ಆಂಧ್ರಪ್ರದೇಶದಲ್ಲಿ ಪೆನ್ನಾರ್ ನದಿ ಹರಿಯುತ್ತದೆ. ಅದರ ದಂಡೆಯ ಮೇಲೆ ನೆಲ್ಲೂರು ಇದೆ. ನದಿಯ ಆಚೆಯ ದಂಡೆಯಲ್ಲಿ ಜೊನ್ನವಾಡ ಎಂಬ ಸಣ್ಣ ಊರು. ಜೊನ್ನವಾಡದ ಪಕ್ಕದ ಗುಡ್ಡದ ಮೇಲೆ ನರಸಿಂಹ ಸ್ವಾಮಿಯ ದೇವಸ್ಥಾನ ಇದೆ. ಇದು ಸುಂದರವಾದ ಸ್ಥಳ. ನೆಲ್ಲೂರಿನಿಂದ ಜೊನ್ನವಾಡಕ್ಕೆ ಹೋಗುವವರು ಸೇತುವೆಯ ಮೇಲೆ ನದಿಯನ್ನು ದಾಟಿಕೊಂಡು ಹೋಗಬೇಕು. ಹಿಂದೆ ಅಲ್ಲಿ ಸೇತುವೆ ಇರಲಿಲ್ಲ. ಮಳೆಗಾಲದ ಹೊರತು ನದಿಯಲ್ಲಿ ನೀರೇ ಇರುವುದಿಲ್ಲ. ಆಗ ನದಿಯ ಪಾತ್ರದಲ್ಲೇ ನಡೆದುಕೊಂಡು ಹೋಗಬಹುದು. ಒಂದು ಸಲ ನೆಲ್ಲೂರಿನ ಆರೇಳು ಹುಡುಗರು ನರಸಿಂಹಸ್ವಾಮಿಯ ದೇವಸ್ಥಾನ ನೋಡಲು ನಡೆದುಕೊಂಡು ಹೋದರು. ದೇವಸ್ಥಾನ ನೋಡಿದರು. ಅನಂತರ ತಮ್ಮ ಬಳಿ ಇದ್ದ ಕಾಸಿನಲ್ಲಿ ಬೆಂಡು, ಬತ್ತಾಸು, ಪುರಿ, ಹುರಿಗಡಲೆ ಕೊಂಡು ತಿಂದರು. ಮನದಣಿಯೆ ಆಟವಾಡಿದರು. ಸಂಜೆಯಾಗುವಷ್ಟರಲ್ಲಿ ದೇಹ ದಣಿಯಿತು. ಹೆಜ್ಜೆ ಎತ್ತಿ ಇಡಲಾರದಷ್ಟು ಸೋತುಹೋಗಿದ್ದರು. ಇನ್ನು ನೆಲ್ಲೂರಿಗೆ ಮರಳುವುದು ಹೇಗೆ ಎಂದು ಯೋಚನೆಯಾಯಿತು. ಕೊನೆಗೆ ಎಲ್ಲರೂ ಸೇರಿ ಒಂದು ಜಟಕಾವನ್ನು ಬಾಡಿಗೆಗೆ ಹಿಡಿದರು. ಆದರೆ ನೆಲ್ಲೂರು ಹತ್ತಿರ ಬರುತ್ತಿದ್ದಂತೆಯೇ ಅವರಿಗೆಲ್ಲಾ ಹೆದರಿಕೆ ಪ್ರಾರಂಭವಾಯಿತು. ಯಾರ ಬಳಿಯೂ ಬಿಡಿಕಾಸೂ ಇರಲಿಲ್ಲ. ಇದ್ದ ಹಣವೆಲ್ಲಾ ತಿಂಡಿತೀರ್ಥಗಳಿಗೆ ಖರ್ಚಾಗಿತ್ತು. ಜಟಕಾದವನಿಗೆ ಗಾಡಿ ಬಾಡಿಗೆ ಕೊಡುವುದು ಹೇಗೆ? ಗಾಡಿ ಊರೊಳಗೆ ಪ್ರವೇಶಿಸುತ್ತಿದ್ದಂತೆಯೇ ಹುಡುಗರೆಲ್ಲಾ ಒಬ್ಬೊಬ್ಬರಾಗಿ ಹಿಂದಿನಿಂದ ಧುಮುಕಿ ಪಲಾಯನ ಮಾಡಿದರು. ಆದರೆ ಅವರಲ್ಲಿ ಒಬ್ಬ ಮಾತ್ರ ಇಳಿಯಲಿಲ್ಲ. ಗಾಡಿ ಬಾಡಿಗೆ ಕೊಡದೆ ಹೀಗೆ ಕಳ್ಳರಂತೆ ತಪ್ಪಿಸಿಕೊಂಡು ಹೋಗುವುದು ಅವನ ಮನಸ್ಸಿಗೆ ಒಪ್ಪಿಗೆಯಾಗಲಿಲ್ಲ. ಆದರೆ ಅವನ ಬಳಿಯೂ ಹಣವಿಲ್ಲ. ಕೊನೆಗೆ ತನ್ನ ಬಟ್ಟೆಯನ್ನೇ ಬಿಚ್ಚಿಕೊಡುವುದೆಂದು ತೀರ್ಮಾನಿಸಿದ. ಒಂದು ಅರಳೀಕಟ್ಟೆಯ ಹತ್ತಿರ ಜಟಕಾ ನಿಲ್ಲಿಸಿದ. ತನ್ನ ಬಟ್ಟೆಗಳನ್ನು ಜಟಕಾದವನಿಗೆ ಬಿಚ್ಚಿಕೊಟ್ಟು ಬೆತ್ತಲೆಯಾಗಿ ಮನೆಗೆ ಓಡಿ ಹೋದ.

ಚಿಕ್ಕಂದಿನಲ್ಲೇ ಇಂಥ ಅಸಾಮಾನ್ಯ ಪ್ರಾಮಾಣಿಕತೆಯನ್ನು ಪ್ರದರ್ಶಿಸಿದ ಹುಡುಗನ ಹೆಸರು ಖಾಸಾ ಸುಬ್ಬರಾವ್‌. ಮುಂದೆ ಈತ ಸ್ವಾತಂತ್ಯ್ರ ಹೋರಾಟಗಾರನಾಗಿ, ಪತ್ರಿಕಾ ಸಂಪಾದಕನಾಗಿ ದೇಶಕ್ಕೆ ಸಲ್ಲಿಸಿದ ಸೇವೆ ಸದಾ ನೆನಪಿನಲ್ಲಿ ಉಳಿಯುವಂಥದು.

ಜನನ

೧೮೯೬ನೆಯ ಇಸವಿ ಜನವರಿ ೨೩ ರಂದು ಖಾಸಾ ಸುಬ್ಬರಾಯರು ಆಂಧ್ರಪ್ರದೇಶದ ನೆಲ್ಲೂರಿನಲ್ಲಿ ಜನಿಸಿದರು. ಅವರ ತಂದೆಯ ಹೆಸರು ಸುಂದರ ರಾಜಾರಾವ್‌. ತಾಯಿ ರಮಾಬಾಯಿ. ಅವರದು ಮಧ್ಯಮ ವರ್ಗದ ಕುಟುಂಬ. ಮನೆಯ ಮಾತು ತೆಲುಗು. ಸುಬ್ಬರಾಯರೇ ಅವರ ಹಿರಿಯ ಮಗ. ಅನಂತರ ಇಬ್ಬರು ಮಕ್ಕಳು ಹುಟ್ಟಿದರು. ತಂದೆ ಸುಂದರ ರಾಜಾರಾವ್‌ನೆಲ್ಲೂರಿನ ಕಲೆಕ್ಟರರ ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ಬರುತ್ತಿದ್ದ ಸ್ವಲ್ಪ ವರಮಾನದಲ್ಲೇ ನೆಮ್ಮದಿಯಿಂದ ಜೀವನಮಾಡುತ್ತಿದ್ದರು. ತಾಯಿ ರಮಾಬಾಯಿ ತುಂಬ ಲಕ್ಷಣವಂತೆ, ಉದಾರಿ. ದೊಡ್ಡತನ ಆಕೆಯ ಗುಣ. ಆಕೆಗೆ ಧಾರ್ಮಿಕ ಸಂಪ್ರದಾಯಗಳಲ್ಲಿ ತುಂಬುನಿಷ್ಠೆ. ನೆರೆಹೊರೆಯವರ ವಿಷಯದಲ್ಲಿ ಕರುಣೆ, ಸಹಾಯಪರತೆ ಅವರ ಹುಟ್ಟುಗುಣ. ಕಷ್ಟದಲ್ಲಿ ಇರುವವರಿಗೆ ತಮ್ಮ ಕೈಲಾದ ಸಹಾಯಮಾಡಲು ಯಾವಾಗಲೂ ಅವರು ಮುಂದು. ಮೂಕ ಪ್ರಾಣಿಗಳ ವಿಷಯದಲ್ಲೂ ಅವರಿಗೆ ಅಪಾರ ಕರುಣೆ. ತಾಯಿಯ ಗುಣಗಳಾದ ದಯೆ, ಔದಾರ್ಯಗಳು ಸುಬ್ಬರಾಯರಿಗೂ ಬಳುವಳಿಯಾಗಿ ಬಂದವು. ತಾಯಿಯ ರೂಪವೂ ಮಗನಿಗೆಬಂತು. ಸುಬ್ಬರಾವ್‌ಸುಂದರ ತರುಣರಾಗಿ ಬೆಳೆದರು.

ಮೊಳಕೆ

ಬಾಲ್ಯದಿಂದಲೇ ರಾಷ್ಟ್ರದ ಆಗುಹೋಗುಗಳ ಕಡೆಗೆ ಸುಬ್ಬರಾಯರ ಗಮನ ಹರಿಯುತ್ತಿತ್ತು. ಅದು ಸ್ವಾತಂತ್ಯ್ರದ ಆಂದೋಲನ ಕ್ರಮಕ್ರಮೇಣ ಹಬ್ಬುತ್ತಿದ್ದ ಕಾಲ. ಆಗ ‘ಬಂದೇ ಮಾತರಂ’ (ವಂದೇ ಮಾತರಂ) ಎಂಬ ಪತ್ರಿಕೆ ಒಳ್ಳೆಯ ಪ್ರಚಾರದಲ್ಲಿತ್ತು. ಅದನ್ನು ನಡೆಸುತ್ತಿದ್ದವರು ಅರವಿಂದ ಘೋಷ್‌. ಪತ್ರಿಕೆಯ ಬೆಲೆ ಒಂಬತ್ತು ಕಾಸು. (ಈಗಿನ ಲೆಕ್ಕದಲ್ಲಿ ನಾಲ್ಕೂವರೆ ಪೈಸೆ). ಆ ಕಾಲದಲ್ಲಿ ಒಂಬತ್ತು ಕಾಸು ಕೂಡ ಹುಡುಗರ ಪಾಲಿಗೆ ಒಂದು ದೊಡ್ಡ ಮೊತ್ತವೇ. ಏಕೆಂದರೆ ಆಗ ಮಕ್ಕಳ ಕೈಗೆ ತಂದೆತಾಯಿಗಳು ಸುಲಭವಾಗಿ ಹಣಕೊಡುತ್ತಿರಲಿಲ್ಲ. ಸುಬ್ಬರಾಯರಿಗೆ ಈ ‘ಬಂದೇ ಮಾತರಂ’ ಪತ್ರಿಕೆಯನ್ನು ಓದಬೇಕೆಂದು ಆಸೆ. ಅದಕ್ಕಾಗಿ ತನ್ನ ಕೆಲವರು ಸ್ನೇಹಿತರನ್ನು ಸೇರಿಸಿಕೊಂಡು ಒಂದು ಸಣ್ಣ ಸಂಘ ಮಾಡಿಕೊಂಡರು. ಪತ್ರಿಕೆಯನ್ನು ಕೊಳ್ಳಲು ದಿನಾ ತಲಾ ಒಂದೊಂದು ಕಾಸು ಸಂಗ್ರಹಿಸಿದರು. ಆ ಹಣದಿಂದ ನಿತ್ಯ ಸಂಜೆ ‘ಬಂದೇ ಮಾತರಂ’ ಪತ್ರಿಕೆಯನ್ನು ಕೊಂಡು, ಏಕಾಂತಸ್ಥಳಕ್ಕೆ ಹೋಗಿ, ಗೆಳೆಯರೆಲ್ಲ ಸೇರಿ ಅದನ್ನು ಓದುತ್ತಿದ್ದರು. ಅದರಲ್ಲಿ ಇರುತ್ತಿದ್ದ ಎಷ್ಟೋ ಸಂಗತಿಗಳು ಅವರಿಗೆ ಅರ್ಥವಾಗುತ್ತಿರಲಿಲ್ಲ. ಆದರೂ ದೇಶದಲ್ಲಿ ಮುಖ್ಯವಾದದ್ದು ಏನೋ ಆಗುತ್ತಿದೆ ಎಂದು ಗೊತ್ತಾಗುತ್ತಿತ್ತು. ಅದರಲ್ಲಿ ತಾವೂ ಪಾಳ್ಗೊಳ್ಳುತ್ತಿದ್ದೇವೆ ಎಂಬ ಭಾವನೆ ಅವರಲ್ಲಿ ಮೂಡುತ್ತಿತ್ತು. ಹೀಗೆ ಚಿಕ್ಕಂದಿನಲ್ಲೆ ಅವರಲ್ಲಿ ರಾಷ್ಟ್ರೀಯ ಭಾವನೆ ಜಾಗೃತವಾಯಿತು. ಇದೇ ಕ್ರಮೇಣ ಬೆಳೆದು ಮುಂದೆ ಖಾಸಾ ಸುಬ್ಬರಾಯರು ಉಜ್ವಲ ರಾಷ್ಟ್ರಭಕ್ತರಾದರು.

