ಕಂದ :

ಮುಂದಣ ಕತಾಮೃತದಿ ಇಂದುಧರ ತನ್ನ ಸತಿಯರನು
ಒಂದಾಗಿ ಕೂಡಿಸುವೆನೆನಲು ಒಲ್ಲದಿರಲು
ಮಂದಿಮಕ್ಕಳನು ಹಂಚಿಕೊಂಡೀರ್ವರು
ಕಂದ ಗಣಪತಿ ಶಾಸ್ತ್ರವ ಕೀರ್ತಿಸಿದರು          ೧

ಪದನು :

ಗಂಗೆಗೌರಮ್ಮರು ತಾವಿಬ್ಬರು ಸಂಗಾತ ಇರಲೊಲ್ಲದೆ ಬಂದಿತು
ಜಗಳವು ಕೊಂಬಂತೆ ಪರ್ವತಾ ಲಿಂಗ ತಾ ನೋಡುತಲಿರ್ದನು  ಪಲ್ಲ

ಮಾತ ಕೇಳದೆನ್ನೊಳು ಎಲೆ ಗಂಗೆ ಮಲೆತುಕೊಂಡಿರುವರೇನೆ
ನೀತಿ ನಿನಗಿದು ಹಿರಿಯತನಕೆ ಒಮ್ಮೆ ನಾ ತಾಳಿದೆನು ಕಾಣಲೆ   ೧

ಬೆಟ್ಟವರ್ಧನನ ಮಗಳೆ ನಿನಗಿಷ್ಟು ರಟ್ಟೆಯತನವೇತಕೆ
ಹುಟ್ಟಿ ಹಿಡಿದು ಹರುಗೋಲ ತೆಗೆವವರಲ್ಲಿ ಹುಟ್ಟಿದ ಮಗಳಲ್ಲವೆ    ೨

ಆದರದಕೆ ಕುಂದೇನೇ ನೀ ನನಗೆ ಮುಂದೆ ಬಾಹ ಬನ್ನಣೆಯ ಪೇಳಿ
ಮೇದಿನೀಯೊಳಗೆಲ್ಲ ಚರಿಸಾಡಿದೆನೆಂಬ ಭೇದವನು ಮರದೆಯಲ್ಲೆ           ೩

ಕುಲಗೇಡಿ ನಿನ್ನ ತಂದು ನಮ್ಮಯ್ಯ ನೆಲೆಗೆಟ್ಟು ತಿರಿದುಂಡನ
ಒಲುಮೆಯ ಮಧ್ಯದಲಿ ಬೆನ್ನಮೇಲಣ ಚರ್ಮ ನೆಲವದು ಹೋಗಿತ್ತೆಲೆ       ೪

ಒಂಟೆತ್ತಿಗೆಣೆಯಿಲ್ಲದೆ ನಿನ್ನನು  ತಂದು ನೆಂಟರೆಲ್ಲರು ಹಾನಿಯೆ
ಬಂಟನಾದನು ಗಂಗೆ ಬಾಣನಿಗಾಳಾದ ಉಂಟಲ್ಲವೆಂದು ಹೇಳೆ  ೫

ಹಾಲು ಬೋನವನು ಸವಿದು ವೀಳ್ಯವ ಮೇಲೆ ಹಾಕುವರೇತಕೆ
ಬಾಲೆ ನೀ ಮುಂಚೆ ಬಂದರೆ ಏನು ನಾ ಹೆಚ್ಚು ಸಂಚಿಯ ಹಿಡಿಸುವೆನು      ೬

ಪಂಚಾಮೃತವನು ಸವಿದು ವೀಳ್ಯವ ಹಿಂಚು ಹಾಕುವದೇತಕೆ
ಕೆಂಚೆ ನೀ ಮುಂಚೆ ಬಂದರೇನೆ ನಾ ಹಿಂಡು ಮಂಚದ ಕೆಳಗೆ ಒರಗೆ        ೭

ಹೀನವ ನುಡಿದಳೆಂದು ಗೌರಮ್ಮ ಮೋನವ ತಾಳಿದಳು
ಭಾನುಕಳೆಯನು ಸೂಡಿದಭವ ಮನೆಗೆ ಬಾರಾ ಮೋಸವಿದೇಕೆಂದನು      ೮

ನೀನೊಂದ ಹಣ್ಣ ತಂದು ಅವಳ ದೊಡ್ಡ ಪಾವನವನು ಮಾಡಿದೆ
ಖನ ಹೇಳುವೆ ಎನ್ನ ಬಂಡುಗೆಲಿದಾಳೆಂದು ತಾನು ಬಲು ಕೋಪದೊಳು   ೯

ಯಾಕೆ ಕೊಂಡಾಡಿದಿರೇ ನೀವಿಬ್ಬರೂ ವಾಕುವಾದಗಳೇತಕೆ
ಸಾಕು ಜಗಳ ಗಂಗೆ ನೀ ಕಿರಿಯವಳೆಂದು ಜೋಕಿಲಿ ಇರಿಯೆಂದನು         ೧೦

ತಂದರೆ ಬಂದಿರಲ್ಲೆ ನೀವಿಬ್ಬರು ಕೊಂಡಾಡುವದೇತಕೆ
ಇಂದುಮೊದಲು ಗಂಗೆ ಕಂದ ನುಡಿಯಬೇಡ ಎಂದನು ಶಿವ ದೇವಿಗೆ       ೧೧

ಆಕೆ ಪಾರ್ವತೀದೇವಿಯಾ ಪಾದದ ಮೇಲೆ ಈಕೆ ಗಂಗೆಯ ನೂಕಿದ
ಲೋಕದೊಡೆಯ ಪರ್ವತಮಲ್ಲ ಇಬ್ಬರನು ಏಕವ ಮಾಡಿದನು    ೧೨

