ಇನ್ನೂ ಸೂರ‍್ಯನ ಕಿರಣಗಳು ಕಣಿವೆಯನ್ನು ದಾಟಿ ಮೇಲೇರುವ  ಮೊದಲೇ, ಉಷಃಕಾಲದ ಮಂದವಾದ ಬೆಳಕಿನಲ್ಲಿ, ಗಂಗಾ ಪ್ರವಾಹದ ಬದಿಯ ರಸ್ತೆಯಲ್ಲಿ ಪ್ರಯಾಣ ಮಾಡುತ್ತಿದ್ದೆವು. ಆ ದಿನ (೧೭.೫.೧೯೮೪) ನಾವು ಗಂಗೋತ್ರಿಯಲ್ಲಿ ತಂಗುವ ಉದ್ದೇಶವಿದ್ದುದರಿಂದ, ಭಗೀರಥನ ಕನಸು ನಮ್ಮನ್ನು ಸೆಳೆಯುತ್ತಿತ್ತು. ಎರಡೂ ಕಡೆಗೆ ಗಗನೋನ್ನತವಾದ ಪರ್ವತಪಂಕ್ತಿಗಳು. ಅವುಗಳ ನಡುವೆ ನೊರೆಗರೆದು ಪ್ರವಹಿಸುವ ಗಂಗೆಯ ದಡದಲ್ಲಿ ನಮ್ಮ ಪಯಣ. ಕೆಲವೆಡೆ ನದಿಗೆ ತೀರಾ ಸಮೀಪವಾಗುತ್ತ, ಕೆಲವೆಡೆ ಥಟ್ಟನೆ ಸಹಸ್ರಾರು ಅಡಿಗಳೆತ್ತರಕ್ಕೆ ಏರುತ್ತ, ಹಲವಾರು ಕಡೆ  ಆ ಬೆಟ್ಟದಿಂದ ಈ ಬೆಟ್ಟಕ್ಕೆ, ಈ ಬೆಟ್ಟದಿಂದ ಆ ಬೆಟ್ಟಕ್ಕೆ ಸೇತುವೆಗಳ ಮೂಲಕ ದಾಟುತ್ತಾ ಅತ್ಯಂತ ಅಪಾಯಕಾರಿಯಾದ ರಸ್ತೆಯಲ್ಲಿ ನಮ್ಮ ವಾಹನ ಚಲಿಸಿತು. ಯಮುನೋತ್ರಿಯ ಕಡೆಗೆ ಹೋಗುವ ರಸ್ತೆಗೆ ಹೋಲಿಸಿದರೆ ಈ ರಸ್ತೆ ತೀರಾ ಅಧ್ವಾನವಾಗಿತ್ತು. ಯಾವುದೇ ದುರಸ್ತಿಯಿಲ್ಲದ, ಕಲ್ಲು ಮಣ್ಣುಗಳ ಕಾಡು ರಸ್ತೆ. ರಸ್ತೆಯ ಅಗಲವೋ ತೀರಾ ಕಿರಿದು; ಜತೆಗೆ ಅಲ್ಲಲ್ಲಿ ಕುಸಿದು ಹೋಗಿತ್ತು. ದಾರಿ ಉದ್ದಕ್ಕೂ ಅಲೆಮಾರಿ ಜನಗಳು – ಕುದುರೆಗಳ ಮೇಲೆ ಸಾಮಾನು ಸರಂಜಾಮು ಹೇರಿಕೊಂಡು, ದೊಡ್ಡ ದೊಡ್ಡ ಕುರಿ ಮಂದೆಗಳನ್ನು ಹಿಂದೆ  ಮುಂದೆ ಬಿಟ್ಟುಕೊಂಡು ಹೊರಟವುಗಳು. ಈ ಕುರಿಗಳೋ ನಾವು ಕಂಡ ಕುರಿಗಳ ಮೂರು – ನಾಲ್ಕರಷ್ಟು ಗಾತ್ರದವುಗಳು. ಜತೆಗೆ ದೈತ್ಯ ಗಾತ್ರದ ಜೋಲು ನಾಲಗೆಯ ತೋಳದಂಥ ನಾಯಿಗಳು. ಈ ಕುರಿ ಮಂದೆಗಳನ್ನು, ಅವುಗಳು ಎಬ್ಬಿಸುವ ಧೂಳು ಹೊಗೆಯನ್ನು ದಾಟಿಕೊಂಡು ನಮ್ಮ ಟ್ಯಾಕ್ಸಿ ಹೋಗಬೇಕಾದರೆ ಸಾಕಷ್ಟು ಸಮಯವೇ ಹಿಡಿಯುತ್ತಿತ್ತು. ಅವನ್ನು ದಾಟಿಕೊಂಡು ಮುಂದೆ ಹೊದರೆ ದಾರಿಯುದ್ದಕ್ಕೂ ಮಹೋನ್ನತ ದೇವದಾರು ವೃಕ್ಷಗಳಿಂದ ಕಿಕ್ಕಿರಿದ ಪರ್ವತಾರಣ್ಯಗಳು. ಆ ಪರ್ವತಗಳಾಚೆ ದೂರದಲ್ಲಿ ಥಳಥಳಿಸುವ ಮಂಜಿನ ಶಿಖರಗಳು. ಕೆಲವು ಶಿಲಾಖಂಡ ಶಿಖರಗಳಂತೂ, ಗಾಳಿ ಮಳೆಗಳ ಸಾಣೆ ಹಿಡಿದು, ಶೂಲಗಳಂತೆ ಚೂಪಾಗಿ ಮೋಡಗಳನ್ನು ಇರಿಯುವಂತಿದ್ದವು.  ನಮ್ಮ ದಾರಿಬದಿಯ ಈ ದೇವದಾರು ಹಾಗೂ ಭೂರ್ಜವೃಕ್ಷಗಳ ಕಾಡಿನಲ್ಲಿ ಕಸ್ತೂರೀ ಮೃಗಗಳು ಸಮೃದ್ಧವಾಗಿವೆ ಎಂದು ನಮ್ಮ ಚಾಲಕ ತಿಳಿಸಿದ. ಯಾವ ಎತ್ತರಕ್ಕೆ ಏರಿದರೂ, ನಾವು ಗಂಗಾ ಪ್ರವಾಹದ ದಾರಿಯಲ್ಲೇ ಇದ್ದು, ಆಗಾಗ ಸಮೀಪದ ಎತ್ತರದಿಂದ ನದಿಯ ಬಹುಬಗೆಯ ವಿನ್ಯಾಸಗಳನ್ನು ಕಾಣಲು ಸಾಧ್ಯವಾಗಿತ್ತು. ಕೆಲವೆಡೆ ಸ್ಥಿಮಿತವಾಗಿ, ಕೆಲವೆಡೆ ಗಂಭೀರವಾಗಿ, ಕೆಲವೆಡೆ ವೇಗ ಜಲಾಕುಲದಿಂದ, ಕೆಲವೆಡೆ ಗಂಭೀರ ನಿರ್ಘೋಷದಿಂದ, ಕೆಲವೆಡೆ ಭೈರವ ಅಟ್ಟಹಾಸದಿಂದ ಹರಿಯುವ ಗಂಗೆಯ ಶುಭ್ರ ಜಲ ಕಲ್ಲೋಲ ರಮ್ಯಾದ್ಭುತವಾಗಿತ್ತು. ದಾರಿಯ ಉದ್ದಕ್ಕೂ ಸೈನಿಕ ಶಿಬಿರಗಳು, ಇದು ಭಾರತ ಹಾಗೂ ಚೀನಾ ದೇಶಗಳ ನಡುವಣ ಗಡಿ ಎನ್ನುವುದನ್ನು ಸಂಕೇತಿಸುವಂತಿದ್ದವು. ಅಲ್ಲಲ್ಲಿ ನದಿಯ ಸೇತುವೆಗಳ ಎರಡೂ ಬದಿಗೆ ಬಂದಕುಧಾರಿಗಳಾದ ಸೈನಿಕರು ಕಾವಲು ನಿಂತಿದ್ದರು. ಕೆಲವೇ ಗಂಟೆಗಳಲ್ಲಿ ನಾವು ಹರಶಿಲ್ (೮೪೦೦ ಅಡಿ) ಮೂಲಕ ಗಂಗೋತ್ರಿಯ ಪ್ರವೇಶದ್ವಾರದ ಲಂಕಾ (೯೩೦೦ ಅಡಿಗಳು) ವನ್ನು ತಲುಪಿದೆವು. ಅಲ್ಲಿ ಆಗಲೇ ಹಲವಾರು ಬಸ್ಸುಗಳು  – ಕಾರುಗಳು – ಟ್ಯಾಕ್ಸಿಗಳು ಬಿಡಾರ ಹೂಡಿದ್ದವು. ನಮ್ಮ ಟ್ಯಾಕ್ಸಿ ನಿಲ್ಲುತ್ತಲೇ ಕಂಡಿಯವರು, ದಂಡಿಯವರು, ಕುದುರೆಯವರು ನಮ್ಮ ಸುತ್ತ ಕವಿದುಕೊಂಡರು.

ಲಂಕಾದಿಂದ ಗಂಗೋತ್ರಿಗೆ ಹೋಗಬೇಕಾದರೆ, ಬೈರೂನ್‌ಘಾಟ್ ವರೆಗಿನ ಕಣಿವೆಯನ್ನು, ಮೂರು ಕಿಲೋಮೀಟರ್ ದೂರ ಇಳಿದು ಏರಬೇಕು. ಮತ್ತೆ ಭೈರೂನ್‌ಘಾಟ್‌ದಿಂದ ಗಂಗೋತ್ರಿಗೆ ಹೋಗಲು, ಜೀಪುಗಳು ದೊರೆಯುತ್ತವೆ. ನಾನು, ನನ್ನ ಜತೆಗಿದ್ದ ಇಬ್ಬರು ಸಹ ಪ್ರಯಾಣಿಕರ ಜತೆ ಕಾಲುನಡಿಗೆಯಿಂದ ಹೋಗಲು ನಿರ್ಧರಿಸಿದೆ. ನಮ್ಮ ಶ್ರೀಮತಿಯವರನ್ನು ಕಂಡಿಗಳ ಮೇಲೆ ಕೂರಿಸಿ ಭೈರೂನ್‌ಘಾಟ್‌ನಲ್ಲಿ ಕಾಯಲು ಹೇಳಿದೆ. ನಂತರ ಲಂಕಾದ ಅಂಗಡಿಯೊಂದರಲ್ಲಿ, ಉದ್ದವಾದ, ಗಟ್ಟಿಯಾದ ಬಿದಿರಿನ ಊರೆಗೋಲುಗಳನ್ನು ಕೊಂಡುಕೊಂಡು ಪಯಣಕ್ಕೆ ಸಿದ್ಧರಾದೆವು. ಈ ಕೋಲುಗಳಿಗೆ, ತಳಕ್ಕೆ ಕಬ್ಬಿಣದ ಗೊಣಸನ್ನು ಹಾಕಿದ್ದರು. ಈ ಕೋಲುಗಳನ್ನು ಊರಿಕೊಂಡು, ನಡೆಯುತ್ತ ಕಣಿವೆಯ ತಳಾತಳವನ್ನು ತಲುಪಿದೆವು. ಅಲ್ಲಿ ಬೆಟ್ಟಗಳ ಇಕ್ಕಟ್ಟುಗಳಲ್ಲಿ ಹಲವು ಕಡೆಗಳಿಂದ ಹರಿದು ಬರುವ ನೀರಿನ ಮೊರೆತ ಇಡೀ ಕಂದರವನ್ನು ಭೋರ್ಗರೆತದಿಂದ ಅನುರಣನಗೊಳಿಸುತ್ತಿತ್ತು. ಕಣಿವೆಯ ಈ ಕಡೆಯಿಂದ, ಆ ಕಡೆಗೆ ಹಾಕಿದ, ಮರದ ಸೇತುವೆಯೊಂದನ್ನು ದಾಟುತ್ತಲೇ ಮತ್ತಷ್ಟು ಮೇಲೇರಿ. ಸುಮಾರು ಹನ್ನೆರಡು ಗಂಟೆಯ ವೇಳೆಗೆ ಭೈರೂನ್‌ಘಾಟ್ ಅನ್ನು ತಲುಪಿದೆವು. ಅಲ್ಲಿಗೆ ಹೋಗುವ ವೇಳೆಗೆ ಕಂಡಿಗಳ ಮೇಲೆ ಪ್ರಯಾಣ ಮಾಡಿ, ನಮಗಿಂತ ಮೊದಲೇ ಆ ಸ್ಥಳವನ್ನು ತಲುಪಿದ ನಮ್ಮ ಮನೆಯವರು ಚಹಾ ಕುಡಿಯುತ್ತ ನಮ್ಮ ಹಾದಿಯನ್ನು ಕಾಯುತ್ತಿದ್ದರು. ನಾನೂ ಒಂದಷ್ಟು ಚಹಾ ಕುಡಿದು ಸುಧಾರಿಸಿಕೊಂಡದ್ದಾಯಿತು. ‘ಈ ಪ್ರವಾಸದ ದಾರಿಗಳಲ್ಲಿ ಎಲ್ಲಿಯೂ ನೀರನ್ನು ಮಾತ್ರ ಕುಡಿಯಬೇಡಿ, ಬೇಕಾದರೆ ಚಾ ಕುಡಿಯಿರಿ’ ಎಂದು ಸಾಕಷ್ಟು ಪ್ರಯಾಣಮಾಡಿದ ಅನುಭವಿಗಳೊಬ್ಬರು ನಮಗೆ ತಿಳಿಸಿದ್ದರು.