ವಿದ್ಯಾಭ್ಯಾಸ

ಸುಬ್ಬರಾಯರ ಬಾಲ್ಯ, ವಿದ್ಯಾಭ್ಯಾಸ ನೆಲ್ಲೂರಿನಲ್ಲೇ ನಡೆಯಿತು. ಅಲ್ಲಿನ ವಿ.ಆರ್. ಪ್ರೌಢಶಾಲೆಯಲ್ಲಿ ವ್ಯಾಸಂಗಮಾಡಿ ಮೆಟ್ರಿಕ್ಯುಲೇಷನ್‌ಪರೀಕ್ಷೆಯಲ್ಲಿ ತೇರ್ಗಡೆಯಾದರು. ಮುಂದಿನ ವಿದ್ಯಾಭ್ಯಾಸಕ್ಕಾಗಿ ಅವರು ತಮ್ಮ ಹದಿನೈದನೆಯ ವಯಸ್ಸಿನಲ್ಲಿ ಮದರಾಸಿಗೆ ಬಂದರು. ಅಲ್ಲಿಯ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅವರ ವಿದ್ಯಾಭ್ಯಾಸ ಮುಂದುವರಿಯಿತು. ತತ್ವಶಾಸ್ತ್ರವನ್ನು ಐಚ್ಛಿಕ ವಿಷಯವಾಗಿ ಆರಿಸಿಕೊಂಡರು. ಆಗ ಅಲ್ಲಿ ಡಾಕ್ಟರ್ ಎಸ್‌. ರಾಧಾಕೃಷ್ಣನ್‌ತತ್ವಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು.  ಸುಬ್ಬರಾವ್‌ತತ್ವಶಾಸ್ತ್ರವನ್ನು ಆರಿಸಿಕೊಂಡಿದ್ದಕ್ಕೆ ಇದೂ ಒಂದು ದೊಡ್ಡ ಆಕರ್ಷಣೆ. ರಾಧಾಕೃಷ್ಣನ್‌ಅವರು ಪಾಠ ಹೇಳುವ ವೈಖರಿ, ಅವರ ಆಳವಾದ ಪಾಂಡಿತ್ಯ ವಿದ್ಯಾರ್ಥಿಗಳನ್ನು ಬೆರಗುಗೊಳಿಸುತ್ತಿತ್ತು. ರಾಧಾಕೃಷ್ಣನ್‌ಅವರ ಶಿಷ್ಯರೆಂದು ಹೇಳಿಕೊಳ್ಳಲು ಹೆಮ್ಮೆ. ಇಂಥ ಗುರುಗಳ ಮಾರ್ಗದರ್ಶನದಲ್ಲಿ ವ್ಯಾಸಂಗ ಮಾಡಿ ಸುಬ್ಬರಾವ್‌ಪದವೀಧರರಾದರು.

ಮದರಾಸಿನ ಕಾಲೇಜಿನಲ್ಲಿ ಓದುತ್ತಿದ್ದಾಗ ಸುಬ್ಬರಾಯರಿಗೆ ಸಿ.ಎಸ್‌. ರಂಗಸ್ವಾಮಿ ಎಂಬ ಸಹಪಾಠಿಯ ಪರಿಚಯವಾಯಿತು. ಮುಂದೆ ಈ ಪರಿಚಯ ಬೆಳೆದು ಗಾಢವಾದ ಸ್ನೇಹವಾಯಿತು. ಮದರಾಸಿನಲ್ಲಿ ಓದುವಾಗ ಸುಬ್ಬರಾಯರು ರಂಗಸ್ವಾಮಿಯವರ ಮನೆಯಲ್ಲೇ ತಂಗಿದ್ದರು. ತಮ್ಮ ನಯ, ವಿನಯ ಮತ್ತು ಪ್ರಾಮಾಣಿಕ ನಡವಳಿಕೆಯಿಂದ ಮನೆಯವರೆಲ್ಲರ ಪ್ರೀತಿಯನ್ನು ಗೆದ್ದುಕೊಂಡು ಮನೆಯವರೇ ಆದರು.

ಉದ್ಯೋಗ

೧೯೧೮ರಲ್ಲಿ ಪದವೀಧರರಾಗುತ್ತಿದ್ದಂತೆಯೇ ಸುಬ್ಬರಾಯರಿಗೆ ಬಿಹಾರಿನ ಅಮಾವನ್‌ಸಂಸ್ಥಾನದ ರಾಜನ ಆಪ್ತ ಕಾರ್ಯದರ್ಶಿಯಾಗಿ ಕೆಲಸಮಾಡುವ ಅವಕಾಶ ಸಿಕ್ಕಿತು. ಅವರ ಗೆಳೆಯ ರಂಗಸ್ವಾಮಿಯವರಿಗೆ ಬಿಹಾರಿನ ಇನ್ನೊಂದು ಸಂಸ್ಥಾನವಾದ ದರ್ಭಾಂಗದ ರಾಜನ ಬಳಿ ಆಪ್ತ ಕಾರ್ಯದರ್ಶಿಯಾಗಿ ಕೆಲಸ ಸಿಕ್ಕಿತು. ಸುಬ್ಬರಾಯರು ಅಮಾವನ್‌ನಲ್ಲಿ ಸ್ವಲ್ಪಕಾಲ ಕೆಲಸ ಮಾಡಿದರು ಅಷ್ಟೆ. ಅವರ ಮನಸ್ಸು ಹೆಚ್ಚಿನ ವಿದ್ಯೆಗಾಗಿ ಹಾತೊರೆಯುತ್ತಿತ್ತು. ಒಂದು ಕಡೆ ಕಟ್ಟಿಹಾಕಿದಂತೆ ನಿಲ್ಲುವ ಚೇತನ ಅವರದಲ್ಲ. ಅವರು ವಕೀಲಿ ಪರೀಕ್ಷೆಗೆ ಓದಲು ನಿರ್ಧರಿಸಿದರು. ಆದ್ದರಿಂದ ತಮ್ಮ ಕೆಲಸಕ್ಕೆ ರಾಜೀನಾಮೆ ಕೊಟ್ಟು, ರಾಜಮಹೇಂದ್ರಿಯಲ್ಲಿ ಫಸ್ಟ್‌ಗ್ರೇಡ್‌ಪ್ಲೀಡರ್ ಪರೀಕ್ಷೆಗೆ ಓದಿ ತೇರ್ಗಡೆಯಾದರು. ಇದರಿಂದ ಅಧೀನ ನ್ಯಾಯಾಲಯಗಳಲ್ಲಿ ವಕಾಲತ್ತು ವಹಿಸಲು ಅವರು ಅರ್ಹರಾದರು. ಆದರೆ ವಕೀಲಿ ವೃತ್ತಿಯನ್ನು ಅವರು ಹಿಡಿಯಲೇ ಇಲ್ಲ. ರಾಜಮಹೇಂದ್ರಿಯಲ್ಲೇ ಶಿಕ್ಷಕರ ತರಬೇತಿಯನ್ನು ಮಾಡಿಕೊಂಡು ನೆಲ್ಲೂರು ಜಿಲ್ಲೆಯ ಆತ್ಮಕೂರಿನ ಪ್ರೌಢಶಾಲೆಯಲ್ಲಿ ಉಪಾಧ್ಯಾಯರಾಗಿ ಕೆಲಸಕ್ಕೆ ಸೇರಿದರು. ಉತ್ಸಾಹದಿಂದ ಮಕ್ಕಳಿಗೆ ಪಾಠ ಹೇಳಿಕೊಡತೊಡಗಿದರು. ಪಾಠ ಹೇಳುವುದರ ಜೊತೆಗೆ ಅವರನ್ನು ಉತ್ತಮ ಪ್ರಜೆಗಳನ್ನಾಗಿ ಮಾಡುವುದೂ ಉಪಾಧ್ಯಾಯರಾದ ತಮ್ಮ ಜವಾಬ್ದಾರಿ ಎಂದು ಸುಬ್ಬರಾಯರು ಅರಿತಿದ್ದರು. ಎಂದೇ ಮಕ್ಕಳ ಮನಸ್ಸನ್ನು ತಿದ್ದುವ ಕಡೆಗೂ ತಮ್ಮ ಗಮನ ಹರಸಿದರು.

ಆಗ ಗಾಂಧೀಜಿಯವರ ವಿಚಾರಧಾರೆ ದೇಶದ ಆದ್ಯಂತ ಹಬ್ಬಿದ್ದ ಕಾಲ. ಬಡವರ ಉದ್ಧಾರ, ವಿದ್ಯೆಯ ಪ್ರಸಾರ, ಮಹಿಳೆಯರಿಗೆ ಸಮಾನವಾದ ಸ್ಥಾನಮಾನ ಮುಂತಾದ ವಿಚಾರಗಳು ಎಲ್ಲರ ತಲೆಯನ್ನೂ ತುಂಬಿದ್ದವು. ಅನಕ್ಷರಸ್ಥರಿಗೆ ಅಕ್ಷರ ಕಲಿಸುವುದನ್ನು ‘ವಯಸ್ಕರ ಶಿಕ್ಷಣ’ ಎಂಬ ಹೆಸರಿನಲ್ಲಿ ಪ್ರಾರಂಭಿಸಲಾಗಿತ್ತು. ಖಾಸಾ ಸುಬ್ಬರಾಯರು ವಯಸ್ಕರಿಗಾಗಿ ಒಂದು ಸಂಜೆಯ ಶಾಲೆಯನ್ನು ತಮ್ಮ ಮನೆಯ ಮುಂದೆಯೇ ತೆರೆದರು. ಹಗಲೆಲ್ಲ ಪ್ರೌಢಶಾಲೆಯಲ್ಲಿ ಪಾಠ ಹೇಳಿ ದಣಿದುಬಂದರೂ ತಮ್ಮ ಸಂಜೆಯ ಶಾಲೆಯಲ್ಲಿ ವಯಸ್ಕರಿಗೆ ಉತ್ಸಾಹದಿಂದ ಪಾಠ ಕಲಿಸುತ್ತಿದ್ದರು. ಸುಮಾರು ನಲವತ್ತಕ್ಕೂ ಹೆಚ್ಚು ಜನ ರೈತರು ಈ ತರಗತಿಗಳಿಗೆ ಬರುತ್ತಿದ್ದರು. ಅವರಿಗೆ ಸುಬ್ಬರಾಯರು ಅಕ್ಷರಾಭ್ಯಾಸ ಮಾಡಿಸಿ ಓದುವುದನ್ನೂ ಬರೆಯುವುದನ್ನೂ ಕಲಿಸುತ್ತಿದ್ದರು. ಅಲ್ಲದೆ ಪ್ರತಿನಿತ್ಯ ಪಾಠವಾದಮೇಲೆ ಅರ್ಧ ಘಂಟೆಯ ಕಾಲ ಪ್ರಪಂಚದ ಆಗುಹೋಗುಗಳನ್ನು ವಿವರಿಸುತ್ತಿದ್ದರು.

ಪತ್ರಿಕೋದ್ಯೋಗ

೧೯೨೪ರಲ್ಲಿ ಮದರಾಸಿನಿಂದ ‘ಸ್ವರಾಜ್ಯ’ ಎಂದು ಇಂಗ್ಲಿಷ್‌ದಿನಪತ್ರಿಕೆ ಪ್ರಾರಂಭವಾಯಿತು. ಅದರ ಸಂಸ್ಥಾಪಕರು ‘ಆಂಧ್ರ ಕೇಸರಿ’ ಎಂದು ಹೆಸರಾಗಿದ್ದ ಪ್ರಕಾಶಂ ಅವರು. ಆ ಪತ್ರಿಕೆಗೆ ಸೇರಲು ಸುಬ್ಬರಾಯರಿಗೆ ಪ್ರಕಾಶಂ ಅವರಿಂದ ಕರೆಬಂತು. ಪತ್ರಿಕೆಯ ಮುಖಾಂತರ ತಮ್ಮ ಅಭಿಪ್ರಾಯಗಳನ್ನು, ಭಾವನೆಗಳನ್ನು ಹೆಚ್ಚಿನ ಜನಕ್ಕೆ ತಿಳಿಸಬಹುದು ಎಂದು ಯೋಚಿಸಿ ಖಾಸಾ ಸುಬ್ಬರಾಯರು ‘ಸ್ವರಾಜ್ಯ’ ಪತ್ರಿಕೆಗೆ ಸಹ ಸಂಪಾದಕರಾಗಿ ಸೇರಿದರು. ಅಲ್ಲಿ ಅವರು ಹನ್ನೆರಡು ವರ್ಷಗಳ ಕಾಲ ಕೆಲಸ ಮಾಡಿದರು. ಅವು ಬಹಳ ಕಷ್ಟದ ದಿನಗಳು. ಪತ್ರಿಕೆಗೆ ಸಾಕಷ್ಟು ಪ್ರಚಾರ ಇರಲಿಲ್ಲ. ಬಡತನದಲ್ಲೇ ಪತ್ರಿಕೆ ನಡೆಯುತ್ತಿತ್ತು. ಸಂಬಳ ಸಿಕ್ಕಿದಾಗ ಸಿಕ್ಕಿತು, ಇಲ್ಲದಾಗ ಇಲ್ಲ. ಆದರೆ ದಿಟ್ಟತನಕ್ಕೇನೂ ಕೊರತೆ ಇರಲಿಲ್ಲ. ಸರ್ಕಾರವನ್ನು ನಿರ್ಭೀತವಾಗಿ ಟೀಕಿಸುತ್ತಿದ್ದುದರಿಂದ ‘ಸ್ವರಾಜ್ಯ’ ಬ್ರಿಟಿಷ್‌ಸರ್ಕಾರದ ಅವಕೃಪೆಗೂ ಪಾತ್ರವಾಗಿತ್ತು. ಆದರೂ ‘ಸ್ವರಾಜ್ಯ’ವನ್ನು ಹೀಗೆ ನಿರ್ಭೀತ ಪತ್ರಿಕೆಯಾಗಿ ಬೆಳೆಸಿದರಲ್ಲಿ ಖಾಸಾ ಸುಬ್ಬರಾಯರ ಪಾತ್ರ ಹಾಗೂ ತ್ಯಾಗ ಹಿರಿದು.

