ಕಂದ :
ಗಿರಿಜೆಗಂಗೆಯ ಜಗಳವ ಹರಶರಣರ್ಗಹುದೇನು
ಹರಶರಣ ಕಲ್ಪತರುವೆನಿಪ
ವರ ಕುತರ್ಕಗಳಿಂದ ಸರಿಬೆಸದಿ ಹೋದಡೆ
ಪರವಾಗಿ ದೂಷಕರ ಎದೆದಲ್ಲಣಂ ೧
ವಚನ :
ಗಂಗೆಗೌರಿ ಜಗಳ ಕೇಳಿ ಜನರೆಲ್ಲ | ನಮ್ಮ
ಸಂಗಮೇಶ ಕೇಳುತಿರ್ದ ನಗುತೆಲ್ಲ || ಪಲ್ಲ
ಸತಿಯೆ ನೀಲರತ್ನವೆ ನೀ ಎಲೆ ಹೆಣ್ಣೆ | ನಿನ್ನ
ಮತಿಗೆ ಮಂಗಳಾತ್ಮಕ ಎಲೆ ಹೆಣ್ಣೆ | ಪೇಳು
ಕತನ ಗೌರಿಗಂಗೆ ಜಗಳ ಎಲೆ ಹೆಣ್ಣೆ | ಪೇಳೂ
ಪೃತುವಿ ಜನರು ಕೇಳುವಂತೆ ಎಲೆ ಹೆಣ್ಣೆ ೧
ಹಳಗನ್ನಡಗಳಲ್ಲವಿನ್ನು ಬಸವಯ್ಯ | ಗೋಪ್ಯ
ಒಳಗನ್ನಡಗಳಲ್ಲವಿನ್ನು ಬಸವಯ್ಯ
ಎಳೆಯ ಬಾಲ ನಗುವಂತಿನ್ನು ಬಸವಯ್ಯ | ಎನ್ನ
ತಿಳಿಗನ್ನಡದ ಲಾಲಿಸಿನ್ನು ಬಸವಯ್ಯ ೨
ಹಾಲು ಮಥನ ಮಾಡುತಿರಲು ಬಸವಯ್ಯ | ಒಂದು
ಹಲವು ಆಗಿ ತೋರುವಂತೆ ಬಸವಯ್ಯ
ಶೊಲಿ ಸತಿಯರುಗಳ ಜಗಳ ಬಸವಯ್ಯ | ಭಕ್ತಿ
ಲೀಲೆ ಪುರುಷ ಲಾಲಿಸಿನ್ನು ಬಸವಯ್ಯ ೩
ಕಬ್ಬುವಿಲ್ಲನೊಯಿರಿ ಕೇಳು ಬಸವಯ್ಯ | ಸತಿಯ
ರಿಬ್ಬರೊಳಗೆ ಜಗಳವಿಟ್ಟು ಬಸವಯ್ಯ
ಉಬ್ಬುಮುಬ್ಬಿ ನೋಡಿ ನಗುತ ಬಸವಯ್ಯ | ಜಗಕೆ
ಹಬ್ಬಿಸಿದ ಕಥೆಯ ಕೇಳಿ ಬಸವಯ್ಯ ೪
ಮೃಡನ ಭಕ್ತ ಲಾಲಿಸಿನ್ನು ಬಸವಯ್ಯ | ಶಿವನ
ತೊಡೆಯೊಳ್ ಗೌರಿ ಮುಡಿಯೊಳ್ ಗಂಗೆ ಬಸವಯ್ಯ
ನಡುವೆ ಕೂತುಕೊಂಡು ಶಿವನು ಬಸವಯ್ಯ | ದೊಡ್ಡ
ತೊಡರ ಹಾಕಿ ನಗುತಲಿದ್ದ ಬಸವಯ್ಯ ೫
ಸಂಗಮೇಶ ಶಿವನು ನಗುತ ಬಸವಯ್ಯ | ತನ್ನ
ತುಂಗಜಡೆಯೊಳಿರ್ದ ಸತಿಗೆ ಬಸವಯ್ಯ
ಮಂಗಮಲಕು ಭೇದಗಳನು ಬಸವಯ್ಯ | ತಮ್ಮ
ಲಿಂಗದೊಳಗೆ ಸೂಚಿಸಿದನು ಬಸವಯ್ಯ ೬
ತೇಜೋಮೂರ್ತಿ ತಂದೆ ಮೇಲೆ ಗುರುರಾಯ | ಮತ್ತೆ
ಮಾಜಿಕೊಂಡು ಮುಳುಗಲೇಕೆ ಗುರುರಾಯ
ಜಾಜಿ ಮಲ್ಲಿಗೆಯ ಚೆಂಡು ಗುರುರಾಯ | ತನ್ನ
ರಾಜಸಭೆಗೆ ತೋರಿಸಿದನು ಗುರುರಾಯ ೭
ಅಂಜಿ ಅಳುಕಿ ನೋಡುತಿರಲು ಗುರುರಾಯ | ಕೋಟಿ
ಪಂಜು ಬೆಳಗು ತೋರುವಂತೆ ಗುರುರಾಯ
ಕುಂಜರಗಮನೆ ಗಿರಿಜಾದೇವಿ ಗುರುರಾಯ | ಕಣ್ಣಿ
ಗಂಜನವು ಸೋಂಕಿದಂತೆ ಗುರುರಾಯ ೮
ಗಿರಿಜೆದೇವಿ ತಿಳಿದು ನೋಡಿ ಎಲೆ ದೇವ | ನನ್ನ
ತರಕಕಿವಳ ತಂದರೆಂದು ಎಲೆ ದೇವ
ಹರುಹ ಹೇಳಿ ಕಳುಹಿ ಕೊಡುವೆ ಎಲೆ ದೇವ | ಎಂದು
ಬಿರಿಗೋಪಗಳ ಮಸಗುತಿರ್ದಳೆಲೆ ದೇವ ೯
ನೋಡಿ ತಿಳಿದು ಕಂಡಳಾಗ ಗುರುರಾಯ | ಇವಳು
ಪೀಡೆಯಹುದು ಹೆಣ್ಣು ಅಲ್ಲ ಗುರುರಾಯ
ಓಡಿಸುವೆನು ಇರ್ದ ಸ್ಥಲಕೆ ಗುರುರಾಯ | ತಂತ್ರ
ಹೂಡಿ ಮಾತನಾಡಿಸಿದಳು ಗುರುರಾಯ ೧೦
ತಲೆಯೊಳಿದ್ದು ನೋಡುವಾಳು ಇವಳ್ಯಾರೆ | ನಿನ್ನ
ಕುಲವ ಹೇಳಿ ಎನ್ನ ಕೂಡ ದನಿದೋರೆ
ಹೊಲೆಯ ಮಾದಿಗರ ಮಗಳೆ ಎಲೆ ಹೇಳಿ | ನಿನಗೆ
ಬಲಿಯ ಕೊಟ್ಟು ಉಣ್ಣಿಸುವೆನು ಇಳಿದಾರೆ ೧೧
ಪದನು :
ಹಣಿಕಿ ನೋಡುವಳಾರೆಲೆ ನೀ ನಮ್ಮ ತ್ರಿಣಯನ ಜಡೆಯವೊಳಗೆ
ಬಣಗು ಭೂತವೆ ನೀನು ಹೆಣಮೂಳೆ ಇರಬೇಡ ಕುಣಿಹಾಳ ಸೇರಿಕೊಳ್ಳಿ ಪಲ್ಲ
ಪ್ರೇತಭೂತವೊ ರಾಕ್ಷಸಿಯೊ ನೀ ಮುನ್ನ ಜಾತಿ ಜಲ್ಮದಗೇಡಿಯೆ