ಭೈರೂನ್‌ಘಾಟ್‌ದಿಂದ ಗಂಗೋತ್ರಿಗೆ ಹತ್ತು ಕಿಲೋಮೀಟರ್.ಈ ದೂರವನ್ನು  ಕ್ರಮಿಸಲು ಸೈನಿಕ ಖಾತೆಯ ಜೀಪುಗಳಿವೆ. ರಸ್ತೆ ಕೂಡಾ ಚೆನ್ನಾಗಿಯೆ ಇದೆ.ಒಂದೊಂದುಜೀಪಿನಲ್ಲಿಸುಮಾರುಹತ್ತುಜನರನ್ನುತುಂಬಿಕೊಂಡು ಹೋಗುತ್ತಾರೆ. ಒಬ್ಬರಿಗೆ, ಪ್ರಯಾಣಕ್ಕೆ ಹತ್ತು ರೂಪಾಯಿ.ಕೇವಲಇಪ್ಪತ್ತು ನಿಮಿಷಗಳಲ್ಲಿ ಈ ಭೈರೂನ್‌ಘಾಟಿನ ಭಯಂಕರ ಎತ್ತರದಲ್ಲಿ ಪ್ರಯಾಣ ಮಾಡಿ  ಗಂಗೋತ್ರಿಯನ್ನು ತಲುಪಿದೆವು. ಜೀಪನ್ನು ಇಳಿದೊಡನೆ, ಕೆಳಗಿನ ಕಣಿವೆಯಲ್ಲಿ ಭೋರ್ಗರೆಯುವ ಗಂಗೆ ಮತ್ತು ಉತ್ತರದಲ್ಲಿ ಎರಡೂ ಕಡೆಯ ಪರ್ವತಗಳು ಒಂದನ್ನೊಂದು ಸಂಧಿಸುವುವೋ ಎಂಬಂಥ ಭ್ರಮೆಯ ನಡುವೆ, ತಲೆಯೆತ್ತಿ ಥಳಥಳಿಸುವ ಶುಭ್ರ ಶ್ವೇತಶಿಖರ ಪಂಕ್ತಿಗಳು.

ಗಂಗೋತ್ರಿ – ಗಂಗಾನದಿ ಹುಟ್ಟುವುದೆಂದು ಹೇಳಲಾದ ಈ ಪ್ರದೇಶ ಹರಿದ್ವಾರದಿಂದ ೨೭೨ ಕಿಲೋಮೀಟರ್ ದೂರದಲ್ಲಿದೆ. ಸಮುದ್ರ ಮಟ್ಟದಿಂದ, ನದಿ ಹರಿಯುವ ಈ ಕಣಿವೆ ೧೦,೦೦೦ ಅಡಿಗಳ ಎತ್ತರದಲ್ಲಿದೆ. ನದಿಯ ಎರಡೂ ದಡಗಳಲ್ಲಿ ಪ್ರವಾಸಿಗಳು ಉಳಿದುಕೊಳ್ಳಲು, ಅತಿಥಿ ಗೃಹಗಳು ಮತ್ತು ಕೆಲವು ಆಶ್ರಮಗಳು ಇವೆ. ನಮಗೆ ಸರ್ಕಾರೀ ಅತಿಥಿಗೃಹದಲ್ಲಿ ಸೊಗಸಾದ ಕೊಠಡಿಗಳು ದೊರೆತವು.

ನಟ್ಟ ನಡುಹಗಲಲ್ಲೇ ಅಸಾಧ್ಯ ಛಳಿ. ಮೇ ತಿಂಗಳ ಮಧ್ಯಭಾಗದಲ್ಲಿದ್ದ ನಾವು ಥಟ್ಟನೆ ಡಿಸೆಂಬರ್ ತಿಂಗಳಿನ ಶೀತವಲಯಕ್ಕೆ ಪ್ರವೇಶ ಮಾಡಿದ ಅನುಭವವಾಯಿತು. ಬೆಳಗಿಂದ ಆರೇಳು ಗಂಟೆಗಳ ಕಾಲ, ಏರಿ ಇಳಿದು, ಇಳಿದು ಏರಿ ಬಂದ ನನಗೆ, ಇವತ್ತು ತಾರೀಖು ಎಷ್ಟು ಎಂದು ನೆನಪು ಮಾಡಿಕೊಳ್ಳಲು ಮಾಡಿದ ಪ್ರಯತ್ನ ವ್ಯರ್ಥವಾಯಿತು. ಎರಡೂ ಕಡೆ ಗಗನೋನ್ನತವಾದ ಪರ್ವತ ಮಂಡಲಗಳ ಮಧ್ಯೆ, ಭೋರ್ಗರೆಯುವ ಗಂಗಾನದಿಯ ನಿರಂತರ ಪ್ರವಾಹದ ಮೊರೆತವಷ್ಟೆ ನನ್ನ ವರ್ತಮಾನದ ಹಾಗೂ ಅಸ್ತಿತ್ವದ ಸತ್ಯವೆಂಬಂತೆ ಭಾಸವಾಯಿತು. ನಾವು ಬಂದುದೆಲ್ಲಿಂದ, ನಾವು ಹೋಗುವುದೆಲ್ಲಿಗೆ, ಇತ್ಯಾದಿ ಯೋಚನೆಗಳೆಲ್ಲವೂ ಈ ನದಿಯ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿರುವಂತೆ ತೋರಿತು. ಆದರೆ ನಾವು ನಮ್ಮ ಹೊಟ್ಟೆಯ ಹಸಿವನ್ನು ಗೆಲ್ಲುವಷ್ಟು ಅಮರರಾಗಿರಲಿಲ್ಲವಾದ ಕಾರಣದಿಂದ ತೀರಾ ಅಲ್ಪ ಉಪಾಹಾರ ಮಾಡಿಕೊಂಡು, ಕೆಳಗೆ ಇಳಿದು ಗಂಗಾಸ್ನಾನ ಮುಗಿಸಿಕೊಂಡು ಅನಂತರ ತಡವಾಗಿಯಾದರೂ ಊಟ ಮಾಡಿದರಾಯಿತು ಎಂದು ನಿರ್ಧರಿಸಿದೆವು.

ಉಪಹಾರದ ನಂತರ ಸುಮಾರು ಮುನ್ನೂರು ಅಡಿ ಕೆಳಗೆ ಇಳಿದು ನದಿಯ ಪಾತ್ರವನ್ನು ತಲುಪಿದೆವು. ಪ್ರವಾಹದ ಹತ್ತಿರ ಹತ್ತಿರಕ್ಕೆ ನಾವು ಬಂದ ಹಾಗೆ ಕಾದಿತ್ತು ರೋಮಾಂಚನಕಾರಿಯಾದ ಭವ್ಯ ದೃಶ್ಯ. ಇಡೀ ನದಿ ಹರಿದು ಬರುವ ದಿಕ್ಕಿಗೆ ಕಣ್ಣು ಹಾಯಿಸಿ ನೋಡಿದೆ. ಎರಡೂ ಕಡೆಯ ಮಹಾ ಪರ್ವತ ಪಂಕ್ತಿಗಳು ಸೇರುವಂತೆ ತೋರುವ ದೂರದ ಕಣಿವೆಯ ಹರಹಿನಲ್ಲಿ ಒಂದಲ್ಲ ಹಲವಾರು ಶ್ವೇತ ಶಿಖರಗಳು, ನೀಲಾಕಾಶದ ಹಿನ್ನೆಲೆಯಲ್ಲಿ ನಡು ಹಗಲಿನ ತಂಪು ಬಿಸಿಲಿನಲ್ಲಿ ಥಳಥಳಿಸುತ್ತಿವೆ. ಧೀರವಾಗಿ, ದಿವ್ಯನಿರ್ಲಕ್ಷ್ಯತೆಯಿಂದ ಹರಹಿಕೊಂಡು ಕೂತ ಆ ಪರ್ವತ ಶಿಖರಗಳ ಕಡೆಯಿಂದ ಆ ಬೆಳ್ಳಿ ಬೆಟ್ಟಗಳೇ ಕರಗಿ ಹೊಳೆಯಾಗಿ ಹರಿದು ಬರುತ್ತಿದೆಯೋ ಎಂಬಂತೆ ನದಿಯ ಹರಿವು ಗೋಚರಿಸುತ್ತಿತ್ತು. ದೂರದ ಆ ಗಂಗೋತ್ರಿಯ ಕಣಿವೆಯಿಂದ ಬರುವ ಆ ಪ್ರವಾಹ, ನಾವು ನಿಂತ ಪಾತ್ರದ ಬದಿಗೆ ಸ್ವಲ್ಪ ಕಂದು ಬಣ್ಣ ಮಿಶ್ರದ್ದಾಗಿ, ಬಂಡೆಗಲ್ಲುಗಳ ಮೇಲೆ ಧಡ ಧಡ ಧುಮುಕಿ ಹರಿದು, ದ್ರವರೂಪಿಯಾದ ಗುಡುಗಿನಂತೆ ತೋರುತ್ತಿತ್ತು. ವಿಸ್ತಾರವಾದ ನದೀ ಪಾತ್ರದ ತುಂಬ ಬರೀ ಕಲ್ಲು ಬಂಡೆಗಳು. ನಡು ನಡುವೆ ನುಣ್ಣನೆಯ ಮರಳೂ ಹರಹಿಕೊಂಡಿದ್ದು, ಅಲ್ಲಲ್ಲಿ ಯಾತ್ರಿಕರನ್ನು ಹಿಡಿದು ಕೂರಿಸಿ ಮಂತ್ರ ಹೇಳಿ ಹಲವು ಬಗೆಯ ಧಾರ್ಮಿಕ ವಿಧಿಗಳಲ್ಲಿ ತೊಡಗಿಸಿದ ಹಲವಾರು ಪಂಡರು ಅಥವಾ ಪೂಜಾರಿಗಳು ಕಣ್ಣನ್ನು ಸೆಳೆಯುತ್ತಿದ್ದರು. ಇವರ ನಡುವೆ ಹಾದು ಹೋಗುವಾಗ ನಮಗೂ ಒಬ್ಬ ಪೂಜಾರಿ ಗಂಟುಬಿದ್ದು, ನರಕದಲ್ಲಿ ಉರುಳಿ ನರಳುವ ನಮ್ಮ ಪಿತೃಗಳಿಗೆ ನಮ್ಮ ಮೂಲಕ ತರ್ಪಣ ಕೊಡಿಸಿ ಅವರನ್ನು ಉದ್ಧಾರ ಮಾಡುವುದಾಗಿ ಆಶ್ವಾಸನೆ ನೀಡಿದ. ನಾವು ಉಪಾಯದಿಂದ ಅವನನ್ನು ನಿವಾರಿಸಿಕೊಂಡು ಗಂಗೆಯ ಹರಿವಿನ ಹತ್ತಿರಕ್ಕೆ ಹೋದೆವು. ಹಲವರು, ಆ ನದೀ ನೀರಿನಲ್ಲಿ ಕಾಲು ಇಳಿಯಬಿಟ್ಟುಕೊಂಡು, ತಾವು ತಂದ ಪಾತ್ರೆಗಳಿಂದ ಮೈಯ್ಯ ಮೇಲೆ ನೀರನ್ನು ಸುರಿದುಕೊಳ್ಳುತ್ತಿದ್ದರು. ಮತ್ತೆ ಕೆಲವರು, ನೀರಲ್ಲಿ ನಿಂತು, ಮುಳುಗು ಹಾಕುತ್ತಿದ್ದರು.

ನನಗೂ ಸ್ನಾನ ಮಾಡುವ ಕುತೂಹಲವಾಗಿ, ಟವಲ್ ಒಂದನ್ನು ಸುತ್ತಿಕೊಂಡು ಧಡ ಧಡ ಹರಿಯುವ ಆ ಹೊನಲಿನ ಅಂಚಿನ ಸಣ್ಣ ಬಂಡೆಯೊಂದನ್ನು ಆಶ್ರಯಿಸಿ ಕುಳಿತುಕೊಂಡು, ನಿಧಾನವಾಗಿ ಕಾಲುಗಳನ್ನು ಆ ನೀರಿಗೆ ಸೋಂಕಿಸಿದೆ. ಸೋಂಕಿಸಿದೆನೋ ಇಲ್ಲವೊ, ಕಾಲುಗಳಿಗೆ ಛಳಿಯ ಚೇಳು ಕುಟುಕಿದ ಹಾಗಾಯಿತು. ಕೂಡಲೇ ಕಾಲುಗಳನ್ನು ಮಿಂಚಿನ ವೇಗದಿಂದ ಹಿಂದಕ್ಕೆ ಎಳೆದುಕೊಂಡು, ಕೌರವಸೇನೆಯನ್ನು ಕಂಡು ದೌಡೋಡಿದ ಉತ್ತರಕುಮಾರನ ಹಾಗೆ, ಸ್ನಾನವೂ ಬೇಡ, ಏನೂ ಬೇಡ ಎಂದು ಹಿಂದಕ್ಕೆ ಬಂದೆ. ಈ ನೀರು ಇಷ್ಟೊಂದು ಶೀತಲವಾಗಿರುತ್ತದೆಯೆಂಬ ಕಲ್ಪನೆಕೂಡಾ ನನಗಿರಲಿಲ್ಲ. ದೂರದಲ್ಲಿ ಕಾಣುವ ಆ ಹಿಮವೇ ಕರಗಿ ಬರುವುದರಿಂದ, ಈ ನೀರಿಗೆ ಇಂಥ ಕೊರೆತ ಎಂದು ಅರ್ಥವಾಯಿತು; ಅಲ್ಲ, ಅನುಭವವೇ ಆಯಿತು. ನನ್ನ ಅವಸ್ಥೆಯನ್ನು ಕಂಡು ನಕ್ಕ ನನ್ನ ಶ್ರೀಮತಿಯವರು ನಾನು ನೋಡ ನೋಡುತ್ತಿದ್ದಂತೆಯೇ, ಆ ಕೊರೆಯುವ ಶೀತಲ ಜಲವಾಹಿನಿಯಲ್ಲಿ ನಿರಾತಂಕವಾಗಿ ಇಳಿದು, ತಾವು ತಂದ ಚೆಂಬಿನಿಂದ ನೀರನ್ನು ತುಂಬಿಕೊಂಡು  ತಲೆಗೆ ಸ್ನಾನ ಮಾಡತೊಡಗಿ, ಸಲೀಸಾಗಿ ಸ್ನಾನ ಮುಗಿಸಿಯೇ ಬಿಟ್ಟರು. ನೋಡುತ್ತೇನೆ ಹಣ್ಣು-ಹಣ್ಣು ಮುದುಕಿಯೊಬ್ಬಳು ತತ್ತರಿಸುತ್ತಾ ಆ ಪ್ರವಾಹದ ಬದಿಗೆ ಬಂದು, ತಾನು ತಂದ ಪಾತ್ರೆಯಿಂದ ನೀರನ್ನು ತುಂಬಿಕೊಂಡು ಸ್ನಾನ ಮಾಡತೊಡಗಿದಳು. ಹೀಗೆಯೇ ಇನ್ನು ಎಷ್ಟೋ ಜನ ನಿರಾತಂಕವಾಗಿ ಹಾಗೂ ಅತ್ಯಂತ ಶ್ರದ್ಧೆ-ಭಕ್ತಿಗಳಿಂದ ಸ್ನಾನ ಮಾಡುವುದನ್ನು ಕಂಡೆ.

