ಹೆಜ್ಜೆ ಹೆಜ್ಜೆಗೂ ಗುಡಿಗೋಪುರಗಳು : ಬಿಳಿಯ ಮತ್ತು ಕಾವಿ ಬಣ್ಣದ ಧ್ವಜಗಳು ಹಾರಾಡುವ ಆಶ್ರಮಗಳು; ಧರ್ಮಛತ್ರಗಳು; ಸಾಧು ಸಂತರುಗಳು;  ಯಾತ್ರಾರ್ಥಿಗಳಿಂದ ಗಿಜಿಗುಟ್ಟುವ ಬೀದಿಗಳು. ಇದು ಹರಿದ್ವಾರ. ಒಂದೆಡೆ ದೀರ್ಘವಾಗಿ ಹಬ್ಬಿಕೊಂಡಿರುವ ಬೂದು ಬಣ್ಣದ ಶಿವಾಲಿಕ ಬೆಟ್ಟಗಳು; ಇನ್ನೊಂದೆಡೆ ವಿಸ್ತಾರವಾಗಿ, ವೇಗವಾಗಿ, ಪ್ರವಹಿಸುವ ಗಂಗಾನದಿ. ಈ ಎರಡರ ನಡುವೆ ಉದ್ದಕ್ಕೂ ಚಾಚಿಕೊಂಡಿದೆ ಹರಿದ್ವಾರವೆಂಬ ಈ ಊರು. ಸಮುದ್ರ ಮಟ್ಟದಿಂದ ಕೇವಲ ೯೪೫ ಅಡಿಗಳ ಎತ್ತರದಲ್ಲಿರುವ ಈ ಊರು, ಚಳಿಗಾಲದಲ್ಲಿ ಕೊರೆಯುವ ಛಳಿಗೆ, ಬೇಸಿಗೆಯಲ್ಲಿ ಉರಿಯುವ ಬಿಸಿಲಿಗೆ ಮೈ ಒಡ್ಡಿಕೊಂಡಿದೆ. ನಾವು ಈ ಊರಿಗೆ ಬಂದದ್ದು, ನಟ್ಟನಡೂ ಬೇಸಿಗೆಯಲ್ಲಿ, ಮೇ ತಿಂಗಳ ಎರಡನೆ ವಾರದಲ್ಲಿ. ಹಿಮಾಲಯಕ್ಕೆ ಪ್ರವಾಸ ಹೋಗುವವರಿಗೆ ಮೇ ಅಥವಾ ಸೆಪ್ಟೆಂಬರ್ ತಿಂಗಳುಗಳು ಸರಿಯಾದ ಕಾಲ. ಬದರೀ ಕೇದಾರಗಳ ದೇವಸ್ಥಾನಗಳ ಬಾಗಿಲು, ದರ್ಶನಾರ್ಥಿಗಳಿಗೆ ತೆರೆಯಿತೆಂಬ ಪ್ರಕಟಣೆ ಹೊರಟ ಕೂಡಲೇ ಇಂಡಿಯಾದ ವಿವಿಧ ಭಾಗಗಳಿಂದ ಯಾತ್ರಾರ್ಥಿಗಳು ಉತ್ತರ ಖಂಡದ ತೀರ್ಥಯಾತ್ರೆಗೆ ಧಾವಿಸಿ ಬರುತ್ತಾರೆ. ಕೆಲವರಂತೂ ಆಯಾ ದೇಗುಲಗಳ ಬಾಗಿಲು ತೆರೆದ ಕೂಡಲೇ ಪ್ರವೇಶಿಸುವ ಮೊದಲಿಗರಾಗಿ ಕಾದಿರುತ್ತಾರೆ. ಈ ಬದರಿ ಕೇದಾರಗಳಿಗೆ ಹೊರಡುವ ಯಾತ್ರಿಕರು ಮೊದಲು ಬರಬೇಕಾದದ್ದು ಹರಿದ್ವಾರಕ್ಕೆ.

ಶಿವಭಕ್ತರು ಈ ಊರನ್ನು ಹರದ್ವಾರವೆಂದೂ, ವಿಷ್ಣುಭಕ್ತರು ಇದನ್ನು ಹರಿದ್ವಾರವೆಂದೂ ಕರೆಯುತ್ತಾರೆ. ಶಿವನ ಆವಾಸವೆಂದು ನಂಬಲಾದ ಕೇದಾರಕ್ಕೆ ಹೋಗಬೇಕಾದರೂ, ವಿಷ್ಣುವಿನ ಕ್ಷೇತ್ರವೆಂದು ಹೆಸರಾಗಿರುವ ಬದರಿಗೆ ಹೋಗಬೇಕಾದರೂ, ಇದೇ ಬಾಗಿಲು ಹೀಗಾಗಿ ಇದು ಹರದ್ವಾರವೂ ಹೌದು, ಹರಿದ್ವಾರವೂ ಹೌದು.

