ಪದನು :

ಬಸವಯ್ಯ ನೀನು ಕೇಳು ಗಂಗೆಯ ಕುಶಲವಿನೋದ ನುಡಿಯ
ಮಸಣಬೂದಿಯ ಜೋಗಿ ಮಾತನಾಡಲು ನಿನ್ನ ದೆಸೆಯಲಲ್ಲಾಡಿಸಿದಳು   ಪಲ್ಲ

ಶಿವ ತನ್ನ ಲೀಲೆಗಾಗಿ ಬಸವಯ್ಯ ಭುವನ ಬ್ರಹ್ಮಾಂಡ ತಿರುಗಿ
ಯುವತಿಗಿರಿಜೆಯ ಮೇಲೆ ಸವತಿಯನು ತಹೆನೆಂದು ಗವಿಗಿರಿಗಳನೆ ಪೊಕ್ಕು
ತವನಿಧಿಯ ಶ್ರೀಗಂಗೆಯ ಗುರುರಾಯ ನೆವದಿಂದ ಬೋಧಿಸಿದರೆ
ಕವಲಿಲ್ಲ ಮನದೊಳಗೆ ಕಾಂತೆಗಂಗೆ ನಿಮ್ಮ ವಿವರವ ಬೋಧಿಸಿದಳು       ೧

ಮುಪ್ಪುರವ ಸುಟ್ಟು ಶಿವನ ಜ್ಞಾನದೊಳಗಿಪ್ಪ ಬಸವಯ್ಯ ಕೇಳು
ಒಪ್ಪುವ ದೇವಲೋಕವನೆಲ್ಲ ಮರ್ತ್ಯಕ್ಕೆ ತಪ್ಪದಲೆ ತಂದೆ ನೀನು
ಸಪ್ಪುಳಿಲ್ಲದ ಶರಣರಾ ಒಡಲೊಳಗೆ ಗೌಪ್ಯಮಾಡಿಯೆ ಸಲಹಿದೆ
ಕಪ್ಪುಗೊರಳ ಶಿವನ ಕರದೊಳಗಿಟ್ಟಂಥ ಸತ್ಪುರುಷ ಬಸವಯ್ಯ ಕೇಳು      ೨

ದಂಡನಾಯಕನೆ ಕೇಳು ಬಸವಯ್ಯ ಮಂಡಲಕಧಿಕ ನೀನು
ಕೊಂಡೆಮಂಚಣ್ಣಗಳ ಪವಾಡಗಳ ಗೆಲಿದಂಥ ಗಂಡ ಕೂಸಕರಿಗೆಲ್ಲ
ಉಂಡುಟ್ಟು ಮಿಕ್ಕುದೆಲ್ಲ ಬಸವಯ್ಯ ಹಿಂದುದೈವಕ ಮೀಸಲು
ಅಂಡಲೆದು ಉಂಡಿಲ್ಲೆಂಬ ಪರವಾದಿಗಳ ಗುಂಡಿಗೆಯ ಶೂಲ ನೀನು        ೩

ಕಾಂತೆ ನೀಲಲೋಚನೆ ನೀನೆಮಗೆ ತಂತ್ರದ ಕತೆಯ ಪೇಳ್ದೆ
ಎಂತು ಬಣ್ಣಿಪೆ ಎನ್ನ ಏಕಾಂತ ಮೂರ್ತಿಯ ಸಂತವಿಟ್ಟ ಸ್ತ್ರೀಯಳಿ
ದಂತಿಗಮನದಿ ಪೇಳುವೆ ಪರಶಿವಮಂತ್ರದ ಶಕ್ತಿ ನೀನು
ಶಾಂತಿಸೈರಣೆಯುಳ್ಳ ಶಿವಲಿಂಗಮೂರ್ತಿಯ ಅಂತರಂಗದ ಜ್ಯೋತಿಯೆ ೪

ಚಂದ್ರಕಾಂತದ ಸ್ತ್ರೀಯಳೆ ಕೇಳಿನ್ನು ಮಂದಾಲಗಿರಿಯ ಜೋಗಿ
ಬಂಗು ಗಂಗೆಯ ಕೂಡೆ ಮಾತನಾಡಲು ಮಡದಿಯೆಂದಪರಿ ಹೇಗೆ ಹೇಳು
ಬೆಂದ ಮಸಣದ ಬೂದಿಯ ತಲೆಗೆಲ್ಲ ಮಂದಮಲಕನೆ ಮಾಡುತಾ
ತಂದೆ ಗುರುಸಂಗಮೇಶ್ವರನು ಕೊಂಡೊಯ್ದ ಅಂದವನು ಪೇಳು ನಮಗೆ ೫

ಸಂಗತ್ಯ :

ಹರಶರಣರ ಹೃತ್ಕಮಲಾರ್ಕತೇಜನೆ
ಹರುಪಾಬ್ದಿ ನಿಜ ಪಾಲ್ಗಡಲೆ
ಧರೆಯು ಮೂಲೋಕವ ರಕ್ಷಿಪ ಗಂಗೆಯು
ಮರುಳ್ಮಾಡಿ ಪೊಯ್ದುದ ಕೇಳು        ೧

ಚಲದಂಕವೈರಿ ಮಸ್ತಕಶೂಲ ಬಸವಯ್ಯ
ಒಲಿದು ಕೇಳಿನ್ನು ಮೆಲ್ಗತೆಯು
ಹುಲಿಯ ಚರ್ಮವನುಟ್ಟು ಮಲೆನಾಡ ಜೋಗಿಯ
ಸ್ಥಲಕುಲಗಳನು ಕೇಳಿದಳು ೨

ಮುತ್ತಿನ ಕಂಥೆಯ ಮುನಿ ಮಹಾಜೋಗಿ  ನೀ
ವೆತ್ತಲಿಂದುದ್ಭವಿಸಿದಿರಿ
ಮರ್ತ್ಯಲೋಕದ ಮಾನವರಲ್ಲ ಮುನಿರಾಯ
ಕುತ್ತಿಗೆಗಳ ಮಾತು ಬೆಡಗು            ೩

ಸಾಗರಗುಣದ ಸನ್ಮಾನಿಯೆ ನೀ ಕೇಳು
ನಾಗಲೋಕಗಳ ನೋಡುತಲಿ
ಮೇಗಾಡಂಬರ ಮಠಮಾನ್ಯದ ಮುನಿರಾಯ
ಭಾಗ್ಯ ಸಂಪನ್ನದ ಜೋಗಿ  ೪

ಧನಪತಿ ಕುಬೇರ ಮನೆಯ ಮಗಳ ಮಗ
ಘನ ನವಲಕ್ಷ್ಮೀ ಎಂಬವರು
ವನಜಾಕ್ಷಿಯರು ನಮ್ಮ ಮನೆ ರಜದೆಗೆವಂಥ
ಕೊನೆಯ ಬಾಗಿಲ ಸೇವಕರು          ೫

ಮುತ್ತಯ್ಯ ಗಳಿಸಿದ ದ್ರವ್ಯವು ಮೂ
ವತ್ತಾರ‍್ಕೋಟಿ ಎತ್ತಿಲಿ ಹೇರ‍್ವರಿಲ್ಲ
ಮರ್ತ್ಯಲೋಕದ ಮಾನವ ಭೂಪರಿಗೆ ಹುಣಿಸೆಯ
ಬೀಜಾವ ಮಾಡಿ ಚೆಲ್ಲಿದೆವು ೬

ಯೋಗಿಜೋಗಿಯು ಶ್ರವಣಸನ್ಯಾಸಿಗಳು ನಮ್ಮ
ಬಾಗಿಲ  ಕಾವ ಸೇವಕರು
ತೂಗುಮಂಚವು ಪಟ್ಟಿಮಂಚ ಸುಪ್ಪತ್ತಿಗೆ
ಭೋಗವನಾರು ಬಣ್ಣಿಪರು  ೭

ಕುಟಿಲಸಿದ್ಧರು ನವಕೋಟಿ ಮುನಿಗಳೆಮ್ಮ
ಮಟವ ಬಳೆವ ಸೇವಕರು
ನಿಟಿಲಲೋಚನೆ ನಿರ್ವಾಣಿ ನಿರಂಜನ
ವಟವೃಕ್ಷ ಪರಂಜ್ಯೋತಿ ನಾವು        ೮

ವೇದಶಾಸ್ತ್ರವನೋದುವ ಮುನಿಗಳು ನಮ್ಮ
ಪಾದವ ತೊಳೆವ ಸೇವಕರು
ಆಧಿಭೈರವ ಸಿಂಗಿನಾಥ ಜೋಗಿಗಳೆಮ್ಮ
ಕಾದುಕೊಂಡಿಹರರಮನೆಯ           ೯

ಮೇರುಗಿರಿಯ ಮಠವನು ಕಂಡವರಿಲ್ಲ
ಸೂರ್ಯಚಂದ್ರರಿಗಗಣಿತವು
ಆರುಶಾಸ್ತ್ರವು ನಾಲ್ಕವೇದ ಪುರಾಣಕೆ
ದೂರವಾಗಿಹ ನಮ್ಮ ಸ್ಥಲವು           ೧೦

ಬಿಟ್ಟು ನಮ್ಮಯ ಗಿರಿ ಗಂವ್ಹಾರಗಳನೀಗ
ಚಿಟ್ಟಿಗ ಮುನಿಯನು ಕೂಡಿ
ಸೃಷ್ಟಿಗೀರೇಳು ಲೋಕವನೆಲ್ಲ ತಿರುಗುತ
ನಿಟ್ಟುಳ್ಳ ಶರಣರನರಸಿ      ೧೧