ಆತುಕೊಂಡಿರಬೇಡ ಶಿವನ ಮಂಡಯ ಮೇಲೆ ಭೂತಳಕಿಳಿದು ಬಾರೆ
ಬೇತಾಳ ನೀನಾದರೆ ನಮ್ಮಲ್ಲಿಗಾತರಿಸು ಮುದ್ದೆಗಳನು
ಹೋತು ಕುರಿ ಕೋಣಗಳ ಬೇಡಿ ತಿಂಬುದಕಿಂತ ಗ್ವಾತದ ಕುಳಿಗೆ ಹೋಗೆ ೧
ಹೊಲೆಯ ಮಾದಿಗರ ಮಗಳೆ ನೀ ಮುನ್ನ ಕುಲದಲಾರಾರ ಜಲ್ಮ
ಸಲೆ ಪೀಡೆ ಪಿಶಾಚಿಯಾದರೆ ನೀ ಮುನ್ನ ನೆಲೆದಪ್ಪಿ ತಿರುಗುತಿರಲು
ಹಲವು ಮಂತ್ರಗಳ ಮಾಡಿ ನಮ್ಮವರು ಕೊಲೆಗಳ ಕೊಲ್ಲಿಸುತಲಿ
ಮೊಲೆ ಮೂಗು ಕಿವಿಗಳನು ಕೊಯ್ದೊಡಂಬಡಿಸುವರು ತಲೆ ಮುಡಿಯ ಬಿಟ್ಟು ಸಾರೆ ೨
ದಾರಿ ಬಟ್ಟೆಗಳ ಸೇರಿಕೊಳ್ಳಿ ಎಲೆ ಪೀಡೆ ನೀರಬಾವಿಗಳ ಸೇರಿಕೊಳ್ಳಿ
ಊರೂರ ಮರದ ಹೋಟೆಗಳೊಳಗೆ ಸೇರಿದರೆ ಆರು ಬರುತಿರಲು ಸಾರೆ
ಪಾರು ಪಜೀತಿಗಳಾಗದೆ ನನ್ನ ಕೂಡೆ ತೋರಿ ಮಾತುಗಳನಾಡೆ
ಮೀರಿ ಸುಮ್ಮನೆ ನೀನು ಗರ್ವದಲಿ ಇರ್ದರೆ ಗಾರುಮಾಡದೆ ಬಿಡುವೆನೆ ೩
ಬಡಮನುಜರನು ಪಿಡಿದರೆ ಎಲೆ ಪೀಡೆ ಅಡಿಗಡಿಗೆ ಶರಣೆಂಬರು
ಗಡಿಗೆಮಡಕೆಗಳಿಂದ ಹೊಸ ಕೂಳುಗಳ ಮಾಡಿ ಬಿಡದೆ ಹಾಕುವರು ನಿನಗೆ
ಮೃಡನ ಜಡೆಯೊಳು ಸೇರಲು ಎಲೆ ಪೀಡೆ ಹುಡಿಪುಡಿಯು ನಿನ್ನ ಬಾಯಲಿ
ಬಿಡುಬಿಡು ಜಡೆಗಳನು ತುಡುಗುಣಿ ಹೊಲತಿಯೆಂದು ಒಡನೆ ಗರ್ಜಿಸಿ ನುಡಿದಳು ೪
ಹುಚ್ಚು ಮರುಳೆ ಪೀಡೆಯೆ ನೀ ಮುನ್ನ ಎಚ್ಚತ್ತು ತಿಳಿದು ನೋಡೆ
ಅಚ್ಯುತನ ಮಗನು ತಾನೆಂದರೆ ಬಿಡಲಿಲ್ಲ ಕಿಚ್ಚುಗಣ್ಣಿಲಿ ಉರುಹಿದ
ಕಿಚ್ಚುಗಣ್ಣಿನ ಕೋಪದಿ ಎಲೆ ಪೀಡೆ ಕೆಚ್ಚು ದಾನವರಳಿದರು
ನಚ್ಚಿಕೊಂಡಿರಬೇಡ ಗುರುಸಂಗಮೇಶ್ವರನ ಬಚ್ಚಲ ಕುಳೆಗೆ ಹೋಗೆ ೫
ವಚನ :
ಅಗಜೆ ಕೋಪದಲಿ ನುಡಿದರೆಲೆ ದೇವ | ಜಡೆಯ
ಬಗಿದು ಗಂಗೆಯ ನೆಗಹಿಕೊಂಡು ಎಲೆ ದೇವ
ನಿಗಮದೊಡೆಯ ಶಿವನ ಬಲದಿ ಎಲೆ ದೇವ | ಗಂಗೆ
ಮುಗುಳು ನಗೆಯೊಳ್ ನುಡಿದಳಾಗ ಎಲೆ ದೇವ ೧
ಜರಿದು ಮಾತನಾಡಿದರೆ ಅಕ್ಕಯ್ಯ | ಪುಷ್ಪ
ದರಳನಾ ಶಿವನ ಮುಡಿಗೆ ಅಕ್ಕಯ್ಯ
ಹರನ ಉರಿಯ ಕಣ್ಣ ಶಾಂತಿ ಅಕ್ಕಯ್ಯ | ನಿನ್ನ
ಸರಿಯ ಮಡದಿ ಜರಿಯದಿರೆ ಅಕ್ಕಯ್ಯ ೨
ದೇಶದೇಶದ ಪೀಡೆಗಳು ಅಕ್ಕಯ್ಯ | ನಿನ್ನ
ಕೇಶದೊಳಗೆ ಹುದುಗಲಿನ್ನು ಅಕ್ಕಯ್ಯ
ಸೂಸಿ ಸ್ನಾನವ ಮಾಡುತಿರಲು ಅಕ್ಕಯ್ಯ | ನಿನ್ನ
ದೋಷರಹಿತ ಗಂಗದೇವಿ ಅಕ್ಕಯ್ಯ ೩
ಅಂಬಿಗ ಶರಣಾರ ಮಗಳೆ ಅಕ್ಕಯ್ಯ | ಜಗವ
ತುಂಬಿಕೊಂಡು ಸಲಹುವೆನೆ ಅಕ್ಕಯ್ಯ
ಶಂಭು ಶಿವನು ಎನ್ನ ಮೆಚ್ಚಿ ಅಕ್ಕಯ್ಯ | ಚೆಲ್ವ
ರಂಭೆ ನಿನ್ನ ಮೇಲೆ ತಂದನಕ್ಕಯ್ಯ ೪
ವೇಷಧಾರಿ ನುಡಿಯು ಸಲ್ಲದೆಲೆ ತಂಗಿ | ನಿನಗೆ
ಸೇಸೆಯಿಟ್ಟು ತಂದನೇನೆ ಎಲೆ ತಂಗಿ
ವೇಸಿ ಮಾತ್ರ ನೀನು ಕಾಣೆ ಎಲೆ ತಂಗಿ | ನಮ್ಮ
ದೇಶ ಬಿಟ್ಟು ಎದ್ದು ಹೋಗೆ ಎಲೆ ತಂಗಿ ೫
ಎದ್ದು ಹೋಗಬಂದುದಿಲ್ಲಕ್ಕಯ್ಯ | ನಿನಗೆ
ಬುದ್ಧಿಯುಕ್ತಿ ಹೇಳಬಂದೆ ಅಕ್ಕಯ್ಯ
ಶುದ್ಧ ಕಸ್ತುರಿಯ ಮೃಗವ ಅಕ್ಕಯ್ಯ | ಶಿವನು
ಮುದ್ದಿಸಿ ಮುಂಡಾಡಿ ತಂದನಕ್ಕಯ್ಯ ೬
ಉಬ್ಬಿ ಮಾತನಾಡದಿರೆ ಎಲೆ ತಂಗಿ | ನಿನ್ನ
ಕಬ್ಬಿಲಿಗರ ಕುಲವ ಬಲ್ಲೆನೆಲೆ ತಂಗಿ
ಗಬ್ಬುಮಡಕಿ ನಿನ್ನೊಳುಂಟು ಎಲೆ ತಂಗಿ | ಶಿವಗೆ ೭
ತಾವರೆ ಕೆಸರೊಲಿರಲು ಅಕ್ಕಯ್ಯ | ನಮ್ಮ
ದೇವರಿಗೆ ಅರ್ಪಿತವು ಅಕ್ಕಯ್ಯ
ಬಾಯ ಬಡುಕತನವು ಬೇಡ ಅಕ್ಕಯ್ಯ | ಸರ್ವ
ಜೀವ ದಯಪಾರಿ ತಂದನಕ್ಕಯ್ಯ ೮
ಮುಡಿಯೊಳಿರ್ದು ನುಡಿವವಳು ನೀನಾರೆ | ನಿನ್ನ
ಬೆಡಗ ಹೊಸ್ತು ಎನ್ನ ದೊರೆಯ ಅಕ್ಕಯ್ಯ
ತೊಡೆಯ ಬಿಟ್ಟು ಕಡೆಗೆ ಸಾರೆ ಅಕ್ಕಯ್ಯ | ನಿನಗೆ
ಒಡೆಯಳಾಗಿ ಹೇಳಬಂದೆ ಅಕ್ಕಯ್ಯ ೯
ಜಕ್ಕಿಸಾದೇನು ಎದುರೆ ಅಕ್ಕಯ್ಯ | ನಾನು
ಚಿಕ್ಕವಳೆ ನಿನ್ನ ಕಣ್ಣಿಗೆ ಅಕ್ಕಯ್ಯ
ಸೊಕ್ಕಿದವರ ಹಲ್ಲ ಕಳವೆನಕ್ಕಯ್ಯ | ನಾನು
ದಕ್ಕಿದವಳು ಶಿವನಿಗಾನು ಅಕ್ಕಯ್ಯ ೧೦
ಉಬ್ಬಿ ಮಾತನಾಡದಿರೆ ತಲೆ ತಂಗಿ | ನಿನ್ನ
ಕೊಬ್ಬು ಮಚ್ಚರವ ಬಲ್ಲೆ ಎಲೆ ತಂಗಿ
ಕಬ್ಬುತಿಂದ ನರಿಯು ಸೊಕ್ಕಿ ಎಲೆ ತಂಗಿ | ಹುಲಿಯ
ತಬ್ಬಿಕೊಂಬ ಸರಸ ಬೇಡ ಎಲೆ ತಂಗಿ ೧೧
ಎತ್ತುವಾಸೆಯೆನ್ನೊಳಗೇಕೆ ಅಕ್ಕಯ್ಯ | ನಾನು
ಒತ್ತರಿಸಿಕೊಂಬವಳಲ್ಲ ಅಕ್ಕಯ್ಯ
ಸತ್ಯವಿಡಿದು ಮಾತನಾಡೆ ಅಕ್ಕಯ್ಯ | ನೀನು
ಮಿತ್ತುಕರ ಕೊಳಲಿ ಬೇಡ ಅಕ್ಕಯ್ಯ ೧೨
ನಿನ್ನ ಬಿಂಕ ಎನ್ನ ಕೂಡೇನಕ್ಕಯ್ಯ | ನೀನು
ಇನ್ನು ಆಡ ಸಲ್ಲ ಏಳು ಅಕ್ಕಯ್ಯ
ಆಡಿದ ಶಿವನು ಎನ್ನೋಳಾದನಕ್ಕಯ್ಯ | ಬಹಳ:
ಹೊನ್ನ ವೆಚ್ಚಮಾಡಿ ತಂದರಕ್ಕಯ್ಯ ೧೩
ತಂದರೆಂಬ ಗರ್ವವೇನೆ ಎಲೆ ತಂಗಿ | ನಿಮ್ಮ
ಕುಂದು ಜಲ್ಮ ಮರೆಯದಿರು ಎಲೆ ತಂಗಿ
ಮುಂದೆ ಬಂದ ಕಿವಿಗೆಯಿಂದ ಎಲೆ ತಂಗಿ | ಹಿಂದೆ
ಬಂದ ಕೋಡು ದೊಡ್ಡದೇನೆ ಎಲೆ ತಂಗಿ ೧೪
ಹೋದ ಪ್ರಾಯ ನೆನೆಯಲೇಕೆ ಅಕ್ಕಯ್ಯ | ನೀನು
ಭೇದಿಸಿದರೆ ಕಾಣಲುಂಟೇನಕ್ಕಯ್ಯ
ಆದಿ ಶಿವನು ಎನ್ನೊಳಾದನಕ್ಕಯ್ಯ | ನಿನ್ನ
ವಾದ ಬಿಟ್ಟು ಕಡೆಗೆ ಸೇರೆ ಅಕ್ಕಯ್ಯ ೧೫
ಸಣ್ಣವಳು ಎನ್ನ ಸರಿಯೇನೆಲೆ ತಂಗಿ | ಒಳ್ಳೆ
ಬಣ್ಣ ಬಿಳಿದನುಟ್ಟರೇನೆ ಎಲೆ ತಂಗಿ
ಎಣ್ಣೆ ಕಣ್ಣಿಗೊಯಿರ ಕಾಣೆ ಎಲೆ ತಂಗಿ | ಸುಟ್ಟು
ಸುಣ್ಣದಂತೆ ನಿನ್ನ ಸರಸ ಎಲೆ ತಂಗಿ ೧೬
ಆನೆ ದೊಡ್ಡದಾದರೇನೆ ಅಕ್ಕಯ್ಯ | ಅದರ
ಅಂಕುಸಾವೆ ಸಣ್ಣದೇನು ಅಕ್ಕಯ್ಯ
ನಿನಗೆಷ್ಟು ದೊಡ್ಡತನ ಅಕ್ಕಯ್ಯ | ನಿನ್ನ
ಸೊಕ್ಕ ಮುರಿವುದಕ್ಕೆ ಬಂದೆನಕ್ಕಯ್ಯ ೧೭
ಹುಚ್ಚು ಮರುಳನಾಡದಿರೆ ಎಲೆ ತಂಗಿ | ನಿನ್ನ
ಮಚ್ಚರವ ಕೇಳಿ ಬಲ್ಲೆ ಎಲೆ ತಂಗಿ
ಮೆಚ್ಚಿದವಗೆ ಮರಣ ಸುಖವೆ ಎಲೆ ತಂಗಿ | ಆತ
ಇಚ್ಛೆಕಾರ ದೇವ ಕಾಣೆ ಎಲೆ ತಂಗಿ ೧೮
ಕಾಲಿಲೊದ್ದ ಮೋಹ ಕಾಣೆ ಅಕ್ಕಯ್ಯ | ಕನ್ಯೆ
ಬಾಲೆ ನಿನಗೆ ಮನವ ಸೋತನೆ ಅಕ್ಕಯ್ಯ
ಸೋಲು ಗೆಲುವು ಎನ್ನೊಡನೆ ಅಕ್ಕಯ್ಯ | ನಿನ್ನ
ಮೇಲೆ ಬಂದ ಬಗೆಯ ಕಾಣೆ ಅಕ್ಕಯ್ಯ ೧೯
ಹರುಗೋಲವರ ಮಗಳು ನೀನು ಎಲೆ ತಂಗಿ | ನಿನ್ನ
ಕರುಳುಖಂಡ ಎಲ್ಲಿ ಬಿಟ್ಟೆ ಎಲೆ ತಂಗಿ
ಸುರೆಯ ಮಾಂಸ ನಾರುವಳೆ ಎಲೆ ತಂಗಿ | ಶಿವಗೆ
ಮರುಳು ಹತ್ತಿ ನಿನ್ನ ತಂದ ಎಲೆ ತಂಗಿ ೨೦
ಕೆಚ್ಚಲೊಳಗ ಅಮೃತವಿರಲು ಅಕ್ಕಯ್ಯ | ನಮ್ಮ