ಮೇ ತಿಂಗಳು (೧೯೮೪) ಹದಿಮೂರನೇ ದಿನಾಂಕ, ಇಳಿ ಮಧ್ಯಾಹ್ನದ ಸುಡುಬಿಸಿಲಿನಲ್ಲಿ ನಾವೂ ಮೂವರು – ರುದ್ರಾಣಿ, ಪದ್ಮ ಮತ್ತು ನಾನು, ಸೈಕಲ್ ರಿಕ್ಷಾ ಮಾಡಿಕೊಂಡು ಹರಿದ್ವಾರದ ಬೀದಿಗಳಲ್ಲಿ ಹೊರಟಿದ್ದೆವು. ಸಂಜೆಯ ಒಳಗಾಗಿ ಸಾಧ್ಯವಾದಷ್ಟು ಸ್ಥಳಗಳನ್ನು ನೋಡಿಕೊಂಡು, ಗಂಗಾನದಿಯ ಬ್ರಹ್ಮಕುಂಡದಲ್ಲಿ ನಡೆಯುವ ಆರತಿಯನ್ನು ನೋಡಬೇಕೆಂಬುದು ನಮ್ಮ ಗುರಿಯಾಗಿತ್ತು.

ದಕ್ಷಮಹದೇವ ಮಂದಿರ, ಬಿಲ್ವಕೇಶ್ವರ ಮಹಾದೇವ, ಗೀತಾಭವನ, ಗೋರಖನಾಥಮಂದಿರ ಇತ್ಯಾದಿಗಳ ಕಡೆ ಸುಮ್ಮನೆ ಕಣ್ಣು ಹಾಯಿಸಿ ಮುಂದುವರಿದೆವು. ಅವುಗಳಿಗೆ ಕೇವಲ ಸ್ಥಳಮಹಾತ್ಮೆಯ ಕಾರಣದಿಂದಲ್ಲದೆ ಬೇರೆ ಯಾವ ರೀತಿಯ ವಿಶೇಷತೆಯೂ ಇದ್ದಂತೆ ತೋರಲಿಲ್ಲ. ದಕ್ಷ ಮಹದೇವ ಮಂದಿರದ ಹತ್ತಿರ ಸತೀ ಕುಂಡವಿದೆ. ದಾಕ್ಷಾಯಿಣಿ, ತನ್ನ ತಂದೆ ದಕ್ಷಬ್ರಹ್ಮನ ಯಾಗಕ್ಕೆ  ಬಂದು, ಅಲ್ಲಿ ತನ್ನ ಪತಿಯಾದ ಶಿವನ ನಿಂದನೆಯನ್ನು ಕೇಳಲಾರದೆ ಅಗ್ನಿಕುಂಡದಲ್ಲಿ ಧುಮುಕಿ ದಗ್ಧಳಾದ ಸ್ಥಳ ಇದು ಎಂದು ಹೇಳಲಾಗಿದೆ. ಹಿಮಾಲಯದ ಯಾತ್ರೆಗೆ ಹೊರಡುವವರ ಪಾಲಿಗೆ, ಹರಿದ್ವಾರದಿಂದ ಮುಂದಕ್ಕೆ ತೆರೆಯುವ ಪುರಾಣದ ಪುಟಗಳಿಗೆ ಲೆಕ್ಕವಿಲ್ಲ. ಪುರಾಣ, ಚರಿತ್ರೆ, ಹಾಗೂ ವಾಸ್ತವಗಳು ಒಂದರ ಜತೆಗೊಂದು ಬಿಡಿಸಲಾಗದಂತೆ ಹೆಣೆದುಕೊಂಡಿವೆ ಇಲ್ಲಿ.

ಹರಿದ್ವಾರ ಎಲ್ಲ ತೀರ್ಥಕ್ಷೇತ್ರ ನಗರಗಳಂತೆ, ತನ್ನೊಳಗೆ ಪ್ರಾಚೀನತೆಯ ಲಕ್ಷಣಗಳನ್ನು ಉಳಿಸಿಕೊಂಡಿದೆ. ಎರಡೂ ಬದಿಗೆ ಎತ್ತರದ ಮನೆಗಳನ್ನು ಹಬ್ಬಿಸಿಕೊಂಡ, ಇಕ್ಕಟ್ಟಾದ ಬೀದಿಗಳ ಸಾಲು; ನಡು ನಡುವೆ ತಟ್ಟನೆ ಕಣ್ಣನ್ನು ಸೆಳೆಯುವ ಗುಡಿಗಳು, ಆಶ್ರಮಗಳು,  ಧರ್ಮಶಾಲೆಗಳು ಇತ್ಯಾದಿಗಳಿಂದ ಮತ್ತು ಎಲ್ಲಾ ತೀರ್ಥಕ್ಷೇತ್ರಗಳಿಗೂ ಸಮಾನ ಆಂಶವಾದ ಗಲೀಜುಗಳಿಂದ ತನ್ನ ಪ್ರತ್ಯೇಕತೆಯನ್ನು ಕಾಯ್ದುಕೊಂಡಿದೆ. ಹರಿದ್ವಾರ ಭಾರತದ ಏಳು ಪ್ರಾಚೀನ ಪವಿತ್ರ ನಗರಗಳಲ್ಲಿ ಒಂದು. ಅಯೋಧ್ಯೆ, ಮಧುರಾ, ಕಾಶೀ, ಮಾಯಾ, ಕಾಂಚೀ, ಅವಂತೀ, ದ್ವಾರಾವತೀ – ಇವೇ ಪುರಾಣೋಕ್ತವಾದ ಪ್ರಾಚೀನ ನಗರಗಳು. ಈ ಪಟ್ಟಿಯಲ್ಲಿರುವ ‘ಮಾಯಾ’ ಎಂಬುದೇ ಹರಿದ್ವಾರ. ಇದನ್ನು ಮಾಯಾ, ಮಾಯಾಪುರಿ, ಮಾಯಾವತಿ ಎಂದು ಉಲ್ಲೇಖಿಸಲಾಗಿದೆ. ಚೀನಾ ದೇಶದ ಬೌದ್ಧ ಯಾತ್ರಿಕನಾದ ಹ್ಯೂಯೆನ್‌ತ್ಸಾಂಗನು ಇದನ್ನು ಮೊಯುಲೊ ಅಥಾವಾ ಮಯೂರ ಎಂದು ಕರೆದಿದ್ದಾನೆ. ಈ ಹೆಸರಿಗೂ ಹಿಂದಿನ ಹೆಸರೊಂದು ಹರಿದ್ವಾರಕ್ಕೆ ಇತ್ತು. ಅದೇ ಕಪಿಲಸ್ಥಾನ. ಸಗರಪುತ್ರರನ್ನು ಕಪಿಲ ಮಹರ್ಷಿಯು ತನ್ನ ಕೋಪಾಗ್ನಿಯಿಂದ ಬೂದಿ ಮಾಡಿದ ನಂತರ, ಸಗರವಂಶದ ಭಗೀರಥನು ತನ್ನ ಪಿತೃಗಳಿಗೆ ಸದ್ಗತಿಯನ್ನು ಕಾಣಿಸಲು ಗಂಗೆಯನ್ನು ತಂದು ಹರಿಸಿದ ಸ್ಥಳವಂತೆ ಇದು.