ಸಂಗತ್ಯ :

ಸಂಗಮೇಶ್ವರನೇ ಶ್ರೀರಂಗನಯನ ಪಾ
ದಂಗಳ ಚರಣ ಪೂಜಿಪನೆ
ಹಿಂಗದೀರೇಳು ಲೋಕಂಗಳ ಸಲಹುವ
ಗಂಗೆಯ ಕೃತಿಯ ಲಾಲಿಪುದು        ೧

ಎಲ್ಲ ದೇವರ ದೇವ ಅಲ್ಲಮಪ್ರಭುರಾಯ
ಕಲ್ಯಾಣ ಪುರವರಾಧೀಶ
ಮಲ್ಲಿಕಾರ್ಜುನ ಭಕ್ತ ಬಸವ ತನ್ನಯ ಪ್ರಾಣ
ದೊಲ್ಲಭೆಯನು ಕೇಳುತಿರ್ದ            ೨

ಯೋಗಿ ಹೃತ್ಕಮಲದ ಭೋಗಿ ಪ್ರಪಂಚುಗಳ
ನೀಗಿ ಕಳೆವ ನಿರ್ಮಳಾಂಗಿ
ಭಾಗೀರಥಿಯು ನೊಂದು ಶೋಕಿಸಿದರೆ ಶಿವ
ಹೇಗೆ ಸಂತೈಸಿದ ಪೇಳು   ೩

ಪಂಚವದನವುಳ್ಳ ಪರಶಿವ ರೂಪ ನೀ
ಕಿಂಚಿತವ ಮಾಡಿ ರಕ್ಷಿಪನೆ
ಅಂಚೆಗಮನ ಕೋಟಿ ಮಿಂಚಿನ ‌ಪ್ರತಿಯುಳ್ಳ
ಕೆಂಚೆ ಗಂಗೆಯ ಸಂತೈಸಿದುದ       ೪

ಭೂಪ ಬಸವ ಕೇಳು ಕೋಪಿಸಿ ಗೌರಮ್ಮ
ಶ್ರೀಪತಿಯೊಡನೆ ಪೇಳುತಲಿ
ಜಾಪಲಾಕ್ಷಿಯ ಇಂತು ಶೋಕಗಳನು ಕಂಡು
ಗೋಪತಿ ಶಿವ ನಸುನಗುತ            ೫

ಅತ್ತು ದುಃಖಿಸುತಿರ್ದ ಚಿತ್ರದ ಬೊಂಬೆಯ
ನೆತ್ತಿಯಿಂದಿಳುಹಿ ಮುಂಡಾಡಿ
ಮುತ್ತುಸುರಿವ ಕಣ್ಣೀರೊರಸುತ ಮುಖ ನೋಡಿ
ಕಸ್ತೂರಿ ಮೃಗವೆ ಬಾರೆನುತ           ೬

ಜಡೆಯ ಶ್ರೀಗಂಗೆಯ ತೊಡೆಯೊಳಗಿಳುಹಿಟ್ಟು
ಪಿಡಿದು ಚೆಂದುಟಿ ಚಂದ್ರಬಿಂಬಗಳ
ಬಿಡುಬಿಡು ನಿನ್ನಯ ಕಡುದುಃಖವನು ಪಾ
ಲ್ಗಡಲ ಗಂಗೆಯೆ ಭೀಮರತಿಯೆ        ೭

ಸೋಕ ಮಾಡಲು ನನ್ನ ಏಕಾಂಗಿ ಸ್ತ್ರೀಯಳೆ
ಲೋಕವು ಹತವಹವಿನ್ನು
ಕಾಕ ಮೋರೆಯ ಗೌರಿ ನಿಕ್ಕರಿಸಲು ನಿನ್ನ
ಕೋಗಿಲೆ ಸ್ವರಕೇನು ಹಾನಿ ೮

ನೀನು ಮುನಿದರಿನ್ನು ಹಾನಿಯಹವು ಲೋಕ
ಕಾನನವುರಿದು ಸುಡುವವು
ಧ್ಯಾನ ಮೋನವು ಜಪತಪ ಸೀಮೆ ಕೆಟ್ಟವು
ಧ್ಯಾನವ ಕಾಣದಲಿಹರು     ೯

ಅಡಗಿ ಹೋದರೆ ನೀನು ಪೊಡವಿ ಈರೇಳಕ್ಕೆ
ಬಡಿದಾಟ ಬಹಿರಂಗದಲ್ಲಿ
ಒಡಲಗಿಜ್ಜಿಗೆ ತಮ್ಮ ದೃಢಮನಗಳ ಬಿಟ್ಟು
ಕುಡಿವರು ಹೊಲೆಯರ ನೀರ           ೧೦

ಆ ಜಾತಿ ಈ ಜಾತಿ ಮೂಜಾತಿಗಳು ಎಲ್ಲ
ಮಾಜುವವೆಲೆ ನಿನ್ನ ಮುಂದೆ
ಸೂಜಾತಿ ಹಾರುವ ಕುಲಹೀನ ಹೊಲೆಯರು
ಭೋಜನಗಳ ಬಯಸುವರು           ೧೧

ಉಕ್ಕಿ ತುಳುಕಲು ನೀ ಉರಿವ ಕಾಮಗಳಿಂದ
ಸೊಕ್ಕುವರೆಲಿ ನಿನ್ನ ಮರೆದು
ಚಿಕ್ಕಟ ಹೊಲೆಜಾತಿವೆದಣ್ಣಗಳೆಂಜಲ ತಿಂದು
ಸಿಕ್ಕುವರೆಲೆ ಯಮಪುರಕೆ   ೧೨

