ವಚನ:
ವೇಣಿ ಕಿನ್ನರಿಯ ಪಿಡಿದನೆರ ಜೋಗಿ ಭಕ್ತಿ
ಪ್ರಾಣಕಲ್ಪ ಚಿಂತಮಣಿಯೆ ಎಲೆ ಜೋಗಿ
ವಾಣಿಪತಿಗೆ ನಿಲುಕದಿಹನ ಎಲೆ ಜೋಗಿ ನನ್ನ
ಪ್ರಾಣವಾದರೆ ನಿನ್ನಾ ದಯ ಎಲೆ ಜೋಗಿ ॥
ಕಲಹಪ್ರಿಯ ನಾರದನೆ ಮುನಿರಾಯ ನೀನು
ಒಲಿದು ಕೇಳು ಇವಳ ಸ್ತುತಿಯ ಮುನಿರಾಯ
ಬಲೆಗಾರರ ಮಗಳಲ್ಲವೊ ಮುನಿರಾಯ ನನ್ನ
ತಲೆಯೊಳಗಣ ಬ್ರಹ್ಮಕಾಂತಿಯು ಮುನಿರಾಯ ॥
ಇಂಥ ಸತಿಯ ಬಿಟ್ಟರಿನ್ನು ಮುನಿರಾಯ ನಮಗೆ
ಎಂಥ ಮುಕ್ತಿ ದೊರಕುವದೊ ಮುನಿರಾಯ
ಮಂತ್ರದಿಂದ ಮರುಳಾದಳೊ ಮುನಿರಾಯ ದೇ
ಶಾಂತ್ರ ಫಲವು ದಕ್ಕಿತೆಮಗೆ ಮುನಿರಾಯ ॥
ಏನೆಂದು ಹೇಳಿ ಶಿವನು ನಗುತ ಗುರುರಾಯ ರತ್ನ
ಕೆಂದಾವರೆಯ ಹೂವ ಮಾಡಿ ಗುರುರಾಯ
ಚಂದ್ರಕಾಂತಿ ಜಡಯೊಳಿಟ್ಟು ಗುರುರಾಯ ಮುಕ್ತಿ
ಮಂದಿರದೊಳಗಡಿಸಿದನು ಗುರುರಾಯ ॥
ಮರುಳ ಮಾಡಿ ಶಿರದೊಳಿಟ್ಟು ಗುರುರಾಯ ಪುಷ್ಪ
ದರಳು ಮಡಿ ಧರಿಸಿಕೊಂಡು ಗುರುರಾಯ
ಮರುಳ ಜಾತಿ ಕಂಡರೆಂದು ಗುರುರಾಯ ಶಿವನು
ಇರುಳು ಹಗಲು ಚಿಂತಿಸಿದನು ಗುರುರಾಯ ॥
ಮಡದಿ ಗಿರಿಜೆ ಕಂಡಳೆಂದು ಗುರುರಾಯ ತನ್ನ
ಜಡೆಯ ಸುತ್ತಿ ಮಡಗಿಕೊಂಡು ಗುರುರಾಯ
ಬೆಡಗಿನಿಂದ ನಡೆದು ಬರುತ ಗುರುರಾಯ ಮುನಿಯೆ
ಒಡೆಯದಿರು ಸುದ್ದಿಗಳನು ಗುರುರಾಯ ॥
ಆರು ಕಾಣಗೊಡದೆ ಬಂದು ಗುರುರಾಯ ಚಿತ್ರ
ಸೇರಿಕೊಂಡು ಅರಮನೆಯನು ಗುರುರಾಯ
ನಾರಿ ಗಿರಿಜೆ ಕಂಡಳೆಂದು ಗುರುರಾಯ ಶಿವಗೆ
ತೋರಿತಿನ್ನು ಎದೆಯ ಬಾಗಿಲು ಗುರುರಾಯ ॥
ದೇವಮನೆ ಹೊಕ್ಕರಾಗ ಗುರುರಾಯ ಚಿಕ್ಕ
ಭಾವೆಗೌರಿ ಪಾದತೊಳೆಯೆ ಗುರುರಾಯ
ಸೇವೆಮಾಡಿ ಸಲಿಸಿಕೊಂಡು ಗುರುರಾಯ ತಮ್ಮ
ಚಾವಡಿಗೆ ನಡೆದು ಬಂದು ಗುರುರಾಯ ॥
ಮುತ್ತಿನ ಸಿಂಹಾಸನದ ಮೇಲೆ ಗುರುರಾಯ ಜಗದ
