹೊರಳಿಯೂ ನೋಡಲಿಲ್ಲ. ಅವರು ಗಂಗೆಯನ್ನು ದಾಟಿ ಪೂರ್ವಕ್ಕೆ ಬಂದದ್ದು ಅದೇ ಮೊದಲ ಬಾರಿ, ಮತ್ತು ಕೊನೆಯ ಬಾರಿ! ಡಿಮಿಟ್ರಿಯಸನನ್ನು ಓಡಿಸಿ ರಾಜಧಾನಿಗೆ ಹಿಂತಿರುಗಿದ ಖಾರವೇಲ ಬ್ರಾಹ್ಮಣರಿಗೆ ಯಥೇಚ್ಚವಾಗಿ ದಾನ ಮಾಡಿದ.

ಮುತ್ತು-ರತ್ನಾದಿಗಳನ್ನಷ್ಟೇ ಅಲ್ಲ, ಆನೆ-ಕುದುರೆ-ರಥಗಳನ್ನೂ ದಾನವಾಗಿ ನೀಡಿದ. ಅವರಿಗೆ ಮನೆಗಳನ್ನೂ ಕಟ್ಟಿಸಿಕೊಟ್ಟ. ಸ್ವತಃ ಜೈನನಾಗಿದ್ದರೂ ಅವನಿಗೆ ಬೇರೆ ಮತಗಳ ಬಗ್ಗೆ ದ್ವೇಷ ಇರಲಿಲ್ಲ. ಎಲ್ಲ ಮತದವರ ಜೀವನವನ್ನು ಅವನು ಸುಖಮಯ ಮಾಡಿದ.

ಪ್ರಜೆಗಳಿಗಾಗಿ ಇಷ್ಟೆಲ್ಲ ಮಾಡಿದ ಬಳಿಕ ಅವನು ತನ್ನ ಅರಮನೆಯ ಕಡೆ ದೃಷ್ಟಿ ಹೊರಳಿಸಿದ. ಅದೂ ಬಿರುಗಾಳಿಯ ಹೊಡೆತಕ್ಕೆ ಸಿಕ್ಕಿ ಹಾಳಾಗಿತ್ತು. ಕಳಿಂಗ ಪಟ್ಟಣದಲ್ಲಿ ಪ್ರಾಚೀನ ಎಂಬ ಸಣ್ಣ ನದಿ ಹರಿಯುತ್ತಿತ್ತು. ಆ ನದಿಯ ಎರಡೂ ದಂಡೆಗಳ ಮೇಲೆ ಅರಮನೆಯನ್ನು ಕಟ್ಟಿಸಲು ಅವನು ಪ್ರಾರಂಭಿಸಿದ. ಅದಕ್ಕೆ ಆಗ ತಗುಲಿದ ಖರ್ಚು ಮೂವತ್ತೆಂಟು ಲಕ್ಷ ನಾಣ್ಯಗಳು. ಅಂದ ಬಳಿಕ ಅದರ ಭವ್ಯತೆಯನ್ನು ಊಹಿಸಬಹುದು. ಆ ಅರಮನೆಗೆ ಅವನು ಇಟ್ಟ ಹೆಸರು “ಮಹಾವಿಜಯ”. ಅದು ಅವನು ಗಳಿಸಿದ ಮಹಾವಿಜಯಗಳ ಸಂಕೇತವಾಗಿ ಪ್ರಾಚೀನ ನದಿಯ ಮೇಲೆ ದೃಢವಾಗಿ ನಿಂತಿತ್ತು. “ಮಹಾವಿಜಯ” ಎಂಬ ಬಿರುದು ಅವನಿಗೂ ಸಿಕ್ಕಿತ್ತು. ಮೊದಲು ಪ್ರಜೆಗಳ ಕಲ್ಯಾಣ, ಅನಂತರ ರಾಜನ ಸ್ವಂತ ಸುಖ-ಸೌಕರ್ಯಗಳು ಎಂಬುದನ್ನು ಖಾರವೇಲ ಪ್ರತ್ಯಕ್ಷ ಆಚರಣೆಯಲ್ಲಿ ತಂದು ತೋರಿಸಿ, ಪರಾಕ್ರಮಸಂಪನ್ನನಷ್ಟೇ ಅಲ್ಲ, ಆದರ್ಶ ರಾಜನೂ ಕೂಡ ಆಗಿ ಬೆಳಗತೊಡಗಿದ.

ದ್ರವಿಡ ರಾಜರು

ಈಗ ಅವನ ಆಳ್ವಿಕೆಯ ಹತ್ತನೆಯ ವರ್ಷ ಪ್ರಾರಂಭವಾಯಿತು. ದಿಗ್ವಿಜಯಕ್ಕಾಗಿ ಅವನು ಬಹುದೊಡ್ಡ ಸೈನ್ಯದೊಡನೆ ಹೊರಟ. ಮೊದಲು ಉತ್ತರ ಭಾರತದ ಕಡೆ ಹೋಗಿ ಅಲ್ಲಿಯ ರಾಜರನ್ನು ಸೋಲಿಸಿ ಕಪ್ಪ-ಕಾಣಿಕೆ ಪಡೆದ.