ಕಿಚ್ಚುಗಣ್ಣಗರ್ಪಿತಾವೆ ಅಕ್ಕಯ್ಯ
ಅಚ್ಯುತ ಗೋವಿಂದನೊಡೆಯ ಅಕ್ಕಯ್ಯ | ನನ್ನ
ಮೆಚ್ಚಿ ಮಂಡೆಯೊಳಿಟ್ಟು ಮೆರೆವ ಅಕ್ಕಯ್ಯ ೨೧
ಖಂಡಮಾಸರೋಹಿತಾವೆ ಎಲೆ ತಂಗಿ | ನೀನು
ಉಂಡ ಜಲ್ಮ ಹಿಂಗಲಿಲ್ಲ ಎಲೆ ತಂಗಿ
ಗಂಡು ಮೀರಿ ಸೊಕ್ಕಿ ನುಡಿವೆ ಎಲೆ ತಂಗಿ | ಶಿವನ
ಮಂಡೆಡ ಬಿಟ್ಟು ಕಡೆಗೆ ನಿಲ್ಲಿ ಎಲೆ ತಂಗಿ ೨೨
ಹಿರಿಯಳೆಂದು ತಾಳಿದೆನು ಅಕ್ಕಯ್ಯ | ನಿನ್ನ
ಪರದೇಶಿಯ ನೆಲೆಯ ಬಲ್ಲೆನಕ್ಕಯ್ಯ
ಹಿರಿಯ ತಪಸ ಮಾಡಿ ಬಂದೆನಕ್ಕಯ್ಯ | ನಮ್ಮ
ಹರನ ತೊಡೆಯ ಬಿಟ್ಟು ನಿಲ್ಲೆ ಅಕ್ಕಯ್ಯ ೨೩
ನಾರಿ ನನ್ನ ನೆಲೆಯ ಬಲ್ಲೆಯಾ ತಂಗಿ | ಸುತ್ತ
ಮೂರುಲೋಕ ನನ್ನ ಬಳಗ ಎಲೆ ತಂಗಿ
ಹಾರುವರ ಮಗಳು ನಾನು ಎಲೆ ತಂಗಿ| ಚೆಲ್ವ
ಮಾರಹರನ ಪಟ್ಟದರಸಿ ಎಲೆ ತಂಗಿ ೨೪
ಮಾತನಾಡಿ ಕೆಡಿಸಿಕೊಂಡ ಅಕ್ಕಯ್ಯ | ನಿಮ್ಮ
ಜಾತಿ ಹಾರುವ ಕುಲವು ಸುಡಲಿ ಅಕ್ಕಯ್ಯ
ಹೋತಮಾಡಿ ಕೊಲ್ಲಿಸುವಿರಿ ಅಕ್ಕಯ್ಯ | ದೊಡ್ಡ
ಪಾತಕಾರು ನಿಮ್ಮ ಜನ್ಮವಕ್ಕಯ್ಯ ೨೫
ಸಾಮವೇದಗಳನು ಓದಿ ಎಲೆ ತಂಗಿ | ಸರ್ವ
ಹೋಮಗಳನು ಮಾಡುವೆವು ಎಲೆ ತಂಗಿ
ಕಾಮ ಕ್ರೋಧ ಲೋಭ ಕುರಿಯು ಎಲೆ ತಂಗಿ | ಸಿಟ್ಟು
ಸ್ವಾಮಿ ಶಿವಗೆ ಯೋಗ್ಯವಾವು ಎಲೆ ತಂಗಿ ೨೬
ಹಂಡೆಮಲಕನೊಡೆಯ ಕೇಳು ಎಲೆ ತಂಗಿ | ಆತ
ಉಂಡ ಮನೆಗೆ ಎರಡ ಬಗೆಯನೆಲೆ ತಂಗಿ
ಉಂಡು ನಾವು ಸುಖದೊಳೆಲೆ ತಂಗಿ | ಶಿವನ
ಕೊಂಡಾಡುವ ಜಗಳ ಬೇಡ ಎಲೆ ತಂಗಿ ೨೭
ಏಕೋದೇವನ ಮಡದಿ ಕೇಳು ಅಕ್ಕಯ್ಯ | ನನಗೆ
ಯಾಕೆ ಮರೆಯ ಮಾಡಿ ಪೇಳ್ವಿರಕ್ಕಯ್ಯ
ನಾಲ್ಕು ಯುಗದ ಹೋಮ ಹಿಂಸೆ ಅಕ್ಕಯ್ಯ | ಹೊನ್ನು
ತೂಕ ತಿಂದ ಜನ್ಮ ಸುಡಲಿ ಅಕ್ಕಯ್ಯ ೨೮
ಸಮ್ಮಗಾರ್ತಿ ಕಬ್ಬೆರವಳೆ ಎಲೆ ತಂಗಿ | ಹೋಮ
ಬೊಮ್ಮವಿಷ್ಣು ಫಲವೆ ಎಲೆ ತಂಗಿ
ನಮ್ಮ ಸರಿರಿಯ ಹೇಳಲಳವೆ ಎಲೆ ತಂಗಿ | ಶಿವನು
ನಿನ್ನ ತಂದೆ ನೆಲೆಯ ಬಲ್ಲೆನೆಲೆ ತಂಗಿ ೨೯
ನೆಲೆಯ ಕೇಳು ಪೇಳುವೆನು ಅಕ್ಕಯ್ಯ | ದಕ್ಷ
ಬಲವನಳಿದು ಬಯಲಾದುದನು ಅಕ್ಕಯ್ಯ
ಲಲನೆ ನಿನ್ನ ಪಡುಪಾಟುಗಳ ಅಕ್ಕಯ್ಯ | ಚಿತ್ತ
ವೊಲಿದು ಕೇಳು ಹೇಳುವೆನು ಅಕ್ಕಯ್ಯ ೩೦
ಭೂಮಿಯೊಳಗೆ ಪರ್ವತಶನಕ್ಕಯ್ಯ | ತನ್ನ
ಪ್ರೇಮದಿಂದ ಎನ್ನ ತಂದನಕ್ಕಯ್ಯ
ನಾವು ನೀವು ಮಾಡುವುದೇನಕ್ಕಯ್ಯ | ನಿನಗೆ
ಸ್ವಾಮಿಯಾಣೆ ಸುಮ್ಮನಿರೆ ಅಕ್ಕಯ್ಯ ೩೧
ಪದನು :
ಅಕ್ಕಯ್ಯ ನೀನು ಕೇಳಿ ನೀ ಮುನ್ನ ದಕ್ಷಣನ ಮಗಳು ಕಾಣೆ
ಮುಕ್ಕಣ್ಣ ಪರಶಿವನು ಹೊರಗೆಂದು ನಿಮ್ಮಪ್ಪ ಇಕ್ಕಿ ಕೆಟ್ಟನು ಹೋಮವ ಪಲ್ಲ
ಹಾರುವರನೆಲ್ಲ ಕೂಡಿ ನಿಮ್ಮಪ್ಪ ಮೀರಿ ಹೋಮವನಿಕ್ಕಿದ
ಸಾರಿ ಹೇಳಲು ಕೇಳದಿರ್ದರೆ ನೀ ಮುನ್ನ ಹಾರಿಬೀಳಲು ಅಗ್ನಿಯ
ತೂರಿ ಅಗ್ನಿಗೆ ಬೀಳಲು ಬೇಗದಿಂದಾರಿ ಹೋಯಿತು ಬೆಂಕಿಯು
ಮೋರೆ ಕರ್ರನೆ ಕಂದಿ ಕಾಳಮ್ಮನಾದರೆ ಮಾರಹರನು ಮೆಚ್ಚಲಿಲ್ಲ ೧
ತಂದೆತಾಯಿಗಳು ಸತ್ತು ಎಲೆ ಗೌರಿ ಬಂಧು ಬಳಗಗಳು ಕೆಟ್ಟು
