ವಚನ :

ನನ್ನ ಮಗನ ಅರ್ತಿ ಕೇಳು ಗುರುರಾಯ | ದೊಡ್ಡ
ಅನ್ಯ ದೈವ ಕೋಲಾಹಲ ಗುರುರಾಯ
ಬೆನ್ನ ಸೀಳಿ ಕರುಳನುಗಿವ ಗುರುರಾಯ| ಸಂ
ಪನ್ನ ತೆರಳಿ ಬರುತಲವನೆ ಗುರುರಾಯ      ೧

ಮರುಳುತಂಡ ಕೂಡಕೊಂಡು ಗುರುರಾಯ | ದೊಡ್ಡ
ದುರುಳ ರಾಕ್ಷಸರನು ಸೀಳಿ ಗುರುರಾಯ
ಮರಳಿ ದಂಡ ಕೂಡಿಕೊಂಡು ಗುರುರಾಯ | ಮುಂದೆ
ಸರಬಾಣಗಳು ಸರ್ರನೆ ಜೈಗಳು ಗುರುರಾಯ ೨

ಶಾಕಿನಿ ಡಾಕಿನಿಯರು ಗುರುರಾಯ | ಕೂಡಿ
ನೂಕುನುಗ್ಗು ದಂಡು ಬರಲು ಗುರುರಾಯ
ವಾಕುಪತಿಗೆ ಹೇಳಲನೆ ಗುರುರಾಯ | ಮಗನ
ಆಕಾರದ ಚೆಲ್ವಿಕೆಗಳು ಗುರುರಾಯ  ೩

ಗಮನ ಹಾವಿಗೆಯ ಮೆಟ್ಟಿ ಗುರುರಾಯ | ಮೂರು
ಕ್ರಮದಿ ದಂಡು ಕೂಡಿಬರಲು ಗುರುರಾಯ
ಕಮಲಜರು ಉಗ್ಗಡಿಸುತಲಿ ಗುರುರಾಯ | ಕಾಲ
ಯಮನ ಎದೆದಲ್ಲಣಾಗೆ ಬಂದ ಗುರುರಾಯ  ೪

ಬತ್ತೀಸಾಯುಧಗಳ ಕರ್ತ ಗುರುರಾಯ | ಬಹಳ
ಸತ್ತಿಗೆಗಳ ಸಾಲ ನೋಡು ಗುರುರಾಯ
ಮರ್ತ್ಯಲೋಕದೊಳಗೆ ಕೇಳು ಗುರುರಾಯ | ನನ್ನ
ಪುತ್ರಗಿನ್ನು ಸರಿಯುಂಟೆ ಗುರುರಾಯ         ೫

ದಿಗಿಲುಗುಟ್ಟಿ ನಡೆದುಬರಲು ಗುರುರಾಯ | ದೊಡ್ಡ
ಭುಗಿಲು ಸುರರ ಎದೆಗಳನ್ನು ಗುರುರಾಯ
ಹಗಲು ಪಂಜುವೆಳಗಿನಿಂದ ಗುರುರಾಯ | ನನ್ನ
ಮಗನ ಅರ್ತಿಗಳನು ನೋಡು ಗುರುರಾಯ ೬

ಹೊಕ್ಕುಬರಲು ಕೈಲಾಸಗಳ ಗುರುರಾಯ | ಸುರರು
ಇಕ್ಕೆಲದಲ್ಲಿ ಉಗ್ಗಡಿಸುತ ಗುರುರಾಯ
ದಕ್ಷನಳಿದು ರಕ್ಷಿಸಿದಿರಿ ಗುರುರಾಯ | ಎಂದು
ದಕ್ಕಣಿಸಿತು ವೇದಶಾಸ್ತ್ರ ಗುರುರಾಯ        ೭

ಪ್ರಳಯವಾಗಿ ಹೋಗುವಂತೆ ಗುರುರಾಯ | ಪಟ್ಟಣ
ಮಳಿಗೆ ಮಾಳಿಗೆಗಳನೇರಿ ಗುರುರಾಯ
ಉಳುಹಿಕೊಂಡೆ ಕೈಲಾಸವನು ಗುರುರಾಯ | ಕೋಯೆಂದು
ತಿಳಿದು ನೋಡಿದಾರು ಮಗನ ಗುರುರಾಯ ೮

ಇಂತ ನಗನನಾರು ಪಡೆದ ಗುರುರಾಯ | ಎಂದು
ಸಂತೆ ಪೇಟೆ ಬಾಜಾರಗಳು ಗುರುರಾಯ
ಕಾಂತೆ ಕಮಲಲೋಚನೆಯರು ಗುರುರಾಯ | ಮಗನ
ಪಂಥಬಿರುದ ಕೊಂಡಾಡುತಲಿ ಗುರುರಾಯ  ೯

