ಮುಂಬಯಿ ಮಹಾನಗರದಲ್ಲಿ ಮುಖ್ಯವಾದ ವ್ಯವಹಾರಗಳು ನಡೆಯುವ ಕೇಂದ್ರದಲ್ಲೇ ವೀರ ನರೀಮನ್ ರಸ್ತೆ ಇದೆ. ಅಲ್ಲಿಂದಲೇ ಸಮುದ್ರದ ಅಂಚಿಗೆ ತೆರಳುವಾಗ, ಸಮುದ್ರವನ್ನೆ ತುಂಬಿ ಪಡೆದ ಜಾಗದಲ್ಲಿ ಕಟ್ಟಿರುವ ದೊಡ್ಡದೊಡ್ಡ ಕಟ್ಟಡಗಳನ್ನು ನೋಡುವಾಗ, ನರೀಮನರ ನೆನಪು ಬಂದೇ ಬರುತ್ತದೆ. ನಮ್ಮ ಅಂತರರಾಷ್ಟ್ರೀಯ ಖ್ಯಾತಿಯ ‘ಏರ್‌ಇಂಡಿಯಾ’ ಸಂಸ್ಥೆಯ ಕೇಂದ್ರ ಕಚೇರಿಯ ಗಗನಚುಂಬಿ ಕಟ್ಟಡವಿರುವುದು ‘ನರೀಮನ್ ಪಾಯಿಂಟ್’ನಲ್ಲೇ.

ಮುಂಬಯಿಯ ಸಿಂಹ

ಈ ‘ನರೀಮನ್ ಪಾಯಿಂಟ್’ನ ಜಾಗವೆಲ್ಲ ಸಮುದ್ರ ವನ್ನು ತುಂಬಿ ಪಡೆದ ಜಾಗ. ಈ ಜಾಗಕ್ಕೆ ‘ಬ್ಯಾಕ್-ಬೇ’ ಯೋಜನೆಯಿಂದ ಪಡೆದ ಜಾಗ ಎನ್ನುತ್ತಾರೆ. ಮೂರು ಕಡೆಗಳಲ್ಲೂ ಸಮುದ್ರವಿದ್ದು ದ್ವೀಪದಂತಿರುವ ಮುಂಬಯಿ ನಗರದ ಬೆಳವಣಿಗೆಗೆ ಸ್ಥಳ ಎಷ್ಟಿದ್ದರೂ ಕಡಿಮೆಯೆ. ಹಿಂದೆಯೂ ಅದೇ ಕತೆ. ಇಂದು ಕೂಡ ಅದೇ ಕತೆ.

ನಿತ್ಯ ಬೆಳೆಯುತ್ತಿರುವ ಈ ಮಹಾನಗರಕ್ಕೆ ಜಾಗ ಬೇಕೆಂದು ಸಮುದ್ರವನ್ನೇ ತುಂಬುತ್ತಾರೆ. ಇಂಥ ದೊಡ್ಡ ಕೆಲಸವನ್ನು ಸರ್ಕಾರವೇ ನಿರ್ವಹಿಸಬೇಕು. ಹಿಂದೆ ಭಾರತವನ್ನು ಆಳುತ್ತಿದ್ದ ಬ್ರಿಟಿಷರ ಸರ್ಕಾರ ಈ ಕೆಲಸವನ್ನು ಮಾಡಿದಾಗ, ಈ ಕೆಲಸದ ಹಿಂದೆ, ಅನ್ಯಾಯದ, ಭ್ರಷ್ಟಾಚಾರದ ಒಂದು ದೊಡ್ಡ ಕತೆಯೇ ಇದೆಯೆಂದು ಸಾರಿದವರು ನರೀಮನ್.

ಈ ಅನ್ಯಾಯವನ್ನು ಬಯಲಿ ಗೆಳೆದು ಬ್ರಿಟಿಷ್ ಸರ್ಕಾರ ವನ್ನು ಸಿಂಹಶಕ್ತಿಯಿಂದ ಎದುರಿಸಿ ಗೆದ್ದು ಬಂದವರು ನರೀಮನ್. ಅದರಿಂದಾಗಿಯೇ ಅವರು ‘ಮುಂಬಯಿಯ ಸಿಂಹ’ ಎಂದು ಹೆಸರು ಪಡೆದರು.

ನಮ್ಮ ನಾಡಿನ ಸ್ವಾತಂತ್ರ್ಯ ಹೋರಾಟದ ಹಿರಿಯ ಸೇನಾನಿಯಾಗಿದ್ದ ಸರ್ದಾರ್ ಪಟೇಲರಿಗೆ ‘ಸರ್ದಾರ್’ ಎಂಬ ಬಿರುದನ್ನು ಕೊಟ್ಟುದೂ ಈ ‘ಮುಂಬಯಿಯ ಸಿಂಹ’ವೇ ಎಂಬ ಒಂದು ಕತೆಯೂ ಇದೆ.

‘ಸರ್ದಾರ’ರು

ಬಾರ್ದೋಲಿಯ ರೈತರ ಸತ್ಯಾಗ್ರಹ ನಮ್ಮ ಸ್ವಾತಂತ್ರ್ಯ ಹೋರಾಟದ ಒಂದು ಮಹತ್ವದ ಪ್ರಕರಣವಾಗಿತ್ತು. ವಲ್ಲಭಭಾಯಿ ಪಟೇಲರು ಇದರ ನಾಯಕ. ಈ ಸತ್ಯಾಗ್ರಹ ದಲ್ಲಿ ಭಾಗವಹಿಸಿದ್ದ ರೈತರ ಆಸ್ತಿ-ಪಾಸ್ತಿಗಳನ್ನು ಆಗಿನ ಮುಂಬಯಿ ಸರ್ಕಾರ ಮುಟ್ಟುಗೋಲು ಹಾಕಿ, ಸರ್ಕಾರಕ್ಕೆ ಬರಬೇಕಾಗಿದ್ದ ಕಂದಾಯ ವಸೂಲಿಗಾಗಿ ಹರಾಜು ಹಾಕಿದಾಗ, ಕಡಮೆ ಬೆಲೆಯಲ್ಲಿ ಸಿಗಬಹುದಾದ ಈ ಹೊಲಗಳನ್ನು ಖರೀದಿ ಮಾಡಲು ಒಬ್ಬ ಪಾರ್ಸೀ ಜಮೀನುದಾರ ಮಾತ್ರ ಮುಂದೆ ಬಂದಿದ್ದ. ಆತನ ಹೆಸರು ಸರ್ದಾರ. ಇದರಿಂದ ತನಗೇನಾದರೂ ಕೇಡಾಗಬಹುದೇ ಎಂಬ ವಿಚಾರವನ್ನು ಈ ಪಾರ್ಸೀ ಸರ್ದಾರ ಚಿಂತಿಸಲಿಲ್ಲ. ಆದರೆ ಮುಂದೆ ಈ ಮುಟ್ಟುಗೋಲು, ಹರಾಜುಗಳಿಂದೆಲ್ಲ ಸತ್ಯಾಗ್ರಹಿಗಳನ್ನು ಸದೆ ಬಡಿಯುವುದು ಸಾಧ್ಯವಿಲ್ಲವೆಂದು ಸರ್ಕಾರಕ್ಕೆ ಮನವರಿಕೆಯಾದಾಗ, ಎಲ್ಲರ, ಮುಖ್ಯವಾಗಿ ಸರ್ಕಾರದ ಮುಖಭಂಗವಾಗದಂತೆ ಈ ಪ್ರಕರಣ ಬಗೆ ಹರಿಯಬೇಕಿತ್ತು.

ಈ ಪಾರ್ಸೀ ಸರ್ದಾರನ ಮನವೊಲಿಸಲು ಮುಂಬಯಿಯಿಂದ ಇಬ್ಬರು ಪಾರ್ಸೀ ಗೃಹಸ್ಥರು ಹೊರಟರು. ಅವರಲ್ಲಿ ನರೀಮನ್ ಒಬ್ಬರು. ಇವರನ್ನು ದಾರಿಯಲ್ಲೆ ಭೇಟಿಯಾದ ವಲ್ಲಭಭಾಯಿ ಪಟೇಲರಿಗೆ, ನರೀಮನ್ ತಮ್ಮ ಪ್ರವಾಶದ ಉದ್ದೇಶ ತಿಳಿಸಿದಾಗ,

ವಲ್ಲಭಭಾಯಿ ಪಟೇಲರು ಗುಡುಗಿದರು : “ನನ್ನ ಕಾರ್ಯ ಕ್ಷೇತ್ರದಲ್ಲಿ ಅಂಥ ಹೆಸರಿನ ಸರ್ದಾರನೇ ಇಲ್ಲ. ಅಲ್ಲಿರುವ ಸರ್ದಾರ ನಾನೊಬ್ಬನೇ” ಎಂದು. ಸರಿ, ನರೀಮನರು ಎಲ್ಲ ಕಡೆ ಗುಜರಾತಿನ ನಿಜವಾದ ಸರ್ದಾರ ಯಾರೆಂಬ ಕತೆಯನ್ನು ಪ್ರಚಾರ ಮಾಡಿದರು. ಪಟೇಲರಿಗೆ ‘ಸರ್ದಾರ್’ ಬಿರುದು ಅಂಟಿಕೊಂಡಿತು.

ನಮ್ಮ ಸ್ವಾತಂತ್ರ್ಯ ಹೋರಾಟದ ವೀರಸೇನಾನಿ ಮುಂಬಯಿ ಮಹಾನಗರದ ಪ್ರೀತಿಯ ಜನನಾಯಕ ಖುರ್ಶೇದ್ ಫ್ರಾಮಜಿ ನರೀಮನರಿಗೆ ಮುಂಬಯಿ ವಿಶೇಷವಾದ ಯಾವ ಸ್ಮಾರಕವನ್ನೂ ಈ ತನಕ ನಿರ್ಮಿಸಿಲ್ಲ. ಆದರೆ ‘ನರೀಮನ್ ಪಾಯಿಂಟ್’ನಲ್ಲಿರುವ ಗಗನಚುಂಬಿ ಕಟ್ಟಡಗಳ ಎತ್ತರವನ್ನೂ ಪಕ್ಕದಲ್ಲೇ ಇರುವ ಸಮುದ್ರದ ಆಳವನ್ನು ನಾವು ಗಮನಿಸುವಾಗ ನಮಗೆ ನರೀಮನರ ನೆನಪಾಗಲೇಬೇಕು. ಭೀತಿಯೆಂದರೇನೆಂದು ಕಂಡರಿಯದ, ಸ್ವಾತಂತ್ರ್ಯದ ಕೆಚ್ಚಿನ ಈ ಧೀರ ನಾಯಕನ ವ್ಯಕ್ತಿತ್ವ ಆಗಸದಂತೆ ಎತ್ತರವಾದುದಾಗಿತ್ತು; ಅವರ ದೇಶಪ್ರೇಮ ಸಾಗರದಂತೆ ಆಳವಾಗಿತ್ತು.

ನಮ್ಮ ನಾಡಿನ ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಮುಂಬಯಿ ಯಾವಾಗಲೂ ಮುಂಚೂಣಿಯಾಗಿತ್ತು. ಇಂಥ ಜನಶಕ್ತಿಯನ್ನು ಸಂಘಟಿಸುವುದರಲ್ಲಿ ಎರಡು ದಶಕಗಳಿಗೂ ಹೆಚ್ಚು ಕಾಲ ದುಡಿದಿದ್ದರು ಸೇನಾನಿ ನರೀಮನ್. ಈ ನಾಯಕತ್ವ ವಹಿಸಿದ್ದ ಕಾಲದಲ್ಲಿ ಅವರು ತೋರಿಸಿದ ಧೈರ್ಯ, ಸಾಹಸಗಳ ಕತೆ ನಮ್ಮ ಸ್ವಾತಂತ್ರ್ಯ ಸಂಗ್ರಾಮದ ಒಂದು ರೋಮಾಂಚಕಾರಿ ಪ್ರಸಂಗವಾಗಿ ಮೆರೆಯುತ್ತಿದೆ.

ಬಾಲ್ಯ – ವಿದ್ಯಾಭ್ಯಾಸ

ಖುರ್ಶೇದ್ ಫ್ರಾಮ್‌ಜಿ ನರೀಮನ್ ಹುಟ್ಟಿದ್ದು ೧೮೮೩ ರ ಮೇ ಹದಿನೇಳರಂದು, ಮುಂಬಯಿಯ ಸಮೀಪದ ಥಾನಾದಲ್ಲಿ. ಒಂದು ಮಧ್ಯಮ ವರ್ಗದ ಪಾರ್ಸೀ ಕುಟುಂಬ ಅವರದು. ಅವರ ತಂದೆಯ ಐದು ಮಕ್ಕಳಲ್ಲಿ (ಮೂರು ಗಂಡು, ಎರಡು ಹೆಣ್ಣು) ಖುರ್ಶೇದ್ ನರೀಮನ್ ನಾಲ್ಕನೆಯವರು. ನರೀಮನರ ತಂದೆ ತನ್ನ ೩೮ ನೆಯ ವಯಸ್ಸಿನಲ್ಲೇ ತೀರಿಕೊಂಡಾಗ, ಈ ಸಂಸಾರ ಖುರ್ಶೇದನ ಅಜ್ಜನ ಆಶ್ರಯಕ್ಕೆ ಬರಬೇಕಾಯಿತು.

