೧೯೦೬ನೇ ಇಸವಿ ಫೆಬ್ರವರಿ ತಿಂಗಳು. ಬಂಗಾಳದ ಮೇದಿನೀಪುರದಲ್ಲಿ ಒಂದು ಭಾರಿ ಪ್ರದರ್ಶನ ನಡೆಯುತ್ತಿತ್ತು. ಆಗ ಭಾರತವನ್ನು ಆಳುತ್ತಿದ್ದ ಬ್ರಿಟಿಷರ ಅನ್ಯಾಯಗಳನ್ನು ಮರೆ ಮಾಚುವುದೇ  ಈ ಪ್ರದರ್ಶನದ ಉದ್ದೇಶವಾಗಿತ್ತು. ಬ್ರೀಟಿಷ್ ಆಳರಸರು ಹೊರಗಿನವರಾದರೂ ಭಾರತದ ಜನರಿಗೋಸ್ಕರ ತುಂಬಾ ಒಳ್ಳೆಯ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂಬ ಭಾವನೆಯನ್ನು ಮೂಡಿಸುವಂತಹ ಹಲವು ಬಗೆಯ ಚಿತ್ರಗಳು, ಬೊಂಬೆಗಳು ಇತ್ಯಾದಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಇದನ್ನು ನೋಡಲು ಜನರು ಕಿಕ್ಕಿರಿದು ಸೇರಿದ್ದರು.

ಮೈ ಮುಟ್ಟಿದರೆ ಜೋಕೆ! “

ಆಗ ಹದಿನಾರು ವರ್ಷದ ಹುಡುಗನೊಬ್ಬನ ಕೈಯಲ್ಲಿ ಕರ ಪತ್ರಗಳ ಕಟ್ಟೊಂದನ್ನು ಹಿಡಿದುಕೊಂಡು ಒಂದೊಂದೇ ಕರಪತ್ರವನ್ನು ಜನರಿಗೆ ಹಂಚುತ್ತಾ ಬಂದ. ಅದರ ಹೆಸರು “ಸೋನಾರ್‌ ಬಂಗ್ಲಾ”. ಆ ಕರ ಪತ್ರಗಳಲ್ಲಿ “ವಂದೇ ಮಾತರಂ” ಘೋಷಣೆಯಿತ್ತು. ಅದರ ಜೊತೆಗೆ ಈ ಪ್ರದರ್ಶನದ ಹಿಂದಿರುವ ಬ್ರಿಟಿಷರ ಹಲವು ಬಗೆಯ ಅನ್ಯಾಯ, ಅತ್ಯಾಚಾರಗಳನ್ನು ವಿವರಿಸಲಾಗಿತ್ತು.

ಪ್ರದರ್ಶನ ನೋಡಲು ಬಂದವರಲ್ಲಿ ಬ್ರಿಟಿಷ್ ರಾಜರ ಭಕ್ತರು ಹಲವರಿದ್ದರು. ಬ್ರೀಟಿಷರ ಅನ್ಯಾಯಗಳನ್ನು ಹೊರಗಳೆಯುವವರನ್ನು ಕಂಡರೆ ಆಗುತ್ತಿರಲಿಲ್ಲ. “ವಂದೇ ಮಾತರಂ” , ಸ್ವಾತಂತ್ಯ್ರ, ” ಸ್ವರಾಜ್ಯ” ಇತ್ಯಾದಿ ಶಬ್ದಗಳನ್ನು ಕೇಳಿದೊಡನೆಯೇ ಈ ಜನರಿಗೆ ಮೈಯನ್ನು ಚುಚ್ಚಿದಂತಾಗುತ್ತಿತ್ತು. ಬಾಲಕನನ್ನು  ಕರ ಪತ್ರ ಹಂಚದಂತೆ ತಡೆಯಲು ಅವರು ಪ್ರಯತ್ನಿಸಿದರು. ಕಣ್ಣೂ ಕೆಂಪನೆ ಮಾಡಿ ನೋಡಿದರು. ಬೈದರು, ಹೆದರಿಸಿದರು. ಆದರೆ ಹುಡುಗ ಅದನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದ ಇದ್ದ.ಕೆಲವರು ಹಿಡಿದುಕೊಳ್ಳಲು ಪ್ರಯತ್ನಿಸಿದಾಗ ಚಾಕಚಕ್ಯತೆಯಿಂದ ತಪ್ಪಿಸಿಕೊಂಡ.

ಕೊನೆಗೆ ಒಬ್ಬ ಪೋಲಿಸ ಬಾಲಕನ ಕೈ ಹಿಡಿದುಕೊಂಡ. ಕರಪತ್ರಗಳ ಕಟ್ಟನ್ನು ಎಳೆದ. ಆದರೆ ಈ ಹುಡುಗ ಅಷ್ಟು ಸುಲಭವಾಗಿ ಕೈಗೆ ಸಿಕ್ಕುವವನಲ್ಲ. ಕೈ ಕೋಸರಿಕೊಂಡ. ಆಮೇಲೆ ಅದೇ ಕೈಯನ್ನು ಬೀಸಿ ಪೋಲಿಸನ ಮೂಗಿಗೆ ಬಲವಾಗಿ ಅಪ್ಪಳಿಸಿದ. ಕರಪತ್ರಗಳನ್ನು ಪುನಃ ವಶಪಡಿಸಿಕೊಂಡು, ಮತ್ತು ಹೇಳಿದ: ”  ನನ್ನ ಮೈ ಮುಟ್ಟಿದರೆ ಜೋಕೆ. ವಾರೆಂಟ್ ಇಲ್ಲದೆ ಅದು ಹೇಗೆ ನನ್ನನ್ನು ಹಿಡಿಯುತ್ತೀರೋ ನೋಡುತ್ತೇನೆ”.

ಪೆಟ್ಟು ತಿಂದ ಪೋಲಿಸ ಮತ್ತೊಮ್ಮೆ ಮುಂದೆ ನುಗ್ಗಿದಾಗ ಬಾಲಕ ಅಲ್ಲಿರಲಿಲ್ಲ. ಗುಂಪಿನ ಮಧ್ಯೆ ನುಸುಳಿಕೊಂಡು ಮಾಯವಾಗಿದ್ದ.

ಪೋಲಿಸರಿಗೆ ಮತ್ತು ರಾಜಭಕ್ತರಿಗೆ ಆಶ್ಚರ್ಯ, ಅವಮಾನಗಳೆರಡೂ ಆಗುವಂತೆ ಜನರು ಒಕ್ಕೊರಲಿನಿಂದ ಕೂಗಿದರು- “ವಂದೇ ಮಾತರಂ!”

ಆನಂತರ ಹುಡುಗನ ಮೇಲೆ ನ್ಯಾಲಯದಲ್ಲಿ ಮೊಕದಮ್ಮೆ ಹೂಡಿದರೂ ಎಳೆ ವಯಸ್ಸಿನವನೆಂಬ ಕಾರಣದಿಂದ ಬಿಟ್ಟು ಬಿಟ್ಟರು.

ಯಾರು ಬಾಲಕ ?

ಮೇದಿನಿಪುರದ ಪ್ರದರ್ಶನದಲ್ಲಿ ಇಷ್ಟು ದೈರ್ಯದಿಂದ ಕರಪತ್ರ ಹಂಚಿ ಬ್ರಿಟಿಷರ ದುರುದ್ದೇಶವನ್ನು ಭಂಗಗೊಳಿಸಿದ ಆ ಧೀರ ಬಾಲಕನ ಹೆಸರು ಖುದೀರಾಮ ಬೋಸ್.

ಖುದೀರಾಮ್ ಬೋಸ ೧೮೮೯ನೇ ಇಸವಿ ಡಿಸೆಂಬರ ೩ನೇ ದಿನಾಂಕ ಮೇದಿನಿಪುರ ಜಿಲ್ಲೆಯ ಬಹುವೈನೀ ಗ್ರಾಮದಲ್ಲಿ ಜನ್ಮವೆತ್ತಿದ. ತಂದೆ ತ್ರೈಲೋಕ್ಯನಾಥ ಬಸು, ನಾಡಾಜೋಲ್ ರಾಜರ ಊರಿನ ತಹಶೀಲ್ದಾರರಾಗಿದ್ದರು. ತಾಯಿ ಲಕ್ಷ್ಮೀಪ್ರೀಯಾ ದೇವಿ ದೈವಭಕ್ತಿ, ಧರ್ಮನಷ್ಠೆ, ದಾನಗಳಿಗೆ ಹೆಸರಾದ ಮಹಿಳೆ. ಈ ದಂಪತಿಗಳಿಗೆ ಹಲವು ಮಕ್ಕಳಾದರೂ ಹುಟ್ಟಿದ್ದ ಸ್ವಲ್ಪವೇ ಸಮಯದಲ್ಲಿ ಸತ್ತು ಹೋದುವು. ಒಬ್ಬಳು ಮಗಳು ಮಾತ್ರ ಬದುಕಿ ಉಳಿದಳೂ. ಬದುಕಿ ಉಳಿದ ಗಂಡು ಸಂತಾನವೆಂದರೆ ಕೊನೆಗೆ ಹುಟ್ಟಿದ ಖುದೀರಾಮ ಮಾತ್ರ.

ಗಂಡು ಮಗನೊಬ್ಬ ಬೇಕೆಂದು ತುಂಬಾ ಹಂಬಲಿಸಿದ್ರೂ ಬಸು ದಂಪತಿಗಳು ಮಗನನ್ನು ಕಂಡು ಸಂತೋಷ ಅನುಭವಿಸಲು ಹೆಚ್ಚು ಕಾಲ ಉಳಿಯಲಿಲ್ಲ. ಖುದೀರಾಮ ಆರು ವರ್ಷದವನಿದ್ದಾಗಲೇ ಅವರು ಅಕಸ್ಮಾತ್ತಾಗಿ ಸ್ವರ್ಗವಾಸಿಯಾದರು. ಹುಡುಗನ ಪಾಲನೆ ಪೋಷಣೆಯ ಜವಾಬ್ದಾರಿ ಅಕ್ಕ ಅನುರೂಪಾದೇವಿ ಮತ್ತು ಭಾವ ಅಮೃತಲಾಲ್ ಅವರ ಹೆಗಲ ಮೇಲೆ ಬಿದ್ದಿತ್ತು.

ಹುಟ್ಟು ದೇಶಭಕ್ತ :

ಅನುರೂಪಾದೇವಿ ತಮ್ಮನಾಧ ಖುದೀರಾಮನನ್ನು ಸ್ವಂತ ಮಗನಷ್ಟು ಅಕ್ಕರೆಯಿಂದ ಬೆಳೆಸಿದಳು. ತಮ್ಮ ಚೆನ್ನಾಗಿ ಕಲಿತು ಮುಂದೆ ಬಂದು ದೊಡ್ಡ ಕೆಲಸ ಪಡೆದು ಹೆಸರು ಗಳಿಸಬೇಕೆಂದು ಅಕ್ಕನಿಗೆ ಆಸೆ. ಅದಕ್ಕಾಗಿ ಅವನನ್ನು ಹತ್ತಿರದ ಶಾಲೆಯೊಂದಕ್ಕೆ ಸೇರಿಸಿದಳು.

ಖುದೀರಾಮನಿಗೆ ವಿದ್ಯೇ ತಲೆಗೆ ಹತ್ತುತ್ತಿರಲಿಲ್ಲ ಎಂದೇನಿಲ್ಲ. ಸೂಕ್ಷ್ಮಬುದ್ಧಿ, ವಿಷಯದ ಬಗ್ಗೆ ತಿಳಿದುಕೊಳ್ಳುವ ಶಕ್ತಿ ಎಲ್ಲವೂ ಅವನಲ್ಲಿದ್ದವು. ಆದರೆ ತರಗತಿಯಲ್ಲಿ ಪಾಠ ನಡೆಯತುತಿರುವಾಗ ಅವನ ಗಮನ ಅಲ್ಲಿರುತ್ತಿರಲಿಲ್ಲ,ಅಧ್ಯಾಪಕರು ಗಂಟಲೊಡೆಯುವಂತೆ ಕೂಗಿಕೊಂಡರೂ ಪಾಟ ಅವನ ಕಿವಿಗೆ ಬೀಳುತ್ತಿರಲಿಲ್ಲ. ಖುದೀರಾಮನ ತಲೆಯೊಳಗೆ ಸುತ್ತುತ್ತಿದ್ದ ವಿಚಾರಗಳೇ ಬೇರೆ.

