ಎಚ್.ಎಸ್. ವೆಂಕಟೇಶಮೂರ್ತಿಯವರನ್ನು ಮತ್ತು ಅವರ ಕವಿತೆಯನ್ನು ನಾನು ಸುಮಾರು ಮೂರು ದಶಕಗಳ ಕಾಲಮಾನದಲ್ಲಿ ತೀರಾ ಹತ್ತಿರದಿಂದ ನೋಡಿ ಕಂಡಿದ್ದೇನೆ. ೧೯೬೮ ರಂದು ಅವರು ಪ್ರಕಟಿಸಿದ ‘ಪರಿವೃತ್ತ’ ಎಂಬ ಮೊದಲ ಕವನ ಸಂಗ್ರಹದ ಮೂಲಕ ನವ್ಯಕಾವ್ಯದ ಉತ್ಕರ್ಷ ಕಾಲದಲ್ಲಿ ಕನ್ನಡ ಕಾವ್ಯಕ್ಕೆ ಅವರು ಪ್ರವೇಶಿಸಿದರೂ, ಅವರ ಕವಿತೆ ನಿಜವಾಗಿಯೂ ನನ್ನ ಗಮನವನ್ನು ಸೆಳೆದದ್ದು ಮತ್ತು ಬದಲಾದದ್ದು ೧೯೭೭ರಲ್ಲಿ ಪ್ರಕಟವಾದ ‘ಸಿಂದಬಾದನ ಆತ್ಮಕಥೆ’ ಎಂಬ ಕವನ ಸಂಗ್ರಹದಿಂದಲೇ. ಜತೆಗೆ ಈ ಸಂಕಲನಕ್ಕೆ ನಾನು ಮುನ್ನುಡಿ ಬರೆಯಬೇಕಾದ ಸಂದರ್ಭ ಒದಗಿದ್ದರಿಂದ, ಅವರ ಕವಿತೆಯ ಚಹರೆಗಳನ್ನೂ ನಡಿಗೆಗಳನ್ನೂ, ಹೊಸತನಗಳನ್ನೂ ಹೆಚ್ಚು ನಿಕಟವಾಗಿ ಗುರುತಿಸಲು ನನಗೆ ಸಾಧ್ಯವಾಯಿತು. ಅಲ್ಲಿಂದ ಮುಂದೆ ಪುಂಖಾನುಪುಂಖವಾಗಿ ಬರತೊಡಗಿದವು ಅವರ ಕವಿತೆಗಳು. ನವ್ಯದ ಉತ್ಕರ್ಷ ಕಾಲದಲ್ಲಿ ಕಾವ್ಯಲೋಕವನ್ನು ಪ್ರವೇಶಿಸಿದ ಅವರನ್ನು ಸೆಳೆದದ್ದು ಅಡಿಗರ ಚಂಡೆಮದ್ದಳೆಯ ಕಾವ್ಯವಲ್ಲ, ಎ.ಕೆ. ರಾಮಾನುಜನ್ ಅವರ ಮೆಲುದನಿಯ ಆಡುಮಾತಿನ ಪದ್ಯಬಂಧಗಳು. ಮೊದಮೊದಲ ಸಂಕಲನಗಳ ಬಂಧಗಳನ್ನು ರೂಪಿಸಿದ ರಾಮಾನುಜಂ ಅವರ ನೆರಳಿನಿಂದ ಬಿಡಿಸಿಕೊಂಡು, ತಮ್ಮದೆ ಆದ ಕಥನಕ್ಕೆ ಹೊಂದುವ ನುಡಿಗಾರಿಕೆಯೊಂದನ್ನು ಆವಿಷ್ಕಾರ ಮಾಡಿಕೊಳ್ಳುವ ಪ್ರಯತ್ನ ‘ಬಾಗಿಲು ಬಡಿವ ಜನ (೧೯೭೧) ಮತ್ತು ‘ಮೊಖ್ತಾ (೧೯೭೪)-ಕವನ ಸಂಗ್ರಹಗಳಲ್ಲಿ ಕಾಣಿಸಿಕೊಂಡರೂ, ಅದು ಒಂದು ಹದವನ್ನು ಪಡೆದುಕೊಂಡದ್ದು  ‘ಸಿಂದಬಾದನ ಆತ್ಮಕಥೆ’ (೧೯೭೭)ಯ ಮೂಲಕವೇ. ಇದಕ್ಕೆ ಮುನ್ನಿನ, ಗ್ರಾಮೀಣ ಪರಿಸರದ ವಾಸ್ತವಾನುಭವಗಳನ್ನು ಯಥಾವತ್ತಾಗಿ ಹಿಡಿದಿಡುವ ಸ್ವಭಾವೋಕ್ತಿ ಕಾವ್ಯ, ‘ಸಿಂದಬಾದನ ಆತ್ಮಕಥೆ’ಯಿಂದ ಮುಂದಕ್ಕೆ ಪಡೆದುಕೊಂಡ ಸಮೃದ್ಧಿ ಸಾಂಕೇತಿಕತೆ ಮತ್ತು ಸಂಕೀರ್ಣತೆಯ ಸ್ವರೂಪವೆ ಬೇರೆ. ಈ ಸಂಕಲನದ ‘ಸೌಗಂಧಿಕಾ’ ಅವರ ಮೊದಲ ಯಶಸ್ವೀ ಕವಿತೆ ಮಾತ್ರವಲ್ಲದೆ, ಅವರ ಕಾವ್ಯ ಜೀವನಕ್ಕೆ ಒಂದು ಸಂಕೇತವೂ ಆಗಿದೆ ಎನ್ನಬೇಕು. ದ್ರೌಪದಿಯನ್ನು ಕಾಡಿದ ಹಾಗೂ ಭೀಮನಲ್ಲಿ ಅನ್ವೇಷಣೆಯ ಆಕಾಂಕ್ಷೆಯನ್ನು ಪ್ರಚೋದಿಸಿದ ಆ ದೂರದ ಕಂಪಿನ ಕರೆಯಂತೆ, ಕವಿತೆ ವೆಂಕಟೇಶಮೂರ್ತಿಯವರನ್ನು ಈ ‘ಗಂಧವ್ರತ’ದ ಹಾದಿಯಲ್ಲಿ ಈ ಹೊತ್ತಿನವರೆಗೂ ಮುನ್ನಡೆಸಿದೆ.

