ಬಹರೈನ್‌ನ ಮನಾಮಾ ನಗರದಲ್ಲಿ ಮಾತಿಗೆ ಸಿಕ್ಕ ಕನ್ನಡಿಗರು ನಮ್ಮ  ಹಳ್ಳಿ ಬದುಕಿನ ಹಳೆಯ ಪುಟ ನೆನಪಿಸಿಕೊಳ್ಳುತ್ತಿದ್ದರು. ಅಲ್ಲಿನ ಸೌದಿ ಬ್ಯಾಂಕ್ ಮೆನೇಜರ್ ಆರ್. ವಿ. ಹೆಗಡೆಗೆ ಕಾಲದ ಕತೆಗಳು  ಕಣ್ಣೆದುರು ಬಂದವು. ೧೯೭೦ರ ಕಾಲ,  ಅವರು  ಉತ್ತರ ಕನ್ನಡದ ಕುಮಟಾದಲ್ಲಿ ಕಾಲೇಜಿಗೆ ಹೋಗುತ್ತಿದ್ದರು, ಒಮ್ಮೆ  ರಸ್ತೆ ಪಕ್ಕದ ತರಕಾರಿ ಅಂಗಡಿಯಲ್ಲಿ  ಕೆಂಪನೆಯ  ಆಕರ್ಷಕ ಹಣ್ಣು  ಎದ್ದು ಕಾಣುತ್ತಿತ್ತು, ಅದು ಸೇಬು ಇರಬಹುದು ಆದರೆ ಗಾತ್ರ ನೋಡಿದರೆ  ಅನುಮಾನ,  ಆ  ಕಾಲಕ್ಕೆ  ಸ್ವತಃ ಸೇಬು ರುಚಿನೋಡದ  ಹೆಗಡೆಗೆ  ಅಂತುಪಾರು ಹತ್ತಲಿಲ್ಲ. ‘ಅದು ಟೊಮೆಟೋ  ಮಾರಾಯ! ಊಟಕ್ಕೆ ಸಾರು ಮಾಡೋದಕ್ಕೆ ಬಳಸ್ತಾರೆ!’ ಜತೆಗಾರರ ವಿವರಣೆ. ಒಮ್ಮೆ ಸಾರಿನ ಹಣ್ಣಿನ ಊಟದ ರುಚಿ ನೋಡಬೇಕು…… ಆಗ ಹುಟ್ಟಿದ ದೊಡ್ಡ ಕನಸು. ಹಳ್ಳಿ ಮನೆಗಳಲ್ಲಂತೂ ಪೇಟೆ ತರಕಾರಿ ಅಪರಿಚಿತ, ಖರೀದಿಸಲು ತಾಕತ್ತಿರಲಿಲ್ಲ. ಒಮ್ಮೆ  ವಾರಿಗೆಯ ಗೆಳೆಯನೊಬ್ಬ  ಟೊಮೆಟೋ ಹಣ್ಣಿನ ಸಾರು ಮಾಡುತ್ತಾನೆಂಬ ಸುದ್ದಿ ತಿಳಿಯಿತು,  ಬಾಯಲ್ಲಿ ನೀರೂರಿಸಿಕೊಂಡು  ಅವನ ರೂಮಿಗೆ ಓಡಿದ್ದೇ ಓಡಿದ್ದು!  ಆಗ  ಟೊಮೆಟೋ  ಮಾರುಕಟ್ಟೆಗೆ ಬರುವದು  ಅಪುರೂಪ, ಅಂದು ಹೊಸ ತರಕಾರಿ  ಊಟ ಮಾಡಿದ್ದು  ಇಂದಿಗೂ ಮರೆಯಲಾಗದ  ಖುಷಿ ಘಳಿಗೆ ಅವರ ನೆನಪಿನಲ್ಲಿದೆ !

