ವಚನ :

ಪರಮ ಮಂತ್ರಮೂರ್ತಿ ಕೇಳು ಗುರುರಾಯ | ಅಕ್ಕ
ಗಿರಿಜೆ ಮಗನ ಶಾಸ್ತ್ರಗಳನು ಗುರುರಾಯ
ಹರಿಬ್ರಹ್ಮ ಸಂವಾದಗಳ ಗುರುರಾಯ | ಸುರರಿ
ಗೊರೆದು ಪೇಳುತಿರ್ದ ಕತೆಯ ಗುರುರಾಯ   ೧

ಕರ್ತ ಶಿವನೇ ಕರುಣಾನಿಧಿಯೆ ಗುರುರಾಯ | ಜ್ಞಾನ
ಚಿತ್ತವಿಟ್ಟು ಲಾಲಿಸಿನ್ನು ಗುರುರಾಯ
ಹಸ್ತಿಮುಖದ ವಿಘ್ನೇಶ್ವರನು ಗುರುರಾಯ | ಅವನ
ತತ್ವಶಾಸ್ತ್ರಗಳನು ಕೇಳು ಗುರುರಾಯ          ೨

ಇರುತಲೊಂದು ದಿವಸದಲ್ಲಿ ಗುರುರಾಯ | ತಮ್ಮ
ಸುರಮುನಿಗಳ ಕೂಡಿಕೊಂಡು ಗುರುರಾಯ
ಹೊರಗೆ ಒಂದು ತೋಟದೊಳಗೆ ಗುರುರಾಯ | ಕುಳಿತು
ಕರದ ಪುಸ್ತಕಗಳ ಬಿಟ್ಟು ಗುರುರಾಯ                      ೩

ರಕ್ಕಸರ ಗುರುವು ಶುಕ್ರ ಗುರುರಾಯ | ತಮ್ಮ
ಅಕ್ಕರಿನ ಗುರ್ವಾಚಾರ್ಯ ಗುರುರಾಯ
ಮಿಕ್ಕಿನ ಸಕಲ ಬ್ರಹ್ಮಜಾತಿ ಗುರುರಾಯ | ಸುತ್ತ
ಕಿಕ್ಕಿರಿದು ಕುಳಿತರಾಗ ಗುರುರಾಯ             ೪

ನಟ್ಟನಡುವೆ ವಿಘ್ನೇಶ್ವರನು ಗುರುರಾಯ  | ಎಡದಿ
ಮಟ್ಟಿ ನಾಮದವರ ನೋಡು ಗುರುರಾಯ
ಉಟ್ಟಿ ಧೋತ್ರ ಜನ್ನಿವಾರ ಗುರುರಾಯ | ದೇವ
ಪುಟ್ಟಿ ಸಾಲಿಗ್ರಾಮದವರು ಗುರುರಾಯ         ೫

ಹಾಸಿಗೆಗಳ ಹಾಸಿಕೊಂಡು ಗುರುರಾಯ | ತಮ್ಮ
ಆಸನಗಳ ಬರೆದುಕೊಂಡು ಗುರುರಾಯ
ಕೇಶವ ನಾರಾಯಣನು ಗುರುರಾಯ | ತಕ್ಕ
ಭೂಸುರರು ಕುಳಿತರಲ್ಲಿ ಗುರುರಾಯ                      ೬

ಎಣಿಕೆಯಿಲ್ಲದ ವೈದಿಕರು ಗುರುರಾಯ | ಮತ್ತೆ
ಕುಳಿತುಕೊಂಡು ಕೇಳುತಿಹರು ಗುರುರಾಯ
ಗಣಿತ ವೇದಶಾಸ್ತ್ರಗಳನು ಗುರುರಾಯ | ನಿಮ್ಮ
ಗಣಪನೋದಿ ಹೇಳುತಿರ್ದ ಗುರುರಾಯ        ೭

ಕೇಳಿಯೆಂದು ವಿಪ್ರಜಾತಿ ಗುರುರಾಯ | ತಮ್ಮ
ತಾಳಪುಸ್ತಕಗಳ ಬಿಟ್ಟು ಗುರುರಾಯ
ಕಾಳಗಗಳ ಹರಿಬ್ರಹ್ಮಗಳ ಗುರುರಾಯ | ಅವರ
ಹಾಳುಹರಟೆ ನೋಡುತಿರ್ದ ಗುರುರಾಯ      ೮

ಶ್ಲೋಕ

ಸೃಷ್ಟಿಶ್ಚತುರ್ಮುಖೋ ಬ್ರಹ್ಮಾ ತತ್ಪದಂ ತು ಜನಾರ್ಧನ |
ಕಾರಣಂ ತು ಮಹಾದೇವಸ್ತರ್ಕವೇದಾ ರಥೀಯತೆ ||   ೧

ಉತ್ಪತ್ತಿರ್ಬ್ರಹ್ಮಣಃ ಸೃಷ್ಟಿಃ ಸ್ಥಿತಿಗತೇಶ್ಚ ಶ್ರೀಹರಿ
ಲಯೋತ್ಪತ್ತಿಸ್ಥಿತಿ ಕರ್ತಾ ಶ್ರೀರುದ್ರಃ  ಶ್ರುಣು ಷಣ್ಮುಖ   ೨

ಪದನು :

ಗುರುವರ್ಯರೆ ಕೇಳಿರೆ ನೀ ನಮ್ಮವರ ಪೌರಾಣದ ಕಥೆಗಳ
ಪರಬ್ರಹ್ಮ ಶಿವನೆ ಕರ್ತನು ಎಂದು ವೇದಗಳು ಬರೆದೋದಿ ಸಾರುತಿವೇಕೊ          ಪಲ್ಲ

ಆದಿ ಪರಶಿವನ ಮುಂದೆ ಹರಿಯಜರು ವಾದ ತರ್ಕವ ಮಾಡುತ
ಮೇದಿನಿಯ ಹದಿನಾಲ್ಕು ಸೃಷ್ಟಿ ಕರ್ತನುಯೆಂದು ವಾದಿಸಿದ ಹರಿಯೊಡನೆ
ಕ್ರೋಧದಿ ನಾರಾಯಣ ಎಲೆ ಬ್ರಹ್ಮ ವಾದ ಸಲ್ಲದು ನಮ್ಮೊಳು
ಆದಖಿಳ ಬ್ರಹ್ಮಾಂಡ ಸೃಷ್ಟಿ ಸ್ಥಿತಿಯೆರಡೆನಗೆ ಓದಿ ಹೇಳವುದ್ಯಾತಕೆ          ೧

ಅಂಗಜನ ಪಿತನೆ ಕೇಳು ಭರದಿಂದ ಕಂಗೆಡಿಸಿ ಪಿಡಿದು ನಿನ್ನ
ನುಂಗುತಲಿ ಎನ್ನ ಅಧೋ‌ದ್ವಾರದಲಿ ಹೊರಡಿಸುವೆ ಅಂಗಸತ್ವವನರಿಯಲೊ
ಮುಂಗಾಣದೆಲೆ ಬ್ರಹ್ಮನೆ ನೀನೆನ್ನ ಕಂಗೆಡಿಸಿ ನುಂಗುತಿರಲು
ಅಂಗುಳದ ಬವರಹ್ಮದ್ವಾರದಿ ನಾನು ಹೊರಡುವೆನು ಭಂಗೆಡದ ಕೇಳೆಲೊ            ೨

ಭ್ರಷ್ಟ ಕೇಳೆಲೆ ಬ್ರಹ್ಮನೇ ನಾ ನಿನ್ನ ನುಂಗಿ ವ್ಯಷ್ಟಿಯಲಿ ಹಾಯಲಾಪೆ
ಇಷ್ಟೊಂದು ಮಾತುಗಳು ನಿನಗೇಕೆ ಎಂದರೆ ಸಿಟ್ಟುಹತ್ತಿತ್ತು ಬ್ರಹ್ಮಗೆ
ಭ್ರಷ್ಟನೆನಬೇಡ ಹರಿಯೆ ನುಂಗಿದರೆ ವ್ಯಷ್ಟಿಯಲಿ ನಾ ಬರುವೆನೆ
ವಿಷ್ಣುದೇವರೆ ನಿಮ್ಮ ಶ್ರೀನಾಭಿಕಮಲದ ಸೃಷ್ಟಿಯಲಿ ನಾ ಬರುವೆನು         ೩

ಸುರಗುರುವೆ ನೀವು ಕೇಳಿ ಇಬ್ಬರಿಗೆ ಒಡಕುತೊಡಕುಗಳಾಗುತ
ಪರಬ್ರಹ್ಮ ಶಿವನ ವಾಲಗದೊಳಗೆ ಇಬ್ಬರು ಸರಿಬೆಸದಿ ಹೊಯ್ದಾಡಲು
ಗರಗರನೆ ಹಲ್ಲ ಮಸೆದು ವಾಲಗದಿ ಸರಿಸರಿದು ಆರ್ಭಡಿಸಲು
ಧರೆಯು ಶ್ರೀಕೈಲಾಸ ಗದ್ದಲಿಸಿ ನಡುಗಿದವು ಹರಿಯಜರ ಸಂವಾದಕೆ      ೪

ಸೃಷ್ಟಿಗೀಶ್ವರನ ಮುಂದೆ ಹರಿಯಜರು ಜಟ್ಟಿಜಟ್ಟಿಗಳಂದದಿ
ಮುಟ್ಟಿ ಶಿರಕರಗಳಿಗೆ ಹೆಣಗಿ ಬೀಳುತಲಾಗ ತಟ್ಟಿ ತೊಡರನೆ ಹಾಕುತ
ಸಿಟ್ಟುಕೋಪಗಳು ಹುಟ್ಟಿ ಬದಿಬದಿಯ ಹೆಟ್ಟಿ ತಿವಿತಿವಿದಾಡಲು
ಹೊಟ್ಟು ಹೊಟ್ಟುಗಳೇಳೆ ಹರಿಯಜರು ಆರ್ಭಡಿಸಿ ಜುಟ್ಟುಜುಟ್ಟನೆ ಪಿಡಿವುತ            ೫

ಮುಂದಲೆಗೆ ಮುಂದಲೆಗಳ ಪಿಡಿಪಿಡಿದು ಕೂದಲ ಸುತ್ತಿಕೊಂಡು
ಸಂದುಸಂದನೆ ತಿವಿದು ಸಂಕಟಾರ್ಭಟದಿ ಗೋವಿಂದ ಬೊಬ್ಬೆಗಳಿಕ್ಕುತ
ನೊಂದ ನೋವನೆ ನೋಡದೆ ಹರಿಯನೆ ಬಾಧಿಸಿ ತಕ್ಕೈಸುತ
ಎಂದು ಹುಟ್ಟದ ಕೋಪ ಹುಟ್ಟಿ ಆರ್ಭಡಿಸುತ್ತ ಬಂದು ನೆಲಕಪ್ಪಳಿಸಿದಿ        ೬