ಖುರ್ಶೇದನ ಮಾವ ಹಶಾಂಗ್ ಜಮಾಸ್ವ್ ದಸ್ತೂರರು ಪುಣೆಯಲ್ಲಿ ಪಾರ್ಸೀ ಧರ್ಮಗುರುಗಳಾಗಿದ್ದರು. ವಿದ್ಯಾಭ್ಯಾಸಕ್ಕೆಂದು ಖುರ್ಶೇದನನ್ನು ಇಲ್ಲಿಗೆ ಕರೆತರ ಲಾಯಿತು. ಪುಣೆಯ ಸೇಂಟ್ ವಿನ್‌ಸ್ಟನ್ ಜೆಸುಯಿಟ್ ಶಾಲೆಯಲ್ಲಿ ಮೆಟ್ರಿಕ್ಯುಲೇಷನ್ ಮುಗಿಸಿ, ಉಚ್ಚ ವಿದ್ಯಾಭ್ಯಾಸ ಕ್ಕಾಗಿ ಖುರ್ಶೇದ್ ಡೆಕ್ಕನ್ ಕಾಲೇಜನ್ನು ಸೇರಿದರು. ಕೆಲಸ ದೊರಕಿಸಿಕೊಂಡು ಕುಟುಂಬಕ್ಕೆ ಸಹಾಯ ಮಾಡು ಎಂದು ಮನೆಯವರು ಒತ್ತಾಯ ಮಾಡಿದರೂ ಖುರ್ಶೇದ್ ಕಾಲೇಜು ವಿದ್ಯಾಭ್ಯಾಸದ ಆಸೆಯನ್ನು ಕೈಬಿಡಲಿಲ್ಲ.

ಕಾಲೇಜಿನಲ್ಲಿದ್ದಾಗಲೇ ಖುರ್ಶೇದನ ನಾಯಕತ್ವ ಮೊಳಕೆಯೊಡೆಯಲಾರಂಭಿಸಿತ್ತು. ಒಮ್ಮೆ ಕಾಲೇಜಿನ ಕೆಲವು ಪ್ರಾಧ್ಯಾಪಕರಿಗೂ, ವಿದ್ಯಾರ್ಥಿಗಳಿಗೂ ಕ್ರೀಡೆಗಳ ಸಂಬಂಧ ದಲ್ಲಿ ಜಗಳವಾಯಿತು. ಆಗ ವಿದ್ಯಾರ್ಥಿಗಳ ಪರ ನಾಯಕತ್ವ ವಹಿಸಿ, ಸಭೆ ಜರುಗಿಸಿ, ಕಾಲೇಜಿನ ಹಿರಿಯ ಅಧಿಕಾರಿಗಳ ಇದಿರಿನಲ್ಲೆ ಖುರ್ಶೇದ್ ಪ್ರಧ್ಯಾಪಕರ ವರ್ತನೆಯನ್ನು ಖಂಡಿಸಿದ್ದರು.

ಆದರೆ ಕಾಲೇಜಿನ ಅಭ್ಯಾಸದ ವೇಳೆಯಲ್ಲೆಲ್ಲ ಖುರ್ಶೇದ್ ವ್ಯಾಸಂಗವನ್ನುಳಿದು ಇತರ ಚಟುವಟಿಕೆಗಳ ಕಡೆ ಹೆಚ್ಚು ಗಮನ ಕೊಟ್ಟವರಲ್ಲ. ಗೆಳಯರೆಲ್ಲ ಆಟವಾಡುತ್ತಿದ್ದಾಗ, ಖುರ್ಶೇದ್ ಪುಣೆಯ ಸುಪ್ರಸಿದ್ಧ ಓರಿಯೆಂಟಲ್ ಲೈಬ್ರರಿಯಲ್ಲಿ ಅಭ್ಯಾಸನಿರತರಾಗಿರುತ್ತಿದ್ದರು. ಅವರು ‘ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು’ ಎಂದು ಸಾರಿದ ಲೋಕಮಾನ್ಯ ತಿಲಕರನ್ನು ಕಂಡದ್ದೂ ಇದೇ ಗ್ರಂಥಾಲಯದಲ್ಲಿ.

ಪುಣೆಯಲ್ಲಿ ಬಿ. ಎ. ಪರೀಕ್ಷೆ ಮುಗಿಸಿದ ಖುರ್ಶೇದ್ ಮುಂಬಯಿಗೆ ಬಂದರು. ಅಲ್ಲಿ ಒಂದು ಪೊಲೀಸ್ ಕೋರ್ಟಿನಲ್ಲಿ ದುಭಾಷಿಯಾಗಿ ಕೆಲಸ ಹಿಡಿದರು. ಜೊತೆಗೇ ಎಲ್‌ಎಲ್. ಬಿ. ವ್ಯಾಸಂಗಮಾಡಿ ಮುಗಿಸಿ ಆಮೇಲೆ ಸ್ವಂತ ವಕೀಲ ವೃತ್ತಿ ಆರಂಭಿಸಿದರು.

ವಕೀಲರಾಗಿ

ಆ ಕಾಲದಲ್ಲಿ ವಕೀಲ ವೃತ್ತಿ ತುಂಬ ಕಷ್ಟದ ವೃತ್ತಿ ಯಾಗಿದ್ದರೂ ಅದರಿಂದ ದೇಶಸೇವೆಗೆ ಹೆಚ್ಚು ಅವಕಾಶ ವಿದೆಯೆಂದು ನರೀಮನರು ನಂಬಿದ್ದರು. ಸ್ವಲ್ಪ ಕಾಲ ದುಭಾಷಿಯಾಗಿ ಕೋರ್ಟಿನಲ್ಲಿ ಕೆಲಸ ಮಾಡಿದ್ದ ಅನುಭವವು ಅವರ ವಕೀಲ ಕೆಲಸದಲ್ಲಿ ತುಂಬ ಸಹಾಯ ಮಾಡಿತು.

ಕಾಲಕ್ಷಮೇಣ ಅವರು ಚಾಣಾಕ್ಷ ವಕೀಲರೆಂದು ಹೆಸರು ಪಡೆದರು. ಕೋರ್ಟಿನಲ್ಲಿ ನರೀಮನರ ಪ್ರಶ್ನೆಗಳಿಗೆ ಉತ್ತರ ಕೊಡುವುದು ಭಯ ತರಿಸುವಂಥ ಪ್ರಸಂಗವೆಂಬ ಭಾವನೆ ಬೆಳೆಯತೊಡಗಿತು.

ಒಮ್ಮೆ ಕೋರ್ಟಿನಲ್ಲಿ ಕಿರಿಯ ವಕೀಲರೊಬ್ಬರನ್ನು ಮ್ಯಾಜಿಸ್ಟ್ರೇಟರು ಹೊರಗೆ ಹೋಗಲು ಆಜ್ಞಾಪಿಸಿದಾಗ, ಈ ಆಜ್ಞೆಯ ವಿರುದ್ಧ ಸಭೆ ಸೇರಿಸಿ, ಮ್ಯಾಜಿಸ್ಟ್ರೇಟರು ಕ್ಷಮೆ ಕೇಳುವ ತನಕ ಕೋರ್ಟಿಗೆ ಬಹಿಷ್ಕಾರ ಹಾಕಿಸಿದ್ದರು ನರೀಮನ್. ಮುಂದೆ ಮಹಮ್ಮದಾಲಿ ಜಿನ್ನಾರವರ ಮಧ್ಯಸ್ಥಿಕೆಯಿಂದಾಗಿ ಸೌಹಾರ್ದದ ವಾತಾವರಣ ವುಂಟಾಯಿತು. ಈ ಬಹಿಷ್ಕಾರದ ಪ್ರಸಂಗವನ್ನು ನಾವು ಜ್ಞಾಪಿಸಿಕೊಳ್ಳುವಾಗ, ಆಗ ಆಳುತ್ತಿದ್ದುದು ಬ್ರಿಟಿಷ್ ಸರ್ಕಾರ ವೆಂಬುದನ್ನು ನೆನಪಿಸಿಕೊಳ್ಳಬೇಕು.

ಯಾವ ರಂಗದಲ್ಲೂ ಬ್ರಿಟಿಷರ ವಿರುದ್ಧ ಬಹಿಷ್ಕಾರದ ಮಾತೇ ಇರಲಿಲ್ಲ. ಆದರೆ ನ್ಯಾಯಾನ್ಯಾಯದ ವಿವೇಚನೆ ಮಾಡುವಾಗ ಸರ್ಕಾರದ ಪ್ರಬಲ ಶಕ್ತಿಗೆ ಹೆದರಬೇಕಾದ ಅಗತ್ಯವಿಲ್ಲವೆಂಬ ಧೈರ್ಯ ವನ್ನೇ ಪ್ರದರ್ಶಿಸಿದವರು ನರೀಮನ್. ಈ ಮನೋವೃತ್ತಿ ಯಿಂದಾಗಿಯೇ ಅವರು ರಾಜಕಾರಣದಲ್ಲಿ ಬಹುಬೇಗ ಮುಂದೆಬಂದರು. ಹಾಗೆಯೇ ಇಂಥ ಮನೋವೃತ್ತಿ ಯಿಂದಾಗಿಯೇ ರಾಜಕಾರಣದಲ್ಲಿ ಕೆಳಗೆ ಕೂಡ ಬಿದ್ದರು.

ವಕೀಲ ವೃತ್ತಿ ದೇಶಸೇವೆ, ಸಮಾಜ ಸೇವೆಗಳಿಗೆ ಅವಕಾಶ ಮಾಡಿಕೊಡುವುದೆಂದು ನರೀಮನರಿಗೆ ದೃಢ ವಾದ ನಂಬಿಕೆ. ಈ ವೃತ್ತಿಯನ್ನು ಆಶ್ರಯಿಸಿ ಹನ್ನೊಂದು ವರ್ಷಗಳಲ್ಲೇ ಅವರು ಪ್ರಸಿದ್ಧ ವಕೀಲರೆಂದೂ, ಸಾರ್ವಜನಿಕ ರಂಗದಲ್ಲಿ ಗಮನಾರ್ಹ ವ್ಯಕ್ತಿಯೆಂದೂ ಹೆಸರು ಪಡೆದರು.

ನರೀಮನರು ಹೈಕೋರ್ಟಿನ ತಡೆಯಾಜ್ಞೆಯ ಪ್ರತಿಯನ್ನು ತಂದರು.

ಬ್ರಿಟಿಷ್ ಸರ್ಕಾರ ಆಳುತ್ತಿದ್ದ ಆ ಕಾಲದಲ್ಲಿ ಹೆಚ್ಚಿನ ಸಾರ್ವಜನಿಕ ಸೇವೆಗೆ ಅವಕಾಶ ಸಿಗುತ್ತಿದ್ದುದು ನಗರ ಸಭೆಗಳಲ್ಲಿ ಮಾತ್ರ. ನಮ್ಮ ದೇಶದ ದೊಡ್ಡದೊಡ್ಡ ನಾಯಕರಾಗಿದ್ದ ನೆಹರೂ, ಪಟೇಲ್, ಸುಭಾಷ್‌ಚಂದ್ರ ಬೋಸ್, ರಾಜಗೋಪಾಲಚಾರಿ ಮೊದಲಾದವರಿಗೆಲ್ಲ ಆರಂಭದಲ್ಲಿ ನಗರ ಸಭೆಗಳ ಸಂಪರ್ಕವಿತ್ತು. ಮುಂಬಯಿ ನಗರಸಭೆ ಅಥವಾ ಕಾರ್ಪೊರೇಷನ್‌ನಲ್ಲಿ ಹಿಂದೆ ಫಿರೋಜ್‌ಷಾ ಮೆಹತಾರಂಥ ಪ್ರಸಿದ್ಧ ನಾಯಕರಿದ್ದರು.

ಹೀಗಾಗಿ ಮುಂಬಯಿಯ ಮುನಿಸಿಪಲ್ ಕಾರ್ಪೋ ರೇಷನ್ ಆಡಳಿತದಲ್ಲಿ ಸಾರ್ವಜನಿಕ ಸೇವೆಯಲ್ಲಿ ಆಸಕ್ತಿಯುಳ್ಳ ಯುವಕರನ್ನು ಮುಂದೆ ತರಬೇಕು ಎಂದು ಸರ್ದಾರ್ ಪಟೇಲರ ಅಣ್ಣ ವಿಠ್ಠಲಭಾಯಿ ಪಟೇಲರು ಯೋಚಿಸಿದಾಗ, ನರೀಮನರ ಮೇಲೆ ಅವರ ಕಣ್ಣು ಬಿತ್ತು. ಅವರ ಆಯ್ಕೆ ಯೋಗ್ಯವಾದುದಾಗಿತ್ತು. ಏಕೆಂದರೆ, ೧೯೧೪ ರಲ್ಲಿ ಸರ್ ಫಿರೋಜ್‌ಷಾ ಮೆಹತಾರ ನಿಧನದಿಂದ ಉಂಟಾದ ನಗರ ಸಭೆಯ ನಾಯಕತ್ವದ ಕೊರತೆಯನ್ನು ಮುಂದೆ ಯೋಗ್ಯ ರೀತಿಯಲ್ಲಿ ತುಂಬಿದುದು ನರೀಮನರೆ.