ಇಲ್ಲಿ ನನಗೊಂದು ಸಂಗತಿ ನೆನಪಾಗುತ್ತದೆ. ಅದು ೧೯೯೦ರ ಕಾಲ. ತಿಂಗಳು ನೆನಪಿಲ್ಲ. ಆಗ ವೆಂಕಟೇಶಮೂರ್ತಿಯವರು ಬನಶಂಕರಿ ಎರಡನೆ ಹಂತದ ನಮ್ಮ ಮನೆಯ ಎದುರು ಮನೆಯಲ್ಲಿ ಬಾಡಿಗೆಗಿದ್ದರು. ನಾನು ಆ ವೇಳೆಗೆ ನಿವೃತ್ತನಾಗಿ, ನನ್ನ ಪುಸ್ತಕಗಳ ನಡುವೆ ಓದು ಬರಹಗಳಲ್ಲಿ ನಿಮಗ್ನನಾದ ಹೊತ್ತಿನಲ್ಲಿ, ಮೂರ್ತಿಯವರು ಸ್ಕೂಟರ್ ಹತ್ತಿ  ಹತ್ತುಗಂಟೆಗೆ ದೂರದ ಕಂಟೋನ್ಮೆಂಟಿನಲ್ಲಿದ್ದ ಸೇಂಟ್ ಜೋಸೆಫ್ ಕಾಲೇಜಿಗೆ  ಹೋಗಿ, ಮಧ್ಯಾಹ್ನ ನಾಲ್ಕಕ್ಕೋ ಐದಕ್ಕೋ ಬಂದುಬಿಡುವರು. ಈ ನಡುವೆ, ಬೆಳಿಗ್ಗೆಯೋ, ಮಧ್ಯಾಹ್ನವೋ, ಸಂಜೆಯೋ-ಬಿಡುವು ದೊರೆತಾಗ ಎದುರು ಮನೆಯ ನನ್ನಲ್ಲಿಗೆ ಬರುವರು. ಸ್ವಲ್ಪ ಹೊತ್ತಿನ ಮಾತಿನ ನಂತರ ನಿಧಾನವಾಗಿ ಜೇಬಿಗೆ ಕೈ ಹಾಕಿ ಹಾಳೆಯೊಂದನ್ನು ತೆಗೆದು ನನ್ನ ಮುಂದೆ ಇಡುವರು. ಅದು ಅವರು ಅವತ್ತೊ, ನಿನ್ನೆಯೋ ಬರೆದ ಕವಿತೆ. ಹೀಗೆ ಅವರು ತಮ್ಮ ಕವಿತೆಯನ್ನು ತೋರಿಸುತ್ತಾ ಇದ್ದದ್ದು ಅದು ಮೊದಲಸಲವೇನಲ್ಲ. ಬೆಂಗಳೂರಿನ ಬೇರೆ ಬೇರೆ ಕಡೆ ವಾಸಿಸುತ್ತಿದ್ದಾಗಲೂ ಅಷ್ಟೆ, ವಾರದಲ್ಲೊಂದೆರಡು ಸಲವಾದರೂ ನನ್ನನ್ನು ಭೆಟ್ಟಿಯಾದಲ್ಲದೆ ಸಮಾಧಾನವಿಲ್ಲ. ತಾವು ಬರೆದ ಕವಿತೆಯನ್ನು ನನಗೆ ತೋರಿಸಿದಲ್ಲದೆ ಅವರಿಗೆ ತೃಪ್ತಿಯಿಲ್ಲ. ಹೀಗಾಗಿ ನಾನು ಅನೇಕ ವರ್ಷಗಳಿಂದ, ಬಹುಶಃ ಅವರ ಕವಿತೆಯ ಮೊದಲ ಓದುಗ. ಅದಕ್ಕೆ ಪ್ರತಿಯಾಗಿ ನಾನೂ ಹುಣ್ಣಿಮೆಗೋ, ಅಮಾವಾಸ್ಯೆಗೋ ಒಂದರಂತೆ ಬರೆದ ನನ್ನ ಕವಿತೆಯನ್ನು ಅವರಿಗೆ ತೋರಿಸುವ ಅಥವಾ ಓದುವ ಅವಕಾಶವನ್ನು ಕಳೆದುಕೊಳ್ಳುತ್ತಿರಲಿಲ್ಲ. ಹೀಗೆ ನಡೆದು ಬಂದಿತ್ತು ನನ್ನ ಅವರ ಕಾವ್ಯ ಸಂವಾದ. ಇನ್ನು ೧೯೯೦ ಕಾಲದಲ್ಲಿ, ಅವರೇ ನನ್ನ ಎದುರು ಮನೆಗೆ ಬಾಡಿಗೆಗೆ ಬಂದು ವಾಸಿಸುವಾಗ ಕೇಳಬೇಕೆ?ಈ ಕಾವ್ಯ ಸಂವಾದಕ್ಕೆ ಎಂದಿಲ್ಲದ ಚಲನೆ ಬಂದಿತ್ತು. ಅದಕ್ಕೆ ಕಾರಣ ಮೂರ್ತಿಯವರು ಆ ಒಂದು, ಒಂದೂವರೆ ತಿಂಗಳ ಅವಧಿಯಲ್ಲಿ ಬಹುಸಂಖ್ಯೆಯ ಸಾನೆಟ್‌ಗಳನ್ನು ಬರೆದರು. ಬೆಳಿಗ್ಗೆ, ಕಾಲೇಜಿಗೆ ಹೋಗುವ ಮುನ್ನ ಮತ್ತೆ ಸಂಜೆ ಕಾಲೇಜಿಂದ ಬಂದಮೇಲೆ, ಕನಿಷ್ಠ ದಿನಕ್ಕೆರಡು ಸಾನೆಟ್ -ನನ್ನ ಕೈಗೆ ಕೊಡುವರು. ಅವು ಒಂದೊಂದೂ ಅಸಾಂಪ್ರದಾಯಿಕ ಸಾನೆಟ್ಟಿನ ಪ್ರಯೋಗಗಳು. ಒಂದೊಂದರಲ್ಲೂ ಯಾವುದೋ ಒಂದು ಭಾವವೋ, ಚಿಂತನೆಯೋ, ಪ್ರತಿಕ್ರಿಯೆಯೋ, ಘಟನೆಯೋ ಹರಳುಗೊಂಡ ವಿಸ್ಮಯ ತೆರೆದುಕೊಳ್ಳುವಂತಿತ್ತು. ನನಗನ್ನಿಸುತ್ತಿತ್ತು, ಮೂರ್ತಿಯ ಮನೆಯಂಗಳದಲ್ಲೊಂದು ಕವಿತೆಯ ಗಿಡವಿದೆ. ಅದು ಹೂವು ಬಿಟ್ಟಂತೆ, ಬಿಟ್ಟಂತೆ, ಇವರು ಒಂದೊಂದು ಕವಿತೆಯ ಹೂವನ್ನು ಹೀಗೆ ಬಿಡಿಸಿಕೊಂಡು ತಂದು ನನ್ನ ಕೈಗೆ ಕೊಡುತ್ತಿದ್ದಾರೆ ಎಂದು! ಯಾಕೆಂದರೆ ಆ ಕವಿತೆಗಳು ಅಷ್ಟೊಂದು ಸಹಜವೂ ಸುಂದರವೂ ಆಗಿರುವಂಥವು. ಗಿಡಕ್ಕೆ ಹೂವು ಬಿಡುವುದು ಎಷ್ಟು ಸಹಜವೋ ಅಷ್ಟೇ ಸಹಜವಾಗಿ ಮೂರ್ತಿಯವರು ಕವಿತೆ ಬರೆಯುತ್ತಾರೆ ಎನ್ನುವುದೇ ನನ್ನ ಅನಿಸಿಕೆ. ಸುಮಾರು ಒಂದು ಒಂದೂವರೆ ತಿಂಗಳಲ್ಲಿ ಅವರು ಅರುವತ್ತಕ್ಕೂ ಮೀರಿದ ಸಾನೆಟ್‌ಗಳನ್ನು ಬರೆದು-‘ಎಷ್ಟೊಂದು ಮುಗಿಲು’ಎಂಬ ಹೆಸರಿನ ಸಂಕಲವನ್ನು ಪ್ರಕಟಿಸಿದರು. ಮೊದಲಿಂದಲೂ ಅಷ್ಟೆ, ಇವರದು ಬಿಡುವಿಲ್ಲದ ಬರೆವಣಿಗೆ. ಕಳೆದ ಮೂರು ದಶಕಗಳ ಕಾಲಮಾನದಲ್ಲಿ ಹದಿನೇಳು ಕವನ ಸಂಗ್ರಹಗಳನ್ನೂ, ಹದಿನೇಳು ನಾಟಕಗಳನ್ನೂ, ಮಕ್ಕಳಿಗಾಗಿ ಮೂರು ಕವನ ಸಂಗ್ರಹವನ್ನೂ ಪ್ರಕಟಿಸುತ್ತ ತಮ್ಮ ಸೃಜನಶೀಲತೆಯನ್ನು ನಿರಂತರವಾಗಿ ಉಳಿಸಿಕೊಂಡು ಬಂದ ಪ್ರತಿಭಾವಂತರಾಗಿದ್ದಾರೆ. ಇವರ ಓರಗೆಯ ಯಾರೂ, ಈ ಬಗೆಯ ಸಮೃದ್ಧಿಯನ್ನೂ ವೈವಿಧ್ಯವನ್ನೂ ಪ್ರಯೋಗಶೀಲತೆಯನ್ನೂ ಇವರಂತೆ ಹರಿಗಡಿಯದೆ ಕಾಯ್ದುಕೊಂಡು ಬಂದಂತೆ ನನಗೆ ತೋರುವುದಿಲ್ಲ. ಮೊದಮೊದಲಿನ ಒಂದೆರಡು ಸಂಗ್ರಹಗಳಲ್ಲಿ ತುಂಬ ಭರವಸೆ ಹುಟ್ಟಿಸುವಂತೆ ತೋರುವ ಎಷ್ಟೋ ಕವಿಗಳು, ಎರಡು-ಮೂರನೆಯ ಸಂಗ್ರಹದ ಹೊತ್ತಿಗೆ ಸುಸ್ತಾದದ್ದನ್ನು ಕಂಡ ಹಾಗೂ ಕಾಣುತ್ತಿರುವ ನನಗೆ, ವೆಂಕಟೇಶಮೂರ್ತಿಯವರು ಕಳೆದ ಮೂವತ್ತೈದು ವರ್ಷಗಳ ಉದ್ದಕ್ಕೂ ಒಂದರ ಹಿಂದೊಂದು ವಿಭಿನ್ನವಾದ ವಿಶಿಷ್ಟವಾದ ಕವನ ಸಂಗ್ರಹಗಳನ್ನೂ ನಾಟಕಗಳನ್ನೂ ಪ್ರಕಟಿಸುತ್ತ, ಜತೆಗೆ ಚಲನಚಿತ್ರ, ರಂಗಭೂಮಿ, ಸುಗಮಸಂಗೀತ ಮತ್ತು ಸಾಹಿತ್ಯ ವಿಮರ್ಶೆ -ಇತ್ಯಾದಿಗಳೊಂದಿಗೆ ಸಂಬಂಧವನ್ನು ಉಳಿಸಿಕೊಂಡು ನನಗೆ ತುಂಬ ಪ್ರಿಯವಾದವರಾಗಿದ್ದಾರೆ.

ವೆಂಕಟೇಶಮೂರ್ತಿಯವರ ಪ್ರತಿಭಾ ಪ್ರಯಾಣದ ಜತೆಗೆ, ಮುನ್ನುಡಿಯ ನೆಪದಲ್ಲಿ ಈ ಕಾಲದ ಮುಖ್ಯ ಕವಿಗಳೂ ವಿಮರ್ಶಕರೂ ಅವರ ಕೃತಿಗಳನ್ನು ಕುರಿತು ತುಂಬ ಒಳ್ಳೆಯ ಪ್ರತಿಕ್ರಿಯೆಗಳನ್ನು ತೋರಿದ್ದಾರೆ. ಇದರಾಚೆಯ ನೆಲೆಯಲ್ಲೂ ವಿಮರ್ಶೆಯ ಪರಿಗಣನೆಗೆ ಪಾತ್ರವಾದ ಸಂದರ್ಭಗಳೂ ಸಾಕಷ್ಟಿವೆ.  ಒಟ್ಟಾರೆಯಾಗಿ ಸಮಕಾಲೀನ ಪ್ರೀತಿ-ಗೌರವ-ಪ್ರಶಂಸೆಗಳಿಂದ ವೆಂಕಟೇಶ ಮೂರ್ತಿಯವರ ಸೃಜನಶೀಲ ವ್ಯಕ್ತಿತ್ವ ವಂಚಿತವಾಗಿಲ್ಲ ಎನ್ನುವುದು ಅವರ ಕಾವ್ಯಕ್ಕೆ ನಿರಂತರವಾಗಿ ಇರುವ ಸಹೃದಯದ ಸಂವಾದಕ್ಕೆ ಒಂದು ಸಾಕ್ಷಿಯಾಗಿದೆ. ಈ ವಿಚಾರದಲ್ಲಿ ಅವರು ಅದೃಷ್ಟಶಾಲಿಗಳೆಂದೇ ಹೇಳಬೇಕು. ಆದರೆ ಅವರ ಕಾವ್ಯವನ್ನು ಕುರಿತು ನಡೆದಷ್ಟು ಚರ್ಚೆ, ಅವರ ನಾಟಕಗಳನ್ನು ಕುರಿತು ಇನ್ನೂ ನಡೆದಿಲ್ಲವೆನ್ನುವುದು ನಿಜವಾದರೂ, ಅವರ ಕೆಲವು ನಾಟಕಗಳು ಶ್ರೇಷ್ಠ ನಿರ್ದೇಶಕರಿಂದ ರಂಗಪ್ರಯೋಗಕ್ಕೆ ಒಳಗಾಗಿ, ಅವರಿಗೆ ವ್ಯಾಪಕವಾದ ಪ್ರಸಿದ್ಧಿಯನ್ನು ತಂದು ಕೊಟ್ಟಿವೆ.

