ಏನೂ ಇಲ್ಲದ ಖಾಲಿ ಸೈಟಿನ ಬದಿಗೆ,
ಒಂದು ದಿನ ಬಂದು ಬೀಳುತ್ತವೆ
ಜಲ್ಲಿ, ಮರಳು, ಸಿಮೆಂಟು, ಇಟ್ಟಿಗೆ
ಕಬ್ಬಿಣದ ಸಾಮಾನು.

ಹರಕು ಚಿಂದಿಯ ಒಣಕಲು ಮೋರೆಯ
ಕಡ್ಡಿ ಕಾಲಿನ ಕೂಲಿಗಳು ಹಗಲಿರುಳು
ಹೊರುತ್ತಾರೆ.

ಮೆತ್ತಗೆ ಗೋಡೆ, ಕಿಟಕಿ, ಛಾವಣಿ-
ಯಾಗಿ ಮನೆಯೆದ್ದು,
ಬಾಗಿಲಿಗೆ ತೂಗುತ್ತದೆ ಹಸಿರು ತೋರಣ.
ಮನೆಕಟ್ಟಿ ಮುಗಿಸಿದ ಕೂಲಿಗಳು
ಜರತಾರಿ ಸೀರೆಯಾಚೆಗೇ ನಿಂತು ಕೈಯೊಡ್ಡಿ
ಗೃಹಪ್ರವೇಶದೌತಣದ ಚೂರುಪಾರಿಗೆ
ಕಾದು ನಿಲ್ಲುತ್ತವೆ.

ಎದ್ದ ಮನೆಮೇಲೆ ಬಿಸಿಲು-ಮಳೆ-ಬೆಳುದಿಂಗಳಾಡಿ
ಅಡುಗೆ ಮನೆ ಹೊಗೆ ಕೊಳವೆಯಿಂದ ಹಬೆಯಾಡಿ,
ತೊಟ್ಟಿಲು ತೂಗಿ,
ಜನ ಬಂದು ಹೋಗಿ,
ಚಡ್ಡಿ ಲಂಗಗಳು ಪಂಚೆ-ಪ್ಯಾಂಟು ಸೀರೆಗಳಾಗಿ
ನೆಟ್ಟಗಿದ್ದವರ ಬೆನ್ನುಬಾಗಿ, ಕೋಲೂರಿ
ನಡೆದ ಯಜಮಾನರನ್ನು
ಒಂದು ದಿನ ಹೊತ್ತು ಸಾಗಿಸುತ್ತಾರೆ – ಹೊರಗೆ
ಏನೂ ಇಲ್ಲದ, ದೂರದ ಖಾಲಿ ಸೈಟಿನ ಕಡೆಗೆ.