ಗಂಗಾ ನದಿಯಲ್ಲಿ ಸ್ನಾನ ಮಾಡುವುದರಿಂದ ಪುಣ್ಯ ಸಂಪಾದನೆಯಾಗುತ್ತದೆ, ಸದ್ಗತಿ ಪ್ರಾಪ್ತವಾಗುತ್ತದೆ ಎಂದು ನಾನೆಂದೂ ತಿಳಿದವನಲ್ಲ. ಆದರೆ,  ಈ ಒಂದು ಭಾವನೆಯಿಂದ ಇಲ್ಲಿಗೆ ಬಂದು ಸ್ನಾನ ಮಾಡುವ ಇಷ್ಟೊಂದು ಜನರ ನಂಬಿಕೆಯನ್ನು ನಾನು ಸಂಶಯದಿಂದ, ಅಥವಾ ಆಗೌರವದಿಂದ ನೊಡುವುದಿಲ್ಲ. ಅವರವರ ನಂಬಿಕೆ ಅವರಿಗೆ, ಅದನ್ನು ಪ್ರಶ್ನಿಸಲು ಅಥವಾ ಕೀಳ್ಗಳೆದು ನೋಡಲು ನನಗೇನು ಅಧಿಕಾರವಿದೆ? ಅವರಿಗಿರುವ ಈ ಭಾವನೆ ಬಹುಶಃ ಈ ಹಿಮಾಲಯದಷ್ಟೇ ಪ್ರಾಚೀನವಾದುದಿರಬೇಕು.

ಗಂಗಾನದಿಯನ್ನು ಕುರಿತು ಈ ದೇಶದ ಮನಸ್ಸು ಇರಿಸಿಕೊಂಡ ಭಾವನೆಗಳು ಹಾಗೂ ತೋರಿಸಿರುವ ಪ್ರತಿಕ್ರಿಯೆಗಳು ಅದ್ಭುತವಾಗಿವೆ. ವಿಚಾರವಾದಿಯಾದ ಪಂಡಿತ ಜವಹರಲಾಲ್ ನೆಹರೂ ಅಂಥವರೇ ತಾವು ಬರೆದ ಮರಣಶಾಸನದಲ್ಲಿ ಗಂಗೆಯ ಬಗೆಗೆ ಭಾವುಕವಾದ ಉದ್ಗಾರಗಳನ್ನು ಪ್ರಕಟಿಸಿದ್ದಾರೆ : ‘ಅಲಹಾಬಾದ್ ಹತ್ತಿರ ಪ್ರವಹಿಸುವ ಗಂಗೆಯಲ್ಲಿ ನನ್ನ ದೇಹದ ಒಂದು ಹಿಡಿ ಬೂದಿಯನ್ನು ಬೆರೆಸಬೇಕೆಂದು ನನ್ನ ಮಹದಾಸೆ. ಈ ಬಯಕೆಯ ಹಿಂದೆ, ನನ್ನ ಮಟ್ಟಿಗೆ ಹೇಳುವುದಾದರೆ, ಯಾವ ಧಾರ್ಮಿಕ ಸಂಬಂಧಿಯಾದ ಭಾವನೆಗಳೂ ನನಗಿಲ್ಲ. ನನ್ನ ಜೀವನ ಎಳೆಯಂದಿನಿಂದಲೂ ಅಲಹಾಬಾದ್ ಹತ್ತಿರ ಹರಿಯುವ ಈ ಗಂಗಾ ಯಮುನೆಯರೊಂದಿಗೆ ಬೆಸೆದುಕೊಂಡಿದೆ. ನಾನು ಬೆಳೆದಂತೆ ಈ ಬೆಸುಗೆ ತಾನೂ ಬೆಳೆದಿದೆ. ಋತು ಋತುವಿನಲ್ಲೂ ಬದಲಾಗುವ ಈ ನದಿಯ ಏರಿಳಿತಗಳನ್ನು ನಾನು ಗಮನಿಸಿದ್ದೇನೆ; ಶತಶತಮಾನಗಳಿಂದ ಹರಿಯುವ ಈ ನದಿಯ ನೀರಿನ ಜತೆಗೆ ಬೆರೆತು ಬಂದಿರುವ ಚರಿತ್ರೆ, ಪುರಾಣ, ಸಂಪ್ರದಾಯ, ಹಾಡು, ಕಥೆ, ಇತ್ಯಾದಿಗಳನ್ನು ಕುರಿತು ನಾನು ಆಲೋಚಿಸಿದ್ದೇನೆ. ಗಂಗೆ ಮೂಲತಃ ಭಾರತದ ನದಿ; ಯಾವುದರ ಸುತ್ತ ಅದರ ಜಾನಾಂಗಿಕ ಸ್ಮೃತಿಗಳು, ಆಸೆಗಳು, ಭಯಗಳು, ಸೋಲುಗಳು ಮತ್ತು ಗೆಲುವುಗಳು ಗಾಢವಾಗಿ ಹೆಣೆದುಕೊಂಡಿವೆಯೋ ಅಂಥ ನದಿ ಗಂಗಾ. ಗಂಗಾ ಭಾರತದ ಶತಶತಮಾನಗಳ ಭಾರತೀಯ ಸಂಸ್ಕೃತಿ ಹಾಗೂ ನಾಗರಿಕತೆಗಳ ಪ್ರತೀಕವಾಗಿದ್ದಾಳೆ – ಸದಾ ಪ್ರವಹಿಸುತ್ತ, ಸದಾ ಬದಲಾಗುತ್ತ….’

ಗಂಗೆಯ ಬಗೆಗೆ ಯಾವುದೇ ಧಾರ್ಮಿಕವಾದ ಭಾವನೆಗಳೂ ತಮಗೆ ಇಲ್ಲವೆಂದು ಹೇಳಿಕೊಳ್ಳುವ ನೆಹರೂ ಅವರ ಮನಸ್ಸು ಗಂಗೆಯನ್ನು ಕುರಿತು ಈ ಬಗೆಯ ಕಾವ್ಯಮಯವಾದ ಪ್ರತಿಕ್ರಿಯೆಯನ್ನು ತೋರಿಸುವಾಗ, ಧಾರ್ಮಿಕ ಭಾವನೆಗಳಲ್ಲಿ ಸದಾ ಮುಳುಗಿರುವ ಈ ದೇಶದ ಲಕ್ಷಾಂತರ ಜನ, ಗಂಗೆಯನ್ನು ಕುರಿತು ಅತ್ಯಂತ ಪೂಜ್ಯವಾದ ಭಾವನೆಗಳನ್ನು ಬೆಳೆಯಿಸಿಕೊಂಡಿದ್ದಾರೆನ್ನುವುದು ಆಶ್ಚರ್ಯವೇನಲ್ಲ. ಈ ದೇಶದ ಪುರಾಣಗಳು, ಕಾವ್ಯಗಳು, ಜಾನಪದ ಅಭಿವ್ಯಕ್ತಿಗಳು ಗಂಗೆಯನ್ನು ಕುರಿತ ಪವಿತ್ರ ಭಾವನೆಯನ್ನು ಜನಮನದಲ್ಲಿ ಚಿರಂತನವನ್ನಾಗಿಸಿವೆ. ಬ್ರಹ್ಮನ ಕಮಂಡಲುವಿನಿಂದ, ಶಿವನ ಜಡೆಮುಡಿಯಿಂದ, ಮಹಾವಿಷ್ಣುವಿನ ಪಾದದಿಂದ ಇಳಿದು ಬಂದ ಈ ಗಂಗೆ ಪಾಪಿಗಳ ಪಾಪವನ್ನು ತೊಳೆಯುವವಳೆಂದೂ,  ಗಂಗೆಯನ್ನು ದರ್ಶಿಸುವುದೂ, ಸ್ಪರ್ಶಿಸುವುದೂ, ಅದರಲ್ಲಿ ಸ್ನಾನ ಮಾಡುವ ಭಾಗ್ಯ ಲಭಿಸುವುದೂ ಪೂರ್ವಜನ್ಮದ ಸುಕೃತ ಎಂದೂ, ನಮ್ಮ ಪುರಾಣಗಳು ಘೋಷಿಸುತ್ತ ಬಂದಿವೆ. ಗಂಗಾತೀರ ಧ್ಯಾನ, ಪೂಜೆ, ತಪಸ್ಸುಗಳಿಗೆ ಅತ್ಯಂತ ಅರ್ಹವಾದದ್ದೆಂದೂ, ಇಲ್ಲಿ ತಪಸ್ಸು ಮಾಡಿದರೆ ಬೇಗ ಅದು ಸಿದ್ಧಿಸುವುದೆಂದೂ ಹೇಳಲಾಗಿದೆ. ಹೀಗೆ ತಪಸ್ಸು  ಮಾಡಿ ಸಿದ್ಧಿಯನ್ನು ಪಡೆದ ಅನೇಕರ ಸಾಧನೆಯನ್ನು ನಮ್ಮ ಕವಿಗಳು ವರ್ಣಿಸಿದ್ದಾರೆ. ಮಹಾಭಾರತದ ಅರ್ಜುನನು ಗಂಗಾತೀರದ ರೈವತಕ ಪರ್ವತದಲ್ಲಿ ತಪಸ್ಸು ಮಾಡಿದ ಪ್ರಸಂಗ, ಮಹಾಬಲಿಪುರದ ಶಿಲ್ಪ ಸಮುಚ್ಚಯವೊಂದರಲ್ಲಿ (ಕ್ರಿ.ಶ. ೭ನೆಯ ಶತಮಾನ) ತುಂಬ ವಿವರವಾಗಿ ಚಿತ್ರಿತವಾಗಿದೆ. ಗಂಗೆಯ ತೀರದಲ್ಲಿ ಸತ್ತರೆ, ಗಂಗೆಯ ಜಲದಲ್ಲಿ ಶರೀರ ತ್ಯಾಗ ಮಾಡಿದರೆ, ಅಥವಾ ಎಲ್ಲಿಯೇ ಇದ್ದರೂ ಸಾಯುವ ಕಾಲದಲ್ಲಿ ಗಂಗಾಜಲವನ್ನು ಬಾಯಿಗೆ ಹಾಕಿದರೆ, ಅಂಥವರಿಗೆ ಸದ್ಗತಿ ದೊರೆಯುತ್ತದೆ ಎಂಬ ನಂಬಿಕೆ ಇಂದಿಗೂ ಗಾಢವಾಗಿದೆ. ಉತ್ತರದ ಗಂಗೆಗೆ ಇರುವ ಈ ಮಹಾತ್ಮೆಯಿಂದಾಗಿ ದಕ್ಷಿಣದ ಹಲವು ತೀರ್ಥಕ್ಷೇತ್ರಗಳನ್ನೂ, ದಕ್ಷಿಣದ ಗಂಗೆ ಎಂದು ಕರೆದು, ಸಮಾಧಾನ ಪಟ್ಟುಕೊಳ್ಳುವ ಪ್ರವೃತ್ತಿಯೂ ಪ್ರಚಲಿತವಾಗಿದೆ. ಈ ಎಲ್ಲ ನಂಬಿಕೆಗಳನ್ನು ಒಂದು ಹಂತದಲ್ಲಿ ಮೆಚ್ಚಿಕೊಳ್ಳಬಹುದಾದರೂ, ಅವುಗಳಿಂದಾಗುವ ಅಪಾಯಗಳನ್ನು ಕಡೆಗಣಿಸುವುದು ಒಳ್ಳೆಯದಲ್ಲ. ನಿದರ್ಶನಕ್ಕೆ ಗಂಗೆಯಲ್ಲಿ ಸ್ನಾನ ಮಾಡಿದರೆ ಪಾಪಗಳೂ ಪರಿಹಾರವಾಗುತ್ತವೆ ಎಂಬ ಪುರಾಣದ ಮಾತನ್ನು ನಂಬಿಕೊಂಡು, ಬದುಕಿನ ಉದ್ದಕ್ಕೂ ಮಾಡಬಾರದ್ದನ್ನು ಸಲೀಸಾಗಿ ಮಾಡಲು ತೊಡಗಿದರೆ ಅದು ಆಶ್ಚರ್ಯವೇನೂ ಅಲ್ಲ; ಹೇಗೂ ಗಂಗೆಯಿದೆ, ನಾನು ಏನು ಬೇಕಾದರೂ ಮಾಡಿ, ಅದರಿಂದಾಗುವ ಪಾಪವನ್ನು ತೊಳೆದುಕೊಂಡರಾಯಿತು ಎಂಬ ಅವಿವೇಕವನ್ನು ಇಂಥ ಮಾತು ಪ್ರಚೋದಿಸುವುದು ಸಾಧ್ಯ. ಗಂಗಾನದಿಯಲ್ಲಿ ಸ್ನಾನ ಮಾಡುವುದರಿಂದ ಪಾಪಗಳೆಲ್ಲ ಪರಿಹಾರವಾಗುತ್ತವೆ ಎಂಬ ಪುರಾಣಗಳ ಘೋಷಣೆಯ ಜತೆಗೇ, ಈ ದೇಶದ ವಿಚಾರವಂತರಾದ ಸಂತರು ‘ಗಂಗಾಜಲದಲ್ಲಿ ಮುಳುಗುವುದರಿಂದ, ನಿಮ್ಮ ಪಾಪಪರಿಹಾರವಾಗಿ ಸದ್ಗತಿ ದೊರೆಯುವುದಾದರೆ, ಅದೇ ಜಲದಲ್ಲಿ ಸದಾ ಮುಳುಗಿರುವ ಮೀನು – ಕಪ್ಪೆ – ಮೊಸಳೆ ಇತ್ಯಾದಿಗಳಿಗೂ ಯಾಕೆ ಸದ್ಗತಿ ದೊರೆಯಬಾರದು’ ಎಂದು ಎಚ್ಚರಿಸಿದ ಮಾತುಗಳೂ ಇವೆ.