ಬಿದ್ದು ಬೊಬ್ಬೆಗಳಿಕ್ಕುತ ಆರ್ಭಟಿಸಿ ಎದ್ದು ಕೋ ಎಂದು ಕೂಗಿ
ಎದೆಗುಂದಿ ಮೇಲೆ ತಿವಿದರೆ ಗದ್ದಲಿಸಿ ಭೂಮಿ ನಡುಗೆ
ಇದ್ದಲಿಯ ವರ್ಣದವನೆ ನಾ ನಿನ್ನ ಸದ್ದು ಮಾಡಲಿ ಗೊಡುವೆನೆ
ವಿದ್ಯೆಗಳ ನೋಡೆಂದು ವೀರಬೊಬ್ಬೆಗಳಿಂದ ಮುಕ್ಕುಂದ ಗದ್ದಲಿಸಿ ಆರ್ಭಟಿಸುತ     ೭

ಮತ್ತೆ ಸಿಡಿಲೆರಗಿದಂತೆ ಆರ್ಭಡಿಸಿ ಎತ್ತ ನುಂಗಿದ ಹರಿಯನು
ನೆತ್ತಿಗೇರಲಿಗೊಡದೆ ಸತ್ವಸಾಹಸದಿಂದ ಒತ್ತಿ ತೀವ್ರದಿ ಕೆಡಹಿದ
ಸುತ್ತಿದ್ದ ಜನಗಳೆಲ್ಲ ಹರಿಮಾತು ವ್ಯರ್ಥವಾಯಿತು ಎನುತಲಿ
ಸತ್ಯ ಋಷಿಗಳು ಎಲ ಸಾಕ್ಷಿ ಸಮರಸದಿಂದ ಮತ್ತೆ ಪ್ರತಿ ಹೆಸರಿಡುತಲಿ    ೮

ಮದನಹರ ಶಿವನ ಮುಂದೆ ಸುರರೆಲ್ಲ ಅಧಿಕ ಸಂಭ್ರಮಗಳಿಂದ
ಅಧೋದ್ವಾರದಿಂದಲಿ ಬಂದ ನಾರಾಯಣಗೆ ಅಧೋಕ್ಷನೆಂಬ ಹೆಸರಿಟ್ಟರು
ನದಿಗಳಾರ್ಭಡಿಸುವಂತೆ ನರಹರಿಗೆ ಒದಗಿತು ಕೋಪಟೋಪ
ಹುದುಗಲೇತಕೆ ಇವನ ಸದರ ಮಾಡುವೆನೆಂದು ಗದಗದಿಸಿ ಆರ್ಭಟಿಸುತ ೯

ನೂಂಕಿ ಆರ್ಭಟಿಸಿ ಪಿಡಿದು ನರಹರಿಯು ನೀಕರಿಸಿ ಅವಚಿಕೊಂಡು
ಆಕಾಶಗಳು ಬಾ ತೆರೆವಂತೆ ಆರ್ಭಟಿಸಿ ಸೋಂಕಿಸೋಂಕದೆ ನುಂಗಿದ
ಸೂಕರನ ಸತ್ವದಿಂದ ನರಹರಿಯ ನೂಕಿದ ಧೋದ್ವಾರಕೆ ಒತ್ತಲು
ಏಕೋದೇವನ ಧ್ಯಾನದೊಳು ಸತ್ವಗಳ ಗೆಲಿದು ಜೋಕೆ ಕಮಲದಿ ಜನಿಸಿದ           ೧೦

ಪರಶಿವನ ಒಡ್ಡೋಲಗ ಬೆರಗಾಗಿ ಕರವ ಮುಗಿದು ಗೋಳಿಡುತಲಿ
ಹರಹರ ಎನುತಲಿ ಬ್ರಹ್ಮದೇವರಿಗಾಗ ಸುರರು ಪ್ರತಿ ಹೆಸರಿಡುತಲಿ
ಹರಿಯ ನಾಭಿಯ ಕಮಲದಿ ಜನಿಸಿದನು ಸರಿಯಹರಿಲ್ಲವೆನುತ
ಸರಸಿಜೋದೃವನೆಂಬ ನಾಮಗಳನಿಡುತಲಿ ಕರೆಕರೆದು ಮುಂಡಾಡುತ    ೧೧

ಸಭೆಯ ಜನರೆಲ್ಲ ಕೂಡಿ ಹರಿಯಜರಿಬ್ಬರನು ಕರೆದು ತಂದು
ಕಬ್ಬುವಿಲ್ಲನ ವೈರಿಪಾದದೊಳು ಕೆಡಹಿದರು ಮಬ್ಬುಹರಿಯಿತು ಜ್ಞಾನಕೆ
ಉಬ್ಬಿ ಪರಶಿವನ ನೋಡಿ ಹರಿಯಜರು ಗರ್ಭಗಳನೀಡಾಡುತ
ಇಬ್ಬರನು ಆಡಿಸುವ ಪರಶಿವನು ನೀನೆಂದು ಶಬ್ದದಲಿ ಕೊಂಡಾಡಲು                   ೧೨

ಮುಗುಳುನಗೆಗಳ ನಗುತಲಿ ಪರಶಿವನು ಜಗದೊಳಗೆ ಚೋದ್ಯವಾದ
ಒಗುಮಿಗೆಯ ಪದವ ಕೊಟ್ಟನು ತನ್ನ ಶ್ರೀಹರಿಗೆ ಜಗದ ಪಿತ ಬ್ರಹ್ಮನೆಂದು
ಹಗಲೆ ಜಾಗ್ರತ ಪದವನು ಪರಶಿವನು ಮಿಗಿಲಾಗಿ ತೋರಿಸಿದನು
ಹಗಲಿರುಳೆ ಜಾಗ್ರ ಸ್ವಪ್ನದ ಪದವನೊಳಕೊಂಡ ನಿಗಮಗೋಚರನೆಸೆದನು           ೧೩

ರಕ್ಕಸರ ಗುರುವೆ ಕೇಳು ನರಹರಿಯು ಹೊಕ್ಕು ಜನನವ ಮಾಜುತ
ಹೊಕ್ಕುಳದ ನಾಭಿಯಲಿ ಬ್ರಹ್ಮ ಜನಿಸಿದನೆಂದು ಒಕ್ಕಣಿಸುವರು ವೇದದಿ
ಮುಕ್ಕಣ್ಣ ಪರಶಿವನು ಬ್ರಹ್ಮನು ಅಕ್ಕರವ ಮಗನೆನುತಲಿ
ಮುಕ್ಕುಂದ ನರಹರಿಗೆ ಮೊಮ್ಮಗನು ಎನುತಲಿ ಸೊಕ್ಕಿ ಕೆಡದಿರೆ ಕೆಲಬರು ೧೪

ವೇದವಾದಿಗಳು ಎಲ್ಲ ಪೂರ್ವದ ಹಾದಿಗಳ ತಪ್ಪಿ ನಡೆದು
ವೇದವ್ಯಾಸ ತನ್ನ ತೋಳಲಿದು ವ್ರತಕೆಟ್ಟು ಮಾಧವನು ಘನವೆನುತಲಿ
ಆದಿ ಪರಶಿವನ ಮರೆದು ನರಕಕ್ಕೆ ಹೋದರಗಣಿತ ಕೋಟಿಯು
ಮಾಧವನ ವಂಶದಲಿ ನೀವೆಲ್ಲ ಕೇಳಿರೆ ವೇದಶಾಸ್ತ್ರದಲಿ ತಿಳಿದು ೧೫

ಗಂಗಧರ ಶಿವನೆ ಕೇಳು ಗಣಪತಿಯ ಶೃಂಗಾರ ಪೌರಾಣದ
ಮಂಗಳಾತ್ಮಕ ನಿಮ್ಮ ಮಹಿಮೆಗಳ ಕೇಳಿ ಹಿಂಗಿತೇಳೇಳು ಜಲ್ಮ
ಸಂಗಡದ ವಿಪ್ರಜಾತಿಯೆಂದು ಸಾಷ್ಟಾಂಗವೆರಗಿ ಕೆಡಹಿದನು
ಅಂಗಭವಗಳನಳೆದು ಆತ್ಮಶುದ್ಧಿಗಳಿಂದ ಲಿಂಗಧ್ಯಾನದಿ ಕೇಳುತ                      ೧೬

ಆನೆಮುಖ ಗಣಪನೆ ನೀ ನಮಗೆ ಜ್ಞಾನಶಾಸ್ತ್ರವ ಪೇಳಿದೆ
ಏನೆಂದು ಹೇಳುವೆವು ನಿಮ್ಮ ಘನಮಹಿಮೆಯನು ಸ್ವಾನುಭವದ ಹಿರಿಯರೆ
ದಾನಗುಣನಿಧಿಯೆ ಕೇಳು ವ್ಯಾಸನು ಜ್ಞಾನಶಾಸ್ತ್ರದಿ ಬಲ್ಲಿದ
ಏನು ಕಾರ‍ಣ ಹರಿಯು ಘನವೆಂದು ಕಟ್ಟನು ನೀ ನಮಗೆ ಪೇಳು ಗುರುವೆ  ೧೭

ದೋಷಿ ಬ್ರಾಹ್ಮಣರೆ ಕೇಳಿ ವ್ಯಾಸರಿಗೆ ದೋಷ ದುರ್ಗುಣ ಸೇರಿತು
ಭಾಷೆ ಪಲ್ಲಟವಾಗಿ ಬಗುಳಿದನು ಧರೆಯೊಳಗೆ ದೂಷಕನ ಕಥೆಯ ಕೇಳಿ
ಕಾರಿಯ ಸ್ಥಲದಲೊಬ್ಬ ಶಿವಮುನಿಯು ಈಶ್ವರನ ಪೂಜೆ ಮಾಡಿ
ಹಾಸ್ಯಾರ್ಥಗಳ ಮಾಡಿ ಶೂದ್ರಜಾತಿಗಳೆಂದು ದೂಷಿಸಿದ ಶಿವಶರಣರ      ೧೮

ಸಮಗಾರ ಹೊಲೆಯ ಮಾದಿಗರು ತಮ್ಮ ಶರಣರು ಎಂದೆನುತಲಿ
ಉಮಾಪತಿ ಶಿವನ ಪೂಜೆಯ ಮಾಡಿ ಮೆರೆವಿರಿ ನಿಮ್ಮ ದೈವದ ಘನವ
ನೆಮ್ಮಿ ಕೇಳಿರೇ ಮುನಿಗಳ ಆ ಹರಿಯ ಮೊಮ್ಮಗನು ನಿಮ್ಮ ದೈವ
ಇಮ್ಮಡಿಯ ಹದಿನಾಲ್ಕು ಭುವನನಟಕನೆಂಬ ನಮ್ಮ ಹರಿಗೆಣೆಯದಾರು    ೧೯

