ಕಂದ :

ಅಂಬರದ ಗಂಗೆಯನು ಬೊಂಬೆರೂಪನೆ ಮಾಡಿ
ಅಂಬಿಗ ಶರಣನಾತ್ಮಜಳೆನಿಸುವ
ಕುಂಭಿನಿಗೆ ಚೋದ್ಯವೆನಿಸುವ ಶಿವಗಂಗೆಯನು
ಹಂಬಲಿಸಿ ತಂದ ಹರುಷಾಬ್ದಿಕಥೆಯ ೧

ಆಕಾಶಗಂಗೆಯನು ಏಕರೂಪನೆ ಮಾಡಿ
ಸಾಕಾರ ರತ್ನಗಿರಿಯೊಳಗಿರಿಸುತ
ಓಂಕಾರರೂಪ ಶಿವ ಜೋಗಿರೂಪನೆ ತಾಳಿ
ಬೇಕೆಂದು ತಂದ ಶ್ರೀಗಂಗೆ ಕಥೆಯ  ೨

ವಚನ : ರಾಗ : ತೆಲುಗ ಕಾಂಬೋದಿ

ಗಂಗೆಯನು ತಂದ ವಚನವ ಕೇಳಿ ಜನವೆಲ್ಲ | ನಮ್ಮ
ಸಂಗಮೇಶ ದೈವಕಿನ್ನು ಮಿಗಿಲಿಲ್ಲ || ಪಲ್ಲ

ಗುರುವೆ ನಿಮ್ಮ ಚರಣಕಮಲ ಗುರುರಾಯ | ಮುಕ್ತಿ
ಪರಮ ಪದವನಿತ್ತು ರಕ್ಷಿಪುದು ಗುರುರಾಯ
ವರವನಿತ್ತು ಕರುಣಿಸುತಲಿ ಗುರುರಾಯ | ಗಂಗೆ
ಗಿರಿಜೆ ಜಗಳ ಕೇಳಿ ಶಿವನು ಗುರುರಾಯ ೧

ಎನ್ನ ಗುರುವೆ ಕೇಳೈ ನಿಮ್ಮ ಗುರುರಾಯ | ಸಂ
ಪನ್ನೆ ನೀಲಲೋಚನೆಯು ಗುರುರಾಯ
ತನ್ನ ಪುರುಷ ಬಸವೇಶ್ವರಗೆ ಗುರುರಾಯ | ಮತ್ತೆ
ವರ್ಣಿಸಿ ಪೇಳಿದಳು ಕಥೆಯ ಗುರುರಾಯ ೨

ಎಲ್ಲ ಲೋಕ ಭುವನಸ್ಥಲಕೆ ಗುರುರಾಯ | ಮುಕ್ತಿ
ಕಲ್ಯಾಣ ಪಟ್ಟಣದೊಳಗೆ ಗುರುರಾಯ
ಬಲ್ಲಿದ ಬಸವೇಶ ತನ್ನ ಗುರುರಾಯ | ಪ್ರಾಣ
ದೊಲ್ಲಭೆಯು ಕೇಳುತಿರ್ದ ಗುರುರಾಯ       ೩

ನೀಲಾಂಬಿಕೆ ನೀನು ಪೇಳು ಎಲೆ ಹೆಣ್ಣೆ | ಶಿವನು
ಬಾಲೆ ಗಂಗೆ ತಂದ ಕಥೆಯ ಎಲೆ ಹೆಣ್ಣೆ
ಆಲಿಸುವೆನು ಕರ್ಣದಲ್ಲಿ ಎಲೆ ಹೆಣ್ಣೆ | ಮುಕ್ತಿ
ಶೀಲವಂತೆ ಭಕ್ತಿಕಾಂತೆ ಎಲೆ ಹೆಣ್ಣೆ   ೪

ಅರಸಿ ನೀಲರತ್ನವೇಣಿ ಎಲೆ ಹೆಣ್ಣೆ | ನಮ್ಮ
ಪರಮ ಗಿರಿಜೆಗಂಗೆ ಜಗಳ ಎಲೆ ಹೆಣ್ಣೆ
ಹರನು ಸಂತೈಸಿದ ಕಥೆಯ ಎಲೆ ಹೆಣ್ಣೆ | ಅಮೃತ
ಸುರಿಯೆ ಕರ್ಣಗಳಿಗೆ ನೀನು ಎಲೆ ಹೆಣ್ಣೆ        ೫

ಪುರುಷ ಬಸವೇಶ್ವರನ ನುಡಿಗೆ ನೀಲಮ್ಮ | ಬಹಳ
ಹರುಷವೇರಿ ಲಿಂಗದೊಳಗೆ ನೀಲಮ್ಮ
ಅರಸಿ ಗಂಗೆಗೌರಿ ಜಗಳ ನೀಲಮ್ಮ | ಗಂಡ
ಗೊರೆದು ಪೇಳಿದಳು ಕಥೆಯ ನೀಲಮ್ಮ ೬

ಮೂಲಮಂತ್ರ ಪ್ರಣಮರೂಪ ಬಸವಯ್ಯ | ಪೇಳ್ವೆ
ಲಾಲಿಸಿನ್ನು ರತ್ನಮಣಿಯೆ ಬಸವಯ್ಯ
ಆಲಿನಟ್ಟು,ಲಿಂಗದೊಳಗೆ ನೀಲಮ್ಮ | ತನ್ನ
ಶೂಲಧರನ ಸ್ತುತಿ ಮಾಡಿದಳು ನೀಲಮ್ಮ     ೭

ಶಿವನೆ ನಿಮ್ಮ ಸ್ತುತಿಯ ಮಾಳ್ಪೆ ಲಿಂಗಯ್ಯ | ಎನ್ನ
ಭವದ ಕರ್ಮಕಳೆದು ಸಲಹೊ ಲಿಂಗಯ್ಯ
ಯುವತಿ ಗಿರಿಜೆ ನೀವಲ್ಲದೆ ಲಿಂಗಯ್ಯ | ಇನ್ನು
ಭುವನದೊಳಗೆ ದೈವವಿಲ್ಲ ಲಿಂಗಯ್ಯ         ೮

ಶಿವನ ಭಕ್ತ ಲಾಲಿಸಿನ್ನು ಬಸವಯ್ಯ | ಒಂದು
ನೆವದಿ ಬಂದ ಜಗಳ ಕತೆಯ ಬಸವಯ್ಯ
ವಿವರದಿಂದ ಕೇಳ್ದವರಿಗೆ ಬಸವಯ್ಯ | ಅಮೃತ
ದ್ರವಿಸುವುದು ಬಾಳುವಂತೆ ಬಸವಯ್ಯ        ೯

ಸಂಗನ ಶರಣನೇ ಕೇಳು ಬಸವಯ್ಯ | ಶಿವನು
ಗಂಗೆ ತಂದ ಕತೆಗಳನು ಬಸವಯ್ಯ
ಸಂಗತ್ಯ ವಚನ ಪದದಿ ಬಸವಯ್ಯ ಶಿವನು | ಮೂ
ರಂಗದಲ್ಲಿ ಕೃತಿಯ ಕೇಳು ಬಸವಯ್ಯ         ೧೦

ಮುಂದೆ ಕೇಳು ಮುಕ್ತಿಧರನೆ ಬಸವಯ್ಯ | ಭುವನ
ಕೊಂದು ರತ್ನ ರಜತಾದ್ರಿಯು ಬಸವಯ್ಯ
ಸಂದ ಶರಣ ಭಕ್ತಗಣದಿ ಬಸವಯ್ಯ | ಮುಕ್ತಿ
ಸಿಂಧು ನೀನೆ ಮುನಿಗಳೊಡೆಯ ಬಸವಯ್ಯ  ೧೦

ಪದನು :

ವೃಷಭವಾಹನೆ ಕೇಳು ಬಸವಯ್ಯ ಶಶಿಧರನ ಒಡ್ಡೋಲಗ
ಮುಸುಕಿ ಹತ್ತೆಂಟು ಕೋಟಿ ದೇವದೇವಾದಿಗಳು ಪಸರಿಸಿತು ವಾಲಗದೊಳು || ಪಲ್ಲ

ದೇವಗಣ ಭಕ್ತಗಣವು ಬಸವಯ್ಯ ಕಾಮಪಿತರಹರಿಗಳು
ದೇವೇಂದ್ರ ಸುರಮುನಿಯು ದಿಕ್ಕುಪಾಲಕರೆಲ್ಲ ತೀವಿಕೊಂಡಿಹುದೋಲಗದಿ
ಜಾವ ತಿಥಿ ಗಳಿಗೆಗಳನು ಹೇಳುವ ಜೋಯಿಸ ಬ್ರಸ್ಪತಿಗಳು
ಕೋವಿದ ನಂದಿ ಭೃಂಗಿ ವೀರಭದ್ರಾದಿಗಳು ತೀವಿಕೊಂಡಿಹುದೋಲಗದಿ ೧