ಚರಿಸುತ ಬರಲೋರ್ವ ಮುರವೈರಿ ಮಾಧವ
ಚರಣವ ಪಿಡಿದು ಭಜಿಪರು
ವರಹವತಾರದ ಹರಿ ಕಂಕಳಾಯುಧ
ಧರಿಸಿದ ಶರಣು ಮಾಡುತಲಿ          ೧೨

ಸರಸಿಜೋದ್ಭವನ ಮನಿಗ್ಹೋಗಿ ನಿಲ್ಲಲು
ಎರಗಿ ಕುಳ್ಳಿರಿಸಿ ಭಕ್ತಿಯಲಿ
ವರಮುನಿ ಜೋಗಿಗಳಿಸುತ ಸುವರ್ಣದ
ಶಿರದ ಕಾಲವನಿತ್ತ                      ೧೩

ಕಾಮನ ಮನೆಗೆ ಹೋದರೆ ತನ್ನ ಶರೀರವ
ಸ್ವಾಮಿಗರ್ಪಿಸಿದನು ಕೇಳು
ಈ ಮಹಾಭಕ್ತಿಭಾವನೆಗಳ ಕೈಕೊಂಡು
ಭೂಮಿಯೊಳಗೆ ಚರಿಸುತಲಿ            ೧೪

ಹಾಲ ಸಮುದ್ರದ ನೀಲಗಂಗೆಯ ಕೇಳು
ಮೇಲು ದೇಶಗಳ ನೋಡುತಲಿ
ಪಾಲಿಸಿ ಪರಮಲೀಲೆಯಿಂದಾಡುವ
ಬಾಲಸ್ತ್ರೀಯರ ಭಕ್ತಿ ಕೇಳು  ೧೫

ವಾಣಿಯು ಮಾಧವ ಪಾಣಿಯು ಚಂದ್ರನ
ರಾಣಿಯು ರೋಹಿಣಿದೇವಿ
ಜಾಣಿರಂಭೆಯು ಊರ್ವಸಿ ಚಿತ್ರಾಂಗಿಯು
ಮಾಣದೆ ಭಕ್ತಿ ಮಾಡಿದರು  ೧೩

ದೇವಗಂಗೆಯು ನಾಗಕನ್ನೆಯು ಮರ್ತ್ಯದ
ಜೀವಗನ್ನೆಯರು ಭಕ್ತಿಯಲಿ
ತಾವರೆ ಕಮಲದಿ  ಸೇವೆಗಳನು ಮಾಡಿ
ಭಾವಭಿಕ್ಷೆಗಳ ನೀಡಿದರು    ೧೭

ವಿಮಲೇರ ಭಕ್ತಿಗಳ ಕೈಕೊಂಡ ಮನಿಗಳ
ಸೀಮೆಗಳ ನೋಡುತ ಬರಲು
ಹೇಮಗಿರಿರಾಜನ ಮಗಳು ಪಾರ್ವತಿ ಭಕ್ತಿಯ
ಕ್ರಮದಿ ನಿಂದಿರಿಸುತಲೆಮ್ಮ            ೧೮

ಮುನಿರಾಯ ಜೋಗಿಯೆ ಘನಪುಣ್ಯ ಕ್ಷೇತ್ರವೆ
ನೆನವೆಂಬ ನಿಜದ ಪಾಲ್ಗಡಲೆ
ವನವ ಸಂಚರಿಸುತ ದಣಿದು ಬಂದಿರಿಯೆಂದು
ತನುಮನಗಳ ಧಾರೆಯರೆದು          ೧೯

ಮುನಿಯ ಕಾಣುತಲೆದ್ದು ವಿನಯದಿ ಶರಣೆಂದು
ವನಜಾಕ್ಷಿ ಹಸ್ತವ ಮುಗಿದು
ಮನದೊಳುತ್ಸಹಗೊಂಡು ಘನಮಹಿಮನ ನೋಡಿ
ವನಿತೆಪಾರ್ವತಿ ಕೊಂಡಾಡಿದಳು     ೨೦

ವಚನ :

ಜೋಗಿ ಬಂದನು ನೋಡಿರೇ ನಿರಂಜನ ಸ್ವಾಮಿ ಬಂದನು ಕಾಣಿರೇ
ಜಾಗದ ಸ್ವಪ್ನದ ಕಿನ್ನರಿಗಳ ಪಿಡಿದು ಜೋಗಿ ಬಂದನು ಕಾಣಿರೇ  ಪಲ್ಲ

ಆದಿ ಪ್ರಣಮ ಸಿಂಗಿ ಓಂಕಾರನಾದ
ಮಾಧವನಯನಾದಿ ಪೂಜಿತವಾದ
ವೇದಶಾಸ್ತ್ರಗಳಿಗೆ ನಿಲುಕದೆ ಹೋದ | ಭಕ್ತ
ಸಾಧಕಮುನಿಗಳ ಮನಕೆ ವಿನೋದ ೧

ನೊಸಲೊಳು ಕತ್ತುರಿ ಬಿಸಿಗಣ್ಣ ಜೋಗಿ
ಕುಸುಮಶರನ ಪಿತನಮಿತಾಂಗ ಜೋಗಿ
ಮಿಸುನಿಗಪ್ಪರ ತಲೆಯೋಡಿನ ಜೋಗಿ | ಮರ್ತ್ಯ
ವಸುಧೆ ಈರೇಳುಲೋಕ ರಕ್ಷಿಸಬಂದ ಜೋಗಿ ೨

ಕಪ್ಪುಗೊರಳ ನೀಲಕಂಠದ ಜೋಗಿ
ಪುಷ್ಪಶರನ ಸುಟ್ಟ ಭಸಿತಾಂಗ ಜೋಗಿ
ಸರ್ಪಭೂಷಣ ಸಕಲಾತ್ಮಕ ಜೋಗಿ | ಸುಟ್ಟ
ಕರ್ಪುರ ಜ್ಯೋತಿಯ ಪ್ರಕಾಶದ ಜೋಗಿ         ೩

ನವಕೋಟಿಸಿದ್ಧರ ಗುರುನಾಥ ಜೋಗಿ
ಭುವನದೊಳಗೆ ನಿಮಗೆಣೆಗಾಣೆ ಜೋಗಿ
ರವಿಕೋಟಿ ತೇಜದ ಪ್ರಕಾಶದ ಜೋಗಿ | ಎಮ್ಮ
ಭವ ಮಾಲೆಗಳನು ಖಂಡಿಸಬಂದ ಜೋಗಿ     ೪

ಬಂಗಾರ ಹಾವುಗೆ ಶೃಂಗಾರ ಜೋಗಿ
ಸಂಗೀತ ಪ್ರಬಂಧ ನುಡಿಸುವ ಜೋಗಿ
ಜುಗುಳಿ ದೈವದ ಪಿತ ಮಹಾಜೋಗಿ | ಮುಕ್ತಿ
ಯಂಗನೆಯರ ಪ್ರಾಣಲಿಂಗವೆ ಜೋಗಿ          ೫

ಮುದುಕ ತದುಕನಲ್ಲ ಮುನಿ ಮಹಾಜೋಗಿ
ಹದಿನಾರು ವರುಷದ ಪ್ರಾಯದ ಜೋಗಿ
ವಿಧಿಯು ಮೃತ್ಯುವಿನೆದೆದಲ್ಲಣ ಜೋಗಿ | ನಮ್ಮ
ಹೃದಯ ಕಮಲದ ಪರಶಿವನೆಂಬ ಜೋಗಿ      ೬

ಚಿಮ್ಮುರಿದುರುಬಿನ ಕಿನ್ನರಿ ಜೋಗಿ
ಮನ್ನೆಯರಸೇನೋ ಮಹಾರಾಯ ಜೋಗಿ
ಇನ್ನು  ಈ ಲೋಕದ ಮುನಿಯಲ್ಲ ಜೋಗಿ | ಮುಕ್ತಿ
ಹೊನ್ನ ಪಂಜರದರಗಿಳಿ ರಾಮಜೋಗಿ          ೭

ಕಣ್ಣುಮೂಗಿಲಿ ಕರಚಲ್ವನೆ ಜೋಗಿ
ಬಣ್ಣಿಸಲಳವಲ್ಲ ಬಗೆ ನಿನ್ನ ಜೋಗಿ
ಹೆಣ್ಣು ಜಾತಿಯು ನೋಡಿ ಉಣ್ಣಾರು ಜೋಗಿ | ನಿಮ್ಮ
ಸಣ್ಣರಾಗಕೆ ಸಿಲುಕದವರಾರೊ ಜೋಗಿ          ೮

ಇಂಥ ಚಲ್ವಿಕೆಯ ನೀ ಪಡೆದೆಲೊ ಜೋಗಿ
ಭ್ರಾಂತುಭ್ರಮೆಗಳ ಬಿಟ್ಟು ಬಾರೆಲೊ ಜೋಗಿ
ಮಂತ್ರಗಾರುಡ ಬಲ್ಲ ಮಲೆಯಾಳ ಜೋಗಿ | ನಮ್ಮ
ತಂತ್ರವಿನ್ನಾರಿಗೆ ತಿಳಿಯದೊ ಜೋಗಿ           ೯

ಆವ ದೇಶದರಸಿನ ಮಗ ನೀನು ಜೋಗಿ
ದೇವಲೋಕದ ಪುರುಷರೊಳಗಿಲ್ಲ ಜೋಗಿ
ದೇವೇಂದ್ರ ಅಜಹರಿ ಗುರುವೇನೊ ಜೋಗಿ | ನಮ್ಮ
ಜೀವರತ್ನವ ಸೂರೆಗೊಳಬಂದ ಜೋಗಿ         ೧೦

