ಅಖಿಲ ಭಾರತ ಖ್ಯಾತಿಯ ಹಿಂದೂಸ್ಥಾನಿ ಸಂಗೀತದ ಅಗ್ರಮಾನ್ಯ ಗಾಯಕಿ ಡಾ. ಗಂಗೂಬಾಯಿ ಹಾನಗಲ್ಲ ಮಹಿಳಾ ಗಾಯಕಿಯರಲ್ಲಿ ಅಗ್ರಗಣ್ಯರು. ತಾಯಿಯಿಂದ ಸಂಗೀತದ ಶ್ರೀಕಾರ ಹಾಕಿಕೊಂಡು, ಸವಾಯಿ ಗಂಧರ್ವರಲ್ಲಿ ಸಂಗೀತದ ಉನ್ನತ ಶಿಕ್ಷಣ ಪಡೆದು ದೇಶದೆಲ್ಲೆಡೆ ಗಾನವಾಹಿನಿ ಮೊಳಗಿಸಿದ ಧೀಮಂತರು. ಕಿರಾಣಾ ಘರಾಣೆಯ ಪತಾಕೆಯನ್ನು ಬಾನೆತ್ತರಕ್ಕೆ ಹಾರಿಸಿದವರು. ತಮ್ಮ ನಾದನದಿಯ ಮೂಲಕ ಸಂಗೀತ ಗಂಗೆಯನ್ನು ಪಾವನಗೊಳಿಸಿದವರು.

‘ಸ್ವರ ಸಾಮ್ರಾಜ್ಞಿ’ ಡಾ. ಗಂಗೂಬಾಯಿಯವರು ಜನಿಸಿದ್ದು ಧಾರವಾಡದಲ್ಲಿ ೧೯೧೩ರ ಮಾರ್ಚ್ ೫ ರಂದು. ನೆಲೆಸಿದ್ದು ಹುಬ್ಬಳ್ಳಿಯಲ್ಲಿ. ಬೆಳೆದಿದ್ದು ವಿಶ್ವ ಸಂಗೀತಗಾರ್ತಿಯಾಗಿ. ಅವರ ತಾಯಿ ಅಂಬಾಬಾಯಿ ಕರ್ನಾಟಕೀ ಸಂಗೀತಗಾರ್ತಿ. ಮಗಳು ಗಂಗೂಬಾಯಿ ಹಿಂದೂಸ್ಥಾನಿ ಸಂಗೀತ ಕಲಿಯಲೋಸುಗ ಹಾಡು ನಿಲ್ಲಿಸಿ ಮಗಳಿಗೆ ಹಿಂದೂಸ್ಥಾನಿ ಸಂಗೀತದ ಶ್ರೀಕಾರ ಹಾಕಿದರು. ದತ್ತೋಪಂತ ದೇಸಾಯಿ, ಕಿನ್ನರಿ ವಿದ್ವಾನ್‌ ಹುಲಗೂರು ಕೃಷ್ಣಾಚಾರರಲ್ಲಿ ಕೆಲಕಾಲ ಅಭ್ಯಾಸ. ನಂತರ ಸವಾಯಿ ಗಂಧರ್ವರೆಂದೇ ಖ್ಯಾತಿ ಪಡೆದ ಕುಂದಗೋಳದ ಶ್ರೀರಾಮಭಾವು ಅವರಲ್ಲಿ ದೀರ್ಘಕಾಲದವರೆಗೆ ಕಿರಾಣಾ ಘರಾಣೆಯ ತಾಲೀಮು. ಸಂಗೀತ ಹಾಡುವುದಷ್ಟೇ ಅಲ್ಲ ಮನೆ ಹೊರಗೆ ಬಂದು ಅದನ್ನು ಕೇಳುವುದಕ್ಕೂ ಮಡಿವಂತಿಕೆ ಇದ್ದ ಅಂತಹ ವಿಷಮ ವಾತಾವರಣದಲ್ಲಿ ಗಂಗೂಬಾಯಿಯವರು ಹಿಂದುಸ್ಥಾನಿ  ಸಂಗೀತ ಕಲಿತು ವೇದಿಕೆ ಏರಿ ಗಾನಗಂಗೆ ಹರಿಸಿದ ವೀರ ಮಹಿಳೆ. ಗುರುಗಳ ಮಾರ್ಗದರ್ಶನ, ಅವಿರತ ರಿಯಾಜ್‌ ಫಲವಾಗಿ ಗಂಗೂಬಾಯಿಯವರು ಖ್ಯಾತ ಹಿಂದುಸ್ಥಾನಿ  ಗಾಯಕಿಯಾಗಿ ದೇಶದೆಲ್ಲೆಡೆ ಖ್ಯಾತಿ ಗಳಿಸಿದರು.