ವಾಮಭಾಗದಲಿ ವಿಷ್ಣು ಬಲದಲ್ಲಿ ಆ ಮಹಾನವಬ್ರಹ್ಮರು
ವ್ಯೋಮಕೇಶರ ನಟ್ಟನಡುವೆ ನಿಸ್ಸೀಮನು ಭೂಮಿಯಾಕಾಶದೊಡೆಯ
ಸೋಮಸೂರ್ಯರು ಕೋಟಿಯು ನವಗ್ರಹರು ಸ್ತೋಮ ಸ್ತೋಮದಲ್ಲಿದ್ದರು
ಕೋಮಲಾಂಗದ ಮಂತ್ರಶಕ್ತಿಯರು ಭಕ್ತಿಯರು ಕಾಮಹರನೋಲಗದೊಳು ೨

ಕಿನ್ನರರು ಕಿಂಪುರುಷರು ಬಸವಯ್ಯ ಪನ್ನಗಧರರೆಲ್ಲರೂ
ಮುನ್ನವೋಲೈಸಿದ ಶರಣಭಕ್ತಾದಿಗಳು ಸನ್ನಿಧಿಯೊಳೊಪ್ಪುತಿಹರು
ಚೆನ್ನಬಸವಯ್ಯ ಕೇಳಿ ಗುರುರಾಯ ತನ್ನೊಳಗೆ ಒಂದು ನೆನೆದು
ಕನ್ನೆ ಗೌರಿಯ ನೋಡಿಯೆನ್ನ ಪ್ರಾಣವೆ ಎಂದು ಮನ್ನಿಸುತ ಮನೆಗೆ ಕಳುಹಿ ೩

ತೊಡೆಯ ಮೇಲಣ ಮಡದಿಯ ಗುರುರಾಯ ಒಡನೆ ಮುಂಡಾಡಿಯಪ್ಪಿ
ಪೆಯಲಿಲ್ಲವು ಗಿರಿಜೆ ತಿರುಕಮಕ್ಕಳನೆಂದು ನುಡಿದ ತನ್ನಾತ್ಮದಲ್ಲಿ
ಒಡವೆ ವಸ್ತುಗಳ ನೋಡಿ ಇನ್ನೊಬ್ಬ ಮಡದಿಯನು ತರುವೆನೆನುತ
ಗಡಬಡಿಸುತಿರ್ದನೊಡ್ಡೋಲಗವ ಕಳುಹಿದರೆ ತಡೆಯದೆ ಬಯಲಾದರು ೪

ಎಲ್ಲರನು ಕಳುಹಿಕೊಡುತ ಗುರುರಾಯ ಬಲ್ಲಿದ ನಾರಂದನಾ
ಮೆಲ್ಲನೆ ಕೈವಿಡಿದು ಏಕಾಂತ ಸ್ಥಳದೊಳಗೆ ಅಲ್ಲಿ ಮೂರ್ತಗಳ ಮಾಡಿ
ಚೆಲ್ವ ನಾರದನೆ ಕೇಳು ನೀ ಮುನ್ನ ಎಲ್ಲ ರಾಜ್ಯಗಳ ಬಲ್ಲೆ
ಕಲ್ಲುಗುಂಡು ಗಿರಿಯು ಗವ್ವರದೊಳಗಿರುವ ಬಲ್ಲವರ ನೋಡಬೇಕು        ೫

ಬೆಸಸಿದರೆ ಗುರುರಾಯಗೆ ನಾರಂದ ಮಿಸುನಿ ಹಾವುಗೆಯ ತಂದು
ಹೊಸೆದು ಜಡೆಗಳ ಮಾಡಿ ಭಸಿತ ಸರ್ವಾಂಗದಲಿ ವಿಷದ ಹಾವುಗಳ ಧರಿಸಿ
ಎಸೆವ ಕಂಥೆಗಳ ತೊಟ್ಟು ಪಣೆಯೊಳಗೆ ಮಸಣ ಬೂದಿಗಳನಿಟ್ಟು
ಶಶಿಮುಖಿಯ ತಗರುವುದನು ಉಸುರದೆ ನಾರದಗೆ ಮುಸುಕಿಲಿ ಮಾಡಿಕೊಂಡು    ೬

ತನುಮನದ ಪ್ರಾಣಲಿಂಗಿ ಕೇಳಿನ್ನು ಮುನಿಯವತಾರದ ಜೋಗಿ
ಜನವಶ್ಯ ರಾಜವಶ್ಯಗಳೆಂಬ ಬೂದಿಯನು ಕೊನೆಯುಗುರಿನೊಳಗಡಸಿ
ದಿನ ವಾರ ಮೋರ್ತಗಳನು ತಾ ತನ್ನ  ಮನದೊಳಗೆ ತಿಳಿದುಕೊಳುತ
ಘನಗುರು ಸಂಗಮೇಶ್ವರಲಿಂಗ ತೆರಳಿದನು ಮುನಿ ನಾರಂದನ ಕೂಡಿ    ೭

ಸಂಗತ್ಯ :

ಶೂಲಿಯ ಶರಣನೆ ಲಾಲಿಸು ಮುಕ್ತಿಗ
ಳಾಲಯಕಧಿಪತಿಯರಸಾ
ಮೂಲೋಕದರಸಿಯು ಬಾಲೆ ಶ್ರೀಗೌರಿಯ
ಮೇಲೆ ಗಂಗೆಯ ತಂದ ಶಿವನು      ೧

ರೂಪಿಲ್ಲದವನಾ ಮಗನ ಸಖನಾತ್ಮಜೆ
ನೆಪದಿ ರಕ್ಷಿಪಳವಳಾ
ಅಪರಂಪರ ಶಿರದೊಳಗಿಟ್ಟ ಗಂಗೆಯ
ಗೋಪತಿಯರಸ ಕೇಳ್ಪುರುಷ        ೨

ನಾಲ್ಕೊಂದು ಮಕ್ಕಳ ಪಡೆದ ಮಹಿಮೆಯೊ
ಳಾಕಾರವಾಧನಾತ್ಮಜನ
ಸೋಕಲು ಪಾಪನಿರ್ಲೇಪವ ಮಾಡಿದ
ಓಂಕಾರ ಪ್ರಣಮಸ್ವರೂಪ  ೩

ಸಂಗನಬಸವಯ್ಯ ಲಿಂಗಮೂರುತಿ ಕೋಟಿ
ಅಂಗಜ ರೂಪಿನ ಜೋಗಿ
ಬಂಗಾರ ಪುತ್ತಳಿ ಗಂಗೆಯ ಶಿವ ತಂದ
ಶೃಂಗಾರ ಕಥೆಯ ಕೇಳುವುದು      ೪

ಮೆಟ್ಟುವ ಹಾವುಗೆ ಮತಿಯೊಳದೃಶವ
ಇಟ್ಟಾನು ತನ್ನಯ ಪಣೆಗೆ
ಪಟ್ಟಪಟ್ಟಾವಳಿ ಜಿಬಿ ನಾಣ್ಯದ ಕಂಥೇ
ತೊಟ್ಟಾನು ಮಲೆಯಾಳ ಜೋಗಿ    ೫

ಆರಾರಿಗಳವಲ್ಲ ಅಪರಂಜಿ ಮುನಿರಾಯ
ಭಾರಿ ಕಿನ್ನರಿಗಳ ಪಿಡಿದು
ಮೂರುಲೋಕದ ಮುನಿಗಳ ಗುರುನಾಥನು
ಆರು ಶಾಸ್ತ್ರಗಳಳವಡಿಸಿ   ೬

ಚಿಟ್ಟಿಗ ನಾರಂದ ಮುನಿಗೊಂದು ವೇಷಪ
ಮುಟ್ಟಿ ತಾ ಧರಿಸಿದ ಶಿವನ
ತೊಟ್ಟ ಎರಳೆಚರ್ಮ ಸುಟ್ಟ, ಬೂದಿಯ ಲೇಪ
ಬಿಟ್ಟಾನವನ ಕಿರುಜಡೆಯ  ೭

ಬಗೆಬಗೆ ರೂಪನು ನಗೆಯಿಂದ ಧರಿಸಿದ
ಹಗಲುಗತ್ತಲೆ ಅದೃಶ್ಯಗಳ
ಉಗುರೊಳಗಡಗಿಸಿ ನಿಗಮಕಗೋಚರ
ನಗೆ ಮುಖದಲಿ ತೆರಳಿದನು         ೮

ಮಾರಹರನು ಚಿಕ್ಕನಾರಂದ ಮುನಿಗೂಡಿ
ಮೇರು ಮಂದರಗಳನಿಳಿದು
ಈರೇಳು ಲೋಕದ ನವಭಾಂಡಪೃಥ್ವಿಯಾ
ಘೋರಾರಣ್ಯಗಳ ನೋಡುತಲಿ      ೯

ನಡದಾನು ರಾಜ್ಯದ ಗಡಿಸೀಮೆಯ ದಾಟಿ
ಬೆಡಗು ತಾಣಗಳ ನೋಡುತಲಿ
ನಡುರಾಜ್ಯ ಗಿಡುರಾಜ್ಯ ಪಡೆರಾಜ್ಯ ಪರರಾಜ್ಯ
ಬಡಗು ರಾಜ್ಯಗಳ ನೋಡುತಲಿ     ೧೦

ಉರಲೋಕ ನರಲೋಕ ಸುರಲೋಕ ಹರಲೋಕ
ಪರಲೋಕ ಪರಬ್ರಹ್ಮಲೋಕ
ತಿರುಗೂತ ಒರಗೂತ ಸೊರಗೂತ ಬಳಲೂತ
ಸರವಾರಗಳ ನೋಡುತಲಿ ೧೧

ತೆಗ್ಗುತೆವರನೆ ಮೆಟ್ಟಿ ಬಗ್ಗುಬಾರದ ಗವಿ
ಎಗ್ಗಳ ಗಿಡುಗಂಟಿಯೊಳಗೆ
ಮುಗ್ಗುತ ಎಡವುತ ಮುನಿಮಹಾಜೋಗಿಯು
ನುಗ್ಗಾಗಿ ನುಡಿದ ನಾರದಗೆ ೧೨

ವರಮುನಿ ನಾರಂದ ಸರವಾರ ಸುಡಲಿನ್ನು
ಶರಿರವು ಬಳಲಿ ಬಾಯಾರಿ
ಹರಣಗಳಳಿವುತ ಒರಗೂದುಚಿತವೇನು
ತಿರುಗುವಾ ಬಾ ನಮ್ಮ ಸ್ಥಲಕೆ       ೧೩

ಎಲವೋ ನಾರಂದ ಮಲೆಯಾಳ್ಮಾತಕೆ ಬಂದೆ
ಬಳಗಳಳಿದು ಬಳಲಿದರೆ
ಹಲವು ವಿಹಾರದಿ ನೆಲೆಯುರಿದುಣಿಸುವ
ಲಲಲನೆಯರುಂಟೆ ಈ ಸ್ಥಲದಿ.      ೧೪

ನಾಡು ದೇಶಗಳನು ನೋಡಿ ಬಳಲಿದೆವು ಕಾ
ಡಾಡಡವಿಗಳಸುಡಲಿನ್ನು
ಬೇಡಿದ ಬಯಕೆಯ ನೀಡುವರಾರುಂಟು
ಮೂಢ ನಾರಂದ ಬಾ ಮನಿಗೆ       ೧೫

ಬಾರೆಲೊ ನಾರಂದಾ ಊರು ಸೀಮೆಗಳೊಳು
ನೀರು ಹಾರಗಳುಂಟೆ ನಮಗೆ
ದಾರಿ ಬಟ್ಟೆಯ ಸುಡು ಅರಣ್ಯದೊಳಗೊಬ್ಬ
ನಾರೀಯರನು ಕಂಡುದಿಲ್ಲ ೧೬

ಇತ್ತ ತಿರುಗು ನಾರಂದಮುನಿ ಹೋಗುವ
ಅತ್ತಣ ಗಿರಿಗಳು ಸುಡಲಿ
ತುತ್ತು ಆಹಾರಗಳಿಲ್ಲವೆಂದರೆ ಮುನಿ
ಉತ್ತರಗಳ ಕೊಟ್ಟ ಶಿವಗೆ  ೧೭

ಪದನು :

ಕೇಳು ಕೇಳೆನ್ನ ಗುರುವೆ ಎನ್ನ ಜನ್ಮಪಾವನದ ಮೂರ್ತಿ ನೀನು
ಭಾಳಲೋಚನ ಶಿವನ ಬೇಡಿದರೆ ಏನುಂಟು ಹಾಳು ಅರಣ್ಯದೊಳಗೆ || ಪಲ್ಲ

ಮುನಿಯ ವೇಷವ ತಾಳಲು ನಮಗಿನ್ನು ತನುವಿಗೆಲ್ಲಿಯದು ಸುಖವು
ಕೊನರು ತರಗೆಲೆಗಳನು ಆಹಾರಗಳ ಮೆದ್ದು ವನದೊಳಗೆ ಚರಿಸಬೇಕು
ತನುಮನವ ದಂಡಿಸುತಲಿ ಗುರುರಾಯ ಮನವನೊಬ್ಬುಳಿಯ ಮಾಡಿ
ಹಾನಿಹರಿಗಳಿಗಂಜಿ ಹೆದರದೆ ನಾವಿನ್ನು ಘನರಾಜ್ಯ ನೋಡಬೇಕು         ೧

ಉಣ್ಣಲೂಟವ ಬೇಡಲಿಕೆ ಗುರುರಾಯ ಹೆಣ್ಣಿನ ಅರಮನಿಗಳಿಗೆ
ಹಣ್ಣು ಹಂಪಲಗಳ ಸಲಿಸುತಲಿ ಅಡವಿ ಅರಣ್ಯಗಳ ನೋಡಬೇಕು
ಕಣ್ಣುಮೂರುಳ್ಳ ಶಿವನೆ ಕೈಕಾಲು ದಣ್ಣನೆ ದಣಿಯಬೇಕು
ಬೆಣ್ಣೆಮುದ್ದೆಗಳಾಗಿ ಇದ್ದಂತ ಶರಿರಗಳ ಸಣ್ಣಿಸಿ  ಕಳೆಯಬೇಕು    ೨

ಪರದೇಶಿಯಾದ ಮೇಲೆ ಗುರುರಾಯ ಶರಿರಕೆಲ್ಲಿಯದು ಸುಖವು
ದೊರಕಿದುದನುಂಡುಕೊಂಡು ಗುರುರಾಯ ಮತ್ತೊರಗಬೇಕೆಲ್ಯಾದರು
ಸರವರವ ನೋಡಬೇಕು ಗುರುರಾಯ ಪರಬ್ರಹ್ಮ ಋಷಿಗಳುಂಟು
ಶಿರವ ತಲೆಕೆಳಗಾಗಿ ಮಾಡುವ ತವಸಿಗಳ ಚರಣಗಳ ನೋಡಬೇಕು      ೩

ಬಿಸಿಯ ಕೋಡ್ಗಲ್ಲ ಮೇಲೆ ಗುರುರಾಯ ಮಸೆದ ಕೂರಲಗನಿಟ್ಟು
ಮಿಸುಕದೆ ಕೈಕಾಲು ತಲೆಕೆಳಗೆ ಮಾಡುವರ ಕುಶಲಗಳ ನೋಡಬೇಕು
ದಶವಾಯುಗಳು ಸೂಸದೆ ಗುರುರಾಯ ಉಸುರ ಉನ್ಮನಿಯಲಿಟ್ಟು
ಭಸಿತರುದ್ರಾಕ್ಷಿಗಳ ಮುನಿಗಳ ನೋಡಿದರೆ ಹಸುತೃಷೆಗಳಿಲ್ಲ ನಮಗೆ      ೪

ಶರಣು ಶರಣಾರ್ಥಿ ಗುರುವೆ ನೀ ಮುನ್ನ ಅರಿಯದಾ ಋಷಿಗಳುಂಟೆ
ಮೆರೆವ ಮೂವತ್ತಾರ್ಕೋಟಿ ಮುನಿಗಳು ನಿಮ್ಮ ಚರಣಕಮಲದಲಿರುವರು
ತೆರಳಿ ಸರವರವ ಪೊಕ್ಕು ನೋಡುವ ಪರಿಗಳನು ಬಲ್ಲೆವೇನ
ಪರಮಗುರು ಸಂಗಮೇಶ್ವರ ನೀನೆ ಬಲ್ಲೆಂದು ಚರಣಕೆರಗುತ ನುಡಿದನು ೫

ವಚನ :

ಮೂರು ಮೂರ‍್ತಿಗಳವಲ್ಲ ನೀ ಗುರುರಾಯ | ಮಹಾ
ಮೇರುಗಿರಿಯನಿಳಿದು ಬಂದೆ ಗುರುರಾಯ
ಘೋರಾರಣ್ಯಗಳ ನೋಡುತಾಲೆ ಗುರುರಾಯ | ನಿಮ್ಮ
ಗಾರುಡಗಳು ತಿಳಿಯವೆಮಗೆ ಗುರುರಾಯ    ೧