ಹುಟ್ಟಿನಿಂದಲೇ ದೇಶಭಕ್ತನಾಗಿದ್ದ ಖುದೀರಾಮ ಏಳೆಂಟು ವರ್ಷದವನಿದ್ದಾಗಲೇ ಯೋಚಿಸುತ್ತಿದ್ದ. “ನಮ್ಮದು ಭಾರತ ದೇಶ. ಇದು ಬಹಳ ಶ್ರೇಷ್ಠ ದೇಶ. ಸಾವಿರಾರು ವರ್ಷಗಳಿಂದ ಇಲ್ಲಿಜ್ಞಾನ  ಬೆಳೆದಿದೆ ಎಂದೆಲ್ಲ ದೊಡ್ಡವರು  ಹೇಳುತ್ತಾರೆ. ಹೀಗಿರುವಾಗ ಈಕೆಂಪು ಮೋರೆ ಇಂಗ್ಲೀಷರು ಇಲ್ಲಿಗೆ ಏಕೆ ಬಂದರು? ಇವರ ರಾಜ್ಯದಲ್ಲಿ ನಮ್ಮವರಿಗೆ ಇಷ್ಟ ಬಂದಂತೆ ಇರಲೂ ಸಾಧ್ಯವಿಲ್ಲ. ನಾನು ದೊಡ್ಡವನದ ಮೇಲೆ ಹೇಗಾದರೂ ಮಾಡಿ ಇವರನ್ನು ಓಡಿಸಬೇಕು.

ದಿನವಿಡೀ ಹುಡುಗ ಇದೇ ಯೋಚನೆಯಲ್ಲಿರುತ್ತಿದ್ದ. ಹೀಗಾಗಿ ಅವನಿಗೆ ಪಠ ಓದಲೆಂದು ಪುಸ್ತಕ ತೆರೆದಾಗಲೂ ಕಾಣುತ್ತಿದ್ದುದು ಕೆಂಪು ಮೋರೆಯ, ಹಸಿರು ಕಣ್ಣಿನ , ಬಿರುಸುನೋಟದ ಇಂಗ್ಲೀಷನ ಮುಖ. ಊಟ ಮಾಡಲು ಕುಳಿತಾಗಲೂ ಸಹ ಇದೇ ನೆನಪು ಬರುತ್ತಿತ್ತು. ನೆನಪಾದಾಗಲೆಲ್ಲಾ ಎದೆಯಲ್ಲಿ ಏನೋ ಒಂದು ರೀತಿಯ ನೋವು ಆಗುತ್ತಿತ್ತು.

ಏನು ಹುಡುಗನ ಸಮಸ್ಯೆ ಎಂದು ಅಕ್ಕನು ಭಾವನೂ ಯೋಚಿಸುತ್ತಿದ್ದರು. ಬಹುಶಃ ತಾಯಿಯ ನೆನಪು ಕಾಡುತ್ತಿರಬೇಕು ಎಂದು ಇನ್ನಷ್ಟು ಮಮತೆ ತೋರಿದರು. ಆದರೆ ಖುದಿರಾಮನ ಯೋಚನೆ ತಾಯಿ ಭಾರತಾಂಬೆಯನ್ನು ಕುರಿತ್ತದ್ದು. ಅವನ ಮನೋವ್ಯಾಕುಲ ದಿನೇ ದಿನೇ ಹೆಚ್ಚಾಗತೊಡಗಿತು.

ದಾಸ್ಯಕ್ಕೆ ಮಿಗಿಲಾದ ರೋಗವಿಲ್ಲ:

ಒಮ್ಮೆ ಖುದಿರಾಮ ಒಂದು ದೇವಾಲಯಕ್ಕೆ ಹೋಗಿದ್ದ. ಆ ದೇವಾಲಯದ ಎದುರು ಹಲವು ಜನರು ಬರಿ ನೆಲದ ಮೇಲೆ ಮಲಗಿದ್ದರು ಇವರೆಲ್ಲ ಏಕೆ ಹೀಗೆ ಮಲಗಿದ್ದಾರೆ ಎಂದು ಖುದೀರಾಮ ಅಕ್ಕಪಕ್ಕದವರಲ್ಲಿದ್ದವರನ್ನು ಕೇಳೀದ.

“ಇವರೆಲ್ಲರೂ ಒಂದಿಲ್ಲೊಂದು ರೀತಿಯ ಅಸಾಧ್ಯ ರೋಗದಿಂದನರಳುತ್ತಿದ್ದಾರೆ,. ಇಲ್ಲಿಗೆ ಹರಕೆ ಹೊತ್ತುಕೊಂಡು ಬಂದು ಇಲ್ಲಿ ಆಹಾರ, ನೀರು ಯಾವುದೂ ಇಲ್ಲದೇ ಮಲಗಿದ್ದಾರೆ. ಅವರಿಗೆ ದೇವರು ಕನಸಿನಲ್ಲಿ  ದರ್ಶನ ಕೊಟ್ಟು ಕಾಯಿಲೆ ವಾಸಿ ಮಾಡುವ ಭರವಸೆ ನೀಡಿದ ಮೇಲೆ ಎದ್ದು ಹೋಗುತ್ತಾರೆ” ಎಂದು ಒಬ್ಬಾತ ವಿವರಿಸಿದ.

ಕ್ಷಣಕಾಲ ಯೋಚಿಸಿದ ಖುದೀರಾಮ ಹೇಳಿದ: ” ನನಗೂ ಒಂದು ದಿನ ಇವರಂತೆ ಹಸಿವು, ಬಾಯಾರಿಕೆ ಎಲ್ಲ ಬಿಟ್ಟು ಭೂಮಿಯ ಮೇಲೆ ಮಲಗಬೇಕಾಗಿದೆ”.

“ನಿನಗೇನೂ ಬಂದಿದೆ ಅಂತಹ ರೋಗ?” ಅಲ್ಲಿದ್ದ ಒಬ್ಬಾತ ಪ್ರಶ್ನಿಸಿದ.

ಖುದೀರಾಮ ನಕ್ಕ. ಆಮೇಲೆ ಹೇಳಿದ: “ಏನು ದಾಸ್ಯಕ್ಕಿಂತಲೂ ದೊಡ್ಡ ರೋಗ ಬೇರೆ ಇರಲು ಸಾಧ್ಯವೆ? ನಾನಾದರೂ ಅದನ್ನೇ ದೂರ ಮಾಡಬೇಕಾಗಿದೆ”.

ದೇಶದ ಸ್ವಾತಂತ್ಯ್ರದ ಬಗೆಗೆ ಆ ಎಳೆಯ ವಯಸಿನಲ್ಲಿಯೇ ಖುದೀರಾಮ ಇಷ್ಟು ಯೋಚಿಸಿದ್ದ.  ಆದರೆ ಇದನ್ನು ಹೇಗೆ ಸಾಧಿಸಲಿ ಎಂಬ ಪ್ರಶ್ನೆ ಅವನನ್ನು ಕಾಡುತ್ತಿತು. ತನ್ನ ಕರ್ತವ್ಯವನ್ನು ಯಶಸ್ವಿಯಾಗಿ ಪಾಲಿಸುವುದು ಹೇಗೆ  ಎಂಬುವುದೇ ಖುದೀರಾಮನನ್ನು ಪೀಡಿಸುತ್ತಿದ್ ವ್ಯಾಕುಲ.

ಹೀಗಿರುವಾಗ ಒಂದು ದಿನ ಎಲ್ಲಿಂದಲೋ ಒಂದು ಮಂತ್ರ ಕೇಳಿಬಂತು- “ವಂದೇ ಮಾತಂ”, “ಭಾರತ ಮಾತಾ ಕೀ ಜೈ”, ಇದನ್ನು ಕೇಳುತ್ತಿದ್ದಂತೆಯೇ, ಖುದಿರಾಮನ ಮೈ ಪುಳುಕಗೊಂಡಿತ್ತು, ಕಣ್ಣು ಮಿಂಚಿತ್ತು., ಮನಸ್ಸು ಪ್ರಸನ್ನವಾಯಿತು.

 

ನನ್ನ ಮೈ ಮುಟ್ಟಿದರೆ ಜೋಕೆ:

ದಿವ್ಯ ಮಂತ್ರ :

 

ಖುದೀರಾಮನಲ್ಲಿ ಇಷ್ಟೊಂದು ಸ್ಫೂರ್ತಿ ತುಂಬಿದ ಮಂತ್ರ “ವಂದೇಮಾತರಂ” ನ ಜನ್ಮ ವ್ರತ್ತಾಂತ ಬಹುದೊಡ್ಡದು.  ಅದರಿಂದಾದ ಕಾರ್ಯ ಇನ್ನು ದೊಡ್ಡದು.

೧೮೩೮ರಲ್ಲಿ ಬಂಗಾಳದ ಕಾಂಟಾಲಪಾಡಾ ಗ್ರಾಮದಲ್ಲೊಬ್ಬ ಮಹಾವ್ಯಕ್ತಿ ಹುಟ್ಟಿದರು. ಅವರ ಹೆಸರು ಬಂಕಿಂ ಚಂದ್ರ ಚಟ್ಟೋಪಾದ್ಯಾಯ. ಬಂಕಿಮ ಚಂದ್ರರ ತಂದೆ ಒಂದು ಕಾಲದಲ್ಲಿ ಖುದಿರಾಮನ ಹುಟ್ಟೂರು ಮೇದಿನಿಪುರದಲ್ಲಿ ಸರಕಾರಿ ಅಧಿಕಾರಿಯಾಗಿದ್ದರು.

೧೮೫೭ರಲ್ಲಿ ನಮ್ಮ ದೇಶವನ್ನು ಇಂಗ್ಲೀಷರ ಕೈಯಿಂದ ಬಿಡಿಸಲು ಮೊದಲ ಬಾರಿಗೆ ಸಶಸ್ತ್ರ ಹೋರಾಟ ನಡೆಯಿತು. ಝಾನಿಸಿಯ ರಾಣೀ ಲಕ್ಷ್ಮೀಬಾಯಿ, ಬಿಹಾರದ ಕುವರಸಿಂಹ, ದಿಲ್ಲಿಯ ಬಾದಶಹ ಬಹದ್ದೂರ ಶಹ ಮೊದಲದವರು ಈ ಪ್ರಥಮ ಸ್ವಾತಂತ್ಯ್ರ ಸಮರದ ಅಗ್ರೇಸರರರು. ಈ ಸಮಯದಲ್ಲಿ ಬಂಕಿಮ ಚಂದ್ರರು ಹದಿನೆಳೂ ವರ್ಷದ ತರುಣ. ಬೇಕಾದಷ್ಟು ಮಂದಿ ಸಾಹಸಿಗಳೂ, ಬುದ್ಧಿಬಲ ಎಲ್ಲವೂ ಇದ್ದರೂ ಸ್ವಾತಂತ್ಯ್ರ ಹೋರಾಟದಲ್ಲಿ  ಸೂತುದನ್ನು ನೋಡಿ ಅವರ ನೆತ್ತರು ಕುದಿಯಿತು. ನಮ್ಮವರ ಬಳಿ ಶಿಸ್ತು, ಸಂಘಟನೆ, ನಿಯಮಪಾಲನೆ, ಶಸ್ತ್ರಾಸ್ತ್ರ ಸಂಗ್ರಹ ಇತ್ಯಾದಿ ಸಾಕಷ್ಟು ಇರಲಿಲ್ಲ. ಸ್ವಜನ ದ್ರೋಹಿಗಳೂ, ಸ್ವಾರ್ಥಿಗಳು, ಸಮಯ ಸಾಧಕರು, ನಮ್ಮಲ್ಲಿ ಧಾರಾಳವಾಗಿದ್ದರು.  ಇಂಥವರು ಇಂಗ್ಲೀಷರಿಗೆ ಸಹಾಯ ಮಾಡಿದ್ದರಿಂದ ಭಾರತೀಯರು ಸೊಲಲೇಬೇಕಾಯಿತು.