ಕರ್ತ ಬಂದು ಮಂಡಿಸಿದನು ಗುರುರಾಯ
ಸುತ್ತ ಬಂದ ಮೆರೆದರಾಗ ಗುರುರಾಯ ನಮ್ಮ
ಹೆತ್ತ ಶಿವನು ಬಂದನೆಂದು ಗುರುರಾಯ ॥
ದೊಡ್ಡ ಹರಿಯು ಬ್ರಹ್ಮಾದಿಗಳು ಗುರುರಾಯ ಶಿವಗೆ
ಒಡ್ಡೋಲಗವ ಕೊಟ್ಟರಾಗ ಗುರುರಾಯ
ಗಡ್ಡಜಡೆಯ ಘನ ಮಹಾಂಶು ಗುರುರಾಯ ಕರವ
ನೊಡ್ಡಿ ಶಿವನ ಓಲೈಸಿದರು ಗುರುರಾಯ ॥
ನಿಗಮದೊಡೆಯ ಸಿಂಹಾಸನದಿ ಗುರುರಾಯ ಕುಳಿತು
ಭುಗಿಲು ಹುಟ್ಟಿತೆದೆಯೊಳಿನ್ನು ಗುರುರಾಯ
ಅಗಜೆ ಗಿರಿಜೆ ಕಂಡಳೆಂದು ಗುರುರಾಯ ಚಿಂತೆ
ಮಿಗಿಲು ಹುಟ್ಟಿ ನೋಡುತಿರಲು ಗುರುರಾಯ ॥
ಇಂಥ ಪರಮ ಗಿರಿಜೆದೇವಿ ಗುರುರಾಯ ತಮ್ಮ
ಚಿತ್ತದೊಳಗೆ ಎರಡಾಗುತಲಿ ಗುರುರಾಯ
ಹೊತ್ತು ನಿಮಿಷ ಕುಳಿತುದಿಲ್ಲ ಗುರುರಾಯ ಶಿವಗೆ
ಎತ್ತಣಿಂದ ಕೇಡು ಬಂತೊ ಗುರುರಾಯ ॥
ಎಂಟು ದಿಕ್ಕುಗಳನು ನೋಡಿ ಗುರುರಾಯ ಶಿವನು
ತುಂಟತನವ ಮಾಡಿದಾನೊ ಗುರುರಾಯ
ಗಂಟಲೊಳಗೆ ತಡೆಗಳಿಲ್ಲ ಗುರುರಾಯ ನಮಗೆ
ಕಂಟಕಗಳ ತಂದ ಶಿವನು ಗುರುರಾಯ ॥
ಮಾಯ ಮಾಡಿದ ಮರ್ತ್ಯದವರೊಳಗೆ ಗುರುರಾಯ ಶಿವನು
ಕಾಯ ಜೀವಗಳನು ಕಳೆದನೇನೊ ಗುರುರಾಯ
ಬಾಯ ತಡೆಗಳಿದ್ದುದಿಲ್ಲ ಗುರುರಾಯ ದೊಡ್ಡ
ಹಾವಳಿಯ ತಂದ ಶಿವನು ಗುರುರಾಯ ॥
ಅಳ್ಳೆದೆಯೊಳು ಸಲಿಸಿಕೊಂಡು ಗುರುರಾಯ ಶಿವನು
ವೀಳ್ಯೆಗಳನು ಬೇಡಲಿಲ್ಲ ಗುರುರಾಯ
ಕಳ್ಳನಹುದು ಬಲ್ಲ ಕೆಲಸವು ಗುರುರಾಯ ದೊಡ್ಡ
ತಳ್ಳಿಗಳನು ಮಾಡಿಕೊಂಡ ಗುರುರಾಯ ॥
ತಿಳಿದುನೋಡಲಿಲ್ಲ ಶಿವನು ಗುರುರಾಯ ಎದ್ದು
ಕುಳಿತುಕೊಂಡು ಚಿಂತಿಸುತಲಿ ಗುರುರಾಯ
ಗಳಿಲನೆದ್ದು ಸಿಂಗಿರುಸುತಲಿ ಗುರುರಾಯ ಶಿವನ
ತಿಳಿದೆನೆಂದು ನಡೆದಳಾಗ ಗುರುರಾಯ ॥
ಮೆರೆವ ದುಕುಲಾಂಬರವನುಟ್ಟು ಗುರುರಾಯ ಸರ್ವಾ
