ಕಂದ :

ಮುಂದಣ ಕಥಾಮೃತದಿಂದ ಇಂದುಧರ ಪರಶಿವನು
ಮಂದಮತಿ ದಕ್ಷಣನ ಕೊಲ್ವೆನೆನಲು
ಕಂದ ಶರಭಾವತಾರ ಹೊಯ್ದು ದಕ್ಷನ ಶಿರವ
ಚಂಡಾಡಿ ತರಿದ ಚಲುವ ಕಥೆಯನು ೧

ಪದನು :

ಕಮಲ ಶತಕೋಟಿ ತೇಜ ಗುರುರಾಯ ತಿಮಿರಕುಲ ಮಾರ್ತಮಡನೆ
ವಿಮಲಮತಿಗಳ ಕೊಟ್ಟು ರಕ್ಷಿಪ ಕೇಳಿನ್ನು ಸಮಯ ದಕ್ಷನ ಕಥೆಯನು || ಪಲ್ಲ ||

ದೇವ ಗಿರಿಜಾ ಪಾರ್ವತಿ ದಕ್ಷನಿಗೆ ಮೋಹದನ ಮಗಳೆನಿಸಿದರೆ
ಭಾವಜ ಹರನು ತನ್ನಳಿಯನೆಂದೆನುತಲಿ ಜೀವಗರ್ವಿಸಿ ಮನದೊಳು
ದೇವ ತನ್ನಳಿಯನೆಂದುಪೇಕ್ಷದಿಂ ಭಾವಪಲ್ಲಟವಾಗಿರೆ
ಮಾವ ಅಳಿಯಗೆ ಬಿದ್ದ ಜಗಳ ಕಥನವ ಕೇಳಿ ದೇವಗಣ ಭಕ್ತ ಜನರು      ೧

ಮಂದಮತಿಗಳಲಿ ದಕ್ಷನೀ ಜಗಕೆ ಕರ್ತನಾಗುವೆನುನತಲಿ
ಚಿತ್ತದೊಳು ಶಿವನ ಗರ್ವಿಕೆಯ ಮುರಿಸುವೆನೆನುತ ಸುತ್ತಿಕೊಂಡನು ದೋಷವ      ೨

ಉತ್ತಮ ಕುಲದೊಳಗೆ ತಾ ತಿಂಬ ತೊತ್ತಿನೆಂಜಲಗಲಸಿದ
ಕತ್ತರಿಸಬೇಕು ಶಿರಗಳನೆಂಬುವ ದಕ್ಷಣನ ಕ್ರತುವಿನ ಕಥೆಯ ಕೇಳಿ        ೨

ನಿನ್ನ ಕರುಣಾಮೃತದಲಿ ನೀಲಮ್ಮ ತನ್ನ ಪುರುಷಗೆ ಹೇಳುತ
ಮಾನ್ಯ ಮಾರ್ತಾಂಡ ದೂಷಕರೆದೆದಲ್ಲಣಗೆ ವರ್ಣಿವರ್ಣಿಸಿ ಹೇಳುತ
ಎನ್ನ ಮನಃಪ್ರಿಯ ಕೇಳು ಬಸವಯ್ಯ ಹೊನ್ನಪುತ್ಥಳಿ ಗಂಗೆಯಾ
ಚೆನ್ನಶರಭವತಾರನ ಕಥೆಯ ಕಾಳಗವ ತನ್ನ ಕರ್ತಗೆ ಪೇಳ್ದಳು  ೩

ಚಕ್ಷು ಮೂರುಳ್ಳ ಶಿವನೆ ಕೇಳಿನ್ನು ದಕ್ಷಬ್ರಹ್ಮನ ಕಥೆಯನು
ಲಕ್ಷ ಬ್ರಹ್ಮರನೆಲ್ಲ ನಗೆಗೆಡೆಮಾಡಿದನು ಪಕ್ಷ ಶರಭವತಾರನು
ಯಕ್ಷರಾಕ್ಷಸರು ಕೂಡಿ ಯಜ್ಞಗಳ ಆ ಕ್ಷಣದಿ ನಿರ್ಮಿಸುತಲಿ
ಪಕ್ಷ ಬಂಧುಬಳಗ ನೆಂಟರಿಷ್ಟರ ಕೂಡಿ ಭಿಕ್ಷುಕನ ನಿನ್ನ ಮಾಡಿ    ೪

ಅಷ್ಟದಿಕ್ಕರನೆ ಕರೆಸಿ ದಕ್ಷಣನು ಯಕ್ಷಯಜ್ಞಗಳನೆ ಇಕ್ಕಿ
ಸುಟ್ಟು ಕಳೆವೆನು ಶಿವನ ವಂಶಾಧಿಗಳನೆಂದು ಶ್ರೇಷ್ಠತನದಲಿ ಗರ್ವಿಸಿ
ವಿಷ್ಣುವನು ಕರೆಸಿಕೊಂಡು ಮನೆಯೊಳಗೆ ಗೋಷ್ಠಿ ಮಾತುಗಳಾಡುತ
ಸೃಷ್ಟಿಪಾಲಕ ಶ್ರೀಹರಿ ನಿಮಗಲ್ಲದೆ ಪುಟ್ಟ ಶಿವನಗೆ ಸಲ್ಲದು        ೫

ವಾಲಗಕೆ ನಾಹೋದರೆ ಅವ ನನ್ನ ಕಾಲಕಸವನೆ ಮಾಡಿದ
ಆಲಿಗಳ ತೆಗೆದು ಈಕ್ಷಿಸಿ ನೋಡಿದರೆ ನಾ ಮೂಲೆಯಲಿ ಕುಳಿತುಕೊಂಡೆ
ನೂಲೆಳೆಯ ಹುಲುಮನುಜರು ಬರಲೆದ್ದು ವಾಲಗದಿ ಕುಳ್ಳಿರಿಸುವಾ
ಮೇಲಾದ ಹಿರಿಯತನಗಳ ಮಾತನಾಡಿದರೆ ನಾಲಿಗೆಯು ಬೀಳುತಿಹುದೆ  ೬

ಎಂಟು ದಿಕ್ಕಿನ ಬಳಗದಿ ಅವನೆನ್ನ ಒಂಟಿ ಮಿತ್ತನೆ ಮಾಡಿದ
ಮಂಟಪದಿ ಬಂದು ಕುಳ್ಳೀರು ಮಾವನೆಂದರೆ ಗಂಟಲವುನ ಬೀಳುತಿಹುದೆ
ನೆಂಟರ ಮಗನೆನುತಲಿ ನಾ ನೋಡಿ ನಂಟು ಮಾಡಿದೆ ಮಗಳನು
ಒಂಟಿಯಂತೆ ಮೋರೆ ಮೇಲಕೆತ್ತಿದನವನ ನಂಟುತನ ಹಾಳಾಗಲಿ        ೭

ಮಗಳ ಕೊಡದಾ ಮುನ್ನವೆ ಮನೆಯೊಳಗೆ ಅಗುಳಿಗುಪ್ಪುಗಳಿಲ್ಲವು
ಹಗಲಿರುಳು ದಾರಿದ್ರ್ಯ ಎಡೆಗೊಂಡು ಅವಗಿನ್ನು ಬೊಗಸೆ ಅಂಬಲಿಗಾಣದೆ
ನಗೆಗೇಡುಗಳ ನೋಡದೆ ನಾ ನನ್ನ ಮುಗುಳುನಗೆ ಮುದ್ದು ಮಗಳ
ಅಗಜೆ ಗೌರಮ್ಮ ಕೊಟ್ಟ ಮೂರ್ತಗಳಿಂದವಗೆ ಮಿಗಿಲು ಪದವಾಯಿತು    ೮

ನನ್ನ ಮಗಳಿಂದಲವಗೆ ಶ್ರೀಹರಿಯೆ ಹೊನ್ನಬೆಟ್ಟಗಳಾದವು
ತನ್ನ ದಾರಿದ್ರ್ಯಗಳು ಹಿಂಗುತಲಿ ಸರ್ವರಿಗೆ ಮುನ್ನ ಸಿರಿಧನಿಯಾದನು
ಅತ್ತೆಮಾವಗಳಿಂದಲಿ ಭಾಗ್ಯಸಂಪನ್ನ ನಾನಾದೆನೆನುತ
ತನ್ನ ಕಂಗಳ ತೆಗೆದು ನೋಡಲಿಲ್ಲವು ಅವನ ಹೊನ್ನಸಿರಿ ಹಾಳಾಗಲಿ      ೯