ನಿನ್ನಿಂದ ಕುಲಚಲ ನಿನ್ನಿಂದ ಜಲಮಲ
ನಿನ್ನಿಂದ ಸಕಲ ಸಂಪದವು
ಮುನ್ನ ನೀನಿಲ್ಲದಿದ್ದರೆ ಅನ್ಯವೇನುಂಟು
ಚೆನ್ನಬಸವ ರನ್ನಗೊರಳೆ    ೧೩

ಮತ್ತೆ ಕೇಳೆಲೆ ನನ್ನ ಚಿತ್ರಸಾಲೆಯ ಬೊಂಬೆ
ತೊತ್ತು ಬಲ್ಲಳೆ ನಿನ್ನನೆಲೆಯ
ಸತ್ತ ಪಿತರ ನೆನಸಿಕೊಂಡು ಪಾರ್ವತಿ
ಸುತ್ತಿಕೊಂಡಳು ನಿನ್ನ ಬಿಡದೆ           ೧೪

ಯಾತರ ಹಿರಿಯಾಳು ಖೋತಿ ಗಿರಿಜೆ ತನ್ನ
ಸೂತಕ ಕಳೆವುದರಿಯಳು
ಪಾತಕ ಹೊಲೆಮೂಳಿ ಯಾತರನರಿಯಾದೆ
ಜಾತಿಯ ಬಗುಳಲೇನಹುದು          ೧೫

ಹುಚ್ಚುನಾಯಿಗಳು ಹೊಟ್ಟೆಗಿಂದಾನೆಯ ಕಂಡು
ಅಚ್ಚವಿಚ್ಚಿಯ ಬೊಗುಳಿದರೆ
ಹೆಚ್ಚಿನ ಮದಕರಿ ಕಚ್ಚಿತು ತನಗೆಂದು
ರಚ್ಚೆಗಿಕ್ಕುವದೆ ಮದ್ದಾನೆ

ಹೆಣ್ಣುಗಂಗೆಯ ಪಿತ ಚನ್ನಬಸವ ಕೇಳು
ಕಣ್ಣು ಮೂರುಳ್ಳನ ನುಡಿಯ
ಹುಣ್ಣಿವೆ ಚಂದ್ರನ ಹುಸಿಮಾಡಿ ಗಂಗೆಯ
ಬಣ್ಣಿಸಿದನು ವಚನದಲಿ

ವಚನ :

ತುಂಗಕುಚದ ಸಿಂಗಾರವ ಎಲೆ ಗಂಗೆ | ನನಗೆ
ಮಂಗಳಾರತಿಯ ಬೆಳಗೆ ಎಲೆ ಗಂಗೆ
ಹಿಂಗಲರಿಯೆ ನಿನ್ನದೆಂದು ಎಲೆ ಗಂಗೆ | ನನ್ನ
ಲಿಂಗ ಜಡಿಯೊಳಿಟ್ಟು ತಂದೆ ಎಲೆ ಗಂಗೆ        ೧

ಶಾಪವುಂಟೆ ನಿನಗೆ ಕೇಳು ಎಲೆ ಗಂಗೆ | ನನ್ನ
ಗೋಪತಿಯ ಶಿವನ ಮಡದಿ ಎಲೆ ಗಂಗೆ
ತಾಪವುರಿಗಣ್ಣ ಶಾಂತಿ ಎಲೆ ಗಂಗೆ | ನನ್ನ
ದೀಪ ಹೃದಯಕಮಲ ಜ್ಯೋತಿ ಎಲೆ ಗಂಗೆ    ೨

ಬಂಡು ಆಡಿದ ನುಡಿಗಳೆಲ್ಲ ಎಲೆ ಗಂಗೆ | ನಮ್ಮ
ಕೆಂಡದೊಳಗೆ ಬಿದ್ದ ತೃಣವೆ ಎಲೆ ಗಂಗೆ
ಹಿಂಡು ದನುಜ ಜೀವ ಪ್ರಾಣಿ ಎಲೆ ಗಂಗೆ | ನನ್ನ
ದಂಡುಮಲ್ಲಿಗೆಯ ಚೆಂಡೆ ಎಲೆ ಗಂಗೆ            ೩

ಇಂದ್ರ ಕೆಟ್ಟ ಚಂದ್ರನಳಿದ ಎಲೆ ಗಂಗೆ | ಅವಳ
ಬಂಧುಬಳಗ ಬ್ರಹ್ಮ ಕೆಟ್ಟರೆಲೆ ಗಂಗೆ
ನೊಂದುಬೆಂದು ಬೊಗಳಲೇನು ಎಲೆ ಗಂಗೆ | ನಿನ್ನ
ಒಂದು ರೋಮ ತಾಕಲರಿಯವೆಲೆ ಗಂಗೆ       ೪

ಶಾರದೆಯು ಕೆಟ್ಟಳಿನ್ನು ಎಲೆ ಗಂಗೆ | ಅವಳ
ಭೂರಿದೇವತೆಗಳು ಮಡಿದರೆಲೆ ಗಂಗೆ
ಪಾರುವತಿ ನೊಂದು ನುಡಿದರೆಲೆ ಗಂಗೆ | ನಿನಗೆ
ಭಾರವುಂಟೆ ಮಂತ್ರಶಕ್ತಿ ಎಲೆ ಗಂಗೆ ೫

ಕಾಮನುರಿದ ಭೀಮನಳಿದನೆಲೆ ಗಂಗೆ | ಅವಳ
ನಾಮ ದೇವತೆಗಳು ಮಡಿದರೆಲೆ ಗಂಗೆ
ಸೀಮೆ ಕೆಟ್ಟು ನುಡಿದರೇನು ಎಲೆ ಗಂಗೆ | ನನ್ನ
ಹೇಮಪುತ್ಥಳಿಯ ಬೊಂಬೆ ಎಲೆ ಗಂಗೆ           ೬