೧೯೨೨ ರಲ್ಲಿ ನರೀಮನ್ ಮುಂಬಯಿ ಮುನಿಸಿಪಲ್ ನಗರ ಸಭೆಯನ್ನು ಪ್ರವೇಶಿಸಿದರು. ಅಲ್ಲಿ ವಿಠ್ಠಲಭಾಯಿ ಪಟೇಲರು ತಮ್ಮ ಅಧ್ಯಕ್ಷತೆಯಲ್ಲಿ ಸ್ಥಾಪಿಸಿದ್ದ ಮುನಿಸಿಪಲ್ ನ್ಯಾಷನಲಿಸ್ಟ್ ಪಕ್ಷದಲ್ಲಿ ನರೀಮನ್ ಉಪಾಧ್ಯಕ್ಷರಾದರು. ಆಮೇಲೆ ಸ್ವಲ್ಪ ಸಮಯದಲ್ಲೆ ವಿಠ್ಠಲಭಾಯಿ ಪಟೇಲರು ಕೇಂದ್ರೀಯ ಶಾಸನ ಸಭೆಯ ಸಭಾಪತಿಯಾಗಿ ಆರಿಸಲ್ಪಟ್ಟು ಈ ಅಧ್ಯಕ್ಷ ಪದವಿಗೆ ರಾಜೀನಾಮೆ ಕೊಟ್ಟಾಗ ನರೀಮನರೇ ಮುನಿಸಿಪಲ್ ನ್ಯಾಷನಲಿಸ್ಟ್ ಪಕ್ಷದ ನಾಯಕತ್ವ ವಹಿಸಿದರು.

ದೀರ್ಘಕಾಲದ ಸಾರ್ವಜನಿಕ ಸೇವೆಯಿಂದ ಮಾತ್ರ ದೊರಕಬಹುದಾಗಿದ್ದ ನಾಯಕತ್ವ ನರೀಮನರಿಗೆ ಸಣ್ಣ ವಯಸ್ಸಿನಲ್ಲೇ ದೊರಕಿತ್ತು. ಇದಕ್ಕೆ ಅವರ ಅಸಾಮಾನ್ಯ ಪ್ರತಿಭೆ, ಕರ್ತವ್ಯ ಶೀಲತೆ, ಎಂಥ ಕೆಲಸವನ್ನೂ ನಿರ್ವಹಿಸಿ ಕೊಂಡು ಹೋಗಬಲ್ಲಂಥ ದಕ್ಷತೆಗಳೇ ಕಾರಣ.

ನಗರ ಸಭೆಯಲ್ಲಿ ನರಿಮನರ ಪಕ್ಷಕ್ಕೆ ಬಹುಮತ ವಿರಲಿಲ್ಲ. ಸಮಾಜದ ಬೇರೆಬೇರೆ ಅಂಗಗಳಿಂದ ಆರಿಸಿ ಬಂದ ಪ್ರತಿಭಾವಂತರು ಅಲ್ಲಿದ್ದರು. ಇವರಲ್ಲಿ ಹೆಚ್ಚಿನವರು ನರೀಮನರ ರಾಜಕೀಯ ವಿಚಾರಗಳನ್ನು ವಿರೋಧಿಸು ವಂಥವರು. ಆದರೂ ನರೀಮನರನ್ನು ನಗರ ಸಭೆಯ ನ್ಯಾಯ, ಆದಾಯ ಮತ್ತು ಸಾರ್ವಜನಿಕ ಉದ್ದೇಶಗಳ ಸಮಿತಿಗೆ ಆಯ್ಕೆ ಮಾಡಲಾಯಿತು.

ನರೀಮನರನ್ನು ನಗರ ಸಭೆಯ ಸ್ಥಾಯೀ ಸಮಿತಿಗೆ ಆರಿಸಿದಾಗ, ಈ ಸಮಿತಿಯ ಸಭೆಗಳಿಗೆ ಬರುತ್ತಿದ್ದ ಸದಸ್ಯರಿಗೆ ಕೊಡಲಾಗುತ್ತಿದ್ದ ಮೂವತ್ತು ರೂಪಾಯಿಗಳ ಭತ್ತೆಯನ್ನು ಸ್ವೀಕರಿಸಲು ಅವರು ಒಪ್ಪಲಿಲ್ಲ. ನಗರ ಸಭೆಯಂಥ ಸಂಸ್ಥೆಯು ಸೇವೆಗಾಗಿ, ಲಾಭಕ್ಕಾಗಿಯಲ್ಲ ಎಂದು ಅವರು ತಿಳಿದಿದ್ದರು.

ಟ್ರಾಂ ಬಂಡಿಗಳ ದರಗಳ ಪ್ರಕರಣ

೧೯೨೩ ರಲ್ಲಿ ಆಗ ಮುಂಬಯಿಯಲ್ಲಿ ಟ್ರಾಂ ಬಂಡಿ ಗಳನ್ನು ನಡೆಸುತ್ತಿದ್ದ ಬ್ರಿಟಿಷ್ ಕಂಪೆನಿಯು ಟ್ರಾಂ ದರಗಳನ್ನು ಹೆಚ್ಚಿಸಲು ನಿರ್ಧರಿಸಿತು. ದರಗಳನ್ನು ಹೆಚ್ಚಿಸುವ ಮೊದಲು ಕಂಪೆನಿ ನಗರ ಸಭೆಯ ಅನುಮತಿ ಪಡೆಯಬೇಕಾಗಿತ್ತು. ಈ ಬೇಡಿಕೆಗೆ ಮನ್ನಣೆ ಕೊಡಬೇಕೆಂದು, ನಗರ ಸಭೆಯ ಮುಖ್ಯಾಧಿಕಾರಿ ಸಭೆಯಲ್ಲಿ ಹೇಳಿದನು. ಈ ಸೂಚನೆಯನ್ನು ಅಂಗೀಕರಿಸಬೇಕೆಂದು ಒಬ್ಬ ಸದಸ್ಯರು ಒಂದು ಗೊತ್ತು ವಳಿಯನ್ನು ಮಂಡಿಸಿದರು. ಇನ್ನೊಬ್ಬ ಸದಸ್ಯರು ಈ ಸೂಚನೆಯನ್ನು ಮುಂದೆ ಅಸ್ತಿತ್ವದಲ್ಲಿ ಬರಲಿರುವ ಹೊಸ ನಗರ ಸಭೆಯು ಚರ್ಚಿಸಬೇಕೆಂದು ಒಂದು ತಿದ್ದುಪಡಿ ತಂದರು. ಚರ್ಚೆಯಾಗಿ ಈ ತಿದ್ದುಪಡಿಗೆ ಸಮಸಂಖ್ಯೆಯ ಮತಗಳು ದೊರಕಿದಾಗ, ಅಧ್ಯಕ್ಷರು ತಮ್ಮ ಮತ ಹಾಕಿ ತಿದ್ದುಪಡಿ ಅಸ್ವೀಕೃತವಾಗಿದೆಯೆಂದು ಸಾರಿದರು. ಎಂದರೆ ಟ್ರಾಂ ದರಗಳನ್ನು ಹೆಚ್ಚಿಸಬಹುದು ಎಂದಾಯಿತು.

ಟ್ರಾಂ ದರಗಳನ್ನು ಹೆಚ್ಚಿಸಲು ಒಪ್ಪಿಗೆ ಕೊಡುವ ಗೊತ್ತುವಳಿಯ ಪರವಾಗಿ ಮಾತು ಕೊಟ್ಟ ಕೆಲವು ಸದಸ್ಯರಿಗೆ ಟ್ರಾಂ ಕಂಪೆನಿಯೊಂದಿಗೆ ಹಣಕಾಸಿನ ಸಂಬಂಧವಿತ್ತು. ಈ ಹೆಚ್ಚಳವನ್ನು ಮುಂಬಯಿಯ ನಾಗರಿಕರು ವಿರೋಧಿ ಸಿದ್ದರು. ಇದನ್ನು ವಿರೋಧಿಸಿ ಹಲವಾರು ಸಭೆಗಳು ಜರಗಿದ್ದವು.

ಆದರೂ ಟ್ರಾಂ ಕಂಪೆನಿಯೊಂದಿಗೆ ಸಂಬಂಧವಿದ್ದ ನಗರ ಸಭೆಯ ಸದಸ್ಯರ ಸಹಾಯದಿಂದ ಈ ಹೆಚ್ಚಳವನ್ನು ದೊರಕಿಸಿಕೊಳ್ಳಬಹುದೆಂದು ಟ್ರಾಂ ಕಂಪೆನಿ  ನಂಬಿತ್ತು. ಆದರೆ ಮುಂಬಯಿಯ ನಾಗರಿಕರ ಪರವಾಗಿ ಮುಂದೆ ಬಂದ ನರೀಮನ್, ನಗರ ಸಭೆಯ ಕೆಲವು ಸದಸ್ಯರಿಗೆ ಟ್ರಾಂ ಕಂಪೆನಿಯೊಂದಿಗೆ ಆರ್ಥಿಕ ಸಂಬಂಧವಿದ್ದುದರಿಂದ, ನಗರ ಸಭೆಯ ಒಪ್ಪಿಗೆಯ ಗೊತ್ತುವಳಿ ನ್ಯಾಯಬಾಹಿರ ವೆಂದು ಸಾರಬೇಕೆಂದು ಹೈಕೋರ್ಟಿಗೆ ಅರ್ಜಿ ಸಲ್ಲಿಸಿ ಗೆದ್ದುಬಂದರು.

ದರಗಳನ್ನು ಹೆಚ್ಚಿಸಲು ಒಪ್ಪಿಗೆ ಕೊಡುವ ಗೊತ್ತು ವಳಿಯನ್ನು ಸ್ವೀಕರಿಸಲು ನಗರ ಸಭೆಯ ಸಭೆ ಸೇರಿತ್ತು. ಇನ್ನೇನು ನಿರ್ಣಯವನ್ನು ಸ್ವೀಕರಿಸಬೇಕು, ಅದಕ್ಕೆ ಕೆಲವೇ ನಿಮಿಷಗಳಿಗೆ ಮೊದಲು, ನರೀಮನ್ ಹೈಕೋರ್ಟಿನ ತಡೆಯಾಜ್ಞೆಯ ಅಧಿಕೃತ ಪ್ರತಿಯನ್ನು ತಂದರು ; ನಾಗರಿಕರ ಹಿತವನ್ನು ಕಡೆಗಣಿಸುವಂಥ ಗೊತ್ತುವಳಿಯನ್ನು ನಗರ ಸಭೆ ಅಂಗೀಕರಿಸದಂತೆ ಮಾಡಿದರು.

ಈ ಸಂಬಂಧದ ವಿಚಾರಣೆಯ ಪ್ರಗತಿಯನ್ನೂ, ಕೋರ್ಟಿನ ನಿರ್ಣಯವನ್ನೂ ಕುತೂಹಲದಿಂದ ಕಾಯು ತ್ತಿದ್ದ ಮುಂಬಯಿಯ ನಾಗರಿಕರಿಗೆ ನರೀಮನ್‌ರ ವಿಜಯ ದಿಂದ ಸಡಗರವೇ ಸಡಗರ.

ಮತ್ತೆ ಹೈಕೋರ್ಟಿಗೆ

ಮುಂದೆ, ಮುಂಬಯಿಯ ಗವರ್ನರರಾಗಿದ್ದ ಸರ್ ಜಾರ್ಜ್ ಲಾಯಡ್‌ರವರು ಅಧಿಕಾರ ಬಿಡುವ ಮುನ್ನ ನಗರ ಸಭೆ ಅವರಿಗೆ ಮಾನಪತ್ರ ಸಲ್ಲಿಸಬೇಕೆಂದು ನಿರ್ಧರಿಸಿತು. ಈ ನಿರ್ಣಯದ ವಿರುದ್ಧ ಹೈಕೋರ್ಟಿಗೆ ಅರ್ಜಿ ಸಲ್ಲಿಸುವ ಎದೆಗಾರಿಕೆ ತೋರಿಸಿದವರು ನರೀಮನ್. ಇದು ನಗರ ಸಭೆಯ ಕೆಲಸವಲ್ಲ ಎಂದು ಅವರು ವಾದಿಸಿದರು.

ಭಾರತವನ್ನು ಆಗ ಆಳುತ್ತಿದ್ದ ಬ್ರಿಟಿಷ್ ಸರ್ಕಾರದ ಪ್ರತಿನಿಧಿಗೆ ಗೌರವ ತೋರುವುದು ನಮ್ಮ ಸ್ವಾಭಿಮಾನಕ್ಕೆ ಒಗ್ಗದ ವಿಚಾರವೆಂದು ಅವರು ತಿಳಿದಿದ್ದರು. ಹೈಕೋರ್ಟು ನರೀಮನ್‌ರು ತಡವಾಗಿ ಅರ್ಜಿ ಸಲ್ಲಿಸಿದರು ಎಂಬ ಕಾರಣದಿಂದ ಮಾತ್ರ ಈ ಅರ್ಜಿಯನ್ನು ತಿರಸ್ಕರಿಸಿತು. ನರೀಮನ್‌ರ ಅರ್ಜಿಯೇ ಸರಿಯಾದುದಲ್ಲ ಎಂದು ಹೇಳುವ ಧೈರ್ಯ ಹೈಕೋರ್ಟಿನ ನ್ಯಾಯಾಧೀಶ ರಿಗಿರಲಿಲ್ಲ.