ಗೆಜ್ಜೆಕಾಲ ಚಿಕ್ಕಮುನಿ ಗುರುರಾಯ | ನನ್ನ
ಅಜ್ಜು ತಿಳಿದು ಮನವ ನೋಡು ಗುರುರಾಯ
ವಜ್ರದೇಹವಸ್ತು ನೀನು ಗುರುರಾಯ | ನಿನ್ನ
ಹೆಜ್ಜೆ ಹಿಡಿದು ನಾನು ಬರುವೆ ಗುರುರಾಯ    ೨

ನಾರಂದನ ನುಡಿಗೆ ನಗುತ ಗುರುರಾಯ | ಮುಂದೆ
ಘೋರಾರಣ್ಯಗಳನು ಹೊಕ್ಕು ಗುರುರಾಯ
ಕಾರುಮಿಂಚಿನ ಬೆಳಗಿನಂತೆ ಗುರುರಾಯ | ಅಲ್ಲಿ
ವಾರಿರತ್ನಗಿರಿಯ ಕಂಡ ಗುರುರಾಯ.        ೩

ಆಗ ಬೇಗದಲ್ಲಿ ನಡೆದು ಗುರುರಾಯ | ಬಯಕೆ
ಜಾಗ ಇರುವನರಸುತಲಿ ಗುರುರಾಯ
ಸಾಗಿ ಮುಂದಕ್ಕಡಿಗಳಿಡುತ ಗುರುರಾಯ | ಪುಷ್ಪ
ರಾಗಗಿರಿಯ ಕಂಡ ಶಿವನು ಗುರುರಾಯ | ೪

ಚಿತ್ರಕೂಡ ಪರ್ವತಗಳನು ಗುರುರಾಯ | ವೇದ
ಶಾಸ್ತ್ರಗಳಿಗೆ ನಿಲುಕದಿಹವು ಗುರುರಾಯ
ಕ್ಷೇತ್ರ ನವರತ್ನಗಿರಿಯು ಗುರುರಾಯ | ಜಗದ
ಸೂತ್ರಧಾರಿ ನೋಡಿ ಕಂಡ ಗುರುರಾಯ      ೫

ಮೂರು ಪರ್ವತಗಳ ಸುತ್ತ ಗುರುರಾಯ | ರತ್ನ
ವಾರಿಧಿಯ ನಡುಮಧ್ಯದಲ್ಲಿ ಗುರುರಾಯ
ಆರು ಮೂರು ನವಕೋಟಿಗಳು ಗುರುರಾಯ | ಬ್ರಹ್ಮ
ನಾರಾಯಣರಿಗಳವಲ್ಲವು ಗುರುರಾಯ        ೬

ಅಲ್ಲೆ ಸ್ಥಳವ ನೋಡುವೆನೆಂದು ಗುರುರಾಯ | ಶಿವನು
ಕಲ್ಲು ಮುಳ್ಳು ಹುಲ್ಲಿನೊಳಗೆ ಗುರುರಾಯ
ಹಳ್ಳ ಹೊಳೆಯ ಹಿಡಿದು ಬರುತ ಗುರುರಾಯ | ಮುಂದೆ
ಮಲ್ಲಿಗೆ ವನವ ಕಂಡ ಗುರುರಾಯ   ೭

ಶೃಂಗಾರದ ತೋಟದೊಳಗೆ ಗುರುರಾಯ | ರತ್ನ
ಬಂಗಾರದ ಬೊಂಬೆ ಇರಲು ಗುರುರಾಯ
ಲಿಂಗಪೂಜೆ ಪರಮಜ್ಞಾನಿ ಗುರುರಾಯ | ಮುಕ್ತಿ
ಯಂಗನೆಯ ಕಂಡ ಶಿವನು ಗುರುರಾಯ     ೮

ನೀರೆಯೊಬ್ಬ ಸತಿಯು ಅಲ್ಲಿ ಗುರುರಾಯ | ವನಕೆ
ನೀರ ಬಿಟ್ಟು ಪುಷ್ಪವೆತ್ತಿ ಗುರುರಾಯ
ಹಾರಕಮಲಗಳ ಧರಿಸಿ ಗುರುರಾಯ | ತನಗೆ
ಮೂರು ವೇಳೆ ಶಿವನ ಪೂಜೆ ಗುರುರಾಯ    ೯

ಜಾಜಿಮಲ್ಲಿಗೆಗಳ ಹಾರ ಗುರುರಾಯ | ತನ್ನ
ಪೂಜೆ ಕಳಸಕುಚದ ಮೇಲೆ ಗುರುರಾಯ
ಮೂಜಗದ ಶಿವನ ಪೂಜೆ ಗುರುರಾಯ | ಮಾಡು
ಸೋಜಿಗವ ಕಂಡ ಶಿವನು ಗುರುರಾಯ       ೧೦

ಮನದ ಬಯಕೆ ಸೇರಿತೆಂದು ಗುರುರಾಯ | ಅವಳ
ವನದ ತಂಪಿನೊಳಗೆ ನಿಂದು ಗುರುರಾಯ
ಮನೆಯ ಹಂಬಲಗಳ ಬಿಟ್ಟು ಗುರುರಾಯ | ಚಿಕ್ಕ
ಮುನಿಯ ಕೂಡೆ ಮಾತಾಡಿದನು ಗುರುರಾಯ         ೧೧

ತನುಜ ನಾರಂದೀಶ ನೋಡು ಮುನಿರಾಯ | ಇವಳಿ
ಕೊನರು ಕೊಬ್ಬು ಚೆಲ್ವಿಕೆಗಳ ಗುರುರಾಯ
ವನಿತೆ ಗಿರಿಜೆ ಪಾರ್ವತಿಯು ಮುನಿರಾಯ | ಇವಳ
ಕೊನೆಯ ಉಗುರು ಹೋಲಲರಿಯಾಳು ನೀ ರಾಯ    ೧೨

ಒಡೆಯ ನೀವು ನುಡಿದರೇನು ಗುರುರಾಯ | ನಮ್ಮ
ಪಡೆದ ಗಿರಿಜೆಗಿವಳು ಸರಿಯೆ ಎಲೆ ದೇವ
ಅಡವಿ ಚಿಂದಕಾಡ ಮನುಜಳೆಲೆ ದೇವ | ಒಂದು
ಬೆಡಗ ಮಾಡಿ ತಿರುಗುತಿಹಳು ಎಲೆ ದೇವ    ೧೩

ಭೂಪಾರಾವ ತಿರುಗಿದೆವೊ ಮುನಿರಾಯ | ಇಂಥ
ರೂಪ ಸತಿಯ ಕಂಡುದಿಲ್ಲ ಮುನಿರಾಯ
ನೋಂಪಿ ನೋಂತಲ್ಲದಿವಳು ಮುನಿರಾಯ | ಜಗದ
ಪಾಪಿಗಳಿಗೆ ಸಲುವಳೇನೊ ಮುನಿರಾಯ     ೧೪

ಕಣ್ಣುಗೆಟ್ಟು ನುಡಿಯೆ ಸಲ್ಲದೆಲೆ ದೇವ | ಸುಟ್ಟ
ಸುಣ್ಣ ಮಾರುವರ ಮಗಳು ಎಲೆ ದೇವ
ತಣ್ಣಿರೊಳಗೆ ಹುಟ್ಟಿ ಬೆಳೆದಳೆಲೆ ದೇವ | ಮೂರು
ಕಣ್ಣ ನಿಮಗೆ ಸಲ್ಲಳಿವಳು ಎಲೆ ದೇವ          ೧೫

ಎಲೆಯ ಬಾಲ ನೀ ಕೇಳೆಲೊ ಮುನಿರಾಯ | ನಿನಗೆ
ತಿಳಿಯದಿನ್ನು ಇವಳ ಮಹಿಮೆ ಮುನಿರಾಯ
ಕಳೆಯು ಜೀವರತ್ನ ಇವಳು ಮುನಿರಾಯ | ನೋಡಿ
ಬಳಲಿಕೆಗಳ ಮರೆದೆವಿಲ್ಲಿ ಮುನಿರಾಯ        ೧೬

ಬಾಡಿ ಬಳಲಿ ಕಣ್ಣುಗೆಟ್ಟಿರಲೆ ದೇವ | ಕಪ್ಪೆ
ಏಡಿ ತಿಂಬವರ ಮಗಳು ಎಲೆ ದೇವ
ಕೋಡಿ ಮಗಳು ಎಂದು ತಿಳಿದು ಎಲೆ ದೇವ | ಅಡವಿ
ಗೂಡಿಸಿನ್ನು ಬಿಟ್ಟರಿವಳ ಎಲೆ ದೇವ  ೧೭