ಮನವ ನೋಡಲಿ ಬಂದ ಮುನಿ ಮಹಾಜೋಗಿ
ಮನ್ಮಥರರಸೇನೊ ಮಲೆಯಾಳ ಜೋಗಿ
ಕನಕಗೃಹಕಿನ್ನು ಬಿಜಮಾಡಿ ಜೋಗಿ | ನಮ್ಮ
ಘನಗುರು ಸಂಗಮೇಶ್ವರನೇನೊ ಜೋಗಿ      ೧೧

ಸಂಗತ್ಯ :

ಹೀಗೆಂದು  ಸ್ತುತಿಸುತ ಜೋಗಿಯ ಕೊಂಡಾಡಿ
ಬೇಗದಿಂದ ಉಪಚರಿಸಿದಳು
ರಾಗಮಂಚದ ಮೇಲೆ ಜೋಗಿಯ ಕುಳ್ಳಿರಿಸಿ
ಆಗಜೆ ತಿಳಿದು ನೋಡಿದಳು           ೧

ಎಲ್ಲ ಜೋಗಿಗಳೊಳಗಿಲ್ಲ ಇಂತವರೆಂದು
ಹಲ್ಲುದಾಳೆಂಬರದಂಥ
ಗಲ್ಲ ಚಂಪಕಬಿಂಬ ಸೊಲ್ಲು ಮಾಣಿಕ ರತ್ನ
ಅಲ್ಲಮಪ್ರಭುವೆಂಬ ಜೋಗಿ ೨

ಇಂತಪ್ಪ ಜೋಗಿಯ ಬಿಡಬಾರದೆನುತಲಿ
ಕಾಂತೆ ತನ್ನಯ ಮನದೊಳಗೆ
ಸಂತೋಷದಿಂದಲಿ ಸಕಲ ಉಪಚರಿಯಿಂದ
ಸಂತಕಾಲದೊಳರ್ಚಿಸಿದಳು           ೩

ಮಿಂಡಮಕ್ಕಳ ಜೋಗಿಯ ಕಂಡು ಪಾರ್ವತಿ
ದುಂಡು ಮಲ್ಲಿಗೆಯ ಪೂಜೆಯಲಿ
ಗಂಡರ ಕಾಣದೆ ತಂಡತಂಡದ ಊಟ
ಮಂಡಲದೊಳಗುಣಿಸಿದಳು            ೪

ಅಣ್ಣ ಸ್ತ್ರೀಯಳು ನಮ್ಮ ಪುಣ್ಯಸ್ತ್ರೀಯಳು ಮಹಾ
ಪೆಣ್ಣು ಕುಲಕೆ ರತ್ನಮನಿಯು
ಹಣ್ಣು ಕಜ್ಜಾಯಗಳನುಣ್ಣಿಸುವಳಿನ್ನು
ಕಣ್ಣುದಪ್ಪಿದಳೊಂದು ದಿವಸ            ೫

ಎಳೆಮಿಂಚು ಜೋಗಿಯ ತಿಳಿದು ನೋಡಿಯೆ ಕಂಡು
ಕಳವಳಿಸಿದಳೊಂದು ದಿವಸ
ಕೊಳಕಮನವ ಕಂಡು ಹಳಿವುತ ಮನದೊಳು
ಕಳಿದು ಬಿಟ್ಟೆವು ನಾವಿನ್ನವಳ           ೬

ನಂಬಬಾರದು ನಮ್ಮ ಗಂಭೀರ ಹೋದವು
ಎಂಬುತ ಮರ್ತ್ಯಕ್ಕಿಳಿದೆವು
ಕುಂಭಿನಿ ಹದಿನಾಲ್ಕು ಡಂಬರಗಳ ನೋಡಿ
ಹಂಬಲಿಸಿದೆ ನಿನ್ನ ಗಿರಿಯ  ೭

ಮಾಯಪಾಶಗಳಿಗೆ ಗಾಯತ್ರಿಗಳನೊಡ್ಡಿ
ಕಾಯಸಿದ್ಧಿಗಳ: ಪಡೆದೆವು
ರಾಯರ ಭಕ್ತಿಗಳಾಯತಗಳ ನೋಡಿ
ತೋಯಜಾಕ್ಷಿಯೆ ನಿನ್ನ ಸ್ಥಲದ        ೮

ಮೆಟ್ಟಿಲು ನಮ್ಮಯ್ಯ ಘಟ್ಟಿಯೋಗದ ಮನ
ಬಿಟ್ಟೆವು ಪರಬ್ರಹ್ಮಸ್ಥಲವ
ಚಿಟ್ಟಿಗ ಮುನಿಮಾತು ಸುಟ್ಟುಹೋಯಿತು ನಿನ್ನ
ದೃಷ್ಟಿಯೊಳೇನುಂಟು ತರುಳೆ          ೯

ಕಡೆಗಣ್ಣ ನೋಟಕೆ ಬೆಡಗುಯೋಗದ ಮನ
ಬಿಡಿಸಿಕೊಂಡೆವು ನಿನ್ನ ಬಳಿಗೆ
ನುಡಿಯಲು ನಿನ್ನಯ ಕಡುಚಲ್ವ ಮಾತಿಗೆ
ಒಡೆದವು ಹೃದಯದೊಳ್ಕಮಲ        ೧೦

ಲಲನೆಯ ಮೋಹಕೆ ಸಿಲುಕಬಾರದು ಎಂದು
ಹಲವು ವಿದ್ಯಗಳನೇ ಕಲಿತು
ಬಲವಂತ ಚಲವಂತ ನೆಲವಂತ ಕೆಡಿಸಿದ
ಮಲೆಯಾಳ ವಿದ್ಯವ ಕೇಳು            ೧೧

ವೇದಗಳನು ಬಲ್ಲ ಮಾಧವ ಜೋಗಿಯೊಳಾ
ಡಿದೆ ತರ್ಕದ ವಿದ್ಯೆಗಳ
ವಾದಿಸಿ ಎಮ್ಮಯ ಬೂದಿಯ ಚೆಲ್ಲಲು
ಪಾದವ ಕಾಣದೆ ಹೋದ    ೧೨

ಚುಕ್ಕಲಪರ್ವತ ದಿಕ್ಕನಾಳುವನೊಬ್ಬ
ರಕ್ಕಸ ಮೋರೆಯ ಜೋಗಿ
ಇಕ್ಕಿದ ಮೋಡಿಯ ತರ್ಕವ ಗೆಲೆಯುತ
ಹಕ್ಕಿಯ ರೂಪವ ತಾಳುತಲಿ          ೧೩

ಮುದ್ದು ಶ್ರೀಮುಕುಟವನೊದ್ದು ದಾಟುವೆನೆಂದು
ಹದ್ದಿನ ತೆರದಿ ಹಾರಿದರೆ
ಸಿದ್ದರು ನವಕೋಟಿವಿದ್ಯೆಜಾಲಗಳಿಂದ
ಒದ್ದು ತುಳಿದು ಗೋನ ಮುರಿದೆ       ೧೪

ಸತ್ತ ತಲೆಯು ಕೈಗೆ ಹತ್ತಿಯಾರ್ಭಡಿಸಿ ಕ
ಣ್ಗತ್ತಲೆ ಕವಿದು ಕಂಗೆಡಲು
ಮತ್ತೆ ನೋಡಿದರತ್ತ ರಣಮಯ ಹೆಣಮಯ
ನೆತ್ತರ ಹಾರವ ಬೇಡಿದರೆ   ೧೫

ಗಣಿಕಾರ ತನ್ನಯ ಹಣೆಯ ರಕ್ತವ ಚೆಲ್ಲಿ
ಉಣಿಸಿದ ತಲೆಯೋಡುಗಳಿಗೆ
ಕುಳಿತಿರ್ದ ಜನವೆಲ್ಲ ಹಣೆಯ ಗಾಯವ ಕಂಡು
ಮುಳಿಗಿದರಕಟಕಟ ಎನಲು            ೧೬

ಮೀರಿದ ಭೂತವು ಹೀರಲು ರಕ್ತವ
ಕಾರಿ ಬಿದ್ದನು ಸೊರಗುತಲಿ
ಸೇರಿರ್ದ ಜನವೆಲ್ಲ ಯಾರ ಇಳಿಯ ನೋಡಿ
ಗಾರುಡಿಗರು ಸತ್ತರೆನುತ   ೧೭

ಸೊರಗಿ ಬಿದ್ದರ ಕಂಡು ಮುನಿದೆದ್ದು ಉಪಚರಿಸಿ
ಗರಿಯ ತಾಂಬುಲಗಳಲಿ ಉಳುಹಿ
ಧರೆಯ ಗಾರುಡಿಗಾರ ಮುರಿದೊತ್ತಿ ಚರಿಸುತ
ಬರಲೊಬ್ಬ ತಡೆದನು ಕೇಳು           ೧೮

ಪಾತಾಳ ಲೋಕದ ವೇತಾಳನೆಂಬವ
ಭೂಮಿಯಾಕಾರದ ಜೋಗಿ
ತಾಕಿದನೆನ್ನಯ ಭೀತಿಸುಮಂತ್ರಕೆ
ಸೋತುಸೋತುಹೋದನು ನಿಮಿಷದಲ್ಲಿ        ೧೯

ಲಲನೆ ಕೇಳೆಲೆ ಮತ್ತೆರ ಜಲಂಧರನೆಂಬನ
ಬಲುಹನಿನ್ನೇನ ಪೇಳುವೆನು
ಹಲವು ಮಂತ್ರಗಳಿಂದ ಕೆಲವು ದೇವತೆಗಳ
ಬಲು ಸಂಕೋಲೆಗಳನೆ ಹಾಕಿ         ೨೦