ನರೀಮನರು ನಗರ ಸಭೆಯಿಂದ ರಾಜಕಾರಣಕ್ಕೆ ಪ್ರವೇಶಿಸಿದ ಕಾಲ ನಮ್ಮ ದೇಶದ ಇತಿಹಾಸದಲ್ಲಿ ಮಹತ್ವದ ರಾಜಕೀಯ ಜಾಗೃತಿಯ ಕಾಲ. ನಾಗರಿಕರಿಗಾಗುವ ಅನ್ಯಾಯವನ್ನು ಪ್ರತಿಭಟಿಸಬೇಕು, ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಅದರ ವಿರುದ್ಧ ಹೋರಾಡಲು ಹಿಂಜರಿಯ ಬಾರದು ಎಂದು ತೋರಿಸಿ ಕೊಟ್ಟ ನರೀಮನ್ ಆಗಲೇ ಮುಂಬಯಿಯ ಜನಪ್ರಿಯ ನಾಯಕರೆನಿಸಿದ್ದರು. ನಗರ ಸಭೆಯಲ್ಲಿ ಅತ್ಯಂತ ನಿಷ್ಠಾವಂತ ಸದಸ್ಯರೆಂದು ನರೀಮನ್ ಹೆಸರು ಪಡೆದರೂ ದೇಶದ ರಾಜಕೀಯ ಹೋರಾಟ ಅವರನ್ನು ಕರೆಯುತ್ತಿತ್ತು.

೧೯೨೫-೩೦ ರ ಮಹತ್ವದ ಬದಲಾವಣೆಯ ವರ್ಷಗಳಲ್ಲಿ ಅವರು ವಿದ್ಯಾರ್ಥಿಗಳ, ಯುವಜನರ, ಕಾರ್ಮಿಕರ ಸಂಘಟನೆ, ನಿರುದ್ಯೋಗ ಪರಿಹಾರ, ವಸತಿಗಾಗಿ ಕಷ್ಟಪಡುತ್ತಿದ್ದ ಬಡ, ಮಧ್ಯಮ ವರ್ಗಗಳು ಇದಿರಿಸಬೇಕಾಗಿದ್ದ ಸಮಸ್ಯೆಗಳ ಪರಿಹಾರ, ಹರಿಜನ ಮಕ್ಕಳ ವಿದ್ಯಾಭ್ಯಾಸ, ವಿದ್ಯಾರ್ಥಿಗಳಿಂದ ಸಮಾಜ ಸೇವೆ ಮಾಡಿಸುವುದು ಇವೇ ಮೊದಲಾದ ಕ್ಷೇತ್ರಗಳಲ್ಲಿ ತುಂಬಾ ದುಡಿಯತೊಡಗಿದರು.

ಮುಂದೆ ಮುಂಬಯಿಯ ಅತ್ಯಂತ ಜನಪ್ರಿಯ ‘ಮೇಯರ್’ ಆಗಿ ಅವರ ಆಯ್ಕೆಯಾ ದಾಗ, ತಾನು ‘ಪ್ರಥಮ ನಾಗರಿಕ’ನಲ್ಲ, ‘ಪ್ರಥಮ ಸೇವಕ’ ಎಂದಿದ್ದರು ನರೀಮನ್.

ಮಹಾರಾಜರ ಅನ್ಯಾಯದ ವಿರುದ್ಧ

ವಕೀಲರಾಗಿ ಅವರು ಗಳಿಸಿದ್ದ ಕೀರ್ತಿ ಒಂದು ಕೊಲೆಯ ಪ್ರಕರಣದಲ್ಲಿ ಅಖಿಲ ಭಾರತಕ್ಕೆ ವ್ಯಾಪಿಸಿತು. ಇದನ್ನು ಬಾವ್ಲಾ ಕೊಲೆ ಮೊಕದ್ದಮೆಯೆನ್ನಲಾಗಿದೆ. ಬಾವ್ಲಾ ಎಂಬವನನ್ನು ಕೊಂದದ್ದು ಒಬ್ಬ ಸಾಮಾನ್ಯ ಕೇಡಿ. ಆದರೆ ಆ ಕೊಲೆಯನ್ನು ಮಾಡಿಸಲು ಕಾರಣರಾದವರು ಭಾರತದ ಒಂದು ದೇಶೀಯ ಸಂಸ್ಥಾನದ ಅರಸರು.

ಆಗಿನ ದೇಶೀಯ ಸಂಸ್ಥಾನದ ಅರಸರಲ್ಲಿ, ಇಂಗ್ಲೆಂಡಿನ ಪ್ರತಿನಿಧಿ ವೈಸರಾಯರ ಕೃಪೆಯೊಂದಿದ್ದರೆ, ತಾವೇನು ಬೇಕಾದರೂ ಮಾಡಬಹುದು ಎಂಬ ಭಾವನೆಯಿತ್ತು. ಈ ಭಾವನೆಯನ್ನು ತೊಲಗಿಸಲು ಕಾರಣರಾದವರು ನರೀಮನ್. ಈ ಕೊಲೆಯ ವಿಚಾರಣೆ ಯಲ್ಲಿ ನರೀಮನ್ ಮಹತ್ವದ ಪಾತ್ರ ವಹಿಸಿದರು. ಇದರಿಂದ, ಸಂಬಂಧಿಸಿದ ಅಪರಾಧಿಗಳಿಗೆ ಶಿಕ್ಷೆ ದೊರಕು ವಂತಾಯಿತು.

ಆದರೆ ಈ ಕೊಲೆಗೆ ಪ್ರೇರಕವಾಗಿದ್ದ ಇಂದೋರ್ ಸಂಸ್ಥಾನದ ಅರಸ ಸರ್ ತುಕೋಜಿರಾವ್ ಹೋಲ್ಕರ್‌ಗೆ ಯಾವ ಶಿಕ್ಷೆ ಸರಿಯಾದೀತು? ಇವರೇ ಆ ಕೊಲೆಗೆ ಕಾರಣರೆಂದು ಸ್ಪಷ್ಟವಾಗಿದ್ದುದರಿಂದ ಅವರ ವಿರುದ್ಧ ಆ ಸಂಸ್ಥಾನದಲ್ಲಿ ಚಳವಳಿ ನಡೆಯಿತು. ಈ ಚಳವಳಿಯ ಯಶಸ್ಸಿಗೆ ನರೀಮನರ ನಾಯಕತ್ವವೂ ಕಾರಣವಾಯಿತು.

ಎಲ್ಲ ಕಡೆಗಳಲ್ಲೂ ‘ಪಿಕೆಟಿಂಗ್’ ನಡೆಸುವ ಅಥವಾ ಬಹಿಷ್ಕಾರ ಹಾಕುವ ಕಾರ್ಯಕ್ರಮ ಈ ಚಳವಳಿಯ ಅಂಗವಾಗಿತ್ತು. ಇಂಥ ಕಾರ್ಯಕ್ರಮದಲ್ಲಿ ಸರ್ಕಾರದ ವಿರುದ್ಧ ನಿಂತವರಿಗೆಲ್ಲ ನರೀಮನ್ ನಾಯಕರಾದರು. ಕೋರ್ಟಿನ ಮುಂದೆ ಬಂದ ಪಿಕೆಟಿಂಗ್ ಅಪರಾಧಿಗಳ ಪರವಾದ ವಕಾಲತ್ತು ವಹಿಸಿ, ಅದಕ್ಕಾಗಿ ಏನೂ ಹಣ ತೆಗೆದುಕೊಳ್ಳದೆ, ಈ ಚಳವಳಿ ಯಶಸ್ವಿಯಾಗಲು ನರೀಮನ್ ಶ್ರಮಿಸಿದರು.

ಈ ಚಳವಳಿಯ ಪರಿಣಾಮವಾಗಿಯೇ ಇಂದೋರಿನ ಮಹಾರಾಜರು ತಮ್ಮ ಸ್ಥಾನವನ್ನು ಕಳೆದುಕೊಂಡರು. ನರೀಮನ್‌ರ ಹೆಸರು ಕೇಳಿದರೇ ದೇಶೀಯ ಸಂಸ್ಥಾನಗಳ ರಾಜರೆಲ್ಲ ಭಯಪಡುವಂತಾಯಿತು.

ನರೀಮನರು ಸೆರೆಮನೆಯಲ್ಲಿ ಬರೆಯುತ್ತಿರುವುದು.

ನರೀಮನರು ಯುವಕರ ಸಭೆಯಲ್ಲಿ ಮಾತನಾಡುತ್ತಿರುವುದು.

ಅವರ ಖ್ಯಾತಿ ಇಡಿಯ ಭಾರತಕ್ಕೆ ಹಬ್ಬುತ್ತಿದ್ದಂತೆಯೇ ನರಿಮನ್‌ರು ಆಗ ರಾಜಕೀಯ ಹೋರಾಟದ ನಾಯಕತ್ವ ವಹಿಸಿದ್ದ ಕಾಂಗ್ರೆಸ್ಸಿನ ಸಮೀಪ ಬಂದರು.

ರಾಷ್ಟ್ರೀಯ ನಾಯಕರಾಗಿ

ದಾಸ್ಯದಿಂದ ನಾಡಿನ ಬಿಡುಗಡೆಯ ಹೋರಾಟದಲ್ಲಿ ಯುವಕರ ಮತ್ತು ವಿದ್ಯಾರ್ಥಿಗಳ ಪಾತ್ರ ಮಹತ್ವದ್ದೆಂದು ನರೀಮನ್ ತಿಳಿದು ಅವರ ಸಂಘಟನೆಗಾಗಿ ದುಡಿಯುತ್ತಿ ದ್ದರು. ಮುಂಬಯಿಯ ವಿದ್ಯಾರ್ಥಿಗಳಿಗೂ ಯುವಕರಿಗೂ ನರೀಮನ್ ಅಚ್ಚು ಮೆಚ್ಚಿನ ನಾಯಕರಾದರು.

೧೯೨೮ರಲ್ಲಿ ಮುಂಬಯಿಯಲ್ಲಿ ಜರಗಿದ ಯುವಕ ಪರಿಷತ್ತಿಗೆ ಅವರೇ ಅಧ್ಯಕ್ಷರು. ಈ ಪರಿಷತ್ತು ಜರಗಿದ ಮೇಲೆ ಮುಂಬಯಿಯಲ್ಲಿ ಯುವದಳವೊಂದು ಪ್ರಾರಂಭವಾಗಿ, ನರೀಮನ್‌ರಿಗೆ ಒಂದು ರಾಜಕೀಯ ವೇದಿಕೆ ಸಿದ್ಧ ವಾಯಿತು. ಈ ಸಂಸ್ಥೆ ಕಾಂಗ್ರೆಸ್ಸಿಗಿಂತಲೂ ತೀವ್ರಗಾಮಿ ಯಾಗಿತ್ತು. ಕಾಂಗ್ರೆಸ್ ಸಂಸ್ಥೆ ಪೂರ್ಣ ಸ್ವರಾಜ್ಯಬೇಕೆಂದು ಕೇಳುವುದಕ್ಕೂ ಮೊದಲೇ ಈ ಸಂಸ್ಥೆ ‘ನಮಗೆ ಬೇಕಾದದ್ದು ಪೂರ್ಣ ಸ್ವರಾಜ್ಯ- ಬ್ರಿಟಿಷರ ಕೃಪೆಯ ಆಡಳಿತವಲ್ಲ’ ಎಂದು ಸಾರಿತ್ತು.

ಅಂದಿನ ಮುಂಬಯಿಯ ತರುಣರಿಗೆ, ವಿದ್ಯಾರ್ಥಿ ಗಳಿಗೆ ನರೀಮನ್‌ರು ಅತ್ಯಂತ ಮೆಚ್ಚಿನ ನಾಯಕ; ಯುವಜನ ಸಂಘಟನೆಯ ಎಲ್ಲ ಪ್ರಯತ್ನಗಳಿಗೆ ಅವರೇ ಮಾರ್ಗದರ್ಶಿ.

ನಾಡಿನ ಸ್ವಾತಂತ್ರ್ಯದ ಹೋರಾಟದ ನಾಯಕತ್ವವನ್ನು ಮಹಾತ್ಮಾ ಗಾಂಧಿಯವರು ವಹಿಸಿದ್ದ ಕಾಲ ಅದು. ಎಲ್ಲೆಲ್ಲೂ ಗಾಂಧೀಜಿಯವರ ವರ್ಚಸ್ಸು. ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳವಳಿ, ವಿದೇಶೀ ಬಟ್ಟೆಯ ಅಂಗಡಿಗಳ, ಸೇಂದಿ ಅಂಗಡಿಗಳ ಮುಂದೆ ಪಿಕೆಟಿಂಗ್ ಅಥವಾ ಬಹಿಷ್ಕಾರ – ಇವೆಲ್ಲ ಯುವಕರ ಆದರ್ಶಗಳಾಗಿದ್ದ ಕಾಲದಲ್ಲಿ ಮುಂಬಯಿಯಲ್ಲಿ ನರೀಮನ್‌ರೇ ಕಾರ್ಯಕ್ರಮ ಗಳ ಮುಂದಾಳು.

ಮಹಾತ್ಮಾ ಗಾಂಧಿಯವರ ದಂಡೀ ಯಾತ್ರೆ, ಉಪ್ಪಿನ ಸತ್ಯಾಗ್ರಹದ ಸಂದರ್ಭದಲ್ಲಿ ಮುಂಬಯಿಯಲ್ಲಿ ಸತ್ಯಾಗ್ರಹ ಮಾಡಿ ಸೆರೆಮನೆಗೆ ಹೋದ ಮೊತ್ತಮೊದಲ ನಾಯಕ ನರೀಮನ್. ಒಂದಕ್ಕಿಂತ ಹೆಚ್ಚು ಸಲ ಜೈಲಿನ ಮುಖ ಕಂಡ ನಾಯಕರು ಇವರೇ.