ಅಳಿಯ ದೊರೆತನ ಮಾಡಲು ಒಂದಿವಸ ಸಭೆಗೆ ನಾ ಹೋಗಿ ನಿಲಲು
ಘುಳುಘುಳಿಪ ವಾಲಗದಿ ಠಾವಿಲ್ಲದಿರುತಿರಲು ಕೆಳಗೆ ಕುಳಿತರೆ ಕರೆಯನು
ಹುಳ ನೊಣನ ನೋಡುವಂತೆ ಅವ ನನ್ನ ಬಳೆದ ಕಸವನೆ ಮಾಡಿದ
ತಿಳಿಯದೆ ನಾ ಮಗಳ ಕೊಟ್ಟೆವಕಟಕಟಾ ಅಳಿಯತನ ಹಾಳಾಗಲಿ        ೧೦

ಕುಲದಲೊಳ್ಳೆವನೆನುತಲಿ ನಾ ನನ್ನ ಮಗಳ ಪಾರ್ವತಿಯ ಕೊಟ್ಟೆ
ಹಲವು ದೇಶದಿ ತಿರುಗಿ ಹರಿಹರಿದು ತಿಂಬುತಲಿ ಹೊಲೆಯ ಮಾದಿಗರ ಕಲಸಿದ
ಎಲುತೊಗಲು ನರಮಾಂಸವ ತಿಂಬುತಲಿ ಮಲಗಿ ಕಾಡೊಳಗಿರುವನು
ಬಲು ಕಳ್ಳಚೋರ ಗಾರುಡಿಗರೊಳು ಗಾರುಡಿಗನೆಲೆಯ ಕಾಣಲಿ ಬಾರದು ೧೧

ಹಿರಿಯ ಮಗನನು ಸವರಿದ ಶ್ರೀಹರಿಯೇ ಕಿರಿಯ ಮಗನನುರುಹಿದ
ಸುರರು ದೇವಾದಿದೇವರ್ಕಳಿಗೆ ತನ್ನ ಚರಣರಕ್ಷೆಯ ಹೊರಿಸಿದ
ತಿರುಕ ಹೊಲೆಯನ ಮಗಣಿಗೆ ಅಕಟಕಟಾ ದೊರೆತನಗಳಿಷ್ಟೇತಕೆ
ಇರಿದು ಕೊಲ್ಲಲಿಬೇಕು ಹರನು ಬಯಲಾದರೆ ಸ್ಥಿರಪಟ್ಟು ನಿನಗಹುದು      ೧೨

ಇಮ್ಮಡಿಯ ಗರ್ವದಪನು ನರಹರಿಯೆ ನಂಬಬಾರದು ಕರ್ಮಿಯ
ನಮ್ಮ ಬಂಧುಬಳಗ ನೆಂಟರಿಷ್ಟರ ಕೊಂದ ಹೆಮ್ಮೆಕಾರನು ಗರ್ವಿಯು
ಸುಮ್ಮನಿರಬಾರದು ಕರ್ಮಿಯನು ಚಿಮ್ಮಿಹಾಕಿಸಲುಬೇಕು
ಎಮ್ಮಿಕೋಣಗಳಂತೆ ಮೈಮರೆದಿದ್ದರೆ ನಮ್ಮ ತಲೆಗವ ತರುವನು                   ೧೩

ನರಹರಿಯೆ ಕೇಳು ನೀನು ಶಿವಗಿರಿಗೆ ಸುರಿಯಬೇಕಗ್ನಿಮಳೆಯ
ಹರನ ವಂಶಾದಿಗಳ ಸುಟ್ಟು ಬೂದಿಯ ಮಾಡಿ ಪರಿಹರಿಸಿ ಕಳೆಯಬೇಕು
ಪರಿಹರಿಸದಿದ್ದರಿನ್ನು ಅವ ನಮ್ಮ ಹಿರಿಯತನಗಳ ಬಲ್ಲನೆ
ಕುರಿಯ ತಲೆಗಳ ಮಾಡಿ ಕಡಿಕಡಿದು ಶಿರಗಳನು ಉರುಳಿಸುವ ಪಾದೆಡೆಗೆ         ೧೪

ಅಗ್ನಿಯುರಿ ಹಸ್ತದವನ ಕೈಯಿಂದ ಭಗ್ನವಾಗುತೆ ಹೋಗುತ
ಪ್ರಾಜ್ಞ ಶ್ರೀಹರಿಯಿಂದ ಪ್ರಾಣ ಉಳಿಯಿತು ಎಂಬ ಸುಜ್ಞಾನವನರಿಯನು
ಲಗ್ನ ಮೂರ್ತಗಳಿಂದಲಿ ನಲಿನಲಿದು ಯಜ್ಞಗಳ ಮಾಳ್ಪೆವೆನುತ
ಅಜ್ಞಾನ ತಾಮಸಗಳಾವರಿಸಿ ದಕ್ಷಣನು ಯಜ್ಞಕೊಂಡವ ರಚಿಸಿದ                   ೧೫

ಕಾಳರಕ್ಕಸರು ಎದ್ದು ದಕ್ಷಣಗೆ ಹೇಳಿದರು ನಿಜವಾಕ್ಯವ
ಕೂಳಮಾರಿಯ ನೋಡಬೇಕೆನುತಲಿ ದಾಳಿಡುವ ಕೈಲಾಸಕೆ
ಏಳೇಳು ದಕ್ಷಬ್ರಹ್ಮ ಯಜ್ಞಕೆ ಖೂಳ ತೂಳರು ಒದಗಿತು
ಏಳುನೂರು ಗಾವುದಡ್ಡಗಲ ಕೊಂಡಗಳ ಹೇಳಲಿನ್ನಾರಿಗಳವು    ೧೬

ನಿಟ್ಟು ಲಕ್ಕಸಗಾವುದ ನಿರ್ಮಿಸುತ ಸೃಷ್ಟಿಸಿದರಾಕ್ಷಣದಲಿ
ಬೆಟ್ಟ ತರುಗಿರಿಗಳನು ಕಡಿಕಡಿದು ಹೋಮಗಳನಟ್ಟಿದನು ಕೈಲಾಸಕೆ
ಎಷ್ಟು ಪಂಚಾಮೃತಗಳ ಯಜ್ಞದಲಿ ಇಟ್ಟರಗಣಿತ ಕೊಡಗಳ
ಸುಟ್ಟು ಉರಿ ಭುಗಿಲಿಡಲು ಕೈಲಾಸ ಕಂದಿದರೆ ವಿಷ್ಣು ತಾ ಬೆರಗಾದನು   ೧೭

ಯೋಗಪರ್ವತಗಳಲ್ಲಿ ಆ ಕ್ಷಣದಿ ಬೇಗೆವುರಿ ಆರ್ಭಟಿಸಲು
ಮೂಗಿನುಸುರನೆ ನೋಡಿ ವಿಷ್ಣು ಬೆರಗಾಗುತಲಿ ಹೇಗಾದಿತೋ ಎನುತಲಿ
ನಾಗಭೂಷಣನಾಟಕ ನಮಗಿನ್ನು ಈಗ ತಿಳಿಯದು ಎನುತಲಿ
ಆಗಲಾಗಲಿ ಭಲರೆ ದಕ್ಷ ಎಂದೆನುತ ಬಲಭಾಗದಲಿ ಒಡಗೂಡಿದ ೧೮

ಅಂಜಬೇಡೆಲೆ ದಕ್ಷನೆ ಶಿವಗಿರಿಗೆ ಮಜಿನ ಮಳೆ ಕರೆಯಿತು
ಕಂಜಬಾಣನ ಕೊಂದ ಕೊಲೆಯೆಂದು ತಿರುಗಿತು ಅಂಜಿಕೆಯ ಮಾತೇತಕೆ
ನಂಜುಗೊರಳ ನಗುತಲಿ ನಯನದಲಿ ಅಂಜನದ ಬೆಂಕ್ಯಡರಲು
ಪಂಜು ಕಟ್ಟಿದ ತ್ರಿಪುರವು ಉರಿದಂತೆ ಧನಂಜಯಂಬಕನುರಿದ  ೧೯

ತಕನಪರ್ವತಗಳಲಿ ಸುರುಗುರುವು ಶಕುನಶಾಸ್ತ್ರಗಳ ನೋಡಿ
ಮಕರಧ್ವಜನೆ ಪಿತನೆ ಮಾತನಾಲಿಸಿ ಕೇಳು ಸುಖಕರವು ನಮಗಾಹದು
ಸಕಲ ವಡಬಾಗ್ನಿ ಅಡರಿ ಈಶ್ವರಗೆ ಲಿಖಿತದಿನಗಳು ತುಂಬಿರಲು
ಅಖಿಲ ಬೂದಿಯಾಗಿ ಸುಟ್ಟು ಬಯಲಹನೆಂದು ಶಕುನ ಸಾರುತಿವೆ ಕೋ   ೨೦