ಆದರೆ, ವಿಚಾರ ಮಾಡುವ ತಲೆಗಳಿಗಿಂತ ಭಜನೆ ಮಾಡುವ ಬಾಯಿಗಳೇ ಹೆಚ್ಚಾಗಿರುವ ಈ ದೇಶದಲ್ಲಿ, ಏನು ಮಾಡಿದರೂ ಹಳೆಯ ನಂಬಿಕೆಗಳದ್ದೇ ಮೇಲುಗೈ, ಗಂಗೋತ್ರಿಗೆ ಬಂದ ಅನೇಕರು, ಗಂಗಾ ಮೂಲದ ಈ ತೀರ್ಥವನ್ನು, ಅದಕ್ಕಾಗಿಯೇ ತಂದ ಪಾತ್ರೆಗಳಲ್ಲಿ ತುಂಬಿಸಿ ಇರಿಸಿಕೊಳ್ಳುತ್ತಿದ್ದರು. ಈ ನೀರನ್ನು ತೆಗೆದುಕೊಂಡು ಹೋಗಿ ರಾಮೇಶ್ವರದ ಶಿವಲಿಂಗಕ್ಕೆ ಅಭಿಷೇಕ ಮಾಡಿಸುವ ಆಸೆಯನ್ನು ವ್ಯಕ್ತಪಡಿಸಿದವರೂ ನಮ್ಮ ಈ ಪ್ರಯಾಣದ ಜತೆಗೇ ಇದ್ದರು.

ಆದರೆ, ಈ ಎಲ್ಲ ಭಾವನೆಗಳ ಆಚೆಗೆ ನಿಂತು ನೋಡಿದರೂ ಗಂಗಾನದಿಗೆ ಅತ್ಯಂತ ಗೌರವಾಸ್ಪದವಾದ ಸ್ಥಾನ ಸಲ್ಲುತ್ತದೆ. ಈ ಗೌರವ ಅದಕ್ಕೆ ಸಂದಿರುವುದು ಅದು ಭಾರತದ ನದಿಗಳಲ್ಲೇ ಅತ್ಯಂತ ಸುದೀರ್ಘವಾದುದು ಎಂಬ ಕಾರಣದಿಂದ ಅಲ್ಲ. ಜಗತ್ತಿನ ಇತರ ಹಲವಾರು ಮಹಾನದಿಗಳಿಗೆ ಹೋಲಿಸಿದರೆ, ಅದು ದೊಡ್ಡ ನದಿಯೇ ಅಲ್ಲ. ಜಗತ್ತಿನ ಮಹಾನದಿಗಳ ಪಟ್ಟಿಯಲ್ಲಿ ಗಂಗಾನದಿಯ ಹೆಸರೇ ಇಲ್ಲ! ಗಂಗೆಯ ಉದ್ದ ಅದರ ಮೂಲದಿಂದ ಹಿಡಿದು ಸಮುದ್ರವನ್ನು ಸೇರುವವರೆಗೆ ಕೇವಲ ಒಂದು ಸಾವಿರದ ಆರು ನೂರು ಮೈಲಿಗಳು ಮಾತ್ರ. ಈಜಿಪ್ಟ್‌ನ ನೈಲ್ ನದಿ ಗಂಗೆಗಿಂತ ಎರಡರಷ್ಟು ಉದ್ದವಾಗಿದೆ. ಹಾಗೆಯೇ ಚೀನಾದ ಯಾಂಕ್ಟೀಸ್ ಕೂಡ. ಅಮೆಜಾನ್, ಮಿಸಿಸಿಪಿ, ಓಲ್ಗಾ, ಇವೆಲ್ಲಾ ಜಗತ್ತಿನ ದೊಡ್ಡ ನದಿಗಳು. ಆದರೆ ಗಂಗಾನದಿಗೆ ಇರುವ ಭಾವನಾಮಯವಾದ ಸಂಬಂಧವನ್ನು, ಜಗತ್ತಿನ ಬೇರೆಯ ನದಿಗಳು ಆಯಾ ದೇಶದ ಜನಮನದಲ್ಲಿ ಪಡೆದುಕೊಂಡಂತೆ ತೋರುವುದಿಲ್ಲ. ಗಂಗೆ, ನೆಹರು ಹೇಳುವಂತೆ ಭಾರತದ ಶತಶತಮಾನಗಳ ಭಾರತೀಯ ಸಂಸ್ಕೃತಿ ಹಾಗೂ ನಾಗರಿಕತೆಗಳ ಪ್ರತೀಕವಾಗಿದ್ದಾಳೆ. ಈ ದೇಶದ ತಿಳಿವು, ಕಲಿಕೆ, ಕಲೆ ಹಾಗೂ ರಾಜ್ಯ ಸಾಮ್ರಾಜ್ಯಗಳ ತೂಗುತೊಟ್ಟಿಲು ಈ ಗಂಗೆ. ಹಿಮಾಚಲದ ನಿತ್ಯಜಲ ಸಂಪುಷ್ಟವಾದ ಈ ನದಿ ಎಂದೂ ಬತ್ತದೆ, ಜೀವನಕ್ಕೆ ಹಾಲೂಡುವ ಸಮೃದ್ಧಿಯ ಸಂಕೇತವಾಗಿದೆ; ನಂಬಿಕೆ, ಸಂಪ್ರದಾಯ, ಪುರಾಣಗಳ ಗಣಿಯಾಗಿದೆ. ಈ ದೇಶದ ಕವಿಗಳು ಸಂತರು ಮುಕ್ತಕಂಠದಿಂದ ಇದನ್ನು ವರ್ಣಿಸಿದ್ದಾರೆ, ಸ್ತುತಿಸಿದ್ದಾರೆ. ರಾಮಾಯಣ, ಮಹಾಭಾರತಗಳಿಂದ ಹಿಡಿದು, ಎಲ್ಲ ಕಾಲದ ಕವಿಗಳ ಕೃತಿಗಳಲ್ಲೂ ಗಂಗೆಯ ಉಲ್ಲೇಖ ಹಾಗೂ ವರ್ಣನೆ ಪ್ರವಹಿಸಿದೆ. ಭಾರತೀಯ ಕವಿಗಳಿರಲಿ, ಪ್ರಾಚೀನ ಗ್ರೀಕ್ ಹಾಗೂ ರೋಮನ್ ಕವಿಗಳ ಕೃತಿಗಳಲ್ಲಿಯೂ ಗಂಗೆಯ ಉಲ್ಲೇಖವಿರುವುದು ವಿಶೇಷದ ಸಂಗತಿಯಾಗಿದೆ. ಪ್ರಾಚೀನ ರೋಮನ್ ಕವಿ ವರ್ಜಿಲ್‌ನ ಈನಿಯಡ್ ಮಹಾಕಾವ್ಯದಲ್ಲಿ (ಕ್ರಿ. ಪೂ. ೭೦-೧೯) ಗಂಗೆಯ ಉಲ್ಲೇಖ ಉಪಮೆಯೊಂದರಲ್ಲಿ ಕಾಣಿಸಿಕೊಂಡಿದೆ. ಇನ್ನೊಬ್ಬ ಕವಿ ಓವಿಯಡ್ (ಕ್ರಿ. ಪೂ. ೪೩-ಕ್ರಿ.ಶ. ೧೭) ನಲ್ಲಿ ಗಂಗೆಯ ಉಲ್ಲೇಖವಿದೆ. ಕ್ರಿ.ಶ. ಮೂರನೆ ಶತಮಾನದ ಡಯೋನಿಸಿಸ್‌ನ ಕೃತಿಯೊಂದರಲ್ಲಿ (Periegetes),ಇಟಲಿಯ ಮಹಾಕವಿಯಾದ ಡಾಂಟೆಯ (ಕ್ರಿ.ಶ. ೧೪ನೆ ಶತಮಾನ) ಡಿವೈನ್ ಕಾಮೆಡಿಯಲ್ಲಿ ಗಂಗೆಯ ಪ್ರಸ್ತಾಪವಿದೆ. ಅಷ್ಟೇ ಅಲ್ಲ, ಟಾಲಮಿಯ ಭೂಗೋಳ ಶಾಸ್ತ್ರದಲ್ಲಿ (ಕ್ರಿ.ಶ. ಎರಡನೆ ಶತಮಾನ) ಗಂಗಾನದಿಯ ಉಲ್ಲೇಖವಿದೆ. ಭಾರತಕ್ಕೆ ಬಂದ, ಚೀನಾ ದೇಶದ ಪ್ರವಾಸಿಯಾದ ಹ್ಯೂಯೆನ್‌ತ್ಸಾಂಗ್ (ಕ್ರಿ.ಶ. ೬೩೦) ನಿಂದ ಹಿಡಿದು, ಪಶ್ಚಿಮದಿಂದ  ಬಂದ ಅನೇಕ ವಿದೇಶೀ ಪ್ರವಾಸಿಗಳು ಭಾರತೀಯ ಸಾಮಾಜಿಕ   ಧಾರ್ಮಿಕ ಜೀವನಕ್ಕೆ ಗಂಗೆಯ ಕೊಡುಗೆಯನ್ನು ಕುರಿತು ಬರೆದಿದ್ದಾರೆ. ಇವರಲ್ಲಿ ಚಂದ್ರಗುಪ್ತ ಮೌರ್ಯನ ಕಾಲದಲ್ಲಿ (ಕ್ರಿ. ಪೂ. ೩೦೨) ಭಾರತಕ್ಕೆ ಬಂದ ಗ್ರೀಕ್ ರಾಯಭಾರಿ ಮೆಗಾಸ್ತನೀಸ್‌ನ ಬರಹಗಳಲ್ಲಿರುವ ಗಂಗೆಯ ಉಲ್ಲೇಖವೇ ಮೊದಲನೆಯದು,  ಭಾರತದ ಕಾವ್ಯ ಹಾಗೂ ಶಿಲ್ಪಗಳಂತೂ, ಗಂಗೆಯನ್ನು ಹಾಲೂಡಿ ಸಮೃದ್ಧಿಯನ್ನು ತರುವ ಮಾತೃದೇವತೆಯಂತೆ ಚಿತ್ರಿಸುತ್ತವೆ.