ವೆಂಕಟೇಶಮೂರ್ತಿಯವರ ವಿಶೇಷತೆ ಮತ್ತು ಅವರ ಸೃಜನಶೀಲತೆಯ ಉತ್ಕರ್ಷಕ್ಕೆ ಬಹು ಮುಖ್ಯವಾದ ಕಾರಣವೆಂದರೆ ಅವರು ಪರಂಪರೆಯೊಂದಿಗೆ  ನಿರಂತರವಾಗಿ ನಡೆಯಿಸುವ ಸಂವಾದ ಮತ್ತು ಅನುಸಂಧಾನ. ಒಬ್ಬ ನಿಜವಾದ ಬರೆಹಗಾರನಾದವನು, ತಾನು ಹೊಸತಾಗುವುದಕ್ಕೆ ಮತ್ತೆ ಮತ್ತೆ ಪ್ರಾಚೀನತೆಯ ಕಡೆ ಹೊರಳುವುದು ಅತ್ಯಂತ ಅಗತ್ಯವಾಗಿದೆ ಎಂಬ ಎಚ್ಚರ ವೆಂಕಟೇಶಮೂರ್ತಿ ಯವರಲ್ಲಿರುವಷ್ಟು ಅವರ ಸಮಕಾಲೀನರಾದ ಎಷ್ಟೋ ಲೇಖಕರಿಗೆ ಅಷ್ಟರಮಟ್ಟಿಗೆ ಇರುವಂತೆ ತೋರುವುದಿಲ್ಲ. ನಾವು ಯಾವ ಭಾಷಾ ಸಾಹಿತ್ಯ ಸಂದರ್ಭದಲ್ಲಿ ಬರೆಯುತ್ತಿದ್ದೇವೆಯೋ, ಆ ಭಾಷಾ ಸಾಹಿತ್ಯ ಪರಂಪರೆಯ ಪ್ರಜ್ಞೆ ಇಲ್ಲದಿದ್ದರೆ, ನಮ್ಮ ಬರೆಹಕ್ಕೆ ನಿಜವಾದ ತೂಕ ಬರಲಾರದು. ನಮ್ಮಸಮಕಾಲೀನತೆಯನ್ನು ಮೀರಿ, ಮತ್ತೆ ಮತ್ತೆ ಪ್ರಾಚೀನತೆಯ ಕಡೆ ಹೊರಳಿ,  ಮಹತ್ವದ ಮನಸ್ಸುಗಳೊಂದಿಗೆ  ಮಾತನಾಡಬೇಕು. ವೆಂಕಟೇಶಮೂರ್ತಿಯವರು ಹಿಂದಿನ ಮಹತ್ವದ ಮನಸ್ಸುಗಳೊಂದಿಗೆ ಮಾತನಾಡುತ್ತ ಬಂದಿದ್ದಾರೆ. ಕಾಳಿದಾಸನೊಂದಿಗೆ, ವಾಲ್ಮೀಕಿ-ವ್ಯಾಸರೊಂದಿಗೆ, ಪಂಪನೊಂದಿಗೆ, ಕುಮಾರವ್ಯಾಸನೊಂದಿಗೆ, ಅಷ್ಟೇ ಅಲ್ಲ, ಹೊಸಗನ್ನಡದ ಮಹತ್ವದ ಚಳುವಳಿಗಳೊಂದಿಗೆ ಮತ್ತು ತಮ್ಮ ಆಯ್ಕೆಯ ಪಶ್ಚಿಮದ ಬರೆಹಗಾರರೊಂದಿಗೆ ಅವರು ಸಂವಾದ ನಡೆಯಿಸುತ್ತ ತಮಗೆ ಹಿಂದಿನ ಪರಂಪರೆಯಿಂದ ತಮ್ಮ ಸೃಜನಶೀಲತೆಗೆ ಅಗತ್ಯವಾದದ್ದನ್ನು ತಮ್ಮೊಳಗೆ ಅರಗಿಸಿಕೊಳ್ಳುತ್ತ ವಿವೇಚನೆಯ ಹಾದಿಯಲ್ಲಿ ನಡೆದವರು. ಅಷ್ಟೆ ಅಲ್ಲ ತಮಗೆ ತತ್ ಪೂರ್ವದ ಹಾಗೂ ಸಮಕಾಲೀನವೂ ಆದ ಸಾಹಿತ್ಯದೊಂದಿಗೆ ಅವರು ತೋರಿದ ಪ್ರತಿಕ್ರಿಯೆಗಳೂ ಗಮನಾರ್ಹವಾಗಿವೆ. ಅವರು ಕನ್ನಡ ಸಾಹಿತ್ಯವನ್ನು ಪ್ರವೇಶಿಸಿದ್ದು ನವ್ಯ ಕಾವ್ಯದ ಉತ್ಕರ್ಷ ಕಾಲದಲ್ಲಿ ಎಂಬುದು ನಿಜವಾದರೂ, ಅವರು ಅದರ ರೂಪಾಂಶಗಳನ್ನು ತಮ್ಮ ಶೈಲಿಗಾಗಿ ಸ್ವೀಕರಿಸುವಷ್ಟೆ ತೃಪ್ತರಾದರೆ ಹೊರತು ನವ್ಯದ ಧೋರಣೆಗಳನ್ನು ಸಾರಾಸಗಟಾಗಿ ಒಪ್ಪಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಹೊದಿಗೆರೆಯಂಥ ಗ್ರಾಮ ಪರಿಸರದ ದಟ್ಟವಾದ ನೆನಪುಗಳನ್ನು ಕಟ್ಟಿಕೊಂಡು, ಬೆಂಗಳೂರಿನಂಥ ನಗರಕ್ಕೆ ಬಂದ ವೆಂಕಟೇಶಮೂರ್ತಿಯವರನ್ನು, ನವ್ಯರ ನಗರ ಕೇಂದ್ರಿತ ಏರುದನಿಯ ಕಾವ್ಯ ಅಷ್ಟಾಗಿ ಸೆಳೆಯದೆ ಹೋದದ್ದು ಆಶ್ಚರ್ಯವೇನೂ ಅಲ್ಲ. ಜತೆಗೆ ಅಭಿಜಾತ ಕಾವ್ಯಪರಂಪರೆಯ ಸಂಸ್ಕಾರಗಳಿಂದ ರೂಪುಗೊಂಡ, ಮತ್ತು ಸ್ವಭಾವತಃ ಯಾವುದೇ ಅಬ್ಬರ-ಅತಿರೇಕಗಳನ್ನು ಇಷ್ಟಪಡದ, ಒಂದು ಬಗೆಯ ಪ್ರಶಾಂತ ಮನಃಸ್ಥಿತಿಯನ್ನು ಕಾಯ್ದುಕೊಂಡ ವೆಂಕಟೇಶಮೂರ್ತಿಯವರು ವಿಶೇಷವಾಗಿ ಒಲಿದದ್ದು ನವೋದಯದ ಪ್ರಮುಖ ಕವಿಗಳ ಕಾವ್ಯಕ್ಕೆ. ಅದರಲ್ಲೂ ಒಲವಿನ ಕವಿ ಕೆ.