ಮನುಷ್ಯ ಸ್ವಾರ್ಥ ಬಿಡಬೇಕೆಂದರೆ ಅವನಕಣ್ಣು ಮುಂದೆ ದೊಡ್ಡದೊಂದು ಆದರ್ಶ ಇರಬೇಕಾಗುತ್ತದೆ.  ಅಂತಹ ಶ್ರೇಷ್ಠವಾದ ಆದರ್ಶ ಯಾವುದೆಂದು ಬಂಕಿಮರು ಯೋಚಿಸಿದರು. ಆಗ ಅವರ ಕಣ್ಣೆದುರಿಗೆ ಬಂದುದು ಭಾರತಮಾತೆಯ ಚಿತ್ರ. ಭಾರತಮಾತೆಯ ಸಮಸ್ತ ವೈಭವಗಳೊಂದಿಗೆ ರತ್ನ ಸಿಂಹಾಸನದಲ್ಲಿ ಮಂಡಿಸಿದಂತಹ ಚಿತ್ರ. ಆ ಭವ್ಯ ಮಾತೆಗೆ ಅವಳ ಮಕ್ಕಳಾದ ನಾವು ವಂದಿಸುತ್ತೇವೆ ಎಂದು ಕಲ್ಪಿಸಿದಾಗ ಬಂಕಿಮರ ಮನಸ್ಸಿಗೆ ಹೊಳೆದ ಮಂತ್ರವೇ” ವಂದೇ ಮಾತರಂ”.

ಈ ಶಬ್ದದಿಂದ ಆರಂಭಿಸಿದ ಬಂಕಿಮ ಚಂದ್ರರು ಒಂದು ದೊಡ್ಡ ಹಾಢನ್ನೇ  ಬರೆದರು. ಅದರ ಉದ್ದಗಲಕ್ಕೂ ಭಾರತಮಾತೆಯ ರೂಪ, ವೈಭವಗಳ ವರ್ಣನೆ  ಬರುತ್ತದೆ. ಸ್ವಾತಂತ್ಯ್ರ ಹೋರಾಟದ ಕಥೇಯನ್ನೆ ಚಿತ್ರಿಸುವ “ಆನಂದಮಠ:” ಎಂಬ ಕಾದಂಬರಿಯಿನುನ ಬಂಕಿಮ ಚಂದ್ರರು ಬರೆದರು. “ವಂದೇ ಮಾತರಂ” ಹಾಡನ್ನು ಈ ಕಾದಂಬರಿಯಲ್ಲಿ ಸೇರಿಸಿದರು.

ದೇಶಭಕ್ತಿಯನ್ನು ಬಡಿದೆಬ್ಬಿಸಿದ ಮಂತ್ರ

“ಆನಂದಮಠ” ಪರಕೀಯರ ಆಳ್ವಿಕೆಯ ವಿರುದ್ಧ ದೇಶಭಕ್ತ ಸನ್ಯಾಸಿಗಳು ಹೋರಾಟ ನಡೆಸಿದ್ದನ್ನು ವಿವರಿಸುವ ಕಾದಂಬರಿ. ಒಂದಿಲ್ಲೊಂದು ರೀತಿಯಿಂದ ಜನರಲ್ಲಿದ್ದ ದೇಶಭಕ್ತಿಯನ್ನು ಬಡಿದೆಬ್ಬಿಸಿ ಸ್ವಾತಂತ್ಯ್ರ ಹೋರಾಟಕ್ಕೆ  ಪ್ರೇರಣೆ ನೀಡುವುದು ಬಂಕಿಮ ಚಂದ್ರರ ಉದ್ದೇಶವಾಗಿತ್ತು. ಪುಸ್ತಕದಲ್ಲಿ ಬರುವ ಸ್ವಾತಂತ್ಯ್ರ ಯೋಧ ಸನ್ಯಾಸಿಗಳೂ ತಮ್ಮ  ಸ್ಫೂರ್ತಿಗೀತೆಯಾದ “ವಂದೇ ಮಾತರಂ” ಹಾಡುತ್ತಾರೆ. ಇದರಲ್ಲಿ ಭಾರತಮಾತೆಯನ್ನು ದುರ್ಗೆಯ ರೂಪದಲ್ಲಿ ವರ್ಣಿಸಲಾಗಿದೆ. ಎಲ್ಲ ಭಾರತೀಯರಿಗೆ ಈ ಹಾಡು ಉಪಯೋಗವಾಗಲಿ ಎಂಬ ದೃಷ್ಟಿಯಿಂದ ಬಂಕಿಮರು ಹಾಡಿನಲ್ಲಿ ಸಂಸ್ಕೃತ ಶಬ್ದಗಳನ್ನೇ ಹೆಚ್ಚಾಗಿ ತುಂಬಿದರು.

“ಆನಂದಮಠ: ಹೊರಗೆ ಬಂದ ಕೆಲವೇ ದಿನಗಳಲ್ಲಿ “ವಂದೇ ಮಾತರಂ” ದೇಶಭಕ್ತನ ಇಷ್ಟಮಂತ್ರವಾಯಿತು.  ಘೋಷಣೆ ಕೂಗುವುದು ಸಾಮಾನ್ಯವಾಯಿತು. ಬಂಕಿಮರ ಕಾದಂಬರಿಯಿಂದ ಸ್ಫೂರ್ತಿ ಪಡೆಯುವವರ ಸಂಖ್ಯೆ ಹೆಚ್ಚಾಯಿತು. ಅರವಿಂದ ಘೋಷ್, ಬ್ರಹ್ಮಾಬಾಂಧವ, ಉಪಾಧ್ಯಾಯ, ಬಿಪಿನ ಚಂದ್ರಪಾಲ್ ಮೊದಲಾದ ಮಹಾ ಅವ್ಯಕ್ತಿಗಳು ಸ್ವಾತಂತ್ಯ್ರ ಹೋರಾಟದ ಕಣಕ್ಕೆ ಪ್ರತ್ಯೇಕ್ಷವಾಗಿ ಇಳಿದರು. ಯುವಕರಿಗೆ ಪಿಸ್ತೂಲ್, ಲಾಠಿ, ಚೂರಿ ಇತ್ಯಾದಿ ಅಯುಧಗಳ ಪ್ರಯೋಗವನ್ನು ಕಲಿಸುವ ಅನೇಕ ಸಂಘಟನೆಗಳು ಹುಟ್ಟಿಕೊಂಡವು. ಅನುಶೀಲನ ಸಮಿತಿ,  ಜುಗಾಂತರ್‌, ಭಾತ್ರೋ ಸಮಿತಿ,ವಂದೇ ಮಾತರಂ, ಸಂಪ್ರದಾಯ, ಸರ್ಕ್ಯುಲರ್‌ ವಿರೋಧಿ ಸಮಿತಿ ಇತ್ಯಾದಿಗಳು, ಇವುಗಳಲ್ಲಿ ಪ್ರಮುಖವಾದವುಗಳು.  ಪ್ರಾಣ , ಸುಖ, ಸಂಸಾರ, ಹಣ ಎಲ್ಲವನ್ನೂ ಬಲಿಗೊಟ್ಟಾದರೂ ತಾಯಿಯನ್ನು ಬಿಡುಗಡೆಗೊಳಿಸಬೇಕೆಂಬ ಸಂಕಲ್ಪ ದೃಢವಾಯಿತು.  ಸ್ವಾಮಿ ವಿವೇಕಾನಂದರ ಶಿಷ್ಯೆ ಭಗನೀ ನಿವೇದಿತಾ ಅವರೂ ಈ ಪ್ರಯತ್ನಗಳಿಗೆ ಬೆಂಬಲ ಹಾಗೂ ಪ್ರೋತ್ಸಾಹ ನೀಡಿದರು.

ಬಂಗಾಳ ವಿಭಜನೆ :

“ವಂದೇ ಮಾತರಂ”ನಿಂದ ಸಹಸ್ರಾರು ಜನರು ಸ್ಪೂರ್ತಿ ಪಡೆದು ತಮ್ಮ ವಿರುದ್ಧ ಸಿಡಿದೆದ್ದುದನ್ನು ಕಂಡ ಬ್ರೀಟಿಷರಿಗೆ ಭಾರತದಲ್ಲಿ  ತಮ್ಮ ಸಾಮ್ರಾಜ್ಯ ಹೆಚ್ಚು ಕಾಲ ಬಾಳದೆಂಬ ಭಯವುಂಟಾಯಿತು. ಅದಕ್ಕಾಗಿ ಹಿಂದುಗಳು ಮತ್ತು ಮುಸ್ಲಿಮರನ್ನು ಒಡೆಯಲು ಪ್ರಯತ್ನಿಸಿದರು. ಬಂಗಾಳದ ಪಶ್ಚಿಮ ಭಾಗದಲ್ಲಿ ಹಿಂದೂಗಳು ಪೂರ್ವ ಭಾಗದಲ್ಲಿ ಮುಸ್ಲಿಮರೂ ಅಧಿಕ ಸಂಖ್ಯೆಯಲ್ಲಿದ್ದರು.  ಬ್ರೀಟಿಷರು ಇದನ್ನು ಗಮನಿಸಿ ಹೊಸದೊಂದು ತಂತ್ರ ಹೂಡಿದರು.  ೧೯೦೫ರಲ್ಲಿ ಲಾರ್ಡ ಕರ್ಜನ್  ಭಾರತದ ಗವ‌ರ್ನರ್‌ ಜನರಲ್ ಆಗಿದ್ದಾಗ ಬಂಗಾಳವನ್ನು ಪೂರ್ವ ಬಂಗಾಳವೆಂದು, ಪಶ್ಚಿಮ ಬಂಗಾಳವೆಂದು ಎರಡಾಗಿ ವಿಭಜಿಸಲು ಆಜ್ಞೆ ಹೊರಡಿಸಿದರು. ಆದರೆ ಭಾರತೀಯರಿಗೆ ಎಲ್ಲಾ ಬ್ರೀಟಿಷರ ಉದ್ದೇಶ ಏನೆಂಬುವುದು ತಿಳೀದಿತ್ತು.  ಭಾರತದ ಎಲ್ಲಾ ಭಾಗಗಳ ದೇಶಭಕ್ತ ಜನರು ಬಂಗಾಳ ವಿಭಜನೆಯನ್ನು ಒಕ್ಕೊರಲಿನಿಂದ ವಿರೋಧಿಸಿದರು.  “ವಂದೇ ಮಾತರಂ”, ಘೋಷಣೆಯೊಂದಿಗೆ ಅಲ್ಲಲ್ಲಿ ಸಭೆ, ಮೆರವಣಿಗೆ, ಸತ್ಯಾಗ್ರಹಗಳು ನಡೆಯತೊಡಗಿದವು.

ಖುದೀರಾಮನಿಗೆ ಕ್ರಾಂತಿಯ ದೀಕ್ಷೆ :