ಮಹಮ್ಮದೀಯ ಚರಿತ್ರಕಾರರು, ಹರಿದ್ವಾರದ ಬದಲು ಗಂಗಾದ್ವಾರ ಎಂಬ ಹೆಸರನ್ನು ಉಲ್ಲೇಖಿಸಿದ್ದಾರೆ. ಒಂದರ್ಥದಲ್ಲಿ ಇದು ಸರಿಯಾದ ಹೆಸರು ಕೂಡ. ಯಾಕೆಂದರೆ ಹಿಮಾಲಯದ ಎತ್ತರಗಳಿಂದ ಇಳಿದು ಬಂದ ಗಂಗೆ ಮೊಟ್ಟಮೊದಲು ಬಯಲುನಾಡನ್ನು ಪ್ರವೇಶಿಸುವುದು ಇಲ್ಲಿಯೇ. ಆದ್ದರಿಂದ ಉತ್ತರದ ಎತ್ತರಗಳಿಂದ ಇಳಿದ ಗಂಗೆ ಬಯಲನ್ನು ಪ್ರವೇಶಿಸುವ ದ್ವಾರವೂ ಇದೇ. ವಾಸ್ತವವಾಗಿ ಗಂಗಾದ್ವಾರವೆಂದು ಕರೆಯಿಸಿಕೊಳ್ಳುವ ಸ್ಥಳ ಮತ್ತು ಅಲ್ಲೊಂದು ದೇವಸ್ಥಾನ, ಹರಿದ್ವಾರದಿಂದ ಉತ್ತರಕ್ಕೆ ಕೊಂಚ ದೂರದಲ್ಲಿ ಇತ್ತು. ಮಹಾಭಾರತದಲ್ಲಿಯೇ ಗಂಗಾದ್ವಾರದ ಉಲ್ಲೇಖ ಸಾಕಷ್ಟು ಸಲ ಕಾಣಿಸಿಕೊಂಡಿದೆ. ಶಂತನುವಿನ ತಂದೆ ಪ್ರದೀಪನು ಗಂಗಾದ್ವಾರದಲ್ಲಿ ತಪಸ್ಸನ್ನಾಚರಿಸಿದನು. ಗಂಗೆ ಕನ್ನಿಕೆಯ ರೂಪವನ್ನು ತಾಳಿ ತನ್ನನ್ನು ಪರಿಗ್ರಹಿಸುವಂತೆ ಅವನನ್ನು ಕೇಳಿಕೊಂಡಳು. ಆದರೆ ಆತ ಆಕೆಯನ್ನು ತನ್ನ ಮಗಳಂತೆ ಭಾವಿಸುವುದಾಗಿಯೂ, ಆಕೆ ಇಷ್ಟಪಟ್ಟರೆ ತನ್ನ ಮಗನಿಗೆ ಮದುವೆ ಮಾಡುವುದಾಗಿಯೂ ತಿಳಿಸಿದನು. ದ್ರೋಣನ ತಂದೆ ಭಾರದ್ವಾಜನು ಅಪ್ಸರೆಯಾದ ಘೃತಾಚಿಯನ್ನು ಕಂಡು ಮೋಹಗೊಂಡು ದ್ರೋಣಾಚಾರ್ಯನ ಹುಟ್ಟಿಗೆ ಕಾರಣನಾದದ್ದು ಗಂಗಾದ್ವಾರದಲ್ಲಿ. ಅರ್ಜುನನು ತನ್ನ ತೀರ್ಥಯಾತ್ರೆಯ ಸಂದರ್ಭದಲ್ಲಿ  ಕೆಲವು ಕಾಲ ಗಂಗಾದ್ವಾರದಲ್ಲಿ ತಂಗಿದ್ದನು. ಒಂದು ದಿನ ಆತ ಗಂಗೆಯಲ್ಲಿ ಸ್ನಾನ ಮಾಡುವಾಗ ನಾಗಲೋಕದ ಕನ್ಯೆ ಉಲೂಚಿ ಅವನನ್ನು ಕಂಡು ಮೋಹಗೊಂಡು ಸೆಳೆದುಕೊಂಡು ಹೋದಳು. ಅವಳನ್ನು ವರಿಸಿದ ಅರ್ಜುನ, ಆಕೆಯನ್ನು ಮತ್ತೆ ಗಂಗಾದ್ವಾರದಲ್ಲೇ ಬಿಟ್ಟು, ತನ್ನ ತೀರ್ಥಯಾತ್ರೆಯನ್ನು ಮುಂದುವರಿಸಿದನು.