ಹನ್ನೆರಡು ವರುಷವು ಅನ್ನವ ಕಾಣದೆ
ಕನ್ನವ ಕಡಿದೋಡಿಬರಲು
ಪನ್ನಗಧರನನು ಮರೆಯಬಿದ್ದರು ಯಾನೆ
ನನ್ನ ಪಟ್ಟಣಕವ ಬರಲು     ೨೧

ಇದಿರ ರೂಪನೆ ತಾಳಿ ಇದಿರಾಗಿ ನಡೆವುತ
ಒದಗಿ ಆಡಿದೆ ಅವನೊಡನೆ
ಪದರ ವಿದ್ಯೆಗಳಿಂದ ತುದಿ ಮೊದಲಾಡಲು
ಒದಗಿತು ಕೋಪಟೋಪಗಳು          ೨೨

ಭೂಮಿ ಚಕ್ರಗಳಿಂದ ಆ ಮಹಾದೈತ್ಯನ
ಗೋಮಾಳಗಳ ಮುರಿದೊತ್ತಿ
ತಾಮಸ ತಲೆಯನು ನೇಮದಿಂ ಧರಿಸಿದೆ
ಸೊಮವದನೆಯೆ ಕೇಳಿನ್ನು ೨೩

ಕೊಲ್ಲಾಪುರದೊಳೊಬ್ಬ ಬಲ್ಲಿದ ದುರ್ಗಿ ತಾ
ಎಲ್ಲ ವಿದ್ಯೆಕೆ ಗುರುವೆನಿಸಿ
ಕಳ್ಳ ಜೋಗಿಗಳನು ಮೆಲ್ಲನೆ ಹಿಡಿತಂದು
ಮುಳ್ಳನೂರಿಸಿ ತಿರುಹುವಳು           ೨೪

ಬಿರಿದ ಸಾರಲು ಕೇಳಿ ಗರ್ವ ಮುರಿವೆನೆಂದು
ಪುರದೊಳು ನಾ ಹೋಗಿ ನಿಲ್ಲಲು
ಉರವಣಿಸುತಲೆದ್ದು ಬಿರಿನೋಟದಿಂದಲ್ಲಿ
ಸುರಿದಾಳು ತನ್ನ ವಿದ್ಯೆಗಳ                      ೨೫

ಸಿಂಗಿಕಾಳಕೂಟ ನುಂಗಬಾರದ ವಿಷ
ಹಿಂಗದೆ ಮೋಡಿ ಹಾಕಿದರೆ
ಅಂಗೈಯಲೊರಸುತ ಜಂಗುಳಿದುರ್ಗಿಯ
ಶೃಂಗಾರ ಮೂಗುಗಳನರಿದೆ           ೨೬

ಮಾರಿಯ ಮುರಿದೊತ್ತಿ ಭಾರಿ ಕಿನ್ನರಿಮಾಡಿ
ತೋರಿದೆ ನಾನಾ ವಿದ್ಯೆಗಳ
ಮೂರುಲೋಕದೊಳಗನಗೆಣೆಯಿಲ್ಲ ಶ್ರೀಗಂಗೆ
ಮೀರಿದ ಮಲೆಯಾಳ ಜೋಗಿ         ೨೭

ಭಾರಿ ವಿದ್ಯೆವು ನಮ್ಮ ಗಾರುಡವಿದ್ಯೆವು
ಮೂರು ಲೋಕದ ಇಂದ್ರಜಾಲ
ನಾರಸಿಂಹನ ಮಂತ್ರ ವೀರಭದ್ರನ ಯಂತ್ರ
ಹಾರಿಹೋದವು ನಿನ್ನ ಬಳಿಯ         ೨೮

ಇಂಥ ವಿದ್ಯೆಗಳೆಲ್ಲ ಏನಾಗಿ ಹೋದೆವೊ
ಕಾಂತೆ ನಿನ್ನಯ ಸ್ಥಲದೊಳಗೆ
ಚಿಂತೆ ಹತ್ತಿತು ನಿನ್ನ ಚಲ್ವರೂಪಿಗೆ ಚಂದ್ರ
ಕಾಂತೆ ನೀ ಕಡೆಗಿಡಬೇಡ  ೨೯

ಏನು ಕಾರಣ ಮುನ್ನ ತಪವ ನೀ ಮಾಡಿದೆ
ನಾನು ಸಿಲ್ಕಿದೆ ನಿನ್ನ ಬಲೆಗೆ
ಮಾನಿನಿ ಸತಿಸುತರೆನಗಿಲ್ಲ ಶ್ರೀಗಂಗೆ
ನಾನು ನೀನೇಕ ಪ್ರಾಣಿಗಳು           ೩೦

ದೇಶದೇಶವ ತಿರುಗಿ ಬೇಸತ್ತೆನೆಲೆ ಗಂಗೆ ಸ
ನ್ಯಾಸಿ ಶಿವನ ಮಾರ್ಗಗಳು
ಶೇಷನಿಗಳವಲ್ಲ ಗಳಿಸಿದ ದ್ರವ್ಯವ
ಕೂಸು ಕುನ್ನಿಗಳುಂಬೋರಿಲ್ಲ          ೩೧

ಹೆಂಡಿರು ಮಕ್ಕಳು ಎನಗಿಲ್ಲ ಶ್ರೀಗಂಗೆ
ಉಂಡುಟ್ಟು ಸುಖದೊಳಗಿಹುದು
ಮಂಡೆ ಮಾಣಿಕ ಮಾಡಿ ಸಲಹುವೆನೆಲೆ ಗಂಗೆ
ಕೆಂಡಗಣ್ಣಿನ ಶಿವನಾಣೆ       ೩೨

ಜ್ಞಾನಿಬಸವ ಕೇಳು ಆನಂದ ಜೋಗಿಯು
ನಾನಾ ಗಾರುಡಗಳ ಮಾಡಿ
ಮಾನಿನಿಯೆಳ ಬಾಯ ಮೌನವ ಮಾಡಿದ
ಭಾನು ಪ್ರಕಾಶದ ಜೋಗಿ   ೩೩

ಹಲವು ಬೋಧೆಗಳೇತಕೆನುತಲಿ ಮಲೆಯಾಳ
ಒಲುಮೆಯ ಬೂದಿಯ ತೆಗೆದು
ತಲೆ ಮಾಲೆಗಳ ಮೇಲೆ ಮಂತ್ರಿಸಿ ಚೆಲ್ಲಲು
ಮಲಗಿತು ಜ್ಞಾನದ ಜ್ಯೋತಿ           ೩೪

ದೇವಬಸವ ಕೇಳು ಭಾವಜ ಹರಜೋಗಿ
ಸ್ತ್ರೀವಶ್ಯ ಜನವಶ್ಯಗಳನು
ಭಾವೆಯ ತಲೆಯೊಳು ಕಾಮಾರಿ ತಳೆಯಲು
ಜೀವದ ಜ್ಞಾನವ ತಿಳಿದು    ೩೫

ತಳೆಯಲು ಚಂದ್ರನ ಕಳೆಯೇರಿ ಕಾಂತಿಯು
ತಿಳಿದಲು ತನ್ನಯ ಶಿವನ
ಸುಳಿದಾನು ಎನ್ನಯ ಎಳೆಭಕ್ತಿಭಾವಕೆ
ತಳಿದ ಪಾದಕೆ ಎರಗಿದಳು ೩೬

ಖಾಸಭಾಗದೊಳಿಹ ಏಸೊಂದು ದಿನಿಸಿನ
ಮೀಸಲ ಫಲಗಳ ನೀಡಿ
ಸಾಸಿರ ಭಾಗದಿ ಸೋಸಿದ ಬಿಳಿಯೆಲೆ
ಈಶನಿಗೆಡೆಮಾಡಿದಳು      ೩೭

ಮರುಗ ಮಲ್ಲಿಗೆ ಜಾಜಿ ಸುರಗಿ ಸೇವಂತಿಗೆ
ಸರಗಳ ಮಾಡಿ ಧರಿಸುತ
ಬೆರಸಿದ ಕಸ್ತೂರಿ ಪುನುಗನು ಲೇಪಿಸಿ
ಕರವ ಮುಗಿದು ಸ್ತುತಿಸಿದಳು          ೩೮

ಜೋಗಿ ಪದನು :

ಜೋಗಿ ಬಂದನು ನೋಡಿರೆ ನಿರಂಜನ ಜೋಗಿ ಬಂದನು ಕಾಣಿರೆ
ನಾಗಸ್ವರಸುರಲೋಕವೆಂಬ ಕಿನ್ನಾರಿ ಪಿಡಿದು ಜೋಗಿ ಬಂದನು ನೋಡಿರೆ || ಪಲ್ಲ

ಮೂರು ನಾಳವ ನೋಡಿ ಮಧ್ಯನಾಳವ ಹೊಳವುಮಾಡಿ
ಆರಾದಿ ಚಕ್ರದ ಪೀಠವದರ ಮೇಲೆ ಊರ್ಧ್ವಮುಖ ಶೂನ್ಯಶೂಲ
ಮೂರು ತನು ಸೋರೆಕಾಯಿ ಈಡಪಿಂಗಳ ತಂತಿಸ್ವರವೇ ಜೀವಾಳವು
ಆರಾರು ಮೆಟ್ಟಿನ ಕಿನ್ನರಿಯ ನುಡಿಸುತ          ೧