ಸುರುಗುರುವಿನ ಶಕುನವ ಲಾಲಿಸುತ ಅರರೆ ಭಲಭಲರೆನುತಲಿ
ಹರನ ಹಣೆಯಬರಹ ಹರಿಯಿತಿಲ್ಲಿಗೆ ಎಂದು ಹರಿಹರಿದು ಕುಣಿದಾಡುತ
ಮುರವೈರಿಯೊಡಗೂಡುತಾ ದಕ್ಷಣನು ಕರಸಲಗಣಿತ ವಿಪ್ರರ
ಇರದೆ ಬಂದರು ಒಂದು ಕೋಟ್ಯಾನುಕೋಟಿಗಳು ಮರಣದ ಕುರಿಗಳಂತೆ ೨೧

ಕಣಜದ ಹೊನ್ನ ತೆಗೆಸಿ ದಕ್ಷಣನು ಹಣದಾನಗಳ ಮಾಡಲು
ಎಣಿಕೆ ಇಲ್ಲದೆ ವಿಪ್ರಜಾತಿಗಳು ನೆರೆದರು ಕುಣಿಕುಣಿದು ನಲಿದಾಡುತ
ಕಣುಕ ಸಕ್ಕರೆ ತುಪ್ಪವು ನಮಗಿನ್ನು ಎಣಿಕೆ ಮೆದೆಮೆದೆ ಹೂರಿಗೆ
ದಣಿದಣಿಯಲುಂಡು ಸುಖಿಸುವೆವೆಂದು ಯಜ್ಞದಲಿಕುಳಿತುಕೊಂಡರು ಬೀಗದಿ       ೨೨

ಗಾರಿಗೆ ಮಂಡಿಗೆಗಳು ಪರಿಪರಿಯ ಹೂರಣದ ಕಡುಬಿನಿಂದ
ಸಾರಾಯ ಹಲವು ಜೀನಸಿನ ಪಾಯಿಸಗಳು ಕಾರಾನ ಪಳಿದೆಗಳನು
ಮೀರಿ ಉಣಿಸುವೆನೆನುತಲಿ ದಕ್ಷಣನು ಹಾಗೈಸಿ ಬರುತಲಿರಲು
ಹಾರುವರ ಕುಲಕೆ ಕಡೆಮೊದಲಿಲ್ಲ ಪರಶಿವನೆ ಸೇರಿ ಕುಳಿತರು ಯಜ್ಞದಿ   ೨೩

ಉಟ್ಟ ತಂಗಲ ಧೋತ್ರದಿ ನಗುನಗುತ ಜುಟ್ಟುಗಳ ನೇವರಿಸುತ
ಹೊಟ್ಟೆಯೆದೆಗಳ ಮೇಲೆ ಮಟ್ಟಿಗಳ ಬಡಿಬಡಿದು ಘಟ್ಟಬೆಟ್ಟಗಳಂದದಿ
ಕೆಟ್ಟ ಮಂತ್ರಗಳ ಜಪಿಸಿ ಜರಿಜರಿದು ಮುಟ್ಟಿ ಧಾವತಿಗೊಳುತಲಿ
ಸುಟ್ಟುಹೋಗಲಿ ಶಿವನು ಬಟ್ಟಬಯಲಾಗಲಿ ಎಂದು ದಿಟ್ಟಿಸಿದರಾಕಾಶವ   ೨೪

ಮಿಂಡಿ ಹೆಣ್ಣುಗಳು ಎಲ್ಲಾ ಆರತಿಯ ತಂಡತಂಡದಲೆತ್ತುವ
ಕೊಂಡಮ್ಮ ವೆಂಕಟಾದ್ರಿಯ ಮಗಳು ನರಸಮ್ಮ ದುಂಡುದೋಳಿನ ರುಕುಮಿಣಿ
ಕೆಂಡಬೆಂಕಿಗಳ ನೀವು ಕೈಲಾಸವನು ಕೊಂಡು ಬೂದಿಗಳ ಮಾಡಿ
ರಂಡೆಯಾಗಲಿ ನಿಮ್ಮ ಗಿರಿಜೆ ಪಾರ್ವತಿಯೆಂದು ಬಂಡುಬಂಡಿಲಿ ಶಾಪಿಸಿ           ೨೫

ಸೋನಮ್ಮ ವೆಂಕಮ್ಮನು ಗಿರಿಯಮ್ಮ ಬಾಗಮ್ಮ ಕಮಳಮ್ಮನು
ಸೀನವಾಸನ ಮಗಳು ಶ್ರೀ ನೀಲಕೃಷ್ಣಮ್ಮ ತಾನು ಕುಂಭವ ತೊಡೆವುತ
ಮೀನಾಂಕಿ ನಾಗಮ್ಮನು ಭಾನಮ್ಮ ಜ್ಞಾನಿಗಳ ಲಚುಮಕ್ಕನು
ಹಾನಿಯಾಗಲಿ ಗಿರಿಜೆ ಪಾರ್ವತಿಯ ಸಂಸಾರ ತಾನು ಶಿವ ಬಯಲಾಗಲಿ ೨೬

ಎಂದ ಮಾತುಗಳ ಕೇಳಿ ಪಾರ್ವತಿಯು ಮಂದಿರಗಳ ಪೊರಡುತ
ಇಂದುಮುಖಿಯರೆ ನಮ್ಮ ಶಾಪಿಸಿದ ಶಾಪ ನಿಮ್ಮ ಸಂದುಸಂದಿಗೆ ತಾಕಲಿ
ತಂದೆ ಕೇಳೆಲೊ ದಕ್ಷಣ ನನ ಗಂಡ ಬೆಂದುಹೋಗುವ ಪುರುಷನೆ
ಮಂದಮತಿ ಕವಿದು ಮಾಯದ ದಾಳಿ ಮಾಡಿದರೆ ಬಂದೀತು ಪ್ರಳಯ ನಿಮಗೆ     ೨೭

ಎಲೆ ತಂದೆ ದಕ್ಷಬ್ರಹ್ಮ ಕೇಳಿನ್ನು ಕಲಹ ಸಲ್ಲದು ಶಿವನೊಳು
ಹೊಲೆಯ ಮಾದಿಗರಾರು ಬೋದಿಸಿದರೊ ನಿನಗೆ ತಲೆಗೆ ತಾಟದೆ ಬಿಡುವರೆ
ಲಲನೆ ಮಾತುಗಳ ಕೇಳಿ ದಕ್ಷಣನು ಬಲು ಕೋಪದಲಿ ಗರ್ಜಿಸಿ
ಹೊಲೆಗಲಿತ ಮೂಳಿ ನಿನ್ನ ಕರೆದವರಾರು ಸಲುಗೆ ಸಲ್ಲದು ಎಮ್ಮೊಳು     ೨೮

ಮಾವ ಹಿರಿಯನು ಎನ್ನದೆ ನಿನ ಗಂಡ ಗೋವಮನುಜರ ಮಾಡಿದ
ಜೀವಹಿಂಸಕನವನ ಸಾಯಗೊಲ್ಲದೆ ಬಿಡೆವು ಗಾವುದಿಯ ಕೈಗೈವುದೆ
ದೇವ ನಿಂದೆಗಳ ಕೇಳಿ ಗೌರಮ್ಮ ನಾವು ಇರಬಾರದೆನುತ
ಪಾವಕನ ಕೊಂಡದೊಳು ಮುಳುಗಿ ಮಾಜಲು ಬೇಗ ಹಾವಳಿಯು ಘನವಾಯಿತು  ೨೯

ಹೇಳಿದರೆ ಕೇಳುವವನೇ ದಕ್ಷಣನ ಬಾಳಲಿಖಿತವು ತೊಡೆಯಿತು
ದಾಳಿ ಕಥನಗಳಿನ್ನು ಬಹವೆಂದು ಗೌರಮ್ಮ ಹೇಳಿ ಮುಳುಗುತ ಯಜ್ಞದಿ
ಕಾಳಿ ಮಹಾಂಕಾಳಿಯಾಗಿ ಗೌರಮ್ಮ ಗಾಳಿಧೂಳಿಗಳ ಕೂಡಿ
ಕಾಳಗ ಕತನಗಳ ನೋಡಬೇಕೆನುತಗ್ನಿ ಮೂಲೆಯಲಿ ಕುಳಿತಳಾಗ        ೩೦