ಹಿಂದು ಮುಂದಾರ ಕಾಣದೆ ಗಿರಿರಾಜಗೆ ಕಂದಳಾಗಿಯೆ ಜನಿಸಿದೆ
ಹೊಂದಿ ಹೊರೆಯಲು ನಿನ್ನನು ಎಲೆ ಗೌರಿ ಬಂದು ಬೇಡುವರಿಲ್ಲದೆ
ತಂದೆತಾಯಿಗಳೆಲ್ಲ ಮದುವೆ ಮೀರಿದಳೆಂದು ನೊಂದು ಯೋಚಿಸಿದರಾಗ ೨
ಆರು ಬಾರುದದ ಕಂಡು ಎಲೆ ಗೌರಿ ದಾರಿದೋರಿದರು ನಿನಗೆ
ಘೋರ ತಪವನೆ ಮಾಡು ಶಿವ ಬಂದು ಮೆಚ್ಚುವನು ಹಂಬಲ್ಯಾತಕೆ
ಗೌರಿ ನೀ ಬಾರೆನುತಲಿ ಗಿರಿರಾಜ ಸೇರಿಸಿದ ಅಡವಿಯೊಳಗೆ
ಮಾರಹರ ಶಿವನು ನಿನ್ನೆಯ ಗಂಡನೆನುತಲಿ ಊರಿಗೆ ತಿರುಗಿ ಹೋದ ೩
ಎಂಟೆಂಟು ಗುಂಡ ಮೇಲೆ ಎಲೆ ಗೌರಿ ಒಂಟಿ ಕಾಲಲಿ ನಿಲ್ಲುತ
ಸುಂಟರ ಗಾಳಿಗಳು ಬಂದು ಆರ್ಭಟಿಸಿದರೆ ಉಂಟು ಮಾಡದೆ ಗ್ಯಾನವ
ಗಂಟಿ ಓಂಕಾರ ಧ್ವನಿಗೆ ಕರ್ಮಗಳು ದಂಟುಸೆದೆಗಳ ಮಾಡುತ
ಕಂಟಕಂಗಳ ಗೆಲಿದು ಕರಿಕಂಠ ಶಿವನೊಳಗೆ ಪಂಟಿಸಿದೆ ಜ್ಞಾನವೆರಸಿ ೪
ಕೂಳು ನೀರುಗಳ ತೊರೆದು ಎಲೆಗೌರಿ ಗಾಳಯಾಹಾರಮಾಡಿ
ನೀಳುಗಲ್ಲಿನ ಮೇಲೆ ಉಗ್ರತಪಸನು ಮಾಡಿ ಗೋಳಿಡುತ ಪರಶಿವನಿಗೆ
ದಾಳಿಡುವ ಗುಡುಗು ಮಿಂಚು ಆರ್ಭಟೆಯ ಜಾಳು ಮಾಡಿಯೆ ಕಳೆವುತ
ಹೇಳಲೇನಕ್ಕ ನಿನ್ನಯ ಬಂದ ಪಡಿಪಾಟ ಮೇಲೆ ಶಿವನೊಳು ಬೆರೆಸಿದೆ ೫
ಮಾಜಿ ನಿನ್ನಯ ರೂಪನು ಬಂದು ಗಿರಿರಾಜಗೆ ಮಗಳಾಗುತಾ
ಸೂಜಿಗಲ್ಲಿನ ಮೇಲೆ ಉಗ್ರತಪಸನು ಮಾಡಿ ಮೂಜಗದ ಶಿವನ ಪಡೆದೆ
ಬೀಜ ನಿನ್ನಯ ಮೂಲವಾ ಹೇಳಿದರೆ ಸೋಜಿಗವು ಕಾಣೆ ಅಕ್ಕ
ಜೂಜಿಂದ ಹರಿಬ್ರಹ್ಮಸುರರೆಲ್ಲ ಕೆಟ್ಟರು ಮಾಜಿಕೊ ನಿನ್ನ ಕುಲವ ೬
ಮಂದಮತಿ ಗಿರಿಜೆ ಕೇಳು ಪೂರ್ವದ ತಂದೆ ದಕ್ಷಬ್ರಹ್ಮನ
ಬಂಧು ಬಳಗಗಳೆಲ್ಲ ಕೆಟ್ಟು ಹೋದರು ಶಿವನ ಕಂದನ ದೆಸೆಗಳಂದ
ಮುಂದೆ ನಿನ್ನಯ ಕುಲವನು ಹೇಳಿದರೆ ಒಂದಿಷ್ಟು ಹುರುಳಿಲ್ಲವು
ಇಂದು ನಮ್ಮಯ ಕುಲದ ಶರಣರಿಗೆ ಬೆಲೆಯುಂಟು ಅಂದವ ನೋಡಿ ನಡಿಯೆ ೭
ಸಂಗತ್ಯ :
ಕಪ್ಪು ಕುಲದ ಕಬ್ಬೆರವಳೆ ಕೇಳ್ನೀ ನಮ್ಮ
ವಿಪ್ರರ ಸ್ಥಲಕುಲಗಳನು
ಹಿಪ್ಪಿಯ ತಿಂದ ನರಿ ಸೊಕ್ಕಿ ತಲೆಗೇರಿ
ತಪ್ರತಿಮ ಬೋಧೆಗಳಳವೆ ೧
ನಾಯಿ ಕೂಗಲು ಬೆಳಗಾಗಬಲ್ಲದೆ ನಿನ್ನ
ಕಾಯ ಸೊಕ್ಕಿಲಿ ಬೊಗಳಿದರೆ
ಮಾಯವಹರೆ ನಮ್ಮ ಮಂತ್ರ ಸುಜಾತದ
ದೇವ ಬ್ರಹ್ಜನಿಗೆಣೆಯಹರು ೨
ಹೊಲೆ ಶೂದ್ರ ಜಾತಿ ಕೇಳಲಹ ಕೃಷ್ಣ
ನೊಲುಮೆಯೊಳಧಿಕ ವಿಪ್ರನು
ಮಲಗೆದ್ದು ಕಾಣಲು ಫಲವಹುದೆ ನಮ್ಮ
ಕುಲದ ಹಾರುವರಿಗೆಣೆಯಾರು ೨
ಒಂಟಿ ಹಾರುವನ ಕಾಣಲು ಕರ್ಮದೋಷವು
ಗಂಟಿಕ್ಕಿದಲ್ಲದೆ ಬಿಡದು
ಕುಂಟ ಕುರುದ ಮುನಿವರ್ಗಗಳನು ನೀಲ
ಕಂಠ ಶಿವನು ರಕ್ಷಿಸುವನು ೩
ಕಂದುದನಾಡಲು ಮುಂಡೆ ನೋವುಗಳೇಕೆ
ರಂಡೇರಾದರು ನಿಮ್ಮಬಳಗ
ಕೆಂಡಗಣ್ಣಿನ ಮಾರ್ತಂಡ ಶರಭ ದಕ್ಷ
ಚೆಂಡನಾಡಿದ ತಲೆಗಳನು ೫
ಅಂಧಕ ಹೊಲೆಯಳೇ ನಿಂದ್ಯವನಾಡಲು
ಹಂದಿಯ ಜಲ್ಮಕೇಳ್ನೆನಗೆ
ಬೆಂದು ಹೋಹನೆ ನಮ್ಮ ತಂದೆ ವೀರೇಶನ
ದ್ವಂದ್ವ ಚರಣದೊಳಗಿಹನು ೬
ಅಕ್ಕ ಗಿರಿಜೆ ಕೇಳು ಚೊಕ್ಕಟ ತಲೆಯನು
ಇಕ್ಕಿದ ಹೋಮದ ಕುಳಿಗೆ
ಮಿಕ್ಕ ರುಂಡಕೆ ಒಂದು ತಕ್ಕಷ್ಟು ಕುರಿದಲೆ