ಜೈಲು ಸೇರುವುದು ಅಂದಿನ ಸತ್ಯಾಗ್ರಹದ ಒಂದು ಅಂಶವಾಗಿದ್ದರೂ ನರೀಮನ್ ಈ ಅವಕಾಶದ ಒಳ್ಳೆಯ ಉಪಯೋಗವನ್ನೇ ಮಾಡಿಕೊಂಡರು. ಜೈಲುವಾಸದ ಅವಧಿ ಅಂತಃಶೋಧನೆಗೆ ಅವಕಾಶ ಮಾಡಿಕೊಟ್ಟುದರಿಂದ ಅವರು ತಮ್ಮ ನಿರ್ಭೀತ ವಿಚಾರಗಳನ್ನು ಪ್ರಕಟಿಸುವ ಎರಡು ಪುಸ್ತಕಗಳನ್ನು ಬರೆದರು. ‘ಕಾಂಗ್ರೆಸ್ ಎತ್ತ ಸಾಗಿದೆ ?’, ‘ಮುಂದೇನಾಗಬಹುದು ?’ ಎಂಬ ವಿಚಾರ ಗಳನ್ನೇ ಈ ಗ್ರಂಥಗಳಲ್ಲಿ ಅವರು ಚರ್ಚಿಸಿರುವುದು.

ಗಾಂಧೀಜಿಯವರು ಅಂದಿನ ಸ್ವಾತಂತ್ರ್ಯ ಹೋರಾಟದ ನಾಯಕರೆಂದು ಅವರು ಒಪ್ಪಿಕೊಂಡರೂ, ಗಾಂಧೀಜಿ ಯವರ ಎಲ್ಲಾ ವಿಚಾರಗಳನ್ನೂ, ಅಭಿಪ್ರಾಯಗಳನ್ನೂ ಅವರು ಒಪ್ಪಿಕೊಳ್ಳಲಿಲ್ಲ. ಗಾಂಧೀಜಿಯವರ ವಿಚಾರಗಳನ್ನು ಟೀಕಿಸಲು ಎಲ್ಲರೂ ಹೆದರುತ್ತಿದ್ದ ಕಾಲದಲ್ಲಿ ನರೀಮನ್ ಅವುಗಳನ್ನು ನಿರ್ದಾಕ್ಷಿಣ್ಯವಾಗಿ ಟೀಕಿಸಿದ್ದರು.

ಆದರೆ ಬ್ರಿಟಿಷರನ್ನು ಹೊಡೆದೋಡಿಸಲು, ಬ್ರಿಟಿಷರ ಸಾಮ್ರಾಜ್ಯ ಶಾಹಿಯ ವಿರುದ್ಧದ ಹೋರಾಟದಲ್ಲಿ, ಗಾಂಧೀಜಿಯವರ ನಾಯಕತ್ವ ಅನಿವಾರ್ಯವಾದದ್ದೆಂದು ಒಪ್ಪಿಕೊಳ್ಳಬೇಕಾಗು ವುದು ಎಂದು ನರೀಮನ್ ನಂಬಿದ್ದರು.

ಬ್ರಿಟಿಷರು ಭಾರತವನ್ನು ಬಿಟ್ಟು ತೊಲಗಬೇಕು ಎಂಬ ಮಹತ್ವದ ‘ಕ್ವಿಟ್ ಇಂಡಿಯಾ’ ನಿರ್ಣಯ ೧೯೪೨ರ ಆಗಸ್ಟ್ ತಿಂಗಳಲ್ಲಿ ಮುಂಬಯಿಯಲ್ಲಿ ಜರಗಿದ ಕಾಂಗ್ರೆಸ್ ಅಧಿವೇಶನದಲ್ಲಿ ಮಂಡಿಸಲ್ಪಟ್ಟರೂ ಎಷ್ಟೋ ವರ್ಷಗಳಿಗೆ ಮೊದಲೇ, ಎಂದರೆ ೧೯೩೪ ರಲ್ಲಿ ಮುಂಬಯಿಯಲ್ಲಿ ಜರಗಿದ್ದ ಕಾಂಗ್ರೆಸ್ ಅಧಿವೇಶನದಲ್ಲೆ ನರೀಮನ್ ಕಾಂಗ್ರೆಸ್ಸಿ ಗರ ಹಾಗೂ ಭಾರತೀಯರ ಆಸೆಯನ್ನು ಹೀಗೆ ವ್ಯಕ್ತ ಪಡಿಸಿದ್ದರು : “ವರ್ಲಿಯ (ಮುಂಬಯಿಯ ಕಡಲ ತೀರದ ಒಂದು ಹಳ್ಳಿ) ಮೂಲಕ ಬಂದ ಬ್ರಿಟಿಷರು ಅದೇ ದಾರಿಯಲ್ಲಿ ಹಿಂದೆ ಹೋಗುವಂತಾಗುತ್ತದೆ.”

ಮುಂಬಯಿಯ ಜನಪ್ರಿಯ ನಾಯಕ

ಮೂವತ್ತರ ದಶಕದಲ್ಲಿ ನರೀಮನ್ ಮುಂಬಯಿಯ ಕೆಚ್ಚೆದೆಯ, ಜನಪ್ರಿಯ ಕಾಂಗ್ರೆಸ್ ನಾಯಕ. ೧೯೩೦-೩೫ ರ ಅವಧಿಯಲ್ಲಿ ಅವರು ಮುಂಬಯಿ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು. ಅಷ್ಟೇ ಅಲ್ಲ, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿದ್ದರು. ೧೯೩೪ ರಲ್ಲಿ ಮುಂಬಯಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಕೀರ್ತಿಯೆಲ್ಲ ಅವರಿಗೆ ಸಲ್ಲಬೇಕು. ಅವರು ಆ ಅಧಿವೇಶನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದರು.

ಮುಂಬಯಿಯ ಜನತೆಯ ಮೇಲೆ ಅವರಿಗಿದ್ದ ಹಿಡಿತ ಈ ಅಧಿವೇಶನದಲ್ಲಿ ವ್ಯಕ್ತವಾಗಿತ್ತು. ನರೀಮನ್ ಕಾಂಗ್ರೆಸ್ ಸಂಸ್ಥೆಯಲ್ಲಿ ಎಲ್ಲ ಚುನಾವಣೆಗಳಿಗೆ ಸಂಬಂಧಿಸಿದ ಪಾರ್ಲಿ ಮೆಂಟರಿ ಬೋರ್ಡಿನ ಸದಸ್ಯರಾಗಿದ್ದರು ಎನ್ನುವುದ ರಿಂದಲೇ ಕಾಂಗ್ರೆಸ್ ಸಂಸ್ಥೆಯಲ್ಲಿ ಅವರಿಗಿದ್ದ ವಿಶ್ವಾಸ ವ್ಯಕ್ತವಾಗುತ್ತದೆ. ಈ ಬೋರ್ಡಿನ ಸದಸ್ಯರಾಗಿದ್ದು, ಮುಂಬಯಿ ನಗರದಲ್ಲಿ ಚುನಾವಣೆಗಳಿಗೆ ಸಂಬಂಧಿಸಿದ ವಿಚಾರಗಳ ಹೊಣೆ ನರೀಮನ್‌ರದಾಯಿತು.

ಮುಂಬಯಿಯ ಸಮಿತಿಗೆ ಅವರೇ ಅಧ್ಯಕ್ಷರಾದರು. ಅವರು ಗಳಿಸಿದ ಜನಪ್ರಿಯತೆಯಿಂದಾಗಿ ಹೆಚ್ಚು ಕಡಮೆ ಎರಡು ದಶಕಗಳ ಕಾಲ, ಮುಂಬಯಿ ಶಹರಿನಲ್ಲಿ ನರೀಮನ್ ಅತ್ಯಂತ ಮಹತ್ವದ ನಾಯಕ; ಅನಭಿಷಿಕ್ತ ದೊರೆ. ಈ ನಾಯಕತ್ವವನ್ನು ದೃಢಪಡಿಸಿದ ಒಂದು ಪ್ರಕರಣಕ್ಕೆ ನಮ್ಮ ಸ್ವತಂತ್ರ್ಯ ಹೋರಾಟದ ಇತಿಹಾಶದಲ್ಲೂ ಸ್ಥಾನವಿದೆ. ಅದನ್ನು ಹಾರ್ವೆ-ನರೀಮನ್ ಜಗಳದ ಪ್ರಕರಣವೆನ್ನುತ್ತಾರೆ.

ಆಂಗ್ಲರ ಕುಂತತ್ರದ ಕತೆ

೧೯೨೦ ರಲ್ಲಿ ನಮ್ಮ ಸ್ವಾತಂತ್ರ್ಯ ಹೋರಾಟದ ಅಸಹಕಾರ ಚಳವಳಿಯ ಯುಗ ಆರಂಭವಾಗಲಿದ್ದಾಗ, ಹಾರ್ವೆ-ನರೀಮನ್ ಜಗಳ ಆರಂಭವಾಯಿತು.

ಮುಂಬಯಿ ನಗರದಲ್ಲಿ ಜನರ ವಾಸಕ್ಕೆ ತಕ್ಕಷ್ಟು ಸ್ಥಳವಿಲ್ಲ ಎನ್ನುವ ಸಮಸ್ಯೆ ಸಾರ್ವಕಾಲಿಕವಾದದ್ದು. ೧೯೧೮ ರಲ್ಲಿ ಪ್ರಥಮ ಮಹಾಯುದ್ಧ ಮುಗಿದ ಮೇಲೆ ಮುಂಬಯಿಯ ಜನಸಂಖ್ಯೆ ಹೆಚ್ಚುತ್ತಿತ್ತು. ನಗರದ ಬೆಳವಣಿಗೆಗೆ ಜಾಗ ಕಡಮೆ ಎಂದು ಸಮುದ್ರವನ್ನೇ ತುಂಬಿ ಜಾಗ ಪಡೆಯುವ ಒಂದು ಯೋಜನೆಯನ್ನು ಆಗಿನ ಬ್ರಿಟಿಷ್ ಸರ್ಕಾರ ಆರಂಭಿಸಿತು. ಇದಕ್ಕೆ ‘ಬ್ಯಾಕ್‌ಬೇ ಯೋಜನೆ’ಯೆಂದು ಹೆಸರು.

ತೋರಿಕೆಗೆ ಈ ಯೋಜನೆ ಒಳ್ಳೆಯ ಉದ್ದೇಶ ಗಳಿಂದಲೇ ಕೂಡಿತ್ತು. ದಕ್ಷಿಣ ಮುಂಬಯಿಯ ಸಮುದ್ರದ ತಡಿಯಲ್ಲಿ, ಸಮುದ್ರವನ್ನು ತುಂಬಿ ಜಾಗ ಪಡೆಯುವುದು, ಹಾಗೆಯೇ ಮುಂಬಯಿಯ ಪರಿಸರದಲ್ಲಿ ಬಡವರಿಗಾಗಿ ೫೦,೦೦೦ ವಸತಿಗಳನ್ನು ೬೨೫ ಚಾಳ್‌ಗಳನ್ನು ಕಟ್ಟುವುದು – ಇವೇ ಈ ಯೋಜನೆಯ ಮುಖ್ಯ ಉದ್ದೇಶಗಳು.

ಆದರೆ ನರೀಮನರಿಗೆ ಈ ಯೋಜನೆಯೊಳಗೆ ಅಡಕವಾಗಿದ್ದ ಸ್ವಾರ್ಥ, ಭ್ರಷ್ಟಾಚಾರಗಳು ಹೊಳೆಯದೆ ಹೋಗಲಿಲ್ಲ. ಬಡವರಿಗೆಂದೇ ಆದರೆ ಆಗಿನ ಕಾಲದಲ್ಲಿ ಮೂವತ್ತು ಕೋಟಿ ರೂಪಾಯಿ ಖರ್ಚಿನ ಈ ಯೋಜನೆ ಯೇಕೆ ? ಆಗಲೂ ವಸತಿಯ ಸಮಸ್ಯೆ ಮುಂಬಯಿಯ ನಾಗರಿಕರನ್ನು ಕಾಡುತ್ತಿದ್ದರೂ ಕಡಮೆ ಖರ್ಚಿನಿಂದ ಜಾಗ ಪಡೆದು ಬಡವರಿಗಾಗಿ ಕಟ್ಟಡಗಳನ್ನು ಕಟ್ಟುವುದು ಕಷ್ಟದ ಮಾತಾಗಿರಲಿಲ್ಲ.

ಆದರೆ ಆಗ ಇದ್ದ ಆಂಗ್ಲ ಸರ್ಕಾರೀ ಅಧಿಕಾರಿಗಳ ಉದ್ದೇಶ ಬೇರೆಯೇ ಆಗಿತ್ತು. ಈ ಕೆಲಸಕ್ಕಾಗಿಯೇ ಪ್ರತ್ಯೇಕವಾದ ಒಂದು ಆಡಳಿತದ ಅಧಿಕಾರ ಮಂಡಲವನ್ನು ನಿರ್ಮಿಸಿ, ಅದು ಬ್ರಿಟಿಷರ ತನಿಖೆಗೆ ಮಾತ್ರ ಒಳಪಡುವಂಥ ಅಧಿಕಾರ ಮಂಡಲವೆಂದು ಸಾರಿದರು. ಎಂದರೆ, ಆಗ ಜನರೆಲ್ಲ ನಿರೀಕ್ಷಿಸುತ್ತಿದ್ದ ರಾಜಕೀಯ ಸುಧಾರಣೆಗಳು ಒಂದು ವೇಳೆ ಬಂದರೂ ಅಂಥ ಸಂದರ್ಭದಲ್ಲಿ ಭಾರತೀಯ ಮಂತ್ರಿಗಳು ಅಧಿಕಾರಕ್ಕೆ ಬರುವಂತಾದರೂ ಈ ಯೋಜನೆಯ ವಿಷಯದಲ್ಲಿ ಮಾತ್ರ ಯಾವ ಭಾರತೀಯ ಮಂತ್ರಿಯೂ ಕೈ ಹಾಕುವಂತಿರಲಿಲ್ಲ.