ಮೊಮ್ಮಗನ ಮಾತುಗಳನು ಎಲೆ ತಾತ ಗಮ್ಮನಾದರೆ ಕೇಳೆಲೊ
ಕಮ್ಮಗೋಲನ ಪಿತನು ಮೊದಲಾದ ಸುರರೆಲ್ಲ ಹಮ್ಮಿನಿಂದಲೆ ಕೆಟ್ಟರು
ಕೆಮ್ಮು ತಲೆಬೇನೆರೋಗಿ ಕೇಳಿನ್ನು ಹೆಮ್ಮೆಗರ್ವಿಕೆ ಬೇಡವು
ಸಮ್ಮಗಾರರ ಸಾವು ನಿನಗಾಗಲೆಲೆ ತಾತ ಕಮ್ಮಟವೆ ನಿನಗೆ ಮೂಲ     ೩೨

ಆಡಿದ ಮಾತುಗಳಿಗೆ ದಕ್ಷಣನು ನೋಡುತಲಿ ಬಿರುಗೋಪದಿ
ಗೂಡುಹೊಟ್ಟೆಯ ಮೂಳ ನಿನಗೇಕೆ ಇಷ್ಟೊಂದು ಝಾಡಿಸಿದ ಮಗಳ ಮಗನ
ಬೇಡರೆಂಜಲಗಳ್ಳರ ಮಗ ನಿನ್ನ ನೋಡಿ ಪಾವನ ಮಾಡಿದೆ
ಕೋಡಿ ಹೊಲೆಯರ ಮಗನೆ ಶಿರಹೋದ ಮೂಳ ನೀನಾಡಬಹುದೆಲೊ ನಮ್ಮನು   ೩೩

ಘೋರ ಗರ್ವಿಸಿದೆ ಕೇಳು ಶ್ರೀಹರಿಯೆ ಸೇರಿತು ಮದಮತ್ಸರ
ಹೇರುಕೊಬ್ಬರಿ ಕಬ್ಬುಕಡಲೆ ಬೆಲ್ಲಗಳಿಂದ ಸೂರೆಹೋಯಿತು ಮನೆತನ
ತಾರಿದೊಡಲಲಿ ಬಂದನು ನಮ್ಮನೆಗೆ ಭೇರಿಹೊಟ್ಟೆಯ ಗಾವುದಿ
ನೂರಾರರರ ಹಾರ ಒಬ್ಬನೆ ಇವ ತಿಂದ ಮೀರಿ ನುಡಿಯಲುಬಹುದೆ ಇವನ         ೩೪

ಕೆಟ್ಟೆನಿವನಿಂದ ಹರಿಯೆ ಮನೆಬದುಕು ಕೆಟ್ಟುಹೋಯಿತು ನೆಲದೊಳು
ಒಟ್ಟಿಲೊಟ್ಟಿಲು ಚಿಗುಳಿ ತಂಬಿಟ್ಟು ಮೇವೆಗಳ ಹೊಟ್ಟಿ ನೆತ್ತಿಲ ಕೆಡಿಸಿದ
ಹುಟ್ಟಿದಾರಭ್ಯ ಮೊದಲು ನಮ್ಮನೆಯ ಹೊಟ್ಟಿಕೂಳಿಲಿ ಬದುಕಿದ
ಬಿಟ್ಟು ಆಡಲಿಬಹುದು ಭಲಭಲರೆ ಎನುತಲಿ ಕುಟ್ಟಿದನು ಬಾಯಮೇಲೆ     ೩೫

ಆಗ ಬೇಗದಿ ಹೊಯ್ವುತಾ ದಕ್ಷಣನು ಬೇಗೆಯುರಿ ಬೊಬ್ಬೆಗಳಲಿ
ಸಾಗಿಸಿದ ಕೈಲಾಸಪಟ್ಟಣಕೆ ಅಗ್ನಿಮಳೆ ಬೇಗ ಉರಿ ಉದ್ದಲಿಸುತ
ಮೇಘ ಸಿಡಿಲಾರ್ಭಟದಲಿ ಪಟ್ಟಣದ ಯೋಗಿ ಮುನಿಜನಗಳೆಲ್ಲ
ನೀಗಿಹೋಯಿತು ನಮ್ಮ ಕೈಲಾಸಪಟ್ಟಣವೆಂದಾಗ ತಲ್ಲಣಗೊಳುತಲಿ     ೩೬

ಜ್ವಾಲಾಗ್ನಿ ವಡಬಾಗ್ನಿಯು ದಕ್ಷಣನು ಮೇಲಾದ ಪ್ರಳಯಾಗ್ನಿಯು
ಮೂಲಮಂತ್ರಗಳಿಂದ ಜಪಿಜಪಿಸಿ ಸುಡುತಿರಲು ಕೈಲಾಸ ಆರ್ಭಡಿಸುತ
ಸ್ಥೂಲ ಸೂಕ್ಷ್ಮತನುವಿನ ಯೋಗಿಗಳು ಗಾಲುಮೇಲುಗಳಾಗುತ
ಶೂಲಧರ ಶಿವನೆ ಹರಹರಯೆಂದು ಬಳಲುತಿರೆ ನೀಲಕಂಠನುಪಮಿಸಿದ   ೩೭

ವಡಬಾಗ್ನಿ ಅಡರಿದಡೆ ಶಿವ ನಮ್ಮ ಕಿಡಿಗಣ್ಣುಗಳು ಸೂಸಲು
ಒಡೆಯನ ಬಲಭಾಗದ ಕಿಡಿಗಣ್ಣುಗಳ ಬೆಂಕಿ ಸಿಡಿಲುಮರಿ ರೂಪಾಯಿತು
ದಡಿಗದಾನವರ ಗಂಡ ಬೆಸಸಿದರೆ ಗುಡುಗುಡಿಸಿ ಆರ್ಭಡಿಸುತ
ಕಡಿದು ಬಿಸುಟುವೆ ಪರವಾದಿ ಶಿರಗಳನೆಂದು ನಡೆದ ದಕ್ಷಣ ಯಜ್ಞಕೆ      ೩೮

ಮೂವತ್ತು ಎರಡಾಯುಧಾ ಹಸ್ತದಲಿ ದೇವ ಪಿಡಿದಾರ್ಭಡಿಸಲು
ಗೋವಿಂದರಜಹರಿಯು ಸುರಮುನಿಗಳ ಹೃದಯ ಜೀವ ತಲ್ಲಣಿಸುವಂತೆ
ಗೋವ ದಕ್ಷಣ ತಲೆಯನು ಆರ್ಭಡಿಸಿ ತೀವಿ ಕಟ್ಟುವೆನೆನುತಲಿ
ದೇಶಶರಭವತಾರ ಘುಡಿಘುಡಿಸಿ ನಡೆದನು ಭೂವಳಯಕಾರ್ಭಡಿಸುತ    ೩೯

ವಾಮಭಾಗದಿ ಬೆವರಿಡೆ ಬಲುದುರ್ಗಿ ತಾಮಸವೇ ಬೊಬ್ಬಿಡುತಲಿ
ಭೂಮಿಯಾಕಾಶಗಳ ನುಂಗಿಬಿಡುವೆನೆಂದು ಸ್ವಾಮಿಬೆನ್ನಿಲಿ ನಡೆದಳು
ಗ್ರಾಮದುರ್ಗಗಳನಿಳಿದು ದಕ್ಷಣನ ಸೀಮೆ ತುದಿಗಳ ಮೆಟ್ಟಿಲು
ಭೂಮಿಗಿರಿದುರ್ಗಗಳು ತಲ್ಲಣಿಸಿ ನಡುಗಿದರೆ ಹೋಮದುಪಟಳವೆನುತಲಿ ೪೦

ಮರುಳ ತಂಡವು ಎಡದಲಿ ಶರಭನ ದುರುಳ ಭೂತವು ಬಲದಲಿ
ಕುರುಳುಗೂದಲು ತಲೆಯ ಚಂಡಿಚಾಮುಂಡಿಯರು ಕರುಳ ಹೀರುವೆವೆನುತಲಿ
ಕೊರಳದಾರದ ವಿಪ್ರರ ಕಡಿಕಡಿದು ಉರುಳಿಸುವೆವೆನುತಲಾಗ
ಬೆರಳ ಬೊಬ್ಬೆಗಳಿಂದ ಗದ್ದಲಿಸಿ ಆರ್ಭಡಿಸಿ ಮರಳಿ ಭೂಮಿಗಳದುರಲು   ೪೧