ಅಸಹಕಾರ ಚಳವಳಿಯ ಪ್ರತಿಪಾದನೆ ಮಾಡುತ್ತಿದ್ದ ಪತ್ರಿಕೆಗಳಲ್ಲಿ ‘ಸ್ವರಾಜ್ಯ’ ಪ್ರಮುಖವಾದುದು. ಸ್ವಾತಂತ್ಯ್ರ ಹೋರಾಟದಲ್ಲಿ ಇದೊಂದು ಮುಖ್ಯ ಅಸ್ತ್ರವಾಗಿತ್ತು. ಜನತೆಯಲ್ಲಿ ಹೋರಾಟದ ಭಾವನೆಯನ್ನು ಉದ್ದೀಪನಗೊಳಿಸಿ, ಸ್ವಾತಂತ್ಯ್ರಕ್ಕಾಗಿ ಪ್ರಾಣಕೊಡಲೂ ಸಿದ್ಧರಾಗುವಂತೆ  ಪ್ರೇರೇಪಿಸಿತು. ‘ಸ್ವರಾಜ್ಯ’ ಪತ್ರಿಕೆಯ ಕಚೇರಿಯ ಮುಂದೆ ಹೊಸಹೊಸ ಸುದ್ದಿಗಾಗಿ ಜನ ಹೇಗೆ ಜಮಾಯಿಸುತ್ತಿದ್ದರೆಂದರೆ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿತ್ತು. ದೇಶಭಕ್ತರು ಹಾಗೂ ಸ್ವಾತಂತ್ರ ಹೋರಾಟಗಾರರಿಗೆ ‘ಸ್ವರಾಜ್ಯ’ ಪತ್ರಿಕೆಯ ಕಚೇರಿ ಒಂದು ಪವಿತ್ರ ಯಾತ್ರಾಸ್ಥಳವಾಯಿತು. ‘ಸ್ವರಾಜ್ಯ’ ಜನರಪಾಲಿಗೆ ಉಲ್ಲಾಸಕಾರಿಯಾಗಿತ್ತು. ರಕ್ಷಕವಾಗಿತ್ತು. ಸಾಹಸಕ್ಕೆ ಹುರಿದುಂಬಿಸುವ ಸ್ಪೂರ್ತಿಯ ಸೆಲೆಯಾಗಿತ್ತು. ಇಷ್ಟೆಲ್ಲ ಇದ್ದರೂ ಪ್ರಕಾಶಂ ಉತ್ತಮ ವ್ಯವಹಾರಸ್ಥರಲ್ಲವಾದ್ದರಿಂದ ಪತ್ರಿಕೆ ನಷ್ಟದಲ್ಲೇ ನಡೆಯುತ್ತಿತ್ತು. ಅಲ್ಲಿ ಕೆಲಸಮಾಡುತ್ತಿದ್ದವರಿಗೆ ಎಷ್ಟೋಸಲ ಒಂದುಹೊತ್ತಿನ ಊಟಕ್ಕೂ ತೊಂದರೆಯಾಗುತ್ತಿತ್ತು. ಆದರೂ, ದಾಸ್ಯಕ್ಕೆ ಸಿಕ್ಕಿದ ಭಾರತದ ಬಂಧವಿಮೋಚನೆಗಾಗಿ ದೃಢನಿಷ್ಠೆಯಿಂದ ಅಲ್ಲಿದ್ದ ಜನ ಕೆಲಸಮಾಡುತ್ತಿದ್ದರು. ಆದರೆ ಕಾಲಕ್ರಮೇಣ ಪರಿಸ್ಥಿತಿಯೇನೂ ಸುಧಾರಿಸಲಿಲ್ಲ. ಎಷ್ಟೋ ಜನ ಅತೃಪ್ತ ಕೆಲಸಗಾರರು ಪತ್ರಿಕೆಯನ್ನು ಬಿಟ್ಟುಹೋದರು. ಆದರೆ ಖಾಸಾ ಸುಬ್ಬರಾವ್‌ಮತ್ತು ಅವರ ಸಹೋದ್ಯೋಗಿ ಜಿ.ವಿ. ಕೃಪಾನಿಧಿ ಮಾತ್ರ ಪತ್ರಿಕೆಯನ್ನು ಬಿಡಲಿಲ್ಲ.

ಜಗಳ ಆಡಲಾರೆ

ಒಂದು ಸಲ ಕೃಪಾನಿಧಿ, ಸುಬ್ಬರಾಯರನ್ನು ಕರೆದು, ತಮ್ಮ ಸಂಬಳವನ್ನು ಹೆಚ್ಚಿಸುವಂತೆ ಪ್ರಕಾಶಂ ಅವರನ್ನು ಕೇಳಲು ಕಳುಹಿಸಿದರು. ಸುಬ್ಬರಾಯರಿಗೆ ಇದು ಮನಸ್ಸಿಲ್ಲದ ಕೆಲಸ. ಆದರೂ ಗೆಳೆಯನ ಒತ್ತಾಯಕ್ಕೆ ಸಂಪಾದಕರ ಕೋಣೆಗೆ ಹೋದರು. ಒಳಗೆ ಪ್ರಕಾಶಂ ಒಂದು ಹರಕಲು ಅಂಗಿ ಹಾಕಿಕೊಂಡು ಏನೋ ಬರೆಯುತ್ತಾ ಕುಳಿತಿದ್ದರು. ಅವರನ್ನು ನೋಡಿದರೆ ಮೂರು ದಿನದಿಂದ ಸರಿಯಾಗಿ ಊಟ ಮಾಡಿದಂತೆ ಕಾಣುತ್ತಿರಲಿಲ್ಲ. ಸುಬ್ಬರಾಯರಿಗೆ ಅವರನ್ನು ಕಷ್ಟಕ್ಕೆ ಸಿಕ್ಕಿಸಲು ಮನಸ್ಸು ಬರಲಿಲ್ಲ. ಬೇರೆ ಏನನ್ನೋ ಮಾತನಾಡಿಕೊಂಡು ಹೊರಗೆ ಬಂದರು. ಆತುರದಿಂದ ಕಾಯುತ್ತಿದ್ದ ಮಿತ್ರರು ಹೋದ ಕೆಲಸ ಏನಾಯಿತು ಎಂದು ಕೇಳಿದಾಗ ಸುಬ್ಬರಾಯರು, “ಅವರ ಸ್ಥಿತಿ ನೋಡಿ ಅವರ ಬಳಿ ವಾಗ್ವಾದ ಮಾಡಲು ನನಗೆ ಮನಸ್ಸು ಬರಲಿಲ್ಲ. ನಮಗೆ ಅಷ್ಟೂ ವಿವೇಚನೆ ಬೇಡವೆ? ನನ್ನ ಕೈಲಂತೂ ಜಗಳವಾಡಲು ಸಾಧ್ಯವಿಲ್ಲಪ್ಪ!” ಎಂದರು. ಸುಬ್ಬರಾಯರು ಹೊರನೋಟಕ್ಕೆ ನಿಷ್ಠುರರಾಗಿ ತೋರಿದರೂ ಅವರ ಹೃದಯ ಮೃದು.

ಪ್ರಕಾಶಂ ಅಸೆಂಬ್ಲಿಯ ಸದಸ್ಯರೂ ಆಗಿದ್ದರು. ಒಂದು ಸಲ ಅವರು ಅಂಚೆ ಕೆಲಸಗಾರರ ದುಃಸ್ಥಿತಿ ಕುರಿತು ಅಸೆಂಬ್ಲಿಯಲ್ಲಿ ಭಾಷಣಮಾಡಿದರು. ಆದರೆ ಆ ಭಾಷಣವನ್ನು ‘ಸ್ವರಾಜ್ಯ’ದಲ್ಲಿ ಪ್ರಕಟಿಸಲು ಖಾಸಾ ಸುಬ್ಬರಾಯರು ಒಪ್ಪಲಿಲ್ಲ. ‘ಸ್ವರಾಜ್ಯ’ದ ಕೆಲಸಗಾರರ ಸ್ಥಿತಿ ಇನ್ನೂ ಕೀಳಾಗಿರುವಾಗ, ಅಂಚೆ ಕೆಲಸಗಾರರ ಬಗೆಗೆ ಮಾತನಾಡಲು ಪ್ರಕಾಶಂ ಅವರಿಗೆ ಯಾವ ನೈತಿಕ ಹಕ್ಕು ಇದೆ ಎನ್ನುವುದು ಸುಬ್ಬರಾಯರ ವಾದ. ಇದನ್ನು ಪ್ರಕಾಶಂ ಕೂಡ ಒಪ್ಪಿಕೊಂಡರು. ಅಂದಿನಿಂದ ಸಂಪಾದಕೀಯ ಧೋರಣೆಯ ಪೂರ್ತಿ ಜವಾಬ್ದಾರಿಯನ್ನು ಸುಬ್ಬರಾಯರಿಗೇ ವಹಿಸಿದರು. ಸುಬ್ಬರಾಯರು ಈ ಜವಾಬ್ದಾರಿಯ ಹಿರಿಮೆಯನ್ನು ಚೆನ್ನಾಗಿ ಅರಿತು ಅದಕ್ಕೆ ತಕ್ಕಹಾಗೆ ನಡೆದುಕೊಂಡರು.

ಸುಬ್ಬರಾಯರು ‘ಸ್ವರಾಜ್ಯ’ದಲ್ಲಿ ಇದ್ದ ಅವಧಿಯಲ್ಲೇ ಅವರ ಮದುವೆಯಾಯಿತು. ಆದರೆ ದುರದೃಷ್ಟದಿಂದ ಅವರ ಪತ್ನಿ ಸ್ವಲ್ಪ ಸಮಯದಲ್ಲೇ ತೀರಿಕೊಂಡರು. ಇದರಿಂದ ಸುಬ್ಬರಾಯರಿಗೆ ತೀವ್ರ ಆಘಾತವಾಯಿತು. ಸ್ವಲ್ಪ ಸಮಯದ ನಂತರ ಅವರು ೧೯೨೭ ರಲ್ಲಿ ನಾರಾಯಣಿ ಎಂಬುವರನ್ನು ಮರು ಮದುವೆಯಾದರು. ಕಾಲಕ್ರಮದಲ್ಲಿ ಅವರಿಗೆ ಮೂರು ಹೆಣ್ಣುಮಕ್ಕಳು ಹುಟ್ಟಿದರು. ಅವರಲ್ಲಿ ಸುಶೀಲಾ ಮತ್ತು ಸುಂದರಿ ಎಂಬ ಇಬ್ಬರು ಈಗ ಇದ್ದಾರೆ.

ಬಂಧನ

೧೯೩೦ ರಲ್ಲಿ ಗಾಂಧೀಜಿಯವರು ಉಪ್ಪಿನ ಸತ್ಯಾಗ್ರಹ ಮಾಡಲು ಕರೆಕೊಟ್ಟರು. ಇದು ಬ್ರಿಟಿಷ್‌ಸರ್ಕಾರ ಉಪ್ಪಿನ ಮೇಲೆ ವಿಧಿಸಿದ ಸುಂಕವನ್ನು ಪ್ರತಿಭಟಿಸಲು ಕೈಗೊಂಡ ಸತ್ಯಾಗ್ರಹ. ಇದು ಖಾಸಾ ಸುಬ್ಬರಾಯರನ್ನು ಆಕರ್ಷಿಸಿತು. ಅವರು ನೆಲ್ಲೂರು ಜಿಲ್ಲೆಯಲ್ಲಿ ಹಳ್ಳಿಯಿಂದ ಹಳ್ಳಿಗೆ ಕಾರ್ಯಕರ್ತರೊಡನೆ ಸುತ್ತಿ ಇದರ ಪ್ರಚಾರ ಮಾಡಿದರು. ಅವರೊಡನೆ ಅವರ ತಾಯಿಯೂ ಅಲೆದಾಡುತ್ತಾ, ಕಾರ್ಯಕರ್ತರಿಗೂ ಸುಬ್ಬರಾಯರಿಗೂ ಅಡಿಗೆ ಮಾಡಿ ಹಾಕಿದರು. ತಾಯಿಯ ವಾತ್ಸಲ್ಯಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕೆ? ಕೊನೆಗೆ ಸುಬ್ಬರಾಯರನ್ನೂ ಅವರ ಕೆಲವು ಸಂಗಡಿಗರನ್ನೂ ಸರ್ಕಾರ ಬಂಧಿಸಿ ಸೆರೆಮನೆಗೆ ತಳ್ಳಿತು. ಸೆರೆಮನೆಯಲ್ಲಿ ಸ್ವಲ್ಪಕಾಲ ಕಳೆದು ಸುಬ್ಬರಾಯರು ಬಿಡುಗಡೆ ಯಾಗಿ ಹೊರಗೆ ಬಂದರು. ಮತ್ತೆ ‘ಸ್ವರಾಜ್ಯ’ದ ತಮ್ಮ ಕೆಲಸವನ್ನು ಮುಂದುವರಿಸಿದರು.

