೧೯೪೨ – ಇಡೀ ಭಾರತದಲ್ಲಿ “ಬ್ರಿಟಿಷರೇ ಭಾರತದಿಂದ ಹೊರಡಿ, ಎಂದು ಚಳವಳಿ ನಡೆದ ಕಾಲ. ರಾಜಕೀಯ ಮುಖಂಡರನ್ನು ಚಳವಳಿಯಲ್ಲಿ ಸೇರಿದ ಕಾರ್ಯಕರ್ತರನ್ನೂ ಸರಕಾರ ಬಂಧಿಸಿ ಜೈಲು ತುಂಬಿದ ಕಾಲ. ಅಲ್ಲಿ ಕೈದಿಗಳಿಗೆ ಕೊಡುವ ಆಹಾರ ತುಂಬಾ ಅನಾರೋಗ್ಯಕರವಾಗಿತ್ತು. ಆಗ ಕಾಲರಾ ಹಬ್ಬಿದ್ದರಿಂದ ಅದೆಷ್ಟೋ ಸೆರೆಮನೆಯಲ್ಲಿದ್ದವರು ರೋಗಪೀಡಿತರಾಗಿ ಸತ್ತು ಹೋಗಿದ್ದರು.

ಆಗ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ರೋಮಾಂಚಕಾರಿ ಘಟನೆಯೊಂದು ನಡೆಯಿತು.

ರಾಜಕೀಯ ಬಂಧಿಗಳು ಈ ಕೆಟ್ಟ ಆಹಾರವನ್ನು ನಾವು ಮುಟ್ಟುವುದಿಲ್ಲ ಎಂದು ಪ್ರತಿಭಟಿಸಿದರು. ಬಂಧಿಗಳ ಮೇಲೆ ತಮ್ಮ ಹತೋಟಿ ತಪ್ಪಿದ್ದನ್ನು ಕಂಡು ಸೆರೆಮನೆಯ ಅಧಿಕಾರಿಗಳು ಹೌಹಾರಿ ಸಶಸ್ತ್ರ ಪೊಲೀಸ್ ಪಡೆಯನ್ನು ಕರೆಸಿದರು. ಕೈದಿಗಳು ಜೈಲು ಒಡೆದು ಓಡಿಹೋಗಬಹುದು ಎಂಬ ಭಯ ಅಧಿಕಾರಿಗಳಿಗೆ.

ಬಂಧಿಗಳು ಸ್ವಲ್ಪವೂ ಹೆದರದೆ ಧೈರ್ಯದಿಂದಿದ್ದರು. ಕೆಟ್ಟ ಆಹಾರ ತಿಂದು ಕಾಲರಾದಿಂದ ಇಲಿಗಳಂತೆ  ಸಾಯುವುದಕ್ಕಿಂತ ಗುಂಡಿಗೆ ತುತ್ತಾಗಿ ಹುತಾತ್ಮರಾಗುವುದೇ ಲೇಸೆಂದು ಬಗೆದರು.

ಸಿಟಿ ಮ್ಯಾಜಿಸ್ಟ್ರೇಟರು ಕೈದಿಗಳಿಗೆ “ಒಳಗೆ ಹೋಗಿರಿ, ನಿಮ್ಮ  ಕೋಣೆಗಳಲ್ಲಿ ಸೇರಿಕೊಳ್ಳಿರಿ” ಎಂದು ಹೇಳಿದರು. ಆ ಮಾತಿಗೆ ಯಾರೂ ಕಿವಿಗೊಡಲಿಲ್ಲ. ಮ್ಯಾಜಿಸ್ಟ್ರೇಟರು ಸಶಸ್ತ್ರ ಪೊಲೀಸರಿಗೆ “ಸಜ್ಜಾಗಿರಿ” ಎಂದು ಆಜ್ಞೆ ಮಾಡಿದರು. ಪೊಲೀಸರು ಗುಂಡು ಹಾರಿಸಲು ಸಿದ್ಧರಾದರು.

ಆಗ ಒಬ್ಬ ಸೆರೆಯಾಳು ಮುಂದೆ ಬಂದು ಎದೆ ತೆರೆದು ನಿಂತು, “ಗುಂಡು ಹಾಕುವುದಿದ್ದರೆ ನನಗೆ ಹಾಕಿರಿ. ಅದಕ್ಕೆ ನಾನು ಸಿದ್ಧನಿದ್ದೇನೆ. ಹುಳುಗಳಂತೆ ಸಾಯುವುದಕ್ಕಿಂತ ಹುಲಿಗಳಂತೆ ಸಾಯುವುದು ಲೇಸು!” ಎಂದು ಸಿಂಹ ಗರ್ಜನೆ ಮಾಡಿದರು. ಅಧಿಕಾರಿಗಳು ಈ ಸಿಂಹದ ಮುಂದೆ ದಿಕ್ಕೆಟ್ಟರು. ಕೈ ಮುಗಿದು ಬಂದಿಗಳ ಸಹಕಾರ ಕೋರಿದರು. ಸರಕಾರಕ್ಕೆ ಅರಿಕೆ ಮಾಡಿ ಒಂದು ವಾರದಲ್ಲಿ ಒಳ್ಳೆಯ ಆಹಾರದ ವ್ಯವಸ್ಥೆ ಮಾಡುವ ಆಶ್ವಾಸನೆ ನೀಡಿದರು. ಹೋರಾಟಗಾರರ ಧುರೀಣರು ಎಲ್ಲ ಕೈದಿಗಳಿಗೆ ಒಳಗೆ ಹೋಗಲು ಹೇಳಿದರು. ಸಶಸ್ತ್ರ ಪೊಲೀಸ್ ಪಡೆ ಹಿಂದಿರುಗಿತು.

"ಗುಂಡು ಹಾಕುವುದಾದರೆ ನನಗೆ ಹಾಕಿರಿ"

ಗುಂಡು ಹಾಕಿರೆಂದು ಎದೆ ತೆರೆದು ನಿಂತ ಆ ಸೆರೆಯಾಳು ದೇಶಭಕ್ತ ಗಂಗಾಧರರಾವ್ ದೇಶಪಾಂಡೆ

ಮನೆತನ

ಗಂಗಾಧರರಾಯರು ಹುದಲಿ ದೇಶಪಾಂಡೆ ಮನೆತನದವರು. ಅವರ ಮುತ್ತಜ್ಜ ಬಾಲಕೃಷ್ಣರಾಯರು ಹಲವು ವರ್ಷ ಧಾರವಾಡ ಜಿಲ್ಲೆಯ ಹುಬ್ಬಳ್ಳಿ, ಶಿಗ್ಗಾವಿ,  ತಾಲ್ಲೂಕುಗಳಲ್ಲಿ ಮಾಮಲೇದಾರರಾಗಿದ್ದರು. ಅವರಿಗೆ ಮೂರು ಜನ ಮಕ್ಕಳು. ಅವರಲ್ಲಿ ಒಬ್ಬನ ಹೆಸರು ಗಂಗಾಧರರಾಯ. ತಮ್ಮ ತಂದೆಯಂತೆ ತಾವು ಸರಕಾರಕ್ಕೆ ನಿಷ್ಠರಾಗಿ ಸೇವೆ ಸಲ್ಲಿಸುವುದಾಗಿಯೂ ಮುಂದೆ ತಮ್ಮ ವಂಶಜರು ಕೂಡಾ ಅದೇ ನಿಷ್ಠೆಯನ್ನು ತೋರಿಸುವುದಾಗಿಯೂ ಭರವಸೆಕೊಟ್ಟು ಸರಕಾರಕ್ಕೆ ಅವರು ಮಾಮಲೇದಾರ ಹುದ್ದೆಗಾಗಿ ಅರ್ಜಿ ಹಾಕಿದ್ದರು.

ಅದೇ ವಂಶದಲ್ಲಿ ಅವರ ಹೆಸರನ್ನಿಟ್ಟುಕೊಂಡ ಮೊಮ್ಮಗ ಹುಟ್ಟಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ಪ್ರಚಂಡ ಹೋರಾಟ ನಡೆಸಿ, ಅನೇಕ ಬಾರಿ ಜೈಲಿಗೆ ಹೋದ. ಗಂಗಾಧರರಾಯರ ತಂದೆಯ ಹೆಸರು ಭಾವು ಸಾಹೇಬ. ಅವರು ಬೆಳಗಾವಿಯಲ್ಲಿ ಹೆಸರಾಂತ ವಕೀಲರಾಗಿದ್ದರು. ಗಂಗಾಧರರಾಯರು ೧೮೭೧ರ ಮಾರ್ಚ್  ೩೧ರಂದು ಕೊಲ್ಲಾಪೂರ ಸಂಸ್ಥಾನಕ್ಕೆ ಸೇರಿದ ಜಲಾಲಪುರದಲ್ಲಿ ಹುಟ್ಟಿದ್ದರು.

ವಿದ್ಯಾಭ್ಯಾಸ

ಚಿಕ್ಕಂದಿನಲ್ಲಿ ಓದು ಬರಹದ ಕಡೆಗೆ ಗಂಗಾಧರರಾಯರಿಗೆ ವಿಶೇಷ ಆಸಕ್ತಿ ಇರಲಿಲ್ಲ. ಶಾಲೆಯನ್ನು ತಪ್ಪಿಸಿ ಹುಡುಗರ ಕೂಡ ಆಟವಾಡುವುದೆಂದರೆ ಅವರಿಗೆ ತುಂಬಾ ಇಷ್ಟ. ಪ್ರಾರಂಭದ ಶಿಕ್ಷಣವೆಲ್ಲ ಮರಾಠಿಯಲ್ಲಾದುದರಿಂದ ಚಿಕ್ಕ ವಯಸ್ಸಿನಲ್ಲಿ ಅವರ ಒಲವು ಸ್ವಾಭಾವಿಕವಾಗಿ ಮರಾಠಿ ಕಡೆಗೆ ಇತ್ತು. ಆದರೂ ಕನ್ನಡದ ಬಗ್ಗೆ ತಿರಸ್ಕಾರ ಭಾವನೆ ಇರಲಿಲ್ಲ. ಹುದಲಿಯಲ್ಲಿ ರೈತರ ಸಂಗಡ ಅವರು ಕನ್ನಡದಲ್ಲಿಯೇ ಮಾತನಾಡುತ್ತಿದ್ದರು. ಭಾವು ಸಾಹೇಬರು ಬೆಳಗಿನ ವೇಳೆಯಲ್ಲಿ ರೂಪಾವಳಿ, ಸಮಾಸಚಕ್ರ, ಅಮರಕೋಶ ಹಾಗೂ ಸಂಸ್ಕೃತ ಸುಭಾಷಿತಗಳನ್ನು ಮಗನಿಗೆ ಹೇಳಿಕೊಡುತ್ತಿದ್ದರು. ಸಂಧ್ಯಾವಂದನೆ, ರುದ್ರ, ಪವಮಾನ, ಪುರುಷ ಸೂಕ್ತಗಳನ್ನು ಹೇಳಿಕೊಡಲು ಉಪಾಧ್ಯಾಯರನ್ನು ನೇಮಿಸಿದ್ದರು.

ಪ್ರಾಚೀನ ಪದ್ಧತಿಯ ಶಿಕ್ಷಣದ ಜೊತೆಗೆ ಹೊಸ ಪದ್ಧತಿಯ ಶಿಕ್ಷಣವೂ ಗಂಗಾಧರ ರಾಯರಿಗೆ ದೊರೆಯಿತು.

ಭಾವು ಸಾಹೇಬ ಭಾಟೆಯವರು ಪುಣೆಯ ನ್ಯೂ ಇಂಗ್ಲಿಷ್ ಸ್ಕೂಲ್ ಮಾದರಿಯ ಇಂಗ್ಲಿಷ್ ಶಾಲೆಯೊಂದನ್ನು ಬೆಳಗಾವಿಯಲ್ಲಿ ಆರಂಭಿಸಿದ್ದರು. ಅದಕ್ಕೆ “ಭಾಟೆ ಸ್ಕೂಲ್” ಎಂದು ಕರೆಯುತ್ತಿದ್ದರು. ಗಂಗಾಧರರಾಯರು ಈ ಶಾಲೆಯಲ್ಲಿ ಮೂರು ತರಗತಿಗಳಲ್ಲಿ ಉತ್ತೀರ್ಣರಾಗಿ ಸರದಾರ ಪ್ರೌಢಶಾಲೆಯ ಪ್ರವೇಶ ಮಾಡಿದರು. ವಿದ್ಯಾರ್ಥಿ ದೆಸೆಯಲ್ಲಿದ್ದಾಗಲೇ ಅವರು ಅಭ್ಯಾಸಕ್ಕಿಂತ ವಿದ್ಯಾರ್ಥಿಗಳ ಮುಖಂಡರಾಗಿ ಓಡಾಡುವ ಸ್ವಭಾವವನ್ನು ತೋರಿಸಿದ್ದರು. ಪ್ರೌಢಶಾಲೆ ಶಿಕ್ಷಣ ಮುಗಿಸಿ ಅವರು ಪುಣೆಯ ಡೆಕ್ಕನ್ ಕಾಲೇಜ್ ಪ್ರವೇಶಿಸಿದರು.