ಇಕ್ಕಿ ಬಾಳಿದ ಜಲ್ಮ ಸುಡಲಿ ೭
ಹೀನ ಹೊಲತಿ ನಿನ್ನ ನಾನಾ ಮಂತ್ರಗಳಿಂದ
ಶ್ವಾನನ ಮಾಡಿ ಕೂಗಿಸಲು
ಹಾನಿಯಹುದೆ ನಮ್ಮ ಜ್ಞಾನ ಸುಜಾತದ
ಜ್ಞಾನದ ವಿಪ್ರತಿಗೆಣೆಯಾರು ೮
ಗಿರಿಜೆ ಕೇಳೆಲೆ ನಿಮ್ಮ ನರಹರಿ ಧ್ಯಾನದಿ
ಕರವ ಕಳೆದುಕೊಂಡನೊಬ್ಬ
ಹಿರಿಯ ಬ್ರಹ್ಮನು ಕೆಟ್ಟ ತರುಳ ಕಾಮನ ಸುಟ್ಟ
ಮರೆ ಮಾಡಿಕೊಳ್ಳಿ ನಿನ್ನವರ ೯
ಕುಕ್ಕುಟ ಹೊಲತಿ ನೀ ಲೆಕ್ಕವ ಬಲ್ಲೇನೆ
ಮುಕ್ಕಣ್ಣ ಕುಣಿದಾಡಿಸುವನು
ಮಕ್ಕಳಿಲ್ಲದ ಬಂಜೆ ದುಃಖವುಂಟು ನಿನಗೆ
ಎಕ್ಕಲ ನರಕ ತಪ್ಪುವದೆ ೧೦
ಅಕ್ಕಗಿರಿಜೆ ಕೇಳು ಮಕ್ಕಳಿಲ್ಲೆನಬೇಡ
ಸೊಕ್ಕಿದವರ ಹಲ್ಲಮುರಿವ
ಲೆಕ್ಕ ಎಂಬತ್ನಾಲ್ಕು ಲಕ್ಷ ಜೀವಿಗಳೆನ್ನ
ಕುಕ್ಷಿಯಿಂದುದ್ಭವಿಸಿದವು ೧೧
ಬಂಜೆಯೆಂದನೆಬೇಡ ಸಜೀವಧರನಿಗೆ
ನಂಜುಂಡ ಶಿವನ ಮುಕ್ತಾಂಗಿ
ಅಂಜಲೇತಕೆ ನಿನ್ನ ರಂಜನೆಗಾಗಿ ನಿ
ರಂಜನ ಶಿವನ ಬಲುಹೆನಗೆ ೧೨
ನಾರಿ ಕೇಳೆಲೆ ಪಿತ್ತ ಮೀರಿತು ನನಗಿನ್ನು
ತೋರುವೆ ಶಿವನ ಬಲುಮೆಯ
ಏರುವ ಮಂದಿಯೆತ್ತು ಕೋರಿತೊಗಲು ಬೋಕಿ
ಊರೂರ ತಿರುಗಿಕೊಂಡಿಹನು ೧೩
ಅನ್ನವಗಾಣದೆ ಕನ್ನವನಿಕ್ಕಿದ
ಮುನ್ನ ಕೊಲಿಸಿಕೊಂಡ ಶಿವನು
ತನ್ನ ಬದುಕು ಸುಡಲೆನ್ನ ಗಾಯಗಳನು
ಹನ್ನೆರಡು ವರುಷವಾರೈದೆ ೧೪
ಸೂಸಕ ತೊಂಡಲ ಬಾಸೆಯ ಸತಿಯಳೆ
ಈಸಿದೆ ಶಿವನೊಳಗಾನು
ಲೇಸಿನವಳೆ ನೀನು ಗಾಸಿಯಾಗಲಿ ಬೇಡ
ಕಾಶಿನ ಬದುಕಿಲ್ಲ ಶಿವಗೆ ೧೫
ಮಗನೊಬ್ಬ ಮದುವೆಯ ನೆಲೆಯ ಕಾಣದೆ ಹೋದ
ನಗೆಯಲ್ಲ ಕೇಳೆಲೆ ನೀನು
ಯಾಗದಲಿ ಮಾಡಿದ ಮಿಗಿಲು ಕರ್ಮಗಳಿಂದ
ತಗುಲಿಕೊಂಡೆಲ್ಲೆ ಮುಪ್ಪಿನವನ ೧೬
ವಚನ :
ಅದು ಆತ ನುಡಿಯದಿರೆ ಅಕ್ಕಯ್ಯ | ಶಿವನು
ಮುದುಕನಹದು ಪಾಪಿಕಣ್ಣಿಗೆ ಅಕ್ಕಯ್ಯ
ಸೆದೆ ಮಾನವಗೆ ದೂರ ಶಿವನು ಅಕ್ಕಯ್ಯ | ವಜ್ರ
ಕದವೆ ನನ್ನ ಅರಮನೆಗೆ ಅಕ್ಕಯ್ಯ ೧
ಮೀರಿ ನೆತ್ತಿಗೇರಿದವಳೆ ಎಲೆ ತಂಗಿ | ನಿನ್ನ
ಪೋರಗುಣವ ಬಿಡದೆ ಹೋದೆಯಲೆ ತಂಗಿ
ಕೋರಿತೊಗಲ ಉಟ್ಟ ಶಿವನು ಎಲೆ ತಂಗಿ | ಬಂದೆ
ಪೂರ್ವದಲ್ಲಿ ಹಣೆಯ ಬರಹ ಎಲೆತಂಗಿ ೨
ನೋಠ ನೋಂಪಿ ತಪ್ಪುವದೇನೆ ಅಕ್ಕಯ್ಯ | ನಿನ್ನ
ಕೋತಿ ಶಬ್ದ ನುಡಿಯದಿರೆಲೆ ಅಕ್ಕಯ್ಯ
ತಾತ ಬ್ರಹ್ಮ ಹರಿಯರೊಡೆಯ ಅಕ್ಕಯ್ಯ | ಪರಂ
ಜ್ಯೋತಿ ನನ್ನ ಪುರುಷ ನೋಡು ಅಕ್ಕಯ್ಯ ೩
ಕರಿಯ ತೊಗಲು ಕರದ ಓಡು ಎಲೆ ತಂಗಿ | ಶಿವನು
ಪರದೇಶಿಯು ನೆಲೆಗಳಿಲ್ಲ ಎಲೆ ತಂಗಿ
ಹರಕ ಹುಲಿಯ ಚರ್ಮನುಟ್ಟನೆಲೆ ತಂಗಿ | ಬಂದೆ
ನರಕಿ ನಿನ್ನ ಹಣೆಯ ಬರಹ ಎಲೆತಂಗಿ ೪
ವ್ಯಾಘ್ರಸೂರನೆಂಬ ದನುಜನಕ್ಕಯ್ಯ | ದೊಡ್ಡ
ಉಗ್ರ ತಪಸ ಮಾಡಿದನು ಅಕ್ಕಯ್ಯ
ಶೀಘ್ರದಿಂದ ಸೀಮೆಗೆಡಸಲಕ್ಕಯ್ಯ | ಶಂಭು
ಭರ್ಗೋದೇವ ಸೀಳಿ ಪೂರ್ವನಕ್ಕಯ್ಯ ೫
ಮಡದಿ ಕೇಳು ಮಡಲಿಗಿಲ್ಲ ಎಲೆ ತಂಗಿ | ಶಿವಗೆ
ಎಡತನವು ಆವ ಕಾಲಕೆಲೆ ತಂಗಿ
ನಡೆಯದಾನೆ ತೊಗಲ ಪೊರ್ದನೆಲೆ ತಂಗಿ | ಮುಂದೆ
ಗಡಿಗೆ ಕೋಲು ನಿನಗೆ ತಪ್ಪದೆಲೆ ತಂಗಿ ೬
ಕೆಟ್ಟ ಮೋರೆ ದನುಜ ಕೇಳು ಅಕ್ಕಯ್ಯ | ಶಿವನು
