ಬೆಂಗಳೂರಿನಲ್ಲಿ ವಾಸ, ನಲವತ್ತು ವರ್ಷ ವಯಸ್ಸು, ಕಳೆದ ಹದಿನೈದು ವರ್ಷಗಳಿಂದ ಖಿನ್ನತೆ, ನಿಶ್ಯಕ್ತಿ, ಜಿಗುಪ್ಸೆ, ನಿದ್ರಾಹೀನತೆ, ಶೀಘ್ರಸ್ಖಲನ, ಆತ್ಮಸ್ಥೈರ್ಯದ ಕೊರತೆ, ಸಾಯಬೇಕೆಂಬ ಭಾವನೆ. ಯಾವ ಕೆಲಸವನ್ನು ಮಾಡುವುದಕ್ಕೂ ಚಟುವಟಿಕೆ ಇಲ್ಲ. ಮನೋವೈದ್ಯರ ಸಲಹೆಯಂತೆ ಎಂಟು. ಹತ್ತು ವರ್ಷಗಳಿಂದ ಖಿನ್ನತೆ ನಿವಾರಣೆ ಮಾತ್ರೆ ತೆಗೆದುಕೊಂಡೆ, ಆದರೂ ಪೂರ್ಣ ಗುಣವಾಗಿಲ್ಲ. ಖಿನ್ನತೆ, ನಿಶ್ಯಕ್ತಿ ಮುಂತಾದ ತೊಂದರೆಗಳು ಸುಮಾರು ಅರ್ಧದಷ್ಟು ಮುಂದುವರಿದಿದೆ. ಈಗ ಎರಡು ವರ್ಷಗಳಿಂದ ಡಯಾಬಿಟಿಸ್ ಸಹ.

ನೀವು ನೀಡಿರುವ ರೋಗ ಲಕ್ಷಣ ಖಿನ್ನೆಯ ಕಾಯಿಲೆ ಸೂಚಿಸಿದರೂ ವಿವರ ಅಪರಿಪೂರ್ಣ. ನಿರ್ದಿಷ್ಟ ಅಭಿಪ್ರಾಯವನ್ನು ನೀಡುವುದು ಕಷ್ಟ. ಉದಾಹರಣೆ ನಿದ್ರಾಹೀನತೆ ಬಗ್ಗೆ ಬರೆದಿದ್ದೀರಿ. ಇದು ಸಂಪೂರ್ಣ ರಾತ್ರಿ ನಿದ್ರೆ ಇಲ್ಲದಿರುವಿಕೆಯೆ ಅಥವಾ ಮಲಗಿದ ಕೂಡಲೆ ನಿದ್ರೆ ಬಂದು ಮಧ್ಯರಾತ್ರಿಯಲ್ಲಿ ಒಮ್ಮೆಲೆ ಎಚ್ಚರವಾಗಿ ಆಮೇಲೆ ನಿದ್ರೆ ಬರುವಂತಾಗುವಿಕೆಯೇ ಅಥವಾ ರಾತ್ರಿಯಿಡೀ ಆಗ್ಗಾಗ್ಗೆ ನಿದ್ರೆ ಡಿಸ್ಟರ್ಬ್‌ ಆಗುವಿಕೆಯೇ ಎಂಬುದರ ಮಾಹಿತಿ ರೋಗ ನಿರ್ಧಾರಕ್ಕೆ ಅಗತ್ಯ. ಉದಾಹರಣೆ ಮಲಗಿದ ಕೂಡಲೆ ನಿದ್ರೆ ಬಂದು ಮಧ್ಯರಾತ್ರಿ ಎಚ್ಚರವಾಗುವಿಕೆ ರಿಯಾಕ್ಟಿವ್ ಖಿನ್ನತೆಯಲ್ಲಿ ಕಂಡುಬಂದರೆ ಬೆಳಗಿನ ಜಾವ ಎಚ್ಚರವಾಗಿ ನಿದ್ರೆ ಬಾರದಿರುವಿಕೆ ಎಂಡಾಜೀನಸ್ ಖಿನ್ನತೆಯಲ್ಲಿ ಕಾಣಿಸಿಕೊಳ್ಳುತ್ತದೆ. ನ್ಯೂರಾಟಿಕ್ ಖಿನ್ನತೆಯಲ್ಲಿ ನಿದ್ರೆಯಲ್ಲಿ ಆಗಾಗ್ಗೆ ಅಡೆತಡೆ ಉಂಟಾಗುವುದು ಮತ್ತು ಖಿನ್ನತೆಯೊಂದಿಗೆ ಇಚ್ಚಿತ ವಿಕಲತೆಯೂ ಸೇರಿಕೊಂಡಾದ ಸಂಪೂರ್ಣ ನಿದ್ರಾ ಹೀನತೆಯಾಗುವುದುಂಟು. ಅದು ನೀವಿತ್ತ ಇತರೆ ರೋಗ ಲಕ್ಷಣಗಳಿಂದ ನಿಮಗೆ ರಿಯಾಕ್ಟಿವ್ ಖಿನ್ನತೆ ಇರುವ ಸಾಧ್ಯತೆಯುಂಟು. ಇದಕ್ಕೆ ಖಚಿತವಾದ ಚಿಕಿತ್ಸೆ ಉಂಟು. ಖಿನ್ನತೆಯಿಂದ ಸಂಪೂರ್ಣ ಗುಣಮುಖರಾಗಿ ಆರೋಗ್ಯಕರ ಮನೋದೈಹಿಕ ಜೀವನವನ್ನು ನಡೆಸಬಹುದು.

ಖಿನ್ನತೆ ಪ್ರಮುಖವಾಗಿ ಮನಸ್ಸಿನಲ್ಲಿನ ಭಾವನೆಗಳ ವಿಕಲತೆ. ನಮ್ಮ ಪ್ರತಿಯೊಂದು ಭಾವನೆಯನ್ನೂ ನಿಯಂತ್ರಿಸಲು ಮೆದುಳಿನಲ್ಲಿ ಲಿಂಬಿಕ್ ವ್ಯವಸ್ಥೆ ಇದೆ. ಇದು ನಮ್ಮೆಲ್ಲ ಭಾವನೆಗಳನ್ನೂ ನಿಯಂತ್ರಿಸುವ ಕೇಂದ್ರ. ಬೇಜಾರು, ಸಂತೋಷ, ಗೆಲುವು, ಆತಂಕ, ಖಿನ್ನತೆ ಇವೆಲ್ಲವೂ ಲಿಂಬಿಕ್ ವ್ಯವಸ್ಥೆಯಲ್ಲಿನ ರಾಸಾಯನಿಕ ಕ್ರಿಯೆಗಳ ಏರುಪೇರಿನಿಂದ ಉಂಟಾಗುತ್ತದೆ. ಭಾವನೆಗಳು ಪ್ರಕ್ರಿಯೆಗಳಲ್ಲೂ, ಸೋಡಿಯಂ ಲವಣ ಪ್ರಮುಖ ಪಾತ್ರ ವಹಿಸುವುದರಿಂದ ಈ ಕ್ರಿಯೆಯನ್ನು ಸೋಡಿಯಂ ಪಂಪ್ ಮೆಕ್ಯಾಹಿಸಂ ಎಂದು ಕರೆಯಲಾಗುತ್ತದೆ. ಸ್ವಸ್ಥ ಮನಸ್ಸಲ್ಲಿ ಇವೆಲ್ಲ ಭಾವನೆಗಳು ಕಂಡು ಬಂದರೂ ಸೋಡಿಯಂ ಲವಣಗಳು ತಪ್ಪಿದ ರಾಸಾಯನಿಕ ಸಮತೋಲನವನ್ನು ತನ್ನಷ್ಟಕ್ಕೆ ಸರಿಪಡಿಸಿಕೊಳ್ಳುತ್ತದೆ. ಆದರೆ ಖಿನ್ನತೆಯ ಕಾಯಿಲೆಯಲ್ಲಿ ಈ ಅಸಮತೋನ ಅದೇ ರೀತಿ ಮುಂದುವರೆದು ವ್ಯಕ್ತಿ ಚಿಕಿತ್ಸೆಗೆ ಒಳಪಡಬೇಕಾಗುತ್ತದೆ.

ಖಿನ್ನತೆ ನಿವಾರಣೆ ಔಷಧಿಯನ್ನು ನಿರಂತರವಾಗಿ ಕನಿಷ್ಠ ಎರಡು ವರ್ಷ ತೆಗೆದುಕೊಳ್ಳಬೇಕಾಗುತ್ತದೆ. ಅಲ್ಲದೆ ಸಹಾಯಕ ಮನೋಚಿಕಿತ್ಸೆಗಾಗಿ ಮನೋವೈದ್ಯರನ್ನು ಆಗ್ಗಾಗೆ ಭೇಟಿ ಮಾಡುತ್ತಿರಬೇಕಾಗುತ್ತದೆ. ಇದರಿಂದ ಗುರುತರವಾದ ಆತ್ಮಹತ್ಯೆ ಮನೋಭಾವವನ್ನು ನಿವಾರಿಸಲು ಸಾಧ್ಯ. ಡಯಾಬಿಟೀಸ್ ಬಗ್ಗೆ ಬರೆದಿದ್ದೀರಿ, ನಿಶ್ಯಕ್ತಿ ಹಾಗೂ ಅಲಸ್ಯ ಪ್ರವೃತ್ತಿ ಅದರಿಂದಲೂ ಇರುವ ಸಾಧ್ಯತೆಯುಂಟು. ಒಳ್ಳೆಯ ವೈದ್ಯರನ್ನು ಕಾಣಬೇಕು.