ವೀರಶರಭ ಸಾರಿಹೋಗಿ ಗುರುರಾಯ | ತನ್ನ
ಭಾರಿ ದಂಡ ಕೂಡಿಬರಲು ಗುರುರಾಯ
ಭೇರಿಶಂಖ ಭೋರುಗಾಳೆ ಗುರುರಾಯ | ನಿಮ್ಮ
ನಾರಾಯಣರು ಕೈಮುಗಿದವರೆ ಗುರುರಾಯ ೧೦

ನಾರಸಿಂಹನೊಡೆಯ ಬಂದ ಗುರುರಾಯ | ದಕ್ಷ
ಧ್ವರ ಕೆಡಿಸಿದಭವ ಬಂದ ಗುರುರಾಯ
ಶಾರದೆಯ ಮೂಗನರಿದ ಗುರುರಾಯ | ಎಂದು
ಜೋರುಗಹಳೆ ಸಾರುತಿವೆ ಕೋ ಗುರುರಾಯ ೧೧

ಅಸುರ ಸಂಹಾರಗಳ ಮಾಡಿ ಗುರುರಾಯ | ದೊಡ್ಡ
ಬಿಸಿಯಗಣ್ಣಿನ ಶರಭ ಬಂದ ಗುರುರಾಯ
ದೆಸೆಗೆ ಮಾನ್ಯರೊಡೆಯ ಬಂದ ಗುರುರಾಯ | ನನ್ನ
ಸಿಸುವು ನಡೆದು ಮನೆಗೆ ಬಂದ ಗುರುರಾಯ ೧೨

ಬಂದು ನಿಮ್ಮ ಪಾದಕೆರಗಿ ಗುರುರಾಯ | ಬಲದಿ
ನಿಂದು ನೋಡುತಿರಲು ನಿಮ್ಮ ಗುರುರಾಯ
ಹಿಂದೆ ದಕ್ಷನಡ್ದಬಿದ್ದು ಗುರುರಾಯ | ತ್ರಾಹಿ
ಎಂದು ನಿಮ್ಮ ಪಾದಕೆರಗೆ ಗುರುರಾಯ       ೧೩

ಸಂಗತ್ಯ :

ತ್ರಾಹಿ ಶರಣ ರಕ್ಷಮಣಿಯೆ ತ್ರಿಪುರಾಂತಕ
ತ್ರಾಹಿ ಮೂಲಾತ್ಮ ಓಂಕಾರಿ
ತ್ರಾಹಿ ತಾರಕ ಬ್ರಹ್ಮಸ್ವಯಂ ಜ್ಯೋತಿನಾ ಸರ್ವ
ದ್ರೋಹಿಯೆ ಜಲ್ಮ ಜಲ್ಮದಲಿ                   ೧

ಪಶುಪತಿ ಪರಶಿವ ಎಸೆವ ನಾಟಕಧಾರಿ
ದಶಭವದಲಿ ಬಂದ ಹರಿಯು
ಬಿಸುರುಹ ಚರಣವನೆಸೆದು ಕಾಣದೆ ಹೋದ
ಕಸಮಾನವ ನಾನರಿವೆನೆ  ೨

ಹರಿಯಜರೋದಿಸಿ ನಿಮ್ಮ ಪಾದವ ಕಾಣ್ದ
ನರಗುರಿ ಪಶುಪ್ರಾಣಿ ನಾನು
ಅರಿಯದೆ ಬಲ್ಲೆನೆ ನಿಮ್ಮ ಶ್ರೀಚರಣವ
ದೊರೆರಾಯ ಪ್ರಭುವೆ ಪಾಲಿಪುದು   ೩

ಚರ್ಮವ ಕಚ್ಚಿದ ದುರ್ಮರಣ ಶುನಿಯಂತೆ
ನಿರ್ಮಳ ಹೃದಯ ರತ್ನವನು
ವರ್ಮವನರಿಯದೆ ಧರ್ಮ ಕಾನನದಲ್ಲಿ
ಕರ್ಮಕೀಡಾದೆ ಧರ್ಮಗುರುವೆ      ೪

ಮಲದೊಳಗಣ ಹುಳ ಲಲನೆಯಮೃತವುಂಡು
ಮಲಗಬಲ್ಲುದೆ ಶಯನದಲಿ
ಹಲವು ಜಲ್ಮದಿ ಬಂದ ಮಲದೇಹಿ ಅರಿವನೆ
ಕಲೆಯ ಬ್ರಹ್ಮದ ನಿಜರೂಪ ೫

ನಾಗಶಯನಾರ್ಚಿತ ಪಾದಸೇವೆಯ ಕೊಂಡ
ಭೋಗಿಯೆ ಗಿರಿಜೆವಲ್ಲಭನೆ
ಕೂಗುವ ವೇದಶಾಸ್ತ್ರಕೆ ದೂರನೆ ಭವ
ರೋಗ ವೈದ್ಯನೆ ಜಯಜಯತು     ೬

ಸ್ತುತಿಸಲು ಪರಶಿವ ಅತಿ ನಸುನಗುತಲಿ
ಗತಿಯೇನು ಬೇಡುಬೇಡೆನಲು
ಸತಿಪತಿಗಳು ಬಂದು ಶ್ರುತಿಪಾದಕೆರಗಲು
ಗತಿಯೇನ ಬೇಡುವೆ ಗುರುವೆ        ೭