ದಡ್ಡ ಮನುಜ ನಾರಂದನೆ ಮುನಿರಾಯ | ಇವಳೂ
ದೊಡ್ಡವರ ಮಗಳಾದಾಳೊ ಮುನಿರಾಯ
ದೊಡ್ಡಿತೋಟ ಖಾಸಭಾಗ ಮುನಿರಾಯ | ಲಿಂಗ
ದೊಡ್ಡೋಲಗವ ನೋಡು ನೀ ಮುನಿರಾಯ   ೧೮

ಸೃಷ್ಟಿಗೀಶ ಶಿವನೆ ಕೇಳು ಗುರುರಾಯ | ಇವಳು
ಕೆಟ್ಟವ್ಯಾಳ್ಳಿ ಜನಿಸಿದವಳು ಎಲೆ ದೇವ
ಪಟ್ಟುಗುಡುಮ ಪರದೇಶಿಯು ಗುರುರಾಯ | ಜನನಿ
ಬಿಟ್ಟು ಹೋದರಡವಿಯೊಳಗೆ ಎಲೆ ದೇವ      ೧೯

ದಾಂಟಿಸಿದರೆ ಗಿರಿಯ ಸೇರಿ ಎಲೆ ದೇವ | ಶಸ್ತ್ರ
ಈಟ ಬಿಲ್ಲು ಬಾಣಗಳನ್ನು ಎಲೆ ದೇವ
ಕಾಟಗಾರ ಕೂಡಿಕೊಂಡು ಎಲೆ ದೇವ | ಇವಳ
ಬೇಟೆ ಅರ್ತಿಗಳನು ನೋಡು ಎಲೆ ದೇವ     ೨೦

ಕಂದ :

ಸಿದ್ಧರಿಬ್ಬರು ಕೂಡಿ ಮದ್ದುಮಂತ್ರವ ಕಲಿತು
ಶಬ್ದಗಳಾಲಿಸುತ ನೋಡುತಿರಲು
ಲುಬ್ಧಕಾಟಕರು ಪಂದಿಯ ಆರ್ಭಟಿಸುತಲಿ
ಗದ್ದಲಿಸಿ ಆಡುತಿರೆ ಬೇಂಟೆಗಳನು   ೧

ರೂಢಿಗೀಶ್ವರ ಶಿವನು ನಾಡುದೇಶಗಳ ತಿರಿಗಿ
ನೋಡುತಿರೆ ವಿಸ್ಮಯ ಶ್ರೀಗಂಗೆಯ
ಕಾಡುಚಂಚರ ಬೇಂಟೆಗಳ ಕಂಡು ಪರಶಿವನ
ಕೂಡೆ ಬಣ್ಣಿಸಿ ಪೇಳುತಿರ್ದ ಮುನಿಪ ೨

ಪದನು :

ನೋಡು ನೋಡೆನ್ನ ಗುರುವೆ ನೋಡಿವಳ ಗಾಡಿಕಾರ್ತಿಯ ಬೇಂಟೆಯ
ಕೂಡಿರ್ದಮೃಗದೊಳಗೆ ಓಡಾಡಿಯೆಸೆದಡೆ ಮೂಡಿಹಾಯ್ವವು ಬೆನ್ನಿಲಿ | | ಪಲ್ಲ

ಚಲುವ ಚಲ್ಲಣವನುಟ್ಟು ಕಾಸಿಯಿಂದುಲಿವ ಕಂಜರವ ಕಟ್ಟಿ
ಲಲಿತ ಶ್ರೀಗಂಧವನು ಮೈಯೊಳಗೆ ಪೂಸಿಕೊಂಡಲಗು ಆಯುಧವ ಪಿಡಿದು
ಗುಲಗಂಜಿದಂಡೆಗಳನು ತಾ ತನ್ನ ತಲೆಮೊಲೆಗೆ ಸಿಂಗರಿಸುತ
ಮಲೆಯು ಮಂಜಿರಗಿರಿಗುಹ್ವಾರಗಳ ಪೊಕ್ಕು ಹಲವು ಬಲೆಗಳ ಬೀಸುತ ೧

ಮೀರಿ ಕಾಸಿಗಳನುಟ್ಟು ಅವಳಿನ್ನು ವಾರಿಚಿಮ್ಮುರಿಯ ಸುತ್ತಿ
ಈರೇಳು ಭುವನಗಳು ಮರುಳಾಗಿ ಬೀಳ್ವಂತೆ ಸೇರಿ ತಿಲಕವನಿಡುತಲಿ
ಮಾರ ಮನ್ಮಥನ ಬಿಲ್ಲು ಕಣ್ಣೆಂಬ ಕಾರಮಿಂಚಿನ ಬಾಣದಿ
ಹಾರುವ ಪಕ್ಷಿಗಳ ತೋರಿ ತಾನೆಸೆದರೆ ಧಾರುಣಿಗೆ ಒರಗುತಿಹವು         ೨

ಜಲ್ಲಿಮೃಗ ಸಾರಂಗನ ಅಪ್ಪಳಿಸಿ ಕೊಲ್ಲುವ ಹುಲಿ ಕರಡಿಯು
ಬಲ್ಲಿದ ಮದದಾನೆ ಬರುವ ಸಂಭ್ರಮ ನೋಡಿ ಬಿಲ್ಲ ಜೇವಡೆಗೈವುತ
ಗಲ್ಲಿಸಿ ಎಸೆದಡಿನ್ನು ಗಾಯದೊಳಗೆಲ್ಲವೊರಗಲು ಧರಣಿಗೆ
ಹಲ್ಲುಟೊಂಕವು ಕರುಳುಖಂಡಗಳು ಸುರಿವುತಲಿ ಚೆಲ್ಲಿದವು ರಕ್ತಮಳೆಯ  ೩

ಕಾಡಪಂದಿಗಳ ಕಂಡು ಕಂಗೆಟ್ಟು ಬೇಡ ನಾಯಕರೋಡಲು
ಕೂಡೆ ಬೆಂಬಲವಾಗಿ ಬಂದು ಸೀಳಿದವಾಗ ಹೇಡಿ ಕಾಟಕರ ಕುಲವ
ನಾಡಾಡಿ ಹಂದಿಯಲ್ಲ ಶ್ರೀಕೃಷ್ಣ ಆಡಿದನು ವರಹರೂಪಾ
ಮೂಢ ನರಕಾಸುರನ ಕೊಂದು ಸೀಳಿದನೆಂಬ ರೂಢಿಗಚ್ಚರಿಯಾಯಿತು   ೪

ಮಂದಿಗಳ ಸೀಳಿಸೀಳಿ ಅಪ್ಪಳಿಸಿ ಕೊಂದು ಕೊಲೆಗಳನಾಡುತ
ಪಂದಿಯೆಲ್ಲವು ಕೃಷ್ಣರೂಪಾದ ನಮಗಿನ್ನು ಬಂದಿತು ಪ್ರಳಯವೆನುತ
ನಿಂದಿರದೆ ಓಡಿ ಬರುತ ಕಾಟಕರು ಬಂದು ಪಾದಕ್ಕೆರಗಲು
ಇಂದುಮುಖಿ ತನ್ನ ಹಸ್ತವ ನೀಡಿ ನೋಡಿದರೆ ಕುಂದಣ ಪರಿಯಾಯಿತು   ೫

ಎಡಬಡನ ಕೂಡಿಕೊಳುತ ಆ ಕ್ಷಣದಿ ನಡೆದಳಾ ಹಂದಿ ಮೇಲ
ಬಿಡುಬಿಡು ನಾಯಿಗಳ ಒಡನೆ ತೂರಿದಳಾಗ ಸಿಡಿಲ ಮರಿಯಾರ್ಭಟದಲಿ
ಗುಡುಗುಡಿಸಿ ಆರ್ಭಟಿಸುವ ಪಂದಿಯ ಪಡೆಯ ದಂಡುಗಳನೆಲ್ಲ
ತುಡಿಕಿ ಎದೆಗುಂಡಿಗೆಯನಿರಿದು ಕೆಡಹಿದಳಾಗ ಗಡಿನಾಡ ಬೇಂಟೆಗಾರ್ತಿ  ೬

ಬೊಬ್ಬೆಯಬ್ಬರಗಳಿಂದ ಶ್ರೀಗಂಗೆ ಹೆಬ್ಬುಲಿಯ ಮಾರ್ಬಲಗಳಾ
ತಬ್ಬಿಬ್ಬುಗಳ  ಮಾಡಿ ಸೀಳಿ ಕೆಡಹಿದಳಾಗ ಕೊಬ್ಬು ಹರಿಯಿತು ನೆಲದೊಳು
ಇಬ್ಬದಿಯ ಜನಗಳೆಲ್ಲ ಭಲಭಲರೆ ಹಬ್ಬ ನಮಗಾಯಿತೆನುತ
ಒಬ್ಬಿಬ್ಬರುಳಿಯದೆ ಎಲ್ಲ ಜನರೊಡಗೂಡಿ ಉಬ್ಬಿಮುಂದಕೆ ನಡೆವುತ       ೭