ಹೊಟ್ಟೆಯೊಳಗೆ ನುಂಗಿ ಕಳೆದನಕ್ಕಯ್ಯ
ಪಟ್ಟದೊಡೆಯನೆಂದು ನುಡಿದನಕ್ಕಯ್ಯ | ಅವನ
ಮೆಟ್ಟಿ ಸೀಳಿ ಚಮ್ ಪೊರ್ದನಕ್ಕಯ್ಯ ೭
ಕಪ್ಪುಗೊರಳು ತಪ್ಪು ಹೆಜ್ಜೆ ಎಲೆ ತಂಗಿ | ಶಿವಗೆ
ಉಪ್ಪು ಹುಳಿಗೆ ಗತಿಗಳಿಲ್ಲ ಎಲೆ ತಂಗಿ
ತಿಪ್ಪೆ ಊರ ಸುಟ್ಟ ಕರ್ಮಿಗೆ ಎಲೆ ತಂಗಿ | ಬ್ರಹ್ಮ
ಮುಪ್ಪಿನವರೆಗೆ ಬರೆದರೇನೋ ಎಲೆ ತಂಗಿ ೪
ಕಪಟ ನಟ ನಾಟಕದ ಶಿವಗೆ ಅಕ್ಕಯ್ಯ | ಮುನ್ನ
ತಪಸ ಮಾಡಿ ಬಂದೆ ಕಾಣೆ ಅಕ್ಕಯ್ಯ
ಕಪಿಯ ಮಾತ ನುಡಿಯದಿರೆ ಅಕ್ಕಯ್ಯ | ನಮ್ಮ
ತ್ರಿಪುರ ಸಂಹಾರಿ ಶಿವನು ಅಕ್ಕಯ್ಯ ೫
ಸಾರಿದೆನು ಹುಲ್ಲ ಹಿಡಿದು ಎಲೆ ತಂಗಿ | ಶಿವನು
ಗೂರು ಕೆಮ್ಮುರೋಗದವನು ಎಲೆ ತಂಗಿ
ಪೋರಿ ನೀನು ಚಿಕ್ಕ ಹುಡುಗಿ ಎಲೆ ತಂಗಿ | ಬಿಟ್ಟು
ಸೇರಿಕೊಳ್ಳಿ ಪ್ರಾಯದವನ ಎಲೆ ತಂಗಿ ೧೦
ವಾದತರ್ಕ ವೇದಶಾಸ್ತ್ರ ಅಕ್ಕಯ್ಯ | ಶಿವನ
ಪಾದಕಮಲ ಕಾಣಲರಿಯವಕ್ಕಯ್ಯ
ಆದಿವ್ಯಾಧಿ ಶಿವನಿಗುಂಟೇನಕ್ಕಯ್ಯ | ನಿಮ್ಮ
ಮಾದಿಗರ ಗುಣಕೆ ಹೋದಿರಕ್ಕಯ್ಯ ೧೧
ಪದನು :
ಮಾದಿಗರಾರು ಹೇಳಿ ಜಗದೊಳಗೆ ಮಾದಿಗರಾರು ಹೇಳಿ
ಬೋಧಿಸಿದ ಗುರುವಿನಾಜ್ಞೆಯ ಮೀರಿದವನೀಗ ಮಾದಿಗನವನು ಕಾಣೆ ಪಲ್ಲ
ಸಾಧು ಸಜ್ಜನ ಭಕ್ತಿಯ ಹೇಳಿದರೆ ವಾದಿಸಿದವ ಮಾದಿಗ
ಕ್ರೋಧ ಮಚ್ಚರದಿ ಸತ್ಪುರುಷನ ಕಂಡು ವಾದಿಸಿದವ ಮಾದಿಗ
ಓದಿ ಧರ್ಮವ ತಪ್ಪುವ ಎಂಜಲ ಹಾದಿಸೂಳೆಯ ನೆಚ್ಚುವ
ವೇದಶಾಸ್ತ್ರದಲಿ ಬ್ರಾಹ್ಮಣನಾದರಾಗಲಿ ಸಾಧಿಸಿದವ ಮಾದಿಗ ೧
ಗುರುವಾದರಾಗಲಿನ್ನು ಧರೆಯೊಳಗೆ ಶಿಷ್ಯನಾದರು ಆಗಲಿ
ಪರಧನ ಪರಸತಿಯನು ಕಂಡು ಭ್ರಮಿಸುವ ನರಕೀಟಕವು ಮಾದಿಗ
ಬರಿಯ ಬನ್ನಣೆಗಳಿಂದ ಮನೆಯೊಳಗೆ ಕಿರುಕುಳದ ದೈವಗಳ ಮಾಡಿ
ಗುರುಕೊಟ್ಟ ಲಿಂಗವನು ಆಡಿಮಾಡಿ ಬೀಳುವವ ಸುರೆಗುಡಿಕನವ ಮಾದಿಗ ೨
ಕೊಟ್ಟ ಬಾಸೆಗೆ ತಪ್ಪುವವ ಗುರುವನು ಬಿಟ್ಟು ದೈವದ ಮಾದಿಗ
ಕೆಟ್ಟ ಗುಣದಲಿ ತಿರುಗಿ ಶ್ರೇಷ್ಠನೆಂದೆನಿಸುವ ಲೊಟ್ಟಿಗುಣದವ ಮಾದಿಗ
ಕೆಟ್ಟ ನ್ಯಾಯಗಳ ಪೇಳಿ ಮನೆಯೊಳಗೆ ಬಿಟ್ಟು ತಿಂಬವ ಮಾದಿಗ
ಕೊಟ್ಟ ಗುರುವಿನ ಮಂತ್ರವ ಮೀರಿ ನಡೆವವನು ಭ್ರಷ್ಟ ಹೊಲೆಯವ ಮಾದಿಗ ೩
ನೀತಿ ಮಾರ್ಗವ ಪೇಳಲು ಹಿರಿಯರ ಆತ ಮೀರಲು ಮಾದಿಗ
ಗಾತಕತನದಿಂದ ಗೋಪ್ಯದಲಿ ಕೊಲುವಂಥ ಪಾತಕನವ ಮಾದಿಗ
ಮಾತೆ ತಂದೆಯ ಸಲಹದೆ ಹಿರಿಯರೊಳು ಧಾತುಗೆಟ್ಟವ ಮಾದಿಗ
ಜಾತಿ ಬ್ರಾಹ್ಮಣನಾದರಾಗಲಿ ಹೊಲತಿಗೆ ಸೋತು ಕೆಟ್ಟವ ಮಾದಿಗ ೪
ಹಲವು ಬೋಧೆಗಳ ಕೇಳಿ ಗೂಗೆ ತಾ ಕಲಿಯ ಬಲ್ಲುದೆ ಜ್ಞಾನವ
ಚಲುವ ಗಿಳಿಗಳು ಬಂದು ಓದ ಕಲಿಯಲು ತಮ್ಮ ಮಲವ ತಿಂಬುವ ಬಿಡುವವೆ
ಎಲೆ ಹುಚ್ಚು ಮರುಳೆ ಕೇಳು ನೀ ನಮ್ಮ ಹೊಲೆಯ ಮಾದಿಗರೆಂದರೆ
ಒಲುಮೆ ಮದ್ದನೆಯಕ್ಕಿ ಬಲವಳೆವುತ ನಿನ್ನ ತಲೆಯ ಚೆಂಡಾಡಿಸುವೆನು ೫
ಸಂಗತ್ಯ :
ಹುಚ್ಚುಗಿರಿಜೆ ಕೇಳು ಹೆಚ್ಚೇನ ನುಡಿ ಬೇಡ
ಬಚ್ಚಲುದಕವ ಮೀಯಿಸುವೆನು
ಸಚ್ಚಿದಾನಂದನ ಮೆಚ್ಚಿನ ಸತಿ ನಾನು