ಕುಮಟಾ ಮೇಲಿನಕೋಣಾರೆಯ ವೆಂಕಟ್ರಮಣ ಹೆಗಡೆ ನೀರಡಿಕೆ ಕೆತ್ತುತ್ತ ನಾಗಬಳ್ಳಿ ಎಲೆಯಲ್ಲಿ ಕವಳ ಹಾಕುವ ಸಂಭ್ರಮ ಸೋಜಿಗದ್ದು. ಎಲೆಯ ತೊಟ್ಟು ತೆಗೆದು, ಸುಣ್ಣ, ಹೊಗೆಸೊಪ್ಪು, ಅಡಿಕೆ ಸೇರಿಸಿಕೊಂಡು ಸಂಭ್ರಮದಲ್ಲಿ ಕವಳ ಸಿದ್ದಗೊಳಿಸುತ್ತಿದ್ದರು. ಆ ಕ್ಷಣಕ್ಕೆ ಅಪ್ಪಯ್ಯನ  ಮುಖದಲ್ಲಿ  ‘ಆಸ್ಕರ್ ಅವಾರ್ಡ’ ಸಿಕ್ಕಂತಹ ಖುಷಿಯಿರುತ್ತಿತ್ತು ಎಂದು ಆರ್.ವಿ .ಹೆಗಡೆ ನೆನಪಿಸಿಕೊಳ್ಳುತ್ತಾರೆ. ನಾವು ಗಾಂಧಿಯನ್ನು  ಅರೆಬೆತ್ತಲೆಯ ಫಕೀರ ಎಂದು ವಿದೇಶಿಗರು ಗುರುತಿಸಿದ್ದು ಕೇಳಿದ್ದೇವೆ. ಇವರಂತೆ  ಜೀವನ ಪೂರ್ತಿ  ಚೋಟು ಪಂಚೆಯಲ್ಲೆ  ಬೆಳೆದವರು  ಈ ಕರಾವಳಿ ಹಿರಿಯರು!  ಇಡೀ ಜೀವಮಾನದಲ್ಲಿ  ಅವರು ಬಳಸಿದ ಶರ್ಟ್ ಲೆಕ್ಕಹಾಕಿದರೆ ಹೆಚ್ಚೆಂದರೆ ೮-೧೦ ಬಳಸಿರಬಹುದು!. ಇಸ್ತ್ರಿ ಬಟ್ಟೆ, ಚಪ್ಪಲಿ, ವಾಚು, ಪೌಡರ್, ಕೂಲಿಂಗ್ ಗ್ಲಾಸ್, ಹವಾನಿಯಂತ್ರಿತ ಕಾರು, ಮೊಬೈಲ್, ಫ್ಯಾನ್   ಇಂತಹ ಯಾವ ವಸ್ತು, ವ್ಯವಸ್ಥೆಗಳ ಒಳಗೆ ಸಿಲುಕದೇ  ಕೃಷಿ ಕೆಲಸದಲ್ಲೇ  ಮುಪ್ಪಾದವರು. ಅರ್ಧ ಎಕರೆ ಅಡಿಕೆ, ಅರ್ಧ ಎಕರೆ ಭತ್ತದ ಗದ್ದೆಯ ಸಂಪಾದನೆಯಲ್ಲಿ ೬ ಗಂಡು, ೩ ಹೆಣ್ಣು ಮಕ್ಕಳ ಸಂಸಾರ ನಿರ್ವಹಣೆ. ‘ ಹೆಣ್ಣು ಮಕ್ಕಳಿಗೆ ಮನೆಗೆಲಸ ಕಲಿಸ್ತೇನೆ, ಗಂಡು ಮಕ್ಕಳಿಗೆ   ಜನಿವಾರ ಹಾಕಿ ಎಸ್. ಎಸ್.ಎಲ್.ಸಿ ಓದಿಸ್ತೇನೆ…ಈ ಕುಟುಂಬದಲ್ಲಿ ಮತ್ತೇನೂ ಆಸೆ ಅವರು ಇಟ್ಕೋಬಾರದು ‘ ವಾಸ್ತವ ಎದುರಿಟ್ಟು ಬೆಳೆಸಿದರು. ಇಡೀ ಕರಾವಳಿ ತಿರುಗಾಡಿದರೆ ಮನೆ ಮನೆಗಳಲ್ಲಿ  ಇಂತಹ ಸರಳ ಹಿರಿಯರ ದರ್ಶನವಿದ್ದ ಕಾಲ ಅದು. ಜನರ ಕೈಯಲ್ಲಿ ಹಣವಿಲ್ಲ, ಹಣ ಬಳಸದೇ ಬದುಕುವ ಕಲೆ ಕಲಿತಿದ್ದರು.

ಬಡತನದ ನೆಲೆಯಲ್ಲಿ ಕನಸುಗಳಿಗೆ ಬರವಿತ್ತು.  ಬೆಳೆಯುವ ಗಂಡು ಮಕ್ಕಳನ್ನು ಓದಿನ ಮಧ್ಯೆ ತೋಟಕ್ಕೆ ನೀರು ಹಾಕಲು ಒಯ್ದು ಅಲ್ಲಿ  ಕೃಷಿ ತರಬೇತಿ!.  ಕಷ್ಟದಲ್ಲಿ ಕಲಿತವರು ಒಬ್ಬರು ತಹಶೀಲ್ದಾರ್, ಮತ್ತೊಬ್ಬರು ಕಾಲೇಜು ಪ್ರಾಂಶುಪಾಲ, ಇನ್ನೊಬ್ಬರು ಕೃಷಿ ಅಧಿಕಾರಿ ಹೀಗೆ ಎಲ್ಲರೂ ವಿವಿಧ ರಂಗದಲ್ಲಿ  ಎತ್ತರಕ್ಕೆ ಬೆಳೆದರು. ದೇಶ ವಿದೇಶಗಳಲ್ಲಿ  ಉನ್ನತ ಹುದ್ದೆಗಳಲ್ಲಿ ನೌಕರಿಗೇರಿದರು! ೧೦-೨೦ಗುಂಟೆ ಜಮೀನಿನಲ್ಲಿ ಸಂಸಾರ ನಿಭಾಯಿಸಿದ ಹಿರಿಯರ ಕತೆಗಳು  ನಿಜಕ್ಕೂ  ಸಾಹಸದ್ದು, ನೂರಾರು ಜನಕ್ಕೆ ಬೆಳಕಿನ ದೀಪವಾಗುವ ತಾಕತ್ತು ಅವುಗಳಲ್ಲಿದೆ.” ಈಗ ನಾನು ಬಹರೈನ್‌ನಲ್ಲಿ  ಸೌದಿ ಬ್ಯಾಂಕ್ ಮೆನೇಜರ್! ಹಣವಿದೆ, ಸಕಲ ಸೌಕರ್ಯವಿದೆ, ವೈಭವವಿದೆ.  ಆದರೆ ಏನ್ ಕೇಳ್ತೀರಿ! ಚೋಟು ಪಂಚೆಯ ಅಪ್ಪಯ್ಯ ಬರಿಮೈಯಲ್ಲಿ  ಜಗುಲಿ ಕಟ್ಟೆಯಲ್ಲಿ ಕುಳಿತು ಎಲೆಸೆರಿ ತೆಗೆದು ಕವಳ ಹಾಕುತ್ತಿದ್ದ ಚಿತ್ರ ಕಣ್ಣೆದುರಿದೆ, ಆ ಖುಷಿಯ ಒಂದು ಕ್ಷಣ ನಮಗೆ ಸಿಕ್ಕಿಲ್ಲ, ಬದುಕಿನ  ಒತ್ತಡಗಳ ಮಧ್ಯೆ  ಓಡುವ ಯಂತ್ರವಾಗಿದ್ದೇವೆ  ಅಷ್ಟೇ !’ ಮನಾಮಾದ ರಮದಾ ಪ್ಯಾಲೇಸ್ ಮೂಲೆಯಲ್ಲಿ ಕುಳಿತು ಮಾತಾಡುತ್ತಿದ್ದ ಹೆಗಡೆ ಭಾವುಕರಾದರು, ಕಣ್ಣಲ್ಲಿ ನೀರು ಹನಿಯಿತು.