ಇಂಥ ಮಾತೃ ಸದೃಶವಾದ ಗಂಗಾ ಪ್ರವಾಹದ ದಡದಲ್ಲಿ ಕೂತು, ಆ ಎತ್ತರದ ಮಧ್ಯಾಹ್ನದ ತಣ್ಣನೆಯ ಬಿಸಿಲಿಗೆ ಮೈಯೊಡ್ಡಿಕೊಂಡು ದೂರದಲ್ಲಿ ಥಳ ಥಳಿಸುವ ಶಿಖರಗಳನ್ನು ನೋಡುತ್ತಿದ್ದೆ. ನಮ್ಮ  ಬಲಕ್ಕೆ ಭೋರೆಂಬ ನಿರಂತರ ಪ್ರವಾಹ, ಎಡಕ್ಕೆ ಸುಮಾರು ಮುನ್ನೂರು ಅಡಿ ಎತ್ತರದ ದಂಡೆಯ ಮೇಲೆ ಗಂಗೆಯ ದೇವಸ್ಥಾನ, ಎದುರಿಗೆ ಉತ್ತರದಲ್ಲಿ ಗಂಗೆಯ ಉಗಮಸ್ಥಾನವಾದ ಪರ್ವತ ಪಂಕ್ತಿ ಗೋಪುರಗಳು. ಆ ಪರ್ವತ ಶಿಖರಗಳಲ್ಲಿ ಒಂದು ಸುದರ್ಶನ, ಇನ್ನೊಂದು ಶಿವಲಿಂಗ. ಈ ಶಿವಲಿಂಗ ಶಿಖರ ಇಪ್ಪತ್ತೊಂದು ಸಾವಿರದ ನಾನೂರು ಅಡಿಗಳ ಎತ್ತರದ್ದು. ಈ ಶಿವಲಿಂಗ ಪರ್ವತದ ತಪ್ಪಲಿನಲ್ಲಿ ಗೋಮುಖ ಎಂಬ ಸ್ಥಳವಿದೆ. ಗಂಗಾನದಿ ಒಂದು ಆಕಾರ ತಳೆದು ಮೊದಲು ಕಾಣಿಸಿಕೊಳ್ಳುವುದು ಅಲ್ಲಿಯೇ. ಅದೇ ನಿಜವಾದ ಅರ್ಥದಲ್ಲಿ ಗಂಗೋತ್ರಿ. ಆ ಗಂಗೋತ್ರಿಯ ಶಿಖರದಿಂದ, ಯಮುನೋತ್ರಿ ಆಕಾಶಮಾರ್ಗದ ಹಕ್ಕಿಯ ರೆಕ್ಕೆಯ ಹಾದಿಯಲ್ಲಿ ಕೇವಲ ಮೂವತ್ತು ಕಿಲೋಮೀಟರ್ ದೂರದಲ್ಲಿದೆ. ಗಂಗೋತ್ರಿ ಎಂದು ಸಧ್ಯಕ್ಕೆ ಕರೆಯಿಸಿಕೊಳ್ಳುವ ಮತ್ತು ಗಂಗೆಯ ದೇವಸ್ಥಾನವಿರುವ, ನಾನು ನಿಂತ ಈ ಸ್ಥಳದಿಂದ ಗೋಮುಖಕ್ಕೆ ಹೋಗಬೇಕಾದರೆ ಅತ್ಯಂತ ಅಪಾಯಕರವಾದ ದಾರಿಯಲ್ಲಿ ಹದಿನೆಂಟು ಕಿಲೋಮೀಟರ್ ನಡೆಯಬೇಕು. ಗೋಮುಖವೆಂದು ಕರೆಯಲಾದ ಆ ಸ್ಥಳ, ೧೨,೭೭೦ ಅಡಿಗಳ ಹಂತದಲ್ಲಿದೆ. ಗೋಮುಖದಿಂದ ಮೇಲಿನ ಭಾಗ (ವಾಸ್ತವವಾಗಿ ಇದೇ ಶಿವಲಿಂಗ ಪರ್ವತದ ತಪ್ಪಲು) ದಲ್ಲೇ ದಟ್ಟವಾದ ಹಿಮ ಶತ ಶತಮಾನಗಳಿಂದ ಗಟ್ಟಿಗೊಂಡ ನೀರ‍್ಗಲ್ಲುಗಳ ನಿವಾಸವಿದೆ. ಇದನ್ನೇ ‘ಗಂಗೋತ್ರಿ ಗ್ಲೇಸಿಯರ್’ ಎಂದು ಗುರುತಿಸಲಾಗಿದೆ. ಅನೇಕ ಶತ ಕೋಟಿ ವರ್ಷಗಳಿಂದ ಸಂಚಯನಗೊಂಡ ಈ ಹಿಮದ ನೆಲೆ, ೨೪ ಕಿಲೋಮೀಟರ್ ಉದ್ದವಾಗಿ ೬.೮ ಕಿಲೋಮೀಟರ್ ಅಗಲವಾಗಿ ಹರಹಿಕೊಂಡಿದೆ. ಈ ನೀರ‍್ಗಲ್ಲ ನಿಧಿಯಿಂದ ಕರಗಿ ಕರಗಿ ಇಳಿದು ಗೋಮುಖದ ಬಳಿ ಮೊದಲು ಕಾಣಿಸಿಕೊಳ್ಳುವ ಈ ಪ್ರವಾಹಕ್ಕೆ ಭಾಗೀರಥಿ ಎಂದು ಕರೆಯಲಾಗಿದೆ. ಈ ಭಾಗೀರಥಿ ಮುಂದೆ ಹರಿದು, ಅಕ್ಕ ಪಕ್ಕದ ನೀರ‍್ಗಲ್ಲುಗಳ ನೆಲೆಗಳಿಂದ ಇನ್ನಷ್ಟು ಜಲಸಂಚಯನ ಮಾಡಿಕೊಂಡು, ಇನ್ನೂ ಎರಡು ಸಾವಿರ ಅಡಿಗಳಷ್ಟು ಕೆಳಕ್ಕೆ ಬರುವ ಹೊತ್ತಿಗೆ ಅತ್ತಿತ್ತ ನಿಂತ ಮಹಾ ಪರ್ವತಗಳು ಅದಕ್ಕೆ ಒಂದು ಪಾತ್ರವನ್ನು ನಿರ್ಮಿಸುತ್ತವೆ. ಈ ಪಾತ್ರದ ಮೂಲಕ ಹರಿಯುವ ಈ ಮಹಾ ಪ್ರವಾಹ, ಹತ್ತು ಸಾವಿರದ ಮುನ್ನೂರು ಅಡಿಗಳ ಎತ್ತರದಿಂದ ಧಾವಿಸುತ್ತ ಹಿಮಾಲಯದ ಪರ್ವತಕಂದರಗಳ ನಡುವೆ ಪರಿಭ್ರಮಿಸಿ, ಹೃಷೀಕೇಶ ಹರಿದ್ವಾರಗಳ ಹತ್ತಿರ ಬಯಲು ನಾಡನ್ನು ಪ್ರವೇಶಿಸಿ, ಇಡೀ ಭಾರತದ ಜನಸಂಖ್ಯೆಯ ಮೂರನೆ ಒಂದು ಭಾಗದಷ್ಟು ಜನರು ವಾಸ ಮಾಡುವ ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಲದ ಮೂಲಕ ಹರಿದು ಬಂಗಾಳ ಕೊಲ್ಲಿಯನ್ನು ಸೇರುತ್ತದೆ.

ಮೊದ ಮೊದಲು ಹಿತವಾಗಿ ತೋರುತ್ತಿದ್ದ ಬಿಸಿಲು ಚುರುಗುಟ್ಟ ತೊಡಗಿದ್ದಷ್ಟೇ ಅಲ್ಲದೆ, ನಮ್ಮ ಹೊಟ್ಟೆಯೂ ಚುರುಗುಟ್ಟತೊಡಗಿದ್ದರಿಂದ ನದೀಪಾತ್ರದಿಂದ ನಮ್ಮ ಅತಿಥಿಗೃಹದ ಕಡೆ ಹೊರಟೆವು. ಹಾಗು ಬರುವಾಗ ದಡದಲ್ಲಿರುವ ಗಂಗೆಯ ದೇವಸ್ಥಾನದ ಮೂಲಕವೇ ಬರಬೇಕು, ದೇವಸ್ಥಾನ, ವಿಸ್ತಾರವಾದ ಅಂಗಳದ ನಡುವೆ ಉತ್ತರಕ್ಕೆ ಮುಖ ಮಾಡಿಕೊಂಡು ನಿಂತಿದೆ. ಈ ದೇವಸ್ಥಾನವನ್ನು ಹದಿನೆಂಟನೆಯ ಶತಮಾನದ ಮೊದಲಲ್ಲಿ ಘಡವಾಲ್ ಪ್ರದೇಶದ, ಘೂರ್ಖ ರೆಜಿಮೆಂಟಿನ ಕಮ್ಯಾಂಡರ್ ಅಮರನಾಥ ಥಾಪಾ ಎನ್ನುವವನು ಕಟ್ಟಿಸಿದನಂತೆ. ಈ ದೇವಸ್ಥಾನದ ಅಂಗಳದಲ್ಲೇ ಒಂದು ಶಿಲಾತಲವಿದೆ. ಅದನ್ನು ಭಗೀರಥ ಶಿಲೆ ಎನ್ನುತ್ತಾರೆ. ಇಲ್ಲಿಯೇ ಭಗೀರಥನು ಗಂಗಾವತರಣಕ್ಕಾಗಿ ನಿಂತು ತಪಸ್ಸು ಮಾಡಿದನೆಂದು ಹೇಳುತ್ತಾರೆ.

ದೇವಸ್ಥಾನಕ್ಕೆ, ಮತ್ತು ಅದರೊಳಗಿನ ಗಂಗೆಗೆ ನಿಂತಲ್ಲೇ ಕೈ ಮುಗಿದು ನಮ್ಮ ಅತಿಥಿ ಗೃಹವನ್ನು ತಲುಪಿದಾಗ ಆಗಲೇ ಮಧ್ಯಾಹ್ನ ಮೂರುವರೆ ಗಂಟೆಯಾಗಿತ್ತು. ನಮ್ಮ ವಸತಿಯ ಪಕ್ಕದ ತಟಿಕೆ ಹೋಟೆಲಿನಲ್ಲಿ ಒಂದಷ್ಟು ಬಿಸಿ ಬಿಸಿ ರೊಟ್ಟಿಗಳನ್ನು ಮಾಡಿಸಿಕೊಂಡು ತಿಂದು, ನಮ್ಮ ಕೊಠಡಿಗಳಿಗೆ ಮರಳಿದೆವು. ಕೊಠಡಿಯ ನಾಲ್ಕು ಗೋಡೆಗಳ ನಡುವೆ, ಒಂದಷ್ಟು ಮಲಗಿ ವಿಶ್ರಾಂತಿಯನ್ನು ಪಡೆಯಬಾರದೇಕೆ ಎಂಬ ಆಲೋಚನೆಯನ್ನು ಅತ್ತ ನಿರ್ದಾಕ್ಷಿಣ್ಯವಾಗಿ ತಳ್ಳಿ, ಮತ್ತೆ ನದೀತೀರಕ್ಕೆ ಹೋಗಲು ನಿರ್ಧರಿಸಿದೆವು. ಇಂಥ ಸೊಗಸಾದ ಸ್ಥಳದಲ್ಲಿ, ಇರುವ ಸ್ವಲ್ಪ ಕಾಲದಲ್ಲಿ (ಯಾಕೆಂದರೆ ಮತ್ತೆ ಮರುದಿನ ಲಂಕಾದಲ್ಲಿ ಕಾಯುತ್ತಿರುವ ನಮ್ಮ ಟ್ಯಾಕ್ಸಿಯನ್ನೇರಬೇಕು) ಈ ನಿಸರ್ಗದ ಸೊಬಗನ್ನು ತುಂಬಿಕೊಳ್ಳುವುದೇ ಸಧ್ಯದ ಪರಮ ಪ್ರಯೋಜನ ಎನ್ನಿಸಿದ್ದರಿಂದ, ಸಂಜೆಯ ಶೀತವನ್ನೆದುರಿಸಲು ಉಡುಪುಗಳಿಂದ ಸನ್ನದ್ಧರಾಗಿ ಹೊರಟು, ಒಂದಷ್ಟು ಬಿಸಿ ಬಿಸಿ ಚಾ ಕುಡಿದು ಕೆಳಗೆ ಇಳಿದು ಮತ್ತೆ ನದೀ ಪಾತ್ರವನ್ನು ಪ್ರವೇಶಿಸಿ ಬಂಡೆಗಳ ನಡುವಣ ಹಾಯಾದ ಮರಳಿನ ಮೇಲೆ ಕುಳಿತುಕೊಂಡೆವು. ಎರಡೂ ಕಡೆಗೆ ಬೃಹದಾಕಾರವಾಗಿ ಚಾಚಿಕೊಂಡ ಗಿರಿಶ್ರೇಣಿಗಳ ಮೇಲೆ ಸೊಂಪಾದ ಬಿಸಿಲು ಹಬ್ಬಿಕೊಂಡಿತ್ತು. ನಿರಂತರವಾಗಿ ಗುಡುಗಿಕೊಂಡು ಹರಿಯುವ ಗಂಗೆಯ ಘೋಷವನ್ನಾಲಿಸುತ್ತಾ, ಉತ್ತರದ ಎತ್ತರದ ಹಿಮಧವಳ ಶೃಂಗಗಳನ್ನು ವೀಕ್ಷಿಸುತ್ತಾ ಇರುವಾಗ, ಗಂಗೋತ್ರಿಯ ಶಿಖರ ಸಮುಚ್ಚಯಗಳು, ಒಂದರ ಜತೆಗೊಂದು ಸ್ಪರ್ಧಿಸುತ್ತಾ ಆಕಾಶವನ್ನು  ರೇಖಿಸಿದ್ದವು. ಧೀರವಾದ ಆ ಮಹಾಪರ್ವತಗಳು, ಧ್ಯಾನದಲ್ಲಿ ತೊಡಗಿದ ದೇವತಾತ್ಮಗಳಂತೆ ಶೋಭಿಸುತ್ತಿದ್ದವು. ನಿರಭ್ರವಾದ ನೀಲಿಯ ಹಿನ್ನೆಲೆಯಲ್ಲಿ ಹಾಲು – ಬಿಳಿ ಮಂಜಿನ ಶಿಖರಗಳನ್ನು ಚಾಚಿಕೊಂಡ ಏರಿಳಿತಗಳ ಮಧ್ಯೆ, ಗಂಗೆ ಉಗಮಿಸುವ ಶಿವಲಿಂಗ್ ಎಂಬ ಹೆಸರಿನ ಶಿಖರ, ಭಸ್ಮೋದ್ಧೂಳಿತವಾದ ಶಿವನಂತೆ ಧ್ಯಾನಮಗ್ನವಾಗಿತ್ತು. ಆ ಶಿವಲಿಂಗ್ ಶಿಖರ, ಅಕ್ಕಪಕ್ಕದ ಮಹಾ ಪರ್ವತಾವಳಿಗಳು, ಇವುಗಳ ಕಡೆಯಿಂದ ಹರಿದು ಬರುತ್ತಿದ್ದ ಗಂಗಾಪ್ರವಾಹವನ್ನು ನೋಡಿದರೆ, ಭಗೀರಥನ ತಪಸ್ಸಿಗೆ ಒಲಿದು ಹರಜಟಾಜೂಟದಿಂದ ಗಂಗೆ ಇಳಿದು ಬಂದಳೆಂಬುದು ಒಂದು ಪುರಾಣ ಕತೆಯಾಗದೆ, ಆ ಪುರಾಣದಾಚೆಯ ಪ್ರಾಚೀನ ವಾಸ್ತವವೇ ಆಗಿ ಪರಿಣಮಿಸಿತು. ನಿಸರ್ಗ ಸಹಜವಾದ ಈ ಮಹದ್‌ಘಟನೆಯನ್ನು ಮೊಟ್ಟ ಮೊದಲಿಗೆ ಕಂಡ ಕಲ್ಪನೆಯ ಕಣ್ಣಿಗೆ ಅದೊಂದು ಅದ್ಭುತದಂತೆ ತೋರಿರಬೇಕು. ಆ ಅದ್ಭುತಕ್ಕೆ ಒಂದು ಕಥೆಯನ್ನು ಕಟ್ಟಿರಬೇಕು; ಅಥವಾ ಆ ಅದ್ಭುತವೇ ಕಥೆಯೊಂದನ್ನು ಹುಟ್ಟಿಸಿರಬೇಕು. ಮೇಲೆ ನೀಲಾಕಾಶ; ಕೆಳಗೆ  ಶಿವನ ಜಟಾಜೂಟಗಳಂತೆ  ಮುಗಿಲಿಗೆ ಮುಡಿಯೆತ್ತಿದ ಪರ್ವತ ಶಿಖರಗಳು; ಆ ಪರ್ವತ ಶಿಖರಗಳಿಂದ ಕಂದರಗಳಿಂದ ಇಳಿದು ಬರುವ ಮಹಾಪ್ರವಾಹ – ಈ ಎಲ್ಲವೂ ಒಂದು ಪುರಾಣಕತೆಗೆ ಕಾರಣವಾಗಿರಬೇಕು. ಹೀಗೆ ಹುಟ್ಟಿಕೊಂಡಿತು ಗಂಗಾವತರಣದ ಕಥೆ. ಸಾಕ್ಷಾತ್ ಶಿವನೇ ನಿಂತು, ಮೇಲಿನ ಆ ಸ್ವರ್ಗದಿಂದ ಕೆಳಕ್ಕೆ ಧುಮ್ಮಿಕ್ಕುವ ಗಂಗೆಯನ್ನು ತನ್ನ ಜಟಾಜೂಟಗಳಲ್ಲಿ ಪಳಗಿಸಿ ಕೆಳಕ್ಕೆ ಇಳಿಸಿದನೆಂಬ ಒಂದು ‘ರೂಪಕ’ ನಿರ್ಮಾಣವಾಯಿತು. ಹೀಗೆ ಶಿವನ ಜಟಾಜೂಟದಿಂದ ಗಂಗೆ ಇಳಿದು ಬರಲು ಕಾರಣಗಳೇನು ಎಂಬ ಪ್ರಶ್ನೆಗೆ ಉತ್ತರವೆಂಬಂತೆ, ಹುಟ್ಟಿಕೊಂಡಿತು ಕಪಿಲ ಮಹರ್ಷಿಯ ಕೋಪಾಗ್ನಿಯಿಂದ ದಗ್ಧರಾದ ಅರವತ್ತು ಸಾವಿರ ಸಗರ ಪುತ್ರರ ಭಸ್ಮಾವಶೇಷದ ಮೇಲೆ ಪವಿತ್ರಳಾದ ಗಂಗೆಯನ್ನು ಹರಿಯಿಸಿ ಅವರನ್ನು ಸದ್ಗತಿಗೆ ಏರಿಸಲು ತಪಸ್ಸಿಗೆ ನಿಂತ ಭಗೀರಥನ ವೃತ್ತಾಂತ.