ಒದಗಿ ನಾರದನು ಬಂದು ಯಜ್ಞದಲಿ ತುದಿಯ ಬೊಬ್ಬೆಗಳಿಕ್ಕುತ
ಕುದುರಮಂದಿಯು ದಮಡು ಕಾಲಾಳು ರಕ್ಕಸರು ಮುದುಕ ನಿನ ಹೋಮ ಸುಡಲಿ
ಗದಗದಿಸಿ ನಡುಗುತಿರಲು ಭೂಮಿಗಳು ಚದುರ ಬೊಬ್ಬೆಗಳಿಕ್ಕುತ
ಒದಗಿದನು ವೀರಶರಭವತಾರನೆಲೆ ದಕ್ಷ ಇದೇ ಕಡೆಯೂಟ ನಿನಗೆ       ೪೨

ನಾರದನ ಬೊಬ್ಬೆಗಳಿಗೆ ರಕ್ಕಸರು ಕಾರುಮೇಘಗಳಂದದಿ
ನೂರುತೊಂಬತ್ತಾರು ಲಕ್ಷದಲಿ ತೋರಿದರು ವೀರಶರಭವತಾರಗೆ
ದಾರಿಬಟ್ಟೆಗಳ ಕಟ್ಟಿ ದಕ್ಷಣನ ಮೂರುವರೆ ಕೋಟಿ ದಂಡು
ವೀರಬೊಬ್ಬೆಗಳಿಂದ ಸುತ್ತುಗಟ್ಟಿದರಾಗ ದಾರಿನೋಟಕಿಲ್ಲದಂತೆ  ೪೩

ಶಂಕೆಗಳು ತಮಗಿಲ್ಲದೆ ರಕ್ಕಸರ ಮುಂಕೊಂಡು ಬೊಬ್ಬಿಡುತಲಿ
ಕೊಂಕಿಬಾಣವು ಬಿಲ್ಲು ಬಗೆಬಗೆಯ ಆಯುಧದಿ ಬೆಂಕಿಮಳೆಗಳ ಸುರಿದರು
ಶಂಕರವತಾರ ಶರಭ ಭವಗಿರಿ ಅಂಕುಶಾಯುಧವ ಪಿಡಿದು
ಬೆಂಕಿಗಿರಿಗಳ ಮೇಲೆ ಧುಮುಕಿದನು ಬೇಗದಲಿ ಬಿರಿದಂಕ ಶರಭವತಾರನು        ೪೪

ಸುರರು ರಕ್ಕಸರು ಕೂಡಿ ಮಿಕ್ಕಿನ ಹರಿಯಜರು ದಿಕುಪಾಲರು
ನೆರೆದಿರ್ದ ಚಂದ್ರಸೂರ್ಯಾದಿಗಳು ಬೊಬ್ಬಿಡುತ ಬೆರಸಿ ಮುತ್ತಿದರಾಕ್ಷಣ
ಸುರಿಗೆಬಾಣವು ಚಕ್ರಾದಿ ಗದೆಯಿಂದ ಪರಿಪರಿಯ ಮಾರಿಮುಖದ
ನರಹರಿಯು ಸುರರು ಕೋಟ್ಯಾನುಕೋಟಿಗಳೆಲ್ಲ ಸುರಿಗಿಶಾಸ್ತ್ರದ ಮಳೆಗಳ         ೪೫

ಭರ್ಗೋದೇವನ ಹಸ್ತಿಗೆ ಇರುವೆಗಳು ಮುಗ್ಗಿ ಕಡಿಯಲು ಮಣಿಯದೆ
ನುಗ್ಗು ಮಾನವರನು ಲಗ್ಗೆ ಮಾಡುವೆನೆಂದು ಖಡ್ಗದೊರೆಗಳ ತೆಗೆದನು
ಉಗ್ರಕೋಪಗಳಿಂದಲಿ ಆರ್ಭಡಿಸಿ ಸ್ವರ್ಗದವರನೇ ಸವರಲು
ಕಾರ್ಗತ್ತಲೆಯಾಗಿ ಕೋಟ್ಯಾನುಕೋಟಿಗಳು ಮುಗ್ಗಿ ಉರುಳಿತು ಧರೆಯೊಳು        ೪೬

ಲೆಂಡ ದೈತ್ಯರುಗಳೆದ್ದು ಆರ್ಭಡಿಸಿ ಕೆಂಡಗಣ್ಣನ ಮುತ್ತಲು
ಖಂಡೆಯಾರ್ಭಟಗಳಲಿ ಕಡಿಕಡಿದು ಸವರುತಲಿ ಚಂಡಾಡಿದನು ತಲೆಯ
ಭಂಡ ದೈತ್ಯರು ಬೀಳಲು ಅಗಣಿತ ರುಂಡ ಕಾಣಲು ಸತಿಯರು
ರಂಡೆಯಾದರು ಒಂದು ಕೋಟ್ಯಾನುಕೋಟಿಗಳು ಮುಂಡೆಯರ ಹೇಳಲಳವೆ       ೪೭

ಮುತ್ತಿಮುಸುಕಿದ ದಂಡನು ಕಡಿಕಡಿದು ಒತ್ತಿ ಧರೆಯೊಳು ಕೆಡಹಲು
ಹತ್ತುಸಾವಿರ ಆನೆ ಕುದುರೆ ಕಾಲಾಳುಗಳು ನೆತ್ತರೊಳು ತೇಲಾಡುತ
ಸತ್ತಿಸತ್ತಿಗೆ ದೊರೆಗಳು ಆರ್ಭಡಿಸಿ ಕುತ್ತಿಕುತ್ತಿಗೆ ಕೊಯ್ಯಲು
ಇತ್ತ ನಾರಾಯಣನು ಎರಳೆ ರೂಪನು ತಾಳಿ ಮತ್ತೆ ಓಡಲು ಕಂಡನು     ೪೮

ನಳಿನನಾಭನ ಕಾಣುತಾ ಶರಭಯ್ಯ ಮುಳಿದು ಬಾಣದಲೆಚ್ಚಡೆ
ಸುಳಿಯದೆ ಗುಂಡಿಗೆಯ ತಾಕಿ ಕೆಡವಿದರಾಗ ಕಳವಳಿಸಿ ಧರೆಗುರುಳಿದ
ಕುಳಿಕುಳಿತು ಅಗ್ನಿಪುರುಷ ತಾ ತನ್ನ ಎಳಗನ ಬಿಟ್ಟೋಡುತ
ತುಳಿದು ಹಿಮ್ಮಡ ಹರಿಯೆ ಹೊಯ್ದು ನಾಲಿಗೆ ಕೊಯ್ದ ತಳಪಾದ ದೊಳೊರಸಿದ    ೪೯

ವಿಷ್ಣು ಬೀಳಲು ಕಾಣುತ ಬ್ರಹ್ಮನು ಭ್ರಷ್ಟಾಗಿ ಓಡುತಿರಲು
ಪೋಟ್ಟುದಲೆ ಹಾರುವನ ಸಿಟ್ಟಿಲಾರ್ಭಟಿಸುತಲಿ ತೊಟ್ಟ ಬಣದಸೆಲೆಯಲು
ಪೆಟ್ಟು ತಾಗಲು ಬ್ರಹ್ಮಗೆ ಹಾಯೆನುತ ಕೆಟ್ಟ ಕೊರಳ್ದಾರ ತೊಡರಿ
ಹೊಟ್ಟೆಯೆದೆಗುಂಡಿಗೆಯು ಜುಟ್ಟು ನೆಗೆದಾಡುತಲಿ ಸೃಷ್ಟಿಗುರುಳಿದ ಬ್ರಹ್ಮನು        ೫೦

ವೀರಶರಭನ ಕಾಣುತ ಕಂಗೆಟ್ಟು ಸೂರ್ಯಚಂದ್ರರು ಓಡಲು
ಮೀರಿ ಹೋಗಲುಗೊಡದೆ ತೂರಿ ಅಪ್ಪಳಿಸುತಲಿ ಧಾರುಣಿಯಲೊರಗಿಸಿದನು
ನಾರಿಯರಿಗಳುಪಿದವರು ಧರೆಯೊಳಗೆ ಘೋರಪಾತಕರೆನುತಲಿ
ಮೋರೆಮೋರೆಯ ಕಡಿದು ರಕ್ತದೊಳಗುರುಳಿಸಿದ ಬೇರುದಂತವ ಕಿತ್ತನು  ೫೧