ಕಳಿಂಗಕ್ಕೆ ದಕ್ಷಿಣದಲ್ಲಿದ್ದ ದ್ರವಿಡ ರಾಜರಿಂದ ಆಗಾಗ ತೊಂದರೆಯಾಗುತ್ತಲೇ ಇತ್ತು. ಅವರೆಲ್ಲ ಒಟ್ಟಾಗಿ ಕಳಿಂಗಕ್ಕೆ ಕಿರುಕುಳ ಕೊಡುತ್ತಿದ್ದರು. ಅವರಿಗೆ ಪಾಠ ಕಲಿಸಬೇಕು ಎಂದು ಖಾರವೇಲನೂ ಯೋಚನೆ ಮಾಡುತ್ತಲೇ ಇದ್ದ. ಖಾರವೇಲನು ಉತ್ತರದ ಕಡೆ ಸೈನ್ಯಸಮೇತ ಹೋದ ಸುದ್ದಿ ಆ ದ್ರವಿಡ ರಾಜರಿಗೆ ತಲುಪಿತು. ಕಳಿಂಗದ ಮೇಲೇರಿ ಹೋಗಲು ಅದೇ ಸುಸಂಧಿ ಎಂದು ಅವರು ಲೆಕ್ಕ ಹಾಕಿ ದಾಳಿ ಮಾಡಿದರು.

ಕಳಿಂಗ ಮೇಲೆ ದ್ರವಿಡ ರಾಜರು ಏರಿಬಂದ ಸುದ್ದಿ ತಲುಪಿದ್ದೇ ತಡ, ಖಾರವೇಲ ಮಿಂಚಿನ ವೇಗದಿಂದ ರಾಜಧಾನಿ ತಲುಪಿ, ತಕ್ಷಣ ದಕ್ಷಿಣ ದಿಕ್ಕಿಗೆ ಹೋದ. ದ್ರವಿಡ ರಾಜರು ಇದನ್ನು ನಿರೀಕ್ಷಿಸಿಯೇ ಇರಲಿಲ್ಲ. ಖಾರವೇಲ ದೂರದಲ್ಲಿದ್ದಾನೆ, ತಮಗೆ ಅಪಾಯವಿಲ್ಲ ಎಂದುಕೊಂಡಿದ್ದರು. ದ್ರವಿಡ ರಾಜರ ಸೈನ್ಯ “ಪೀಥುಂಡ” ಎಂಬ ಬಂದರಿನಿಂದ ಬಂದು ಕಳಿಂಗರನ್ನು ಕಾಡುತ್ತಿತ್ತು. ಅದಕ್ಕಾಗಿ ಖಾರವೇಲ ಮೊದಲು ಪೀಥುಂಡವನ್ನು ಮುತ್ತಿ ಅದನ್ನು ನಾಶ ಮಾಡಿದ. ಅಷ್ಟೇ ಅಲ್ಲ, ಆ ಊರಿನ ಭೂಮಿಯನ್ನು ಕತ್ತೆಗಳಿಗೆ ಕಟ್ಟಿದ ನೇಗಿಲುಗಳಿಂದ ಉತ್ತಿಸಿದ. ಅಷ್ಟೊಂದು ಸಿಟ್ಟು ಅವನಿಗೆ ಬಂದಿತ್ತು!

ಅಷ್ಟರಿಂದಲೇ ಅವನಿಗೆ ಸಮಾಧಾನವಾಗಲಿಲ್ಲ. ನೇರವಾಗಿ ದ್ರವಿಡ ರಾಜರ ಮೇಲೇರಿ ಹೋಗಿ ಅವರ ಕೂಟವನ್ನು ಒಡೆದುಬಿಟ್ಟ. ಅವರು ಸೋತು ತಮ್ಮ ತಮ್ಮ ರಾಜಧಾನಿಗಳಿಗೆ ಓಡಿಹೋಗಿ ಜೀವ ಉಳಿಸಿಕೊಳ್ಳಬೇಕಾಯಿತು.

ಬಿಜಯ ಮಾಡಿದ ಪವಿತ್ರ ಮೂರ್ತಿ

ಪುನಃ ಖಾರವೇಲ ಉತ್ತರದ ಕಡೆ ತೆರಳಿದ. ತಕ್ಷಶಿಲೆ ರಾಜಧಾನಿಯಾಗಿದ್ದ ಉತ್ತರಾಪಥದ ಮೇಲೆ ದಂಡೆತ್ತಿ ಹೋಗಿ ಆ ರಾಜ್ಯವನ್ನು ವಶಪಡಿಸಿಕೊಂಡ. ಅಲ್ಲಿಂದ ಮಗಧ ರಾಜ್ಯದ ಕಡೆ ಅವನ ಸೈನ್ಯ ಹೊರಟಿತು.