ದಶದಿಕ್ಕು ವದನಂಗಳೆ ನಿರಾಕಾರ ಜಟಾಮುಕುಟುವು
ಶಶಿರವಿಗಳಗ್ನಿ ನೇತ್ರಂಗಳು ಮೇರುಮಂದಿರುವೆ ಕಾಮಾಕ್ಷಿಯು
ಎಸೆವ ನಕ್ಷತ್ರಂಗಳೆ ಕೊರಳಲ್ಲಿ ಪಸರಿಸಿದ ದಾರಗಳು
ಕುಸುವಂಶರನ ಸುಟ್ಟ ಬೂದಿಯ ಮೈಯೊಳು ಪೂಸಿ    ೨

ಫಣಿಮಣಿಗಳ ಭರಣವು ಪಂಚಮಹಾತತ್ವವೆ ಜನ್ನಿವಾರ
ಬಣಗುವೆಣನ ಸೀಳಿ ಚರ್ಮವನುಗಿದುಟ್ಟು ಗಜಚರ್ಮಗಳ ಪೊದ್ದನು
ಗುಣತ್ರಯವೆ ಹುಲ್ಲೆಯ ಮರಿ ಡಮರುಗ ಹಸ್ತಚಕ್ರದ ಶೂಲವು
ಪ್ರಣಮವೇ ಸಿಂಗಿ ತಲೆಯೋಡು ಕಪ್ಪರವಿಡಿದು           ೩

ರಾಗದಿವ್ಯ ಫಣಿಯ ಮೇಲೆ ವೈರಾಗ್ಯದ ಕಂತೆ ತೊಟ್ಟು
ಸಾಗರವೆಂಬ ಕಮಂಡಲ ಬ್ರಹ್ಮಾಂಡವೇ ಕಕ್ಷಪಾಳ
ಆಗುಹೋಗೆರಡಿಲ್ಲದೆ ಅಖಂಡ ಪರಿಪೂರ್ಣವಾದ
ಶ್ರೀಗುರುಶರಣನು ಭಾವಭಿಕ್ಷಕೆ ಬಂದ           ೪

ಆದಿಮಧ್ಯಂತರಹಿತ ಸಕಲ ತತ್ವವೇ ನಿತ್ಯತೃಪ್ತ
ವೇದಶಾಸ್ತ್ರಾಗಮ ಪೌರಾಣ  ಸ್ತುತಿಗಳಿನ್ನು ಭೇದಿಸದಗಮ್ಯ ಜೋಗಿ
ನಾದ ಕಳೆ ಬಿಂದುಗಳಿಗೆ ಸಿಲುಕದಿಹ ಮೂದೇವರೊಡೆಯ ಜೋಗಿ
ಆದಿಗುರು ಪರಶಿವ ಸಂಗಮೇಶ್ವರನೆಂಬ ಜೋಗಿ         ೫

ವಚನ :

ವೇಣಿ ಕಿನ್ನರಿಯ ಪಿಡಿದನೆಲೆ ಜೋಗಿ | ಭಕ್ತಿ
ಪ್ರಾಣಕಲ್ಪ ಚಿಂತಾಮಣಿಯೆ ಎಲೆಜೋಗಿ
ವಾಣಿಪತಿಗೆ ನಿಲುಕದಿಹನೆ ಎಲೆಜೋಗಿ | ನನ್ನ
ಪ್ರಾಣವಾದರೆ ನಿನ್ನಾ ದಯ ಎಲೆಜೋಗಿ        ೧

ಕಲಹಪ್ರಿಯ ನಾರದನೆ ಮುನಿರಾಯ | ನೀನು
ಒಲಿದು ಕೇಳು ಇವಳ ಸ್ತುತಿಯ ಮುನಿರಾಯ
ಬಲೆಗಾರರ ಮಗಳಲ್ಲವೊ ಮುನಿರಾಯ | ನನ್ನ
ತಲೆಯೊಳಗಣ ಬ್ರಹ್ಮಕಾಂತಿಯು ಮುನಿರಾಯ           ೨

ಇಂಥ ಸತಿಯ ಬಿಟ್ಟಿರಿನ್ನು ಮುನಿರಾಯ | ನಮಗೆ
ಎಂಥ ಮುಕ್ತಿ ದೊರಕುವುದೋ ಮುನಿರಾಯ
ಮಂತ್ರದಿಂದ  ಮರುಳಾದಳೊ ಮುನಿರಾಯ | ದೇ
ಶಾಂತ್ರ ಫಲವು ದಕ್ಕಿತೆಮಗೆ ಮುನಿರಾಯ     ೩

ಏನೆಂದು ಹೇಳಿ ಶಿವನು ನಗುತ ಗುರುರಾಯ | ರತ್ನ
ಕೆಂದಾವರೆಯ ಹೂವ ಮಾಡಿ ಗುರುರಾಯ
ಚಂದ್ರಕಾಂತಿ ಜಡೆಯೊಳಿಟ್ಟು ಗುರುರಾಯ | ಮುಕ್ತಿ
ಮಂದಿರದೊಳಡಗಿಸಿದನು ಗುರುರಾಯ        ೪

ಮರುಳು ಮಾಡಿ ಶಿರದೊಳಿಟ್ಟು ಗುರುರಾಯ | ಪುಷ್ಪ
ದರಳು ಮಾಡಿ ಧರಿಸಿಕೊಂಡು ಗುರುರಾಯ
ಮರುಳ ಜಾತಿ ಕಂಡರೆಂದು ಗುರುರಾಯ | ಶಿವನು
ಇರುಳು ಹಗಲು ಚಿಂತಿಸಿದನು ಗುರುರಾಯ   ೫

ಮಡದಿ ಗಿರಿಜೆ ಕಂಡಳೆಂದು ಗುರುರಾಯ | ತನ್ನ
ಜಡೆಯ ಸುತ್ತಿ ಮಡಗಿಕೊಂಡು ಗುರುರಾಯ
ಬೆಡಗಿನಿಂದ ನಡೆದು ಬರುತ ಗುರುರಾಯ| ಮುನಿಯೆ
ಒಡೆಯದಿರು ಸುದ್ದಿಗಳನು ಗುರುರಾಯ         ೬

ಆರು ಕಾಣಗೊಡದೆ ಬಂದು ಗುರುರಾಯ | ಚಿತ್ರ
ಸೇರಿಕೊಂಡು ಅರಮನೆಯನು ಗುರುರಾಯ
ನಾರಿ ಗಿರಿಜೆ ಕಂಡಳೆಂದು ಗುರುರಾಯ| ಶಿವಗೆ
ತೋರಿತಿನ್ನು ಎದೆಯ ಬಾಗಿಲು ಗುರುರಾಯ ೭

ದೇವಮನೆ ಹೊಕ್ಕದಾಗ ಗುರುರಾಯ | ಚಿಕ್ಕ
ಭಾವೆಗೌರಿ ಪಾದತೊಳೆಯೆ ಗುರುರಾಯ
ಸೇವೆ ಮಾಡಿ ಸಲಿಸಿಕೊಂಡು ಗುರುರಾಯ | ತಮ್ಮ
ಚಾವಡಿಗೆ ನಡೆದು ಬಂದು ಗುರುರಾಯ         ೮

ಮುತ್ತಿನ ಸಿಂಹಾಸನದ ಮೇಲೆ ಗುರುರಾಯ | ಜಗದ
ಕರ್ತ ಬಂದು ಮಂಡಿಸಿದನು ಗುರುರಾಯ
ಸುತ್ತ ಬಂದು ಮೆರೆದರಾಗ ಗುರುರಾಯ | ನಮ್ಮ
ಹೆತ್ತ ಶಿವನು ಬಂದನೆಂದು ಗುರುರಾಯ        ೯

ದೊಡ್ಡ ಹರಿಯು ಬ್ರಹ್ಮಾನಿಗಳು ಗುರುರಾಯ | ಶಿವಗೆ
ಒಡ್ಡೋಲಗರ ಕೊಟ್ಟರಾಗ ಗುರುರಾಯ
ಗಡ್ಡಜಡೆಯ ಘನ ಮಹಾಂಶು ಗುರುರಾಯ | ಕರವ
ನೊಡ್ಡಿ ಶಿವನ ಓಲೈಸಿದರು ಗುರುರಾಯ       ೧೦

ನಿಗಮದೊಡೆಯ ಸಿಂಹಾಸನದಿ ಗುರುರಾಯ | ಕುಳಿತು
ಭುಗಿಲು ಹುಟ್ಟಿತೆದೆಯೊಳಿನ್ನು ಗುರುರಾಯ
ಅಗಜೆ ಗಿರಿಜೆ ಕಂಡಳೆಂದು ಗುರುರಾಯ | ಚಿಂತೆ
ಮಿಗಿಲು ಹುಟ್ಟು ನೋಡುತಿರಲು ಗುರುರಾಯ ೧೧

ಇಂಥ ಪರಮ ಗಿರಿಜೆದೇವಿ ಗುರುರಾಯ | ತಮ್ಮ
ಚಿತ್ತದೊಳಗೆ ಎರಡಾಗುತಲಿ ಗುರುರಾಯ
ಹೊತ್ತು ನಿಮಿಷ ಕುಳಿತುದಿಲ್ಲ ಗುರುರಾಯ | ಶಿವಗೆ
ಎತ್ತಣಿಂದ ಕೇಡು ಬಂತೊ ಗುರುರಾಯ         ೧೨

ಎಂಟುದಿಕ್ಕುಗಳನು ನೋಡಿ ಗುರುರಾಯ | ಶಿವನು
ತುಂಟತನವ ಮಾಡಿದಾನೊ ಗುರುರಾಯ
ಗಂಟಲೊಳಗೆ ತಡೆಗಳಿಲ್ಲ ಗುರುರಾಯ | ನಮಗೆ
ಕಂಟಕಗಳ ತಂದ ಶಿವನು ಗುರುರಾಯ        ೧೩