ಎಸ್.ನ. ಅವರ ವಾಸ್ತವ ಸ್ವಭಾವೋಕ್ತಿ ಮಾದರಿಯ ಕಾವ್ಯ ಕೌಶಲವೂ, ಪುರಾಣ ವಸ್ತುಗಳನ್ನು ಆಧುನಿಕ ಯುಗದ ಬುದ್ಧಿಪ್ರಚುರವಾದ ಮನಸ್ಸುಗಳಿಗೆ ಸಮ್ಮತವಾಗುವಂತೆ ವ್ಯಾಖ್ಯಾನಿಸುವ ಮತ್ತು ಪುನಾರಚಿಸುವ ಪು.ತಿ.ನ. ಅವರ ಚಿಂತನೆ ಪ್ರತಿಭೆಯೂ ವಿಶೇಷವಾಗಿ ವೆಂಕಟೇಶಮೂರ್ತಿಯವರನ್ನು ಪ್ರಭಾವಿಸಿರುವಂತೆ ತೋರುತ್ತದೆ. ಆದರೆ ಮೂರ್ತಿಯವರು ಈ ಇಬ್ಬರ ಪ್ರಭಾವಗಳನ್ನು ಅವರಿಗಿಂತ ಭಿನ್ನವಾದ ಕಥನ ಪ್ರಕಾರ ಹಾಗೂ ನಾಟಕ ನಿರ್ಮಿತಿಗಳಲ್ಲಿ ಮೇಳವಿಸಿಕೊಂಡರೆಂಬುದು ವಿಶೇಷದ ಸಂಗತಿಯಾಗಿದೆ.

ಕನ್ನಡ ಸಾಹಿತ್ಯ ಪರಂಪರೆಯ ಪ್ರಮುಖ ಲಕ್ಷಣವೆಂದರೆ ಅದು ಮೂಲತಃ ಕಥಾನಾತ್ಮಕವಾದದ್ದು. ಇದು ಪಂಪ, ರನ್ನ, ಹರಿಹರ, ಕುಮಾರವ್ಯಾಸಾದಿಗಳ ಮಾರ್ಗವೂ ಹೌದು. ವೆಂಕಟೇಶಮೂರ್ತಿಯವರು ಈ ಕಥನ ಪರಂಪರೆಯನ್ನು ವಿಭಿನ್ನವಾಗಿ ವಿಸ್ತರಿಸಿದವರು. ಸ್ಥೂಲವಾಗಿ ಇವರ ಕಥನ ಕವಿತೆಗಳನ್ನು ವಸ್ತುವಿನ ಆಧಾರದ ಮೇಲೆ ಎರಡು ಬಗೆಯಾಗಿ ವಿಂಗಡಿಸಬಹುದು. ಒಂದು, ವಾಸ್ತವ ಸ್ವಭಾವೋಕ್ತಿ ಮಾರ್ಗ, ಮತ್ತೊಂದು ಪೌರಾಣಿಕ ಪ್ರತೀಕಮಾರ್ಗ. ಅವರು ತಮ್ಮ ಮೊದಲ ಮೂರು ಕವನ ಸಂಗ್ರಹಗಳಲ್ಲಿ ತಮ್ಮ ಗ್ರಾಮೀಣ ಪರಿಸರದ ವಾಸ್ತವ ಸಂಗತಿಗಳನ್ನು ಕುರಿತು ಬರೆದ  ಅದೆಷ್ಟೋ ಪದ್ಯಗಳು, ಈಗ ಪ್ರಸ್ತಾಪಿಸಿದ ಮೊದಲ ವರ್ಗಕ್ಕೆ ಸೇರುತ್ತವೆ. ಅವರ ‘ವನವಿಹಾರವೆಂಬ ಖಂಡಕಾವ್ಯವು’ (ಬಾಗಿಲು ಬಡಿವ ಜನ : ೧೯೭೧) ಬಹುಶಃ ಮೊದಲ ಅತ್ಯಂತ ಲವಲವಿಕೆಯ ಕಥನ ಪ್ರಯೋಗವಾಗಿದೆ. ಹಾಗೆಯೆ ಅದರ ಮುಂದಿನ ‘ಪುರವರ್ಣನೆ’ (ಮೊಖ್ತಾ ೧೯೭೪) ಎಂಬ ಕವಿತೆಯೂ, ಇದೇ ಜಾಡನ್ನು ಹಿಡಿದ ‘ಒಂದು ಪ್ರಸಂಗ’, ‘ಮಾಲಿಂಗಣ್ಣನ ಕತೆ’, ‘ಕೋಡಿಯ ಬಳಿ ಅವನು ಅವಳು’, ‘ಕೆಂಚೀದ್ಯಾಮರ ಕತೆ’, ‘ಒಂದು ಹಳ್ಳಿಯಲ್ಲಿ’, ‘ಏನಾಯಿತು ಅಂದರೆ’ -ಇಂಥ ಕವಿತೆಗಳು ಅವರ ಗ್ರಾಮೀಣ ಪರಿಸರದ ಸ್ವಾರಸ್ಯವಾದ ಘಟನಾವಳಿಗಳನ್ನು ಕುತೂಹಲಕರವಾಗಿ ಕಥಿಸುವ ‘ಸ್ವಭಾವೋಕ್ತಿ’ ಕವಿತೆಗಳು. ಇವು ಒಂದು ಘಟನೆಯನ್ನೋ, ಸಂಗತಿಯನ್ನೋ, ದೇಸೀಯವಾದ ಶೈಲಿಯನ್ನು ಬಳಸಿಕೊಂಡು ಸೊಗಸಾಗಿ ಹೇಳುವ, ಹಾಗೆ ಹೇಳಿದ್ದು ತಮಗೆ ತಾನೆ ಪ್ರತ್ಯೇಕವಾಗಿ ಚೌಕಟ್ಟು ಹಾಕಿದ ಚಿತ್ರಗಳಂತೆ ಭಾಸವಾಗುವ, ಓದಿದಾಗ ಒಂದು ಬಗೆಯ ಸಂತೋಷವನ್ನು ಕೊಟ್ಟರೂ, ಅದರಿಂದಾಚೆಗೆ ಚಾಚಿಕೊಳ್ಳದ, ಈ ಕಾರಣದಿಂದ ಆಮೇಲೂ ನಮ್ಮನ್ನು ಅಷ್ಟಾಗಿ ಕಾಡದ ಕವಿತೆಗಳು ಎನ್ನಬಹುದು. ಮುಂದೆ ವೆಂಕಟೇಶಮೂರ್ತಿಯವರು ನಗರ ಪರಿಸರದ ಇಂಥ ವಸ್ತುಗಳನ್ನು ಕುರಿತು ಬರೆದ ಕವಿತೆಗಳೂ ಇದೇ ಮಾರ್ಗದ ವಿಸ್ತರಣೆಗಳಾಗಿ ತೋರುತ್ತದೆ. ನಿದರ್ಶನಕ್ಕೆ ಹೇಳುವುದಾದರೆ, ‘ವೃದ್ಧಿ’, ‘ಮಳೆ ಒಬ್ಬ ಹುಡುಗ ಒಬ್ಬ ಹುಡುಗಿ’ ಇಂಥವನ್ನು ನೋಡಬಹುದು. ಇವುಗಳ ಕಲಾತ್ಮಕತೆ ಅಥವಾ ಗ್ರಹಿಕೆಯ ಸೊಗಸು, ಕೆ.ಎಸ್.ನ. ಅವರ ಕವಿತೆಗಳನ್ನು ನೆನಪಿಗೆ ತರುತ್ತದೆ. ಯಾಕೆಂದರೆ ಕೆ.ಎಸ್.ನ. ಅವರೂ ಇಂಥ ಸ್ವಭಾವೋಕ್ತಿಯ ರಮ್ಯ ಕವಿತೆಗಳನ್ನು ಸಾಕಷ್ಟು ಬರೆದಿದ್ದಾರೆ. ಮೂರ್ತಿಯವರ ಈ ಬಗೆಯ ಕವಿತೆಗಳ ನಡುವೆ ಅವರು ಮುಂದೆ ಬರೆದ ‘ಪುಟ್ಟಳ್ಳಿಗೆ ಲೈಟು ಬಂದದ್ದು’ (ಕ್ರಿಯಾಪರ್ವ: ೧೯೮೦) ಎಂಬ ಕವಿತೆ ವಾಸ್ತವದ ಘಟನೆಯೊಂದನ್ನು ನಿರೂಪಿಸುತ್ತಿದ್ದರೂ, ಅದು ನಿಂತ ನೆಲೆಯಿಂದ ಆಚೆಗೆ ಚಾಚಿಕೊಳ್ಳುವ ರೀತಿ ಆಶ್ಚರ್ಯಕರವಾಗಿದೆ. ಬೆಳಕಿಲ್ಲದ ಕತ್ತಲು ಜಗತ್ತಿಗೆ, ಬೆಳಕನ್ನು ತಂದುಕೊಟ್ಟು ಮತ್ತೆ ನೀಲಿಯಲ್ಲಿ ಚಿಕ್ಕೆಯಾಗಿ ಕರಗಿಹೋದ ಚೈತನ್ಯದ ಪ್ರತೀಕವಾಗುತ್ತಾರೆ ನೀಲಿ ಬಟ್ಟೆಯ ಮಂದಿ.

ಹೀಗೆ ಪ್ರತೀಕ ಮಾರ್ಗದಲ್ಲಿ ಪಯಣ ಮಾಡುವ ಗುಣ, ವೆಂಕಟೇಶಮೂರ್ತಿಯವರು ಪುರಾಣಗಳಿಂದ ವಸ್ತುಗಳನ್ನೆತ್ತಿಕೊಂಡು ಅವರು ನಿರ್ವಹಿಸುವ ಕವಿತೆಗಳಲ್ಲಿ ತಾನೇ ತಾನಾಗಿದೆ. ‘ಶುಕ್ಲಪಕ್ಷ’, ‘ಶಿಶಿರದ ಪಾಡು’, ‘ಒಂದು ಮಧ್ಯಾಹ್ನ’, ‘ಉತ್ತರಾಯಣ’ ‘ಗಂಗೆಯಲ್ಲಿ ನಾವೆ’, ‘ವಿಂಧ್ಯಾಟವಿಯಲ್ಲಿ’, ‘ವಿನತಾಪುತ್ರನ ಆಗಮನ’  ‘ವಿಸರ್ಗ’, ‘ಸಂಪಾತಿ’, ‘ಸೌಗಂಧಿಕಾ’ -ಇಂಥವುಗಳ ಜತೆಗೆ ‘ಸಿಂದಬಾದನ ಆತ್ಮಕಥೆ’ಯನ್ನು ಸೇರಿಸಿಕೊಂಡು ನೋಡಿದರೆ, ವೆಂಕಟೇಶ ಮೂರ್ತಿಯವರು ಪುರಾಣ-ಐತಿಹ್ಯಗಳ ಮೂಲಕ ವರ್ತಮಾನವನ್ನು ಬೇರೊಂದು ಪರಿಪ್ರೇಕ್ಷ್ಯದಿಂದ ನೋಡುವ ಪ್ರಯತ್ನವನ್ನು ಮಾಡುತ್ತಾರೆ. ಇಂಥ ಬಿಡಿ ಕವಿತೆಗಳ ಮೂಲಕವಷ್ಟೇ ಅಲ್ಲ, ‘ವಿಮುಕ್ತಿ’ಯಂಥ ನೀಳ್ಗವನ ಹಾಗೂ ಅವರ ಅಗ್ನಿವರ್ಣ ಕಂಸಾಯಣಗಳಂಥ ನಾಟಕಗಳ ಮೂಲಕವೂ, ಪು.ತಿ.