ಈ ಸುದ್ದಿ ಮಗಧರಾಜನಾದ ಬೃಹಸ್ಪತಿಮಿತ್ರನಿಗೆ ತಲುಪಿತು. ಖಾರವೇಲನ ಸಿಟ್ಟು ಪರಾಕ್ರಮ ತಿಳಿಸಿದ್ದ ಅವನು ಹೆದರಿ ಕಂಗಾಲಾಗಿಬಿಟ್ಟ. ಅವನ ಪ್ರಜೆಗಳಲ್ಲಿಯೂ ಸುದ್ದಿ ಹಬ್ಬಿತ್ತು. ಖಾರವೇಲನ ಪರಾಕ್ರಮದ ಅರಿವು ಅವರಿಗಿತ್ತು. ಖಾರವೇಲನೆಂದರೆ ಅತುಲ ಬಲಶಾಲಿಯೆಂದು ಕೆಲವೇ ವರ್ಷಗಳ ಹಿಂದೆ ಹೆಸರು ಗಳಿಸಿದ್ದ ಶಾತಕರ್ಣಿಯನ್ನು ಲೆಕ್ಕಿಸದ ವೀರನೆಂದೂ ಅವರಿಗೆ ತಿಳಿದಿತ್ತು. ಪ್ರಪಂಚವನ್ನೇ ಗೆಲ್ಲಲು ಹೊರಟು ಭಾರತವನ್ನು ಪ್ರವೇಶಿಸಿ ಯಾರಿಗೂ ಜಗ್ಗದೆ ಸ್ವೇಚ್ಛೆಯಿಂದ ಹೋದಲ್ಲೆಲ್ಲ ಕೊಳ್ಳೆ ಹೊಡೆದ ಡಿಮಿಟ್ರಿಯಸನಿಗೆ ಪಲಾಯನಮಂತ್ರ ಹೇಳಿಕೊಟ್ಟ ಶೂರಗುರುವೆಂಬುದನ್ನು ಅವರು ಅರಿತಿದ್ದರು. ಮೇಲಾಗಿ ಖಾರವೇಲನ ಪ್ರಚಂಡ ಪರಾಕ್ರಮದ ಜೊತೆಗೆ ಅವನ ಉಗ್ರ ಕೋಪದ ಸುದ್ದಿಯೂ ಅವರಿಗೆ ತಲುಪಿತ್ತು. ಆ ಕೋಪಕ್ಕೆ ತುತ್ತಾಗಿ ನೆಲಸಮವಾದ “ಪೀಥುಂಡ” ನಗರದ ಭಯಾನಕ ಚಿತ್ರ ಅವರ ಮನಸ್ಸಿನಲ್ಲಿ ಮನೆಮಾಡಿತ್ತು.

ಹೀಗಾಗಿ ಖಾರವೇಲನು ತಮ್ಮ ಮೇಲೆ ದಂಡೆತ್ತಿ ಹೊರಟಿದ್ದಾನೆಂಬ ಸುದ್ದಿ ಮಗಧದ ಪ್ರಜೆಗಳಿಗೆ ತಿಳಿದೊಡನೆ ಅವರಲ್ಲಿ ಹಾಹಾಕಾರವೆದ್ದಿತ್ತು. ರಾಜ್ಯಕ್ಕೆ ಬಂದ ಈ ಗಂಡಾಂತರದಿಂದ ಪಾರಾಗಲು ಅವರಿಗೆ ಒಂದೇ ದಾರಿಯಿತ್ತು. ಅದೆಂದರೆ ಖಾರವೇಲನಿಗೆ ಶರಣು ಹೋಗುವುದು. ಅದೇ ಸರಿಯಾದ ಮಾರ್ಗವೆಂದು ಬೃಹಸ್ಪತಿಮಿತ್ರನೂ ಅವನ ಪ್ರಜೆಗಳೂ ಒಮ್ಮತದಿಂದ ನಿರ್ಣಯಿಸಿದರು. ಭಿನ್ನಾಭಿಪ್ರಾಯ ಸಾಧ್ಯವೇ ಇರಲಿಲ್ಲ.