ಗಂಗೆಯ ವಿಚಾರದಲ್ಲಿ ಪ್ರಚಲಿತವಾದ ಪಾವಿತ್ರ್ಯದ ಭಾವನೆಗೆ ಮುಖ್ಯ ಕಾರಣ, ಆಕೆ ಸಾಕ್ಷಾತ್ ಶಿವನ ಜಟಾಜೂಟದಿಂದ ಬಂದವಳು ಎನ್ನುವುದೇ ಆಗಿದೆ. ಆದರೆ ಈ ಭಾವನೆಯನ್ನು ಈ ದೇಶದ ವಿಷ್ಣುಭಕ್ತರು ಒಪ್ಪುವುದು ಹೇಗೆ? ಸರಿ. ವಿಷ್ಣುಪರವಾದ ಕಲ್ಪನೆ ತಾನೂ ಒಂದು ಪುರಾಣವನ್ನು ಕಟ್ಟಿತು. ಅದರ ಪ್ರಕಾರ, ವಿಷ್ಣುವು ತ್ರಿವಿಕ್ರಮಾವತಾರವನ್ನು ತಾಳಿ, ತನ್ನ ಮೂರನೆಯ ಪಾದವನ್ನು ಆಕಾಶಕ್ಕೆ ಎತ್ತಿದಾಗ ಸತ್ಯಲೋಕದಲ್ಲಿದ್ದ ಬ್ರಹ್ಮನು, ತನ್ನ ಕಮಂಡಲು ಜಲದಿಂದ ವಿಷ್ಣುವಿನ ಪಾದವನ್ನು ಅಭಿಷೇಕ ಮಾಡಿದನೆಂದೂ, ವಿಷ್ಣುಪಾದಚ್ಯುತವಾದ ಗಂಗೆ ರಭಸದಿಂದ ಕೆಳಗೆ ಧಾವಿಸುವಾಗ ಶಿವನ ಜಟಾಜೂಟದಿಂದ ದಮನವಾಯಿತೆಂದೂ, ಈ ಪುರಾಣಗಳು ಹೇಳುತ್ತವೆ. ಒಟ್ಟಿನಲ್ಲಿ ವಿಷ್ಣುಪರವಾದ ಈ ಪುರಾಣ ಪ್ರತಿಭೆ, ಶಿವನಿಗಿಂತ ಮಹಾವಿಷ್ಣುವಿನ ಶ್ರೇಷ್ಠತೆಯನ್ನು ತುಂಬ ಚಮತ್ಕಾರಿಕವಾಗಿ ಸಾಧಿಸಿತಂತೆ ತೋರುತ್ತದೆ, ಗಂಗಾವತರಣವನ್ನು ಕುರಿತ ವ್ಯಾಖ್ಯಾನದಲ್ಲಿ. ಇವೆಲ್ಲ ಒಂದು ಕಾಲದಲ್ಲಿದ್ದ ಅನಾರೋಗ್ಯಕರವಾದ ಸ್ಪರ್ಧೆಗಳು. ಇವತ್ತು ಇವುಗಳು ತೀರಾ ಬಾಲಿಶವಾಗಿ ತೋರುತ್ತವೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ ಈ ಪುರಾಣಗಳನ್ನೆಲ್ಲ ಬದಿಗಿರಿಸಿ ನೋಡಿದರೂ ಈ ಕತೆಗಳ ಹಿಂದಿರುವ ಸಾಂಕೇತಿಕ ಅಥವಾ ಒಂದರ್ಥದಲ್ಲಿ ವಾಸ್ತವವಾದ ಅರ್ಥವೇ ಬೇರೆ. ಗಂಗೆಯನ್ನು ವಿಷ್ಣುಪಾದಚ್ಯುತೆ ಎಂದು ಹೇಳಲಾಗಿದೆಯಷ್ಟೆ? ವಿಷ್ಣುಪಾದ ಎಂದರೆ ಆಕಾಶ; ಅದರ ಕೆಳಗಿನಪರ್ವತ ಶಿಖರಗಳು ಅದನ್ನು ವ್ಯಾಪಿಸಿದ ಹಿಮರಾಶಿ, ಇದೇ ಹರ ಜಟಾಜೂಟ.

ಒಟ್ಟಾರೆಯಾಗಿ ಈ ಎರಡು ಪುರಾಣ ಕತೆಗಳೂ, ಶಿವನ ಜಟಾಜೂಟದಿಂದ ತನ್ನ ರುದ್ರ ರಭಸವನ್ನು ಕಳೆದುಕೊಂಡು ಗಂಗೆ ಇಳೆಗಿಳಿದಳು ಎನ್ನುವುದು, ಅವಳು ವಿಷ್ಣುಪಾದಚ್ಯುತೆಯಾದವಳು – ಎನ್ನುವುದು, ಈ ಎರಡೂ ಈ ದೇಶದ ಪುರಾಣಗಳ, ಕವಿಗಳ, ಶಿಲ್ಪಗಳ, ಚಿತ್ರಕಲಾವಿದರ ಮತ್ತು ಜಾನಪದದ ಪ್ರತಿಭೆಯಲ್ಲಿ ಸಮೃದ್ಧವಾದ ಅಭಿವ್ಯಕ್ತಿಯನ್ನು ಪಡೆದುಕೊಂಡಿವೆ.

ಗಂಗೋತ್ರಿಯಲ್ಲಿ ನಾನು ಕಂಡ ಈ ಗಂಗಾನದಿ ತುಂಬ ರುದ್ರರಭಸದಿಂದ ಧಾವಿಸುವಂಥದು. ಅದಕ್ಕೆ ಕಾರಣ ಅದು ಉಗಮಿಸುವುದು ಹನ್ನೆರಡು ಸಾವಿರ ಅಡಿಗಳೆತ್ತರದ ಶಿಖರಗಳಲ್ಲಿ; ಮತ್ತು ಆ ಎತ್ತರದಿಂದ ಬರುವಾಗ ಸಾಕಷ್ಟು ರಭಸ-ಸೆಳವುಗಳು ಸಜಹವಾಗಿಯೇ ಪ್ರಾಪ್ತವಾಗುತ್ತವೆ. ಗಂಗಾನದಿಯ ಈ ರಭಸ,  ಅದು ಹಿಮಾಲಯದ ಅಸಂಖ್ಯ ಪರ್ವತ ಕಂದರಗಳ ಜಟಾಮಂಡಲಗಳ ನಡುವೆ ದಮನಗೊಳ್ಳುತ್ತಾ, ಹರಿದ್ವಾರದ ಬಯಲಿಗೆ ಬರುವ ವೇಳೆಗೆ ಸಾಕಷ್ಟು ಪಳಗಿರುತ್ತದೆ. ಗಂಗೆಯ ಈ ರಭಸವನ್ನು ಕುರಿತು ಪುರಾಣಗಳು ಹೇಳುತ್ತವೆ : ಗಂಗೆ ಹಿಮವಂತನ ಮಗಳು. ಆಕೆಗೆ ಮಹಾ ಅಹಂಕಾರ. ದೇವತೆಗಳು, ಯೌವನವತಿಯಾದ ಆಕೆಯನ್ನು ಸತ್ಯಲೋಕಕ್ಕೆ ಕರೆದುಕೊಂಡು ಹೋಗಿ, ಅವಳನ್ನು ಶಿವನಿಗೆ ಒಪ್ಪಿಸುವಂತೆ ಬ್ರಹ್ಮನನ್ನು ಕೇಳಿಕೊಂಡರಂತೆ. ಬ್ರಹ್ಮನಿಗೆ, ಅವನು ಎಷ್ಟೇ ವಿವೇಕಿಯಾದರೂ, ಗಂಗೆಯ ವಕ್ರತೆಯನ್ನು ನೋಡಿ ಕೋಪ ಬಂದಿತಂತೆ. ಆ ಕೋಪದಲ್ಲಿ ಆತ, ಈಕೆ ಶಿವನಿಗೆ ತಕ್ಕವಳಲ್ಲವೆಂದು ತೀರ್ಪು ನೀಡಿದನು. ಇನ್ನೂ ಕನ್ಯೆಯಾದ, ಆದರೆ ಅಹಂಕಾರಿಯಾದ ಗಂಗೆ, ಬ್ರಹ್ಮನ ತೀರ್ಪಿನ ವಿರುದ್ಧ ಮಾತನಾಡಲು ಬಾಯಿ ತೆರೆದಳು. ಸರಿ, ಬ್ರಹ್ಮನಿಗೆ ಕೋಪ ಕೆರಳಿ, ನೀನು ನದಿಯಾಗು ಎಂದು ಶಾಪವನ್ನು ಕೊಟ್ಟನು. ಆಕೆ ನದಿಯಾಗಿ ಪ್ರವಹಿಸತೊಡಗಿದಾಗ ಬ್ರಹ್ಮನೂ ಅವಳ ರಭಸವನ್ನು ತಡೆಯಲಾರದಾದನು. ಆಗ, ಅದೇ ವೇಳೆಗೆ ತಪಸ್ಸಿಗೆ ನಿಂತ ಭಗೀರಥನ ಕೋರಿಕೆಯ ಮೇರೆಗೆ, ಆಕೆ ಹೇಳಿದಳು, ‘ನಾನು ಈ ಮಹಾರಭಸದಿಂದ ಕೆಳಗಿಳಿದರೆ ಸರ್ವನಾಶವಾದೀತು. ಆದ್ದರಿಂದ ನೀನು ನನ್ನನ್ನು ಹೇಗೆ ಬರಮಾಡಿಕೊಳ್ಳುತ್ತೀಯ?’ ಆಗ ಬ್ರಹ್ಮನ ಸೂಚನೆಯ ಮೇರೆಗೆ ಭಗೀರಥನು ಶಿವನನ್ನು ಪ್ರಾರ್ಥಿಸಿಕೊಳ್ಳಲು, ಶಿವನು ತನ್ನ ಜಟಾಜೂಟವನ್ನು ಒಡ್ಡಿ ನಿಂತು ಗಂಗೆಯ ಅಹಂಕಾರವನ್ನು ನಸುನಗುತ್ತಾ ಅಡಗಿಸಿದನು. ಶಿವನ ಜಟಾಜೂಟಗಹ್ವರದಲ್ಲಿ ಗಂಗೆಯ ಮಹಾ ರಭಸವೆಲ್ಲ ಇಂಗಿ ಹೋಯಿತಂತೆ; ಆದರೆ ಭಗೀರಥನ ಕೋರಿಕೆಯಂತೆ ಲೋಕಕಲ್ಯಾಣಾರ್ಥವಾಗಿ ಗಂಗೆಯನ್ನು ಇಳೆಗೆ ಇಳಿಸಿದನಂತೆ.