ಕಿಂಚಿತ ಜಗಳವಲ್ಲ ಅಕಟಕಟ ವಿರಿಂಚಿ ಹರಿಯಜರಳಿದರು
ಪಂಚಂಗಶಾಸ್ತ್ರಗಳ ಸುಡಹಾಕಿ ಸುರುಗರು ಮುಂಚಾಗಿ ಓಡುತಿರಲು
ವಂಚಿಸುತ ಶುಕ್ರಚಾರ್ಯ ಬ್ರಹ್ಮಸ್ಪತಿಯು ಅಂಚುಧೋತ್ರವ ಹಿಡಿವುತ
ಪಂಚಮುಖದವನ ದಾಳಿ ಮೇಲುವರಿಯಿತು ಎಂದು ಪಿಂಚುಗುಂಟರು ಓಡಲು     ೫೨

ಪಕಪಕನೆ ನಗುತಲಾಗ ಶರಭಯ್ಯ ದಿಕ್ಕರಿಗಳಾರ್ಭಟಿಸುತ
ಶಕುನಶಾಸ್ತ್ರವ ಪೇಳ್ವೆ ಕುಕುಟ ನಾಯಿಗಳೆಂದು ಶಿಖಿಯ ಬಾಣದೊಳೆ ಸೆಯಲು
ಮೊಕಕುಳಿದ ಕಣ್ಣೊಡೆವುತ ಶುಕ್ರನ ತಿಕ ಹರಿದು ಬೀಳುತಿರಲು
ಸುಖತರದ ಬ್ರಹ್ಮಸ್ಪತಿಯು ಶೂಲಬಾಣವು ತಾಗಿ ಲಿಖಿತ ಹರಿದುರುಳಿ ಕೆಡೆದ       ೫೩

ಕಡಿದ ರಕ್ಕಸರು ಎದ್ದು ಬೊಬ್ಬಿಡುತ ಒಡೆಯ ಶರಭನ ಮುತ್ತಲು
ಮೃಡನ ಬೊಬ್ಬಯಾರ್ಭಟ ಕಂಡು ಕಂಗೆಟ್ಟು ಕಡಲು ಬೆದರುತ ಓಡಲು
ಸಿಡಿಲುಮರಿಧ್ವನಿಗಳಿಂದ ತಾ ತನ್ನ ಕಿಡಿಯ ಉರಿಗಣ್ಣ ತೆಗೆದು
ಘುಡಿಘುಡಿ ಛಿಟಿಛಿಟಿಲು ಭುಗಿಭುಗಿಲು ಧ್ವನಿಗಳಿಗೆ ಮಡಿಮಡಿದು ಸಾವುತಿರಲು      ೫೪

ಹಗಲುಗತ್ತಲೆ ಕವಿಯಲು ರಣದೊಳಗೆ ಬಗಿಬಗಿದು ಚಂಡಾಡುತ
ತೆಗೆತೆಗೆದು ಕರುಳುಗಳನುಗಿದು ಬಿಸುಟುತಲಿ ನಗುನಗುತ ಭೂತಗಣವು
ಒಗುಮಿಗೆಯ ರಕ್ತರಣವ ಸವರುತಲಿ ಮಿಗಿಲು ದೈವದ ಗಂಡನ
ಖಗಮೃಗವು ಮರುಳು ಭೂತಗಳೆಲ್ಲ ಹರಸಿದವು ನೆಗೆನೆಗೆದು ಕುಣಿದಾಡುತ        ೫೫

ಬಲುದುರ್ಗಿ ಚೌಡಮ್ಮನು ತಾ ತನ್ನ ಹಲವು ಭೂತಗಳ ಕೂಡಿ
ಬಲುಕೊಲೆಯ ರಕ್ತ ರಣಮಂಡಲಗಳ ಕಂಡು ನಿಲಗೊಡದೆ ಸವರುತಿರಹಳು
ಚಲುವ ದೇವಂಗ ಋಷಿಯು ಖೇಚರದಿ ಇಳಿದು ಪಾದಕೆ ಎರಗುತ
ಕುಲದೈವ ತನ್ನ ಭಾಗ್ಯದ ಚೌಡಿ ಭಲಭಲರೆ ನೆಲದ ರಕ್ತವ ಬಿಡುಬಿಡು     ೫೬

ಸನುಮತದ ಮಾತ ಕೇಳಿ ಚೌಡಮ್ಮ ಹನಿಬಿಂದು ರಗುತ ಬಿಡಲು
ಕೊನೆಮೊನೆಯು ಹುಟ್ಟಿ ಮೊಳಗಿನ ಗಿಡಗಳಾಗಿ ಘನತರವು ಇವಗಾಯಿತಿನ್ನು
ಮುನಿಯು ಕಳುಹಿಸಿಕೊಡುತಲಿ ಚೌಡಮ್ಮ ರಣರಗುತ ಸವರುತಿರಲು
ಬಿನುಗು ದೈವದಗಂಡ ವೀರಶರಭನ ಕೂಡೆ ಅನಲಕೊಂಡಕೆ ನಡೆದಳು   ೫೭

ಚಂಡಿಚಾಮುಂಡಿಯರು ಕೂಡೆ ಚೌಡಮ್ಮ ದಂಡನೆಲ್ಲವ ನುಂಗುತ
ತುಂಡುಮುಂಡಿಲಿ ಬಿದ್ದು ಕಂಡ ರೋಹಿತಗಳನು ಉಂಡು ಡರ್ರನೆ ತೇಗುತ
ಕೊಂಡ ಯಜ್ಞಕೆ ನಡೆಯಲು ಕಳವಳಿಸಿ ದಿಂಡುರುಳಿದರು ಹೋಮದಿ
ಚಂಡಿಕೆಯ ಬ್ರಾಹ್ಮಣರು ಕೋಟ್ಯಾನುಕೋಟಿ ಕೊಂಡಾಡಿದರು ಶರಭನ   ೫೮

ವಚನ :

ಶರಣು ಶರಣು ತ್ರಾಹಿ ತ್ರಾಹಿ ಶರಭಯ್ಯ | ನಮ್ಮ
ಹರಣ ಪ್ರಾಣ ನಿಮ್ಮದಯ್ಯ ಶರಭಯ್ಯ
ಶರಣು ರಕ್ಷಾಮಣಿಯೆ ತ್ರಾಹಿ ಶರಭಯ್ಯ | ನಿಮ್ಮ
ಚರಣರಕ್ಷೆ ಹೊರುವೆನಿನ್ನು ಶರಭಯ್ಯ          ೧

ಅರಿತುದಿಲ್ಲ ನಿಮ್ಮ ಮಹಿಮೆ ಶರಭಯ್ಯ | ಜಗದ
ಕುರಿಯ ಹಿಂಡು ನರಪಶುಗಳು ಶರಭಯ್ಯ
ಹಿರಿಯತನವು ಮಾಡೋರಲ್ಲ ಶರಭಯ್ಯ | ನಾವು
ತಿರಿಯ ಬಂದ ಜೋಯಿಸರಯ್ಯ ಶರಭಯ್ಯ   ೨

ಜೋಡು ಶ್ರೀಪಾದಗಳಿಗೆರಗಿ ಶರಭಯ್ಯ | ನಾವು
ಆಡಬಂದ ವಿಂಧ್ಯದವರು ಶರಭಯ್ಯ
ಕಾಡಿಬೇಡಿ ಒಡಲ ಹೊರೆವರು ಶರಭಯ್ಯ | ಪರ
ನಾಡ ಸೀಮೆ ಪರದೇಶಿಗಳು ಶರಭಯ್ಯ       ೩

ಕೇಶಂಭಟ್ಟ ತಿರುಕಂಭಟ್ಟ ಶರಭಯ್ಯ | ವೇದ
ವ್ಯಾಸಂಭಟ್ಟ ಕೋನಂಭಟ್ಟ ಶರಭಯ್ಯ
ಲೇಸು ಒಳಿತು ಉಂಡೆವೆಂದು ಶರಭಯ್ಯ | ಬಾಳ
ಆಸೆ ಮಾಡಿ ಬಂದೆವಿಲ್ಲಿ ಶರಭಯ್ಯ  ೪