ಖಾರವೇಲನಿಗೆ ಮಗಧದ ಮೇಲೆ ಏಕೆ ಸಿಟ್ಟು ಎಂಬುದನ್ನೂ ಅವರು ತಿಳಿದಿದ್ದರು. ತಮ್ಮ ಪೂರ್ವಜರು ಶೀತಲನಾಥ ಜಿನಮೂರ್ತಿಯನ್ನು ತಂದದ್ದು ಕಳಿಂಗಕ್ಕೆ ಅಪಮಾನವಾದಂತೆ. ಅದನ್ನು ತೊಡೆದು ಹಾಕದೆ ಖಾರವೇಲನ ಸಿಟ್ಟಿನ ಬೆಂಕಿ ಆರುವುದಿಲ್ಲ ಎಂದು ಅವರಿಗೆ ತಿಳಿದಿತ್ತು. ಆದುದರಿಂದ ಆ ಮೂರ್ತಿಯನ್ನು ಯೋಗ್ಯ ಗೌರವದೊಡನೆ ಖಾರವೇಲನ ವಶಕ್ಕೆ ಕೊಡುವ ನಿರ್ಣಯವಾಯಿತು. ಹಾಗೆ ಮಾಡಿದರೆ ಖಾರವೇಲನಿಗೆ ಸಮಾಧಾನವಾಗುವುದು. ಆದುದರಿಂದ ಅವನ ಗೆಳೆತನವನ್ನೂ ಸಂಪಾದಿಸಬಹುದು ಎಂದು ಅವರು ಸರಿಯಾಗಿಯೇ ಊಹಿಸಿದರು.

ಬೃಹಸ್ಪತಿಮಿತ್ರನು ತಾನು ಖಾರವೇಲನನ್ನು ಕಾಣಬೇಕೆಂದು ಹೇಳಿಕಳುಹಿಸಿದನು. ಖಾರವೇಲನು ಒಪ್ಪಿದನು. ಬೃಹಸ್ಪತಿಮಿತ್ರನು ತನ್ನ ಮಂತ್ರಿಗಳು, ಸರದಾರರು ಎಲ್ಲರನ್ನು ಕೂಡಿಕೊಂಡು ಖಾರವೇಲನನ್ನು ಭೇಟಿ ಮಾಡಿದನು. ಬೃಹಸ್ಪತಿಮಿತ್ರ ಅರಿಕೆ ಮಾಡಿಕೊಡ:

“ಕಳಿಂಗ ಮತ್ತು ಮಗಧ ರಾಜ್ಯಗಳಿಗೆ ಬಹು ವರ್ಷಗಳಿಂದ ಹಗೆತನವಾಗಿದೆ, ಮತ್ತೆ ಮತ್ತೆ ಯುದ್ಧ ನಡೆದಿದೆ. ಇದರಿಂದ ಎರಡು ರಾಜ್ಯಗಳ ಜನರಿಗೂ ಕಷ್ಟ. ಸೈನಿಕರು ಸಾಯುತ್ತಾರೆ. ಬೆಳೆ ನಷ್ಟ, ಪ್ರಜೆಗಳಿಗೆ ತೊಂದರೆ. ಇದೆಲ್ಲವನ್ನು ನಿಲ್ಲಿಸೋಣ. ತಪ್ಪು ನಮ್ಮದು, ನಮಗೆ ತಿಳಿದಿದೆ. ನಮ್ಮ ಪೂರ್ವಿಕರು ಕಳಿಂಗದಿಂದ ಪವಿತ್ರವಾದ ಶೀತಲನಾಥ ಜಿನಮೂರ್ತಿಯನ್ನು ತಂದಿದ್ದು ಕಳಿಂಗದ ರಾಜರಿಗೂ, ಪ್ರಜೆಗಳಿಗೂ ವ್ಯಥೆಯನ್ನೂ, ಬೇಸರವನ್ನೂ ಉಂಟುಮಾಡಿತು. ನಮ್ಮ ಪೂರ್ವಿಕರು ಮಾಡಿದ್ದು ತಪ್ಪು. ನೀವು ವಿಶಾಲ ಮನಸ್ಸಿನಿಂದ ಅದನ್ನು ಕ್ಷಮಿಸಬೇಕು. ವಿಗ್ರಹವನ್ನು ಒಪ್ಪಿಸುತ್ತೇವೆ. ಹಿಂದಾದ ತಪ್ಪನ್ನು ಇನ್ನು ಮರೆತುಬಿಡಿ, ಎರಡು ರಾಜ್ಯಗಳೂ ಸ್ನೇಹದಿಂದ ಇರಲಿ”.

ಖಾರವೇಲ ಶೂರ, ರಣರಂಗದಲ್ಲಿ ಶತ್ರುಗಳಿಗೆ ಭಯಂಕರನಾದವನು. ಆದರೆ ಉದಾರಿ. ಯುದ್ಧವನ್ನು ಮಾಡುವುದೇ ಅವನ ಆಸೆಯಲ್ಲ. ಆದುದರಿಂದ ಬೃಹಸ್ಪತಿಮಿತ್ರನ ಮಾತುಗಳನ್ನು ಕೇಳಿ ಅವನಿಗೂ ಸಂತೋಷವಾಯಿತು. ಪವಿತ್ರ ವಿಗ್ರಹವನ್ನು ಸ್ವೀಕರಿಸಿದ.