ಅಳಿಸಲಾಗದ ಕಲೆ

ಖಾಸಾ ಸುಬ್ಬರಾಯರು ‘ಸ್ವರಾಜ್ಯ’ದಲ್ಲಿದ್ದಾಗ ಒಂದು ಮಹತ್ವದ ಘಟನೆ ನಡೆಯಿತು. ಅದು ಎಷ್ಟು ಮಹತ್ವದ್ದೋ ಅಷ್ಟೇ ಭಯಂಕರವಾದದ್ದೂ ಕೂಡ. ೧೯೩೨ರ ಮಾರ್ಚ್ ತಿಂಗಳು ಗಾಂಧೀಜಿಯವರು ಖಾದಿ ಆಂದೋಲನ ನಡೆಸಿದ್ದರು. ನಮ್ಮ ದೇಶದ ಹತ್ತಿಯನ್ನು ಇಂಗ್ಲೆಂಡಿಗೆ ಸಾಗಿಸಿ, ಅಲ್ಲಿ ಅದರಿಂದ ತಯಾರಿಸಿದ ಬಟ್ಟೆಯನ್ನು ನಮಗೇ ದುಬಾರಿ ಬೆಲೆಗೆ ಬ್ರಿಟಿಷರು ಮಾರುತ್ತಿದ್ದ ಕಾಲ. ಗಾಂಧೀಜಿ ಇದನ್ನು ವಿರೋಧಿಸಿದರು. ನಮಗೆ ಬೇಕಾದ ಬಟ್ಟೆಯನ್ನುನಾವೇ ನೂತ ನೂಲಿನಿಂದ ತಯಾರಿಸಿಕೊಳ್ಳಬಹುದು. ಇದೇ ಖಾದಿ. ಚರಕದಿಂದ ನೂಲು ತೆಗೆದು ಕೈಮಗ್ಗದಿಂದ ಬಟ್ಟೆಮಾಡಿ ಧರಿಸಬೇಕು. ಇದರಿಂದ ನಮ್ಮ ದೇಶದ ಸಂಪತ್ತು ನಮ್ಮಲ್ಲೇ ಉಳಿಯುತ್ತದೆ. ಅನೇಕರಿಗೆ ಉದ್ಯೋಗ ಸಿಗುತ್ತದೆ. ಬೇರೆಯವರನ್ನು ಬಟ್ಟೆಗಾಗಿ ಅವಲಂಬಿಸುವುದು ತಪ್ಪುತ್ತದೆ. ಗಾಂಧೀಜಿಯವರ ಈ ವಿಚಾರಧಾರೆ ಎಲ್ಲರನ್ನೂ ಸೆಳೆದಿತ್ತು. ಎಲ್ಲೆಲ್ಲೂ ಚರಕದಿಂದ ನೂಲು ತೆಗೆಯುವುದು ಆರಂಭವಾಯಿತು. ವಿದೇಶೀ ವಸ್ತ್ರಗಳನ್ನು ಬೆಂಕಿಗೆ ಹಾಕಿ ಹೋಮ ಮಾಡುವ ದೃಶ್ಯಗಳು ಕಾಣತೊಡಗಿದವು. ವಿದೇಶೀ ಬಟ್ಟೆಗಳನ್ನು ಮಾರುವ ಅಂಗಡಿಗಳ ಮುಂದೆ ಸತ್ಯಾಗ್ರಹಿಗಳು ನಿಂತು, ಕೊಳ್ಳಲು ಬರುವವರನ್ನು ತಡೆಯುತ್ತಿದ್ದರು. ಇದೆಲ್ಲಾ ಶಾಂತಿಯುತ ವಾಗಿಯೇ ನಡೆಯುತ್ತಿತ್ತು. ಇದಕ್ಕೆ ಪಿಕೆಟಿಂಗ್‌ಅಥವಾ ಧರಣಿ ಎಂದು ಹೆಸರು. ಈ ಆಂದೋಲನ ಮದರಾಸಿನಾ ದ್ಯಂತ ಹಬ್ಬಿತು.

ಖಾಸಾ ಸುಬ್ಬರಾಯರಿಗೂ ಇಂಥ ಧರಣಿಯಲ್ಲಿ ಭಾಗವಹಿಸಲು ಆಸೆ. ಆದರೆ ಅವರು ಸ್ವಭಾವತಃ ತುಂಬ ಸಂಕೋಚ ಹಾಗೂ ನಾಚಿಕೆಯ ಪ್ರವೃತ್ತಿಯವರು. ಆದುದರಿಂದ ಈ ಸಾರ್ವಜನಿಕ ಪ್ರದರ್ಶನಗಳಲ್ಲಿ ಭಾಗವಹಿಸಲು ಅವರು ಹಿಂಜರಿದರು. ಆದರೆ ಅವರು ನಿತ್ಯ ತಮ್ಮ ಪತ್ರಿಕಾಲಯಕ್ಕೆ ಹೋಗುವಾಗ ದಾರಿಯುದ್ದಕ್ಕೂ ನಡೆಯುತ್ತಿದ್ದ ಇಂಥ ಪ್ರದರ್ಶನಗಳನ್ನು ನೋಡುತ್ತಿದ್ದರು. ಈ ಪಿಕೆಟಿಂಗ್‌ಗಳಲ್ಲಿ ಭಾಗವಹಿಸುತ್ತಿದ್ದ ವಿದ್ಯಾರ್ಥಿಗಳನ್ನು ಪೊಲೀಸರು ನಿರ್ದಯವಾಗಿ ಲಾಠಿಗಳಿಂದ ಹೊಡೆಯುತ್ತಿದ್ದರು. ಕಾರ್ಯಕರ್ತರು ಅದನ್ನು ಪ್ರತಿಭಟಿಸಿದೆ ಮೌನವಾಗಿ ಸ್ವೀಕರಿಸುತ್ತಿದ್ದರು. ಅದನ್ನು ನೋಡಿ ಪೊಲೀಸರಿಗೆ ಇನ್ನೂ ಕೋಪ ಬರುತ್ತಿತ್ತು. ಮತ್ತೂ ರೋಷದಿಂದ ಹೊಡೆಯುತ್ತಿದ್ದರು. ಹೊಡೆತ ತಿಂದವರು ನಿಸ್ಸಹಾಯಕರಾಗಿ ಕೆಳಗೆ ಬಿದ್ದರೂ ಪೊಲೀಸರು ಹೊಡೆಯುವುದನ್ನು ನಿಲ್ಲಿಸುತ್ತಿರಲಿಲ್ಲ. ಸುಬ್ಬರಾಯರಿಗೆ ಇದನ್ನು ನೋಡಿ ತಡೆಯಲಾಗಲಿಲ್ಲ. ಆದುದರಿಂದ ಇಂಥ ಅಮಾನುಷ ಚಿತ್ರಹಿಂಸೆಯನ್ನು ಏನಾದರೂ ಮಾಡಿ ನಿಲ್ಲಿಸಬೇಕು ಎಂದು ಅವರು ನಿರ್ಧರಿಸಿದರು. ಒಂದು ದಿನ ಮದರಾಸಿನ ಚೀನಾ ಬಜಾರಿನಲ್ಲಿ ನಡೆಯುತ್ತಿದ್ದ ಪಿಕೆಟಿಂಗಿನಲ್ಲಿ ಅವರೂ ಸೇರಿಕೊಂಡರು. ಕೂಡಲೇ ಪೊಲೀಸರು ಅವರನ್ನು ಸುತ್ತು ವರಿದು, ‘ಈ ಚಳವಳಿಯಲ್ಲಿ ಭಾಗವಹಿಸಬೇಡಿ. ನಿಮ್ಮ ಪಾಡಿಗೆ ನೀವು ಹೋಗಿ’ ಎಂದು ಹೇಳಿದರು. ಆದರೆ ಸುಬ್ಬರಾಯರು ಕೇಳಲಿಲ್ಲ. ಕೈಕಟ್ಟಿ ಮೌನವಾಗಿ ನಿಂತರು. ಪೊಲೀಸರು ಅವರಿಗೆ ಹೊಡೆಯಲಾರಂಭಿಸಿದರು. ಚರ್ಮ ಸುತ್ತಿದ ಕಬ್ಬಿಣದ ಸರಳುಗಳಿಂದ ಧಡಧಡನೆ ಪೆಟ್ಟು ಬೀಳಲಾರಂಭಿಸಿದವು. ಒಂದೇ ನಿಮಿಷದಲ್ಲಿ ಸುಬ್ಬರಾಯರ ಅಂಗಿ ಹರಿದುಹೋಯಿತು. ಅವರ ಬೆನ್ನಿನ ಚರ್ಮ ಸುಲಿದು ರಕ್ತ ಹರಿಯಲಾರಂಭಿಸಿತು. ಸುಬ್ಬರಾಯರು ತುಟಿ ಪಿಟಕ್‌ಅನ್ನದೆ ಧೈರ್ಯದಿಂದ ನಿಂತಿದ್ದರು. ಪೊಲೀಸರು ತಮ್ಮ ಕೃತ್ಯಕ್ಕೆ ತಾವೇ ನಾಚಿಕೊಂಡವರಂತೆ ಅಲ್ಲಿಂದ ಹೊರಟುಹೋದರು. ಸುಬ್ಬರಾಯರ ಬೆನ್ನಿನ ಮೇಲೆ ಬೆಂಕಿಯ ಮಳೆ ಕರೆದಂತೆ ಯಾತನೆಯಾಗುತ್ತಿತ್ತು. ಅವರು ರಸ್ತೆಯಲ್ಲೇ ಪ್ರಜ್ಞೆತಪ್ಪಿ ಬಿದ್ದುಬಿಟ್ಟರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಸುಬ್ಬರಾಯರು ಚೇತರಿಸಿಕೊಳ್ಳಲು ಆರು ವಾರಗಳು ಹಿಡಿದವು.

ಪೊಲೀಸರು ಹೊಡೆಯಲಾರಂಭಿಸಿದರು

ಸುಬ್ಬರಾಯರನ್ನು ಪೊಲೀಸರು ಹೀಗೆ ನಿರ್ದಯವಾಗಿ ಹೊಡೆದ ಸುದ್ದಿ ನಗರದಾದ್ಯಂತ ಹಬ್ಬಿ ಅಲ್ಲೋಲ ಕಲ್ಲೋಲವಾಯಿತು. ಈ ಕೃತ್ಯವನ್ನು ಪ್ರತಿಭಟಿಸಿ ಎಲ್ಲೆಲ್ಲೂ ಪ್ರತಿಭಟನಾ ಪ್ರದರ್ಶನಗಳಾದವು. ರಾಯರನ್ನು ಸೇರಿಸಿದ್ದ ಆಸ್ಪತ್ರೆಯ ಮುಂದೆ ಜನಜಾತ್ರೆ ನೆರೆಯಿತು. ಎಲ್ಲರ ಮುಖದಲ್ಲೂ ಕಳವಳ, ರೋಷ, ನಗರದ ಅನೇಕ ಪತ್ರಿಕೆಗಳು ವಿಶೇಷ ಪುರವಣಿಗಳನ್ನು ಪ್ರಕಟಿಸಿದವು. ಈ ಘಟನೆಗೆ ಕಾರಣರಾದವರನ್ನು ಅವುಗಳಲ್ಲಿ ಉಗ್ರವಾಗಿ ಖಂಡಿಸಲಾಗಿತ್ತು. ಈ ಘಟನೆ ಅಂತರರಾಷ್ಟ್ರೀಯ ಮಹತ್ವವನ್ನು ಪಡೆಯಿತು. ಲಂಡನ್ನಿನ ಹೌಸ್‌ಆಫ್‌ಕಾಮನ್ಸ್‌ನಲ್ಲಿ (ನಮ್ಮ ಲೋಕಸಭೆಯಂಥದು) ಈ ವಿಷಯ ಚರ್ಚೆಗೆ ಒಳಗಾಯಿತು. ಕೊನೆಗೆ, ಈ ಘಟನೆಯ ಬಗೆಗೆ ತನಿಖೆ ನಡೆಸಲು ಲಾರ್ಡ್ ಲೋಥಿಯನ್‌ಅವರ ನೇತೃತ್ವದಲ್ಲಿ ಒಂದು  ವಿಶೇಷ ನಿಯೋಗವನ್ನು ಕಳಿಸಿದರು. ನಿಯೋಗ ಮದರಾಸಿಗೆ ಬಂದು, ಸುಬ್ಬರಾಯರಿಗಿದ್ದ ಆಸ್ಪತ್ರೆಗೆ ಭೇಟಿ ಕೊಟ್ಟಾಗ, ಸುಬ್ಬರಾಯರಿನ್ನೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ಇದನ್ನೆಲ್ಲಾ ನೋಡಿ ನಿಯೋಗ ತುಂಬ ನೊಂದು ಕೊಂಡಿತು. ಕೂಡಲೇ, ಸತ್ಯಾಗ್ರಹಿಗಳನ್ನು ಹೀಗೆ ನಿರ್ದಯವಾಗಿ ದಂಡಿಸುವುದನ್ನು ಖಂಡಿಸಿ, ಇದನ್ನು ನಿಲ್ಲಿಸಬೇಕೆಂದು ನಿಯೋಗ ಲಂಡನ್ನಿಗೆ ವರದಿ ಸಲ್ಲಿಸಿತು. ಇದರ ಪರಿಣಾಮವಾಗಿ ಇಂಥ ನಿರ್ದಯ ಕ್ರಮವನ್ನು ನಿಷೇಧಿಸಿ ಬ್ರಿಟಿಷ್‌ಸರ್ಕಾರ ಕೂಡಲೇ ಆಜ್ಞೆ ಹೊರಡಿಸಿತು. ಕಬ್ಬಿಣದ ಕಟ್ಟು ಹಾಕಿರುವ ದಂಡಗಳನ್ನು ಪೊಲೀಸರು ಉಪಯೋಗಿಸಬಾರದೆಂದು ಆಜ್ಞೆ ಹೊರಡಿಸಿತು. ಇಂಥ ಚಿತ್ರಹಿಂಸೆಯನ್ನು ನಿಲ್ಲಿಸಬೇಕೆಂಬ ಸುಬ್ಬರಾಯರ ಆಸೆಯೇನೋ ಈಡೇರಿತು. ಆದರೆ ಆ ದಿನದ ಹೊಡೆತಗಳ ಪರಿಣಾಮವಾಗಿ ಅವರ ಬೆನ್ನಮೇಲೆ ಶಾಶ್ವತವಾದ ಕಲೆಗಳು ಉಳಿದುಬಿಟ್ಟವು.

ಕ್ವೆಟ್ಟಾ ಭೂಕಂಪ

ಆರ್ಥಿಕಸ್ಥಿತಿ ಹದಗೆಟ್ಟಿದ್ದರೂ ‘ಸ್ವರಾಜ್ಯ’ ಹನ್ನೆರಡು ವರ್ಷಗಳ ಕಾಲ ಎಲ್ಲರ ಕಣ್ಮಣಿಯಾಗಿ ನಡೆಯಿತು. ಆದರೆ ಕೊನೆಗೂ ಅದನ್ನು ನಿಲ್ಲಿಸಬೇಕಾಯಿತು. ನಿರುದ್ಯೋಗಿಯಾದ ಸುಬ್ಬರಾಯರಿಗೆ ಕೂಡಲೇ ಬೊಂಬಾಯಿಯ ‘ಫ್ರೀ ಪ್ರೆಸ್‌ಜರ್ನಲ್‌’ ಪತ್ರಿಕೆಯಿಂದ ಕರೆಬಂತು (೧೯೩೫). ಸುಬ್ಬರಾಯರು ಅಲ್ಲಿಗೆ ಹೋಗಿ ಕೆಲಸಕ್ಕೆ ಸೇರಿಕೊಂಡರು. ಅವರು ಅಲ್ಲಿದ್ದ ಸಮಯದಲ್ಲೇ ಭೀಕರ ಕ್ವೆಟ್ಟಾ ಭೂಕಂಪ ಸಂಭವಿಸಿತು. ಈಗ ಪಾಕಿಸ್ತಾನಕ್ಕೆ ಸೇರಿರುವ ಕ್ವೆಟ್ಟಾ ಆಗ ಭಾರತದಲ್ಲಿತ್ತು. ಕ್ವೆಟ್ಟಾ ಒಂದು ಮಿಲಿಟರಿ ನೆಲೆಯಾಗಿತ್ತು. ಅಲ್ಲಿ ಯೂರೋಪಿಯನ್ನರೂ, ಭಾರತೀಯರೂ ಸಮ ಸಂಖ್ಯೆಯಲ್ಲಿದ್ದರು. ಭೂಕಂಪದ ಪರಿಣಾಮವಾಗಿ ಸಾವಿರಾರು ಜನ ಪ್ರಾಣ ಕಳೆದುಕೊಂಡರು. ಅನೇಕ ಸಹಸ್ರಮಂದಿ ಭೂಕಂಪಕ್ಕೆ ಸಿಲುಕಿ ನೋವಿಗೀಡಾದರು. ಬ್ರಿಟಿಷ್‌ಸರ್ಕಾರ ಪರಿಹಾರ ಕಾರ್ಯಕ್ರಮ ಕೈಗೊಂಡಾಗ ಎಲ್ಲರೂ ಮಾನವರೇ ಎಂಬುದನ್ನು ಮರೆತು, ಯುರೋಪಿಯನ್ನರಿಗೆ ವಿಶೇಷ ಸೌಲಭ್ಯಗಳನ್ನು ನೀಡಿ, ಭಾರತೀಯರನ್ನು ಬೇಕಾಬಿಟ್ಟಿಯಾಗಿ ನೋಡಿಕೊಂಡಿತು. ಈ ಮಲತಾಯಿ ಧೋರಣೆ ಖಾಸಾ ಸುಬ್ಬರಾಯರ ಗಮನಕ್ಕೆ ಬಂದ ಕೂಡಲೇ ಅದನ್ನು  ಉಗ್ರವಾಗಿ ಖಂಡಿಸಿ ತಮ್ಮ ಪತ್ರಿಕೆಯಲ್ಲಿ ಒಂದು ಕಟು ಲೇಖನವನ್ನು ಬರೆದರು. ಆಗಿನ ಕಾಲದಲ್ಲಿ ಬ್ರಿಟಿಷ್‌ಸರ್ಕಾರವನ್ನು ಹೀಗೆ ಖಂಡಿಸಲು ಎಂಟೆದೆ ಇರಬೇಕಾಗಿತ್ತು. ಈ ಲೇಖನವನ್ನು ತೀವ್ರವಾಗಿ ಗಮನಸಿದ ಬ್ರಿಟಿಷ್‌ಸರ್ಕಾರ ‘ಫ್ರೀ ಪ್ರೆಸ್‌ಜರ್ನಲ್‌’ ಪತ್ರಿಕಾ ಕಚೇರಿಗೆ ದಾಳಿಮಾಡಿ ಅಲ್ಲಿದ್ದ ೨೦,೦೦೦ ರೂಪಾಯಿಗಳನ್ನು ವಶಪಡಿಸಿಕೊಂಡಿತಲ್ಲದೆ ಬೇರೆ ೨೦,೦೦೦ ರೂಪಾಯಿಗಳ ದಂಡ ವಿಧಿಸಿತು. ಆದರೆ ಬೊಂಬಾಯಿಯ ಜನರು ಖಾಸಾ ಸುಬ್ಬರಾಯರ ದಿಟ್ಟತನವನ್ನು ಮೆಚ್ಚಿ ಪತ್ರಿಕೆಯ ಕಚೇರಿಗೆ ಕಾಣಿಕೆಯನ್ನು ಕಳುಹಿಸತೊಡಗಿದರು. ಕೆಲವೇ ದಿನಗಳಲ್ಲಿ ೪೦,೦೦೦ ರೂಪಾಯಿ ಕೂಡಿಕೊಂಡಿತು! ಜನರು ನೀಡಿದ ಪ್ರೋತ್ಸಾಹದಿಂದ ಸುಬ್ಬರಾಯರಿಗೆ ತಮ್ಮ ಕಾರ್ಯದ ಬಗೆಗೆ ದೃಢವಾದ ಆತ್ಮವಿಶ್ವಾಸ ಮೂಡಿತು.

ಇಂಡಿಯನ್‌ ಎಕ್ಸ್‌ಪ್ರೆಸ್‌

ಕಾರಣಾಂತರಗಳಿಂದ ಬೊಂಬಾಯಿಯ ‘ಫ್ರೀ ಪ್ರೆಸ್‌ಜರ್ನಲ್‌’ ಪತ್ರಿಕೆಯನ್ನು ಬಿಟ್ಟು ಸುಬ್ಬರಾಯರು ಕಲ್ಕತ್ತದ ‘ಇಂಡಿಯನ್‌ಫೈನಾನ್ಸ್‌’ ಎಂಬ ಪತ್ರಿಕೆ ಸೇರಿದರು. ಇಲ್ಲಿಯೂ ಹೆಚ್ಚು ದಿನ ಸುಬ್ಬರಾಯರು ಇರಲಿಲ್ಲ. ೧೯೩೭ರಲ್ಲಿ ಮದರಾಸಿಗೆ ಬಂದು ‘ಇಂಡಿಯನ್‌ಎಕ್ಸ್‌ಪ್ರೆಸ್‌’ ಇಂಗ್ಲಿಷ್‌ದಿನ ಪತ್ರಿಕೆಯನ್ನು ಸೇರಿದರು. ಖಾಸಾ ಸುಬ್ಬರಾಯರು ಅಲ್ಲಿ ಪೋತನ್‌ಜೋಸೆಫ್‌ಅವರೊಡನೆ ಸಹ ಸಂಪಾದಕರಾಗಿ ಕೆಲಸ ಮಾಡತೊಡಗಿದರು.

‘ಇಂಡಿಯನ್‌ ಎಕ್ಸ್‌ಪ್ರೆಸ್‌’ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದ ಕಾಲದಲ್ಲಿ ಖಾಸಾ ಸುಬ್ಬರಾಯರು ಅನೇಕ ಏರುಪೇರುಗಳನ್ನು ಎದುರಿಸಬೇಕಾಯಿತು ೧೯೪೦ರ ಆಗಸ್ಟ್‌ನಲ್ಲಿ ಒಂದು ಘಟನೆ ನಡೆಯಿತು. ‘ಇಂಡಿಯನ್‌ಎಕ್ಸ್‌ಪ್ರೆಸ್‌’ ಪತ್ರಿಕೆಯಲ್ಲಿ ಎಂಟು ವರ್ಷಗಳಿಂದ ಕೆಲಸ ಮಾಡುತ್ತಿದ್ದ ವೇಲುಪಿಲ್ಲೆ ಎಂಬ ಒಬ್ಬ ಸಮರ್ಥ ಟೈಪಿಸ್ಟ್‌ನನ್ನು ವಿನಾಕಾರಣ ಕೆಲಸದಿಂದ ತೆಗೆದುಹಾಕಲಾಯಿತು. ಸುಬ್ಬರಾಯರಿಗೆ ಇದು ತುಂಬ ಅನ್ಯಾಯವೆಂದು ತೋರಿತು. ತಾವಿರುವ ಪತ್ರಿಕಾ ಕಚೇರಿಯಲ್ಲಿಯೇ ಅನ್ಯಾಯ ನಡೆಯುತ್ತಿರುವಾಗ ದೇಶದ ಅನ್ಯಾಯವನ್ನು ಪ್ರತಿಭಟಿಸಲು ತಮಗೆ ನೈತಿಕ ಅಧಿಕಾರವಿಲ್ಲ ಎಂದು ಅವರು ಭಾವಿಸಿದರು. ಕೂಡಲೇ ತಮ್ಮ ಕೆಲಸಕ್ಕೆ ರಾಜೀನಾಮೆಯನ್ನು ಬರೆದುಕೊಟ್ಟರು. ವೇಲುಪಿಳ್ಳೆಯನ್ನು ಕೆಲಸಕ್ಕೆ ತೆಗೆದುಕೊಂಡರೆ ಮಾತ್ರ ತಮ್ಮ ರಾಜೀನಾಮೆಯನ್ನು ವಾಪಸ್‌ತೆಗೆದುಕೊಳ್ಳುವುದಾಗಿ ತಿಳಿಸಿದರು. ಪತ್ರಿಕೆಯ ಮಾಲೀಕರು ಇದಕ್ಕೆ ಒಪ್ಪಲಿಲ್ಲ. ಬೇರೆ ಸಹಸಂಪಾದಕರನ್ನು ಹುಡುಕುವಂತೆ ಪೋತನ್‌ಜೋಸೆಫ್‌ಅವರಿಗೆ ತಿಳಿಸಿದರು. ಆದರೆ ಪೋತನ್‌ಜೋಸೆಫ್‌ಅವರಿಗೆ ಸುಬ್ಬರಾಯರನ್ನು ಬಿಟ್ಟುಕೊಡಲು ಮನಸ್ಸಿರಲಿಲ್ಲ. ಕೊನಗೆ ವೇಲುಪಿಳ್ಳೆಯನ್ನು ಮತ್ತೆ ಕೆಲಸಕ್ಕೆ ೨ ತೆಗೆದುಕೊಳ್ಳಲು ಮಾಲೀಕರು ಒಪ್ಪಲೇಬೇಕಾಯಿತು. ಒಬ್ಬ ಸಾಮಾನ್ಯ ಟೈಪಿಸ್ಟನಿಗೆ ಅನ್ಯಾಯವಾಯಿತೆಂದು ಗೊತ್ತಾದಾಗ ತಮ್ಮ ಕೆಲಸವನ್ನೇ ಬಿಡಲು ಮುಂದಾದ ಸುಬ್ಬರಾಯರಲ್ಲಿ ನ್ಯಾಯನಿಷ್ಠೆ ಎಷ್ಟಿತ್ತೆಂದು ಈ ಪ್ರಸಂಗದಿಂದ ಸ್ಫುಟವಾಗುತ್ತದೆ.

ಮತ್ತೆ ಸೆರೆಮನೆಗೆ

೧೯೪೨ ರಲ್ಲಿ ‘ಭಾರತ ಬಿಟ್ಟು ತೊಲಗಿ’ (‘ಕ್ವಿಟ್‌ಇಂಡಿಯ) ಚಳವಳಿ ಆರಂಭವಾಯಿತು. ಇದು ಗಾಂಧೀಜಿಯವರು ಬ್ರಿಟಿಷರಿಗೆ ನೀಡಿದ ಕೊನೆಯ ಎಚ್ಚರಿಕೆ. ಈ ಘೋಷಣೆಯನ್ನು ಕೂಗುತ್ತಾ ಕಾರ್ಯಕರ್ತರು ಎಲ್ಲೆಲ್ಲೂ ಸತ್ಯಾಗ್ರಹ ಮಾಡಲು ಆರಂಭಿಸಿದರು. ಬ್ರಿಟಿಷ್‌ಸರ್ಕಾರ ಈ ಚಳವಳಿಯಲ್ಲಿ ಭಾಗವಹಿಸಿದ ಅನೇಕರನ್ನು ಬಂಧಿಸಿ ಸೆರೆಮನೆಗೆ ಅಟ್ಟಿತು. ಸುಬ್ಬರಾಯರೂ ಅವರಲ್ಲಿ ಒಬ್ಬರು. ಅವರು ಸೆರೆಮನೆಯಿಂದ ಬಿಡುಗಡೆಯಾದ ಮೇಲೆ ಮತ್ತೆ ‘ಇಂಡಿಯನ್‌ಎಕ್ಸ್‌ಪ್ರೆಸ್‌’ಗೆ ಹಿಂತಿರುಗಿದರು.

ಸ್ವತಂತ್ರ

ಖಾಸಾ ಸುಬ್ಬರಾಯರು ೧೯೪೬ ರಲ್ಲಿ ‘ಇಂಡಿಯನ್‌ಎಕ್ಸ್‌ಪ್ರೆಸ್‌’ನಿಂದ ಹೊರಬಂದು ತಮ್ಮದೇ ಆದ ‘ಸ್ವತಂತ್ರ’ ಎಂಬ ಇಂಗ್ಲಿಷ್‌ವಾರಪತ್ರಿಕೆಯನ್ನು ಆರಂಭಿಸಿದರು. ಆಗ ಅವರಿಗೆ ಐವತ್ತು ವರ್ಷ. ಅಷ್ಟು ಹೊತ್ತಿಗೆ ಪತ್ರಿಕೋದ್ಯಮದಲ್ಲಿ ಚೆನ್ನಾಗಿ ಪಳಗಿದ್ದರು. ಅನುಭವ ಪಕ್ವವಾಗಿತ್ತು. ಅದನ್ನು ಪೂರ್ಣಪ್ರಮಾಣದಲ್ಲಿ ಬಳಸಿಕೊಂಡು ‘ಸ್ವತಂತ್ರ’ವನ್ನು ನಡೆಸತೊಡಗಿದರು. ‘ಸ್ವತಂತ್ರ’ ಒಂದು ನಿರ್ಭೀತ ಪತ್ರಿಕೆಯೆಂದು ಶೀಘ್ರದಲ್ಲೇ ಹೆಸರಾಯಿತು. ಅದು ಸಾರ್ವಜನಿಕ ಅಭಿಪ್ರಾಯದ ಒಂದು ಪ್ರಮುಖ ಮುಖವಾಣಿಯಾಯಿತು. ಸತ್ಯ ಮತ್ತು ನ್ಯಾಯಕ್ಕೆ ಹೋರಾಡುವ ಪತ್ರಿಕೆಯೆಂದು ಪ್ರಸಿದ್ಧವಾಯಿತು. ಸುಬ್ಬರಾಯರು ಈ ಪತ್ರಿಕೆಯನ್ನು ಹತ್ತು ವರ್ಷಗಳ ಕಾಲ ಸಮರ್ಥವಾಗಿ ನಡೆಸಿದರು.