ಗಂಗೆಯ ಅಹಂಕಾರ ರಭಸಗಳು ಶಿವನ ಜಟಾಜೂಟದ ತಡೆಯಿಂದ ಹೇಗೆ ದಮನಗೊಂಡವೆಂಬ ಸಂಗತಿಯನ್ನು, ಪುರಾಣ – ಕಾವ್ಯ – ಕಲೆಗಳು, ತಮ್ಮ ವಸ್ತುವನ್ನಾಗಿ ಮಾಡಿಕೊಂಡಿವೆ. ನೀಲಕಂಠ ದೀಕ್ಷಿತರು ತಮ್ಮ ‘ಗಂಗಾವತರಣ’ ಎಂಬ ಕೃತಿಯಲ್ಲಿ ಇದನ್ನು ವರ್ಣಿಸಿದ್ದಾರೆ; ಭರ್ತೃಹರಿ ತನ್ನ ಸುಭಾಷಿತಗಳಲ್ಲಿ, ವಿವೇಚನೆಯಿಲ್ಲದವರು ಹೇಗೆ ಗಂಗೆಯಂತೆ ಛಿದ್ರ ಛಿದ್ರವಾಗುತ್ತಾರೆ ಎಂಬುದನ್ನು ದೃಷ್ಟಾಂತವನ್ನಾಗಿ ನಿರೂಪಿಸಿದ್ದಾನೆ; ಜಗನ್ನಾಥ ಪಂಡಿತ ತನ್ನ ‘ಗಂಗಾಲಹರಿ’ ಯಲ್ಲಿ ಗಂಗೆಗೆ ಒದಗಿದ ಅಧಃಪಾತವನ್ನು ಚಿತ್ರಿಸಿದ್ದಾನೆ; ಶಿವನ ಜಡೆಮುಡಿಯಲ್ಲಿ ತಂಗಿದ ಹಾಗೂ ಇಂಗಿದ ಗಂಗೆ, ಶಿವನು ನಾಟ್ಯದಲ್ಲಿ ತೊಡಗಿದಾಗ ಹೇಗೆ ಹೊಯ್ದಾಡತೊಡಗಿದಳು ಎನ್ನುವುದನ್ನು ರತ್ನಾಕರನ ‘ಹರವಿಜಯ’ದಲ್ಲಿ, ವೆಂಕಟನಾಥನ ‘ಯಾದವಾಭ್ಯುದಯ’ದಲ್ಲಿ, ಮತ್ತು ಶಂಕರಾಚಾರ್ಯರ ಸ್ತೋತ್ರವೊಂದರಲ್ಲಿ  ವರ್ಣಿಸಲಾಗಿದೆ. ಈ ಸಂಗತಿ ಹಲವು ಶಾಸನಗಳಲ್ಲಿಯೂ ವರ್ಣಿತವಾಗಿದೆ (EI. iii. p. 63)

ಶಿವನು ತನ್ನ ಜಡೆಮುಡಿಯಿಂದ ತಡೆದು ಗಂಗೆಯ ಅಹಂಕಾರವನ್ನು ದಮನಗೊಳಿಸಿ ಅವಳನ್ನು ತನ್ನವಳಾಗಿ ಮಾಡಿಕೊಂಡನೆಂಬ ಈ ಕಥೆ , ಪುರುಷ ಪ್ರಧಾನವಾದ ಸಮಾಜದಲ್ಲಿ ಹೆಣ್ಣಿನ ಗರ್ವಕ್ಕೆ ಗಂಡು ತೋರುವ ಪ್ರತಿಕ್ರಿಯೆಗೆ ಅಥವಾ ತನ್ನ ಪೌರುಷದಿಂದ ಹೆಣ್ಣನ್ನು ಗಂಡು ಹೇಗೆ ದಮನಗೊಳಿಸಬಹುದೆಂಬ ಸಂಗತಿಗೆ, ಒಂದು ಪ್ರತೀಕವಾಗುವಂತೆಯೇ, ಗಂಗೆಯನ್ನು ತನ್ನ ಎರಡನೆಯ ಹೆಂಡತಿಯನ್ನಾಗಿ ಮಾಡಿಕೊಂಡು, ಮೊದಲನೆಯ ಹೆಂಡತಿಗಿಂತ ಹೆಚ್ಚಾಗಿ ಶಿವ ತನ್ನ ತಲೆಯ ಮೇಲೆ ಕೂರಿಸಿಕೊಂಡ ವ್ಯಂಗ್ಯವೂ ಇದರಿಂದ ಸೂಚಿತವಾಗುತ್ತದೆ. ಮೊದಲು ರಾಮಾಯಣ ಮಹಾಭಾರತಗಳಲ್ಲಿ ಉಪಾಖ್ಯಾನವಾಗಿ ಕಾಣಿಸಿಕೊಳ್ಳುವ ಗಂಗಾವತರಣದ ಕಥೆ, ಉದ್ದಕ್ಕೂ ಇನ್ನಿತರ ಕಾವ್ಯಗಳಲ್ಲಿ, ಶಿಲ್ಪಗಳಲ್ಲಿ, ಚಿತ್ರಗಳಲ್ಲಿ ಮತ್ತೆ ಮತ್ತೆ ಪುನರುಕ್ತವಾಗಿದೆ. ಹತ್ತನೆ ಶತಮಾನದ ನೇಪಾಳದ (ಉಮಾಸಹಿತ ಶಿವ) ಶಿಲ್ಪವೊಂದರಲ್ಲಿ, ಗಂಗೆ ಆಕಾಶಮಾರ್ಗದಿಂದ ವಿನೀತಭಾವದಲ್ಲಿ ಕೈ ಜೋಡಿಸಿಕೊಂಡು ಇಳಿದು ಬರುವಂತೆ ತೋರಿಸಲಾಗಿದೆ. ಇದು ಭರತನ ನಾಟ್ಯಶಾಸ್ತ್ರದಲ್ಲಿ ವರ್ಣಿತವಾಗಿರುವ ‘ಗಂಗಾವತರಣ ಕರಣ’ ಎಂಬ ನೃತ್ಯಭಂಗಿಯೊಂದನ್ನು ಶಿಲ್ಪದಲ್ಲಿ ಉಲ್ಲೇಖಿಸುವ ಏಕೈಕ ನಿದರ್ಶನವಾಗಿದೆ. ನೃತ್ಯದಲ್ಲಿ ಕರಣ ಎಂದರೆ ಹಸ್ತಪಾದಗಳ ಸಮಾಯೋಗ; ಎಂದರೆ, ಕೈಗಳ ಭಂಗಿಗೆ ಕಾಲುಗಳ ಅನುಗುಣವಾದ ಭಂಗಿ ಹೇಗಿರಬೇಕು ಎನ್ನುವುದು. ತಲೆಯನ್ನು ಮುಂದೆ ಮಾಡಿಕೊಂಡು,  ಕಾಲುಗಳನ್ನು ತೇಲುವ – ಮುಳುಗುವ ಒಂದು ವಿನ್ಯಾಸದಲ್ಲಿ ತೋರಿಸುತ್ತ ಮಾಡುವ ಒಂದು ಬಗೆಯ ನೃತ್ಯ ಇದು. ಈ ಶಿಲ್ಪದಲ್ಲಿ ನಿರೂಪಿತವಾದ ಈ ನೃತ್ಯ, ಗಂಗೆಯ ಚಲಿಸುವ ಉತ್ತರೀಯ ಹಾಗೂ ನದಿಯ ಅಲೆಗಳನ್ನು ಸೂಚಿಸುತ್ತದೆ. ಹಾಗೆಯೆ, ಗಂಗೆಯು ಮಕರವಾಹನೆಯಾಗಿ, ಅಂಜಲೀಬದ್ಧಳಾಗಿ ನವವಧುವಿನಂತೆ ಶಿವನ ಬಳಿಗೆ ಬರುವ ಮತ್ತು ಶಿವನು ಅವಳನ್ನು ಪ್ರೀತಿಯಿಂದ ಬರಮಾಡಿಕೊಳ್ಳುವ ಸಂಗತಿಯನ್ನು ಹಿಡಿದಿಡುವ ಈ ಶಿಲ್ಪ ಅನನ್ಯವಾದದ್ದು ಮಾತ್ರವಲ್ಲ, ದೊರಕಿರುವ ಶಿಲ್ಪಗಳಲ್ಲಿ ಇದೊಂದೆ. ಇನ್ನುಳಿದ ಗಂಗಾಧರ ಶಿಲ್ಪಗಳಲ್ಲೆಲ್ಲಾ ಶಿವನು ತನ್ನ ಜಡೆಮುಡಿಯಲ್ಲಿ ಗಂಗೆಯ ರಭಸವನ್ನು ತಡೆದು ಅಡಗಿಸಿದ ಸಂಗತಿಯೇ ಮುಖ್ಯವಾಗಿದೆ.

ಗಂಗೆ, ಶಿವನ ಮತ್ತೊಬ್ಬ ಹೆಂಡತಿಯಾಗಿ, ಅವನ ತಲೆಯ ಮೇಲೆ ಕೂತದ್ದರಿಂದ ಪಾರ್ವತಿಗೆ ಒದಗಿದ ಅಸಮಾಧಾನ ಮತ್ತು ಶಿವನಿಗೆ ಉಂಟಾದ ಪೇಚು-ಈ ಭಾವನೆಗಳನ್ನು ಚಿತ್ರಿಸಿರುವ ಸಾಹಿತ್ಯಿಕ ಹಾಗೂ ಚಿತ್ರಶಿಲ್ಪಾದಿ ಅಭಿವ್ಯಕ್ತಿಗಳು ಸಾಕಷ್ಟಿವೆ. ತಮಿಳುನಾಡಿನ ಚೋಳಶಿಲ್ಪಗಳಲ್ಲಿ, ಹನ್ನೊಂದನೆಯ ಶತಮಾನದ ಮಯೂರಂ ಮತ್ತು ಗಂಗೈಕೊಂಡಪುರದ ಶಿಲ್ಪಗಳಲ್ಲಿ, ಪಾರ್ವತಿಯ ಮುನಿಸನ್ನು  ಸಂತೈಸುವ ಶಿವನ ಚಿತ್ರಣವಿದೆ. ಗಂಗೆಯ ಮೇಲಿನ ಅಸೂಯೆಯಿಂದ, ಮುನಿಸಿಕೊಂಡು ಮುಖ ತಿರುವಿ ನಿಂತ ಪಾರ್ವತಿಯನ್ನು ಸಮಾಧಾನಪಡಿಸುವ ಸೊಗಸಾದ ವರ್ಣಚಿತ್ರವೊಂದು ಲೇಪಾಕ್ಷಿಯ (ಕ್ರಿ.ಶ. ೧೬ನೇ ಶತಮಾನ) ದೇವಸ್ಥಾನದಲ್ಲಿದೆ. ಕಾಳಿದಾಸನ ಮೇಘದೂತದಲ್ಲಿ, ಗಂಗೆಯ ಮೇಲಿನ ಮುನಿಸಿನಿಂದ, ಗೌರಿ ಹುಬ್ಬುಗಂಟು ಹಾಕಿಕೊಂಡದ್ದನ್ನು (ಗೌರೀ ವಕ್ತ್ರಭ್ರುಕುಟಿರಚನಾಂ), ಗಂಗೆ ತಿರಸ್ಕಾರದ ಬೆಳ್ನೊರೆಯಿಂದ ನಗುವಂತೆ ತೋರಿದಳೆಂಬ ವರ್ಣನೆ ಇದೆ. ವಿಶಾಖದತ್ತನ ‘ಮುದ್ರಾರಾಕ್ಷಸ’ ನಾಟಕದ ನಾಂದೀ ಪದ್ಯದಲ್ಲಿ, ಶಿವನ ತಲೆಯ ಮೇಲೆ ಕೂತ ಗಂಗೆಯ ಬಗ್ಗೆ, ಪಾರ್ವತಿ ಅವಳು ಯಾರು ಎಂದು ಪ್ರಶ್ನೆ ಮಾಡುವುದೂ ಶಿವನು ಸುತ್ತಿ ಬಳಸಿ ಮಾತನಾಡುವುದೂ, ಸೊಗಸಾಗಿ ನಿರೂಪಿತವಾಗಿದೆ. ಗಂಗೆ ಗೌರಿಯರ ಸವತಿ ಮಾತ್ಸರ‍್ಯ, ಅವರಿಬ್ಬರ ಜಗಳದಿಂದ ಶಿವನಿಗೆ ಒದಗಿದ ಪೇಚು  ಇತ್ಯಾದಿಗಳಂತೂ ನಮ್ಮ ಜನಪದ ಹಾಡುಗಳಲ್ಲಿ ತುಂಬ ಸ್ವಾರಸ್ಯವಾಗಿ ಅಭಿವ್ಯಕ್ತವಾಗಿದೆ.