ಭರಣ ಹಾರಗಳನು ತೊಟ್ಟು ಗುರುರಾಯ
ಶರಣ ಸತಿಯರ ಕೂಡಿಕೊಂಡು ಗುರುರಾಯ ತಮ್ಮ
ಹರನ ಓಲಗಕೆ ನಡೆದಳು ಗುರುರಾಯ ॥
ಪಡೆದ ಮಗನ ಕೂಡಿಕೊಂಡು ಗುರುರಾಯ ಶಿವನ
ಮಡದಿ ಬಂದು ಪಾದಕೆರಗಲು ಗುರುರಾಯ
ತೊಡೆಯ ಮೇಲೆ ಕುಳಿತಳಾಗ ಗುರುರಾಯ ಶಿವನು
ಮಡದಿಯ ನೋಡಿ ನಗುತಲಿರ್ದ ಗುರುರಾಯ ॥
ಭಾಗೀರಥಿಯ ಜಡೆಯೊಳಿಟ್ಟು ಗುರುರಾಯ ಶಿವನು
ಹೇಗಾದಿತೊ ಜಗದೊಳಗಯೆನುತ ಗುರುರಾಯ
ಕೂಗಿ ಕದನಗಳ ಮಾಡುವಳು ಗುರುರಾಯ ಎಂದು
ಧ್ಯಾನಿಸಿದ ಚಿಂತೆಗಳನು ಗುರುರಾಯ ॥
ಸೂಚನೆಯ ಕಂಡಳಿನ್ನು ಗಿರಿಜಾತೆ ಭಾಳ
ಲೋಚನ ಶಿವನ ತಂದ ಕಳವ ಗಿರಿಜಾತೆ
ನುಚಿಕೆಗಳ ಕೊಂಬೆನೆಂದು ಗಿರಿಜಾತೆ ಶಿವನ
ಯೋಚಿಸಿ ಮಾತಾಡಿಸಿದಳು ಗಿರಿಜಾತೆ ॥
ಪದನು:
ಪರಮಗುರು ಪ್ರಾಣಲಿಂಗಿ ನೀಯೆನ್ನ ಹೊರೆದು ಪಾಲಿಸುವ ಶಿವನೇ
ತಿರುಗುತಲಿ ಆವಾವ ರಾಜ್ಯಗಳ ಚರಿಸಿದಿರಿ ಶರೀರಗಳು ಬಡವಾದವು ॥
ಪಟ್ಟಮಂಚದ ಮೇಲೆ ಶಿವನಿಗೆ ಪಟ್ಟುಪಟ್ಟಾವಳಿಯ ಹಾಸಿಕೆ
ಎಷ್ಟು ವರ್ಣದ ಪೂಜೆ ಸರ್ವಸಂಭ್ರಮಗಳನು ಮುಟ್ಟಿಹೇಳುವರಿಗಳವೆ
ಮಟ್ಟಿಹಾರುವನ ಮಾತು ಕೇಳುತ ಸುಟ್ಟರಾಜ್ಯಗಳ ತಿರುಗಿ
ಮೆಟ್ಟಿನಡೆದು ಪಾದಪದ್ಮಂಗಳು ಕಂದಿಹವು ಸೃಷ್ಟಿಪಾಲಕನೆ ನಿಮಗೆ ॥
ವೇದಶಾಸ್ತ್ರದಲಿ ತಿಳಿದು ಹರಿ ನಿಮ್ಮ ಪಾದಪದ್ಮವ ಭಜಿಸಲು
ಪೂಜಿಸಲು ಪುಷ್ಪ ಕಂದಲು ತನ್ನ ಕಣ್ಣೆಂಬ ನೈದಿಲನವೇರಿಸಿದನು
ಮಾಧವ ಶ್ರೀಕೃಷ್ಣಗೆ ಶಿವ ನಿಮ್ಮ ಮೇದಿನಿಯ ಧಾರೆಯೆರೆದು
ಹಾದಿ ಬಟ್ಟೆಗಳರಗೊಡವಿಲ್ಲದ ಅರಮನೆಯೊಳೋದಿಕೊಂಡಿರಬಾರದೆ ॥
ನರಹರಿಯು ನಯನವಿಟ್ಟು ಪೂಜಿಸುವ ಶ್ರೀಚರಣ ಕಂದಿದವೋ
ಸರಸಿಜೋದ್ಭವ ಮುಟ್ಟಿಪೂಜಿಸುವ ಶ್ರೀಮುಕುಟ ಭರದಿ ತೂಕಗಳಾದವೋ