ಅಡವಿಜೀವಿಗಳ ಕೊಂದು ಮುಂದಕ್ಕೆ ನಡೆದಳು ಹೊಳೆಯ ತಡಿಗೆ
ತೊಡಕುಬಲೆಗಳ ಬೀಸಿ ಜಲಚರವ ಕೊಲುವಂಥ ಸಡಗರವ ನೋಡು ಗುರುವೆ
ಒಡವೆವಸ್ತುಗಳ ತೆಗೆದು ಮೇಲಿಂದ ಮಿಡಿದು ಹಾರಲು ಮಡುವಿಗೆ
ಕಡಲೊಳಗೆ ಇದ್ದಂಥ ಜಲಚರಾದಿಗಳೆಲ್ಲ ಗಡಬಡಿಸಿ ಕಂಗೆಡುತಲಿ                   ೮

ಬಿಟ್ಟು ಬಲೆಗಳ ಹಾಸುತಾ ಗಾಣದೊಳಗಿಟ್ಟಳು ಮಧುಮಾಂಸವ
ಎಷ್ಟು ಜೀವನವೆಲ್ಲ ತಿನಬಂದು ಸಿಲ್ಕಿದವೊ ಕಟ್ಟಿದಳು ಉರಿಲಿನೊಳಗೆ
ಕೆಟ್ಟ ಮೋರೆಯ ಮೊಸಳೆಯು ಜಲದೊಳಗೆ ಬೆಟ್ಟದಂಥಾ ಪ್ರಾಣಿಯು
ಕೃಷ್ಣಾವತಾರದ ಮತ್ಸ್ಯಕೂರ್ಮಾದಿಗಳ ದಟ್ಟಿಸಿಯೊರಗಿಸಿದಳು  ೯

ಹರುಗೋಲುಗಳನೇರುತ ತಾ ತನ್ನ ಸರಿಯವರ ಕೂಡಿಕೊಳುತ
ಗಿರಗಿರನೆ ತಿರಿಗಿ ಹುಯ್ಯಲ ಬೊಬ್ಬೆಗಳ ಮಾಡಿ ಸರಳುಸರಳೆಸೆದಾಡುತ
ಅರರೆ ಭಲಭಲರೆನುತಲಿ ಪುಟ್ಟಗಳ ತುರಗವಾಟದಿ ಓಡಿಸಿ
ಅರ‍್ತಿಯಾನಂದಗಳ ನೋಡುತಲಿ ಜಲಚರವ ಹೊರಿಸಿಕೊಳುತಾ ನಡೆದಳು        ೧೦

ಇಂತು ಬೇಂಟೆಗಳನಾಡಿ ಶ್ರೀಗುರುವೆ ಅನಂತ ಜೀವಿಗಳ ಕೊಂದು
ಮುಂತೆ ತಮ್ಮಯ್ಯ ತೋಟದೊಡ್ಡಿ ಗುಡಿಸಿಲಿನೊಳಗೆ ಸಂತೈಸಿಕೊಂಡಿರುವಳು
ಇಂತಿವಳ ಲಿಂಗಪೂಜೆ ಸುಡಲಿನ್ನು ಅಂತಕನ ಗುರುಸ್ವಾಮಿಯು
ಅಂತುಕಾರಣದಿಂದ ಅಡವಿಯೊಳು ಬಿಸುಟರು ತಾಂತ್ರಿಕ ಜೋಗಿ ಕೇಳು ೧೧

ನಾರದನ ನುಡಿಗಳಿನ್ನು ಗುರುವಿಂಗೆ ಸರಿಬಾರವು ಮನಸಿಗೆ
ನೀರ ಬೊಬ್ಬುಳಿಯ ಸ್ತ್ರೀಯಳ ಕಂಡು ಮನಸೋತು ಮೀರಿಹುದು ಕಾಮತತ್ವ
ಅವರ ಮಾತನು ಕೇಳದೆ ಗುರುರಾಯ ಸೇರಿ ಸನ್ನಿಧಿಗೆ ಬಂದು
ಸಾರಿ ಗುರುಸಂಗಮೇಶ್ವರಲಿಂಗ ನುಡಿಸಿದನು ಜಲಜಕುಲದ ಸ್ತ್ರೀಯಳ    ೧೨

ಸಂಗತ್ಯ :

ಚಿಕ್ಕಮುನಿಯನು ಕೂಡಿ ಪೊಕ್ಕಾನು ತೋಟವ
ಮುಕ್ಕಣ್ಣ ಮುನಿ ಮಹಾಜೋಗಿ
ಸಕ್ಕರೆವಿಲ್ಲಿನ ಕೋಟಿ ಮನ್ಮಥರೂಪ
ಚಕ್ಕಂದ ಚದುರೆಯೊಳ್ ನುಡಿದ     ೧

ಮಲ್ಲಿಗೆ ಮುಡಿಯೋಳೆ ಮನ್ಮಥನರಗಿಳಿಯೆ
ನಲ್ಲನಾಯಕರುಂಟೆ ನಿನಗೆ
ಹುಲ್ಲೆ ಕರಡಿ ಸಿಂಹ ಶಾರ್ದೂಲ ಮೃಗ ನಿನ್ನ
ಕೊಲ್ಲದಿಹವೆ ಗೋಣಮುರಿದು        ೨

ತೋಟಗಾರತಿ ಕೇಳು ಕೋಟಿಚಂದ್ರರು ನಿನ್ನ
ನೋಟವ ಪೋಲ್ವರಿಲ್ಲ
ಬೇಟೆಯನಾಡಲು ಬಲವಂತ ಮೃಗ ನಿನ್ನ
ನೀಟಿನ ರೂಪ ಸೀಳದಿಹವೆ          ೩

ಜಾಲಗಾರತಿ ಕೇಳು ಜಲಚರಗಳನು ನೀ
ಗಾಳವ ಹಾಕಿ ಕೊಲ್ಲುವರೆ
ಮೇಲಾದ ಮತ್ಸ್ಯಕೂರ್ಮನು ಜಲಚರ ನಿನ್ನ
ಸೀಳಿ ಕೊಲ್ಲದೆ ಬಿಡದಿಹವೆ  ೪

ಜಗದೊಳು ಮನ್ಮಥಜಯಸಿರಿಯಳೆ ನಿನ್ನ
ಉಗುರುಗೊನೆಗೆ ಸಮನಿಲ್ಲ
ಮೃಗಸಿಂಹ ಶಾರ್ದೂಲ ಬಗಿದು ಬೇಟೆಯನಾಡಿ
ನಗೆಮೊಗಗಳ ಸೀಳದಿಹವೆ ೫

ಚಂದ್ರ ಕಳೆಯ ಚದರುವೆಣ್ಣೆ ನೀನೆನ್ನ
ಮಂದಿರಕೊಡೆಯಾನ ಮಾಡು
ಬಂದಂಥ ದುರಿತವ ಪರಿಹರಿಸುವೆನು ಮ
ಹೀಂದ್ರಜಾಲದ ಮುನಿರಾಯ        ೬

ಪುರುಷರಿಲ್ಲದ ನಾರಿ ಸರಸವಾಡಲು ಮೃಗ
ವರಸಿ ಕೊಲದೆ ಬಿಡದಿಹವೆ
ವರುಷವು ಹದಿನಾರು ಪ್ರಾಯದ ಮುನಿ ನಾನು
ಹರಸಿಕೊ ಪ್ರಾಣೇಶನೆನುತ                   ೭

ಬಸವಮಂತ್ರಿಯೆ ಕೇಳು ಬಿಸಿಗಣ್ಣ ಮುನಿರಾಯ
ಕುಶಲದ ಮಾತನಾಡಿದರೆ
ಶಶಿಮುಖಿ ಮನದೊಳು ಹೊಸೆದಂತೆ ಕೋಪವು
ಮಸಗುತ ಮಾತನಾಡಿದಳು        ೮

ಎಲ್ಲಿಯ ಮುನಿಯೊ ನೀನೆಲ್ಲಿಯ ಜೋಗಿಯೊ
ಎಲ್ಲಿ ಸನ್ಯಾಸಿ ಋಷಿಯೋ
ಬಲ್ಲತನವೆ ನಮ್ಮ ನಲ್ಲರ ಕೇಳುವುದು
ಇಲ್ಲ ಸಂನ್ಯಾಸಿಯ ಮಾರ್ಗ         ೯

ಪರದೇಶಿ ಮುನಿ ಕೇಳು ತಿರಿದುಂಬ ಜೋಗಿ ನೀ
ಪರಸತಿಯರ ನೋಡ ಸಲ್ಲ
ವಿರಸ ಮಾತುಗಳಿಂದ ಸರಸವನಾಡಲು
ಸಿರಸವನುಳುಹಿಕೊ ಜೋಗಿ         ೧೦