ತಾಯಿಯ ಹಾಲಿನೊಂದಿಗೇ ದೇಶಭಕ್ತಿಯನ್ನು ಪಡೆದುಕೊಂಡು ಬಂದಿದ್ದ ಖುದೀರಾಮ ಕ್ರಾಂತಿಯ ದೀಕ್ಷೆ ಪಡೆದುದು ಈ ಸಮಯದಲ್ಲಿಯೇ. ಆಗ ಎಲ್ಲೆಡೆ ಕೇಳಿಬರುತ್ತಿದ್ದ “ವಂದೇ ಮಾತರಂ” ಘೋಷಣೆ ಖುದೀರಾಮನ ಗಮನ ಸಳೆಯಿತು. ಬಂಗಾಳ ವಿಭಜನೆಯ ವಿರುದ್ಧ ನಡೆಯುತ್ತಿದ್ದ ಹಲವು ರೀತಿಯ ಚಟುವಟಿಕೆಗಳನ್ನು ಆಸಕ್ತಿಯಿಂದ ನೋಡಿದ. ನೋಡಿ ಸುಮ್ಮನಿರಲಿಲ್ಲ. ಅವುಗಳ ಹಿನ್ನೆಲೆ ಏನೆಂದು ತಿಳಿದುಕೊಳ್ಳಲು ಪ್ರಯತ್ನಿಸಿದ. “ಆನಂದಮಠ”ವನ್ನು ಓದಿದಾಗ ಖುದೀರಾಮನಿಗೆ ತನ್ನ ಜೀವನದ ಕರ್ಯ ಏನೆಂಬುವುದರ ಸ್ಪಷ್ಟ ಚಿತ್ರಣಗೋಚರವಾಯಿತು. ತಾಯಿಯ ಸೇವೇಗಾಗಿಯೇ ಜೀವನವನ್ನು ಮುಡಿಪಾಗಿಡಲು ನಿರ್ಧರಿಸಿದ. ದೇಭಕ್ತರನ್ನು ಸಂಘಟಿಸಿ ಪರಕೀಯ  ಆಳರಸರ ವಿರುದ್ಧ ಪರಾಕ್ರಮದಿಂದ ಹೋರಾಡಿ ದೇಶವನ್ನು ದಾಸ್ಯದಿಂದ ಬಿಡುಗಡೆಗೊಳಿಸಬೇಕೆಂಬ ಕ್ರಾಂತಿಕಾರಿಗಳ ಮಾರ್ಗ ಅವನಿಗೆ ಮೆಚ್ಚುಗೆಯಾಯಿತು.  ಈ ಕ್ರಾಂತಿಕಾರಿಗಳಾದರೋ ಮನೆಮಠ, ಬಂಧುಬಾಂಧವರು, ಹಣ ಎಲ್ಲವನ್ನೂ ತ್ಯಾಗ ಮಾಡಿ ಮಾತೃಭೂಮಿಗಾಗಿ ತಮ್ಮನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡಿದ್ದರು. ಉತ್ತಮ ಶೀಲ, ಪರಿಶುದ್ಧ ಜೀವನ ನಡೆಸುತ್ತಿದ್ದ ಅವರು ಎಂತಹ ಕಠಿಣ ಪ್ರಸಂಗಗಳಿಗೂ ಹೆದರುತ್ತಿರಲಿಲ್ಲ. ಖುದೀರಾಮನೂ ಇಂತಹ ಕ್ರಾಂತಿಕಾರಿಗಳಲ್ಲಿ ಒಬ್ಬನಾಗಬಯಸಿದ. ಅವರ ಸಹವಾಸ ಬೆಳೆಸಿದ. ಅವರೊಡ್ಡಿದ ಹಲವು ಪರೀಕ್ಷೆಗಳಲ್ಲಿ ಉತ್ತೀರ್ಣನಾದ.  ಕೊನೆಗೂ ದೇಶ ಕಾರ್ಯದ ದೀಕ್ಷೆ ಪಡೆದೇ ಬಿಟ್ಟ. ಖುದೀರಾಮನ ವಿದ್ಯಾಭ್ಯಾಸ ಅಲ್ಲಿಗೇ ನಿಂತಿತು.

ವಂದೇ ಮಾತರಂಪ್ರಚಾರ :

ಕ್ರಾಂತಿಯ ದೀಕ್ಷೆ ಪಡೆದ ಪ್ರಾರಂಭದಲ್ಲಿ ಖುದೀರಾಂ ಪಿಸ್ತೂಲು ಚೂರಿ, ಲಾಠೀ ಇತ್ಯಾದಿ ಶಸ್ತ್ರಗಳ ಉಪಯೋಗವನ್ನು ಕಲಿತು ಅದರಲ್ಲಿ ಪ್ರವೀಣನಾದ. ತೆಳ್ಳಗೆ ಇದ್ದರೂ ಚುರುಕಾಗಿದ್ದ. ಇದರೊಂದಿಗೆ ಅವನು ಆರಂಭಿಸಿದ ಕೆಲಸವೆಂದರೆ “ವಂದೇ ಮಾತರಂ” ಪ್ರಚಾರ.  ಸ್ವಾತಂತ್ಯ್ರ ಹೋರಾಟಗಾರರನ್ನು ನಿರ್ಮಿಸಬೇಕಾದರೆ ಅವರ ಹೃದಯ ಸಿಂಹಾಸನದಲ್ಲಿ ಭಾರತಮಾತೆಯ ಮಂಗಳಮೂರ್ತಿಯನ್ನು ಪ್ರತಿಷ್ಠಾಪಿಸಬೇಡವೇ?  ತಾಯಿಯ ಪರಿಚಯವೇ ಇಲ್ಲದವನು ಅವಳಿಗಾಗಿ ಹೋರಾಡುವುದಾದರೂ ಹೇಗೆ ? ಈ ಪರಿಚಯ ಮಾಡಿಸುವ ಕಾರ್ಯಕ್ಕೆ “ವಂದೇ ಮಾತರಂ” ನಷ್ಟು ಒಳ್ಳೆಯ ಸಾಧನೆ ಬೇರೆ ಯಾವುದಿದೆ?

ಖುದೀರಾಮ ತನ್ನ ಸ್ನೇಹಿತರಿಗೆ “ವಂದೇ ಮಾತರಂ” ಹಾಡು ಕಲಿಸತೊಡಗಿದ. ಅದರ ಅರ್ಥವನ್ನು ಮನದಟ್ಟಾಗುವಂತೆ ವಿವರಿಸಿದ. “ಆನಂದಮಠ” ವನ್ನು ಓದುವಂತೆ ಗೆಳೆಯರನ್ನು ಪ್ರೋತ್ಸಾಹಿಸಿದ.

ಖುದೀರಾಮ ಸೇರಿದ್ದ ಕ್ರಾಂತಿಕಾರಿ ತಂಡದ ನಾಯಕರು “ವಂದೇ ಮಾತರಂ” ಬಗೆಗೆ ಅವನಲ್ಲಿದ್ದ ವಿಶೇಷ ಶ್ರದ್ಧೆ, ಆಸಕ್ತಿಗಳನ್ನು ಗುರುತಿಸಿದರು. ಸಣ್ಣ ಸಣ್ಣ ಕರಪತ್ರಗಳಲ್ಲಿ “ವಂದೇ ಮಾತರಂ” ಹಾಡನ್ನು ಮುದ್ರಿಸಿ ಜನರಲ್ಲಿ ಪ್ರಚಾರ ಮಾಡುವ ಒಂದು ಯೋಜನೆಯನ್ನು  ಅವರು ಕೈಗೊಂಡರು. ಈ ಕಾರ್ಯದಲ್ಲಿ ಖುದೀರಾಮ ಪ್ರಮುಖ ಪಾತ್ರ ವಹಿಸಿದ. ಮೇದಿನಿಪುರದ ಪ್ರದರ್ಶನದಲ್ಲಿ ನಡೆದ ಘಟನೆಯ ಹಿನ್ನಲೆ ಇದೇ

 

ಭಗವದ್ಗೀತೆ ಹಿಡಿದು ಶಾಂತಚಿತ್ತದಿಂದ ನೇಣುಗಂಬದತ್ತ ನಡೆದುಕೊಂಡು ಬಂದ.

ದೇಶಭಕ್ತರಿಗೆ ಹಿಂಸೆ :

“ವಂದೇ ಮಾತರಂ” ಪ್ರಚಾರ ಹೆಚ್ಚಿದಂತೆಲ್ಲಾ ಇಂಗ್ಲೀಷರ ದೌರ್ಜನವೂ ಹೆಚ್ಚಿತು. ಸಭೆ, ಮೆರವಣೀಗೆಗಳಲ್ಲಿ “ವಂದೇ ಮಾತರಂ” ಘೊಷಣೆ ಕೂಗುವುದು ರಾಜದ್ರೋಹವೆಂದು ಸಾರಿದರು. ನಮ್ಮ ತಾಯಿಗೆ ನಾವು ವಂದಿಸುವುದೂ ಇಂಗ್ಲಿಷರ ದೃಷ್ಟಿಯಲ್ಲಿ ರಾಜದ್ರೋಹವಾಗಿತ್ತು!

ಇಂಗ್ಲೀಷ್ ಸರಕಾರ ದೇಶಭಕ್ತರಿಗೆ ಹಲವು ರೀತಿಯ ಕಿರುಕುಳ ಕೊಡಲು ಆರಂಭಿಸಿತು. ಆದರೆ ಯಾವುದೇ ಕಿರುಕುಳವನ್ನು ಲಕ್ಷಿಸದೇ ಮುನ್ನುಗ್ಗುವ ಕೆಚ್ಚು ದೇಶಭಕ್ತರಲ್ಲಿತ್ತು. ಸಭೆ, ಮೆರವಣಿಗೆಗಳು ನಡೆದಾಗಲೆಲ್ಲಾ “ವಂದೇ ಮಾತರಂ” ಎಂದು ಇಂಗ್ಲೀಷರ ಎದೆ ನಡುಗುವಂತೆ ಕೂಗುತ್ತಿದ್ದರು. ಇಬ್ಬರು ದೇಶಭಕ್ತರು ಪರಸ್ಪರ ಎದುರಾದರೆ “ನಮಸ್ಕಾರ” ಎನ್ನುವ ಬದಲು ಕೈ ಜೋಡಿಸಿ “ವಂದೇಮಾತರಂ ಎಂದುತಲೆಬಾಗುತ್ತಿದ್ದರು.  ಈ ಘೋಷಣೆ ಕೇಳಿದಾಗಲೆಲ್ಲಾ ಪೋಲಿಸರು ದೇಶಭಕ್ತರನ್ನು ಮನಸ್ಸು ಬಂದರೆ ಹೊಡೆಯುತ್ತಿದ್ದರು. ನಾನಾ ರೀತಿಯ ಹಿಂಸೆ ಕೊಡುತ್ತಿದ್ದರು. ಆದರೂ ಭಾರತೀಯರು “ವಂದೇ ಮಾತರಂ”  ಘೋಷಣೆ ಮಾಡದಂತೆ ತಡೆಯಲು ಅವರಿಂದ ಆಗುತ್ತಿರಲಿಲ್ಲ.  ಬ್ರಿಟಿಷರ ದಬ್ಬಾಳಿಕೆ ಹೆಚ್ಚಿದಂತೆಲ್ಲಾ ಭಾರತೀಯರ ಸ್ವಾಭಿಮಾನವು ಹೆಚ್ಚುತ್ತಿತು.  ಜನರು ವಿದೆಶಿ ವಸ್ತುಗಳನ್ನು ಬಹಿಷ್ಕರಿಸತೊಡಗಿದರು. ವಿದೇಶಿ ಬಟ್ಟೆಗಳನ್ನು ಸುಟ್ಟು ಹಾಕಿದರು. ವಿದೇಶಿ ಶಾಲಾ, ಕಾಲೇಜುಗಳಿಗೆ ಹೋಗುವುದನ್ನು ಬಿಟ್ಟರು. “ಸ್ವದೇಶಿ”ಯು ದೇಶಭಕ್ತರೆಲ್ಲರ ತಾರಕಮಂತ್ರವಾಯಿತು.

ಪರಿಸ್ಥಿತಿ ಹೀಗೆ ಮುಂದುವರೆದರೆ ಬೇಗನೇ ಭಾರತ ಬಿಟ್ಟು ಹೋರಡಬೇಕಾದೀತು ಎಂದು ಬ್ರಿಟಿಷರಿಗೆ ಅನಿಸತೊಡಗಿತು. ಆದರೂ ಇಲ್ಲಿನವರನ್ನು ಬಲಾತ್ಕಾರವಾಗಿ ಹತೋಟಿಯಲ್ಲಿಟ್ಟುಕೊಳ್ಳಬಹುದೆಂಬ ಭ್ರಮೆ ಅವರನ್ನು ಬಿಡಲಿಲ್ಲ.  ಅದಕ್ಕಾಗಿ ದೇಶಭಕ್ತರಿಗೆ ಹೆಚ್ಚು ಉಗ್ರವಾದ ಶಿಕ್ಷೆಗಳನ್ನು ಕೊಡಲು ನಿರ್ಧರಿಸಿದರು. ಕ್ರಾಂತಿಕಾರಿಗಳ ಚಟುವಟಿಕೆಗಳೂ ಜೋರಾಗಿದ್ದಲೆಲ್ಲಾ ಕ್ರೂರ ಸ್ವಭಾವದ ಅಧಿಕಾರಿಗಳನ್ನು ನೇಮಿಸತೊಡಗಿದರು.  ಈ  ಅಧಿಕಾರಿಗಳು ತಮ್ಮ ಕೈಗೆ ಸಿಕ್ಕಿದ ದೇಶಭಕ್ತರಿಗೆ ಚಿತ್ರಹಿಂಸೆ ಕೊಡುತ್ತಿದ್ದರು. ಹೆಂಗಸರು, ಮಕ್ಕಳು ಮುದುಕರು ಎಲ್ಲರನ್ನೂ ಹಿಂಸಿಸುತ್ತಿದ್ದರು.  ಸಣ್ಣ ಸಣ್ಣ ತಪ್ಪುಗಳಿಗೆ ದೊಡ್ಡ ಶಿಕ್ಷೆ ವಿಧಿಸುತ್ತಿದ್ರು. ಇಂತಹ ಕ್ರೂರ ಅಧಿಕಾರಿಗಳಲ್ಲಿ ಕಲ್ಕತ್ತದ ಚೀರ್ಫ ಪ್ರೆಸಿಡೆನ್ಸಿ ಮ್ಯಾಜಿಸ್ಟ್ರೇಟ್ ಕಿಂಗ್ಸಫರ್ಡ ಎಂಬಾತನೂ ಒಬ್ಬ.