ಗಂಗೆ ಕೇವಲ ಶಿವನ ಪತ್ನಿ ಮಾತ್ರ ಅಲ್ಲ; ಆಕೆ ಹಾಲೂಡುವ ಮಾತೃ ದೇವತೆ ಎಂದೂ ಭಾವಿಸಲಾಗಿದೆ. ಭಾರತದ ಇತರ ನದಿಗಳಿಂದ ಗಂಗೆ ಬೇರೆಯಾದರೂ, ಭಾರತದ ಎಲ್ಲಾ ನದಿಗಳನ್ನೂ ಗಂಗೆ ಎಂದೂ ಅಥವಾ ಗಂಗೆಯ ಪ್ರತಿನಿಧಿ ಎಂದೂ ಭಾವಿಸಲಾಗಿದೆ. ಅಷ್ಟೇ ಯಾಕೆ, ನಮ್ಮ ಹಳ್ಳಿಗಳ ಪರಿಸರದಲ್ಲಿ ಹರಿಯುವ ಸಣ್ಣ ಹಳ್ಳಗಳೂ ಕೂಡ, ನಮ್ಮವರ ಪಾಲಿಗೆ ಗಂಗೆಯೇ. ಹರಿಯುವ ನದಿಗಳನ್ನು ಕಂಡಾಗ, ಹಳ್ಳಗಳನ್ನು ದಾಟುವಾಗ ನಮ್ಮ ಜನ. ಅವುಗಳಿಗಿರುವ ಸ್ಥಳೀಯವಾದ ನಾಮರೂಪವನ್ನು ಮರೆತು ಅದನ್ನು ಗಂಗೆ (ಗಂಗಮ್ಮ) ಎಂದೇ ಭಾವಿಸುತ್ತಾರೆ. ಮದುವೆಯಂಥ ಶುಭಕಾರ್ಯಗಳಲ್ಲಿ ದಿಬ್ಬಣದವರು “ಗಂಗಾ ಪೂಜೆ’ಗೆ  ಹೋಗುತ್ತಾರೆ. ‘ಗಂಗೆ’ಯನ್ನು ತರುತ್ತಾರೆ. ಯಾವುದೇ ಬಾವಿಯ, ಹಳ್ಳದ, ಕೊಳ್ಳದ, ನದಿಯ, ನೀರು ಇಂಥ ಹೊತ್ತಿನಲ್ಲಿ ಅವರ ಪಾಲಿಗೆ ‘ಗಂಗೆ’ಯಾಗುತ್ತದೆ. ಯಾವುದೇ ನೀರನ್ನು ‘ಗಂಗೆ’ಯನ್ನಾಗಿ ಪರಿವರ್ತಿಸುವ ಭಾವುಕತೆ ನಮ್ಮ ಸಂಸ್ಕೃತಿಯಲ್ಲಿದೆ. ಗಂಗೆ ಅವರ ಪಾಲಿಗೆ ನೀರು ಅಥವಾ ನೀರಿನ ಅಧಿದೈವ. ಯಾಕೆಂದರೆ ನೀರೆಂದರೆ ಜೀವನ, ಜೀವನ ಎಂಬ ಮಾತಿಗೆ ನೀರು ಎಂದೂ ಅರ್ಥವಿದೆ!) ನೀರಿನಿಂದಲೇ ಬೆಳೆ, ದವಸ, ಧಾನ್ಯ, ಸಮೃದ್ಧಿ. ಈ ಕಾರಣದಿಂದಲೇ ನಮ್ಮ ದೇಶದ ಶಿಲ್ಪಗಳಲ್ಲಿ ನದೀ ದೇವತೆಗಳನ್ನು ತೋರಿಸುವಾಗ ಪೂರ್ಣಕುಂಭವನ್ನು ಹೊತ್ತ, ಅಥವಾ ನೀರಿನ ಪಾತ್ರೆಯನ್ನು ಹಿಡಿದ ಹೆಣ್ಣಿನ ರೂಪದಲ್ಲಿ ತೋರಿಸಲಾಗಿದೆ. ಕ್ರಿ.ಶ. ಎರಡನೆಯ ಶತಮಾನಕ್ಕೆ ಸೇರಿದ ಅಮರಾವತಿಯ ಶಿಲ್ಪದಲ್ಲಿ ಮತ್ತು ಅದೇ ಕಾಲದ ಕುಶಾಣ ಶಿಲ್ಪದಲ್ಲಿ, ನದೀ ಮಾತೃಕೆಯರನ್ನು, ಒಂದು ಕೈಯಲ್ಲಿನ ತಟ್ಟೆಯಲ್ಲಿ ದವಸ ಧಾನ್ಯಗಳನ್ನೂ, ಇನ್ನೊಂದು ಕೈಯಲ್ಲಿ ನೀರಿನ ಪಾತ್ರೆಯನ್ನೂ ಹಿಡಿದ ಹೆಣ್ಣುಗಳಂತೆ ತೋರಿಸಲಾಗಿದೆ. ಶಿಲ್ಪಶಾಸ್ತ್ರಗಳ ಪ್ರಕಾರ ನದೀ ದೇವತೆಗಳು ಪೂರ್ಣಕುಂಭವನ್ನು ಹೊತ್ತವರಾಗಿದ್ದಾರೆ. ಐಹೊಳೆಯ (ಕ್ರಿ.ಶ. ೬ನೇ ಶತಮಾನ) ದೇವಸ್ಥಾನದ (ಪಶ್ಚಿಮ ಚಾಳುಕ್ಯಶೈಲಿ) ಬಾಗಿಲುವಾಡದಲ್ಲಿ ಎರಡೂ ಕಡೆ ಕೆತ್ತಲಾಗಿರವ ಪೂರ್ಣ ಕುಂಭಗಳು ಗಂಗೆ ಯಮುನೆಯರನ್ನು ಸಂಕೇತಿಸುತ್ತವೆ. ಗುಪ್ತರ ಕಾಲದ ಶಿಲ್ಪಗಳಲ್ಲಂತೂ, ದೇವಸ್ಥಾನದ ಬಾಗಿಲುವಾಡಗಳ ಆ ಕಡೆ ಈ ಕಡೆ ಮಕರ ಕಚ್ಛಪಗಳ ಮೇಲೆ ನಿಂತ ಗಂಗೆ ಯಮುನೆಯರ ಮೂರ್ತಿಗಳಿವೆ.  ಇದರ ಅರ್ಥ ದೇವಸ್ಥಾನಗಳನ್ನು ಪ್ರವೇಶಿಸುವವರು, ಈ ನದೀ ದೇವತೆಗಳ ದರ್ಶನದಿಂದ ಪವಿತ್ರರಾಗುತ್ತಾರೆ ಎಂದು ಒಂದು ಕಡೆ ಗಂಗೆ ಪಾವಿತ್ರ್ಯಕ್ಕೆ ಸಂಕೇತವಾದರೆ, ಇನ್ನೊಂದು ಕಡೆ ಹಾಲೂಡುವ ತಾಯಿಯಾಗಿ, ಧನ-ಧಾನ್ಯ ಸಮೃದ್ಧಿಯಿಂದ ಜೀವನವನ್ನು ಧಾರಣ ಮಾಡುವ ಚೈತನ್ಯದ ಪ್ರತೀಕವಾಗಿ ನಿಂತಿದ್ದಾಳೆ.

ಭಾರತೀಯ ಶಿಲ್ಪಗಳಲ್ಲಿ ಗಂಗೆಯನ್ನು ಹೀಗೆ ಮಾತೃದೇವತೆಯಂತೆ ಕೆತ್ತಿರುವುದು ತೀರಾ ಸಹಜವಾದದ್ದೆ. ಆದರೆ ಗಂಗೆಯನ್ನು ಕುರಿತು ಹದಿನಾರನೆಯ ಶತಮಾನದ ಗ್ರೀಕ್ ಶಿಲ್ಪಿಯೊಬ್ಬ ಕೆತ್ತಿದ ಮೂರ್ತಿಯೊಂದು ರೋಮ್ ನಗರದ ಚೌಕದಲ್ಲಿದೆ ಎನ್ನುವುದೂ ಆಶ್ಚರ್ಯದ ಸಂಗತಿಯಾಗಿದೆ. ಬರ್ನಿನಿ ಎಂಬ ಇಟಲಿಯ ಅತ್ಯಂತ ದೊಡ್ಡ ಶಿಲ್ಪಿ  (ಕ್ರಿ.ಶ. ೧೫೯೮ – ೧೬೯೦), ರೋಮ್ ನಗರದಲ್ಲಿ ‘ನಾಲ್ಕು ನದಿಗಳ ಕಾರಂಜಿ’ ಎಂಬ ಶಿಲ್ಪವನ್ನು ರೂಪಿಸಿದ್ದಾನೆ. ಈ ಶಿಲ್ಪದಲ್ಲಿ ನಾಲ್ಕು ನದಿಗಳ ಮೂರ್ತಿಗಳಿವೆ. ಅವು ಡ್ಯಾನೂಬ್, ನೈಲ್, ಗಂಗಾ ಮತ್ತು ರಯೋಡಿ ಪ್ಲಾಟಾ. ಸ್ವಾರಸ್ಯವೆಂದರೆ ಈ ನಾಲ್ಕು ನದಿಗಳೂ ಪುರುಷಾಕೃತಿಯಲ್ಲಿವೆ. ಗಂಗಾ ಎಂದು ಕರೆದಿರುವ ವಿಗ್ರಹ, ಸ್ಯೂಸ್ ದೇವತೆಯನ್ನು ಹೋಲುವ, ದೃಢಕಾಯನಾದ ಹಾಗೂ ವಯಸ್ಸಾದ, ಗಡ್ಡಮೀಸೆಗಳ ಮುಖದ ಒಬ್ಬ ಪುರುಷನದ್ದಾಗಿದೆ. ಮೈಯ್ಯಮೇಲೆ – ಸಾಕಷ್ಟು ನಗ್ನವಾಗಿರುವ ಮೈಯ್ಯಮೇಲೆ – ಒಂದು ಅಡ್ಡ ವಸ್ತ್ರವಿದೆ. ಇದು ಬರ್ನಿನಿ ಚಿತ್ರಿಸಿದ ಗಂಗೆ ! ಪಾಶ್ಚಾತ್ಯರ ಪ್ರಕಾರ ನದಿಗಳೆಲ್ಲ ‘ಪುರುಷರು’. ಹೀಗಾಗಿ ನಮ್ಮ ‘ಗಂಗೆ’ಗೆ ಈ ರೂಪಾಂತರ ಲಭಿಸಿದೆ!

ಗಂಗೆಯ ಬಗೆಗಿನ ಈ ಎಲ್ಲ ಚರಿತ್ರೆ, ಪುರಾಣ, ಸಾಹಿತ್ಯ, ಕಲೆ ಇತ್ಯಾದಿಗಳನ್ನು ನೆನೆಯುತ್ತ, ಗಂಗೆಯ ಮೊರೆತವನ್ನಾಲಿಸುತ್ತಾ ಕುಳಿತ ನನ್ನ ಎದುರಿಗೆ, ಈ ಎಲ್ಲವನ್ನು ಕ್ಷುದ್ರವನ್ನಾಗಿಸುವ, ಭವ್ಯ ಶಿಖರಗಳು ಸಂಜೆಯ ಇಳಿಬಿಸಿಲಿಗೆ ಚಿನ್ನದ ಕಲಶಗಳಾಗಿ ರೂಪುಗೊಳ್ಳುತ್ತಿದ್ದವು. ಶಿಖರಗಳ ಹಿಂದೆ ಶಿಖರಗಳು ಕ್ರಮೇಣ ಹೊನ್ನ ಬಣ್ಣದಿಂದ ಹಳದಿಯಾಗಿ, ಆ ಹಳದಿ ಬೂದು ಬಣ್ಣವಾಗಿ, ನಿರಭ್ರವಾದ ಆಕಾಶ ಪಟಲದಲ್ಲಿ ಗಂಭೀರ ಮೌನವೊಂದನ್ನು ಘನೀಭವಿಸುತ್ತಿದ್ದವು. ಎರಡೂ ಕಡೆಯ ಪರ್ವತಗಳು ನದೀ ಪಾತ್ರದ ಮೇಲೆ ತಮ್ಮ ನೆರಳನ್ನು ಚೆಲ್ಲುತ್ತಿದ್ದವು. ಎದುರಿಗೆ ಕಾಣಿಸುವ ಬಿಳಿ-ಬೂದು ಶಿಖರಗಳು ಬಾನಿಗೆ ಬರೆದ ಭವ್ಯಾಕೃತಿಗಳನ್ನು ದಿಟ್ಟಿಸುತ್ತಾ ನಿರಂತರವಾಗಿ ಪ್ರವಹಿಸುವ ಗಂಗೆಯ ಮೊರೆತವನ್ನು ಆಲಿಸುತ್ತಾ ಕೂತ ನನಗೆ ಥಟ್ಟನೆ ಶ್ರೀ ಕುವೆಂಪು ಅವರ ನೆನಪಾಯಿತು. ಅದು ಯಾಕೆ ಅನ್ನುವುದನ್ನು ಬುದ್ಧಿ ಪೂರ್ವಕವಾಗಿ ನಾನು ವಿವರಿಸಲಾರೆ. ಮನಸ್ಸಿನಲ್ಲಿಯೇ ಆ ನೆನಪಿಗೆ ಮಣಿದು, ನದೀ ತೀರದಿಂದ ಎದ್ದು, ನಮ್ಮ ಮನೆಯವರ ಜತೆಗೆ ದಡದ ಮೇಲಿದ್ದ ಗಂಗೆಯ ದೇಗುಲದ ಕಡೆ ಏರತೊಡಗಿದೆ. ಗಂಗೆಯ ದೇಗುಲದ ಅಂಗಳದಲ್ಲಿ ಆಗಲೇ ನೂರಾರು ಜನ ಆರತಿಯನ್ನು ನೋಡಲು ಸೇರಿದ್ದರು. ಅವರಲ್ಲಿ ಬಹಳ ಜನ ಬಂಗಾಲಿಗಳೇ ಇದ್ದರು. ಗಂಗೆಯ ಗುಡಿಯ ಒಳಬಾಗಿಲಿಗೆ ಹಾಕಿದ್ದ ತೆರೆ ಸರಿದು, ಅರ್ಚಕರ ಗಂಗಾಷ್ಟಕ ಪಠನದೊಂದಿಗೆ ಮಂಗಳಾರತಿಯ ಬೆಳಕು ಗಂಗೆಯ ವಿಗ್ರಹದ ಮೇಲೆ ಚಕ್ರಾಕಾರದಲ್ಲಿ ಚಲಿಸಿತು. ಗಂಗೆಯ ವಿಗ್ರಹ ಸರ್ವಾಲಂಕಾರ ಭೂಷಿತವಾಗಿದ್ದು, ಆ ಮೂರ್ತಿಯ ನಿಜಸ್ವರೂಪ ನಮಗೆ ಗೋಚರ ವಾಗುವಂತಿರಲಿಲ್ಲ. ಆದರೆ ಗಂಗೆಯ ಪ್ರಸನ್ನ ಮುಖಮುದ್ರೆ ಮಾತ್ರ ಒಂದರ್ಧ ಕ್ಷಣ ಆರತಿಯ ಬೆಳಕಿನಲ್ಲಿ ಗೋಚರಿಸಿತು. ಅರ್ಚಕರು ಗುಡಿಯಿಂದ ಹೊರಕ್ಕೆ ಬಂದು, ಎದುರಿನ ಗಂಗಾನದಿಯನ್ನು ಉದ್ದೇಶಿಸಿದ ಆರತಿ ಬೆಳಗಿದರು; ದೂರದ ಆಕಾಶದಲ್ಲಿ ಮಬ್ಬು ಮಬ್ಬಾಗಿ ಕಾಣುತ್ತಿದ್ದ ಗಂಗೋತ್ರಿಯ ಶಿಖರಗಳ ಕಡೆ ಆರತಿ ಬೆಳಗಿದರು. ಆರತಿ ಮುಗಿದ ನಂತರ ಬಹು ಸಂಖ್ಯೆಯಲ್ಲಿ ನೆರೆದ ಬಂಗಾಲಿಗಳು ಸುಶ್ರಾವ್ಯವಾಗಿ, ಗಂಗೆಯನ್ನು ಕುರಿತ ಪಾರ್ಥನೆಗಳನ್ನು ಹಾಡಿದರು. ಅನಿರ್ವಚನೀಯವಾದ ಭಾವನೆಗಳನ್ನು ತುಂಬಿಕೊಂಡು, ಗಡಗಡನೆ ನಡುಗಿಸುವ ಛಳಿಯಲ್ಲಿ ನಾವು, ಗುಡಿಯಿಂದ ಹೊರಗಿನ ಏರುವೆಯನ್ನು ಹತ್ತಿ ನಮ್ಮ ವಸತಿಯನ್ನು ಸಮೀಪಿಸಿದೆವು. ಎರಡೂ ಕಡೆ ಕತ್ತಲೆಯೇ ಹೆಪ್ಪುಗಟ್ಟಿದಂತೆ ಬೃಹದಾಕಾರವಾಗಿ ಹಬ್ಬಿದ ಪರ್ವತ ಶಿಖರಗಳಿಗೆ ನಕ್ಷತ್ರಗಳು ಆರತಿ ಎತ್ತುತ್ತಿದ್ದವು.