ಬಾಲಮುನಿ ಶೂದ್ರಜಾತಿ ಬಿಡುಬಿಡು ಶೂಲಿದೈವದ ಪೂಜೆಯ
ಮೂಲ ನಾರಾಯಣನ ಭಜಿಸಿದರೆ ನಾ ನಿಮಗೆ ಮೇಲು ಪದಗಳ ಕೊಡಿಸುವೆ
ಶೀಲವಂತರುಗಳು ಎಂದು ಶೂದ್ರರು ನೂಲ ಹರವಿಗೆ ಸುತ್ತುತ
ನಾಲಿಗೆಯಲಿ ನಂಜಿ ನೋಡ್ವರು ಪ್ರಸಾದಗಳ ಬಿಡುಬಿಡು ಹೊಲೆ ನಡತೆಯ        ೨೦

ಇಂತು ನಿಂದಿಸಲು ಕೇಳೀ ಶಿವಮುನಿ ಅನಂತ ಕೋಪವ ತಾಳುತ
ತಂತಿ ಕರುಳನೆ ಮಾಡಿ ಬಾರಿಸುವೆ ನಾನೆಂದು ದಂತಿ ಮದವೇರಿದಂತೆ
ಮುಂತೆ ಕೇಳೆಲೊ ಬೇಗನೆ ಪ್ರಸಾದವನು ಇಂತು ನಿಂದಿಸಲು ಒಬ್ಬ
ಅಂತು ಹೊಲೆಯರ ಮನೆಯ ಹಂದ್ಯಾಗಿ ಜನಿಸಿದನು ಅಂತವನ ಕೇಳಿ ಮರೆದೆ     ೨೧

ಮರೆದ ಮಾವನ ಕೇಳೆಲೊ ಶಿವನಲಿ ದುರುಳ ಆಚಾರ್ಯನೊಬ್ಬ
ನರಜಲ್ಮಜಂಗಮದ ತೀರ್ಥಪ್ರಸಾದವನು ಪರಮಲಿಂಗಕೆ ಕೊಡುವರೆ
ಕರದಿ ಕಿವಿಗಳ ಮುಚ್ಚುತ ಶಿವ ನೊಂದು ಪರವಾಗಿ ದೂಷಕ ನೀ
ವರಹಜಲ್ಮದಿ ಪುಟ್ಟಿ ನರಕವನು ಭಕ್ಷಿಸೆಂದು ಹರನು ಶಾಪವ ಕೊಟ್ಟನು   ೨೨

ಶ್ಲೋಕ

ಪ್ರಸಾದ ನಿಂಕತಃ ಸೂತ್ರೀ ಮರ್ತ್ಯಲೋಕಂ ಗಮಿಷ್ಯತಿ
ಜನ್ಮನಾ ಸೂಕರೋ ಭೂತ್ವಾ ಜಾಯತೇಹಿ ನ ಸಂಶಯಃ       ೧

ವಿಶಾಪಂ ಕುರು ಮೇ ಸ್ವಾಮಿನ್ ಮದ್ರೂಪಂ ಚ ಮಮ ಪ್ರಭೋ
ಭಕ್ತ ಸ್ವಾತ್ಮಸ್ವರೂಪಾಯ ನಮಸ್ತೇ ಭಕ್ತದೇಹಿನೇ      ೨

ಅನ್‌ಓನ್ಯ ಸುವಿಚಾರಸ್ತು ಚರೋಚ್ಛೆಷ್ಟಾನ್ನಸೇವನಾತ್
ಕ್ಷಯಂತೇ ಕೋಡ ಜನ್ಮಾನಿ ತಥ್ಯಂ ತೇ ಶೈವ ಸೂತ್ರಿಕ         ೩

ಲಿಂಗ ಜಂಗಮ ತೀರ್ಥಾನಾಂ ಪ್ರಸಾದ ಭಸ್ಮದೂಷಕಃ
ಕಲ್ಪಾಂತನರಕಂ ಯಾತಿ ಯಾವಚಚಂದ್ರದಿವಾಕರೌ   ೪

ಪದನು :

ಪಾದತೀರ್ಥವ ನಿಂದಿಸಿ ಜಗದೊಳಗೆ ಹೋದರಗಣಿತ ಕೋಟಿಯು
ಬಾಧೆ ಯಮರ್ಧನ ಕೊಂಡದೊಳಗುರುಳಿದರು ಈ ವಿಧಿಯು ನಿಮಗೆ ಬಿಡದು
ಮಾದಿಗರ ನಡತೆಯೆಂದು ನೀ ನಮ್ಮ ಶೂದ್ರರೆಮದೆನ್ನಬಹುದೆ
ವೇದವ್ಯಾಶನೆ ಕೇಳು ನೀನಾವ ಕುಲದವನು ವಾದಿಕಬ್ಬೇರ ಮರೆದೆಯೆ    ೧

ವಶಿಷ್ಟನಾವ ಜಾತಿ ವರ್ಣಿಸಲು ಕಾಸ್ಯಪನಾವ ಕುಲವು
ಹುಸಿಯ ನುಡಿಯಲಿ ಬೇಡ ಕೌಟಿಲ್ಯನಾಯಿದ ವಿಶ್ವಮಿತ್ರನು ಆರೆಲೊ
ಉಸುರಿ ಹೇಳಲು ಗೌತುಮ ಜಗದೊಳಗೆ ತಸ್ಕರನಾವ ಕುಲ ಜಾತಿ
ಹೆಸರ ಹೇಳಲುಬಾರದ ಅಜಮಿಳೃಷಿಯು ಕಸಮಳೆಯ ಮರ ನಾರದ     ೨

ಆರನೊಳ್ಳಿದರೆಂಬಿರಿ ಎಲೆ ವ್ಯಾಸ ಭಾರದ್ವಜ ಬಡಗಿ ಮಗನು
ನೀರಪ್ರಳಯಕೆ ಒಂದು ರೋಮ ಉರುಳಲು ಕಂಚಗಾರರ ಮಗ ಕೇಳೆಲೊ
ತೋರಿಹೇಳಲು ಬಾರದು ಕೌಶಿಕನು ದೂರ್ವಾಸನಾರು ಪೇಳು
ಮೀರಿದ ದಧೀಚೆಮುನಿಯಿಂದಲಿ ಹುಟ್ಟಿದ ಹಾರುವ ಕುಲವಾವುದು        ೩

ಜಲನದಿಯ ಮೂಲಗಳನು ಮುನಿವರ್ಗೆ ನೆಲೆಯ ಹೇಳುವರೆಯೆಂದು
ಹಲವು ಕೋಪವ ತಾಳಿ ಉರಿದೆದು ಬರುತಿಹಿರಿ ಸಲುವುದೇ ನಿಮಗೆ ನಡತೆ
ಎಲೆ ವೇದವ್ಯಾಸ ಕೇಳು ನೀನೆಮ್ಮ ಮಲಹರ ಶಿವಶರಣರ
ಹೊಲೆಯ ಮಾದಿಗ ಶೂದ್ರಜಾತಿಗಳು ನೀವೆಂದು ಕುಲವ ಹೀನಿಸಿ ನುಡಿವರೆ        ೪

ಮನುಜ ಕೇಳೆಲೆ ವ್ಯಾಸನು ಚಿತ್ತದಲಿ ಮುನಿಜನ ಶಿವಶರಣರ
ಮನವನೊಬ್ಬುಳಿ ಮಾಡಿ ಶಿವನ ಶ್ರೀಪಾದವನು ಘನವರಿದು ಭಜಿಸುತಿರಲು
ಹನಿಮಳೆ ಹಳ್ಳಕೊಳ್ಳ ನೀರುಗಳು ಘನನದಿಯ ಬೆರೆಸಿದಂತೆ
ತನುಮನವನಿತ್ತು ಶಿವನೊಲಗೈಕ್ಯವಾದರು ಬಿನುಗು ಕೇಳಲೊ ವ್ಯಾಸನೆ  ೫

ಮಂದಮತಿ ಮನುಜ ಕೇಳು ನಿನ್ನಯ ಚಂದ ನಡತೆಯ ಸುದ್ದಿಯ
ಸಂಧ್ಯಾನ ಮಂತ್ರಗಳ ಜಪಸ್ತೋತ್ರಗಳ ಮಾಡಿ ಮಿಂದು ಮಡಿಗಳನುಡುತಲಿ
ಬಂದು ಕುಳಿತೆಡೆಯ ಮುಂದೆ ಕೃಷ್ಣಗೋವಿಂದಗರ್ಪಣ ಮಾಡುತ
ತಿಂದು ಮಿಕ್ಕೆಂಜಲವನು ತಿಪ್ಪೆಯೊಳು ಸುರಿದರೆ ಹಂದಿನಾಯ್ಗಳು ತಿಂಬವು        ೬

ನಿತ್ಯನೇಮವನೆ ಮಾಡಿ ಪತ್ರಾವಳಿಯ ಸುತ್ತಲೆಡೆ ಬಡಿಸಿಕೊಂಡು
ಮತ್ತೆ ಶ್ರೀಹರಿಗರ್ಪಣ ಮಾಡಿದನ್ನವನು ತುತ್ತು ಕೂಳೆಂಜಲಿನುತ
ಅತ್ತಿತ್ತ ಮಾಡಿ ತಿಂದು ಮಿಕ್ಕುದನು ಎತ್ತಿ ತಿಪ್ಪಿಗೆ ಸುರುವುತ
ಕತ್ತೆನಾಯ್ಗಳು ತಿಂದು ಕಸಮಳಲ ಕಲಸುವಿರಿ ಎತ್ತಣದು ಹರಿಯರ್ಪಣ   ೭

ಎಲ್ಲ ಜಾತಿಗೆ ಜಾತಿಯು ಬ್ರಾಹ್ಮಣರು ಸೊಲ್ಲು ಸುಶಬ್ದಕರು
ಬಲ್ಲವರು ಎನುತಲಿ ಚಾಂಡಾಲ ಕಾಗೆಗೆ ಹಲ್ಲುಬಾಯ್ಗಳ ತೆರೆವಿರಿ
ನೆಲ್ಲ ಕೂಳನೆ ಚೆಲ್ಲುತ ಅಡ್ಬಿದ್ದು ಗಲ್ಲಗಲ್ಲವ ಬಡಿವುತ
ಕುಲ್ಲು ಚಾಂಡಾಲರಿಗೆ ಎಲ್ಲಿಯದು ಸುಜಲ್ಮವು ಬಲ್ಲತನ ಬರಿದಾಯಿತು    ೮

ಹೊನ್ನಿಗಾಸೆಯನು ಮಾಡಿ ಕಾಡೊಳಗೆ ಮುನ್ನ ಕೂಳುಗಳ ಇಂದು
ಚೆನ್ನ ಬ್ರಾಹ್ಮಣರೆಂದು ಬೊಗಳುವ ಹೊಲೆಯರಿಗೆ ಎಲ್ಲಿಯದು ಸುಜಲ್ಮವು
ಅನ್ನವೇ ದೈವವೆಂದು ವೇದಗಳು ಮುನ್ನ ಸಾರಿದವೇತಕೋ
ಅನ್ನದಾರಿಯೆಂಬ ಶಿವ ತಾನೆ ರೂಪಾದ ಕುನ್ನಿ ಮನುಜರು ಬಲ್ಲರೇ        ೯

