ತನ್ನ ದೇಶದ ಪ್ರಾಣಿಗಳನ್ನು ಯಾವ ರೀತಿ ನೋಡಿಕೊಳ್ಳುತ್ತಾರೆ ಎನ್ನುವುದನ್ನು ಆಧರಿಸಿ ಆ ದೇಶವನ್ನು ಅರ್ಥೈಸಲಾಗುತ್ತದೆ ಜವಾಹರಲಾಲ್ ನೆಹರೂ.

ಇನ್ನು ಮುಂದೆ ಆನೆಗಳಿಗೆ ದೇಶದ ಪರಂಪರೆ ಎಂಬ ಮಾನ್ಯತೆ ಸಿಗಲಿದೆ.  ಆನೆಗಳ ಸಂರಕ್ಷಣೆಗಾಗಿ ಆನೆ ಕಾರ್ಯಪಡೆ ಯೋಜಿಸಿರುವ ಶಿಫಾರಸು ಇದು.

ಏಷಿಯಾ ಖಂಡದ ಆನೆಗಳ ತವರು ಭಾರತ.  ಶೇಕಡಾ ೬೦ರಷ್ಟು ಆನೆಗಳು ಭಾರತದಲ್ಲೇ ಇವೆ.  ಆನೆಗಳು ನಮ್ಮ ಸಂಸ್ಕೃತಿಯ ಒಂದು ಬಾಗ.  ಇದಕ್ಕೆ ವೇದಕಾಲದಲ್ಲಿ [ಕ್ರಿಸ್ತಪೂರ್ವ೧೫೦೦ರಿಂದ ೬೦೦] ಆಧಾರವಿದೆ.  ಇಂದ್ರನ ವಾಹನ ಐರಾವತ, ಗಣೇಶನ ತಲೆ ಆನೆಯದು.  ಹೀಗೆ ಆನೆ ನಮ್ಮ ಬದುಕಿನ ಭಾಗ.  ಕ್ರಿಸ್ತಪೂರ್ವ ಕಾಲದಿಂದ ೧೯ನೇ ಶತಮಾನದವರೆಗೂ ಆನೆಗಳನ್ನು ಯುದ್ಧಗಳಲ್ಲಿ ಬಳಸಲಾಗುತ್ತಿತ್ತು.  ಮಹಾಭಾರತದ ಅಶ್ವತ್ಥಾಮ ಎಂಬ ಆನೆಯ ಹೆಸರನ್ನು ಧರ್ಮರಾಯ ಬಳಸಿದ ಕಥೆ, ಭಾಗವತದ ಕುವಲಯಾಪೀಡ, ಇಂದ್ರದ್ಯುಮ್ನ ಮುಂತಾ ಆನೆಗಳ ಕಥೆಗಳು ಪ್ರಖ್ಯಾತ.

ಸೈನಿಕರನ್ನು ಸಾಗಿಸಲು, ಯುದ್ಧ ಸಾಮಗ್ರಿಗಳನ್ನು ಸಾಗಿಸಲು, ಕಷ್ಟದ ಪ್ರದೇಶಗಳಲ್ಲಿ ಆನೆಗಳೇ ಸಹಾಯಕರಾಗಿರುತ್ತಿದ್ದವು.