ಬಿದಿಗೆಚಂದ್ರ ಕೋಟಿ ಸೂರ್ಯರೆಲೆ ಗಂಗೆ | ನಿನ್ನ
ಅಧರಕಳೆಯ ಹೋಲಲರಿಯರೆಲೆ ಗಂಗೆ
ಹದಿನೆಂಟು ಜಾತಿಜಲ್ಮಗಳು ಎಲೆ ಗಂಗೆ | ನಿನ್ನ
ಉದಕ ಮಿಂದು ಮುಕ್ತರಹರು ಎಲೆ ಗಂಗೆ      ೭

ಪದನು :

ಕೃಷ್ಣವತಿಗಂಗೆ ಕೇಳು ಲೋಕದ ಭ್ರಷ್ಟ ಮನುಜರು ಬಲ್ಲರೇ
ಕುಷ್ಟರೋಗದ ಚಂದ್ರ ಮೊದಲಾದ ಸುರರೆಲ್ಲ ಮುಟ್ಟಿ ಮೀಯಲು ಪಾವನ             ಪಲ್ಲ

ಮಿತಿಯಿಲ್ಲದಾ ರಕ್ಕಸರನು ವಿಷ್ಣು ಹತಮಾಡಿ ಸಂಹರಿಸುತ
ಅತಿ ಪಾಪದೋಷಗಳು ಆವರಿಸಿದರೆ ನಿನ್ನ ಸುತನಾಗಿ ಸ್ನಾನಗೈಯೆ
ಮತಿವಂತೆ ಗಂಗಾಮೃತೆ ನಾ ನಿನ್ನ ವ್ರತವ ಬಿಡಲಾರೆನೆಂದು
ಸುತನ ಹೆಸರಿಲಿ ಕರೆಸಿಕೊ ಎಂದು ನುಡಿದರೆ ಅತಿ ಹರುಷವನು ತಾಳಿದೆ             ೧

ಕೃಷ್ಣದೇವರ ಹೆಸರಿಲಿ ಶ್ರೀಗಂಗೆ ಕೃಷ್ಣವೇಣಿಗಳಾಗುತ
ಸೃಷ್ಟಿ ಈರೇಳನು ಕೊಟ್ಟು ರಕ್ಷಿಸುವಂಥ ಕಟ್ಟಾಣಿ ಮುತ್ತೆ ನನಗೆ
ಎಷ್ಟು ಬ್ರಹ್ಮರು ಮಡಿದರೂ ರುದ್ರನ ಕಟ್ಟುರಿಯ ಹಂಗಿನವರು
ಸುಟ್ಟ ಬೂದಿಯನು ನಿನ್ನೊಳಗೆ ಬೆರೆಸಿದರೆ ಹುಟ್ಟು ಜಲ್ಮವೆ ಪಾವನ         ೨ಡ

ರಾಮಾವತಾರರಿಗೆ ಹನುಮಂತ ತಾ ಮಹಾ ಬಂಟನಾಗಿ
ಗ್ರಾಮ ಲೆಂಕಾಪುರವ ಸುಟ್ಟು ಬೂದಿಯ ಮಾಡಿ ತಾಮಸವು ತಲೆಗೇರಲು
ಹೋಮದುರಿಯನು ತಾಳದೆ ನಿನ್ನೊಳಗೆ ನೇಮ ನಿತ್ಯದಿ ಮುಳುಗಲು
ಭೀಮ ಹನುಮಂತನ ರಕ್ಷಿಸಿದ ಕಾರಣ ಭೀಮರತಿ ಗಂಗೆಯಾದೆ ೩

ಭಾಗ್ಯದಲಿ ಗರ್ವಿಸುತಲಿ ಇರಲೊಬ್ಬ ಯೋಗಿಮಣಿ ವಿಭೂತಿಗೆ
ತೂಗಿ ನೋಡಲು ಮತ್ತೆ ಸರಿಬಾರದಿರೆ ಕಂಡು ಆಗ ತಲ್ಲಣಗೊಳುತಲಿ
ನೀಗಿ ಕಳೆವೆನು ಪ್ರಾಣವಾ ಎಂದೆನುತ ಆಗ ನಿನ್ನೊಳು ಮುಳುಗಲು
ಭಾಗ್ಯ ಕುಬೇರನ ರಕ್ಷಿಸಿದ ಕಾರಣದಿ ಭಾಗೀರತಿ ಗಂಗೆಯಾದೆ   ೪

ನನ್ನ ಜಡೆಯೊಳಗಿರುತಲಿ ಎಲೆ ಗಂಗೆ ಇನ್ನು ಚಿಂತೆಗಳೇತಕೆ
ಮುನ್ನೂರು ಅರವತ್ತು ನಾಮಗಳ ಧರಿಸಿದೆ ನಿನ್ನ ವರ್ಣಿಸುವರಳವೆ
ಮುನ್ನಿನ ಹಿರಿಯರೆಲ್ಲ ಎಲೆ ಗಂಗೆ ನಿನ್ನ ಪೂಜಿಸಿ ಮೆರೆದರು
ಅನ್ಯೋನ್ಯವೆಂದು ಬೊಗಳುವ ಬ್ರಹ್ಮಜಾತಿಗೆ ಇನ್ನು ದೃಷ್ಟವ ತೋರಿದೆ     ೫

ವಚನ :

ಇರುಳು ಹಗಲು ವಿಪ್ರಜಾತಿ ಎಲೆ ಗಂಗೆ | ನಿನ್ನ
ಶರಧಿಯೊಳಗೆ ಮುಳುಗುತಿಹರು ಎಲೆ ಗಂಗೆ
ಬೆರಳನೆಣಿಸಿ ಮೂಗ ಮುಟ್ಟಿ ಎಲೆ ಗಂಗೆ | ನಿನ್ನ
ಚರಣಕಮಲ ಕಾಣಲರಿಯರೆಲೆ ಗಂಗೆ           ೧