ಮಾಯ ಮಾಡಿದ ಮರ್ತ್ಯದವರೊಳಗೆ ಗುರುರಾಯ | ಶಿವನು
ಕಾಯ ಜೀವಗಳನು ಕಳೆದನೇನೊ ಗುರುರಾಯ
ಬಾಯ ತಡೆಗಳಿದ್ದುದಿಲ್ಲ ಗುರುರಾಯ | ದೊಡ್ಡ
ಹಾವಳಿಯ ತಂದ ಶಿವನು ಗುರುರಾಯ        ೧೪

ಅಳೈದೆಯೊಳು ಸಲಿಸಿಕೊಂಡು ಗುರುರಾಯ | ಶಿವನು
ವೀಳೈಗಳನು ಬೇಡಲಿಲ್ಲ ಗುರುರಾಯ
ಕಳ್ಳನಹುದು ಬಲ್ಲ ಕೆಲಸವು ಗುರುರಾಯ | ದೊಡ್ಡ
ತಳ್ಳಿಗಳನು ಮಾಡಿಕೊಂಡ ಗುರುರಾಯ        ೧೫

ತಿಳಿದುನೋಡಲಿಲ್ಲ ಶಿವನು ಗುರುರಾಯ | ಎದ್ದು
ಕುಳಿತುಕೊಂಡು ಚಿಂತಿಸುತಲಿ ಗುರುರಾಯ
ಗಳಿಲನೆದ್ದು ಸಿಂಗರಿಸುತಲಿ ಗುರುರಾಯ | ಶಿವನ
ತಿಳಿವೆನೆಂದು ನಡೆದಳಾಗ ಗುರುರಾಯ        ೧೬

ಮೆರೆವ ದುಕುಲಾಂಬರವನುಟ್ಟು ಗುರುರಾಯ | ಸರ್ವಾ
ಭರಣ ಹಾರಗಳನು ತೊಟ್ಟು ಗುರುರಾಯ
ಶರಣ ಸತಿಯರ ಕೂಡಿಕೊಂಡು ಗುರುರಾಯ | ತಮ್ಮ
ಹರನ ಓಲಗಕೆ ನಡೆದಳು ಗುರುರಾಯ         ೧೭

ಪಡೆದ ಮಗನ ಕೂಡಿಕೊಂಡು ಗುರುರಾಯ | ಶಿವನ
ಮಡದಿ ಬಂದು ಪಾದಕೆರಗಲು ಗುರುರಾಯ
ತೊಡೆಯ ಮೇಲೆ ಕುಳಿತಳಾಗ ಗುರುರಾಯ | ಶಿವನು
ಮಡದಿಯ ನೋಡಿ ನಗುತಲಿರ್ದ ಗುರುರಾಯ                   ೧೮

ಭಾಗೀರಥಿಯ ಜಡೆಯೊಳಿಟ್ಟು ಗುರುರಾಯ | ಶಿವನು
ಹೇಗಾದಿತೊ ಜಗದೊಳಗೆಯೆನುತ ಗುರುರಾಯ
ಕೂಗಿ ಕದನಗಳ ಮಾಡುವಳು ಗುರುರಾಯ | ಎಂದು
ಧ್ಯಾನಿಸಿದ ಚಿಂತೆಗಳನು ಗುರುರಾಯ          ೧೯

ಸೂಚನೆಯ ಕಂಡಳಿಯನ್ನು ಗಿರಿಜಾತೆ | ಭಾಳ
ಲೋಚನೆ ಶಿವನು ತಂದ ಕಳವ ಗಿರಿಜಾತೆ
ನಾಚಿಕೆಗಳ ಕೊಂಬೆನೆಂದು ಗಿರಿಜಾತೆ | ಶಿವನ
ಯೋಚಿಸಿ ಮಾತಾಡಿಸಿದಳು ಗಿರಿಜಾತೆ         ೨೦

ಪದನು :

ಪರಮಗುರು ಪ್ರಾಣಲಿಂಗಿ ನೀಯೆನ್ನ ಹೊರೆದು ಪಾಲಿಸುವ ಶಿವನೇ
ತಿರುಗುತಲಿ ಆವಾವ ರಾಜ್ಯಗಳ ಚರಿಸಿದಿರಿ ಶರೀರಗಳು ಬಡವಾದುವು    ಪಲ್ಲ

ಪಟ್ಟಮಂಚದ ಮೇಲೆ ಶಿವನಿಗೆ ಪಟ್ಟು ಪಟ್ಟಾವಳಿಯ ಹಾಸಿಕೆ
ಎಷ್ಟು ವರ್ಣದ ಪೂಜೆ ಸರ್ವಸಂಭ್ರಮಗಳನು ಮುಟ್ಟಿಹೇಳುವರಿಗಳವೆ
ಮಟ್ಟಿಹಾರುವನ ಮಾತು ಕೇಳುತ ಸುಟ್ಟರಾಜ್ಯಗಳ ತಿರುಗಿ
ಮೆಟ್ಟಿ ನಡೆದು ಪಾದಪದ್ಮಂಗಳು ಕಂದಿದವು ಸೃಷ್ಟಿಪಾಲಕನೆ ನಿಮಗೆ       ೧

ವೇದಶಾಸ್ತ್ರದಲಿ ತಿಳಿದು ಹರಿ ನಿಮ್ಮ ಪಾದಪದ್ಮವ ಭಜಿಸಲು
ಪೂಜಿಸಲು ಪುಷ್ಪ ಕಂದಲು ತನ್ನ ಕಣ್ಣೆಂಬ ನೈದಿಲವನೇರಿಸಿದನು
ಮಾಧವ ಶ್ರೀಕೃಷ್ಣಗೆ ಶಿವ ನಿಮ್ಮಮೇದಿನಿಯ ಧಾರೆಯೆರೆದು
ಹಾದಿ ಬಟ್ಟೆಗಳಾರಗೊಡವಿಲ್ಲದ ಅರಮನೆಯೊಳೋದಿಕೊಂಡಿರಬಾರದೆ    ೨

ನರಹರಿಯು ನಯನವಿಟ್ಟು ಪೂಜಿಸುವ ಶ್ರೀಚರಣ ಕಂದಿದವೋ
ಸರಸಿಜೋದ್ಭವ ಮುಟ್ಟಿ ಪೂಜಿಸುವ ಶ್ರೀ ಮುಕುಟ ಭರದಿ ತೂಕಗಳಾದವೋ
ಬಿರುಗಾಳಿಗಳು ಬೀಸಲು ಜಡೆಯೆಲ್ಲ ಗಿರಿಯ ಮಣ್ಣುಗಳಾದವೋ
ಎರೆದು ಮಜ್ಜನ ಮಾಡಿ ದುಗುಡವನು ಬಿಡಿಸುವೆನು ಅರಮನೆಗೆ ತೆರಳಿ ಗುರುವೇ   ೩

ಗುರುವೆ ಪರಶಿವನೆ ನಿಮ್ ಚೆಲ್ವಿಕೆಯ ಉರಗೇಂದ್ರ ಹೇಳಲಳವೆ
ಅರುವತ್ತಾರು ಕೋಟಿ ದೈತ್ಯರನು ಕೊಲುವಾಗ ಕರಕರನೆ ಕಂದಲಿಲ್ಲ
ಬರಿಯ ರಾಜ್ಯಗಳ ತಿರುಗಿ ಶಿವ ನಿಮ್ಮ ಸಿರಿಮೊಗವು ಕಂದಲೇಕೆ
ಅರಿಯಬಾರದು ನಿಮ್ಮ ದುಗುಡಗಳನಮಗಿನ್ನು ಮರೆ ಮಾಡಲಿ ಬೇಡವಯ್ಯ          ೪

ಕುಲಗಿರಿಗಳೊಳು ತಿರುಗುತಾ ಶಿವ ನಿಮ್ಮ ಸಲೆ ಸಿದ್ಧರೊಳಗಾಡಿದೊ
ಹಲವು ಮಂತ್ರಗಳನು ಕಲಿತು ಜಾಲೇಂದ್ರನ ತಲೆಯ ನೆಲದೊಳು ಕೆಡಹಿದೊ
ಉಲಿದು ಬೊಬ್ಬೆಗಳಿಕ್ಕುತ ಇಂದ್ರನ ತಲೆ ಮಣ್ಣ ಕಚ್ಚುತಿರಲು
ತಲಗದೆ ರಕ್ತ ರಣಮಂಡಲಂಗಳ ಕಂಡು ಉಲಿಕೆ ಮನದೊಳು ಬೆದರಿದೊ ೫

ಭಸ್ಮಸೂರಗೆ ನಿಮ್ಮಯ ಉರಿಹಸ್ತವ ವಶಮಾಡಲಾಕ್ಷಣ
ಪಶುಮಾನವ ದೆಸೆಗೆಇಡಿಸದಾರ್ಭಟವೊ ಪುಸಿಯಾಡಲಿ ಬೇಡವಯ್ಯಾ
ಶಶಿಮುಖಿಯ ರೂಪತಾಳಿ ವಿಷ್ಣುವು ಭಸ್ಮಸುರನ ಕೊಲ್ಲುತ
ಮಿಸುನಿ ಪುತ್ಥಳಿ ಹೆಣ್ಣು ರೂಪಾಗಿ ತೋರಿದರೆ ಒಸೆದು ಕೂಡಿದ ಭ್ರಮೆಗಳೋ         ೬