ಬ್ರಿಟಿಷ್ ಉದ್ಯಮಿಗಳಿಗೆ ಪ್ರೋತ್ಸಾಹ ಕೊಡಲು, ದೊರಕಬಹುದಾದ ಲಾಭವನ್ನೆಲ್ಲ ಬ್ರಿಟಿಷ್ ಜನರೇ ಹಂಚಿ ಕೊಳ್ಳಲು ಈ ಯೋಜನೆ ತುಂಬ ಸಹಾಯ ಮಾಡು ವಂತಿತ್ತು. ನೆಪಮಾತ್ರಕ್ಕೆ ಇದು ಮುಂಬಯಿಯ ಬಡ ಜನರಿಗೆ ಸಹಾಯ ಮಾಡುವಂಥ ಯೋಜನೆ.

೧೯೨೦ ರ ಆಗಸ್ಟ್ ತಿಂಗಳಲ್ಲಿ ಈ ಸಂಬಂಧದ ಒಂದು ಮಸೂದೆಯನ್ನು ಆಗಿದ್ದ ವಿಧಾನ ಸಭೆಯಲ್ಲಿ ಸರ್ಕಾರ ಮಂಡಿಸಿತು ; ಆದರೆ ಮೂರು ತಿಂಗಳ ಮೊದಲೇ ಮೇ ತಿಂಗಳಲ್ಲಿ ಹೆಚ್ಚು ಕಡಮೆ ಒಂದು ಕೋಟಿ ರೂಪಾಯಿ ಬೆಲೆಯ, ಸಮುದ್ರದಿಂದ ಹೂಳೆತ್ತುವ ಮತ್ತಿತರ ಉಪಕರಣ ಗಳಿಗಾಗಿ ಬೇಡಿಕೆಯನ್ನು ಸಲ್ಲಿಸಲಾಗಿತ್ತು. ಇದರಿಂದಲೇ ಆಗಿನ ಅಧಿಕಾರಿಗಳ ದುರುದ್ದೇಶ ಬಯಲಿಗೆ ಬರುವಂತಿತ್ತು.

ವಿಧಾನ ಸಭೆಯು ಈ ಯೋಜನೆಯನ್ನು ಒಪ್ಪಿ ಕೊಳ್ಳುವ ಮೊದಲೇ ಎಂಥೆಂಥ ಸಾಮಗ್ರಿಗಳನ್ನು ಎಲ್ಲಿಂದ ಕೊಳ್ಳಬೇಕು ಎನ್ನುವ ವಿಚಾರ ನಿರ್ಧಾರ ಆಗಿಹೋಗಿತ್ತು. ಚಾಳ್‌ಗಳನ್ನು ಕಟ್ಟುವ ಕೆಲಸದ ವಿಚಾರವೂ ಹೀಗೆಯೇ. ಮನಬಂದಂತೆ ಜಾಗಗಳನ್ನು ಆರಿಸಿಕೊಂಡು, ಈ ಜಾಗಗಳನ್ನು ಒದಗಿಸಿ ಕೊಳ್ಳುವುದು ಸಾಧ್ಯವೇ, ಅವು ಯೋಗ್ಯವೇ ಎಂಬುದನ್ನೂ ವಿಚಾರಿಸದೆ, ತೋರಿಕೆಗೆ ಬಡವರಿಗಾಗಿ ಮನೆ ಕಟ್ಟುವ ಯೋಜನೆಯನ್ನು ಪ್ರಕಟಿಸಿದ್ದರು.

ನರೀಮನರ ಪ್ರತಿಭಟನೆ

ಈ ಯೋಜನೆಯ ಹಿಂದೆ ಆಂಗ್ಲ ಅಧಿಕಾರಿಗಳ ಜೇಬನ್ನು ತುಂಬುವ ದುರುದ್ದೇಶವಿದೆಯೆಂದು ಮೊದಲು ಹೊಳೆದುದು ನರೀಮನರಿಗೆ ಮಾತ್ರ.

ತುಂಬ ಧೈರ್ಯದಿಂದ, ಮುಂಬಯಿಯ ಬೆಳವಣಿಗೆ ಗಾಗಿ ರಚಿಸಲಾದ ಈ ಅಧಿಕಾರ ಮಂಡಲದ ಅಂತರಂಗ ವನ್ನು ಶೋಧಿಸಿ, ಈ ಭ್ರಷ್ಟಾಚಾರದ ಕಡೆ ಸಾರ್ವಜನಿಕರ ಗಮನವನ್ನು ಸೆಳೆದು ಇದರ ವಿರುದ್ಧ ಹೋರಾಡಲೇ ಬೇಕೆಂದು ನರೀಮನ್ ನಿರ್ಧರಿಸಿದರು. ಈ ವಿಚಾರಕ್ಕೇ ಮಹತ್ವಕೊಟ್ಟು ಅವರು ಮುಂಬಯಿ ವಿಧಾನ ಮಂಡಲಕ್ಕೂ ಆರಿಸಿ ಬಂದರು.

ಈ ಭ್ರಷ್ಟಾಚಾರದ ವಿರುದ್ಧ ಹೋರಾಡುವುದೇ ತನ್ನ ಪ್ರಪ್ರಥಮ ಕರ್ತವ್ಯವೆನ್ನುವಂತೆ ಎಲ್ಲ ಕಡೆಗಳಲ್ಲೂ ಮುಂಬಯಿ ಬೆಳವಣಿಗೆಯ ಅಧಿಕಾರ ಮಂಡಲದ ಅನ್ಯಾಯದ ಕತೆಗಳನ್ನೆಲ್ಲ ಬಹಿರಂಗಪಡಿಸತೊಡಗಿದರು. ಇವುಗಳ ತನಿಖೆ ನಡೆಯಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗ ಬೇಕು ಎಂದು ಸಾರತೊಡಗಿದರು.

ಮೊದಮೊದಲು ಸರ್ಕಾರ ಈ ಬೇಡಿಕೆಗೆ ಜಗ್ಗಲಿಲ್ಲ. ಆದರೆ ನರೀಮನರು, ಈ ವಿಭಾಗಕ್ಕೆ ಸಂಬಂಧಿಸಿದ ಹಿರಿಯ ಅಧಿಕಾರಿಗಳೆಲ್ಲ ವಂಚಕರೂ, ಲಂಚಕೋರರೂ ಆಗಿದ್ದಾರೆಂದು ಖಡಾಖಂಡಿತವಾಗಿ ಹೇಳಲಾರಂಭಿಸಿದಾಗ ಈ ವಿಚಾರದಲ್ಲಿ ಯಾವ ತನಿಖೆಯೂ ಅಗತ್ಯವಿಲ್ಲವೆಂದು ತಡೆಯುವುದು ಆಗಿನ ಆಂಗ್ಲ ಸರ್ಕಾರಕ್ಕೂ ಕಷ್ಟವಾಯಿತು.

ಹೀಗಾಗಿ, ಆಗ ಅಲಹಾಬಾದ್ ಹೈಕೋರ್ಟಿನಲ್ಲಿ ಮುಖ್ಯ ನ್ಯಾಯಾಧೀಶರಾಗಿದ್ದ ಸರ್ ಗ್ರಿಮ್‌ವುಡ್ ಮೇರ್ಸ್ ಎಂಬವರ ಅಧ್ಯಕ್ಷತೆಯಲ್ಲಿ ಈ ‘ಬ್ಯಾಕ್-ಬೇ’ ಕಾರ್ಯ ಕ್ರಮದ ತನಿಖೆಗಾಗಿ ಒಂದು ವಿಚಾರಣಾ ಸಮಿತಿಯನ್ನು ನೇಮಿಸಲಾಯಿತು. ಈ ತನಿಖೆಯಲ್ಲಿ ನರೀಮನರು ಕೊಟ್ಟ ಸಾಕ್ಷ್ಯವೇ ಮುಂದೆ ನರೀಮನರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಕಾರಣವಾಯಿತು. ಈ ಮೊಕದ್ದಮೆ ಯೇ ಹಾರ್ವೆ-ನರೀಮನ್ ಮೊಕದ್ದಮೆ.

ಮೇರ್ಸ್ ಸಮಿತಿ ವಿಚಾರಣೆಗೆ ಹೊರಟಾಗ ಎಲ್ಲ ಬಗೆಯ ಸಾಕ್ಷ್ಯವನ್ನೂ ಆಮಂತ್ರಿಸಿತ್ತು. ಸರ್ಕಾರಿ ಅಧಿಕಾರಿಗಳು ಮಾಡಿರಬಹುದಾದ ಅನ್ಯಾಯದ ವಿವರ ವಿದ್ದವರೆಲ್ಲ ಅವುಗಳನ್ನು ಸಮಿತಿಯ ಇದಿರು ತರಬೇಕೆಂದು ಕರೆಕೊಡಲಾಗಿತ್ತು. ನರೀಮನರಿಗೆ ಬೇರೆಯೇ ಪತ್ರ ಬರೆದು ‘ಬರವಣಿಗೆಯ ಮೂಲಕ, ಸಾಧ್ಯವಾದರೆ ಸ್ವತಃ ಹಾಜರಾಗಿ ಎಲ್ಲ ವಿವರ ಒಪ್ಪಿಸಬೇಕು’ ಎಂದು ವಿನಂತಿಸಲಾಗಿತ್ತು. ಹೀಗಿದ್ದೂ ನರೀಮನರು ಕೊಟ್ಟ ಸಾಕ್ಷ್ಯವನ್ನೇ ಆಧರಿಸಿ ಮಾನನಷ್ಟ ಮೊಕದ್ದಮೆಯೇಕೆ ? ಅವರು ಒದಗಿಸಿದ ಮಾಹಿತಿಯಿಂದ ಅಧಿಕಾರಿಗಳು ತತ್ತರಿಸಿ ಹೋದರು.

ನರೀಮನರು ಸ್ವತಃ ಆರೋಪಿಗಳ ಪಾಟೀಸವಾಲು ನಡೆಸಿದರು.

ಲಂಚ ಕೊಡುವವನೂ ಲಂಚ ಪಡೆಯುವವನೂ ಅಪರಾಧಿ ಯೆಂದು ತಿಳಿಯಲಾಗುತ್ತಿದ್ದ ಸಮಯದಲ್ಲಿ, ನರೀಮನರು ಈ ಅನ್ಯಾಯಗಳ ವಿವರಗಳನ್ನು ಸಂಗ್ರಹಿಸಲು ಪಟ್ಟ ಕಷ್ಟ ಅಷ್ಟಿಷ್ಟಲ್ಲ.   “ನನ್ನ ಬಳಿ ಇರುವ ವಿವರಗಳು ಸತ್ಯವೇ ಅಲ್ಲವೇ ಎಂದು ನೀವೇ ಪರಿಶೀಲಿಸಿ ನೋಡಿ” ಎಂದು ಅವರು ಮೇರ್ಸ್ ಸಮಿತಿಗೆ ಸೂಚಿಸಿದರೂ ಅವರು ಕೊಟ್ಟ ಸಾಕ್ಷ್ಯದ ಆರದಿಂದಲೇ ಅವರ ಮುಖಕ್ಕೆ ಮಸಿ ಬಳೆದು ಅವರನ್ನು ಜೈಲಿಗಟ್ಟಬೇಕೆಂದು ಪ್ರಯತ್ನಿಸಲಾಯಿತು.

ವಿಜಯ

ನರೀಮನರು ಹೋರಾಟ ಮಾಡಿದ್ದು ಬಲಾಢ್ಯ ಬ್ರಿಟಿಷ್ ಸರ್ಕಾರದ ವಿರುದ್ಧ. ಹಾರ್ವೆಯವರು ಮುಂಬಯಿಯ ಬೆಳವಣೆಗೆಯ ಅಧಿಕಾರ ಮಂಡಲಕ್ಕೆ ಸಂಬಂಧಿಸಿದ ಹಿರಿಯ ಆಂಗ್ಲ ಅಧಿಕಾರಿ. ಇವರು ನರೀಮನರ ವಿರುದ್ಧ ಮೊಕದ್ದಮೆ ನಡೆಸಲು ಸರ್ಕಾರವೇ ಅರವತ್ತು ಸಾವಿರ ರೂಪಾಯಿಗಳಷ್ಟು ಹಣವನ್ನು ಅವರಿಗೆ ಕೊಟ್ಟಿತ್ತು. ಆದರೆ ನರೀಮನರಿಗೆ ಮಾತ್ರ ಈ ಅನ್ಯಾಯದ ವಿರುದ್ಧದ ಕೆಚ್ಚೇ ಬಂಡವಾಳ. ಹಾರ್ವೆಯವರಿಗೆ ಆಡಳಿತದ ಎಲ್ಲ ಶಕ್ತಿಯ ನೆರವಿತ್ತು.

ಒಂದು ವರ್ಷಕ್ಕಿಂತಲೂ ಹೆಚ್ಚು ಕಾಲ ನಡೆದ ಈ ಮೊಕದ್ದಮೆಯ ೬೨ ವಿಚಾರಣೆಗಳಲ್ಲಿ ೧೮ ಬಾರಿ ನರೀಮನರು ಸ್ವತಃ ಆರೋಪಿಗಳ ಪಾಟೀ ಸವಾಲು ನಡೆಸಿದರು. ತನ್ನ ಅಸಾಧಾರಣ ಕ್ರಿಮಿನಲ್ ನ್ಯಾಯದ ಜ್ಞಾನದಿಂದಾಗಿ, ತಾನು ಸಂಗ್ರಹಿಸಿದ ಪುರಾವೆ ಗಳಿಂದಾಗಿ, ಸರ್ಕಾರ ನೇಮಿಸಿದ ‘ಅಭಿವೃದ್ಧಿ ಮಂಡಲ’ ಯಾವ ರೀತಿ ಸಾರ್ವಜನಿಕ ಹಣವನ್ನು ದುರುಪಯೋಗ ಗೊಳಿಸಿದೆ ಎಂಬುದನ್ನು ಸ್ಪಷ್ಟಪಡಿಸಿದರು.