ನಮ್ಮೆದುರಿನ  ವಿಚಿತ್ರ ನೋಡಿ, ನಮ್ಮೂರಿನ ಶಾಲೆ, ಪಂಚಾಯತ್ ಗ್ರಂಥಾಲಯಗಳಲ್ಲಿ ಕೆನಡಿ, ಲಿಂಕನ್, ಮಾರ್ಕ್ಸ, ಲೆನಿನ್, ಅಂಬೇಡ್ಕರ್, ಗಾಂಧಿ ಇವರೆಲ್ಲರ ಜೀವನ ಚರಿತ್ರೆಯ ಹೊತ್ತಿಗೆಗಳಿವೆ.  ಹಳ್ಳಿ ಮೂಲೆಗಳಲ್ಲಿ ೨೦ಗುಂಟೆಗಳಲ್ಲಿ  ಸರಳ ಬದುಕಿನ ಸಂತರಾದ ಎಷ್ಟು ಕೃಷಿಕರ ಜೀವನ ಕತೆಗಳಿವೆ? ಕೃಷಿಯೇ ದೇಶದ ಬೆನ್ನೆಲುಬೆಂದು ಹೇಳುವ ನೆಲದಲ್ಲಿ ಕೃಷಿಕರ ಮಣ್ಣಿನ ಬದುಕಿನ ದಾಖಲೆಗಳಿಲ್ಲ, ಅಲ್ಲಿನ ಸತ್ವದ ಅರಿವಿಲ್ಲ!  ಸಂಪತ್ತು  ಎಷ್ಟೇ ಗಳಿಸಿದರೂ ಇವತ್ತಿಗೂ ಕೃಷಿ, ಗ್ರಾಮೀಣ ಬದುಕಿನಲ್ಲಿ  ಖುಷಿ ಕ್ಷಣಗಳನ್ನು ಏಕೆ ಎಲ್ಲರನ್ನೂ  ಕಾಡುತ್ತಿವೆ? ನಮ್ಮ ಸುತ್ತಲಿನ ಜೀವನ ಪಾಠಗಳನ್ನು  ಮರೆಯುತ್ತಿದ್ದೇವೆ. ಹಳೆಯ ನೆನಪುಗಳು ಯಾವತ್ತೂ ಹಾಗೇ! ಹೊಸತು ಏನೇ ಬಂದರೂ  ಅವನ್ನು  ಜಾಡಿಸಿ ಒದ್ದು ಮುನ್ನುಗ್ಗಿ ಬರುತ್ತವೆ. ಇಂದು ನಮಗಿರುವ ಸಂಪತ್ತು ಖರೀದಿ ತಾಕತ್ತು ನೀಡಿದೆ. ಇದ್ದಕ್ಕಿದ್ದಂತೆ   ಕಾರು ಬದಲಿಸುತ್ತೇವೆ, ಬಟ್ಟೆ ಬೀಸಾಡಿ ಹೊಸತು  ಉಡುತ್ತೇವೆ, ಉದುರಿದ ಕೂದಲಿಗೆ ಕಸಿ ಮಾಡಿಸುತ್ತೇವೆ, ಬಣ್ಣಗೆಟ್ಟ ಮುಖಕ್ಕೆ ಹೊಸ ಹೊಳಪು ನೀಡುತ್ತೇವೆ. ಹುಳುಕು ಹಲ್ಲು, ಸೀಳು ತುಟಿ, ಗೂನು ಬೆನ್ನು, ಚೋಟು ಕೈ  ಅಷ್ಟೇಕೆ ದೇಹದ ಅಂಗಾಂಗ ಬದಲಿಸಿಕೊಂಡು  ಹೊಸ ಮನುಷ್ಯರಾಗುತ್ತೇವೆ. ನಮ್ಮ ಜತೆಗಿರುವ ಸಂಪತ್ತು  ಇಂತಹ ಅಗಾಧ ಶಕ್ತಿ ನೀಡಿದೆ, ವಿಜ್ಞಾನ ಕನಸಿನಂತೆ ನಮ್ಮ  ಬದುಕು  ಕಟ್ಟಿ ನಿಲ್ಲಿಸಿದೆ. ಇಷ್ಟಾಗಿಯೂ ನಮ್ಮ ಕಾಲದ ಖುಷಿ ಮಾತ್ರ ಕೈಜಾರಿದೆ. ಒಂದು ಕಾಲಕ್ಕೆ  ನೆಮ್ಮದಿಯೆಂಬುದು  ಹಣದಲ್ಲಿದೆ, ಸಂಪತ್ತಿನ ಗಳಿಕೆಯಲ್ಲಿದೆ ಎಂದು ನಂಬಿದವರಿಗೆ  ಹಲವು ಸಾರಿ ಭ್ರಮನಿರಸನವಾಗಿದೆ. ಸುಖದ ನಿಜ ನಮ್ಮ ಯೋಚನೆಯಲ್ಲಿದೆಯೇ ಹೊರತೂ  ವಸ್ತು-ವಿಶೇಷಗಳಲಿಲ್ಲ ಎಂಬುದು ಅರ್ಥವಾಗಿದೆ.