ಹರಣ ಅವಗಡಕಾಲಕೆ ಅನ್ನಗಳು ಪರಮಪಾವನವಾದವು
ಹರಿಹರಿದು ಕಂಡಕಂಡವರ ಮನೆಬೇಡುತಲಿ ತಿರಿದರೆ ದೊರಕದಿನ್ನು
ಅರೆಕೂಳುಗಳು ಬೀಳಲು ಅದಕಿನ್ನು ಶರಣುಶರಣೆನ್ನುತಿಹರು
ನರಹರಿಯ ಕುಲಗಳನು ಬೆದಕಿ ನೋಡುವೆನೆಂದು ಹರಣ ಚೈತನ್ಯಗೈದು ೧೦

ಅನ್ನಕಾಲಗಳು ಬರಲು ಎಲೆ ವ್ಯಾಸ ಹೊನ್ನ ಇಕ್ಕಲು ಕಾಣರು
ಚೆನ್ನಯ್ಯಹರಳಯ್ಯಗಳ ಮನೆಯ ಉದಕಗಳು ಪಾನ್ಯಪಾವನವಾದವು
ಅನ್ನ ಉದಕಗಳಿಲ್ಲದೆ ಸಿರಿಯವರು ಮುನ್ನ ಉರುಳಿದರು ಕೋಟಿ
ಅನ್ನದೈವವೆ ದೈವ ಇನ್ನು ದೈವಗಳಿಲ್ಲ ಕುನ್ನಿ ಮಾನವ ಕೇಳೆಲೊ                    ೧೧

ನುಡಿದ ನುಡಿಗಳ ಕೇಳುತ ವ್ಯಾಸನು ಗುಡುಗುಡಿಸಿ ಆರ್ಭಡಿಸುತ
ಒಡೆಯ ಶ್ರೀಹರಿ ನಿಮ್ಮ ನಡತೆ ಹಳಿದನು ಎಂದು ಕೆಡಬಡಿದ ಶಿವ ಋಷಿಯನು
ಒಡನಿದ್ದ ಋಷಿಗಳೆಲ್ಲ ಎಲೆ ವ್ಯಾಸ ಬಡಿವರೆ ಶಿವ ಋಷಿಯನು
ಕಡಿದುಬೀಳಲಿ ನಿನ್ನ ರಟ್ಟೆತೋಳುಗಳೆಂದು ಒಡನೆ ಶಾಪಿಸಿದರಾಗ       ೧೨

ತರಕವೇತಕೆ ಎಮ್ಮೊಳು ಎಲೆ ವ್ಯಾಸ ನರಹರಿಯ ಘನವೆಂದರೆ
ಪುರಹರನ ಜರಿದು ಕರಗಳನೆತ್ತಿ ಪೊಗಳಿದರೆ ನರಹರಿಯ ಪೂಜಿಸುವೆವು
ಒರೆದ ನುಡಿಯನು ಕೇಳುತ ವ್ಯಾಸನು ಪುರಹರನ ಜರಿದು ಜರಿದು
ನರಹರಿಯು ಈರೇಳು ಭುವನದೊಡೆಯನು ಎಂದು ಕರವೆತ್ತಿ ಬೊಬ್ಬಿರಿದನು        ೧೩

ಮಂಡಲವು ಬೆರಗಾಗುತ ಕೇಳಿ ಭೂಮಂಡಲವು ಕೋಪಗೈಯ್ಯೆ
ದಂಡನಾಯಕ ಬಸವ ವಿಶ್ವಮಾಯದಿ ಬಂದು ಖಂಡಿಸಿದ ಕರತೋಳ್ಗಳ
ರುಂಡ ಬೀಳಲು ನೆಲದೊಳು ಬಸವಣ್ಣ ತೊಳ್ಕೊಂಡೊಯ್ದ ತನ್ನ ಧ್ವಜಕೆ
ಅಂಡಿಯಲಿ ಇದ್ದಂಥ ಮುನಿಜನಾದಿಗಳೆಲ್ಲ ಕೊಂಡಾಡಿದರು ವೃಷಭನ     ೧೪

ಶರಣುಶರಣಾರ್ಥಿ ಬಸವ ನೀ ಮುನ್ನ ಪರವಾದಿ ಎದೆದಲ್ಲಣ
ಹರುವ ಮಾಡಿದೆ ಇವನ ದೂಷಕನ ತೋಳ್ಗಳು ಮೆರೆಯಲು ನಿಮ್ಮಧ್ವಜದಿ
ಅರರೆ ಬಲಬಲ್ಲರೆನುತಲಿ ಮುನಿಜರು ಕರವೆತ್ತಿ ಕೊಂಡಾಡುತ
ಉರುಳಿಬಿದ್ದಂಥ ವ್ಯಾಸನ ಕಂಡು ಮುನಿಜನನಿಕರ ಕರೆಕರೆದು ಎಬ್ಬಿಸುತ ೧೫

ವಚನ :

ಏಳುಏಳು ಎಚ್ಚತ್ತಿನ್ನು ಎಲೆ ವ್ಯಾಸ  | ನಿನ್ನ
ತೋಳು ಹರಿದುಹೋಯಿತಿನ್ನು ಎಲೆ ವ್ಯಾಸ
ಮೂಳನಾಗಿ ನೆಲಕೆ ಬಿದ್ದ ಎಲೆ ವ್ಯಾಸ | ನಿನ್ನ
ಆಳೋದೈವ ಎಲ್ಲಿ ಹೋದನೆಲೆ ವ್ಯಾಸ        ೧

ಎತ್ತಿ ಮೆರೆವ ತೋಳ್ಗಳೆಲ್ಲಿ ಎಲೆ ವ್ಯಾಸ | ಗಗನ
ಕತ್ತರಿಸಿ ಒದ್ದಯವೇನೋ ಎಲೆ ವ್ಯಾಸ
ಮುತ್ತಿಕೊಂಡ ಮುನಿಗಳೆಲ್ಲ ಎಲೆ ವ್ಯಾಸ | ನಿನ್ನ
ಚಿತ್ತಹರಿಯು ಎತ್ತ ಹೋದನೆಲೆ ವ್ಯಾಸ        ೨

ಕೊಂಡಾಡುವ ಕರಗಳನು ಎಲೆ ವ್ಯಾಸ | ಭೂ
ಮಂಡಲವು ನುಂಗಿತೇನೋ ಎಲೆ ವ್ಯಾಸ
ಮೊಂಡನಾಗಿ ನೆಲಕೆ ಬಿದ್ದೆ ಎಲೆ ವ್ಯಾಸ| ನಿನ್ನ
ಪುಂಡರೀಕನು ಆಗಲಿ ಹೋದನೆಲೆ ವ್ಯಾಸ    ೩

ಮುಟ್ಟಿತೇನೋ ಮುನಿಯ ಶಾಪ ಎಲೆ ವ್ಯಾಸ | ನಿನ್ನ
ರಟ್ಟಿತೋಳು ಹರಿಯಿತೇನೊ ಎಲೆ ವ್ಯಾಸ
ಸೃಷ್ಟಿಗೊಡೆಯ ಶ್ರಿಹರಿಯು ಎಲೆ ವ್ಯಾಸ | ನಿನ್ನ
ಭ್ರಷ್ಟನೆಂದು ಬಿಟ್ಟು ಹೋದನೆಲೆ ವ್ಯಾಸ       ೪

ನಿಂದಿಸಿದರೆ ಶಿವಮುನಿಗಳ ಎಲೆ ವ್ಯಾಸ | ಜಗಕೆ
ಹಂದಿಯಾಗಿ ಚರಿಸುವರೊ ಎಲೆ ವ್ಯಾಸ
ಕಂದ ನಿನ್ನ ರಟ್ಟಿ ಹರಿಯಹಿತೇನೋ ಎಲೆ ವ್ಯಾಸ | ನಿನ್ನ
ತಂದೆ ಹರಿಯು ಸಂದನೇನೊ ಎಲೆ ವ್ಯಾಸ   ೫

ಶ್ರೀಮುದ್ರೆಗಳು ಸಾಲಿಗ್ರಾಮ ಎಲೆ ವ್ಯಾಸ | ನಿನ್ನ
ನೇಮನಿತ್ಯ ದೇವಪೂಜೆ ಎಲೆ ವ್ಯಾಸ
ಭೂಮಿಯೊಳಗೆ ಉರುಳುತಿದೆ ಕೋ ಎಲೆ ವ್ಯಾಸ | ರಂಗ
ಧಾಮನೆಲ್ಲಿ ಆಗಲಿಹೋದನೆಲೆ ವ್ಯಾಸ         ೬

ವೇದಶಾಸ್ತ್ರ ಶ್ರುತಿಪೌರಾಣ ಎಲೆ ವ್ಯಾಸ | ರಕ್ತ
ವೇದದೊಳಗೆ ಉರುಳುತಿವೆ ಕೋ ಎಲೆ ವ್ಯಾಸ
ಓದಿ ಬರೆವ ರಟ್ಟಿ ಹರಿಯಿತೆ ಎಲೆ ವ್ಯಾಸ | ನಿಮ್ಮ
ಮಾಧವೇಶನಗಲಿ ಹೋದನೆಲೆ ವ್ಯಾಸ        ೭

ಉಂಬ ಉಡುವ ರಟ್ಟಿ ಹರಿಯಿತೇನೋ ಎಲೆ ವ್ಯಾಸ | ತ್ರಿ
ಯಂಬಕಲನ ಜರಿದರಿನ್ನು ಎಲೆ ವ್ಯಾಸ
ಡೊಂಬಮೂಳ ಶಿವನ ಮರೆದೆ ಎಲೆ ವ್ಯಾಸ | ನಿನಗೆ
ಕುಂಭಿನಿ  ನರಕ ತಪ್ಪದಿನ್ನು ಎಲೆ ವ್ಯಾಸ      ೮

ಸುಸ್ತಿಬಳಿ ಮುಸುಕಿತೇನೊ ಎಲೆ ವ್ಯಾಸ | ನಿನ್ನ
ಪುಸ್ತಕಗಳು ಉರುಳುತಿವೆ ಕೋ ಎಲೆ ವ್ಯಾಸ
ಮಸ್ತಕವನು ಕಾಯ್ವ ಹರಿಯು ಎಲೆ ವ್ಯಾಸ | ಜಗದ
ಗಸ್ತಿ ತಿರುಗಹೋದನೇನೊ ಎಲೆ ವ್ಯಾಸ      ೯

ದಾರಿಬಟ್ಟೆಯೊಳಗೆ ಬಿದ್ದ ಎಲೆ ವ್ಯಾಸ | ನಿನಗೆ
ನೀರ ಹೊಯ್ವರಿಲ್ಲ ಬಾಯೊಳೆಲೆ ವ್ಯಾಸ
ಸೋರಿ ಸುರಿವ ರಕ್ತಗಳನು ಎಲೆ ವ್ಯಾಸ | ಕಂಡು
ನಾರಾಯಣನು ಬಂದುದಿಲ್ಲ ಎಲೆ ವ್ಯಾಸ      ೧೦