ಲಿಂಗಣಭಟ್ಟ ತಿಮ್ಮಣಭಟ್ಟ ಶರಭಯ್ಯ | ದೋಸಿ
ಯಂಗಣಭಟ್ಟ ರಂಗಣಭಟ್ಟ ಶರಭಯ್ಯ
ತಂಗುಳ ಬಿಸಿಯನುಣ್ಣಲಿಲ್ಲ ಶರಭಯ್ಯ | ದಕ್ಷ
ನಂಗಳ ಕೋನೆ ಸುಡಲಿನ್ನು ಶರಭಯ್ಯ        ೫

ಉಣ್ಣಲಿ ಉಡಲಿ ಬಂದುದಿಲ್ಲ ಶರಭಯ್ಯ | ಕೋಡಿ
ಮಣ್ಣ ಹೊಯ್ಕೊ ಬಂದೆವಿಲ್ಲಿ ಶರಭಯ್ಯ
ಹೆಣ್ಣುಮಕ್ಕಳು ದೋಸಿಕ್ಕಾನು ಶರಭಯ್ಯ | ಮೂರು
ಕಣ್ಣ ಶಿವನೆ ಕಾಯೊ ಕಾಯೊ ಶರಭಯ್ಯ       ೬

ತೆಗೆದು ತೆಗೆದು ಉಂಡೆವೆಂದು ಶರಭಯ್ಯ | ಕೊಂಡ
ನಗಿದು ಅಗಿದು ಬಳಲಿದೆವೊ ಶರಭಯ್ಯ
ಹಗಲು ಇರುಳು ಉಪವಾಸವಿರ್ದು ಶರಭಯ್ಯ | ಕೆಟ್ಟ
ಹೊಗೆಯನುಣಲಿ ಬಂದೆವಿಲ್ಲಿ ಶರಭಯ್ಯ       ೭

ಉಂಡುವುಟು ಸುಖಿಸೇವೆಂದು ಶರಭಯ್ಯ | ಬಾಳ
ದಂಡಿಸಿದೆವೊ ಶರಿರಗಳನು ಶರಭಯ್ಯ
ಮಂಡೆಯಜ್ಞ ಸುಡಲಿ ಸುಡಲಿ ಶರಭಯ್ಯ | ಹೊಗೆಯ
ಕೆಂಡುಲುಣಲಿ ಬಂದೆವಿಲ್ಲಿ ಶರಭಯ್ಯ ೮

ತಂದೆತಾಯ ತಿಥಿಗಳೆಂದು ಶರಭಯ್ಯ | ಹರಿಗೋ
ವಿಂದರೆಲ್ಲ ತೆರಳಿ ಬಂದು ಶರಭಯ್ಯ
ಇಂದುಧರನ ಕಥನವೆಂದು ಶರಭಯ್ಯ | ಮನದಿ
ಒಂದಿಷ್ಟನು ಅರಿತುದಿಲ್ಲ ಶರಭಯ್ಯ  ೯

ಅನ್ನದಾನ ಗೋದಾನಗಳ ಶರಭಯ್ಯ | ನಮಗೆ
ಹೊನ್ನದಾನ ಎರೆದಾನೆಂದು ಶರಭಯ್ಯ
ಮುನ್ನ ಆಸೆಮಾಡಿ ಬಂದೆವಿಲ್ಲಿ ಶರಭಯ್ಯ | ಇಂಥ
ಭಿನ್ನ ಕೃತಿಯ ಕಂಡುದಿಲ್ಲ ಶರಭಯ್ಯ ೧೦

ಬಿಡಿಸು ಬಿಡಿಸು ನಿಮ್ಮ ಧರ್ಮ ಶರಭಯ್ಯ | ರುದ್ರ
ಕಡಿದುಹಾಕು ಗರ್ವದವರ ಶರಭಯ್ಯ
ಒಡಲಿನಾಸೆ ವೈದಿಕಾರು ಶರಭಯ್ಯ | ನಮ್ಮ
ಹಡೆದ ತಂದೆ ರಕ್ಷಿಸಿನ್ನು ಶರಭಯ್ಯ  ೧೧

ಮುಕ್ಕಣ್ಣೀಶ ಶಿವನೆ ಕೇಳು ಶರಭಯ್ಯ | ಜೀವ
ಕಕ್ಕುಲಿಗೆ ಕಳವಳಿಸುತಲಿ ಶರಭಯ್ಯ
ನಕ್ಕುನಕ್ಕು ಸೆರೆಯ ಬಿಟ್ಟು ಶರಭಯ್ಯ | ಮುಂದೆ
ದಕ್ಷನಿದ್ದ ಕಡೆಗೆ ಬಂದು ಶರಭಯ್ಯ   ೧೨

ಧರ್ಮಸೆರೆಯು ಬಿಡುತಲಾಗ ಶರಭಯ್ಯ | ಯಜ್ಞ
ಕರ್ಮಗಳ ನೋಡಿ ಕಂಡ ಶರಭಯ್ಯ
ಕರ್ಮಯಜ್ಞ ಜಪಿಸುತಿರ್ದ ಗುರುರಾಯ | ದಕ್ಷನ
ಚರ್ಮನುಗಿದ ಕತೆಯ ಕೇಳು ಗುರುರಾಯ    ೧೩

ಪದನು :

ಅತ್ತಿತ್ತ ಏಳಗೊಡದೆ ದಕ್ಷಣನ ಮುತ್ತಿಕೊಂಡನು ಬೇಗದಿ
ಸುತ್ತ ಇಪ್ಪತ್ತೇಳುಸಾವಿರ ಬ್ರಾಹ್ಮಣರ ನೆತ್ತಿಗಳ ಚಂಡಾಡುತ
ಹತ್ತಿತ್ತು ವೀರಬೊಬ್ಬೆ ಆರ್ಭಟಕೆ ಸುತ್ತ ಕಾವಳ ಕವಿಯಲು
ಎತ್ತೆತ್ತಿ ತಿವಿತಿವಿದು ಒತ್ತೊತ್ತಿ ಒಗೆವುತಲಿ ಮತ್ತೆ ತನ್ನಯ ಕೋಪದಿ        ೧

ಕೋಯೆಂದು ಕೂಗುತಿರಲು ದಕ್ಷಣನ ಬಾಯಬಾಯನು ಹೊಯ್ಯುತ
ಗಾಯಗಾಯವ ಮಾಡಿ ತುಳಿತುಳಿದು ತಿವಿತಿವಿದು ತಾಯಿತೆಂದೆಯ ಕೋಪದಿ
ಹಾಯೆಂದು ಬೊಬ್ಬಿಡುತಲಿ ದಕ್ಷಣನ ದೇವ ನರಸಿಂಹನಾಗಿ
ಮಾಯವತಾರ ತಾಳಿ ಸಾಯಕೊಲ್ಲುವೆನೆಂದು ಕಾಯಶಕ್ತಿಲಿ ತೊಡರಿದ   ೨

ಉಲದು ಬೊಬ್ಬೆಗಳಿಕ್ಕುತಾ ದಕ್ಷಣನು ಹಲವು ಶಸ್ತ್ರಗಳ ಪಿಡಿದು
ಎಲುಗೊದಲು ನರಶಿರ ಹರಿದುಬೀಳೆಂದು ಮಲೆವುತಾರ್ಭಡಿಸಿ ಹೊಯ್ದ
ಕಿಲಕಿಲನೆ ನಗುತಲಾಗ ಶರಭಯ್ಯ ಭಲಭಲರೆ ಎನುತಲಾಗ
ಗೆಲಿಗೆಲಿದು ಪೆಟ್ಟುಗಳ ತೊಲಗನೂಕಲು ದಕ್ಷ ಬಲದ ಸತ್ವದಲಿ ಪಿಡಿದು    ೩

ಅಬ್ಬರಿಸಿ ಅವಚಿಕೊಂಡು ವೀರಭದ್ರ ತಬ್ಬುಬ್ಬಿ ತಲ್ಲಣಿಸಲು
ಉಬ್ಬಿ ರೋಮಾದಿರೋಮಗಳೆಲ್ಲವೂ ಉಕ್ಕಿ ನಿಬ್ಬರದಲವಚಿಕೊಂಡ
ಬೊಬ್ಬೆಯಬ್ಬರ ಮಾಡಲು ದಕ್ಷಣನ ಗರ್ಭಗರ್ಭವ ಕಡಿಯಲು
ಕೊಬ್ಬುಕೊಬ್ಬುಗಳಿಂದ ಸುಲಿಸುಲಿದು ಬಿದ್ದಿಹವು ಹೆಬ್ಬೆಟ್ಟ ಪರಿಯಂದದಿ    ೪