ಬಿರುಗಾಳಿಗಳು ಬೀಸಲು ಜಡೆಯೆಲ್ಲ ಗಿರಿಯ ಮಣ್ಣುಗಳಾದವೋ
ಎರೆದು ಮಜ್ಜನ ಮಾಡಿ ದುಗುಡವನು ಬಿಡಿಸುವೆನು ಅರಮನೆಗೆ ತೆರಳಿ ಗುರುವೇ ॥
ಗುರುವೆ ಪರಶಿವನೆ ನಿಮ್ಮ ಚೆಲ್ವಿಕೆಯ ಉರಗೇಂದ್ರ ಹೇಳಲಳವೆ
ಅರುವತ್ತಾರು ಕೋಟಿ ದೈತ್ಯರನು ಕೊಲುವಾಗ ಕರಕರನೆ ಕಂದಲಿಲ್ಲ
ಬರಿಯ ರಾಜ್ಯಗಳ ತಿರುಗಿ ಶಿವ ನಿಮ್ಮ ಸಿರಿಮೊಗವು ಕಂದಲೇಕೆ
ಅರಿಯಬಾರದು ನಿಮ್ಮ ದುಗುಡಗಳ ನಮಗಿನ್ನು ಮರೆ ಮಾಡಲಿ ಬೇಡವಯ್ಯ ॥
ಕುಲಗಿರಿಗಳೊಳು ತಿರುಗುತಾ ಶಿವ ನಿಮ್ಮ ಸಲೆ ಸಿದ್ಧರೊಳಗಾಡಿದೊ
ಹಲವು ಮಂತ್ರಗಳನು ಕಲಿತು ಜಾಲೇಂದ್ರನ ತಲೆಯ ನೆಲದೊಳು ಕೆಡಹಿದೊ
ಉಲಿದು ಬೊಬ್ಬೆಗಳಿಕ್ಕುತ ಇಂದ್ರನ ತಲೆ ಮಣ್ಣ ಕಚ್ಚುತಿರಲು
ತೊಲಗದೆ ರಕ್ತ ರಣಮಂಡಲಂಗಳ ಕಂಡು ಉಲಿಕಿ ಮನದೊಳು ಬೆದರಿದೊ ॥
ಭಸ್ಮಸೂರಗೆ ನಿಮ್ಮಯ ಉರಿಹಸ್ತವ ವಶಮಾಡಲಾಕ್ಷಣ
ಪಶುಮಾನವ ದೆಸೆಗೆಡಿಸಿದಾರ್ಭಟವೊ ಪುಸಿಯಾಡಲಿ ಬೇಡವಯ್ಯ
ಶಶಿಮುಖಿಯ ರೂಪತಾಳಿ ವಿಷ್ಣುವು ಭಸ್ಮಸುರನ ಕೊಲ್ಲುತ
ಮಿಸುನಿ ಪುತ್ಥಳಿ ಹೆಣ್ಣುರೂಪಗಿ ತೋರಿದರೆ ಒಸೆದು ಕೂಡಿದ ಭ್ರಮೆಗಳೋ ॥
ಮಂತ್ರಿ ಬಸವಯ್ಯ ಕೇಳಿ ಗೌರಮ್ಮ ಇಂತು ಹಾಸ್ಯಗಳನಾಡಿ
ಸಂತೈಸಿಕೊಂಡು ಇರಲಾರದೆ ಸಭೆಯೊಳಗೆ ಮುಂತೆ ಬಯಲನೆ ಮಾಡುತ
ಸಂತತ ಗುರುಸಂಗನ ತೊಡೆಯೊಳಗೆ ಅಂತು ಬಲ್ಮೆಯಲಿ ಕುಳಿತು
ಇಂತು ಸೈರಣೆ ಈತಗೇಕೆಂದು ಕೇಳಿದಳು ಅಂತರಂಗದ ಬಲ್ಮೆಯಲಿ ॥
ವಚನ:
ಈಶ ಶಿವನು ನೋಡಿ ನಗುತ ಎಲೆ ದೇವಾ ನಿಮ್ಮ
ಆಸೆ ಬಾಸೆ ಇಳಿಯಿತಿನ್ನು ಎಲೆ ದೇವಾ
ದೇಶ ಸೀಮೆ ತಿರುಗಿ ಬಂದೆ ಎಲೆ ದೇವಾ ನಿಮಗೆ
ಏಸು ಪೀಡೆ ಸೋಕಿದಾವೊ ಎಲೆ ದೇವಾ ॥