ಮುಚ್ಚಿಕೊಳ್ಳೆಲೆ ನಿನ್ನ ಬಿಗುಹ ೧
ಹಾರುವ ಕುಲವೆಂದು ಮೀರಿ ನುಡಿಯಬೇಡ
ಕಾರಿಸುವೆನು ತಿಂದ ಕೂಳ
ಯಾರ ಇಳಿಯ ಬಿಟ್ಟು ದೂರ ಮಾಡುವೆ ನನ್ನ
ಬಾರಿಸುವೆನು ಬೆನ್ನ ತೊಗಲ ೨
ಅಕ್ಕ ಗಿರಿಜೆ ಕೇಳು ಮರ್ಕಟಗುಣದವಳೆ
ಎಕ್ಕಲ ಜೋಗಿಯರ ಮಗಳೆ
ಕುಕ್ಕೆ ಹೊಲತಿ ನಿನ್ನ ಲೆಕ್ಕಿಸುವೆನೆ ನಮ್ಮ
ಮುಕ್ಕಣ್ಣ ಶಿವನ ಬಲುಹೆನಗೆ ೩
ಮಂಗಹೊಳತಿ ಕೇಳು ಮುಂಗೈಯ ಚಾಚಲು
ಅಂಗುಳ ನಾಲಿಗೆ ಕೊಯ್ವೆ
ಹೆಂಗಸು – ಬಾಡಿಗ ನಿನಗಾದ ಶಿವನ ಗ
ಣಂಗಳ ಬಲುಹುಂಟು ಎನಗೆ ೪
ಕಲ್ಲ ಗಿರಿಜೆ ಕೇಳು ಸೊಲ್ಲಡಗಲಿ ನಿನ್ನ
ಎಲ್ಲಿಯ ಶಿವಗಣ ನಿನಗೆ
ಎಲ್ಲ ದೇವರ ದೇವ ಅಲ್ಲಮ ಪ್ರಭುರಾಯ
ಬಲ್ಲಿದ ಶಿವಗಣೆಯರು ೫
ಕುಲ್ಲ ಹೊಲತಿ ಕೇಳು ಬಲ್ಲಿದನೆನಬೇಡ
ಹುಲ್ಲು ನೀರನೆ ಹೊರಿಸಿದರು
ಅಲ್ಲದ ಮಾತನು ಮೆಲ್ಲನೆ ನುಡಿಯಳು
ಹಲ್ಲ ಮುರಿಸಿದರು ಶಿವನ ೬
ದೊಡ್ಡವನೆನಬೇಡ ಗಡ್ಡಜಡೆಯ ಕಿತ್ತು
ರುಡ್ಡಗೋಲಿಲೆ ಹೊಯ್ಸಿದರು
ವಡ್ಡತನಗಳಿಂದ ಗುಂಡು ಮಣ್ಣನೆ ಹೊರಿಸಿ
ಅಡ್ಡ ಬೀಳಿಸಿದರು ಶಿವನ ೭
ಬಂಟನೆಂದೆನಬೇಡ ಒಂಟಿಗಾಲುಗಳಿಂದ
ಎಂಟು ದಿನವು ನಿಲಿಸಿದರು
ಕುಂಟಿಣಿತನದಿಂದ ಉಂಟು ಮಾಡಿದ ತನ್ನ
ಬಂಟತನವು ಸುಡಲಿನ್ನು ೮
ಹಿರಿಯನೆಂದನಬೇಡ ಸೆರಗಾದ ಅರುವೆಯ
ಶಿರಕೆ ಸುತ್ತಿದ ನಿಮ್ಮ ಶಿವನು
ಹೊರಗೆಂದುಣದವ ಬರಮಾಡಿ ಹೊಯ್ಯಲು
ಎರಗೀದ ಶಿವಶರಣರಿಗೆ ೯
ಎಷ್ಟು ತಪ್ಪುಗಳನು ಅಷ್ಟನೊಳಕೊಂಡು
ಪಟ್ಟಗಟ್ಟಲು ಪರಶಿವಗೆ
ನಿಷ್ಠೆಯೊಳಿರುತಿರೆ ದುಷ್ಟಬುದ್ಧಿಗಳಿಂದ
ಕೆಟ್ಟ ಹೊಲತಿ ನಿನ್ನ ತಂದ ೧೦
ನಿನ್ನ ಬಲ್ಲರೊ ನಿಮ್ಮ ಶಿವನ ಬಲ್ಲರೊ ನಮ್ಮ
ಮುನ್ನಿನ ಶಿವಗ್ಣ ಪದವು
ಅನ್ಯೋನ್ಯವಾಗಿ ನುಡಿಯೆ ಕರುಳನು ಸೀಳಿ
ಜನ್ನಿವಾರಗಳ ಮಾಡುವರು ೧೧
ಅಕ್ಕ ಕೇಳೆಲೆ ನಮ್ಮ ಮುಕ್ಕಣ್ಣ ಪರಶಿವ
ಭಕ್ತಿಭಾವಕೆ ಮರುಳಾಗಿ
ಭಕ್ತಗಣಂಗಳ ಯುಕ್ತಿ ಭಾವಳೆ ಮೆಚ್ಚಿ
ಮುಕ್ತಿಗಳನು ಕೊಟ್ಟ ಶಿವನು ೧೨
ಹೇಳುದೇತಕೆ ನಮ್ಮ ಬಾಳಾಕ್ಷಶರಣರು
ಏಳುಕೋಟಿಗಳವರಿರಲು
ಮೇಳ ನಿನ್ನಯ ಭಕ್ತಿ ತೋಳ ಬಲು ಮೇಗಾದ
ಹೇಳೆಲೆ ನಿನಗ ತಂದವರ ೧೩
ಮತ್ತೆ ಕೇಳೆಲೆ ನಮ್ಮ ಪುತ್ರರ ಮಹಿಮೆಯ
ಮೃತ್ಯುದೈವದ ಗಂಡ ಶರಭೆ
ಚಿತ್ತವು ಕನಲುತ ಎತ್ತಿ ನೀ ನುಡಿದರೆ
ಕಿತ್ತು ಹಾಕುವ ನಿನ್ನ ಕರುಳ ೧೪
ದಿಕ್ಕು ದೇವತೆಗಳ ಗಂಡ ಶರಭನೀಗ
ಡೊಕ್ಕೆಯ ಸೀಳಿ ಕೊಲ್ಲುವನು
ಸೊಕ್ಕ ಮುರಿದು ನಾರಸಿಂಹನ ಸೀಳಿದ
ಮುಕ್ಕಣ್ಣ ಶರಭವತಾರ ೧೫
ಶರಣಬಸವ ಕೇಳು ಹರಸತಿ ತನ್ನಯ
ಶರಭನ ಬಲುಹ ತೋರಿದರೆ
ಜರಿವುತ ಜಡಿಯುತ ತರುಳರ ಗುಣಗಳ
ಗಿರಿಜಾದೇವಿಗೆ ಬೋಧಿಸಿದಳು ೧೬
ಬಸವ ಮಂತ್ರಿಯೆ ಜಯ ಅಸಮಾಕ್ಷ ಶಿವಜಯ
ಪಶುಜೀವಿ ಹರಿಯಜರೊಡೆಯ
ಬಿಸುಗಣ್ಣ ಸತಿಯರು ಮಸಗುವ ಕಥನದ
ಕುಸಲಾದ ಸಂಧಿಗೆ ಶರಣು ೧೭
ಸಂಧಿ ೪ ಕ್ಕಂ ಕಂದ ೧, ವಚನ ೫೩, ಪದನು ೧೭, ಸಂಗತ್ಯ ೩೩ ಉಭಯಂ ೪೩೮ ಮಂಗಳ ಮಹಾ ಶ್ರೀ ಶ್ರೀ
Leave A Comment