ತಾಮಸ ತಲೆಗೇರಿ ಹೋಮವನಿಕ್ಕಿದೆ
ಭೂಮಿಯಾಕಾಶವನಾರ್ಭಡಿಸೆ
ಕಾಮವೈರಿಯೆ ನಿಮ್ಮ ಆ ಮಹಾಪಣಿಯೊಳ್ ನಿ
ಸ್ಸೀಮ ಶರಭವತಾರಾ     ೮

ಪುಟ್ಟಿಯಾರ್ಭಡಿಸುತ ಕುಟ್ಟಿದ ತಲೆಯನು
ಸುಟ್ಟುದನೇನ ಪೇಳುವೆನು
ಮೋಟರುಂಡವ ಕಂಡು ದಿಟ್ಟಿಸಿ ಕುರಿದಲೆ
ಇಟ್ಟು ರಕ್ಷಿಸಿದ ಕೇಳಭವ   ೯

ಇನ್ನೊಂದು ಗತಿಮತಿ ನನಗುಂಟೆ ಗುರುರಾಯ
ಚೆನ್ನಶರಭನ ಶ್ರೀಚರಣ
ಅನ್ಯೋನ್ಯವಿಲ್ಲದೆ ಪೂಜೆಯುಕ್ತಿಗಳೆಂದು
ಬಿನ್ನೈಸಲು ಪರಶಿವನು     ೧೦

ಮನದಭಯಕೆ ನಿಂತು ತನುಜನನಪ್ಪಿಕೊಂಡು
ವನಿತೆಯ ಕೈಗಿತ್ತ ಶಿವನು
ಘನ ಭೀಮರತಿ ಗಂಗೆ ಮನದೊಳುತ್ಸವಗೊಂಡು
ತನುಜನ ಬಿಗಿದಪ್ಪಿಕೊಳುತ         ೧೧

ಕಂದನೆ ಬಾ ನನ್ನ ಮಂದಿರ ಚಂದ್ರನೆ
ಅಂದಳದರಸ ಬಾರೆನುತ
ಕುಂದಳಗೆಲಸದ ಚಂದಾದ ಗಿಳಿ ನನ್ನ
ತಂದೆ ಬಾರೆಂದು ಮುಂಡಾಡೆ       ೧೨

ಬಾಲಚಂದ್ರನೆ ಬಾರೊ ಮೂಲೋಕದರಸನೆ
ಪಾಲುಸಮುದ್ರದ ತನುಜ
ಲೋಲಚೆನ್ನಿಗ ಬಾರೊ ಆಲಯದರಸೆಂದು
ಲಾಲಿಸಿ ನೋಡಿ ಕೊಂಡಾಡೆ         ೧೩

ಕರ್ತವಲ್ಲಭ ನನ್ನ ಪುತ್ರನುತ್ಸಹಗಳ
ಅರ್ತಿಗಳನು ನೋಡು ಶಿವನೆ
ಮುತ್ತುಮಾಣಿಕ ನವರತ್ನದಾರತಿಗಳ
ಎತ್ತಿ ಬೀರುತ ಸಂವಾದಿಗಳ         ೧೪

ಜಂಗುಳಿದೈವದ ಗಂಡ ಶಿವನ ಪಾ
ದಾಂಘ್ರಿ ಕಮಲದೊಳಗಿರಿಸಿ
ರಂಗುದುಟಿಯರೆಲ್ಲ ಶೃಂಗರಿಸಿ ಎತ್ತುತ
ಮಂಗಳಾರತಿಗಳ ಕೇಳಭವ         ೧೫

ಮಂಗಳಾರತಿ ಪದನು :

ಮಂಗಳಾರತಿಗಳನೆತ್ತಿರೇ
ಮುಕ್ತಿ ಗಮಗೆ ಪಾರ್ವತಿ ಪುತ್ರನಿಗೆ   ಪಲ್ಲ

ರುದ್ರನ ಉರಿಗಣ್ಣಿಂದ ಹುಟ್ಟಿದ
ವೀರಭದ್ರನು ಶರಭವತಾರನಿಗೆ
ಕ್ಷುದ್ರ ದೈವಗಂಡ ಚಿದ್ರೂಪ ದೇವಗೆ
ಭದ್ರಕಾಳಮ್ಮನರಸನಿಗೆ    ೧

ಉರಿಗಣ್ಣ ಬೆವರಿಂದ ಪುಟ್ಟಿದ ರುದ್ರಂಗೆ
ನರಹರಿಯನು ಸಂಹರಿಸಿದಂಗೆ
ಮರಳಿ ಪ್ರತಿಷ್ಠೆಯ ಮಾಡಿ ವಂದಿಸಿಕೊಂಬ
ತರುಳೆ ಭಾಗೀರಥಿ ಪುತ್ರನಿಗೆ        ೨