ಅಂತೂ ನಂದರು ವಿಗ್ರಹವನ್ನು ಹೊತ್ತುಕೊಂಡು ಹೋದಂದಿನಿಂದ ಕುದಿಯುತ್ತಿದ್ದ ಕಳಿಂಗರ ಮನಸ್ಸು ಶಾಂತವಾಯಿತು.

ಇದೇ ಸಮಯದಲ್ಲಿ ತನ್ನ ರಾಜ್ಯದ ಮೇಲೆ ಖಾರವೇಲ ದಂಡೆತ್ತಿ ಬರಬಾರದೆಂದು ಮಗಧದ ಪೂರ್ವಕ್ಕಿದ ಅಂಗರಾಜ ತಾನಾಗಿ ಖಾರವೇಲನಿಗೆ ಶರಣು ಬಂದು ಕಪ್ಪ ಕಾಣಿಗೆ ಒಪ್ಪಿಸಿದ.

ಶೀತಲನಾಥ ಜಿನಮೂರ್ತಿಯೊಡನೆ ಖಾರವೇಲ ತನ್ನ ರಾಜ್ಯಕ್ಕೆ ಹಿಂತಿರುಗಿದ. ಭವನೇಶ್ವರದಲ್ಲಿ ನೂರಾರು ಶಿಲ್ಪಿಗಳು ಅನೇಕ ಗೋಪುರಗಳುಳ್ಳ, ಭವ್ಯವಾದ ಮಂದಿರ ಕಟ್ಟತೊಡಗಿದರು. ಆ ಸುಂದರ ಮಂದಿರದಲ್ಲಿ ಮೂರ್ತಿಯ ಪ್ರತಿಷ್ಠಾಪನೆಯಾಯಿತು. ಇದರಿಂದ ಕಳಿಂಗದ ಪ್ರಜೆಗಳಿಗೆ ಪರಮಾನಂದವಾಯಿತು. ರಾಜ್ಯದಲ್ಲೆಲ್ಲ ಸಂತೋಷದ ಬಿರುಗಾಳಿಯೇ ಬೀಸಿತು. ಎಲ್ಲರೂ ಖಾರವೇಲನನ್ನು ಹೊಗಳುವವರೇ! ಕಳಿಂಗ ರಾಜ್ಯಕ್ಕೆ ಹಲವಾರು ವರುಷಗಳಿಂದ ಅಂಟಿಕೊಂಡುಬಂದ ಮಹಾಕಳಂಕವನ್ನು ತೊಡೆದುಹಾಕಿ ಪುನಃ ಅದರ ಕೀರ್ತಿಯನ್ನು ಧವಲ ಪತಾಕೆಯನ್ನು ಹಾರಿಸಿದವನು ಅವನೇ ತಾನೇ! ಅವನ ಪೂರ್ವಜರಿಗೆ ಅದು ಸಾಧ್ಯವಾಗಿರಲಿಲ್ಲ. ಕೇವಲ ರಾಜ್ಯ ವಿಸ್ತಾರಕ್ಕಾಗಿಯಾಗಲಿ, ಕಪ್ಪ-ಕಾಣಿಕೆ ಪಡೆಯಲಾಗಲಿ ಖಾರವೇಲ ತನ್ನ ಶಕ್ತಿಯನ್ನು ಮೀಸಲಾಗಿಡಲಿಲ್ಲ. ಪ್ರಜೆಗಳ ಸುಖ, ಕಳಿಂಗ ದೇಶದ ಮಾನರಕ್ಷಣೆ, ಅಪಮಾನ ನಿವಾರಣೆಗಳಿಗಾಗಿ ಶಕ್ತಿ ಮುಡುಪಾಗಿಟ್ಟ. ಹೀಗಾಗಿ ಖಾರವೇಲನನ್ನು ರಾಜನನ್ನಾಗಿ ಪಡೆದು ಪ್ರಜೆಗಳೆಲ್ಲ ಸರ್ವವಿಧದಿಂದ ಸುಖಿಗಳಾದರು.

ಈಗ ಮತ್ತೆ ದಕ್ಷಿಣದ ಕಡೆ ಖಾರವೇಲ ದೃಷ್ಟಿ ಹೊರಳಿಸಿದ. ಹಿಂದೂಸ್ಥಾನದ ದಕ್ಷಿಣ ತುದಿಯಲ್ಲಿದ್ದ ಪಾಂಡ್ಯರಾಜನನ್ನು ಸೋಲಿಸದ ಹೊರತು ದ್ರವಿಡ ರಾಜರ ಬಲ ಕಡಿಮೆಯಾಗುವಂತಿರಲಿಲ್ಲ. ಪಾಂಡ್ಯರಾಜನನ್ನು ಖಾರವೇಲ ಯುದ್ಧದಲ್ಲಿ ಸೋಲಿಸಿದ; ಅವನಿಗೆ ಅಸಂಖ್ಯ ಮುತ್ತು-ರತ್ನಾದಿಗಳ ಕಪ್ಪ-ಕಾಣಿಕೆ ದೊರೆಯಿತು. ಈಗ ಅವನು “ಚಕ್ರವರ್ತಿ”ಯಾದ.