ವಾರ ತಿಥಿಯ ದಿನಗಳಲ್ಲಿ ಎಲೆ ಗಂಗೆ | ತಮ್ಮ
ನಾರಸಿಂಹ ಹರಿಗೋವಿಂದ ಎಲೆ ಗಂಗೆ
ಘೋರ ಅಶ್ವಗಜವ ಕೊಂದರೆಲೆ ಗಂಗೆ | ನಿನ್ನ
ನೀರು ಹೋಗದೆ ಜನ್ಮವಿಲ್ಲ ಎಲೆ ಗಂಗೆ         ೨

ಯತಿಪಾತಕ ದಿನಗಳಲ್ಲಿ ಎಲೆ ಗಂಗೆ | ತಮ್ಮ
ಪಿತರು ಹಿತದ ಕೂಡಿಕೊಂಡು ಎಲೆ ಗಂಗೆ
ಹತವ ಮಾಡಿ ಜೀವಗಳನು ಎಲೆ ಗಂಗೆ | ನಿನ್ನ
ರತುನ ಪಾದ ಕಾಣಲರಿಯರೆಲೆ ಗಂಗೆ          ೩

ಸೂರ್ಯಚಂದ್ರ ಗ್ರಹಣದಲ್ಲಿ ಎಲೆ ಗಂಗ | ತಮ್ಮ
ಹಾರುವರ ಕೂಡಿಕೊಂಡು ಎಲೆ ಗಂಗೆ
ನೂರು ಕರ್ಮ ಮುಳುಗಿ ಕಳೆದು ಎಲೆ ಗಂಗೆ | ನಿನ್ನ
ಮೀರಿ ನಡೆಯೆ ಜನ್ಮವಿಲ್ಲ ಎಲೆ ಗಂಗೆ                      ೪

ಬ್ರಹ್ಮ ವಶ್ಯ ಕರ್ಮಗಳನು ಎಲೆ ಗಂಗೆ | ನಿನ್ನ
ನಿರ್ಮಳವ ಮಾಡಿ ಕಳೆವೆ ಎಲೆ ಗಂಗೆ
ಮರ್ಮವರಿಯದೆ ನುಡಿವವರ್ಗೆ ಎಲೆ ಗಂಗೆ | ನಿನ್ನ
ಧರ್ಮಗುಣವ ಪಾಲಿಸಿನ್ನು ಎಲೆ ಗಂಗೆ           ೫

ಹಾರುಜಾತಿಗಳಿಂತಿರಲಿ ಎಲೆ ಗಂಗೆ | ಸವತಿ
ನಾರಿಗಿರಿಜೆ ನುಡಿದ ನುಡಿಯ ಎಲೆ ಗಂಗೆ
ತೂರಿ ಬೂದಿಗಳ ಮಾಡಿದೆವು ಎಲೆ ಗಂಗೆ | ಸೂತ್ರ
ಧಾರಿ ಶಿವನು ಎಂದು ತಿಳಿಯೆ ಎಲೆ ಗಂಗೆ     ೬

ತಿಳಿದು ನೋಡು ಪೂರ್ವದಲಿ ಎಲೆ ಗಂಗೆ | ನಿಮ್ಮ
ಕಳೆಯು ಒಂದೆ ಶರೀರ ಬೇರೆ ಎಲೆ ಗಂಗೆ
ಅಳಲುಬಳಲು ನಿಮಗೆ ಉಂಟೆ ಎಲೆ ಗಂಗೆ | ನನ್ನ
ಹೊಳೆವ ಕನ್ನಡಿಯ ಬೆಳಕೆ ಎಲೆ ಗಂಗೆ          ೭

ನಳಿನಮುಖಿಯ ಸಂತೈಸಿದರೆ ಗುರುರಾಯ| ಸತಿಗೆ
ತಿಳಿಯತಿನ್ನು ಪೂರ್ವಜ್ಞಾನ ಗುರುರಾಯ
ಇಳೆಯ ಕಪಟನಟನಾಟಕನು ಗುರುರಾಯ | ಎಂದು
ಬಳಿಕ ಶಿವನ ಸ್ತುತಿ ಮಾಡಿದಳು ಗುರುರಾಯ ೮

ಲೋಕರತ್ನ ಮಾಣಿಕವು ಎಲೆ ಗಂಗೆ | ಗಿರಿಜೆ
ಯಾಕಾರವೆ ಆದಿಶಕ್ತಿ ಎಲೆ ಗಂಗೆ
ಬೇಕು ನಿನಗೆ ಗಿರಿಜಾದೇವಿ ಎಲೆ ಗಂಗೆ | ನನ್ನ
ಏಕೋರೂಪ ತಿಳಿದು ನೋಡು ಎಲೆ ಗಂಗೆ     ೯

ಪದನು :

ತ್ರಿಪುರಸಂಹಾರಿ ಕೇಳು ವಿಷ್ಣುವ ಕಟಪನಾಟಕನೆಂಬರು
ಕಪಿಯ ಮನುಜರು ಏನಬಲ್ಲರು ವಿಷ್ಣುವಿನ ಗುಪಿತದಿಂದಾಡಿಸುವುದರ     ಪಲ್ಲ

ಇರುವೆ ಮೊದಲಾನೆ ಕಡೆಯು ಎಂದೆಂಬ ನಾನಾ ಜೀವನಗಳೆಲ್ಲ
ಮೀನಕೇತನಪಿತನು ರಕ್ಷಿಸಿದನೆಂಬುದು ಹಾನಿ ಬಂದಿರೆ ಮಗನಿಗೆ
ಆನಂದಮೂರ್ತಿ ಕೇಳು ಮನ್ಮಥನ ನೀನೆ ರಕ್ಷಿಸಿದವನೆಂದು
ಧ್ಯಾನಿಸುತ ವೇದಶಾಸ್ತ್ರಗಳೆಲ್ಲ ಕೂಗುವವು ನೀನೆ ಸೂತ್ರಿಕನು ಎಂದು     ೧