ಏಷಿಯಾದ ಆನೆಗಳು ಆಫ್ರಿಕಾದ ಆನೆಗಳು ಒಂದೇ ವಂಶಸ್ಥರು.  ಇವು ಅರಣ್ಯ, ಹುಲ್ಲುಗಾವಲು ಹಾಗೂ ಕುರುಚಲು ಕಾಡಿನಲ್ಲಿ ಕಾಣಿಸುತ್ತವೆ.  ಇವುಗಳ ಆಶ್ರಯತಾಣಗಳು ಕಡಿಮೆಯಾಗುತ್ತಿರುವುದೇ ಮೊದಲ ಒತ್ತಡ.  ನೆಲದ ಮೇಲಿನ ಅತಿದೊಡ್ಡ ಗಾತ್ರದ ಪ್ರಾಣಿ ಇದು.  ಉತ್ತಮ ರೀತಿಯಲ್ಲಿ ಬೆಳವಣಿಗೆಯಾದ ಭಾರೀಗಾತ್ರದ ಮೆದುಳಿದೆ.  ದೃಷ್ಟಿ ಮಂದ.  ಆದರೆ ಕಿವಿ ಬಹಳ ಚುರುಕು.  ೧೫ ಕಿಲೋಮೀಟರ್ ದೂರದವರೆಗಿನ ಶಬ್ದಗಳನ್ನು ಕೇಳಿಸಿಕೊಳ್ಳುತ್ತದೆ.  ಚರ್ಮ ದಪ್ಪದ್ದೇನಲ್ಲ.  ಕೀಟ, ಸೊಳ್ಳೆಗಳು ಕಡಿದಾಗ ಕಿರಿಕಿರಿಗೆ ಒಳಗಾಗುತ್ತದೆ.  ಇದರ ಕಾಲಿನ ಅಡಿಯಲ್ಲಿ ದಪ್ಪ ಹೊದಿಕೆಯಿದೆ.  ದೇಹದ ತೂಕ ಕಾಲಿನ ಮೇಲೆ ಬಿದ್ದಾಗ ಅದು ಹಿಗ್ಗುತ್ತದೆ.  ಕಡಿಮೆಯಾದಾಗ ಕುಗ್ಗುತ್ತದೆ.  ಹೀಗೆ ದೊಡ್ಡಗಾತ್ರದ ದೇಹದ ತೂಕ ಸರಿಯಾಗಿ ಹರಡಿಕೊಳ್ಳುವಂತೆ ನೋಡಿಕೊಳ್ಳುತ್ತದೆ.

ಭಾರತದ ಕಾಡಿನ ಆನೆಗಳಿಗೆ ಇರುವ ಮತ್ತೊಂದು ದೊಡ್ಡ ಒತ್ತಡವೆಂದರೆ ಮನುಷ್ಯರು.  ಜನಸಂಖ್ಯೆ ಹೆಚ್ಚಿದಂತೆ ಆನೆಯ ಆಶ್ರಯತಾಣಗಳೆಲ್ಲಾ ಮನುಷ್ಯ ವಸ್ತ್ತುಪ್ರದೇಶವಾಗುತ್ತಿದೆ.  ಮೋಜಿನ ಧಾಮಗಳಾಗುತ್ತಿವೆ.  ಕೃಷಿ, ಕಾರ್ಖಾನೆಗಳು, ಕೈಗಾರಿಕಾ ಪ್ರದೇಶಗಳಾಗುತ್ತಿವೆ.  ಅಂದರೆ ಆರ್ಥಿಕ ಅಭಿವೃದ್ಧಿಯೇ ಆನೆಗಳ ಶತ್ರುವಾಗುತ್ತದೆ.

ಏಷಿಯಾದಲ್ಲಿ ಭಾರತವು ಆನೆ ಶಾಸನ ಹೊಂದಿದ ದೇಶ.  ಆದರೆ ಕಾನೂನು ಪುಸ್ತಕದಲ್ಲಿ ಮಾತ್ರ.  ಇಸವಿ ೨೦೦೩ರವರೆಗೆ ೭೦೪ ಆನೆಗಳು ಕೇವಲ ಕರ್ನಾಟಕವೊಂದರಲ್ಲೇ ಸತ್ತಿವೆ.  ಮನುಷ್ಯ ಹಾಗೂ ಆನೆಗಳ ನಡುವಿನ ದ್ವಂದ್ವಗಳೇ ಈ ರೀತಿ ಆನೆಗಳು ಅಳಿವಿನಂಚಿಗೆ ಸರಿಯಲು ಕಾರಣವಾಗುತ್ತಿದೆ.  ಆಹಾರ ಸಿಗದ ಆನೆಗಳು ಕೃಷಿಪ್ರದೇಶಕ್ಕೆ ದಾಳಿ ಇಡುವುದು ಅನಿವಾರ್ಯ.  ದಾಳಿಗೊಳಗಾಗುವ ಜನರು ಕರೆಂಟ್ ಕೊಟ್ಟಾದರೂ ಆನೆಗಳನ್ನು ಸಾಯಿಸುತ್ತಿರುವುದು ದಿನನಿತ್ಯ ಕಾಣಿಸುವ ಸುದ್ದಿ.