ಮಂತ್ರಿ ಬಸವಯ್ಯ ಕೇಳಿ ಗೌರಮ್ಮ ಇಂತು ಹಾಸ್ಯಗಳನಾಡಿ
ಸಂತೈಸಿಕೊಂಡು ಇರಲಾರದೆ ಸಭೆಯೊಳಗೆ ಮುಂತೆ ಬಯಲನೆ ಮಾಡುತ
ಸಂತತಾ ಗುರುಸಂಗನ ತೊಡೆಯೊಳಗೆ ಅಂತು ಬಲ್ಮೆಯಲಿ ಕುಳಿತು
ಇಂತು ಸೈರಣೆ ಈತಗೇಕೆಂದು ಕೇಳಿದಳು ಅಂತರಂಗದ ಬಲ್ಮೆಯಲಿ       ೭

ವಚನ :

ಈಶ ಶಿವನು ನೋಡಿ ನಗುತ ಎಲೆ ದೇವಾ | ನಿಮ್ಮ
ಆಸೆ ಬಾಸೆ ಇಳಿಯಿತಿನ್ನು ಎಲೆ ದೇವಾ
ದೇಶ ಸೀಮೆ ತಿರುಗಿ ಬಂದೆ ಎಲೆ ದೇವಾ | ನಿಮಗೆ
ಏಸು ಪೀಡೆ ಸೋಕಿದಾವೊ ಎಲೆ ದೇವಾ       ೧

ಕಾಗೆಮೋರೆ ನಾರಂದನು ಎಲೆ ದೇವಾ | ನಿಮಗೆ
ಜೋಗಿ ರೂಪ ಧರಿಸಿಕೊಂಡು ಎಲೆ ದೇವಾ
ಸಾಗಿ ರಾಜ್ಯ ತಿರುಗುವಾಗ ಎಲೆ ದೇವಾ | ದೊಡ್ಡ
ಮೂಗಪೀಡೆ ಸೋಂಕಿತೇನೊ ಎಲೆ ದೇವಾ    ೨

ಸುತ್ತಿ ಬಳಸಿ ತಿರುಗುವಾಗ ಎಲೆ ದೇವಾ | ದೇಹ
ಬತ್ತಿತಿನ್ನು ಅಕ್ಕಟಕಟಾ ಎಲೆ ದೇವಾ
ಸತ್ತ ಪೀಡೆ ಏಸು ಉಂಟೊ ಎಲೆ ದೇವಾ | ನಿಮ್ಮ
ನೆತ್ತಿ ಜಡೆಯ ಹೊಕ್ಕವೇನೋ ಎಲೆ ದೇವಾ    ೩

ಬಣ್ಣವಳಿದು ಶರೀರವಿಳಿದು ಎಲೆ ದೇವಾ | ನಿಮ್ಮ
ಕಣ್ಣದೃಷ್ಟಿ ತಗ್ಗಿತ್ಯಾಕೆ ಎಲೆ ದೇವ
ಮಣ್ಣು ಮಸಣ ತಿರುಗುವಾಗ ಎಲೆ ದೇವಾ | ದೊಡ್ಡ
ಹೆಣ್ಣುಪೀಡೆ ಸೋಂಕಿತೇನೊ ಎಲೆ ದೇವಾ     ೪

ಕೆಟ್ಟ ಮೋರೆಯ ನಾರಂದನು ಎಲೆ ದೇವಾ | ನಿಮ್ಮ
ಬೆಟ್ಟದೊಳಗೆರ ಹೊಗಿಸಿದಾನೊ ಎಲೆ ದೇವಾ
ರೊಟ್ಟಿ ಹಿಂಡಿ ಪಲ್ಲೆಕಾಯಿ ಎಲೆ ದೇವಾ | ನಿಮ್ಮ
ಮುಟ್ಟಿ ಜಡೆಯ ಹೊಕ್ಕಿತೇನೊ ಎಲೆ ದೇವಾ   ೫

ಜೂಟಕಾರ ಮುನಿಯು ನಿಮ್ಮ ಎಲೆ ದೇವಾ | ಹಾಳು
ತೋಟದೊಳಗೆ ಹೊಗಿಸಿದಾರೊ ಎಲೆ ದೇವಾ
ಸೋಟ ಹರುಕ ಮೂಳ ಪೀಡೆ ಎಲೆ ದೇವಾ | ನಿಮ್ಮ
ಕೂಟದೊಳಗೆ ಕೂಡಿತೇನೊ ಎಲೆ ದೇವಾ     ೬

ಏಳು ಎರಡು ಯುಗದಲಿಂಥ ಎಲೆ ದೇವಾ | ಒಂದು
ಕಾಲದೊಳು ಗುರುತನರಿಯೆ ಎಲೆ ದೇವಾ
ಬಾಳೆ ಬದುಕುವ ವೇಳೆಯಲ್ಲಿ ಎಲೆ ದೇವಾ | ನಮ್ಮ
ಕೂಳ ನೀರ ಕೆಡಿಸ ಬಂತೊ ಎಲೆ ದೇವಾ      ೭

ಎಷ್ಟು ಬಲಿಯ ಕೊಟ್ಟರಿನ್ನು ಎಲೆ ದೇವಾ | ಬಹಳ
ಕಷ್ಟವಿನ್ನು ಬಿಡುವುದಲ್ಲ ಎಲೆ ದೇವಾ
ಭ್ರಷ್ಟ ಮುನಿಯು ಕೆಡಿಸಿದಾನು ಎಲೆ ದೇವಾ | ಪೂರ್ವ
ದೃಷ್ಟವಿನ್ನು ಬದುಕುವುದು ಎಲೆ ದೇವಾ         ೮

ಆವ ಕಾಲದಲ್ಲಿ ನಮಗೆ ಎಲೆ ದೇವಾ | ನಿಮ್ಮ
ಗೋವಿಂದಜರ ಹಗೆಯು ಎಲೆ ದೇವಾ
ಸಾವು ನೋವು ಬೇನೆಗಳನು ಎಲೆ ದೇವಾ | ಕಂಡು
ತಾವು ನೋಡಿ ನಗುವರಿನ್ನು ಎಲೆ ದೇವಾ      ೯

ಎಂಥ ವಿಧಿಯು ನಮಗೆ ಬಂತೊ ಎಲೆ ದೇವಾ | ಜಗದ
ಜಂತು ಮಾನವರ ಪಾಡೇನೆಲೆ ದೇವಾ
ಎಂತು ಮಾಡಿ ಬಿಡದಿದ್ದರೆಲೆ ದೇವಾ | ನಮಗೆ
ಇಂತು ಮೂರು ಬಟ್ಟೆ ಸಾವು ಎಲೆ ದೇವಾ     ೧೦

ಸಂಗತ್ಯ:

ದೇವತೆಗಳು ಕೂಡಿ ಸೇರಲಾರದೆ ನಿಂದ
ಜೀವಕೆ ಮೂಲ ಮಾಡಿದರು
ಆವ ಪರಿಯಲಿಂದ ಶಿವ ನೀವು ಅಳಿದಾರೆ
ತಾವೆ ರಾಜ್ಯವನಾಳ್ವೆವೆನುತ          ೧

ಕೋಕ ಮುನಿಯು ನಾರಂದ ನೋಡಿ ಪ್ರಾಣದ
ಏಕೋ ಶಿವನ ಕರೆದೊಯ್ದು
ಲೋಕದ ಮನುಜಾರಿಗಳವಲ್ಲ ರೂಪಿಗೆ
ಸೋಂಕಿದವೇನೊ ಕಾಲಮೃತ್ಯು      ೨

ಹಲವು ಮಂತ್ರವ ಮಾಡಿ ಬಿಡಿಸುವ ವೈದ್ಯಗೆ
ತಲೆಯೆಲ್ಲ ಕಣ್ಣಾಗಬೇಕು
ನೆಲೆಯಿಲ್ಲ ನಮ್ಮಯ ಸಂಸಾರ ಬದುಕಿಗೆ
ಕಲಹ ಕಂಟಕ ಮುಂದೆ ನಮಗೆ       ೩

ಆವಾವ ಕಂಟಕ ಬಂದರೆ ಉಣಬೇಕು
ದೇವ ನೀ ನಡೆ ಅರಮನೆಗೆ
ಸೇವೆಗಳನು ಮಾಡಿ ಸಕಲುಸಚರದಿಂದೆ
ನೋವು ಬ್ಯಾನಿಯ ಬಿಡಿಸುವೆನು      ೪

ಸಕಲ ಪೀಡೆಯು ನಿಮ್ಮ ಶಿಖಿದಲೆಯೊಳಗೆಂದು
ಸಕುನಗಾರ್ತಿಯರು ಪೇಳಿದರು
ಅಖಿಳರಿಗಳವಲ್ಲ ಮಕುಟವ ಬಿಡಿಸಲು
ವಿಕಳತೆ ನಾ ಬಿಡಿಸುವೆನು  ೫

ಜಡೆದಲೆಯನು ಬಿಚ್ಚಿ, ಒಡೆದು ಹಿಕ್ಕನೆ ಮಾಡಿ
ತೊಡೆವೆನು ಸಂಪಿಗೆ ಎಣ್ಣಿಗಳಾ
ಅಡಕಳವೆಯನಿಕ್ಕಿ ಸುಡುವ ನೀರೆರೆದರೆ
ಕಡೆಗೆ ನಿಲ್ವದು ನಿಮ್ಮ ಮೃತ್ಯು.       ೬

ಎಣ್ಣೆ ಮಜ್ಜನಗಳ ಮಾಡಲು ಶರಿರವು
ಬಣ್ಣ ಬಾಹುದು ನಿಮಿಷದಲ್ಲಿ
ಕಣ್ಣಿಗಂಜನಗಳನೆಚ್ಚಲು ಸೋಂಕಿದ
ಹೆಣ್ಣು ಪೀಡೆಯು ಕಡೆ ನಿಲ್ಲುವುದು     ೭