ನ. ಅವರಂತೆ ಹೊಸ ಹುಡುಕಾಟಗಳನ್ನು ಮುಂದುವರಿಸಿದ್ದಾರೆ. ಅಷ್ಟೆ ಅಲ್ಲ ಸೌಗಾಂಧಿಕಾದಂಥ ಕವನದ ವಸ್ತುವನ್ನು ಅವರು ಹಲವು ಆಯಾಮಗಳಲ್ಲಿ ವಿಭಿನ್ನ ಅರ್ಥಸ್ತರಗಳಲ್ಲಿ ವಿಸ್ತರಿಸಿರುವ ಕ್ರಮವೂ ಆಶ್ಚರ್ಯಕರವಾಗಿದೆ. ‘ಸೌಗಂಧಿಕಾ, ಬಾಲ ಅಡ್ಡಹಾಕಿದ ವಾನರನಿಗೆ’, ಮತ್ತು ‘ಗಂಧವತಿ’ -ಈ ಮೂರನ್ನು ಒಟ್ಟಿಗೇ ಇರಿಸಿ ನೋಡಿದರೆ ಈ ನನ್ನ ಮಾತಿನ ಅರ್ಥ ಸ್ಪಷ್ಟವಾದೀತು. ಅವರ ‘ವಿಸರ್ಗ’ (ಇಂದು ಮುಖಿ-೧೯೭೭)ದಂಥ ಕವಿತೆ ನಮ್ಮ ಕಾವ್ಯ ಸಂದರ್ಭದಲ್ಲಿ ಮತ್ತೊಂದಿರಲಾರದು-ಎಂದೇ ನನ್ನ ಅನಿಸಿಕೆ. ನಮ್ಮ ಸ್ವಾತಂತ್ರೊ ತ್ತರ ಭಾರತದ ಅಧಿಕಾರ ಪ್ರಮತ್ತರ ದೌರ್ಬಲ್ಯವನ್ನೂ ಆ ಕಾರಣದಿಂದ ವ್ಯವಸ್ಥೆಯಲ್ಲಿ ಉಂಟಾಗಿರುವ ಬಿರುಕುಗಳನ್ನೂ ತುಂಬ ಸಮರ್ಥವಾಗಿ ಪ್ರತಿಮಿಸುವ ಕವಿತೆ ಇದು. ಅಷ್ಟೆ ಅಲ್ಲ, ಕೃಷ್ಣನ ನಿರ್ಯಾಣದ ನಂತರ, ಅರ್ಜುನನು ಕಾಡುಬೇಡರ ಪಡೆಯಿಂದ ಪರಾಭವಕ್ಕೆ ಈಡಾದ ಸಂದರ್ಭದ ಪೌರುಷಹೀನತೆಯ ಕಾರಣಗಳು, ಆ ಕಾಲದ  ಸಂದರ್ಭದೊಳಗೇ ಇದ್ದುವೆಂಬ ವಾಸ್ತವ ಸಂಗತಿಗಳನ್ನು ವೆಂಕಟೇಶಮೂರ್ತಿಯವರು ಬಹು ಜಾಣ್ಮೆಯಿಂದ ಈ ಕವನದೊಳಗೆ ಬಿಡಿಸಿತೋರಿಸಿದ್ದಾರೆ. ವೆಂಕಟೇಶ ಮೂರ್ತಿಯವರ ಕಥನಕಲೆಯ ಪರಿಣತಿಗೆ ಈ ಕವಿತೆ ಕನ್ನಡಿ ಹಿಡಿಯುತ್ತದೆ. ಪುರಾಣದ ವಸ್ತುಗಳನ್ನು ನಿರ್ವಹಿಸುವ ಮೂರ್ತಿಯವರ ಕವಿತೆಗಳ ಸರಣಿಯಲ್ಲಿ ‘ಅಮೆರಿಕಾದಲ್ಲಿ ಬಿಲ್ಲು ಹಬ್ಬ’ ಎಂಬ ಕವಿತೆಯ ರಚನೆ, ಉಳಿದೆಲ್ಲವುಗಳಿಗಿಂತ ಭಿನ್ನವಾಗಿದೆ. ಕೃಷ್ಣನು ಮಧುರೆಗೆ ಹೋಗುವ ಸಂದರ್ಭ ಕವಿತೆಯ ಕೇಂದ್ರವಾದರೂ, ಈ ಹೊತ್ತಿನ ವಿದ್ಯಾವಂತ  ತರುಣರು ಅಮೆರಿಕಾಗೆ ಹೋಗಲು ಕಾತರವಾಗಿರುವ ಸಮಕಾಲೀನ ವಾಸ್ತವತೆಯನ್ನು ಸಂವಾದಿಯಾಗಿಸುವ ಕವಿತೆಯ ಹೆಣೆಗೆಯಿಂದಾಗಿ, ಅಮೆರಿಕಾ ಪ್ರಾಚೀನ ಕಾಲದ ಕಂಸನ ಮಧುರೆಯಾಗಿಬಿಡುತ್ತದೆ. ಈ ಎಲ್ಲ ಪ್ರಯೋಗಗಳ ಹಿನ್ನೆಲೆಯಿಂದ ಹೇಳುವುದಾದರೆ, ಆಧುನಿಕ ಕಾವ್ಯ ಸಂದರ್ಭದಲ್ಲಿ ಪುರಾಣ-ಪ್ರಸ್ತುತಗಳನ್ನು ಇಷ್ಟರ ಮಟ್ಟಿಗೆ ಒಟ್ಟಿಗೆ ಹಿಡಿದು (ಪು.ತಿ.ನ. ಅವರ ನಂತರ) ಹೊಸ ಅರ್ಥವಂತಿಕೆಯನ್ನು ಕಟ್ಟಿಕೊಟ್ಟವರು ಬೇರೆ ಯಾರೂ ಇಲ್ಲ. ಹಾಗೆ ಕಟ್ಟಿಕೊಡುವಾಗ ಬಳಕೆಯಾಗಿರುವ ಹಳೆಯ ಹಾಗೂ ಹೊಸ ಛಂದೋ ವೈವಿಧ್ಯಗಳು ವೆಂಕಟೇಶಮೂರ್ತಿಯವರ ಕೈಯಲ್ಲಿ ಪಡೆದುಕೊಂಡಿರುವ ಪುನರ್ಭವಗಳನ್ನು ಪ್ರತ್ಯೇಕವಾಗಿಯೇ ಪರಿಶೀಲಿಸಬೇಕು.