ಡೆಕ್ಕನ್ ಕಾಲೇಜಿನಲ್ಲಿ ಕಳೆದ ನಾಲ್ಕು ವರ್ಷಗಳ ಅವಧಿ ಗಂಗಾಧರರಾಯರ ಜೀವಮಾನದಲ್ಲಿ ಅತ್ಯಂತ ಮಹತ್ವದ್ದಾಗಿತ್ತು. ಅದೇ ಕಾಲೇಜಿನಿಂದ ಅವರು ೧೮೯೩ರಲ್ಲಿ ಬಿ.ಎ. ಪದವೀಧರರಾದರು.

“ಸರಕಾರಿ ನೌಕರಿ ಬೇಡ”

ಗಂಗಾಧರರಾಯರ ಅಜ್ಜ ಮುತ್ತಜ್ಜರು ರಾಜನಿಷ್ಠೆಯಿಂದ ಸರಕಾರಿ ನೌಕರಿಯನ್ನು ಮಾಡಿದ ಬಗ್ಗೆ ಯುರೋಪಿಯನ್ ಅಧಿಕಾರಿಗಳು ಅವರಿಗೆ ಪ್ರಮಾಣಪತ್ರಗಳನ್ನು ಕೊಟ್ಟಿದ್ದರು. ಭಾವು ಸಾಹೇಬರು ಅವುಗಳ ಉಪಯೋಗವನ್ನು ಮಾಡಿಕೊಳ್ಳ ಬಯಸಿದರು. ಸೆಲ್ಟಿ ಸಾಹೇಬರೆಂಬ ಅಧಿಕಾರಿಯ ಮುಖಾಂತರ ಗಂಗಾಧರರಾಯರಿಗೆ ಸರಕಾರಿ ನೌಕರಿ ಕೊಡಿಸಬೇಕೆಂದು ಅವರ ಯೋಚನೆ. ಸೆಲ್ಬಿ ಸಾಹೇಬರು ಒಂದು ದಿನ ರಾಯರನ್ನು ತಮ್ಮ ಬಂಗಲೆಗೆ ಕರೆಸಿಕೊಂಡು, “ಸರಕಾರಿ ನೌಕರಿ ಮಾಡುವ ಇಚ್ಛೆ ಇದೆಯೇ?” ಎಂದು ಕೇಳಿದರು. “ನನಗೆ ಸರಕಾರಿ ನೌಕರಿ ಬೇಕಾಗಿಲ್ಲ. ಕಾಯಿದೆ ಅಭ್ಯಾಸ ಮಾಡಿ ಜನತೆಯ ಸೇವೆ ಮಾಡ ಬಯಸುವೆ” ಎಂದು ಗಂಗಾಧರ ರಾಯರು ಹೇಳಿದರು. ಸಾಹೇಬರು ಅವಾಕ್ಕಾದರು. ಇವರಿಗೆ ನೌಕರಿ ಕೊಡುವ ವಿಚಾರವನ್ನು ಕೈ ಬಿಟ್ಟರು.

ಆ ಬಳಿಕ ಗಂಗಾಧರರಾಯರು ಮುಂಬಯಿಯಲ್ಲಿ ಕಾಯಿದೆ ಅಭ್ಯಾಸ ಮಾಡಿ ಎಲ್.ಎಲ್.ಬಿ. ಪರೀಕ್ಷೆಯನ್ನು ಮುಗಿಸಿ ಬೆಳಗಾವಿಗೆ ಬಂದರು. ೧೮೯೭ರಂದ ೧೯೦೫ರ ವರೆಗೆ ಅವರು ಬೆಳಗಾವಿಯಲ್ಲಿ ವಕೀಲಿ  ವೃತ್ತಿಯನ್ನು ನಡೆಸಿಕೊಂಡು ಬಂದು ಒಳ್ಳೆಯ ಹೆಸರು ಪಡೆದರು.

ಅವರು ವಕೀಲಿಯನ್ನು ಪ್ರಾರಂಭ ಮಾಡಿದ ಕೆಲವೇ ದಿನಗಳಲ್ಲಿಯೇ ಬೆಳಗಾವಿ ಪುರಸಭೆಯ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು, ಆಯ್ಕೆಯಾದರು. ೧೯೧೨ರವರೆಗೂ ಅವರು ಚುನಾವಣೆಯಲ್ಲಿ ಭಾಗವಹಿಸಿ ಆಯ್ಕೆಯಾಗುತ್ತಾ ಬಂದರು. ಅದೇ ವೇಳೆಗೆ ಮಿತ್ರ ಮಂಗೇಶರಾಯ್ ತೆಲಂಗರೊಂದಿಗೆ “ಧುರೀಣ” ಎಂಬ ಪತ್ರಿಕೆಯನ್ನು ಹೊರಡಿಸಿದರು. ಹೀಗೆ ಗಂಗಾಧರರಾಯರು ಬೆಳಗಾವಿಯ ಸಾರ್ವಜನಿಕ ಜೀವನದಲ್ಲಿ ಭಾಗವಹಿಸತೊಡಗಿದರು.

ಬಾಲ್ಯಾಭಿರುಚಿ

ತಂದೆ-ತಾಯಿಗಳ ಪ್ರೀತಿಯ ಮಗನಾಗಿ ಬೆಳೆಯುತ್ತಿದ್ದ ಗಂಗಾಧರರಾಯರಿಗೆ ಕುದುರೆಗಳೆಂದರೆ ಬಹಳ ಪ್ರೀತಿ. ತಾಯಿಯ ಸೋದರಮಾವನ ಮಗ ಶ್ರೀಮಂತ. ಅಪ್ಪ ಕುದುರೆ ಸವಾರಿ ಮಾಡುತ್ತಿದ್ದರು. ಅದನ್ನು ಕಂಡು ಬಾಲಕ ಗಂಗಾಧರರಾಯರ ಮನಸ್ಸಿನಲ್ಲಿ ಕುದುರೆ ಸವಾರಿ ಮಾಡಬೇಕೆಂಬ ಹಂಬಲವಾಯಿತು. ಅಪ್ಪಾಸಾಹೇಬರು ರಾಯರನ್ನು ಕುದುರೆಯ ಮೇಲೇರಿ ಕುಳ್ಳರಿಸಿಕೊಂಡು ಅವರ ಆಸೆಯನ್ನು ಪೂರ್ತಿಗೊಳಿಸಿದರು. ಒಳ್ಳೆಯ ಕುದುರೆಗಳನ್ನು ಕಂಡಾಗಲೆಲ್ಲ ರಾಯರು ಏಕಚಿತ್ತದಿಂದ ನೋಡುತ್ತ ನಿಲ್ಲುತ್ತಿದ್ದರು. ಊರಿನಲ್ಲಿದ್ದಾಗ ಪ್ರತಿದಿನ ಕುದುರೆಯ ಮೇಲೆ ಕುಳಿತು ಸುತ್ತಾಡಿ ಬರುವ ರೂಢಿಯಿಟ್ಟುಕೊಂಡಿದ್ದರು. ಮುಂಬಯಿಯಲ್ಲಿ ಗಂಗಾಧರರಾಯರು ಕಾಯಿದೆ ಅಭ್ಯಾಸ ಮಾಡುತ್ತಿದ್ದಾಗಲೂ ಕುದುರೆಗಳನ್ನು ಕಂಡು ತೃಪ್ತಿ ಪಡೆಯಲು ಸಂಜೆಯ ಹೊತ್ತಿನಲ್ಲಿ ಜನಸಂದಣಿಯ ರಸ್ತೆ “ಕ್ವೀನ್ಸ್ ರೋಡ್” ನಲ್ಲಿ ಸಂಚರಿಸುತ್ತಿದ್ದರು. ದೊಡ್ಡವರಾದ ಮೇಲು ಅವರು ಕುದುರೆಯ ಮೇಲೆ ಕುಳಿತು ತಿರುಗಾಡುತ್ತಿದ್ದರು.

ಹುದಲಿಯ ಮಾವಿನ ಹಣ್ಣು ಶ್ರೇಷ್ಠವೆಂದು ಹೆಸರು ಪಡೆದಿವೆ. ಬೇಸಿಗೆಯ ರಜೆಯಲ್ಲಿ ರಾಯರು ಹುದಲಿಗೆ ಬಂದಾಗ ಮಾವಿನ ತೋಟದಲ್ಲಿ ತಿರುಗಾಡಲು ಹೋಗುತ್ತಿದ್ದರು. ಗಿಡದ ಮೇಲಿನ ಪಾಡುಗಾಯಿ ತಿನ್ನುವುದೆಂದರೆ ಅವರಿಗೆ ಬಹಳ ಇಷ್ಟ. ಕಾವಲುಗಾರನು ಮರವೇರಿ ಹಣ್ಣುಗಳನ್ನು ಕಿತ್ತುಕೊಟ್ಟರೂ ಗಂಗಾಧರರಾಯರಿಗೆ ಸಮಾಧಾನವಾಗುತ್ತಿರಲಿಲ್ಲ. ಹಣ್ಣಾಗುತ್ತಿದ್ದ ಕಾಯಿಗಳನ್ನು ಕಲ್ಲಿನೀಂದ ಹೊಡೆದು ಕೆಡಹುದರಲ್ಲಿಯೇ ಅವರಿಗೆ ಪರಮಾನಂದ.

ಕೌಟುಂಬಿಕ ಜೀವನ

ಗಂಗಾಧರರಾಯರು ಇಂಗ್ಲಿಷ್ ಐದನೆಯ ತರಗತಿಯಲ್ಲಿ ಓದುತ್ತಿದ್ದಾಗ ಕರಗುಪ್ಪಿಕರ ಮನೆತನದ ೧೦-೧೨ ವರ್ಷದ ಹುಡುಗಿ ಲಕ್ಷ್ಮೀಬಾಯಿಯೊಡನೆ ಅವರ ವಿವಾಹವಾಯಿತು. ಗಂಗಾಧರರಾಯರ ತಂದೆ, ತಾಯಿ, ಅಜ್ಜಿ ಎಲ್ಲರೂ ಲಕ್ಷ್ಮೀಬಾಯಿಯನ್ನು ಬಹಳ ಪ್ರೀತಿಸುತ್ತಿದ್ದರು. ಅವರು ಗಂಡನ ಒಲವು, ನಿಲುವುಗಳಿಗೆ ಅನುಗುಣವಾಗಿ ನಡೆದುಕೊಳ್ಳುತ್ತಿದ್ದರು. ಗಂಗಾಧರರಾಯರಿಗೆ ಗಂಡು ಮಕ್ಕಳಿರಲಿಲ್ಲ. ಯಮೂ, ತಾಯಿ, ಠಕೂರಾಯಿನ ಎಂಬ ಹೆಸರಿನ ಇಬ್ಬರು ಹೆಣ್ಣು ಮಕ್ಕಳಿದ್ದರು. ಗಂಡು ಸಂತಾನವಾಗದ್ದರಿಂದ ಲಕ್ಷ್ಮೀಬಾಯಿಗೆ ಕೊರಗು ಹೆಚ್ಚಾಯಿತು. ಇನ್ನೊಂದು ಲಗ್ನಮಾಡಿಕೊಳ್ಳಲು ಅವರು ರಾಯರನ್ನು ಆಗ್ರಹ ಪಡಿಸಿದರು. ಲಗ್ನದ ವಿಷಯದಲ್ಲಿ  ಗಂಗಾಧರರಾಯರ ಕಲ್ಪನೆಗಳು ಭಿನ್ನವಾಗಿದ್ದರಿಂದ ಎರಡನೆಯ ಮದುವೆಗೆ ಅವರು ಒಪ್ಪಲಿಲ್ಲ. ನಾನಾ ರೀತಿಯ ಚಟುವಟಿಕೆಗಳಲ್ಲಿ ಆಸಕ್ತರಾಗಿದ್ದುಕೊಂಡು ರಾಯರು ಸಮಾಜಸೇವೆಯಲ್ಲಿ ಪ್ರಧಾನಪಾತ್ರ ವಹಿಸತೊಡಗಿದ್ದರು. ಗಂಡುಮಕ್ಕಳಾಗದೆ ಇದ್ದುದಕ್ಕೆ ತಮ್ಮ ಪ್ರಕೃತಿ ದೋಷವು ಕಾರಣವಿರಬೇಕೆಂದು ಭಾವಿಸಿ ಲಕ್ಷ್ಮೀಬಾಯಿಯು ಮೀರಜಿಗೆ ಹೋಗಿ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಂಡರು. ಶಸ್ತ್ರಚಿಕಿತ್ಸೆಯೊಂದೇ ಉಪಾಯವೆಂದು ವೈದ್ಯರು ತಿಳಿಸಿದಾಗ ಅದಕ್ಕೂ ಲಕ್ಷ್ಮೀಬಾಯಿ ಸಿದ್ಧರಾದರು. ದುರ್ದೈವದಿಂದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಲಿಲ್ಲ. ಲಕ್ಷ್ಮೀಬಾಯಿ ಆಸ್ಪತ್ರೆಯಲ್ಲಿಯೇ ನಿಧನ ಹೊಂದಿದರು. ಹೆಂಡತಿ ತೀರಿಕೊಂಡ ಸುದ್ದಿ ತಂತಿ ಮೂಲಕ ತಿಳಿದಾಗ ಗಂಗಾಧರರಾಯರು ತುಂಬಾ ನೊಂದುಕೊಂಡರು.

ಸಾರ್ವಜನಿಕ ಜೀವನ

ಶಾಲೆಯಲ್ಲಿ ಓದಿದ ಇತಿಹಾಸದ ಸಂಗತಿಗಳು ಗಂಗಾಧರರಾಯರ ಮೇಲೆ ಸಾಕಷ್ಟು ಪರಿಣಾಮ ಬೀರಿದ್ದವು. ಕಿತ್ತೂರು ಚೆನ್ನಮ್ಮ, ನರಗುಂದ ಬಾಬಾ ಸಾಹೇಬ, ಸಂಗೊಳ್ಳಿ ರಾಯಣ್ಣ ಮೊದಲಾದ ಸ್ವಾತಂತ್ರ್ಯ ವೀರರ ಚರಿತ್ರೆಗಳು ಅವರಿಗೆ ಸ್ಫೂರ್ತಿ ನೀಡಿದವು. ಭರತಖಂಡದ ಪ್ರಾಚೀನ ಇತಿಹಾಸವು ಅವರಲ್ಲಿ ರಾಷ್ಟ್ರೀಯ ಭಾವನೆಯನ್ನು ಜಾಗೃತಗೊಳಿಸಿತು. “ಇಂದು ಪ್ರಕಾಶ”, ‘ಬೆಳಗಾವ ಸಮಾಚಾರ’ ಪತ್ರಿಕೆಗಳಲ್ಲಿ ಬರುತ್ತಿದ್ದ ಸುದ್ದಿಗಳು ಅವರಿಗೆ ದೇಶದ ಆಗಿನ ಪರಿಸ್ಥಿತಿಯ ಬಗ್ಗೆ ಕೆಲಮಟ್ಟಿಗೆ ತಿಳುವಳಿಕೆ ನೀಡಿದ್ದವು.

ಗಂಗಾಧರರಾಯರು ವಿದ್ಯಾರ್ಥಿಯಾಗಿದ್ದಾಗಲೇ ೧೮೮೭ರಲ್ಲಿ ಪ್ರಥಮ ಬಾರಿಗೆ ಮದ್ರಾಸಿನಲ್ಲಿ ಕಾಂಗ್ರೇಸ್ ಅಧಿವೇಶನವನ್ನು ನೋಡಿದರು. ಅವರ ತಂದೆಯವರು ಅವರನ್ನು ಕರೆದುಕೊಂಡು ಹೋಗಿದ್ದರು. ಸುರೇಂದ್ರನಾಥ ಬ್ಯಾನರ್ಜಿಯಂಥ ರಾಷ್ಟ್ರೀಯ ಮುಖಂಡರನ್ನು ಗಂಗಾಧರರಾಯರು ಭೇಟಿಯಾದರು. ಬ್ಯಾನರ್ಜಿಯವರ ವ್ಯಕ್ತಿತ್ವದ ಪರಿಣಾಮವು ರಾಯರ ಮೇಲೆ ಸಾಕಷ್ಟಾಯಿತು. ಅಧಿವೇಶನದಲ್ಲಿ ಭಾಗವಹಿಸಿದ್ದ ಜನತೆಯಲ್ಲಿನ ದೇಶಾಭಿಮಾನವನ್ನು ಕಂಡು ಅವರಲ್ಲಿದ್ದ ಸ್ಫೂರ್ತಿ ಇಮ್ಮಡಿಗೊಂಡಿತು. “ದೇಶಸೇವೆಯನ್ನು ಹೇಗೆ ಮಾಡಬೇಕು? ಅದು ನನ್ನಿಂದ ಆದೀತೆ? ನನಗೆ ಆ ಯೋಗ್ಯತೆ ಬರಬೇಕಾದರೆ ಯಾವ ಸಿದ್ಧತೆ ಮಾಡಬೇಕು?” ಇವೇ ಮೊದಲಾದ ವಿಚಾರಗಳು ಇದೇ ಹೊತ್ತಿಗೆ ಗಂಗಾಧರರಾಯರ ಮನಸ್ಸಿನಲ್ಲಿ ಮೂಡಿದವು.

೧೮೮೮ ರಲ್ಲಿ ಜರುಗಿದ ಅಲಹಾಬಾದ್ ಕಾಂಗ್ರೇಸ್ ಅಧಿವೇಶನಕ್ಕೆ ಬಾವು ಸಾಹೇಬರು ಹೊರಟಾಗ ಗಂಗಾಧರರಾಯರು ಅವರ ಜೊತೆಗೆ ಹೋದರು. ಹಿಂತಿರುಗಿ ಬರುವಾಗ ಅನೇಕ ಕ್ಷೇತ್ರಗಳ ದರ್ಶನ ಪಡೆದರು. ವ್ಯಾಸಂಗ ಪೂರ್ತಿಯಾದ ಮೇಲೆ ತಾವು ದೇಶಸೇವೆ ಮಾಡಬೇಕೆಂದು ಸಂಕಲ್ಪ ಮಾಡಿದರು. ೧೮೮೯ರಲ್ಲಿ ಮುಂಬಯಿಯಲ್ಲಿ ಕಾಂಗ್ರೆಸ್ ಅಧಿವೇಶನ ಸಮಾವೇಶವಾಯಿತು. ವಿದ್ಯಾರ್ಥೀಗಳಿಂದ ಹಣ ಸಂಗ್ರಹಿಸಿ ಅಧಿವೇಶನಕ್ಕೆ ಕಳುಹಿಸಿಕೊಡಬೇಕೆಂದು ಯೋಚಿಸಿ “ಬೆಳಗಾವಿ ರಾಷ್ಟ್ರ ಹಿತೈಷಿ ಬಾಲಸಭಾ” ಎಂಬ ಸಂಸ್ಥೆಯನ್ನು ಗಂಗಾಧರರಾಯರು ಆರಂಭಿಸಿದರು. ಅವರು ಸುಮಾರು ನೂರು ರೂಪಾಯಿ ಕೂಡಿಸಿ ಮುಂಬಯಿಗೆ ಹೋಗಿ ಕಾಂಗ್ರೆಸ್ ಕಾರ್ಯದರ್ಶಿಗಳಿಗೆ ಹಣ ಒಪ್ಪಿಸಿ ಬಂದರು.

ಹೀಗೆ ಗಂಗಾದರರಾಯರು ವಿದ್ಯಾರ್ತೀಗಳಿದ್ದಾಗಲೇ ದೇಶದ ರಾಜಕೀಯ ಆಗುಹೋಗುಗಗಲ ನೇರ ಪರಿಚಯ ಸಾಕಷ್ಟು ಆಗಿತ್ತು.

“ಕೇಸರಿ”ಯಿಂದ ಸ್ಫೂರ್ತಿ, ಗೋಖಲೆ-ತಿಲಕರ ಭೇಟಿ

ವಿದೇಶಿ ಬಹಿಷ್ಕಾರ ಚಳವಳಿಯ ಸಂಬಂಧವಾಗಿ ಪುಣೆಯಿಂದ ಹೊರಡುತ್ತಿದ್ದ “ಕೇಸರಿ” ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ತಿಲಕರ ಹರಿತವಾದ ಲೇಖನಗಳು ಗಂಗಾಧರರಾಯರಿಗೆ ಹೆಚ್ಚಿನ ಸ್ಫೂರ್ತಿ ನೀಡಿದವು. ಕೇವಲ ಈ ಚಳವಳಿಯಲ್ಲಿ ಮಾತ್ರ ಭಾಗವಹಿಸಬೇಕೋ ಅಥವಾ ತಮ್ಮ ಇಡೀ ಜೀವನವನ್ನೇ ರಾಷ್ಟ್ರ ಸೇವೆಗಾಗಿ ಮುಡುಪಾಗಿಡಬೇಕೋ ಎಂದು ಮನಸ್ಸಿನಲ್ಲಿ ವಿಚಾರ ತರಂಗಗಳೆದ್ದಿದ್ದವು. ಬಾಲಗಂಗಾಧರ ತಿಲಕರೂ, ಗೋಪಾಲ ಕೃಷ್ಣ ಗೋಖಲೆಯವರೂ ಆ ದಿನಗಳಲ್ಲಿ ಖ್ಯಾತ ಜನನಾಯಕರು. ತಮ್ಮ ಭವಿಷ್ಯದ ವಿಷಯದಲ್ಲಿ ಗೋಖಲೆಯವರ ಸಲಹೆ ಪಡೆಯಬೇಕೆಂದು ಗಂಗಾಧರರಾಯರು ಯೋಚನೆ ಮಾಡಿದರು. ಪುಣೆಗೆ ಬಂದು ಅವರು ಗೋಖಲೆಯವರನ್ನು ಕಂಡರು. ರಾಜಕೀಯ ಕ್ಷೇತ್ರದಲ್ಲಿ ಕಾರ್ಯ ಮಾಡಬೇಕೆಂಬ ತಮ್ಮ ಮನಸ್ಸಿನ ಬಯಕೆಯನ್ನು ಗೋಖಲೆಯವರ ಎದುರಿಗೆ ಇಟ್ಟರು.  ತಿಲಕರನ್ನು ಭೇಟಿಯಾಗಿ ನಿರ್ಧಾರ ತೆಗೆದುಕೊಳ್ಳಲು ಅವರು ಗಂಗಾಧರಾಯರಿಗೆ ಸಲಹೆ ನೀಡಿದರು. ಗೋಖಲೆಯವರ ಸಲಹೆಯ ಮೇರೆಗೆ ತಿಲಕರನ್ನು ಕಂಡರು. ತಾವು ವಕೀಲಿ ವೃತ್ತಿಯನ್ನು ಬಿಟ್ಟು ಸಾರ್ವಜನಿಕ ಕಾರ್ಯಗಳಲ್ಲಿ ತೊಡಗಬೇಕೆಂಬ ಯೋಚನೆಯನ್ನು ಮಾಡುತ್ತಿರುವುದಾಗಿ ತಿಲಕರಿಗೆ ಗಂಗಾಧರರಾಯರು ಹೇಳಿದರು. ತಿಲಕರಿಗೆ ಆನಂದವಾಯಿತು. ಇದೇ ನಿರ್ಧಾರವನ್ನು ದೃಢವಾಗಿ ಹಿಡಿಯುವಂತೆ ಅವರು ರಾಯರಿಗೆ ಉಪದೇಶಿಸಿದರು. ತಿಲಕರಿಂದ ಉತ್ತೇಜನ ಪಡೆದು ಗಂಗಾಧರರಾಯರು ಬೆಳಗಾವಿಗೆ ಬಂದರು. ಅಂದಿನಿಂದ ಸಾರ್ವಜನಿಕ ಕಾರ್ಯಗಳಿಗಾಗಿ ತಮ್ಮ ಜೀವನವನ್ನು ಮೀಸಲಾಗಿಡಬೇಕೆಂದು ನಿರ್ಧಾರ ಕೈಗೊಂಡರು.

ಜೀವನದಲ್ಲಿ ಹೊಸದೃಷ್ಟಿ

೧೯೦೬ನೆಯ ಇಸವಿ ಗಂಗಾಧರರಾಯರ ಜೀವನದಲ್ಲಿ ಅತ್ಯಂತ ಮಹತ್ವದ್ದಾಗಿ ಪರಿಣಮಿಸಿತ್ತು. ಅವರ ಜೀವನಕ್ಕೆ ಹೊಸದೃಷ್ಟಿ ದೊರೆತುದು ಆಗಲೇ. ಆಗ ಅವರ ಲಕ್ಷ್ಯವೆಲ್ಲವೂ ಸಾರ್ವಜನಿಕ ಕಾರ್ಯದ ಕಡೆಗೆ ಹೊರಳಿತು. ಇದನ್ನು ಭಾವು ಸಾಹೇಬ ಸೂಕ್ಷ್ಮವಾಗಿ ಗುರುತಿಸಿದರು. ಬುದ್ಧಿಯ ಮಾತುಗಳನ್ನಾಡಿ ಮಗ ವಕೀಲಿ ವೃತ್ತಿಗೆ ಗಮನಕೊಡುವಂತೆ ಮಾಡಬೇಕೆಂದು ಅವರಿಗೆ ಎನ್ನಿಸಿತು. ಯಾವುದಾದರೊಂದು ಅವರಿಗೆ ಎನ್ನಿಸಿತು. ಯಾವುದಾದರೊಂದು ಉಚ್ಛ ದರ್ಜೆಯ ಸರಕಾರಿ ನೌಕರಿ ಮಗನಿಗೆ ಸಿಕ್ಕಬೇಕೆಂಬ ಉದ್ದೇಶದಿಂದ ಸಾಕಷ್ಟು ಹಣ ಖರ್ಚು ಮಾಡಿ ಉಚ್ಛ ಶಿಕ್ಷಣ ಕೊಡಿಸಿದ್ದರು. ಸರಕಾರಿ ನೌಕರಿ ಮಗನಿಗೆ ಒಪ್ಪಿಗೆಯಾಗಲಿಲ್ಲ. ಮಗನು ವಕೀಲನಾಗಿ ಹಣ ಗಳಿಸಿ ಬಾಳಬೇಕೆಂಬುದು ಭಾವು ಸಾಹೇಬರ ಇಚ್ಛೆಯಾಗಿತ್ತು. ಈ ವಿಷಯದಲ್ಲಿ ತಿಲಕರು ಹೇಳಿದಂತೆ ಕೇಳುವುದಾಗಿ ಗಂಗಾಧರರಾಯರು ತಂದೆಗೆ ವಚನಕೊಟ್ಟರು. ಭಾವು ಸಾಹೇಬರಿಗೆ ಮಗನ ಚಿಂತೆಯಾಗಿ ತಿಲಕರನ್ನು ಸ್ವತಃ ಕಂಡು ವಿಷಯ ವಿವರಿಸಲು ಮುಂದಾದರು.

ಭಾವುಸಾಹೇಬರು ತಿಲಕರನ್ನು ಪುನೆಯಲ್ಲಿ ಭೇಟಿಯಾಗಿ ವಿಷಯ ಚರ್ಚಿಸಿದರು. “ಮನೆತನದ ಸ್ಥಿತಿಯು ಅನುಕೂಲವಾಗಿರುವಾಗ ಗಂಗಾಧರರಾಯರು ಸಂಪೂರ್ಣವಾಗಿ ಸಾರ್ವಜನಿಕ ಕಾರ್ಯದಲ್ಲಿ ತೊಡಗುವುದೇ ಯೋಗ್ಯ” ಎಂದು ತಿಲಕರು ಸಲಹೆ ಕೊಟ್ಟರು. ಭಾವು ಸಾಹೇಬರು ಬೆಳಗಾವಿಗೆ ಬಂದು ಪುಣೆಯ ಮಾತುಕತೆಗಳನ್ನು ಮಗನಿಗೆ ವಿವರಿಸಿದರು. ತಿಲಕರ ಸಲಹೆಯಂತೆ ರಾಜಕಾರಣದಲ್ಲಿ ಗಂಗಾಧರರಾಯರು ಸಕ್ರೀಯ ಪಾತ್ರವಹಿಸತೊಡಗಿದರು. ಅನಂತರ ಅವರಿಗೆ ತಿಲಕರ ನಿಕಟ ಸಂಬಂಧ ಬಂತು. ಕರ್ನಾಟಕದಲ್ಲಿದ್ದುಕೊಂಡು ರಾಷ್ಟ್ರೀಯ ಕಾಂಗ್ರೆಸ್ಸಿನ ಸಂಘಟನೆ ಕೈಗೊಳ್ಳಲು ತಿಲಕರು ಉಪದೇಶಿಸಿದರು. ಅದನ್ನು ಶಿರಸಾವಹಿಸಿ ವಕೀಲಿ ವೃತ್ತಿಗೆ ಶರಣು ಹೊಡೆದು ತಮ್ಮ ಜೀವನವನ್ನೇ ರಾಷ್ಟ್ರಸೇವೆಗೆ ಮುಡಿಪಾಗಿಡಲು ಗಂಗಾಧರರಾಯರು ಅಚಲ ನಿರ್ಧಾರ ಕೈಗೊಂಡರು.

ದೇಶದ ಅಂದಿನ ಪರಿಸ್ಥಿತಿಯಲ್ಲಿ ಜನರ ಪ್ರವೃತ್ತಿಯನ್ನು ದೇಶ ಕಾರ್ಯದತ್ತ ತಿರುಗಿಸಲು ಗಣಪತಿ ಉತ್ಸವವು ಒಂದು ಪ್ರಮುಖ ಸಾಧನವೆಂದು ತಿಲಕರು ಯೋಚಿಸಿದ್ದರು. ಅದನ್ನೇ ಗಂಗಾಧರರಾಯರು ಸಂಘಟನೆಯ ಸಾಧನವೆಂದು ಅಂಗೀಕರಿಸಿದರು. ಪುಣೆ ಮಾದರಿಯ ಗಣಪತಿ ಉತ್ಸವವನ್ನು ಬೆಳಗಾವಿಯಲ್ಲಿ ಆಚರಿಸಿ ದೇಶಾಭಿಮಾನವನ್ನು ಜನಮನದಲ್ಲಿ ಜಾಗೃತಗೊಳಿಸಿದರು. ಉತ್ಸವದಲ್ಲಿ ಭಾಗವಹಿಸಿ ಭಾಷಣ ಮಾಡಲು ತಿಲಕರಿಗೂ ಆಮಂತ್ರಣ ನೀಡಿದರು. ೧೯೦೬ರಲ್ಲಿ ಗಂಗಾಧರರಾಯರ ಆಗ್ರಹದ ಮೇರೆಗೆ ತಿಲಕರು ಬೆಳಗಾವಿಗೆ ಬಂದರು. ತಿಲಕರ ಭಾಷಣ ಕಾರ್ಯಕ್ರಮ ಬೆಳಗಾವಿಯಲ್ಲಿ ಸತತ ಮೂರು ದಿನ ನಡೆದು ಬಹಳ ಯಶಸ್ವಿಯಾಯಿತು. ಇದರಿಂದ ಗಂಗಾಧರರಾಯರ ಜನಪ್ರಿಯತೆ ಇನ್ನೂ ಹೆಚ್ಚಿತು.

ರಾಷ್ಟ್ರಮತ

ಜನಸಂಘಟನೆಗೆ ಪತ್ರಿಕೆ ಒಂದು ಪ್ರಭಾವಿ ಸಾಧನವೆಂದು ಗಂಗಾಧರರಾಯರು ಕಂಡುಕೊಂಡಿದ್ದರು. ೧೯೦೬ರ ಹೊತ್ತಿಗೆ ತಿಲಕರ ಆಶಿರ್ವಾದದಿಂದ “ರಾಷ್ಟ್ರಪತ” ಎಂಬ ಮರಾಠಿ ದೈನಿಕ ಪತ್ರಿಕೆಯು ಮುಂಬಯಿಯಲ್ಲಿ ಪ್ರಾರಂಭವಾಯಿತು. ರಾಷ್ಟ್ರೀಯ ಪಕ್ಷದ ಮರಾಠಿ ದೈನಿಕಗಳಲ್ಲಿ “ರಾಷ್ಟ್ರಮತ” ಮೊದಲನೆಯದು. ತಿಲಕರ ಬಂಧನದ ಅನಂತರ ಅದನ್ನು ನಡೆಸುವ ಹೊಣೆಯನ್ನು ಗಂಗಾಧರರಾಯರೇ ವಹಿಸಿಕೊಂಡರು. ಸರಕಾರದ ದಬ್ಬಾಳಿಕೆಯಿಂದಾಗಿ ತರುಣರಿಗೆ ಬೇರೆ ಮಾರ್ಗ ಹೊಳೆಯದೆ ಮನಸ್ಸಿನಲ್ಲಿ ಕ್ರಾಂತಿಯ ಕಲ್ಪನೆ ಮೂಡುತ್ತಿದ್ದ ಕಾಲವದು. “ರಾಷ್ಟ್ರಮತ”ವು ಮುಂಬಯಿಯಲ್ಲಿ ಸಾರ್ವಜನಿಕ ಕಾರ್ಯ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿದ್ದರಿಂದ ಆಗ ಗಂಗಾಧರರಾಯರ ಬಳಿಗೆ ಬೇರೆ ಬೇರೆ ವಿಚಾರ ಪ್ರಣಾಲಿಕೆಯ ತರುಣರು ಬರುತ್ತಿದ್ದರು.  ಆ ತರುಣರು ರಾಯರ ಬಿಡಾರವನ್ನು “ರಾಷ್ಟ್ರಮಠ” ಎಂದು ಕರೆಯುತ್ತಿದ್ದರು. ಆಗ ಗಂಗಾಧರರಾಯರಿಗೆ ಕಾಕಾ ಸಾಹೇಬ ಕಾಲೇಲಕರ್, ಡಾ. ವಿ.ಮ.ಭಟ್ಟ,  ಅಣ್ಣಾ ಸಾಹೇಬ ಕರ್ವೆ ಮುಂತಾದ ಶ್ರೇಷ್ಠ ವ್ಯಕ್ತಿಗಳ ಪರಿಚಯವಾಯಿತು. ಕಾಲೇಲಕರ್ ಹಾಗೂ ತಮ್ಮ ಅಭಿಪ್ರಾಯಗಳಲ್ಲಿ ಭೇದವಿಲ್ಲವೆಂದು ತಿಳಿದ ಮೇಲೆ, ಕಾಯಿದೆ ಅಭ್ಯಾಸ ಬಿಟ್ಟುಕೊಟ್ಟು, ತಮ್ಮನ್ನು ಕೂಡಿಕೊಳ್ಳಬೇಕೆಂದು ಗಂಗಾಧರರಾಯರು ಕಾಲೇಲಕರಿಗೆ ಕಾಯಿದೆ ಅಭ್ಯಾಸ ಬಿಟ್ಟು “ರಾಷ್ಟ್ರಮಠ” ದಲ್ಲಿಯೇ ಇರತೊಡಗಿದರು. ಸ್ವಾತಂತ್ರ್ಯ ವೀರ ಸಾವರಕರರು, ಸೇನಾಪತಿ ಬಾಪಟಂಥ ಕ್ರಾಂತಿಕಾರರ ಪರಿಚಯವೂ ಗಂಗಾಧರರಾಯರಿಗೆ ಲಭಿಸಿತು. ಹೀಗೆ ರಾಷ್ಟ್ರದ ಶ್ರೇಷ್ಠ ವ್ಯಕ್ತಿಗಳ ಸಹವಾಸದಲ್ಲಿ “ರಾಷ್ಟ್ರಮತ” ದ ಕಾರ್ಯಾಲಯದಲ್ಲಿ ಗಂಗಾಧರರಾಯರು ಕಳೆದ ದಿನಗಳು ಚಿರಸ್ಮರಣೀಯವಾಗಿವೆ.

ಗಾಂಧಿಜಿಯವರೊಡನೆ ಗಂಗಾಧರರಾಯರು

ಬಂಧನಯತ್ನ ವಿಫಲ ಮನೆ ಝಡತಿ

೧೯೦೭ರಿಂದ ೧೯೧೧ರ ಅವಧಿಯಲ್ಲಿ ಲೋಕಮಾನ್ಯ ತಿಲಕರು ಹಾಗೂ ಅವರ ಅನುಯಾಯಿಗಳು ಸರಕಾರದ ವಿರುದ್ಧ ಪಿತೂರಿ ಮಾಡುತ್ತಾರೆ ಎಂಬ ಆರೋಪ ಹೊರೆಸಿ ಬಂಧಿಸುವ ಪ್ರಯತ್ನ ಕೊಲ್ಲಾಪುರದಲ್ಲಿ ನಡೆದಿತ್ತು. ಆಗಿನ ಸಂಸ್ಥಾನಗಳ ರಾಜರಿಂದ ಜನತೆಯ ಮೇಲೆ ದಬ್ಬಾಳಿಕೆ ನಡೆದಿತ್ತು. “ರಾಷ್ಟ್ರಮತ”ದಲ್ಲಿ ಕೊಲ್ಲಾಪುರ ಕರಬಾರಿನ ವಿರುದ್ಧ ಸುದ್ದಿಗಳು ಪ್ರಕಟವಾಗುತ್ತಿದ್ದವು. ಗಂಗಾಧರರಾಯರಿಗೂ ತಿಲಕರಿಗೂ ಹಾಗೂ ‘ರಾಷ್ಟ್ರಮತ’ಕ್ಕೂ ನಿಕಟ ಸಂಬಂಧವಿತ್ತು. ಗಂಗಾಧರರಾಯರನ್ನು ಬಂಧಿಸಬೇಕು ಎಂದು ಸರಕಾರದ ಬಯಕೆ.

ಕೊಲ್ಲಾಪುರದಲ್ಲಿ ದಾಮೂ ಜೋಶೀ ಎಂಬ ಹೆಸರಿನ ತರುಣನಿದ್ದ. ಕೊಲ್ಲಾಪುರದಲ್ಲಿ ದಾಮೂ ಜೋಶಿ ಎಂಬ ಹೆಸರಿನ ತರುಣನಿದ್ದ. ಆತನು ಶಿವಾಜಿ ಕ್ಲಬ್ಬಿನ ಸದಸ್ಯನಾಗಿದ್ದ.  ರಾಸಾಯನಿಕ ದ್ರವ್ಯ ಕಳವು ಮಾಡಿದ, ಕ್ರಾಂತಿಕಾರರ ಪ್ರಕಟಣೆಗಳನ್ನು ಅಂಟಿಸಿದ ಎಂಬ ಆರೋಪಗಳು ಆತನ ಮೇಲಿದ್ದವು. ಬಹಳ ದಿನಗಳವರೆಗೆ ಆತ ಪೊಲೀಸರ ವಶದಲ್ಲಿದ್ದ. ತನ್ನ ಕ್ರಾಂತಿಕಾರಕ ಯೋಜನೆಗೆ ನೆರವಾದವರಲ್ಲಿ ಲೋಕಮಾನ್ಯ ತಿಲಕರನ್ನು ಮೊದಲು ಮಾಡಿಕೊಂಡು ಎಷ್ಟೋ ಜನ ಪ್ರಸಿದ್ಧ ನಾಯಕರಿದ್ದರೆಂದು ಪೊಲೀಸರಿಗೆ ಜೋಶಿ ವರದಿ ಮಾಡಿದ್ದ. ಅವನು ಸಲ್ಲಿಸಿದ್ದ ವರದಿಯಲ್ಲಿ ಬೆಳಗಾವಿಯ ಗಂಗಾಧರರಾವ್ ದೇಶಪಾಂಡೆ, ಶಾಮರಾವ್ ಕಾಲಕುಂದ್ರಿ ಇವರ ಹೆಸರುಗಳಿದ್ದವು.  ಇಷ್ಟೇ ಸಾಕಾಯಿತು ಪೊಲೀಸರಿಗೆ. ಗಂಗಾಧರರಾಯರನ್ನು ಬಂಧಿಸಬೇಕೆಂದು ತಾವೇ ಒಂದು ಬಾಂಬು ಮಾಡಿ ಕೊಲ್ಲಾಪುರಕ್ಕೆ ತಂದಿದ್ದ. ಅಕ್ಕಾಸಾಹೇಬ ಮಹಾರಾಜರ ಮದುವೆಯ ಕಾಲಕ್ಕೆ ಆ ಬಾಂಬನ್ನು ಕೊಲ್ಲಾಪುರದಲ್ಲಿ ಆಗ ಪೊಲಿಟಿಕಲ್ ಏಜೆಂಟರಾಗಿದ್ದ ಕರ್ನಲ್ ಫ್ಯಾರಿಸ್‌ರ ಮೇಲೆ ಎಸೆಯಬೇಕೆಂದು ಅವನ ಯೋಚನೆ. ಆದರೆ ಅದು ತಪ್ಪಿ ಹೋಯಿತು. ಆಮೇಲೆ ಆ ಬಾಂಬನ್ನು ಒಂದು ಹಿತ್ತಾಳೆಯ ತಿರುವಿನ ತಂಬಿಗೆಯಲ್ಲಿ ಹಾಕಿ ಬೆಳಗಾವಿಯ ಹತ್ತಿರ ಮಜಗಾವದಲ್ಲಿ ಹನುಮಂತರಾವ್ ದೇಶಪಾಂಡೆಯವರ ಮನೆಯಲ್ಲಿ ಇಟ್ಟಿರುವನು. ಅದರ ಜೊತೆಗೆ ಪಿಸ್ತೂಲು ಹಾಗೂ ರಿವಾಲ್ವರಗಳೂ ಇವೆ’. ಇದು ಪೊಲೀಸರು ಕಟ್ಟಿದ ಕಥೆ. ಹನುಮಂತರಾವ್ ದೇಶಪಾಂಡೆಯವರು ಆಗ ಗಂಗಾಧರರಾಯರ ಜೊತೆಗೆ ಕೆಲಸ ಮಾಡುತ್ತಿದ್ದರು. ಈ ಸಂಬಂಧವನ್ನು ಗಂಗಾಧರರಾಯರಿಗೆ ತಂದು  ಜೋಡಿಸಬೇಕೆಂಬುದು ಪೊಲೀಸರ ಉದ್ದೇಶವಾಗಿತ್ತು.

ಗಂಗಾಧರರಾಯರು ಬೆಳಗಾವಿಯಲ್ಲಿದ್ದಾಗ ಅಪರಿಚಿತ ವ್ಯಕ್ತಿಗಳಿಬ್ಬರು ಅವನ ಹತ್ತಿರ ಬಂದರು. ಅವರಲ್ಲಿ ಪಾಧ್ಯೆ ಎಂಬ ಹೆಸರಿನ ಒಬ್ಬನು, “ದಾಮೂ ಜೋಶಿ, ನಮ್ಮ ಹತ್ತಿರ ಒಂದು ಹಿತ್ತಾಳೆಯ ತಂಬಿಗೆ ಹಾಗೂ ಕೆಲವು ಆಯುಧಗಳನ್ನು ಒಟ್ಟಿರುವನು. ಇವೆಲ್ಲವನ್ನೂ ಒಂದು ಪೆಟ್ಟಿಗೆಯಲ್ಲಿಟ್ಟು ಕೀಲಿಹಾಕಿ ನನಗೆ ಕೊಡಿರಿ. ನಿಮ್ಮ ಮೇಲೆ ಯಾವ ಆರೋಪವೂ ಬರಲಾರದು’ ಎಂದು ಹೇಳಿದನು. ಆ ವ್ಯಕ್ತಿಯ ಮಾತು ಕೇಳಿ ರಾಯರಿಗೆ ವಿಚಿತ್ರವೆನಿಸಿತು. “ನೀವು ಎಲ್ಲೋ ತಪ್ಪಿ ನನ್ನ ಕಡೆಗೆ ಬಂದಿರುವಿರಿ. ನನಗೆ ಇದರಲ್ಲಿ ಒಂದು ಗೊತ್ತಿಲ್ಲ’ ಎಂದು ರಾಯರು ಹೇಳಿದರು. ‘ಕೊಲ್ಲಾಪುರದ ಪೊಲೀಸ್  ಅಧಿಕಾರಿ ಫರ್ನಾಂಡಿಸ್ ಅವರ ಕಡೆಯಿಂದ ನಾವು ಬಂದಿರುವೆವು. ಅವರು ಸ್ಟೇಷನ್ನಿನ ವೆಟಿಂಗ್ ರೂಮಿನಲ್ಲಿ ಇಳಿದುಕೊಂಡಿದ್ದಾರೆ. ನಿವು ಅವರ ಹತ್ತಿರ ಬನ್ನಿರಿ, ನೀವೂ ಪಾರಾಗುವಿರಿ; ನಮ್ಮ ಕಾರ್ಯವೂ ಸಾಧಿಸುವುದು”. ಹೀಗೆ ಪಾಧ್ಯೆ ನುಡಿದನು. ಪಾಧ್ಯೆಯ ಮಾತುಗಳು ಸಹಜವಲ್ಲ. ಯಾರೋ ಹೇಳಿಕೊಟ್ಟದ್ದನ್ನು ಅವನು ಹೇಳುತ್ತಿದ್ದಾನೆ ಎನಿಸಿತು ಗಂಗಾಧರರಾಯರಿಗೆ. ಅವರು “ನಾನು ಸ್ಟೇಷನ್ನಿಗೆ ಬರುವುದಿಲ್ಲ. ಬೇಕಾದರೆ ಫರ್ನಾಂಡಿಸರೇ ಇಲ್ಲಿಗೆ ಬರಲಿ” ಎಂದು ಸ್ಪಷ್ಟವಾಗಿ ನುಡಿದರು. ಆ ಅಪರಿಚಿತ ವ್ಯಕ್ತಿಗಳು ಹೊರಟು ಹೋದರು.

ಗಂಗಾಧರರಾಯರನ್ನು ಸ್ಟೇಷನ್ನಿಗೆ ಫರ್ನಾಂಡಿಸರ ಬಳಿಗೆ ಕರೆದುಕೊಂಡು ಹೋಗಬೇಕು, ಪೊಲೀಸರ ಹತ್ತಿರ ಇದ್ದ ರಿವಾಲ್ವರ್, ಪಿಸ್ತೂಲುಗಳನ್ನು ಅವರ ಹತ್ತಿರ ಇಟ್ಟು, ಅವರೇ ಪಾದ್ಯೆಯ ಹೇಳಿಕೆಯ ಮೇರೆಗೆ ತಂದುಕೊಟ್ಟರೆಂದು ಸುಳ್ಳು ರುಜುವಾತು ಮಾಡಿಸಿ, ಮಾಲು ಸಹಿತ ಬಂಧಿಸಬೇಕು ಎಂದು ಪೊಲೀಸರ ಹಂಚಿಕೆ. ಆದರೆ ಪ್ರಯತ್ನ ವಿಫಲಗೊಂಡಿತು. ಇದಾದ ಕೆಲವು ದಿನಗಳ ನಂತರ ಗಂಗಾಧರರಾಯರು ಮುಂಬಯಿಗೆ ಹೋದಾಗ ಬೆಳಗಾವಿಯಲ್ಲಿ ಅವರ ಮನೆಯನ್ನು ಪೊಲೀಸರು ಶೋಧಮಾಡಿದರು. ಅಲ್ಲಿ ಅವರಿಗೆ ಏನೂ ದೊರೆಯಲಿಲ್ಲ.

ಗಾಂಧಿಜಿ ಸಂಪರ್ಕ

೧೯೧೬ರಲ್ಲಿ ಬೆಳಗಾವಿಯಲ್ಲಿ ಪ್ರಾಂತೀಯ ಪರಿಷತ್ತಿನ ಸಭೆ ಸೇರುವುದಿತ್ತು. ಗಂಗಾಧರರಾಯರು ಕಾಯ್ದರ್ಶಿ. ಬೆಳಗಾವಿ ಪರಿಷತ್ತಿನ ಬಗ್ಗೆ ವಿವರ ಕೊಟ್ಟು ಗಾಂಧಿಜಿಯವರಿಗೆ ಆಮಂತ್ರಣ ನೀಡಿದರು. ಗಾಂಧಿಜಿ ಒಪ್ಪಿಕೊಂಡರು. ಆದರೆ ಮಂದಗಾಮಿಗಳಲ್ಲಿ ಕೆಲವರು ಗಾಂಧಿಜಿ ಪರಿಷತ್ತಿಗೆ ಹೋಗಬಾರದೆಂದು ಪ್ರಯತ್ನ ಮಾಡುತ್ತಿದ್ದಾರೆಂಬ ಸುದ್ದಿ ಹಬ್ಬಿತು. ಗಂಗಾಧರರಾಯರು ಪುನಃ ಗಾಂಧಿಜಿಗೆ ಪತ್ರ ಬರೆದು ಬರುವುದನ್ನು ಖಂಡಿತ ತಿಳಿಸಬೇಕೆಂದು ವಿನಂತಿಸಿಕೊಂಡರು. “ನಾನು ಬೆಳಗಾವಿಗೆ ಬರುವುದಕ್ಕೂ ಪರಿಷತ್ತಿನಲ್ಲಿ ಭಾಗವಹಿಸುದಕ್ಕೂ ಸಾವೊಮದನ್ನು ಬಿಟ್ಟು ಇತರ ಯಾವ ಕಾರಣಗಳೂ ಅಡ್ಡಿಯಾಗಲಾರವು” ಎಂದು ಗಾಂಧಿಜಿ ಪತ್ರ ಬರೆದು ತಿಳಿಸಿದರು. ಗಂಗಾಧರರಾಯರಿಗೆ ಬಹಳ ಆನಂದವಾಯಿತು. ಗಾಂಧಿಜಿ ಬೆಳಗಾವಿ ಪರಿಷತ್ತಿನಲ್ಲಿ ಭಾಗವಹಿಸಿ, ಮಾರ್ಗದರ್ಶನ ಮಾಡಿದರು.

೧೯೨೪ರಲ್ಲಿ ಅಖಿಲ ಭಾರತ ಕಾಂಗ್ರೆಸ್ಸಿನ ಅಧಿವೇಶನ ಕನ್ನಡ ನಾಡಿನ ಬೆಳಗಾವಿಯಲ್ಲಿ ನಡೆಯಬೇಕೆಂದು ತೀರ್ಮಾನವಾಯಿತು. ಅದರ ಅಧ್ಯಕ್ಷರು ಗಾಂಧಿಜಿಯೇ! ಕನ್ನಡ ನಾಡಿಗೆಲ್ಲ ತುಂಬಾ ಸಂತೋಷ, ಸಂಭ್ರಮ. ಗಂಗಾಧರರಾಯರು ಸ್ವಾಗತ ಸಮಿತಿಯ ಅಧ್ಯಕ್ಷರಾಗಿದ್ದರು. ಈ ಅಧಿವೇಶನವನ್ನು ಯಶಸ್ವಿಯಾಗಿ ನಡೆಸುವ ಹೊಣೆ ಅವರದೇ ಆಯಿತು. ಅವರ ಬಲಭುಜವಾಗಿದ್ದ ಗೋವಿಂದರಾವ್ ಯಾಳಗಿಯವರು ಆಗಲೇ ತೀರಿಕೊಂಡಿದ್ದರು. ಅಧಿವೇಶನಕ್ಕೆ ಸಾವಿರಾರು ರೂಪಾಯಿಗಳನ್ನು ಕೂಡಿಸಬೇಕಾಗಿತ್ತು. ಭಾರತದ ಬೇರೆ ಬೇರೆ ಭಾಗಗಳಿಂದ ಬರುವ ನೂರಾರು ಮಂದಿ ಪ್ರತಿನಿಧಿಗಳಿಗೆ, ನಾಯಕರಿಗೆ ವಸತಿ, ಊಟ, ಎಲ್ಲ ವ್ಯವಸ್ಥೆಯಾಗಬೇಕಾಗಿತ್ತು. ಎಲ್ಲ ಹೊಣೆಯನ್ನು ತಮ್ಮ ವಿಶಾಲವಾದ ಭುಜಗಲ ಮೇಲೆ ಹೊತ್ತರು ಗಂಗಾಧರರಾಯರು. ಅಧಿವೇಶನದ ವ್ಯವಸ್ಥೆಯನ್ನು ಬಹು ಅಚ್ಚುಕಟ್ಟಾಗಿ ನಿರ್ವಹಿಸಿದರು. ಅವರ ಸಂಘಟನಾ ಶಕ್ತಿ, ಕಾರ್ಯಕ್ಷಮತೆಗಳ ಅರಿವು ಗಾಂಧಿಜಿಯವರಿಗಾಯಿತು. ಈಗಿನ ತಿಳಕವಾಡಿಯಲ್ಲಿ ಕಾಂಗ್ರೆಸ್ ಅಧಿವೇಶನ ಜರುಗಿತು. ಗಾಂಧಿಜಿಯವರು ಇಳಿದುಕೊಳ್ಳಲು ೩೫೯ ರೂಪಾಯಿಗಳನ್ನು ಖರ್ಚು ಮಾಡಿ ಒಂದು ಗುಡಿಸಲನ್ನು ನಿರ್ಮಿಸಿದ್ದರು. ಗಾಂಧಿಜಿ “ನನಗೊಂದು ಖಾದಿ ಗುಡಿಸಲು ಸಿಕ್ಕುತ್ತದೆಂದು ಭಾವಿಸಿದ್ದೆ. ಆದರೆ ಒಂದು ಖಾದಿ ಅರಮನೆಯನ್ನೇ ನಿರ್ಮೀಸಿ ನನಗೆ ಅಪಮಾನ ಮಾಡಿದರು” ಎಮದರು. ಗುಡಿಸಲಿನೊಳಗೆ ಸಾಮಾನುಗಳನ್ನು ಮಾರಾಟ ಮಾಡಿ, ಗಂಗಾಧರರಾಯರು ೨೫೦ ರೂಪಾಯಿಗಳನ್ನು ಸಂಪಾದಿಸಿದರು. ಗಾಂಧಿಜಿಯವರ ಭಾವನೆ ತಪ್ಪು ಎಂದು ತೋರಿಸಿಕೊಟ್ಟರು.

ಹಿರಿಯ ಕವಿ ಹುಯಿಲಗೋಳ ನಾರಾಯಣರಾವರ “ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು” ಎಂಬ ಪದ್ಯವು ಕನ್ನಡ ನಾಡಗೀತೆಯೊಂದು ಈ ಅಧಿವೇಶನದಲ್ಲಿ ಮನ್ನಣೆ ಗಳಿಸಿತು.

ಬೆಳಗಾವಿ ಕಾಂಗ್ರೆಸ್ ಗಂಗಾಧರರಾಯರ ಸಾಮರ್ಥ್ಯವನ್ನು ಸ್ಪಷ್ಟವಾಗಿ ಸಾರಿತು.

ಗಾಂಧಿಜಿಯವರು ೧೯೨೦ರಲ್ಲಿ ಕಾಂಗ್ರೆಸ್ ಧುರಿಣರಾದಾಗ ಗಂಗಾಧರರಾಯರು ಅವರ ನಿಷ್ಠಾವಂತ ಅನುಯಾಯಿಗಳಾಗಿದ್ದರು. ೧೯೨೪ರಲ್ಲಿ ಗಾಂಧಿಜಿಯವರ ಇತಿಹಾಸ ಪ್ರಸಿದ್ಧ ಹರಿಜನ ಪ್ರವಾಸದ ಹೊಣೆಯನ್ನು ಗಂಗಾಧರರಾಯರು ಕರ್ನಾಟಕದ ನಾಯಕರಾಗಿ ಅಖಂಡವಾದ ಸೇವೆ ಸಲ್ಲಿಸಿದರು. ಗಂಗಾಧರರಾಯರ ಮನಸ್ಸಿನ ಮೇಲೆ ಅಪಾರ ಪ್ರಭಾವ ಬೀರಿದರು ಗಾಂಧೀಜಿ.

ಜಮೀನೆಲ್ಲ ಸರಕಾರಕ್ಕೆ

ದೇಶಪಾಂಡೆ ಮನೆತನದ ಭೂಮಿ ಕಾಣೆ ಎಲ್ಲವನ್ನೂ ಬೆಳಗಾವಿ ಜಿಲ್ಲಾ ಮ್ಯಾಜಿಸ್ಟ್ರೇಟರ ವರದಿಯ ಮೇರೆಗೆ ರದ್ದು ಪಿಸಲಾಗಿತ್ತು. ಆ ಮ್ಯಾಜಿಸ್ಟ್ರೇಟರಿಗೆ ಸತಾರಾಕ್ಕೆ ವರ್ಗವಾಯಿತು. ಅವರಿಗೂ ತಾವು ಮಾಡಿದ್ದ ಆಜ್ಞೆ ತಪ್ಪು ಎನಿಸಿತು. ಬೆಳಗಾವಿಯಿಂದ ಪ್ರಯಾಣ ಬೆಳೆಸುವ ಮೊದಲು ಅವರು ತಂದೆ ಮಕ್ಕಳನ್ನು ತಮ್ಮ ಬಂಗಲೆಗೆ ಕರೆಸಿಕೊಂಡರು. ಜಮೀನನ್ನು ಬಿಡುಗಡೆ ಮಾಡುವಂತೆ ಮೇಲಧಿಕಾರಿಗಳಿಗೆ ತಾವು ಬರೆದುದನ್ನು ಅವರಿಗೆ ಹೇಳಿದರು. ಮ್ಯಾಜಿಸ್ಟ್ರೇಟರು ಹೋದ ಮೇಲೆ ಗಂಗಾಧರರಾಯರ ಜಮೀನಿನಲ್ಲಿ ಅರ್ಧ ಭಾಗವನ್ನು ಬಿಡುಗಡೆ ಮಾಡಬೇಕೆಂಬ ಆಜ್ಞೆಯೂ ಬಂತು. ಹೊಸದಾಗಿ ಅಧಿಕಾರ ವಹಿಸಿಕೊಂಡ ಮ್ಯಾಜಿಸ್ಟ್ರೇಟರು “ಇನ್ನು ಮುಂದೆ ನೀವು ಯಾವುದೇ ರಾಜಕೀಯದಲ್ಲಿ ಭಾಗವಹಿಸುವುದಿಲ್ಲ ಎಂಬ ಆಶ್ವಾಸನೆ ನೀಡಿದರೆ ಮಾತ್ರ ನಿಮ್ಮ ಹಕ್ಕನ್ನು ನಿಮಗೆ ಮತ್ತೆ ಕೊಡಲಾಗುವುದು” ಎಂದು ತಿಳಿಸಿದರು.

ಗಂಗಾಧರರಾಯರು ಅವರಿಗೆ ಹೇಳಿದರು: “ಇಂಥ ಕರಾರು ನನಗೆ ಒಪ್ಪಿಗೆಯಿಲ್ಲ. ಈ ಕರಾರನ್ನು ನನ್ನ ಮೇಲೆ ವಿಧಿಸುವುದು ಅನ್ಯಾಯ. ಇದನ್ನು ಮಾನ್ಯ ಮಾಡುವುದೆಂದರೆ ನಾನು ಆತ್ಮಹತ್ಯೆ ಮಾಡಿಕೊಂಡಂತೆ. ನಾನು ಶಾಸನಬದ್ಧವಾಗಿ ಕಾರ್ಯ ಮಾಡುತ್ತ ಹೋಗುವೆನು”.

“ಸರಕಾರಕ್ಕೆ ವರದಿ ಮಾಡುವ ಕೆಲಸ ನನ್ನದು” ಎಂದಷ್ಟೇ ಮ್ಯಾಜಿಸ್ಟ್ರೇಟರು ಹೇಳಿದರು. ಆದರೆ ಸರಕಾರ ಮೊದಲನೆಯ ಆಜ್ಞೆಯನ್ನು ಬದಲು ಮಾಡಲಿಲ್ಲ. ತಂದೆಯ ಕಾಲಕ್ಕೆ ಅವರ ಪಾಲಿನ ಅರ್ಧ ಜಮೀನು ಹೋಗಿತ್ತು. ತಂದೆಯ ತರುವಾಯ ಎಲ್ಲ ಜಮೀನೂ ಹೋಯಿತು.

ಸರಕಾರವು ಭೂಮಿಯೆಲ್ಲವನ್ನೂ ಕಸಿದುಕೊಂಡರೂ ದೇಶಸೇವೆಯ ನಿಷ್ಠೆ ಗಂಗಾಧರರಲ್ಲಿ ಜಾಜ್ವಲ್ಯ ಮಾನವಾಗಿ ಉಳಿಯಿತು.

ಜೈಲಿನಲ್ಲಿ ನಡೆದ ಘಟನೆಗಳು

೧೯೨೧ರ ಅಸಹಕಾರ ಚಳವಳಿ, ೧೯೩೦ರ ಕಾಯಿದೆ ಭಂಗ ಚಳವಳಿ, ೧೯೪೨ರ “ಭಾರತ ಬಿಟ್ಟು ತೊಲಗಿ” ಚಳವಳಿಗಳಲ್ಲಿ ಗಂಗಾಧರರಾಯರು ಸೆರೆಮನೆ ಸೇರಿ, ಶಿಕ್ಷೆ ಅನುಭವಿಸಿದರು. ಬಹು ಚಿಕ್ಕ ಕೋಣೆ, ಅಲ್ಲಿ ಕೊಳಕು, ಕತ್ತಲೆ, ಗಾಳಿ ಬರಲು ಅವಕಾಶವಿಲ್ಲ. ಆಹಾರ ದನಗಳಿಗೆ ಕೊಡುವಂತಹದು. ಮಾತನಾಡಬೇಕಾದರೆ ಜೊತೆಗೆ ಯಾರೂ ಇಲ್ಲ. ಇವೆಲ್ಲವನ್ನೂ ದೇಶಕ್ಕಾಗಿ ಗಂಗಾಧರರಾಯರು ಸಹಿಸಿದರು. ಒಮ್ಮೆ ಕೆಟ್ಟ ಆಹಾರದಿಂದ ಆರೊಗ್ಯ ಕೆಟ್ಟಿತು. ಅವರು ಯರವಡಾ ಜೈಲಿನ ಮೇಲಧಿಕಾರಿಗೆ ಒಳ್ಳೆಯ ಆಹಾರ ಕೊಡಲು ಕೇಳಿಕೊಂಡರು. “ಜೈಲು ಅಂದರೆ ತಾಜಮಹಲ್ ಅಲ್ಲ” ಎಂದು ಆ ಅಧಿಕಾರಿ ಬಿಗುವಿನಿಂದ ತಿಳಿಸಿದ. ಆಗರ್ಭ ಶ್ರೀಮಂತರಾದ ಅವರು ಜೈಲಿನ ಇಂಥ ಅಸಹ್ಯ ಜೀವನಕ್ಕೆ ಹೊಂದಿಕೊಳ್ಳಬೇಕಾಗಿ ಬಂತು. ಅವರು ಜೈಲಿನಲ್ಲಿದ್ದಾಗ ಅನೇಕ ರೋಮಾಂಚಕಾರಿ ಘಟನೆಗಳು ನಡದುಹೋದವು.

೧೯೪೨ರಲ್ಲಿ ಹಿಂಡಲಗಾ ಜೈಲಿನಲ್ಲಿ ಕಾಲರಾ ಬೇಗನೆ ಹಬ್ಬಿದಾಗ ರಾಜಕೀಯ ಕೈದಿಗಳೆಲ್ಲ ಒಂದೆಡೆ ಸೇರಿ ಪ್ರತಿಭಟನೆ ಮಾಡಿದರು. ಸೆರೆಮನೆಯ ಅಧಿಕಾರಿಗಳು ಸಶಸ್ತ್ರ ಪೊಲೀಸರನ್ನು ಕರೆಸಿ, ಗುಂಡು ಹಾರಿಸುವ ಗಳಿಗೆಯಲ್ಲಿ ಗಂಗಾಧರರಾಯರು ತಮ್ಮ ಎದೆಯನ್ನು ಒಡ್ಡಿ “ಗುಂಡು ಹಾಕುವುದಿದ್ದರೆ ನನಗೆ ಹಾಕಿರಿ” ಎಂದ ಘಟನೆಯನ್ನು ಈ ಪುಸ್ತಕದ ಪ್ರಾರಂಭದಲ್ಲಿ ವಿವರಿಸಿದೆ, ಅಲ್ಲವೆ? ಈ ಕಾಲದಲ್ಲೇ ಅದು ನಡೆದದ್ದು.

ಸಿವಿಲ್ ಸರ್ಜನ್ ಚಿಪಕರರು ಜೈಲಿನಲ್ಲಿ ಕೈದಿಗಳನ್ನು ನೋಡಿಕೊಳ್ಳುತ್ತಿದ್ದರು. ಅವರು ಹಳೆಯ ಪದ್ದತಿಗೆ ಹೊಂದಿಕೊಂಡ ರಾಜನಿಷ್ಠರೆಂದು ಕೈದಿಗಳ ಕೂಡ ಚೆನ್ನಾಗಿ ನಡೆದುಕೊಳ್ಳುವುದಿಲ್ಲವೆಂದೂ ಆರೋಪ ಅವರ ಮೇಲಿತ್ತು. ಜೈಲಿನಲ್ಲಿ ಕಾಲರಾ ಬೇನೆ ವ್ಯಾಪಿಸಿದಾಗ ಬೇಗ ನಿಯಂತ್ರಣದಲ್ಲಿ ಬರುವ ಲಕ್ಷಣ ಕಾಣಲಿಲ್ಲ. ಒಂದು ದಿನ ಚಿಪಕರರು ಕೈದಿಗಳನ್ನು ನೋಡಿ ತಿರುಗಿ ಹೋಗುವಾಗ ದತ್ತೋಪಂತ ಅಧ್ಯಾಪಕ ಎಂಬುವರು ಟಣ್ಣನೆ ಜಿಗಿದು ಅವರನ್ನು ಅಡ್ಡಗಟ್ಟಿ, “ಕಾಲರಾದಿಂದ ನಮ್ಮ ಜನ ಸಾಯುತ್ತಿದ್ದಾರೆ. ನಿಮಗೆ ಅದನ್ನು ನಿಯಂತ್ರಣದಲ್ಲಿ ತರುವುದಾಗದಿದ್ದರೆ ಕೈದಿಗಳನ್ನು ಹೊರಗೆ ಬಿಡಿರಿ. ನಮ್ಮ ಉಪಚಾರ ನಾವು ಮಾಡಿಕೊಳ್ಳುತ್ತೇವೆ” ಎಂದು ಗರ್ಜಿಸಿದರು. ಚಿಪಕರರು ಗಾಬರಿಯಾಗಿ ಗಂಗಾಧರರಾಯರನ್ನು ಮೊರೆಹೊಕ್ಕರು. ಗಂಗಾಧರರಾಯರ ಉಪದೇಶದ ಮೇರೆಗೆ ಅಧ್ಯಾಪಕರು ಹಿಂದೆ ಸರಿದರು.

ಗಾಂಧಿ ಟೋಪಿ

ಸುಮಾರು ೧೯೨೦ರಿಂದೀಚೆಗೆ ಗಂಗಾಧರರಾಯರು ಖಾದಿಯನ್ನು ಧರಿಸಲು ಪ್ರಾರಂಭಿಸಿದರು. ಇದಕ್ಕಿಂತಲೂ ಮೊದಲು ಅವರು ಸ್ವದೇಶಿ ಬಟ್ಟೆಗಳನ್ನು ಧರಿಸುತ್ತಿದ್ದರು. ಮೊದಮೊದಲಿಗೆ ಖಾದಿ ಟೋಪಿಯನ್ನು ಹಾಕಿಕೊಳ್ಳುವಾಗ ಅವರಿಗೆ ನಾಚಿಕೆಯೆನಿಸುತ್ತಿತ್ತು. ಆದ್ದರಿಂದ ಮನೆಯಲ್ಲಿದ್ದಾಗಲೆಲ್ಲ ಟೋಪಿ ಧರಿಸಿ ಹೊರಗೆ ಹೋಗುವಾಗ ಅವರು ಸ್ವದೇಶಿ ರುಮಾಲನ್ನು ಸುತ್ತುತ್ತಿದ್ದರು. ಬೆಳಗಾವಿಯ ಮಾರುತಿ ಗುಡಿಯಲ್ಲಿ ಒಂದು ದಿನ ಗಂಗಾಧರರಾಯರ ಭಾಷಣದ ಕಾರ್ಯಕ್ರಮವಿತ್ತು. ಅವರು ಗಾಂಧಿ ಟೋಪಿ ಧರಿಸಿಕೋಂಡು ಭಾಷಣ ಮಾಡಬೇಕೆಂದು ನಿಶ್ಚಯಿಸಿದರು. ಬೀದಿಯಲ್ಲಿ ಟೋಪಿ ಧರಿಸಿಕೊಂಡು ಹೋಗಲು ನಾಚಿಕೆಯೆನಿಸಿ, ಅದನ್ನು ಜೇಬಿನಲ್ಲಿಟ್ಟುಕೊಂಡು ಮಾರುತಿ ಗುಡಿಯವರೆಗೆ ಹಾಗೆಯೇ ನಡೆದುಹೋದರು. ಸಭಾಸ್ಥಾನ ಕಿಕ್ಕಿರಿದು ತುಂಬಿತ್ತು. ಜನರು ಅವರ ಬರುವಿಕೆಯನ್ನೇ ಕಾಯುತ್ತಿದ್ದರು. ರಾಯರ ತಲೆಯ ಮೇಲೆ ಅಂದು ಗಾಂಧಿ ಟೋಪಿ ಶೋಭಿಸುತ್ತಿರುವುದನ್ನು ಕಂಡು ಜನರು ಚಪ್ಪಾಳೆ ತಟ್ಟಿದರು. ಅವರು ಆ ದಿನ ಒಳ್ಳೇ ವೀರಾವೇಶದಿಂದ ಮಾತನಾಡಿದರು. ಮರುದಿನದಿಂದ ಬೆಳಗಾವಿಯ ಎಷ್ಟೋ ತರುಣರ ತಲೆಯ ಮೇಲೆ ಗಾಂಧಿ ಟೋಪಿಗಳು ಕಾಣಿಸತೊಡಗಿದವು.

ಪ್ರಭಾವಿ ಭಾಷಣಕಾರ

ಎರಡು ಗಂಟೆ ಕಾಲ ಕನ್ನಡ, ಮರಾಠಿ ಭಾಷೆಗಳೆರಡರಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ಅದ್ಭುತ ಶಕ್ತಿ ಗಂಗಾಧರರಾಯರರಲ್ಲಿತ್ತು. ಮೊದಮೊದಲು ಅವರು ಹಿಂಜರಿಯುತ್ತಿದ್ದರು. ಮರಾಠಿಯಲ್ಲೇ ಮಾತನಾಡಿ ಅಭ್ಯಾಸವಾಗಿತ್ತು. ಅವರಿಗೆ. ಬಾಲಗಂಗಾಧರ ತಿಲಕರು ಕನ್ನಡ ನಾಡಿನಲ್ಲಿ ಪ್ರವಾಸ ಮಾಡಿದಾಗ ಅವರ ಮರಾಠಿ ಭಾಷಣಗಳನ್ನು ಮುದವೀಡು ಕೃಷ್ಣರಾಯರೆಂಬ ಹಿರಿಯ ಕನ್ನಡಿಗರು ಕನ್ನಡಕ್ಕೆ ಅನುವಾದ ಮಾಡಿ ಹೇಳುತ್ತಿದ್ದರು. ಒಮ್ಮೆ ಕೃಷ್ನರಾಯರು ಇಲ್ಲದಿದ್ದಾಗ ತಮ್ಮ ಭಾಷಣವನ್ನು ಅನುವಾದ ಮಾಡುವಂತೆ ತಿಲಕರು ಗಂಗಾಧರರಾಯರಿಗೆ ಹೇಳಿದರು. ಗಂಗಾಧರರಾಯರು ಹಿಂಜರಿದರು. ತಿಲಕರು, “ನೀವು ಮನಸ್ಸು ಬಿಚ್ಚಿ ಏನನ್ನಾದರೂ ಹೇಳಿ, ಆದರೆ ಕನ್ನಡದಲ್ಲಿ ಮಾತನಾಡಬೇಕು” ಎಂದರು. ಕನ್ನಡ ಜನರಲ್ಲಿ ಹೊಸ ವಿಚಾರಗಳನ್ನು ಬಿತ್ತಿ ಬೆಳೆಸುವವರು ಆ ಜನರ ಭಾಷೆಯ ಮೂಲಕವೇ ಅವರ ಮನಸ್ಸನ್ನು ಮುಟ್ಟಲು ಸಾಧ್ಯ ಎಂಬುದನ್ನು ತಿಲಕರು ಗುರುತಿಸಿದ್ದರು.

ಮೊದಮೊದಲು ಕನ್ನಡದಲ್ಲಿ ಭಾಷಣ ಮಾಡಲು ಹಿಂಜರಿಯುತ್ತಿದ್ದ ಗಂಗಾಧರರಾಯರು ಸ್ವಲ್ಪಕಾಲದಲ್ಲಿಯೇ ಶಕ್ತಿಯುತವಾದ ಶೈಲಿಯನ್ನು ಸಾಧಿಸಿದರು.

ಗಂಗಾಧರರಾಯರು ಒಮ್ಮೆ ಗುಡುಗಿದರೆ ಸಾಕು, ಕಾರ್ಯಗಳೆಲ್ಲವೂ ಅಚ್ಚುಕಟ್ಟಾಗಿ ಸಾಗುತ್ತಿದ್ದವು. ಅಂತೆಯೇ “ಕರ್ನಾಟಕದ ಸಿಂಹ” ಎನಿಸಿದರು. ಜೀವಂತಿಕೆಯಿಂದ ತುಂಬಿ ತುಳುಕುವ ವಿಶಿಷ್ಟ ಶೈಲಿಯನ್ನು ಅವರು ಭಾಷಣದಲ್ಲಿ ಅಳವಡಿಸಿಕೊಂಡಿದ್ದರು. ಆ ಶೈಲಿ ಎರಡನೆಯರಿಗೆ ಸಾಧಿಸಲಿಲ್ಲ.

ಕಾಂಗ್ರೆಸ್ ಸಂಘಟನೆ

೧೯೨೦ರ ಜುಲೈ ೩ ಗಂಗಾಧರರಾಯರ ಜೀವನದಲ್ಲಿ ಕರಾಳ ದಿನ; ಅಂದು ಅವರ ರಾಜಕೀಯ ಗುರು ತಿಲಕರು ನಿಧನರಾದರು. ತಂದೆಯನ್ನು ಕಳೆದುಕೋಂಡ ಮಗುವಿನಂತೆ ಗಂಗಾಧರರಾಯರು ಕಣ್ಣೀರು ಹರಿಸಿದರು.