ಅವರಿವರೇತಕೆ ಭವಹರ ರುದ್ರನೆ
ಜಯ ಜಯ ನಿಮ್ಮಯ ಶರಿರ
ಯುವತಿಗಿರಿಜೆಯ ಮಾತಿಗೆ ಶಿವ ನಸುನಗುತ
ಇವಳೇನ ಬಲ್ಲಾಳಪ ಎನುತ          ೮

ಆರಾರು ಅರಿಯದ ಮೀರಿದ ಕಳವನು
ಗೌರಿಗೆ ಹೇಳಿದರಾರು
ಪೋರನಹುದು ಚಿಕ್ಕನಾರಂದ ಮುನಿಯು
ಹಣ್ಣಿತು ಮುಂದಣ ಕಥನ   ೯

ಬಣ್ಣನೆ ಮಾತುಗಳಾಡುತ ನಾರಂದ
ಕಣ್ಣೀಲಿ ಮೀಟಿದನೇನೊ
ಹೆಣ್ಣಿನ ಮಾತನು ಇವಳೇನು ಬಲ್ಲಳೊ
ಹಣ್ಣಿತು ಮುಂದಣ ಕಥನ   ೧೦

ಕತನಗಳನು ಇಕ್ಕಿ ಕಡೆಯಲ್ಲಿ ತಾ ಕುಳಿತು
ಹಿತಕಾರಿಯಾಗಿ ನಿಂದಿಹನು
ಕಂತಕದ ಮಾತುಗಳ ಇವಳೇನ ಬಲ್ಲಳೊ
ಯತಿಮುನಿ ಜಾಡಿಗನಹುದು           ೧೧

ಗಂಭೀರ ಮುನಿಯೆಂದು ರಂಭಿಸಿ ಕರೆದೊಯ್ದೆ
ರಂಭೆಯ ತಂದುದ ಮಾಜಿದರೆ
ತುಂಬಿದೋಲಗದೊಳು ಅಂಬಿಗಿತ್ತಿಯು ಎಂದು
ಸಿಂಬೆಯ ಮಗನು ಸೂಚಿಸಿದ         ೧೨

ರಂಡೆಯ ಮಗನು ನಾರಂದಮುನಿಯೆಂದು
ಕೆಂಡಗಣ್ಣಿನ ಶಿವನಗುತ
ಹೆಂಡರಿಬ್ಬರ ಜಗಳನೋಡಲುಬೇಕೆಂದು
ಮಂಡಿಸಿದನು ಸರ್ವ ಜನರ            ೧೩

ಜಗಳವಾಡಲು ಕಂಡು ಆಗ ಉಣ್ಣುದ ಬಿಟ್ಟು
ನಗುವರು ಕುಹಕದ ನುಡಿಗೆ
ಅಗಜೆಗೆ ಗಂಗೆಗೆ ಮಿಗಿಲಾಗಿ ಬೀಳಲು
ಜಗವೆಲ್ಲ ನೆರೆದುದು ಮುಂದೆ           ೧೪

ಗಿರಿಜೆಯ ನುಡಿಗೇಳಿ ಹರ ನಸುನಗುತಲಿ
ಇವರಿರ್ತಿ ನೋಡಬೇಕೆನುತ
ಮರೆಮಾಡಿ ಮಾತೊಂದು ಅರುಹಿ ನೋಡುವೆನೆಂದು
ಪರಶಿವ ನುಡಿದಾ ಪಾರ್ವತಿಗೆ         ೧೫

ಪದನು :

ಪ್ರಾಣದೊಲ್ಲಭೆ ಕೇಳು ಗಿರಿಜಾತೆ ಜಾಣತನದ ನುಡಿಗಳ
ಹೂಣಿಸಿ ಸಭೆಯೊಳಗೆ ಹುಸಿ ಮಾತನಾಡುವರೆ ಕಾಣದುದ ನುಡಿವರೇನೆ  || ಪಲ್ಲ

ಎಲ್ಲಿಯ ಮಾತುಗಳು  ಗಿರಿಜಾತೆ ನಾನೊಂದು ಮಲ್ಲಿಗೆಯ ಹೂವ ತಂದೆ
ಸಲ್ಲಲಿ ಶಿವಗೆಂದು ಅರ್ಪಿತವ ಮಾಡಿದರೆ ಬಲ್ಲವರ ಜರಿವರೇನೆ
ಎಲ್ಲರು ಮುಡಿವುದಲ್ಲ ಗಿರಿಜಾತೆ ಅಲ್ಲಮಪ್ರಭುವೇ ಬಲ್ಲ
ಮಲ್ಲಿಕಾರ್ಜುನದೇವ ಮಂಡೆಯೊಳು ಧರಿಸಿದನು ಚಲ್ವಗಿರಿಜಾತೆ ಕೇಳು    ೧

ದೇಶದೇಶವ ತಿರುಗುತ ಎಲೆಗೌರಿ ದಾಸಾಳದ ಹೂವ ತಂದೆ
ಈಶ್ವರನ ಜಡೆಯೊಳಗಿಟ್ಟು ಅರ್ಪಿಸಿದರೆ ಹಾಸ್ಯಮಾಡಿ ಜರಿವರೇನೆ
ಮೀಸಲಳಿಯದ ಪುಷ್ಪವು ಗಿರಿಜಾತೆ ಹೇಸಿಮಾನವರಿಗೆ ಸಲ್ಲದು
ದೋಷದುರ್ಗುಣಗಳನು ಅಳಿದಂತೆ ಪರಶಿವನ ಬಾಸಿಂಗದರಳು ಕಾಣೆ     ೨

ಮೇದಿನಿಯ ತಿರುಗಿ ಬರುತಾ ನಾನೊಂದು ಕೇದಗೆಯ ಹೂವ ತಂದೆ
ಸಾದು ಕಸ್ತೂರಿ ಪುಣುಗು ಜವಾದಿಗೆಣೆಯೆಂದು ಮಾದೇವಗರ್ಪಿಸಿದೆವು
ಕಾದು ಕರಗಿದ ಚಿನ್ನಕೆ ಎಲೆಗೌರಿ ವ್ಯಾಧಿ ವಿಗ್ನಗಳ್ಯಾತಕೆ
ಓದುವ ಗಿಳಿ ನನ್ನ ಅರಮನೆಯ ಕೋಗಿಲೆಯ ಗಾದೆನುಡಿಗಳ ನುಡಿವರೆ    ೩

ಮಡದಿ ಗಿರಿಜಾತೆ ಕೇಳು ಎಲೆಗೌರಿ ಬೆಡಗು ಬಿಂಕವು ಸಲ್ಲದು
ಬಿಡದೆ ಎಂಬತ್ತುನಾಲ್ಕು ಲಕ್ಷ ಜೀವಿಗಳೆಲ್ಲ ಅಡಿಗೆರಗಿ ಶರಣೆಂಬುರೇ
ಗುಡುಗು ಮಿಂಚಿನ ಸಿಡಿಲಿನಾ ಗರ್ಜನೆಯ ಒಡನೆ ಹುಟ್ಟಿದ ಪುಷ್ಪವ
ದೃಢದಿಂದ ಶಿವನ ಮುಡಿಯೊಳಗಿಟ್ಟೆವು ಕಡುಚೆಲ್ವೆ ಗಿರಿಜೆ ಕೇಳು           ೪

ಹರನಿಂತು ಮರೆಮಾತನು ಗುರುರಾಯ ಗಿರಿಜೆಯೊಡನೆ ಪೇಳಲು
ಅರಿಯಾದಕಳವಲ್ಲ ಅಮ್ಮಾಜಿ ಪಾರ್ವತಿಯು ಧರೆಯು ಮೂಲೋಕದೊಳಗೆ
ಗಿರಿಜೆ ಗಂಗೆಯ ಜಗಳವ ಗುರುರಾಯ ಇರದೆ ಬಸವಗೆ ಪೇಳಲು
ತರುಳೆ ಗಂಗೆಯ ತಂದ ಸಂಧಿ ಸಮಾಪ್ತವು ಗುರು ಸಂಗಮೇಶ ಜಯತು ೫

ಸಂಗತ್ಯ :

ಮುತ್ತೈದೆ ನೀಲಮ್ಮ ಮುನಿಮಹಾಜೋಗಿಯ
ಪುತ್ಥಳಿಯ ರೂಪೊ ಬಣ್ಣಿಸುತ
ಮರ್ತ್ಯಲೋಕದ ಮಹಾಮಹಿಮ ಬಸವನೊಳು
ಚಿತ್ರದ ಕತೆಯ ಪೇಳಿದಳು ೧

ಹರನವಾಹನ ಜಯ ಶರಣುಬಸವ ಜಯ
ಮರಣ ವಿದೂರನೆ ಜಯತು
ಕಿರಣಕೋಟಿಯೆ ಜಯ ಮರಣಪಾಲಿಪ ಜಯ
ಕರುಣಸಾಗರ ಜಯ ಜಯತು         ೨

ನಂದಿವಾಹನ ಜಯ ಬಂಧಮೋಕ್ಷನೆ ಜಯ
ಒಂದು ಮೂರಾದನೆ ಜಯತು
ಮಂದಾಲಗಿರಿಗಳ ನಂದವೆ ಜಯ ಗಂಗೇ
ತಂದ ಸಂಧಿಗೆ ಶರಣಾರ್ಥಿ ೩

ಸಂಧಿ ೩ ಕ್ಕಂ ವಚನ ೪೧, ಜೋಗಿಪದನು ೫, ಪದನು ೧೭, ಸಂಗತ್ಯ ೭೬ ಉಭಯಂ ೩೩೪ ಕ್ಕಂ ಮಂಗಳ ಮಹಾ ಶ್ರೀ ಶ್ರೀ .