ನಾಲ್ಕು ಕಲ್ಲಿನ ಆಟದಲ್ಲಿ ಸೋತವರಿಗೆ ಗಜ್ಜುಗ ತೇಯ್ದು ಕೈಮೇಲೆ ಚುರುಕು ಮುಟ್ಟಿಸಿದಾಗ, ಆ ಶಾಖಕ್ಕೆ, ಸೋತವರು ‘ಆಹ್’ಎಂದು ಕಿರುಚಿದಾಗಲೇ ಇರುವುದು ಆಟದ ಮಜ. ಈಗ ಗಜ್ಜುಗವೂ ಇಲ್ಲ. ಕಲ್ಲಾಟ ಮೊದಲೇ ಇಲ್ಲ. ಆಟಕ್ಕೆ ಗಜ್ಜುಗ ಇದ್ದಾಗ ಅದರ ಬೆಲೆ ತಿಳಿಯಲಿಲ್ಲ, ಈಗ ಅದರ ಬೆಲೆ ಏನೆಂದು ಗೊತ್ತಾಗುವ ವೇಳೆಗೆ ಗಜ್ಜುಗವೇ ಇಲ್ಲದಂತಾಗುತ್ತಿದೆ.

ಚಿಕ್ಕ ಚಿಕ್ಕ ದಾಗಿರುವ ಹುಣಿಸೆ ಎಲೆಯ ತರಹದ ಎಲೆಗಳು. ಮೈಯೆಲ್ಲಾ ಮುಳ್ಳು, ಗಟ್ಟಿಯಾದ ಕಾಯಿ, ಹೊಳೆಯುವ ತಿಳಿನೀಲಿ ಬಣ್ಣದ ಬೀಜಗಳು. ಇಷ್ಟೆಲ್ಲಾ ವರ್ಣನೆಗೆ ಪಾತ್ರವಾದ ಗಿಡದ ಬೀಜವೇ ಗಜ್ಜುಗ. ‘ನಿಕಾರ್ ಬೀನ್’ ಎಂದು ಕರೆಯಲ್ಪಡುವ ಈ ಗಿಡದ ಎಲೆ, ಕಾಂಡ, ಕೊಂಬೆ ಕಾಯಿ, ಸಕಲವೂ ಮುಳ್ಳು ಮಯ. ಈ ಕಾರಣಕ್ಕೆ ಇದು ಕೃಷಿಕರ ಮನ್ನಣೆ ಗಳಿಸುವಲ್ಲಿ ಸೋತಿರಬೇಕು. ಆದರೂ, ಬಾರತದಲ್ಲಿ, ಬಂಜರು ಪ್ರದೇಶಗಳಲ್ಲಿ, ಸಮುದ್ರ ತೀರವಿರುವ ಕಡೆಗಳಲ್ಲಿ ಗಜ್ಜುಗದ ಗಿಡವಿರುವುದು ಕಂಡು ಬರುತ್ತದೆ. 

ಮೇ ತಿಂಗಳಿಂದ ನವೆಂಬರ್ ವರೆಗೆ ಹೂವು ಬಿಡುವ ಈ ಗಿಡಕ್ಕೆ ಸಂಸ್ಕೃತದಲ್ಲಿ ‘ಲತಾ ಕರಂಜ’ ಹಿಂದಿಯಲ್ಲಿ ‘ಕಾಂತಿಕರಂಜ’, ತಮಿಳಿನಲ್ಲಿ ‘ಗಜ್ಜಕಾಯ,’ ಕನ್ನಡದಲ್ಲಿ ‘ಗಜ್ಜುಗ’ಎಂದು ಹೆಸರು. ‘ಸಿಸಲ್‌ಪೀನಿಯ ಬಾಂಡೂಕ್’ ಸಸ್ಯ ಸಂಕುಲಕ್ಕೆ ಸೇರಿದ, ಹಲವಾರು ಔಷಧೀಯ ಗುಣಗಳುಳ್ಳ, ಗಜ್ಜುಗ ಇಂದು ವಿನಾಶದ ಅಂಚಿನಲ್ಲಿದೆ. ಇದನ್ನು ಅಭಿವೃದ್ಧಿ ಪಡಿಸಿ ಉಳಿಸುವ ಕೆಲಸವನ್ನು ಸಾಮಾಜಿಕ ಕಳಕಳಿ ಇರುವ ಸಂಘ ಸಂಸ್ಥೆಗಳು ಕೈಗೆತ್ತಿ ಕೊಂಡಿವೆ.