ಒದಗಿ ಕಪಟನಾಟಕಾ ಹರಿ ತನ್ನ ಉದರ ಜಲದುರ್ಗದೊಳಗೆ
ಹದಿನಾರು ಸಾವಿರ ಗೋಪಸ್ತ್ರೀಯರ ಭೋಗಪದಗಳಿನ್ನಾರಿಗಳವು
ಒದಗಿ ಕಾಲವು ತುಂಬಲು ಬೇಡನ ಹರಕೆ ಗುರಿಯಾದ ಕೃಷ್ಣ
ಬೆದರಿ ಬೊಬ್ಬೆಗೊಂಡು ಪಟ್ಟಣ ಬಯಲಾಯಿತು ಅದು ಯಾರ ನಟನಾಟಕ           ೨

ಪಶುಪತಿಯೆ ಶಿವನೆ ಕೇಳು ವಿಷ್ಣುವಿನ ಎಸೆವ ನಾಟಕವೆಂಬರು
ದಶ ಅವತಾರದಲಿ ಜಲ್ಮ ಜಲ್ಮಾದಿಗಳು ಬೆಸುಗೆಯಾಡಿಸಿದರಾರು
ಮುಸುಕಿ ಹಿರಣ್ಯನ ಹೀರುತಲಿ ದೆಸೆದೆಸೆಗಳಾರ್ಭಡಿಸಲು
ಬಿಸಿಗಣ್ಣ ವೀರಭದ್ರನ ಕೊಟ್ಟು ಮರ್ದಿಸಿದ ಕುಶಲನಾಟಕವಾರದು                      ೩

ಮತ್ತಬುದ್ಧಿಗಲನಳಿದ ನರಹರಿಗೆ ತತ್ವಜ್ಞಾನವು ಸೇರಲು
ಹತ್ತಾವತಾರದಲಿ ನಿಮ್ಮ ಶ್ರೀಪಾದವನು ಭೃತ್ಯತ್ವದಲಿ ಪೂಜಿಸಿ
ಉತ್ತಮ ಚಾಂಡಾಲರು ಇಲ್ಲೆನಲು ಮತ್ತೆ ಸಾಕ್ಷಿಯ ಕಾಣದೆ
ಮರ್ತ್ಯಲೋಕದೊಳಗೆ ಶ್ರೀರಾಮಲಿಂಗವನು ಅರ್ತಿಯಲಿ ಪೂಜಿಸಿದನು   ೪

ಚಿನುಮಯ ಶಿವನೆ ನಿಮ್ಮ ಲೋಕದೊಳು ನೆನೆಯದಾರಾರು ಇಲ್ಲ
ಹನುಮಂತ ಕೋಟಲಿಂಗವ ಭಜಿಸಿ ಪಡೆದನು ಮಯ್ಯೂರ ಪೂಜೆಗಳನು
ಮುನಿಜನಾದಿಗಳೆಲ್ಲರು ತಾ ತಮ್ಮ ಮನದ ಲಿಂಗವ ಪಡೆದರು
ನೆನಹೆಂಬ ಜವೆಯ ಜಗದೊಳು ಹುಡಿಯಾಡಿಪನೆ ನಿನಗಾರು ಸರಿಯಲ್ಲವು            ೫

ಉತ್ಪತ್ಯ ಸ್ಥಿತಿಗಳೆಂಬ ಜವಗಳನು ಪೃಥ್ವಿಯಾಕಾಶಕೆಲ್ಲ
ಮಥನಸೂತ್ರವ ಹೂಡಿ ವಿಶ್ವನಾಟಕವೆಂಬ ಶ್ರುತಿವೆಧ ಸಾರುತಿದೆ ಕೋ
ಹತವಹ ಕೋಟಿ ಜೀವ ಆಕ್ಷಣಕೆ ಸ್ಥಿತಿವಹ ಕೋಟಿ ಜೀವ
ಶಿತಕಂಠ ಶಿವನೆ ನಿನ್ನಯ ವಿಶ್ವನಾಟಕವು ಶ್ರುತಿ ಬ್ರಹ್ಮಗಳವಲ್ಲವು                     ೬

ಬಯಲು ರೂಪನೆ ಮಾಡುವೆ ಶಿಶಿವ ರೂಪ ಬಯಲನೆ ಮಾಡುವೆ
ಜಯ ಜಯತು ಜಗದ ಸೂತ್ರವ ಹುಡಿಯಾಡಿಪನೆ ಜಯತು ಜಗಭರಿತದೇವ
ಸವತಿ ಮುಚ್ಚರ ಜಗಳವ ಶಿವ ನಿಮ್ಮ ಕಿವಿಯೊಳಗೆ ಲಾಲಿಸುತಲಿ
ನಯನದೃಷ್ಟಿಯಲಿ ನೋಡಿ ನಲಿನಲಿದು ನಗುವಂಥ ಜಯಸಂಗಮೇಶಗುರುವೆ       ೭

ಸಂಗತ್ಯ :

ಆನೆ ಮೊದಲು ಇರುವೆ ಕಡೆಯೆಂದೆಂಬ
ನಾನಾ ಜೀವದ ಬೊಂಬೆಗಳಿಗೆ
ನೀನೆ ಜಗದ ಸೂತ್ರಧಾರಿ ಕೇಳೆಲೆ ನಮ್ಮ
ಹಾನಿ ಒಳ್ಳಿತು ನಿಮ್ಮದಲವೆ                      ೧

