ಜನನ : ೧೨-೪-೧೯೪೦ ರಂದು ಹಾಸನದಲ್ಲಿ

ಮನೆತನ : ಸಂಗೀತಗಾರರ ಮನೆತನ. ತಂದೆ ವೆಂಕಟರಾಮಯ್ಯನವರು ಸಂಗೀತ ವಿದ್ವಾಂಸರು, ತಾಯಿ ಸಂಪ್ರದಾಯದ ಹಾಡುಗಳನ್ನು ಹಾಡುತ್ತಿದ್ದರು.

ಗುರುಪರಂಪರೆ : ಸಂಗೀತವನ್ನು ತಂದೆ ವೆಂಕಟರಾಮಯ್ಯನವರಲ್ಲೇ ಕಲಿತು ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ತಾಯಿ ಸೋಮನಾಯಕಮ್ಮನವರಿಂದ ಸಂಪ್ರದಾಯದ ಹಾಡುಗಳನ್ನು ಕಲಿತಿದ್ದಾರೆ. ಗಮಕದಲ್ಲಿ ಹಿರಿಯ ಗಮಕಿಗಳಾದ ನಂ. ಅಶ್ವತ್ಥನಾರಾಯಣ ಅವರ ಬಳಿ ಶಿಕ್ಷಣ ಪಡೆದು ಮುಂದೆ ಬಿ. ಎಸ್. ಎಸ್. ಕೌಶಿಕ್, ಎಂ. ರಾಘವೇಂದ್ರರಾವ್ ಮತ್ತು ಸತ್ಯವತಿ ಕೇಶವಮೂರ್ತಿ ಅವರಲ್ಲಿ ಉತ್ತಮ ಮಾರ್ಗದರ್ಶನ ಪಡೆದಿದ್ದಾರೆ. ಹರಿಹರದ ಪೇಟೆ ರಾಮಚಂದ್ರಾಚಾರ್ ಅವರಲ್ಲಿ ಸಾಹಿತ್ಯಾಭ್ಯಾಸ ಮಾಡಿದ್ದಾರೆ.