ಕಾಮನ ವೈರಿಯ ಮಗ ವೀರಭದ್ರಗೆ
ಗ್ರಾಮ ಮೂರನು ಸುಟ್ಟ ಪುತ್ರನಿಗೆ
ಹೇಮದ ಬೊಂಬೆಗಳಾರತಿ ಪಿಡಿಕೊಂಡು
ಭೀಮರತಿ ಶಿವನಪುತ್ರನಿಗೆ ೩

ಮಾಣಿಕದಾರತಿಯೆತ್ತಿ ನಿವಾಳಿಸಿ
ಪ್ರಾಣಪದಕ ಬ್ರಹ್ಮನಿಗೆ
ವಾಣಿಯು ಹರಿಕೃಷ್ಣವೇಣಿಯರೆಲ್ಲರು
ಜಾಣ ಚೆನ್ನಿಗ ಶರಭಯ್ಯನಿಗೆ         ೪

ಕದನ ಪ್ರಚಂಡಗೆ ಕಲಿವೀರಭದ್ರಗೆ
ವಿಧಿಯ ಮೃತ್ಯುವಿನೆದೆದಲ್ಲಣಗೆ
ಅದರು ಮಾಣಿಕ ನವರತ್ನಹಾರವನಿತ್ತ
ಚದುರು ಚೆನ್ನಿಗ ಶರಭಯ್ಯನಿಗೆ      ೫

ಹಿಂಡು ದೈವದ ಗಂಡ ಖಂಡೆ ಸಾಹಸನಿಗೆ
ಚಂಡಿಭೂತಗಳೆದೆದಲ್ಲಣಗೆ
ಕಂಡಿಸಿ ಯಮಭಾದೆಯ ಪರಿಹರಿಪಂಗೆ
ದುಂಡುದೋಳಿಲನ ಜಾಣ ಚದುರೆಯರೆಲ್ಲ    ೬

ಪರವಾದಿ ದಕ್ಷನ ಶಿರವನರಿದು ಮತ್ತೆ
ಕುರಿದಲೆಯನು ಇತ್ತು ರಕ್ಷಿಪಂಗೆ
ಹರಿಯಜ ಸುರ ಶಿರಮಾಲೆಯ ಧರಿಸಿದ
ಶರಣ ಭರಣ ಕಲ್ಪವೃಕ್ಷನಿಗೆ ೭

ಬೆಳಗುತ ಮಗನನು ಒಳಯಕೆ ಕರದೊಯ್ದು
ಸೆಳೆಮಂಚದ ಮೇಲೆ ಕುಳ್ಳಿರಿಸಿ
ದಳದಳನೆ ಹೂವಿನ ಮಳೆಯನು ಸುರಿವುತ
ನಳಿನ ಶ್ರೀಪಾದಕೆರಗುತಲಿ ೮

ಮುರವೈರಿ ಪೂಜಿತ ಪರಬ್ರಹ್ಮ ಶಿವ ಕೇಳು
ಶರಭವತಾರನ ಕಥೆಗಳನು
ಹರಹರ ಗುರುಸಂಗಮೇಶ್ವರ ನಿಮ್ಮಯ
ಚರಣಕಮಲ ಪೂಜೆ ಸ್ಥಿರವೆಮಗೆ     ೯

ವಚನ :

ಬಣ್ಣದಾರತಿಗಳನೆತ್ತಿ ಗುರುರಾಯ | ಜಗದ
ಕಣ್ಣದೃಷ್ಟಿ ಮುರಿವೆ ನಾನು ಗುರುರಾಯ
ಹೆಣ್ಣುಸೊಸೆಯು ಭದ್ರಕಾಳಿ ಗುರುರಾಯ | ನನ್ನ
ಪುಣ್ಯ ಮಗನ ಬಯಕೆ ಬಂತು ಗುರುರಾಯ   ೧

ಇಂತು ಮಗನ ಸಂಭ್ರಮದಲ್ಲಿ ಗುರುರಾಯ | ನನ್ನ
ಭ್ರಾಂತುಭ್ರಮೆಯು ದಕ್ಕಿತಿನ್ನು ಗುರುರಾಯ
ಚಿಂತಾಯಕನೆ ಜಯತು ಜಯತು ಗುರುರಾಯ | ಜಗದ
ಸಂತೋಷವೆ ಜಯತು ಜಯತು ಗುರುರಾಯ                   ೨

ಚೆನ್ನಬಸವೇಶ್ವರನೆ ಕೇಳು ಗುರುರಾಯ | ಗಂಗೆ
ತನ್ನ ವಶದಿ ನುಡಿದಳಾಗ ಬಸವಯ್ಯ
ಭಿನ್ನಭಾವ ಭ್ರಮೆಯ ಬಿಡಿಸಿ ಬಸವಯ್ಯ | ಏಕ
ವನ್ನು ಮಾಡಿ ಕೂಡಿಸಿದನು ಬಸವಯ್ಯ        ೩