ಜೋಗಿವೇಷವ ತಾಳಿ ನೀಗಿ ಕಳೆಯಲುಬೇಕು
ತಾಗು ನಿರೋಧ ಮೋಹಗಳ
ಕೂಗುವ ಕಾಮಕ್ರೋಧವನೆಲ್ಲವ ಸುಟ್ಟು
ಮಾಗಿ ಕೋಗಿಲೆಯಾಗಬೇಕು        ೧೧

ಸಂನ್ಯಾಸಿಯಾದರೆ ಕನ್ನೆವೆಣ್ಣುಗಳನು
ಕಣ್ಣೀಲಿ ನೋಡ ಸಲ್ಲ
ಹೊನ್ನು ಹೆಣ್ಣು ಮಣ್ಣು ಮೂರನಳಿದು ಸಂ
ಪನ್ನ ಜೋಗಿಗಳಾಗಬೇಕು ೧೨

ಋಷಿಯ ವೇಷವ ತಾಳಿ ಹಸುತೃಷೆನಿದ್ರೆಯ
ಕಸಮಾಡಿ ಕಳೆಯಲಿ ಬೇಕು
ಪಶುಪತಿಗಳವಲ್ಲ ಪರದೇಶಿ ಮುನಿ ಕೇಳು
ಶಶಿಮುಖಿಯೊಳಾಟ ಸಲ್ಲ  ೧೩

ತ್ರಾಣಗಳರಿದು ತಲ್ಲಣವಡಗಿ ಮನ
ಕಾಣದಂತಡಗಿರಬೇಕು
ಮಾಣದೆ ಹರಿಯಜರಳವಲ್ಲ ರೂಪಿಗೆ
ಜಾಣತನಗಳೇಕೆ ಜೋಗಿ  ೧೪

ಜಾಣತನಗಳಿಲ್ಲ ಜಯಸಿರಿಯಳೆ ನಿನ್ನ
ಪ್ರಾಣಸಂಗಾತಿಯ ಜೋಗಿ
ಕೋಣ ಹಾಯ್ವ ಮೃಗ ಕೊಂದಾವೆನುತ ನಿನ್ನ
ಪ್ರಾಣಕೆ ಚಿಂತಿಸುತಿಹೆನು  ೧೫

ಪಿಡುನಡುವಿನ ಬಾಲೆ ನುಡಿ ಗಿಳಿಕೋಗಿಲೆ
ಸಡಗರ ರೂಪಸಂಪನ್ನೆ
ಅಡವಿಯ ಮೃಗಸಿಂಹ ಕೆಡವಿ ಕೊಂದಾವೆ ನಿನ್ನ
ಒಡೆಯಾನ ಮಾಡಿಕೊ ಎನ್ನ         ೧೬

ಕೊಡೆಯ ಹಾವುಗೆ ಜೋಗಿ ನುಡಿಯೆ ಸಲ್ಲದು ಕೇಳು
ಅಡವಿ ಮೃಗ ನಮ್ಮ ಬಳಗ
ಕಡಿವ ಕರಡಿ ಸಿಂಹ ಸಾರಂಗ ಮೃಗ ನಮ್ಮ
ಒಡಲೊಳಗುದ್ಭವಿಸಿದವು   ೧೭

ಹುಚ್ಚುಮುನಿಯೆ ಕೇಳು ಹುಲಿ ಸಿಂಹ ಸಾರಂಗ
ಕಚ್ಚುವ ಮೃಗ ನಮ್ಮ ಬಳಗ
ನುಚ್ಚುನುರಿಯ ಗಂಡರಿಲ್ಲ ಕೇಳೆಲೆ ಮುನಿ
ಕಿಚ್ಚುಗಣ್ಣನು ನಮ್ಮ ಪ್ರಾಣ ೧೮

ಹೊಂದಾವರೆ ಮೊಗ್ಗೆ ಮೊಲೆಯಳೆ ಕೇಳು ಗೋ
ವಿಂದ ಶಿವನ ಕಾಣಲರಿಯ
ಮಂದಮತಿಯ ಮಾನವಳಿಗೆಲ್ಲಿಯ ಶಿವ
ಹೊಂದಿಕೆ ಮಾಡಿಕೊ ತರಳೆ           ೧೯

ಭಜನೆಯ ಮಾತನಾಡಲಿ ಬೇಡ ಮುನಿ ನಿಮ್ಮ
ಅಜಹರಿ ಸುರರಿಗಸಾಧ್ಯ
ತ್ರಿಜಗವಂದ್ಯನ ನಿಜವಾಗಿ ಭಜಿಸಲು
ಹುಜುರು ನಿಂದಿಹ ನಮ್ಮ ಶಿವನು     ೨೦

ಗುಂಡಿನ ಮರೆಯ ಮಾನವ ಕೇಳು ಶಿವನನು
ಕಂಡವರುಂಟೆ ಕಲಿಯುಗದಿ
ಮಿಂಡಿ ನೀ ಹರೆಯಾದ ಹೆಣ್ಣೆ ಪ್ರಾಯದ
ಗಂಡರಿಲ್ಲದ ಜೀವ ಸಲ್ಲ      ೨೧

ಮನುಜರೂಪನೆ ಕೇಳು ವಿನಯ ಸಲ್ಲದು ನಮ್ಮ
ಘನಗಿರಿ ಗಹ್ವಾರದೊಳಗೆ
ಮುನಿಪ ವಶಿಷ್ಠ ವಿಶ್ವಾಮಿತ್ರ ಮಾಂಡವ್ಯ
ತನುಜೆಯೆಂದೆನ್ನ ಭಾವಿಪರು          ೨೨

ಅಂತಹ ಋಷಿಯಲ್ಲ ಅಪರಂಜಿ ಮುನಿರಾಯ
ಮುಂತೆ ಮುಕ್ತಿಯನೀವ ಜೋಗಿ
ಚಿಂತಿತಾರ್ಥವನೀವ ಚಿನ್ಮಯರೂಪನ
ಸಂತೈಸಿಕೊಳ್ಳೆ ನೀನರಿಯೆ            ೨೩

ಬೆಡಗು ಸಲ್ಲದು ನಮ್ಮ ಒಡೆಯ ಪರಂಜ್ಯೋತಿ
ಒಡಲ ಹೃತ್ಕಮಲದೊಳಿಹನು
ನುಡಿಯು ನಿಷ್ಠುರವಾಗಿ ಬರುತಿವೆ ಮುನಿ ನೀನು
ನಡೆ ನಿಮ್ಮ ಪಡೆಗಿರಿಗಳಿಹರ           ೨೪

ಹೋಗಲಿ ಬಂದುದಿಲ್ಲವೆ ಹೊಸ ಮಲೆಯಾಳ
ಜೋಗಿಗಳ್ಗರುವು ಕೇಳಾವು
ಜಾಗ ಇರವ ನೋಡ ಬಂದಂಥ ಮುನಿ ನಿನ್ನ
ಭಾಗದ ಒಡೆಯನೆ ನಾನು  ೨೫

ಒಡೆಯನೆಂದೆನಬೇಡ ಬಡಮುನಿ ಎಲೆ ಜೋಗಿ
ಪೊಡವಿ ಈರೇಳು ಲೋಕಗಳ ಒಡಲೊಳಗಿಂಬಿಟ್ಟು ಬಿಡದೆನ್ನ ಕರಸ್ಥಲ
ಕೊಡೆಯನಾಗಿಹ ನಮ್ಮ ಶಿವನು      ೨೬

ಭಾಳಾಕ್ಷರೂಪೆಂದು ತಾಳ್ದೆವು ಕೋಪವ
ಸೀಳಿ ಕೊಲ್ವೆವು ನರರುಗಳ
ಜಾಳು ಮಾತುಗಳನಾಡಲಿ ಬೇಡ ಕಿವಿಗೊಟ್ಟು
ಕೇಳೆಲೆ ಮುನಿ ನಮ್ಮ ಘನವ          ೨೭

ಮುನಿರಾಯ ಕೇಳಿನ್ನು ಮನೆದೈವ ಶಿವನಿಗೆ
ತನು ಮಗ ಧನಗಳನಿತ್ತು
ಇನಿಯಾನೆ ಪರಬ್ರಹ್ಮ ಪ್ರಾಣದೊಲ್ಲಭನನು
ಘನಸ್ತುತಿಯನು ಕೇಳ್ಮುನಿಪ           ೨೮