ಮುಳ್ಳು ಪೆಟ್ಟಿಗೆಯಲ್ಲಿ ಇಣುಕುತ್ತಿರುವ ಗಜ್ಜುಗಗಳು

ಹಾವು,ಮುಂಗುಸಿಗಳ ಹೊಡೆದಾಟದ ನಂತರ, ವಿಷಪೂರಿತವಾದ ಬಾಯಿ ಶುದ್ಧ ಪಡಿಸಿಕೊಳ್ಳಲು ಮುಂಗುಸಿ, ಗಜ್ಜುಗದ ಗಿಡದ ಬೇರನ್ನು ಅಗೆದು ತಿನ್ನುವುದು ಹಳ್ಳಿಗಳ ಕಡೆ ಇನ್ನೂ ಕಾಣಸಿಗುವ ದೃಶ್ಯ.

ಚೇಳು ಕಚ್ಚಿದ ವಿಷ ತೆಗೆಯಲು ಗಜ್ಜುಗದ ಗಿಡದ ಬೇರು ತೇಯ್ದು ಹಚ್ಚುತ್ತಾರೆ. ಕಾಲು ಕೈಗಳ ಉಳುಕಿಗೆ ಗಜ್ಜುಗದ ಸೊಪ್ಪನ್ನು ಅರೆದು ಸ್ವಲ್ಪ ಬಿಸಿ ಮಾಡಿ ಹಚ್ಚಬೇಕು. ಕಜ್ಜಿ, ತುರಿಕೆ,ಎಕ್ಸಿಮ ಕ್ಕೆ ಎಲೆ ಮತ್ತು ಗಜ್ಜುಗದ ಚೂರ್ಣ ಎಳ್ಳೆಣ್ಣೆಯಲ್ಲಿ ಕಲಸಿ ಹಚ್ಚಬೇಕು. ವೈದ್ಯರ ಮಾರ್ಗದರ್ಶನದಲ್ಲಿ ಹೊಟ್ಟೆಯ ಜಂತುಹುಳು, ಹಳೆಯ ಕೆಮ್ಮು ಸಹ ವಾಸಿಮಾಡ ಬಹುದು, ‘ಇಷ್ಟೆಲ್ಲಾ ಔಷಧೀಯ ಗುಣಗಳಿರುವ ಗಿಡದ ಸಂತತಿಯನ್ನು ಕಾಪಾಡುವುದು ‘ಸಾಮಾಜಿಕ ಜವಾಬ್ದಾರಿ’ ಎಂಬುದು  ಆಯುರ್ವೇದ ತಜ್ಞೆ ಡಾ:ಅನ್ನಪೂರ್ಣ ಅವರ ಅಭಿಪ್ರಾಯ.

ಬಿತ್ತನೆಗೆ ಸಿದ್ಧ ಬೀಜಗಳು.

ಬೀಜದಿಂದ ಸಸ್ಯಾಭಿವೃದ್ಧಿ. ಮರಳು ಮಿಶ್ರಿತ ಮಣ್ಣು ಸೂಕ್ತ. ಹೆಚ್ಚು ಹಿಮ ಬೀಳುವ ಸ್ಥಳದಲ್ಲಿ ಬೆಳೆಯುವುದು ಕಷ್ಟ. ಆದರೂ ಹಿಮಾಲಯದ ತಪ್ಪಲಲ್ಲಿ ಹಲವು ಗಜ್ಜುಗದ ಗಿಡಗಳಿವೆ.  ಬಯಲು ಸೀಮೆಯಲಿ, ಸಮುದ್ರ ತೀರದಲ್ಲಿ ಬೆಳೆದಿರುವುದು ಕಂಡು ಬಂದಿದೆ. ಇದರ ಬೇರು ಔಷಧಕ್ಕೆ ಉಪಯುಕ್ತ. ಇದರ ಸೇವನೆಯಿಂದ ಮನುಷ್ಯರ ದೇಹದ ಮೇಲೆ ಯಾವುದೇ ಅಡ್ಡ ಪರಿಣಾಮಗಳಾಗುವುದಿಲ್ಲವೆಂದು ದೃಢ ಪಟ್ಟಿದೆ.