ರಂಗುರತ್ನ ಕೇಳುಕೇಳು ಎಲೆ ಗಂಗೆ | ನಿನ್ನ
ಹಿಂಗಲರಿಯ ಹೆತ್ತ ಕುಮಾರನೆಲೆ ಗಂಗೆ
ಅಂಗ ಲಿಂಗ ಸಂಗಪ್ರಾಣಿ  ಎಲೆ ಗಂಗೆ | ಶಾಂತಿ
ಕಂಗಳಿಂದ ಜನಿಸಿ ಬಂದ ಎಲೆ ಗಂಗೆ                   ೪

ಕೇಳುಕೇಳು ನವಮಾಣಿಕವೆ ಎಲೆ ಗಂಗೆ | ಈ
ರೇಳು ಲೋಕ ನಿನ್ನ ಮಕ್ಕಳೆಲೆ ಗಂಗೆ
ಗಾಳಿಪ್ರಾಣ ಬ್ಯಾರೆ ಇಹುದೇನೆಲೆ ಗಂಗೆ | ನನ್ನ
ಕೋಳುಕೊಂಡಲು ಗಿರಿಜೆದೇವಿ ಎಲೆ ಗಮಗೆ  ೫

ಚಂದ್ರಕಳೆಗೆ ಭಿನ್ನವುಂಟೆ ಎಲೆ ಗಂಗೆ | ಪೂರ್ವ
ಒಂದೆ ರೂಪು ಶರಿರ ಬೇರೆ ಎಲೆ ಗಂಗೆ
ಎಂದು ನಿಮಗೆ ಭೇದವಿಲ್ಲ ಎಲೆ ಗಂಗೆ | ನನ್ನ
ಕಂದುಗೊರಳ ಶಿವನ ಮಡದಿ ಎಲೆ ಗಂಗೆ     ೬

ಪ್ರಕಟು ಪಾರುಪತ್ಯಗಳನು ಎಲೆ ಗಂಗೆ | ನಿನ್ನ
ಮುಖದೊಳಿನ್ನು ನಡೆಸುವೆನು ಎಲೆ ಗಂಗೆ
ಮುಕ್ತಿಬೀಜ ನಡೆದು ಹೋಗಿ ಎಲೆ ಗಂಗೆ | ನಿನಗೆ
ಸುಕೃತ ಉಂಟು ಗಿರಿಜೆಗಂಗೆ ಎಲೆ ಗಂಗೆ     ೭

ನಿನ್ನ ಅರ್ತಿ ಅವಳ ಅರ್ತಿ ಎಲೆ ಗಂಗೆ | ನಮ್ಮ
ಚನ್ನಶರಭ ನಿನ್ನ ಮಗನು ಎಲೆ ಗಂಗೆ
ಕನ್ಯೆಗೌರಿ ಪ್ರಾಣ ನಿನಗೆ ಎಲೆ ಗಂಗೆ | ನನ್ನ
ಹೊನ್ನಪುತ್ಥಳಿಯ ಬೊಂಬೆ ಎಲೆ ಗಂಗೆ        ೮

ಇಂದುಧರನ ನುಡಿಯ ಕೇಳಿ ಗುರುರಾಯ | ಇಳಿದು
ಬಂದು ಪಾದಕೆರಗಿದಾಳು ಗುರುರಾಯ
ನೊಂದುಬೆಂದು ಜರೆದು ನುಡಿದೆ ಅಕ್ಕಯ್ಯ | ಹೀ
ಗೆಂದು ಪಾದಕೆರಗಿದಳೊ ಗುರುರಾಯ        ೯

ಬಾಲನುಡಿಯ ಜನದೊಳಿಡದೆ ಅಕ್ಕಯ್ಯ | ನನ್ನ
ಹಾಲ ಸಮುದ್ರದ ಗಿರಿಜೆ ಅಕ್ಕಯ್ಯ
ಶೂಲಧರನ ಶಿವನ ಮಡದಿ ಅಕ್ಕಯ್ಯ | ನನ್ನ
ಪಾಲಿಸಿದಿರಿ ಪರಮೇಶ್ವರಿಯೆ ಅಕ್ಕಯ್ಯ        ೧೦

ನಾನು ನೀನೆ ನೀನು ನಾನೆ ಅಕ್ಕಯ್ಯ | ಮುಕ್ತಿ
ಜ್ಞಾನಕೊಂದು ದಾರಿನೋಡು ಅಕ್ಕಯ್ಯ
ಹೀನಮಾಡಿ ಬಿನ್ನೈಸುವಿರಿ ಅಕ್ಕಯ್ಯ | ಹಂದಿ
ಶ್ವಾನ ಯೋನಿಜನ್ಮ ನೋಡು ಅಕ್ಕಯ್ಯ       ೧೧

ಕ್ರಿಯೆಶಕ್ತಿ ನೀನು ಕಾಣೆ ಅಕ್ಕಯ್ಯ | ನಾನು
ವೈಯೊಳಗಣ ಜ್ಞಾನಶಕ್ತಿ ಅಕ್ಕಯ್ಯ
ಕ್ರಿಯೆಜ್ಞಾನ ಏಕವಿನ್ನು ಅಕ್ಕಯ್ಯ | ಶಿವನ
ಲೀಲೆ ಪದವಿ ಮುಕತಿ ನಮಗೆ ಅಕ್ಕಯ್ಯ       ೧೨