ಆಳರಸರನ್ನು ಹೆದರಿಸಿದ ಪತ್ರಿಕೆ :

“ವಂದೇ ಮಾತರಂ” ಮಾತರಂ ಎಂಬ ಪತ್ರಿಕೆ ಆಗ ಬಂಗಾಳದಲ್ಲಿ ತುಂಬಾ  ಜನಪ್ರೀಯವಾಗಿತ್ತು. ಮಹಾನ್ ದೇಶಭಕ್ತ ಬಿಪಿನಚಂದ್ರಪಾಲ್ ಅವರು ಈ ಪತ್ರಿಕೆಯನ್ನು ಪ್ರಾರಂಭಿಸಿದರು. ಮಹರ್ಷಿ ಅರವಿಂದ ಘೋಷರು ಇದರ ಸಂಪಾದಕರಾಗಿದ್ದರು. ಉಗ್ರ ದೇಶಭಕ್ತಿಯಿಂದ ಕೂಡಿದ ಲೇಖನಗಳನ್ನು ಪ್ರಕಟಿಸುವುದರೊಂದಿಗೆ ಬ್ರಿಟಿಷರ ಅನ್ಯಾಯಗಳನ್ನು ಈ ಪತ್ರಿಕೆಯೂ ನಿರ್ಭಯವಾಗಿ, ನಿರ್ದಾಕ್ಷಿಣ್ಯವಾಗಿ ಖಂಡಿಸುತ್ತಿ‌ತ್ತು. ಆದ್ದರಿಂದ ದೇಶಭಕ್ತರಿಗೆ ಅಪ್ತಮಿತ್ರನಂತೆ ಗುರುವಿನಂತೆ ಇದ್ದ ಈ ಪತ್ರಿಕೆಯನ್ನು ಕನಸಿನಲ್ಲಿಯೂ ಕಂಡರೂ ಇಂಗ್ಲೀಷರಿಗೆ ಜ್ವರ ಬರುತ್ತಿತ್ತು !

೧೯೦೭ರಲ್ಲಿ ಬ್ರಿಟಿಷ್ ಸರಕಾರವು ” “ವಂದೇ ಮಾತರಂ” ಪತ್ರಿಕೆಯ ಮೇಲೆ ರಾಜದ್ರೋಹದ ಅಪಾದನೆ ಹೊರಿಸಿ ನ್ಯಾಯಲಾಯಕ್ಕೆಳೆಯಿತು. ಕಲ್ಕತ್ತದ ಲಾಲ ಬಜಾರಿನ ಪೋಲಿಸ್  ನ್ಯಾಯಾಲಯದಲ್ಲಿ ವಿಚಾರಣ ನಡೆಯುತ್ತಿತ್ತು.   ಪ್ರತಿದಿನವೂ ನ್ಯಾಯಾಲಯದ  ಹೊರಗೆ ಸಹಸ್ರಾರು ತರುಣರು ಕಿಕ್ಕಿರಿದು ಸೇರುತ್ತಿದ್ದರು. ಪ್ರತಿದಿನವೂ ಒಂದೇ ಸ್ವರದಲ್ಲಿ “ವಂದೇ ಮಾತರಂ” ಎಂದು ಗರ್ಜಿಸಿ ಪತ್ರಿಕೆಯ ಮೇಲೆ ತಮಗಿದ್ದ ಅಭಿಮಾನವನ್ನು ಪ್ರಕಟಿಸುತ್ತಿದ್ದರು. ಪತ್ರಿಕೆಯ ನಿಲುಮೆಗೆ ಇಷ್ಟೇಲ್ಲಾ ಜನರ ಬೆಂಬಲವಿದೆಯೆಂದು ವ್ಯಕ್ತಪಡಿಸುತ್ತಿದ್ದರು.  ಆಗ ಉಕ್ಕಿನ ಶಿರಸ್ತ್ರಾಣ ಧರಿಸಿದ ಪೋಲಿಸರು ಅವರ ಮೇಲೆ ಅಮಾನುಷವಾಗಿ ಲಾಠಿ ಪ್ರಹಾರ ಮಾಡುತ್ತಿದ್ದರು.

ಕೆರಳಿದ ಸಿಂಹದ ಮರಿ :

೧೯೦೭ರ ಅಗಸ್ಟ್ ೨೬ ರಂದು ಇದೇ ರೀತಿ ಮೊಕದ್ದಮ್ಮೆ ನಡೆಯುತ್ತಿದ್ದಾಗ ಎಂದಿನಂತೆ ಸಾವಿರ ಮಂದಿ ತರುಣರು ನ್ಯಾಲಯದ ಮುಂದೆ ಸೇರಿ ಅವರಿನ್ನೂ “ವಂದೇ ಮಾತರಂ” ಘೊಷಣೆ ಹಾಕಿರಲಿಲ್ಲ, ಮೌನವಾಗಿ , ಒಂದಿಷ್ಟೂ ಗಲಾಟೆಯಿಲ್ಲದೆ ನಿಂತಿದ್ದರು.  ಪ್ರಾಯಶಃ ಅವರು ಸುಮ್ಮನಿದ್ದರೆಂದೇ ಇರಬೇಕು, ಕೆಂಪು ಮೂತಿಯ ಧಾಂಡಿಗ ಪೋಲಿಸನೊಬ್ಬ ಇದ್ದಕ್ಕಿದ್ದಂತೆಯೇ ತರುಣರನ್ನು ಲಾಠಿಯಿಂದ ಬಡಿಯತೊಡಗಿದ.  ಯಾರೂ ಪ್ರತಿಭಟನೆ ತೋರಲಿಲ್ಲ.  ಆದರೆ ಆ ದಾಂಢಿಗನ ಕೈಯ ಲಾಠಿ ಇನ್ನಷ್ಟು ಜೋರಾಗಿ ತಿರುಗತೊಡಗಿತು.

ದೂರದಲ್ಲಿ ನಿಂತಿದ್ದ ಸುಶೀಲಕುಮಾರ ಸೇನ್ ಎಂಬ ಹದಿನೈದು ವರ್ಷದ ಹುಡುಗನೊಬ್ಬನಿಗೆ ಇದನ್ನು ನೋಡಿ ಸಹಿಸಲಾಗಲಿಲ್ಲ. ಮುಂದೆ ಬಂದು ಕೆಂಪು ಮೋರೆಯವರನ್ನುದ್ದೇಶಿಸಿ, ” ಏಕೆ ನಿಷ್ಕಾರಣವಾಗಿ ಹೊಡೆಯುತ್ತೀರಿ?” ಎಂದು ತಡೆಯಲು ಪ್ರಯತ್ನಿಸಿದ.

“ಯಾರೋ ನೀನು ,ತೊಲಗಾಚೆ” ಎಂದು ಒದರಿದ ಇಂಗ್ಲೀಷನನವನು ಸುಶೀಲನಿಗೆ, ಒಂದೇಟು ಬಿಗಿದ.  ಈಗ ಸುಶೀಲ ಕೆರಳಿದ. “ನಾನು ಯಾರೆಂಬುವುದನ್ನು ತೋರಿಸುತ್ತೇನೆ” ಎಂದವನೇ ಹಾರಿ ತನಗೆ ನಾಲ್ಕರಷ್ಟು ಗಾತ್ರದ ಧಾಂಡಿಗನ ಮೂಗಿಗೆ ಬಲವಾಗಿ ಗುದ್ದಿದ. ಕೈಯಿಂದ ಲಾಠಿ ಎಳೆದುಕೊಂಡು ಅವನಿಗೇ ಭಾರಿಸತೊಡಗಿದ. “ಭಾರತೀಯ ಹುಡುಗನ ಪೆಟ್ಟಿನ ರುಚಿ ನೋಡು” ಎಂದು ಮೈಯೆಲ್ಲಾ ರಕ್ತ ಬರುವಷ್ಟು ಹೊಡೆದ. ಆ ದಾಂಡಿಗನಿಗೆ ನಿರಾಯುಧರಿಗೆ ಹೊಡೆದು ಅನುಭವವಿತ್ತೇ ವಿನಃ ಸ್ವತಃ ಪೆಟ್ಟು ತಿಂದು ಗೊತ್ತಿರಲಿಲ್ಲ. ಅರಚತೊಡಗಿದ.  ಕೂಗಿಕೊಂಡ. ಆಗ  ಉಳಿದ ಪೋಲಿಸರು ಬಂದು ಸುಶೀಲನನ್ನು ಹಿಡಿದುಕೊಂಡರು. ಬಂಧಿಸಿ ನ್ಯಾಯಾಲಯಕ್ಕೆ ಒಯ್ದರು.

ಕಿಂಗ್ಸ್ ಫರ್ಡನ ಕ್ರೌರ್ಯ :

ಸುಶೀಲನ ವಿಚಾರಣೆ ನಡೆಸಿದವನು ಕ್ರೂರ ನ್ಯಾಯಾಧೀಶ ಎಂದು ಹೆಸರಾಗಿದ್ದ ಕಿಂರ್ಗ್ಸ ಫರ್ಡ. “ಶಾಂತಿ ಕಾಪಾಡುವ ಕಾರ್ಯದಲ್ಲಿ ನಿರತನಾಗಿದ್ದ ಬ್ರೀಟಿಷ್ ಪೋಲಿಸನ ಮೇಲೆ ಕೈ ಮಾಡಿ ನೀನು ಕಾನೂನು ಭಂಘ ಮಾಢಿದ್ದೀ” ಎಂದು ಸುಶೀಲನನ್ನು ಬೈದ.

“ಹಾಗಾದರೆ ಶಾಂತರಾಗಿ ನಿಂತಿದ್ದ ನಮ್ಮ ಜನರ ಮೇಲೆ ನಿಮ್ಮ ಶಾಂತಿಪ್ರೀಯ ಪೋಲಿಸ ಕೈ ಮಾಡಿದ್ದು ಯಾಕಂತೆ? “ಸುಶೀಲಕುಮಾರ ಹೆದರದೇ ಕಿಂಗ್ಸ ಫರ್ಡಗೇ ಪ್ರಶ್ನೆ ಹಾಕಿದ.

“ಅಧಿಕಪರಸಂಗಿ! ಇವನಿಗೆ ಹದಿನೈದು ಛಡಿ ಏಟುಗಳ ಶಿಕ್ಷೆ ವಿಧಿಸಿದ್ದೇನೆ. ಬೇಗ ಇವನನ್ನು ಎಳೆದೊಯ್ಯಿರಿ ಎಂದು ಕಿಂಗ್ಸ ಫರ್ಡ ಪೋಲಿಸರಿಗೆ ಅಜ್ಞಾಪಿಸಿದ.

ಪೋಲಿಸರು ಸುಶೀಲನನ್ನು ಹಿಡಿದೊಯ್ದು ಬಟ್ಟೆ ಕಳಚಿ ನಿಲ್ಲಿಸಿದರು. ನಿರ್ಧಯವಾಗಿ ಹದಿನೈದು ಛಡಿ ಏಟು ಬಾರಿಸಿದರು. ಸುಶೀಲ ಅಳಲಿಲ್ಲ, ಅವನ ಮುಖದ ಮುಗುಳ್ನಗೆ ಮಾಸಲಿಲ್ಲ; ಒಂದೊಂದು ಛಡಿ ಏಟು ಬಿದ್ದಾಗಲೂ “ವಂದೇ ಮಾತರಂ” ಎಂದು ಗಟ್ಟಿಯಾಗಿ ಕೂಗಿದ.

ಬಿಡುಗಡೆಯಾಗಿ ಬಂದ ಸುಶೀಲನನ್ನು ಜನರು ಹೆಮ್ಮೆಯಿಂದ ಹೊತ್ತು ಮೆರವಣೀಗೆ ಮಾಡಿದರು. ಭಾರೀ ಸಭೆ ನಡೆಸಿ ಸನ್ಮಾನ ಮಾಡಿದರು.ಹಿರಿಯ ನಾಯಕ ಸುರೇಂದ್ರನಾಥ ಬ್ಯಾನರ್ಜಿಯವರು ಸುಶೀಲಕುಮಾರನ ಧೈರ್ಯವನ್ನು ಮೆಚ್ಚಿ ಚಿನ್ನದ ಪದಕ ಉಡುಗೋರೆ ನೀಡಿ ಹರಸಿದರು. ಅವನು ಓದುತ್ತಿದ್ದ ನ್ಯಾಷನಲ್ ಕಾಲೇಜು ಕೂಡಾ ಅವನ ಗೌರವಾರ್ಥ ಒಂದು ದಿನ ಮುಚ್ಚಿತ್ತು.

ಮುಯ್ಯಿಗೆ ಮುಯ್ಯಿಯ ಪ್ರತಿಜ್ಞೆ :

ಪ್ರತ್ಯಕ್ಷ ರಾಕ್ಷಸನಂತಿದ್ದ ಕಿಂಗ್ಸ ಫರ್ಡಗೆ ಬುದ್ಧಿ ಕಲಿಸಬೇಕೆಂದು ಕ್ರಾಂತಿಕಾರಿಗಳು ಬಹಳ ಹಿಂದೆಯೇ ಯೋಚಿಸಿದ್ದರು. ಈಗ ಸುಶೀಲಕುಮಾರ ಸೇನನಿಗೆ ಅವನು ವಿಧಿಸಿದ ಶಿಕ್ಷೆಯಿಂದ ಅವರು  ಕನಲಿ ಕೆಂಡವಾದರು. ಕಿಂಗ್ಸ ಫರ್ಡ ಇರುವವರೆಗೆ ದೇಶಭಕ್ತರಿಗೆ ಉಳಿಗಾಲ ಇಲ್ಲ. ಆದ್ದರಿಂದ ಅವನನ್ನು ಮುಗಿಸಲೇಬೇಕು ಎಂಬ ದೃಢ ನಿರ್ಧಾರ ತಳೆದರು. ಸಾಧ್ಯವಿಲ್ಲದಷ್ಟು ಬೇಗನೇ ಕಿಂಗ್ಸ ಫರ್ಡನನ್ನು ಪರಲೋಕಕ್ಕೆ ಕಳುಹಿಸುವ ಪ್ರತಿಜ್ಞೆ ಮಾಡಿದರು.

ಬ್ರಿಟಿಷ್ ಸರಕಾರಕ್ಕೆ ಕ್ರಾಂತಿಕಾರಿಗಳ ಪ್ರತಿಜ್ಞೆಯ ಸುಳಿವು ಸಿಕ್ಕಿತ್ತು. ಕಿಂಗ್ಸ ಫರ್ಡನ ಪ್ರಾಣ ಅಪಾಯದಲ್ಲಿದೆ ಎಂಬುವುದು ಮನದಟ್ಟಾಯಿತು.  ಅವನನ್ನು ಇಂಗ್ಲೇಂಡಿಗೆ ಕಳೀಸುವುದೇ ಒಳ್ಳೆಯದು ಎಂದು ಗುಪ್ತಚಾರ ಇಲಾಖೆಯವರು ಸರಕಾರಕ್ಕೆ ಸಲಹೆಯಿತ್ತರು.  ಇದನ್ನು ಸರಕಾರ ಮಾನ್ಯ ಮಾಡಲಿಲ್ಲ. ಕೊನೆಗೆ ಕಿಂಗ್ಸ ಫರ್ಡಗೆ ಜಿಲ್ಲಾ ಸೆಷನ್ಸ್ ನ್ಯಾಯಾಧೀಶನಾಗಿ ಬಡ್ತಿ ಕೊಟ್ಟು ಮುಜಫರ್‌ ಪುರಕ್ಕೆ ವರ್ಗಾಯಿಸಿದರು.

ಕಿಂಗ್ಸ್ ಫರ್ಡ ವಧೆಗೆ ತಯ್ಯಾರಿ :

ಮುಜಫರ್ಪುರಕ್ಕೆ ವರ್ಗವಾದ ಮೇಲೆಯೂ ಕಿಂಗ್ಸ್ ಫರ್ಡ ತನ್ನ ಕ್ರೂರ ಕೃತ್ಯಗಳನ್ನು ಬಿಡಲಿಲ್ಲ. ೧೯೦೮ರಲ್ಲಿ ಅವನನ್ನು ಕೊಲ್ಲಲು ಕ್ರಾಂತಿಕಾರಿಗಳು ಯೋಜನೆ ತಯ್ಯಾರಿಸಿದರು.

ಏಪ್ರೀಲ್ ತಿಂಗಳ ಮೊದಲ ವಾರದಲ್ಲಿ ಕಲ್ಕತ್ತದ ಒಂದು ಮನೆಯಲ್ಲಿ “ಜುಗಾಂತರ್‌” ಗುಂಪಿಗೆ ಸೇರಿದ ಕ್ರಾಂತಿಕಾರಿಗಳು ಸಭೆ ಸೇರಿದರು.  ಸುಶೀಲನಿಗೆ ಬಿದ್ದ ಛಡಿ ಏಟಿನ ವಿರುದ್ಧ ಸೇಡು ತೀರಿಸಿಕೊಳ್ಳುವ ನಿರ್ಣಯದ ಈ ಸಭೆಯಲ್ಲಿ ಅರವಿಂದ ಘೋಷ್ , ಸುಬೋದ ಮಲ್ಲಿಕ್, ಚಾರುದತ್ತ, ಮುಂತಾದವರು ಇದ್ದರು.  ಕಿಂಗ್ಸ್ ಫರ್ಡನನ್ನು ಗುಂಡಕ್ಕಿ ಕೊಲ್ಲಬೇಕು ಎಂದು ನಿರ್ಧರಿಸಲಾಯಿತು. ಆದರೆ ಈ  ಕೆಲಸವನ್ನು ಯಾರಿಗೆ ಒಪ್ಪಿಸಲಿ ಎಂಬ ಪ್ರಶ್ನೆ ಅವರ ನಾಯಕನನ್ನು ಭಾಧಿಸಿತು. ಇದನ್ನು  ವಹಿಸಿಕೊಳ್ಳುವ ಉತ್ಸಾಹ ಹಲವರಿಗೆ ಇತ್ತು. ಆದರೆ ನಾಯಕನಿಗೆ ಯಾರನ್ನು ಆರಿಸಲು ಒಪ್ಪಿಗೆಯಾಗಲಿಲ್ಲ,.

ಪಕ್ಕನೆ ನಾಯಕನ ದೃಷ್ಟಿ ಮೂಲೆಯಲ್ಲಿ ಕುಳಿತ್ತಿದ್ದ ಖುದೀರಾಮನ ಮೇಲೆ ಬಿದ್ದಿತು. “ನೀನು ಈ ಕೆಲಸವನ್ನು ಮಾಡಬಲ್ಲೆಯ? ಎಂದು  ಕೇಳುವಂತೆ ಇತ್ತು ಆ ದೃಷ್ಟಿ. ಖುದೀರಾಮನಿಗೂ ಇದು ಅರ್ಥವಾಯಿತು. ಅವನ ಕಣ್ಣುಗಳು ಮಿಂಚಿದವು.

“ನಿನಗೆ ಸಾಧ್ಯವೇ  ಈ ಕಠೋರ ಕೆಲಸ?” ನಾಯಕ ಈಗ ಬಾಯಿತೆರದು ಕೇಳಿದ,.

“ನಿಮ್ಮ ಆಶೀರ್ವಾದ ಇದ್ದರೆ ಯಾವುದು ತಾನೇ ಅಸಾಧ್ಯ?” ಖುದೀರಾಮ ಪ್ರಶ್ನೆಯನ್ನು ಗುರುವಿಗೇ ತಿರುಗಿಸಿದ.

“ಇದು ಜೈಲಿಗೆ ಹೋಗುವಷ್ಟು ಸುಲಭವಲ್ಲ. ಸಿಕ್ಕಿಬಿದ್ದರೆ ಪರಿಣಾಮ ಏನಾದೀತು ಎಂದು ಗೊತ್ತೇ?” ನಾಯಕ ಹೆದರಿಸುವ ಧನಿಯಲ್ಲಿ ಕೇಳೀದ.

“ಗೊತ್ತಿದೆ, ನೇಣು ಹಾಕೊಯಾರು ಅಷ್ಟೇ. ಗುರುದೇವ, ನಾನು ಅದನ್ನು ವರದಾನವೆಂದೇ ತಿಳಿಯುವೆ. ನನ್ನ ತಂದೆ, ತಾಯಿ ಎಲ್ಲವೂ ಭಾರತಮಾತೆಯೇ. ಆಕೆಗಾಗಿ ಸಾಯುವುದು ಪುಣ್ಯ ಎಂದು ಎಣಿಸಿದ್ದೇನೆ. ನನಗೂ ಇರುವ ಆಸೆಯೂ  ಇದೊಂದೇ. ದೇಶ ಸ್ವಾತಂತ್ಯ್ರ ಪಡೆಯುವರೆಗೆ ಮತ್ತೆ ಮತ್ತೆ ಹುಟ್ಟಿ ಬಲಿದಾನ ಮಾಡುವೆ” ಎಂದು ಖುದೀರಾಮ ಶಾಂತವಾಗಿ ಆದರೆ ನಿರ್ಧಾರದ ಧನಿಯಲ್ಲಿ ಹೇಳೀದ.

“ಹಾಗೋ! ಸಂತೋಷ. ಯಾತ್ರೆಯ ತಯ್ಯಾರಿ ಮಾಡಿ. ನಿನ್ನೊಂದಿಗೆ ಪ್ರಪುಲ್ಲ ಚಾಕಿ ಕೂಡ ಇರುತ್ತಾನೆ”- ನಾಯಕ ಅನುಮತಿ ನೀಡಿದ.

ಹೆಚ್ಚು ಕಡಿಮೆ ಖುದೀರಾಮನಷ್ಟೇ ಪ್ರಾಯದ ಗಟ್ಟಿಮುಟ್ಟಿನ ಮೈಯ ಪ್ರಪುಲ್ಲಕುಮಾರ ಚಾಕಿ, ಖುದೀರಾಮನ ಬಳಿ ಬಂದು ನಿಂತ. ಪ್ರಫುಲ್ಲ ಪೂರ್ವ ಬಂಗಾಳದ ರಂಗಪುರದವನು. ಮಂಗ ವಿಭಜನೆಯ ಸಮಯದಲ್ಲಿ ಎಂಬತ್ತು ಮಂದಿ  ಹುಡುಗರೊಂದಿಗೆ “ವಂದೇ ಮಾತರಂ” ಎಂದು ಘೊಷಿಸುತ್ತಾ ಶಾಲೆಯಿಂದ ಹೊರನಡೆದಿದ್ದ.

ಕ್ರಾಂತಿಕಾರಿ ದಳದ ನಾಯಕ ಖುದೀರಾಮ, ಪ್ರಫುಲ್ಲರಿಗೆ ಎರಡೆರಡು ರಿವಾಲ್ವಾರ್‌, ಒಂದು ಬಾಂಬ್, ಸ್ವಲ್ಪ ಹಣ ಕೊಟ್ಟು  ಆಶಿರ್ವದಿಸಿ ಕಳೂಹಿಸಿದ.  ಕಿಂಗ್ಸ ಫರ್ಡನನ್ನು  ಯಮಪುರಿಗೆ ಕಳೂಹಿಸಲು ಹುಡುಗರಿಬ್ಬರೂ ಉತ್ಸಾಹದಿಂದ ಹೊರಟರು.

ತಪ್ಪಿಹೋದ ಬೇಟೆ:

೧೯೦೮ನೇ ಏಪ್ರೀಲ್ ೩೦ ರಂದು ರಾತ್ರಿ ಖುದೀರಾಮ, ಪ್ರಫೂಲ್ಲ ಇಬ್ಬರೂ ಮುಜಫರಪುರದ ಯುರೋಪಿಯನ್ ಕ್ಲಬ್ಬಿನ ಸಮೀಪ ತಲುಪಿದರು. ರಿವಾಲ್ವಾರ್‌, ಬಾಂಬ್, ಸಿದ್ಧಮಾಡಿಟ್ಟುಕೊಂಡು ಕಿಂಗ್ಸ ಫರ್ಡ ಹೊರಗೆ ಬರುವುದನ್ನೇ ಕಾಯುತ್ತಾ  ಮರೆಯಲ್ಲಿ ನಿಂತರು.