ಮೆಟ್ಟಿ ಎದೆಗುಂಡಿಗೆಯನು ತುಳಿತುಳಿದು ನಿಟ್ಟಿಲುವುಗಳ ಮುರಿಯಲು
ಪುಟ್ಟಿದ ಉದ್ದತ ಕೋಪದಲಿ ಆರ್ಭಡಿಸಿ ಕುಟ್ಟಿದನು ದಕ್ಷನ ಶಿರವ
ದಿಟ್ಟದಕ್ಷನ ತಲೆಗಳ ಹೊಯ್ ಹೊಯ್ದು ಬಿಟ್ಟರಗ್ನಿಗಳ ಒಳಗೆ
ಮೆಟ್ಟಿ ಬ್ರಹ್ಮನ ತಲೆಯ ಕುಟ್ಟಿಹಾಕಿದ ಬೇಗ ಚಿಟಿಲು ಚಿಟಿಲೆಂದೆನುತಲಿ    ೫

ಪರಿಪರಿಯ ಕೂಳ್ಗಲ್ಲಿ ಗಣಪತಿಯು ಮಿರಮಿರನೆ ಮಿಂಚುತಿರಲು
ಹೆರರ ಕೂಳಿಗೆ ಬಿದ್ದ ಪರಿಯನುಣ್ಣೆನುತಲಿ ಭರದಿ ಒದೆದಾ ಕುಕ್ಷಿಯ
ಪರಪರನೆ ಒಡಲೊಡೆವುತಾ ಗಣಪತಿಯು ಹರಹರಾ ಎಂದೊರಗಲು
ಸುರಿಸುರಿದು ಚಿಗುಳಿ ತಂಬಿಟ್ಟು ಕಬ್ಬು ಕಡಲೆ ಹರಿಹರಿದು ಹೋಗುತಿರಲು ೬

ಕೂಡಿರ್ದ ವಾಣಿಪತಿಯು ಇದ ಕಂಡು ಓಡುತಿರಲು ಬೇಗದಿ
ಜಾಡಿಸಿದ ತುದಿಪಾದದಲಿ ಶರಭವತಾರ ಗೂಡುಗೆಡೆಗಳು ಧರಣಿಗೆ
ಕಾಡಭೂತಗಳು ಬಂದು ಆರ್ಭಡಿಸಿ ಕೋಡಿ ಸತಿಯಳ ಬೈವುತ
ಮಾಡಿದಳಿವಳು ಕೃತಕದ ಹೋಮಗಳನೆಂದು ತೋಡಿದವು ಮೂಗುಗಳನು                  ೭

ಎಡಬಲದಲಿ ಕರ್ಮಿಗಳನು ಕೋಪದಲಿ ಕಡಿಕಡಿದು ಬಿಸುಟುತಿರಲು
ಒಡಲುಗಿವಿಮೂಗುಗಳ ಹರಿಹರಿದು ಬೀಳುತಲಿ ನಡನಡುಗಿ ಸಾವುತಿರಲು
ಒಡೆಯ ಶರಭನ ಕಾಣುತ ಯಜ್ಞದೊಳು ಮಡಿದ ಪಾರ್ವತಿ ಪೊರಡುತ
ದಢಧಡನೆ ನಡೆದು ಮುಂಡಾಡಿ ತಕ್ಕೈಸುತಲಿ ಹಡೆದ ಮಗನೊಳಗೆರಗಲು                   ೮

ಮತ್ತೆ ಪಾದಗಳ ಪಿಡಿದು ಪಾರ್ವತಿಯು ಎತ್ತಿ ಮುಂಡಾಡಿ ಮಗನ
ಮಿತ್ತು ಮಾರಿಯ ಕೊಂದು ದಕ್ಷಣನ ಮರ್ದಿಸಿದೆ ಕರ್ತು ಶರಭವತಾರನೆ
ಹೊತ್ತ ತಂದೆಯು ನನಗವ ಪ್ರಾಣಗಳನಿತ್ತು ರಕ್ಷಿಸು ಎಂದರೆ
ಕುತ್ತಿಗೆಯ ಕೊರೆದು ಕುರಿದಲೆಯನಿತ್ತು ರಕ್ಷಿಸಿದ ಪುತ್ರ ಶರಭವತಾರನು   ೯

ಸುರರ ರಕ್ಷಿಸು ಎಂದಡೆ ಶರಭಯ್ಯ ಕರುಣದೃಷ್ಟಿಲಿ ನೋಡಲು
ಕರಿಮುಖನು ಸುರರು ದೇವಾದಿದೇವರ್ಕಳು ಶರನು ಬೊಬ್ಬೆಗಳಿಕ್ಕುತ
ಎರಳೆರೂಪವ ತಾಳ್ದ ನರಹರಿಯು ಸುರಗಣವ ನೋಡುತ
ಅರರೆ ಭಲಭಲರೆ ಶರಭವತಾರ ಜಯತೆಂದು ಚರಣಪಾದಕೆ ಎರಗಲು    ೧೦

ತೆಗೆದು ಎರಳೆಯ ಚರ್ಮವ ನರಹರಿಯು ಮಿಗಿಲು ಪಾದಕೆ ಧರಿಸಲು
ಮಗಮಗಿಪ ಸುರರು ಹೂವಿನ ಮಳೆಯ ಕರೆಸುತಲಿ ನೆಗೆನೆಗೆದು ಕೊಂಡಾಡುತ
ಮಗನ ಮುಂಡಾಡಿ ಎತ್ತಿ ಗೌರಮ್ಮ ಪೊಗಲು ಶ್ರೀಕೈಲಾಸವ
ಮಗಳು ಹಿಮಗಿರಿ ರಾಜನಾತ್ಮದಲಿ ಬಹೆನೆಂದು ಅಗಜೆ ವಿಸ್ಮಯ ಹೋದಳು       ೧೧

ಅತ್ತ ಹಿಮಗಿರಿರಾಜಗೆ ಗೌರಮ್ಮ ಪುತ್ರಿಯವತಾರಿಯಾಗಿ
ಚಿತ್ತವಲ್ಲಭಶಿವನೆ ನಿಮ್ಮ ತಪಸನೆ ಮಾಡಿ ಅರ್ತಿಮದುವೆಗಳಾಗುತ
ಹೆತ್ತವರ ರಕ್ಷಿಸುತಲಿ ಗೌರಮ್ಮ ಇತ್ತ ಕೈಲಾಸಪುರದಿ
ಕರ್ತುವಲ್ಲಭಶಿವನೆ ನಿಮ್ಮತೊಡೆಗಳ ಮೇಲೆ ಇತ್ತ ಸುಖದೊಳಗಿರುತಲಿ   ೧೨

ಎಡಬಲದಿ ಬೊಬ್ಬಿಡುತಲಿ ಸುರಗಣವು ನಡೆದು ಮುಂದಕೆ ಸಾಗಲು
ಹೊಡೆವ ತಮ್ಮಟ ಭೇರಿ ಕಹಳೆ ಗದ್ದಣೆಯಿಂದ ನಡೆದ ಕೈಲಾಸಪುರಕೆ
ಒಡೆಯ ಪರಶಿವನೆ ನೋಡು ಮಗ ಬರುವ ಸಡಗರದ ಸಂಭ್ರಮಗಳ
ದಡಿಗ ದಾನ್ವರ ಗಂಡನೆಂದೆಂಬ ಕಾಳೆಗಳ ಹಿಡಿದು ಸಾರಿಸಿಕೊಳುತಲಿ   ೧೩

ಹರಹರ ಶಿವನೆ ನೋಡು ಮಗ ಬರುವ ಭೂರಿವಾದ್ಯಗಳಿಂದಲಿ
ಮೀರಿದ ದಕ್ಷನ ಸೆರೆಯ ತಗರುತಹೆನೆಂದು ದೂರ ಮಾಡುತ ವಿಧಿಗಳು
ಮೂರು ಮೂರ್ತಿಗಳಿಗೆಲ್ಲ ಮುಕ್ತಿಗಳ ತೋರಿ ರಕ್ಷಿಪನೆ ಜಯತು
ವೀರಶರಭವತಾರ ಗದ್ದಲಿಸಿ ನಡೆದಲ್ಲಿ ಆರೆರಡು ಸಂಧಿ ಶರಣು  ೧೪

ಸಂದಿ ೮ ಕ್ಕಂ ಕಂದ ೧, ವಚನ ೧೩, ಪದನು ೭೨ ಉಬಯಕ್ಕಂ ೭೮೯ ಕ್ಕಂ ಮಂಗಳ ಮಹಾ ಶ್ರೀ ಶ್ರೀ