ಯಾವ ನಿಷ್ಪಕ್ಷ ಪಾತಿ ವಿಮರ್ಶಕನೂ ನರೀಮನರ ವಾದವನ್ನು ಅಲ್ಲಗಳೆ ಯುವಂತಿರಲಿಲ್ಲ. ಹಾರ್ವೆ ನರೀಮನರ ವಿರುದ್ಧ ಮಾನನಷ್ಟದ ಮೊಕದ್ದಮೆ ಮಾಡಿದಂದೇ, ನರೀಮನರು ಅಭಿವೃದ್ಧಿ ಖಾತೆಯ ಮುಖ್ಯಾಧಿಕಾರಿ ಸರ್ ಲಾರೆನ್ಸ್ ಹೆಪ್ಪರ್ ಎಂಬವರಿಗೆ ಸಾಕ್ಷಿ ಕೊಡಬೇಕೆಂದು ಕೋರ್ಟಿನ ಆಜ್ಞೆಯನ್ನು ಕಳುಹಿಸಿದ್ದರು. ಆದರೆ ಆತ ಭಾರತವನ್ನು ಬಿಟ್ಟು ಇಂಗ್ಲೆಂಡಿಗೆ ಓಡಿಹೋದ.

ಬರೇ ಜನತೆಯ ಪ್ರೀತಿ. ಬೆಂಬಲಗಳು ಮಾತ್ರವಿದ್ದು, ಬ್ರಿಟಿಷ್ ಸರ್ಕಾರದ ಆಡಳಿತ ಯಂತ್ರದ ವಿರುದ್ಧ ಒಬ್ಬಂಟಿ ಗನಾಗಿ ಹೋರಾಡಿದವರು ನರೀಮನ್. ಅಭಿವೃದ್ಧಿ ಮಂಡಲದ ಅನ್ಯಾಯವೆಲ್ಲ ಬಯಲಿಗೆ ಬಂದು, ನರೀಮನರ ವಿಜಯದಲ್ಲಿ ಈ ಹೋರಾಟ ಕೊನೆಗೊಂಡಿತು. ಈ ವಿಜಯ ಅವರಿಗೆ ತಂದ ಖ್ಯಾತಿಯೇ ಅವರನ್ನು ರಾಷ್ಟ್ರೀಯ ನಾಯಕರ ಪಟ್ಟಕ್ಕೇರಿಸಿತು.

ಇನ್ನೊಂದು ವಿರಸ

ಹಾರ್ವೆ-ನರೀಮನ್ ಪ್ರಕರಣವು ನರೀಮನರು ಬ್ರಿಟಿಷ್ ಅಧಿಕಾರಿಗಳ ವಿರುದ್ಧ ಹೋರಾಡಿದ ಕತೆ. ಆದರೆ ನರೀಮನ್-ಪಟೇಲ್ ವಿರಸದ ಇನ್ನೊಂದು ಪ್ರಕರಣ ಮುಂದೆ ದೀರ್ಘ ಕಾಲ ಅವರ ರಾಜಕೀಯ ಸಂನ್ಯಾಸಕ್ಕೆ ಕಾರಣವಾಯಿತು.

೧೯೩೪ರಲ್ಲಿ ಕೇಂದ್ರೀಯ ಶಾಸನ ಸಭೆಯ ಚುನಾವಣೆಗಳಿಗೆ ಕಾಂಗ್ರೆಸ್ ಸ್ಪರ್ಧಿಸಲು ನಿಶ್ಚಯಿಸಿತು. ಇದಕ್ಕಾಗಿ ಮುಂಬಯಿ ನಗರದಿಂದ ಇಬ್ಬರು ಅಭ್ಯರ್ಥಿ ಗಳನ್ನು ಆರಿಸಲಾಯಿತು; ಡಾಕ್ಟರ್ ಜಿ. ವಿ. ದೇಶಮುಖ್ ಮತ್ತು ನರೀಮನ್ ಇವರೇ ಆ ಅಭ್ಯರ್ಥಿಗಳು. ಕಾಂಗ್ರೆಸ್ಸಿನ ಹಿರಿಯ ನಾಯಕ ಸರ್ದಾರ್ ಪಟೇಲರೂ ಈ ಆಯ್ಕೆ ಯನ್ನು ಅನುಮೋದಿಸಿದರು.

ಈ ಚುನಾವಣೆಗಳಿಗೆ ಸಂಬಂಧಸಿದ ಮತದಾರರ ಪಟ್ಟಿ ಜುಲೈ ೧೪ ರಂದು ಪ್ರಕಟವಾಗಿ ಹಲವು ತಿಂಗಳ ಕಾಲ ಮತದಾರರ ಪರಾಮರ್ಶೆಗಾಗಿ ಇಡಲಾಗಿತ್ತು. ಚುನಾವಣೆಗೆ ನಾಮ ಪತ್ರಗಳನ್ನು ಸ್ವೀಕರಿಸುವ ಕೊನೆಯ ದಿನ ಅಕ್ಟೋಬರ್ ೧೧. ತಾನು ಕಾಂಗ್ರೆಸ್ ಅಭ್ಯರ್ಥಿ ಯೆಂದು ತಿಳಿದಮೇಲೆ ಮತದಾರರ ಪಟ್ಟಿಯಲ್ಲಿ ತನ್ನ ಹೆಸರು ಸರಿಯಾಗಿ ಸೇರಿ ಕೊಂಡಿದೆಯೇ ಎಂದು ತಿಳಿಯುವ ಹೊಣೆ ನರೀಮನರ ದಿತ್ತು. ದೇಶಮುಖರು ನರೀಮನರಿಗೆ ಈ ಬಗ್ಗೆ ಚೆನ್ನಾಗಿ ನೋಡಿ ಹೆಸರು ಸರಿಯಾಗಿದೆಯೆಂದು ಖಚಿತ ಪಡಿಸಿಕೊಳ್ಳಿ’ ಎಂದು ಅಕ್ಟೋಬರ್ ೬ ರಂದೇ ಹೇಳಿದ್ದರು.

ಎಲ್ಲ ಸರಿಯಾಗಿದೆಯೆಂದು ನರೀಮನ್ ಆಶ್ವಾಸನೆ ಕೊಟ್ಟಿದ್ದರೂ ಅಕ್ಟೋಬರ್ ೧೦ ರಂದು, ತನ್ನ ಹೆಸರು ಅದರಲ್ಲಿಲ್ಲ, ಮತದಾರರ ಪಟ್ಟಿಯಲ್ಲಿರುವುದು ತನ್ನ ಅಣ್ಣನ ಹೆಸರು ಮಾತ್ರ ಎಂದು ಸರ್ದಾರ್ ಪಟೇಲರಿಗೆ ತಿಳಿಸಿ ಕಾಂಗ್ರೆಸ್ ಸಂಸ್ಥೆಗೆ ದೊಡ್ಡ ಅಘಾತವಾಗುವಂಥ ಪರಿಸ್ಥಿತಿ ಯನ್ನುಂಟುಮಾಡಿದರು.

ಚುನಾವಣೆಗೆ ನಾಮಪತ್ರ ಸಲ್ಲಿ ಸಲು ಉಳಿದಿದ್ದುದು ಬರೇ ಒಂದು ದಿನ. ಸರ್ದಾರ್ ಪಟೇಲರಿಗೆ ಕೊನೆಯ ಗಳಿಗೆಯಲ್ಲಿ ಬಂದ ಈ ತೊಂದರೆ ಯಿಂದ ತುಂಬ ಬೇಸರವಾಯಿತು. ಅವಸರದಲ್ಲಿ ಕೆ.ಎಂ. ಮುನ್‌ಶಿಯವರಿಗೆ ನಾಮಪತ್ರ ಸಲ್ಲಿಸಲು ಕೇಳಿಕೊಳ್ಳ ಲಾಯಿತು. ಆದರೆ ಮುನ್‌ಶಿಯವರು ಚುನಾವಣೆಯಲ್ಲಿ ಗೆಲ್ಲಲಿಲ್ಲ. ಗೆದ್ದದ್ದು ಇದಿರಾಳಿ ಸರ್ ಕಾವಸ್ಜಿ ಜಹಾಂಗೀರ.

ಇದರಲ್ಲಿ ಆಶ್ಚರ್ಯದ ಮಾತೆಂದರೆ ಸರ್ ಕಾವಸ್ಜಿಯವರು ನರೀಮನರ ಆಪ್ತ ಸ್ನೇಹಿತರು. ನರೀಮನರು ತನ್ನ ಸ್ನೇಹಿತರ ವಿಜಯಕ್ಕಾಗಿಯೇ ಕೊನೆಯಗಳಿಗೆಯಲ್ಲಿ ಹಿಂದೆ ಸರಿದರೆ ? ಮತದಾರರ ಪಟ್ಟಿಯ ತಿದ್ದುಪಡಿಗಾಗಿ ಅವರೇಕೆ ಮೊದಲೇ ಪ್ರಯತ್ನಿಸಲಿಲ್ಲ ? ಅವರು ಏಕೆ ಆ ರೀತಿ ವರ್ತಿಸಿದರೆಂಬುದು ಇಂದಿಗೂ ಸಮಸ್ಯೆಯೆ. ನರೀಮನರ ಖ್ಯಾತಿಗೆ, ಅವರು ಸೇರಬೇಕಾಗಿದ್ದ ರಾಷ್ಟ್ರೀಯ ನಾಯಕತ್ವಕ್ಕೆ ತಡೆ ತಂದದ್ದು ಈ ಚುನಾವಣೆ.

ಇದರ ಪರಿಣಾಮವೇನಾಯಿತು ? ಮುಂದೆ ೧೯೩೭ ರಲ್ಲಿ ಭಾರತದಾದ್ಯಂತ ಕಾಂಗ್ರೆಸ್ಸು ಚುನಾವಣೆಗಳಲ್ಲಿ ಗೆದ್ದು ಅಸಹಕಾರವನ್ನು ಬದಿಗಿರಿಸಿ ಅಧಿಕಾರವನ್ನು ಸ್ವೀಕರಿಸಲು ನಿರ್ಧರಿಸಿತು. ಆಗ ಮುಂಬಯಿ ಪ್ರಾಂತಕ್ಕೆ ಯಾರು ಕಾಂಗ್ರೆಸ್ ನಾಯಕ ಎನ್ನುವ ಪ್ರಶ್ನೆ ಬಂತು. ಈ ಪ್ರಶ್ನೆಯೇ ಸರ್ದಾರ್ ಪಟೇಲ್ – ನರೀಮನರ ವಿರಸಕ್ಕೆ ಕಾರಣ ವಾಯಿತು.

ಚುನಾವಣೆಗಳಿಗೆ ಸಂಬಂಧಿಸಿದ ಕಾಂಗ್ರೆಸ್ ವರಿಷ್ಠಾಧಿಕಾರದ ಉಪಸಮಿತಿಗೆ ಸರ್ದಾರ್ ಪಟೇಲರೇ ಅಧ್ಯಕ್ಷರು. ಮುಂಬಯಿಯ ಕಾಂಗ್ರೆಸ್ ನಾಯಕತ್ವ ತನ್ನದೆಂದೇ ನರೀಮನ್ ತಿಳಿದಿದ್ದರು. ಯೋಗ್ಯತೆಯಲ್ಲಿ, ಪ್ರತಿಭೆಯಲ್ಲಿ ಕರ್ತವ್ಯ ದಕ್ಷಣೆಯಲ್ಲಿ ಅವರನ್ನು ಸರಿಗಟ್ಟುವ ಬೇರೆ ಧುರೀಣರು ಆಗ ಮುಂಬಯಿಯಲ್ಲಿ ಇದ್ದಿಲ್ಲ.

ಹೀಗಿದ್ದೂ ೧೯೩೭ ಮಾರ್ಚ್ ೧೨ ರಂದು ಕಾಂಗ್ರೆಸ್ ಪಕ್ಷದ ಶಾಸಕರ ಸಭೆಯಲ್ಲಿ ಪಕ್ಷದ ನಾಯಕನ ಚುನಾವಣೆಯಾದಾಗ ಸರ್ವಾನುಮತದಿಂದ ಆರಿಸಿ ಬಂದದ್ದು ಬಾಲ ಗಂಗಾಧರ ಖೇರ್ ಅವರು. ಅದಕ್ಕೂ ಮೊದಲೇ ನರೀಮನರು ಸರ್ದಾರ್ ಪಟೇಲರನ್ನು ಕಂಡಿದ್ದಾಗ, ಸರ್ದಾರ್ ಪಟೇಲರು, “ನಾನು ನೀವು ಪಕ್ಷದ ನಾಯಕರಾಗಬೇಕೆಂದು ಸಹಕರಿಸುವುದೂ ಇಲ್ಲ. ನಿಮ್ಮ ಆಯ್ಕೆಯಾದರೆ ಅದನ್ನು ವಿರೋಧಿಸುವುದೂ ಇಲ್ಲ ಎಂದಿದ್ದರು. ಸರ್ದಾರ್ ಪಟೇಲರ ಈ ರೀತಿಯ ನಿಲುಮೆಗೆ ಕಾರಣವೇನಿರಬಹುದು ? ೧೯೩೪ರ ಕೇಂದ್ರೀಯ ಶಾಸನ ಸಭೆಯ ಚುನಾವಣೆಯಲ್ಲಿ ನರೀಮನರು ನಡೆದುದೊಂಡ ರೀತಿ ; ಅವರು ಗಾಂಧೀಜಿಯ ನಾಯಕತ್ವದಲ್ಲಿ ಅವಿಶ್ವಾಸ ವ್ಯಕ್ತಪಡಿಸಿ ಬರೆದ ಪುಸ್ತಕಗಳು, ಇವೆಲ್ಲ ಕಾರಣವಾಗಿರ ಬಹುದು.