ಹುಬ್ಬಳ್ಳಿಯಿಂದ ಹೊರಟ ಅವರ ಸಂಗೀತದ ಚೈತ್ರಯಾತ್ರೆ ಮುಂಬೈ, ನಾಗಪುರ, ಪುಣೆ, ದೆಹಲಿ, ಇಂದೋರ, ಗ್ವಾಲಿಯರ, ಕಾನಪೂರ, ಕೊಲ್ಕತ್ತಾ, ಬೆಂಗಳೂರು, ಚೆನ್ನೈ, ಭೂಪಾಳ, ಬಡೋದಾ – ಹೀಗೆ ನಾನಾ ಸಂಗೀತ ಸಮ್ಮೇಳನ, ರೇಡಿಯೋ ಕೇಂದ್ರಗಳಲ್ಲಿ ಅವರ ಗಾನಲಹರಿ ದೇಶದ ತುಂಬ ವ್ಯಾಪಕ. ಅವರ ಗಾಯನ ಕೇಳಿದ ವರಕವಿ ದ.ರಾ. ಬೇಂದ್ರೆ ‘ಗಾಯನ ಗಂಗಾ’ ಎಂದು, ಪ್ರಸಿದ್ಧ ಠುಮರಿ ಗಾಯಕಿ ಬನಾರಸದ ಶ್ರೀಮತಿ ಸಿದ್ದೇಶ್ವರಿ ದೇವಿ ‘ಜೀತೆರಹೊ ಬೇಟಿ, ಭಗವಾನ್‌ ತೆರಾ ಭಲಾಕರೆ’ ಎಂದು, ಪ್ರಸಿದ್ಧ ಸಂಗೀತಗಾರ ‘ಕೆ.ಎಲ್‌. ಸೈಗಲ್‌’ ಹಾಗೂ ಪಹಾಡಿ ಸನ್ಯಾಲ ‘ವಾಹ್‌ ಬೇಟಿವಾಹ್‌’, ತುಮ್ಹೆ ಮೇರಿ ಉಮರ್ ಲಗಜಾಯೆ’ ಎಂದುದ್ಗರಿಸಿದ್ದು ಗಂಗಾಬಾಯಿಯವರ ಸಂಗೀತ ಸಿದ್ಧಿಗೆ ಸಾಕ್ಷಿ. ಅವರು ಜೀವನದಲ್ಲಿ ಅನುಭವಿಸಿದ ಸುಖಕ್ಕಿಂತ ಕಷ್ಟ. ನೋವೇ ಅಧಿಕ. ಆದರೆ ಅವುಗಳನ್ನು ಧೈರ್ಯದಿಂದ ಮೆಟ್ಟಿ ಗಾನ ಶಕ್ತಿಯಿಂದ ಮೇಲೆದ್ದು ಬಂದವರು. ತಮ್ಮ ೧೧ನೇ ವಯಸ್ಸಿಗೆ ಬೆಳಗಾವಿಯ ಕಾಂಗ್ರೆಸ್‌ ಅಧಿವೇಶನದಲ್ಲಿ (೧೯೨೪) ಮಹಾತ್ಮಾ ಗಾಂಧಿಯವರ ಮುಂದೆ ಪ್ರಾರ್ಥನಾ ಗೀತೆ ಹಾಡಿದ ಧೀರ ಮಹಿಳೆ.