ತಿಲಕರ ಮತ್ತು ಗಂತಾಧರರಾಯರು

ತಿಲಕರ ತರುವಾಯ ಗಾಂಧೀಜಿ ಭಾರತದ ನಾಯಕರಾದರು. ಗಂಗಾಧರರಾಯರು ಗಾಂಧಿಜಿಯವರ ಮುಖಂಡತ್ವದಲ್ಲಿ ಕಾಂಗ್ರೆಸ್ ಸಂಗಟನೆಯ ಕಾರ್ಯವನ್ನು ಮುಂದುವರೆಸಿದರು. ಕಾಂಗ್ರೇಸ್ ತನ್ನ ಕೆಲಸಕಾರ್ಯಗಳ ನಿರ್ವಹಣೆಗಾಗಿ ದೇಶವನ್ನು ಹಲವು ಪ್ರಾಂತಗಳನ್ನಾಗಿ ವಿಂಗಡಿಸಿತ್ತು. ನಾಗಪುರದಲ್ಲಿ ಕಾಂಗ್ರಸ್ ಅಧಿವೇಶನ ಸೇರಿದಾಗ ಈ ವಿಭಾಗದ ರೀತಿಯಲ್ಲಿ ಬದಲಾಯಿಸುವ ತೀರ್ಮಾನವಾಯಿತು.ಕಾಂಗ್ರೆಸ್ಸಿನ ಹೆಸರು ಹೇಳುವುದೇ ಮಹಾಪರಾಧವಾಗಿದ್ದ ಕಾಲದಲ್ಲಿ ಗಂಗಾಧರರಾಯರು ಕರ್ನಾಟಕ ಪ್ರಾಂತೀಯ ಕಾಂಗ್ರೆಸ್ ಸಮಿತಿ ಮತ್ತು ಜಿಲ್ಲಾ ಸಮಿತಿಗಳನ್ನು ಸ್ಥಾಪಿಸಿದರು. ೧೯೨೦ರಲ್ಲಿ ಕರ್ನಾಟಕದ ಪ್ರಾಂತೀಯ ಕಾಂಗ್ರೆಸ್ಸಿನ ಪ್ರಥಮ ಸಭೆ ಗದಗದಲ್ಲಿ ನಡೆಯಿತು. ಆಗ ಪ್ರಾಂತೀಯ ಅಧ್ಯಕ್ಷರಾಗಿ ಗಂಗಾಧರರಾಯರು ಅವಿರೋಧವಾಗಿ ಆಯ್ಕೆಯಾದರು. ೧೯೨೪ರವರೆಗು ಅವರು ಪ್ರಾಂತೀಯ ಅಧ್ಯಕ್ಷರಾಗಿದ್ದರು. ಮುಂಬಯಿ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಸಭೆಯಲ್ಲಿ ಅವರು ಕಾರ್ಯಕಾರಿ  ಮಂಡಳಿಯ ಸದಸ್ಯರಾದರು. ೧೯೩೦ರಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದಲ್ಲಿ ಕರ್ನಾಟಕಕ್ಕೆ ಕೀರ್ತಿ ತಂದುಕೊಟ್ಟರು. ಬೆಳಗಾವಿಯ ಪ್ರಚಂಡ ಸಾರ್ವಜನಿಕ ಸಭೆಯೊಂದರಲ್ಲಿ ಕಾಯಿದೆ ವಿರುದ್ಧ ಉಪ್ಪನ್ನು ಮಾರಿ ಬಂಧನಕ್ಕೊಳಗಾದರು. ೧೯೪೨ರ “ಭಾರತ ಬಿಟ್ಟು ತೊಲಗಿ” ಚಳವಳಿಯು ಸುವ್ಯವಸ್ಥಿತವಾಗಿ ನಡೆಯುವಂತೆ ಗಂಗಾಧರರಾಯರು ಮುಂಬಯಿಯಲ್ಲಿದ್ದಕೊಂಡೇ ಸಕಲ ಸಿದ್ಧತೆಗಳನ್ನು ಮಾಡಿದರು. ೧೯೪೨ರಲ್ಲಿ ಸರಕಾರವು ಕಾಂಗ್ರೆಸ್ ಸಂಸ್ಥೆಯನ್ನು “ಕಾನೂನು ಬಾಹಿರ ಸಂಸ್ಥೆ” ಎಂದು ಘೋಷಿಸಿತು. ಆಗ ಗಂಗಾಧರರಾಯರು ಕಾಂಗ್ರೆಸ್ ಸರ್ವಾಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು. ಬೆಳಗಾವಿಯಲ್ಲಿ ಪೊಲೀಸರು ಅವರನ್ನು ಬಂಧಿಸಿ ನಾಸಿಕ್ ಸೆರೆಮನೆಗೆ ಸಾಗಿಸಿದರು. ಅನಂತರ ಅವರು ೧೯೪೪ರವರೆಗೆ ರಾಜಕೀಯ ಕೈದಿಗಳಾಗಿ ನಾಸಿಕ್ ಸೆರೆಮನೆಯಲ್ಲಿದ್ದರು.

೧೯೪೭ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದಿತು. ಬಾಲಗಂಗಾಧರ ತಿಲಕರು, ಮಹಾತ್ಮ ಗಾಂಧಿಯವರು ಇಂತಹವರೊಡನೆ ಆತ್ಮೀಯರಾಗಿದ್ದು ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟ ನಡೆದಾಗ ಅದರಲ್ಲಿ ಮಹತ್ವದ ಪಾತ್ರವಹಿಸಿದ್ದರು. ಗಂಗಾಧರರಾಯರು ಬಯಸಿದ್ದರೆ ಅವರು ಯಾವ ಅಧಿಕಾರವನ್ನಾದರೂ ಪಡೆಯಬಹುದಾಗಿತ್ತು. ಆದರೆ ಅವರು ಯಾವ ಸ್ಥಾನವನ್ನೂ ಬಯಸಲಿಲ್ಲ. ಇತರರಿಗೆ ಮಾರ್ಗದರ್ಶನ ಮಾಡುವ ಹಿರಿಯರಾಗಿ ನಿಂತರು.

ಕನ್ನಡದ ಕಟ್ಟಾ ಅಭಿಮಾನಿ

ಸ್ವತಂತ್ರ ಭಾರತದಲ್ಲಿ ಪ್ರಾಂತಗಳ ವಿಂಗಡಣೆ ತೃಪ್ತಿಕರವಾಗಿಲ್ಲ, ಮಾರ್ಪಡಿಸಬೇಕು ಎಂದು ಬಹು ಜನರ ಅಭಿಪ್ರಾಯ. ಇದನ್ನು ಪರಿಶೀಲಿಸಲು ಸರಕಾರ ಒಂದು ಸಮಿತಿಯನ್ನು ನೇಮಿಸಿತು. ಅದರ ಅಧ್ಯಕ್ಷರು ಫಜಲ್ ಅಲಿ ಎಂಬುವವರು. ಸಮಿತಿ ಬೆಳಗಾವಿಗೆ ಬಂದಾಗ ಗಂಗಾಧರರಾಯರ ಮನೆಗೆ ಹೋಗಿ ಅವರ ಹೇಳಿಕೆಯನ್ನು ಕೇಳಿಕೊಂಡಿತು. ಆಗ ರಾಯರ ಹೇಳಿಕೆಗೆ ವಿಶೇಷ ಮಹತ್ವ ಪ್ರಾಪ್ತವಾಗಿತ್ತು. “ಬೆಳಗಾವಿ ಕರ್ನಾಟಕದ್ದು, ಅದು ಕರ್ನಾಟಕದಲ್ಲಿಯೇ ಇರತಕ್ಕದ್ದು” ಎಂದು ಗಂಗಾಧರರಾಯರು ಆಯೋಗದೆದುರು ಖಡಾಖಂಡಿತವಾಗಿ ನುಡಿದರು.

೧೯೫೧ರಲ್ಲಿ ಆಗಿನ ರಾಷ್ಟ್ರಪತಿ ಬಾಬು ರಾಜೇಂದ್ರಪ್ರಸಾದರು ಗಂಗಾಧರರಾಯರ ಮನೆಗೇ ಹೋಗಿ ಅವರ ಭೇಟಿ ಮಾಡಿದರು.

ಹುದಲಿ ಆಶ್ರಮ

ರಾಜಕೀಯ ಹೋರಾಟದ ಕಾವು ತಗ್ಗಿದ ಕೂಡಲೆ ವಿಧಾಯಕ ರೀತಿಯಲ್ಲಿ ರಾಷ್ಟ್ರೀಯ ಭಾವನೆಯನ್ನು ಜಾಗೃತಗೊಳಿಸಲು ಗಂಗಾಧರರಾಯರು ಅಣಿಯಾದರು. ಈ ಉದ್ದೇಶವನ್ನಿಟ್ಟುಕೊಂಡು ಅವರು ಬಾಪೂಜಿಯವರ ಸಾಬರಮತಿ ಆಶ್ರಮದ ಮಾದರಿಯಲ್ಲಿ ತಮ್ಮ ಹುದಲಿಯ ತೋಟದಲ್ಲಿ ಆಶ್ರಮವನ್ನು ತೆರೆದರು. ಅನೇಕ ಕಾರ್ಯಕರ್ತರಿಗೆ ಗಂಗಾಧರರಾಯರು ಇಲ್ಲಿ ದೇಶಸೇವೆಯ ದೀಕ್ಷೆಯನ್ನು ನೀಡಿದರು. ೧೯೩೬ರಲ್ಲಿ ಗಾಂಧಿ ಸೇವಾ ಸಂಘದ ಸಮ್ಮೇಳನವನ್ನು ಇಲ್ಲಿ ಕೂಡಿಸಿದಾಗ ಗಾಂಧಿಜಿ, ವಲ್ಲಭಬಾಯಿ ಪಟೇಲ್, ರಾಜೇಂದ್ರ ಪ್ರಸಾದ್, ಖಾನ್ ಅಬ್ದುಲ್ ಗಫಾರ್ ಖಾನ್ ಮೊದಲಾದ ಹಿರಿಯ ನಾಯಕರು ಆಗಮಿಸಿ ದೇಶಸೇವಕರನ್ನು ತಯಾರಿಸುವ ಕಾರ್ಯಾಗಾರವಾಯಿತು.

ಜೀವನ ಸಂದೇಶ

೧೯೫೧ರ ಜೂನ್ ೨೪ರಂದು ದಾದಾಸಾಹೇಬ ಮಾವಳಣಕರರ ಅಧ್ಯಕ್ಷತೆಯಲ್ಲಿ ಸರ್ವ ಪಕ್ಷಗಳ ಪರವಾಗಿ ಗಂಗಾಧರರಾಯರನ್ನು ಸತ್ಕರಿಸಲಾಯಿತು.

ಸ್ವಾತಂತ್ರ್ಯ ಹೋರಾಟದಲ್ಲಿ ಅವಿಶ್ರಾಂತವಾಗಿ ದುಡಿದ ಈ ದೇಶಭಕ್ತ ಸ್ವಾತಂತ್ರ್ಯ ಪ್ರಾಪ್ತಿಯನ್ನು ಕಂಡು ಧನ್ಯತೆಯನ್ನು ಪಡೆದರು. ತಾವು ಪಟ್ಟ ಕಷ್ಟ ಸಾರ್ಥಕವಾಯಿತೆಂದು ಸಂತೃಪ್ತಿಯಿಂದ ರಾಷ್ಟ್ರೀಯ ಜೀವನದಿಂದ ಆಧ್ಯಾತ್ಮಿಕ ಜೀವನಕ್ಕೆ ಹೊರಳುವ ಮನಸ್ಸು ಮಾಡಿದರು. ೮೯ ವರ್ಷಗಳ ತುಂಬು ಜೀವನ ನಡೆಸಿದ ಈ ಮಹಾವ್ಯಕ್ತಿ ೧೯೬೦ರ ಜುಲೈ ತಿಂಗಳಲ್ಲಿ ಇಹಲೋಕದ ಯಾತ್ರೆಯನ್ನು ಮುಗಿಸಿದರು.

ತ್ಯಾಗ, ಸೇವಾಭಾವನೆ, ತತ್ವಕ್ಕಾಗಿ ಎಂಥ ಪರಿಸ್ಥಿತಿಯಲ್ಲಿಯೂ ಚಂಚಲವಾಗದ ಸ್ಥಿರ ಮನಸ್ಸು ಇವು ಗಂಗಾಧರರಾಯರ ಬಾಳನ್ನು ಸಾರ್ಥಕಗೊಳಿಸಿದವು. ಇತರರು ತಮ್ಮ ಬಾಳನ್ನು ಸಾರ್ಥಕಗೊಳಿಸುವ ದಾರಿಯನ್ನು ಗಂಗಾಧರರಾಯರು ಬೆಳಗಿದರು.

೧೯೫೧ರಲ್ಲಿ ೮೦ ವರ್ಷದ ಗಂಗಾಧರರಾಯರು ತಮಗೆ ನಡೆದ ಸನ್ಮಾನ ಸಭೆಯಲ್ಲಿ ಆಡಿದ ಮಾತುಗಳು ಎಂದೂ ಎಲ್ಲರೂ ನೆನಪಿಡಬೇಕಾದಂತಹವು: “ಸ್ವಾತಮರ್ತ್ಯವನ್ನು ನೀವೇ ಗಳಿಸಿದಿರೆಂಬ ಅಹಂಕಾರ ತಾಳಬೇಡಿರಿ. ಅದರಂತೆ ರಾಜಕೀಯ ಮತಭೇದವೆಂದರೆ ದ್ವೇಷವಲ್ಲ. ಮೊದಲು ತಿಲಕರು ಮತ್ತು ಅಗರಕರ್ ಅವರಲ್ಲಿ ತೀವ್ರ ಮತಭೇದವಿತ್ತು. ಆದರೆ ಅವರು ಒಬ್ಬರು ಇನ್ನೊಬ್ಬರ ಗುಣಗಳನ್ನು ಎಂದೂ ತಿರಸ್ಕರಿಸುತ್ತಿರಲಿಲ್ಲ. ಇಂದು ಮತಭೇದ ಅಥವಾ ಪಕ್ಷಭೇದವೆಂದರೆ “ಪರಸ್ಪರರ ದ್ವೇಷ ಮತ್ತು ಕುಚೇಷ್ಟೇ”ಯಾಗಿದೆ. ಆದುದರಿಂದ ಒಂದು ಪಕ್ಷದೊಳಗಿನ ಅಥವಾ ಯಾವ ಪಕ್ಷಕ್ಕೂ ಸೇರದ ವ್ಯಕ್ತಿಯ ಗುಣಗಳಿಗೆ ಬೆಲೆಯಿಲ್ಲದೆ ಹೋಗುತ್ತದೆ. ಇಂಥ ಪರಿಸ್ಥಿತಿಯಲ್ಲಿ ರಾಷ್ಟ್ರಕ್ಕೆ ಹಾನಿಯಾಗುತ್ತದೆ. ಸಮಾಜ ಜೀವನ ಕಲುಷಿತವಾಗುತ್ತದೆ. ಇದನ್ನರಿತು ಎಲ್ಲ ಪಕ್ಷಗಳು ಒಬ್ಬರೊಬ್ಬರ ಗುಣಗಳನ್ನು ಆಧರಿಸಬೇಕು. ಸಮಾಜ ಜೀವನ ಕಲುಷಿತವಾಗದಂತೆ ಎಚ್ಚರಿಕೆಯನ್ನು ವಹಿಸಬೇಕು”.