ಸ್ವಲ್ಪ  ಹೊತ್ತಿನಲ್ಲಿ ಒಂದು ಕುದುರೆ ಗಾಡಿ ಕಿಂಗ್ಸ್ ಫರ್ಡ ಬಂಗಲೆಯ ಆವರಣದಿಂದ  ಹೊರಟಿತು.  ಕೈಯಲ್ಲಿ ಬಾಂಬ್ ಹಿಡಿದಿದ್ದ ಖುದೀರಾಮ ಪಿಸುದನಿಯಲ್ಲಿ ಪ್ರಫುಲ್ಲನಿಗೆ ಹೇಳಿದ : “ನಾನು ಬಾಂಬ್ ಎಸೆದ ಕೂಡಲೇ ನೀನು ಓಡಿ ಹೋಗು. ನನ್ನನ್ನು ಕುರಿತು ಯೋಚಿಸಬೇಡ.  ಬದುಕಿ ಉಳಿದರೆ ಗುರುದೇವನ ಚರಣಗಳಲ್ಲಿ ತಲೆಯಿಡುವೆ. ಓಡಲು ಸಿದ್ಧನಾಗಿರು. “ವಂದೇ ಮಾತರಂ”.

ಗಾಡಿಹತ್ತಿರ ಬಂತು. ಸರಿಯಾಗಿ ಎದುರು ಭಾಗಕ್ಕೆ ಬಂದಾಗ ಖುದೀರಾಮ ಕೈಯಲ್ಲಿದ್ದ ಬಾಂಬನ್ನು ಗುರಿಯಿಟ್ಟು ಗಾಡಿಯೊಳಗೆ ಎಸೆದ.

ಬ್ರೀಟಿಷರ ವಿರುದ್ಧ ಭಾರತ ಎಸೆದ ಮೊದಲ ಬಾಂಬ್ ಎಳೆಯ ಕೈಯಿಂದ ಚಿಮ್ಮಿತು.

ಬಾಂಬ್ ಗಾಡಿಯೊಳಗೆ ತಗುಲಿದೊಡನೆಯೇ ಭೀಕರ ಶಬ್ದವಾಯಿತು. ಅದರೊಂದಿಗೆ ಎದೆ ಒಡೆಯುವಂತಹ ಚಿತ್ಕಾರವೂ ಕೆಳಿಬಂತು. ಮುಂದೇನಾಗುವುದೆಂದು ತಿಳಿಯುವ ಮೊದಲು ಖುದೀರಾಮ, ಪ್ರಫುಲ್ಲರು ಬೇರೆ ಬೇರೆ ದಿಕ್ಕುಗಳಲ್ಲಿ ಓಡಿದರು.

ಕಿಂಗ್ಸ ಫರ್ಡನ ಅದೃಷ್ಟ ನೆಟ್ಟಗಿತ್ತು. ಖುದೀರಾಮ ಬಾಂಬೆಸೆದ ಗಾಡಿಯಲ್ಲಿ ಅವನು ಇರಲೇಇಲ್ಲ. ಅದರಲ್ಲಿದ್ದವರು ಕಿಂಗ್ಸ ಫರ್ಡ ಮನೆಗೆ ಅತಿಥಿಗಳಾಗಿ ಬಂದಿದ್ದ ವಕೀಲ ಕೆನಡಿ ಎಂಬುವರ ಪತ್ನಿ, ಪುತ್ರಿ ಹಾಗೂ ಇನ್ನೊಬ್ಬಳು ಸೇವಕಿ.  ಮಗಳು ಮತ್ತು ಸೇವಕಿ ತಕ್ಷಣವೇ ಮೃತರಾದರು. ತೀವ್ರ ಗಾಯಗೊಂಡಿದ ಶ್ರೀಮತಿ ಕೆನಡಿ ಒಂದೆರಡು ದಿನಗಳ ಅನಂತರ ಮೃತಳಾದಳು.

 

ಬ್ರೀಟಿಷರ ವಿರುದ್ಧ ಮೊದಲ ಬಾಂಬ್ ಎಳೆಯ ಕೈಯಿಂದ ಚಿಮ್ಮಿತು.

ಸಿಕ್ಕಬಿದ್ದ ಸಿಂಹದ ಮರಿ :

ಇತ್ತ ಖುದೀರಾಮ ಬಾಂಬ  ಎಸೆದ ತಕ್ಷಣವೇ  ಓಡತೊಡಗಿದ. ರೈಲು ಹಳಿಗಳ ಮೇಲೆಒಂದೇ ಸಮನೆ ಓಡಿದ. ಇಡೀ ರಾತ್ರಿ ಸುಮಾರು ೨೫ ಮೈಲುಗಳಷ್ಟು ದೂರ ಓಡಿ ಬೆಳಗಾದ ಮೇಲೆಯೇ ನಿಂತ. ವೇಣಿ ರೈಲು ನಿಲ್ದಾಣದ ಸಮೀಪ ಈಗ ಲಾಖಾ ಎಂದು ಪ್ರಸಿದ್ಧವಾಗಿರುವ ಜಾಗವನ್ನು ತಲುಪಿದ. ಒಂದೇ ಸಮನೆ ಓಡಿದ್ದರಿಂದ ವಿಪರೀತ ಆಯಾಸವಾಗಿತ್ತು. ಹೊಟ್ಟೆಯಲ್ಲಿ ತಡೆಯಲಾರದಷ್ಟು ಹಸಿವು ಬೇರೆ. ಹತ್ತಿರದ ಅಂಗಡಿಯಲ್ಲಿ ಕಡಲೆಪೂರಿ ಕೊಂಡು ತಿನ್ನತೊಡಗಿದ.

ಇಷ್ಟು ಹೊತ್ತಿಗಾಗಲೇ ಮುಜಫುರ್‌ ಪುರದ ಘಟನೆಯ ಸುದ್ಧಿ ನಾಲ್ಕು ದಿಕ್ಕುಗಳಿಗೆ ಹರಡಿತು. ಖುದೀರಾಮ ಕಡಲೆ ತಿನ್ನುದ್ದ ಅಂಗಡಿಯಲ್ಲಿ ಇದೇ ವಿಷಯದ ಕುರಿತು ಮಾತನಾಡುತ್ತಿದ್ದರು.  ಖುದೀರಾಮ ಕುತೂಹಲದಿಂದ ಆಲಿಸಿದ.  ಹೆಂಗಸರಿಬ್ಬರು ಸತ್ತರು ಎಂದು ಕೇಳಿದಾಗ ಮೈಮರೆತು ಕೇಳಿಯೇ ಬಿಟ್ಟ. “ಏನು ಕಿಂಗ್ಸ್ ಫರ್ಡ ಸಾಯಲಿಲ್ಲವೇ?”

ಅಂಗಡಿಯಲ್ಲಿದ್ದವರ ದೃಷ್ಟಿ ಖುದಿರಾಮನ ಮೇಲೆ ಬಿದ್ದಿತು.  ಹುಡುಗ ಪರಸ್ಥಳದವನಂತೆ ಕಂಡ. ಆಯಾಸ ಬೇರೆ ಮುಖದ ಮೇಲೆ ಮುದ್ರೆ ಒತ್ತಿತ್ತು.  ಅಂಗಡಿಯವನ ಅನುಮಾನ ಬಲವಾಯಿತು. ಅಪರಾಧಿಯನುನ ಹಿಡಿದು ಕೊಟ್ಟರೆ ತನಗೆ ಬಹುಮಾನ ಸಿಕ್ಕುವುದುಎಂಬ ಆಸೆ. ಅಂಗಡಿ ಮಾಲಿಕನ ಬಾಯಲ್ಲಿ ನೀರೂರಿತು. ಖುದೀರಾಮನಿಗೆ ಕುಡಿಯಲು ನೀರು ಕೊಟ್ಟವನೇ ಹತ್ತಿರದಲ್ಲೇ ಅಡ್ಡಾಡುತ್ತಿದ್ದ ಪೋಲಿಸರಿಗೆ ಸೂಚನೆ ಕಳುಹಿಸಿದ.  ಖುದೀರಾಮನ ಬಾಯಿಗೆ ನೀರಿನ ಲೋಟ ಇಡುತ್ತಿದ್ದಂತೆಯೇ ಪೋಳಿಸರು ಬಂದು ಹಿಡಿದುಕೊಂಡರು.  ಖುದಿರಾಮ ಕಿಸೆಯಿಂದ ರಿವಾಲ್ವಾರ ತೆಗೆಯಲು ಮಾಡಿದ ಪ್ರಯತ್ನ ವಿಫಲವಾಯಿತು.  ಜೇಬಿನಲ್ಲಿದ್ದ ಎರಡು ರಿವಾಲ್ವಾರಗಳು ಪೋಲಿಸರ ವಶವಾದವು. ಖುದೀರಾಮ ಕಿಂಚಿತ್ತೂ ಗಾಬರಿಗೊಳ್ಳಲಿಲ್ಲ.

ಪ್ರಫುಲ್ಲನ ಬಲಿದಾನ :

ಅತ್ತ ಪ್ರಫುಲಕುಮಾರ ಚಾಕಿ ಕೂಡಾ ಖುದಿರಾಮನಂತೆಯೇ ಓಡತೊಡಗಿದ. ಎರಡು ದಿನಗಳವರೆಗೆ ಪೋಲಿಸರ  ದೃಷ್ಟಿಯಿಂದ ಮರೆಯಾಗಿದ್ದ. ಆದರೆ ಮೂರನೇ ದಿನ ಪ್ರಯಾಣ ಮಾಡುತ್ತಿದ್ದಾಗ ಪೋಲಿಸರು ಎದುರಾದರು. ಬಂಧಿಸಲು ಅವರು ಯತ್ನಿಸಿದಾಗ ಪ್ರಫುಲ್ಲ ಓಡಿದ. “ಏನಾದರೂ ನಾನು ಜೀವಂತ ಇರುವಾಗ ನನ್ನ ಮೈ ಮುಟ್ಟಲು ಇವರಿಗೆ ಅವಕಾಶ ಕೊಡಲಾರೆ” ಎಂದು ನಿರ್ಧರಿಸಿದ.  ಪಿಸ್ತೂಲು ತೆಗೆದು ತನ್ನ ಮೇಲೆಯೇ ಗುಂಡು ಹಾರಿಸಿಕೊಂಡು ವೀರಸ್ವರ್ಗಕ್ಕೆ ಹೋದ. ಪೋಲಿಸರು ಅವನ ತಲೆ ಕತ್ತರಿಸಿ ಮುಜಫುರ ಪುರಕ್ಕೆ ಒಯ್ದರು.

ಖುದೀರಾಮನನ್ನು ಬಲವಾದ ಪಹರೆಯಲ್ಲಿ ರೈಲಿನ ಮೂಲಕ ಮುಜಫರ್‌ ಪುರಕ್ಕೆ ಕರೆತಂದರು. ಪ್ರಥಮ ಬಾರಿಗೆ ಭಾರತದಲ್ಲಿ ಬಾಂಬ್ ಸ್ಫೋಟಿಸಿದ ಬಾಲಕನನ್ನು ನೋಡಲು ನಿಲ್ದಾಣದಲ್ಲಿ ಜನರು ಕಿಕ್ಕಿರಿದು ನೆರೆದಿದ್ದರು. ಪೋಲಿಸ ಠಾಣೆಗೆ ಹೋಗಲು ಕುದುರೆ ಗಾಡಿ ಹತ್ತಿ ಕುಳಿತೊಡನೆಯೇ ಖುದೀರಾಮ ಹಸನ್ಮುಖಿನಾಗಿ “ವಂದೇ ಮಾತರಂ” ಎಂದು ಗಟ್ಟಿಯಾಗಿ ಕೂಗಿದ. ಅಭಿಮಾನದಿಂದ ಜನರ ಕಣ್ಣುಗಳು ತುಂಬಿ   ಹೋದವು.

ನಿಮಗಿಂತಲೂ ಚೆನ್ನಾಗಿ ಬಲ್ಲೆ:

ಅನಂತರ ಖುದೀರಾಮನ ಮೇಲೆ ಮೊಕದ್ದಮೆ ಹೂಡಿದರು. ಸರಕಾರದ ಕಡೆಯ ಇಬ್ಬರು ವಕೀಲರಿದ್ದರು.  ಖುದೀರಾಮನಿಗೆ ಮುಜಫರಪುರದಲ್ಲಿ ತನ್ನವರೆಂಬುವರು ಯಾರು ಇರಲಿಲ್ಲ. ಆಗ ಕಾಳಿದಾಸ ಬೋಸ್ ಎಂಬ ಹಿರಿಯ ವಕಿಳರು ಅವನ ಪರವಾಗಿ ವಾದಿಸಲು ತಾವಾಗಿಯೇ ಮುಂದೆ ಬಂದರು.