ರಾಜಕೀಯ ಸಂನ್ಯಾಸ

ಹೀಗಾಗಿ ೧೯೩೭ ರಲ್ಲಿ ಮುಂಬಯಿ ಪ್ರಾಂತದ ಶಾಸಕರ ನಾಯಕತ್ವ ನರೀಮನರಿಗೆ ಸಿಗಲಿಲ್ಲ. ಆ ಕಾರಣ ಅವರು ಅಂದಿನ ಮುಂಬಯಿ ರಾಜ್ಯದ ಮುಖ್ಯ ಮಂತ್ರಿ ಯಾಗಲಿಲ್ಲ. ಎರಡು ದಶಕಗಳ ಕಾಲ ಮುಂಬಯಿಯ ಅನಭಿಷಿಕ್ತ ರಾಜರೆನಿಸಿದ್ದ ನರೀಮನರ ಮನಸ್ಸಿಗೆ ಇದರಿಂದ ಆದ ನೋವು ಅಷ್ಟಿಷ್ಟಲ್ಲ.

ಈ ಸೋಲನ್ನು ಕಾಂಗ್ರೆಸ್ಸಿನ ಶಿಸ್ತಿನ ಸೈನಿಕನಂತೆ ಒಪ್ಪಿಕೊಳ್ಳುವ ಮನೋವೃತ್ತಿ ಅವರ ದಾಗಿದ್ದರೂ ಆ ರೀತಿ ಅವರು ಮುಂದೆ ನಡೆದುಕೊಳ್ಳಲಿಲ್ಲ. ನಮಗೆ ನಾಯಕತ್ವ ಸಿಕ್ಕದುದಕ್ಕೆ ಸರ್ದಾರ್ ಪಟೇಲರೇ ಕಾರಣ ಎಂದು ಅವರು ವಾದಿಸಿದರು. ಕಾಂಗ್ರೆಸ್ ಈ ವಿಷಯವಾಗಿ ವಿಚಾರಣೆ ನಡೆಸಿತು.

ವಿಚಾರಣೆ ನಡೆಸಿದ ಸಮಿತಿಯೂ ನೆಹರೂ ಗಾಂಧೀಜಿ ಮೊದಲಾದ ನಾಯಕರೂ ಪಟೇಲರ ತಪ್ಪಿಲ್ಲ ಎಂದು ತೀರ್ಮಾನಿಸಿದರು. ನರೀಮನರ ಮನಸ್ಸಿನ ನೋವು ಮಾತ್ರ ಉಳಿಯಿತು. ಅವರು ರಾಜಕೀಯದಿಂದ ದೂರವಾದರು. ಆದರೂ ಕಾಂಗ್ರೆಸ್ಸಿನಿಂದಲೇ ದೂರ ಸರಿಯಲಿಲ್ಲ. ಮತ್ತೆ ವಕೀಲ ವೃತ್ತಿಗೆ ಹಿಂದಿರುಗಿದರು. ತಮ್ಮ ಮೊದಲಿನ ಸಂಪಾದನೆಯನ್ನು ಮರಳಿ ಪಡೆಯುವುದು ಕಷ್ಟವಾಗಲಿಲ್ಲ.

ಈ ಅವಧಿಯಲ್ಲೆ ಅವರು ಮದುವೆಯಾದರು. ದೀರ್ಘಕಾಲ ಅವರ ಅಭಿಮಾನಿಯಾಗಿದ್ದ ಶ್ರೀಮತಿ ಮಾನೆಕ್‌ಬಾಯಿ ಅವರ ಪತ್ನಿ. ಮುಂದೆ ಅವರಿಗೆ ಇಬ್ಬರು ಮಕ್ಕಳಾದರು. ಜರೀನ್ ಮಗಳು; ಕಾವಸ್ ಮಗ.

ಶ್ರೀಮತಿ ಮಾನೆಕ್‌ಬಾಯಿ ನರೀಮರಿಗಿಂತ ವಯಸ್ಸಿನಲ್ಲಿ ತುಂಬಾ ಕಿರಿಯವರಾಗಿದ್ದರೂ ನರೀಮನರ ವಿವಾಹಿತ ಜೀವನದ ಕಾಲದಲ್ಲಿ ಅವರ ಆಪ್ತ ಸಂಗಾತಿ ಯಾಗಿ ಅವರನ್ನು ಸಂತೋಷದಲ್ಲಿಡಲು ತುಂಬ ಪ್ರಯತ್ನಿಸಿದ್ದರು. ಅವರಿಬ್ಬರಿಗೂ ಶಾಸ್ತ್ರೀಯ ಸಂಗೀತದ ಕುರಿತು ತುಂಬ ಪ್ರೀತಿ. ನರೀಮನರ ಮನೆಯ ಸಂತೋಷ ಕೂಟಗಳೆಂದರೆ ಅವರ ಎಲ್ಲ ಸ್ನೇಹಿತರಿಗೂ ತುಂಬ ಸಂತೋಷ ಕೊಡು ವಂಥ ಸಮಾರಂಭಗಳಾಗುತ್ತಿದ್ದವು.

ಹೆಚ್ಚು ಕಡಮೆ ಒಂದು ದಶಕದಷ್ಟು ಕಾಲ ನರೀಮನರು ರಾಜಕೀಯ ಸಂನ್ಯಾಸ ವಹಿಸಬೇಕಾಗಿ ಬಂದಿತ್ತು. ಆದರೆ ಅವರು ಈ ನೋವಿನಿಂದಾಗಿ ಜೀವನದ ಬಗೆಗೆ, ರಾಜಕೀಯದ ಬಗೆಗೆ ಜುಗುಪ್ಸೆಯನ್ನು ತಳೆದವರಲ್ಲ. ಅವರ ಮನಸ್ಸು ಸಾರ್ವಜನಿಕ ಸೇವೆಯ ಕುರಿತೇ ಚಿಂತಿಸು ತ್ತಿತ್ತು.

೧೯೪೨ ರಲ್ಲಿ ‘ಬ್ರಿಟಿಷರೇ ಭಾರತದಿಂದ ಹೊರಡಿ’ ಚಳವಳಿಯ ಕಾಲದಲ್ಲಿ ಬಾಂಬ್ ಸ್ಫೋಟಗಳಿಗೆ ಕಾರಣ ರಾದವರೆನ್ನಲಾಗಿ ಬಂಧಿಸಲಾಗಿದ್ದ ದೇಶಪ್ರೇಮಿಗಳ ರಕ್ಷಣೆಗೆ ಬಂದದ್ದು ನರೀಮನರೆ.

ವೀರ ನರೀಮನ್ ಇನ್ನಿಲ್ಲ

೧೯೪೭ ರಲ್ಲಿ ನಮ್ಮ ನಾಡಿಗೆ ಸ್ವಾತಂತ್ರ್ಯ ಬಂತು. ಪ್ರಬಲವಾದ ಬ್ರಿಟಿಷ್ ಸರ್ಕಾರದ ಇದಿರು ಸಿಂಹಶಕ್ತಿ ಯಿಂದ ಹೋರಾಡಿದ್ದ ನರೀಮನರಿಗೂ ಅತ್ಯಂತ ಸಂತೋಷದ ಕನಸು, ನಿಜವಾದ ಸಂದರ್ಭ ಅದು. ಇಂಥ ಸಿಂಹಕ್ಕೆ ರಾಜಕೀಯ ಸಂನ್ಯಾಸ ಎಷ್ಟು ಕಾಲ !

೧೯೪೮ ರಲ್ಲಿ ನರೀಮನರು ಪುನಃ ರಾಜಕೀಯ ರಂಗಕ್ಕಿಳಿದರು. ಹಿಂದೆ ಅವರ ಕಾರ್ಯಕ್ಷೇತ್ರವಾಗಿದ್ದ ಮುಂಬಯಿನಗರ ಸಭೆ ಪುನಃ ಅವರನ್ನು ಕರೆಯುತ್ತಿತ್ತು. ಈ ನಗರ ಸಭೆಯ ಚುನಾವಣೆಯಲ್ಲಿ ಭಾಗವಹಿಸಿ ನರೀಮನ್ ೧೨,೦೦೦ ಮತಗಳಿಸಿ ಗೆದ್ದುಬಂದರು ; ನಗರ ಸಭೆಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿಯೂ ಆರಿಸಿಬಂದರು.

ನರೀಮನರು ಪುನಃ ರಾಜಕೀಯ ರಂಗಕ್ಕಿಳಿದುದು ಸ್ವತಂತ್ರ ಭಾರತದ ಕಾಂಗ್ರೆಸ್ ನಾಯಕತ್ವಕ್ಕೆ ಹರ್ಷವನ್ನೆ ತಂದಿತು. ನರೀಮನರ ಪ್ರತಿಭೆ, ದಕ್ಷತೆ, ನಿಷ್ಠೆ, ಪ್ರಾಮಾಣಿ ಕತೆಗಳ ಬಗ್ಗೆ ಯಾರಿಗೂ ಸಂದೇಹವೇ ಇರಲಿಲ್ಲ.

ಇಂಥ ಗುಣಗಳ ನಿಧಿಯೆನಿಸಿದ್ದ ನರೀಮನರು ಸ್ವತಂತ್ರ ಭಾರತದ ನಾಯಕತ್ವದಲ್ಲಿ ತುಂಬ ಮೇಲೇರಲು ಸಮರ್ಥರೇ ಆಗಿದ್ದರು. ಇದೇ ಕಾರಣದಿಂದ, ಒಂದು ಮಹತ್ವದ ರಾಜಕೀಯ ಕೆಲಸಕ್ಕಾಗಿ ದಿಲ್ಲಿಗೆ ಬರಬೇಕೆಂದು ಆಗ ಉಪಪ್ರಧಾನಿಯಾಗಿದ್ದ ಸರ್ದಾರ್ ಪಟೇಲರು ನರೀಮನರಿಗೆ ಕರೆ ಕಳುಹಿಸಿದರು. ಆದರೆ ನರೀಮನರು ೧೯೮೪ ರ ಅಕ್ಟೋಬರ್ ನಾಲ್ಕರಂದು ದಿಲ್ಲಿಯಲ್ಲೇ ಮೃತರಾದರು.

ನಮ್ಮ ದೇಶದ ಒಬ್ಬ ಹಿರಿಯ ನಾಯಕನಾಗುವ ಯೋಗ್ಯತೆಯಿದ್ಧ ಧುರೀಣನನ್ನು, ಭಾರತವು ತನ್ನ ಸ್ವಾಂತಂತ್ರ್ಯದ ತರುಣದಲ್ಲೆ ಕಳೆದುಕೊಂಡಿತು. ದಿಲ್ಲಿಯಲ್ಲಿ ಮೃತರಾದ ನರೀಮನರ ದೇಹವನ್ನು ಮುಂಬಯಿಗೆ ತಂದಾಗ, ಮುಂಬಯಿಯ ಸಾಂತಾಕ್ರೂಜ್ ವಿಮಾನ ನಿಲ್ದಾಣದಲ್ಲಿ ಅವರ ಅಂತಿಮ ದರ್ಶನಕ್ಕಾಗಿ ಸೇರಿದ್ದ ಸಾವಿರಗಟ್ಟಲೆ ಜನರೇ, ನರೀಮನರು ಗಳಿಸಿದ್ದ ಜನ ಪ್ರಿಯತೆಗೆ ಸಾಕ್ಷಿ.

ದೀರ್ಘಕಾಲ ಮುಂಬಯಿಯ ಅನುಭಿಷಿಕ್ತ ರಾಜ ರೆನಿಸಿದ್ದ ನರೀಮನರ ಜೀವನದಲ್ಲಿ ಸಚ್ಚಾರಿತ್ರ್ಯ, ಅಚಲವಾದ ದೇಶಪ್ರೇಮ, ನಿರ್ಭೀತವೂ ಸ್ವತಂತ್ರವೂ ಆದ ಮನೋವೃತ್ತಿ, ಪ್ರಾಮಾಣಿಕತೆ ಇವು ಮಹತ್ವದ ಗುಣಗಳಾಗಿದ್ದವು. ಜನತೆಯ ಪ್ರೀತಿಯ ಬೆಂಬಲ ಮಾತ್ರವಿದ್ದು ಸಾರ್ವಜನಿಕ ಹಿತದ ಆದರ್ಶವನ್ನು ಕಣ್ಣಮುಂದಿರಿಸಿಕೊಂಡು, ಬ್ರಿಟಿಷ್ ಸರ್ಕಾರದ ಭದ್ರಶಕ್ತಿಯ ವಿರುದ್ಧ ಹೋರಾಡಿದವರು ಈ ವೀರ ನರೀಮನ್. ದೇಶದ ಹಿತಕ್ಕಾಗಿಯೇ ನರೀಮನರ ಜೀವನ ಮುಡುಪಾಗಿತ್ತು.