ಗಿರಿಜೆಗಂಗೆ ಬೇರೆಂಬವರಿಗಕ್ಕಯ್ಯ  | ಮುಂದೆ
ವರಹಜಲ್ಮ ತಪ್ಪದಿನ್ನು ಅಕ್ಕಯ್ಯ
ಹರನ ಕಪಟ ನಟನಾಟಕಾವೆ ಅಕ್ಕಯ್ಯ | ನಿನ್ನ
ಚರಣದೊಳಗೆ ಬೆರೆಸಿಕೊಳ್ಳಿ ಅಕ್ಕಯ್ಯ         ೧೩

ಪಿಡಿದು ಎತ್ತಿ ತಕ್ಕೈಸುತಲಿ ಎಲೆ ತಂಗಿ | ನಮ್ಮ
ಪಡೆದ ತಾಯಿ ಒಬ್ಬಳಿನ್ನು ಎಲೆ ತಂಗಿ
ನಡೆಯು ನುಡಿಯು ಒಂದಾದಂತೆ ಎಲೆ ತಂಗಿ | ನನ್ನ
ಒಡಲು ಭಾಗೀರಥಿಯೆ ನೀನು ಎಲೆ ತಂಗಿ    ೧೪

ಎತ್ತಿಕೊಂಡು ತಕ್ಕೈಸುತಲಿ ಎಲೆ ತಂಗಿ | ಶಿವನ
ನೆತ್ತಿ ಮಾಣಿಕದ ಬೊಂಬೆ ಎಲೆ ತಂಗಿ
ಹೆತ್ತಮಗನ ತಕ್ಕೊಂಡು ನೀನೆ ಎಲೆ ತಂಗಿ | ದೇವ
ಮರ್ತ್ಯಲೋಕಗಳ ಪಾಲಿಸು ಎಲೆ ತಂಗಿ      ೧೫

ಅಕ್ಕತಂಗಿಯರೇಕವಾಗಿ ಗುರುರಾಯ | ಜಗದ
ಮುಕ್ಕಣ್ಣೇಶಗೆರಗಿದಾರು ಗುರುರಾಯ
ಸಿಕ್ಕುತೊಡಕು ಭೇದವಿಲ್ಲ ಗುರುರಾಯ | ಶಿವಗೆ
ಸಕ್ಕರೆಯ ಗುಟುಕಾದರೋ ಗುರುರಾಯ      ೧೬

ಜಗದ ಕಪಟ ನಟನಾಟಕನೆ ಗುರುರಾಯ | ನೋಡಿ
ಮುಗುಳು ನಗೆಯ ನಗುತಲಿದ್ದ ಗುರುರಾಯ
ಜಗದ ಜಗಳ ಕಥನ ತಾಳ್ದಳೆಂದು ಗುರುರಾಯ | ತನ್ನ
ಅಗಜೆಯಪ್ಪಿ ಕೊಂಡಾಡಿದನು ಗುರುರಾಯ   ೧೭

ಸ್ತುತಿಸಲಳವೆ ನಿಮ್ಮ ಘನವನೆಲೆ ಗೌರಿ | ನನ್ನ
ರತುನ ಮಾಣಿಕದ ಹರಳೆ ಎಲೆ ಗೌರಿ
ಮತಿಗೆ ಮಾತೆ ಮಂತ್ರಜಾತೆ ಎಲೆ ಗೌರಿ | ಚಿಕ್ಕ
ಸತಿಯ ನೀನು ನಡೆಸಿಕೊಳ್ಳೆ ಎಲೆ ಗೌರಿ      ೧೮

ಅಪ್ಪಿಕೊಳುತ ಕಳುಹಿಕೊಡಲು ಗುರುರಾಯ | ತನ್ನ
ಕರ್ಪುರದ ಜ್ಯೋತಿ ಮನೆಗೆ ಗುರುರಾಯ
ಪುಷ್ಪಮಳೆಯ ಕರಸುತಾಗ ಗುರುರಾಯ | ಮನೆಯೊ
ಳೊಪ್ಪಿ ಸುಖದೊಳಿರ್ದರಾಗ ಗುರುರಾಯ    ೧೯

ಗಿರಿಜೆಗಂಗೆ ವೀರಗಣಪ ಗುರುರಾಯ | ಮುಕ್ತಿ
ಅರಮನೆಯನು ಹೊಕ್ಕರಾಗ ಗುರುರಾಯ
ಶರಣ ಭಕ್ತಗಣ ತಿಂತಿಣಿಯು ಗುರುರಾಯ | ಅವರ
ಪರಿಣಾಮಕ್ಕೆ ಜಯತು ಜಯತು ಗುರುರಾಯ          ೨೦