ಕಾಗೊಮೋರೆ ನಾರಂದನು ಎಲೆ ದೇವಾ ನಿಮಗೆ
ಜೋಗಿ ರೂಪ ಧರಿಸಿಕೊಂಡು ಎಲೆ ದೇವಾ
ಸಾಗಿ ರಾಜ್ಯ ತಿರುಗುವಾಗ ಎಲೆ ದೇವಾ ದೊಡ್ಡ
ಮೂಗಪೀಡೆ ಸೋಂಕಿತೇನೊ ಎಲೆ ದೇವಾ ॥
ಸುತ್ತಿ ಬಳಸಲಿ ತಿರುಗುವಾಗ ಎಲೆ ದೇವಾ ದೇಹ
ಬಿತ್ತಿತಿನ್ನು ಅಕ್ಕಟಕಟಾ ಎಲೆ ದೇವಾ
ಸತ್ತ ಪೀಡೆ ಏಸು ಉಂಟೊ ಎಲೆ ದೇವಾ ನಿಮ್ಮ
ನೆತ್ತಿ ಜಡೆಯ ಹೊಕ್ಕವೇನೊ ಎಲೆ ದೇವಾ ॥
ಬಣ್ಣವಳಿದು ಶರೀರವಿಳಿದು ಎಲೆ ದೇವಾ ನಿಮ್ಮ
ಕಣ್ಣದೃಷ್ಟಿ ತಗ್ಗಿತ್ಯಾಕೆ ಎಲೆ ದೇವಾ
ಮಣ್ಣು ಮಸಣ ತಿರುಗುವಾಗ ಎಲೆ ದೇವಾ ದೊಡ್ಡ
ಹೆಣ್ಣು ಪೀಡೆ ಸೋಂಕಿತೇನೊ ಎಲೆ ದೇವಾ ॥
ಕೆಟ್ಟ ಮೋರೆಯ ನಾರಂದನು ಎಲೆ ದೇವಾ ನಿಮ್ಮ
ಬೆಟ್ಟದೊಳಗೆ ಹೊಗಿಸಿದಾನೊ ಎಲೆ ದೇವಾ
ರೊಟ್ಟಿ ಹಿಂಡಿ ಪಲ್ಲೆಕಾಯಿ ಎಲೆ ದೇವಾ ನಿಮ್ಮ
ಮುಟ್ಟಿ ಜಡೆಯ ಹೊಕ್ಕಿತೇನೊ ಎಲೆ ದೇವಾ ॥
ಜೂಟಕಾರ ಮುನಿಯು ನಿಮ್ಮ ಎಲೆ ದೇವಾ ಹಾಳು
ತೋಟದೊಳಗೆ ಹೊಗಿಸಿದಾನೊ ಎಲೆ ದೇವಾ
ಸೋಟಿ ಹರುಕ ಮೂಳ ಪೀಡೆ ಎಲೆ ದೇವಾ ನಿಮ್ಮ
ಕೂಟದೊಳಗೆ ಕೂಡಿತೇನೊ ಎಲೆ ದೇವಾ ॥
ಏಳು ಎರಡು ಯುಗದಲಿಂಥ ಎಲೆ ದೇವಾ ಒಂದು
ಕಾಲದೊಳು ಗುರುತನರಿಯೆ ಎಲೆ ದೇವಾ
ಬಾಲಿ ಬದುಕುವ ವೇಳೆಯಲ್ಲಿ ಎಲೆ ದೇವಾ ನಮ್ಮ
ಕೂಳ ನೀರ ಕೆಡಿಸ ಬಂತೊ ಎಲೆ ದೇವಾ ॥
ಎಷ್ಟು ಬಲಿಯ ಕೊಟ್ಟರಿನ್ನು ಎಲೆ ದೇವಾ ಬಹಳ
ಕಷ್ಟವಿನ್ನು ಬಿಡುವುದಲ್ಲ ಎಲೆ ದೇವಾ
ಭ್ರಷ್ಟ ಮುನಿಯು ಕೆಡಿಸಿದಾನು ಎಲೆ ದೇವಾ ಪೂರ್ವ
ದೃಷ್ಟವಿನ್ನು ಬದುಕುವುದು ಎಲೆ ದೇವಾ ॥
ಆವ ಕಾಲದಲ್ಲಿ ನಮಗೆ ಎಲೆ ದೇವಾ ನಿಮ್ಮ
ಗೋವಿಂದಜರ ಹಗಯು ಎಲೆ ದೇವಾ
ಸಾವು ನೋವು ಬೇನೆಗಳನು ಎಲೆ ದೇವಾ ಕಂಡು
ತಾವು ನೋಡಿ ನಗುವರಿನ್ನು ಎಲೆ ದೇವಾ ॥