ಕ್ಷೇತ್ರ ಸಾಧನೆ : ತಮ್ಮ ಹತ್ತನೆಯ ವಯಸ್ಸಿನಿಂದಲೇ ಹಾಡುತ್ತಾ ಬಂದಿದ್ದಾರೆ. ಇಲ್ಲಿಯ ತನಕ ಇವರು ನೀಡಿರುವ ಕಾರ್ಯಕ್ರಮಗಳು ಎರಡು ಸಾವಿರವನ್ನು ಮೀರಿದೆ. ರಾಜ್ಯದ ಎಲ್ಲಾ ಭಾಗಗಳಲ್ಲೂ ಹಾಗೂ ಹೊರ ರಾಜ್ಯಗಳಲ್ಲೂ ಕಾರ್ಯಕ್ರಮಗಳನ್ನು ನೀಡಿದ್ದಾರೆ. ವಿವಾಹವಾಗಿ ಹರಿಹರದಲ್ಲಿ ನೆಲಸಿದ ಮೇಲೆ ಅಲ್ಲಿ ಗಮಕ ತರಗತಿಗಳನ್ನು ಪ್ರಾರಂಭಿಸಿ ಅನೇಕ ವಿದ್ಯಾರ್ಥಿಗಳನ್ನು ತಯಾರು ಮಾಡಿ ಗಮಕ ಕ್ಷೇತ್ರಕ್ಕೆ ನೀಡಿದ್ದಾರೆ. ವಾಚನ – ವ್ಯಾಖ್ಯಾನಗಳೆರಡರಲ್ಲೂ ಸಾಕಷ್ಟು ಪಾಂಡಿತ್ಯ ಗಳಿಸಿರುವ ಗಂಗಮ್ಮನವರು ತಮ್ಮ ಶಿಷ್ಯರನ್ನೂ ಅದೆ ಜಾಡಿನಲ್ಲಿ ತಯಾರು ಮಾಡಿರುವುದು ಒಂದು ವಿಶೇಷ. ೧೯೬೦ರಿಂದ ಆಕಾಶವಾಣಿಯಲ್ಲಿ ಕಾವ್ಯ ವಾಚನ ದೇವರನಾಮ, ಭಾವಗೀತೆಗಳ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಬೆಂಗಳೂರಿಗೆ ಬಂದು ನೆಲಸಿದ ನಂತರ ’ಲಕ್ಷ್ಮೀಶ ಗಮಕ ಪಾಠಶಾಲೆ’ಯನ್ನು ಸ್ಥಾಪಿಸಿ ನೂರಾರು ಗಮಕ ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮಾರ್ಗದರ್ಶನ ನೀಡುತ್ತಿರುವುದೇ ಅಲ್ಲದೆ ಪ್ರತಿ ಸೋಮವಾರ ಸಮಗ್ರ ಕಾವ್ಯ ವಾಚನ ಮಾಲೆಯಲ್ಲಿ ಅನೇಕ ಕಾವ್ಯಗಳ ವಾಚನ – ವ್ಯಾಖ್ಯಾನಗಳನ್ನು ವಿವಿಧ ಗಮಕಿಗಳಿಂದ ನಡೆಸಿದ್ದಾರೆ. ಪರಿಷತ್ತು ನಡೆಸುವ ಪರೀಕ್ಷೆಗಳ ಪರೀಕ್ಷಕರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಗಮಕ ಕಲಾ ಪರಿಷತ್ತಿನ ಪಠ್ಯಪುಸ್ತಕ ಪರಿಸ್ಕರಣಾ ಸಮಿತಿಯ ಸಂಚಾಲಕರಾಗಿದ್ದಾರೆ. ಇವರ ಕಂಠಶ್ರೀಗೆ ಮಾರುಹೋದ ಗಮಕಿ ರಾಘವೇಂದ್ರರಾಯರು ಇವರನ್ನು ಗಂಡು ಗಮಕಿ, ಕ್ಯಾಪ್ಟನ್, ಸವ್ಯಸಾಚಿ ಎಂದು ಕೊಂಡಾಡಿದ್ದಾರೆ.

ಪ್ರಶಸ್ತಿ – ಪುರಸ್ಕಾರಗಳು : ಶಿವಮೊಗ್ಗ ಹೊಸಹಳ್ಳಿಯ ಗಮಕ ಕಲಾ ಪರಿಷತ್ತಿನಿಂದ ’ಕಾವ್ಯಗಾಯನ ಕಲಾಧರೆ’ ಕಾಳಿಂಗರಾವ್ ಬಳಗದಿಂದ ’ಕಾವ್ಯಗಾನ ಕೋಗಿಲೆ’, ವೆಂಕಟೇಶ ನಾಟ್ಯ ಮಂದಿರ ಮತ್ತು ಮಹಿಳಾ ಅಭ್ಯುದಯ ಸಂಘದಿಂದ ’ಶ್ರೇಷ್ಟಗಮಕಿ’ ಸನ್ಮಾನ. ಶ್ರೀಮದಾನಂದ ತೀರ್ಥ ವಿದ್ಯಾಪೀಠದ ವತಿಯಿಂದ ಹಿರಿಯ ಗಮಕಿ ಮೈ. ಶೇ. ಅನಂತಪದ್ಮನಾಭರಾಯ ಜನ್ಮ ಶತಾಬ್ಧಿ ಉತ್ಸವದಲ್ಲಿ ’ಗಮಕ ವಾಚನ ಕಲಾವತಂಸೆ’ ಬಿರುದಿನೊಂದಿಗ ಸನ್ಮಾನ. ಹರಿಹರದಲ್ಲಿ ನಡೆದ ಗಮಕ ಕಲೋತ್ಸವದಲ್ಲಿ ಕನಕಗಿರಿ ಲಲಿತಕಲಾ ಸಂಘದವತಿಯಿಂದ ಸನ್ಮಾನಿಸಲ್ಪಟ್ಟಿದ್ದಾರೆ.

ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಇವರಿಗೆ ೧೯೯೭-೯೮ರ ಸಾಲಿನ ’ಕರ್ನಾಟಕ ಕಲಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ.