ಹಿರೇಬೆಣಕಲ್ ನಗಾರಿ ಬೆಟ್ಟ

ದೂರ

ತಾಲೂಕಿನಿಂದ : ೧೯ ಕಿ.ಮೀ.
ಜಿಲ್ಲೆಯಿಂದ : ೧೯ ಕಿ.ಮೀ

ಹೈದರಾಬಾದ ಕರ್ನಾಟಕ ಪ್ರದೇಶದ 7 ಅದ್ಭುತಗಳಲ್ಲಿ  ಗಂಗಾವತಿ ತಾಲೂಕಿನ ಹಿರೆಬೆಣಕಲ್ ಕೂಡಾ ಒಂದಾಗಿದೆ. ಸರಕಾರದ ಸರ್ವೇಕ್ಷಣಾ ಇಲಾಖೆಯು ವಿಶ್ವಪರಂಪರೆಯ ಪ್ರೇಕ್ಷಣೀಯ ಸ್ಥಳಗಳಲ್ಲಿ ಹಿರೇಬೆಣಕ ಗ್ರಾಮವನ್ನು ಗುರುತಿಸಿದೆ. ಗ್ರಾಮದ ಹತ್ತಿರ ಸುಮಾರು 10 ಸಾವಿರ ಹೆಕ್ಟೇರುಗಳಲ್ಲಿ ಹಬ್ಬಿಕೊಂಡಿರುವ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ  ಆನೆಗುಂದಿಗೆ ಹತ್ತಿರದಲ್ಲಿರುವ ಬೆಟ್ಟದ ತುದಿಯಲ್ಲಿ ಸುಮಾರು 3000 ವರ್ಷಗಳಷ್ಟು ಹಳೆಯದಾದ ಆದಿಮಾನವರ ನಿವೇಶನಗಳಿವೆ ಒಂದು ಭಾಗದಲ್ಲಿ ತುಂಗಭದ್ರಾ ಜಲಾಯಶಯದ ಬಲದಂಡೆ ಕಾಲುವೆ ಹರಿಯುತ್ತಿದ್ದು, ಇನ್ನೊಂದು ಭಾಗದಲ್ಲಿ ಬೆಟ್ಟಗಳಿಂದ ಆವೃತ್ತವಾಗಿರುವ  ಭೂಭಾಗ,  ಭತ್ತದ ಗದ್ದೆಗಳಿಂದ ಹಾಗೂ ತೆಂಗಿನ ತೋಪುಗಳಿಂದ ಹರಡಿಕೊಂಡಿದೆ. ಈ ನೆಲೆಗಳಿಗೆ ಶಿಲಾಸಮಾ ಗಳೆಂದು ಕರೆಯುತ್ತಾರೆ. ಆದರೆ ಸ್ಥಳೀಯವಾಗಿ ಇದಕ್ಕೆ ಮೊರೆರ ಮನೆಗಳೆಂದು ಮತ್ತು ಅಲ್ಲಿರುವ ಬೆಟ್ಟಕ್ಕೆ ನಗಾರಿ ಗುಡ್ಡವೆಂದು ಕರೆಯುವುದುಂಟು.

 

ಇದರಲ್ಲಿ ಆಶ್ಚರ್ಯಕರ ಸಂಗತಿ ಎಂದರೆ ನಮ್ಮ ಪೂರ್ವಿಕರು ದೊಡ್ಡ ಬಂಡೆಗಲ್ಲುಗಳನ್ನು ಕೊರೆದು 10×10 ಅಳತೆಯ ಕಲ್ಲುಗಳನ್ನು ಯಾವುದೇ ರೀತಿಯ ಭಾರ ಎತ್ತುವ ಯಂತ್ರಗಳ ಸಹಾಯವಿಲ್ಲದೆ ಜೋಡಿಸಿ ವಾಸಸ್ಥಾನ ನಿರ್ಮಾಣ ಮಾಡಿದ್ದು ಅವರ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿದೆ. ಇವತ್ತಿನ ವೈಜ್ಞಾನಿಕ  ಉಪಕರಣಗಳನ್ನು ಬಳಸಿಯೂ ನಮ್ಮ ಕಟ್ಟಡಗಳು ನೂರು ವರ್ಷ ಉಳಿಯುವದು ಕಷ್ಟವಿದೆ. ಅಲ್ಲಿನ ಬಂಡೆಗಲ್ಲಿನ ಮೇಲೆ ಸಿಕ್ಕಿರುವ ಸಂಗೀತ ವಿವರಗಳು ಮತ್ತು ಅವುಗಳಿಂದ ‘‘ನಗಾರಿ’’ ಎಂಬ ವಾದ್ಯದ ಕಲ್ಪನೆ ನಿಜವಾಗಿಯೂ ಅದ್ಭುತವಾಗಿದೆ.

 

೧೨ ಗುಹೆಗಳಲ್ಲಿ ಚಿತ್ರಿಸಲಾದ ಬಂಡೆ ಮೇಲಿನ ಗುಹಾ ಚಿತ್ರಗಳನ್ನು 1968 ರಲ್ಲಿ ಲಿಯೋನಾರ್ಡ್‌ಮನ್ ಮತ್ತು ಡಾ. ಅ. ಸುಂದರ ಇವರು ಸಂಶೋಧಿಸಿ ಲೇಖನಗಳನ್ನು ಬರೆದಿರುತ್ತಾರೆ. ಅದೇ ರೀತಿ ಚಿಕ್ಕ ಬೆಣಕಲ್‌ನ ಅನತಿ ದೂರದಲ್ಲಿರುವ ಬೆಟ್ಟದಮೇಲೆ ಸುಮಾರು 3 ಕಿ.ಮೀ. ಸಾಗಿದ ನಂತರ ಸಿಗುವ ಪ್ರಾಚೀನ ಕಾಲದ ಜನ ವಾಸಿಸುರುವ ಚಿಕ್ಕ ಚಿಕ್ಕ ವಾಸಸ್ಥಾನದ ಮನೆಗಳನ್ನು ಕಾಣಬಹುದು. ಇಲ್ಲಿನ ಜನ ಇವುಗಳನ್ನು “ಮೋರೆರ್ ಮನೆಗಳು” ಎಂದು ಕರೆಯತ್ತಾರೆ. ವೌರ್ಯರ ಕಾಲದ ಗಿಡ್ಡಗಿನ ಜನರ ವಾಸಸ್ಥಾನವಾಗಿರಬಹುದೆಂದು  ಊಹಿಸಲಾಗಿದೆ. ಈ  ವಿಶಾಲ ಮೈದಾನದ ಹತ್ತಿರದ  ಬಂಡೆಯ ಮೇಲೆ ಹಿಂದೆ ಒಂದು ನಾಗರಿಕತೆ ಇಲ್ಲಿ  ಊರು ಕಟ್ಟಿಕೊಂಡು ಬಾಳಿತ್ತು ಎಂಬುದು ಸ್ಪಷ್ಟ ಕುರುಹುಗಳು ಸಿಗುತ್ತವೆ. ಬಂಡೆಗಳಿಂದ ನಿರ್ಮಿಸಿ ಕೊಂಡಿರುವ ಚಿಕ್ಕ ಚಿಕ್ಕ ಮನೆಗಳು ಗುಂಪಾಗಿರುವ ಇಲ್ಲಿ ನಾವು ಊರನ್ನೆ ಕಾಣಬಹುದು. ಈ ಊರಿನ ಪಕ್ಕದಲ್ಲಿ ವಿಶಾಲವಾದ ಹೊಂಡವಿದೆ. ಬಹಳಷ್ಟು ಮನೆಗಳು ನಿರ್ಲಕ್ಷದಿಂದ ಹಾಳಾಗಿದ್ದು ಈ ಊರಿನ ಸುತ್ತ ಗೋಡೆಯನ್ನು ನಿರ್ಮಿಸಲಾಗಿದೆ. ಅಲ್ಲಿಂದ ನಾವು ಪಶ್ಚಿಮಕ್ಕೆ ಇಳಿದರೆ ಶಿವರಾಯಪ್ಪನ ಕೆರೆ ಸಿಗುತ್ತದೆ. ಇದು ಕೆರೆ ಅನ್ನುವದಕ್ಕಿಂತ ಹಿಂದಿನ ಕಾಲದ ಜನರ ಡ್ಯಾಂ ಎಂದು ಕರೆಯಬಹುದು. ಇದರೊಳಗಿನ ತೂಗು ಗೇಟ್‌ನ್ನು ಬೃಹತ್ತಾದ ಏಕಶಿಲೆಗಳಿಂದ ಮಂಟಪವನ್ನು ನಿಲ್ಲಿಸಿ ನಿರ್ಮಿಸಲಾಗಿದೆ. ಇಷ್ಟೊಂದು ಬೃಹತ್ ಕಂಬಗಳನ್ನು  ಇಲ್ಲಿ ನಿಲ್ಲಿಸಿರುವದನ್ನು ಆಶ್ಚರ್ಯವನ್ನುಂಟು ಮಾಡುತ್ತದೆ. ಈ ಕ್ರಸ್ಟ್‌ಗೇಟ್ ಒಳಗಿಂದ ನೀರು ಹಾಯಿಸುವ ವ್ಯವಸ್ಥೆ ಇದ್ದು ಈ ಡ್ಯಾಂ ನ ಸುತ್ತಲೂ ಗುಡ್ಡವಿದೆ. ಈಗಲೂ ಇಲ್ಲಿ ದೊಡ್ಡ ಪ್ರಮಾಣದಲ್ಲಿ ನೀರನ್ನು ಸಂಗ್ರಹಿಸಿ ಇಡಬಹುದಾಗಿದೆ. ಇದನ್ನು ಸರಿಪಡಿಸಿದರೆ ಈಗಲೂ ಇದು ಬಳಕೆಗೆ ಬರುತ್ತದೆ.

 

ನೆಗೊಂದಿ

ದೂರ 
ತಾಲೂಕಿನಿಂದ : ೧೩ ಕಿ.ಮೀ.
ಜಿಲ್ಲೆಯಿಂದ : ೬೫ ಕಿ.ಮೀ

ಆನೆಗೊಂದಿ,  ವಿಜಯನಗರ  ಸಾಮ್ರಾಜ್ಯದ ಮಾತೃಸ್ಥಾನವಾಗಿ ಚಾರಿತ್ರಿಕ ಮಹತ್ವ ಪಡೆದಿದೆ. ಇಲ್ಲಿ ಪುರಾಣ  ಹಾಗೂ ಇತಿಹಾಸ ಕಾಲದ ಅಪೂರ್ವ ಸ್ಮಾರಕಗಳಿದ್ದು, ವಿಶಿಷ್ಟ ಚಾರಿತ್ರಿಕ ನೆಲೆ ಎನಿಸಿದೆ. ಸಾಹಿತ್ಯಿಕ ವಾಗಿಯೂ ಆನೆಗೊಂದಿ ಪ್ರಮುಖ ಸ್ಥಾನ  ಪಡೆದಿತ್ತೆಂಬುದು ಅಲ್ಲಿಯ ಕಡೆಬಾಗಿಲಿನ  ಬಳಿಯ ಹೊಲದಲ್ಲಿ  ದೊರೆತ  ತಾಮ್ರಶಾಸನದಿಂದ  ತಿಳಿದುಬರುತ್ತದೆ. ಸಾಮಾನ್ಯವಾಗಿ  ಶಾಸನಗಳಲ್ಲಿ ದಾನ, ದತ್ತಿಗೆ ಸಂಬಂಧಿಸಿದ ವಿಷಯಗಳಿರುತ್ತವೆ. ಆದರೆ ಈ ತಾಮ್ರಶಾಸನದಲ್ಲಿ ವಿವಾಹ ಪುರಾಣ ಹಾಗೂ ಅಮೃತ ಮಥನ ಪುರಾಣ ಗಳೆಂಬ ಎರಡು  ಸಾಹಿತ್ಯಕೃತಿಗಳಿರುವುದು  ವಿಶೇಷ.

ಆನೆಗೊಂದಿ ಪೌರಾಣಿಕ ಮಹತ್ವವುಳ್ಳ ಸ್ಥಳವೂ ಆಗಿದ್ದು, ಪಂಪಾದೇವಿ ಇಲ್ಲಿನ ತುಂಗಭದ್ರಾ ನದಿಯ ಉತ್ತರ ದಂಡೆಯ ಮೇಲೆ ತಪಸ್ಸು ಮಾಡಿ  ಶಿವನನ್ನು ಮೆಚ್ಚಿಸಿ ಮದುವೆಯಾದಳು. ನಂತರ ಪಂಪಾದೇವಿ ಮತ್ತು ವಿರೂಪಾಕ್ಷ (ಶಿವ)  ಹಂಪೆಯಲ್ಲಿ  ನೆಲೆಸಿದರು. ಆನೆಗೊಂದಿಯ ಉತ್ತರಕ್ಕಿರುವ ಪಂಪಾದೇವಿ ತಪಸ್ಸು  ಮಾಡಿದ ಸ್ಥಳವೆಂದು ಗುರುತಿಸಲಾಗುತ್ತದೆ. ಇದು ರಾಮಾಯಣ ಕಾಲದ ಕಿಷ್ಕಿಂದ ಪಟ್ಟಣವೆಂಬ ಪ್ರತೀತಿ ಇದೆ. ಆಂಜನೇಯ ಜನ್ಮಸ್ಥಳ ಅಂಜನಾದ್ರಿ ಇರುವುದು ಇಲ್ಲಿಯೇ 500 ವರ್ಷಗಳ ಸುದೀರ್ಘ ಅವಧಿಯವರೆಗೆ ಕಟ್ಟಿದ ಆನೆಗೊಂದಿ ಕೋಟೆ ಕಾಕತಿಯರಕಾಲದ್ದು ಎನ್ನಲಾಗಿದೆ. ಇಲ್ಲಿರುವ  ಚಿಂತಾಮಣಿ, ಗಗನ್ ಮಹಲ್, ನವವೃಂದಾವನಗಳು, ರಂಗನಾಥಸ್ವಾಮಿ ದೇವಾಲಯ, ಪಂಪಾಸರೋವರ ಪ್ರೇಕ್ಷಣೀಯ  ಸ್ಥಳಗಳಾಗಿವೆ.

ವಿಜಯ ನಗರ ಅರಸರ ಪ್ರಾರಂಬಿsಕ ರಾಜಧಾನಿ ಯಾಗಿದೆ ಪೂರ್ವ ಅರಮನೆ ಇಲ್ಲಿದೆ ಆನೆಗುಂದಿಯ ಲಕ್ಷ್ಮೀ ನರಸಿಂಹ ದೇವಾಲಯ ಪೂರ್ವಾಭಿಮುಖವಾಗಿರುವ ದೇವಾಲಯವಾದ ಇದು ವಿಷ್ಣುಮೂರ್ತಿಯನ್ನು ಹೊಂದಿದೆ ನರಸಿಂಹ ಅವತಾರದ ಎರಡು ಶಿಲ್ಪಗಳು ನಾಲ್ಕು ಕೈಗಳಿರುವ ಇದು ಚಕ್ರ ಶಂಖು ಹಿಡಿದಿರುವನು ಗರ್ಭಗುಡಿಯಲ್ಲಿ ಲಕ್ಷ್ಮೀ ನರಸಿಂಹನ ಸಹಿತ ೪ ಅಡಿ ಎತ್ತರದ ಶಿಲ್ಪವಿದ್ದು ತೊಡೆಮೇಲೆ ಲಕ್ಷ್ಮೀ ಕುಳಿತಿದ್ದಾಳೆ. ರಂಗನಾಥನ ದೇವಾಲಯ; ೩ ಅಡಿ ಎತ್ತರದ ಗುಡಿಯಲ್ಲಿ ಶೇಷಶಾಯಿಯಾದ ವಿಷ್ಣುವಿನ ಶಿಲ್ಪವಿದೆ. ಮೂಲ ವಿಗ್ರಹ ಹಾಳಾದ ಮೇಲೆ ಹೊಸದಾಗಿ ಮಾಡಿಸಿರುವರು. ನಿಂತ ಭಂಗಿಯಲ್ಲಿರುವ ಲಕ್ಷ್ಮೀಯ ಎರಡು ಮೂರ್ತಿಗಳಿವೆ. ಈ ದೇವಾಲಯದಲ್ಲಿನ ಮೂರ್ತಿಗಳು ಕನಕಗಿರಿ ದೇವಾಲಯದಲ್ಲಿರುವಂತಿವೆ.

ಜಿನ ದೇವಾಲಯ; ಇದೊಂದು ಜೈನ ಬಸದಿಯಾಗಿದೆ ಪದ್ಮಾಸನದಲ್ಲಿ ಕುಳಿತ ಜಿನ ಇಲ್ಲಿದ್ದು ಚೌಕಾಕಾರದಲ್ಲಿರುವ ನವರಂಗವಿದ್ದು ಸಿಂಹ ಕಮಲವಿರು ಭಂಗಿಗಳಿವೆ ಗರ್ಭಗುಡಿಯೋಳಗೆ ಪೀಠ ಮಾತ್ರವಿದೆ.

 

ಗಣೇಶ ಗುಡಿ;

ಗರ್ಭಗುಡಿ ಮಾತ್ರ ಉಳಿದಿದ್ದು ಬಾಗಿಲು ಕಲಾತ್ಮಕತೆಯಿಂದ ಕೂಡಿದೆ. ಸ್ತ್ರೀ ಪುರುಷರ ಚಿಕ್ಕ ಚಿಕ್ಕ ಶಿಲ್ಪಗಳಿವೆ ಧ್ಯಾನಾಸಕ್ತ, ಕುಳಿತ, ನಿಂತ ನಾಟ್ಯ ಭಂಗಿಯಲ್ಲಿರುವ ಮೂರ್ತಿಗಳು ಮನ ಸೆಳೆಯುತ್ತವೆ. ಅರಮನೆ ವಾಲಿ ಬಂಢಾರವು ಶಿಲ್ಪ ಸೌಂದರ್ಯಗಳಿಂದ ಕೂಡಿದೆ. ಇಲ್ಲಿ ಕಾಶಿ ವಿಶ್ವನಾಥೇಶ್ವರ ದೇವಾಲಯ ರಂಗನಾಥ ದೇವಾಲಯ ಜಿನದೇವಾಲಯ ಅರಮನೆಗಳು ನೋಡಲು ಸಿಗುವ ದೇವಾಲಯಗಳಾಗಿವೆ.

 

ನೇಗುಂದಿ ವಾಲಿ ಕಿಲ್ಲಾ:

ಇಲ್ಲಿ ಆದಿಶಕ್ತಿ ದೇವತೆಯ ವಾಸಸ್ಥಾನವಿದ್ದು  ದುರ್ಗಾದೇವಿಗಾಗಿ  ಪ್ರತಿ ದಸರೆಗೊಮ್ಮೆ  ಶರನ್ನವರಾತ್ರಿ ನಡೆಯುತ್ತದೆ. ಪುಣ್ಯವಾಚನ, ಗಣಪತಿ ಸ್ತೋತ್ರ, ಕಂಕಣ ಬಂಧನ, ದೇವತಾ ಘಟಸ್ಥಾಪನೆ, ನವರಾತ್ರಿ ಉತ್ಸವ, ಪಟ್ಟಾಭಿಷೇಕಗಳು ನಡೆಯುತ್ತವೆ. ದೇವಿಗೆ ಕುಂಕುಮಾರ್ಚನೆ, ಸಹಸ್ರ ನಾಮಾರ್ಚನೆ, ದುರ್ಗಾ ಸಪ್ತಷತಿ ಪಾರಾಯಣ, ಯಜ್ಞಹೋಮ, ಪುರ್ಣಾಹುತಿ, ನವಕನ್ಯೆ ಪೂಜೆ, ಶ್ರೀದೇವಿ ಪುರಾಣಗಳು, ಸಂಗೀತ ಪಲ್ಲಕ್ಕಿ ಅಷ್ಟೋತ್ತರ ಕಾರ್ಯಕ್ರಮಗಳು ಎಂದಿನಿಂದಿಲೂ ನಡೆದುಕೊಂಡು ಬಂದಿರುತ್ತವೆ. ಇದರ ಪಕ್ಕದಲ್ಲಿ ಬೆಟ್ಟಕ್ಕೆ ಹೊಂದಿಕೊಂಡಿರುವ ಕೋಟೆಯ ಬಾಗಿಲಿದ್ದು ಒಳಗಡೆ ಹೋದಂತೆ ರಾಜರ ಸಮಾಧಿಗಳು ಪ್ರಾಚೀನ ಭಾವಿ ಈಗಲೂ ಇದ್ದು ರಾರಾಜಿಸುತ್ತವೆ. ಮುಂದೆ ಸಾಗಿದಲ್ಲಿ ಗುಂಡಕಲ್ಲುಗಳ ಮದ್ಯೆ ಪ್ರಾಚೀನದಲ್ಲಿ ಹುತ್ತು ಹೊಂದಿದ್ದು ಜನ ಈಗಲೂ ಆಳಕ್ಕಿಳಿದು ಇಲ್ಲಿ ಪೂಜೆ ಮಾಡುತ್ತಾರೆ. ಈ ಬೆಟ್ಟವನ್ನು ಏರಿ ನಿಂತು ನೋಡಿದರೆ ಪಂಪಾಸಾಗರ, ಹಂಪೆ, ತುಂಗಭದ್ರೆನದಿ ವೀಕ್ಷಿಸಬಹುದು.

 

ಶ್ರೀ ಕನಕಗಿರಿ ಶ್ರೀ ಲಕ್ಷ್ಮೀ ಕನಕಾಚಲಪತಿ ದೇವಾಲಯ

ದೂರ 
ತಾಲೂಕಿನಿಂದ : ೧೬ ಕಿ.ಮೀ.
ಜಿಲ್ಲೆಯಿಂದ : ೪೫ ಕಿ.ಮೀ

ಕೃಷ್ಣದೇವರಾಯನ ಕಾಲದಲ್ಲಿ ಕನಕಗಿಯ ಪಾಳೇಯಗಾರರಾಗಿದ್ದ ಉಡಿಚನಾಯಕ ಪ್ರೌಢದವರಾಯನ ಕಾಲದಲ್ಲಿ ಪರಸಪ್ಪ ಉಡಿಚನಾಯಕ ಕಾಲದಲ್ಲಿ ಲಕ್ಷೀ ನರಸಿಂಹ ದೇವಾಲಯಗಳು ನಿರ್ಮಾಣಗೊಂಡವು. ಮುಂದಿನ ಪಾಳೇಯ ಗಾರರು ಈಗಿನ ಸ್ಥಿತಿವರೆಗೂ ಕಟ್ಟಿಸಿರುವರು. ೫೪ಅಡಿ ಉದ್ದ ೩೭ ಅಡಿ ಅಗಲವರುವ ಇದು ೯೦ ಅಡಿ ಅಗಲ ೨೦೮ ಅಡಿ ಉದ್ದದ ಪ್ರಾಂಗಣವಿದೆ. ನಾಟ್ಯ ಶಾಲೆ ಮಹಾ ಮಂಟಪವಿದ್ದು ೩೪ ಕಂಬಗಳ ಮೇಲೆ ನಿಂತಿದೆ. ಎರಡು ಭಾಗದಲ್ಲಿ ಇಲ್ಲಿನ ಕಂಬಗಳಿದ್ದು ಹದಿನಾರು ಮುಖಭಾವವಿರುವ ಕಾಲೆತ್ತಿ ನಿಂತಿರುವ ಕುದುರೆಯಾಕಾರದ ಸಿಂಹಾಕಾರದ ಕೆತ್ತನೆಯ ಚಾಚು ಪೀಠಗಳಿವೆ. ಮಂಟಪದಲ್ಲಿ ವಿವಿಧ ಭಂಗಿಯ ಪೌರಾಣಿಕ ಚಿತ್ರಗಳಿವೆ ದ್ರಾವಿಡ ಶಿಖರವಿದ್ದು, ನರಸಿಂಹ ದೇವಾಲಯ ಪಕ್ಕದಲ್ಲಿ ಲಕ್ಷಿ ದೇವಾಲಯವಿದೆ, ದೇವಾಲಯ ಸುತ್ತಲೂ ವಿವಿಧ ರಾಮಾಯಣ ಮಹಾಭಾರತ ಕಥೆ ಬಿಂಬಿಸುವ ಪದ್ಮಾಸನದ ಶಿವ, ಹೊರ ಪ್ರಾಂಗಣದಲ್ಲಿ ಉಡಿಚ ನಾಯಕ, ವೆಂಕಟಪ್ಪ ನಾಯಕ, ಕನಕಪ್ಪ ನಾಯಕ, ಇಬ್ಬರು ರಾಣಿಯರ ಶಿಲ್ಪಗಳಿವೆ. ರಾಜವೇಷ ನಿಲುವಂಗಿ ಧರಿಸಿರುವ ರೀತಿ ನೋಡಿದರೆ ಹೃದಯ ತಟ್ಟುತ್ತವೆ.

ಕನಕಗಿರಿಯಲ್ಲಿ ಶಂಕರಲಿಂಗನ ಗುಡಿ, ನಗರೇಶ್ವರ, ಪಾಂಡುರಂಗ, ಬಸವಣ್ಣ, ಪಾರ್ವತಿ, ವೀರಭದ್ರ, ಯಲ್ಲಮ್ಮ, ಗಜಲಕ್ಷೀ. ಗುಡಿಗಳು ಪ್ರಮುಖವಾಗಿವೆ.

ಇಲ್ಲಿನ ವೆಂಕಟಪತಿ ಬಾವಿ ಹಂಪಿಯ ರಾಣಿಯರ ಸ್ನಾನದ ಗೃಹಕ್ಕಿಂತ ಚೆನ್ನಾಗಿದೆ. ಸುತ್ತಲೂ ಈಶ್ವರ ಪಾರ್ವತಿ ವೆಂಕಟರಮಣರ ಮೂರ್ತಿ ಇವೆ, ಇದು ನೆಲಮಟ್ಟಿದಿಂದ ಕೆಳಗೆ ಇರುವದರಿಂದ ಹತ್ತಿರ ಹೋಗುವವರೆಗೂ ಕಾಣುವದಿಲ್ಲ, ಇಲ್ಲಿಯ ವಿಶೇಷವೆಂದರೆ ಸಿಂಹ ಶಿಲ್ಪದ ಬಾಯಲ್ಲಿ ಗುಂಡುಗಳೂ ಅಲುಗಾಡಲು ಬರುವಂತೆ ಕೆತ್ತಲಾಗಿದ್ದು ಅವುಗಳು ಇತ್ತೀಚಿಗೆ ನಾಶವಾಗಿವೆ, ಕನಕಪ್ಪ ನಾಯಕನ ತಮ್ಮ ವೆಂಕಟಪ್ಪ ನಾಯಕ ನಿರ್ಮಿಸಿದ್ದು ಆತನ ಹೆಸರಿನಿಂದಲೇ ಕರೆಯಲಾಗುವದು. ಈ ಭಾಗದಲ್ಲಿ ಇರುವ ಹೇಮಗುಡ್ಡದಲ್ಲಿ ಕನಕರಾಯ ಗುಡಿ, ಈಶ್ವರಗುಡಿ, ಮತ್ತು ಕೋಟೆಗಳನ್ನು ಮತ್ತು ನವಲಿ ಗಳಲ್ಲಿ ಭೋಗಾಪುರೇಶ್ವರ ದೇವಾಲಯಗಳನ್ನು ನಿರ್ಮಿಸಿದ್ದಾರೆ.