ಚಾಗು ಭಲರೆ ಉಘೆ ಎಂದೆನುತ ಗುರುರಾಯ | ದಿವ್ಯ
ಯೋಗಿ ಮುನಿಗಳೊಡೆಯ ಶಿವನೆ ಗುರುರಾಯ
ಭೋಗಿ ಗಿರಿಜೆ ಗಂಗೆಯರನು ಗುರುರಾಯ | ಮುಕ್ತಿ
ಯೋಗ ಮನೆಯೊಳಿಟ್ಟು ಮೆರೆದ ಗುರುರಾಯ          ೨೧

ವರಮಾಣಿಕದ ಸಿಂಹಾಸನದಿ ಗುರುರಾಯ | ನಮ್ಮ
ಗುರುವು ಸಂಗಮೇಶ್ವರನಿರಲು ಗುರುರಾಯ
ನರರು ಸುರರು ಹರಿಯಜರು ಗುರುರಾಯ | ಶಿವಗೆ
ಸುರಿದರಿನ್ನು ಪೂಮಳೆಗಳನು ಗುರುರಾಯ   ೨೨

ಅಕ್ಷಿಮೂರುಳ್ಳ ಭವಭಕ್ತಿ ಗುರುರಾಯ | ಜಗವ
ರಕ್ಷಿಸುತಲಿ ಸುಖದೊಳಿರಲು ಗುರುರಾಯ
ಕುಕ್ಷಿಭರಿತ ಜಗದ ಮಂತ್ರಿ ಬಸವಯ್ಯ | ನನ್ನ
ರಕ್ಷಿಸುವ ಧರ್ಮಗುರುವೆ ಗುರುರಾಯ        ೨೩

ವಚನಪದದಿ ಸಂಗತ್ಯದಲಿ ಬಸವಯ್ಯ | ಗುರುವು
ರಚಿಸಿ ಪೇಳ್ದ ಶ್ರುತಿ ಸಂಗತಿಯ ಬಸವಯ್ಯ
ಶುಚಿಯ ಶರಣ ಭಕ್ತ ಜನಕೆ ಬಸವಯ್ಯ | ನಿಮ್ಮ
ರಚನೆ ಪ್ರಭೆಗೆ ಶರಣು ಜಯತು ಬಸವಯ್ಯ   ೨೪

ಹರಿವ ಹಳ್ಳಕೊಳ್ಳ ನೀರು ಬಸವಯ್ಯ | ದೊಡ್ಡ
ಸರದಿಯೊಳಗೆ ಬೆರಸಿದಂತೆ ಬಸವಯ್ಯ
ಅರವುಮರವು ಪಾಪಪುಣ್ಯ ಬಸವಯ್ಯ | ನಿಮ್ಮ
ಕರುಣ ಶರಧಿಯೊಳಗೆ ಐಕ್ಯ ಬಸವಯ್ಯ       ೨೫

ಬಾಲಕೃತಿಗೆ ಬಸವಣ್ಣನು ಗುರುರಾಯ | ಹಣ್ಣು
ಹಾಲು ಮಧುರದಂತೆ ಗುರುರಾಯ
ಅಲ್ಲಿ ಸುಖಿಸಿ ಸತಿಪತಿಗಳು ಗುರುರಾಯ | ಮುಕ್ತಿ
ಆಲಯದೊಳು ಸುಖದೊಳಿರಲು ಗುರುರಾಯ ೨೬

ಕೇಳಿ ಕೇಳಿ ನುತಿಸಿದವರ್ಗೆ ಗುರುರಾಯ | ಕರ್ಮ
ಗಾಳಿಗಿಟ್ಟ ಸೊಡರಿನಂತೆ ಗುರುರಾಯ
ಏಳೇಳು ಜಲ್ಮಕರ್ಮಗಳನು ಗುರುರಾಯ | ಕಳೆದು
ಬಳಲೋಚನ ರಕ್ಷಿಸುವನು ಗುರುರಾಯ      ೨೭

ಗಂಗೆಗೌರಿ ರಮಣ ಜಯತು ಗುರುರಾಯ | ನಮ್ಮ
ತುಂಗಭದ್ರಿಯರಸ ಜಯತು ಗುರುರಾಯ
ಅಂಗಜಹರನೆ ಜಯತು ಜಯತು ಗುರುರಾಯ | ಗುರುವೆ
ಸಂಗಮೇಶ ಜಯತು ಜಯತು ಗುರುರಾಯ  ೨೮

ಪದನು :

ಶರಣು ಶರಣಾರ್ಥಿ ಗುರುವೆ ನೀನೆನ್ನ ಮರಣವ ಪರಿಹರಿಪನೆ
ಧಾರುಣಿ ಬ್ರಹ್ಮಾಂಡಗಳ ಸೂತ್ರ ಪಿಡಿದಾಡಿಪನೆ ಶರಣು ಜನ ರಕ್ಷಾಮಣಿಯೆ        ಪಲ್ಲ