ಖಾರವೇಲನನ್ನು ಅರಸನನ್ನಾಗಿ ಪಡೆದ ಕಳಿಂಗದ ಪ್ರಜೆಗಳು ಧನ್ಯರಾದರು. ಹೀನ, ದೀನ, ಅಪಮಾನಿತರಾಗಿ ದಿನ ದೂಡುತ್ತಿದ್ದ ಆ ರಾಜ್ಯ ಮತ್ತೆ ಪರಾಕ್ರಮದಿಂದ ಮೇಲೆದ್ದಿತು. ಖಾರವೇಲ ಪಟ್ಟಕ್ಕೆ ಬಂದಾಗ ಕಳಿಂಗರಾಜ್ಯದ ಸೀಮೆ ಚಿಕ್ಕದಾಗಿತ್ತು. ಈಗ ಅದು ಬಹು ವಿಸ್ತಾರವಾದ ರಾಜ್ಯವಾಯಿತು. ಉತ್ತರದಿಕ್ಕಿನಲ್ಲಿ ತಕ್ಷಶಿಲೆ, ನೇಪಾಳದಿಂದ ಹಿಡಿದು ದಕ್ಷಿಣಕ್ಕೆ ಕನ್ಯಾಕುಮಾರಿಯ ತನಕ ಖಾರವೇಲನ ಖ್ಯಾತಿ ಹಬ್ಬಿತು. ಕಳಿಂಗದ ಇತಿಹಾಸದಲ್ಲಿ ಅದು ಸುವರ್ಣಯುಗವಾಯಿತು.

ಈ ದಿಗ್ವಿಜಯದಿಂದ ಹತ್ತು ದಿಕ್ಕುಗಳಲ್ಲಿಯೂ ಖಾರವೇಲನ ಕೀರ್ತಿ ಪಸರಿಸಿತು. ಶಿಶುವಾಗಿದ್ದಾಗ ಅವನ ಮೈಮೇಲಿನ ಲಕ್ಷಣಗಳನ್ನು ನೋಡಿ ಜ್ಯೋತಿಷಿಗಳು ಹೇಳಿದ್ದ ಭವಿಷ್ಯ ಸಂಪೂರ್ಣ ಸತ್ಯವಾಯಿತು.

ತಂದೆ-ತಾಯಿ ಇಟ್ಟ ಹೆಸರೂ ಸಾರ್ಥಕವಾಯಿತು. “ಖಾರವೇಲ” ಈ ಶಬ್ದದ ಅರ್ಥ “ಗಾಳಿಯಂತೆ ರಭಸದಿಂದ ಚಲಿಸುವವ”, “ಪ್ರತ್ಯಕ್ಷ ಬಿರುಗಾಳಿ”. ಖಾರವೇಲ ಪಟ್ಟಕ್ಕೆ ಬಂದ ಬಳಿಕ ತನ್ನ ರಾಜ್ಯದ ಸುತ್ತಲೂ ಕೆಲವೇ ವರ್ಷಗಳಲ್ಲಿ ರಭಸದಿಂದ ದಂಡೆತ್ತಿ ಹೋದದ್ದು ನೋಡಿದ ಶತ್ರುಗಳಿಗೆ ಅವನು ಪ್ರತ್ಯಕ್ಷ ವಾಯುದೇವರ ಅಪರಾವತಾರವೇ ಎನ್ನಿಸಿರಬೇಕು.

ಚಕ್ರವರ್ತಿ ಪದವಿ ಪಡೆದ ಖಾರವೇಲ ಜೈನಮತದ ಉದ್ಧಾರದ ಕಡೆ ಗಮನ ಹೊರಳಿಸಿದ. ಆಗ ಕಳಿಂಗ ರಾಜ್ಯದಲ್ಲಿ ಜೈನಮತಕ್ಕೆ ಅಳಿಗಾಲವೊದಗಿತ್ತು. ಸಾಮ್ರಾಟ ಅಶೋಕನು ಬೌದ್ಧಮತವನ್ನು ಸ್ವೀಕರಿಸಿದ ದಿನದಿಂದ ಭಾರತದಲ್ಲೆಲ್ಲ ಬೌದ್ಧಮತದ ಪ್ರಾಬಲ್ಯ ಹೆಚ್ಚಿತ್ತು.