ದೇವಶಿವನೆ ನಿಮ್ಮ ಮಹಿಮೆಯ ತಿಳಿಯಲ್ಕೆ
ಗೋವಿಂದ ಅಜಸುರರಿಗರಿದು
ನಾವು ಸತಿಯರೇನ ಬಲ್ಲೆವು ಗುರು ಸರ್ವ
ಜೀವದಯಪಾರಿ ಬಲ್ಲ        ೨

ನನ್ನ ಬಿನ್ನಪವನು ಕೇಳೆಲೆ ಪರಶಿವ
ಕನ್ಯೆ ಗಿರಿಜೆ ನನಗಿನ್ನು
ಅನ್ಯೋನ್ಯವಿಲ್ಲದೆ ಕೂಡಿಸಿದರೆ ಮತ್ತೆ
ಭಿನ್ನವಾಗಿಯೆ ಕಾಣಿಸುವರು            ೩

ಏಕೋ ಶಿವನೆ ಕೇಳು ಆಕೆಯೊಡನೆ ನಾನು
ನೂಕಲಾರೆನು ಒಗತನವ
ಕಾಕು ನಿಷ್ಠುರದಿ ಸಾಕಿದ ಸುನಿಯೆಂದು
ಹಾಕುವಳೆನಗೆ ಕೂಳುಗಳ  ೪

ಶಂಕರ ಪರಶಿವ ಓಂಕಾರ ರೂಪನೆ
ಡೊಂಕು ಬರಲು ಅವಳೊಡನೆ
ಕಂಕುಳ ಸೀರೆಯ ಹೊಲತಿ ನೀ ಹೋಗೆಂದು
ಜಂಕಿಸಿ ಜರಿವಳು ಎನ್ನ      ೫

ಒಂದು ಕುಟುಂಬಗಳಾದರೆ ಜಗಳವು
ಬಂದಿತು ಬಾರದಲಿರುದು
ಹೊಂದಿ ನಾ ನಡೆದರೆ ಹೊರಕುಲದವಳೆಂದು
ಸಂದು ಸಂದನೆ ಮುರಿಸುವಳು       ೬

ಹರನೆ ಕೇಳೆಲೆ ನಮ್ಮ ಎರಡಾರ ಜಗಳದಿ
ಸರಕು ಮಾಡರು ನಿಮ್ಮಕಡೆಗೆ
ಹರಕುತನಗಳಿಂದ ಇವಳ ತಂದನುಯೆಂದು
ಒರಗಿಸುವಳು ನಿಮಿಷದಲ್ಲಿ           ೭

ಎಚ್ಚರದೊಳು ಮನೆಯೊಳಗಣ ದ್ರವ್ಯವ
ವೆಚ್ಚಮಾಡಿ ಕೆಡಿಸುವಳು
ಕಿಚ್ಚುಗಣ್ಣನೆ ಕಿರಿನಗೆಯಲಿ ದಾರಿದ್ರ‍್ಯ
ನುಚ್ಚುಬೋನವೆ ಗತಿ ನಿನಗೆ           ೮

ಕಾಳಗ ಕತನಗಳಿಂದಲಿ ದ್ರವ್ಯವ
ಗಾಳೇಲಿ ತೂರಿ ಚೆಲ್ಲುವಳು
ಕೂಳ ಕಾಣೆನುಯೆಂದು ಕುದಿಕುದಿಯುತ ಕೈಗೆ
ಜೋಳಿಗೆಯನು ಹಿಡಿಸುವಳು          ೯

ಅಂಜಿಕೆ ಅಲುಕುಗಳಿಲ್ಲದೆ ಬದುಕನು
ಎಂಜಲಗಲಸಿ ಬಿಡುವಳು
ನಂಜುಂಡ ಶಿವ ಕೇಳು ನಗೆಯಲ್ಲ ಬೋನದ
ಗಂಜಿಯೆ ಶೋಭಿತ ನಿನಗೆ ೧೦

ಕಂಟಕತನಗಳ ಮಾಡುತ ಮನೆಯೊಳು
ನೆಂಟರಿಷ್ಟರ ತಿನಿಸುವಳು
ಗಂಟಿ ನಾಗರ ಸುತ್ತ ಸೆಳಕೊಂಡು ನಿನ್ನನು
ಒಂಟಿತ್ತಿಲಿ ನಿಲಿಸುವಳು     ೧೧

ಕರಕರೆ ಕೂಳನು ಸಲಿಸಲು ಕೈಮ್ಯಾಗ
ಕೆರಕು ಹಿಡಿವುದೆಲೆ ನಿಮಗೆ
ಶರಿರಕೆ ಬೆಂಕಿ ಬಿಸಿನೀರನು ಕಾಣದೆ
ಹೊರಗೆ ಹೋಗುವೆ ನಿಮಿಷದಲ್ಲಿ      ೧೨

ಏಸು ಒಗೆತನಗಳ ಕೆಡಿಸಿದೆ ಗಿರಿಜೆಯೊ
ಳಿಸಲಾರೆ ಒಗೆತನವ
ಬಾಸೆಪಾಲಕ ಭಾಳನೇತ್ರ ಭಾವಕಿಯಳು
ಹೇಸಿಕೆಯೊಳಡಗಿಡಬೇಡ   ೧೩

ಬೇಡ ಶಿವನೆ ನಿಮ್ಮ ಬೇಡಿಕೊಂಬೆನು ಮಾತ
ನಾಡಿಸದಿರು ಅವಳೊಡನೆ
ರೂಢಿಗೀಶ್ವರ ಶಿವನೋಡಿ ಶ್ರೀನಯನದಿ
ಮಾಡಿಸು ಗಗನರಮನೆಯ                      ೧೪