 

ಹೇಮಗುಡ್ಡದ ಕೋಟೆ

ದೂರ 
ತಾಲೂಕಿನಿಂದ : ೧೮ ಕಿ.ಮೀ.
ಜಿಲ್ಲೆಯಿಂದ : ೩೩ ಕಿ.ಮೀ

ಗಂಗಾವತಿಯಿಂದ ೧೮ ಕಿ.ಮೀ. ದೂರದಲ್ಲಿದೆ ಇದು ಕಾಟನ ದುರ್ಗ, ಯಮನದುರ್ಗ, ಬಸವನ ದುರ್ಗ, ಹಂಪಸ ದುರ್ಗ, ಕಮ್ಮಟ ದುರ್ಗ, ಬಿಸಿಲೆಪ್ಪನ ದುರ್ಗ, ಹುಚ್ಚಮಗಿ ದುರ್ಗ, ಚಂದ್ರಗಿರಿ ದುರ್ಗಗಳು ಆಗ ಪ್ರಸಿದ್ಧಿಯಲ್ಲಿದ್ದು ಯಮನ ದುರ್ಗ ಅಥವಾ ಎಮ್ಮಿಗುಡ್ಡನ ಕೋಟೆಯಲ್ಲಿ ಈ ಭಾಗದಲ್ಲಿನ ಪರಶುರಾಮನ ಜ್ಯೋತಿಗೆ ಈಗಲೂ ಎಣ್ಣೆಹಚ್ಚುವ ಪದ್ಧತಿಯಿದ್ದು ದುರ್ಗಾದೇವಾಲಯ ಇಲ್ಲಿನ ಆದಿದೇವತೆ. ಇಲ್ಲಿನ ಪಶ್ಚಿಮಕ್ಕೆ ಶಾಸನವಿದ್ದು, ಮಹಿಷಾಸುರ (ದುರ್ಗಾದೇವಿ) ಮರ್ದಿನಿ, ಕನಕಾಚಲಪತಿ, ಲಕ್ಷ್ಮಿನರಸಿಂಹ ದೇವಾಲಯ. ಕ್ರಿ.ಶ. ೧೫೧೦-೧೫೩೦ ರಲ್ಲಿ ಕನಕಗಿರಿ ಪಾಳ್ಯಯಗಾರ ಉಡಚನಾಯಕನ ಅವಧಿಯಲ್ಲಿ ೧೫ನೇ ಶತಮಾನದ ಈ ಕೋಟೆಯನ್ನು ನಿರ್ಮಿಸಲಾಗಿದೆ. ಸುರುಪುರದ ದೊರೆ ಪಿತಾಂಬರಿ ಬಹರಿಪಿಡ್ಡನಾಯಕನಿಗೆ (೧೬೮೮-೧೭೨೯) ಮೊಗಲ ಅರಸ ಉಪಟಳ ನೀಡುತ್ತಿದ್ದುದರಿಂದ ಒಂದು ವರ್ಷದವರೆಗೆ ಗುಪ್ತವಾಗಿ ಈ ಕೋಟೆಯಲ್ಲಿ ಈತನನ್ನು ಅಡಗಿಸಿ ಇಡಲಾಗಿತ್ತು. ಮುಂದಿನ ಕನಕಗಿರಿ ಪಾಳ್ಯಯಗಾರ ಹಿರಿಯ ನಾಯಕ ಉದ್ದಟತನದವನಾಗಿದ್ದರಿಂದ ಹೈದರಾಬಾದ ನವಾಬ ಈತನನ್ನು ತೋಪಿನ ಬಾಯಿಗೆ ಕಟ್ಟಿ ಸ್ಪೋಟಿಸಿ ಕೊಂದನು. ಇತರ ದೇವಾಲಯಗಳು, ಆಂಜನೇಯ ದೇವಾಲಯ, ಸೈನಿಕರು ಸೇವಕರು ವಾಸಿಸುತ್ತಿದ್ದ ಮನೆಯ ಅವಶೇಷಗಳು ಮಡಿಕೆ, ಗಡಿಗೆ ಒಳಗೊಂಡು ಕಪ್ಪು ಕೆಂಪು ಪಾತ್ರೆ ಚೂರುಗಳು, ಮಣ್ಣಿನ ಮಣೆ ಇಲ್ಲಿ ದೊರೆಯುತ್ತವೆ.