ಹರಣದೊಡೆಯ ಹರಿಗೋವಿಂದನೆಲೆ ವ್ಯಾಸ | ನಿನ್ನ
ಬರಡುಮಾಡಿ ಬಿಟ್ಟು ಹೋದನೆಲೆ ವ್ಯಾಸ
ಕುರುಡಮೂಳ ಶಿವನ ಜರಿಗೆ ಎಲೆ ವ್ಯಾಸ | ಎಂದು
ಗರುಡನೇರಿ ಹರಿಯು ಹೋದ ಎಲೆ ವ್ಯಾಸ  ೧೧

ಹಾಸ್ಯಾರ್ಥಗಳ ನುಡಿದರಿನ್ನು ಗುರುಚಾರ್ಯ | ವೇದ
ವ್ಯಾಸಪಚಾರಿಸುತಲೆದ್ದು ಗುರುಚಾರ್ಯ
ಕೇಶವ ಶ್ರೀಕೃಷ್ಣನಿರಲು ಗುರುಚಾರ್ಯ| ನಮಗೆ
ಏಸೋ ತೋಳ್ಗಿವನೆನುತ ಗುರುಚಾರ್ಯ     ೧೨

ದೇವತೆಗಳ ಗುರುವೆ ಕೇಳು ಗುರುಚಾರ್ಯ | ಜರಿಯೆ
ಹೇವ ಹುಟ್ಟಿ ಮನದೊಳಿನ್ನು ಗುರುಚಾರ್ಯ
ತೀವಿ ಪಚಾರಿಸುತಲೆದ್ದು ಗುರುಚಾರ್ಯ| ವ್ಯಾಸ
ಗೋವಿಂದನ ಬಳಿಗೆ ನಡೆದು ಗುರುಚಾರ್ಯ            ೧೩

ನಡೆದು ಹೊಕ್ಕು ವೈಕುಂಠವನು ಗುರುಚಾರ್ಯ | ಕೃಷ್ಣ
ನಡಿಯ ಶ್ರೀಪಾದಗಳಿಗೆರಗಿ ಗುರುಚಾರ್ಯ
ಒಡೆಯ ನಿಮ್ಮನಂಬಿ ಪೂಗಳ್ವೆ ಗುರುಚಾರ್ಯ | ಎಂದು
ಕಡಿದ ರಟ್ಟಿಗಳ ತೋರಿದನು ಗುರುಚಾರ್ಯ ೧೪

ಚನ್ನಕೇಶವನ ಶ್ರೀಹರಿಯೆ ಎಲೆ ದೇವ | ಮೂಲ
ನಿನ್ನ ಸೂತ್ರವೆಂದು ಬಗೆದೆ ಎಲೆ ದೇವ
ಅನ್ಯರಿಂದ ರಟ್ಟಿ ಹರಿತಲೆ ದೇವ | ಹರಿಯೆ
ನನ್ನ ಕೇಡು ನಿನ್ನದಯ್ಯ ಎಲೆ ದೇವ  ೧೫

ಆದಿಮೂಲ ಕಪಟನೆಂದು ಎಲೆ ದೇವ | ನಾಲ್ಕು
ವೇದ ಶಾಸ್ತ್ರದಲಿ ತಿಳಿದು ಎಲೆ ದೇವ
ವಾದಿಮುನಿಗಳಿಂದ ಶಿವನ ಎಲೆ ದೇವ | ಜರಿಯೆ
ಸೇದಿ ರಟ್ಟಿ ಹರಿಯ ಹೊಯ್ದರೆಲೆ ದೇವ        ೧೬

ಗಳಿಲನೆದ್ದು ಪೇಳುತಿರಲು ಎಲೆ ದೇವ | ಕೃಷ್ಣ
ನಳಿನನಾಥ ಧ್ಯಾನಿಸುತಲಿ ಎಲೆ ದೇವ
ಕೊಳಕ ಭ್ರಷ್ಟ ಕೇಳಲೊ ನೀ ಗುರುಚಾರ್ಯ | ಅವಗೆ
ತಿಳುಹಿ ಪೇಳಿದನು ಕೃಷ್ಣ ಗುರುಚಾರ್ಯ      ೧೭

ಚಾಳುಮನುಜ ಕೇಳಲೊ ನೀನೆಲೆ ವ್ಯಾಸ | ನನ್ನ
ಆಳೋ ದೈವವನೇಕೆ ಹಳಿದ್ಯೊ ಎಲೆ ವ್ಯಾಸ
ಹೇಳಲೆಂದು ಕಳುಹಿಕೊಟ್ಟರೆಲೆ ವ್ಯಾಸ | ನನ್ನ
ಆಳ್ದ ಶಿವನೆ ಎನ್ನ ಕರ್ತ ಎಲೆ ವ್ಯಾಸ          ೧೮

ಬಿನುಗುಮನುಜ ನರಗರಿಯೆ ನೀ ಎಲೆ ವ್ಯಾಸ | ನನ್ನ
ತನುಮನವೆ ಶಿವನದಯ್ಯ ಎಲೆ ವ್ಯಾಸ
ಜನಕನಾಗಿ ರಕ್ಷಿಸಿದನು ಎಲೆ ವ್ಯಾಸ | ಶಿವನ
ಘನವ ಕೇಳು ಶ್ರುತಿ ಶಾಸ್ತ್ರದಲಿ ಎಲೆ ವ್ಯಾಸ ೧೯

ಶ್ಲೋಕ :

ದೇಹೋ ದೇವಾಲಯಃ ಪ್ರೋಕ್ತೋ ಜೀವೋ ದೇವಃ ಸದಾಶಿವಃ |
ತ್ಯಜೀದಜ್ಞಾನನಿರ್ಮೂಲ್ಯಂ ಸೋಹಂಭಾವೇನ ಪೂಜಯೇತ್    ೧

ಯಜ್ಞ ಕರ್ತಾ ಚತುರ್ವೇದೋ ವೇದಕರ್ತಾ ಜಗತ್ಪತ್ತಿಃ
ಅಹಮೇವ ಜಗತ್ಕಾರ್ತಾ ಮಮ ಕರ್ತಾ ಮಹೇಶ್ವರಃ  ೨

ಪದನು :

ಪಾಪಿ ಕೇಳಲೆ ವ್ಯಾಸನೆ ನೀ ನಮ್ಮ  ಭೂಪತಿ ಶಿವನನು ಹಳಿದರೆ
ಗೋಪತಿಯ ಶಿವನೆ ಶ್ರೀಪಾದವನು ನಾ ಭಜಿಸಿ ಈಸು ಪುಣ್ಯಗಳ ಪಡೆದೆ ಪಲ್ಲ

ಸಾಸಿರ ಕಮಲದಲ್ಲಿ ನಾ ಮುನ್ನ ಈಶ್ವರನ ಶ್ರೀಚರಣಕೆ
ಸೂಸಿಹೋಗಲು ಪುಷ್ಪ ನನ್ನ ಶ್ರೀನಯನದಲಿ ಲೇಸುಕುಸುಮವ ಧರಿಸಿದೆ
ಏಸು ಯುಗಗಳ ಪೂಜೆಯ ಹೇಳುವರೆ ಶೇಷನಿಗಳವಲ್ಲವು
ದೂಷಕನಾಡುತಲಿ ದುರುಳುತನದಲಿ ಹಳಿದೆ ಕೇಶವನು ನಿನಗಿಲ್ಲವು      ೧

ಬೆಂಕಿ ಉರಿಗಣ್ಣ ಶಿವನ ನಾ ಮುನ್ನ ಬಿಂಕವಿಲ್ಲದೆ ಪೂಜಿಸಿ
ಶಂಕುಚಕ್ರವ ಪಡೆದು ಸರ್ವರಕ್ಕಸರನು ಶಂಕೆಯಿಲ್ಲದೆ ಗೆಲಿದೆನು
ಪಂಕಜನಾಭನನು ಪರಶಿವನ ಲೆಂಕನಾಗಿಯು ನಡೆದರೆ
ಶಂಕರನಾರಾಯಣನೆಂಬ ನಾಮವ ಕೊಟ್ಟರು ಕಂಕಿಮಾನವ ಕೇಳೆಲೊ   ೨

ಗೋವ ಕೇಳಲೊ ವ್ಯಾಸನೆ ನಾ ಮುನ್ನ ರಾವಳನ ಕಥನದಿಂದ
ಜೀವಹಿಂಸೆಗಳಿಂದ ಬ್ರಹ್ಮೇತಿಗಳು ಸುತ್ತೆ ದೇವ ಪೂಜೆಯ ಮಾಡಿದೆ
ನಾವು ಹೇಳಲು ಯಾತಕೆ ಎಲೆ ವ್ಯಾಸ ಭೂವಳಯ ಬಲ್ಲದಿನ್ನು
ತಾಯಿತಂದೆಯ ಎನ್ನ ಜೀವಕರ್ತನು ಶಿವನು ನಾಯಿ ಮನುಜರು ಬಲ್ಲರೇ                   ೩

ಅನ್ಯನಾಟಕ ನನ್ನದು ಎಲೆ ವ್ಯಾಸ ನನ್ನ ನಾಟಕ ತನ್ನದು
ಮುನ್ನ ಈರೇಳ್ಬುವನ ಜಗವ ನಾ ರಕ್ಷಿಸುವೆ ತನ್ನ ತಾ ರಕ್ಷಿಸುವನು
ನನ್ನ ಮಗ ಮನ್ಮಥನನು ಉರುಹಿದರೆ ಇನ್ನು ನಾ ರಕ್ಷಿಸಿದೆನೆ
ನಿನ್ನ ಪಾಡುಗಳೇನು ಎಲೆ ವೇದವ್ಯಾಸ ಮುನ್ನಿನ ಸ್ಥಲಕೆ ಹೋಗು ೪

ತ್ರಿಪುರದವರು ಕೆಟ್ಟರು ಎಲೆ ವ್ಯಾಸ ಅಪರಂಪರರು ಕೆಟ್ಟರು
ತಪಸು ಮಾಡಿ ಶಿವನೊಳು ಸೆಣಸಿ ಕೆಟ್ಟರು ಕಪಿಮಾನವ ನಿನ್ನ ಪಾಡೇನು
ಲಿಪಿಗಳನು ಮೀರಲಳವೆ ಶಿವ ಬರೆದ ವಿಪರೀತವ ನೋಡು ನೀನು
ಜಪಸ್ತೋತ್ರಗಳ ಮಾಡು ಶಿವನು ಶ್ರೀಪಾದವನು ಕೃಪೆ ಮಾಡಿ ರಕ್ಷಿಸುವನು                  ೫