ವಿದೇಶ ಪ್ರವಾಸ

ಭಾರತೀಯ ಪತ್ರಿಕಾ ನಿಯೋಗದ ಸದಸ್ಯರಾಗಿ ೧೯೫೦ರಲ್ಲಿ ಇಂಗ್ಲೆಂಡಿನಲ್ಲಿ ಸುಬ್ಬರಾಯರು ಆರು ವಾರಗಳ ಕಾಲ ಪ್ರವಾಸ ಮಾಡಿದರು. ೧೯೫೫ ರಲ್ಲಿ ತಮ್ಮ ರಾಷ್ಟ್ರವನ್ನು ಸಂದರ್ಶಿಸುವಂತೆ ಅಮೆರಿಕಾ ಸರ್ಕಾರ ಅವರನ್ನು ಆಹ್ವಾನಿಸಿತು. ಸುಬ್ಬರಾಯರು ಮೂರು ತಿಂಗಳ ಕಾಲ ಅಮೆರಿಕದ ವಿವಿಧ ಪ್ರಾಂತಗಳಲ್ಲಿ ಸಂಚರಿಸಿದರು. ಅಲ್ಲಿನ ಜನಜೀವನ, ಅಭಿವೃದ್ಧಿ ಕಾರ್ಯಕ್ರಮಗಳು, ಆಡಳಿತ ವಿಧಾನ, ವ್ಯವಸಾಯಕ್ರಮ, ಪತ್ರಿಕೋದ್ಯಮ ಮುಂತಾದ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿದರು.

ಸುಬ್ಬರಾಯರು ತಮ್ಮ ಈ ಪ್ರವಾಸದಲ್ಲಿ ಹಲವು ನಗರಗಳಿಗೆ ಭೇಟಿಕೊಟ್ಟರು. ಭೇಟಿನೀಡಿದ ನಗರಗಳಲ್ಲೆಲ್ಲಾ ಹೋಟೆಲ್‌ಗಳಲ್ಲಿ ತಂಗದೆ ಸಮೀಪದ ಕೃಷಿ ಕ್ಷೇತ್ರಗಳಲ್ಲಿ (ಫಾರ್ಮ್‌) ತಂಗಿ ಅಲ್ಲಿನ ಸಾಮಾನ್ಯ ಜನಜೀವನವನ್ನು ಅಧ್ಯಯನಮಾಡಿದರು.

ಅವರು ಪ್ರವಾಸ ಮಾಡುತ್ತಿದ್ದ ಕಾಲದಲ್ಲಿ ‘ಹಾರ್ಪರ್ಸ್ ಮ್ಯಾಗಜಿನ್‌’ ಎಂಬ ಪತ್ರಿಕೆಯಲ್ಲಿ ಅಮೆರಿಕನ್‌ಮಹಿಳೆಯರನ್ನು ನಿಂದಿಸಿ ಒಂದು ಲೇಖನ ಪ್ರಕಟವಾಯಿತು. ಅಮೆರಿಕದ ಮಹಿಳೆಯರು ಕಡು ಸೋಮಾರಿಗಳೆಂದೂ, ಅತಿ ಮುದ್ದು ಬಯಸುವವರೆಂದೂ, ಗೋಳು ಹುಯ್ದುಕೊಳ್ಳುವ ಸ್ವಭಾವದವರೆಂದೂ ಆ ಲೇಖನದಲ್ಲಿ ಆರೋಪಿಸಲಾಗಿತ್ತು. ಅದಕ್ಕೆ ಖಾಸಾ ಸುಬ್ಬರಾಯರು ಒಂದು ತೀವ್ರ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದರು: ಅಮೆರಿಕದ ಮಹಿಳೆಯರು ಬಹಳ ಕಷ್ಟ ಸಹಿಷ್ಣುಗಳು. ತಮ್ಮ ಕೆಲಸವನ್ನು ತಾವೇ ಮಾಡಿಕೊಳ್ಳುವುದಲ್ಲದೆ, ಅಂಗಡಿಗೆ ಹೋಗಿಬರುವುದು ಮುಂತಾದ ಹೊರಗಿನ ಕೆಲಸಗಳನ್ನೂ ನೋಡಿಕೊಳ್ಳುತ್ತಾರೆ. ಮನೆಯ ಕೆಲಸ ನಿರ್ವಹಿಸಲು ಕೆಲಸದಾಳುಗಳನ್ನು ಇಟ್ಟುಕೊಂಡಿಲ್ಲ. ಇಷ್ಟಾಗಿಯೂ ಎಲ್ಲ ಕೆಲಸವನ್ನೂ ಸಮರ್ಥವಾಗಿ ತೂಗಿಸಿಕೊಂಡು ಹೋಗುತ್ತಾರೆ. ಅವರ ಕಲಾಭಿರುಚಿ ಕೂಡ ಉತ್ತಮಮಟ್ಟದಲ್ಲಿದೆ ಎಂದು ಸುಬ್ಬರಾಯರು ಪತ್ರಿಕಾ ಸಂದರ್ಶನಗಳಲ್ಲಿ ತಮ್ಮ ಹೃತ್ಪೂರ್ವಕ ಪ್ರಶಂಸೆಯನ್ನು ವ್ಯಕ್ತಪಡಿಸಿದರು. ಅಮೆರಿಕದ ಮಹಿಳೆಯರ ಪರವಾಗಿ ಭಾರತದ ಪತ್ರಕರ್ತರೊಬ್ಬರು ಹೇಳಿಕೆ ಕೊಟ್ಟದ್ದು ಎಲ್ಲರ ಗಮನ ಸೆಳೆಯಿತು. ಅನೇಕ ಪತ್ರಿಕೆಗಳು ಸುಬ್ಬರಾಯರ ಸಂದರ್ಶನಗಳನ್ನು ವಿವರಗಳನ್ನು ಪ್ರಕಟಿಸಿದವು. ರೇಡಿಯೋ ಕೂಡ ಅವರ ಸಂದರ್ಶನ ಪ್ರಸಾರ ಮಾಡಿತು. ಒಂದೇ ದಿನದಲ್ಲಿ ಸುಬ್ಬರಾವ್‌ಅಮೆರಿಕದ ಆದ್ಯಂತ ಪ್ರಖ್ಯಾತರಾದರು. ಅನಂತರ ಅವರು ಎಲ್ಲೇ ಹೋಗಲಿ ಮಹಿಳೆಯರು ಅವರನ್ನು ಗುರುತಿಸಿ ಹೃತ್ಪೂರ್ವಕವಾಗಿ ಸ್ವಾಗತಿಸಿ ಸತ್ಕರಿಸುತ್ತಿದ್ದರು.

ಅಮೆರಿಕದಲ್ಲಿ ಪ್ರವಾಸ ಮಾಡುತ್ತಿದ್ದ ಕಾಲದಲ್ಲಿ ಸುಬ್ಬರಾಯರು ಮುಖ್ಯವಾಗಿ ಅಲ್ಲಿನ ಪತ್ರಿಕಾಲಯಗಳಿಗೆ ಭೇಟಿನೀಡಿ ಅವುಗಳ ಕಾರ್ಯವಿಧಾನವನ್ನು ಗಮನಿಸುತ್ತಿದ್ದರು. ಪತ್ರಿಕೆಗಳಿಗೆ ಲೇಖನಗಳನ್ನು ನೀಡುತ್ತಿದ್ದರು. ಅಲ್ಲಲ್ಲಿ ಭಾಷಣಗಳನ್ನು ಮಾಡುತ್ತಿದ್ದರು. ಈ ಎಲ್ಲ ಸಂದರ್ಭಗಳಲ್ಲೂ ಅವರು ಭಾರತೀಯ ಸಂಸ್ಕೃತಿ, ಕಲೆ, ಧರ್ಮ ಮುಂತಾದ ವಿಷಯಗಳ ಬಗೆಗೆ ವಿವರಿಸುತ್ತಿದ್ದರು. ಹೀಗೆ ಅವರು ನಿಜವಾದ ಅರ್ಥದಲ್ಲಿ ಸಾಂಸ್ಕೃತಿಕ ರಾಯಭಾರಿಯಾದರು. ಭಾರತ ಮತ್ತು ಅಮೆರಿಕದ ಸ್ನೇಹ ಸಂವರ್ಧನೆಗೆ ಖಾಸಾ ಸುಬ್ಬರಾಯರ ಭೇಟಿಯಿಂದ ಸಹಾಯವಾಯಿತು.

ಮುಗ್ಗಟ್ಟು

ತಮ್ಮ ಮೂರು ತಿಂಗಳ ಅಮೆರಿಕ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿ ಸುಬ್ಬರಾಯರು ಭಾರತಕ್ಕೆ ಮರಳಿದರು. ಬಂದಮೇಲೆ ಅವರು ತಮ್ಮ ಪ್ರವಾಸದ ನೆನಪುಗಳನ್ನು ಧಾರವಾಹಿಯಾಗಿ ‘ಸ್ವತಂತ್ರ’ ಪತ್ರಿಕೆಯಲ್ಲಿ ಪ್ರಕಟಿಸಿದರು. ಅವರಿಗೆ ಅರವತ್ತು ವರ್ಷ ತುಂಬುವ ಹೊತ್ತಿಗೆ ‘ಸ್ವತಂತ್ರ’ ಪತ್ರಿಕೆಗೆ ಹತ್ತುವರ್ಷ ತುಂಬಿತು. ಆದರೆ ಆಗ ಅನಿರೀಕ್ಷಿತವಾಗಿ ಪತ್ರಿಕೆಯನ್ನು ನಿಲ್ಲಿಸಬೇಕಾಯಿತು. ಸುಬ್ಬರಾಯರೇನೋ ಉತ್ತಮ ಪತ್ರಿಕೋದ್ಯಮಿಯಾಗಿದ್ದರು. ಆದರೆ ಉತ್ತಮ ವ್ಯವಹಾರಸ್ಥರಾಗಿರಲಿಲ್ಲ. ಪತ್ರಿಕೆಯ ಆರ್ಥಿಕ ವ್ಯವಹಾರ ಎಂದೂ ಅವರ ಪಾಲಿಗೆ ತಲೆನೋವೆ! ಅದರ ಲೆಕ್ಕಪತ್ರಗಳನ್ನು ನೋಡಲು ನಂಬಿಕೆಯ ಸಹೋದ್ಯೋಗಿಗಳು ಇದ್ದುದರಿಂದ ಪತ್ರಿಕೆ ನಡೆದುಕೊಂಡು ಹೋಗುತ್ತಿತ್ತು ಅಷ್ಟೆ. ಒಂದು ಸಲ ಪತ್ರಿಕೆಯ ಮುದ್ರಣಾಲಯಕ್ಕೆ ಅವರು ಕೆಲವು ಹೊಸ ಯಂತ್ರಗಳನ್ನು ಕೊಳ್ಳಬೇಕಾಯಿತು. ಅದಕ್ಕಾಗಿ ಸ್ನೇಹಿತರೊಬ್ಬರ ಬಳಿ ಸಾಲ ಮಾಡಿದರು. ಆದರೆ ಸಕಾಲದಲ್ಲಿ ಹಣವನ್ನು ಹಿಂತಿರುಗಿಸಲಾಗಲಿಲ್ಲ. ಇದರಿಂದ ಸ್ನೇಹಿತನ ನಿಂದನೆಗೆ ಗುರಿಯಾಗಬೇಕಾಯಿತು. ಹಣ ಹಿಂತಿರುಗಿಸಲು ಮುದ್ರಣಾಲಯ ಮತ್ತು ಪತ್ರಿಕೆಯನ್ನು ಎಚ್‌.ಡಿ. ರಾಜಾ ಎಂಬವರಿಗೆ ಮಾರಿದರು. ಪತ್ರಿಕೆಗೆ ರಾಜಾ ಅಧ್ಯಕ್ಷರಾಗಿದ್ದುಕೊಂಡು ವ್ಯವಹಾರದ ಭಾಗವನ್ನು ನೋಡಿಕೊಳ್ಳಬೇಕೆಂದೂ, ಸುಬ್ಬರಾಯರು ಅಜೀವ ಪರ್ಯಂತ ಅದರ ಸಂಪಾದಕರಾಗಿರಬೇಕೆಂದೂ ಕರಾರಾಯಿತು. ಸುಬ್ಬರಾಯರೇನೋ ಸಾಲ ಹಿಂತಿರುಗಿಸಿ ಋಣಮುಕ್ತರಾದರು. ಆದರೆ ಹೊಸ ವ್ಯವಸ್ಥೆಯಲ್ಲಿ ಅವರು ಪತ್ರಿಕಾ ಸಂಪಾದಕರಾಗಿ ಮುಂದುವರಿಯುವುದು ಕಷ್ಟವಾಯಿತು. ರಾಜಾ ಅವರು ‘ಸ್ವತಂತ್ರ’ ಪತ್ರಿಕೆಯ ಮುಖಾಂತರ ತಮ್ಮ ಪ್ರತಿಷ್ಠೆಯನ್ನು ಮೆರೆಸಲು ಮೊದಲುಮಾಡಿದರು ಎಂದು ಸುಬ್ಬರಾಯರಿಗೆ ತೋರಿತು. ರಾಷ್ಟ್ರೀಯ ಉದ್ದೇಶಕ್ಕಾಗಿ ಪ್ರಾರಂಭವಾದ ಪತ್ರಿಕೆಯನ್ನು ಖಾಸಗಿ ಪ್ರಚಾರಕ್ಕಾಗಿ ಬಳಸಿಕೊಳ್ಳುವುದಕ್ಕೆ ಅವರ ಮನಸ್ಸು ಒಪ್ಪಲಿಲ್ಲ. ಅದರಿಂದಾಗಿ ಮುಂದಿನ ಯೋಚನೆಯಿಲ್ಲದೆ ಪತ್ರಿಕೆಯನ್ನು ಬಿಟ್ಟು ಹೊರಬಂದರು.

ಮತ್ತೆ ಸ್ವರಾಜ್ಯ

ಸುಬ್ಬರಾಯರು ‘ಸ್ವತಂತ್ರ’ವನ್ನು ಸ್ವಂತ ಮಗನಂತೆ ಆರೈಕೆಮಾಡಿ ಬೆಳೆಸಿದ್ದರು. ಅದನ್ನು ಇಂಥವರ ಕೈಯಲ್ಲಿ ಬಿಟ್ಟುಬರುವುದು ಅವರಿಗೆ ತುಂಬ ಯಾತನೆಯ ವಿಷಯವಾಯಿತು. ಆದರೆ ತತ್ತ್ವಗಳಿಗೆ ಬದ್ಧರಾದ ಅವರು ಮೋಹಕ್ಕೆ ಕಟ್ಟುಬೀಳಲಿಲ್ಲ. ಅವರು ಪತ್ರಿಕೆಯಿಂದ ಹೊರಬಂದಾಗ ಅವರೊಡನೆ ಆರೇಳು ಮಂದಿ ಪ್ರಾಮಾಣಿಕ ಕೆಲಸಗಾರರು ಕೂಡ ಕೆಲಸಬಿಟ್ಟು ಬಂದರು. ಆದುದರಿಂದ ಅವರಿಗೆ ಉದ್ಯೋಗ ಒದಗಿಸಲೆಂದು ಸುಬ್ಬರಾಯರು ಸಣ್ಣ ಪ್ರಮಾಣದಲ್ಲಿ ಹನ್ನೆರಡು ಪುಟಗಳ ಒಂದು ಸಣ್ಣ ವಾರಪತ್ರಿಕೆಯನ್ನು ಪ್ರಾರಂಭಿಸಲು ಯೋಚಿಸಿದರು. ಇದು ಅವರ ಅರವತ್ತನೇ ವಯಸ್ಸಿನಲ್ಲಿ ೧೯೫೬ ರಲ್ಲಿ ಕೈಗೊಂಡ ಸಾಹಸ. ಸದ್ಯಕ್ಕೆ ಬೇರೆಯವರ ಮುದ್ರಣಾಲಯದಲ್ಲಿ ಮುದ್ರಿಸಿ ಪತ್ರಿಕೆಯನ್ನು ಬಿಡುಗಡೆ ಮಾಡಬೇಕೆಂದುಕೊಂಡರು. ಎಲ್ಲ ಸಿದ್ಧತೆಗಳಾದವು. ೧೯೫೬ ರ ಜೂನ್‌೧೧ರಂದು ಮೊದಲ ಸಂಚಿಕೆಯನ್ನು ಪ್ರಕಟಿಸಬೇಕೆಂದು ನಿರ್ಧಾರವಾಗಿತ್ತು. ಆದರೆ ಅದಕ್ಕೆ ಒಂದು ವಾರ ಮುಂಚೆ, ಜೂನ್‌೪ ರಂದು ಅವರ ಹಿರಿಯ ಮಗಳು ಸಾವನ್ನಪ್ಪಿದಳು. ಇದು ಖಾಸಾ ಸುಬ್ಬರಾಯರಿಗೆ ಭರಿಸಲಾಗದ ನೋವಾಯಿತು. ಬೇರೆ ಯಾರಾದರೂ ಆಗಿದ್ದರೆ ಇಂಥ ಆಘಾತದಿಂದ ಚೇತರಿಸಿಕೊಳ್ಳಲಾಗದೆ ಹಿಡಿದ ಕೆಲಸವನ್ನು ಅರ್ಧದಲ್ಲೇ ಕೈಬಿಡುತ್ತಿದ್ದರು. ಆದರೆ ಸುಬ್ಬರಾಯರು ಕರ್ಮಯೋಗಿಯಂತೆ ಫಲದ ಬಗೆಗೆ ಆಸೆ ಇಟ್ಟುಕೊಳ್ಳದೆ ತಮ್ಮ ಕಾರ್ಯದಲ್ಲಿ ಮಗ್ನರಾದರು. ಒಂದು ತಿಂಗಳು ತಡವಾಗಿ ೧೯೫೬ರ ಜುಲೈ ೧೪ ರಂದು ಸಿ. ರಾಜಗೋಪಾಲಾಚಾರಿ ಅವರ ಆಶೀರ್ವಾದವನ್ನು ಹೊತ್ತು ಪತ್ರಿಕೆ ಹೊರಬಂದಿತು. ಸ್ವಾತಂತ್ಯ್ರ ಚಳವಳಿಯ ಕಾಲದಲ್ಲಿ ತಾವು ಹನ್ನೆರಡು ವರ್ಷಗಳ ಕಾಲ ಕೆಲಸಮಾಡಿದ್ದ ‘ಸ್ವರಾಜ್ಯ’ ಪತ್ರಿಕೆಯ ಹೆಸರನ್ನೇ ತಮ್ಮ ಹೊಸ ಪತ್ರಿಕೆಗೂ ಇಟ್ಟರು.

ಖಾಸಾ ಸುಬ್ಬರಾಯರು ಮತ್ತು ರಾಜಾಜಿ

ಅನಾರೋಗ್ಯ

ಅರವತ್ತನೆಯ ವಯಸ್ಸಿನಲ್ಲಿ ಸುಬ್ಬರಾಯರಿಗೆ ಹೊಸ ಯೌವನ ಬಂದಂತಾಯಿತು. ತಮ್ಮ ಪತ್ರಿಕೆಯ ಎಲ್ಲ ಕೆಲಸಗಳನ್ನೂ ಅವರೇ ಮಾಡುತ್ತಿದ್ದರು. ಪತ್ರಿಕೆಯ ಕರಡು ಪ್ರತಿಗಳನ್ನು ತಿದ್ದುವುದು, ಅಗತ್ಯ ಪಡಿಯಚ್ಚುಗಳನ್ನು ಮಾಡಿಸುವುದು, ಮುದ್ರಿತ ಪತ್ರಿಕೆಗಳ ಕಟ್ಟುಗಳನ್ನು ತಮ್ಮ ಕಾರಿನಲ್ಲಿ ಹಾಕಿಕೊಂಡು ಅಂಚೆ ಕಚೇರಿಗೆ ಹೋಗಿ ಅಂಚೆಗೆ ಹಾಕುವುದು – ಹೀಗೆ ಸಣ್ಣ ದೊಡ್ಡ ಕೆಲಸವೆಂಬ ಭೇದವಿಲ್ಲದೆ ದುಡಿಯುತ್ತಿದ್ದರು. ಈ ರೀತಿ ಅವರು ಮಿತ್ರರ ನೆರವಿನಿಂದ ಮೂರು ವರ್ಷ ಕಾಲ ಮಾತ್ರ ಪತ್ರಿಕೆಯನ್ನು ನಡೆಸಲು ಸಾಧ್ಯವಾಯಿತು. ೧೯೫೯ರಲ್ಲಿ ಸುಬ್ಬರಾಯರಿಗೆ ಪಾರ್ಶ್ವವಾಯು ರೋಗ ಬಂದಿತು. ಅವರ ಅನಾರೋಗ್ಯ ಕಾಲದಲ್ಲಿ ಸಿ. ರಾಜಗೋಪಾಲಾಚಾರಿ ಅವರು ಪತ್ರಿಕೆಯನ್ನು ನೋಡಿಕೊಳ್ಳುತ್ತಿದ್ದರು. ಕೊನೆಗೆ ಅವರ ಸಲಹೆಯಂತೆಯೇ ‘ಕಲ್ಕಿ’ ಪತ್ರಿಕೆಯ ಒಡೆಯರಾದ ಟಿ. ಸದಾಶಿವಂ (ಸಂಗೀತ ವಿದುಷಿ ಶ್ರೀಮತಿ ಎಂ.ಎಸ್‌. ಸುಬ್ಬಲಕ್ಷ್ಮೀ ಅವರ ಪತಿ) ಅವರಿಗೆ ‘ಸ್ವರಾಜ್ಯ’ವನ್ನು ವಹಿಸಿಕೊಡಲಾಯಿತು. ಸುಬ್ಬರಾಯರೇ ಸಂಪಾದಕರಾಗಿ ಮುಂದುವರಿಸಿದರು. ತಮ್ಮ ಕೊನೆಯ ಉಸಿರಿನವರೆಗೂ ಅದರ ಸಂಪಾದಕರಾಗಿದ್ದರು.

೧೯೫೯ರಿಂದ ೧೯೬೧ರ ವರೆಗೂ ಸುಬ್ಬರಾಯರು ಅನಾರೋಗ್ಯದಿಂದ ನರಳುತ್ತಿದ್ದರು. ಎರಡು ಮೂರು ಸಲ ಚಿಕಿತ್ಸೆಗಾಗಿ ಆಸ್ಪತ್ರೆಗೂ ಸೇರಿದ್ದರು. ೧೯೬೧ ರ ಜೂನ್‌೧೬ ರಂದು ತಮ್ಮ ೬೫ ನೆಯ ವಯಸ್ಸಿನಲ್ಲಿ ಅವರು ಮೃತರಾದರು. ಕೊನೆಯ ದಿನದವರೆಗೂ ಅವರು ಬರೆಯುತ್ತಲೇ ಇದ್ದರು. ‘ಸೈಡ್‌ಲೈಟ್ಸ್‌’ ಎಂಬ ಶೀರ್ಷಿಕೆಯಲ್ಲಿ ಅವರು ಬರೆಯುತ್ತಿದ್ದ ಅಂಕಣ ‘ಸ್ವರಾಜ್ಯ’ ಪತ್ರಿಕೆಯ ಜೂನ್‌೧೭ರ ಸಂಚಿಕೆಯಲ್ಲೂ ಪ್ರಕಟವಾಯಿತು. ಸುಬ್ಬರಾಯರು ಅನಾರೋಗ್ಯದಲ್ಲಿ ಕೂಡ ತಮ್ಮ ನೋವನ್ನು ಶಾಂತವಾಗಿ ನುಂಗಿಕೊಂಡಿದ್ದರು. ತಮ್ಮಿಂದ ತಮ್ಮ ಬಂಧುಗಳಿಗೆ ಅನಾನುಕೂಲವಾಗುತ್ತದಲ್ಲ ಎಂದು ಸಂಕೋಚ ಪಟ್ಟುಕೊಳ್ಳುತ್ತಿದ್ದರು.

ಸುಬ್ಬರಾಯರು ದಿವಂಗತರಾದಮೇಲೂ ‘ಸ್ವರಾಜ್ಯ’ ಪತ್ರಿಕೆ ಮುಂದುವರಿಯಿತು. ಈಗ ಟಿ. ಸದಾಶಿವಂ ಅವರೇ ಆ ಪತ್ರಿಕೆಯನ್ನು ನಡೆಸುತ್ತಿದ್ದಾರೆ. ಇಂದಿಗೂ ‘ಖಾಸಾ ಸುಬ್ಬರಾಯರು ಸ್ಥಾಪಿಸಿದ ಪತ್ರಿಕೆ’ ಎಂದು ‘ಸ್ವರಾಜ್ಯ’ದ ಮೇಲೆ ಮುದ್ರಿಸುತ್ತಿದ್ದಾರೆ.