ಮುತ್ತು ಮಾಣಿಕ ನವರತ್ನಚಿತ್ರಗಳಿಂದ
ತೆತ್ತಿಸಿ ಮೆರೆವ ಅರಮನೆಯ
ಸುತ್ತ ಕೋಟಿಯ ಮೇಲೆ ಪುತ್ಥಳಿ ಬೊಂಬೆಯ
ಸತ್ತಿಗೆ ಸಾಲುಗಳೆಸೆಯೆ     ೧೫

ವಿಪರೀತ ಅರಮನೆ ಅಪರಂಪರ ಮಾಡು
ತ್ರಿಪುರಸಂಹಾರಿ ನಾ ನಿನಗೆ
ಜಪಸ್ತ್ರೋತ್ರಗಳ ಮಾಡಿ ಗುಪಿತದಿ ಮನೆಯೊಳು
ಜಪಿಸಿಕೊಂಡಿರುವೆನು ನಿಮ್ಮ          ೧೬

ಮಾರಹರನೆ ಮಂತ್ರಮೂರುತಿ ಕೇಳಿನ್ನು
ಯಾರ ಮನೆಯೊಳ್ ಮಕ್ಕಳಿಲ್ಲ
ನಾರಸಿಂಹನ ಎದೆದಲ್ಲಣ ಶರಭನ
ವೀರನವನ ಕೊಡಿಸೆನಗೆ    ೧೭

ಹಸುಮಗ ವೀರನ ವಶಮಾಡಿ ಕೊಟ್ಟರೆ
ಸಿಸುಮಾಡಿ ಸಲಹಿಕೊಂಬೆ
ಸೊಸೆ ಭದ್ರಕಾಳಮ್ಮ ಕುಶಲದಿ ನಡೆದರೆ
ಹೆಸರು ಬಾಹುದು ಶಿವ  ನಿಮಗೆ      ೧೮

ಚೆನ್ನಶಿವನೆ ಕೇಳು ನಿನ್ನ ಮಗನು ಸೊಸೆಗೆ
ಹೊನ್ನಮಳೆಯ ಕರೆಸುವುದು
ಅನ್ನ ಉದಕ ಸರ್ವ ರನ್ನಮಂಚದ ಮೇಲೆ
ನಿನ್ನ ಭೋಗಕೆ ಕಡೆಯಿಲ್ಲ   ೧೯

ತುಪ್ಪಬೋನವನುಂಡು ಚಂದ್ರ ಮಂಚದ ಮೇಲೆ
ಕರ್ಪುರ ವೀಳ್ಯವ ಸವಿದು
ಪುಷ್ಪಶಯನ ಮೇಲೆ ಒಪ್ಪುವ ನಯನಕೆ
ಕರ್ಪುರ ಜ್ಯೋತಿ ನಾ ನಿಮಗೆ         ೨೦

ಇಬ್ಬರ ಹರೆಯದಿ ಹಬ್ಬವಾದುದು ನಿಮ್ಮ
ಉಬ್ಬು ಹೇಳುವರಾರು ಶಿವನೆ
ಕಬ್ಬುವಿಲ್ಲದ ವೈರಿ ಇಬ್ಬರೆ ಹರೆಯದಿ
ಹೆಬ್ಬುಲಿಯಾಗಿರಬಹುದು   ೨೧

ಅವಳ ನಂಬಲಿ ಬೇಡ ಧವಲ ದೇಹವನೆಲ್ಲ
ಕವಳವೇರಿಸಿ ಕೆಡಿಸುವಳು
ಹವಳ ಮಾಣಿಕ ಮುತ್ತು ಗೌಳದ ಸರವೆಂದು
ಜವಳಿ ಹಸ್ತವು ಮುಗಿದಿರಲು           ೨೨

ಮಂತ್ರಿಬಸವ ಗಂಗೆ ತಂತ್ರದ ನುಡಿಗೇಳಿ
ಚಿಂತಾಯಕ ನಸುನಗುತ
ಇಂತು ಬಯಕೆಗಳನಂತವಾಗಲಿಯೆಂದು
ಸಂತಸಗಳ ಧಾರೆಯೆರೆದು ೨೩

ಬಯಸಿ ತಂದುದಕಿನ್ನು ನಯವಾಯಿತೆನುತಲಿ
ಸವತಿಗಿಮ್ಮಡಿಯ ಮಾಡಿದನು
ಜಯಸಿರಿಲಕ್ಷ್ಮಿಯ ನುಡಿಯ ಭಾವಕೆ ಮೆಚ್ಚಿ
ಸಾಗರದೊಳಗಿದ್ದುದನು     ೨೪

ನಂದಿಬಸವ ಕೇಳು ಮುಂದಾಳ ನುಡಿಗಳ
ಕಂದರಿಬ್ಬರ ಕಥೆಗಳನು
ಇಂದುಧರನ ಕೂಡೆ ಒಂದೊಂದು ಪರಿಯಲಿ
ಮುಂದೆ ಪೇಳಿದ ವಚನದಲ್ಲಿ           ೨೫

ಈರೇಳು ಧರಣಿಯನಾರೈದು ಸಲಹುವ
ಮಾರಾರಿ ಹರಭಕ್ತ ಜನರು
ನಾರಿಗಿರಿಜೆ ಗಂಗೆ ಸೇರಿ ಸುಖದೊಳಿರ್ದ
ಆರನೆಯ ಸಂಧಿಗೆ ಶರಣು  ೨೬

ಸಂದಿ ೬ಕ್ಕಂ ಕಂದ ೧, ವಚನ ೧೬, ಪದನು ೨೪, ಸಂಗತ್ಯ ೪೩ ಉಭಯಕ್ಕಂ ೫೭೩ ಕ್ಕಂ ಮಂಗಳ ಮಹಾ ಶ್ರೀ ಶ್ರೀ