೪೦-೫೦ ವರ್ಷದ ಹಿಂದೆ ನಾವು  ಕೊಳ್ಳುಬಾಕರಾಗಿರಲಿಲ್ಲ.  ಮೈಸೋಪು, ಚಪ್ಪಲಿ ಬಳಸದೇ  ಕಾಲೇಜು ಮುಗಿಸಿದವರಿದ್ದಾರೆ. ಒಂದು ಜತೆ ಬಟ್ಟೆಯಲ್ಲಿ  ಓದು ಮುಗಿಸಿದವರಿದ್ದಾರೆ. ಆಗ ಇನ್ನಷ್ಟು ಬೇಕೆಂದರೂ ಜನರ ಕೈಯಲ್ಲಿ ಹಣ  ಇಲ್ಲ. ೧೦ ರೂಪಾಯಿ ಕಿಸೆಯಲ್ಲಿದ್ದರೆ  ರೋಮಾಂಚನವಾಗುತ್ತಿತ್ತು. ಹದ್ದುಮೀರಿ ಹಣ ಖರ್ಚು ಮಾಡಿದರೆ  ನಾಳೆ ಉಪವಾಸ ಬೀಳುವ ಭಯ!. ಈಗಿನಂತೆ ಕೈ ಎತ್ತಿ ಸಾಲ ನೀಡುವ ಸಹಕಾರಿ ಸಂಘ, ಬ್ಯಾಂಕುಗಳಿಲ್ಲ. ಸವಕಾರಿ ಸಾಲದ ಶೂಲ  ಎಲ್ಲರನ್ನೂ ಬೆಚ್ಚಿ ಬೀಳಿಸಿತ್ತು. ಆಗಾಗ ಒಕ್ಕರಿಸುತ್ತಿದ್ದ ಬರಗಾಲ  ಸದಾ ಎಚ್ಚರದ ಹೆಜ್ಜೆಗೆ  ಪ್ರೇರಣೆಯಾಗಿತ್ತು. ಕನಸುಗಳು ಹದ್ದು ಮೀರಿ ಬೆಳೆಯದಂತೆ ಸ್ವಯಂ ನಿಯಂತ್ರಿತ ಕಡಿವಾಣವಿತ್ತು. ಒಂದಾಣೆ ಖರ್ಚು ಮಾಡುವದಾದರೆ ಹತ್ತು ಸಾರಿ ಯೋಚನೆ!.  ಅರ್ಧ ಆಣೆ ತೆತ್ತು ಸೋದೆ ರಥೋತ್ಸವದಲ್ಲಿ  ಮೈ ಸೋಪು ಖರೀದಿಸಿ ಮನೆಗೆ ತಂದಾಗ ‘ನೀನು ಮನೆತನ ತೊಳಿತೀಯೇ!’ ಎಂದು  ಶಿರಸಿಯ ಬಿಸಲಕೊಪ್ಪ ತಿಮ್ಮಪ್ಪ ಹೆಗಡೆಯವರಿಗೆ ೬೦ ವರ್ಷದ ಹಿಂದೆ ಸಂಬಂಧಿಕರು ಗದರಿಸಿದ್ದರಂತೆ! ಅವತ್ತಿನ ಪರಿಸ್ಥಿತಿ ಅದು. ‘ಒಂದು  ಇಡೀ ಗ್ಲುಕೋಸ್  ಬಿಸ್ಕೀಟ್ ಪ್ಯಾಕ್ ನಾವೊಬ್ಬರೇ ತಿನ್ನಬೇಕು’ ಎಂಬುದು  ೨೫ ವರ್ಷದ ಹಿಂದಿನ ಹುಡುಗರ ಎವರೆಸ್ಟ್ ಕನಸು! ಈಗ ಇಂತಹ ಜುಜಬಿ ಕನಸು ಯಾರಿಗೂ ಇಲ್ಲ. ಆದರೆ ಈಗ ಕಾಲೇಜಿಗೆ ಹೋದ ಮಗ ಮನೆ ಮಂದಿಗೆ ತಿಳಿಸದೇ ೩-೪ ಸಾವಿರ ಖರ್ಚುಮಾಡಿ ಹೊಸ ಮೊಬೈಲ್ ಖರೀದಿಸಬಲ್ಲ, ಬೈಕ್ ತರಬಲ್ಲ ! ‘ ನನ್ನ ಮಗನಿಗೆ ವಾರಕ್ಕೆ ಐನೂರು ರೂಪಾಯಿ ಖರ್ಚಿಗೆ ಬೇಕು…’ ಎಂದು ಕಾಲೇಜು ಹುಡುಗನಿಗೆ ನಗುತ್ತ  ಹಣ ಖರ್ಚು ಮಾಡುವ ಪಾಲಕರನ್ನು  ನೋಡಬಹುದು. ಕಿಸೆಗೆ ಹಣ ಬಂದು ಖರೀದಿ ತಾಕತ್ತು ಬಂದಿದೆ. ಖುಷಿಯ ಕ್ಷಣಗಳು  ಕೈಜಾರಿವೆ.