ಮಹಾಭಾರತದ ನೆನಪಿನಲ್ಲಿ ನಾವು ಮುಳುಗಿದರೂ, ಹರಿದ್ವಾರದಲ್ಲಿನ ಬೇಸಿಗೆಯ ತಾಪವೇನೂ ತಣ್ಣಗಾಗಲಿಲ್ಲ. ಎರಡೂ ಕಡೆಗೆ ಸಾಲಾದ ಅಂಗಡಿಗಳಲ್ಲಿ ವ್ಯಾಪಾರ ಮಾಡುವ, ಬೀದಿಯ ತುಂಬ ಇಡೀ ಇಂಡಿಯಾದ ಸಮಸ್ತ ವೈವಿಧ್ಯವನ್ನೂ ಪ್ರದರ್ಶಿಸುವಂತಹ ಜನಜಂಗುಳಿಯಿಂದ, ರಿಕ್ಷಾ, ಕಾರು, ಸೈಕಲ್, ಸ್ಕೂಟರ್, ಜಟಕಾ ಇತ್ಯಾದಿಗಳ ಗಡಿಬಿಡಿಯಿಂದ, ಮೈಯಿಂದ ಇಳಿಯುವ ಧಾರಾಕಾರದ ಬೆವರಿನಿಂದ, ಮೊದಲು ಗಂಗೆಯ ದಡವನ್ನು ಸೇರಿದರೆ ಸಾಕು ಅನ್ನುವಂತಾಗಿತ್ತು. ಹಾಗೂ ಹೀಗೂ ದಾರಿ ಮಾಡಿಕೊಂಡು ‘ಹರಿ ಕಿ ಪೈರಿ’ (ವಿಷ್ಣುಪದ) ಎನ್ನುವ ಸ್ಥಳಕ್ಕೆ ಬಂದೆವು. ಆಗಲೇ ಬಹುಸಂಖ್ಯೆಯ ಜನ ಜಮಾಯಿಸತೊಡಗಿದ್ದರು. ನಾವು ಇಲ್ಲಿಗೆ ಬಂದಾಗ ಸಂಜೆಯ ಐದು ಘಂಟೆ. ಹರಿ ಕಿ ಪೈರಿ ಎಂಬ ಹೆಸರಿನ ಗಂಗಾತೀರದಲ್ಲಿ, ವೇಗವಾಗಿ ಮತ್ತು ವಿಸ್ತಾರವಾಗಿ ಹರಿಯುವ ನದಿಯ ನೀರಿನ ಮೇಲೆ ಸಂಜೆಯ ಸೂರ‍್ಯನ ಬಿಸಿಲು, ತಳತಳಿಸುತ್ತ ತಾನೂ ಹರಿಯುವಂತೆ ಭಾಸವಾಗುತ್ತಿತ್ತು. ಬ್ರಹ್ಮಕುಂಡವೆಂದು ಕರೆಯಿಸಿಕೊಳ್ಳುವ ನದಿಯ ಹರಹಿನ ಸುತ್ತಲೂ ಮೆಟ್ಟಿಲುಗಳ ಮೇಲೆ ಆಗಲೇ ಸ್ಥಳವನ್ನಾಕ್ರಮಿಸಿಕೊಂಡು ಜನ ಕೂತುಬಿಟ್ಟಿದ್ದರು. ಗಂಗೆಗೆ ಆರತಿ ನಡೆಯುವುದು ಇಲ್ಲಿಯೇ. ಸಂಜೆ ಏಳು ಗಂಟೆಗೆ ನಾವೂ ಆರತಿಯನ್ನು ವೀಕ್ಷಿಸಲು ಅನುಕೂಲವಾಗುವಂತೆ, ಗಂಗೆಯ ದೇವಸ್ಥಾನಕ್ಕೆ ಎದುರಿನ ದಡದ ಮೆಟ್ಟಿಲುಗಳ ಮೇಲೆ ಹೇಗೋ ದಾರಿ ಮಾಡಿಕೊಂಡು, ನೀರಿನಲ್ಲಿ ಕಾಲುಗಳನ್ನು ಇಳಿಯ ಬಿಟ್ಟುಕೊಳ್ಳುವಷ್ಟು ಹತ್ತಿರದಲ್ಲಿ ಕುಳಿತೆವು. ಎಲ್ಲರ ಕೈಯಲ್ಲೂ – ಅದರಲ್ಲಿಯೂ ಹೆಂಗಸರ – ಹೂವಿನ ದೀಪದ ದೊನ್ನೆಗಳು. ಎಲೆಯ ದೊನ್ನೆ, ಅದರ ತುಂಬ ಹೂವು, ಅದರ ನಡುವೆ ಒಂದೊಂದು ಎಣ್ಣೆಯ ಬತ್ತಿ. ಈ ಬತ್ತಿಗೆ ಕಡ್ಡಿಗೀರಿ ಕಿಡಿ ಹೊತ್ತಿಸಿ, ಉರಿಯುವ ದೀಪದ ದೊನ್ನೆಯನ್ನು ನೀರಿನಲ್ಲಿ ತೇಲಿಬಿಡಲು ಶುರು ಮಾಡಿದರು. ಸಂಜೆಯಾಗುತ್ತಿದ್ದಂತೆ ನೂರಲ್ಲ ಸಾವಿರ, ಸಾವಿರ ಅಲ್ಲ ಲಕ್ಷ ಅನ್ನುವ  ಸಂಖ್ಯೆಯ ಜನ ನದಿಯ ಎರಡೂ ಬದಿಗೆ ಪೂಜೆಯನ್ನು ವೀಕ್ಷಿಸಲು ಕಿಕ್ಕಿರಿದ್ದರು. ಎರಡು ಮೂರು ಕವಲುಗಳಲ್ಲಿ ಗಂಗೆ ಪ್ರವಹಿಸುವಂತೆ ವ್ಯವಸ್ಥೆ ಮಾಡಿರುವ ಈ ಸ್ಥಳದಲ್ಲಿ ನದಿಯ ಒಂದು ಸೀಳಿನ ಬದಿಗೆ ಮಾತ್ರ ನಾವು ಕೂತಿದ್ದೆವು. ಮಹಾ ವೇಗದಿಂದ ಧಾವಿಸುವ ಗಂಗೆಯ ಈ ಸೀಳಿನ ಮೆಟ್ಟಿಲುಗಳ ಉದ್ದಕ್ಕೂ  ಅಲ್ಲಲ್ಲಿ ಕಬ್ಬಿಣದ ಕಂಬಿಗಳನ್ನು ಹಾಕಿದ್ದಾರೆ. ಸ್ನಾನ ಮಾಡುವವರು ಈ ಕಂಬಿಗಳನ್ನು ಹಿಡಿದುಕೊಂಡು ಕೆಲವೆಡೆ ಈ ಕಂಬಿಗಳಿಗೆ ಜೋಡಿಸಿದ ಸರಪಳಿಗಳನ್ನು ಹಿಡಿದುಕೊಂಡು ಸ್ನಾನ ಮಾಡಬೇಕು. ಈ ನೆರವನ್ನು ಅವಲಂಬಿಸದೆ ನೀರಿಗಿಳಿದರೆ, ಆ ಪ್ರಚಂಡ ವೇಗದ ಪ್ರವಾಹದಲ್ಲಿ ತರಗೆಲೆಯಂತೆ ಕೊಚ್ಚಿಕೊಂಡು ಹೋಗುವುದರಲ್ಲಿ ಸಂದೇಹವಿಲ್ಲ. ಆದರೂ ಕೆಲವು ನುರಿತ ಈಜುಗಾರ ತರುಣರು, ನಾವು ನೋಡ ನೋಡುತ್ತಿದ್ದಂತೆ, ನೀರಿನಲ್ಲಿ ಧುಮುಕಿ, ಆ ವೇಗದ ಜತೆಗೆ ತಾವೂ ತೇಲಿ ಹೋಗಿ, ಸ್ವಲ್ಪ ದೂರದಲ್ಲಿ ಸೇತುವೆಯ ಕೆಳಗಿನಿಂದ ನದಿಗೆ ತಾಗುವಂತೆ ಇಳಿಯ ಬಿದ್ದಿದ್ದ ಸರಪಳಿಗಳನ್ನು  ಹಿಡಿದು ಸರಪಳಿಯಿಂದ ಸರಪಳಿಗೆ ಸಾಗುತ್ತ ದಡವನ್ನು ತಲುಪುವ ಸಾಹಸಗಳನ್ನು ಪ್ರದರ್ಶಿಸುತ್ತಿದ್ದರು. ಸಂಜೆ ಆರು-ಆರೂವರೆಯ ಹೊತ್ತಿಗಂತೂ ಗಂಗೆಯ ತಡಿಯಲ್ಲಿ ಒಂದಿಂಚು ಜಾಗವನ್ನೂ ಬಿಡದೆ ಜನ ಜಮಾಯಿಸಿದರು. ಪೊಲೀಸರ ಹಾಗೂ ಕಾವಲಿನವರ  ಉಸ್ತುವಾರಿಯಲ್ಲಿ, ಧ್ವನಿವರ್ಧಕಗಳ ಮೂಲಕ ನೀಡಲಾದ ಎಚ್ಚರಿಕೆಯ ಸೂಚನೆಗಳಲ್ಲಿ, ಇಡೀ ಆವರಣ ಜನಮಯವಾಯಿತು. ‘ದಯಮಾಡಿ ನಿಮ್ಮ ನಿಮ್ಮ ಕಡೆಯವರನ್ನು, ನಿಮ್ಮ ನಿಮ್ಮ ಮಕ್ಕಳನ್ನು ಜೋಪಾನವಾಗಿ ನೋಡಿಕೊಳ್ಳಿರಿ’, ‘ಸೋದರರೇ ಸೋದರಿಯರೇ ಗಂಗಾತಾಯಿಯ ಪೂಜೆಯ ವ್ಯವಸ್ಥೆಗೆ ನಿಮ್ಮ ನಿಮ್ಮ ಕೈಯಲ್ಲಾಗುವಷ್ಟು ಕಾಣಿಕೆಯನ್ನು ಕೊಟ್ಟು ರಸೀತಿಗಳನ್ನು ಪಡೆದುಕೊಳ್ಳಿರಿ’, ‘ಪೂಜೆಯ ಹೊತ್ತಿನಲ್ಲಿ ನೂಕುನುಗ್ಗಲಾಗದಂತೆ ಶಾಂತಿಯಿಂದ ನಡೆದುಕೊಳ್ಳಿರಿ’ – ಇತ್ಯಾದಿ ಘೋಷಣೆಗಳು ಹಿಂದಿಯಲ್ಲಿ ಮೊಳಗುತ್ತಿದ್ದವು. ನಮ್ಮ ಎದುರಿಗೆ ಆಚೆಯ ದಡದಲ್ಲಿ ಹೆಂಗಸರು, ಮಕ್ಕಳು, ತರುಣರು, ಮುದುಕರು, ಕಂಬಿಗಳನ್ನು ಹಿಡಿದು ನೀರಿನಲ್ಲಿ ಮುಳುಗು ಹಾಕುತ್ತಿದ್ದರು. ಸಂಜೆಯ ಕೆಂಪು ಹರಿಯುವ ನೀರಿನ ನಿರಿಗೆಗಳನ್ನು ವರ್ಣಮಯವನ್ನಾಗಿ ಮಾಡುತ್ತಿದ್ದಂತೆಯೇ ‘ಗಂಗಾಮಾಯಿ’ಗೆ ಹೆಣ್ಣು ಮಕ್ಕಳು, ಗಂಡ – ಹೆಂಡತಿಯರು, ತೇಲಿ ಬಿಟ್ಟ ಹೂವಿನ ದೊನ್ನೆಯ ದೀಪಗಳು ನದೀ ಜಲದಲ್ಲಿ ಚಲಿಸತೊಡಗಿದವು. ಕೆಲವು ದೊನ್ನೆಗಳು ತೇಲಿಬಿಟ್ಟ ನಂತರ ಒಂದೆರಡು ಮಾರು ದೂರ ಹೋಗುವಷ್ಟರಲ್ಲಿಯೇ ಸೆಳವಿಗೆ ಸಿಕ್ಕು ಗಿರಗಿರನೆ ಸುತ್ತಿ ತಲೆಕೆಳಗಾಗಿ, ಹತ್ತಿದ ದೀಪ ನೀರಲ್ಲಿ ಆರಿ, ಅದರ ಜತೆಗಿದ್ದ ಹೂವುಗಳು ದಿಕ್ಕಾಪಾಲಾಗಿ ಕೊಚ್ಚಿ ಹೋಗುತ್ತಿದ್ದವು; ಕೆಲವು ದೊನ್ನೆ-ದೀಪಗಳು ಸ್ವಲ್ಪ ದೂರದವರೆಗೆ ಉರಿಯುತ್ತಾ, ನದೀ ಜಲದಲ್ಲಿ ಪ್ರತಿಬಿಂಬಿತವಾಗುತ್ತ ಮುಂದೆ ಹೋಗಿ, ಇನ್ನಿತರ ದೊನ್ನೆಗಳಿಗೆ ತಗುಲಿ ತಲೆಕೆಳಗಾಗುತ್ತಿದ್ದವು; ಇನ್ನು ಕೆಲವು ಆಬಾಧಿತವಾಗಿ ತೇಲುತ್ತ, ಉರಿಯುವ ದೀಪಗಳ ಸಹಿತ ದೂರ ದೂರಕ್ಕೆ ಹೋಗುತ್ತಿದ್ದವು. ನೋಡಿದಂತೆ  ನೋಡಿದಂತೆ ಬಹು ಸಂಖ್ಯೆಯಲ್ಲಿ ತೇಲಿ ಬಿಟ್ಟ ದೀಪಗಳು ನದಿಯ ಹರಹನ್ನೆಲ್ಲಾ ತುಂಬಿಕೊಂಡು ಅದ್ಭುತವಾದ ದೃಶ್ಯಮಾಲೆಯನ್ನು ನಿರ್ಮಿಸಿದವು. ಸಂಜೆಯ ಕೆಂಪು ಕರಗಿ, ನದಿಯ ನೀರು ಕಪ್ಪಾದಂತೆ, ಅದರ ಮೇಲೆ ತೇಲುವ ನೂರಾರು ದೀಪಗಳು, ನದಿಯ ಬಟ್ಟೆಗೆ ಬೆಳಕಿನ ಕಸೂತಿ ಹಾಕಿದಂತೆ ಕಾಣುತಿದ್ದವು. ಬಿಟ್ಟ ಕೂಡಲೇ ತಲೆಕೆಳಗಾಗುವ ದೀಪಗಳು, ಸ್ವಲ್ಪ ದೂರ ಹೋಗಿ ಮಗುಚಿಕೊಳ್ಳುವ ದೀಪಗಳು, ಹೊಯ್ದಾಡುತ್ತಾ ಹೇಗೋ ಮುಂದೆ ಸಾಗುವ ದೀಪಗಳು. ದೀಪಗಳನ್ನು ತೇಲಿಬಿಡುವ ಈ ಆಟ ನಡೆದೇ ಇತ್ತು. ಜೀವನದ ಮಹಾಪ್ರವಾಹದ ಮೇಲೆ ನಮ್ಮೆಲ್ಲರ ಏಳುಬೀಳುಗಳನ್ನು ಬಿಂಬಿಸುವಂತಿದ್ದ ಈ ದೀಪಮಾಲೆಯ ಲೀಲೆಯನ್ನು ನೋಡುತ್ತಾ ಕೂತ ನಮಗೆ ಆಗಲೇ ಗಂಟೆ ಏಳಾಗಿ, ಆರತಿಯ ಸುಮುಹೂರ್ತ ಹತ್ತಿರಕ್ಕೆ ಬಂದಿದೆ ಎನ್ನುವುದು, ಶಂಖ – ಜಾಗಟೆ – ವಾದ್ಯಗಳ ಸದ್ದಿನಿಂದ ಶ್ರವಣಗೋಚರವಾಯಿತು. ಎರಡೂ ದಡಗಳ ಉದ್ದಕ್ಕೂ, ಅಕ್ಷರಶಃ ಲಕ್ಷಾಂತರ ಜನ ಕುತೂಹಲ ಸಂಭ್ರಮಗಳಿಂದ ಆರತಿಯ ದೃಶ್ಯಕ್ಕೆ ಕಾತರರಾದರು. ಎದುರಿನ ದಡದ ಗಂಗೆಯ ದೇವಸ್ಥಾನದ ಸುತ್ತ ಎದ್ದ ಗಂಟೆ – ಜಾಗಟೆ – ಶಂಖಗಳ ಸದ್ದು, ಇಡೀ ಆವರಣವನ್ನು ತರಂಗಿತವನ್ನಾಗಿಸಿತು. ವೇಗವಾಗಿ ಪ್ರವಹಿಸುವ ನದಿ, ಅದರ ಇಕ್ಕೆಲದಲ್ಲೂ ಕಿಕ್ಕಿರಿದು, ಯಾವುದೋ ಆವಿರ್ಭಾವಕ್ಕೆ ಕಾದಂತೆ ಸ್ತಬ್ಧವಾದ ಆ ಜನ ಸಮೂಹ, ನದಿಯ ಎರಡೂ ದಡಗಳೆಡೆಯಿಂದ ದೀಪಗಳು ಚೆಲ್ಲುವ, ಪ್ರತಿಬಿಂಬಿತವಾಗುವ ಬೆಳಕು, ನದೀ ಜಲದಲ್ಲಿ ಮಿಣಮಿಣುಕುತ್ತಾ ತೇಲುವ ದೊನ್ನೆ – ದೀಪಗಳ ದೃಶ್ಯ – ಈ ಎಲ್ಲವೂ ಒಂದು ವಿಲಕ್ಷಣ ವಾತಾವರಣವನ್ನು ನಿರ್ಮಿಸಿದವು. ಕೂಡಲೇ ಮೊರೆಯುವ ಆ ಶಂಖ – ಜಾಗಟೆ – ಘಂಟಾರವಗಳ ನಡುವೆ, ಇಡೀ ಗಂಗಾನದಿಯ ಅಗಲಕ್ಕೆ ಹರಹಿಕೊಂಡ ಆ ಬ್ರಹ್ಮಕುಂಡದ ಸುತ್ತ, ಹಲವು ಹತ್ತು ಕಡೆಯಿಂದ ಉಜ್ವಲವಾಗಿ ಬೆಳಗುವ ಆರತಿಗಳು ಬಂದು ಗಂಗೆಯ ದಡಕ್ಕೆ ನಿಂತವು. ಮೂರು – ನಾಲ್ಕು ಅಡಿಗಳೆತ್ತರದ ಆರತಿಯ ದೀಪಗಳನ್ನು ಹಿಡಿದ ಅರ್ಚಕರು ಗಂಗೆಯ ಅಂಚಿನಲ್ಲಿ ನಿಂತು ನೇರವಾಗಿ ಗಂಗಾನದಿಗೇ ಆರತಿಯನ್ನು ಬೆಳಗತೊಡಗಿದರು. ಹರಿಯವ ನದಿಯಲ್ಲಿ, ಅವರು ಎತ್ತಿ ಬೆಳಗುವ ಆರತಿಯ ಬೆಳಕುಗಳು ಪ್ರತಿಫಲಿಸತೊಡಗಿದವು. ಒಂದಲ್ಲ ಎರಡಲ್ಲ, ನಾಲ್ಕಾರು ಎತ್ತರದ ದೀಪಾರತಿಗಳನ್ನು ಹಿಡಿದು, ಇಡೀ ನದಿಯನ್ನೇ ಅರ್ಚಿಸುವ ಈ ಅಪೂರ್ವ ದೃಶ್ಯ ಅವರ್ಣನೀಯವಾದದ್ದು. ಲಕ್ಷಾಂತರ ಜನರು ಅತ್ಯಂತ ಭಕ್ತಿಯಿಂದ, ಹರಿಯುವ ನದಿಯನ್ನೇ ದೇವತಾ ವಿಗ್ರಹದ ಸ್ಥಾನದಲ್ಲಿರಿಸಿ ನಡೆಯುವ ಈ ಪೂಜೆಯನ್ನು ರೋಮಾಂಚಿತರಾಗಿ ವೀಕ್ಷಿಸಿದರು. ದೇವಸ್ಥಾನದ  ಆವರಣದೊಳಗೆ ನಡೆಯುವ ಪೂಜೆಯ ಸಾಂಪ್ರದಾಯಿಕ ಕಟ್ಟನ್ನು ಕಳಚಿಕೊಂಡು, ಮನುಷ್ಯನ ಆರಾಧನೆ ಈ ಮುಕ್ತವಾದ ನೆಲೆಗೆ ಬಂದು, ಹರಿಯುವ ನದಿಯನ್ನೇ ದೇವರೆಂದು ಪೂಜೆ ಸಲ್ಲಿಸುವುದರ ಮೂಲಕ, ಮತ್ತೆ ಮನುಷ್ಯತ್ವ ತನ್ನ ಪ್ರಪ್ರಾಚೀನತೆಯನ್ನು ಒಂದೇ ನೆಗೆತಕ್ಕೆ ತಲುಪಿದ  ಭಾವನೆ ನನಗೆ ಉಂಟಾಯಿತು. ಪ್ರಾಚೀನ ಮಾನವನು ನಿಸರ್ಗದೊಂದಿಗೆ ಒಂದು ಕಾಲಕ್ಕೆ ಸ್ಥಾಪಿಸಿಕೊಂಡ ಈ ಸಹಜ ಸಂಬಂಧ, ಆನಂತರದ ಚರಿತ್ರೆಯಲ್ಲಿ ಕೇವಲ ಸಂಪ್ರದಾಯವಾಗಿ ಸ್ಥಗಿತಗೊಂಡು  ತನ್ನ ಅರ್ಥವನ್ನೇ ಕಳೆದುಕೊಂಡಿತ್ತು; ಆದರೆ ಇದೀಗ, ಇಂಥ ಆಚರಣೆಗಳ ಸಂದರ್ಭದಲ್ಲಿ, ಮನುಷ್ಯ ಮರೆತುಹೋದ ಮತ್ತು ಪ್ರಾಚೀನವಾದ ತನ್ನ ಹಾಗೂ ನಿಸರ್ಗದ ನಡುವಣ ಸಹಜ ಸಂಬಂಧವನ್ನು ಮತ್ತೆ ಹೀಗೆ ನೆನಪು ಮಾಡಿಕೊಳ್ಳುವುದರ ಮೂಲಕ ಅಥವಾ ಸ್ಥಾಪಿಸಿಕೊಳ್ಳುವುದರ ಮೂಲಕ, ಆ ದಿವ್ಯಾನುಭವವನ್ನು ಪುನರಭಿನಯಿಸಿದ್ದಾನೆ ಅಥವಾ ಪುನರನುಭವಿಸುತ್ತಿದ್ದಾನೆ ಎಂದು ಅನ್ನಿಸಿತು. ಈ ನದಿ,  ಈ ಬೆಟ್ಟ, ಈ ಬಯಲು, ಈ ಆಕಾಶ ಇವು ನಿಜವಾದ ದೇವರಲ್ಲದೆ, ಗುಡಿಯೊಳಗಿನ ನಾಲ್ಕು ಗೋಡೆಗಳ ನಡುವೆ, ಉಸಿರು ಕಟ್ಟಿಸುವ ಧೂಪ – ದೀಪ – ನೈವೇದ್ಯ – ಮಂತ್ರಾದಿಗಳ ಮಧ್ಯೆ, ಗರ್ಭಗುಡಿಯ ಮಂದವಾದ ಮಂಕು ಬೆಳಕಿನ ವಾತಾವರಣದಲ್ಲಿ, ವಿಗ್ರಹವನ್ನು ದೇವರೆಂದು ಭಾವಿಸಿ ಪೂಜಿಸುವ ಪ್ರವೃತ್ತಿ ಎಷ್ಟೊಂದು ಸಂಕುಚಿತವಾದದ್ದು, ಈ ಮುಕ್ತ ನಿಸರ್ಗಾರಾಧನೆಯ ಮುಂದೆ!

ಸುಮಾರು ಅರ್ಧಗಂಟೆಯ ಕಾಲ ನಡೆದ ಈ ಆರತಿ ಮುಗಿದ ನಂತರ ಮತ್ತೆ ಹರಿಯುವ ನದಿ, ಅದರ ಮೇಲೆ ಬಿಂಬಿತವಾದ ಬೆಳಕುಗಳು, ಕಿಕ್ಕಿರಿದ ಜನಜಂಗುಳಿ, ನಾವು, ನಮ್ಮವರು, ತಮ್ಮವರು ಎನ್ನುವ ಸಂಬಂಧಗಳು, ನದೀ ದಡದಾಚೆ ಹರಹಿಕೊಂಡ ಊರು, ಎಲ್ಲವೂ ಕ್ರಮ ಕ್ರಮೇಣ ನಮ್ಮ ಅರಿವಿಗೆ ಹಿಂತಿರುಗಿದವು. ಕಾಲಿಡಲು ತೆರಪಿಲ್ಲದ ಆ ಜನಸಂದಣಿಯ ನಡುವೆ ದಾರಿ ಮಾಡಿಕೊಂಡು ದಡ ಸೇರಬೇಕಾದರೆ ಅದೊಂದು ಸಾಹಸವೇ ಆಯಿತು. ಮತ್ತೆ ರಿಕ್ಷಾ ಮಾಡಿಕೊಂಡು, ಹರಿದ್ವಾರದ ದಕ್ಷಿಣದಲ್ಲಿರುವ ಕಂಕಲ್ ಎಂಬಲ್ಲಿನ ಶ್ರೀರಾಮಕೃಷ್ಣಾಶ್ರಮದ ಅತಿಥಿಗೃಹವನ್ನು ತಲುಪುವ ವೇಳೆಗೆ ಗಂಟೆ ಎಂಟೂವರೆಯಾಗಿತ್ತು. ಮಾರನೆ ದಿನ ಬೆಳಗ್ಗೆ ಯಮುನೋತ್ರಿ, ಗಂಗೋತ್ರಿ, ಬದರಿ, ಕೇದಾರಗಳಿಗೆ ಹೊರಡಬೇಕಾದ್ದರಿಂದ, ಅದರ ಚಿಂತೆ ನಮಗೆ ‘ಹಾಸಲುಂಟು ಹೊದೆಯಲುಂಟು’ ಎನ್ನುವಂತಾಗಿತ್ತು.