ಎಂಥ ವಿಧಿಯು ನಮಗೆ ಬಂತೊ ಎಲೆ ದೇವಾ ಜಗದ
ಜಂತು ಮಾನವರ ಪಾಡೇನೆಲೆ ದೇವಾ
ಎಂತು ಮಾಡಿ ಬಿಡದಿದ್ದರೆಲೆ ದೇವಾ ನಮಗೆ
ಇಂತು ಮೂರು ಬಟ್ಟೆ ನಾವು ಎಲೆ ದೇವಾ ॥
ಸಂಗತ್ಯ:
ದೇವತೆಗಳು ಕೂಡಿ ಸೇರಲಾರದೆ ನಿಂದ
ಜೀವಕೆ ಮೂಲ ಮಾಡಿದರು
ಆವ ಪರಿಯಲಿಂದ ಶಿವ ನೀವು ಅಳಿದಾರೆ
ತಾವೆ ರಾಜ್ಯವನ್ನಾಳ್ವೆವೆನುತ ॥
ಕೋಕ ಮುನಿಯು ನಾರಂದ ನೋಡಿ ಪ್ರಾಣದ
ಏಕೋ ಶಿವನ ಕರೆದೊಯ್ದು
ಲೋಕದ ಮನುಜಾರಿಗಳವಲ್ಲ ರೂಪಿಗೆ
ಸೋಕಿದವೇನೊ ಕಾಲಮೃತ್ಯು
ಹಲವು ಮಂತ್ರವ ಮಾಡಿ ಬಿಡಿಸುವ ವೈದ್ಯಗೆ
ತಲೆಯೆಲ್ಲ ಕಣ್ಣಾಗಬೇಕು
ನೆಲೆಯಿಲ್ಲ ನಮ್ಮಯ್ಯ ಸಂಸಾರ ಬದುಕಿಗೆ
ಕಲಹ ಕಂಟಕ ಮುಂದೆ ನಮಗೆ ॥
ಆವಾವ ಕಂಟಕ ಬಂದರೆ ಉಣಬೇಕು
ದೇವ ನೀ ನಡೆ ಅರಮನೆಗೆ
ಸೇವೆಗಳನು ಮಾಡಿ ಸಕಲುಪಚರದಿಂದೆ
ನೋವು ಬ್ಯಾನಿಯ ಬಿಡಿಸುವೆನು ॥
ಸಕಲ ಪೀಡೆಯು ನಿಮ್ಮ ಶಿಖದಲೆಯೊಳಗಿಂದು
ಸಕುನಗಾರ್ತಿಯರು ಪೇಳಿದರು
ಅಖಿಳರಿಗಳವಲ್ಲ ಮಕುಟವ ಬಿಡಿಸಲು
ವಿಕಳತೆ ನಾ ಬಿಡಿಸುವೆನು ॥
ಜಡೆದಲೆಯನು ಬಿಚ್ಚಿ ಒಡೆದು ಹಿಕ್ಕನೆ ಮಾಡಿ
ತೊಡೆವೆನು ಸಂಪಿಗೆ ಎಣ್ಣೆಗಳಾ
ಅಡಕಳವೆಯನಿಕ್ಕಿ ಸುಡುವ ನೀರೆರೆದರೆ
ಕಡೆಗೆ ನಿಲ್ವದು ನಿಮ್ಮ ಮೃತ್ಯು ॥
ಎಣ್ಣೆ ಮಜ್ಜನಗಳು ಮಾಡಲು ಶರೀರವು
ಬಣ್ಣ ಬಾಹುದು ನಿಮಿಷದಲ್ಲಿ
ಕಣ್ಣಿಗಂಜನಗಳನೆಚ್ಚಲು ಸೋಂಕಿದ
ಹೆಣ್ಣು ಪೀಡೆಯು ಕಡೆ ನಿಲ್ಲುವುದು ॥
ಅವರಿವರೇತಕೆ ಭವಹರ ರುದ್ರನೆ
ಜಯ ಜಯ ನಿಮ್ಮಯ ಶರೀರ
ಯುವತಿಗಿರಿಜೆಯ ಮಾತಿಗೆ ಶಿವ ನಸುನಗುತ
ಇವಳೇನ ಬಲ್ಲಾಳೊ ಎನುತ ॥
ಆರಾರು ಅರಿಯದ ಮೀರಿದ ಕಳವನು
ಗೌರಿಗೆ ಹೇಳಿದರಾರು
ಪೋರನಹುದು ಚಿಕ್ಕನಾರಂದ ಮುನಿಯು