ಆಡಬಲ್ಲವೆ ಕಾಷ್ಟದ ಬೊಂಬೆಗಳು ಕಾಡಿಬೇಡುವ ಗತಿಗಳ
ಹಾಡಿಹರಸುವ ನೋಟಬೇಟಕೂಟಗಳೆಂಬನಾಡದೆ ನೀನೀಗ ವೇಷವ
ಹೂಡಿ ಸೂತ್ರಗಳ ಹಣ್ಣಿ ಬೊಂಬೆಗಳನಾಡಿಸಿದರಾಡುತಿಹೆವು
ರೂಢಿಗೀಶ್ವರ ಗುರುವೆ ನಿಮ್ಮ ಚೈತನ್ಯದಿಂದಾಡುತಿಹುದಖಿಳ ಲೋಕ     ೧

ಬಣ್ಣಬಣ್ಣದ ಬೊಂಬೆಯಾ ಗುರುರಾಯ ಕಣ್ಣುಮನಜಿಹ್ವೆಗಳಿಗೆ
ಪುಣ್ಯಪಾಪಗಳೆಂಬ ಬಲೆಯ ಜವೆಗಳ ಹೂಡಿ ಹಣ್ಣಿಸಿದರಾಡುತಿಹೆವು
ಹೆಣ್ಣುಬಾಲೆಯ ಯೌವನ ಸ್ತ್ರೀಫಲಗಳನುಣ್ಣಿ ಸುಣ್ಣಿಸಿ ನೋಡುತ
ಕಣ್ಣುಮೂರುಳ್ಳ ಕರುಣಾಂಬುಧಿಯೆ ಪರಶಿವನೆ ಪುಣ್ಯಪಾಪವು ನಿಮ್ಮವು   ೨

ಯತಿಮನದ ಹೃತ್ಕಮಲನೆ ಗುರುರಾಯ ದ್ಯುತಿಗಿರಿಜೆ ಸಂವಾದದ
ಕಥನ ಬ್ರಹ್ಮಾಂಡ ಪೌರಾಣದೊಳು ಸಾರಿದವು ಶ್ರುತಿವೇದಶಾಸ್ತ್ರಗಳಲಿ
ಸಿತಕಂಠ ಶಿವಗಂಗೆಯ ಸ್ಥಲದೊಳಗೆ ಯತಿ ಮಹಾಮುನಿರಾಯಗೆ
ಸತಿಯರಿಬ್ಬರ ಜಗಳ ಸಂವಾದಗಳ ಕೇಳಿ ನುತಿಸಿ ಪೇಳಿದರಾರೆನೆ        ೩

ಧರೆಗೆ ಕೈಲಾಸವೆನಿಪ ಶಿವಗಂಗೆ ನವರತ್ನ ಖಚಿತವಾದ
ಹಿರಿಯ ಸಿಂಹಾಸನದ ಗುರುಸಂಗಮೇಶ್ವರನ ಕರಕಮಲದಲಿ ಜನಿಸಿದ
ಗಿರಿಜೆಗಂಗೆಯ ಜಗಳವ ಕೇಳಲೆಂದೊರೆದೆ ಶಿವಶರಣ ಜನಕೆ
ಗುರುಚರಣಕಮಲ ಸೇವಾನುಸೇವಕನಾದ ತರುಳ ಚರಪತಿ ಪೇಳ್ದನು    ೪

ಜಯಜಯತು ಗುರುರಾಯ ನೀನೆನ್ನ ಭವಭವ ಪರಿಹರಿಪನೆ
ನಯನ ಪಂಚೇಂದ್ರಿಯಗಳ ಕರ್ಮಾದಿ ದ್ರೋಹಿಗೆ ಭಯದ ಭೀತಿಯನಳಿಪನೆ
ಸ್ವಯವಾಗಿ ಕರಸ್ಥಲದಲಿ ನಿಲಿಸೆನ್ನ ಮಾಯಪಾಶವ ಖಂಡಿಸಿ
ದಯಕರುಣ ಕೃಪೆಯಿಟ್ಟು ರಕ್ಷಿಸುವ ಗುರುರಾಯ ಜಯಜಯತು ಗುರುವೆ ೫

ಶ್ಲೋಕ :

ಸರ್ವಕರ್ಮ ವಿನಿರ್ಮುಕ್ತಃ ಸರ್ವಸಂಗ ವಿವರ್ಜಿತಃ |
ಸರ್ವದೇವ ದಯಾಶಾಂತ ಪಾಹಿಮಾಂ ಗುರುಪುಂಗವ ||
ಶುದ್ಧರೂಪಾತ್ಮಕಃ ಪಾಹಿಪಾಹಿ ಪರಮಾತ್ಮರೂಪ |
ಪಾಹಿಮಾಂ ಪರಮಂ ದೇವಂ ಶ್ರೀಮನ್ಮಾಹೇಶ  ಪಾಹಿ ಮಾಂ ||

ಸಂಧಿ  ೯ ಕ್ಕಂ ಶ್ಲೋಕ ೨, ವಚನ ೪೧, ಪದನು ೧೪, ಸಂಗತ್ಯ ೧೫ ಉಭಯಕ್ಕಂ ೮೬೧ ಕ್ಕಂ ಮಂಗಳ ಮಹಾ ಶ್ರೀ ಶ್ರೀ