ಆನೆಗಳನ್ನು ಸಾಕುವವರು ಸಮಾರಂಭಗಳಲ್ಲಿ ಬಳಸಿಕೊಳ್ಳುವುದು ಸಾಮಾನ್ಯವಾಗಿದೆ.  ಆನೇಕ ದೇವಸ್ಥಾನಗಳು ಆನೆಗಳ ನಿವಾಸವಾಗಿದೆ.  ಕಾಲಿಗೆ ಸರಪಳಿ ಬಿಗಿದು ಒಂಟಿಯಾಗಿ ಕಟ್ಟಿಹಾಕಿರುವುದನ್ನು ಕಾಣಬಹುದು.  ಅನೇಕ ಉತ್ಸವಗಳಲ್ಲಿ ಅರಣ್ಯ ಇಲಾಖೆಯ ಆಶ್ರಯತಾಣಗಳಲ್ಲಿ ಸಾಕಿದ ಆನೆಗಳನ್ನು ಬಳಸುವುದು ಕಾಣುತ್ತದೆ.  ಇದು ಸಾವಿರಾರು ಜನರ ನಡುವೆ ನಡೆದು ಹೋಗಬೇಕು.  ಅತ್ಯಂತ ಭಾರದ ಅಂಬಾರಿಯನ್ನು ಹೊರಬೇಕು.  ಜನರು ಮಾಡುವ ಗದ್ದಲ ಹಾಗೂ ಡೊಳ್ಳು, ತಮಟೆ, ಓಲಗ ಮುಂತಾದ ಭೀಕರ ಶಬ್ದಗಳನ್ನು ಕೇಳಬೇಕಾಗುತ್ತದೆ.  ಆನೆಯ ಸೂಕ್ಷ್ಮ ಕಿವಿಗೆ ಈ ಶಬ್ದಗಳು ಎಷ್ಟೋಪಟ್ಟು ಅಧಿಕ ಸಾಂದ್ರತೆಯಲ್ಲಿ ಕೇಳಿಸುತ್ತದೆ.  ಆಗಲೂ ಅದು ಸ್ತಿಮಿತ ಕಳೆದುಕೊಳ್ಳದೇ ಇರಬೇಕಾಗುತ್ತದೆ.  ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸೇವೆಗೆ ಆನೆಗಳ ಬಳಕೆಯೊಂದು ಆಕರ್ಷಣೆ.  ಕಾಡಿನಲ್ಲಿ ಮರದ ದಿಮ್ಮಿಗಳನ್ನು ಹೊರಲು, ಅರಣ್ಯದ ಗಡಿಗಳನ್ನು ಕಾಯಲು, ಕಾಡಿನ ಮಧ್ಯೆ ಸುತ್ತಲು ಆನೆಗಳೇ ಬೇಕು.  ಹೊಸ ಆನೆಗಳನ್ನು ಪಳಗಿಸುವುದೂ ಸಹ ಮೊದಲಿದ್ದ ಆನೆಗಳೇ ಆಗಿರುತ್ತವೆ.  ಇನ್ನು ಸರ್ಕಸ್‌ಗಳಲ್ಲಿ, ಮೈಗಾಲಯಗಳ ಆನೆಗಳ ಕಥೆಯೇ ಬೇರೆ.