ಹಣ್ಣಿತು ಮುಂದಣ ಕಥನ ॥
ಬಣ್ಣನೆ ಮಾತುಗಳಾಡುತ ನಾರಂದ
ಕಣ್ಣೀಲಿ ಮೀಟಿದನೇನೊ
ಹೆಣ್ಣಿನ ಮಾತನು ಇವಳೇನು ಬಲ್ಲಳೊ
ಹಣ್ಣಿತು ಮುಂದಣ ಕಥನ ॥
ಕತನಗಳನು ಇಕ್ಕಿ ಕಡೆಯಲ್ಲಿ ತಾ ಕುಳಿತು
ಹಿತಕಾರಿಯಾಗಿ ನಿಂದಿಹನು
ಕುತಕದ ಮಾತುಗಳ ಇವಳೇನ ಬಲ್ಲಳೊ
ಯತಿಮುನಿ ಜಾಡಿಗನಹುದು. ॥
ಗಂಭೀರ ಮುನಿಯೆಂದು ರಂಭಿಸಿ ಕರದೊಯ್ದೆ
ರಂಭೆಯ ತಂದುದ ಮಾಜಿದರೆ
ತುಂಬಿದೋಲಗದೊಳು ಅಂಬಿಗಿತ್ತಿಯು ಎಂದು
ಸಿಂಬೆಯ ಮಗನು ಸೂಚಿಸಿದ ॥
ರಂಡೆಯ ಮಗನು ನಾರಂದಮುನಿಯೆಂದು
ಕೆಂಡಗಣ್ಣಿನ ಶಿವ ನಗುತ
ಹೆಂಡರಿಬ್ಬರ ಜಗಳ ನೋಡಲುಬೇಕೆಂದು
ಮಂಡಿಸಿದನು ಸರ್ವ ಜನರ ॥
ಜಗಳವಾಡಲು ಕಂಡು ಆಗ ಉಣ್ಣುದ ಬಿಟ್ಟು
ನಗುವರು ಕುಹಕದ ನುಡಿಗೆ
ಅಗಜೆಗೆ ಗಂಗೆಗೆ ಮಿಗಿಲಾಗಿ ಬೀಳಲು
ಜಗವೆಲ್ಲ ನೆರೆದುದು ಮುಂದೆ ॥
ಗಿರಿಜೆಯ ನುಡಿಗೇಳಿ ಹರ ನಸುನಗುತಲಿ
ಇವರರ್ತಿ ನೋಡಬೇಕೆನುತ
ಮರೆಮಾಡಿ ಮಾತೊಂದು ಅರುಹಿ ನೋಡುವೆನೆಂದು
ಪರಶಿವ ನುಡಿದಾ ಪಾರ್ವತಿಗೆ ॥
ಪದನು:
ಪ್ರಾಣದೊಲ್ಲಭೆ ಕೇಳು ಗಿರಿಜಾತೆ ಜಾಣತನದ ನುಡಿಗಳ
ಹೂಣಿಸಿ ಸಭೆಯೊಳಗೆ ಹುಸಿಮಾತನಾಡವರೆ ಕಾಣದುದ ನುಡಿವರೇನೆ ॥
ಎಲ್ಲಿಯ ಮಾತುಗಳು ಗಿರಿಜಾತೆ ನಾನೊಂದು ಮಲ್ಲಿಗೆಯ ಹೂವ ತಂದೆ
ಸಲ್ಲಲಿ ಶಿವಗೆಂದು ಅರ್ಪಿತವ ಮಾಡಿದರೆ ಬಲ್ಲವರ ಜರಿವರೇನೆ
ಎಲ್ಲರು ಮುಡಿವುದಲ್ಲ ಗಿರಿಜಾತೆ ಅಲ್ಲಮಪ್ರಭುವೇ ಬಲ್ಲ
ಮಲ್ಲಿಕಾರ್ಜುನದೇವ ಮಂಡೆಯೊಳು ಧರಿಸಿದನು ಚಲ್ವಗಿರಿಜಾತೆ ಕೇಳು ॥
ದೇಶದೇಶವ ತಿರುಗುತ ಎಲೆಗೌರಿ ದಾಸಾಳದ ಹೂವ ತಂದೆ
ಈಶ್ವರನ ಜಡೆಯೊಳಗಿಟ್ಟು ಅರ್ಪಿಸಿದರೆ ಹಾಸ್ಯಮಾಡಿ ಜರಿವರೇನೆ
ಮೀಸಲಳಿಯದ ಪುಷ್ಪವು ಗಿರಿಜಾತೆ ಹೇಸಿಮಾನವರಿಗೆ ಸಲ್ಲದು