ವ್ಯಾಸ ಕೇಳೆಲೊ ಮಾನವ ನೀ ಮೊದಲಿನ ಕಾಶಿಯ ಸ್ಥಲಕೆ ಹೋಗು
ಈಶ್ವರನ ಶಿವನ ಶ್ರೀಪಾದಗಳ ಭಜಿಸಿದರೆ ಸಾವಿರ ತೋಳ್ಗಳೀವಾ
ಕೇಶವ ನಾರಾಯಣ ಶ್ರೀಹರಿಯೆ ಲೇಸುಲೇಸೆಂದೆನುತಲಿ
ಸೂಸಲೀಯದೆ ಮನವನೊಬ್ಬುಳಿಯನು ಮಾಡಿ ಕಾಶಿಯ ಸ್ಥಲಕೆ ನಡೆದ  ೬

ಬಂದು ಮುನಿಗಳನು ಕಂಡು ಅಡಿಗೆರಗಿ ದ್ವಂದ್ವಪಾದಗಳ ಪಿಡಿದು
ಕಂದ ಮಾಡಿದ ತಪ್ಪ ಕಾಯಿ ಮುನಿಗಳೆಯೆಂದು ಮುಂದುರುಳಿದನು ವ್ಯಾಸನು
ಮಂದಮತಿ ಮಾಯಾಪಾಠ ತೊಡರಿದ ಸಂದೇಹಿ ಕರ್ಮಿ ನಾನು
ನಂದಿಕೇಶ್ವರ ಬಸವ ತೋಳ ಕಿತ್ತನು ಗೋವಿಂದನಾ ಕೈಲಾಗದು         ೭

ನರಹರಿ ಗಿರಿಹರಿಗಳ ಕೈಗಳಲಿ ಕರತೋಳ್ಗಳನೀವುದು ನಿಮ್ಮ
ಬೆರಳ ಉರುಗೊಳಗಿರುವ ಮಣ್ಣಿನಷ್ಟಾಗದು ಬರಿಯ ಹಮ್ಮಿಲಿ ಮೆರೆವರು
ಶರಿರ ಕಪಟನಾಟಕ ಎಂದೆನುತ ಬೆರೆತು ಬೆಪ್ಪನೆ ಕೆಟ್ಟೆನು
ಹರನೇ ತ್ರಾಹಿ ಪರಶಿವ ಮುನಿಗಳೆ ನಿಮ್ಮ ಚರಣದಡಿಗಳ ಲೆಂಕನು       ೮

ಕೇಳಿ ಮುನಿಗಳು ನಗುತಲಿ ಎಲೆ ವ್ಯಾಸ ಏಳೇಳು ಎಂದೆನುತಲಿ
ಬಾಳಲೋಚನ ಶಿವನ ಪಾದಗಳ ಕೊಂಡಾಡಿ ತೋಳ್ಗಳ ಕೊಡುವ ನಿನಗೆ
ಹೇಳಿದರೆ ನಡೆದು ಬಂದು ಶಿವನ ಗುಡಿಯ ಗಾಳೀಮಂಟಪದಿ ನಿಂದು
ಆಳಿದೊಡೆಯನೆ ರಕ್ಷಿಪನೆ ತ್ರಾಹಿ ತ್ರಾಹೆಂದು ಶಿವನೇಳ್ಗೆಯ ಕೊಂಡಾಡಿದ ೯

ವಚನ :

ತ್ರಾಹಿ ತ್ರಾಹಿ ವಿಶ್ವನಾಥ ಗುರುರಾಯ | ಸರ್ವ
ದ್ರೋಹಿ ನಾನು ಮುಂದರಿಯದೆ ಗುರುರಾಯ
ಸಾಹಸಗಳ ಹೊಗಳಿ ಕೆಟ್ಟೆ ಗುರುರಾಯ | ವಿಷ್ಣು
ಬಾಹಿರಂಗ ಬರಿದೆ ಹೋಯಿತು ಗುರುರಾಯ ೧

ಕಾಲನಳಿದ ಕಾಲನುರಿದ ಗುರುರಾಯ | ದೊಡ್ಡ
ಮೇಲಾದವರು ಮಡಿದರಿನ್ನು ಗುರುರಾಯ
ನೂಲೆಳೆಯ ನೊಣನೋಪಾದಿ ಗುರುರಾಯ | ಕಟಪ
ನೀಲಕಂಠ ರಕ್ಷಿಸಿನ್ನು ಗುರುರಾಯ   ೨

ತಪ್ಪನುಡಿದು ದಕ್ಷ ಕೆಟ್ಟ ಗುರುರಾಯ | ಬಹಳ
ಒಪ್ಪಿ ಮೆರೆವ ಹಿರಿಯರಳಿದರು ಗುರುರಾಯ
ತಪ್ಪು ತ್ರಾಹಿ ಸರ್ವದ್ರೋಹಿ ಗುರುರಾಯ | ಎನ್ನ
ಕಪ್ಪುಗೊರಳ ಶಿವನೆ ಸಲಹೊ ಗುರುರಾಯ   ೩

ಪುಂಡರೀಕಾಕ್ಷನ ಪೊಗಳೆ ಎಲೆ ದೇವ | ರಟ್ಟಿ
ತುಂಡು ಹರಿಯ ಹೊಯ್ಸಿಕೊಂಡೆ ಎಲೆ ದೇವ
ಮೊಂಡನೆಂದು ಜಗವು ಕೂಗಿತೆಲೆ ದೇವ | ಎನ್ನ
ಕೆಂಡಗಣ್ಣ ಶಿವನೆ ಸಲಹೊ ಎಲೆ ದೇವ        ೪

ಪವಾಡಗಳ ಮೆರೆಯಲೆಂದು ಎಲೆ ದೇವ | ಬಸವ
ಕಯ್ಯರಟ್ಟಿ ಹರಿಯ ಹೊಯ್ಸಿದನು ಎಲೆ ದೇವ
ಮೂವರರಿಯದ ಭವ ನೀನು ಎಲೆ ದೇವ | ಜಗದ
ಕೂವಡಗಳ ಮಾಣಿಸಯ್ಯ ಎಲೆ ದೇವ         ೫

ಕುಸುಮವೃಷ್ಟಿ ಸುರಿಯಿತಿನ್ನು ಗುರುಚಾರ್ಯ | ದೇವ
ಋಷಿಗಳೆಲ್ ಸ್ತುತಿಗೈದರು ಗುರುಚಾರ್ಯ
ಕಸಮಾನವನ ಮಾತೇನೆಂದು ಗುರುಚಾರ್ಯ | ದೇವ
ಋಷಿಗಳೆಲ್ಲ ಬಿನ್ನೈಸಿದರು ಗುರುಚಾರ್ಯ     ೬

ಹರಿಯ ಮಗನ ರಕ್ಷಿಸಿದಿರಿ ಗುರುಚಾರ್ಯ | ಬ್ರಹ್ಮ
ಗರುವಿಸಿದರೆ ಶಿಕ್ಷಿಸಿದಿರಿ ಗುರುಚಾರ್ಯ
ಶರಣಾಗತರ ರಕ್ಷಾಮಣಿಯೆ ಗುರುಚಾರ್ಯ | ನಿಮ್ಮ
ಬಿರಿದು ದೇವ ಸಾರುತಿವೆ ಕೋ ಗುರುಚಾರ್ಯ                   ೭

ಜಯತು ಜಯತು ವಿಶ್ವನಾಥ ಗುರುರಾಯ | ವಿಷ್ಣು
ನಯನ ಚರಣ ಪೂಜಿತನೆ ಗುರುರಾಯ
ಭಯವ ಬಿಡಿಸಿ ತೋಳ್ಗಳಿತ್ತು ಗುರುರಾಯ | ವಿಶ್ವ
ಮಯ ನಾಟಕನೆ ರಕ್ಷಿಸಿನ್ನು ಗುರುರಾಯ     ೮

ವ್ಯಾಸ ಶಿವನ ಸ್ತುತಿ ಮಾಡಿದರೆ ಗುರುರಾಯ | ನಮ್ಮ
ಕಾಶಿಯರಸು ಕರುಣಿಸಿದನು ಗುರುರಾಯ
ಮೀಸಲಾದ ಪರಮ ಹಸ್ತ ಗುರುರಾಯ | ವೇದ
ವ್ಯಾಸಗಿತ್ತು ರಕ್ಷಿಸಿದ ಗುರುರಾಯ   ೯

ನೋಡು ನೋಡು ಲೇಸಾಯ್ತಿನ್ನು ಗುರುಚಾರ್ಯ | ಚಂದ್ರ
ಮೂಡಿದಂತೆ ಪರಮ ಹಸ್ತ ಗುರುಚಾರ್ಯ
ರೂಢಿಸುತಲಿ ಶಿವನ ಹೊಗಳಿ ಗುರುಚಾರ್ಯ | ಅವಗೆ
ಓಡಿತಿನ್ನು ಭವದ ಮೃತ್ಯು ಗುರುಚಾರ್ಯ ೧೦

ಪುರದ ಕಾಶಿ ಪಟ್ಟಣವೆಲ್ಲ ಗುರುಚಾರ್ಯ | ತಮ್ಮ
ಶಿರವ ತೂಗಿ ಬೆರಗಾಗುತಲಿ ಗುರುಚಾರ್ಯ
ಸುರಿದರಿನ್ನು ಪೂಮಳೆಗಳ ಗುರುಚಾರ್ಯ | ವ್ಯಾಸ
ಪರಮಭಕ್ತನಾದನೆಂದು ಗುರುಚಾರ್ಯ       ೧೧

ಜಳಕಗಿಳಕ ಸಂಧ್ಯಾನಗಳು ಗುರುಚಾರ್ಯ | ತನ್ನ
ಕೊಳಕನೆಲ್ಲ ಜಾಡಿಸಿದನು ಗುರುಚಾರ್ಯ
ನಳಿನನಾಭ ಮುದ್ರೆಗಿದ್ರೆಗಳನ್ನು ಗುರುಚಾರ್ಯ | ದೊಡ್ಡ
ಹೊಳೆಯ ಕೂಡಿ ಬಿಟ್ಟನಲ್ಲಿ ಗುರುಚಾರ್ಯ    ೧೨

ಸಾಲಿಗ್ರಾಮ ದೇವಪೂಜೆ ಗುರುಚಾರ್ಯ | ಇದ್ದ
ವಾಲೆಕಂಠ ಪುಸ್ತಕಗಳ ಗುರುಚಾರ್ಯ
ಮೂಲನದಿಗಳೊಳಗೆ ಬಿಟ್ಟು ಗುರುಚಾರ್ಯ | ಶಿವನ
ಲೀಲೆಪದದೊಳಾಡುತಿದ್ದ ಗುರುಚಾರ್ಯ      ೧೩

ವಿಷ್ಣು ಸ್ತುತಿಯ ಪುಸ್ತಕಗಳ ಗುರುಚಾರ್ಯ | ಹರಿಯ
ಸೃಷ್ಟಿ ಸ್ತುತಿಗಳೆಂಬ ಶಾಸ್ತ್ರ ಗುರುಚಾರ್ಯ
ಸುಟ್ಟು ಬೂದಿಗಳನು ಮಾಡಿ ಗುರುಚಾರ್ಯ | ಶಿವನೆ
ನಿಷ್ಠೆಪದದೊಳಾಡುತಿರ್ದ ಗುರುಚಾರ್ಯ      ೧೪