ವಿಚಾರಣೆಯ ನಾಟಕ ಎರಡು ತಿಂಗಳ ಕಾಲ ನಡೆಯಿತು. ಕೊನೆಗೂ ಖುದೀರಾಮನಿಗೆ ಮರಣದಂಡನೆ ವಿಧಿಸಿರುವುದಾಗಿ ನ್ಯಾಯಾಧೀಶರು ತೀರ್ಪು ಓದಿದರು.  ತೀರ್ಪು ಓದುವುದನ್ನು  ಕೇಳುವಾಗಲೂ ಖುದೀರಾಮನ ಮುಖದಲ್ಲಿ ಸ್ವಲ್ಪವೂ ಗಾಬರಿಯ ಚಿಹ್ನೆಯಿಲ್ಲ.

ಹತ್ತೊಂಬತ್ತು ವರ್ಷದ ಹುಡುಗ ಸಾವಿನ ಬಗೆಗೆ ಇಷ್ಟೊಂದು ನಿಶ್ಚಿಂತನಾಗಿದ್ದುದನ್ನು ಕಂಡು ಆಶ್ಚರ್ಯಗೊಂಡ ನಯಾಯಾಧೀಶರು ಕೇಳಿದರು, ” ಈ ತೀರ್ಪಿನ ಅರ್ಥ ಏನೆಂದು ಗೊತ್ತಿದೆಯೇ ನಿನಗೆ?”

ಖುದೀರಾಮ ಮುಗುಳನ್ನುತ್ತಲೇ ಹೇಳಿದ. “ನಿಮಗಿಂತ ಚೆನ್ನಾಗಿ ಅದರ ಅರ್ಥ ತಿಳಿದುಕೊಂಡಿದ್ದೇನೆ.”

ನ್ಯಾಯಾಧೀಶರು ಕೇಳೀದರು : “ನೀನು ಏನಾದರೂ ಹೇಳುವುದಿದೆಯೇ?”

“ಹೌದು ನಾನು ಬಾಂಬ್ ತಯ್ಯಾರಿಯ ವಿಷಯದಲ್ಲಿ ಸ್ವಲ್ಪ  ಹೇಳಬೇಕಾಗಿದೆ. “ನ್ಯಾಯಾಧೀಶರಿಗೆ ಈಗ ಗಾಭರಿಯಾಯಿತು- ನ್ಯಾಲಯದಲ್ಲಿ ಬಹಿರಂಗ  ಹೇಳಿಕೆ ನೀಡುವ ಮೂಲಕ ಬಾಂಬ್ ತಯಾರಿಸುವ ವಿಧಾನವನ್ನು ಎಲ್ಲರಿಗೂ ಹೇಳೀಕೊಟ್ಟಾನು ಎಂದರು. ಆದ್ದರಿಂದ ಅವರು ಖುದೀರಾಮನು ಹೇಳಿಕೆ ಕೊಡಲು ಅವಕಾಶ  ನೀಡಲಿಲ್ಲ.

ಖುದೀರಾಮನಿಗೆ ಬ್ರಿಟಿಷರ ರಾಜ್ಯದಲ್ಲಿ ನ್ಯಾಯ ಸಿಗಬಹುದೆಂಬ ಆಸೆ ಇರಲಿಲ್ಲ. ಆದರೆ ಕಾಳಿದಾಸ ಬೋಸ್ ಅವರಿಗೆ ಖುದೀರಾಮನನ್ನು ಬದುಕಿಸಬೇಕೆಂಬ ಹಂಬಲವಿತ್ತು. ಖುದೀರಾಮನ ಪರವಾಗಿ ಕಲ್ಕತ್ತೆಯ ಹೈಕೋರ್ಟಿನಲ್ಲಿ ಅಪೀಲು ಮಾಢಿದರು. ಹೈಕೋರ್ಟ ನ್ಯಾಯಾಧೀಶರಿಗೂ ಖುದೀರಾಮನ ವ್ಯಕ್ತಿತ್ವದ  ಪರಿಚಯ ಆಯಿತು.  ಅವನ ನಿರ್ಭಯ ದೃಷ್ಟಿ ಮತ್ತು ದೃಢ ಸಂಕಲ್ಪದ ಮುಖ ಮುದ್ರೆಯನ್ನು ನೋಡಿ ಅವರು ಬೆರಗಾದರು. ಕೆಳಗಿನ ನ್ಯಾಯಾಲಯವು ನೀಡಿದ ಶಿಕ್ಷೆಯನ್ನು ಅವರು ಸ್ಥಿರಗೊಳಿಸಿದರು. ಆದರೆ ಮರಣ ದಂಡನೆಯ ದಿನವನ್ನು ೧೯೦೮ರ ಅಗಸ್ಟ್ ೬ ಎಂದು ಇದ್ದುದ್ದನ್ನು ಅಗಸ್ಟ್ ೧೯ಕ್ಕೆ ಮುಂದೂಡಿದರು.

ನೀನೇನಾದರೂ ಹೇಳಬಯಸುತ್ತೀಯಾ?” ಹೈಕೋರ್ಟ ನ್ಯಾಯಾಧೀಶರು ಪ್ರಶ್ನಿಸಿದರು.

ಖುದೀರಾಮ ಹೇಳಿದ : “ನಾನು ರಜಪೂತ ವೀರಾಂಗನೆಯರಂತೆ ನನ್ನ ದೇಶಧ ಸ್ವಾತಂತ್ಯ್ರಕ್ಕಾಗಿ ಸಾಯಬಯಸುತ್ತೇನೆ. ಫಾಶಿಯ  ಕಂಬವನ್ನೇರಲು ನನಗೆ ಎಳ್ಳಷ್ಟೂ ದುಃಖವಿಲ್ಲ. ಕಿಂಗ್ಸ ಫಡಗೆ ಅವನ ಅಪರಾಧಗಳಿಗೆ ಶಿಕ್ಷೆ ಕೊಡಲು ಸಾಧ್ಯವಾಗಲಿಲ್ಲ ಎಂಬ ಖೇದ ಮಾತ್ರ ಇದೆ”.

ಸೆರೆಮನೆಯಲ್ಲಿದ್ದಾಗಲೂ ಖುದೀರಾಮ ನಿಶ್ಚಿಂತನಾಗಿದ್ದ. ಮೃತ್ಯು ಹತ್ತಿರಕ್ಕೆ ಬಂದಷ್ಟೂ ಅವನ ಮುಖದ ಕಳೆ ಹೆಚ್ಚುತ್ತಿತ್ತು. ಎಷ್ಟು ಬೇಗ ಬಲಿದಾನ ಮಾಡಿದರೆ  ಅಷ್ಟು ಬೇಗ ಇನ್ನೊಮ್ಮೆ ಹುಟ್ಟಿ ಬಂದು ಮಾತೃಭೂಮಿಯ ಬಿಡುಗಡೆಗಾಗಿ ಹೋರಾಡಬಹುದು  ಎಂದು ಅವನ ಯೋಚನೆ. ಇದೇನೂ ಕಟ್ಟು ಕಥೆಯಲ್ಲ. ಸೆರೆಮನೆಯಲ್ಲಿ ಖುದೀರಾಮನ ಶರೀರದ ತೂಕ ಎಡು ಪೌಂಡ್ ಹೆಚ್ಚಿತು!

ತಾಯ ಮಡಿಲಿಗೆ :

ಮೊದಲೇ ನಿರ್ಧರಿಸಿದಂತೆಯೇ ೧೯೦೮ರ ಅಗಸ್ಟ್ ೧೯ ರಂದು ಬೆಳಿಗ್ಗೆ ಆರು ಗಂಟೆಗೆ ಖುದೀರಾಮನನ್ನು ಫಾಶಿಯ ಕಂಬದ ಬಳಿಗೆ ಕರೆತಂದರು. ಖುದೀರಾಮನ ಮುಖದ ಮುಗುಳ್ನಗೆ ಆಗಲೂ ಮಾಸಿರಲಿಲ್ಲ. ಶಾಂತಚಿತ್ತದಿಂದ ಕಂಬದ ಬಳಿಗೆ  ನಡೆದುಕೊಂಡು ಬಂದ. ಅವನ ಕೈಯಲ್ಲಿ ಭಗವದ್ಗೀತೆ ಇತ್ತು. ಕೊನೆಯ ಬಾರಿಗೆ  “ವಂದೇ ಮಾತರಂ” ಎಂದು ಗಟ್ಟಿಯಾಗಿ ಕೂಗಿ ಕುಣಿಕೆಗೆ ತಲೆಯೊಡ್ಡಿದ.

ಕೊನೆಗೂ ಮಾತೃಭೂಮಿಯ ಚರಣತಲದಲ್ಲಿ ಬಲಿದಾನ ಮಾಡಬೇಕೆಂಬ ತನ್ನ ಸಂಕಲ್ಪವನ್ನು ಸಾಧಿಸಿದ ವೀರ ಖುದೀರಾಮ ಬೋಸ್ ಭಾರತ ಇತಿಹಾಸದಲ್ಲಿ ಅಮರನಾದ.

ಹೆದರಿಯೇ ಸತ್ತ ಕಿಂಗ್ಸ್ ಫರ್ಡ:

ಖೂದೀರಾಮನ ಬಲಿದಾನ ವ್ಯರ್ಥವಾಗಲಿಲ್ಲ. ಅವನೆಸೆದ ಬಾಂಬ್ ಪ್ರತ್ಯಕ್ಷವಾಗಿ ತಗುಲಿದಿದು ಕಿಂಗ್ಸ ಫರ್ಡಗೆ ಅಲ್ಲ, ಬೇರೆಯವರಿಗೆ. ಆದರೆ ಕಿಂಗ್ಸ ಫರ್ಡಗೆ ಭಯದ ಬಾಂಬ ಬಲವಾಗಿ ನಾಟಿತು.  ಖುದೀರಾಮ ಅಮರನಾದ ದಿನದಿಂದಲೇ ಕಿಂಗ್ಸ್ ಫರ್ಡನನ್ನು  ಅಶಾಂತಿ ಕಾಡತೊಡಗಿತು.  ಪ್ರತಿ ಕ್ಷಣದಲ್ಲೂ ತನಗೆ ಮೃತ್ಯು ಎದುರಾದಂತೆ ಆತನಿಗೆ ಭಾಸವಾಗುತ್ತಿತ್ತು.  ಕೊನೆಗೆ ಭಯಭೀತನಾಗಿ ಕೆಲಸಕ್ಕೆ ರಾಜೀನಾಮೆ ನೀಡಿ ಮಸೂರಿಯಲ್ಲಿ ವಾಸಿಸತೊಡಗಿದ. ನಿರಾಪರಾಧಿಗಳನ್ನು ಹೆದರಿಸಿ ಪೀಡಿಸುತ್ತಿದ್ದ ಕಿಂಗ್ಸ ಫರ್ಡ ಸಾವಿಗೆ ಹೆದರಿ ಹೇದರಿಯೇ ಸತ್ತ.

ಅಮರನಾಗಲು ಪ್ರೇರಣೆ:

ಖುದೀರಾಮ ತಾನು ಅಮರನಾದ ಮಾತ್ರವಲ್ಲ ತನ್ನ ಬಲಿದಾನದಿಂದ ಇತರರಿಗೂ ಅಮರತ್ವ ಪಡೆಯಲು ಪ್ರೇರಣೆ ನೀಡಿದ. ಮುಂದೆ ಅಸಂಖ್ಯಾತ ತರುಣರು ಅವನ ದಾರಿಯನ್ನೇ ಅನುಸರಿಸಿ ಇಡೀ ಬ್ರೀಟಿಷ್ ಸಾಮ್ರಾಜ್ಯವೂ ಭಾರತದಲ್ಲಿ ಕೊನೆಗೊಳ್ಳುವಂತೆ ಮಾಡಿದರು. ಕಿಂಗ್ಸ್ ಫರ್ಡ ಕೆಲಸ ಬಿಟ್ಟು ಹೋದರೆ ಬ್ರಿಟಿಷರು ಭಾರತವನ್ನೆ ಬಿಟ್ಟು ಹೋಗಬೇಕಾಯಿತು.