ಬೆಂಗಳೂರಿನ ‘ಮಾಗಡಿ’ ಯ ಕಾಡುಗಳಲ್ಲಿ ಗಜ್ಜುಗದ ಗಿಡ ಇರುವುದನ್ನು ‘ಇಕ್ರ’ ದ ಚೆನ್ನರಾಜ್ ದಾಖಲಿಸಿದ್ದಾರೆ.   ಇದನ್ನು ಉಳಿಸಿ ಕೃಷಿಕರಲ್ಲಿ ಆಸಕ್ತಿ ಮೂಡಿಸುವ ಉದ್ದೇಶದಿಂದ ಬೀಜಗಳನ್ನು ಹಂಚಿದ್ದಾರೆ. ಇವರಿಂದ ಬೀಜ ಪಡೆದ ದೊಡ್ಡಬಳ್ಳಾಪುರದ  ಮೋನಿಕ ಶರ್ಮ ತಮ್ಮ ‘ಋತುಪರ್ಣ’ ತೋಟದಲ್ಲಿ ಗಿಡ ಬೆಳೆಸಿದ್ದಾರೆ. ಗಿಡದ ತುಂಬ ಕಾಯಿಗಳು ಬಿಟ್ಟಿವೆ.(ಚಿತ್ರ ನೋಡಿ) ಇದರ ಇನ್ನೊಂದು ಪ್ರಬೇಧ ಬಳ್ಳಿಯಂತೆ ಹಬ್ಬುತ್ತದೆ. ಇದಕ್ಕೆ ‘ನಿಕಾರ್ ನಟ್ಸ್. ಸಿ. ಮೇಜರ್’ ಎಂಬ ಹೆಸರಿದೆ. ಇದರಲ್ಲಿ ಹಳದಿ ಹೂಗಳು ಕಂಡು ಬಂದಿವೆ. ಬಂಗಾರದ ಬಣ್ಣದ ಬೀಜ ಬಲು ಆಕರ್ಶಣೀಯ.

ಗಜ್ಜುಗದ ಗಿಡ.

ಸಾಗರದ ಸುತ್ತಮುತ್ತ ಗಜ್ಜುಗದ ಮರಗಳು ಕಂಡು ಬರುತ್ತವೆ. ಕೆಲವೊಂದು ಗಿಡಗಳು ಆಲದ ಮರಕ್ಕೆ ಹಬ್ಬಿರುವುದನ್ನು ನೋಡಿದವರಿದ್ದಾರೆ. ಒಂದು ಜಾತಿಯ ಪಕ್ಷಿ ಈ ಗಿಡದಲ್ಲಿ ಮಾತ್ರ ಗೂಡು ಕಟ್ಟುವುದನ್ನು ಬೇಳೂರಿನ ಪೂರ್ಣಪ್ರಜ್ಞ ಗಮನಿಸಿದ್ದಾರೆ. ಈ ಗಿಡದಿಂದಾಗಿ ಆ ಹಕ್ಕಿಗೆ ‘ಮುಳ್ಳು ಹಕ್ಕಿ’ ಎಂಬ ಹೆಸರು ಬಂದಿದೆ. ಕೆಲವು ಮಾತ್ರೆಗಳಲ್ಲಿರುವ ಔಷಧೀಯ ಗುಣಗಳೇ ಗಜ್ಜುಗ ದಲ್ಲಿರುವದೆಂದು ತಿಳಿದು ಬಂದಿದೆ.

ನಂಜು ನಿವಾರಣೆಗೆ, ಸುಟ್ಟ ಬೀಜವನ್ನು ನೀರಿನಲ್ಲಿ ಕರಗಿಸಿ ಕುಡಿಯುವ ಅಭ್ಯಾಸ ಕೆಲವು ಹಳ್ಳಿಗರಲ್ಲಿದೆ. ಇದರಲ್ಲಿರುವ ಔಷಧೀಯ ಗುಣಗಳ ಪ್ರಭಾವ ‘ಕ್ವಿನೈನ್’ (ಮಲೇರಿಯ ಜ್ವರಕ್ಕೆ ಬಳಸುತ್ತಿದ್ದುದು.) ನಲ್ಲಿರುವಂತಹುದೇ ಎಂಬ ಭಾವನೆ ಅವರಲ್ಲಿದೆ.

ಗಜ್ಜುಗದ ಕಾಯಿಗಳು

ಇಷ್ಟೆಲ್ಲಾ ಔಷಧೀಯ ಗುಣಗಳಿರುವ ‘ಗಜ್ಜುಗ’ದ ಒಂದು ಗಿಡವನ್ನಾದರೂ ತಮ್ಮ ತೋಟದಲ್ಲಿ ಬೆಳೆಸಿದರೆ, ನಶಿಸಿ ಹೋಗಬಹುದಾದ ಒಂದು ತಳಿಯನ್ನುಳಿಸಿದ ಪುಣ್ಯ ಕೃಷಿಕರ ಪಾಲಾದೀತು. ಬೇಲಿಯಲ್ಲಿ ಬೆಳೆಸಲು ಹೇಳಿ ಮಾಡಿಸಿದ ಗಿಡ ಈ ಗಜ್ಜುಗ.

(ಚಿತ್ರಗಳು: ಎ.ಆರ್.ಎಸ್.ಶರ್ಮ)