ಡಾ. ಗಂಗೂಬಾಯಿಯವರ ಗಾಯನ ಗಂಡು ಗಾಯಕಿ. ರೇಡಿಯೋದಲ್ಲಿ ಕೇಳಿದ ಅನೇಕರು ಅವರನ್ನು ಓರ್ವ ಪುರುಷ ಗಾಯಕರೆಂದೇ ಅನೇಕ ಸಾರಿ ಭಾವಿಸಿದ್ದುಂಟು. ಅಂತಹ ಎತ್ತರದ, ಅಷ್ಟೇ ಮೃದು ಮಧುರ ಗಾಯನ ಅವರದು. ಇಳಿವಯಸ್ಸಿನಲ್ಲಿಯೂ ಸಹ ಅವರ ಗಾಯನಕ್ಕೆ ಮುಪ್ಪಿಲ್ಲ.

ಅವರಿಗೆ ದೊರೆತ ಪ್ರಶಸ್ತಿ, ಪುರಸ್ಕಾರ, ಗೌರವಗಳಿಗೆ ಲೆಕ್ಕವಿಲ್ಲ. ಅಂಥವುಗಳಲ್ಲಿ ಬನಾರಸದ ಹಿಂದಿ ನಾಗರಿಕ ಪ್ರಚಾರ ಸಭಾದ ‘ಭಾರತಿಕಂಠ’ (೧೯೪೮), ಕರ್ನಾಟಕದ ಸಂಗೀತ ನೃತ್ಯ ಅಕಾಡೆಮಿ ವಾರ್ಷಿಕ ಪ್ರಶಸ್ತಿ (೧೯೬೨), ಅಲಹಾಬಾದದ ಪ್ರಯಾಗ ಸಂಗೀತ ಸಮಿತಿಯ ‘ಸ್ವರ ಶಿರೋಮಣಿ’ (೧೯೬೯), ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, (೧೯೭೦), ಕೇಂದ್ರ ಸರ್ಕಾರದ ‘ಪದ್ಮಭೂಷಣ’ (೧೯೭೧), ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ (೧೯೭೩), ‘ಬೇಗಂ ಅಖ್ತರ ಅವಾರ್ಡ’ (೧೯೭೫), ಆಕಾಶವಾಣಿ ಸ್ವರ್ಣ ಮಹೋತ್ಸವ ಅವಾರ್ಡ (೧೯೭೭), ಕರ್ನಾಟಕ ವಿಶ್ವವಿದ್ಯಾಲಯ (೧೯೭೮), ಹಂಪಿ ಕನ್ನಡ ವಿಶ್ವವಿದ್ಯಾಲಯ (೧೯೯೫), ಗುಲಬರ್ಗಾ ವಿಶ್ವವಿದ್ಯಾಲಯ, ದೆಹಲಿ ವಿಶ್ವವಿದ್ಯಾಲಯ (೧೯೯೮) ಗಳ ಗೌರವ ಡಾಕ್ಟರೇಟ್‌, ಕರ್ನಾಟಕ ವಿಶ್ವವಿದ್ಯಾಲಯದ ನಾಮಿನೇಟೆಡ್‌ ಸದಸ್ಯತ್ವ (೧೯೮೦), ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಅಧ್ಯಕ್ಷತೆ ಗೌರವ (೧೯೮೧), ಮಧ್ಯಪ್ರದೇಶ ಸರ್ಕಾರದ ‘ತಾನಸೇನ್‌’ ಪ್ರಶಸ್ತಿ (೧೯೮೪), ಅಸ್ಸಾಂ ಸರ್ಕಾರದ ಶಂಕರದೇವ ಪ್ರಶಸ್ತಿ (೧೯೯೩), ಕರ್ನಾಟಕ ಸರ್ಕಾರದ ಕನಕ-ಪುರಂದರ ಪ್ರಶಸ್ತಿ (೧೯೯೦) ಹಾಗೂ ಟಿ. ಚೌಡಯ್ಯ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ (೧೯೯೫), ಕರ್ನಾಟಕ ಸರ್ಕಾರದ ವಿಧಾನ ಪರಿಷತ್‌ ನಾಮಕರಣ ಸದಸ್ಯತ್ವ ಕೇಂದ್ರ ಸರ್ಕಾರದ ‘ಪದ್ಮಭೂಷಣ’ (೨೦೦೧), ದೀನಾನಾಥ ಮಂಗೇಶ್ವರ ಪುರಸ್ಕಾರ (೧೯೯೭), ಗಾನಯೋಗಿ ಪಂಚಾಕ್ಷರ ಪ್ರಶಸ್ತಿ (೧೯೯೭), ಜೀವಮಾನದ ಸಾಧನೆಗಾಗಿ ಮುಂಬೈಯ ಆದಿತ್ಯ ವಿಕ್ರಮ್‌ ಬಿರ್ಲಾ ಕಲಾ ಪುರಸ್ಕಾರ (೨೦೦೫), ಮುಂಬೈಯ ವರದರಾಜ ಆರ್ಯ ಪ್ರಶಸ್ತಿ (೧೯೯೭), ಮಾಣಿಕ ರತ್ನ (೧೯೯೮), ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಫೆಲೋಶಿಪ್‌, ಅಖಿಲ ಭಾರತ ಗಾಂಧರ್ವ ಮಹಾವಿದ್ಯಾಲಯ ಮಂಡಲದ ‘ಸಂಗೀತ ಮಹಾಮಹೋಪಾಧ್ಯಾಯ’, ಎಸ್‌.ಆರ್. ಪಾಟೀಲ ಪ್ರತಿಷ್ಠಾನ-ಹೀಗೆ ನೂರಾರು ಪ್ರಶಸ್ತಿ ಅವರನ್ನರಸಿ ಬಂದಿವೆ. ಅವರು ಕೆಲವು ವರ್ಷ ಕರ್ನಾಟಕ ವಿಶ್ವವಿದ್ಯಾಲಯದ ಸಂಗೀತ ವಿಭಾಗದಲ್ಲಿ ಗೌರವ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದುಂಟು. ಅವರ ಜೀವನಗಾಥೆ ಕುರಿತು ‘ನನ್ನ ಬದುಕಿನ ಹಾಡು’ (ಲೇ:ಎನ್ಕೆ) ‘ದಿ ಸಾಂಗ್‌ ಆಫ್‌ ಮೈ ಲೈಫ್‌’ (ಇಂಗ್ಲೀಷಾನುವಾದ ಶ್ರೀ ಜಿ.ಎನ್‌. ಹಾನಗಲ್ಲ) ಎರಡು ಗ್ರಂಥ ಪ್ರಕಟಗೊಂಡಿವೆ. ಡಾ. ಗಂಗೂಬಾಯಿಯವರ ಮನೆ ‘ಗಂಗಾ ಲಹರಿ’ಯಲ್ಲಿ ಗಂಗೂಬಾಯಿ ಹಾನಗಲ್‌ ಮ್ಯೂಜಿಕ್‌ ಫೌಂಡೇಶನ್‌ ಆಶ್ರಯದಲ್ಲಿ ಅವರ ಮೊಮ್ಮಗ ಶ್ರೀ ಮನೋಜ್‌ ಹಾನಗಲ್ಲ ಅವರು ‘ಭಾರತೀಯ ಶಾಸ್ತ್ರೀಯ ಸಂಗೀತ ವಸ್ತು ಸಂಗ್ರಹಾಲಯ’ ಸ್ಥಾಪಿಸಿ ಸಂಗೀತ ಪ್ರಪಂಚವನ್ನೇ ಕಣ್ಣೆದುರಿಗಿರಿಸಿದ್ದಾರೆ. ಡಾ. ಗಂಗೂಬಾಯಿಯವರು ಶಿಷ್ಯರಲ್ಲಿ ಕೃಷ್ಣಾ ಹಾನಗಲ್ಲ (ಮಗಳು), ಶ್ರೀ ನಾಗನಾಥ ಒಡೆಯರ್ ಹಾಗೂ ಪ್ರೊ. ಶ್ರೀಮತಿ ಸುಲಭಾ ದತ್ತ ನೀರಲಗಿ ಉಲ್ಲೇಖನೀಯರಾಗಿದ್ದಾರೆ.