ಸರಳತೆ

ಸುಬ್ಬರಾಯರು ಸರಳತೆಯ ಸಾಕಾರಮೂರ್ತಿಯಾಗಿದ್ದರು. ಖಾದಿಯ ಬಿಳಿಯ ದಟ್ಟಿ, ಬಿಳಿಯ ಅಂಗಿ, ಹಾಗೂ ಒಂದು ಬಿಳಿಯ ಅಂಗವಸ್ತ್ರದಲ್ಲಿ ಅವರು ಶುಭ್ರತೆ ಮತ್ತು ಸರಳತೆಯ ಪ್ರತಿಪಾದಕರಂತೆ ಕಾಣುತ್ತಿದ್ದರು. ಅವರ ಚಿನ್ನದ ಬಣ್ಣದ ಚೌಕಟ್ಟಿನ ಕನ್ನಡಕದಲ್ಲಿ ಕಣ್ಣುಗಳು ಹೊಳೆಯುತ್ತಿದ್ದವು. ಮುಖದಲ್ಲಿ ಸದಾ ಕರುಣೆ ತುಂಬಿರುತ್ತಿತ್ತು. ಅವರು ಸೌಮ್ಯಮೂರ್ತಿ. ಆದರೆ ದೇಶದ ಹಿತಕ್ಕೆ ಹೋರಾಡುವಾಗ ಉಗ್ರವಾಗಿ ಪ್ರತಿಭಟಿಸುತ್ತಿದ್ದುದೂ ಉಂಟು. ಅವರ ಸಂಪಾದಕೀಯ ಲೇಖನಗಳು ಚುರುಕಾಗಿರುತ್ತಿದ್ದವು. ಅವರು ತಮ್ಮ ಪತ್ರಿಕೋದ್ಯೋಗದ ಮೊದಲಿನಿಂದಲೂ ಬೇರೆಬೇರೆ ಪತ್ರಿಕೆಗಳಿಗೆ ‘ಸೈಡ್‌ಲೈಟ್ಸ್‌’ ಎಂಬ ಶೀರ್ಷಿಕೆಯಲ್ಲಿ ವಿವಿಧ ವಿಷಯಗಳನ್ನು ಕುರಿತು ಅಂಕಣಗಳನ್ನು ಬರೆಯುತ್ತಿದ್ದರು. ತಮ್ಮದೇ ಪತ್ರಿಕೆ ಸ್ಥಾಪಿಸಿದಾಗ ಅದನ್ನು ಅಲ್ಲೂ ಮುಂದುವರಿಸಿದರು. ಆ ಅಂಕಣ ತುಂಬ ಜನಪ್ರಿಯವಾಗಿತ್ತು. ಇದನ್ನು ಅವರು ‘ಸಕ’ ಎಂಬ ಕಾವ್ಯನಾಮದಲ್ಲಿ ಬರೆಯುತ್ತಿದ್ದರು. ಮದರಾಸಿನ ‘ಲಾಂಗ್ವೇಜ್‌ಪಬ್ಲಿಕೇಷನ್ಸ್‌’ ಸಂಸ್ಥೆಯವರು ಅವುಗಳಲ್ಲಿ ಕೆಲವು ಬರಹಗಳನ್ನು ಆಯ್ದು ‘ಸೈಡ್ಸ್‌ಲೈಟ್ಸ್’ ಎಂಬ ಹೆಸರಿನಲ್ಲಿ ಪ್ರಕಟಿಸಿದರು. ಸಿ. ರಾಜಗೋಪಾಲಾಚಾರಿ ಅವರು ಈ ಪುಸ್ತಕದ ಬಗೆಗೆ ಬರೆಯುತ್ತಾ, ‘ಖಾಸಾ ಸುಬ್ಬರಾಯರು ಸಕ ಎಂಬ ಕಾವ್ಯನಾಮದಲ್ಲಿ ಬರೆಯುವಾಗ ಅತ್ಯುತ್ತಮವಾಗಿ ಬರೆಯುತ್ತಾರೆ’ ಎಂದು ಪ್ರಶಂಸಿಸಿದ್ದಾರೆ. ಈ ಬರಹಗಳು ಇಷ್ಟು ಜನಮನ್ನಣೆ ಗಳಿಸಲು ಒಂದು ಕಾರಣವುಂಟು. ಸುಬ್ಬರಾಯರು ಏನೇ ಬರೆಯಲಿ ಅದನ್ನು ನಿರ್ಭಯವಾಗಿ ಮತ್ತು ಪ್ರಾಮಾಣಿಕವಾಗಿ ಬರೆಯುತ್ತಿದ್ದರು. ಹೃದಯವಂತಿಕೆಯಿಂದ ಬರೆಯುತ್ತಿದ್ದರು. ಅವರ ಶೈಲಿ ಹರಿತವಾಗಿತ್ತು. ಭಾಷೆ ಸರಳವಾಗಿತ್ತು. ಅವರ ಬರಹದ ಈ ಗುಣಗಳೇ ಅವರಿಗೆ ಕೀರ್ತಿಯನ್ನು ತಂದುಕೊಟ್ಟವು.

ಸುಬ್ಬರಾಯರು, ಎಲ್ಲರೂ ಸಮಾನರು ಎಂದು ಭಾವಿಸುತ್ತಿದ್ದರು. ಜಾತಿಭೇದ ಅವರ ಬಳಿ ಸುಳಿಯುತ್ತಿರಲಿಲ್ಲ.

ಸುಬ್ಬರಾಯರು ಒಳ್ಳೆಯ ಪುಸ್ತಕಪ್ರೇಮಿ. ಉತ್ತಮ ಗ್ರಂಥಗಳನ್ನು ತಮ್ಮ ಪುಸ್ತಕ ಭಂಡಾರದಲ್ಲಿ ಸಂಗ್ರಹಿಸಿ ಇಟ್ಟುಕೊಂಡಿದ್ದರು. ಸ್ವತಃ ಪತ್ರಿಕೋದ್ಯೋಗಿಯಾಗಿದ್ದೂ ಇತರ ಅನೇಕ ಪತ್ರಿಕೆಗಳನ್ನು ಕೊಂಡು ಓದುತ್ತಿದ್ದರು. ಅಗತ್ಯವಾದ ಪತ್ರಿಕೆಗಳನ್ನು ಅಚ್ಚುಕಟ್ಟಾಗಿ ಮಡಿಸಿ ತಮ್ಮ ಸಂಗ್ರಹಕ್ಕೆ ಸೇರಿಸುತ್ತಿದ್ದರು. ಬರಹ ಮತ್ತು ವ್ಯಾಸಂಗ ಅವರ ಜೀವನದ ಉಸಿರಾಗಿತ್ತು.

ಉದಾರಿ

ಖಾಸಾ ಸುಬ್ಬರಾಯರ ದಯೆ ಮತ್ತು ಮಾನವೀಯತೆಗಳನ್ನು ಎತ್ತಿ ತೋರಿಸುವ ಅನೇಕ ಘಟನೆಗಳಿವೆ.

ಸುಬ್ಬರಾಯರ ಬಾಲ್ಯ ಸ್ನೇಹಿತ ಹಾಗೂ ಸಹಪಾಠಿ ಸಿ.ಎಸ್‌. ರಂಗಸ್ವಾಮಿಯವರ ಕಿರಿಯ ಸೋದರ ಒಂದು ಸಲ ಕಷ್ಟದಲ್ಲಿದ್ದರು. ಅದನ್ನು ತಿಳಿದು ಸುಬ್ಬರಾಯರು ನೆಲ್ಲೂರಿನಲ್ಲಿ ತಮ್ಮ ಪಾಲಿಗೆ ಬಂದಿದ್ದ ಮನೆಯನ್ನು ಮಾರಿ ಅವರಿಗೆ ಹಣಕೊಟ್ಟುಬಿಟ್ಟರು. ಕಾಲೇಜು ದಿನಗಳಲ್ಲಿ ಕೂಡ ಅಷ್ಟೆ. ತಾವೇ ಬಡವರು; ಆದರೆ ತಮಗಿಂತ ಬಡವರಾದ ಸಹ ವಿದ್ಯಾರ್ಥಿಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡುತ್ತಿದ್ದರು. ಯಾರಿಗಾದರೂ ಉಡಲು ಬಟ್ಟೆಯಿಲ್ಲವೆಂದರೆ ತಮ್ಮ ಎರಡನೆಯ ಪಂಚೆಯನ್ನೇ ಕೊಟ್ಟುಬಿಡುತ್ತಿದ್ದರು.

ದೊಡ್ಡತನ

ಒಂದು ನಡುರಾತ್ರಿಯಲ್ಲಿ ಸುಬ್ಬರಾಯರು ಮಲಗಿದ್ದಾಗ ಯಾರೋ ಅವರ ಮನೆಯ ಬಾಗಿಲು ಬಡಿದರು. ಸುಬ್ಬರಾಯರು ಹೊರಗೆ ಬಂದು ನೋಡುತ್ತಾರೆ. ತಮ್ಮ ಸಹೋದ್ಯೋಗಿಗಳು ಇಬ್ಬರು ಅಸ್ತವ್ಯಸ್ತ ಸ್ಥಿತಿಯಲ್ಲಿ ತೂರಾಡುತ್ತಾ ನಿಂತಿದ್ದಾರೆ. ಸುಬ್ಬರಾಯರು ಅವರನ್ನು ಒಳಗೆ ಕರೆದುಕೊಂಡು ಬಂದು ಊಟಕ್ಕೆ ವ್ಯವಸ್ಥೆ ಮಾಡಿದರು. ಹಾಸಿಗೆ ಹಾಸಿಕೊಟ್ಟರು. ಬೆಳಕು ಹರಿದಾಗ ಆ ಮಹಾಶಯರಿಗೆ ಬುದ್ಧಿ ತಿಳಿಯಾಗಿ ತಾವು ತಮ್ಮ ಪತ್ರಿಕಾ ಸಂಪಾದಕರ ಮನೆಯಲ್ಲಿ ಇದ್ದೇವೆ ಎಂದು ತಿಳಿದು ದಿಗ್ಭ್ರಮೆಯಾಯಿತು. ಹೇಳದೆ ಕೇಳದೆ ಹೊರಗೆ ದೌಡಾಯಿಸಿದರು. ಅಂದು ಪತ್ರಿಕಾಲಯದಲ್ಲಿ ಸುಬ್ಬರಾಯರು ತಮ್ಮನ್ನು ಈ ವಿಚಾರವಾಗಿ ಕೇಳಬಹುದೇನೋ ಎಂದು ಅವರಿಗೆ ಹೆದರಿಕೆ ಇತ್ತು. ಆದರೆ ಸುಬ್ಬರಾಯರು ಆ ವಿಚಾರ ತಮಗೆ ಏನೂ ತಿಳಿದೇ ಇಲ್ಲವೇನೋ ಎಂಬಂತೆ ವರ್ತಿಸಿದ್ದನ್ನು ಕಂಡು ಅವರು ಸಮಾಧಾನದ ಉಸಿರೆಳೆದರು.

ಸುಬ್ಬರಾಯರು ಬಡತನದಲ್ಲೇ ಇಡೀ ಜೀವನ ಕಳೆದರು. ಏಕೆಂದರೆ ಪತ್ರಿಕೆಯನ್ನು ನಡೆಸುವುದು ಎಂದರೆ ಬಿಳಿ ಆನೆಯನ್ನು ಸಾಕಿದಂತೆ. ಆದರೆ, ತಾವು ಬಡವರಾಗಿದ್ದರೂ ಯಾರಾದರೂ ಬಂದು ತಮ್ಮ ಕಷ್ಟವನ್ನು ಅವರ ಬಳಿ ತೋಡಿಕೊಂಡರೆ ಕೈಲಾದ ಸಹಾಯ ಮಾಡುತ್ತಿದ್ದರು. ಅವರೇ ನೋವನ್ನು ಅನುಭವಿಸಿದ್ದುದರಿಂದ ಬೇರೆಯವರ ಸಂಕಟ ಎಂಥದೆಂದು ಅವರಿಗೆ ಅರ್ಥವಾಗುತ್ತಿತ್ತು.

ಸ್ಮಾರಕ ದತ್ತಿ ನಿಧಿ

ಪತ್ರಿಕಾ ಪ್ರಪಂಚದಲ್ಲಿ ಖಾಸಾ ಸುಬ್ಬರಾಯರ ವ್ಯಕ್ತಿತ್ವ ಅಚ್ಚಳಿಯದೆ ಉಳಿದಿದೆ. ಅವರ ಶುಭ್ರ ಜೀವನ, ನಿರ್ಭೀತ ವಿಚಾರಧಾರೆಯನ್ನು ಇಂದಿಗೂ ಅನೇಕರು ಜ್ಞಾಪಿಸಿಕೊಳ್ಳುತ್ತಾರೆ. ಅಮೆರಿಕದ ಶಾಂತಿ ನಿಯೋಗದ ಅಲೆನ್‌ಬ್ರಾಡ್‌ಫರ್ಡ್ ಎಂಬವರು ತಮ್ಮ ಜೀವಿತದ ಸಮಸ್ತ ಸಂಪತ್ತನ್ನು ಉಸ್ಮಾನಿಯಾ ವಿಶ್ವವಿದ್ಯಾನಿಲಯಕ್ಕೆ ಖಾಸಾ ಸುಬ್ಬರಾಯರ ಹೆಸರಿನಲ್ಲಿ ದತ್ತಿನಿಧಿಯಾಗಿ ನೀಡಿದ್ದಾರೆ. ಸುಬ್ಬರಾಯರಿಗೆ ಇವರ ಪರಿಚಯವಿರಲಿಲ್ಲ. ಆದರೂ ಅಲೆನ್‌ಬ್ರಾಡ್‌ಫರ್ಡ್, ಸುಬ್ಬರಾಯರ ವ್ಯಕ್ತಿತ್ವದಿಂದ ಪ್ರಭಾವಿತರಾಗಿ ಇಂಥ ನಿಧಿಯನ್ನು ಪ್ರತಿಷ್ಠಾಪಿಸಿದರು. ಈ ನಿಧಿಯಿಂದ ಉಸ್ಮಾನಿಯಾ ವಿಶ್ವವಿದ್ಯಾಲಯ, ಪತ್ರಿಕೋದ್ಯಮದ ಡಿಪ್ಲೋಮಾ ವಿದ್ಯಾರ್ಥಿಗಳಲ್ಲಿ ಅತ್ಯುತ್ತಮ ಲೇಖನ ಬರೆದ ವಿದ್ಯಾರ್ಥಿಗೆ ಖಾಸಾ ಸುಬ್ಬರಾಯರ ಹೆಸರಿನಲ್ಲಿ ಪ್ರಶಸ್ತಿ ಪತ್ರ ಮತ್ತು ನೂರು ರೂಪಾಯಿಗಳ ಬಹುಮಾನವನ್ನು ನೀಡುತ್ತದೆ. ಭಾರತೀಯ ವಿದ್ಯಾಭವನ ಕೂಡ ಸುಬ್ಬರಾಯರ ನೆನಪಿಗೆ ಒಂದು ಚಿನ್ನದ ಪದಕವನ್ನು ನೀಡುತ್ತಿದೆ. ಅಖಿಲ ಭಾರತದಲ್ಲಿ ಪತ್ರಿಕೋದ್ಯಮದ ಡಿಪ್ಲೊಮಾ ವ್ಯಾಸಂಗದಲ್ಲಿ ಅತ್ಯುಚ್ಚ ಅಂಕಗಳನ್ನು ಗಳಿಸಿ ತೇರ್ಗಡೆ ಹೊಂದುವ ವಿದ್ಯಾರ್ಥಿಗೆ ಈ ಚಿನ್ನದ ಪದಕ ಲಭಿಸುತ್ತಿದೆ.

ಸುಬ್ಬರಾಯರದು ಸ್ವಾರ್ಥದ ಸುಳಿವಿಲ್ಲದ ಬಾಳು. ಆದರ್ಶವಾದ ಬದುಕು. ಪತ್ರಿಕೋದ್ಯಮವನ್ನು ಹೇಗೆ ನಡೆಸಬೇಕೆನ್ನುವುದಕ್ಕೆ ಇಂದಿಗೂ ಅವರು ಒಂದು ಉತ್ತಮ ಮಾದರಿಯಾಗಿದ್ದಾರೆ.