ಕನ್ನಡ ನವೋದಯ ಸಾಹಿತ್ಯ ಸದಂರ್ಭದ ನಂತರ, ಸೃಜನಶೀಲರಾದ ಕನ್ನಡ ಕವಿಗಳ ನಿರ್ಲಕ್ಷಕ್ಕೆ ಗುರಿಯಾದ ಪ್ರಕಾರವೆಂದರೆ ಮಕ್ಕಳ ಸಾಹಿತ್ಯ. ಪಂಜೆ, ಹೊಯ್ಸಳ, ಕಾರಂತ, ಎಲ್. ಗುಂಡಪ್ಪ, ಕುವೆಂಪು, ರಾಜರತ್ನಂ -ಇಂಥವರಿಂದ ರಚಿತವಾದ, ಲವಲವಿಕೆಯ ಮಕ್ಕಳ ಕವಿತೆಗಳ ನಂತರ, ಮುಂದಿನದು ಒಂದು ಬಗೆಯ ಬೀಳುಗಾಲವೆಂದೇ ಹೇಳಬೇಕು. ಕಥನದ ವಿವಿಧ ಪ್ರಕಾರಗಳಲ್ಲಿ ತಮ್ಮನ್ನು ಪಳಗಿಸಿಕೊಂಡ ವೆಂಕಟೇಶಮೂರ್ತಿಯವರ ಪ್ರವೇಶದಿಂದಾಗಿ‘ಮಕ್ಕಳ ಕವಿತೆ’ ಗೊಂದು ವಸಂತಸ್ಪರ್ಶವೇ ಬಂದಿತೆಂದರೆ ಅದೇನೂ ಉತ್ಪ್ರೇಕ್ಷೆಯ ಮಾತಲ್ಲ. ‘ಹಕ್ಕಿಸಾಲು’ (೧೯೮೭), ‘ಹೂವಿನಶಾಲೆ’ (೧೯೯೭), ‘ಸೋನಿ ಪದ್ಯಗಳು’ (೨೦೦೧) – ಈ ಕವಿತೆಗಳು, ಈ ಮೊದಲು ಬಂದ ಮಕ್ಕಳ ಕವಿತೆಗಳ ಗೆರೆಗಳನ್ನು ದಾಟುವುದಲ್ಲದೆ, ಏಕಕಾಲಕ್ಕೆ ಮಕ್ಕಳಿಗೂ ಬೆಳೆದವರಿಗೂ ಸಲ್ಲುವ ಗುಣಗಳನ್ನು ಪಡೆದುಕೊಂಡಿವೆ. ಕಲ್ಪನೆ, ಕತೆಗಾರಿಕೆ ಮತ್ತು ತಿಳಿವಳಿಕೆಗಳ ಸಂಯೋಜನೆಯಿಂದ ಮಕ್ಕಳ ಜಗತ್ತಿನ ಗ್ರಹಿಕೆಯನ್ನು ವಿಸ್ತರಿಸುವ ಸ್ವರೂಪದವುಗಳಾಗಿವೆ. ಅಮ್ಮಗುಬ್ಬಿ -ಮರಿಗುಬ್ಬಿಗಳ ಸಂವಾದವನ್ನು ಒಳಕೊಳ್ಳುವ ಏಳು ಕವಿತೆಗಳು, ಒಟ್ಟು ಒಂದು  ಕುಟುಂಬದ ಕಥೆಯಾಗಿ ಮುಗ್ಧತೆ ಹಾಗೂ ಪ್ರೌಢತೆಯ ಮುಖಾಮುಖಿಯನ್ನು ನಾಟಕೀಯ ಚೌಕಟ್ಟಿನೊಳಗೆ ಹಿಡಿದಿರಿಸಿದಂತೆ ತೋರುತ್ತವೆ. ಹೀಗೆಯೇ ‘ಘಟ್ಟದ ಯೋಗಿ’, ‘ಕಾಡಿನಲ್ಲಿ ಹಕ್ಕಿ ಮತ್ತು ಹುಲಿ’, ‘ಬಡವಿಯ ಪಾಡು’ -ಇಂಥ ಕವಿತೆಗಳು, ಮೂರ್ತಿಯವರ ಕಥನ ಪ್ರತಿಭೆ, ಮಕ್ಕಳ ಕವಿತೆಯ ಸ್ತರದಲ್ಲೂ ವಿಸ್ತರಿಸಿಕೊಂಡದ್ದರ ದಾಖಲೆಗಳಾಗಿವೆ. ಎಲ್ಲಕ್ಕಿಂತ ಮುಖ್ಯವಾದುದೆಂದರೆ ಮಕ್ಕಳ ಕವಿತೆಯೊಳಗಿನ ಭಾಷೆಯ ಲವಲವಿಕೆ ಮತ್ತು ಅವು ಪಡೆದುಕೊಂಡ ವೈವಿಧ್ಯಮಯವಾದ ಛಂದೋ-ಲಯಗಳು. ವೆಂಕಟೇಶವಮೂರ್ತಿಯವರ ಸೃಜನಶೀಲತೆಗೆ ಈ ಮಕ್ಕಳ ಕವಿತೆಯ ಕ್ಷೇತ್ರ ಒಂದು ಹಾಯಾದ ಕ್ರೀಡಾಂಗಣದಂತೆ ಬಳಕೆಯಾಗಿದೆ.

ಕಾವ್ಯ ನಿರ್ಮಿತಿಯು ಗಂಭೀರವಾದ ಒಂದು ಕಲೆಗಾರಿಕೆ ಎಂಬ ಶ್ರದ್ಧೆಯಿಂದ ಈ ಮೂವತ್ತು ಮಳೆಗಾಲಗಳ ಉದ್ದಕ್ಕೂ ಸೃಜನಶೀಲವಾಗಿರುವ ಕವಿ ವೆಂಕಟೇಶಮೂರ್ತಿಯವರು ಈವರೆಗೂ ನಡೆಯಿಸಿದ ಸಾಧನೆ ಕಡಿಮೆಯೇನೂ ಅಲ್ಲ. ಆದರೆ ಇನ್ನೂ ನಡೆಯಬೇಕಾದ ದಾರಿ ಅವರೆದುರು ಹಾಸಿಕೊಂಡಿದೆ. ಅವರ ಸಂಕಲ್ಪ ಶಕ್ತಿ ಅವರನ್ನು ಇನ್ನೂ ಮಹತ್ತಾದುದರೆಡೆಗೆ ನಡೆಸುವುದೆಂಬ ಭರವಸೆ ನನಗಿದೆ.

ಯಾವುದೂ ಸಣ್ಣದಲ್ಲ : ೨೦೦೪