ಆದುದರಿಂದ ಖಾರವೇಲ ಮಹಾವೀರ ಜಿನನ ಪಾದಸ್ಪರ್ಶದಿಂದ ಪವಿತ್ರವಾದ ಕುಮಾರೀಪರ್ವತದ ಮೇಲೆ ಜೈನ ಸನ್ಯಾಸಿಗಳ ಒಂದು ಮಹಾಸಮ್ಮೇಳನವನ್ನು ಸೇರಿಸಿದ. ಈ ಸಮ್ಮೇಳನಕ್ಕೆ ಸುಮಾರು ಮೂರು ಸಾವಿರದ ಐನೂರಕ್ಕಿಂತ ಹೆಚ್ಚು ಜೈನ ಸನ್ಯಾಸಿಗಳು ಬಂದಿದ್ದರು. ಅವರನ್ನೆಲ್ಲ ಖಾರವೇಲ ರಾಜೋಚಿತವಾಗಿ ಸತ್ಕರಿಸಿದ. ಆ ಪವಿತ್ರ ಪರ್ವತದ ಮೇಲೆ ನೆಲೆಸಲು ಯೋಗ್ಯ ಆಶ್ರಮಗಳನ್ನು ಕಟ್ಟಿಸಿಕೊಟ್ಟ. ಜೈನರಿಗೆ ಪವಿತ್ರವಾದ ಆಗಮ ಗ್ರಂಥಗಳು ಕಳೆದುಹೋಗಿದ್ದವು. ಅವುಗಳನ್ನು ಪುನಃ ರಚಿಸಲು ಆ ಜ್ಞಾನಿ, ತಪಸ್ವಿ, ಸನ್ಯಾಸಿಗಳಿಗೆ ಅನುಕೂಲತೆ ಮಾಡಿಕೊಟ್ಟ. ಮತ್ತೊಮ್ಮೆ ಜೈನಮತಕ್ಕೆ ಒಳ್ಳೆಯ ದಿನಗಳು ಬಂದವು. ಆದರೆ ಖಾರವೇಲ ಇತರ ಧರ್ಮಗಳನ್ನೂ ಗೌರವಿಸಿದ. ಅವುಗಳ ಅನುಯಾಯಿಗಳಿಗೆ ಯಾವ ತೊಂದರೆಯನ್ನೂ ಮಾಡಲಿಲ್ಲ.

ಹೀಗಿದ್ದನು ಖಾರವೇಲ! ಮಹಾಪರಾಕ್ರಮಿ, ಸರ್ವ ಮತಗಳನ್ನು ಸಮಾನತೆಯಿಂದ ನೋಡಿದವ, ಪ್ರಜೆಗಳಿಗೆ ಸಂಪೂರ್ಣ ಸುಖ ನೀಡಿದವ, ತನ್ನ ರಾಜ್ಯವನ್ನು ಅಧೋಗತಿಯ ನರಕದಿಂದ ಮೇಲೆತ್ತಿ ವೈಭವ ಶಿಖರದ ಮೇಲೆ ಪ್ರತಿಷ್ಠಾಪಿಸಿದವ, ತನ್ನವರು ಯಾರು, ಪರಕೀಯರು ಯಾರು ಎಂಬ ವಿವೇಕ ಇದ್ದವ, ಮಹಾ ವಿಜಯ, ಚಕ್ರವರ್ತಿ, ಜೈನಮತೋದ್ಧಾರಕ.

ಅವನ ಕುಟುಂಬ

ಆದರೆ ನಮ್ಮ ದುರ್ದೈವ! ಅವನ ಬಗ್ಗೆ ಹೆಚ್ಚಿನ ವಿವರಗಳು ಸಿಗುವುದಿಲ್ಲ. ಅವನು ಕೊನೆಯ ದಿನಗಳನ್ನು ಹೇಗೆ ಕಳೆದನೆಂಬುದು ತಿಳಿದಿಲ್ಲ. ಇಂಥ ಪುತ್ರರತ್ನವನ್ನು ಪಡೆದ ವೀರಮಾತೆಯ ಹೆಸರು ಸಹ ನಮಗೆ ಗೊತ್ತಿಲ್ಲ. ಎಂಥ ದುರ್ಭಾಗ್ಯ ನಮ್ಮದು!.

ಸುದೈವವೆಂದರೆ ಅವನ ಹೆಂಡಿರು-ಮಕ್ಕಳ ಬಗ್ಗೆ ಸ್ವಲ್ಪ ತಿಳಿದುಬಂದಿದೆ. ಅವನ ಪಟ್ಟದರಾಣಿ ಸಿಂಧುಲಾ ಎಂಬವಳು. ಇವಳು ಸಿಂಹಪಥದ ರಾಜಕುಮಾರಿ. ಇವಳು ಖಾರವೇಲನಂತೆಯೇ ಉದಾರಿಯಾಗಿದ್ದಳು. ಜೈನಮತದ ಪುನಃ ಪ್ರತಿಷ್ಠಾಪನೆಗಾಗಿ ದುಡಿದಳು. ಜೈನ ಸನ್ಯಾನಿಗಳಿಗೆ ಮಂದಿರ ಕಟ್ಟಿಸಿಕೊಟ್ಟಳು. ಜೈನ ಶ್ರಮಣರಿಗಾಗಿ ಗುಹಾ ನಿವಾಸ ನಿರ್ಮಿಸಿದಳು. ಅನೇಕ ಜೈನ ಸನ್ಯಾಸಿಗಳು ಇವಳ ಆಶ್ರಯದಲ್ಲಿ ಜೈನಮತದ ಪ್ರಚಾರ ಕಾರ್ಯ ಕೈಕೊಂಡರು.