ಮಡಿಯನುಟ್ಟು ಗಿಡುವ ಸುತ್ತಿ ಗುರುಚಾರ್ಯ | ಮೂಗು
ಪಿಡಿದು ಬೆರಳನೆಣಿಸುತಲಿ ಗುರುಚಾರ್ಯ
ಒಡಲು ವಿಷ್ಣುರುದ್ರಶಿಖಿಯು ಗುರುಚಾರ್ಯ | ಎಂಬ
ಜಡ ತಂತ್ರಗಳ ಜಾಡಿಸಿದನು ಗುರುಚಾರ್ಯ ೧೫

ಬೆರಳ ದಬ್ಬೆ ಕರಿಕೆಗಿರಿಕೆ ಗುರುಚಾರ್ಯ | ತಮ್ಮ
ಅರಳಿಮರದ ಬುಡಕೆ ಹಾಕಿ ಗುರುಚಾರ್ಯ
ಕುರುಳನೊಟ್ಟ ಅನಲ ಬಿಸುಟು ಗುರುಚಾರ್ಯ | ವ್ಯಾಸ
ಮರುಳನಗೆಯ ನಗುತಲಿರ್ದ ಗುರುಚಾರ್ಯ ೧೬

ಹೇಸಿ ಮತವನೆಲ್ಲ ಸುಟ್ಟು ಗುರುಚಾರ್ಯ | ವೇದ
ವ್ಯಾಸ ಶಿವನ ಪಾದದಲ್ಲಿ ಗುರುಚಾರ್ಯ
ಭಾಸೆಪಾಲಮುನಿಗಳೊಡನೆ ಗುರುಚಾರ್ಯ | ಆತ
ಈಶ ಪದದೊಳಾಡಿದಾನು ಗುರುಚಾರ್ಯ    ೧೭

ನಿಂದಿಸಿದರೆ ಕೆಟ್ಟು ಹೋಹರು ಗುರುಚಾರ್ಯ | ಮರಳಿ
ವಂದಿಸಿದರೆ ಮುಕ್ತರಹರು ಗುರುಚಾರ್ಯ
ದ್ವಂದ್ವಕರ್ಮಗಳನು ಕಳೆದು ಗುರುಚಾರ್ಯ | ತಿಳಿದು
ಮುಂದೆ ಪಾದವ ಗಳಿಸಿಕೊಳ್ಳಿ ಗುರುಚಾರ್ಯ          ೧೮

ಹಣೆಯ ಕಣ್ಣ ಶಿವನೆ ಕೇಳು ಗುರುಚಾರ್ಯ | ಪೂರ್ವ
ಎಣಿಕೆ ಶಾಸ್ತ್ರ ಪೇಳಿದರೆಲೆ ಗುರುಚಾರ್ಯ
ಮಣಿದು ಹಸ್ತಗಳನು ಮುಗಿದು ಗುರುಚಾರ್ಯ | ನಿಮ್ಮ
ಗಣಪತಿಯ ‌ಸ್ತುತಿ ಮಾಡಿದಾರು ಗುರುಚಾರ್ಯ        ೧೯

ಕೆಂಡಗಣ್ಣ ಶಿವನೆ ಕೇಳು ಗುರುಚಾರ್ಯ | ಅವನ
ಉಂಡ ಊಟ ವಸ್ತ್ರಗಳನು ಗುರುಚಾರ್ಯ
ಮಂಡೆಮನಿದು ಹಸ್ತಮುಗಿದು ಗುರುಚಾರ್ಯ | ಅವನ
ಕೊಂಡಾಡಿದರು ಕೆಲಬಲದಲ್ಲಿ ಗುರುಚಾರ್ಯ ೨೦

ಪದನು :

ಪಾರ್ವತಿಯ ವರಪುತ್ರನೆ ನೀ ನಮಗೆ ಪೂರ್ವದ ಕಥೆಯ ಪೇಳ್ದೆ
ಉರ್ವಿಯೊಳಾರು ನಿಮಗೆಣೆಯಿಲ್ಲ ಗಣನಾಥ ನಿರ್ವಾಣ ಪರಮಾತ್ಮನೆ    ಪಲ್ಲ

ಹುಗ್ಗಿಹೋಳಿಗೆ ತುಪ್ಪವು ಪರಿಪರಿಯ ವಗ್ಗರಣೆ ಕಾಯಿಪಲ್ಯೆ
ಅಗ್ಗತರದ ಹಲವು ಜೇನಸು ಪದಾರ್ಥಗಳ ನುಗ್ಗೆ ಬಾಳಕ ಸಂಡಿಗೆ
ಹಿಗ್ಗುತಲಿ ಸವಿಸವಿದು ಸುಖಿಸುವುದು ನುಗ್ಗು ಮಾನವರಿಗುಂಟೆ
ಭರ್ಗೋದೇವನ ಪಾದಪೂಜಿಸಿ ಗಣನಾಥ ಸುಗ್ಗಿ ತೆರವಿಲ್ಲ ನಿಮಗೆ                   ೧

ಹಣ್ಣು ಸಕ್ಕರೆ ಚಿನಿಪಾಲಿನ ಬಗೆಬಗೆಯ ಎಣ್ಣೆಹೂರಿಗೆ ಪಾಯಸ
ಬೆಣ್ಣೆ ಕಾಸಿದ ತುಪ್ಪ ಬೆಲೆಯಿಲ್ಲದಾಮ್ರಗಳ ದೊಣ್ಣೆಯ ಮಡಗಿಕೊಂಡು
ಉಣ್ಣುತಲಿ ಸವಿಸವಿದು ಸುರಿಸುತಲಿ ಮಣ್ಣು ಮಾನವರಿಗುಂಟೆ
ಕಣ್ಣು ಮೂರುಳ್ಳನ ಪೂಜಿಸಿದ ಗಣನಾಥ ಹುಣ್ಣಿವೆ ಅಮವಾಸಿ ನಿಮಗೆ     ೨

ತೋಪು ಶಕಲಾತಿ ಪಟ್ಟುಪಟ್ಟಾವಳಿಯ ಮೇಲೆ ಲೇಪಿಸಿದ ಕಸ್ತೂರಿಗಳು
ಪಾಪಧನರಿಗುಂಟೆ ನಿಮ್ಮ ಶ್ರೀಪಾದಗಳ ನೋಂಪಿ ನೋಂತರಿಗಲ್ಲದೆ
ದೀಪಧೂಪವು ಗಂಟೆ ಶಂಖಿಂದ ಶ್ರೀ ಪತಿಯ ಭಜಿಸಿ ಪಡೆದ
ತಾಪವಿಘ್ನಾದಿಗಳ ಕಳೆದಂಥ ಗಣನಾಥ ನೀ ಪಾಲಿಸುವದೆಮ್ಮನು         ೩

ಹಲವು ವ್ಯಾಪಾರ ಮಾಡಿ ಹಸುತೃಷೆಗೆ ತಲೆಯು ಪಾದಗಳು ಬಳಲಿ
ಹೊಲೆಯನಾಳಾಗಿ ದಾವತಿ ಮಾಡಿದರಿಲ್ಲ ತಲೆಯ ಹಣೆಯಲಿ ಬರೆಯದು
ಬಲುಕಾಲಗಳ ಬದುಕುವೆಯೆಂದೆನುತ ಕುಲಗಿರಿಗಳು ಕರಗಲು
ತಲೆ ನೆಲದೊಳಗುರುಳಿ ನಾಗಾರ್ಜನ ಕೆಟ್ಟ ಹೊಲೆಯ ಮಾನವನಿಗಳವೆ  ೪

ದೇವ ಸುರಗುರುವ ನಾನು ಬಳಲುತಲಿ ಧಾವತಿಗೊಳುತಲಿಹೆನು
ಆವ ಠಾವಿಗೆ ಹೋಗಿ ಜ್ಯೋತಿ ಶಾಸ್ತ್ರವ ಪೇಳೆ ಕಾವಿಧೋತ್ರವ ಕೊಡುವರು
ಗೋವಿನಮ್ಮತವನೀಯಲು ಹಿಡಿತುಂಬ ಶಾಂವಿ ಅಕ್ಕಿಯನು ತಂದು
ಹೂವಿನರಳುಗಳೆಂದು ನಾಲ್ಕು ಸುಮಗಳ ಮಾಡಿ ತಾವೆ ಸೆರಗಿಲಿ ಇಟ್ಟರು         ೫

ಮದುವೆ ಮುಂಜಿಗೆ ಹೋಗದೆ ಮನೆಯೊಳಗೆ ಕುದಿಕುದಿದು ಸಾಯುತಿಹರು
ಮುದಿಯ ಹಾರುವ ನಮಗೆ ಮೂಲವಾದನು ಎಂದು ಹೊದೆವ ಅರಿವೆಯ ಕೊಡುವರು
ಉದರಲಂಪಟವು ಸುಡಲಿ ಗಣನಾಥ ಹುದುಗಲೇತಕೆ ಬಡತನ
ಎದೆ ತಲೆಯ ಬಡಿದುಕೊಂಡರೆ ಮುಂದೆ ನಮಗಿಲ್ಲ ಚದುರ ನಿಮ್ಮನು ಭಜಿಸಿದೆ     ೬

ರಕ್ಕಸರ ಗುರುವು ಎಂದು ಪಾದದೊಳಗಿಕ್ಕಿ ಸಾಷ್ಟಾಂಗವೆರಗಿ
ಅಕ್ಕಟಕಟಾ ವಿಧಿಯ ಮೀರಬಾರದು ಎಂದು ಒಕ್ಕಣ್ಣ ನಾನಾದೆನು
ಲೆಕ್ಕವಿಲ್ಲದೆ ದೊರೆಗಳ ಗುರು ನಾನು ಕುಕ್ಕಿ ಹೊರಸನು ಕಾಣೆನು
ಒಕ್ಕಣಿಸಿ ಹೇಳಲೇತಕೆ ತಂದೆ ಗಣನಾಥ ರಕ್ಷಪಾಲಕನೆ ಜಯತು                    ೭

ವಚನ :

ಅಷ್ಟಭೋಗಿ ಶ್ರೀಗಣೇಶ ಗುರುರಾಯ | ಹಿಂದೆ
ನಷ್ಟವಾದುದೇಸು ಯುಗವು ಗುರುರಾಯ
ಎಷ್ಟು ಮಂದಿ ಅಳಿದರಿನ್ನು ಗುರುರಾಯ | ನಮಗೆ
ದೃಷ್ಟ ನಿತ್ಯಪದವ ತೋರು ಗುರುರಾಯ      ೧

ಗುರುಚಾರ್ಯರೆ ನೀವು ಕೇಳಿ ಎಲೆ ಮಂತ್ರಿ | ಹಿಂದೆ
ಪರಮಯುಗವು ಹೋದವೆಷ್ಟೋ ಎಲೆ ಮಂತ್ರಿ
ಒರೆದು ಪೇಳುವರಿಗಳವೆ ಎಲೆ ಮಂತ್ರಿ | ನಮ್ಮ
ಪರಮಗುರುವು ನಿತ್ಯನೊಬ್ಬನೆಲೆ ಮಂತ್ರಿ     ೨