ಮಲ್ಲಿಕಾರ್ಜುನ ಪ್ರಾಣದೊಲ್ಲಭ ಶಿವನಿಗೆ
ನೆಲ್ಲು ಬಿದಿರಕ್ಕಿಗಳ ತಂದು
ಕಲ್ಲೊರದೊಳು ಹಾಕಿ ತಳೆಸುವ ಸತಿಯರ
ಸೊಲ್ಲ ಲಾಲಿಸು ಮುನಿರಾಯ         ೨೯

ಕಳೆಯುಳ್ಳ ಸತಿಯರು ಎಳಮುತ್ತು ಮಾಣಿಕ
ಸೆಳೆ ನಡುಗಳು ಬಳುಕುತಲಿ
ಗಳರವ ಕೋಗಿಲೆಯಳದುಂಬೆ ಗಾನದಿ
ತಳಿಸುವ ವಚನವ ಕೇಳು   ೩೦

ಹೂವಿನರಳು ಬಾಲಸ್ತ್ರೀಯರುಗಳು ತಮ್ಮ
ಯೌವನಗಳ ಬಣ್ಣಿಸುತಲಿ
ಎಸೆವ ದುಕೂಲವನುಟ್ಟು ಭಸಿತ ರುದ್ರಾಕ್ಷಿಯ
ಶಶಿಮುಖಿಯರು ಪಾಡುತಿಹರು       ೩೧

ಆವ ಜನ್ಮದಿ ದೇವನೆ ಮನೆದೈವ
ಭಾವ ಭೇದಗಳಿಲ್ಲ ನಮಗೆ
ಮೂವರರಿಯದ ಭಾವನ ಮಹಿಮೆಯ
ಸೂವಿಯ ವಚನವ ಕೇಳು  ೩೨

ಒರಳಕ್ಕಿಯ ಪದನು :

ಸುವ್ವೀ ಸುವ್ವೀ ಸುವ್ವಾಲೇ
ಸುವ್ವೆಂದು ಪಾಡಿರಿ ಶೂನ್ಯ ಪ್ರಕಾಶಸಗೆ
ಸುವ್ವೀ ಸುವ್ವೀ ಸುವ್ವಾಲೇ              ಪಲ್ಲ

ಚಂಚುವೆಣ್ಣುಗಳೆಲ್ಲ ಕೂಡೂತ ತಮ್ಮ
ಮಿಂಚುಳ್ಳ ನಯನಾದಿ ನೋಡುತ
ಪಂಚಮುಖದ ಪರಶಿವನ ಕೊಂಡಾಡುತ
ಗೊಂಚಲ ಹಾವುಗೆ ಜೋಗಿ ನೀ ಕೇಳು          ೧

ಬೇಟಕಾರ್ತಿಯರೆಲ್ಲ ಕೂಡುತ ಶಶಿ
ಜೂಟ ಶಿವನ ಕೊಂಡಾಡುತ
ಆಟಬೇಟಗಳೆಲ್ಲ ಶಿವನೊಳಗಲ್ಲದೆ
ಕೀಟಕ ಮನುಜರನೊಲ್ಲೆವೊ ಜೋಗಿ ೨

ದುಂಡುದೋಳುಗಳೆತ್ತಿ ತಳಿಸುತ ತಮ್ಮ
ಗಂಡನೇ ಶಿವನೆಂದು ಪಾಡುತ
ಮೊಂಡಮೂಕೊರೆಯ ದೈವವನರಿಯೆವು
ರುಂಡಮಾಲೆಯ ಜೋಗಿ ನುಡಿಗಳ ಕೇಳು     ೩

ಸುಲಿಪಲ್ಲ ಬೆಳಗುತ್ತ ರಂಜಿಸಿ ತಮ್ಮ
ತಲೆ ಮೊಲೆಗಳ ಕಟ್ಟ ನುಣ್ಣಿಸಿ
ಮಲಹರಮಂತ್ರವು ಮನದೊಳಗಲ್ಲದೆ
ಹೊಲೆಮಾರಿ ದೈವವನೊಲ್ಲೆವೊ ಜೋಗಿ        ೪

ಬಿದಿರಹಕ್ಕಿಗಳ ತಂದು ತಳಿಸುತ ತಮ್ಮ
ಅಧರ ಮಾಣಿಕ ಬಿಚ್ಚಿ ಪಾಡುತ
ಮದಹರಮಂತ್ರವು ಮನದೊಳಗಲ್ಲದೆ
ಸದೆಮಾರಿ ದೈವವನೊಲ್ಲೆವೊ ಜೋಗಿ          ೫

ಸರುವಾರದವರೆಲ್ಲ ಕೂಡುತ ನಮ್ಮ
ಪರಮಶಿವನ ಕೊಂಡಾಡುತ
ಹರಹರವೆನುತಲಿ ಗುರುಪಾದವಲ್ಲದೆ
ಸುರಿಮಾರಿ ದೈವವನರಿಯೆವೊ ಜೋಗಿ        ೬

ಕುಂಜರವೈರಿಯ ಪೂಜೆಗೆ ನಾವು
ಮಂಜಿನ ನೀರನು ತರುವೆವೊ
ಎಂಜಲು ಅಗುಳುಗಳಿಲ್ಲದೆ ಶಿವನಿಗೆ
ಸಂಜೀವದಗ್ಗಣಿಯ ತರುವೆವೊ ಜೋಗಿ         ೭

ಗಂಧಾಕ್ಷತೆಗಳನು ಇಡುತಾ ಗೋ
ವಿಂದನ ಪುಷ್ಪವ ಧರಿಸುತೆ
ತಂದು ದೂಪದೀಪಾರತಿಗಳನೆತ್ತಿ
ವಂದಿಸಿ ಶಿವನೊಳಗಿರುವೆವೊ ಜೋಗಿ          ೮

ಇಂತೆಂದು ಅಕ್ಕಿಯ ತಳಿಸುತ ನಮ್ಮ
ಕಂತುಹರಗೆ ಬೋನವ ಮಾಡುತ
ಸಂತೋಷದಿಂದಲ್ಲಿ ಶಿವನಿಗರ್ಪಿಸುತ ಅ
ನಂತ ಕಾಲದೊಳಿರುವೆವು ಜೋಗಿ   ೯

ನಾಡಿನ ಮುನ್ನಾರೆಂಬುತ ನೀ ನಮ್ಮ
ಕೂಡೆ ಜಾಣಿಕೆಯ ನೀನಾಡಲು
ಮಾಡಿದ ಸರಳು ಬಾಣಗಳಿಂದೆಚ್ಚಡೆ
ಮೂಡಿ ಹಾಯ್ವವು ನಿನ್ನ ಬೆನ್ನಲಿ ಜೋಗಿ        ೧೦

ಕನ್ನೆವೆಣ್ಣುಗಳನು ಕಾಣುತ ನೀ
ಚುನ್ನಾದ ಸರಸವನಾಡಲು
ಪನ್ನಂಗಧರಶಿವನಾದರೆ ಕೊಲುವೆವೊ
ಇನ್ನು ಸುಮ್ಮನೆ ಹೋಗು ಕಿನ್ನರಿ ಜೋಗಿ       ೧೧

ಲೋಕದ ಮುನ್ನಾರೆಂಬುತಾ ನೀ
ಜೋಕೆ ಸರಸವನಾಡಲು
ಏಕೋದೇವ ಶಿವನಾದರೆ ನಾವೀಗ
ನೂಕಿ ಕೆಡಹಿ ಬೇಗಲೆಸೆವೆವೊ ಜೋಗಿ           ೧೨

ಪರಶಿವ ರೂಪೆಂದು ತಾಳ್ದೆವು ನಿಮ್ಮ
ವಿರಸ ಸರಸಗಳು ಸಾಕಿನ್ನು
ವರಗುರುಸಂಗನ ಒಡಲೊಳಗಿರುವೆವು
ಶರಣು ಶರಣಾರ್ಥಿ ಹೋಗಯ್ಯ ಜೋಗಿ        ೧೩

ಕಲ್ಯಾಣಪುರಪತಿ ಕೇಳಿನ್ನು ಸೊಲ್ಲಿಗೆ
ಸಿಲುಕದಭೇದ್ಯನು ಶಿವನು
ಮಲ್ಲಿಕಾರ್ಜುನ ಜೋಗಿ ತಲ್ಲಣಗೊಳಿಸಿದ
ರಿಲ್ಲಿಗೆ ಸಂಧಿಗೆ ಶರಣು ಶರಣಾರ್ಥಿ   ೧೪

ಸಂಧಿ ೧ಕ್ಕಂ ಕಂದ ೪. ವಚನ ೩೧, ಪದನು ೨೪, ಸಂಗತ್ಯ ೪೯, ಒರಳಕ್ಕಿ ಪದನು ೧೪, ಉಭಯಂ ೧೨೨ ಕ್ಕಂ ಮಂಗಳ ಮಹಾ ಶ್ರೀ ಶ್ರೀ