ದೋಷದುರ್ಗುಣಗಳು ಅಳಿದಂತೆ ಪರಶಿವನ ಬಾಸಿಂಗದರಳು ಕಾಣೆ ॥
ಮೇದಿನಿಯ ತಿರುಗಿ ಬರುತಾ ನಾನೊಂದು ಕೇದಗೆಯ ಹೂವ ತಂದೆ
ಸಾದು ಕಸ್ತೂರಿ ಪುಣುಗು ಜವಾದಿಗೆಣೆಯೆಂದು ಮಾದೇವಗರ್ಪಿಸಿದೆವು
ಕಾದು ಕರಗಿದ ಚಿನ್ನಕೆ ಎಲೆಗೌರಿ ವ್ಯಾಧಿ ವಿಗ್ನಗಳ್ಯಾತಕೆ
ಓದುವ ಗಿಳಿ ನನ್ನ ಅರಮನೆಯ ಕೋಗಿಲೆಯ ಗಾದೆನುಡಿಗಳ ನುಡಿವರೆ ॥
ಮಡದಿ ಗಿರಿಜಾತೆ ಕೇಳು ಎಲೆಗೌರಿ ಬೆಡಗು-ಬಿಂಕವು ಸಲ್ಲದು
ಬಿಡದೆ ಎಂಬತ್ತು ನಾಲ್ಕು ಲಕ್ಷ ಜೀವಿಗಳೆಲ್ಲ ಅಡಗೆರಗಿ ಶರಣೆಂಬರೇ
ಗುಡುಗು ಮಿಂಚಿನ ಸಿಡಿಲಿನಾ ಗರ್ಜನೆಯ ಒಡನೆ ಹುಟ್ಟಿದ ಪುಷ್ಪವ
ದೃಢದಿಂದ ಶಿವನ ಮುಡಿಯೊಳಗಿಟ್ಟೆವು ಕಡುಚೆಲ್ವೆ ಗಿರಿಜೆ ಕೇಳು ॥
ಹರನಿಂತು ಮರೆಮಾತನು ಗುರುರಾಯ ಗಿರಿಜೆಯೊಡನೆ ಪೇಳಲು
ಅರಿಯಾದಕಳವಲ್ಲ ಅಮ್ಮಾಜಿ ಪಾರ್ವತಿಯು ಧರೆಯು ಮೂಲೋಕದೊಳಗೆ
ಗಿರಿಜೆ ಗಂಗೆಯ ಜಗಳವ ಗುರುರಾಯ ಇರದೆ ಬಸವಗೆ ಪೇಳಲು
ತರುಳೆ ಗಂಗೆಯ ತಂದ ಸಂಧಿ ಸಮಾಪ್ತವು ಗುರು ಸಂಗಮೇಶ ಜಯತು ॥
ಸಂಗತ್ಯ:
ಮುತ್ತೈದೆ ನೀಲಮ್ಮ ಮುನಿಮಹಾಜೋಗಿಯ
ಪುತ್ಥಳಿಯ ರೂಪ ಬಣ್ಣಿಸುತ
ಮರ್ತ್ಯಲೋಕದ ಮಹಾಮಹಿಮ ಬಸವನೊಳು
ಚಿತ್ರದ ಕತೆಯ ಪೇಳಿದಳು ॥
ಹರನವಾಹನ ಜಯ ಶರಣುಬಸವ ಜಯ
ಮರಣ ವಿದೂರನೆ ಜಯತು
ಕಿರಣಕೋಟಿಯೆ ಜಯ ಮರಣಪಾಲಿಪ ಜಯ
ಕರುಣಸಾಗರ ಜಯ ಜಯತು ॥
ನಂದಿವಾಹನ ಜಯ ಬಂಧಮೋಕ್ಷನೆ ಜಯ
ಒಂದು ಮೂರಾದನೆ ಜಯತು
ಮಂದಾಲಗಿರಿಗಳ ನಂದವೆ ಜಯ ಗಂಗೇ
ತಂದ ಸಂಧಿಗೆ ಶರಣಾರ್ಥಿ ॥
ಸಂಧಿ 2ಕ್ಕಂ 2, ವಚನ 41, ಜೋಗಿ ಪದನು 17,
ಸಂಗತ್ಯ. 76, ಉಭಯಂ 334 ಕ್ಕಂ ಮಂಗಳ ಮಹಾ ಶ್ರೀ ಶ್ರೀ
Leave A Comment