ಮುತ್ತ್ಯ ಮೂರು ತೆರೆದ ಸುರಿದು ಎಲೆ ಮಂತ್ರಿ | ನಿಮ್ಮ
ಸತ್ತ ಅಜ್ಜ ಆರು ತೆರೆದ ಎಲೆ ಮಂತ್ರಿ
ಅತ್ತಲಿಂದ ಆದ ಹಿರಿಯರೆಲೆ ಮಂತ್ರಿ | ಎಲ್ಲ
ಸತ್ತು ಹೋದರುಳಿಯಲಿಲ್ಲ ಎಲೆ ಮಂತ್ರಿ      ೩

ಇಪ್ಪತ್ತೊಂದು ಯುಗದಿಂದತ್ತ ಎಲೆ ಮಂತ್ರಿ | ಓದಿ
ಮುಪ್ಪು ತಪ್ಪುಗಳನು ಕಳೆದು ಎಲೆ ಮಂತ್ರಿ
ಒಪ್ಪಿ ಮೆರೆದ ಹಿರಿಯರೆಲ್ಲ ಎಲೆ ಮಂತ್ರಿ | ಅಂದಿ
ಗಿಪ್ಪತ್ತೇಳುಕೋಟಿ ಸತ್ತರೆಲೆ ಮಂತ್ರಿ ೪

ಅಳಿವರಲ್ಲದೆ ಉಳಿವರಿಲ್ಲ ಎಲೆ ಮಂತ್ರಿ | ಅವರು
ತೊಳಲಿಬಳಲಿ ಭವದ ಕುರಿಗಳೆಲೆ ಮಂತ್ರಿ
ಪ್ರಳಯರಹಿತ ಶಿವ ತಾನೊಬ್ಬ ಎಲೆ ಮಂತ್ರಿ | ಮುಂದೆ
ತಿಳಿದು ನೋಡು ಸುಜ್ಞಾನದಲ್ಲಿ ಎಲೆ ಮಂತ್ರಿ  ೫

ವಾಕುವಾದಿ ಪಟಕರಿಗೆ ಎಲೆ ಮಂತ್ರಿ | ಶ್ರುತಿಯ
ಪಾಟಕರ್ಗೆ ಸಾಧ್ಯವಲ್ಲ ಎಲೆ ಮಂತ್ರಿ
ಕೋಟಿಬ್ರಹ್ಮ ವಿಷ್ಣ್ವಾದಿಗಳು ಎಲೆ ಮಂತ್ರಿ | ಶಶಿ
ಜೂಟ ಶಿವನ ಕಂಡುದಿಲ್ಲ ಎಲೆ ಮಂತ್ರಿ        ೭

ನಾ ದೊಡ್ವನು ತಾ ದೊಡ್ಡವನು ಎಲೆ ಮಂತ್ರಿ | ಎಂಬ
ವಾದಿ ಮನುಜರಳಿದರಿನ್ನು ಎಲೆ ಮಂತ್ರಿ
ಈ ದೇಹವು ಸ್ಥಿರವಲ್ಲ ಎಲೆ ಮಂತ್ರಿ | ಶಿವನ
ಪಾದಪೂಜೆ ಒಂದೇ ಸ್ಥಿರವು ಎಲೆ ಮಂತ್ರಿ     ೮

ಗುರು ಸುಕ್ರಚರ್ಯರೆ ನೀನು ಎಲೆ ಮಂತ್ರಿ | ಕೇಳು
ಪರಮ ಮಂತ್ರಗಾಯತ್ರಿಯನು ಎಲೆ ಮಂತ್ರಿ
ಹರನು ಭರ್ಗೋದೇವ ಸಹಿತ ಎಲೆ ಮಂತ್ರಿ | ಎಂದು
ಹರಿಬ್ರಹ್ಮರಿಗಸಾಧ್ಯ ಶಿವನು ಎಲೆ ಮಂತ್ರಿ     ೯

ದೃಢವ ತಿಳಿದು ಮನದೊಳಿದನ್ನು ಎಲೆ ಮಂತ್ರಿ | ಶಿವನ
ಅಡಿಯ ಪೂಜೆ ಮಾಡುವರು ಎಲೆ ಮಂತ್ರಿ
ಮೃಡನ ಮಂತ್ರ ಜಪಸ್ತೋತ್ರಗಳ ಎಲೆ ಮಂತ್ರಿ | ಶಿವನ
ಎಡಬಲದಲ್ಲಿ ವಾಲೈಸುವರು ಎಲೆ ಮಂತ್ರಿ    ೧೦

ನಾನಾ ವೇದಾಶಾಸ್ತ್ರಗಳೆಲ್ಲ ಎಲೆ ಮಂತ್ರಿ | ಅನ್ನ
ದಾನಿ ಶಿವನು ದೈವವೆಂದು ಎಲೆ ಮಂತ್ರಿ
ಓಂ ನಮಃ ಶಿವಾಯ ಎನುತ ಎಲೆ ಮಂತ್ರಿ | ಬ್ರಹ್ಮ
ಸ್ಥಾನದಲ್ಲಿ ಧ್ಯಾನಿಸುವದು ಎಲೆ ಮಂತ್ರಿ       ೧೧

ಕಂದುಗೊರಳ ಶಿವನೆ ಕೇಳು ಎಲೆ ದೇವ | ಹೀಂ
ಗೆಂದು ಪೌರಾಣಗಳು ಪೇಳೆ ಎಲೆ ದೇವ
ಮಂದಿಮಂತ್ರಿ ಸಕಲರೆಲ್ಲ ಎಲೆ ದೇವ | ಅವಗೆ
ವಂದಿಸುತ್ತ ಕರವ ಮುಗಿದರೆಲೆ ದೇವ         ೧೨

ಆದಿ ಪುಸ್ತಕಗಳ ತೆಗೆದು ಎಲೆ ದೇವ | ಮತ್ತೆ
ಓದಿ ಅರ್ಥಗಳನು ಮಾಡಿ ಎಲೆ ದೇವ
ಭೇದಿಸುತ್ತ ತಿಳಿದರಾಗ ಎಲೆ ದೇವ | ಶಿವನ
ಸೋದಿಸಿದ ಚಿನ್ನವೆಂದು ಎಲೆ ದೇವ ೧೩

ಇಂತಿ ಪೌರಾಣಗಳ ಕೇಳಿ ಗುರುರಾಯ | ಅವಗೆ
ಮುಂತೆ ವೀಳ್ಯ ವಿಭೂತಿಯನು ಗುರುರಾಯ
ಸಂತವಿಟ್ಟು ಸಕಲರೆಲ್ಲ  ಗುರುರಾಯ | ಕೂಡಿ
ಮಂತ್ರಿಗಣಪ ನೆಗೆದನಾಗ ಗುರುರಾಯ       ೧೪

ಇಲಿಯ ವಾಹನಗಳನೇರಿ ಗುರುರಾಯ | ತಮ್ಮ
ಬಲವ ಕೂಡಿಬೇಗ ಬರಲು ಗುರುರಾಯ
ಉಲಿದು ಪೊಗಳುವವರಿಲ್ಲ ಗುರುರಾಯ | ತಮ್ಮ
ತಲೆಯ ತಗ್ಗಿ ಬರುತಲಿರ್ದ ಗುರುರಾಯ      ೧೫

ಸಿಟ್ಟುಕೋಪಗಳನು ಬಿಟ್ಟು ಎಲೆ ದೇವ | ತಮ್ಮ
ಹೊಟ್ಟೆಯವನ ಕೂಡಿಕೊಂಡು ಎಲೆ ದೇವ
ಪಟ್ಟಣಬೀದಿಯ ಒಳಗೆ ಬರಲು ಎಲೆ ದೇವ | ಕಂಡು
ಕಟ್ಟೆಯವರು ಸಡ್ಡಮಾಡರೆಲೆ ದೇವ ೧೬

ಆರು ಅರಿಯದವನೆ ಗಣಪ ಗುರುರಾಯ | ಎಂದು
ಊರುಕೇರಿ ನೋಡರವನ ಗುರುರಾಯ
ದಾರಿ ಬಾಜಾರಗಳ ಬಿಟ್ಟು ಗುರುರಾಯ | ಬ್ರಹ್ಮ
ಕೇರಿಯೊಳಗೆ ನಡೆದನಾಗ ಗುರುರಾಯ      ೧೭

ಸಾಗಿಸುವರೊಬ್ಬರಿಲ್ಲ ಗುರುರಾಯ | ಮತ್ತೆ
ಬೇಗ ಬಂದು ಮನೆಯ ಹೊಕ್ಕು ಗುರುರಾಯ
ಆಗ ತನ್ನ ಗೆಳೆಯರೆಲ್ಲ ಗುರುರಾಯ | ಮನೆಗೆ
ಗೂಗೆ ಬಂದು ಸೇರಿದಂತೆ ಗುರುರಾಯ       ೧೮

ಎಳ್ಳ ಚಿಗುಳಿ ತಂಬಿಟ್ಟುಗಳು ಗುರುರಾಯ | ಮತ್ತೆ
ಒಳ್ಳೆ ಕಬ್ಬು ಕಡಲೆ ಬೆಲ್ಲ ಗುರುರಾಯ
ತಳ್ಳಿ ಬಳ್ಳಿ ಹುಳ್ಳಿ ಶಾಸ್ತ್ರ ಗುರುರಾಯ | ಹೇಳಿ
ಡೊಳ್ಳು ತುಂಬಿ ಸುಖದೊಳಿರುವ ಗುರುರಾಯ                   ೧೯

ಗಿರಿಜೆ ಮಗನ ಅರ್ತಿಯಿಂತು ಗುರುರಾಯ | ನನ್ನ
ತರುಳಪುತ್ರನರ್ತಿ ಕೇಳು ಗುರುರಾಯ
ಪರವಾದಿಗಳಿಗೆದದಲ್ಲಣ ಗುರುರಾಯ | ಗಣಪ
ನರ್ತಿ ಕಥೆಗೆ ಶರಣು ಶರಣು ಗುರುರಾಯ    ೨೦

ಲೋಕರತ್ನ ನವಮಣಿಯೆ ನೀಲಮ್ಮ | ಜಗವ
ಸಾಕೊ ಬಸವನೊಳಗೆ ಪೇಳಿ ನೀಲಮ್ಮ
ಬೇಕು ಪಂಚಾಮೃತಗಳೆಂದು ನೀಲಮ್ಮ | ಮೂರು
ನಾಕು ಸಂಧಿ ಮುಗಿಸಿದಾಳು ನೀಲಮ್ಮ       ೨೨

ಸಂಧಿ ೭ ಕ್ಕಂ ಶ್ಲೋಕ, ವಚನ ೬೯, ಪದನು ೫೩ ಉಭಯಕ್ಕಂ ೭೦೩ ಕ್ಕಂ ಮಂಗಳಮಹಾ ಶ್ರೀ ಶ್ರೀ