ಖಾರವೇಲನ ಇನ್ನೊಬ್ಬ ರಾಣಿಯ ಉಲ್ಲೇಖ ಮೇಲೆ ಬಂದಿದೆ. ಅವಳೇ ವಜಿರಘರವತಿ. ಖಾರವೇಲನ ಆಳ್ವಿಕೆಯ ಏಳನೆಯ ವರ್ಷದಲ್ಲಿ ಇವಳು ರಾಜ್ಯಕ್ಕೆ ಉತ್ತರಾಧಿಕಾರಿಯನ್ನು ಹೆತ್ತಳು. ಆ ಪುತ್ರನ ಹೆಸರು ಕೂದೇಪ. ಇವನು ಶಕ್ತಿಸಂಪನ್ನನಾಗಿದ್ದನು.

ಶಿಲಾಲೇಖ ಹಾಡುತ್ತಿದೆ ಹಿರಿಮೆಯ ಹಾಡನ್ನು!

ಭುವನೇಶ್ವರದ ಸಮೀಪ ಒಂದು ಗುಹೆಯಿದೆ. ಅದರ ಹೆಸರು “ಹಾಥಿಗುಂಫಾ” (ಆನೆಗವಿ). ಆ ಗುಹೆಯಲ್ಲಿ ಒಂದು ಶಿಲಾಲೇಖವಿದೆ. ಈ ಶಿಲಾಲೇಖವೊಂದೇ ಖಾರವೇಲನ ಬಗ್ಗೆ ಕೆಲವು ಸಂಗತಿಗಳನ್ನು ಹೇಳುತ್ತದೆ. ಅವುಗಳನ್ನೇ ಮೇಲೆ ಕೊಡಲಾಗಿದೆ. ಈ ಶಿಲಾಲೇಖವು ಪ್ರಾಕೃತ ಭಾಷೆಯಲ್ಲಿದೆ. ಕೊನೆಯ ವಾಕ್ಯದ ಸಂಸ್ಕೃತ ರೂಪಾಂತರ ಹೀಗಾಗುತ್ತದೆ.

ಕ್ಷೇಮರಾಜಃ ಸಃ ವೃದ್ಧಿರಾಜಃ ಸಃ ಭಿಕ್ಷುರಾಜಃ ಧರ್ಮರಾಜಃ…. ಗುಣವಿಶೇಷಕುಶಲಃ ಸರ್ವಪಾರ್ಷದ ಪೂಜಕಃ ಸರ್ವದೇವಾಯತನಸಂಸ್ಕಾರಕಾರಕಃ ಅಪ್ರತಿಹತಚಕ್ರಹಿನೀಬಲಃ ಚಕ್ರಧರಃ ಗುಪ್ತಚಕ್ರಃ ಪ್ರವೃತ್ತ ಚಕ್ರಃ ರಾಜರ್ಷಿವಸುಕುಲವಿನಿಃಸೃಶಃ ಮಹಾವಿಜಯಃ ರಾಜಾ ಖಾರವೇಲಶ್ರೀ||

ಇದರ ಅರ್ಥ:

ಸಕಲೈಶ್ವರ್ಯಸಂಪನ್ನ ಖಾರವೇಲ ರಾಜನು ಕಲ್ಯಾಣಕಾರಿ ರಾಜನು, ಅಭಿವೃದ್ಧಿಯ ರಾಜನು, ಸನ್ಯಾಸಿಗಳ ರಾಜನು, ಧರ್ಮದ ರಾಜನು, ಅಲೌಕಿಕ ಗುಣಗಳುಳ್ಳವನು, ಎಲ್ಲ ಮತಗಳನ್ನು ಪೂಜಿಸಿದವನು, ಎಲ್ಲ ಮಂದಿರಗಳ ಜೀರ್ಣೋದ್ಧಾರ ಮಾಡಿದವನು. ಎದುರಿಸಲು ಅಸಾಧ್ಯವಾದ ಸೈನ್ಯವುಳ್ಳವನು, ಧರ್ಮ ಚಕ್ರವನ್ನು ರಕ್ಷಿಸಿ ಮುನ್ನಡೆಸಿದವನು, ರಾಜರ್ಷಿ ವಸುಕುಲದಲ್ಲಿ ಹುಟ್ಟಿದವನು ಮತ್ತು ಮಹಾವಿಜಯನು.